ಫೇಕ್ ಎನ್‌ಕೌಂಟರ್ ಎಂದಾಕ್ಷಣ ದೇಶದ ನೆನಪಿಗೆ ಬರುವುದು ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದಿದ್ದ 2013ರ ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣ. ಫೇಕ್ ಎನ್‌ಕೌಂಟರ್ ಬಗ್ಗೆ ಇಡೀ ರಾಷ್ಟ್ರದಾದ್ಯಂತ ಚರ್ಚೆ ನಡೆದಿದ್ದು, ಅಂದಿನ ಗುಜರಾತ್ ರಾಜ್ಯ ಮತ್ತು ಆಗಿನ ಕೇಂದ್ರ ಸರ್ಕಾರಗಳ ನಡುವಿನ ಘರ್ಷಣೆಗೂ ಇದು ಕಾರಣವಾಗಿತ್ತು. ಮೊದಲಿಗೆ ಲಷ್ಕರೆ ತೊಯ್ಬಾದ ಉಗ್ರರ ಎನ್‌ಕೌಂಟರ್ ಎಂದು ಬಿಂಬಿತವಾಗಿದ್ದ ಪ್ರಕರಣವು, ಮುಂಬೈನ ಹದಿನೇಳು ವರ್ಷದ ವಿದ್ಯಾರ್ಥಿ ಇಶ್ರತ್ ಜಹಾನ್‌ಳನ್ನು ಅಕ್ರಮವಾಗಿ ಬಂಧಿಸಿ, ನಂತರ ರಸ್ತೆಯಲ್ಲಿ ಗುಂಡಿಟ್ಟುಕೊಂದು ಎನ್‌ಕೌಂಟರ್ ಕಥೆ ಕಟ್ಟಿದ್ದು ಬಯಲಾಯಿತು. ಅಂದಿನ ಗುಜರಾತ್ ಡಿಜಿಪಿ ವಂಜಾರ ಅವರ ಆಡಿಯೋ ಬಯಲಿಗೆ ಬಂದು, ಅಂದಿನ ಗುಜರಾತ್ ಮುಖ್ಯಮಂತ್ರಿ, ಈಗ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಮತ್ತು ಅಂದಿನ ಗುಜರಾತ್ ರಾಜ್ಯದ ಗೃಹಸಚಿವ, ಈಗ ದೇಶದ ಗೃಹಮಂತ್ರಿಯಾಗಿರುವ ಅಮಿತ್ ಶಾ ಇಬ್ಬರಿಗೂ ಈ ನಕಲಿ ಎನ್‌ಕೌಂಟರ್ ಬಗ್ಗೆ ಮುಂಚೆಯೂ ತಿಳಿದಿತ್ತು. ಈ ನಕಲಿ ಎನ್‌ಕೌಂಟರ್‌ಗೆ ಅವರಿಬ್ಬರ ಸಮ್ಮತಿಯೂ ಇತ್ತು ಎಂದು ಬಯಲಾಯಿತು. 2014ರಲ್ಲಿ ಕೇಂದ್ರ ಸರ್ಕಾರ ಬದಲಾದ ನಂತರ ಈ ಕೇಸ್ ತನಿಖೆಯಲ್ಲಿ ಬಹಳಷ್ಟು ಹಿಂದುಳಿಯಿತು ಎಂಬುದು ಹೌದಾದರೂ ಅಧಿಕಾರಸ್ಥ ರಾಜಕಾರಣಿಗಳ ಕೃಪಾಶೀರ್ವಾದ ಈ ನಕಲಿ ಎನ್‌ಕೌಂಟರ್‌ಗೆ ಇದ್ದದ್ದು ಸುಳ್ಳಲ್ಲ.
ನಕಲಿ ಎನ್‌ಕೌಂಟರ್‌ಗಳಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಸರ್ಕಾರವೇ ಒಪ್ಪಿಕೊಂಡಿರುವಂತೆ ಇಂತಹ ಪ್ರಕರಣಗಳಲ್ಲಿ ಒಟ್ಟೂ 35%ರಷ್ಟು ಪ್ರಕರಣಗಳು ಉತ್ತರಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿಯೇ ನಡೆದಿವೆ. ಈ ಎರಡೂ ರಾಜ್ಯಗಳಲ್ಲಿ ದಶಕಗಳಿಂದ ಬಿಜೆಪಿಯೇ ಆಡಳಿತದಲ್ಲಿರುವುದು ಎಷ್ಟು ಕಾಕತಾಳಿಯವೋ ದೇವರೇ ಬಲ್ಲ.
ಭಾರತದಲ್ಲಿ ನಕಲಿ ಎನ್‌ಕೌಂಟರ್‌ಗಳ ಪರಂಪರೆ 1960ರ ಸುಮಾರಿಗೆ ಶುರುವಾಗಿ, ಖಾಲಿಸ್ತಾನ ಚಳುವಳಿ ಉತ್ತುಂಗಕ್ಕೆ ಏರಿದ್ದ 1980ರ ಸಮಯದಲ್ಲಿ ಮತ್ತು 2000ದಿಂದೀಚೆಗೆ ಬಹಳ ಸಾಮಾನ್ಯವಾಗಿಬಿಟ್ಟಿದೆ.
