‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?

Date:

‘ಜೈ ಭೀಮ್’- ಇದು ಜೈಕಾರಕ್ಕೂ, ಮಾತಿನ ಆರಂಭಕ್ಕೂ, ಮಾತಿನ ಮುಕ್ತಾಯಕ್ಕೂ ಅಂಬೇಡ್ಕರ್‌ವಾದಿ ವಿಚಾರವಂತರು ಬಳಸುವ ಪದ. ಹಿಂದುತ್ವವಾದಿಗಳು ಜೈ ಶ್ರೀರಾಮ್, ಜೈ ಬಜರಂಗಬಲಿ ಇತ್ಯಾದಿ ಪದಗುಚ್ಛಗಳನ್ನು ಬಳಸುತ್ತಾರೆ. ಕೋಮು ಹಿಂಸೆಯ ಸಂದರ್ಭದಲ್ಲೂ ದೇವರ ಹೆಸರಲ್ಲಿ ಘೋಷಣೆಗಳನ್ನು ಕೂಗುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಲಪಂಥೀಯರು ಕೂಡ ಅಂಬೇಡ್ಕರ್ ಅನುಯಾಯಿಗಳನ್ನು ಮೆಚ್ಚಿಸಲು ‘ಜೈಭೀಮ್’ ಘೋಷಣೆ ಹೇಳುವುದುಂಟು!

ಸಾಮಾನ್ಯವಾಗಿ ‘ಜೈ ಭೀಮ್’ ಎನ್ನುವುದು ಅಂಬೇಡ್ಕರ್ ಅವರನ್ನೇ ಉದ್ದೇಶಿಸಿದ ಪದವಾದರೂ ಅದರ ಹಿಂದೆ ಹಲವು ಸ್ವಾರಸ್ಯಕರ ಸಂಗತಿಗಳಿವೆ. ‘ಜೈ ಭೀಮ್’ ಎಂಬುದು ಲೋಕರೂಢಿಯಾಗಿರುವಾಗ, ಈ ಪದ ಹೇಗೆ ಬಳಕೆಗೆ ಬಂದಿತು ಎಂಬ ಸಂಗತಿಯನ್ನು ತಿಳಿದುಕೊಳ್ಳುವ ಕುತೂಹಲವಂತೂ ಅನೇಕರಿಗೆ ಇದ್ದೇ ಇದೆ.

‘ಜೈ ಭೀಮ್’ ಎಂದಿದ್ದಕ್ಕೆ ಹಲ್ಲೆ ನಡೆಸುವುದು, ಅಂಬೇಡ್ಕರ್ ಹಾಡು ಹಾಕಿದ್ದಕ್ಕೆ ಜೀವ ತೆಗೆಯುವುದು- ಇವೆಲ್ಲವೂ ನಡೆಯುತ್ತಿರುವುದು ಸಮಾಜದಲ್ಲಿನ ಅಂಬೇಡ್ಕರ್ ವಿರೋಧಿ ಮನಸ್ಥಿತಿಯನ್ನು ಢಾಳಾಗಿ ತೋರಿಸುತ್ತದೆ. ಆದರೆ ಶೋಷಿತ ಜನರ ಸ್ವಾಭಿಮಾನದ ಪ್ರತೀಕವಾಗಿ ‘ಜೈ ಭೀಮ್’ ಈ ಪದ ಬಳಕೆಯಾಗುತ್ತಾ ಬಂದಿದೆ. ‘ಜೈ ಭೀಮ್’ ಎಂಬುದಕ್ಕೆ ಕಾರಣ ಅಂಬೇಡ್ಕರ್ ಅವರಾಗಿದ್ದರೂ ಈ ಪದದ ಇತಿಹಾಸ ಮತ್ತಷ್ಟು ಹಿಂದಕ್ಕೆ ಹೋಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದಲಿತ ಚಿಂತಕರು ಮುನ್ನಡೆಸುತ್ತಿರುವ ‘ವೆಲಿವಾಡ’ ವೆಬ್‌ಸೈಟ್‌ನಲ್ಲಿ ಶಿಕ್ಷಣ ತಜ್ಞ ಕಪಿಲೇಂದ್ರ ದಾಸ್ ಬರೆದಿರುವ ಲೇಖನದಲ್ಲಿ ಅನೇಕ ಸಂಗತಿಗಳನ್ನು ಉಲ್ಲೇಖಿಸಲಾಗಿದೆ (ಅಂದಹಾಗೆ ‘ವೆಲಿವಾಡ’ ಅಂದರೆ- ದಲಿತರು ವಾಸಿಸುವ ಕೇರಿ ಎಂಬರ್ಥವಿದೆ). ‘ಜೈ ಭೀಮ್’ ಪದದ ಮೂಲದ ಬಗ್ಗೆ ಬೆಳಕು ಚೆಲ್ಲುತ್ತಾ ಜೆಎನ್‌ಯು ದೆಹಲಿಯ ಪ್ರೊಫೆಸರ್ ವಿವೇಕ್ ಕುಮಾರ್, “1818ರ ಜನವರಿ 1ರಂದು ನಡೆದ ಸುಪ್ರಸಿದ್ಧ ಭೀಮಾ ಕೋರೆಂಗಾವ್ ಯುದ್ಧದಲ್ಲಿ ಮೊದಲ ಬಾರಿಗೆ ಜೈ ಭೀಮ್ ಪದ ಉಚ್ಚರಿಸಲಾಯಿತು. ಮಹಾರ್ ಸೈನಿಕರು (ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಭಾಗವಾಗಿ) ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯುದ್ಧದ ಸಮಯದಲ್ಲಿ ಭೀಮಾ ನದಿಯನ್ನು ದಾಟುವಾಗ, ತಮ್ಮನ್ನು ತಾವು ಹುರಿದುಂಬಿಸಿಕೊಳ್ಳಲು ‘ಜೈ ಭೀಮ್’ ಘೋಷಣೆಯನ್ನು ಕೂಗುತ್ತಿದ್ದರು” ಎಂದು ವಿವರಿಸುತ್ತಾರೆ.

