ಈ ವಿಷಯದ ಬಗ್ಗೆ ಹೇಳಬೇಕೆಂದರೆ ರಾಜಧಾನಿ ರಾಜಕಾರಣ, ಒಕ್ಕೂಟ ವ್ಯವಸ್ಥೆ, ಅಧಿಕಾರ ಕೇಂದ್ರೀಕರಣ, ಹಣಕಾಸು ಹಂಚಿಕೆ, ಸಮೂಹ ಅಂಧತ್ವ, ಇತರೀಕರಣ, ಸಾಂಸ್ಕೃತಿಕ ಆಗೋಚರತ್ವ ಮುಂತಾದವುಗಳ ಬಗ್ಗೆ ದೀರ್ಘವಾಗಿ ಮಾತಾಡಬೇಕು. ಇವೆಲ್ಲ ಗಂಭೀರ ವಿಷಯಗಳು. ಅದಕ್ಕೇ ಅವನ್ನೆಲ್ಲ ಬಿಟ್ಟುಬಿಡೋಣ. ಸುಮ್ಮನೇ ಒಂದಿಷ್ಟು ಕತೆ ಕೇಳೋಣ.
ಹೇಳಲು ಅನೇಕ ಕತೆಗಳು ಇದ್ದಾಗ ಯಾವುದರಿಂದ ಶುರು ಮಾಡುವುದು ಅಂತ ಥಟ್ಟನೆ ತಿಳಿಯುವುದಿಲ್ಲ. ಅನೇಕ ವರ್ಷ ಹಳೆಯ ಕತೆಯೊಂದು ನಮ್ಮ ಮನೆಯಲ್ಲಿ ಜೋಕು ಆಗಿ ಹೋಗಿದೆ. ಅದರಿಂದ ಆರಂಭಿಸೋಣ.
ಲೋಕ ಸಂಚಾರಿಯ ಕತೆ
ನಾನು ಬೆಂಗಳೂರಿಗೆ ಮೊದಲು ಹೋಗಿದ್ದು 1986ರ ರಜೆಯಲ್ಲಿ. ನನ್ನ ಸಂಬಂಧಿಕರೊಬ್ಬರ ಲಾರಿಯಲ್ಲಿ ಕುಳಿತು. ಮೂಲತಃ ಧಾರವಾಡ ಜಿಲ್ಲೆಯವರಾಗಿದ್ದ ಅವರ ಬೀಗರು ಅನೇಕ ವರ್ಷಗಳ ಹಿಂದೆ ಎಚ್‌ಎಂಟಿ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದರಿಂದ ಬೆಂಗಳೂರಿಗೆ ಹೋಗಿ ನೆಲೆಸಿದ್ದರು. ಅವರ ಮನೆಯಲ್ಲಿನ ಯಾವುದೋ ಕಾರ್ಯಕ್ರಮಕ್ಕೆ, ಪ್ರಾಥಮಿಕ ಶಾಲೆಯಲ್ಲಿ ಇದ್ದ ನನ್ನನ್ನು ಕರೆದುಕೊಂಡು ನಮ್ಮ ಅತ್ತೆ-ಮಾವ ಹೋಗಿದ್ದರು.
ಉತ್ತರ ಕರ್ನಾಟಕದ ಯುವಕರೆಲ್ಲ ನೌಕರಿ ಹುಡುಕಿಕೊಂಡು ರಾತ್ರಿ ದಾದರ ಟ್ರೈನ್ ಹತ್ತಿ ಸಾಲಾಗಿ ಮುಂಬಯಿಗೆ ಹೋಗುತ್ತಿದ್ದಾಗ ಈ ಹುಡುಗ, ಹೊಸದಾಗಿ ಚುನಾವಣೆ ಗೆದ್ದ ಶಾಸಕರು ರಾತ್ರಿ ಬಸ್ಸು ಹತ್ತಿ ಹೋಗುವ ಅದು ಯಾವುದೋ ಅಪರಿಚಿತ ಊರಿಗೆ ಹೋಗಿದ್ದರ ಬಗ್ಗೆ ನಮ್ಮ ಊರಿನ ಮಂದಿ ಗಾಬರಿಯಾಗಿದ್ದರು. “ಎಲ್ಲಾ ಬಿಟ್ಟು ಅಲ್ಲಿ ಯಾಕ್ ಹೋಗ್ಯಾನೋ ಮಾರಾಯ, ಬೆಳಿಗ್ಗೆ- ಬೆಳಿಗ್ಗೆ ರೈಸ್ ಭಾತ್ ತಿಂತಾರ್ ಆ ಊರಾಗ’’ ಅಂತ ಅದು ಯಾವುದೋ ಹೆಸರು ಕೇಳದ- ದೆಸೀ ಇಲ್ಲದ ಊರಿನ ಬಗ್ಗೆ ಮಾತಾಡುವ ಹಾಗೆ ಮಾತಾಡುತ್ತಿದ್ದರು.
