ಐದು ದಶಕಗಳ ಕರ್ನಾಟಕ ರಾಜಕಾರಣ: ಗಳಿಸಿದ್ದನ್ನು ಕಳೆದುಕೊಂಡ ಕಾಲ!

Date:

ಹಿಂದುಳಿದ ವರ್ಗದವರನ್ನು ಮೇಲೆತ್ತಲು ಅರಸು ಅವರು ಮಾಡಿದ ಪ್ರಯತ್ನ ನಡೆದು ನಾಲ್ಕು ದಶಕಗಳಾದ ನಂತರ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಆಯ್ಕೆಯಾದ 28 ಸಂಸದರ ಪೈಕಿ ಹಿಂದುಳಿದ ವರ್ಗಗಳಿಗೆ ಸೇರಿದ ಒಬ್ಬನೇ ಒಬ್ಬ ಪ್ರತಿನಿಧಿ ಇರಲಿಲ್ಲ! ಇರಲಿಲ್ಲ ಎನ್ನುವುದು ಒಂದೆಡೆಯಾದರೆ, ಈ ಬಗ್ಗೆ ಹಿಂದುಳಿದ ವರ್ಗಗಳಿಂದ ಒಂದು ಸಣ್ಣ ಅಸಮಾಧಾನದ ಧ್ವನಿಯೂ ಕೇಳಿಸಲಿಲ್ಲ ಎನ್ನುವುದು ಅರಸು ಎಪ್ಪತ್ತರ ದಶಕದಲ್ಲಿ ಪ್ರಾರಂಭಿಸಿದ ಪ್ರಯೋಗ ಎಲ್ಲಿಗೆ ಬಂದು ನಿಂತಿದೆ ಎನ್ನುವುದಕ್ಕೆ ನಿದರ್ಶನ..

ಅದು ಮಹಾನ್ ಒಳಿತಿನ ಕಾಲವಾಗಿತ್ತು
ಅದು ದಾರುಣ ಕೆಡುಕಿನ ಕಾಲವಾಗಿತ್ತು
ಅದು ಪ್ರಾಜ್ಞತೆ ಮೈವೆತ್ತ ಕಾಲವಾಗಿತ್ತು
ಅದು ಮೂರ್ಖತೆ ಮೆರೆದ ಕಾಲವಾಗಿತ್ತು
ಅದು ನಂಬಿಕೆಯ ಕಾಲವಾಗಿತ್ತು
ಅದು ಅಪನಂಬಿಕೆಯ ಕಾಲವಾಗಿತ್ತು
ಅದು ಭರವಸೆಯ ವಸಂತವಾಗಿತ್ತು
ಅದು ನಿರಾಶೆಯ ಶಿಶಿರವಾಗಿತ್ತು
ಆ ಕಾಲ ಎಲ್ಲವನ್ನೂ ಕಂಡಿತ್ತು,
ಆ ಕಾಲ ಇದ್ದದ್ದನ್ನೆಲ್ಲ ಕಳೆದುಕೊಂಡಿತ್ತು

ಪ್ರಸಿದ್ಧ ಆಂಗ್ಲ ಕಾದಂಬರಿಕಾರ ಚಾರ್ಲ್ಸ್‌ ಡಿಕನ್ಸ್‌ನ ‘ದಿ ಟೇಲ್ ಆಫ್ ಟು ಸಿಟೀಸ್’ ಕಾದಂಬರಿಯ ಆರಂಭದ ಸಾಲುಗಳು  ಇವು. ಒಂದು ರೀತಿಯಲ್ಲಿ ಇವು ಚರಿತ್ರೆಯ ಯಾವುದೇ ಕಾಲಘಟ್ಟಕ್ಕೂ ಅನ್ವಯಿಸುವ ಮಾತುಗಳು. ಸಂದ ಐದು ದಶಕಗಳ ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ಅಕ್ಷರರೂಪದಲ್ಲಿ ದಾಖಲಿಸಿ ಅದರತ್ತ ಒಂದು ನಿರ್ಭಾವುಕ ಚಿಕಿತ್ಸಕ ನೋಟ ಹರಿಸಿದರೆ ಬೇಡಬೇಡವೆಂದರೂ ಚಾರ್ಲ್ಸ್‌ ಡಿಕನ್ಸ್ ಫ್ರೆಂಚ್ ಕ್ರಾಂತಿಯ ಕಾಲಘಟ್ಟದಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ಆಗುಹೋಗುಗಳ ಬಗ್ಗೆ ಹೇಳಿದ ಆಸೆ ನಿರಾಸೆಗಳ ಒಕ್ಕಣೆ ತಣ್ಣನೆ ಮನೋಪಟಲದಲ್ಲಿ ಮೂಡಿಬರುತ್ತದೆ.

ಹೌದು ಕರ್ನಾಟಕದಲ್ಲಿ ಕ್ರಾಂತಿಯೇನೂ ನಡೆಯಲಿಲ್ಲ. ಆದರೆ ಕ್ರಾಂತಿ ಎಂದರೆ ಎದ್ದುಕಾಣುವ, ಭೀತಿ ಹುಟ್ಟಿಸುವ ಸಾಲುಸಾಲು ಬೆಳವಣಿಗೆಗಳು ನಡೆದು ಹೋಗಿ ಯಥಾಸ್ಥಿತಿ ಒಮ್ಮಿಂದೊಮ್ಮೆಲೆ ಬದಲಾಗುವುದು ಎಂದಷ್ಟೇ ಅರ್ಥವಲ್ಲ. ಕ್ರಾಂತಿ ಕೆಲವೊಮ್ಮೆ ತಣ್ಣಗೆ ನಡೆದುಹೋಗುತ್ತದೆ. ಯಾರ ಅನುಭವಕ್ಕೂ ಬಾರದೆ ಬದಲಾವಣೆಗಳು ನಡೆದುಹೋಗುತ್ತವೆ. ಮುಂದಿನ ಒಂದು ತಲೆಮಾರು ಹಿಂತಿರುಗಿ ನೋಡಿ ಆ ಬದಲಾವಣೆಗಳ ಆಳಅಗಲವನ್ನು ಗುರುತಿಸುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಡಿಕನ್ಸ್‌ನ ಸಾಲುಗಳು ಸಾರುವಂತೆ ಬದಲಾವಣೆಗಳು ನಡೆಯುತ್ತಿವೆ ಅನ್ನಿಸುವಾಗಲೇ ಯಥಾಸ್ಥಿತಿ ಮುಂದುವರಿದಿರುತ್ತದೆ. ಬದಲಾವಣೆಯ ಗತಿ ಒಳಿತಿನೆಡೆಗೆ ಇದೆ ಅಂತ ಸಂಭ್ರಮಿಸುತ್ತಿರುವಾಗಲೇ ಮಹಾನ್ ಕೆಡುಕೊಂದು ಮತ್ತೆ ಕಾಲವನ್ನು ಹಿಂದಕ್ಕೆ ಜಗ್ಗುತ್ತಿರುವಂತೆ ಭಾಸವಾಗುತ್ತದೆ. ಕರ್ನಾಟಕದ ಐದು ದಶಕಗಳ ರಾಜಕೀಯ ಚರಿತ್ರೆಯಲ್ಲೂ ಈ ಎಲ್ಲ ವಿರೋಧಾಭಾಸಗಳನ್ನು ಕಾಣಬಹುದು. ಭಾರೀ ಭರವಸೆಯ ಬೆಟ್ಟವನ್ನೇ ಸೃಷ್ಟಿಸುವ ಮುನ್ನಡೆಗಳು, ಅದರ ಬೆನ್ನಿಗೆ ನಿರಾಸೆಯ ಪ್ರಪಾತಕ್ಕೆ ಜಾರಿಸುವ ಹಿನ್ನಡೆಗಳು ನಡೆದುಹೋಗಿವೆ. ಕೊನೆಗೂ ಸಾಗುವುದು ಕಾಲ ಮಾತ್ರ. ಕಾಲದೊಂದಿಗೆ ಸಮಾಜ ಮುಂದಕ್ಕೂ ಹೋಗುತ್ತದೆ, ಹಿಂದಕ್ಕೂ ಚಲಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಕಸನದ ಮೊದಲ ಹದಿನೈದು ವರ್ಷಗಳು (1972-73ರಿಂದ 1988)