bheem 1

ಇಪ್ಪತ್ತನೇ ಶತಮಾನಕ್ಕೆ ಬಂದರೆ ಜೈ ಭೀಮ್ ಘೋಷಣೆಯು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂಕೇತಿಸುತ್ತದೆ. ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಭ್ರಾತೃತ್ವ, ಜ್ಞಾನದ ಜ್ಯೋತಿ ಹೊತ್ತ ಬಾಬಾ ಸಾಹೇಬರ ಬಹುಮುಖಿ ವ್ಯಕ್ತಿತ್ವವನ್ನು ಈ ಪದದ ಮೂಲಕ ಶ್ಲಾಘಿಸಲಾಗುತ್ತದೆ.

ಇದನ್ನೂ ಓದಿರಿ: ಲವ್ ಜಿಹಾದ್‌ನಿಂದ ವೋಟ್ ಜಿಹಾದ್‌ವರೆಗಿನ ಪಿತೂರಿ ಕಥನ; ವಾಸ್ತವವೇನು?

ಬಾಬು ಹರದಾಸ್ ಲಕ್ಷ್ಮಣರಾವ್ ನಾಗರಾಳೆ (1904-1939) ಅವರು ಸ್ವತಂತ್ರ ಕಾರ್ಮಿಕ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದವರು, ರಾಜಕಾರಣಿ ಮತ್ತು ಸಮಾಜ ಸುಧಾರಕರೂ ಹೌದು. ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಬಹುದೊಡ್ಡ ಅನುಯಾಯಿ ಆಗಿದ್ದರು. ಬಾಬು ಹರದಾಸ್ ಅವರು ‘ಜೈ ಭೀಮ್’ ಎಂದು ಹೇಳುವ ಮೂಲಕ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುವುದನ್ನು ಆರಂಭಿಸಿದವರು ಎಂದು ಇತಿಹಾಸದಲ್ಲಿ ಗುರುತಿಸಲಾಗಿದೆ. ಅಂಬೇಡ್ಕರ್ ಅವರನ್ನು ಮುಖ್ಯವಾಗಿಟ್ಟುಕೊಂಡು 1935ರಲ್ಲಿ ‘ಜೈಭೀಮ್’ ಪದವನ್ನು ಬಳಕೆಗೆ ತಂದವರು ಇದೇ ಹರದಾಸ್. ಗಾಂಧಿ ಮತ್ತು ಅಂಬೇಡ್ಕರ್ ಅವರ ನಡುವೆ ‘ಪೂನಾ ಒಪ್ಪಂದ’ ಆದಂತಹ ಸಂದರ್ಭದಲ್ಲಿ ಸಹಿ ಹಾಕಿದವರಲ್ಲಿ ಇವರೂ ಒಬ್ಬರಾಗಿದ್ದರು.

