ಆರ್ಎಸ್ಎಸ್ ಮತ್ತು ಅದರ ನಾಯಕರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದರೆಂಬ ‘ಕಥನ’ (ನೆರೇಟಿವ್) ಶುರುವಾಗಿದ್ದು ಯಾವಾಗ ಗೊತ್ತೆ? ದೇಶಕ್ಕೆ ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳ ನಂತರ! ಹೌದು, 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಹೊಸ ಕಥನ ಚಾಲ್ತಿಗೆ ಬಂದಿತು ಎನ್ನುತ್ತಾರೆ ಹಿರಿಯ ಇತಿಹಾಸ ಬರೆಹಗಾರ ಶಂಸುಲ್ ಇಸ್ಲಾಮ್.
“ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳಾದ ಕೆ.ಬಿ. ಹೆಡಗೇವಾರ್ ಮತ್ತು ಎಂ. ಎಸ್. ಗೋಲ್ವಾಲ್ಕರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾಗಿರುವ ‘ಭಾರತ ರತ್ನ’ವನ್ನು ಪ್ರದಾನ ಮಾಡಬೇಕು” ಎಂದು ಆರ್‌ಎಸ್‌ಎಸ್ ನಾಯಕರು ವಾಜಪೇಯಿ ಅಧಿಕಾರವಧಿಯಲ್ಲಿ ಒತ್ತಾಯಿಸುತ್ತಾರೆ. ಇದು ಮುಂದುವರಿದು 2003ರ ಮಾರ್ಚ್‌ನಲ್ಲಿ ಆದ ಬೆಳವಣಿಗೆಯನ್ನು ಗಮನಿಸಬೇಕು. ಆರ್‌ಎಸ್‌ಎಸ್‌ನ ವಿಚಾರವಾದಿಯಾದ ಡಿ.ಬಿ.ಥೇಂಗಡಿಯವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿರುತ್ತದೆ. “ಹೆಡಗೇವಾರ್ ಮತ್ತು ಗೋಲ್ವಾಲ್ಕರ್ ಹೆಸರುಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಸೇರಿಸದಿದ್ದರೆ ಭಾರತ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿಯನ್ನು ನಿರಾಕರಿಸುತ್ತೇನೆ” ಎನ್ನುತ್ತಾರೆ ಥೇಂಗಡಿ. ಈ ಕುರಿತು ರಾಷ್ಟ್ರಪತಿಯವರಿಗೆ ಪತ್ರವನ್ನೂ ಬರೆಯುತ್ತಾರೆ. “ಪೂಜ್ಯ ಡಾ. ಹೆಡಗೇವಾರ್ ಮತ್ತು ಪೂಜ್ಯ ಶ್ರೀ ಗುರೂಜಿ (ಗೋಲ್ವಾಲ್ಕರ್) ಅವರಿಗೆ ಭಾರತ ರತ್ನ ನೀಡುವವರೆಗೆ ನಾನು ಪ್ರಶಸ್ತಿ ಸ್ವೀಕರಿಸುವುದು ಸೂಕ್ತವಲ್ಲ” ಎಂದು ಪತ್ರದಲ್ಲಿ ಉಲ್ಲೇಖಿಸುತ್ತಾರೆ.
ಆರ್‌ಎಸ್‌ಎಸ್ ಸ್ವಯಂಸೇವಕರಾಗಿ ಬೆಳೆದಿದ್ದ ಚಾಣಾಕ್ಷ ರಾಜಕಾರಣಿ ವಾಜಪೇಯಿ ಈ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅದಕ್ಕೆ ನಿರ್ದಿಷ್ಟ ಕಾರಣಗಳೂ ಇದ್ದವು. ಸ್ವಾತಂತ್ರ್ಯ ಪೂರ್ವವಾಗಲೀ, ಸ್ವಾತಂತ್ರ್ಯ ನಂತರವಾಗಲೀ- ಬ್ರಿಟಿಷರ ವಿರುದ್ಧ ಆರ್‌ಎಸ್‌ಎಸ್ ಹೋರಾಡಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲದಿದ್ದರೂ, ಆರ್‌ಎಸ್‌ಎಸ್ ನಾಯಕರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಚಿತ್ರಿಸುವ ಕಸರತ್ತು ಶುರುವಾಗಿದ್ದು ಮಾತ್ರ ಸ್ಪಷ್ಟವಾಗಿ ಕಂಡುಬರುತ್ತದೆ.
ನರೇಂದ್ರ ಮೋದಿಯವರು 2014ರಲ್ಲಿ ಅಧಿಕಾರಕ್ಕೇರಿದ ಬಳಿಕ ‘ವೀರ್’ ಸಾವರ್ಕರ್ ಅವರಿಗೆ ‘ಭಾರತ ರತ್ನ’ ನೀಡಬೇಕೆಂಬ ಚರ್ಚೆ ಬಂದಾಗಲೂ ಭಾರೀ ಟೀಕಾಪ್ರಹಾರಗಳು ನಡೆದವು. ನಂತರ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಿತು. ಆದರೂ ಆಗಾಗ್ಗೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಈ ಆರ್‌ಎಸ್‌ಎಸ್ ಮತ್ತು ಹಿಂದುತ್ವ ನಾಯಕರ ಹೆಸರು ತೂರಿಸುವ ಷಡ್ಯಂತ್ರ್ಯ ನಡೆಯುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಇತಿಹಾಸವನ್ನು ತಿಳಿದಿರಬೇಕಾಗುತ್ತದೆ.

ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾಸಾಹೇಬರ ಒಳನೋಟ (ಭಾಗ-1)
2018ರಲ್ಲಿ ‘ನ್ಯೂಸ್‌ಕ್ಲಿಕ್’ನಲ್ಲಿ ಶಂಸುಲ್ ಅವರು ಬರೆದಿರುವ ‘Fact Check: The RSS Had No Role in India’s Freedom Struggle’ ಲೇಖನವು ಹಲವು ಐತಿಹಾಸಿಕ ಸತ್ಯಗಳನ್ನು ದಾಖಲಿಸಿದೆ. ಆಧಾರ ಸಹಿತವಾಗಿ ಲೇಖನದಲ್ಲಿ ಪ್ರಸ್ತಾಪಿಸಿರುವ ವಿಚಾರಗಳನ್ನು ಮತ್ತು ಈಗಾಗಲೇ ಬೇರೆಯ ಲೇಖಕರು ದಾಖಲಿಸಿರುವ ಸಂಗತಿಗಳನ್ನು ಇಲ್ಲಿ ಓದುಗರ ಮುಂದೆ ಇಡಲಾಗುತ್ತಿದೆ.
“ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರ್ ಕಟ್ಟರ್ ರಾಷ್ಟ್ರೀಯವಾದಿಯಾಗಿದ್ದರು, 1930ರ ಜನವರಿ 26ರಂದು ರಾಷ್ಟ್ರಧ್ವಜವನ್ನು ಹಾರಿಸಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಜೈಲು ಶಿಕ್ಷೆ ಅನುಭವಿಸಿದರು. 1929ರಲ್ಲಿ ರಾಷ್ಟ್ರಿಯ ಕಾಂಗ್ರೆಸ್ ‘ಸಂಪೂರ್ಣ ಸ್ವಾತಂತ್ರ್ಯ’ ನಿರ್ಣಯವನ್ನು ಕೈಗೊಂಡಾಗ ಅದನ್ನು ಆರ್‌ಎಸ್ಎಸ್ ಶಾಖೆಗಳಲ್ಲಿ ಅನುಸರಿಸಲು ನಿರ್ದೇಶನ ನೀಡಿದರು.”
ಮೇಲಿನ ಈ ಸುಳ್ಳುಗಳನ್ನು ಢಾಳಾಗಿ ಚಿತ್ರಿಸಲು ಯತ್ನಿಸಿದ್ದು ಆರ್‌ಎಸ್‌ಎಸ್‌ನ ಕಾರ್ಮಿಕ ಸಂಘದ ಮುಖಂಡರಾದ ‘ಸಿ.ಕೆ.ಸಾಜಿ ನಾರಾಯಣನ್’. ‘ರಾಷ್ಟ್ರೀಯತೆಗೆ ಭಯ ಹುಟ್ಟಿಸಬೇಡಿ’ (Don’t Foist Fear Onto Nationalism) ಎಂಬ ಬರೆಹದಲ್ಲಿ ಹಲವು ಸುಳ್ಳುಗಳನ್ನು ನಾರಾಯಣನ್ ತೇಲಿಬಿಟ್ಟರು.
“ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ, ವಿದರ್ಭದಲ್ಲಿ ನಡೆದ ಚಿಮೂರ್ ಆಂದೋಲನದಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸ್ವಾತಂತ್ರ್ಯ ಧ್ವಜವನ್ನು ಹಾರಿಸುವಾಗ, ಒಬ್ಬ ಆರ್‌ಎಸ್‌ಎಸ್ ಸ್ವಯಂಸೇವಕನಿಗೆ ಪೊಲೀಸರು ಗುಂಡು ಹಾರಿಸಿದರು… ನಾಲ್ಕನೇ ಸರಸಂಘಚಾಲಕ ಪ್ರೊ. ರಾಜೇಂದ್ರ ಸಿಂಗ್ ಕೂಡ ಕ್ವಿಟ್ ಇಂಡಿಯಾದಲ್ಲಿ ಭಾಗವಹಿಸಿದ್ದಕ್ಕೆ ಹೆಸರುವಾಸಿಯಾಗಿದ್ದರು. ಸ್ವಾತಂತ್ರ್ಯ ಬರುವವರೆಗೂ, ಪ್ರತಿಯೊಬ್ಬ ಸ್ವಯಂಸೇವಕ ‘ದೇಶ್ ಕೋ ಸ್ವತಂತ್ರ ಕರ್’ (ದೇಶವನ್ನು ಮುಕ್ತಗೊಳಿಸಿ) ಎಂಬ ಘೋಷಣೆಯೊಂದಿಗೆ ಪ್ರತಿಜ್ಞೆ ಮಾಡಬೇಕಾಗಿತ್ತು” ಎಂದಿದ್ದರು ಸಾಜಿ. ಇನ್ನು ಮುಂದುವರಿದು, “ಭೂಗತರಾದ ಅನೇಕ ಸಮಾಜವಾದಿ ಮತ್ತು ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ನಾಯಕರ ಮನೆಗಳಲ್ಲಿ ಆಶ್ರಯ ಪಡೆದರು” ಎನ್ನುತ್ತಾರೆ. “ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಅರುಣಾ ಅಸಫ್ ಅಲಿ, ಜಯಪ್ರಕಾಶ್ ನಾರಾಯಣ್, ಸಾನೆ ಗುರೂಜಿ, ಕ್ರಾಂತಿವೀರ್ ನಾನಾ ಪಾಟೀಲ್ ಅವರು ಆರ್‌ಎಸ್‌ಎಸ್ ನಾಯಕರ ಮನೆಗಳಲ್ಲಿ ಆಶ್ರಯ ಪಡೆದಿದ್ದರು. ಹಂಸರಾಜ್ ಗುಪ್ತಾ, ಭೌಸಾಹೇಬ್ ದೇಶಮುಖ್ ಮತ್ತು ಸತ್ವಲೇಕರ್‌ರಂತಹ ಆರ್‌ಎಸ್‌ಎಸ್ ನಾಯಕರು ಸ್ವಾತಂತ್ರ್ಯ ಹೋರಾಟಗಾರರಿಗೆ ರಕ್ಷಣೆ ನೀಡಿದರು” ಎಂದಿದ್ದರು ಸಾಜಿ. ಇಲ್ಲೊಂದು ಸರಳ ಪ್ರಶ್ನೆ ಉದ್ಭವಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರು ಭೂಗತರಾಗಿದ್ದಾಗ, ಆರ್‌ಎಸ್‌ಎಸ್ ನಾಯಕರೇಕೆ ಭೂಗತರಾಗಿ ಕಾರ್ಯ ನಿರ್ವಹಿಸಲಿಲ್ಲ? ಅವರ ಮನೆಗಳ ಮೇಲೆ ಬ್ರಿಟಿಷರ ಕಣ್ಗಾವಲೇಕೆ ಇರಲಿಲ್ಲ?
