ರೈತ ಚಳವಳಿ; 50 ವರ್ಷಗಳಲ್ಲಿ ಕರ್ನಾಟಕ ಕಂಡ ಪಲ್ಲಟಗಳೇನು? (ಭಾಗ-2)

Date:

(ಮುಂದುವರಿದ ಭಾಗ..) ಕೃಷಿಯಲ್ಲಿ ಬಂಡವಾಳಶಾಹಿ ಉತ್ಪಾದನಾ ಸಂಬಂಧಗಳ ಬೆಳವಣಿಗೆ, ಸಾಮ್ರಾಜ್ಯಶಾಹಿ ಪ್ರೇರಿತ ಜಾಗತೀಕರಣ, ಉದಾರೀಕರಣ ನೀತಿಗಳ ಪರಿಣಾಮಗಳು ಕೃಷಿ ಬಿಕ್ಕಟ್ಟನ್ನು ತೀವ್ರಗೊಳಿಸಿತು. ಬಂಡವಾಳಶಾಹಿ ರೈತರು, ದೊಡ್ಡ ವ್ಯಾಪಾರಿಗಳು, ಗ್ರಾಮೀಣ ಶ್ರೀಮಂತರು ಒಂದು ಕಡೆ ಹಾಗೂ ಕೃಷಿ ಕೂಲಿಕಾರರು, ಬಡ ರೈತರು, ದೈಹಿಕ ದುಡಿಮೆಗಾರರು, ಕುಶಲಕರ್ಮಿಗಳು ಮತ್ತೊಂದು ಕಡೆ ವಿಭಜನೆಗೊಂಡ ಒಂದು ಗ್ರಾಮೀಣ ಚಿತ್ರಣ ಸ್ಪಷ್ಟವಾಗಿ ಎದ್ದುಕಾಣುವ ಬೆಳವಣಿಗೆ ಈ ಅವಧಿಯ ಪ್ರಧಾನ ಗುಣಲಕ್ಷಣವಾಯಿತು. ಗ್ರಾಮೀಣ ಶ್ರೀಮಂತರ ವಿಭಾಗಗಳೂ ಜಾಗತೀಕರಣ ಧೋರಣೆಗಳಿಂದಾಗಿ ತೀವ್ರ ಸಂಕಟವನ್ನು ಎದುರಿಸುವ ಪರಿಸ್ಥಿತಿ ಉಂಟಾಯಿತು. ಇವೆಲ್ಲದರ ಫಲವಾಗಿ ಗ್ರಾಮೀಣಾಭಿವೃದ್ಧಿ ಅಸಾಧ್ಯವೆಂಬ ಪರಿಸ್ಥಿತಿಯನ್ನು ಸೃಷ್ಟಿಸಿತು. ಇದರಿಂದಾಗಿ ಕೃಷಿಯಲ್ಲಿ ಉತ್ಪಾದನಾ ವೆಚ್ಚ ವಿಪರೀತವಾಗಿ ಏರಿಕೆ ಕಂಡಿತು. ಅದೇ ಸಂದರ್ಭದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಕೃಷಿ ಉತ್ಪನ್ನಗಳ ತಡೆ ರಹಿತ ಹಾಗೂ ಸುಂಕ ರಹಿತ ಅಥವಾ ಸುಂಕ ನಗಣ್ಯ ಆಮದು ಪ್ರೋತ್ಸಾಹದಿಂದ ಕೃಷಿ ಉತ್ಪನ್ನಗಳ ಬೆಲೆಗಳು ತೀವ್ರವಾಗಿ ಕುಸಿತ ಕಾಣಲಾರಂಭಿಸಿದವು. 

ಕೃಷಿ ರಂಗದ ಪ್ರತಿಯೊಂದು ವಲಯದಲ್ಲಿಯೂ ಬಹುರಾಷ್ಟ್ರೀಯ ಕಂಪನಿಗಳು ಆಕ್ರಮಣಕಾರಿಯಾದ ರೀತಿಯಲ್ಲಿ ಪ್ರವೇಶ ಪಡೆದು ಇಡೀ ಕೃಷಿ ರಂಗವನ್ನು ಆವರಿಸಿದವು. ಕೃಷಿ ರಂಗದಲ್ಲಿ ಉಂಟಾದ ತೀವ್ರ ಪ್ರಮಾಣದ ಅಭದ್ರತೆಯಿಂದ ಕೃಷಿ ವೆಚ್ಚ ಮತ್ತು ಜೀವನ ವೆಚ್ಚಗಳ ಮೇಲೆ ತೀವ್ರ ಪರಿಣಾಮಗಳು ಉಂಟಾಗಿ ಸಾವಿರಾರು ಸಂಖ್ಯೆಯ ರೈತರು ಆತ್ಮಹತ್ಯೆಗಿಳಿಯುವಂತಹ ಸನ್ನಿವೇಶಗಳು ಸೃಷ್ಟಿಯಾದವು.