ಇತ್ತೀಚಿಗಂತೂ ಸಂಸತ್ತಿನಲ್ಲಿಯೂ ನಕಲಿ ಎನ್‌ಕೌಂಟರ್‌ಗಳನ್ನು ಬೆಂಬಲಿಸುವ ಕ್ರೂರ ಪ್ರಭೃತಿಗಳಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಹಿಂದಿನ ಸಂಸತ್ತಿನಲ್ಲಿ ಅಂದರೆ 2019ರಲ್ಲಿ ದೆಹಲಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿಯವರು ಪೊಲೀಸರ ಕೈಯಲ್ಲಿ ಬಂದೂಕು ಇರುವುದು ಅಲಂಕಾರಕ್ಕಲ್ಲ ಎಂದು ಹೇಳಿಕೆ ಕೊಟ್ಟು ನಕಲಿ ಎನ್‌ಕೌಂಟರ್ ಅನ್ನು ಸಮರ್ಥಿಸಿಕೊಂಡಿದ್ದರು.
ಇದನ್ನೂ ಓದಿರಿ: ಕರ್ನಾಟಕದಲ್ಲಿ ಬಲಪಂಥದ ಬೇರುಗಳು (ಭಾಗ- 1)
ಕಿಸೆಯಲ್ಲಿ ಬಂದೂಕು ಇದ್ದ ಮಾತ್ರಕ್ಕೆ ನ್ಯಾಯ-ಅನ್ಯಾಯಗಳ ನಿರ್ಣಯವನ್ನೂ ಪೊಲೀಸರೇ ಮಾಡುತ್ತಾ ಹೋದರೆ ಸಂಸತ್ತು, ನ್ಯಾಯಾಂಗ, ಕಾರ್ಯಾಂಗ ಏಕೆ ಬೇಕು? ಕೇವಲ ಪೊಲೀಸ್ ಪರೀಕ್ಷೆಗಳನ್ನು ನಡೆಸುತ್ತಾ, ಪೋಲಿಸ್ ರಾಜ್ಯವನ್ನೇ ಮಾಡಬಹುದಲ್ಲ ಎಂಬ ಸರಳ ತರ್ಕ ಅವರಿಗೆ ಅರ್ಥವಾಗಿರಲಿಲ್ಲ.
ನಕಲಿ ಎನ್‌ಕೌಂಟರ್‌ಗಳು ನಡೆಯಲು ಕಾರಣಗಳೇನಾದರೂ ಏನು ಎಂದು ಹುಡುಕುತ್ತಾ ಹೊರಟರೆ ಕೆಲವು ಪ್ರಮುಖ ವಿಷಯಗಳನ್ನು ನಾವು ಬೊಟ್ಟು ಮಾಡಬಹುದು.
ನಿಧಾನಗತಿಯ ನ್ಯಾಯದಾನ ಪ್ರಕ್ರಿಯೆ.
ಪೊಲೀಸರ ಒತ್ತಡ ನಿರ್ವಹಣಾ ಸಾಮರ್ಥ್ಯದ ಕೊರತೆ .
ಮಾಧ್ಯಮಗಳ ಹುಚ್ಚುತನ.
ಆವೇಶಕ್ಕೆ ಒಳಗಾಗಿ ಸಂವೇದನೆ ಮತ್ತು ಕಾಮನ್‌ಸೆನ್ಸ್ ಕಳೆದುಕೊಂಡು ಸಮೂಹ ಸನ್ನಿಗೆ ಒಳಪಡುವ ಸಾಮಾನ್ಯ ಜನರು ಆಕ್ರೋಶದಿಂದ ಸೃಷ್ಟಿಸುವ ಒತ್ತಡಗಳು.
ನಿಧಾನಗತಿಯ ನ್ಯಾಯದಾನ ಮತ್ತು ಪೋಲೀಸರ ಒತ್ತಡ ನಿರ್ವಹಣೆಯ ಸಾಮರ್ಥದ ಕೊರತೆಗೆ ಮುಖ್ಯವಾಗಿ ಕಾರಣ ಸರಿಯಾದ ಸಿಬ್ಬಂದಿ ಕೊರತೆ ಮತ್ತು ಭ್ರಷ್ಟಾಚಾರ.
ನಮ್ಮ ದೇಶದಲ್ಲಿ ಉತ್ತರಪ್ರದೇಶದಂತಹ ರಾಜ್ಯದಲ್ಲಿ ದಿನವೊಂದಕ್ಕೆ ಹೈಕೋರ್ಟ್ ಜಡ್ಜ್ ನ್ಯಾಯದಾನ ನೀಡಬೇಕಾದ ಕೇಸುಗಳ ಸರಾಸರಿ ಎಷ್ಟು ಗೊತ್ತೇ? ಬರೋಬ್ಬರಿ ಹನ್ನೆರಡು ಸಾವಿರ ಕೇಸುಗಳು.
ನಮ್ಮ ಕರ್ನಾಟಕದಂತಹ ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಪ್ರಮಾಣ ಎಷ್ಟಿದೆ ಗೊತ್ತೆ? ಸರಿಸುಮಾರು 23%!
ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ದಳದ ಪ್ರಕಾರವೇ 20,000ಕ್ಕೂ ಹೆಚ್ಚು ಮಂದಿ ಪೊಲೀಸರ ಅವಶ್ಯಕತೆ ರಾಜ್ಯಕ್ಕಿದೆ.