‘ಜೈ ಭೀಮ್’ ಪದ ಹೇಗೆ ಹುಟ್ಟಿಕೊಂಡಿತು ಎಂದು ಪಿ.ಟಿ ರಾಮ್‌ಟೆಕೆ ಅವರು ತಮ್ಮ ‘ಜೈ ಭೀಮ್’ ಎಂಬ ಸಂಶೋಧನಾಪ್ರಬಂಧದಲ್ಲಿ ವಿವರಿಸಿದ್ದಾರೆ (ಜನವರಿ 2000ರಲ್ಲಿ ಇದನ್ನು ಪ್ರಕಟಿಸಲಾಗಿದೆ). ಇದು ಅವರ ಎಂ.ಎ. ವ್ಯಾಸಂಗದ ವೇಳೆ ಸಲ್ಲಿಸಿದ ಸಂಪ್ರಬಂಧವಾಗಿದೆ. ಹರದಾಸ್ ಹೇಗೆ ಜೈ ಭೀಮ್ ಕಲ್ಪನೆಯನ್ನು ರೂಪಿಸಿದರು ಮತ್ತು ಅಭಿವೃದ್ಧಿಪಡಿಸಿದರು ಎಂಬುದನ್ನು ಅವರು ವಿವರಿಸುತ್ತಾರೆ. ಆದ್ದರಿಂದ ಹರದಾಸ್ ಅವರನ್ನು ‘ಜೈ ಭೀಮ್’ ಪದದ ಸೃಷ್ಟಿಕರ್ತ ಎಂದೂ ಪರಿಗಣಿಸಲಾಗುತ್ತದೆ.

1946ರಲ್ಲಿ ಡಾ. ಅಂಬೇಡ್ಕರ್ ಅವರ ಸಮ್ಮುಖದಲ್ಲಿ ಹಳೆಯ ದೆಹಲಿ ರೈಲು ನಿಲ್ದಾಣದ ಎದುರಿನ ಗಾಂಧಿ ಮೈದಾನದಲ್ಲಿ ನಡೆದ ಅಂಬೇಡ್ಕರ್ ಅವರ ಜನ್ಮದಿನದ ಸಂದರ್ಭದಲ್ಲಿ ದಲಿತ ಕವಿ ಬಿಹಾರಿ ಲಾಲ್ ಹರಿತ್ (1913-1999) ಅವರು ಕವಿತೆ ಓದುವ ಮೂಲಕ ‘ಜೈ ಭೀಮ್’ ಎಂದು ಘೋಷಣೆ ಮೊಳಗಿಸಿದ್ದರು.

‘ಜೈ ಭೀಮ್’ ನಮಸ್ಕಾರವು ಡಾ. ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿಯೇ ಆರಂಭವಾಗಿತ್ತು. ಶೋಷಿತ ಸಮುದಾಯಗಳ ಚಳವಳಿಯ ಹೋರಾಟಗಾರರು ಒಬ್ಬರಿಗೊಬ್ಬರು ‘ಜೈ ಭೀಮ್’ ಎಂದು ವಿನಿಮಯ ಮಾಡಿಕೊಳ್ಳುತ್ತಿದ್ದರು. ಕೆಲವು ಹೋರಾಟಗಾರರು ಡಾ.ಅಂಬೇಡ್ಕರ್ ಅವರಿಗೆ ‘ಜೈ ಭೀಮ್’ ಎಂದು ನೇರವಾಗಿ ನಮಸ್ಕರಿಸುತ್ತಿದ್ದರು.