ಜಾಗತೀಕರಣ ಧೋರಣೆಗಳ ಅನುಷ್ಠಾನವು ತನ್ನ ಪರಿಣಾಮಗಳನ್ನು ಬೀರುವ ಮೊದಲೇ ರಾಜ್ಯದ ರೈತ ಚಳವಳಿಗಳು ಈ ನೀತಿಗಳ-ಧೋರಣೆಗಳ ವಿರುದ್ಧ ಬಹಳ ದೊಡ್ಡ ಪ್ರಚಾರಾಂದೋಲನಗಳನ್ನು ನಡೆಸಿವೆ. ಗ್ಯಾಟ್, ಡೆಂಕಲ್, ವಿಶ್ವ ವಾಣಿಜ್ಯ ಸಂಸ್ಥೆ (WTO) ಒಪ್ಪಂದಗಳ ದುಷ್ಪರಿಣಾಮಗಳು ಮತ್ತು ರೈತಾಪಿ ಸಮುದಾಯಕ್ಕೆ ಹಾಗೂ ಇಡೀ ಗ್ರಾಮೀಣ ಸಮುದಾಯಕ್ಕೆ ಉಂಟಾಗಬಹುದಾದ ಅಪಾಯಗಳ ಬಗ್ಗೆ ಇಡೀ ರಾಜ್ಯದ ರೈತರಲ್ಲಿ ಮೂಡಿಸಿದ ಎಚ್ಚರ ಮತ್ತು ಈ ಸಂಬಂಧದ ಹೋರಾಟಗಳು ಈ ಅವಧಿಯಲ್ಲಿ ನಡೆದ ಚಳವಳಿಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿವೆ. ಜಾಗತೀಕರಣ ಧೋರಣೆಗಳ ಮೂವತ್ತು ವರ್ಷಗಳ ನಂತರದ ಬೆಳವಣಿಗೆಗಳು ರೈತ ಚಳವಳಿಗಳ ಭವಿಷ್ಯವನ್ನು ನಿಜವೆಂದು ಸಾಬೀತುಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಅವಧಿಯಲ್ಲಿ ಅಡಿಕೆ, ತೊಗರಿ, ಕಬ್ಬು, ಹತ್ತಿ, ಭತ್ತ, ಮೆಕ್ಕೆ ಜೋಳ ಮುಂತಾದ ಬೆಳೆವಾರು ಪ್ರಶ್ನೆಗಳ ಮೇಲೆ, ರಸಗೊಬ್ಬರ ಬೆಲೆ ಏರಿಕೆ- ಅಭಾವದ ವಿರುದ್ಧ ಸಮಾವೇಶ, ಸಭೆ, ಮೆರವಣಿಗೆಗಳು, ಪ್ರಚಾರ-ಪ್ರಕ್ಷೋಭೆಗಳು ನಡೆದಿವೆ. ಗ್ಯಾಟ್ ವಿರೋಧಿ ಪ್ರಚಾರಾಂದೋಲನಗಳು ಮತ್ತು ಜೈಲ್ ಭರೋದಂತಹ ಹೋರಾಟಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ರೈತರು ಭಾಗಿಯಾಗಿದ್ದಾರೆ.

ಇದನ್ನೂ ಓದಿರಿ: ರೈತ ಚಳವಳಿ; 50 ವರ್ಷಗಳಲ್ಲಿ ಕರ್ನಾಟಕ ಕಂಡ ಪಲ್ಲಟಗಳೇನು? (ಭಾಗ-1)

ಈ ಅವಧಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮಕ್ಕಾಗಿ ಪಾರಂ ನಂ 50 ಹಾಗೂ 53 ರಲ್ಲಿ ಅರ್ಜಿ ಹಾಕಿಕೊಳ್ಳಲು ಅವಕಾಶ ಪಡೆದುಕೊಳ್ಳಲಾಯಿತು.

ವಿದ್ಯುಚ್ಛಕ್ತಿ ಕಡಿತದ ವಿರುದ್ಧ, ಕೃಷ್ಣಾ ಮೆಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ನಡೆದ ಹೋರಾಟಗಳು, ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾನೂನುಗಳನ್ನು ರೈತ ಪರಗೊಳಿಸಲು ನಡೆಸಿದ ಹೋರಾಟಗಳು, ಕೋಲಾರದ ಹಾಲು ಉತ್ಪಾದಕ ರೈತರ ಚಳವಳಿಗಳು, ಹಾನಗಲ್ -ಬ್ಯಾಡಗಿ ಭೂ ಹೋರಾಟ, ಗಂಗಾವತಿ, ಕುಷ್ಠಗಿ, ಚಿಂಚೋಳಿ ಮುಂತಾದ ಕಡೆ ಭೂ ಮಾಲೀಕರು ಹಾಗೂ ಅರಣ್ಯ ಇಲಾಖೆ ದೌರ್ಜನ್ಯ ಎದುರಿಸಿ ನಡೆದ ಹೋರಾಟಗಳು, ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ನಡೆದ ಪ್ರಮುಖ ಹೋರಾಟಗಳಾಗಿದ್ದರೆ, ಕಾರ್ಗಿಲ್ ಮೇಲಿನ ದಾಳಿ, ಸಾಲ ಮನ್ನಾಕ್ಕಾಗಿ ನಡೆದ ಹೋರಾಟಗಳು, ವಿದ್ಯುತ್ ಬಿಲ್ ಪಾವತಿ ನಿರಾಕರಣೆ, ನೀರಾ ಇಳಿಸುವ  ಚಳವಳಿಗಳು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆದ ಹೋರಾಟಗಳಾಗಿವೆ.

ಈ ಅವಧಿಯಲ್ಲಿ ನವೆಂಬರ್ 29, 1991, ಜೂನ್ 16, 1992, ಸೆಪ್ಟೆಂಬರ್ 9, 1993, ಸೆಪ್ಟೆಂಬರ್ 29, 1994 ಸೇರಿದಂತೆ ನಡೆದ  ಅಖಿಲ ಭಾರತ ಮುಷ್ಕರಗಳಲ್ಲಿ ರೈತಾಪಿ ಸಮೂಹ ಬಹಳ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿವೆ.

15 ಏಪ್ರಿಲ್ 1994 ರಂದು ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕದಂತೆ ಒತ್ತಾಯಿಸುವ ರಾಜ್ ಭವನ ಚಲೋದಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಜಲ ಪಿರಂಗಿಯನ್ನು ಬಳಸಲಾಗಿತ್ತು. ಈ ಮೂಲಕ ಪ್ರತಿಭಟನಾಕಾರರ ಮೇಲೆ ಜಲಪಿರಂಗಿ ಬಳಸಿದ ಮೊದಲ ಘಟನೆಯಾಗಿ ಇತಿಹಾಸದಲ್ಲಿ ದಾಖಲಾಯಿತು. 