ಐದು ದಶಕಗಳ ಕರ್ನಾಟಕದ ರಾಜಕೀಯ ಆಗುಹೋಗುಗಳತ್ತ ಗಮನ ಹರಿಸಿದರೆ ಅದು ಪ್ರಾರಂಭವಾಗುವುದು ರಾಜ್ಯಕ್ಕೆ ಕರ್ನಾಟಕ ಅಂತ ಮರುನಾಮಕರಣ ಆದಂದಿನಿಂದ. ಮೈಸೂರು ರಾಜ್ಯ ಅಂತ ಕರೆಸಿಕೊಳ್ಳುತ್ತಿದ್ದ ಕನ್ನಡ ನಾಡು ಕರ್ನಾಟಕ ರಾಜ್ಯ ಅಂತ ಮರುನಾಮಕರಣ ಪಡೆದುಕೊಂಡಾಗ ದೇವರಾಜ ಅರಸು ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು. ಹರಿದುಹಂಚಿ ಹೋಗಿದ್ದ ಕನ್ನಡಿಗರ ಪ್ರಾಬಲ್ಯವಿರುವ ಪ್ರದೇಶಗಳೆಲ್ಲ 1956ರಲ್ಲಿ ಒಂದಾಗಿ ರಾಜ್ಯದ ಏಕೀಕರಣ ನಡೆದಾಗಲೇ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಾಗಬೇಕಿತ್ತು. ಆದರೆ ಅದು ಆಗಲು ಸುಮಾರು ಹದಿನೇಳು ವರ್ಷಗಳ ಕಾಲ ಕಾಯಬೇಕಾಯಿತು. ತಡ ಆದದ್ದಕ್ಕೆ ಕಾರಣಗಳು ಏನಾದರೂ ಇರಲಿ, ದೇವರಾಜ ಅರಸು ಅವರ ಕಾಲದಲ್ಲಿ ಅದು ಆಯಿತು ಎನ್ನುವುದು ವಿಶೇಷವಾಗಿ ಗಮನಿಸಬೇಕಿರುವ ವಿಷಯ. ಏಕೀಕರಣವಾದ ನಂತರ ಅಧಿಕಾರಕ್ಕೆ ಬಂದ ನಾಲ್ಕು ಜನ ಮುಖ್ಯಮಂತ್ರಿಗಳಿಗೆ ಮಾಡಲಾಗದ್ದನ್ನು ಅರಸು ಮಾಡಿದರು ಎನ್ನುವುದು ಒಂದು. ಅರಸು ಮೈಸೂರಿನವರಾಗಿದ್ದೂ, ಮೈಸೂರನ್ನು ಒಂದು ಕಾಲದಲ್ಲಿ ಆಳಿದವರ ಜಾತಿಗೆ ಸೇರಿದವರಾಗಿದ್ದೂ ಅವರು ಮೈಸೂರು ಎನ್ನುವ ಹೆಸರಿನ ಬದಲಿಗೆ ವಿಶಾಲಾರ್ಥದ ಕರ್ನಾಟಕ ಎನ್ನುವ ಹೆಸರನ್ನು ಇರಿಸಿದರು ಎನ್ನುವುದು ಇನ್ನೊಂದು. ಆದರೆ, ಇಡೀ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ಇಷ್ಟೇ ಹೇಳಿದರೆ ಸಾಕಾಗುವುದಿಲ್ಲ. ಆ ಕಾಲಘಟ್ಟವನ್ನು ಸ್ವಲ್ಪ ವಿಶದವಾಗಿಯೂ, ವಿಶ್ಲೇಷಣಾತ್ಮಕವಾಗಿಯೂ ಅರ್ಥಮಾಡಿಕೊಳ್ಳಬೇಕಿದೆ. ಮರುನಾಮಕರಣ ಆಗುವ ಹೊತ್ತಿಗೆ ಅರಸು ಮುಖ್ಯಮಂತ್ರಿಯಾಗಿ ಒಂದು ವರ್ಷ ಅಷ್ಟೇ ಆಗಿತ್ತು. ಅರಸು ಅವರನ್ನು ಮುಖ್ಯಮಂತ್ರಿ ಪದವಿಗೇರಿಸಿದ 1972ರ ಚುನಾವಣೆ ಕರ್ನಾಟಕ ರಾಜಕೀಯದ ಗತಿ ಬದಲಿಸಿದ ಚುನಾವಣೆ. ಅರಸು ಆ ಚುನಾವಣೆಯಲ್ಲಿ ಹೊಸ ಪ್ರಯೋಗವೊಂದನ್ನು ಮಾಡಿ ಗೆದ್ದಿದ್ದರು. ಆ ತನಕ ರಾಜಕೀಯ ಅಧಿಕಾರದಿಂದ ವಂಚಿತರಾಗಿದ್ದ ವರ್ಗಗಳನ್ನೆಲ್ಲ ರಾಜಕೀಯವಾಗಿ ಒಗ್ಗೂಡಿಸಿ ರಾಜಕೀಯ ಅಧಿಕಾರ ಪ್ರಬಲ ವರ್ಗಗಳಿಂದ ದುರ್ಬಲ ವರ್ಗಗಳತ್ತ ಪ್ರವಹಿಸುವಂತೆ ಮಾಡಿದ್ದರು. ಆ ತನಕದ ರಾಜಕೀಯ ಬೇರೆಯೇ ಇತ್ತು. ಪ್ರಬಲ ವರ್ಗಗಳ ಅಥವಾ ಜಾತಿಗಳ ಕೈಯ್ಯಲ್ಲಿ ಇದ್ದ ರಾಜಕೀಯ ಅಧಿಕಾರವನ್ನು ಅವರಲ್ಲೇ ಉಳಿಸಿಕೊಳ್ಳದೆ ಹೋದರೆ ಯಾವುದೇ ಪಕ್ಷಕ್ಕೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎನ್ನುವ ನಂಬಿಕೆ ಇತ್ತು. ಅರಸು ಅದನ್ನು ಸುಳ್ಳು ಮಾಡಿದರು. ಅಧಿಕಾರವನ್ನು ಹಂಚಿಕೊಂಡೂ ಅಧಿಕಾರವನ್ನು ಪಡೆದುಕೊಳ್ಳಬಹುದು, ಪಡೆದ ಅಧಿಕಾರವನ್ನು ಗಟ್ಟಿಗೊಳಿಸಿಕೊಳ್ಳಬಹುದು ಎನ್ನುವ ಹೊಸ ಪ್ರಯೋಗ ಅದಾಗಿತ್ತು. ರಾಯಕೀಯವಾಗಿ ಅರಸು ಅವರನ್ನು ಆ ಪ್ರಯೋಗ ಬೆಳೆಸಿತು ಎನ್ನುವುದಕ್ಕಿಂತ ಹೆಚ್ಚು ಮುಖ್ಯವಾಗುವುದು ಆ ರಾಜಕೀಯ ಪ್ರಯೋಗದ ಪ್ರಜಾತಾಂತ್ರಿಕ ಪರಿಣಾಮಗಳು. ಸ್ವಾತಂತ್ರ್ಯ ನಂತರದ ಆರಂಭದ ಇಪ್ಪತ್ತು ವರ್ಷಗಳಲ್ಲಿ ಕೇವಲ ಚುನಾವಣೆಗಳಿಗಷ್ಟೇ ಸೀಮಿತವಾಗಿದ್ದ ಪ್ರಜಾತಂತ್ರ ವ್ಯವಸ್ಥೆ, ಚುನಾವಣೆ ನಡೆದೂ ತಲತಲಾಂತರಗಳಿಂದ ಸಾಮಾಜಿಕವಾಗಿ ಆರ್ಥಿಕವಾಗಿ ಪ್ರಬಲರಾಗಿದ್ದವರ ಕೈಗೆನೇ ಮತ್ತೆ ಮತ್ತೆ ಅಧಿಕಾರ ಸಿಗುವ ವ್ಯವಸ್ಥೆಗೆ ಸಾಕ್ಷಿಯಾಗಿದ್ದ ಪ್ರಜಾತಂತ್ರ ವ್ಯವಸ್ಥೆ ಅರಸು ಕಾಲದಲ್ಲಿ ಕರ್ನಾಟಕದಲ್ಲಿ ಹೊಸ ತಿರುವನ್ನು ಪಡೆದುಕೊಂಡಿತು.