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-1)
ಬಹುಶಃ ಆರ್‌ಎಸ್ಎಸ್‌ನವರು ಹೋರಾಟದಲ್ಲಿ ಭಾಗಿಯಾಗದ ಕಾರಣ ಅವರ ಮನೆಗಳ ಮೇಲೆ ಬ್ರಿಟಿಷರು ಕಣ್ಣಿಟ್ಟಿರಲಿಲ್ಲ. ಹೀಗಾಗಿ ಅವರ ಮನೆಗಳಲ್ಲಿ ಹೋರಾಟಗಾರರು ಉಳಿಯುತ್ತಿದ್ದರು ಎಂದು ಸುಲಭವಾಗಿ ಭಾವಿಸಬಹುದಲ್ಲವೇ? – ಆದರೆ ಸಾಜಿ ಉಲ್ಲೇಖಿಸುವ ಆರ್‌ಎಸ್‌ಎಸ್ ನಾಯಕರೆಲ್ಲ ಸ್ವಾತಂತ್ರ್ಯ ಹೋರಾಟವನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು ಮತ್ತು ಬ್ರಿಟಿಷ್ ಸರ್ಕಾರದ ಆತ್ಮೀಯ ಸ್ನೇಹಿತರಾಗಿದ್ದರು!
ಹೆಡಗೇವಾರ್ ಬಾವುಟ ಹಾರಿಸಿದ್ದು ನಿಜ, ಆದರೆ ಅದು ರಾಷ್ಟ್ರಧ್ವಜವಲ್ಲ!
ಪ್ರತಿ ಜನವರಿ 26ರಂದು ತ್ರಿವರ್ಣ ಧ್ವಜವನ್ನು ಸಾರ್ವಜನಿಕವಾಗಿ ಹಾರಿಸಬೇಕೆಂದು 1929ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಕರೆ ನೀಡಿತು. ಆನಂತರ ಹೆಡಗೇವಾರ್ ಬಾವುಟ ಹಾರಿಸಿದ್ದೇನೋ ನಿಜ, ಆದರೆ ಅದು ಕೇಸರಿ ಬಾವುಟವೇ ಹೊರತು, ತ್ರಿವರ್ಣ ಧ್ವಜವಲ್ಲ! ಪೇಶ್ವೆಗಳ ಆಳ್ವಿಕೆಯಲ್ಲಿ ಬಳಸಲಾಗುತ್ತಿದ್ದ ಅರ್ಥಾತ್ ಬ್ರಾಹ್ಮಣರ ಮೇಲಧಿಕಾರವನ್ನು ಪ್ರತಿನಿಧಿಸುವ ಬಾವುಟವೇ ಈ ಕೇಸರಿ ಧ್ವಜ, ಆರ್‌ಎಸ್‌ಎಸ್‌ನ ಪ್ರಕಾರ ಅದು ಧರ್ಮಧ್ವಜ, ಭಗವಾಧ್ವಜ!

1930ರ ಜನವರಿ 21ರಂದು ಹೆಡಗೇವಾರ್, “ಭಗವಾ ಧ್ವಜ ಅರ್ಥಾತ್ ರಾಷ್ಟ್ರೀಯ ಧ್ವಜ ಅಂದರೆ ಕೇಸರಿ ಧ್ವಜವನ್ನು ಹಾರಿಸುವಂತೆ” ಎಲ್ಲ ಶಾಖೆಗಳಿಗೂ ಆದೇಶ ನೀಡಿದರು. 1981ರಲ್ಲಿ ‘ಹೆಡಗೇವಾರ್: ಪತ್ರರೂಪ ವ್ಯಕ್ತಿದರ್ಶನ’ ಎಂಬ ಶೀರ್ಷಿಕೆಯಲ್ಲಿ ಆರ್‌ಎಸ್‌ಎಸ್ ಪ್ರಕಟಿಸಿದ ಹೆಡಗೇವಾರ್ ಅವರ ಪತ್ರಗಳ ಸಂಗ್ರಹದಲ್ಲಿ ಈ ಸಂಗತಿ ದಾಖಲಾಗಿದೆ. ಭಾರತೀಯರೆಲ್ಲರೂ ಒಂದಾಗಿ ನಡೆಸಿದ ಏಕೀಕೃತ ಸ್ವಾತಂತ್ರ್ಯ ಹೋರಾಟದ ಸಂಕೇತವಾದ ತ್ರಿವರ್ಣ ಧ್ವಜದ ಬಗ್ಗೆ ಆರ್‌ಎಸ್‌ಎಸ್‌ನವರ ದ್ವೇಷ ನಿಸ್ಸಂದೇಹವಾಗಿತ್ತು. 2002ರವರೆಗೂ ಆರ್‌ಎಸ್‌ಎಸ್ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನೇ ಹಾರಿಸಿರಲಿಲ್ಲ.
