ಕನ್ನಡ ಪತ್ತೇದಾರಿ ಪ್ರಕಾರ ನಾಪತ್ತೆಯಾಯಿತೇ?

Date:

ಒಬ್ಬ ವ್ಯಕ್ತಿ, ಒಂದು ಘಟನೆ, ಒಂದು ವಸ್ತುವಿನ ವಿಷಯವನ್ನಿಟ್ಟುಕೊಂಡು ಕಥೆ ಬರೆಯುವುದು ಒಂದು ರೀತಿ. ಸ್ವಲ್ಪ ಸಾಹಿತ್ಯದ ಗಂಧಗಾಳಿ ಗೊತ್ತಿದ್ದರೆ, ಅದನ್ನು ಉತ್ತಮ ಕಥೆಯನ್ನಾಗಿ ರೂಪಿಸಬಹುದು. ಆದರೆ ಪತ್ತೇದಾರಿ ಕಥೆ ಕಾದಂಬರಿ ಹಾಗಲ್ಲ, ಅದನ್ನು ಬರೆಯಲಿಕ್ಕೆ ಅದರದೇ ಆದ ಕೆಲವು ಕಟ್ಟುಪಾಡುಗಳಿವೆ. ಅದು ಅಷ್ಟು ಸುಲಭವಾಗಿ ದಕ್ಕುವಂಥದ್ದಲ್ಲ. ಹೇಗಾದರೂ ಬರೆದರಾದೀತು ಅನ್ನುವಂಥದ್ದೂ ಅಲ್ಲ.

ಪತ್ತೇದಾರಿ ಕಥೆಗಳಿಗೆ ವಿಷಯ ಆಯ್ಕೆಯೇ ಒಂದು ದೊಡ್ಡ ಸವಾಲು. ನಿರೂಪಣೆ ಅತ್ಯಂತ ಮುಖ್ಯವಾದ ಅಂಶ. ಹೇಳಬೇಕಾದ್ದನ್ನು ಸ್ಪಷ್ಟವಾಗಿ ಸರಳವಾಗಿ ಹೇಳಬೇಕು. ಕಥೆಯನ್ನು ವೇಗವಾಗಿ ಓಡಿಸಬೇಕು. ಕಥೆಯ ಆರಂಭದಿಂದಲೇ ಓದುಗನನ್ನು ಹಿಡಿದಿಡುವ, ಕುತೂಹಲವನ್ನು ಕೆರಳಿಸುವ ಕುಶಲತೆ ಇರಬೇಕು. ಜೊತೆಗೆ ರಂಜಕತೆ, ರೋಚಕತೆಗಳನ್ನು ಬಳಸುವ ಬುದ್ಧಿವಂತಿಕೆಯೂ ಬರಹಗಾರನಿಗಿರಬೇಕು. ಓದುತ್ತಾ ಹೋದಂತೆ ಓದುಗ ಪುಳಕಗೊಳ್ಳಬೇಕು. ಮುಂದೇನು ಎಂದು ಕುತೂಹಲಗೊಳ್ಳಬೇಕು. ಪತ್ತೇದಾರಿ ಕಥೆಗಳಲ್ಲಿ ಶೃಂಗಾರ ಸಾಮಾನ್ಯ. ಅದು ಅತಿಯಾಗದಂತೆ, ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಜಾಣ್ಮೆ ಇರಬೇಕು. ಹೆಣ್ಣಿನ ಸೌಂದರ್ಯವನ್ನು ರಸವತ್ತಾಗಿ ವರ್ಣಿಸಿ ಓದುಗರನ್ನು ಉನ್ಮಾದಗೊಳಿಸುವುದನ್ನೂ ತಿಳಿದಿರಬೇಕು.

ಅಂದರೆ ಆತಂಕ, ಕೌತುಕ, ಭಯಾನಕ ಹಾಗೂ ಶೃಂಗಾರಮಯ ದೃಶ್ಯಗಳನ್ನು ಒಂದಕ್ಕೊಂದು ಹೆಣೆಯುತ್ತಾ ಹೋಗುವುದೇ ಪತ್ತೇದಾರಿ ಕಥೆಯ ತಿರುಳು. ಹಾಗೆಯೇ ಪತ್ತೇದಾರಿ ಕಾದಂಬರಿಕಾರ ಅಪರಾಧ ಜಗತ್ತಿನ ಅನೇಕ ವಿಷಯಗಳನ್ನು ತಿಳಿದುಕೊಂಡಿರಬೇಕು. ಹೊಡೆದಾಟ, ದರೋಡೆ, ಅಪಹರಣಗಳ ಬಗ್ಗೆ ಅರಿವಿರಬೇಕು. ಆಯುಧಗಳ ಬಗ್ಗೆ ತಿಳಿವಳಿಕೆ ಮತ್ತು ಅವುಗಳನ್ನು ಬಳಸುವ ವಿಧಾನವನ್ನು ತಿಳಿದಿರಬೇಕು. ಪೊಲೀಸು, ಕೋರ್ಟು, ಕಾನೂನು, ಕಟ್ಟಳೆಗಳನ್ನು, ಐಪಿಸಿ ಸೆಕ್ಷನ್‌ಗಳನ್ನು, ಆಧುನಿಕ ವೈಜ್ಞಾನಿಕ ಜಗತ್ತಿನ ಬಗೆಗಿನ ತಿಳಿವಳಿಕೆಯನ್ನೂ ಹೊಂದಿರಬೇಕು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪತ್ತೇದಾರಿ ಕಥೆಗಳನ್ನು ಬರೆಯಬೇಕೆಂದರೆ ಹೆಚ್ಚು ಓದಿರಬೇಕು. ಇಲ್ಲ ಕೇಳಿ ತಿಳಿದಿರಬೇಕು, ಕಲ್ಪಿಸಿಕೊಂಡು ಬರೆಯುವ ಕಲೆ ಗೊತ್ತಿರಬೇಕು. ಹಾಗೆಯೇ ಮನುಷ್ಯರ ಹಾವಭಾವಗಳು, ಸ್ಥಳಪರಿಚಯವನ್ನು ಹೊಂದಿರಬೇಕು. ಇದು ಪತ್ತೇದಾರಿ ಕತೆಗಾರರಿಗೆ ತುಂಬಾ ಮುಖ್ಯ. ಹಾಗೆಯೇ ಕಥೆ ಎಷ್ಟೇ ಚೆನ್ನಾಗಿ ಪ್ರಾರಂಭಿಸಿದರೂ, ಎಷ್ಟೇ ಚೆನ್ನಾಗಿ ನಿರೂಪಿಸಿದರೂ ಓದುಗರ ಮನಸ್ಸಲ್ಲಿ ನಿಲ್ಲಬೇಕೆಂದರೆ, ಗೆಲ್ಲಬೇಕಾದರೆ ಕ್ಲೈಮ್ಯಾಕ್ಸ್ ಅದ್ಭುತವಾಗಿರಲೇಬೇಕು.