ಇದನ್ನೂ ಓದಿರಿ: ನಾವು ಹಿಂದೂಗಳಷ್ಟೇ, ಕಾಂಗ್ರೆಸ್-ಬಿಜೆಪಿ ನಂತರದ ಮಾತು; ಮುಸ್ಲಿಂ ಭಯದ ಅಗ್ನಿಕುಂಡವಾದ ‘ಹಿಮಾಚಲ’

1956ರಲ್ಲಿ ಡಾ. ಅಂಬೇಡ್ಕರ್ ಅವರ ನಿಧನದ ಬಳಿಕ ‘ಜೈ ಭೀಮ್’ ಘೋಷಣೆಯು ಜನಪ್ರಿಯತೆ ಗಳಿಸಿತು. ಆ ಪದವು ಕ್ರಾಂತಿಕಾರಕ ಚಳವಳಿಯ ಭಾಗವಾಯಿತು. ಎಷ್ಟರ ಮಟ್ಟಿಗೆ ಅದು ರಾಜಕೀಯ ಸಂಚಲನವನ್ನು ಮೂಡಿಸಿದೆ ಎಂದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾವತಿ ಅಪ್ಲಿಕೇಶನ್ ‘ಭಾರತ್ ಇಂಟರ್ಫೇಸ್ ಫಾರ್ ಮನಿ’ಯನ್ನು 2016ರ ಡಿಸೆಂಬರ್ 30ರಂದು ಆರಂಭಿಸಿದರು. ಈ ಅಪ್ಲಿಕೇಷನ್ ‘BHIM’ ಎಂಬ ಸಂಕ್ಷೇಪಣೆಯನ್ನು ಹೊಂದಿರುವುದನ್ನು ಗಮನಿಸಬಹುದು. ಈ ಅಪ್ಲಿಕೇಷನ್ ನೇರವಾಗಿ ಬ್ಯಾಂಕ್‌ಗಳ ಮೂಲಕ ಇ-ಪಾವತಿಯನ್ನು ಸುಗಮಗೊಳಿಸುವ ಮತ್ತು ನಗದು ರಹಿತ ವಹಿವಾಟುಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಸಾಮಾಜಿಕವಾಗಿ ಹಿಂದುಳಿದ ಸಮಾಜವು ಈ ಹೆಸರನ್ನು (BHIM) ಮತರಾಜಕಾರಣದ ಭಾಗವಾಗಿ ಪರಿಗಣಿಸಿತು.

ಪ್ರಧಾನಿ ಮೋದಿಯವರು ಈ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ಜಂಟಿ ಚುನಾವಣಾ ರ್ಯಾಲಿಯಲ್ಲಿ ಮಾಡಿದ 30 ನಿಮಿಷಗಳ ಭಾಷಣದಲ್ಲಿ ‘ಜೈ ಭೀಮ್’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಬಳಸಿದ್ದನ್ನು ಕಾಣಬಹುದು. ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಡಾ. ಅಂಬೇಡ್ಕರ್ ಅವರನ್ನು ಅರ್ಥಶಾಸ್ತ್ರಜ್ಞ ಎಂದು ಸ್ಮರಿಸಿದರುಮತ್ತು ‘ಬಹುಜನ ಹಿತಾಯ, ಬಹುಜನ ಸುಖಾಯ’ ಎಂದು ಹೇಳಿದರು. ಅಷ್ಟರ ಮಟ್ಟಿಗೆ ಹಿಂದುತ್ವವಾದಿ ಪ್ರತಿಪಾದಕರೂ ‘ಜೈ ಭೀಮ್’ ಮತ್ತು ‘ಅಂಬೇಡ್ಕರ್’ ಹೆಸರಿನ ಮೊರೆ ಹೋಗುವ ಅನಿವಾರ್ಯ ರಾಜಕೀಯ ಸನ್ನಿವೇಶಗಳು ಸೃಷ್ಟಿಯಾಗಿವೆ.

‘ಜೈ ಭೀಮ್’ ಅರ್ಥ: ‘ಜೈ’ ಎಂದರೆ- ‘ದೀರ್ಘಕಾಲ ಬಾಳು!’ ಎಂದೂ ‘BHIM’ ಎಂದರೆ ‘ಡಾ. ಭೀಮರಾವ್ ಅಂಬೇಡ್ಕರ್’ ಎಂದೂ ಉಲ್ಲೇಖಿಸುತ್ತದೆ. ‘ಜೈ ಭೀಮ್’ ಎಂದರೆ, ‘ಡಾ. ಬಿ.ಆರ್. ಅವರ ಪರಂಪರೆ ಮತ್ತು ಸ್ಫೂರ್ತಿ ಚಿರಾಯುವಾಗಲಿ’ ಎಂಬ ಅರ್ಥವನ್ನು ಹೊಂದಿದೆ.

