‘ಕೆಪಿಎಸ್‌ಸಿ’ ಎಂದರೆ ಕರ್ನಾಟಕ ‘ಲೋಪ’ಸೇವಾ ಆಯೋಗವೇ?

Date:

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌ವೊಂದು ವೈರಲ್ ಆಗುತ್ತಿತ್ತು. ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾವೊಂದರ ದೃಶ್ಯವನ್ನು ಆ ಪೋಸ್ಟರ್‌ನಲ್ಲಿ ಬಳಸಿಕೊಳ್ಳಲಾಗಿತ್ತು. ವಿಷಯ ಇಷ್ಟೇ: ಬೆಂಗಳೂರಿನ ರಸ್ತೆಯೊಂದರಲ್ಲಿ ಹಾಕಲಾದ ಮಾರ್ಗಸೂಚಿ ಬೋರ್ಡ್‌ಗೆ ಸಂಬಂಧಿಸಿದ ಟ್ರೋಲ್‌ ಅದಾಗಿತ್ತು. ವಿಜಯನಗರ, ಕಾಮಾಕ್ಷಿಪಾಳ್ಯ, ಮಾಗಡಿ, ಕೆಂಗೇರಿಯ ಮಾರ್ಗಸೂಚಿಸುವ ಬೋರ್ಡ್‌ನಲ್ಲಿ, ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಬಳಸಲಾಗಿತ್ತು. ಕನ್ನಡದ ಅಕ್ಷರಗಳಿರುವಲ್ಲಿ ಎಡಕ್ಕೆ ಹೋಗುವಂತೆ ಬಾಣದ ಗುರುತನ್ನು, VIJAYANAGARA, KAMAKSHIPALYA, MAGADI, KENGERI ಎಂದು ಇಂಗ್ಲಿಷ್‌ನಲ್ಲಿ ಬರೆದಿರುವಲ್ಲಿ ಬಲಕ್ಕೆ ಹೋಗುವಂತೆಯೂ ಬಾಣದ ಗುರುತನ್ನು ತೋರಿಸಲಾಗಿತ್ತು. ಈ ಟ್ರೋಲ್ ಸಾಕಷ್ಟು ವೈರಲ್ ಆಗುತ್ತಿರುವುದಕ್ಕೆ ಕಾರಣವೂ ಇತ್ತು. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್- ಎ, ಗ್ರೂಪ್- ಬಿ ವೃಂದದ 384 ಹುದ್ದೆಗಾಗಿ ನಡೆದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪ್ರಿಲಿಮ್ಸ್ ಪ್ರಶ್ನೆಪತ್ರಿಕೆಯಲ್ಲಿ ಇದೇ ರೀತಿಯ ಅವಾಂತರಗಳಾಗಿದ್ದವು.

6116114304194429189
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಟ್ರೋಲ್

2024ರ ಆಗಸ್ಟ್ 27ರಂದು ನಡೆಸಿದಂತಹ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಸಾಲುಸಾಲು ತಪ್ಪು ಅನುವಾದಿತ ಪ್ರಶ್ನೆಗಳು ರಾರಾಜಿಸಿದ್ದವು. ಒಂದು ಲಕ್ಷಕ್ಕೂ ಹೆಚ್ಚಿನ ಕೆಎಎಸ್ ಆಕಾಂಕ್ಷಿಗಳ ಕನಸು ನುಚ್ಚು ನೂರಾಗಿತ್ತು. ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಾದ ತಪ್ಪುಗಳನ್ನು ಒಟ್ಟು ಸೇರಿಸಿದರೆ ಸುಮಾರು 58 ಪ್ರಶ್ನೆಗಳು ಅಸಂಬದ್ಧವಾಗಿದ್ದವು. ಹಗಲು ರಾತ್ರಿ ವರ್ಷಾನುಗಟ್ಟಲೆ ಓದಿದ ಆಕಾಂಕ್ಷಿಗಳು ಆಘಾತಗೊಂಡಿದ್ದರು.

ಕರ್ನಾಟಕ ಆಡಳಿತ ಸೇವೆಗಾಗಿ ತಪಸ್ಸಿನಂತೆ ಓದುತ್ತಾರೆ. ಮನೆ ಬಿಟ್ಟು ಎಲ್ಲೋ ಒಂದು ಕಡೆ ರೂಮ್ ಮಾಡಿಕೊಂಡು ಪರಿಪಾಟಲು ಬೀಳುವ ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ಸಹಸ್ರಾರು ಅಭ್ಯರ್ಥಿಗಳು ವಿವಿಧ ಜಿಲ್ಲೆಗಳಲ್ಲಿ ಸಿಗುತ್ತಾರೆ. ಆದರೆ ಕೆಪಿಎಸ್‌ಸಿ ಮಾಡಿದ ಅಸಂಬದ್ಧವಾದ ಅನುವಾದದಿಂದಾಗಿ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಹಿಂದೆ ಮುಂದೆ ಯೋಚಿಸುವಂತಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರತಿ ತಪ್ಪು ಉತ್ತರಕ್ಕೆ .25 ಅಂಕಗಳು ಕಡಿತವಾಗುತ್ತವೆ. ಹೀಗಾಗಿ ಉತ್ತರಿಸಬೇಕೇ ಬೇಡವೇ ಎಂಬ ಗೊಂದಲಕ್ಕೆ ಪರೀಕ್ಷಾರ್ಥಿಗಳು ಬಿದ್ದರು. ಕೆಪಿಎಸ್‌ಸಿ ಮಾಡಿದ ಅನುವಾದವು ಹೊಸ ಪದಕೋಶವನ್ನೇ ಸೃಷ್ಟಿಸಿಬಿಟ್ಟಿದೆ ಎಂಬ ಟೀಕೆ ವ್ಯಕ್ತವಾಯಿತು.