ಇಂತಹ ಅದ್ಭುತ ಲೋಕವನ್ನು ಸೃಷ್ಟಿಸಿ, ಕನ್ನಡದ ಆಧುನಿಕ ಪತ್ತೇದಾರಿ ಸಾಹಿತ್ಯಕ್ಕೆ ಮುನ್ನುಡಿ ಬರೆದವರೇ ಎನ್. ನರಸಿಂಹಯ್ಯ(1925-2011)ನವರು. ಕನ್ನಡದ ಪತ್ತೇದಾರಿ ಪಿತಾಮಹ, ಕನ್ನಡದ ಶೆರ್ಲಾಕ್ ಹೋಮ್ಸ್ ಎಂದೆಲ್ಲ ಖ್ಯಾತರಾಗಿದ್ದ ಇವರು ಇವತ್ತಿಲ್ಲ, ಇವರ ಪುಸ್ತಕಗಳಿವೆ.

narasimhayya
ಕನ್ನಡದ ಆಧುನಿಕ ಪತ್ತೇದಾರಿ ಸಾಹಿತ್ಯಕ್ಕೆ ಮುನ್ನುಡಿ ಬರೆದವರು ಎನ್. ನರಸಿಂಹಯ್ಯ

ಕನ್ನಡ ಸಾಹಿತ್ಯ ಲೋಕದ ದುರದೃಷ್ಟಕರ ಸಂಗತಿ ಎಂದರೆ, ನರಸಿಂಹಯ್ಯನವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಪತ್ತೇದಾರಿ ಸಾಹಿತ್ಯ ಸೌಧ ತಲೆ ಎತ್ತಿ ನಿಲ್ಲಲೇ ಇಲ್ಲ. ಅವರು ಬರೆಯುತ್ತಿದ್ದ ಕಾಲಕ್ಕೂ, ಇವತ್ತಿನ ಕಾಲಕ್ಕೂ ಕನ್ನಡ ಪತ್ತೇದಾರಿ ಕಾದಂಬರಿ ಲೋಕದಲ್ಲಿ ನರಸಿಂಹಯ್ಯನವರೊಬ್ಬರೆ ನೆಲೆ ನಿಂತ ನಿಜಲೇಖಕರು. ಈ ನಡುವೆ ಹತ್ತಾರು ಲೇಖಕರು, ನಾಲ್ಕಾರು ಪ್ರಕಾಶಕರು, ಸಾವಿರಾರು ಪುಸ್ತಕಗಳು ಬಂದುಹೋದರೂ ಕನ್ನಡಿಗರ ಮನದಲ್ಲಿ ಉಳಿದದ್ದು ಪತ್ತೇದಾರಿಗೆ ನರಸಿಂಹಯ್ಯನವರೊಬ್ಬರೆ ಪುರುಷೋತ್ತಮ.

ಇದನ್ನೂ ಓದಿರಿ: ವಿಜಯ ಮಲ್ಯ ಮಾತುಗಳಿಗೆ ಮರುಗುವ ಅಗತ್ಯವಿದೆಯೇ?

ಬೆಂಗಳೂರಿನ ಬಳೇಪೇಟೆ ಸರ್ಕಲ್ಲಿನಲ್ಲಿರುವ ಗೀತಾ ಏಜನ್ಸೀಸ್ ಸಗಟು ಪುಸ್ತಕ ಮಳಿಗೆ ಮಾಲೀಕರಾದ ಸುಂದರ್ ರಾಜ್, ‘ಕನ್ನಡದ ಪತ್ತೇದಾರಿ ಕಾದಂಬರಿಗಳ ಕಾಲ ಮುಗೀತು ಸಾರ್, ಇವತ್ತು ಕೇಳುವವರು ಇಲ್ಲ ಬರೆಯುವವರು ಇಲ್ಲ’ ಎಂದಿದ್ದು ಪತ್ತೇದಾರಿ ಕಾದಂಬರಿ ಜಗತ್ತಿನ ಜಾತಕವನ್ನೇ ಬಿಚ್ಚಿಟ್ಟಿತ್ತು. ಯಾಕೆಂದರೆ, ಸುಂದರ್ ರಾಜ್‌ರ ಪುಸ್ತಕ ಪ್ರಕಾಶನ ಮತ್ತು ಮಾರಾಟ ಮಳಿಗೆಗೆ ಎಪ್ಪತ್ತು ವರ್ಷಗಳ ಸುದೀರ್ಘ ಇತಿಹಾಸವಿದೆ. ಪುಸ್ತಕ ವ್ಯಾಪಾರದಲ್ಲಿ ಅಪಾರ ಅನುಭವವಿದೆ. ಇಂಥವರು, ‘ಇವತ್ತಿಗೂ ಪತ್ತೇದಾರಿ ಕಾದಂಬರಿ ಎಂದರೆ ಎನ್. ನರಸಿಂಹಯ್ಯನವರದೆ’ ಎಂದಿದ್ದು ಕನ್ನಡ ಪತ್ತೇದಾರಿ ಸಾಹಿತ್ಯದ ದಿಕ್ಕು ದೆಸೆಗಳನ್ನು ಅನಾವರಣಗೊಳಿಸಿತ್ತು. ಇದು ನಿಜಕ್ಕೂ ಕನ್ನಡ ಸಾರಸ್ವತ ಲೋಕ ಬೆಚ್ಚಿ ಬೀಳುವ ಸಂಗತಿ.