ನಾವು ಆಗ ಮೂರು ದಿವಸ ಇದ್ದದ್ದು ಹಳೆ ಎಚ್‌ಎಂಟಿ ಕಾಲನಿಯಲ್ಲಿ. ಅಷ್ಟರಲ್ಲಿ ನಮ್ಮ ಪಕ್ಕದ ಮನೆಯ ಅಂಕಲ್ ಒಬ್ಬರು ಪರಿಚಯವಾದರು. ಹುಬ್ಬಳ್ಳಿಯಿಂದ ಬಂದ ಹುಡುಗ ಅಂತ ಗೊತ್ತಾದಾಗ `ಬ್ಯಾಂಗ್‌ಲೋರ್ ಫಸ್ಟ್ ಟೈಮ್ ಏನಪ್ಪಾ?’ ಅಂತ ಕೇಳಿದರು. ನಾನು ಹಿಂಜರಿಯುತ್ತಾ `ಹೌದರಿ ಸರ್’, ಅಂತ ಅಂದೆ. `ಇಡೀ ವಲ್ಡ್‌ನಲ್ಲಿ ಬೆಸ್ಟ್ ಸಿಟಿ ಅಂದರೆ ಇದೇ ಅಪ್ಪ. ಬೆಸ್ಟ್ ವೆದರ್, ಬೆಸ್ಟ್ ಪೀಪಲ್, ಬೆಸ್ಟ್ ರೋಡ್ಸ್, ಬೆಸ್ಟ್ ತರಕಾರಿ, ಎಲ್ಲಾ ಕಡೆ, 24 ಹವರ್ ಕಾವೇರಿ ವಾಟರ್, ಎಲ್ಲಾ ದಿಕ್ಕಿನಲ್ಲೂ ಒಂದೊಂದು ಪಾರ್ಕ್, ಮಕ್ಕಳಿಗೆ ಬೆಸ್ಟ್ ಎಜುಕೇಶನ್, ಜಾಬ್ಸ್ ಕೂಡ ಇಲ್ಲೇ -ಪಕ್ಕದಲ್ಲೇ. ಇನ್ನೇನ್ ಬೇಕು ಈ ಜೀವಕ್ಕೆ?’ ಅಂತ ಅಂದ್ರು. ನಮ್ಮ ಮಾವನತ್ತ ನೋಡಿ ‘ಬೆಸ್ಟ್ ನೇಬರ್ಸ್ ಕೂಡ, ಅಲ್ವಾ ಸಾರ್’ ಅಂತ ನಕ್ಕರು.
ನಾವು ಚಿಕ್ಕಂದಿನಿಂದ ಹುಕ್ಕೇರಿ ಬಾಳಪ್ಪ ಅವರ ‘ನಮ್ಮ ಹಳ್ಳಿ ಊರ ನಮಗ ಪಾಡ, ಯಾತಕವ್ವಾ ಹುಬ್ಬಳ್ಳಿ ಧಾರವಾಡ..’ ಹಾಡು ಕೇಳಿ ಬೆಳೆದವರು. ಆ ಅವಳಿ ನಗರಗಳೇ ದೊಡ್ಡ ಶಹರುಗಳು ಅಂತ ತಿಳಿದ ನಮಗೆ ಎಚ್‌ಎಂಟಿ ಅಂಕಲ್ ಅವರ ಮಾತಿನ ಮರ್ಮ ತಿಳಿಯದೇ ಹೋಯಿತು. ‘ಅವರು ಯಾರೋ ಇಡೀ ಜಗತ್ ಪರಿಭ್ರಮಣ ಮಾಡಿದವರು ಇರಬೇಕು. ವಿಶ್ವದ ವಿವಿಧ ಮೂಲೆಗಳಲ್ಲಿ ಅನೇಕ ವರ್ಷ ಕಳೆದ ಅನುಭವದ ಆಧಾರದ ಮೇಲೆ ಅಲ್ಲಿನ ತರತಮವನ್ನು ಗ್ರಹಿಸಿ ಈ ಸಮತೂಕದ ಮಾತು ಹೇಳುತ್ತಿರಬೇಕು’ ಅಂತ ಅಂದುಕೊಂಡು ಸುಮ್ಮನಾದೆ.
ಇದನ್ನೂ ಓದಿರಿ: ವಿಶ್ಲೇಷಣೆ | ಕರ್ನಾಟಕದಲ್ಲಿ ಒಬಿಸಿ ಮೀಸಲಾತಿ ಸಾಗಿಬಂದ ದಾರಿ
ಕೆಲ ವರ್ಷಗಳ ನಂತರ ಆ ಅಂಕಲ್ ಅವರ ನಿಜವಾದ ಕತೆ ಗೊತ್ತಾಯಿತು. ಅವರು ಬೆಂಗಳೂರು ಬಿಟ್ಟು ಎಲ್ಲೆಲ್ಲೂ ಹೋಗಿರಲಿಲ್ಲ. “ಬೆಂಗಳೂರು ಅಲ್ಲ, ಎಚ್‌ಎಂಟಿ ಕಾಲೋನಿನ ಬಿಟ್ಟು ಹೋಗಿಲ್ಲ ಅವ. ಅವರ ಅಪ್ಪನೂ ಎಚ್‌ಎಂಟಿಯೊಳಗ ಇದ್ದ, ಇವ ಇಲ್ಲೇ ಕಾಲನಿ ಒಳಗಿನ ಕಾಲೇಜ್‌ನೊಳಗ ಡಿಪ್ಲೋಮಾ ಓದಿದ, ಅಮ್ಯಾಲ ಇಲ್ಲೇ ಕೆಲಸ ಹಿಡದು ರಿಟೈರ್ ಆದ. ಬಾಜು ಕ್ರಾಸ್‌ನ ಹುಡುಗಿ ಮಾಡಿಕೊಂಡ. ಮಗಳಿಗೆ ಮೂರನೇ ಕ್ರಾಸ್‌ಗೆ ಲಗ್ನ ಮಾಡಿ ಕೊಟ್ಟ. ಅವನಿಗೆ ಏನು ಗೊತ್ತದ ಹೊರಗಿನ ಜಗತ್ತು? ಉತ್ತರ ಕರ್ನಾಟಕ ದೂರ ಉಳೀತು. ತುಮಕೂರು- ಮೈಸೂರು ಗೊತ್ತಿಲ್ಲ ಅವನಿಗೆ” ಅಂತ ನನ್ನ ಸಂಬಂಧಿ ಒಮ್ಮೆ ಹೇಳಿದರು. ಈ ಘಟನೆ ಈಗ ನಮ್ಮ ಕುಟುಂಬಸ್ಥರ ನಡುವೆ ಜನಪ್ರಿಯ ಜೋಕ್ ಆಗಿದೆ.

