ರೈತ ಚಳವಳಿ; 50 ವರ್ಷಗಳಲ್ಲಿ ಕರ್ನಾಟಕ ಕಂಡ ಪಲ್ಲಟಗಳೇನು? (ಭಾಗ-1)

Date:

ಕರ್ನಾಟಕದ ರೈತ ಚಳವಳಿಗಳು ಭಾರತದ ರೈತ ಚಳವಳಿಗಳಿಂದ ಪ್ರೇರಣೆ ಮತ್ತು ಸ್ಪೂರ್ತಿ ಪಡೆದಿದ್ದು,ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಬಹಳ ದೊಡ್ಡ ದೊಡ್ಡ ಮಹಾನ್ ರೈತ ಹೋರಾಟಗಳು ಹಾಗೂ ರೈತ ಬಂಡಾಯಗಳಿಗೆ ಕರ್ನಾಟಕವು ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ 1937 ರಲ್ಲಿ ರೈತ ಸಂಘದ ಬಾವುಟ ಹಾರಿಸಿದ ಕೀರ್ತಿ ಉತ್ತರ ಕನ್ನಡ ಜಿಲ್ಲೆಯ ಉಳಗಾ ಗ್ರಾಮಕ್ಕೆ ಸಲ್ಲುತ್ತದೆ. 

1936ರಲ್ಲಿ ಅಸ್ತಿತ್ವಕ್ಕೆ ಬಂದ ದೇಶದ ಮೊದಲ ಅಖಿಲ ಭಾರತ ಮಟ್ಟದ ರೈತ ಸಂಘಟನೆ ,ಅಖಿಲ ಭಾರತ ಕಿಸಾನ್ ಸಭಾ(AIKS) ರಚನೆಯಾಗುವ ಮೊದಲೇ ಭಾರತದ ವಿವಿಧ ಭಾಗಗಳಲ್ಲಿ ಬ್ರಿಟಿಷ್ ವಸಾಹತುಶಾಹಿ ಪ್ರಭುತ್ವ ಹಾಗೂ ದೇಶೀಯ ರಾಜ ಪ್ರಭುತ್ವಗಳ ವಿರುದ್ಧ ರೈತರ ಹೋರಾಟಗಳು ಸಿಡೆದೆದ್ದು ಇತಿಹಾಸದಲ್ಲಿ ದಾಖಲಾಗಿವೆ. ಇದೇ ರೀತಿ ಕರ್ನಾಟಕದಲ್ಲಿಯೂ ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ನಂತರದ ತಕ್ಷಣದ ವರ್ಷಗಳಲ್ಲೇ ಬಹಳ ದೊಡ್ಡ ದೊಡ್ಡ ಹೋರಾಟಗಳು ನಡೆದಿವೆ. ಗೇಣಿ ಶೋಷಣೆ ವಿರುದ್ಧದ ಕೆನರಾ ಭಾಗದ ರೈತ ಹೋರಾಟಗಳು (1800-1830) ,1837 ರ ಅಮರ ಸುಳ್ಯ ದಂಗೆ, 1830-32 ರಲ್ಲಿ ನಡೆದ ನಗರ ಬಂಡಾಯ, ಚಿಕ್ಕದೇವರಾಜ ಒಡೆಯರ ಕಾಲದ ರೈತರ ಸಂಘಟಿತ ಹೋರಾಟಗಳು, 1931-32 ರ ಇರ್ವಿನ್ ನಾಲಾ ರೈತರ ಹೋರಾಟ, ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ನಡೆದ ಗೇಣಿ ನಿರಾಕರಣೆ ಚಳವಳಿ ಮುಂತಾದವುಗಳು ಸ್ವಾತಂತ್ರ್ಯ ಪೂರ್ವ ರೈತ ಹೋರಾಟಗಳಿಗೆ ಉದಾಹರಣೆಗಳಾಗಿವೆ. ಉತ್ತರ ಕನ್ನಡದ ಕೆಂಬಾವುಟ ಹೋರಾಟದಿಂದ ಪ್ರೇರಣೆ ಪಡೆದ ಕಾಗೋಡು ಸತ್ಯಾಗ್ರಹ ,ಗೇಣಿದಾರರ ಒಕ್ಕಲೆಬ್ಬಿಸುವಿಕೆ ವಿರುದ್ಧದ ಹೋರಾಟಗಳು, ರೈತ ಪರ ಭೂ ಸುಧಾರಣಾ ಕಾನೂನುಗಳಿಗಾಗಿ ನಡೆದ ಸಂಘರ್ಷಗಳು ಸ್ವಾತಂತ್ರ್ಯ ಪಡೆದ ತಕ್ಷಣದ ವರ್ಷಗಳಲ್ಲಿ ನಡೆದ ರೈತ ಹೋರಾಟಗಳಿಗೆ ಉದಾಹರಣೆಗಳಾಗಿವೆ. ಈ ಸುದೀರ್ಘ ಹೋರಾಟಗಳ ಫಲವಾಗಿ ರಾಜ್ಯದ ಮೊಟ್ಟ ಮೊದಲ ರೈತ ಸಂಘಟನೆಯಾಗಿ 1957 ರ ಸೆಪ್ಟೆಂಬರ್ 16,17 ರಂದು ನಡೆದ ರಾಜ್ಯ ಮಟ್ಟದ ಪ್ರಥಮ ರೈತ ಸಮ್ಮೇಳನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ಅಸ್ತಿತ್ವಕ್ಕೆ ಬಂತು. ರಾಜ್ಯದ ಹೆಸರು ಮೈಸೂರಾಗಿದ್ದರೂ ರೈತ ಸಂಘಟನೆಗೆ ಕರ್ನಾಟಕ ಪ್ರಾಂತ ರೈತ ಸಂಘ ಎಂದು ನಾಮಕರಣ ಮಾಡಿದ್ದು ಗಮನಾರ್ಹ ಸಂಗತಿಯಾಗಿದೆ.