ಭಾರತದಲ್ಲಿ ಪೊಲೀಸ್ “ಎನ್‌ಕೌಂಟರ್‌ಗಳು” (ಸಾಮಾನ್ಯವಾಗಿ ಸ್ವಯಂ-ರಕ್ಷಣೆ ಅಥವಾ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಅಪರಾಧಿಗಳೊಂದಿಗೆ ಮುಖಾಮುಖಿಯಾಗುವುದು ಎಂದು ಹೇಳಲಾಗುವ) ಯಾವುದೇ ನಿರ್ದಿಷ್ಟ ಕಾನೂನಿನ ಅಡಿಯಲ್ಲಿ ಅನುಮತಿಸಲ್ಪಟ್ಟಿಲ್ಲ. ಆದರೆ, ಕೆಲವು ಕಾನೂನುಬದ್ಧ ತತ್ವಗಳು ಮತ್ತು ನ್ಯಾಯಾಲಯದ ಮಾರ್ಗಸೂಚಿಗಳು ಪೊಲೀಸರಿಗೆ ಅತ್ಯಂತ ಅನಿವಾರ್ಯ ಸಂದರ್ಭಗಳಲ್ಲಿ ಸ್ವಯಂ-ರಕ್ಷಣೆ ಅಥವಾ ಸಾರ್ವಜನಿಕ ಸುರಕ್ಷತೆಗಾಗಿ ಬಲಪ್ರಯೋಗದ ಅಗತ್ಯವಿದ್ದಾಗ ಸೀಮಿತ ಸನ್ನಿವೇಶಗಳಲ್ಲಿ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡುತ್ತವೆ.

ಭಾರತೀಯ ದಂಡ ಸಂಹಿತೆ (IPC) – ಸ್ವಯಂ-ರಕ್ಷಣೆಯ ಹಕ್ಕು ಅಡಿಯಲ್ಲಿ IPC ಸೆಕ್ಷನ್ 96 ರಿಂದ 106: ಯಾವುದೇ ವ್ಯಕ್ತಿ (ಪೊಲೀಸರನ್ನು ಒಳಗೊಂಡಂತೆ) ತಮ್ಮ ಅಥವಾ ಇತರರ ಜೀವ, ದೇಹ, ಅಥವಾ ಸ್ವತ್ತನ್ನು ರಕ್ಷಿಸಲು ಸ್ವಯಂ-ರಕ್ಷಣೆಯ ಹಕ್ಕನ್ನು ಹೊಂದಿದ್ದಾರೆ. ಈ ಹಕ್ಕು ಅತ್ಯಾವಶ್ಯಕ ಮತ್ತು ಸಮಾನ ಪ್ರಮಾಣದ ಬಲಪ್ರಯೋಗದವರೆಗೆ ಮಾತ್ರ ಮಾನ್ಯವಾಗಿದೆ.
ಇದನ್ನೂ ಓದಿರಿ: ಕರ್ನಾಟಕದಲ್ಲಿ ಬಲಪಂಥದ ಬೇರುಗಳು (ಭಾಗ- 2)
IPC ಸೆಕ್ಷನ್ 100: ಜೀವಕ್ಕೆ ಅಪಾಯವಿದ್ದಾಗ, ಸಾವು ಕೂಡಾ ಕಾರಣವಾಗಬಹುದಾದ ದಾಳಿಯನ್ನು ಎದುರಿಸಲು ಪ್ರಾಣಾಪಾಯಕಾರಿ ಬಲಪ್ರಯೋಗವನ್ನು ಬಳಸುವುದನ್ನು ಅನುಮತಿಸುತ್ತದೆ. (ಈಗ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತೆ ಎಂದು ಬದಲಾಯಿಸಲಾಗಿದೆ. ಆದರೆ ಈ ಹಿಂದಿನ ಕಾನೂನುಗಳೇ ಒಂದಲ್ಲ ಒಂದು ರೀತಿ ಮುಂದುವರಿದಿವೆ).
ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ (CrPC) – ಅರೆಸ್ಟ್ ಮಾಡುವಾಗ ಬಲಪ್ರಯೋಗ CrPC ಸೆಕ್ಷನ್ 46: ಪೊಲೀಸರು ಅರೆಸ್ಟ್ ಮಾಡುವಾಗ, ಅನಿವಾರ್ಯವಿದ್ದಲ್ಲಿ ಅಗತ್ಯವಾದ ಬಲಪ್ರಯೋಗವನ್ನು ಬಳಸಬಹುದು. ಈ ಸೆಕ್ಷನ್ ಪ್ರಕಾರ, ಅಪರಾಧಿಯು ಹಿಂಸಾತ್ಮಕವಾಗಿ ಪ್ರತಿರೋಧಿಸಿದರೆ ಅಥವಾ ಪಲಾಯನ ಮಾಡಲು ಪ್ರಯತ್ನಿಸಿದರೆ, ಪೊಲೀಸರು ಸಾವನ್ನು ಕೂಡಾ ಕಾರಣವಾಗಿಸುವ ಬಲಪ್ರಯೋಗವನ್ನು ಬಳಸಬಹುದು. ಆದರೆ, ಇದು ಕೇವಲ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಅಪರಾಧಗಳಲ್ಲಿ ಮಾತ್ರ ಮಾನ್ಯವಾಗಿದೆ.
ನಕಲಿ ಎನ್ಕೌಂಟರ್‌ಗಳನ್ನು ತಡೆಗಟ್ಟುವ ಕ್ರಮಗಳ ಸಲುವಾಗಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು (2014) ಹೊರಬಿದ್ದಿವೆ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) vs ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಎನ್‌ಕೌಂಟರ್‌ಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ನಿಯಮಗಳನ್ನು ಹೊರಡಿಸಿತು ಮತ್ತು ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ 16 ಹಂತಗಳ ಮಾರ್ಗಸೂಚಿಗಳನ್ನು ಪ್ರಕಟಿಸಿತು.
ಅನಿವಾರ್ಯ ತನಿಖೆ: ಪ್ರತಿ ಎನ್‌ಕೌಂಟರ್ ಪ್ರಕರಣವನ್ನು ಕೂಡ ಸ್ವತಂತ್ರ ನ್ಯಾಯಾಲಯದ ಮುಂದೆ (ಮ್ಯಾಜಿಸ್ಟ್ರೇಟ್) ತನಿಖೆ ಮಾಡಬೇಕು.