ಗ್ಯಾಟ್ ವಿರೋಧಿಸಿ 25 ನವೆಂಬರ್ 1992ರಂದು ಮತ್ತು ಏಪ್ರಿಲ್ 5, 1994ರಂದು ನಡೆದ ಪಾರ್ಲಿಮೆಂಟ್ ಚಲೋದಲ್ಲಿ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು. 1994 ಆಗಸ್ಟ್ 15 ರಿಂದ ಸೆಪ್ಟೆಂಬರ್ 6 ರವರೆಗೆ ನಡೆದ ಕಾನೂನು ಭಂಗ ಚಳವಳಿಯಲ್ಲಿ 32 ಸಾವಿರಕ್ಕೂ ಹೆಚ್ಚು ಜನರು ಬಂಧನಕ್ಕೆ ಒಳಗಾಗಿದ್ದರು.

ವಿದ್ಯುತ್ ಖಾಸಗೀಕರಣದ ವಿರುದ್ಧ, ವಿದ್ಯುತ್ ತಿದ್ದುಪಡಿ ಕಾಯ್ದೆ 2003ರ ವಿರುದ್ಧ, ಕೋಲಾರ ಜಿಲ್ಲೆಯ ಕೈವಾರ, ತುಮಕೂರು ಜಿಲ್ಲೆಯ ನೊಣವಿನಕೆರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೂದಿಗೆರೆ ಸೆಕ್ಷನ್ ವ್ಯಾಪ್ತಿಯಲ್ಲಿ ವಿದ್ಯುತ್ ಮೀಟರೀಕರಣದ ಪೈಲಟ್ ಅನುಷ್ಠಾನದ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ನಿರಂತರ ಧರಣಿ ನಡೆಸಿ ರಾಜ್ಯಾದ್ಯಂತ ಪಂಪ್ ಸೆಟ್ ಬಳಕೆದಾರರ ಹೋರಾಟ ಸಮಿತಿಗಳನ್ನು ರಚಿಸಿ ಕೃಷಿ ಪಂಪಸೆಟ್ ವಿದ್ಯುತ್ ಮೀಟರೀಕರಣದ ವಿರುದ್ಧ ಯಶಸ್ವಿ ಹೋರಾಟ ನಡೆದು ಕೊಜೆಂಟ್ರಿಕ್ಸ್ ನಂತಹ ಖಾಸಗಿ ಯೋಜನೆಗಳನ್ನು ಹಿಮ್ಮೆಟ್ಟಿಸಲಾಗಿದೆ.

ಈ ಅವಧಿಯಲ್ಲಿ ಬೆಳೆಹಾನಿ, ಬರಗಾಲ, ಅತಿವೃಷ್ಟಿ, ಸಾಲಭಾಧೆ ಮುಂತಾದ ಪ್ರಶ್ನೆಗಳ ಮೇಲೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟಗಳು-ಪ್ರತಿಭಟನೆಗಳು, ಎಐಕೆಎಸ್ (ಅಜಯ್ ಭವನ್) ನೇತೃತ್ವದಲ್ಲಿ ನಡೆದ ಬಾಗೂರು ನವಿಲೆ ರೈತರ ಹೋರಾಟ, ಬಿಎಂಐಸಿ ವಿರೋಧಿ ಒಕ್ಕೂಟದ ಪ್ರಚಾರಾಂದೋಲನ-ಪ್ರತಿಭಟನೆಗಳು ಈ ಅವಧಿಯ ಪ್ರಮುಖ ಹೋರಾಟಗಳಾಗಿವೆ. 

ಇದನ್ನೂ ಓದಿರಿ: ಅಮೆರಿಕ, ಫ್ರಾನ್ಸ್‌ಗೂ ಸಡ್ಡು ಹೊಡೆಯುತ್ತಿರುವ ಇಬ್ರಾಹಿಂ ಥೋರೆ!

ಡಿಸೆಂಬರ್ 6, 1992 ರ ಬಾಬರಿ ಮಸೀದಿ ಧ್ವಂಸ ಘಟನೆ ಮತ್ತು ನಂತರದ ದಿನಗಳಲ್ಲಿ ನಡೆದ ವ್ಯಾಪಕ ಕೋಮು ಘರ್ಷಣೆಗಳು ಬೆಳೆದು ಬರುತ್ತಿದ್ದ ಗ್ಯಾಟ್ ವಿರೋಧಿ ಚಳವಳಿಗಳ ಮೇಲೆ ತಾತ್ಕಾಲಿಕ ತಡೆ ಒಡ್ಡಿದರೂ, ತೀವ್ರಗೊಳ್ಳುತ್ತಿದ್ದ ಕೃಷಿ ಬಿಕ್ಕಟ್ಟು, ದುರ್ಬರಗೊಳ್ಳುತ್ತಿರುವ ರೈತಾಪಿ ಜನ ಜೀವನದ ಒತ್ತಡದಿಂದ ಉದಾರೀಕರಣ ಧೋರಣೆಗಳಿಗೆ ತೀವ್ರವಾದ ಪ್ರತಿರೋಧಗಳು ಬೆಳೆದು ಬಂದವು. ಈ ಪ್ರತಿರೋಧವು ರಾಜಕೀಯದ ಮೇಲೆ ಪರಿಣಾಮ ಬೀರಿದ ಕಾರಣಕ್ಕಾಗಿ ಒಂದೇ ಪಕ್ಷದ ಆಡಳಿತ ಕೊನೆಯಾಗಿ ಸಮ್ಮಿಶ್ರ ಸರ್ಕಾರಗಳು ಅಸ್ತಿತ್ವಕ್ಕೆ ಬರುವಂತಾಯಿತು. 