ರೈತ ಹೋರಾಟಗಳ ಚರಿತ್ರೆ ವಸಾಹತುಶಾಹಿ ಕಾಲಘಟ್ಟದ ಆರಂಭ ಕಾಲದಿಂದಲೂ ಇದೆ. ಆದರೆ ಈ ಲೇಖನದ ಉದ್ದೇಶ ಕರ್ನಾಟಕದ ಈಗಿನಿಂದ  ಐವತ್ತು ವರ್ಷಗಳ ರೈತ ಚಳವಳಿಗಳ ಮೇಲೆ ಬೆಳಕು ಚೆಲ್ಲುವುದಾಗಿದೆ (1974-2024).

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಅಮೆರಿಕ, ಫ್ರಾನ್ಸ್‌ಗೂ ಸಡ್ಡು ಹೊಡೆಯುತ್ತಿರುವ ಇಬ್ರಾಹಿಂ ಥೋರೆ!

ಕಳೆದ 50 ವರ್ಷಗಳ ಕರ್ನಾಟಕದ ರೈತ ಚಳವಳಿ ಯ ಚರಿತ್ರೆಯು ವಿವಿಧ ಕಾಲಘಟ್ಟಗಳನ್ನು ಹಾದು ಬಂದಿದೆ. ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದ ಮಲಪ್ರಭಾ ನೀರಾವರಿ ರೈತ ಸಮನ್ವಯ ಸಮಿತಿ ಸಂಘಟಿಸಿದ್ದ ನವಲುಗುಂದ-ನರಗುಂದ ರೈತ ಬಂಡಾಯವು (21-07-1980) ಕರ್ನಾಟಕದ ರೈತ ಚಳವಳಿಯಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದು ಮಾತ್ರವಲ್ಲ, ರೈತ ಚಳವಳಿಯ ಸ್ವರೂಪ, ವ್ಯಾಪ್ತಿ ,ಗಾತ್ರವನ್ನು ಹಾಗೂ ರಾಜ್ಯದ ರಾಜಕೀಯವನ್ನೂ ಇನ್ನಿಲ್ಲದಂತೆ ಬದಲಾಯಿಸಿತು.  ಒಂದು ಕಡೆ ಕರ್ನಾಟಕ ಪ್ರಾಂತ ರೈತ ಸಂಘ ದೊಡ್ಡ ಪ್ರಮಾಣದಲ್ಲಿ ವಿಸ್ತರಣೆಗೊಂಡಿತು ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಉದಯಕ್ಕೂ ಕಾರಣವಾಯಿತು. ಹೀಗೆ ಈ ರೈತ ಬಂಡಾಯವು  ರೈತ ಚಳವಳಿಯ ಚರಿತ್ರೆಯ ಅಧ್ಯಯನದ ಮೈಲಿಗಲ್ಲಾಗಿದೆ. 