ಜವಾಹರಲಾಲ್ ನೆಹರೂ ಅವರು ಕೆಂಪು ಕೋಟೆಯ ಲಾಲ್ ಕಿಲಾದ ಮೇಲೆ ಸ್ವಾತಂತ್ರ್ಯದ ಮುನ್ನಾದಿನ, ಇತಿಹಾಸದಲ್ಲಿಯೇ ಮೊದಲ ಬಾರಿಗೆ ಧ್ವಜಾರೋಹಣ ಮಾಡುವುದನ್ನು ವೀಕ್ಷಿಸಲು ದೇಶವು ಸಿದ್ಧವಾಗಿತ್ತು. ಆಗ ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯು 1947ರ ಆಗಸ್ಟ್ 14ರಂದು ರಾಷ್ಟ್ರೀಯ ಧ್ವಜವನ್ನು ಅವಹೇಳನ ಮಾಡಿ ಬರೆದಿತ್ತು. “…ಹಿಂದೂಗಳು ಎಂದಿಗೂ ಗೌರವಿಸಬಾರದು ಮತ್ತು ತಮ್ಮದೆನ್ನಬಾರದು. ಮೂರು ಎಂಬುದೇನೇ ತನ್ನಷ್ಟಕ್ಕೆ ತಾನು ದುಷ್ಟತನ ಹೊಂದಿದೆ ಮತ್ತು ಮೂರು ಬಣ್ಣಗಳನ್ನು ಹೊಂದಿರುವ ಧ್ವಜವು ಖಂಡಿತವಾಗಿಯೂ ಕೆಟ್ಟ ಮಾನಸಿಕ ಪರಿಣಾಮಗಳನ್ನು ಉಂಟುಮಾಡುತ್ತದೆ, ಅದು [ದೇಶಕ್ಕೆ] ಹಾನಿಕಾರಕವಾಗಿದೆ” ಎಂದಿತ್ತು ಆರ್‌ಎಸ್‌ಎಸ್.
ಹೆಡಗೇವಾರ್ ಜೈಲಿಗೆ ಹೋದದ್ದು ಏಕೆ?
ಆರ್‌ಎಸ್‌ಎಸ್ ನಾಯಕ ಹೆಡಗೇವಾರ್ 1921ರಲ್ಲಿ (ಆರ್‌ಎಸ್‌ಎಸ್ ಅನ್ನು 1925 ರಲ್ಲಿ ಸ್ಥಾಪಿಸಲಾಯಿತು) ಮತ್ತು 1931ರಲ್ಲಿ (ಕ್ರಮವಾಗಿ ಖಿಲಾಫತ್ ಚಳವಳಿ ಮತ್ತು ಗಾಂಧಿಯವರು ಪ್ರಾರಂಭಿಸಿದ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ) ಜೈಲು ಶಿಕ್ಷೆ ಅನುಭವಿಸಿದರೆಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಅವರು ಜೈಲು ಸೇರಿದ್ದು ಆರ್‌ಎಸ್‌ಎಸ್ ನಾಯಕರಾಗಿ ಅಲ್ಲ, ಹೊರತಾಗಿ ಕಾಂಗ್ರೆಸ್ಸಿಗರಾಗಿ ಎಂಬುದು ಗಮನಾರ್ಹ ಸತ್ಯ. 1981ರಲ್ಲಿ ಆರ್‌ಎಸ್‌ಎಸ್ ಪ್ರಕಟಿಸಿರುವ ಮತ್ತು ಎಚ್.ವಿ ಶೇಷಾದ್ರಿ ಬರೆದಿರುವ ‘ಹೆಡಗೇವಾರ್ ಅವರ ಜೀವನ ಚರಿತ್ರೆ’ಯ ಪ್ರಕಾರ, “ಖಿಲಾಫತ್ ಚಳವಳಿಯ ಪರವಾಗಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಅವರನ್ನು ಜೈಲಿಗೆ ಹಾಕಲಾಯಿತು. ನಂತರ ಅವರಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. ಈ ಜೈಲು ಶಿಕ್ಷೆಗೆ ಸಂಬಂಧಿಸಿದಂತೆ ಎರಡು ಮಹತ್ವದ ಘಟನೆಗಳು ನಡೆದವು. ಬಂಧನದ ವಿರುದ್ಧ ಡಿಫೆನ್ಸ್ (ಪ್ರತಿವಾದ) ಮಾಡಬಾರದು ಎಂಬ ಗಾಂಧೀಜಿ ಮತ್ತು ಕಾಂಗ್ರೆಸ್‌ನ ನಿಲುವನ್ನು ಬಹಿರಂಗವಾಗಿಯೇ ವಿರೋಧಿಸಿ, ದುಬಾರಿ ವಕೀಲರನ್ನು ಹೆಡಗೇವಾರ್ ನೇಮಿಸಿಕೊಂಡರು. ಒಂದು ವರ್ಷ ಕಠಿಣಶಿಕ್ಷೆ ಅನುಭವಿಸಿದರು” ಎಂದು ಹೇಳುವ ಜೀವನ ಚರಿತ್ರೆಯು ಇಷ್ಟೆಲ್ಲ ಕಷ್ಟದ ನಡುವೆಯೂ ಹೆಡಗೇವಾರ್ ತೂಕ ಹೆಚ್ಚಿಸಿಕೊಂಡಿರುವುದನ್ನು ಉಲ್ಲೇಖಿಸುತ್ತದೆ.