ನವ ಉದಾರವಾದಿ ಆರ್ಥಿಕ ಧೋರಣೆಗಳ ಹೊಸ ಕೃಷಿ ನೀತಿಗಳಿಗೆ ಪರ್ಯಾಯವಾಗಿ ಪರ್ಯಾಯ ಕೃಷಿ ನೀತಿಯನ್ನು 1993ರಲ್ಲೇ ಅಂಗೀಕರಿಸಿದ್ದು AIKS-AIAWU ಚಳವಳಿಗಳ ಹೆಗ್ಗಳಿಕೆಯಾಗಿದೆ.

ಡಿಸೆಂಬರ್ 6, 1992 ರ ಬಾಬರಿ ಮಸೀದಿ ಧ್ವಂಸ ಘಟನೆ ಮತ್ತು ನಂತರದ ದಿನಗಳಲ್ಲಿ ನಡೆದ ವ್ಯಾಪಕ ಕೋಮು ಘರ್ಷಣೆಗಳು ಬೆಳೆದು ಬರುತ್ತಿದ್ದ ಗ್ಯಾಟ್ ವಿರೋಧಿ ಚಳವಳಿಗಳ ಮೇಲೆ ತಾತ್ಕಾಲಿಕ ತಡೆ ಒಡ್ಡಿದರೂ, ತೀವ್ರಗೊಳ್ಳುತ್ತಿದ್ದ ಕೃಷಿ ಬಿಕ್ಕಟ್ಟು, ದುರ್ಬರಗೊಳ್ಳುತ್ತಿರುವ ರೈತಾಪಿ ಜನ ಜೀವನದ ಒತ್ತಡದಿಂದ ಉದಾರೀಕರಣ ಧೋರಣೆಗಳಿಗೆ ತೀವ್ರವಾದ ಪ್ರತಿರೋಧಗಳು ಬೆಳೆದು ಬಂದವು. ಈ ಪ್ರತಿರೋಧವು ರಾಜಕೀಯದ ಮೇಲೆ ಪರಿಣಾಮ ಬೀರಿದ ಕಾರಣಕ್ಕಾಗಿ ಒಂದೇ ಪಕ್ಷದ ಆಡಳಿತ ಕೊನೆಯಾಗಿ ಸಮ್ಮಿಶ್ರ ಸರ್ಕಾರಗಳು ಅಸ್ತಿತ್ವಕ್ಕೆ ಬರುವಂತಾಯಿತು. 

ಪರ್ಯಾಯ ಕೃಷಿ ನೀತಿಗಳಿಗಾಗಿ ತೀವ್ರಗೊಂಡ ಸಂಘರ್ಷ

2004ರಿಂದ 2014 ರವರೆಗಿನ ಯುಪಿಎ ಸರ್ಕಾರದ ಧೋರಣೆಗಳ ವಿರುದ್ಧದ ರೈತ ಚಳವಳಿಗಳು: ಎಡಪಕ್ಷಗಗಳ ಬಾಹ್ಯ ಬೆಂಬಲದೊಂದಿಗೆ ಅಸ್ತಿತ್ವಕ್ಕೆ ಬಂದ ಯುಪಿಎ ಸರ್ಕಾರವು, ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ತನ್ನ ಭರವಸೆಗೆ ವಿರುದ್ದವಾಗಿ ನವ ಉದಾರೀಕರಣ ಧೋರಣೆಗಳನ್ನೇ ಬಹಳ ರಭಸದಿಂದ ಮುಂದುವರೆಸಿತು. ಇದೇ ಅವಧಿಯಲ್ಲಿ ಉದಾರೀಕರಣ ನೀತಿಗಳಿಗೆ ಪರ್ಯಾಯವಾಗಿ ಪರ್ಯಾಯ ಕೃಷಿ ನೀತಿಯನ್ನು ಜಾರಿ ಮಾಡುವಂತೆ ದೇಶಾದ್ಯಂತ ರೈತ ಚಳವಳಿಗಳು ಒತ್ತಡ ತೀವ್ರಗೊಳಿಸಿದವು. ಸಮಗ್ರ ಉತ್ಪಾದನಾ ವೆಚ್ಚಕ್ಕೆ ಶೇಕಡಾ 50ರಷ್ಟು ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬ ಸ್ವಾಮಿನಾಥನ್ ಶಿಫಾರಸ್ಸು ಜಾರಿ, ರೈತರನ್ನು ಋಣಮುಕ್ತರನ್ನಾಗಿಸುವ ಹಕ್ಕೋತ್ತಾಯಗಳು ಮುನ್ನೆಲೆಗೆ ಬಂದವು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಅರಣ್ಯ ಹಕ್ಕು ಕಾಯ್ದೆ, ಆಹಾರ ಭದ್ರತೆ ಕಾಯ್ದೆ, ರಾಷ್ಟ್ರೀಕೃತ ಬ್ಯಾಂಕ್ ಗಳ ರೈತರ ಸುಸ್ತಿ ಸಾಲ ಮನ್ನಾ ಮುಂತಾದ ಕೆಲವು ಕ್ರಮಗಳು ರೈತ ಚಳವಳಿ ಹಾಗೂ ಎಡಪಕ್ಷಗಳ ಒತ್ತಡದಿಂದ ಜಾರಿಗೆ ಬಂದವು.