ಇದನ್ನೂ ಓದಿರಿ: ಜನರ ಜೀವ ಹಿಂಡುತ್ತಿರುವ ಮನೆಹಾಳ ಫೈನಾನ್ಸ್- ಮೈಕ್ರೋ ಫೈನಾನ್ಸ್‌ ಕಂಪನಿಗಳು

ಆಯಾ ಪ್ರಶ್ನೆಗಳಿಗೆ ಅನುಗುಣವಾಗಿ ಅನುವಾದ ಮಾಡಿರಲಿಲ್ಲ. ಪ್ರಶ್ನೆಯೊಂದರಲ್ಲಿ ‘Drainage System’ ಎಂಬುದನ್ನು ‘ನದಿ ವ್ಯವಸ್ಥೆ’ ಎಂದು ಅನುವಾದಿಸಬೇಕಿತ್ತು, ಕೆಪಿಎಸ್‌ಸಿ ಅದನ್ನು ‘ಚರಂಡಿ ವ್ಯವಸ್ಥೆ’ ಎಂದು ಭಾಷಾಂತರಿಸಿತ್ತು. ಮತ್ತೊಂದು ಪ್ರಶ್ನೆಯಲ್ಲಿ ‘State Assembly’ ಎಂಬುದಕ್ಕೆ ‘ರಾಜ್ಯ ವಿಧಾನಸಭೆ’ ಎಂದು ಅನುವಾದಿಸದೆ ‘ರಾಜ್ಯಸಭೆ’ ಎಂದು ಬರೆಯಲಾಗಿತ್ತು. ‘Union Territories’ ಎಂದರೆ ಕೇಂದ್ರಾಡಳಿತ ಪ್ರದೇಶ, ಕೆಪಿಎಸ್‌ಸಿ ಪ್ರಕಾರ ಅದು ‘ರಾಜ್ಯಕ್ಷೇತ್ರ’, ‘Shrine’ ಎಂಬುದು ‘ದೇಗುಲ’ ಅಂತಾಗಬೇಕಿತ್ತು, ಅದನ್ನು ‘ಸಮಾಧಿ’ ಎಂದು ಮಾಡಲಾಗಿತ್ತು. ‘Reality’ ಎಂದರೆ ‘ವಾಸ್ತವ’, ಕೆಪಿಎಸ್‌ಸಿ ಕಲ್ಪಿಸಿದ ಅರ್ಥ- ‘ರಿಯಾಯಿತಿ’, Fertility Rate- ಎಂದರೆ ‘ಫಲವತ್ತತೆಯ ದರ’, ಕೆಪಿಎಸ್‌ಸಿ ಅದನ್ನು ‘ಜನನ ಶಕ್ತಿಯ ದರ’ ಎಂದಿತ್ತು. ‘Incorrect option’ ಎಂದರೆ ‘ತಪ್ಪಾದ ಆಯ್ಕೆ’, ಕೆಪಿಎಸ್‌ಸಿ ಪ್ರಕಾರ, ‘ಸರಿಯಾದ ಆಯ್ಕೆ’. ‘Endemic’ ಅಂದರೆ ‘ಸ್ಥಳೀಯ’, ಕೆಪಿಎಸ್‌ಸಿ ಪ್ರಕಾರ, ‘ಅಳಿವಿನಂಚಿನಲ್ಲಿರುವ’, ‘Heaviest’ ಎಂದರೆ ‘ಭಾರವಾದ’, ಆದರೆ ಕೆಪಿಎಸ್‌ಸಿ ಪ್ರಕಾರ ‘ವೇಗವಾಗಿ’ ಎಂದರ್ಥ. ಹೀಗೆ ಸಾಲುಸಾಲು ತಪ್ಪುಗಳಿದ್ದವು. ಇಂಗ್ಲಿಷ್ ಪ್ರಶ್ನೆಯಲ್ಲಿ ಬಳಕೆಯಾದ ಪದಕ್ಕೂ, ಕನ್ನಡಕ್ಕೆ ಮಾಡಲಾದ ಅನುವಾದಕ್ಕೂ ಬೇರೆಯ ಅರ್ಥಗಳಿದ್ದವು.

kpsc1
ಕೆಪಿಎಸ್‌ಸಿ ಮಾಡಿದ ಯಡವಟ್ಟುಗಳು

ಈ ಪ್ರಮಾದಗಳನ್ನು ಖಂಡಿಸಿ, ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕೆಎಎಸ್‌ ಆಕಾಂಕ್ಷಿಗಳು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಕರ್ನಾಟಕ ದಲಿತ ಪದವೀಧರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದವು.