ತುರ್ತು ಪರಿಸ್ಥಿತಿ ಪೂರ್ವ ಮತ್ತು ನಂತರದ ಪರಿಸ್ಥಿತಿಗಳು

ಭಾರತದ ಕೃಷಿಯ ಎಲ್ಲಾ ಸಮಸ್ಯೆಗಳಿಗೆ ಸಿದ್ದೌಷಧವೆಂದು ವ್ಯಾಪಕವಾಗಿ ಬಿಂಬಿಸಲ್ಪಟ್ಟ ಹಸಿರು ಕ್ರಾಂತಿ ತಂತ್ರಜ್ಞಾನವು 1960ರ ಮಧ್ಯ ಭಾಗದಿಂದ ಪ್ರಾರಂಭವಾದರೂ, ಅದರ ಪರಿಣಾಮ 1970ರ ಆರಂಭದ ವರ್ಷಗಳಲ್ಲಿ ಕಾಣಿಸಿಕೊಳ್ಳತೊಡಗಿತು. ಮೂರು ಸ್ಪಷ್ಟ ಉದ್ದೇಶಗಳನ್ನು ಸಾಧಿಸಲು ಹಸಿರು ಕ್ರಾಂತಿಯನ್ನು ಪರಿಚಯಿಸಲಾಗಿತ್ತು. ಸಂಭವನೀಯ ಕಾರ್ಷಿಕ ಕ್ರಾಂತಿಯನ್ನು ತಡೆಗಟ್ಟುವುದು, ಕೃಷಿಯಲ್ಲಿ ಬಂಡವಾಳಶಾಹಿ ಸಂಬಂಧಗಳನ್ನು ಬೆಳೆಸುವುದು, ದೇಶದ ಬಂಡವಾಳಶಾಹಿ ಕೃಷಿ ವ್ಯಾಪಾರ ಕಂಪನಿಗಳು ಮತ್ತು ಅಂತರಾಷ್ಟ್ರೀಯ ಕೃಷಿ ವ್ಯಾಪಾರ ಬಹುರಾಷ್ಟ್ರೀಯ ಕಂಪನಿಗಳನ್ನು ಪರಸ್ಪರ ಬೆಸೆಯುವುದು ಈ ಮೂರು ಸ್ಪಷ್ಟ ಉದ್ದೇಶಗಳಾಗಿದ್ದವು. ಹಸಿರು ಕ್ರಾಂತಿಯು ಆಹಾರ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಉಂಟು ಮಾಡಿದ್ದರೂ 1972ರಿಂದ 1975ರ ಅವಧಿಯಲ್ಲಿ ಉತ್ಪಾದನಾ ಸ್ಥಗಿತತೆ ಉಂಟಾಯಿತು. ಸತತವಾಗಿ ಏರುತ್ತಿರುವ ಉತ್ಪಾದನಾ ವೆಚ್ಚ ರೈತರನ್ನು ಸಾಲಬಾಧೆಗೆ ಸಿಲುಕಿಸಿತು. ಭಾರೀ ದೊಡ್ಡ ಪ್ರಮಾಣದ ರೈತರ ಆಕ್ರೋಶ ಮತ್ತು ಪ್ರತಿಭಟನೆಗಳು ದೇಶದಾದ್ಯಂತ ಮೊಳಗಲು ಆರಂಭಿಸಿದವು. ತೀವ್ರ ಆರ್ಥಿಕ ಬಿಕ್ಕಟ್ಟುಗಳ ವಿರುದ್ಧದ ಚಳುವಳಿಗಳನ್ನು ದಮನಿಸುವ ಉದ್ದೇಶದಿಂದಲೇ ತುರ್ತುಪರಿಸ್ಥಿತಿ ಘೋಷಿಸಲಾಯಿತು.

ತುರ್ತುಪರಿಸ್ಥಿತಿಯ ಕಾರಣ ಅದುಮಿದ್ದ ಜನ ಸಮೂಹದ ಆಕ್ರೋಶಗಳು ತುರ್ತುಪರಿಸ್ಥಿತಿ ತೆರವಾಗುತ್ತಿದ್ದಂತೆ ಒಮ್ಮೆಲೆ ಸ್ಪೋಟಗೊಳ್ಳತೊಡಗಿದವು.

ಹಸಿರು ಕ್ರಾಂತಿಯು ಗ್ರಾಮೀಣ ಶ್ರೀಮಂತರು ಮತ್ತು ಗ್ರಾಮೀಣ ಬಡವರ ನಡುವಿನ ಅಸಮಾನತೆಯನ್ನು ಗಣನೀಯವಾಗಿ ಹೆಚ್ಚಿಸಿತು. ಪ್ರದೇಶ-ಪ್ರದೇಶಗಳ ನಡುವಿನ ಅಸಮಾನತೆಯನ್ನು ತೀವ್ರಗೊಳಿಸಿತು. ಇದೇ ಸಂದರ್ಭದಲ್ಲಿ ಪ್ರಪಂಚ ತೈಲ ಬಿಕ್ಕಟ್ಟು ದೇಶದ ಆರ್ಥಿಕ ಸಂಕಟಗಳನ್ನು ತೀವ್ರವಾಗಿ ಹೆಚ್ಚಿಸಿತು. ಈ ಅವಧಿಯಲ್ಲಿ ಅಂದರೆ 1979ರಲ್ಲಿ ಅಖಿಲ ಭಾರತ ಕಿಸಾನ್ ಸಭಾ (AIKS)ದ ವಾರಾಣಸಿ ಸಮ್ಮೇಳನವು ಹಸಿರು ಕ್ರಾಂತಿಯ ಪರಿಣಾಮಗಳನ್ನು ವಿಶ್ಲೇಷಿಸಿ ಭೂಮಿ, ಗೇಣಿ ಮುಂತಾದ ಮೂಲಭೂತ ಬೇಡಿಕೆಗಳ ಜೊತೆ ಜೊತೆಯಲ್ಲೇ ಬೆಳೆಗೆ ಬೆಲೆ, ನೀರಾವರಿ, ವಿದ್ಯುತ್, ಕೃಷಿ ಲಾಗುವಾಡುಗಳ ಬೆಲೆ ನಿಯಂತ್ರಣ ಮುಂತಾದ ಆಧಾರದಲ್ಲಿ ರೈತ ಹೋರಾಟಗಳನ್ನು ರೂಪಿಸಬೇಕು ಎಂದು ಕರೆ ನೀಡಿತ್ತು.