Narayan Article Arasu
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು

ಮುಂದಿನ ವರ್ಷಗಳಲ್ಲಿ ನಡೆದದ್ದು ಪ್ರಜಾತಂತ್ರ ವ್ಯವಸ್ಥೆಯ ಈ ವಿಕಸನದ ಹಾದಿಯ ಮುಂದುವರಿಕೆ. ಅರಸು ಅವರು ಅನುಸರಿಸಿದ ಚುನಾವಣಾ ರಾಜಕೀಯದಿಂದ ದುರ್ಬಲ ಜಾತಿಗೆ ಸೇರಿದ ಶಾಸಕರ ಸಂಖ್ಯೆ ವಿಧಾನಸಭೆಯಲ್ಲಿ ಗಣನೀಯವಾಗಿ ಏರಿತು. ಅರಸು ಉದ್ಯೋಗದಲ್ಲಿ ಮೀಸಲಾತಿಯನ್ನು ವಿಸ್ತರಿಸಿದರು. ಪರಿಶಿಷ್ಟ ಜಾತಿ ವರ್ಗಗಳಿಗೆ ಆವಾಗಲೇ ಸಾಂವಿಧಾನಿಕವಾಗಿ ಪ್ರದತ್ತವಾದ ಮೀಸಲಾತಿ ದೊರೆಯುತಿತ್ತು. ಸಂಖ್ಯೆಯಲ್ಲಿ ದೊಡ್ಡದಿದ್ದ ಇತರ ಹಿಂದುಳಿದ ವರ್ಗಗಳು ಎಂದು ಕರೆಯಲಾಗುವ ದುರ್ಬಲ ಜಾತಿಗಳ ಸಮೂಹಕ್ಕೆ ಆಡಳಿತಾಧಿಕಾರದಲ್ಲಿ ಪ್ರಾತಿನಿಧ್ಯ ನೀಡುವ ಕೆಲಸ ಇನ್ನೂ ಸರಿಯಾಗಿ ಆಗಿರಲಿಲ್ಲ. ಅರಸು ಅದನ್ನು ಕೈಗೆತ್ತಿಕೊಂಡು ಮಾಡಿದರು. ರಾಜಕೀಯ ಅಧಿಕಾರದ ಹಂಚಿಕೆಯಲ್ಲಿ ಸಮಾನತೆಯನ್ನು ಸಾಧಿಸುವ ಹಾದಿಯಲ್ಲಿ ಮುಂದುವರಿಯುತ್ತಲೇ ಅರಸು ಸರಕಾರ ಭೂಸುಧಾರಣೆ ಮತ್ತು ಹಲವಾರು ಕಲ್ಯಾಣ ಯೋಜನೆಗಳ ಮೂಲಕ ದುರ್ಬಲ ವರ್ಗಗಳಿಗೆ ಆರ್ಥಿಕ ಬಲ ತುಂಬುವ ಕೆಲಸವನ್ನೂ ಮಾಡಿತು. ಇನ್ನೊಂದು ರೀತಿಯಲ್ಲಿ ನೋಡಿದರೆ ಈ ಅವಧಿ  ಕರ್ನಾಟಕ ಒಂದು ರಾಜ್ಯವಾಗಿ ತನ್ನನ್ನು ತಾನು ಕಂಡುಕೊಂಡ ಕಾಲವಾಗಿತ್ತು. ಕರ್ನಾಟಕದಲ್ಲಿ ಕರ್ನಾಟಕದ್ದೇ ಆದ ಒಂದು ರಾಜಕಾರಣದ ಮಾದರಿ, ಕರ್ನಾಟದಲ್ಲಿ ಕರ್ನಾಟಕದ್ದೇ ಆದ ಒಂದು ನಾಯಕತ್ವದ ಮಾದರಿ, ಕರ್ನಾಟದಲ್ಲಿ ಕರ್ನಾಟಕದ್ದೇ ಆದ ಒಂದು ಪ್ರಗತಿಯ ಮಾದರಿ ಇತ್ಯಾದಿಗಳೆಲ್ಲವೂ ರೂಪುಗೊಳ್ಳಲು ಪ್ರಾರಂಭವಾದ ಕಾಲಘಟ್ಟವದು. ಜತೆಗೆ ಹೊಸ ಸಾಮಾಜಿಕ ಹೋರಾಟಗಳು, ಬಂಡಾಯ ಇತ್ಯಾದಿ ಹೊಸ ಸಾಹಿತ್ಯ ಚಳವಳಿಗಳು, ಹೊಸ ವಿಶ್ವವಿದ್ಯಾಲಯಗಳು ಹುಟ್ಟಿಕೊಂಡು ಪ್ರಜಾತಂತ್ರ ಎನ್ನುವ ಯಾಂತ್ರಿಕ ರಾಜಕೀಯ ವ್ಯವಸ್ಥೆಯು ಒಂದು ಜೀವಂತಿಕೆಯುಳ್ಳ ಪ್ರಜಾ ಚೈತನ್ಯವಾಗಿ ಬದಲಾಗುವ ಭರವಸೆ ಹುಟ್ಟಿಸಿದ ವರುಷಗಳವು. 