ಹಾಗೆ ನೋಡಿದರೆ ಪತ್ತೇದಾರಿ ಕಾದಂಬರಿ ಗಂಭೀರ ಸಾಹಿತ್ಯವಲ್ಲ. ನರಸಿಂಹಯ್ಯ ಮಹಾ ಕಾವ್ಯ-ಕಾದಂಬರಿಗಳನ್ನು ಬರೆದವರಲ್ಲ. ಸಂಸ್ಕೃತಿ ಚಿಂತಕರೆಂದು ಪ್ರಸಿದ್ಧಿ ಪಡೆದವರಲ್ಲ. ಕನ್ನಡ ಸಾರಸ್ವತ ಲೋಕವನ್ನು ಉದ್ಧರಿಸಿದವರೂ ಅಲ್ಲ. ಆದರೆ ತಾವು ಕಂಡ, ಕೇಳಿದ, ಕಲ್ಪನೆಯಿಂದ ಮೂಡಿದ ಕತೆಗಳನ್ನೇ ಕುತೂಹಲಕರ ರೀತಿಯಲ್ಲಿ ಕಂಡಿರಿಸಿ, ಕನ್ನಡಿಗರನ್ನು ಕುತೂಹಲದ ಕಡಲಿಗೆ ಕರೆದುಕೊಂಡು ಹೋದವರು. ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಬರೆದವರು. ಪತ್ತೇದಾರಿ ಪುರುಷೋತ್ತಮ, ಮಧುಸೂದನ, ಅರಿಂಜಯ, ಗಾಳಿರಾಯಗಳೆಂಬ ‘ಕನ್ನಡದ ಬಾಂಡ್’ಗಳನ್ನು ಸೃಷ್ಟಿಸಿ, ರೋಚಕ ಜಗತ್ತನ್ನು ರೋಮಾಂಚಕ ಘಟನೆಗಳ ಮೂಲಕ ರಂಜಕವಾಗಿ, ಕಣ್ಣಿಗೆ ಕಟ್ಟುವಂತೆ ವಿವರಿಸಿ ಓದುಗರ ಮನ ಗೆದ್ದವರು. ಒಂದು ತಲೆಮಾರನ್ನೇ ಓದಿನ ಗೀಳಿಗೆ ಹಚ್ಚುವ ಮೂಲಕ, ಮುಂದೊಂದು ದಿನ ಅವರು ಕನ್ನಡ ಸಾಹಿತ್ಯ ಲೋಕದೊಂದಿಗೆ ಒಡನಾಡಲು ಸಂಪರ್ಕ ಸೇತುವೆಯಾದವರು. ಇದು ಅಂತಿಂಥ ಕೊಡುಗೆಯಲ್ಲ.

ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡು ಬಡತನದಲ್ಲಿ ಬೆಳೆದ ನರಸಿಂಹಯ್ಯನವರು, ಹೊಟ್ಟೆಪಾಡಿಗಾಗಿ ಮಾಡದೆ ಇದ್ದ ಕೆಲಸಗಳೇ ಇಲ್ಲ. ‘ನನ್ನ ಕೆಲಸಗಳು ಮತ್ತು ದಿಕ್ಕೆಟ್ಟ ದರಿದ್ರ ಸ್ಥಿತಿಯೇ ನನ್ನನ್ನು ಬರೆಯಲು ಪ್ರೇರೇಪಿಸಿತು’ ಎಂದಿರುವ ನರಸಿಂಹಯ್ಯನವರು ಸುಮಾರು ಮೂವತ್ತೆರಡು ವರ್ಷಗಳ ಕಾಲ ನಾನೂರೈವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಕನ್ನಡ ಪತ್ತೇದಾರಿ ಸಾಹಿತ್ಯ ಲೋಕ ಸ್ಮರಿಸಿಕೊಳ್ಳುವ ಕೊಡುಗೆ ನೀಡಿದ್ದಾರೆ. 

ನರಸಿಂಹಯ್ಯನವರ ‘ಭಯಂಕರ ಬೈರಾಗಿ’ ಕಾದಂಬರಿಯಂತೂ ಅದೆಷ್ಟು ಸಲ ಮರುಮುದ್ರಣ ಕಂಡಿದೆಯೋ, ಪ್ರಿಂಟ್ ಹಾಕಿದವರೇ ಬಲ್ಲರು. ಇವರ ಪತ್ತೇದಾರಿ ಕಾದಂಬರಿಗಳನ್ನು 70ರ ದಶಕದ ಕರ್ನಾಟಕದ ಮುಖ್ಯಮಂತ್ರಿಗಳಾದ ದೇವರಾಜ ಅರಸರೂ ಓದುತ್ತಿದ್ದರಂತೆ. ಕುತೂಹಲಕರ ಸಂಗತಿಗಳನ್ನು, ಘಟನೆಗಳನ್ನು ಕೆಲವರು ಕನ್ನಡ ಸಿನಿಮಾಗಳಲ್ಲಿ ಉಪಯೋಗಿಸಿಕೊಂಡಿದ್ದೂ ಉಂಟು. ನರಸಿಂಹಯ್ಯನವರ ಜೊತೆ ಜೊತೆಗೇ ಇವರ ಸಮಕಾಲೀನ ಲೇಖಕರಾದ ಎಂ. ರಾಮಮೂರ್ತಿಯವರು ಇಪ್ಪತ್ತಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಬರೆದು, ಕನ್ನಡದ ಓದುಗರ ಕುತೂಹಲವನ್ನು ತಣಿಸಿದ್ದಾರೆ.