“ಅವರು ಜೈಲು ಸಮವಸ್ತ್ರವನ್ನು ತೆಗೆದು ತನ್ನ ಹಳೆಯ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿದಾಗ, ಅವರ ಹಳೆಯ ಶರ್ಟ್ ಮತ್ತು ಕೋಟ್ ತುಂಬಾ ಬಿಗಿಯಾಗಿತ್ತು! ಕಠಿಣ ಜೈಲು ಜೀವನದ ಹೊರತಾಗಿಯೂ ಅವರು 25 ಪೌಂಡ್ (11+ ಕೆ.ಜಿ.) ತೂಕವನ್ನು ಹೆಚ್ಚಿಸಿಕೊಂಡಿದ್ದರು” ಎನ್ನುತ್ತದೆ ಆ ಕೃತಿ. ಬ್ರಿಟಿಷರ ಕೈಗೆ ಸಿಲುಕಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗ ರಾಜಕೀಯ ಕೈದಿಯೊಬ್ಬ 11 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದು ಇದೇ ಮೊದಲು ಮತ್ತು ಕೊನೆಯ ಉದಾಹರಣೆ ಎನ್ನಬಹುದು. ಇದು ಹೇಗೆ ಸಾಧ್ಯವಾಯಿತು ಎಂಬುದಕ್ಕೆ ಈ ಜೀವನ ಚರಿತ್ರೆಯಲ್ಲಿಯೇ ಸಮರ್ಥನೀಯ ವಿವರಣೆಯನ್ನು ನೀಡಲಾಗಿದೆ. ಹೆಡಗೇವಾರ್ ಅವರು ಉಗ್ರ ಬ್ರಿಟಿಷ್ ಜೈಲರ್ ಸರ್ ಜಠರ್ ಅವರೊಂದಿಗೆ ಸ್ನೇಹಪರರಾಗಿದ್ದರು!
ಎರಡನೇ ಬಾರಿ ಹೆಡಗೇವಾರ್ ಜೈಲು ಶಿಕ್ಷೆ ಅನುಭವಿಸಿದರ ಬಗ್ಗೆ ಆಸಕ್ತಿಕರ ವಿಚಾರಗಳಿವೆ. ಸಿ ಪಿ ಭಿಷಿಕರ್ ಬರೆದು ಆರ್‌ಎಸ್‌ಎಸ್ ಪ್ರಕಟಿಸಿದ ಹಿಂದಿ ಜೀವನಚರಿತ್ರೆಯಲ್ಲಿ ಆ ವಿವರಗಳನ್ನು ಕಾಣಬಹುದು. ಆರ್‌ಎಸ್‌ಎಸ್ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿಕೊಂಡಿತ್ತು. ಆದರೂ ಅವರು ಸತ್ಯಾಗ್ರಹಕ್ಕೆ ಸೇರಿಕೊಂಡಿದ್ದರ ಹಿಂದೆ ಒಂದು ಗುಪ್ತ ಉದ್ದೇಶವಿತ್ತು. “ಸ್ವಾತಂತ್ರ್ಯ ಪ್ರೀತಿಯ, ಸ್ವಯಂ ತ್ಯಾಗದ ಮತ್ತು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿವವರನ್ನು ಸಂಘಕ್ಕೆ ಕರೆತರುವ ಉದ್ದೇಶವನ್ನು ಹೊತ್ತು ಹೆಡಗೇವಾರ್ ಜೈಲು ಸೇರುತ್ತಾರೆ. 1925ರಲ್ಲಿ ಆರ್‌ಎಸ್‌ಎಸ್ ಸ್ಥಾಪಿಸಿದ ಬಳಿಕ ಅವರು ಹಿಂದೂ ಸಂಘಟನೆಯ ಬಗ್ಗೆಯಷ್ಟೇ ಮಾತನಾಡುತ್ತಿದ್ದರು. ಬ್ರಿಟಿಷರ ವಿರುದ್ಧದ ಮಾತುಗಳು ಇರಲೇ ಇಲ್ಲ” ಎನ್ನುವ ಸತ್ಯವನ್ನು ಜೀವನಚರಿತ್ರೆಯು ಬಹಿರಂಗಪಡಿಸುತ್ತದೆ.