Narayan Article havanur
ಹಿಂದುಳಿದ ವರ್ಗಗಳ ಸಾಮಾಜಿಕ- ಆರ್ಥಿಕ ಏಳಿಗೆಗಾಗಿ ಇಡೀ ದೇಶಕ್ಕೆ ಮಾದರಿಯಾಗುವಂತಹ ವರದಿ ರೂಪಿಸಿದ ಕೀರ್ತಿ ಎಲ್.ಜಿ.ಹಾವನೂರು ಅವರಿಗೆ ಸಲ್ಲುತ್ತದೆ. ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೆ 1975ರ ನವೆಂಬರ್ 19ರಂದು ಹಾವನೂರು ಅವರು ವರದಿ ಸಲ್ಲಿಸಿದ್ದರು

ಅರಸು ಅವರ ಅಧಿಕಾರ 1980ರಲ್ಲಿ ಕೊನೆಗೊಂಡ ನಂತರ ಗುಂಡೂರಾವ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ 1983ರವರೆಗೆ ಅಧಿಕಾರದಲ್ಲಿರುತ್ತದೆ. ಗುಂಡೂರಾವ್ ಅವರ ಅಧಿಕಾರಾವಧಿಯ  ಮೂರುವರ್ಷಗಳಲ್ಲಿ ಅರಸು ಯುಗದ ಬದಲಾವಣೆಯ ಪರ್ವ ಮುಂದುವರಿಯದೆ ಹೋದರೂ ತೀವ್ರ ಹಿನ್ನಡೆ ಅನುಭವಿಸಿದ್ದು ಕಾಣುವುದಿಲ್ಲ. ಬದಲಿಗೆ 1983ರ  ಚುನಾವಣೆಯ ನಂತರ ಈ ವಿಕಸನದ ಪರ್ವ ಇನ್ನೊಂದು ರೀತಿಯಲ್ಲಿ ಮುಂದುವರಿಯುತ್ತದೆ.