FIR ನೋಂದಣಿ: ಎನ್ಕೌಂಟರ್ ಮಾಡಿರುವ ಪೊಲೀಸ್ ತಂಡದ ವಿರುದ್ಧ ಕಡ್ಡಾಯವಾಗಿ FIR ನೋಂದಾಯಿಸಬೇಕು.
CBI/ಸ್ವತಂತ್ರ ತನಿಖೆ: ಸಾವು ಸಂಭವಿಸಿದ್ದರೆ, ತನಿಖೆಯನ್ನು CBI ಅಥವಾ ಇನ್ನೊಂದು ಸ್ವತಂತ್ರ ಸಂಸ್ಥೆ ನಡೆಸಬೇಕು.
ಇದಲ್ಲದೇ ಮಾನವ ಹಕ್ಕುಗಳ ಆಯೋಗದ (NHRC) ಮಾರ್ಗಸೂಚಿಗಳ ಅನ್ವಯ ಎನ್‌ಕೌಂಟರ್ ನಂತರ 48 ಗಂಟೆಗಳೊಳಗೆ NHRCಗೆ ವರದಿ ಸಲ್ಲಿಸಬೇಕು.
ಫೇಕ್ ಎನ್‌ಕೌಂಟರ್ ಮೂಲಕ ಪೊಲೀಸರು ಉದ್ದೇಶಪೂರ್ವಕವಾಗಿ ನಿರಪರಾಧಿಯನ್ನು ಕೊಂದರೆ, ಅದು IPC ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಅಪರಾಧವಾಗಿದೆ. ಉದಾಹರಣೆಗೆ ಹೇಳುವುದಾದರೆ 1982ರ ಗೋಂಡಾ ಎನ್‌ಕೌಂಟರ್ ಪ್ರಕರಣದಲ್ಲಿ ಆಪಾದಿತ ಪೊಲೀಸ್ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಲಾಯಿತು.
ಇದನ್ನೂ ಓದಿರಿ: ಕಳೆದ 50 ವರ್ಷಗಳ ಕರ್ನಾಟಕ ರಾಜಕಾರಣದಲ್ಲಿ ‘ಪ್ರಗತಿಪರ ಚಿಂತನೆ’ ಎಡವಿದ್ದೆಲ್ಲಿ? (ಭಾಗ- 1)
ಪೊಲೀಸ್ ಇಮ್ಯುನಿಟಿ: ಪೊಲೀಸರು ತಮ್ಮ ಕ್ರಮವನ್ನು ಸ್ವಯಂ-ರಕ್ಷಣೆ ಎಂದು ಸಾಬೀತುಪಡಿಸಲು ಸೂಕ್ತ ಪುರಾವೆ ಅಥವಾ ಸಾಕ್ಷ್ಯಗಳನ್ನು ಒದಗಿಸಲೇಬೇಕು. ಇಲ್ಲದಿದ್ದರೆ, IPC ಸೆಕ್ಷನ್ 166 (ಕರ್ತವ್ಯದ ನಿರ್ಲಕ್ಷ್ಯ) ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು.
ಎನ್‌ಕೌಂಟರ್‌ಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕೂಡ ಕೆಲವು ಮಾರ್ಗಸೂಚಿಗಳು ಮತ್ತು ಅನುಸರಿಸಲೇಬೇಕಾದ ಕ್ರಮಗಳನ್ನು ಘೋಷಿಸಿದೆ.
{NHRC ಅನ್ನು ಮಾನವ ಹಕ್ಕುಗಳ ಸಂರಕ್ಷಣಾ ಕಾಯಿದೆ, 1993 (PHRA) ರ ಪ್ರಕಾರ ಸ್ಥಾಪಿಸಲಾಯಿತು. ಇದರ ಮುಖ್ಯ ಮತ್ತು ಪ್ರಾಥಮಿಕ ಉದ್ದೇಶವೆಂದರೆ ಸಾರ್ವಜನಿಕ ಸೇವಕರು ಅಥವಾ ಸರ್ಕಾರಿ ಸಂಸ್ಥೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ತನಿಖೆ ಮಾಡುವುದು ಮತ್ತು ಅವುಗಳ ತಡೆಗಟ್ಟುವಿಕೆಗೆ ಬೇಕಾದ ಕ್ರಮಗಳ ಶಿಫಾರಸು ಮಾಡುವುದು. ಇದರಲ್ಲಿ ಪೊಲೀಸ್ ಎನ್‌ಕೌಂಟರ್‌ಗಳ ಸಂದರ್ಭದಲ್ಲಿ ನಡೆದ ಅತಿರೇಕಗಳು ಕೂಡಾ ಸೇರಿವೆ}
ಪೊಲೀಸ್ ಎನ್‌ಕೌಂಟರ್‌ಗಳಿಗೆ ಸಂಬಂಧಿಸಿದ NHRC ಮಾರ್ಗಸೂಚಿಗಳು ಏನೇನು ಇವೆ ಎಂದರೆ-
Immediate report (ತತ್‌ಕ್ಷಣದ ವರದಿ): ಯಾವುದೇ ಎನ್‌ಕೌಂಟರ್ ನಡೆದರೆ, ಪೊಲೀಸರು 48 ಗಂಟೆಗಳೊಳಗೆ NHRCಗೆ ವಿವರವಾದ ವರದಿ ಸಲ್ಲಿಸಬೇಕು. ಇದು ಸಾವು, ಗಾಯ ಅಥವಾ ಸಾರ್ವಜನಿಕರಿಗೆ ಹಾನಿಯಾದ ಸಂದರ್ಭಗಳಿಗೆ ಅನ್ವಯಿಸುತ್ತದೆ.