ಹಾದಿಲ್ ಹೋಗೋ ದಾಸಯ್ಯ
ಒಂದೊಮ್ಮೆ ಉತ್ತರ ಕರ್ನಾಟಕದ ರಾಜಕಾರಣಿಯೊಬ್ಬರು ಕೆಎಂಎಫ್ ಅಧ್ಯಕ್ಷರಾಗಿದ್ದರು. ತಮ್ಮ ಊರಿನಲ್ಲಿ ರಾಜ್ಯಮಟ್ಟದ ಸಭೆ ನಡೆಸಬೇಕು ಅಂತ ನಿರ್ದೇಶಕರು ಹಾಗೂ ಅಧಿಕಾರಿಗಳನ್ನು ಎಲ್ಲರನ್ನೂ ಕರೆಸಿದ್ದರು. ಸಭೆಯಲ್ಲಿ ಮಾತಾಡಿದ ಸ್ಥಳೀಯ ಸಹಕಾರಿ ಧುರೀಣರೊಬ್ಬರು ‘ಇಡೀ ಉತ್ತರ ಕರ್ನಾಟಕದ (ಆಗಿನ 10, ಈಗಿನ 16) ಜಿಲ್ಲೆಗಳ ಒಟ್ಟು ಹಾಲು ಸಂಗ್ರಹ ರಾಜ್ಯದ ಸರಾಸರಿ ಸಂಗ್ರಹದ ಶೇಕಡಾ 20ಕ್ಕಿಂತ ಕಮ್ಮಿ. ಇದಕ್ಕೆ ಏನಾದರೂ ಮಾಡಬೇಕು’ ಅಂತ ಹೇಳಿದರು.
ಆ ಮಾತು ಕೇಳಿ ಬೆಂಗಳೂರು- ಮೈಸೂರು ನಡುವಿನ ಸಣ್ಣ ಊರಿನ ದೊಡ್ಡ ನಾಯಕರೊಬ್ಬರು ತುಂಬ ಬೇಸರ ಮಾಡಿಕೊಂಡರು.
‘ನಾವ್ ಏನ್ರೀ ಮಾಡಾಕ ಆಗತ್ತೇ? ಅಲ್ಲಿಂದ ಹಾಲು ತಂದು ಇಲ್ಲಿಂದ ತುಂಬಾಕ ಆಗತ್ತ?’ ಅಂತ ಕೇಳಿದರು. ‘ನೋಡ್ರಿರಿ, ಪಶು ಸಂಗೋಪನೆ ಅಂದರೆ ಸುಲಭ ಅಲ್ಲ. ತುಂಬಾ ಶ್ರಮದ ಕೆಲಸ. ಸೋಮಾರಿ ಜನರಿಗೆ ಅದೆಲ್ಲಾ ಆಗಲ್ಲ. ಬೆಳಗ್ಗೆ ಏಳಬೇಕು, ಹಸಾ ಮೈ ತೋಳಿಬೇಕು, ಹುಲ್ಲು ಹಾಕಬೇಕು, ಬೆರಣಿ- ಕಸ ಮಾಡಬೇಕು’ ಅಂತ ಅಂದ್ರು. ಆಗ ಸ್ಥಳೀಯ ನಾಯಕರು ಇಲ್ಲಿನ ‘ಹವಾಮಾನ, ಕಮ್ಮಿ ಮಳೆ, ಹಸಿರು ಹುಲ್ಲಿನ ಕೊರತೆ, ಕಣ್ಮರೆಯಾಗುತ್ತಿರುವ ಗೋಮಾಳಗಳ ಸಮಸ್ಯೆ, ಸಾಂಪ್ರದಾಯಿಕ ಪದ್ಧತಿ ಬಿಟ್ಟು ಕೊಡದ ರೈತಾಪಿ ಜನಾಂಗ’, ಇತ್ಯಾದಿ ಸಮಸ್ಯೆಗಳ ಬಗ್ಗೆ ಮಾತಾಡಿದರು. ಇಲ್ಲಿನ ಜನರಿಗೆ ಅನುಕೂಲ ಆಗುವಂತೆ, ಜಾಗೃತಿ ಮೂಡಿಸುವಂತೆ ಏನಾದರೂ ಕಾರ್ಯಕ್ರಮ ರೂಪಿಸುವಂತೆ, ಸಲಹೆ ನೀಡಿದರು. ಎಂಬತ್ತರ ದಶಕದಲ್ಲಿ ಇದ್ದ ನಬಾರ್ಡ್‌ನ ‘ಸಮಗ್ರ ಗ್ರಾಮೀಣ ಅಭಿವೃದ್ಧಿ’ಯಂತಹ ಯೋಜನೆಯನ್ನು ಪುನಃ ಜಾರಿ ಮಾಡುವಂತೆ ಕೇಳಿಕೊಂಡರು. ಇವರಿಗೆ ಅದು ಅಪಥ್ಯ ಆಯಿತು. ‘ಅದೆಲ್ಲಾ ಆಗಲ್ಲಾ ಕಣ್ರೀ, ಇರೋದನ್ನ ಮಾಡಿದರೆ ಸಾಕಾಗಿದೆ. ಯಾವನೋ ಹಾದಿಲ್ ಹೋಗೋ ದಾಸಯ್ಯ ಹೇಳತಾನೇ ಅಂತ ಏನೇನೋ ಮಾಡಕ ಆಗಲ್ಲ, ಹೋಗರಿ’ ಅಂತ ಚೀರಿದರು.