ಇವರಿಬ್ಬರು ಬರೆಯುವ ಕಾಲಕ್ಕೇ, ಭಿನ್ನ ಬಗೆಯಲ್ಲಿ, ಜನಪ್ರಿಯ ಧಾಟಿಯಲ್ಲಿ ಪತ್ತೇದಾರಿ ಕಾದಂಬರಿಗಳಲ್ಲಿ ರಾಜಕೀಯವನ್ನು ತಂದವರು ಎಚ್.ಕೆ. ಅನಂತರಾವ್. ಇವರು ಸುಮಾರು ಮೂವತ್ನಾಲ್ಕು ಪತ್ತೇದಾರಿ ಪುಸ್ತಕಗಳನ್ನು ಬರೆದರು. ಇವರ ‘ಅಂತ’ ರಾಜಕೀಯ ಬೆರೆತ ಪತ್ತೇದಾರಿ ಕಾದಂಬರಿ. ಇದು ಮೊದಲು ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಜನಮೆಚ್ಚುಗೆ ಪಡೆಯಿತು. ಆ ನಂತರ ಈ ಕಾದಂಬರಿಯನ್ನು ಆಧರಿಸಿ  ಚಲನಚಿತ್ರ ನಿರ್ಮಿಸಲಾಯಿತು. ಅದ್ಭುತ ಯಶಸ್ಸು ಕಂಡ ಚಿತ್ರ ಬಾಕ್ಸಾಫೀಸ್ ಹಿಟ್ ಆಯಿತು. ಅಂಬರೀಷ್‌ರನ್ನು ಜನಪ್ರಿಯ ನಟನನ್ನಾಗಿಸಿತು. ಪತ್ತೇದಾರಿ ಸಾಹಿತ್ಯಕ್ಕೆ ಹೊಸ ತಿರುವು ನೀಡಿತು. 

anta
ಎಚ್.ಕೆ. ಅನಂತರಾವ್ ಅವರ ಕಾದಂಬರಿ ಆಧಾರಿಸಿ ಮೂಡಿಬಂದ ‘ಅಂತ’ ಸಿನಿಮಾ, ಅಂಬರೀಶ್ ಅವರನ್ನು ಜನಪ್ರಿಯ ನಟರನ್ನಾಗಿ ಗುರುತಿಸಿತು

ಅನಂತರಾವ್‌ರ ಹಾದಿಯಲ್ಲಿ, ಕೊಂಚ ಭಿನ್ನವಾಗಿ ಪತ್ತೇದಾರಿ ಕಾದಂಬರಿಗಳನ್ನು ಬರೆದವರು, 2012ರಲ್ಲಿ ತೀರಿಹೋದ ಸುದರ್ಶನ್ ದೇಸಾಯಿ. ಇವರು ಈ ಮೊದಲು ಕತೆ, ಕಾದಂಬರಿಗಳನ್ನು ಬರೆದು ಸಾಹಿತಿಗಳ ಸಾಲಿಗೆ ಸೇರಿಹೋಗಿದ್ದರೂ, ಮನೋ ವೈಜ್ಞಾನಿಕ ಪತ್ತೇದಾರಿ ಕಾದಂಬರಿಗಳನ್ನು ಬರೆಯುವ ಮೂಲಕ ಪತ್ತೇದಾರಿ ಪ್ರಾಕಾರಕ್ಕೆ ಜನಪ್ರಿಯ ಆಯಾಮವನ್ನು ನೀಡಿದವರು. ಇವರ ‘ಹಳದಿ ಚೇಳು’ ಜನಮೆಚ್ಚಿಗೆ ಪಡೆದ ಪತ್ತೇದಾರಿ ಕಾದಂಬರಿ. ಇವರ 29ಕ್ಕೂ ಹೆಚ್ಚು ಕಾದಂಬರಿಗಳಲ್ಲಿ ಕೆಲವು ಚಲನಚಿತ್ರಗಳಿಗೆ ವಸ್ತುವಾಗಿವೆ. ಲೇಖಕರಿಗೂ, ಸಾಹಿತ್ಯ ಜಗತ್ತಿಗೂ ಜನಪ್ರಿಯತೆಯನ್ನು ತಂದುಕೊಟ್ಟಿವೆ.

ಇದನ್ನೂ ಓದಿರಿ: ಮಣಿಪುರದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿರುವ ‘ಆರಂಬೈ ತೆಂಗೋಲ್’ ಹುಟ್ಟಿದ್ದು ಹೇಗೆ?

ಸುದರ್ಶನ್ ದೇಸಾಯಿ ಅವರದೇ ಹಾದಿಯಲ್ಲಿ ಪತ್ತೇದಾರಿ ಕಾದಂಬರಿ ಲೋಕವನ್ನು ಇನ್ನಷ್ಟು ಜನಪ್ರಿಯಗೊಳಿಸಿ, ವಿಸ್ತರಿಸಿದವರು ಟಿ.ಕೆ. ರಾಮರಾವ್ ಮತ್ತು ವಿಜಯ ಸಾಸನೂರು. ಇವರ ಅನೇಕ ಕತೆಗಳು ಕನ್ನಡ ದಿನಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದೂ ಉಂಟು. ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ಮತ್ತು ಹಾಸ್ಯ ಪ್ರಾಕಾರಕ್ಕೆ ಹೆಸರಾಗಿದ್ದ ಬೀಚಿ ಕೂಡ ತಲಾ ಒಂದೊಂದು ಕಾದಂಬರಿಗಳನ್ನು ಬರೆದಿದ್ದೂ ಉಂಟು.