ಸ್ವತಂತ್ರ ತನಿಖೆ: ಎನ್‌ಕೌಂಟರ್ ಪ್ರಕರಣಗಳನ್ನು ಮ್ಯಾಜಿಸ್ಟ್ರೇಟ್ ಅಥವಾ ಸ್ವತಂತ್ರ ಸಂಸ್ಥೆ (ಉದಾ: CBI) ತನಿಖೆ ಮಾಡಬೇಕು. ಪೊಲೀಸ್ ಇಲಾಖೆಯ ವಿರುದ್ಧ FIR ನೋಂದಣೆ ಕಡ್ಡಾಯ.
ಪಾರದರ್ಶಕತೆ: ಎನ್‌ಕೌಂಟರ್‌ಗಳಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳ ವಿವರಗಳು, ಗುಂಡಿನ ಬಳಕೆ ಮತ್ತು ಸಾಕ್ಷ್ಯಗಳ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು.
ಪ್ರಮುಖ ಪ್ರಕರಣಗಳು ಮತ್ತು NHRC ಹಸ್ತಕ್ಷೇಪ
1. 1993 ಮುಂಬೈ ಎನ್‌ಕೌಂಟರ್ ಪ್ರಕರಣ: ಮುಂಬೈನಲ್ಲಿ ನಡೆದ ಹಲವಾರು “ಫೇಕ್ ಎನ್‌ಕೌಂಟರ್‌ಗಳ” ಬಗ್ಗೆ NHRC ತನಿಖೆ ನಡೆಸಿ, ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತು.
2. 2009 ಆಂಧ್ರಪ್ರದೇಶ ಎನ್‌ಕೌಂಟರ್: ನಕ್ಸಲ್ ಚಳವಳಿಯ ಸಂದರ್ಭದಲ್ಲಿ ನಡೆದ ಎನ್‌ಕೌಂಟರ್‌ಗಳನ್ನು NHRC ತನಿಖೆ ಮಾಡಿ, ಪೊಲೀಸ್ ಕ್ರಮಗಳಲ್ಲಿ ಕ್ರೂರತೆ ಮತ್ತು ಪ್ರಮಾಣಾತೀತ ಬಲಪ್ರಯೋಗದ ಆರೋಪಗಳನ್ನು ದಾಖಲಿಸಿತು.
3. 2016 ಉತ್ತರಪ್ರದೇಶ ಎನ್‌ಕೌಂಟರ್‌ಗಳು: NHRC ಈ ರಾಜ್ಯದಲ್ಲಿ 18 ತಿಂಗಳಲ್ಲಿ ನಡೆದ 1,100 ಎನ್‌ಕೌಂಟರ್‌ಗಳನ್ನು ವಿಚಾರಣೆ ಮಾಡಿ, ಅನೇಕವು ನ್ಯಾಯಸಮ್ಮತವಲ್ಲದ ಹತ್ಯೆಗಳೆಂದು ಟೀಕಿಸಿತು.
NHRCಯು 2024-25ರ ಸಾಲಿನಲ್ಲಿ ಅಂದರೆ ಮಾರ್ಚ್ 2025ರ ವೇಳೆಗೆ ದೇಶದಲ್ಲಿ 58,741 ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳನ್ನು ಸ್ವೀಕರಿಸಿದೆ, ಅದರಲ್ಲಿ ಎನ್‌ಕೌಂಟರ್‌ಗಳು ಗಮನಾರ್ಹ ಪ್ರಮಾಣದಲ್ಲಿವೆ.
ಇದನ್ನೂ ಓದಿರಿ: ಕಳೆದ 50 ವರ್ಷಗಳ ಕರ್ನಾಟಕ ರಾಜಕಾರಣದಲ್ಲಿ ‘ಪ್ರಗತಿಪರ ಚಿಂತನೆ’ ಎಡವಿದ್ದೆಲ್ಲಿ? (ಭಾಗ- 2)
NHRC ಸೆಮಿನಾರ್‌ಗಳು, ಶೈಕ್ಷಣಿಕ ಪ್ರವಾಸಗಳು ಮತ್ತು ಮೀಡಿಯಾ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ ಎನ್‌ಕೌಂಟರ್‌ಗಳ ಪಾರದರ್ಶಕತೆ ಬಗ್ಗೆ ಜನರನ್ನು ಸಂವೇದನಾಶೀಲಗೊಳಿಸುತ್ತಿದೆ.
NHRC ಎನ್‌ಕೌಂಟರ್‌ಗಳ ಸಂದರ್ಭದಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸಲು ಕಾನೂನುಬದ್ಧ ಮತ್ತು ನೈತಿಕ ಚೌಕಟ್ಟನ್ನು ನೀಡುತ್ತದೆ. ಆದರೆ, ರಾಜ್ಯಗಳ ಸಹಕಾರ ಮತ್ತು ಸಾರ್ವಜನಿಕ ಒತ್ತಾಯದ ಅಗತ್ಯವಿದೆ. 2014ರ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಮತ್ತು PHRAನ ಅಡಿಯಲ್ಲಿ NHRCನ ಪಾತ್ರವು ಮುಖ್ಯವಾಗಿದ್ದರೂ, ಅದರ ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರುವುದು ಸವಾಲಾಗಿಯೇ ಉಳಿದಿದೆ.