ಅಧ್ಯಕ್ಷ ಅನ್ನಿಸಿಕೊಂಡವರು, ಚೀರಿದವರು, ಚೀರಿಸಿಕೊಂಡವರು, ಸುಮ್ಮನೇ ಕೇಳಿಸಿಕೊಂಡವರು- ಯಾರೂ ಈಗ ಇಲ್ಲ. ಆದರೆ ಶೇಕಡಾ 80: 20ರ ಅನುಪಾತ ಮಾತ್ರ ಈಗಲೂ ಹಾಗೆಯೇ ಇದೆ.
ವಿಕೇಂದ್ರೀಕೃತ ಅಧಿಕಾರ, ಕೇಂದ್ರೀಕೃತ ಮನಸ್ಸು
ಹುಬ್ಬಳ್ಳಿಯಲ್ಲಿ ಇದ್ದ ಯುವ ಐಎಎಸ್ ಅಧಿಕಾರಿ ದಂಪತಿಗಳ ವರ್ಗಾವಣೆಗೆ ಸಂಬಂಧಪಟ್ಟ ಏನೋ ಒಂದು ವಿಷಯ ದೊಡ್ಡ ಸುದ್ದಿ ಆಗಿತ್ತು. ಆ ದಿನಗಳಲ್ಲಿ ಬೀದರ್‌ಗೆ ಬಂದಿದ್ದ ಚಿಂತಕರೊಬ್ಬರು ಗ್ರಾಮ ಸ್ವರಾಜ್ಯ, ವಿಕೇಂದ್ರೀಕರಣ ಇತ್ಯಾದಿಗಳ ಬಗ್ಗೆ ಸುಂದರ ಭಾಷಣ ಮಾಡಿದರು. ಸಂಜೆ ರೈಲಿಗೆ ಅವರನ್ನು ಹತ್ತಿಸಲು ಹೋಗಿದ್ದೆವು. ನನ್ನನ್ನು ಕಂಡೊಡನೆ ‘ಏನ್ರೀ ಸ್ವಾಮಿ, ಎಲ್ಲಾ ಐಎಎಸ್ – ಐಪಿಎಸ್ ಅಧಿಕಾರಿಗಳನ್ನು ನಿಮ್ಮ ಕಡೆ ಕರಕೊಂಡು ಬಿಟ್ಟಿದ್ದೀರಾ’ ಅಂತ ತಮಾಷೆ ಮಾಡಿದರು. ‘ಅಲ್ರೀ, ಆ ಗುಲ್ಬರ್ಗ, ಹುಬ್ಬಳ್ಳಿ – ಧಾರವಾಡದಲ್ಲಿ ಎಲ್ಲಾ ಹತ್ತು – ಹನ್ನೆರಡು ಜನ ಐಎಎಸ್ ಅಧಿಕಾರಿಗಳು ಇದ್ದಾರಂತಲ್ಲ. ಇಲ್ ಕುತುಕೊಂಡು ಏನ್ರೀ ಮಾಡ್ತಾರೆ ಅವರೆಲ್ಲಾ, ಪೋಲಿ ಹೊಡೀತಾರಾ’ ಅಂತ ಕೇಳಿದರು.
‘ನಾನೇ ರಾಜ್ಯದ ಮುಖ್ಯ ಕಾರ್ಯದರ್ಶಿ, ನಾನೇ ಅವರನ್ನೆಲ್ಲ ವರ್ಗ ಮಾಡಿದ್ದೇನೆ’ ಅಂತ ಅವರು ತಿಳಿದುಕೊಂಡಂತೆ ಇತ್ತು ಅವರ ಮಾತು. ಅವರ ಮಾಹಿತಿಗಾಗಿ ಒಂದು ಮಾತು ಹೇಳಿಯೇ ಬಿಡಬೇಕು ಅಂತ ನನಗೆ ಅನ್ನಿಸಿತು. ‘ಸಾರ್, ಕರ್ನಾಟಕದಲ್ಲಿ 314 ಐಎಎಸ್ ಹಾಗೂ 215 ಐಪಿಎಸ್ ಅಧಿಕಾರಿಗಳು ಇದ್ದಾರೆ. ಅವರಲ್ಲಿ ಕೇವಲ ಸುಮಾರು 70 ಐಎಎಸ್ ಮತ್ತು 40 ಐಪಿಎಸ್ ಅಧಿಕಾರಿಗಳು ಮಾತ್ರ ಬೆಂಗಳೂರಿನಿಂದ ಹೊರಗೆ ಇದ್ದಾರೆ. ಉಳಿದವರೆಲ್ಲಾ ವಿಧಾನಸೌಧ- ವಿಕಾಸಸೌಧ- ಚೀಫ್ ಆಫೀಸ್‌ಗಳ ಜೇನುಗೂಡುಗಳಲ್ಲಿ ದಣಿವರಿಯದೆ ದುಡಿಯುತ್ತಿದ್ದಾರೆ. ಅದರಲ್ಲಿ ಅನೇಕರು ವರ್ಗಾವಣೆ ಹೋಗಲಿ, ಮೇಲ್ವಿಚಾರಣೆ ಸಭೆಗಳಿಗೆ ಸಹ ಈ ಕಡೆಯ ಜಿಲ್ಲೆಗಳಿಗೆ ಬರುವುದಿಲ್ಲ’ ಅಂತ ಅಂದೆ. ಅವರು ಸುಮ್ಮನೇ ಆದರು. ಆದರೆ ಅವರು ಮತ್ತೆ ಇನ್ನೆಲ್ಲೂ ‘ಅಧಿಕಾರ ವಿಕೇಂದ್ರೀಕರಣ’ ಎನ್ನುವ ಗಹನ ವಿಷಯದ ಬಗ್ಗೆ ಭಾಷಣ ಮಾಡಿದ್ದು ನಾನು ನೋಡಿಲ್ಲ.