ಇದಾದ ನಂತರ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಕೆಪಿಎಸ್‌ಸಿಗೆ ಮುಖ್ಯಮಂತ್ರಿಗಳ ಆದೇಶದಂತೆ ಪತ್ರವನ್ನು ಬರೆದರು. “ಭಾಷಾಂತರದಲ್ಲಾದ ಲೋಪಕ್ಕೆ ಸಂಬಂಧಿಸಿದಂತೆ” ವರದಿಯನ್ನು ನೀಡಲು ಸೂಚಿಸಿದ್ದರು. ಅಷ್ಟೇ ಅಲ್ಲದೆ ಮುಂದಿನ ಎರಡು ತಿಂಗಳಲ್ಲಿ ಭಾನುವಾರದಂದೇ ಕೆಪಿಎಸ್‌ಸಿ ಮರುಪರೀಕ್ಷೆಯನ್ನು ನಡೆಸಬೇಕು ಎಂಬ ಸೂಚನೆಯನ್ನು ಕೊಡಲಾಯಿತು. 

ಆದೇಶ ಪತ್ರದಲ್ಲೇನಿತ್ತು?

“ಕರ್ನಾಟಕ ಲೋಕಸಭಾ ಆಯೋಗದಿಂದ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 27:08:2024ರಂದು ನಡೆಸಲಾದ ಪೂರ್ವಭಾವಿ ಪರೀಕ್ಷೆಯಲ್ಲಿ ಸುಮಾರು 1,31,885 ಅಭ್ಯರ್ಥಿಗಳು ಹಾಜರಾಗಿರುತ್ತಾರೆ. ಅವರ ಪೈಕಿ ಶೇ. 50ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಸುಮಾರು 50 ಪ್ರಶ್ನೆಗಳು ತಪ್ಪಾಗಿ ಕನ್ನಡಕ್ಕೆ ಭಾಷಾಂತರವಾಗಿದೆ ಎಂದು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರುತ್ತದೆ. ಇದರ ಬಗ್ಗೆ ಬಾಧಿತ ಅಭ್ಯರ್ಥಿಗಳು ಪ್ರೀಡಂ ಪಾರ್ಕ್‌ನಲ್ಲಿ ತೀವ್ರವಾಗಿ ಪ್ರತಿಭಟನೆಯನ್ನು ಮಾಡಿರುತ್ತಾರೆ. ಕೆಪಿಎಸ್‌ಸಿ ನಡೆಸಿರುವ ಪರೀಕ್ಷೆಯಲ್ಲಿ ಕನ್ನಡ ಭಾಷಾಂತರ ಸರಿಯಾಗಿ ಆಗದಿರುವುದು ಅತ್ಯಂತ ವಿಷಾದನೀಯ ಸಂಗತಿ. ಈ ಬಗ್ಗೆ ಆಯೋಗದ ಕಾರ್ಯದರ್ಶಿಯವರನ್ನು ವಿಚಾರಿಸಿದಾಗ ಭಾಷಾಂತರ ಇಲಾಖೆಯಿಂದ ಕೆಲವು ಭಾಷಾಂತರಕಾರರ ಸೇವೆಯನ್ನು ಪಡೆಯಲಾಗುತ್ತಿದ್ದು, ಜೊತೆಗೆ ಕೆಲವು ಕನ್ನಡ ಪರಿಣಿತರಿಗೆ ಸದರಿ ಭಾಷಾಂತರ ಕೆಲಸವನ್ನು ವಹಿಸಲಾಗುತ್ತಿದೆ ಎಂದು ತಿಳಿಸಿರುತ್ತಾರೆ. ಆದರೆ ಈಗಾಗಲೇ ಮಾಡಿರುವ ಭಾಷಾಂತರ ಪ್ರಶ್ನೆಪತ್ರಿಕೆಯನ್ನು ಸಂಬಂಧಪಟ್ಟ ಆಂಗ್ಲ ಪ್ರಶ್ನೆಪತ್ರಿಕೆ ತಯಾರಿಸಿದವರು ನೋಡದೆ ಇರುವುದರಿಂದ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಆಗುವ ಭಯದಿಂದ ಯಾವುದೇ ಅಧಿಕಾರಿಯನ್ನು ಉಸ್ತುವಾರಿಗಾಗಿ ನೇಮಿಸದಿರುವುದರಿಂದ ನೇರವಾಗಿ ಈ ಜವಾಬ್ದಾರಿಗೆ ಕಂಟ್ರೋಲರ್ ಆಫ್ ಎಕ್ಸಾಮಿನೇಷನ್ಸ್‌ ಅವರು ಬಾಧ್ಯಸ್ಥರಾಗಿರುತ್ತಾರೆ.

ಇದನ್ನೂ ಓದಿರಿ: ಸಾಲ ಯೋಜನೆಗಳಿಂದ ರೈತರನ್ನು ಶೂಲಕ್ಕೇರಿಸಿದ್ದು ಸರ್ಕಾರಗಳಲ್ಲವೇ?