ಇದನ್ನೂ ಓದಿರಿ: ‘ದಲಿತ’ ಪದದ ಅಪಾರ್ಥ: ದಲಿತ ಚಳವಳಿಗೇ ಅಪಾಯ

ಆ ಚುನಾವಣೆಯಲ್ಲಿ ಕರ್ನಾಟಕದ ಮೊತ್ತ ಮೊದಲ ಕಾಂಗ್ರೆಸ್ಸೇತರ ಸರಕಾರ ಅಧಿಕಾರಕ್ಕೆ ಬರುತ್ತದೆ. ಆಡಳಿತ ಪಕ್ಷ ಬದಲಾಯಿತು ಎನ್ನುವುದಷ್ಟೆ ಅಲ್ಲ ಇದರ ಪ್ರಾಮುಖ್ಯತೆ. ಅದೊಂದು ಚಾರಿತ್ರಿಕ ಬೆಳವಣಿಗೆ. ಯಾಕೆಂದರೆ, ಆ ತನಕ ಅಂದರೆ ಸ್ವಾತಂತ್ರ್ಯಾ ನಂತರದ ಮೂರೂವರೆ ದಶಕಗಳಲ್ಲಿ ಕರ್ನಾಟಕದಲ್ಲಿ ಒಂದೇ ಪಕ್ಷ ಅಂದರೆ ಕಾಂಗ್ರೆಸ್ ಪಕ್ಷದ ಆಡಳಿತ ಇತ್ತು. ಒಂದೇ ಪಕ್ಷ ಮತ್ತೆ ಮತ್ತೆ ಅಧಿಕಾರಕ್ಕೆ ಬರುವುದು ಪ್ರಜಾತಂತ್ರದ ಜೀವಂತಿಕೆಯ ಲಕ್ಷಣ ಅಲ್ಲ ಎಂದಾದರೆ, ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಏಕಚಕ್ರಾಧಿಪತ್ಯಕ್ಕೆ ಅಂತ್ಯ ಹಾಡಿದ 1983ರ ಚುನಾವಣಾ ಫಲಿತಾಂಶ ರಾಜ್ಯದಲ್ಲಿ  ಪ್ರಜಾತಂತ್ರದ ಹೊಸ ಅಧ್ಯಾಯವೊಂದು ಪ್ರಾರಂಭವಾಯಿತು ಅಂತ ಭಾವಿಸಬೇಕಾಗುತ್ತದೆ. ಹಾಗೆ ಅಧಿಕಾರಕ್ಕೆ ಬಂದ ಜನತಾ ಪಕ್ಷದ ನೇತೃತ್ವದ ಮೊದಲ ಕಾಂಗ್ರೆಸ್ಸೇತರ ಸರಕಾರ ಅಲ್ಪಮತದ ಸರಕಾರವಾಗಿತ್ತು. ಎರಡೇ ವರ್ಷದಲ್ಲಿ ಅದು ತನ್ನ ಅವಧಿಯನ್ನು ಮೊಟಕುಗೊಳಿಸಿ ಮತ್ತೆ ವಿಧಾನಸಭಾ ಚುನಾವಣೆಯನ್ನು ಎದುರಿಸಿ ಬಹುಮತ ಪಡೆಯಿತು. ಅಂದರೆ, ಕಾಂಗ್ರೆಸ್ಸಿನ ಏಕಚಕ್ರಾಧಿಪತ್ಯ  ಕೊನೆಗೊಂಡದ್ದು ಒಂದು ಆಕಸ್ಮಿಕವಲ್ಲ, ರಾಜ್ಯದಲ್ಲಿ ನಿಜವಾಗಿಯೂ ಎರಡು ಪಕ್ಷಗಳ ಪೈಪೋಟಿಯ ಯುಗ ಪ್ರಾರಂಭ ಆಗಿದೆ ಎನ್ನುವುದನ್ನು 1985ರ ಚುನಾವಣಾ ಫಲಿತಾಂಶ ತೋರಿಸಿತು. ಎರಡು  ಅಥವಾ ಹೆಚ್ಚು ಪಕ್ಷಗಳ ನಡುವೆ ಆರೋಗ್ಯಕರ ಸ್ಪರ್ಧೆ ಇದ್ದಾಗ ಮಾತ್ರ ಪ್ರಜಾತಂತ್ರಕ್ಕೆ ಅರ್ಥ ಬರುವುದು. ಇಲ್ಲಿ ಗಮನಿಸಬೇಕಿರುವ ಇನ್ನೊಂದು ಅಂಶ ಎಂದರೆ, ಈ ರೀತಿ ಕರ್ನಾಟಕದಲ್ಲಿ ಒಂದೇ ಪಕ್ಷದ ಪಾರಮ್ಯವನ್ನು ಅಂತ್ಯಗೊಳಿಸುವಲ್ಲಿ ಹಲವಾರು ಜನಪರ ಚಳವಳಿಗಳು ಅಥವಾ ಹೋರಾಟಗಳು ಕೆಲಸ ಮಾಡಿವೆ ಎನ್ನುವುದು. ರೈತ ಹೋರಾಟ, ದಲಿತ ಹೋರಾಟ, ಕನ್ನಡ ಭಾಷಾಪರ ಹೋರಾಟ, ಕಾರ್ಮಿಕರ ಹೋರಾಟ ಹೀಗೆ ಸಾಲುಸಾಲು ಚಳವಳಿಗಳು ಎಪ್ಪತ್ತರ ದಶಕದ ಕೊನೆಯಲ್ಲಿ, ಎಂಬತ್ತರ ದಶಕದ ಆರಂಭದಲ್ಲಿ ಕರ್ನಾಟಕದಲ್ಲಿ ಕಾಣಿಸಿಕೊಂಡು ರಾಜ್ಯದಲ್ಲಿ ಪ್ರಜಾತಂತ್ರ ರಾಜಕೀಯ ಒಂದು ನಿರ್ಣಾಯಕ ತಿರುವು ಪಡೆದುಕೊಳ್ಳಲು ಕಾರಣವಾದವು.

A Narayan Article Hegade
ರಾಜ್ಯದ 10ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ರಾಮಕೃಷ್ಣ ಹೆಗಡೆಯವರು ಮೊದಲ ಕಾಂಗ್ರೆಸ್ಸೇತರ ಸಿಎಂ ಕೂಡ ಹೌದು. ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಆಯ್ಕೆಯಾದಾಗ ಅಂದಿನ ರಾಜ್ಯಪಾಲ ಗೋವಿಂದ ನಾರಾಯಣ ಅವರು ಪ್ರಮಾಣ ವಚನ ಬೋಧಿಸಿದ್ದರು.

ಎಂಬತ್ತರ ದಶಕದಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾ ಸರಕಾರ ಜಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆ ಎಲ್ಲ ಮಿತಿಗಳ ನಡುವೆಯೇ ಗ್ರಾಮೀಣ ಕರ್ನಾಟಕದಲ್ಲಿ ರಾಜಕೀಯಾಧಿಕಾರವನ್ನು ಹೆಚ್ಚು ಪ್ರಜಾಸತ್ತಾತ್ಮಕಗೊಳಿಸಿದ ಇನ್ನೊಂದು ಮಹತ್ವದ ಹೆಜ್ಜೆ. ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಪ್ರಾರಂಭಿಸಿದ ಅಧಿಕಾರ ಹಂಚಿಕೆಯ ಮಾದರಿ ಎಂಬತ್ತರ ದಶಕದ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಇನ್ನೊಂದು ರೀತಿಯಲ್ಲಿ ಮುಂದುವರಿಯಿತು. ಮೊತ್ತಮೊದಲ ಬಾರಿಗೆ ಮಹಿಳೆಯರು ಶೇ. 25ರಷ್ಟು ರಾಜಕೀಯ ಪ್ರಾತಿನಿಧ್ಯವನ್ನು ಮೀಸಲಾತಿಯ ಮೂಲಕ ಪಡೆದುಕೊಂಡರು, ಹಿಂದುಳಿದ ವರ್ಗಗಳು ಪ್ರಾತಿನಿಧ್ಯ ಪಡೆದುಕೊಂಡವು. ಗ್ರಾಮಸಭೆಯ ಪರಿಕಲ್ಪನೆ ಜಾರಿಗೆ ಬಂತು. ಆತನಕ ಪ್ರಜಾತಾಂತ್ರಿಕ ಪಾಳೇಗಾರಿಕೆಯನ್ನಷ್ಟೇ  ಕಂಡಿದ್ದ ಗ್ರಾಮೀಣ ಜನ ರಾಜಕೀಯ ಅಧಿಕಾರ ಹೊಸಹೊಸ ರೀತಿಯಲ್ಲಿ ಸಾಕಾರಗೊಳ್ಳುವುದನ್ನು ಕಾಣುವಂತಾಯಿತು. ಇದರರ್ಥ ಹಳ್ಳಿಗಾಡಿನಲ್ಲಿ ಮನೆಮಾಡಿದ್ದ ಪಾಳೇಗಾರಿಕೆ, ಜಾತಿ ದಬ್ಬಾಳಿಕೆ, ಲಿಂಗ ಅಸಮಾನತೆ ಇತ್ಯಾದಿಗಳೆಲ್ಲ ಒಮ್ಮಿಂದೊಮ್ಮೆಗೆ ಕೊನೆಗೊಂಡವೆಂದೇನಲ್ಲ. ಆದರೆ, ಸಮಾನತೆಯನ್ನು ಹಕ್ಕನ್ನಾಗಿ ನೀಡಿದ ಸಂವಿಧಾನ ಜಾರಿಗೆ ಬಂದು ಮೂರು ದಶಕಗಳಾದರೂ ತಮ್ಮತಮ್ಮ ಮನೆಗಳ ಆವರಣಕ್ಕಷ್ಟೇ ಸೀಮಿತರಾಗಿದ್ದ ಗ್ರಾಮೀಣ ಮಹಿಳೆಯರು ಹೊರಬಂದು ಚುನಾವಣೆಗೆ ಸ್ಪರ್ಧಿಸುವಂತಾದದ್ದು, ಗೆದ್ದು ಜನಪ್ರತಿನಿಧಿಗಳಾಗಿದ್ದು ಒಂದೆಡೆ. ಹಾಗೆಯೇ ಆತನಕ ಬಲಾಢ್ಯ ಜಾತಿಗಳಿಗೆ ಮಾತ್ರ ಸೀಮಿತವಾಗಿದ್ದ ಪಂಚಾಯತಿ ಮುಖ್ಯಸ್ಥರ ಹುದ್ದೆಗಳಲ್ಲಿ ದಲಿತರು, ಹಿಂದುಳಿದವರು, ಮಹಿಳೆಯರು ರಾರಾಜಿಸಿದ್ದು ಇನ್ನೊಂದೆಡೆ. ಇವೆಲ್ಲವೂ ಪ್ರಜಾತಂತ್ರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆಗಿ ಹೋದ ಬೆಳವಣಿಗೆಗಳು.