ನರಸಿಂಹಯ್ಯ, ರಾಮಮೂರ್ತಿ, ಮಾಭಿಶೇ, ಜಿಂದೆ ನಂಜುಂಡಸ್ವಾಮಿ, ಕೌಂಡಿನ್ಯ, ಕಾಕೋಳು ರಾಮಯ್ಯ, ಎಂ. ಶಿವಾಜಿರಾವ್ ಅವರುಗಳು ಒಂದು ಕಡೆಯಾದರೆ, ಮತ್ತೊಂದು ಕಡೆಯಲ್ಲಿ ಎಚ್.ಕೆ. ಅನಂತರಾವ್, ಟಿ.ಕೆ. ರಾಮರಾಮ್, ಸುದರ್ಶನ ದೇಸಾಯಿ, ವಿಜಯ ಸಾಸನೂರು. ಈ ಲೇಖಕರದೊಂದು ಘಟ್ಟ. ಈ ಪೀಳಿಗೆಯ ಪತ್ತೇದಾರಿ ಕಾದಂಬರಿಕಾರರ ನಂತರ ಬಂದವರು ಜಿ. ಪ್ರಕಾಶ್, ಸಾಸ್ಕಾಮೂರ್ತಿ, ಬಿ.ವಿ. ಅನಂತರಾಮ್, ಸಿ.ಎಸ್. ರಾವ್, ವಿಜಯಕುಮಾರ್ ಮುಂತಾದವರು. ಇವರೆಲ್ಲರೂ ಕನ್ನಡ ಪತ್ತೇದಾರಿ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ, ತಾವೂ ಬೆಳೆದು ಸಾಹಿತ್ಯಲೋಕವನ್ನೂ ಬೆಳೆಸಿದ್ದಾರೆ.

ವಿಪರ್ಯಾಸಕರ ಸಂಗತಿ ಎಂದರೆ, ಕೌತುಕ ಜಗತ್ತಿನ ಸೃಷ್ಟಿಕರ್ತ ಎನ್. ನರಸಿಂಹಯ್ಯನವರಿಂದಾಗಿ ಒಂದಿಷ್ಟು ಲೇಖಕರು ಬಂದರು; ಪುಸ್ತಕ ಲೋಕ, ಪ್ರಕಾಶನ ಸಂಸ್ಥೆಗಳು, ವ್ಯಾಪಾರ ವಹಿವಾಟು ಕೂಡ ವೃದ್ಧಿಯಾಯಿತು. ಅದಕ್ಕಿಂತ ಹೆಚ್ಚಾಗಿ ಪುಸ್ತಕ ಓದುವ ಒಂದು ವರ್ಗವೇ ಸೃಷ್ಟಿಯಾಯಿತು. ಆದರೆ ನರಸಿಂಹಯ್ಯನವರ ತಲೆಮಾರಿನ ನಂತರ, ಅಂದರೆ ಎಂಬತ್ತರ ಅಂತ್ಯ ಮತ್ತು ತೊಂಬತ್ತರ ಆರಂಭದ ಕಾಲಕ್ಕೆ ಕನ್ನಡ ಪತ್ತೇದಾರಿ ಕಾದಂಬರಿ ಲೋಕವನ್ನು ಮುನ್ನಡೆಸುವ ಮಹಾನುಭಾವರೇ ಇಲ್ಲದಂತಾದರು. ಇದು ನಿಜಕ್ಕೂ ದುರಂತ.

ನನ್ನ ಅನುಭವದ ಪ್ರಕಾರ ಸಿ.ಎಸ್. ರಾವ್, ವಿಜಯಕುಮಾರ್ ನಂತರದ ಪತ್ತೇದಾರಿ ಲೇಖಕರನ್ನು, ಹತ್ತದಿನೈದು ರೂಪಾಯಿಗೊಂದು ಪುಸ್ತಕ ಪ್ರಿಂಟ್ ಹಾಕಿ ಕೊಡುತ್ತಿದ್ದ ಬೆಂಗಳೂರಿನ ಬಳೇಪೇಟೆಯ ಪ್ರಕಾಶಕರನ್ನು ಕಂಡಿದ್ದಿಲ್ಲ. ಈ ಬಗ್ಗೆ ಪುಸ್ತಕ ಮಾರಾಟ ಮಳಿಗೆಯ ಮಾಲೀಕರನ್ನು ಕೇಳಿದರೆ, ‘ಇವತ್ತು ಪತ್ತೇದಾರಿ ಕಾದಂಬರಿಗಳು ಓಡ್ತಾಯಿಲ್ಲ, ಪತ್ತೇದಾರಿ ಕಾದಂಬರಿಗಳ ಥರಾನೆ ಇರುವ, ಸ್ವಲ್ಪ ಮಸಾಲೆ ಬೆರೆತ ರವಿ ಬೆಳಗೆರೆಯವರ ಪುಸ್ತಕಗಳು ಓಡ್ತಿವೆ. ಒಂದು ಕಾಲಕ್ಕೆ ಯಂಡಮೂರಿ ವೀರೇಂದ್ರನಾಥ್ ಪುಸ್ತಕಗಳು ಇದೇ ರೀತಿ ಓಡ್ತಾಯಿದ್ದವು. ಈಗ ಅವೂ ಕೂಡ ಕಡಿಮೆಯಾಗಿವೆ’ ಎನ್ನುತ್ತಾರೆ.

yandamuri
ಯಂಡಮೂರಿ ವೀರೇಂದ್ರನಾಥ್

ಅಂದರೆ ಕನ್ನಡ ಪತ್ತೇದಾರಿ ಕಾದಂಬರಿ ಜಗತ್ತು ಕಣ್ಮರೆಯಾಯಿತೆ? ಕನ್ನಡ ಸಾರಸ್ವತ ಲೋಕದ ಒಂದು ಅವಿಭಾಜ್ಯ ಅಂಗವಾಗಿದ್ದ ಪತ್ತೇದಾರಿ ಕಾದಂಬರಿ ಪ್ರಾಕಾರ ಹೀಗೆ ಇದ್ದಕ್ಕಿದ್ದಂತೆ ಇಲ್ಲವಾಗಿದ್ದಕ್ಕೆ ಕಾರಣಗಳೇನು?