ಆದುದರಿಂದ ಮಾನ್ಯ ಮುಖ್ಯಮಂತ್ರಿಗಳ ಆದೇಶದಂತೆ ತಪ್ಪಿತಸ್ಥರ ಬಗ್ಗೆ ಒಂದು ವರದಿಯನ್ನು ನೀಡಲು ಸೂಚಿಸಿದೆ. ಅಲ್ಲದೆ ಮುಂದಿನ ಎರಡು ತಿಂಗಳಲ್ಲಿ ಭಾನುವಾರದಂದು ಕರ್ನಾಟಕ ಲೋಕಸೇವಾ ಆಯೋಗದಿಂದ ಮರುಪರೀಕ್ಷೆಯನ್ನು ನಡೆಸಲು ಮಾನ್ಯ ಮುಖ್ಯಮಂತ್ರಿಗಳು ಆದೇಶಿಸಿರುತ್ತಾರೆ. ಈ ಬಗ್ಗೆ ತಮ್ಮ ಅನುಪಾಲನಾ ವರದಿಯನ್ನು ಕಳುಹಿಸಲು ಕೋರಿದೆ.

-ಇದಿಷ್ಟು ಕೆಪಿಎಸ್‌ಸಿಗೆ ಸರ್ಕಾರದ ಮುಖ್ಯಕಾರ್ಯದರ್ಶಿಯವರು ಬರೆದ ಪತ್ರದಲ್ಲಿನ ಅಂಶ.

6116114304194429205
ಮರು ಪರೀಕ್ಷೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕ್ರಿಯೆ

ಭಾನುವಾರದಂದೇ ಪರೀಕ್ಷೆ

ಮರುಪರೀಕ್ಷೆಗೆ ದಿನವನ್ನು ಸೂಚಿಸುವಾಗ ‘ಭಾನುವಾರ’ದಂದೇ ನಡೆಸಬೇಕೆಂದು ಸರ್ಕಾರ ಉಲ್ಲೇಖಿಸಿರುವುದನ್ನು ಗಮನಿಸಬೇಕು. ಸಾಮಾನ್ಯವಾಗಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಭಾನುವಾರದಂದೇ ನಿಗದಿಯಾಗುತ್ತವೆ. ಆದರೆ ಕೆಪಿಎಸ್‌ಸಿ ಈ ಬಾರಿ ನಡೆಸಿದ ಪರೀಕ್ಷೆಯು ಮಂಗಳವಾರ ನಿಗದಿಯಾಗಿತ್ತು. 2,10,000 ಉದ್ಯೋಗಾಕಾಂಕ್ಷಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು, ಆದರೆ ಬರೆದವರ ಸಂಖ್ಯೆ 1,31,000 ಮಾತ್ರ. ಸರ್ಕಾರಿ ಅಥವಾ ಇನ್ಯಾವುದೋ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ರಜೆ ಸಿಗದೆ ಇರುವುದು ಇದಕ್ಕೆ ಕಾರಣ ಎಂದು ಊಹಿಸಲಾಗಿದೆ. ಬೇರೊಂದು ಕೆಲಸ ಮಾಡುತ್ತಾ, ಉನ್ನತ ಹುದ್ದೆಯ ಆಕಾಂಕ್ಷೆಯಲ್ಲಿ ಪರೀಕ್ಷೆ ಬರೆಯುವವರಿಗೆ ಮಂಗಳವಾರ ಹಾಜರಾಗುವುದು ತೊಡಕಾಗಿತ್ತು. ಆಕಾಂಕ್ಷಿಗಳು ತಕ್ಷಣವೇ ಪ್ರತಿಕ್ರಿಯಿಸಿ, ದಿನಾಂಕವನ್ನು ಬದಲಿಸುವಂತೆ ಕೋರಿದ್ದರು. ಆದರೆ ಕೆಪಿಎಸ್‌ಸಿ ಒಂದಿಂಚೂ ಬದಲಾವಣೆ ಮಾಡಿಕೊಳ್ಳಲಿಲ್ಲ. ತಾನು ಸಿದ್ಧಪಡಿಸಿಕೊಂಡಂತೆಯೇ ಪರೀಕ್ಷೆ ನಡೆಸಿತ್ತು!