ಫೇಕ್ ಎನ್‌ಕೌಂಟರ್‌ಗಳು (Fake Encounters) ಎಂದರೆ- ಪೊಲೀಸ್ ಅಥವಾ ಭದ್ರತಾ ಪಡೆಗಳು ಕಾನೂನಿನ ಹೊರಗಡೆ ವ್ಯಕ್ತಿಗಳನ್ನು ಹತ್ಯೆ ಮಾಡುವುದಾಗಿದೆ. ಅಪರಾಧಿಗಳನ್ನು ಅಥವಾ ಉಗ್ರರನ್ನೇ ಲಕ್ಷ್ಯವಿಟ್ಟರೂ, ನ್ಯಾಯಾಂಗ ಪ್ರಕ್ರಿಯೆ ಇಲ್ಲದೆ, ನ್ಯಾಯಾಲಯದ ಆದೇಶವಿಲ್ಲದೆ ಅಂಥವರ ವಿರುದ್ಧ ಸರ್ಕಾರದ ಅಧಿಕಾರಿಗಳೇ ನ್ಯಾಯಾಧೀಶರಂತೆ ವರ್ತಿಸುವುದು ಭದ್ರತಾ ವ್ಯವಸ್ಥೆಗೆ ಅಪಾಯಕಾರಿ. ಭಾರತೀಯ ಸಂವಿಧಾನ, ನ್ಯಾಯವ್ಯವಸ್ಥೆ ಮತ್ತು ಮಾನವ ಹಕ್ಕುಗಳ ದೃಷ್ಟಿಯಿಂದ ಇದು ಖಂಡಿತವಾಗಿಯೂ ತಪ್ಪು ಕ್ರಮವಾಗಿದೆ. ಇದನ್ನು “ಎಕ್ಸ್‌ಟ್ರಾ-ಜ್ಯುಡಿಷಿಯಲ್ ಕಿಲ್ಲಿಂಗ್” ಅಥವಾ “ನ್ಯಾಯದ ಹೊರಗಿನ ಹತ್ಯೆ” ಎಂದೂ ಕರೆಯಲಾಗುತ್ತದೆ.
ಫೇಕ್ ಎನ್‌ಕೌಂಟರ್‌ಗಳು ತಪ್ಪು ಯಾಕೆ?
ಇದು ಸಂವಿಧಾನದ ಉಲ್ಲಂಘನೆ: ಭಾರತೀಯ ಸಂವಿಧಾನದ ಅನುಚ್ಛೇದ 21ರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಗೂ “ಬಾಳುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ” ಸಿದ್ಧವಾಗಿರುತ್ತದೆ. ನ್ಯಾಯಾಲಯದ ಆದೇಶವಿಲ್ಲದೇ ಯಾರನ್ನೂ ಜೀವದಿಂದ ವಂಚಿಸುವ ಹಕ್ಕು ಯಾರಿಗೂ ಇಲ್ಲ.
ಇದು ನ್ಯಾಯ ವ್ಯವಸ್ಥೆಗೆ ಮಾಡುವ ಅವಮಾನ: ಯಾರಾದರೂ ಅಪರಾಧಿಗೆ ಶಿಕ್ಷೆ ಕೊಡಬೇಕು ಎಂದರೆ ಅದು ನ್ಯಾಯಾಲಯದ ಮೂಲಕವೇ ನಡೆಯಬೇಕು. ಪೊಲೀಸರು ಅಥವಾ ಯಾವುದೇ ಭದ್ರತಾ ಪಡೆಗಳು ತಮ್ಮದೇ ಆದ ತೀರ್ಪು ಕೊಟ್ಟು ಶಿಕ್ಷೆ ನೀಡುವುದು ನ್ಯಾಯದ ಭಂಗವಾಗಿದೆ.
ಮಾನವ ಹಕ್ಕುಗಳ ಉಲ್ಲಂಘನೆ: ಫೇಕ್ ಎನ್‌ಕೌಂಟರ್‌ಗಳು ಬಹುತೇಕ ಮಾನವ ಹಕ್ಕುಗಳ ಉಲ್ಲಂಘನೆಯಾಗಿವೆ. ಒಬ್ಬ ವ್ಯಕ್ತಿಯು ತಪ್ಪಿತಸ್ಥನೋ, ನಿರಪರಾಧಿಯೋ ಎಂಬುದನ್ನು ನಿರ್ಧರಿಸುವ ಅಧಿಕಾರ ಕೇವಲ ನ್ಯಾಯಾಲಯಕ್ಕಷ್ಟೆ ಇದೆ.
ಬಹುತೇಕ ಎನ್‌ಕೌಂಟರ್‌ಗಳು ವ್ಯಕ್ತಿಗತ ಹಿಂಸೆ ಅಥವಾ ರಾಜಕೀಯ ಪ್ರತೀಕಾರದ ಸಾಧನ: ಹೆಚ್ಚಾಗಿ ಇವು ರಾಜಕೀಯವಾಗಿ ಪ್ರೇರಿತವಾಗಿರುತ್ತವೆ ಅಥವಾ ವ್ಯಕ್ತಿಗತ ದ್ವೇಷದ ಫಲವಾಗಿ ನಡೆಯುತ್ತವೆ. ಕೆಲವೊಮ್ಮೆ ಪೊಲೀಸ್ ಅಧಿಕಾರಿಗಳು ತಮ್ಮ ಪ್ರಚಾರಕ್ಕಾಗಿ ಇಂತಹ ಘಟನೆಗಳಿಗೆ ಮುಂದಾಗುತ್ತಾರೆ.