‘ಜೈ ಭೀಮ್’ ಎಂದರೆ- ಘನತೆ, ಹೆಮ್ಮೆ, ಮಾನವೀಯತೆ, ಕ್ರಾಂತಿ, ಪ್ರಗತಿ, ವಿಜಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ವಿಚಾರವಂತಿಕೆ, ಸಹಾನುಭೂತಿ, ನೈತಿಕತೆ, ನಂಬಿಕೆ, ಸ್ಫೂರ್ತಿ, ಪರಿಶುದ್ಧತೆ, ಕೃತಜ್ಞತೆ, ಜ್ಞಾನ, ಸಮಗ್ರತೆ, ಶಕ್ತಿ, ನ್ಯಾಯ, ಪ್ರಾಮಾಣಿಕತೆ, ಶಿಕ್ಷಣ, ಸಂಘಟನೆ ಮತ್ತು ಹೋರಾಟ- ಈ ಅರ್ಥಗಳನ್ನು ಧ್ವನಿಸುತ್ತದೆ.

‘ಜೈ ಭೀಮ್’ ಎಂಬ ಘೋಷಣೆಯು ಸಂದರ್ಭೋಚಿತವಾಗಿ, ‘ಬಾಬಾ ಸಾಹೇಬ್ ಅಂಬೇಡ್ಕರ್‌ ಅವರಿಗೆ ಜಯವಾಗಲಿ ಮತ್ತು ಅಂಬೇಡ್ಕರ್ ಅವರ ಆದರ್ಶಗಳು, ಸಿದ್ಧಾಂತಗಳು ಮತ್ತು ತತ್ವಗಳಿಗೆ ಜಯವಾಗಲಿ” ಎಂಬರ್ಥ ಹೊಂದಿದೆ. ‘ಜೈ ಭೀಮ್’ ಎಂಬುದು ಕೇವಲ ಶುಭಾಶಯಕ್ಕಾಗಿ ಬಳಸುವ ನುಡಿಗಟ್ಟು ಮಾತ್ರವಲ್ಲದೆ ಆ ಜನರಿಗೆ ಸ್ಫೂರ್ತಿ ನೀಡುವ ಪದವಾಗಿದೆ ಎನ್ನುತ್ತಾರೆ ಹೋರಾಟಗಾರರು. ಇದು ಚಳವಳಿಗೆ ನೀಡುವ ಕರೆಯಾಗಿದೆ. ಈ ಕಾರಣಕ್ಕೆ ಶೋಷಿತ ಸಮುದಾಯವನ್ನು ರಾಜಕಾರಣಿಗಳು ಓಲೈಕೆ ಮಾಡಿಕೊಳ್ಳಲು ‘ಜೈ ಭೀಮ್’ ಘೋಷಣೆಯ ಮೊರೆ ಹೋಗುತ್ತಾರೆ. ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಒಪ್ಪದ, ಅವರು ಬೌದ್ಧಧಮ್ಮಕ್ಕೆ ಮರಳಿದ್ದನ್ನು ವಿರೋಧಿಸುವ ಮನಸ್ಥಿತಿಗಳೂ ‘ಜೈ ಭೀಮ್’ ಘೋಷಣೆ ಬಳಸುವ ಉದ್ದೇಶ ಏನೆಂಬುದು ಸ್ಪಷ್ಟವಾಗುತ್ತದೆ. ‘ಜೈ ಭೀಮ್’ ಪದದಲ್ಲಿ ಶೋಷಿತ ಸಮುದಾಯದ ಭಾವನೆಗಳಿವೆ.