ಇದನ್ನೂ ಓದಿರಿ: ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ: ನಾವು ಗಮನಿಸದೇ ಇರಲಾಗದ ʼಮನಿಯೊಳಗಿನ ಆನಿʼ
ಈ ರೀತಿ ಅನೇಕ ಸಾರಿ ಆಗಿದೆ. ಪ್ರಭಾವಿ ಕುಟುಂಬದ ಅಧಿಕಾರಿಯೊಬ್ಬರು ತಮಗೆ ಗುಲ್ಬರ್ಗಕ್ಕೆ ವರ್ಗಾವಣೆ ಆಗುವುದನ್ನು ತಪ್ಪಿಸಲು ವರದಿಗಾರರ ಮುಂದೆ ಅಲವತ್ತುಕೊಂಡರು. ಆಗ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಅಚ್ಚಾದ ‘ಉತ್ತರದ ರಾಜಕೀಯ ಧುರೀಣರಿಂದಾಗಿ ಬೆಂಗಳೂರಿಗೆ ಅನ್ಯಾಯ, ಗುಲ್ಬರ್ಗ-ಬಿಜಾಪುರದಲ್ಲಿ ಕೊಳೆಯುತ್ತಿರುವ ಒಳ್ಳೆ ಅಧಿಕಾರಿಗಳು’ ಎನ್ನುವ ದೊಡ್ಡ ಅಕ್ಷರದ ಬರಹವನ್ನು ನಾನು ನೋಡಿದ್ದೇನೆ.
ಬಿಕನಾಸಿಗಳ ಭವಿಷ್ಯ
ಐಎಎಸ್ ಅಧಿಕಾರಿಗಳ ನಡುವೆ ಜನಜನಿತವಾಗಿರುವ ಘಟನೆ ಒಂದಿದೆ. ಕೂದಲು ಹಣ್ಣಾಗಿರುವ ಹಿರಿಯ ಅಧಿಕಾರಿಗಳು ತಮ್ಮ ಇಲಾಖೆಯ ಅತಿ ಉತ್ಸಾಹಿ ಕಿರಿಯ ಅಧಿಕಾರಿಗಳಿಗೆ ‘ಸುಮ್ಮನೇ ಕೂಡು, ಹೆಚ್ಚೂ ಕಮ್ಮಿ ಹಾರ್ಯಾಡಬೇಡ’ ಅಂತ ಬುದ್ಧಿ ಹೇಳಲು, ಈ ಕತೆ ಹೇಳುತ್ತಾ ಇರುತ್ತಾರೆ.
ಅದು ಹೀಗಿದೆ.
ಸುಮಾರು 30 ವರ್ಷದ ಹಿಂದೆ ಉತ್ತರ ಭಾರತದ ಯುವ ಅಧಿಕಾರಿಯೊಬ್ಬರು ಅವಿಭಜಿತ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ಅವರು ಪಾಸಾಗಿ ಬಂದ ಪ್ರತಿಷ್ಠಿತ ಐಐಟಿ ಪದವಿ ಪ್ರಮಾಣಪತ್ರ ಇನ್ನೂ ಬಿಸಿ ಬಿಸಿ ಸುಡುತ್ತಿತ್ತು. ‘ಈ ನಿರ್ಲಕ್ಷಿತ ಪ್ರದೇಶದ ಬಿಕನಾಸಿಗಳಿಗೆ ಏನಾದರೂ ಮಾಡಲೇಬೇಕು’ ಅಂತ ಹಗಲೂ ರಾತ್ರಿ ಚಿಂತಿಸಿ ರಕ್ತ ಸುಟ್ಟುಕೊಂಡಿದ್ದರು. ಒಮ್ಮೆ ತಮ್ಮ ಕಾಲೇಜು ಬ್ಯಾಚ್‌ಮೇಟ್‌ಗಳನ್ನು ಧಾರವಾಡಕ್ಕೆ ಕರೆಸಿದರು. ಉಳವಿ ಬಸಪ್ಪನ ಗುಡ್ಡದ ಮೇಲೆ ಇರುವ ತಮ್ಮ ಬ್ರಿಟಿಷ್ ಬಂಗಲೆಯಲ್ಲಿ ಒಂದು ಅನೌಪಚಾರಿಕ ಸಭೆ ನಡೆಸಿದರು. ಕೊನೆಗೆ ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳ ನಡುವೆ ಮೌಂಟೆಡ್ ಮೋನೋ ರೈಲ್ (ಬೆಂಗಳೂರು ಕನ್ನಡದಲ್ಲಿ ಹೇಳಬೇಕು ಎಂದರೆ ಮೆಟ್ರೊ) ಮಾಡಿದರೆ ಪ್ರಯಾಣ ಹಗುರವಾಗುತ್ತದೆ, ಜನರಿಗೆ ಅನುಕೂಲ, ಎರಡೂ ನಗರಗಳು ಬೆಳೆಯುತ್ತವೆ. ಈ ಕಡೆ ಗದಗ- ಹಾವೇರಿ, ಶಿರಸಿ- ಕಾರವಾರ, ಆ ಕಡೆ ಬೆಳಗಾವಿ- ಬಿಜಾಪುರ ಇತ್ಯಾದಿಗಳ ನಡುವೆ ಒಂದು ಕಾರಿಡಾರ್ ತಯಾರು ಆಗುತ್ತದೆ. ಅದನ್ನು ನಿರ್ಮಾಣ ಮಾಡುವುದು ಸುಲಭ, ಭೂ ಸ್ವಾಧೀನ ಬೇಕಿಲ್ಲ, ಖರ್ಚು ಕಮ್ಮಿ, ಒಂದು ಕಿಲೋಮೀಟರ್‌ಗೆ ಐದು ಕೋಟಿ ರೂಪಾಯಿಯಂತೆ ಸುಮಾರು 100 ಕೋಟಿ ರೂಪಾಯಿಯಲ್ಲಿ ಯೋಜನೆ ಮುಗಿದು ಹೋಗುತ್ತದೆ, ಅಂತ ಒಂದು ವರದಿ ತಯಾರು ಮಾಡಿದರು. ಡಿಸಿ ಸಾಹೇಬರು ಖುಷಿಯಾದರು. ಮರುದಿನವೇ ಬೆಂಗಳೂರಿಗೆ ಹೋದರು.