ನಕಲಿ ಎನ್‌ಕೌಂಟರ್‌ಗಳ ಪರಿಣಾಮಗಳು
ಸಾರ್ವಜನಿಕರಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ
ಪೊಲೀಸ್ ವ್ಯವಸ್ಥೆಯ ಮೇಲೆ ವಿಶ್ವಾಸ ಹದಗೆಡುತ್ತದೆ
ರಾಜಕೀಯ ದುರುಪಯೋಗಗಳಾಗುವ ಸಾಧ್ಯತೆಗಳು ಜಾಸ್ತಿ
ನಿರಪರಾಧಿಗಳು ಷಡ್ಯಂತ್ರಕ್ಕೆ ಬಲಿಯಾಗುವ ಸಾಧ್ಯತೆ
ಫೇಕ್ ಎನ್‌ಕೌಂಟರ್‌ಗಳು ಒಂದು ತಾತ್ಕಾಲಿಕ ‘ತೀವ್ರ ಕ್ರಮ’ ಎಂದು ಕಾಣಿಸಿಕೊಂಡರೂ, ಅವು ನಿಜವಾಗಲೂ ಮಾನವ ಹಕ್ಕುಗಳ, ಸಂವಿಧಾನದ ಮತ್ತು ನ್ಯಾಯದ ಭಂಗವನ್ನೇ ಸೂಚಿಸುತ್ತವೆ. ನಮ್ಮ ಸುಪ್ರೀಂ ಕೋರ್ಟ್‌ನ ತೀರ್ಪುಗಳು ಈ ವಿಚಾರದಲ್ಲಿ ಬಹುಮಟ್ಟಿಗೆ ನ್ಯಾಯಸಮ್ಮತ ಹಾಗೂ ಸುದೀರ್ಘ ದೃಷ್ಟಿಕೋನ ಹೊಂದಿದ್ದು, ಭವಿಷ್ಯದಲ್ಲಿ ಫೇಕ್ ಎನ್ಕೌಂಟರ್‌ಗಳನ್ನು ತಪ್ಪಿಸಲೇಬೇಕೆಂಬ ಪ್ರಯತ್ನಗಳಾಗಿವೆ.
ಇದನ್ನೂ ಓದಿರಿ: ಐದು ದಶಕಗಳ ಲಿಂಗಾನುಪಾತ; ಆತಂಕಕಾರಿ ಸಂಗತಿಗಳೇನು?
ಸಮಾಜದಲ್ಲಿ ಶಾಂತಿ ಹಾಗೂ ನ್ಯಾಯವು ಇರಬೇಕಾದರೆ, ಕಾನೂನು ನಿಯಮಗಳನ್ನು ಉಲ್ಲಂಘಿಸದೆ, ಎಲ್ಲ ಪ್ರಕರಣಗಳು ನ್ಯಾಯಾಂಗದ ಮುಂದೆಯೇ ಹೋಗಬೇಕು. ಪೊಲೀಸರ ಕೆಲಸ ಅಪರಾಧಿಗಳನ್ನು ಬಂಧಿಸುವುದೇ ಹೊರತು ನ್ಯಾಯ ನಿರ್ಧಾರ ಮಾಡುವುದಲ್ಲ. ಪೊಲೀಸ್ ಇಲಾಖೆಯು ತನ್ನ ಅಧಿಕಾರವನ್ನು ದುರುಪಯೋಗ ಮಾಡದಂತೆ, ತನಗೆ ಸಂವಿಧಾನದ ಪರಿಧಿಯಲ್ಲಿ ಕೆಲಸ ಮಾಡುವ ನೈತಿಕ ಜವಾಬ್ದಾರಿ ಇದೆಯೆಂಬುದನ್ನು ಮರೆಯಬಾರದು.
ನಕಲಿ ಎನ್ಕೌಂಟರ್‌ಗಳ ವಿಚಾರದಲ್ಲಿ ನಮ್ಮ ರಾಜ್ಯವು ಕೂಡಾ ಬೆನ್ನು ತಟ್ಟಿಕೊಳ್ಳುವಂತಿಲ್ಲ, ಬಸವಣ್ಣನ ನಾಡು ಕನ್ನಡನಾಡಿನಲ್ಲಿ ಕೂಡಾ ನಕಲಿ ಎನ್‌ಕೌಂಟರ್‌ಗಳು ಬಹಳಷ್ಟು ನಡೆದಿವೆ, ಅದರಲ್ಲಿ ಮೊನ್ನೆ ನಡೆದ ಹುಬ್ಬಳ್ಳಿ ಎನ್‌ಕೌಂಟರ್ ಮೊದಲನೆಯದ್ದು ಏನೂ ಅಲ್ಲ. ನಮ್ಮ ರಾಜ್ಯದ ಇತಿಹಾಸ ನೋಡುವುದಾದರೆ-
1. ಉಪ್ಪಾರಪೇಟೆ ಎನ್‌ಕೌಂಟರ್ – ಬೆಂಗಳೂರು (1999)
1999ರ ಜುಲೈನಲ್ಲಿ ಬೆಂಗಳೂರು ನಗರದ ಉಪ್ಪಾರಪೇಟೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಯುವಕರನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದರು. ಪೊಲೀಸರ ಪ್ರಕಾರ ಅವರು ಅಪರಾಧಿಗಳಾಗಿದ್ದರು, ಆದರೆ ಕುಟುಂಬದವರು ಮತ್ತು ಮಾನವ ಹಕ್ಕು ಹೋರಾಟಗಾರರು ಈ ಎನ್‌ಕೌಂಟರ್ ನಕಲಿ ಎಂದು ಆಕ್ಷೇಪಿಸಿದರು.
ಮಾನವ ಹಕ್ಕುಗಳ ಆಯೋಗ (NHRC) ಮತ್ತು ಹಲವು ಸಂಸ್ಥೆಗಳು ಈ ಪ್ರಕರಣದಲ್ಲಿ ತನಿಖೆ ನಡೆಸಿದವು. ತದಂತರ, ಪ್ರಕರಣವು ನ್ಯಾಯಾಲಯದ ಹಂತಕ್ಕಿಂತ ಮೊದಲೇ ಸೂಕ್ಷ್ಮ ರಾಜಕೀಯ ತಿರುವು ಪಡೆದು ನಿಧಾನವಾಗಿ ಮಸುಕಾಯಿತು.