ದಿವಾಳಿಕೋರ ಜಾಗತೀಕರಣ ಧೋರಣೆಗಳಿಂದ ತೀವ್ರ ಬಿಕ್ಕಟ್ಟಿನಲ್ಲಿ ನರಳುತ್ತಿದ್ದ ಗ್ರಾಮೀಣ ಜನ ಸಮುದಾಯಕ್ಕೆ ಸ್ವಲ್ಪವಾದರೂ ಸಾಂತ್ವನ ನೀಡಬಹುದಾಗಿದ್ದ ಈ ಎಲ್ಲಾ ಕಾಯ್ದೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಬೇಕಾದ ಬಜೆಟ್ ಬೆಂಬಲವನ್ನಾಗಲಿ, ಜಾರಿಗೊಳಿಸುವ ರಾಜಕೀಯ ಇಚ್ಚಾಶಕ್ತಿಯನ್ನಾಗಲಿ ಯುಪಿಎ ಸರ್ಕಾರ ತೋರಲಿಲ್ಲ. ಆತ್ಮಹತ್ಯೆ ಗಳು ಮುಂದುವರೆದವು. ವಲಸೆ, ನಿರುದ್ಯೋಗ, ಹಸಿವು ತೀವ್ರಗೊಂಡಿತು. ಏರುತ್ತಿದ್ದ ಜೀವನ ವೆಚ್ಚ ಮತ್ತು ಕೃಷಿ ವೆಚ್ಚಗಳಿಗಾಗಿ ಸಾಲಕ್ಕಾಗಿ ಪರದಾಡುತ್ತಿದ್ದ ಗ್ರಾಮೀಣ ಜನರ ಪರಿಸ್ಥಿತಿಯನ್ನು ಮೈಕ್ರೋ ಫೈನಾನ್ಸ್ ಕಂಪನಿಗಳು ಹುಲುಸಾಗಿ ಬೆಳೆಯಲು ಅವಕಾಶ ಕಲ್ಪಿಸಿ ಕೊಡಲಾಯಿತು. ಕೃಷಿ ಬಿಕ್ಕಟ್ಟು ಹಲವು ರೀತಿಯ ಸಾಮಾಜಿಕ ದುಷ್ಪಾರಿಣಾಮಗಳಿಗೆ ಕಾರಣವಾಗಿ ರೈತ ಕುಟುಂಬದ ಯುವಕರಿಗೆ ಮದುವೆ ಅವಕಾಶವೇ ಕ್ಷೀಣಗೊಂಡ ಪರಿಸ್ಥಿತಿಯನ್ನು ಸೃಷ್ಟಿಸಿತು.

ಇದನ್ನೂ ಓದಿರಿ: ಕಾರ್ಮಿಕರ ಸ್ಥಿತಿ: ಎಲ್ಲಿಂದ ಎಲ್ಲಿಗೆ? (ಭಾಗ- 1)

“ಆತ್ಮಹತ್ಯೆಯಲ್ಲ; ಆತ್ಮ ವಿಶ್ವಾಸದ ಹೋರಾಟ ” ಎಂಬ ಘೋಷಣೆಯನ್ನು ಮೊಳಗಿಸಿದ ಈ ಅವಧಿಯ ರೈತ ಚಳವಳಿಗಳು, ರೇಷ್ಮೆ ಬೆಲೆ ಕುಸಿತಕ್ಕೆ ಕಾರಣವಾದ ಸುಂಕ ರಹಿತ ಆಮದು ವಿರುದ್ಧ, ಎಪಿಎಂಸಿ ಮಾದರಿ ಕಾನೂನು ಜಾರಿ ವಿರುದ್ಧ, ಸಾರ್ವತ್ರಿಕ ಪಡಿತರ ಪದ್ದತಿಗಾಗಿ, ಉದ್ಯೋಗ ಖಾತರಿ ಸಮರ್ಪಕ ಜಾರಿಗಾಗಿ, ಬಗರ್ ಹುಕುಂ ಸಾಗುವಳಿ ಸಕ್ರಮಕ್ಕಾಗಿ, ಮನೆ-ನಿವೇಶನಕ್ಕಾಗಿ, ಸಕ್ಕರೆ ಬೆಲೆ ಕುಸಿತದಿಂದ ಕಬ್ಬು ಕಟಾವು ಮುಂದೂಡುತ್ತಿದ್ದ ಸಕ್ಕರೆ ಕಾರ್ಖಾನೆಗಳ ದುರ್ಲಾಭದ ವಿರುದ್ಧ ಬಹಳ ದೊಡ್ಡ ದೊಡ್ಡ ಹೋರಾಟಗಳನ್ನು ಸಂಘಟಿಸಿದ್ದವು. ಅವಿಭಜಿತ ಕೋಲಾರ ಜಿಲ್ಲೆಯ ಶಾಶ್ವತ ನೀರಾವರಿಗೆ ಆಗ್ರಹಿಸಿ ಹತ್ತು ಸಾವಿರ ರೈತರ ಬೆಂಗಳೂರು ಪಾದಯಾತ್ರೆ ಈ ಅವಧಿಯ ಗಮನ ಸೆಳೆದ ಹೋರಾಟವಾಗಿತ್ತು.

ಈ ಅವಧಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಗಳ ಮೂಲಕ ಕೈಗಾರಿಕೋದ್ಯಮಿಗಳ ಹೂಡಿಕೆ ಆಕರ್ಷಿಸುವ, ಉದ್ಯೋಗ ಸೃಷ್ಟಿಸುವ ಹೆಸರಿನಲ್ಲಿ ದೊಡ್ಡ ಪ್ರಮಾಣದ ಬಲವಂತದ ಭೂ ಸ್ವಾಧೀನದ ಕ್ರಮಗಳು ತೀವ್ರಗೊಂಡವು. ನೈಸ್ ಸಂಸ್ಥೆಯ ಭೂ ಕಬಳಿಕೆ ವಿರುದ್ಧ, ಕೆಹೆಚ್‌ಬಿ, ಕೆಐಎಡಿಬಿ, ಪೋಸ್ಕೋ, ಎಸ್‌ಇಜೆಡ್ ಮುಂತಾದ ಭೂ ಸ್ವಾಧೀನಕ್ಕೆ ಪ್ರಬಲವಾದ ಪ್ರತಿರೋಧದ ರೈತ ಚಳವಳಿಗಳು ಈ ಅವಧಿಯಲ್ಲಿ ಬೆಳೆದು ಬಂದವು. ಬೆಂಗಳೂರು ಕೆಂಪೇಗೌಡ ಬಡಾವಣೆಗಾಗಿ ಭೂಮಿ ಕಳೆದುಕೊಂಡ ರೈತರು ತೀವ್ರವಾದ ಸಂಘರ್ಷದ ಮೂಲಕ ಅದುವರೆಗಿನ ಪರಿಹಾರಗಳಲ್ಲೇ ಗರಿಷ್ಠ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಯಿತು.