ತಮ್ಮ ತರಬೇತಿಯಲ್ಲಿ ಕೊಟ್ಟಿದ್ದ ಕ್ರಯವೇಟ ಟೈ ಕಟ್ಟಿಕೊಂಡು, ಸೂಟು ಹಾಕಿಕೊಂಡು ವಿಧಾನಸೌಧ ಎಂಬ ಕಲ್ಲಿನ ಹೃದಯದ ಕಟ್ಟಡ ಮೆಟ್ಟಿಲು ಹತ್ತಿದರು. ಹಣಕಾಸು ಇಲಾಖೆ ಕಾರ್ಯದರ್ಶಿಯವರ ಮುಂದೆ ನಿಂತು ಅರ್ಧ ಗಂಟೆ ಮಾತಾಡಿದರು. ನಮಗೆ ಶೇಕಡಾ 70ರಷ್ಟು ಹಣ ಕೊಡಿಸಿ, ನಾನು ಸ್ಥಳೀಯ ಸಂಸ್ಥೆಗಳ ಹತ್ತಿರ ಉಳಿದ ಹಣ ಹೊಂದಿಸಿಕೊಳ್ಳುತ್ತೇನೆ ಎಂದು ಬೇಡಿಕೊಂಡರು.
ಸಿಗರೇಟು ಸೇದುತ್ತಾ ಅವರ ಮಾತನ್ನ ಕೇಳಿಸಿಕೊಂಡ ಆ ಹಿರಿಯ ಅಧಿಕಾರಿ ಅವರ ಬೇಡಿಕೆಯನ್ನು ತಳ್ಳಿ ಹಾಕಿದರು. ‘ಹುಬ್ಬಳ್ಳಿ- ಧಾರವಾಡ ಎನ್ನುವುದು ಒಂದು ತಿಪ್ಪೆಗುಂಡಿ. ಅದನ್ನು ಸುಧಾರಿಸುವುದು ಹುಚ್ಚುತನ. ಅಲ್ಲಿಗೆಲ್ಲಾ ಅಷ್ಟು ಹಣ ವೇಸ್ಟ್ ಮಾಡಲು ಆಗೋದಿಲ್ಲ. ಈ ರೀತಿಯ ಹುಚ್ಚಾಟ ಎಲ್ಲ ಬಿಟ್ಟು ಬಿಡು. ಕರ್ನಾಟಕದ ಭವಿಷ್ಯ ಅಂತ ಏನಾದರೂ ಇದ್ದರೆ ಅದು ಬೆಂಗಳೂರಿನಲ್ಲಿ ಇದೆ. ನಿನಗೆ ಏನಾದರೂ ಅರ್ಥಪೂರ್ಣವಾದ ಕೆಲಸ ಮಾಡಬೇಕು ಅಂತ ಇದ್ದರೆ ಇಲ್ಲಿಗೆ ವರ್ಗ ಮಾಡುತ್ತೇನೆ, ಬಾ’ ಅಂತ ಹೇಳಿದರಂತೆ. ಇವರು ಮತ್ತೇನೋ ರೀತಿಯಲ್ಲಿ ತಿಳಿಸಿ ಹೇಳಲು ಹೋದರೆ ಅವರ ಫೈಲ್ ಅನ್ನು ಅಕ್ಷರಶಃ ನೆಲಕ್ಕೆ ಒಗೆದು ‘ಮತ್ತೇನಾದರೂ ಇದ್ದರೆ ಹೇಳು’ ಅಂತ ಅಂದರಂತೆ.
ಇದನ್ನೂ ಓದಿರಿ: ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಟ್ರಂಪ್ ಪದತಲಕ್ಕೆ ಜಾರಿದ್ದು ಹೇಗೆ?
ಇದೆಲ್ಲಾ ಈಗ ಯಾಕೆ ನೆನಪು ಬಂತು ಅಂದರೆ ಮೈಸೂರು ಸಾಮ್ರಾಜ್ಯದ ಘನ ಸರಕಾರವು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಒಂದು ಮೆಗಾ ಸುರಂಗವನ್ನು ಕೊರೆಸುವ ನಿರ್ಧಾರ ಕೈಗೊಂಡಿದೆ. ಅದಕ್ಕೆ ಸುಮಾರು 50,000 ಕೋಟಿ ರೂಪಾಯಿ ಬೇಕಾಗಬಹುದು, ಸ್ವಲ್ಪ ಹೆಚ್ಚಾದರೂ ನಾವು ಮ್ಯಾನೇಜ್ ಮಾಡುತ್ತೇವೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ಹಿಂದಿನ ಘನ ಸರಕಾರ ವಿಮಾನದಲ್ಲಿ ಸಂಚರಿಸುವ ರಾಜ ಧನಿಕರು ಕಂಗೆಡಬಾರದು ಅಂತ ಹೇಳಿ ಸುಮಾರು 14,000 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣದಿಂದ ನಗರಕ್ಕೆ ಒಂಟಿ ಹಳಿ ರೈಲ್ವೆ ಸಂಪರ್ಕ ಕಲ್ಪಿಸಲು ನಿರ್ಣಯ ಮಾಡಿತ್ತು.