ಚಿಕ್ಕಮಗಳೂರು, ಕೊಡಗು, ಬಳ್ಳಾರಿ (2005–2010)
ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ (ವಿಶೇಷವಾಗಿ ಮಲೆನಾಡು ಭಾಗಗಳಲ್ಲಿ) ನಡೆದ ಕೆಲವು ಎನ್‌ಕೌಂಟರ್‌ಗಳಲ್ಲಿ ಯುವಕರನ್ನು ನಕ್ಸಲರು ಎಂದು ಹತ್ಯೆ ಮಾಡಿರುವ ಆರೋಪಗಳು ಕೇಳಿಬಂದಿದ್ದವು. ಮಾನವ ಹಕ್ಕುಗಳ ಹೋರಾಟಗಾರರು ಇವುಗಳನ್ನು ನಕಲಿ ಎನ್‌ಕೌಂಟರ್ ಎಂದು ತೀವ್ರವಾಗಿ ಟೀಕಿಸಿದರು.
2005ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸಿನಹಾಡ್ಯದ ಬಳಿ ನಕ್ಸಲೈಟ್ ಎಂದು ಹೇಳಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಮೂವರನ್ನು ಹತ್ಯೆ ಮಾಡಿದರು. ನಂತರದ ತನಿಖೆಗಳಲ್ಲಿ ಹತ್ಯೆಗೀಡಾದವರಿಗೆ ನಕ್ಸಲ್ ಸಂಪರ್ಕ ಇಲ್ಲ ಎನ್ನುವ ಸಾಧ್ಯತೆಗಳೂ ಹೊರಬಂದವು.
ಬೈರೇಗೌಡ ಎನ್‌ಕೌಂಟರ್ – ರಾಮನಗರ (2021)
2021ರಲ್ಲಿ ರಾಮನಗರದ ಬೈರೇಗೌಡ ಎಂಬ ವ್ಯಕ್ತಿಯು ಹಲವಾರು ಅಪರಾಧ ಪ್ರಕರಣಗಳಲ್ಲಿ ಶಂಕಿತನಾಗಿ ಬಂಧಿತನಾಗಿದ್ದ. ಪೊಲೀಸರು ಆರೋಪಿಸಿದಂತೆ, ಬಂಧನದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಡೆದ ಎನ್‌ಕೌಂಟರ್‌ನಲ್ಲಿ ಬೈರೇಗೌಡನನ್ನು ಹತ್ಯೆ ಮಾಡಿದರು. ಕಟ್ಟುನಿಟ್ಟಾದ ಪೊಲೀಸ್ ಭದ್ರತೆ ನಡುವೆ ಅಪರಾಧಿಯೊಬ್ಬ ತಪ್ಪಿಸಿಕೊಳ್ಳಲು ಯತ್ನಿಸುವುದು ಸಾಧ್ಯ ಅಲ್ಲವಲ್ಲ? ಎಂದು ಮಾನವ ಹಕ್ಕು ಹೋರಾಟಗಾರರು ಪ್ರಶ್ನೆ ಎತ್ತಿದರು. ಕೆಲವು ಸಂಘಟನೆಗಳು ಇದು ನಕಲಿ ಎನ್‌ಕೌಂಟರ್ ಆಗಿರಬಹುದು ಎಂದು ಹೇಳಿದವು, ಆದರೆ ಅಧಿಕೃತ ತನಿಖೆ ಈವರೆಗೂ ಸ್ಪಷ್ಟ ವರದಿಯನ್ನು ನೀಡಿಲ್ಲ.
ಇದನ್ನೂ ಓದಿರಿ: ಗಂಗೆಯ ಒಡಲಿಗೆ ‘ವಿಷ’ದ ಸಂಕಟ; ವೈಜ್ಞಾನಿಕ ಸತ್ಯಗಳಿಗೆ ಬೆನ್ನು ತಿರುಗಿಸಲಾದೀತೆ?
“If policemen become criminals, the rule of law will collapse.” ಇದು ನಕಲಿ ಎನ್ಕೌಂಟರ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮಾರ್ಕಂಡೇಯ ಖಾಟ್ಜು ಉಲ್ಲೇಖಿಸಿರುವ ಮಾತು. ಬಹುಶಃ ರಾಜ್ಯದ ಮಾಧ್ಯಮಗಳು, ಪ್ರಜ್ಞಾವಂತರು ಈ ಮಾತಿನ ಅರ್ಥವನ್ನು ಮನದಟ್ಟು ಮಾಡಿಕೊಂಡು, ನಮ್ಮ ದೇಶದಲ್ಲಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ, ತಾಲಿಬಾನ್ ವ್ಯವಸ್ಥೆಯಲ್ಲ ಎಂದು ಅರಿತುಕೊಂಡು ಎನ್‌ಕೌಂಟರ್‌ಗಳನ್ನು ಸಂಭ್ರಮಿಸುವುದನ್ನು ನಿಲ್ಲಿಸಿ, ಪ್ರಶ್ನಿಸುವುದನ್ನು ರೂಢಿಸಿಕೊಂಡರೆ ಪ್ರಜಾಪ್ರಭುತ್ವಕ್ಕೂ ಅರ್ಥ ಬರುತ್ತದೆ.

ದರ್ಶನ್ ಜೈನ್
ಆಮ್ ಆದ್ಮಿ ಪಕ್ಷದ ಮುಖಂಡರಾದ ದರ್ಶನ್ ಜೈನ್ ಅವರು, ಸಮಕಾಲೀನ ರಾಜಕೀಯ ವಿಚಾರಗಳ ಸಮರ್ಥ ವಿಶ್ಲೇಷಕರೂ ಹೌದು