ಇದರ ಪ್ರಭಾವ ನರಗುಂದ-ನವಲುಗುಂದ ರೈತ ಬಂಡಾಯದ ಮೇಲೆ ಆಗಿದೆ. ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಜನ ಸೇರಿದ್ದ ರೈತ ಪ್ರತಿಭಟನೆಯಾಗಿ ಈಗಲೂ ದಾಖಲೆಯಾಗಿ ಉಳಿದಿರುವ 1981 ಫೆಬ್ರವರಿ 5ರ ರೈತ ಜಾಥಾ ಬೃಹತ್ ಪ್ರತಿಭಟನಾ ಸಮಾವೇಶ, ರೈತ-ಕಾರ್ಮಿಕರ ಅಪೂರ್ವ ಸಖ್ಯತೆಯನ್ನು ಎತ್ತಿ ತೋರಿದ ಹೋರಾಟವಾಗಿ ದಾಖಲಾಗಿದೆ. ನರಗುಂದದಿಂದ ಪ್ರಾರಂಭವಾದ ರೈತ ಹುತಾತ್ಮ ಜಾಥಾವು ಸಾವಿರಾರು ಉಪ ಜಾಥಾಗಳ ಸೇರ್ಪಡೆಯಿಂದ ದೈತ್ಯಾಕಾರವಾಗಿ ಬೆಳೆದು ಬಹಳ ದೊಡ್ಡ ಸಂಖ್ಯೆಯಲ್ಲಿ ಅಣಿ ನೆರೆದು ಇತಿಹಾಸ ಸೃಷ್ಟಿಸಿತು. ಇದೇ ಅವಧಿಯಲ್ಲಿ ಶಿವಮೊಗ್ಗ ಕಬ್ಬು ಬೆಳೆಗಾರರ ಸಂಘವು ನರಗುಂದ -ನವಲುಗುಂದ ಬಂಡಾಯ ನಡೆದ ಮೂರು ತಿಂಗಳ ನಂತರ ಕರ್ನಾಟಕ ರಾಜ್ಯ ರೈತ ಸಂಘವಾಗಿ ಉದಯಿಸಿತು. ಕರ್ನಾಟಕ ರಾಜ್ಯ ರೈತ ಸಂಘದ ಉದಯಕ್ಕೂ ಮೊದಲು ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದ ಮಲಪ್ರಭಾ ನೀರಾವರಿ ರೈತ ಸಮನ್ವಯ ಸಮಿತಿ ನಡುವೆ ಹಲವು ಸುತ್ತಿನ ಸಮಾಲೋಚನೆಗಳು ನಡೆದು ಸಾಮಾನ್ಯ ಬೇಡಿಕೆ ಪಟ್ಟಿ ರೂಪಿಸಲು ಪ್ರಯತ್ನ ನಡೆಸಿವೆಯಾದರೂ ಸೈದ್ಧಾಂತಿಕ, ರಾಜಕೀಯ, ಸಂಘಟನಾತ್ಮಕ ಕಣ್ಣೋಟದಲ್ಲಿ ಇದ್ದ ಭಿನ್ನತೆಯಿಂದ ಸಮಾಲೋಚನೆಗಳು ಮುಂದುವರೆಯಲಿಲ್ಲ. 