‘Hindu Nationalism: Origins, Ideologies and Modern Myths’ ಎಂಬ ಕೃತಿಯಲ್ಲಿ ಚೇತನ್ ಭಟ್ ದಾಖಲಿಸುವ ಪ್ರಕಾರ, ”ಆರ್‌ಎಸ್‌ಎಸ್‌ನವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದೋ ಪರೋಕ್ಷವಾಗಿ ಭಾಗವಹಿಸುತ್ತಿದ್ದರು. ಇಲ್ಲವೇ ಅದರಿಂದ ದೂರವೇ ಉಳಿಯುತ್ತಿದ್ದರು. ಆದರೆ ಮುಸ್ಲಿಮರ ವಿರುದ್ಧ ನಡೆಯುವ ಹಿಂಸಾತ್ಮಕ ಘಟನೆಗಳಲ್ಲಿ ಮಾತ್ರ ಅವರ ಪಾತ್ರ ಯಾವತ್ತೂ ಇರುತ್ತಿತ್ತು. ಗಾಂಧೀಜಿ 1930ರಲ್ಲಿ ಉಪ್ಪಿನ ಸತ್ಯಾಗ್ರಹ ಮತ್ತು ಕಾನೂನು ಭಂಗ ಚಳವಳಿಯನ್ನು ಹಮ್ಮಿಕೊಂಡಾಗ, ಆರ್‌ಎಸ್‌ಎಸ್ ತನ್ನ ತಳಮಳವನ್ನು ಎದುರಿಸಬೇಕಾಯಿತು. ಅನೇಕ ಮಂದಿ ಕಾರ್ಯಕರ್ತರಿಗೆ ಕಾನೂನು ಭಂಗ ಚಳವಳಿಯಲ್ಲಿ ಭಾಗವಹಿಸುವ ಇಚ್ಛೆ ಇತ್ತು. ಅತ್ತ ತಮ್ಮ ಕಾರ್ಯಕರ್ತರನ್ನೂ ತೃಪ್ತಿಪಡಿಸಬೇಕು ಮತ್ತು ಬ್ರಿಟಿಷ್ ಸರ್ಕಾರದ ಜತೆಯೂ ಕೈಜೋಡಿಸಬೇಕು ಎನ್ನುವ ಇರಾದೆ ಇದ್ದ ಆರ್‌ಎಸ್‌ಎಸ್ ಸರಕಾರದೊಂದಿಗೆ ತನಗಿದ್ದ ಸಂಬಂಧದ ವಿಚಾರವಾಗಿ ಕಾರ್ಯಕರ್ತರಿಗೆ ಏನೂ ಹೇಳದೆ, ‘ಆರ್‌ಎಸ್ಎಸ್ ಸಂಘಟನಾತ್ಮಕವಾಗಿ ಈ ಚಳವಳಿಯಲ್ಲಿ ಭಾಗವಹಿಸಲು ನಿರ್ಧರಿಸಿಲ್ಲ. ಆದರೆ ಕಾರ್ಯಕರ್ತರು ತಮ್ಮ ವೈಯಕ್ತಿಕ ನೆಲೆಯಲ್ಲಿ ಬೇಕಾದರೆ ಭಾಗವಹಿಸಬಹುದು’ ಎಂಬ ನಿಲುವಿಗೆ ಬರುತ್ತದೆ”.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-2)
ಕಾರ್ಯಕರ್ತರ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂದು ಹೆದರಿದ ಅಂದಿನ ಆರ್‌ಎಸ್‌ಎಸ್ ಮುಖ್ಯಸ್ಥ ಹೆಡಗೇವಾರ್, ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ಚಳವಳಿಗೆ ಬರುತ್ತಾರೆ. ಸಂಘಟನೆಯಲ್ಲಿದ್ದೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರೆ, ಸಂಘಟನೆಯ ವಿರುದ್ಧ ಬ್ರಿಟಿಷರು ಸಿಟ್ಟಾಗುತ್ತಾರೆಂಬುದು ಅವರ ದುಷ್ಟ ಆಲೋಚನೆಯಾಗಿರುತ್ತದೆ. ಹೆಡಗೇವಾರ್ ಅವರನ್ನು ಬಂಧಿಸಿದಾಗ, ಅದನ್ನೇ ಅವಕಾಶವನ್ನಾಗಿ ಬಳಸಿಕೊಂಡು ರಾಜಕೀಯ ಕೈದಿಗಳನ್ನು ಆರ್‌ಎಸ್‌ಎಸ್ ಕಾರ್ಯಕರ್ತರನ್ನಾಗಿ ಪರಿವರ್ತಿಸುವ ಕಾರ್ಯಾಚರಣೆ ನಡೆಸುತ್ತಾರೆ. ತನ್ನ ಸಂಘಟನೆಯನ್ನು ಬಲವರ್ಧನೆ ಮಾಡುವುದೇ ಹೆಡಗೇವಾರ್ ಗುರಿಯಾಗಿರುತ್ತದೆ ಹೊರತು, ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವ ಘನ ಉದ್ದೇಶವೇನೂ ಇರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಗೋಲ್ವಾಲ್ಕರ್ ನಿಜಬಣ್ಣ
ಭಾರತೀಯರನ್ನೆಲ್ಲ ಒಗ್ಗೂಡಿಸಿದ ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಬಗ್ಗೆ ಗೋಲ್ವಾಲ್ಕರ್ ನಿಲುವುಗಳನ್ನು ನೋಡಿದರೆ, ಅವರ ನಿಜಬಣ್ಣ ತಿಳಿಯುತ್ತದೆ. ಆರ್‌ಎಸ್‌ಎಸ್ ಪ್ರಕಟಿಸಿರುವ ‘ಶ್ರೀ ಗುರೂಜಿ ಸಮಗ್ರ ದರ್ಶನ, ಸಂಪುಟ 4’ರಲ್ಲಿ ಉಲ್ಲೇಖಗೊಂಡಿರುವ ಸಂಗತಿಗಳೇ ಎಲ್ಲವನ್ನೂ ಸ್ಪಷ್ಟಪಡಿಸುತ್ತವೆ.