1993ರಲ್ಲಿ AIKS-AIAWU ಅಂಗೀಕರಿಸಿದ್ದ “ಪರ್ಯಾಯ ಕೃಷಿ ನೀತಿ” ದಸ್ತಾವೇಜನ್ನು 2003ರಲ್ಲಿ ಸಮಕಾಲೀನಗೊಳಿಸಿಕೊಳ್ಳಲಾಯಿತು. 

ಕಾರ್ಪೊರೇಟ್-ಕೋಮುವಾದಿ ಆಳ್ವಿಕೆಗೆ ರೈತ ಚಳವಳಿಗಳ ಐಕ್ಯ ಸವಾಲು

2014ರಿಂದ 2024ರವರೆಗಿನ ರೈತ ಹೋರಾಟಗಳು: ಮೊದಲನೇ ಅವಧಿಯಲ್ಲಿ ಎಡಪಕ್ಷಗಳ ಒತ್ತಡದಿಂದ ಕೆಲವು ಜನೋಪಯೋಗಿ ಯೋಜನೆಗಳ ಫಲವಾಗಿ ಎರಡನೇ ಅವಧಿಗೆ ಅವಕಾಶ ಪಡೆದ ಯುಪಿಎ ಸರ್ಕಾರದ ಕಾರ್ಪೊರೇಟ್ ಪರವಾದ ಹತ್ತು ವರ್ಷಗಳ ಆಳ್ವಿಕೆಯಿಂದಾಗಿ ತೀವ್ರ ಆಡಳಿತ ವಿರೋಧಿ ಅಲೆ ಉಂಟಾಗಿತ್ತು. ಪರ್ಯಾಯ ಕೃಷಿ ನೀತಿಗಳಿಗಾಗಿ ಬೆಳೆದು ಬರುತ್ತಿದ್ದ ಚಳವಳಿಗಳ ಒತ್ತಡಕ್ಕೆ ಮಣಿಯದೆ ಕಾರ್ಪೊರೇಟ್ ಪರ ನೀತಿಗಳನ್ನು ಗರಿಷ್ಠ ವೇಗದಲ್ಲಿ ಜಾರಿಗೊಳಿಸುವ ಅಗತ್ಯಕ್ಕಾಗಿ ಕಾರ್ಪೊರೇಟ್ ಮಾಧ್ಯಮಗಳು ಒಂದು ಆಕರ್ಷಕ ಕಥನವನ್ನು ಸೃಷ್ಟಿಸಿದವು. ಗುಜರಾತ್ ಮಾದರಿ, ಅಚ್ಚೇ ದಿನ್ ಮುಂತಾದ ಕಥನಗಳ ಜೊತೆಯಲ್ಲೇ ಕೋಮುವಾದಿ ಹಿಂದುತ್ವ ಉನ್ಮಾದವನ್ನು ಬಡಿದೆಬ್ಬಿಸಲು ನಡೆಸಿದ ಒಂದು ಯೋಜಿತ ಪ್ರಯತ್ನದ ಫಲವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂತು.

ಚುನಾವಣಾ ಪ್ರಚಾರದ ಉದ್ದಕ್ಕೂ ನರೇಂದ್ರ ಮೋದಿ ರವರು ಕೃಷಿ ಬಿಕ್ಕಟ್ಟು ನಿವಾರಿಸಲಾಗುವುದು, ಸ್ವಾಮಿನಾಥನ್ ಶಿಫಾರಸ್ಸಿನಂತೆ ಕನಿಷ್ಠ ಬೆಂಬಲ ಬೆಲೆ ಒದಗಿಸಲಾಗುವುದು, ಎಲ್ಲಾ ರೈತರ ಸಾಲ ಮನ್ನಾ ಮಾಡಲಾಗುವುದು, ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು ಎಂದು ಅಬ್ಬರದ ಭರವಸೆಗಳನ್ನು ನೀಡಿದರು. ಅಧಿಕಾರಕ್ಕೆ ಬರುತ್ತಿದ್ದಂತೆ ಸ್ವಾತಂತ್ರ್ಯ ನಂತರದ ಸರ್ಕಾರಗಳಲ್ಲೇ ಅತ್ಯಂತ ಹೆಚ್ಚು ಕಾರ್ಪೊರೇಟ್ ಪರ ಹಾಗೂ ರೈತ ವಿರೋಧಿ ಸರ್ಕಾರ ಎಂಬುದನ್ನು ಸಾಬೀತುಪಡಿಸಿತು. ನೋಟು ರದ್ದತಿ, ಜಿಎಸ್‌ಟಿ, ಕೋವಿಡ್ ಲಾಕ್ ಡೌನ್ ಸಂಕಟಗಳು ರೈತಾಪಿ ಸಮುದಾಯವನ್ನು ದಿವಾಳಿ ಕಡೆಗೆ ನೂಕಿದವು. ರೈತ ಚಳವಳಿಗಳ ತೀವ್ರ ಪ್ರತಿರೋಧದಿಂದ ನೆನೆಗುದಿಗೆ ಬಿದ್ದಿದ್ದ ಹಲವು ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಈ ಸರ್ಕಾರ ಚಾಲನೆ ನೀಡಿತು. ಇವೆಲ್ಲದರ ಪರಿಣಾಮವಾಗಿ ಈ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿ  ಎನ್‌ಸಿಆರ್‌ಬಿಯಲ್ಲಿ ದಾಖಲಾಗಿರುವ ಪ್ರಕಾರವೇ  ಒಂದು ಲಕ್ಷಕ್ಕೂ ಹೆಚ್ಚು ರೈತರು, ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಕೃಷಿ ಕೂಲಿಕಾರರು, ದೈಹಿಕ ದುಡಿಮೆಗಾರರು, ಮಹಿಳೆಯರು ದೇಶದಾದ್ಯಂತ ಆತ್ಮಹತ್ಯೆಗೆ ತುತ್ತಾದರು.