ಇದನ್ನೂ ಓದಿರಿ: ಕಾರ್ಮಿಕರ ಸ್ಥಿತಿ: ಎಲ್ಲಿಂದ ಎಲ್ಲಿಗೆ? (ಭಾಗ- 1)

ಇದೇ ಸಂದರ್ಭದಲ್ಲಿ  ಶಿಡ್ಲಘಟ್ಟದ ಈಗಲೇಟಿ ತಿಮ್ಮಸಂದ್ರದ ಅರಣ್ಯ ಭೂಮಿ ಸಾಗುವಳಿ ಹೋರಾಟದಿಂದ ಚಾಲನೆ ಪಡೆದ ಅವಿಭಜಿತ ಕೋಲಾರ ಜಿಲ್ಲೆಯ ವಿವಿಧ ಪ್ರದೇಶಗಳ ಭೂ ಆಕ್ರಮಣ ಚಳವಳಿಗಳಿಂದಾಗಿ ಒಟ್ಟು ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಬಂಧನಕ್ಕೆ ಒಳಗಾಗಿ ಕೋಲಾರ-ಕೆಜಿಎಫ್ ಜೈಲುಗಳು ತುಂಬಿ ಹೋಗಿದ್ದವು. ಭೂ ಸುಧಾರಣಾ ಕಾನೂನುಗಳ ಜನಪರ ತಿದ್ದುಪಡಿಗಾಗಿ ದಕ್ಷಿಣ ಕನ್ನಡ, ಕೊಡಗು,ಕೋಲಾರ, ಚಿತ್ರದುರ್ಗ ಜಿಲ್ಲೆಗಳಿಂದ ಪ್ರತ್ಯೇಕವಾಗಿ ಬಂದ ರೈತ ಪಾದಾಯಾತ್ರೆಗಳು 3-12-1973ರಂದು ವಿಧಾನ ಸೌಧದ ಮುಂದೆ ಸಾಮೂಹಿಕ ಸತ್ಯಾಗ್ರಹ ನಡೆಸಿವೆ.

1980 ರ ದಶಕದ ರೈತ ಚಳವಳಿಗಳ ಏಳು ಬೀಳು

ಹೆಚ್ಚು ಬೆಳೆಯಲು ಪ್ರಯತ್ನಿಸಲು ವೆಚ್ಚಕ್ಕೇನು ಮಾಡುವುದು? ಬೆಳೆಯದಿದ್ದರೆ ಸಾಲ ತೀರುವುದು ಹೇಗೆ ಎಂಬಂತಹ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಂತಹ ಪರಿಸ್ಥಿತಿ ಹಸಿರು ಕ್ರಾಂತಿ ಯ ಹಿನ್ನೆಲೆಯಲ್ಲಿ ಉಂಟಾಗಿತ್ತು. ನರಗುಂದ-ನವಲುಗುಂದ ರೈತ ಬಂಡಾಯವು ರಾಜ್ಯದ ರೈತಾಪಿ ಸಮುದಾಯದ ಪ್ರಜ್ಞೆಯನ್ನು ಬಡಿದೆಬ್ಬಿಸಿತು. ರೈತ ಹೋರಾಟದ ಈ ಬೃಹತ್ ಅಲೆ ಮಲಪ್ರಭಾ ರೈತ ಹೋರಾಟಗಾರರನ್ನು ದೊಡ್ಡ ಕ್ರಿಮಿನಲ್‌ಗಳಂತೆ ದೀರ್ಘಕಾಲದ ಜೈಲು ಶಿಕ್ಷೆಗೆ ತುತ್ತಾಗುವುದನ್ನು ತಪ್ಪಿಸಿತು. ನರಗುಂದ ನವಲಗುಂದ ರೈತ ಬಂಡಾಯಕ್ಕೆ ನೇತೃತ್ವ ನೀಡಿದ್ದ ಅಷ್ಟು ಹೊತ್ತಿಗಾಗಲೇ ಅಸ್ತಿತ್ವಕ್ಕೆ ಬಂದು 25 ವರ್ಷಗಳು ಕಳೆದಿದ್ದ ಕರ್ನಾಟಕ ಪ್ರಾಂತ ರೈತ ಸಂಘವನ್ನು ಹಲವು ಜಿಲ್ಲೆಗಳಿಗೆ, ಹಲವು ತಾಲ್ಲೂಕುಗಳಿಗೆ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿತು. ಈ ದಶಕದಲ್ಲೇ ಕರ್ನಾಟಕ ರಾಜ್ಯ ರೈತ ಸಂಘವು ಹಲವು ಚಳವಳಿಗಳನ್ನು ಕೈಗೊಂಡು ವೇಗವಾಗಿ ಬೆಳೆದಿದ್ದು. 70ರ ದಶಕದಲ್ಲಿ ವ್ಯಾಪಕವಾದ ಹಸಿರು ಕ್ರಾಂತಿಯೇ 80ರ ದಶಕದ ರೈತ ಚಳವಳಿಗಳ ಹುಟ್ಟಿನ ಮೂಲ. ಮಲಪ್ರಭಾ ನೀರಾವರಿ ಪ್ರದೇಶಗಳಲ್ಲಿ ನೀರಾವರಿ ತೆರಿಗೆ ಏರಿಕೆ ಮತ್ತು ಹತ್ತಿ,ಮುಸುಕಿನ ಜೋಳದ ಬೆಲೆ ಕುಸಿತದಿಂದ ರೈತರಲ್ಲಿ ಬೆಳೆಯುತ್ತಿದ್ದ ಆಕ್ರೋಶಕ್ಕೆ ಮಲಪ್ರಭಾ ನೀರಾವರಿ ರೈತ ಸಮನ್ವಯ ಸಮಿತಿ ಮೂಲಕ ಸಂಘಟಿತ ರೂಪ ಕೊಟ್ಟ ಸಲುವಾಗಿ ಅದು ದೊಡ್ಡದಾಗಿ ಸ್ಫೋಟಗೊಂಡಿತು. ಆದರೆ ನಂತರದ ನಾಲ್ಕು ತಿಂಗಳಗಳ ಕಾಲ ಎದ್ದ ಚಳವಳಿಯ ಅಲೆ ತಂತಾನೆ ಎದ್ದ ಸ್ಫೋಟ. ಈ ಸ್ಫೋಟಗಳಿಗೆ ಯಾರೂ ನಾಯಕರಿರಲಿಲ್ಲ. ಇಂತಹ ಹೋರಾಟಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರೂಪುಗೊಂಡಿತು. ಇದೇ ರೀತಿ ಹಸಿರು ಕ್ರಾಂತಿಯ ರೈತರ ಸಿಟ್ಟು ಸ್ಫೋಟಗೊಂಡ ಪರಿಣಾಮ ಮಹಾರಾಷ್ಟ್ರದ ಶೇತ್ಕರಿ ಸಂಘಟನೆ, ಉತ್ತರ ಪ್ರದೇಶದ ಭಾರತೀಯ ಕಿಸಾನ್ ಯೂನಿಯನ್, ಪಂಜಾಬಿನ ಭಾರತೀಯ ಕಿಸಾನ್ ಯೂನಿಯನ್ ಮುಂತಾದ ರೈತ ಸಂಘಟನೆಗಳು ಹುಟ್ಟಿದವು. 80ರ ದಶಕದಲ್ಲಿ ವೇಗದ ಏರುಮುಖ ಬೆಳವಣಿಗೆ ಕಂಡವು. ಇವೆಲ್ಲವೂ 80ರ ದಶಕದ ಕೊನೆಯಲ್ಲಿ ಇಳಿಮುಖ ಆಗಲಾರಂಭಿಸಿದವು. ಈ ಸಮಯದಲ್ಲೇ ಒಡೆಯಲಾರಂಭಿಸಿದವು.