“ಖಂಡಿತವಾಗಿಯೂ ಹೋರಾಟದ ಕೆಟ್ಟ ಫಲಿತಾಂಶಗಳು ಇರುತ್ತವೆ. 1920–21ರ ಚಳವಳಿಯ ನಂತರ ಹುಡುಗರು ಅಶಿಸ್ತಿನವರಾದರು… ಆದರೆ ಇವು ಹೋರಾಟದ ನಂತರದ ಅನಿವಾರ್ಯ ಉತ್ಪನ್ನಗಳು… 1942ರ ನಂತರ, ಕಾನೂನಿನ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಎಂದು ಜನರು ಹೆಚ್ಚಾಗಿ ಯೋಚಿಸಲು ಪ್ರಾರಂಭಿಸಿದರು” ಎನ್ನುತ್ತಾರೆ.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಆರ್‌ಎಸ್‌ಎಸ್ ಭಾಗವಹಿಸಲಿಲ್ಲ ಎಂದು ಒಪ್ಪಿಕೊಂಡ ಅವರು ಹೀಗೆ ಹೇಳಿದ್ದಾರೆ:
“ಆ ಸಮಯದಲ್ಲಿಯೂ, ಸಂಘದ ದಿನನಿತ್ಯದ ಕೆಲಸ ಮುಂದುವರೆಯಿತು. ಸಂಘವು ನೇರವಾಗಿ ಏನನ್ನೂ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿತು. ಆದಾಗ್ಯೂ, ಸಂಘದ ಸ್ವಯಂಸೇವಕರ ಮನಸ್ಸಿನಲ್ಲಿನ ದಂಗೆ ಮುಂದುವರೆಯಿತು. ‘ಸಂಘವು ನಿಷ್ಕ್ರಿಯ ವ್ಯಕ್ತಿಗಳ ಸಂಘಟನೆಯಾಗಿದೆ, ಅವರ ಮಾತುಕತೆಗಳು ನಿಷ್ಪ್ರಯೋಜಕ’- ಈ ರೀತಿಯಲ್ಲಿ ಹೊರಗಿನವರು ಮಾತ್ರವಲ್ಲದೆ ನಮ್ಮ ಅನೇಕ ಸ್ವಯಂಸೇವಕರು ಮಾತನಾಡಿದರು.”
ಇದನ್ನೂ ಓದಿರಿ: ‘ವೀಸಾಗಾಗಿ ಕಾಯುತ್ತಾ’: ಬಾಬಾಸಾಹೇಬರು ಬಿಚ್ಚಿಟ್ಟ ಭಾರತದ ಅಸಲಿ ಮುಖ (ಭಾಗ-2)
ಕ್ವಿಟ್ ಇಂಡಿಯಾ ಚಳವಳಿ ವೇಳೆ ಆರ್‌ಎಸ್‌ಎಸ್ ನೀಡಿದ ಯಾವುದೇ ಮಹತ್ವದ ಕೊಡುಗೆಯ ಬಗ್ಗೆ ಬೆಳಕು ಚೆಲ್ಲುವ ಒಂದೇ ಒಂದು ಪ್ರಕಟಣೆ ಅಥವಾ ದಾಖಲೆಯೂ ಸಂಘದ ಬಳಿ ಇಲ್ಲ ಎನ್ನುತ್ತಾರೆ ಶಂಸುಲ್ ಇಸ್ಲಾಮ್.
ಹುತಾತ್ಮರ ಬಗ್ಗೆ ಅವಹೇಳನ
ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಖದೇವ್, ರಾಜಗುರು, ಅಶ್ಫಾಕುಲ್ಲಾ ಖಾನ್ ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ನೂರಾರು ಇತರ ಕ್ರಾಂತಿಕಾರಿ ಹುತಾತ್ಮರ ಬಗ್ಗೆ ಸ್ವಾತಂತ್ರ್ಯ ಪೂರ್ವದ ಆರ್‌ಎಸ್‌ಎಸ್ ಯಾವುದೇ ಪ್ರಕಟಣೆಗಳನ್ನು ಹೊರಡಿಸಿಲ್ಲ. ಆದರೆ ಹುತಾತ್ಮರ ಪರಂಪರೆಯನ್ನು ಆರ್‌ಎಸ್‌ಎಸ್ ಹೇಗೆ ಅವಹೇಳನ ಮಾಡಿದೆ ಎಂಬುದು ಆರ್‌ಎಸ್‌ಎಸ್‌ನ ಎರಡನೇ ಸರಸಂಘಚಾಲಕ ಗೋಲ್ವಾಲ್ಕರ್ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ.
“ಹುತಾತ್ಮತೆಗೆ ಒಪ್ಪಿಸಿಕೊಂಡ ವ್ಯಕ್ತಿಗಳು ಮಹಾನ್ ವೀರರು ಮತ್ತು ಅವರ ವಿಚಾರಗಳು ಸಹ ಅತ್ಯಂತ ಪುರುಷತ್ವದಿಂದ ಕೂಡಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ವಿಧಿಗೆ ಸೌಮ್ಯವಾಗಿ ವಿಧೇಯರಾಗಿ ಭಯ ಮತ್ತು ನಿಷ್ಕ್ರಿಯತೆಯಲ್ಲಿ ಉಳಿಯುವ ಸರಾಸರಿ ಪುರುಷರಿಗಿಂತ ಅವರು ಬಹಳ ಮೇಲಿದ್ದಾರೆ. ಅದೇ ರೀತಿ, ನಮ್ಮ ಸಮಾಜದಲ್ಲಿ ಅಂತಹ ವ್ಯಕ್ತಿಗಳನ್ನು ಆದರ್ಶಗಳಾಗಿ ಪರಿಗಣಿಸಲಾಗುವುದಿಲ್ಲ. ಪುರುಷರು ಆಶಿಸುವ ಶ್ರೇಷ್ಠತೆಯ ಅತ್ಯುನ್ನತ ಬಿಂದುವಾಗಿ ನಾವು ಅವರ ಹುತಾತ್ಮತೆಯನ್ನು ನೋಡಿಲ್ಲ. ಏಕೆಂದರೆ, ಅವರು ತಮ್ಮ ಆದರ್ಶವನ್ನು ಸಾಧಿಸುವಲ್ಲಿ ವಿಫಲರಾದರು ಮತ್ತು ಈ ವೈಫಲ್ಯವು ಅವರಲ್ಲಿ ಕೆಲವು ಮಾರಕ ದೋಷಗಳನ್ನು ಸೂಚಿಸುತ್ತದೆ”- ಇವು ಗೋಲ್ವಾಲ್ಕರ್ ಮಾತುಗಳು.