ನರಸಿಂಹಯ್ಯನವರು ಬರೆಯುವ ಕಾಲಕ್ಕೆ, ಅವರು ಕಂಡದ್ದು ಕೇಳಿದ್ದು ಕಾಲ್ಪನಿಕ ಕತೆಯಾಗುತ್ತಿತ್ತು. ಅವರ ನಂತರದ ಪೀಳಿಗೆಯ ಲೇಖಕರು ಕೂಡ ಅದೇ ದಾರಿ ಹಿಡಿದರೂ, ಇಂಗ್ಲಿಷಿನ ಅಗಾಥೆ ಕ್ರಿಸ್ಟಿ, ಸರ್ ಆರ್ಥರ್ ಕಾನನ್ ಡೈಲ್, ಜೇಮ್ಸ್ ಹ್ಯಾಡ್ಲಿ ಚೇಸ್ ಕ್ರೈಮ್ ಥ್ರಿಲ್ಲರ್ ಗಳನ್ನು; ಹಿಂದಿ, ತೆಲುಗು ಮತ್ತು ತಮಿಳಿನ ಕ್ರೈಮ್ ಸ್ಟೋರಿಗಳನ್ನು ಅವಲಂಬಿಸುವುದು ಅನುವಾದಿಸುವುದು ಕಾಣುತ್ತಿತ್ತು. ಆದರೆ ಇವತ್ತಿಗೂ ಇಂಗ್ಲಿಷಿನಲ್ಲಾಗಲಿ, ಭಾರತೀಯ ಇತರ ಭಾಷೆಗಳಲ್ಲಾಗಲಿ ಥ್ರಿಲ್ಲರ್ ಗಳಿಗೇನು ಕೊರತೆಯಾಗಿಲ್ಲ. ಕನ್ನಡದಲ್ಲಿ ಮಾತ್ರ ಪತ್ತೇದಾರಿ ಪ್ರಾಕಾರ ಇಲ್ಲವೇ ಇಲ್ಲ.  

ಇದನ್ನೂ ಓದಿರಿ: ಅಮೆರಿಕ, ಫ್ರಾನ್ಸ್‌ಗೂ ಸಡ್ಡು ಹೊಡೆಯುತ್ತಿರುವ ಇಬ್ರಾಹಿಂ ಥೋರೆ!

ಪತ್ತೇದಾರಿ ಸಾಹಿತ್ಯದ ಕತೆ ಹೀಗಾದರೆ, ಇದಕ್ಕಿಂತ ಕೊಂಚ ಮೇಲ್ಮಟ್ಟದ ಜನಪ್ರಿಯ ಸಾಹಿತ್ಯದ ಕತೆ ಇನ್ನೊಂದು ಬಗೆಯದು. 1990ರ ಸುಮಾರಿಗೆ ಕನ್ನಡ ಜನಪ್ರಿಯ ಸಾಹಿತ್ಯಲೋಕಕ್ಕೆ ತೆಲುಗಿನ ಯಂಡಮೂರಿ ವೀರೇಂದ್ರನಾಥ್ ಕಾಲಿಟ್ಟರು. ವಾರಪತ್ರಿಕೆಗಳು ಇವರ ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸತೊಡಗಿದವು. ತೆಲುಗಿನಲ್ಲಿ ದಂಡಿಯಾಗಿ ಬರೆಯುತ್ತಿದ್ದ ಇವರ ಕಾದಂಬರಿಗಳು ಯಾವ ಮಟ್ಟದ ಜನಪ್ರಿಯತೆ ಗಳಿಸಿದವೆಂದರೆ, ಕನ್ನಡದ ಪತ್ತೇದಾರಿ ಮತ್ತು ಜನಪ್ರಿಯ ಲೇಖಕರೆಲ್ಲ ಒಂದೇ ಏಟಿಗೆ ಮೂಲೆಗುಂಪಾಗಿ ಹೋದರು.

ಇದೆಲ್ಲಕ್ಕಿಂತಲೂ ಮುಖ್ಯವಾಗಿ ಇಂದಿನ ಯುವ ಪೀಳಿಗೆಯನ್ನು ಓದಿನ ಜಗತ್ತಿನತ್ತ ಆಕರ್ಷಿಸುವ ಜನಪ್ರಿಯ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿದೆ. ಜೊತೆಗೆ ಇವತ್ತಿನ ಯುವ ಪೀಳಿಗೆ ಓದುವುದಕ್ಕಿಂತ ನೋಡುವುದರ (ಟಿವಿ, ಕಂಪ್ಯೂಟರ್, ಮೊಬೈಲ್) ಕಡೆ ಆಕರ್ಷಿತಗೊಂಡಿದೆ. ಮಕ್ಕಳು ಆರಂಭದಿಂದಲೇ ಕಾನ್ವೆಂಟು, ಇಂಗ್ಲಿಷು ಎನ್ನುವುದರಿಂದ, ಅವರೆಲ್ಲ ಹ್ಯಾರಿ ಪಾಟರ್‌ನಂತಹ ಫ್ಯಾಂಟಸಿ ಕೃತಿಗಳತ್ತ ಜಾರುವುದರಿಂದ, ಕನ್ನಡ ಪತ್ತೇದಾರಿ ಕಥೆಗಳತ್ತ ನೋಡುವವರಿಲ್ಲದೆ ಲೇಖಕರಿಗೆ, ಪ್ರಕಾಶಕರಿಗೆ ಕೆಲಸವಿಲ್ಲದಂತಾಗಿದೆ.