ನಮ್ಮ ಪರಿಶೀಲನೆಯಲ್ಲಿರುವ ಐದು ದಶಕಗಳ ಕಾಲಾವಧಿಯ ಮೊದಲ ಒಂದೂವರೆ ದಶಕದ ಕತೆ ಇದು. ಚಾರ್ಲ್ಸ್‌ ಡಿಕನ್ಸ್‌ನ ಭಾಷೆಯನ್ನೂ ಬಳಸಿ ಹೇಳಬಹುದಾದ ಭರವಸೆಯ ರಮ್ಯ ಚೈತ್ರಕಾಲವಲ್ಲದೆ ಹೋದರೂ ಈ ಕಾಲದ ಬೆಳವಣಿಗೆಗಳು ಒಟ್ಟು ವ್ಯವಸ್ಥೆ ಒಂದಷ್ಟು ಉತ್ತಮವಾಗುವ ಹಾದಿಯಲ್ಲಿದೆ ಎನ್ನುವಷ್ಟಾದರೂ ಭರವಸೆ ಹುಟ್ಟಿಸಿತ್ತು. ರಾಜಕೀಯ ಅಧಿಕಾರ ತಳವರ್ಗಗಳಿಗೆ ತಲುಪಿದ್ದು, ರಾಜಕೀಯ ಅಧಿಕಾರ ತಳಮಟ್ಟಕ್ಕೆ ಹರಿದದ್ದು, ಏಕಚಕ್ರಾಧಿಪತ್ಯದ ರಾಜಕೀಯ ಅಂತ್ಯಗೊಂಡು ಸ್ಪರ್ಧಾತ್ಮಕ ರಾಜಕೀಯ ಪ್ರಾರಂಭವಾದದ್ದು ಮುಂತಾದ ಮಹತ್ವದ ಬೆಳವಣಿಗೆಗಳು ಪ್ರಜಾತಂತ್ರ ರಾಜಕೀಯದ ವಿಕಸನದ ಪರ್ವವೊಂದಕ್ಕೆ ನಾಂದಿಹಾಡಿದವು.

ಈ ಪ್ರಯತ್ನದ ದೌರ್ಬಲ್ಯಗಳ ಬಗ್ಗೆ, ಸೀಮಿತ ಯಶಸ್ಸಿನ ಬಗ್ಗೆ, ಹಿನ್ನಡೆಗಳ ಬಗ್ಗೆ  ಹಲವಾರು ಟೀಕೆಗಳಿವೆ ಮತ್ತು ಅಂತಹ ಟೀಕೆಗಳಲ್ಲಿ ಸತ್ಯಾಂಶಗಳಿವೆ. ಆದರೆ, 70ರ ದಶಕದಲ್ಲಿ ಕರ್ನಾಟಕದಲ್ಲಿ ಪ್ರಜಾತಂತ್ರವನ್ನು ಗಟ್ಟಿಗೊಳಿಸುವ, ಸಂವಿಧಾನದ ಮುನ್ನುಡಿಯಲ್ಲಿ ಸಾರಲಾಗಿರುವ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಜನರಿಗೆ ಒದಗಿಸುವತ್ತ ಇಡೀ ವ್ಯವಸ್ಥೆಯನ್ನು ಮರುನಿರೂಪಿಸುವ ಒಂದು ಪ್ರಯತ್ನವಂತೂ ನಡೆದಿದೆ ಎನ್ನುವುದು ಮುಖ್ಯ. ಅಂತಹ ಪ್ರಯತ್ನ ದೇಶದ ಇತರೆಡೆ ಆಗ ನಡೆದಿರಲಿಲ್ಲ. ಎಷ್ಟೋ ಕಡೆ ಈಗಲೂ ನಡೆದಿಲ್ಲ. ಮುಂದೆ ದೇಶದಲ್ಲಿ ಮಂಡಲ್ ಆಯೋಗದ ವರದಿ ಜಾರಿಗೆ ಬಂದು ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ರಾಜಕೀಯದಲ್ಲಿ ಮತ್ತು ಆಡಳಿತ ಅಧಿಕಾರದಲ್ಲಿ ದೇಶದೆಲ್ಲೆಡೆ ಹೆಚ್ಚಿತು. ಅದು ನಡೆದದ್ದು 1990ರ ದಶಕದಲ್ಲಿ ಅಂದರೆ ಸುಮಾರು ಇಪ್ಪತ್ತು ವರ್ಷಗಳ ನಂತರ.