ಸ್ವಾತಂತ್ರ್ಯ ಹೋರಾಟವನ್ನು ವಿರೋಧಿಸುವ ವಿಷಯದಲ್ಲಿ ಆರ್‌ಎಸ್‌ಎಸ್ ತನ್ನ ಪ್ರೀತಿಪಾತ್ರ ಹಿಂದುತ್ವ ಐಕಾನ್ ಸಾವರ್ಕರ್ ಅವರನ್ನು ಅನುಸರಿಸಿತು. ‘ಸಮಗ್ರ ಸಾವರ್ಕರ್ ವಾಗ್ಮಯ’ (1963) (Samagr Savarkar Wangmaya) ಕೃತಿಗಳು ಈ ಕುರಿತು ಬೆಳಕು ಚೆಲ್ಲುತ್ತವೆ. ಇವುಗಳನ್ನು ಹಿಂದೂ ಮಹಾಸಭಾ ಪ್ರಕಟಿಸಿದೆ.
ಹಿಂದುತ್ವ ನಾಯಕ ವಿ.ಡಿ. ಸಾವರ್ಕರ್ ಮುಂದಾಳ್ವದ ಹಿಂದೂ ಮಹಾಸಭಾವು ಆರ್‌ಎಸ್‌ಎಸ್‌ನ ಸಹೋದರ ಸಂಘಟನೆ ಎಂಬುದು ನಿರ್ವಿವಾದ. ಆದರೆ ಇದೇ ಹಿಂದೂ ಮಹಾಸಭಾ 1942ರಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಸೇರಿ ಬಂಗಾಳ, ಸಿಂಧ್, ವಾಯುವ್ಯ ಗಡಿನಾಡು ಪ್ರಾಂತ್ಯ (ಎನ್‌ಡಬ್ಲ್ಯುಎಫ್‌ಪಿ) ಭಾಗದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಹಂತಕ್ಕೆ ಹೋಯಿತು. ಇನ್ನೊಂದೆಡೆ ಆ ಸಂದರ್ಭದಲ್ಲಿ ಕಾಂಗ್ರೆಸ್ ನಿಷೇಧಕ್ಕೊಳಗಾಗಿತ್ತು ಮತ್ತು ದೇಶಪ್ರೇಮಿ ಭಾರತೀಯರು ತ್ರಿವರ್ಣಧ್ವಜವನ್ನು ಹಾರಿಸುತ್ತಾ ಗುಂಡಿನ ದಾಳಿಗಳನ್ನು ಎದುರಿಸುತ್ತಿದ್ದರು.
ಇದನ್ನೂ ಓದಿರಿ: ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)
ಬಂಗಾಳದಲ್ಲಿ ಮುಸ್ಲಿಂ ಲೀಗ್ ಸಚಿವಾಲಯದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಉಪಮುಖ್ಯಮಂತ್ರಿಯಾಗಿದ್ದರು. ಭಾರತದ ವಿಮೋಚನೆಗಾಗಿ ಸುಭಾಷ್ ಚಂದ್ರ ಬೋಸ್ ಅವರು ಐಎನ್‌ಎ ಕಟ್ಟುತ್ತಿರುವ ಹೊತ್ತಿನಲ್ಲಿ, ಹಿಂದೂ ಮಹಾಸಭಾವು ಬ್ರಿಟಿಷ್ ಆರ್ಮಿಗಾಗಿ ನೇಮಕಾತಿ ಶಿಬಿರಗಳನ್ನು ನಡೆಸುತ್ತಾ ಕೂತಿತ್ತು. ಮಹಾಸಭಾದ ಈ ರಾಷ್ಟ್ರವಿರೋಧಿ ಕೆಲಸಗಳನ್ನು ಎಂದಿಗೂ ಆರ್‌ಎಸ್ಎಸ್ ಖಂಡಿಸಲಿಲ್ಲ!
ಇದು ಆರ್‌ಎಸ್‌ಎಸ್ ಮತ್ತು ಅಂದಿನ ಹಿಂದುತ್ವವಾದಿಗಳ ನಿಜಮುಖ. ರಾಷ್ಟ್ರೀಯ ಕಾಂಗ್ರೆಸ್ ಇಡೀ ದೇಶವನ್ನು ಒಗ್ಗೂಡಿಸುತ್ತಿದ್ದರೆ, ಇತ್ತ ದೇಶವಿಭಜನೆಯನ್ನು ಬೆಂಬಲಿಸುತ್ತಾ, ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರಚಾರ ಮಾಡುತ್ತಾ ಕೂತಿದ್ದವರ ಬಣ್ಣ ಕಳಚಿ ತೋರಿಸದಿದ್ದರೆ, ಅವರು ಬರೆದದ್ದೇ ನಿಜವಾದ ಇತಿಹಾಸವೆಂದು ಜನರು ನಂಬಿಬಿಡುವ ಅಪಾಯವಿದೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿ, ನಿಜವೆಂದು ನಂಬಿಸುವ ಗೋಬೆಲ್ಸ್ ಥಿಯರಿಯಲ್ಲಿ ಆರ್‌ಎಸ್‌ಎಸ್‌ಗೆ ಬಹಳ ವಿಶ್ವಾಸವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಭಾಗವಹಿಸಿಲ್ಲ ಎಂಬ ಅಪವಾದವನ್ನು ಮುಚ್ಚಿಕೊಳ್ಳಲು ನಕಲಿ ಕಥನಗಳನ್ನು ಆರ್‌ಎಸ್‌ಎಸ್ ನಿರಂತರವಾಗಿ ಕಟ್ಟುತ್ತಿದೆ. ಈ ಕುರಿತು ನಾವು- ನೀವು ಎಚ್ಚರ ವಹಿಸಬೇಕಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