“ಕೆಪಿಎಸ್‌ಸಿ ಭಾಷಾಂತರ ಶಾಖೆಯನ್ನು ರಚಿಸಿಕೊಳ್ಳಬೇಕು, ಅನುವಾದದಲ್ಲಿ ತಪ್ಪಾಗದಂತೆ ಎಚ್ಚರಿಕೆ ವಹಿಸಬೇಕು. ಕನ್ನಡದಲ್ಲಿ ಕನ್ನಡವೇ ಆಡಳಿತ ಭಾಷೆ. ಎಲ್ಲ ಕಾಯ್ದೆಗಳು, ಕಾನೂನುಗಳು, ಆದೇಶಗಳು ಕನ್ನಡಕ್ಕೆ ತುರ್ಜುಮೆ ಆಗಬೇಕಿರುವುದು ಅಗತ್ಯ. ಮೊದಲು ಕನ್ನಡದಲ್ಲಿ ಪ್ರಶ್ನೆಪತ್ರಿಕೆ ರಚನೆಯಾಗಿ, ನಂತರ ಇಂಗ್ಲಿಷ್‌ಗೆ ಅನುವಾದಗೊಳ್ಳಬೇಕು” ಎನ್ನುವ ಕನ್ನಡಪರ ಹೋರಾಟಗಾರರ ಮಾತನ್ನು ಕೆಪಿಎಸ್‌ಸಿಯಲ್ಲಿ ಕೂತಿರುವವರು ಕೇಳಿಸಿಕೊಳ್ಳಲಾರದಷ್ಟು ಅಸೂಕ್ಷ್ಮವಾಗಿದ್ದಾರೆ ಅನಿಸಿಬಿಡುತ್ತದೆ.

ಇಷ್ಟೆಲ್ಲ ಆದ ಮೇಲೆ ಮರು ಪರೀಕ್ಷೆ ನಡೆಸುವುದು ತಡವಾಯಿತು. ಟೀಕೆಗಳು ಬಂದ ಬಳಿಕ 2024ರ ಡಿಸೆಂಬರ್ 29ರಂದು ಮರುಪರೀಕ್ಷೆಯು ನಿಗದಿಯಾಯಿತು. ಆದರೆ ಇದನ್ನಾದರೂ ಸರಿಯಾಗಿ ನಡೆಸಲಿಲ್ಲ. ಮತ್ತದೇ ಯಡವಟ್ಟು!

ಮನುಷ್ಯ ಸಹಜವಾಗಿ ತಪ್ಪುಗಳಾಗುತ್ತವೆ. ಆದರೆ ಹಳೆಯ ತಪ್ಪುಗಳನ್ನೇ ಮರುಕಳಿಸಿದರೆ ಅನುಮಾನಗಳು ಮೂಡುತ್ತವೆ. ಉದ್ದೇಶಪೂರ್ವಕವಾಗಿಯೇ ಎಡವಟ್ಟು ಮಾಡುತ್ತಿದ್ದಾರೆಂಬ ಗುಮಾನಿ ಹುಟ್ಟುತ್ತದೆ. ಕೆಪಿಎಸ್‌ಸಿ ಹೊಸ ತಪ್ಪನ್ನು ಮಾಡಲಿಲ್ಲ, ಹಳೆಯ ತಪ್ಪನ್ನೇ ಮರುಕಳಿಸಿತು. ಮೊದಲು 58 ತಪ್ಪುಗಳನ್ನು ಎಸಗಿದ್ದ ಕೆಪಿಎಸ್‌ಸಿ, ಮರುಪರೀಕ್ಷೆಯಲ್ಲಿ 59 ತಪ್ಪುಗಳನ್ನು ಮಾಡಿತ್ತು. ತನ್ನ ದಾಖಲೆಯನ್ನು ತಾನೇ ಮುರಿದು ಹಾಕಿತ್ತು. ಜೊತೆಗೆ ಕನ್ನಡ ವಿರೋಧಿತನವನ್ನು ಪ್ರದರ್ಶಿಸಿ ದಾರ್ಷ್ಟ್ಯ   ಮೆರೆದಿತ್ತು.

“ಕನ್ನಡ ಪ್ರಶ್ನೆಗಳಲ್ಲಿ ಗೊಂದಲವಾದರೆ, ಇಂಗ್ಲಿಷ್‌ನಲ್ಲಿರುವ ಪ್ರಶ್ನೆಗಳನ್ನು ಓದಿಕೊಂಡು ಅದನ್ನು ಅರ್ಥೈಸಿಕೊಂಡು ಉತ್ತರಿಸಬೇಕು” ಎಂಬ ಸೂಚನೆಯನ್ನು ನೀಡಿತ್ತು ಕೆಪಿಎಸ್‌ಸಿ!

ಈ ಹಿಂದೆ ನಡೆದ ಹೋರಾಟದ ಉದ್ದೇಶವೇ  ‘ಕನ್ನಡ ಭಾಷೆಯ ಅನುವಾದ ತಪ್ಪಾಗಬಾರದು’ ಎಂಬುದಾಗಿತ್ತು. ಅದನ್ನು ಸರಿಪಡಿಸಿ ಎಂಬುದು ಅಭ್ಯರ್ಥಿಗಳ ಹೋರಾಟವಾಗಿತ್ತು. ಆದರೆ ಕೆಪಿಎಸ್‌ಸಿ ಮತ್ತದೇ ‘ದುರಹಂಕಾರ’ ಪ್ರದರ್ಶಿಸಿತ್ತು ಎಂದಿದ್ದರು ಅಭ್ಯರ್ಥಿಗಳು.