ಕರ್ನಾಟಕ ರಾಜ್ಯ ರೈತ ಸಂಘ ಕೈಗೆತ್ತಿಕೊಂಡ ಸಮಸ್ಯೆಗಳು ಬಹಳ ಪ್ರಮುಖವಾಗಿ ಬೆಳೆಗಳ ಹಾಗೂ ಫಸಲಿನ ಸಮಸ್ಯೆಗಳಾಗಿದ್ದವು. ಅದರಲ್ಲೂ ಕಬ್ಬಿನ ಬೆಲೆ ಪ್ರಶ್ನೆ ಹೆಚ್ಚು ಆದ್ಯತೆಯನ್ನು ಪಡೆದುಕೊಂಡಿತ್ತು. ಹೀಗಾಗಿ ಕರ್ನಾಟಕ ರಾಜ್ಯ ರೈತ ಸಂಘ ತನ್ನ ಅಸ್ತಿತ್ವದ ಹೆಚ್ಚಿನ ಭಾಗವನ್ನು ನೀರಾವರಿ ಪ್ರದೇಶಗಳಲ್ಲಿ ಕಂಡುಕೊಂಡಿತ್ತು. ಸಾಲ, ಕಂದಾಯ ವಸೂಲಾತಿಗಾಗಿ ರೈತರ ಆಸ್ತಿಗಳನ್ನು ರೈತರ ಮನೆಗೆ ನುಗ್ಗಿ ಜಪ್ತಿ ಮಾಡುವ ಸಮಸ್ಯೆ ಕರ್ನಾಟಕ ರಾಜ್ಯ ರೈತ ಸಂಘದಲ್ಲಿ ಗಣನೀಯ ಪ್ರಾಮುಖ್ಯತೆಯನ್ನು ಪಡೆಯಿತು. 1982 ಆಕ್ಟೋಬರ್ 2ರಂದು ಬೆಂಗಳೂರಿನಲ್ಲಿ ನಡೆಸಿದ ಬೃಹತ್ ಬಹಿರಂಗ ಸಭೆ ಲಕ್ಷಗಟ್ಟಲೆ ರೈತರನ್ನು ಅಣಿನೆರೆಸಿತು. 1984ರ ಜನವರಿ 26ರಿಂದ ಆರಂಭವಾಗಿ ಫೆಬ್ರವರಿ 2ರವರೆಗೆ ನಡೆದ ರಸ್ತೆ, ರೈಲು ತಡೆ ಚಳವಳಿಯಲ್ಲಿ ಸುಮಾರು 32 ಸಾವಿರಕ್ಕಿಂತ ಹೆಚ್ಚು ಜನರು ಬಂಧನಕ್ಕೆ ಒಳಗಾದರು. 80ರ ದಶಕದ ಕೊನೆಯಲ್ಲಿ ಗ್ರಾಮೀಣ ಶ್ರೀಮಂತರ ರಾಜಕೀಯ ಹಿತಾಸಕ್ತಿಯು ಗ್ರಾಮೀಣ ಶ್ರೀಮಂತ ರೈತರೇ ಕೇಂದ್ರವಾಗಿದ್ದ ರಾಜ್ಯ ರೈತ ಸಂಘದ ಚಳವಳಿ ಮೇಲೆ ಪರಿಣಾಮ ಬೀರಲಾರಂಭಿಸಿ ಇಳಿಮುಖಗೊಳ್ಳತೊಡಗಿತು.