ಹದಿನೈದು ವರ್ಷಗಳ ಸ್ಥಗಿತಾವಸ್ಥೆ (1989-2004)

ಮೊದಲ ಹದಿನೈದು ವರ್ಷಗಳಿಗೆ ಹೋಲಿಸಿದರೆ ಮುಂದಿನ ಹದಿನೈದು ವರ್ಷಗಳಲ್ಲಿ ಕಂಡದ್ದು ಒಂದು ರೀತಿಯ ಸ್ಥಗಿತತೆ. ಹಿಂದಿನ ಒಂದೂವರೆ ದಶಕಗಳ ಸಾಮಾಜಿಕ ನ್ಯಾಯ ಮತ್ತು ರಾಜಕೀಯ ನ್ಯಾಯದ ಕಾರ್ಯಸೂಚಿಗಳು ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎಂಬಂತೆ ಉಳಿದವು. ಅರಸು ಅವರು ಮುನ್ನೆಲೆಗೆ ತಂದ ಹಿಂದುಳಿದ ವರ್ಗಗಳ ನಾಯಕರು ಬೆಳೆದುನಿಂತಿದ್ದರು. ಮೂರು ಮಂದಿ ಹಿಂದುಳಿದ ವರ್ಗಗಳ ನಾಯಕರುಗಳು ಈ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿ ಹೋದರು (ಎಸ್. ಬಂಗಾರಪ್ಪ 1990-1992; ವೀರಪ್ಪ ಮೊಯಿಲಿ 1992-1994; ಎನ್. ಧರಂ ಸಿಂಗ್ 2004-06). ಆದರೆ ಅರಸು ಬೆಳೆಸಿದ ನಾಯಕರು ವೈಯಕ್ತಿಕ ನೆಲೆಯಲ್ಲಿ ಅಧಿಕಾರ ಗಟ್ಟಿಗೊಳಿಸುವಲ್ಲಿ ನಿರತರಾದರೆ ಹೊರತು ಇಡೀ ಹಿಂದುಳಿದ ವರ್ಗಗಳನ್ನು ರಾಜಕೀಯವಾಗಿ ಒಂದು ಶಕ್ತಿಯನ್ನು ಬೆಳೆಸುವ ಪ್ರಯತ್ನ ಮಾಡಲೇ ಇಲ್ಲ. ಆ ಮಟ್ಟಿಗೆ ರಾಜಕೀಯ ಮುನ್ನೋಟವೂ ಅವರ್ಯಾರಿಗೂ ಇರಲಿಲ್ಲ.

ಇದನ್ನೂ ಓದಿರಿ: ‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?

ಸಾಮಾಜಿಕ ನ್ಯಾಯದ ಕಾರ್ಯಸೂಚಿ ತಾಂತ್ರಿಕವಾಗಿ ಮುಂದುವರಿಯಿತು. ಆದರೆ ಒಳಗೊಳಗೇ ಮತ್ತೆ ಪ್ರಬಲ ಜಾತಿಗಳು ತಮ್ಮ ಪ್ರಾಬಲ್ಯವನ್ನು ಮರುಸ್ಥಾಪಿಸಲು ಪ್ರಾರಂಭಿಸಿದವು. ಹಿಂದುಳಿದ ವರ್ಗಗಳಿಗೆ ನೀಡಲಾದ ಮೀಸಲಾತಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಜಾರಿಗೊಳಿಸಲು ಮುಂದಾದರು. ಪ್ರಬಲ ಜಾತಿಗಳಿಂದ ದೊಡ್ಡ ಮಟ್ಟಿನ ಪ್ರತಿರೋಧ ಬಂತು. ಮೊಯಿಲಿಯವರ ವಿರುದ್ಧ ಕಾಂಗ್ರೆಸ್ಸಿನೊಳಗೆ ಹುಟ್ಟಿಕೊಂಡ ಭಿನ್ನಮತ ಯಾವ ಪ್ರಮಾಣದಲ್ಲಿತ್ತು ಎಂದರೆ ಅದೊಂದು ದಿನ ಅವರನ್ನು ಪಕ್ಷದ ಶಾಸಕರು ವಿಧಾನ ಸೌಧದ ಮೂರನೆಯ ಮಹಡಿಯಲ್ಲಿ ಅಕ್ಷರಶಃ ಬೆನ್ನಟ್ಟಿ ಓಡಿಸಿಕೊಂಡು ಹೋದ ವಿದ್ಯಮಾನ ನಡೆಯಿತು.

chinnappa reddy
ಜಸ್ಟಿಸ್ ಚಿನ್ನಪ್ಪ ರೆಡ್ಡಿ

ಅಧಿಕಾರ ವಿಕೇಂದ್ರೀಕರಣದ ಕಾರ್ಯಸೂಚಿಯೂ ಕಳೆಗುಂದಿತು. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹೆಗಡೆ ಸರಕಾರ ಜಾರಿಗೆ ತಂದ ಪಂಚಾಯತ್ ರಾಜ್ ಸಂಸ್ಥೆಗಳ ಅಧಿಕಾರಾವಧಿ ಮುಗಿಯಿತು. ಆದರೆ ಬಂಗಾರಪ್ಪ ಸರಕಾರ ಮತ್ತೆ ಅವುಗಳಿಗೆ ಚುನಾವಣೆ ನಡೆಸಲಿಲ್ಲ. ಆ ಹೊತ್ತಿಗೆ ಕರ್ನಾಟಕದ ಅಧಿಕಾರ ವಿಕೇಂದ್ರೀಕರಣ ಮಾದರಿಯಲ್ಲಿ ಸಂವಿಧಾನ ತಿದ್ದುಪಡಿಯ ಮೂಲಕ ಇಡೀ ದೇಶದಲ್ಲೇ ಜಾರಿಗೊಳಿಸಿದ ಕಾರಣ ವೀರಪ್ಪ ಮೊಯಿಲಿ ಸರಕಾರಕ್ಕೆ ಚುನಾವಣೆ ನಡೆಸುವುದು ಅನಿವಾರ್ಯ ಆಯಿತು. ಮೊದಲಿಗೆ ಡಿಸೆಂಬರ್ 1993ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳು ನಡೆದವು. ಮುಂದಿನ ವರ್ಷ ಮೇ ತಿಂಗಳಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಆಗಬೇಕಿತ್ತು. ಆದರೆ ಶಾಸಕರು, ಸಚಿವರು ಸಿದ್ಧರಿರಲಿಲ್ಲ. ಮೇ ತಿಂಗಳು 1994ನೇ ಇಸವಿಯಲ್ಲಿ ರಾಜ್ಯ ಸಂಪುಟ ಸಭೆ ಸೇರಿ ದಿನಾಂಕ ನಿಗದಿಯಾಗಿದ್ದ ಪಂಚಾಯತ್ ಚುನಾವಣೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದಾಗ ಅಂದಿನ ಪಂಚಾಯತ್ ರಾಜ್ ಸಚಿವ ಎಂ. ವೈ. ಘೋರ್ಪಡೆ ಪ್ರತಿಭಟಿಸಿ ರಾಜೀನಾಮೆ ನೀಡಿದ್ದೂ ನಡೆಯಿತು. ಅಷ್ಟಕ್ಕೂ ಹೆಗಡೆ ಸರಕಾರದ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಪಂಚಾಯತ್ ರಾಜ್ ಮಾದರಿಗೆ ಹೋಲಿಸಿದರೆ ಸಂವಿಧಾನ ತಿದ್ದುಪಡಿಯ ನಂತರ 1993ರಲ್ಲಿ ಜಾರಿಗೆ ಬಂದ ಪಂಚಾಯತ್ ವ್ಯವಸ್ಥೆ ತೀರಾ ದುರ್ಬಲವಾಗಿತ್ತು ಎನ್ನುವುದು ಗಮನಿಸಬೇಕಿರುವ ಸತ್ಯ. ನಂತರ 1994ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಜನತಾ ದಳ ಸರಕಾರ ಪಂಚಾಯತ್ ಚುನಾವಣೆಗಳನ್ನು ಪುನರಾರಂಭಿಸಿತು. ಆದರೆ ಹಿಂದಿನ ಕಸುವು ವ್ಯವಸ್ಥೆಯಲ್ಲಿ ಉಳಿದಿರಲಿಲ್ಲ.