ನೆಟ್‌ನಲ್ಲಿ ನಾಲ್ಕೇ ಜನ

ಪುಸ್ತಕ ರೂಪದಲ್ಲಿ ಪತ್ತೇದಾರಿ ಕಾದಂಬರಿಗಳು ಪ್ರಿಂಟಾಗುತ್ತಿಲ್ಲ. ಈ ಆಧುನಿಕ ಕಂಪ್ಯೂಟರ್ ಕಾಲದಲ್ಲಿ, ಬ್ಲಾಗ್ ಗಳಲ್ಲಿ, ವೆಬ್ ಸೈಟ್ ಗಳಲ್ಲಾದರೂ ಹೊಸ ಪತ್ತೇದಾರಿ ಕಾದಂಬರಿಕಾರರು ಬರೆಯುತ್ತಿರಬಹುದೆ ಎಂದು ನೋಡಿದರೆ, ನಿಮಗೆ ನಿರಾಸೆ ಕಟ್ಟಿಟ್ಟ ಬುತ್ತಿ.

ಆರ್ಕುಟ್‌ನಲ್ಲಿ ಅರವಿಂದ್ ಐಯ್ಯಂಗಾರ್ ಎನ್ನುವವರು ಒಂದು ಬ್ಲಾಗ್ ತೆರೆದು ಕನ್ನಡಿಗರಿಗಾಗಿ ಪತ್ತೇದಾರಿ ಕತೆಗಳನ್ನು ಬರೆದು ಅಪ್‌ ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ಲ, ಆಸಕ್ತರು ನಮ್ಮ ಬಳಗದ ಸದಸ್ಯರಾಗಬಹುದು, ಬರೆಯಬಹುದು, ಬೇರೆಯವರು ಬರೆದದ್ದನ್ನು ಓದಬಹುದು, ಪ್ರತಿಕ್ರಿಯಿಸಬಹುದು ಎಂದಿದ್ದಾರೆ.

ಆಶ್ಚರ್ಯಕರ ಸಂಗತಿ ಎಂದರೆ, ಜುಲೈ 2010ರಲ್ಲಿ ಈ ಬ್ಲಾಗ್ ಆರಂಭವಾಗಿದೆ. ಇಲ್ಲಿಯವರೆಗೆ, ನಾಲ್ಕು ಜನ ಸದಸ್ಯರಾಗಿದ್ದಾರೆ, ಏಳು ಜನ ಪ್ರತಿಕ್ರಿಯಿಸಿದ್ದಾರೆ.

ಒಬ್ಬ ರೈಟರ್‌ಗೆ ಇಬ್ಬರು ಪಬ್ಲಿಷರ್‌ಗಳು

ಆಂಧ್ರಪ್ರದೇಶದ ವಿಜಯವಾಡದ ಹತ್ತಿರದ ಮಧುಬಾಬು ವೃತ್ತಿಯಲ್ಲಿ ಶಾಲಾ ಹೆಡ್ ಮಾಸ್ಟರ್. ಇವರು ತೆಲುಗಿನ ಬಹುಬೇಡಿಕೆಯ, ಜನಪ್ರಿಯ ಪತ್ತೇದಾರಿ ಕಾದಂಬರಿಕಾರರು. ಇವರು 1970ರಿಂದ 90ರವರೆಗೆ ಬರೆದ ನೂರಾರು ಪತ್ತೇದಾರಿ ಕಾದಂಬರಿಗಳು ತೆಲುಗಿನ ಓದುಗರ ಕತೂಹಲವನ್ನು ತಣಿಸಿದ್ದುಂಟು. ಈ ಲೇಖಕರ ಹೆಚ್ಚುಗಾರಿಕೆ ಎಂದರೆ, ಎಂಟ್ಹತ್ತು ರೂಪಾಯಿಗಳ ಮುಖಬೆಲೆಯ ಇವರ ಪಾಕೆಟ್ ಪುಸ್ತಕಗಳು ಹಾಟ್ ಕೇಕ್‌ನಂತೆ ಖರ್ಚಾಗುತ್ತವೆ. ಈ ಕಾರಣದಿಂದಲೇ ಮಧುಬಾಬು ಬರೆಯುವ ಪತ್ತೇದಾರಿ ಕಾದಂಬರಿಗಳಿಗೆ ವಿಜಯವಾಡ ಮತ್ತು ಚನ್ನೈನಲ್ಲಿ ಎರಡು ಪ್ರಕಾಶನ ಸಂಸ್ಥೆಗಳಿದ್ದು, ಹೊಸ ಪುಸ್ತಕವನ್ನು ಪಬ್ಲಿಷ್ ಮಾಡುವಲ್ಲಿ ಇಬ್ಬರ ನಡುವೆ ಪೈಪೋಟಿಯಿದ್ದ ಕಾಲವೂ ಇತ್ತು.