ಕೆಲವು ಕಡೆ ಪ್ರಶ್ನೆ ಪತ್ರಿಕೆಯನ್ನು ನೀಡುವುದು ಒಂದು ತಾಸಿನಷ್ಟು ವಿಳಂಬವಾಗಿತ್ತು. ಒಎಂಆರ್‌ ಶೀಟ್‌ನಲ್ಲಿರುವ ನೋಂದಣಿ ಸಂಖ್ಯೆ, ಪ್ರಶ್ನೆ ಪತ್ರಿಕೆಯಲ್ಲಿರುವ ನೋಂದಣಿ ಸಂಖ್ಯೆ ಮ್ಯಾಚ್ ಆಗದೆ, ಪ್ರಶ್ನೆಪತ್ರಿಕೆ ಎಲ್ಲೋ ಸೋರಿಕೆಯಾಗಿದೆ ಎಂಬ ಆತಂಕ ಮೂಡಿಬಿಟ್ಟಿತ್ತು.

ಮೊದಲ ಸಲ ಕೆಪಿಎಸ್‌ಸಿ ತನ್ನ ಪೂರ್ವಭಾವಿ ಪರೀಕ್ಷೆಯನ್ನು ಆಯೋಜಿಸಿದಾಗ 13.40 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ಮರುಪರೀಕ್ಷೆ ನಡೆಸಿದಾಗಲೂ ಇಷ್ಟೇ ದೊಡ್ಡದ ಮೊತ್ತವನ್ನು ಖರ್ಚು ಮಾಡಿದೆ. ಆದರೂ ಪರೀಕ್ಷೆಯಲ್ಲಿ ಎಡವಟ್ಟು ಮರುಕಳಿಸಿದೆ. ನಮ್ಮ ತೆರಿಗೆ ಹಣ ಹೊಳೆಯಲ್ಲಿ ಹುಣಸೇ ಹಿಂಡಿದಂತಾಗುತ್ತಿದೆ.

ಮರುಪರೀಕ್ಷೆಗೆ ಹಾಜರಾದವರ ಸಂಖ್ಯೆ 47.5% ಎಂದು ವರದಿಯಾಗಿದೆ. ಈ ಮೊದಲು ಹಾಜರಾಗಿದ್ದವರ ಸಂಖ್ಯೆ 62.52%. ಮೊದಲ ಸಲ ಪರೀಕ್ಷೆ ಮಾಡಿದ್ದಾಗಲೇ ಕಡಿಮೆಯಾಗಿತ್ತು. ಎರಡನೇ ಸಲ ಅರ್ಧ ಭಾಗದಷ್ಟು ಕುಸಿತ ಕಂಡಿತು. ಸಾರ್ವಜನಿಕ ಸೇವೆಗೆ ತನ್ನನ್ನು ಅರ್ಪಿಸಿಕೊಳ್ಳಲು ಬಯಸುವವನ ಕನಸನ್ನು ನುಚ್ಚು ಮಾಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಹೀಗಾಗಿ ಇದು ‘ಕರ್ನಾಟಕ ಲೋಕಸೇವಾ ಆಯೋಗ’ವಲ್ಲ, ಇದು ‘ಕರ್ನಾಟಕ ಲೋಪಸೇವಾ ಆಯೋಗ’ ಎಂಬ ಟೀಕೆಗಳನ್ನು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಸಾಂವಿಧಾನದ 14ನೇ ಭಾಗದಲ್ಲಿನ 315ರಿಂದ 323ರವರೆಗಿನ ವಿಧಿಗಳು ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳ ರಚನೆ ಹಾಗೂ ಕಾರ್ಯಗಳ ಬಗ್ಗೆ ವಿವರವಾಗಿ ಹೇಳಿವೆ. ಲೋಕಸೇವಾ ಆಯೋಗಗಳನ್ನು ‘ವಾಚ್‌ ಡಾಗ್ ಆಫ್ ಮೆರಿಟ್’ ಎಂದೂ ಕರೆಯಲಾಗುತ್ತದೆ. ಅಂತಹ ಜವಾಬ್ದಾರಿ ಈ ಸಂಸ್ಥೆಗಳಿಗಿದೆ. ಸಾರ್ವಜನಿಕ ಸೇವೆಗೆ ಆಯ್ಕೆ ಮಾಡುವಾಗ ಪ್ರತಿಭಾವಂತರನ್ನು, ದಕ್ಷರನ್ನು ಆಯ್ಕೆ ಮಾಡುವ ಜವಾಬ್ದಾರಿ ಇವುಗಳಿಗಿದೆ. ಇಡೀ ಆಡಳಿತ ಗುಣಮಟ್ಟ ಸುಧಾರಿಸುವ ಜವಾಬ್ದಾರಿ ಇವುಗಳ ಮೇಲಿದೆ. ಆದರೆ ಲೋಕಸೇವಾ ಆಯೋಗ ಮಾಡುತ್ತಿರುವುದೇನು?