ಈ ದಶಕದಲ್ಲೇ ಕರ್ನಾಟಕ ಪ್ರಾಂತ ರೈತ ಸಂಘವು ರಾಜ್ಯದ ಹಲವು ಕಡೆ ಬಗರ್ ಹುಕಂ ಮತ್ತು ಅರಣ್ಯ ಭೂಮಿಯ ರೈತರ ಹಕ್ಕಿಗಾಗಿ ವಿರೋಚಿತ ಮತ್ತು ಸಮರಶೀಲ ಹೋರಾಟಗಳನ್ನು ಸಂಘಟಿಸಿದೆ. ರಾಜ್ಯದ ಹಲವು ಕಡೆ ರೈತರಿಗೆ ಭೂ ಸ್ವಾಧೀನ ಕೊಡಿಸಿದ್ದು ಈ ಹೋರಾಟದ ಹೆಗ್ಗಳಿಕೆ. ಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳ ನೀರಾವರಿಗಾಗಿ, ಅವಿಭಜಿತ ಬಿಜಾಪುರ ಹಾಗೂ ರಾಯಚೂರು ಜಿಲ್ಲೆಗಳ ಬರಗಾಲ ಪರಿಹಾರಕ್ಕಾಗಿ ನಡೆದ ಯಶಸ್ವಿ ಹೋರಾಟಗಳನ್ನು ಸಂಘಟಿಸಿದ್ದ ಕೀರ್ತಿ ಕರ್ನಾಟಕ ಪ್ರಾಂತ ರೈತ ಸಂಘಕ್ಕೆ ಸಲ್ಲುತ್ತದೆ. ಬೆಂಗಳೂರಿನ ತಾತಾಗುಣಿ ಎಸ್ಟೇಟ್ ಕೃಷಿ ಕಾರ್ಮಿಕರ ಹೋರಾಟವು ಈ ಅವಧಿಯಲ್ಲಿ ನಡೆದ ಹೋರಾಟವಾಗಿದೆ.

ಇದನ್ನೂ ಓದಿರಿ: ಕಾರ್ಮಿಕರ ಸ್ಥಿತಿ: ಎಲ್ಲಿಂದ ಎಲ್ಲಿಗೆ? (ಭಾಗ- 2)

ಈ ದಶಕದಲ್ಲೇ ಕರ್ನಾಟಕ ಪ್ರಾಂತ ರೈತ ಸಂಘವು ಕೃಷಿ ಕೂಲಿಕಾರರನ್ನು ಅವರದ್ದೇ ಗುರುತಿನಲ್ಲಿ ಸಂಘಟಿಸುವ ಅಗತ್ಯವನ್ನು ಮನಗಂಡು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘ(AIAWU) ವನ್ನು 1988ರಲ್ಲಿ ಅಸ್ತಿತ್ವಕ್ಕೆ ತರಲು ಪ್ರಮುಖ ಪಾತ್ರ ವಹಿಸಿದೆ. 29 ಸೆಪ್ಟೆಂಬರ್ 1986ರಂದು ನೀಡಿದ್ದ ಪಿಕೆಟಿಂಗ್ ಕರೆಗೆ ಓಗೊಟ್ಟು ಸುಮಾರು 50 ಸಾವಿರಕ್ಕೂ ಹೆಚ್ಚು ಬಡ ರೈತರು, ಕೃಷಿ ಕೂಲಿಕಾರರು ಭಾಗವಹಿಸಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಬಂಧನಕ್ಕೆ ಒಳಗಾಗಿದ್ದರು.