ಬೆಂಗಳೂರಿನಲ್ಲಿ ತೆಲುಗು ಭಾಷೆ ಮಾತನಾಡುವ ಜನ ಜಾಸ್ತಿಯಿದ್ದಾರೆ, ಕನ್ನಡಕ್ಕಿಂತಲೂ! ಮಧುಬಾಬು ಪುಸ್ತಕಗಳನ್ನು ಓದುವವರ ಸಂಖ್ಯೆಯೂ ಹೆಚ್ಚಾಗಿದೆ. ಬೆಂಗಳೂರಿನ  ತೆಲುಗು ಪುಸ್ತಕಗಳ ಸಗಟು ವಿತರಕರಾದ ಲಕ್ಷ್ಮಿನಾರಾಯಣ ಮತ್ತು ಕೇಶವ್ ಹೇಳುವ ಪ್ರಕಾರ, ‘ಮಧುಬಾಬು ಪುಸ್ತಕಗಳು ಆ ಕಾಲದಲ್ಲಿ ಒಂದೊಂದು ಟೈಟಲ್ ಕಡಿಮೆ ಎಂದರೂ ನೂರಾರು ಪುಸ್ತಕಗಳು ಖರ್ಚಾಗುತ್ತಿದ್ದವು, ಈಗ ಕೊಂಚ ಕಡಿಮೆಯಾಗಿದೆ. ಆದರೆ ಕೇಳುವವರು ಈಗಲೂ ಇದ್ದಾರೆ’ ಎನ್ನುತ್ತಾರೆ.

ನರಸಿಂಹಯ್ಯನವರ ನಂತರದ ಕನ್ನಡದ ಕೆಲ ಪತ್ತೇದಾರಿ ಕಾದಂಬರಿಕಾರರು ಮಧುಬಾಬು ಅವರ ಹೊಸ ಪತ್ತೇದಾರಿ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವುದು 90 ದಶಕದ ದಿನಗಳಲ್ಲಿ ಸಾಮಾನ್ಯವಾಗಿತ್ತು. 90ರ ನಂತರ ಮಧುಬಾಬು ಬೇಡಿಕೆ ಕಡಿಮೆಯಾಗಿ ಬರೆಯುವುದು ಕಡಿಮೆಯಾಯಿತು. ಕನ್ನಡದಲ್ಲೂ ಇಲ್ಲವಾಯಿತು.

ಇದನ್ನೂ ಓದಿರಿ: ಪಹಲ್ಗಾಮೋತ್ತರ ಪ್ರವಾಸೋದ್ಯಮ; ಕಾಶ್ಮೀರಿಗಳ ಬದುಕು ತತ್ತರ

ಹಾಗೆಯೇ ಬಹುಪಾಲು ಪತ್ತೇದಾರಿ ಬರಹಗಳು ಕೇವಲ ಕುತೂಹಲವನ್ನು ಹುಟ್ಟಿಸಿ ತಣಿಸುವುದಕ್ಕಷ್ಟೇ ಸೀಮಿತವಾಗಿರುವುದರಿಂದ ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳು ಈ ಪ್ರಕಾರವನ್ನೇ ಕಡೆಗಣಿಸಿರಬಹುದು. ಇದು ತಿಳಿವಳಿಕೆಯ ಅಭಾವವೇ ಹೊರತು ಮತ್ತೇನಲ್ಲ. ಜನಪ್ರಿಯ ಬರಹಗಳ ಬಗ್ಗೆ ಇರುವ ಸೋಗಿನ ನಿಲುವು ಕೂಡ ಇದಕ್ಕೆ ಕಾರಣವಾಗಿರಬಹುದು.

ಇದರ ಜೊತೆಗೆ… ಕಾಲ, ಜನ, ಜೀವನಶೈಲಿ ಬದಲಾಗಿದೆ. ನೀತಿ ನಿಲುವು ಮೌಲ್ಯವೂ ಬದಲಾಗಿದೆ. ಮಾರಕಟ್ಟೆ ಮಂತ್ರವೂ ಬದಲಾಗಿದೆ. ಬದಲಾದ ಕಾಲದಲ್ಲಿ, ಜನಸಾಮಾನ್ಯರಲ್ಲಿ ಭಯ, ಭೀತಿ ಹುಟ್ಟಿಸಿ ಕುತೂಹಲ ಕೆರಳಿಸುತ್ತಿದ್ದ ಕೊಲೆ ಇವತ್ತು ಕಾಮನ್ ಆಗಿದೆ. ಶಿಕ್ಷೆ, ಅವಮಾನಗಳಿಗೆ ಯಾರೂ ಹೆದರದಂತಾಗಿದೆ. ಗೌರವಾನ್ವಿತ ಹುದ್ದೆ ಅಲಂಕರಿಸಿರುವ ಮಂತ್ರಿ, ಮುಖ್ಯಮಂತ್ರಿಗಳೇ ಅಪರಾಧವೆಸಗಿ ಜೈಲಿಗೆ ಹೋಗುವಂತಾಗಿದೆ. ಕ್ರೈಮ್ ಕೂಡ ಮಿತಿಯಿಂದ ಅತಿಗೆ ನೆಗೆದಿದೆ. ಅತಿಗೆ ಇನ್ನಷ್ಟು ಮಸಾಲೆ ಅರೆದ ಮಾಧ್ಯಮಗಳಿಂದಾಗಿ ಅಭಿರುಚಿ ಅಂತರ್ದಾನವಾಗಿದೆ. ವಿಷುಯಲ್ ಮೀಡಿಯಾಗಳಲ್ಲಿ ಕೊಲೆ ಕ್ಯಾಷುಯಲ್ ಆಗಿದೆ. ಅಂದಮೇಲೆ ಅಕ್ಷರಗಳಲ್ಲಿ ಪತ್ತೇದಾರಿ ಕಾದಂಬರಿಗಳು ಹುಟ್ಟುಹಾಕುವ ಕುತೂಹಲ, ಕೌತುಕ ಓದುಗನಿಗೆ ರುಚಿಸದೆ, ಪುಸ್ತಕ ಸಂಸ್ಕೃತಿಗೆ ಹೊಡೆತ ಬಿದ್ದಿದೆ. ಕನ್ನಡ ಪತ್ತೇದಾರಿ ಕಾದಂಬರಿ ಲೋಕ ಕಣ್ಮರೆಯಾಗಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...