ಮಧ್ಯಪ್ರದೇಶದ ಮಂದ್ಸೌರ್‌ನಲ್ಲಿ ಬೆಲೆ ಕುಸಿತದ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಮೇಲೆ ನಡೆದ ಗೋಲಿಬಾರ್‌ನಲ್ಲಿ ಆರು ರೈತರು ನಿಧನರಾದರು. ಈ ಹಿನ್ನೆಲೆಯಲ್ಲಿ ದೇಶದ ರೈತ ಸಂಘಟನೆಗಳು ಒಟ್ಟಾಗಿ ಹೋರಾಡಲು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (AIKSCC) ಅಸ್ತಿತ್ವಕ್ಕೆ ಬಂತು. ಕರ್ನಾಟಕದಲ್ಲಿ ಇದರ ರಾಜ್ಯ ಮಟ್ಟದ ವೇದಿಕೆ ಅಸ್ತಿತ್ವಕ್ಕೆ ಬಂತು .

ಕೋವಿಡ್ ಮಹಾ ಪಿಡುಗಿನ ಸಮಯದಲ್ಲಿ ಇಡೀ ದೇಶವೇ ಲಾಕ್ ಡೌನ್ ಹೆಸರಿನಲ್ಲಿ ಮನೆಯೊಳಗೆ ಬಂಧಿಯಾಗಿದ್ದಾಗ ಕಾರ್ಪೊರೇಟ್ ಪರವಾದ ರೈತಾಪಿ ಕೃಷಿಯನ್ನು ನಾಶ ಮಾಡುವ ಕರಾಳ ಮೂರು ಕೃಷಿ ಕಾಯ್ದೆಗಳನ್ನು ಅಂಗೀಕರಿಸಲಾಯಿತು. ಕೇಂದ್ರ ಸರ್ಕಾರದ ಈ ಕರಾಳ ಕಾಯ್ದೆಗಳು ರಾಜ್ಯದಲ್ಲಿ ಸುಲಲಿತವಾಗಿ ಅನುಷ್ಠಾನಗೊಳ್ಳಲು ಅಗತ್ಯವಾದ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾನೂನು 2020, ಕರ್ನಾಟಕ ಎಪಿಎಂಸಿ ತಿದ್ದುಪಡಿ ಕಾನೂನು 2020, ಜಾನುವಾರು ಸಂರಕ್ಷಣೆ ಮತ್ತು ಹತ್ಯೆ ನಿಷೇಧ ಕಾನೂನು 2020 ಅನ್ನು ಜಾರಿಗೊಳಿಸಲಾಯಿತು.

ಇದನ್ನೂ ಓದಿರಿ: ಕಾರ್ಮಿಕರ ಸ್ಥಿತಿ: ಎಲ್ಲಿಂದ ಎಲ್ಲಿಗೆ? (ಭಾಗ- 2)

ಈ ಕರಾಳ ಕೃಷಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿತ್ತು. ಸೆಪ್ಟೆಂಬರ್ 2020ರಲ್ಲಿ ಕೋವಿಡ್ ಅಪಾಯದ ನಡುವೆಯೇ  ಐಕ್ಯ ಹೋರಾಟ ರೂಪಿಸಿಕೊಂಡು ಮೆರವಣಿಗೆ- ಬೃಹತ್ ಸಮಾವೇಶವನ್ನು ನಡೆಸಿತು. ಸ್ವಾತಂತ್ರ್ಯ ನಂತರದ ಅತಿದೊಡ್ಡ, ದೀರ್ಘವಾದ ಹೋರಾಟವಾಗಿ ಜಗತ್ತಿನ ಗಮನ ಸೆಳೆದ ಐತಿಹಾಸಿಕ ದೆಹಲಿ ಹೋರಾಟವನ್ನು ಬೆಂಬಲಿಸಿ ಕರ್ನಾಟಕದ ರೈತ ಚಳವಳಿಗಳು ಕ್ರಿಯಾಶೀಲ ಪಾತ್ರ ವಹಿಸಿದವು. ಈ ಪ್ರಕ್ರಿಯೆಯಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯಲ್ಲಿದ್ದ ಎಲ್ಲಾ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಎಲ್ಲಾ ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳ ಸಮನ್ವಯ ವೇದಿಕೆ ಹಾಗೂ ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಜಂಟಿ ವೇದಿಕೆಗಳೆಲ್ಲವೂ ಸೇರಿ ಸಂಯುಕ್ತ ಹೋರಾಟ ಕರ್ನಾಟಕವು ರೂಪುಗೊಂಡಿತು. ಐತಿಹಾಸಿಕ ದೆಹಲಿ ರೈತ ಹೋರಾಟದ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ (SKM)ನ ಎಲ್ಲಾ ಕರೆಗಳಿಗೂ ಕರ್ನಾಟಕದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಹಾಗೂ ದೆಹಲಿ ರೈತ ಚಳವಳಿಯಲ್ಲೂ ಕೂಡ ಕರ್ನಾಟಕದಿಂದ ಜನರು ಭಾಗವಹಿಸಿದ್ದಾರೆ.