ಇಂದಿಗೆ 30 ವರ್ಷಗಳ ಹಿಂದೆ ನೂರು ಕೋಟಿ ರೂಪಾಯಿ ಅಂದರೆ ಈಗೆಷ್ಟು ಅಂತ ನೋಡಿದರೆ- ಸರಾಸರಿ ವಾರ್ಷಿಕ ಶೇಕಡಾ 6 ಹಣದುಬ್ಬರ ಸೇರಿಸಿ ಲೆಕ್ಕ ಮಾಡಿದರೆ- ಸಿಗುವ ಉತ್ತರ – ಸುಮಾರು 550 ಕೋಟಿ ರೂಪಾಯಿ. ಇದು ಸುಮ್ನೆ ನಿಮ್ಮ ಗಮನಕ್ಕೆ ಇರಲಿ.
ನೋವು ತರುವ ನವ ಉದಾರವಾದ
ಇಂದಿನವರೆಗೆ ಆಗಿಹೋಗಿರುವ ಸರಕಾರಗಳ ಮನಸ್ಸಿನ ಔದಾರ್ಯವನ್ನು ನೋಡೋಣ. ರಾಜ್ಯದಲ್ಲಿ 31 ಜಿಲ್ಲಾ ಪಂಚಾಯತಿಗಳು ಹಾಗೂ 320 ನಗರ ಸ್ಥಳೀಯ ಸಂಸ್ಥೆಗಳು ಇವೆ. ಇವುಗಳ ಮುಖ್ಯ ಅಧಿಕಾರಿಗಳಿಗೆ ಇರುವ ಆರ್ಥಿಕ ಸ್ವಾತಂತ್ರ್ಯ ಅಲ್ಪ. ಯಾವುದೇ ಯೋಜನೆ ಒಂದು ಕೋಟಿ ರೂಪಾಯಿಗೂ ಹೆಚ್ಚಾದರೆ ಅದರ ಫೈಲ್ ಹೊತ್ತು ಅವರು ಬೆಂಗಳೂರಿಗೆ ಎಡತಾಕಬೇಕು. ಅಲ್ಲಿನ ಕಚೇರಿಯ ಗುಮಾಸ್ತರ ಎದುರಿಗೆ ಗೋಳು ತೋಡಿಕೊಳ್ಳಬೇಕು. ಅಲ್ಲಿನ ಅಧೀನ ಕಾರ್ಯದರ್ಶಿ ಏನಾದರೂ ಕೊಕ್ಕೆ ಹಾಕಿದರೆ ಮತ್ತೆ ಶಾಸಕರ ನಿವಾಸಕ್ಕೆ ಓಡಿ ಅಲ್ಲಿಂದ ಸಾಹೇಬರಿಗೆ ಫೋನು ಮಾಡಿಸಬೇಕು. ಶಾಸಕರೇನೂ ರೇಗಿ ಫೋನು ಮಾಡುವುದಿಲ್ಲ. ತಮ್ಮ ಕ್ಷೇತ್ರದಲ್ಲಿ ಹುಲಿ ಆಗಿರುವ ಶಾಸಕರು ಇಲ್ಲಿ ಇಲಿಯಾಗಿ ಮಾರ್ಪಾಡು ಆಗಿರುತ್ತಾರೆ. ಅವರು ಹಳೆ ಮೈಸೂರು ಭಾಗದ ಹಳೆ ಶಾಸಕರೊಬ್ಬರ ಹತ್ತಿರ ಹೋಗಿ ‘ಈ ಕೆಲಸ ಆಗಬೇಕು ಸಾಹೇಬರೆ, ಇಲ್ಲದಿದ್ದರೆ ನಾನು ಊರಿಗೆ ಹೋಗೋದು ಹೇಗೆ?’ ಅಂತ ಗೋಗರೆದ ಮೇಲೆ ಅವರ ಚಿತ್ತ.
ನಾಲ್ಕು ದಶಕಗಳ ಹಿಂದೆ ರಾಜ್ಯದ ವಿತ್ತ ಸಾಮರ್ಥ್ಯ ಮೂವತ್ತು – ನಲವತ್ತು ಸಾವಿರ ಕೋಟಿ ಇದ್ದಾಗ ಮಾಡಿದ ಈ ನಿಯಮಗಳು ರಾಜ್ಯದ ಬಜೆಟ್ ನಾಲ್ಕು ಲಕ್ಷ ಕೋಟಿಗೆ ತಲುಪಿದಾಗಲೂ ಹಾಗೆಯೇ ಇವೆ. ಬೇರೆ ಎಲ್ಲ ವಿಷಯಕ್ಕೂ ಉದಾರವಾದವನ್ನು ಅನ್ವಯಿಸುವ ನಮ್ಮನ್ನು ಆಳುವವರು, ಇಂತಹ ವಿಷಯಗಳಿಗೆ ಅದನ್ನು ಅನ್ವಯಿಸುವುದಿಲ್ಲ. ಈಸ್ಟ್ ಇಂಡಿಯಾ ಕಂಪನಿಯ ಸಾಹೇಬರು: ‘ಇಲ್ಲಿನ ಪ್ರತಿ ಕುದುರೆಯ ಹಲ್ಲನ್ನೂ ನಾನು ಎಣಿಸಿ ಇಟ್ಟುಕೊಂಡಿರಬೇಕು’ ಎನ್ನುತ್ತಿದ್ದರಂತೆ. ಕಂಪನಿ ಹೋಗಿದೆ. ಸಾಹೇಬರು ಇನ್ನೂ ಇದ್ದಾರೆ.