ಇದನ್ನೂ ಓದಿರಿ: ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ

ಕನ್ನಡ ಮಾಧ್ಯಮದಲ್ಲಿ ಓದಿ, ಪರೀಕ್ಷೆಗಳನ್ನು ಎದುರಿಸುತ್ತಿರುವುದೇ ಕನ್ನಡಿಗರ ಬಹಳ ದೊಡ್ಡ ತಪ್ಪೇ? ಎಂಬ ಪ್ರಶ್ನೆಯನ್ನು ಕೆಪಿಎಸ್‌ಸಿ ಹುಟ್ಟಿಹಾಕಿದೆ. ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾಗಿ, ದಶಕಗಳಿಂದೀಚೆಗೆ ಅಕ್ಷರ ಲೋಕಕ್ಕೆ ಕಾಲಿಡುತ್ತಿರುವ ಶೋಷಿತ ಸಮುದಾಯಗಳು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಮಧ್ಯಮ ವರ್ಗದವರು, ಗ್ರಾಮೀಣ ಪ್ರದೇಶದವರು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ. ಆದರೆ ಇಂತಹ ಜನಸಮೂಹವನ್ನು ಕೆಪಿಎಸ್‌ಸಿ ಮತ್ತಷ್ಟು ಆತಂಕಕ್ಕೆ ಅಭದ್ರ ಭಾವಕ್ಕೆ ತಳ್ಳುತ್ತಿದೆ.

ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳಲ್ಲಿ ಆಯ್ಕೆಯಾದವರ ಪಟ್ಟಿ ನೋಡಿದರೆ ಮತ್ತೊಂದು ಭಿನ್ನತೆ ಎದ್ದು ಕಾಣುತ್ತದೆ. ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತರಿಸಿದವರೇ ಹೆಚ್ಚು ಮಂದಿ ಆಯ್ಕೆಯಾಗಿರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತದೆ.  

ಇಲ್ಲಿಯವರೆಗೆ ಕೆಪಿಎಸ್‌ಸಿ ನಡೆಸಿದ ಕೆಎಎಸ್‌ ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಯಾದವರಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಬರೆದವರು ಹೆಚ್ಚು ಆಯ್ಕೆಯಾಗಿದ್ದಾರೋ, ಕನ್ನಡ ಭಾಷೆಯಲ್ಲಿ ಬರೆದವರು ಹೆಚ್ಚು ಆಯ್ಕೆಯಾಗಿದ್ದಾರೋ ಎಂಬ ಮಾಹಿತಿಯನ್ನು ಆರ್‌ಟಿಐ ಅರ್ಜಿ ಮೂಲಕ ಹೊರಗೆಡವಲಾಗಿದೆ.

6116114304194429238
ಕನ್ನಡದಲ್ಲಿ ಕೆಎಎಸ್ ಮುಖ್ಯಪರೀಕ್ಷೆ ಬರೆದವರಿಗಿಂತ, ಇಂಗ್ಲಿಷ್‌ನಲ್ಲಿ ಬರೆದವರೇ ಹೆಚ್ಚು ಆಯ್ಕೆಯಾಗಿದ್ದಾರೆ ಎನ್ನುತ್ತಿದೆ ಆರ್‌ಟಿಐ ಮಾಹಿತಿ

ಕನ್ನಡದಲ್ಲಿ ಮುಖ್ಯ ಪರೀಕ್ಷೆ ಬರೆದು ಯಶಸ್ವಿಯಾದವರ ಪ್ರಮಾಣಕ್ಕೂ ಇಂಗ್ಲಿಷ್‌ನಲ್ಲಿ ಬರೆದು ಯಶಸ್ವಿಯಾದವರ ಪ್ರಮಾಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಉದಾಹರಣೆಗೆ-  2010-2018ರವೆಗೆ ನಡೆದಿರುವ ಕೆಎಎಸ್‌ ಮುಖ್ಯಪರೀಕ್ಷೆಯಲ್ಲಿ ತೇರ್ಗಡೆಯಾದವರ ಪೈಕಿ ಕನ್ನಡ ಮಾಧ್ಯಮದವರೆಷ್ಟು? ಇಂಗ್ಲಿಷ್‌ ಮಾಧ್ಯಮದವರೆಷ್ಟು ಎಂಬುದನ್ನು ಗಮನಿಸಿ.

2010ರಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರ ಸಂಖ್ಯೆ 3924, ಆಯ್ಕೆಯಾದವರು 134, ಅದೇ ವರ್ಷ ಇಂಗ್ಲಿಷ್‌ನಲ್ಲಿ ಮುಖ್ಯಪರೀಕ್ಷೆ ಬರೆದವರು 994, ಆಯ್ಕೆಯಾದವರು 134. 

2011ರ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆದವರು 4185, ಆಯ್ಕೆಯಾದವರು 137, ಇಂಗ್ಲಿಷ್‌ನಲ್ಲಿ ಬರೆದವರು 2695, ಆಯ್ಕೆಯಾದವರು 225. 

2014ರ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆದವರು 4678, ಆಯ್ಕೆಯಾದವರು 198, ಇಂಗ್ಲಿಷ್‌ನಲ್ಲಿ ಬರೆದವರು 3690, ಆಯ್ಕೆಯಾದವರು 266. 

2015ರ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಬರೆದವರು 4600, ಆಯ್ಕೆಯಾದವರು 115, ಇಂಗ್ಲಿಷ್‌ನಲ್ಲಿ ಬರೆದವರು 3441, ಆಯ್ಕೆಯಾದವರು 313. 