ಐತಿಹಾಸಿಕ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಹಾಗೂ ‘ಕದನ ಕಣ ‘ಕೃತಿ ಕರ್ನಾಟಕದ ಸ್ಪಂದನೆಯ ಸಾಕ್ಷಿಯಾಗಿ ದಾಖಲಾಗಿವೆ.

ಸಹಸ್ರಾರು ಜನರು ಭಾಗವಹಿಸಿದ್ದ  26-28 ನವೆಂಬರ್ 2023ರ ಮೂರು ದಿನಗಳ ಮಹಾಧರಣಿ, ರಾಜ್ಯದ ವಿವಿಧ ಕಡೆ ನಡೆದ ಕಿಸಾನ್ ಮಹಾ ಪಂಚಾಯತ್‌ಗಳು, ಪರ್ಯಾಯ ಜನತಾ ಅಧಿವೇಶನಗಳು ಮತ್ತು ವಿಧಾನ ಸೌಧ ಚಲೋ, ಸಮಾವೇಶ ಮುಂತಾದವುಗಳು ಈ ಅವಧಿಯಲ್ಲಿ ನಡೆದ ಪ್ರಮುಖ ರೈತ ಹೋರಾಟಗಳಾಗಿ ದಾಖಲಾಗಿವೆ.

ಸಮಾರೋಪ

ಐವತ್ತು ವರ್ಷಗಳ ರೈತ ಚಳವಳಿಯನ್ನು ಸಂಕ್ಷಿಪ್ತ ರೂಪದಲ್ಲಿ ಸಮಗ್ರವಾಗಿ ಒದಗಿಸುವುದು ಬಹಳ ಸವಾಲಿನ ಕೆಲಸ. ಈ ಪ್ರಬಂಧದಲ್ಲಿ ದಾಖಲಿಸಬೇಕಾದ ಹಲವು ಚಾರಿತ್ರಿಕ ಘಟನೆಗಳು ತಪ್ಪಿ ಹೋಗಿರುವ ಸಾಧ್ಯತೆ ಖಂಡಿತವಾಗಿ ಇರುತ್ತದೆ; ಅದೇ ರೀತಿ ಈ ದೀರ್ಘ ಅವಧಿಯ ರೈತ ಚಳವಳಿಗಳಲ್ಲಿ ಐತಿಹಾಸಿಕ ಪಾತ್ರ ನಿರ್ವಹಿಸಿದ ನಾಯಕರುಗಳ ಕಾಣಿಕೆಯನ್ನು ಸ್ಥಳಾವಕಾಶದ ಮಿತಿಯಿಂದಾಗಿ ದಾಖಲಿಸಲು ಆಗಿಲ್ಲ. ಚಳವಳಿಗಳಲ್ಲಿ ಸೃಷ್ಟಿಯಾಗುವ ನಾಯಕರು ಅಥವಾ ಚಳವಳಿಗಳ ನೇತೃತ್ವದಲ್ಲಿದ್ದ ನಾಯಕರು ತಾವು ವಹಿಸಿದ ಐತಿಹಾಸಿಕ ಪಾತ್ರಗಳಿಂದಾಗಿ ಖಂಡಿತವಾಗಿಯೂ ಚಳವಳಿಗಳನ್ನು ಪ್ರಭಾವಿಸಿದ್ದಾರೆ. ಆದರೆ ನಾಯಕರೇ ಚಳವಳಿಗಳನ್ನು ಸೃಷ್ಟಿಸುವುದಿಲ್ಲ. ಚಳವಳಿಗಳು ಬೆಳೆದು ಬರುವುದು ನಾಯಕರ ಇಚ್ಛಾಶಕ್ತಿಗೆ ಮಿಗಿಲಾದ ವಿದ್ಯಮಾನವಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಅನುಭವ ಮತ್ತು ಅಧ್ಯಯನದ ಮಿತಿಗೆ ಒಳಪಟ್ಟು ಈ ಮೇಲಿನ ಅಂಶಗಳನ್ನು ದಾಖಲಿಸಿರುವೆ. ಈ ಲೇಖನ ಚರ್ಚೆಗೆ ಕಾರಣವಾಗಿ ಉತ್ತಮಗೊಂಡರೆ ನನ್ನ ಪ್ರಯತ್ನ ಸಾರ್ಥಕವಾಗುತ್ತದೆ.

(ಮುಗಿಯಿತು..)

(‘ಈದಿನ ಡಾಟ್ ಕಾಮ್’ ಹೊರ ತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

t yashvant
ಟಿ. ಯಶವಂತ್
+ posts

ಮಂಡ್ಯ ಜಿಲ್ಲೆಯ ಮದ್ದೂರಿನವರಾದ ಟಿ.ಯಶವಂತ್‌ರವರು ಎಸ್‌ಎಫ್‌ಐ ಮುಖಂಡರಾಗಿದ್ದರು. ಸದ್ಯ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಡಪಂಥೀಯ ಹೋರಾಟಗಳಲ್ಲಿ ಸಕ್ರಿಯವಾಗಿರುವ ಅವರು ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಟಿ. ಯಶವಂತ್
ಟಿ. ಯಶವಂತ್
ಮಂಡ್ಯ ಜಿಲ್ಲೆಯ ಮದ್ದೂರಿನವರಾದ ಟಿ.ಯಶವಂತ್‌ರವರು ಎಸ್‌ಎಫ್‌ಐ ಮುಖಂಡರಾಗಿದ್ದರು. ಸದ್ಯ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಡಪಂಥೀಯ ಹೋರಾಟಗಳಲ್ಲಿ ಸಕ್ರಿಯವಾಗಿರುವ ಅವರು ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...