1991 ರಿಂದ 2004ರವರೆಗಿನ ನವ ಉದಾರೀಕರಣ ಧೋರಣೆಗಳಿಗೆ ರೈತ ಚಳವಳಿಗಳ ಪ್ರತಿರೋಧ

1991ರಲ್ಲಿ ಭಾರತ ಸರ್ಕಾರ ಹೊಸ ಕೃಷಿ ನೀತಿಯನ್ನು ಅಂಗೀಕರಿಸಿತು. ಹೊಸ ಕೃಷಿ ನೀತಿಯು ಕೃಷಿ ರಂಗದ ಸಮಗ್ರ ಬೆಳವಣಿಗೆಯನ್ನು ಸಾಧಿಸುತ್ತದೆ ಮತ್ತು ಕೃಷಿಕರಿಗೆ ಸಮೃದ್ಧಿಯನ್ನು ಉಂಟು ಮಾಡುತ್ತದೆ ಎಂದು ಪ್ರಬಲವಾಗಿ ವಾದಿಸಿತು. ಈ ಹೊಸ ಕೃಷಿ ನೀತಿಯನ್ನು ಐಎಂಎಫ್ ಹಾಗೂ ವಿಶ್ವ ಬ್ಯಾಂಕ್‌ಗಳ ನಿರ್ದೇಶನದ ಸಂರಚನಾ ಹೊಂದಾಣಿಕೆ ಕಾರ್ಯಕ್ರಮಗಳು ಮತ್ತು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ ಹೊಸ ಆರ್ಥಿಕ ನೀತಿಯ ಆಧಾರದಲ್ಲಿ ರೂಪಿಸಲಾಗಿತ್ತು. ಕೃಷಿಗೆ ನೀಡುತ್ತಿದ್ದ ಸಬ್ಸಿಡಿಗಳ ಕಡಿತ, ಕೃಷಿ ಉತ್ಪನ್ನಗಳ ವ್ಯಾಪಾರ ನಿರ್ಬಂಧಗಳ ತೆರವು, ಭೂ ಸುಧಾರಣಾ ಕಾನೂನುಗಳನ್ನು ದುರ್ಬಲಗೊಳಿಸುವುದು, ಕೃಷಿ ಭೂಮಿಯ ರಕ್ಷಣೆಗಿದ್ದ ನಿರ್ಬಂಧಗಳನ್ನು ರದ್ದುಪಡಿಸುವುದು, ಆಹಾರ ಬೆಳೆಗಳ ಸ್ವಾವಲಂಬನೆ ಪ್ರಧಾನವಾಗಿದ್ದ ನೀತಿಯಿಂದ ಆಹಾರ ಬೆಳೆಗಳ ಆಮದು ಪ್ರೊತ್ಸಾಹ ಮುಂತಾದ ಮೂಲಭೂತ ಬದಲಾವಣೆಗಳನ್ನು ಈ ಹೊಸ ಕೃಷಿ ನೀತಿಯು ಒಳಗೊಂಡಿತ್ತು. ಕೃಷಿಯಲ್ಲಿ ಸಾರ್ವಜನಿಕ ಹೂಡಿಕೆಯನ್ನು ಕ್ರಮೇಣ ನಿಲ್ಲಿಸುವ ಕ್ರಮಗಳು ರೈತರನ್ನು ದಿವಾಳಿ ಕಡೆಗೆ ಕರೆದೊಯ್ದುವು. ಈ ಅವಧಿಯಲ್ಲೇ ಮಾನವ ಚರಿತ್ರೆಯಲ್ಲೇ ಹಿಂದೆಂದೂ ಕಂಡರಿಯದ ರೈತರ ಆತ್ಮಹತ್ಯೆಗಳು ಕಾಣಿಸಿಕೊಳ್ಳತೊಡಗಿದವು.

(ಮುಂದುವರಿಯುತ್ತದೆ..)

(‘ಈದಿನ ಡಾಟ್ ಕಾಮ್’ ಹೊರ ತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

t yashvant
ಟಿ. ಯಶವಂತ್
+ posts

ಮಂಡ್ಯ ಜಿಲ್ಲೆಯ ಮದ್ದೂರಿನವರಾದ ಟಿ.ಯಶವಂತ್‌ರವರು ಎಸ್‌ಎಫ್‌ಐ ಮುಖಂಡರಾಗಿದ್ದರು. ಸದ್ಯ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಡಪಂಥೀಯ ಹೋರಾಟಗಳಲ್ಲಿ ಸಕ್ರಿಯವಾಗಿರುವ ಅವರು ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಟಿ. ಯಶವಂತ್
ಟಿ. ಯಶವಂತ್
ಮಂಡ್ಯ ಜಿಲ್ಲೆಯ ಮದ್ದೂರಿನವರಾದ ಟಿ.ಯಶವಂತ್‌ರವರು ಎಸ್‌ಎಫ್‌ಐ ಮುಖಂಡರಾಗಿದ್ದರು. ಸದ್ಯ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಡಪಂಥೀಯ ಹೋರಾಟಗಳಲ್ಲಿ ಸಕ್ರಿಯವಾಗಿರುವ ಅವರು ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...