ಮೆಟ್ರೊ ಲೈನ್ ಕನ್ನಡಿಗರು
ರಾಜ್ಯ ಮಟ್ಟದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಾನೊಮ್ಮೆ ಇದ್ದೆ. ಯಾದಗಿರಿ ಜಿಲ್ಲೆಯ ರಂಗಂಪೇಟೆಯ ಸಂಘಟನೆಯೊಂದರ ಚರ್ಚೆ ಬಂತು. ‘ಅದು ಕರ್ನಾಟಕದಲ್ಲಿ ಇದೆಯೋ ಅಥವಾ ಆಂಧ್ರದಲ್ಲಿದೆಯೋ? ಏಕೆಂದರೆ ಅದರ ಹೆಸರು ಒಂಥರಾ ಇದೆ’ ಅಂತ ಒಬ್ಬರು ಹಿರಿಯರು ಕೇಳಿದರು. ಕನ್ನಡ-ಮರಾಠಿ ಭಾಷೆ ಹಾಗೂ ಸಾಹಿತ್ಯಗಳ ನಡುವೆ ಸೇತುವೆಯಂತೆ ಕೆಲಸ ಮಾಡಿದ ಹಿರಿಯ ಭಾಷಾಂತರಕಾರರಾದ ಚಂದ್ರಕಾಂತ ಪೋಕಳೆ ಅವರ ಹೆಸರು ಎತ್ತಿದಾಗಲೂ ಇದೇ ರೀತಿಯ ಪ್ರಶ್ನೆ ಬಂತು. ‘ಅವರು ಮಹಾರಾಷ್ಟ್ರದವರಾ, ಯಾಕೆಂದರೆ ಹೆಸರು ಬೇರೆ ಥರಾ ಇದೆ’, ಅಂತ.

ಬಿಜಾಪುರದ ಹವ್ಯಾಸಿ ನಾಟಕ ತಂಡವೊಂದರ ಹೆಸರು ಶಿಫಾರಸು ಮಾಡಿದಾಗ ರವೀಂದ್ರ ಕಲಾಕ್ಷೇತ್ರದ ಖಾಯಂ ರಹವಾಸಿಗಳಾದ ಹಿರಿಯ ರಂಗಕರ್ಮಿಯೊಬ್ಬರು “ಅವರು ಯರ್ರೀ, ನನಗೆ ಗೊತ್ತಿರಲಾರದವರು?’’ ಅಂತ ಅಂದ್ರು. ಅವರಿಗೆ ಸುಮಾರು 75 ವರ್ಷ ಎಂದೂ, ಅವರು ಪರ್ವತವಾಣಿ, ಪ್ರಸನ್ನ, ಬಿವಿ ಕಾರಂತ, ಸಿಜಿಕೆ, ಇತ್ಯಾದಿ ಹಿರಿಯರೊಂದಿಗೆ 50 ವರ್ಷ ಕೆಲಸ ಮಾಡಿದ್ದಾಗಿ ಸಭೆ ಶುರು ಆದಾಗ ಅವರೇ ಹೇಳಿದ್ದರು.
ಈ ಮೂರೂ ಮೌಲ್ಯಯುತ ಪ್ರಶ್ನೆಗಳನ್ನು ಕೇಳಿದವರು ಬೇರೆ ರಾಜ್ಯದ ಮೂಲದ ಐಎಎಸ್ ಅಧಿಕಾರಿಗಳಲ್ಲ. ಕರ್ನಾಟಕ ರಾಜ್ಯದ ಸಂಸ್ಕೃತಿ ಕ್ಷೇತ್ರದ ಪ್ರಭೃತಿಗಳು- ಚಿಂತಕರು, ಸಾಹಿತಿಗಳು, ಸಮಾಜ ಸೇವಕರು, ಹೋರಾಟಗಾರರು, ಇತ್ಯಾದಿ ಕೆಟಗಿರಿಗಳಲ್ಲಿ ನೀವು ಅವರನ್ನು ಹಾಕಬಹುದು. ಅವರು ತಮ್ಮದಲ್ಲದ ಊರಿನವರನ್ನು ಒಂದೇ ಕೆಟಗಿರಿಯಲ್ಲಿ ಹಾಕುವಂತೆ.
ನನಗೆ ತುಂಬ ಬೇಸರವಾಯಿತು. ಒಂದು ದಿನ ನಾನು ನಗುನಗುತ್ತಾ ಹೇಳಿಬಿಟ್ಟೆ. ‘ನೀವೆಲ್ಲ ಮೆಟ್ರೊ ಲೈನ್ ಕನ್ನಡಿಗರು. ಬೆಂಗಳೂರಿನ ಮೆಟ್ರೊ ಲೈನ್ ಎಲ್ಲಿಗೆ ಮುಗಿಯುತ್ತದೋ ಅಲ್ಲಿಗೆ ನಿಮ್ಮ ಕರ್ನಾಟಕ ಮುಗಿದಂತೆ ಕಾಣುತ್ತದೆ’ ಅಂತ.
(ಮುಂದುವರಿಯುತ್ತದೆ..)
(‘ಈದಿನ.ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಹೃಷಿಕೇಶ ಬಹದ್ದೂರ ದೇಸಾಯಿ
ಪತ್ರಕರ್ತರು