2017ರಲ್ಲಿ ಕನ್ನಡದಲ್ಲಿ ಬರೆದವರು 530, ಆಯ್ಕೆಯಾದವರು 10, ಇಂಗ್ಲಿಷ್‌ನಲ್ಲಿ ಬರೆದವರು 1168, ಆಯ್ಕೆಯಾದವರು 96.  ಇಲ್ಲಿ ಮತ್ತೊಂದು ಸಂಗತಿ ಸ್ಪಷ್ಟವಾಗುವುದೇನೆಂದರೆ ಕನ್ನಡದಲ್ಲಿ ಮುಖ್ಯ ಪರೀಕ್ಷೆ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ!

ಇದನ್ನೂ ಓದಿರಿ: ನಮ್ಮ ಕರ್ನಾಟಕ- 50 | ಏಕೀಕರಣೋತ್ತರ ಕಾಲದ ಸಾಧನೆ ಮತ್ತು ವೈರುಧ್ಯ

ಹೀಗಿರುವಾಗ ಕೆಪಿಎಸ್‌ಸಿ ತನ್ನ ಕನ್ನಡ ವಿರೋಧಿತನವನ್ನು ಪ್ರದರ್ಶಿಸುತ್ತಿದೆಯೇ ಎಂಬ ಸಂಶಯ ಮೊಳೆಯದೆ ಇರದು. ಎರಡು ಬಾರಿ ಪ್ರಶ್ನೆಪತ್ರಿಕೆಯಲ್ಲಿ ತಪ್ಪುಗಳನ್ನು ಎಸಗಿಯೂ ಕಣ್ಣುಮುಚ್ಚಿ ಕೂತು ಭವಿಷ್ಯದೊಂದಿಗೆ ಕೆಪಿಎಸ್‌ಸಿ ಆಟವಾಡುತ್ತಿದೆ ಎಂಬ ಆತಂಕ ಆಕಾಂಕ್ಷಿಗಳದ್ದು. ಪರೀಕ್ಷಾ ದೋಷ ಮರುಕಳಿಸಿರುವುದರಿಂದಾಗಿ ಇನ್ನೊಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸಬೇಕು ಅಥವಾ ಈಗಾಗಲೇ ಪೂರ್ವಭಾವಿ ಪರೀಕ್ಷೆ ಬರೆದಿರುವ ಎಲ್ಲರಿಗೂ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಆಕಾಂಕ್ಷಿಗಳು ಆಗ್ರಹಿಸಿದ್ದಾರೆ. ಈ ಎರಡೂ ಆಗದಿದ್ದರೆ ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಕೋರಿದ್ದಾರೆ. ಪ್ರಕರಣ ಕೋರ್ಟ್ ಮೆಟ್ಟಿಲನ್ನೂ ಏರಿದೆ.

ಕೆಪಿಎಸ್‌ಸಿ ಮಾತ್ರ ತನ್ನ ಮುಂದಿನ ಪ್ರಕ್ರಿಯೆಗಳನ್ನು ಮುಂದುವರಿಸುತ್ತಲೇ ಇದೆ. ‘Key Answers’ ಬಿಟ್ಟಿದೆ. ಕೃಪಾಂಕಗಳನ್ನು ಕೊಡುವ ಭರವಸೆಯನ್ನು ನೀಡಿದೆ. ಒಂದು ಕಡೆ ಆಕಾಂಕ್ಷಿಗಳು ನ್ಯಾಯಾಂಗದ ಕದ ತಟ್ಟಿದ್ದರೆ, ಮತ್ತೊಂದೆಡೆ ಕೆಪಿಎಸ್‌ಸಿಯನ್ನು ಹೇಳೋರು, ಕೇಳೋರು ಯಾರು ಇಲ್ಲ ಎಂಬಂತಾಗಿದೆ. ಹುದ್ದೆಯ ಆಕಾಂಕ್ಷಿಗಳಿಗೆ ಸರ್ಕಾರ ಯಾವ ಪರಿಹಾರವನ್ನು ನೀಡುತ್ತದೆ ಎಂಬುದು ಸದ್ಯದ ಸುಡುಸುಡು ಪ್ರಶ್ನೆ.

sowmya
ಸೌಮ್ಯ ಕೋಡೂರು
+ posts

ಶಿವಮೊಗ್ಗ ಜಿಲ್ಲೆಯ ಕೋಡೂರಿನವರಾದ ಸೌಮ್ಯ ಅವರು ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರು. ಉತ್ತಮ ವಾಗ್ಮಿಯೂ ಹೌದು

ಪೋಸ್ಟ್ ಹಂಚಿಕೊಳ್ಳಿ:

ಸೌಮ್ಯ ಕೋಡೂರು
ಸೌಮ್ಯ ಕೋಡೂರು
ಶಿವಮೊಗ್ಗ ಜಿಲ್ಲೆಯ ಕೋಡೂರಿನವರಾದ ಸೌಮ್ಯ ಅವರು ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರು. ಉತ್ತಮ ವಾಗ್ಮಿಯೂ ಹೌದು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...