ಆದರೆ ವಾಸ್ತವದಲ್ಲಿ ಜಾತಿವಾದಿ ಸಮಾಜವು ‘ಜೈ ಭೀಮ್’ ಎಂಬುದನ್ನು ಕೇಳಿದರೆ ಉರಿದು ಬಿದ್ದ ಪ್ರಸಂಗಳಿವೆ. ‘ಜೈ ಭೀಮ್’ ಘೋಷಣೆಯ ಕಾರಣಕ್ಕೆ ದಲಿತರ ಮೇಲೆ ಹಲ್ಲೆ ನಡೆಸಿರುವ ಉದಾಹರಣೆಗಳು ನಮ್ಮ ಮುಂದಿರುವುದು ದುರಂತವೇ ಸರಿ. ಬಿಹಾರದ ಗಯಾ ಜಿಲ್ಲೆಯ ಅಮಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಚಪರ್ದಾ ಗ್ರಾಮದ ರೋಷನ್ ಕುಮಾರ್ ಎಂಬಾತನ ಮೇಲೆ ನವೀನ್  ಮತ್ತು ಆತನ ಸಹಚರರು ಥಳಿಸಿದ್ದ ಸಂಬಂಧ ಪ್ರಕರಣ ದಾಖಲಾಗಿತ್ತು. ರೋಹನ್ ತನ್ನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ‘ಜೈ ಭೀಮ್’ ಎಂದು ಬಳಸಿದ್ದಕ್ಕೆ ಹಲ್ಲೆ ಆಗಿರುವುದಾಗಿ 2023ರ ಡಿಸೆಂಬರ್ 6ರಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿತ್ತು.

ಇದನ್ನೂ ಓದಿರಿ: ವಿಶೇಷ ಲೇಖನ | ದಲಿತರು ಹಿಂದೂ ದೇವಾಲಯಗಳನ್ನು ಬಹಿಷ್ಕರಿಸಬೇಕಿದೆ

ಉತ್ತರ ಪ್ರದೇಶದ ನರೌಲಿ ಪಟ್ಟಣದ ಶಾಲೆಯಲ್ಲಿ 2024ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮುಗಿಸಿದ ನಂತರ ‘ಜೈ ಭೀಮ್-ಜೈ ಭಾರತ್’ ಎಂದು ಘೋಷಣೆ ಕೂಗಿದ ದಲಿತ ವಿದ್ಯಾರ್ಥಿಯೊಬ್ಬನನ್ನು ಇಬ್ಬರು ವಿದ್ಯಾರ್ಥಿಗಳು ಹೊಡೆದಿದ್ದರು. ಇಲ್ಲಿನ ಸರ್ದಾರ್ ಸಿಂಗ್ ಇಂಟರ್ ಕಾಲೇಜಿನಲ್ಲಿ ಅಂಬೇಡ್ಕರ್ ಅವರ ಕುರಿತು ಭಾಷಣ ಮಾಡಿ ನಂತರ ‘ಜೈ ಭೀಮ್-ಜೈ ಭಾರತ್’ ಎಂದು ವಿದ್ಯಾರ್ಥಿ ಕೂಗಿದ್ದನು. ಇಷ್ಟಕ್ಕೆ ಇನ್ನಿಬ್ಬರು ಸಹಪಾಠಿಗಳು ಸಹನೆ ಕಳೆದುಕೊಂಡಿದ್ದರು.

‘ಜೈ ಭೀಮ್’ ಘೋಷಣೆ ಸಹಿಸದ ಜಾತಿವಾದಿ ಮನಸ್ಥಿತಿಗಳು ಬಹಳಷ್ಟಿವೆ ಎಂಬುದನ್ನು ಇಂತಹ ಹಲವು ಪ್ರಕರಣಗಳು
ಸ್ಪಷ್ಟಪಡಿಸುತ್ತವೆ. ಆದರೆ ‘ಜೈ ಭೀಮ್’ ಎಂಬುದು ಸ್ವಾಭಿಮಾನದ ಸಂಕೇತವಾಗಿದೆ. ‘ಜೈ ಭೀಮ್’ ಹೆಸರಿನ ಸಿನಿಮಾವನ್ನು
ತಮಿಳಿನ ಸೂರಿಯಾ ನಿರ್ಮಿಸಿದ್ದರು. ಅದು ಬಹಳಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಆದಿವಾಸಿಗಳ ಮೇಲಿನ ಅಟ್ರಾಸಿಟಿ ಕಥಾ ಹಂದರವನ್ನು ಹೊಂದಿದ್ದ ಈ ಸಿನಿಮಾ, ಶೋಷಿತ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿತ್ತು. ಸಮಸಮಾಜದ ನಿರ್ಮಾಣದ ಕನಸು ಹೊತ್ತವರಿಗೆ ‘ಜೈ ಭೀಮ್’ ಕೇವಲ ಘೋಷಣೆಯಲ್ಲ, ಅದೊಂದು ಸ್ಫೂರ್ತಿಯ ಚಿಲುಮೆ ಎಂಬುದು ನಿರ್ವಿವಾದ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...