ಮೊದಲ ಹದಿನೈದು ವರ್ಷಗಳಲ್ಲಿ  ಕಾಣಿಸಿಕೊಂಡ ಸ್ಪರ್ಧಾತ್ಮಕ ಚುನಾವಣಾ ರಾಜಕೀಯವೇನೋ ಮುಂದುವರಿಯಿತು. ಆದರೆ, 1999ರ ಹೊತ್ತಿಗೆ ಕಾಂಗ್ರೆಸ್ಸಿನ ಏಕಚಕ್ರಾಧಿಪತ್ಯವನ್ನು ಯಶಸ್ವಿಯಾಗಿ 1983ರಲ್ಲಿ ಅಂತ್ಯಗೊಳಿಸಿದ ಜನತಾದಳ ಸೊರಗಿ ಹಲವು ಹೋಳುಗಳಾಯಿತು. ಕರ್ನಾಟಕದ ಚುನಾವಣಾ ರಾಜಕೀಯದಲ್ಲಿ ಒಂದು ಕ್ಷೀಣ ಧ್ವನಿಯಾಗಿದ್ದ ಬಿಜೆಪಿ 1994ರ ಚುನಾವಣೆಯಲ್ಲಿ 40 ಸೀಟುಗಳನ್ನು ಗೆದ್ದುಕೊಂಡಿತು, 1999ರಲ್ಲಿ ಅದನ್ನು 44 ಸೀಟುಗಳಿಗೆ ಹೆಚ್ಚಿಸಿಕೊಂಡಿತು. ಬಿಜೆಪಿ ಅಷ್ಟಿಷ್ಟು ಮೇಲೆದ್ದಿತು. ಆದರೆ ಎರಡನೆಯ ಪಕ್ಷವಾಗಿದ್ದ  ಜನತಾದಳ ದುರ್ಬಲಗೊಂಡಿತು.

ಈ ಹಂತದವರೆಗೆ ಕರ್ನಾಟಕ ರಾಜಕಾರಣದಲ್ಲಿ ಅಧಿಕಾರ ವಹಿಸಿಕೊಂಡಿದ್ದ ಎರಡೂ ಪಕ್ಷಗಳೂ ಎಲ್ಲ ಜಾತಿಗಳನ್ನೂ ಒಳಗೊಳ್ಳುವ ಪಕ್ಷಗಳಾಗಿದ್ದವು. ಬಿಜೆಪಿಯ ಬೆಳವಣಿಗೆ ಮತ್ತು ಜನತಾ ದಳದ ವಿಘಟನೆಗಳ ಜತೆಗೆ ಒಂದೊಂದು ಜಾತಿಗಳು ಒಂದೊಂದು ಪಕ್ಷದತ್ತ ಎನ್ನುವ ಜಾತಿರಾಜಕಾರಣ ಹುಟ್ಟಿಕೊಂಡು ಎಪ್ಪತ್ತರ ದಶಕದಲ್ಲಿ ಹುಟ್ಟಿಕೊಂಡ ಆರೋಗ್ಯಕರ ಸ್ಪರ್ಧಾತ್ಮಕ ರಾಜಕೀಯ ವಿಕಾರಗೊಂಡಿತು.  ಎಲ್ಲ ಪಕ್ಷಗಳ ಬಗ್ಗೆ ಜನರಿಗೆ ಒಂದು ರೀತಿಯ ಜಿಗುಪ್ಸೆ ಹುಟ್ಟಿಕೊಂಡದ್ದೂ ಈ ಅವಧಿಯಲ್ಲೇ. ಅದರ ಫಲವಾಗಿಯೇ 2004ರ ಚುನಾವಣೆ ನಡೆದಾಗ ಯಾವೊಂದು ಪಕ್ಷಕ್ಕೂ ಬಹುಮತ ಬರಲಿಲ್ಲ.

ಪತನದ ಹಾದಿಯಲ್ಲಿ ಇಪ್ಪತ್ತು ವರ್ಷಗಳು (2004-2024)

ಐವತ್ತು ವರ್ಷಗಳ ಕೊನೆಯ ಅವಧಿಯ ಹದಿನೈದು ವರ್ಷಗಳು ಅಂದರೆ 2004ರ ವಿಧಾನಸಭಾ ಚುನಾವಣೋತ್ತರ ಕರ್ನಾಟಕ ಕಂಡದ್ದು ಮೊದಲ ಎರಡು ದಶಕಗಳಲ್ಲಿ ಆಗಿ ಹೋದ ಮೂರೂ ಸಕಾರಾತ್ಮಕ ಬೆಳವಣಿಗೆಗಳ ತೀವ್ರ ಹಿನ್ನಡೆ ಮತ್ತು ಪತನ. ಇದ್ದದ್ದರಲ್ಲಿ ಕೆಲವು ಕುಸಿತ ಕಂಡರೆ ಇನ್ನು ಕೆಲವು ಸ್ಥಗಿತ ಅವಸ್ಥೆಯಲ್ಲೇ ಉಳಿದಿವೆ.

ಅರಸು ಕಾಲದಲ್ಲಿ ರಾಜಕೀಯ ಅಧಿಕಾರದ ಸಾಮಾಜಿಕ ನೆಲೆಗಳನ್ನು ವಿಸ್ತರಿಸುವ ಕಾರ್ಯ ಈಗ ನಕಾರಾತ್ಮಕ ಹಾದಿ ಹಿಡಿದಿದೆ. ಅರಸು ಅವರ ಪ್ರಯೋಗದಿಂದಾಗಿ ಒಂದಷ್ಟು ಹಿಂದುಳಿದ ಜಾತಿಗಳು ರಾಜಕೀಯ ಪ್ರಾಬಲ್ಯವನ್ನು ಕಂಡುಕೊಂಡವು. ಆದರೆ ಆ ಜಾತಿಗಳಲ್ಲಿ ಈಗಲೂ ಒಂದು ರಾಜಕೀಯ ಪ್ರಜ್ಞೆ ಹುಟ್ಟಿಕೊಳ್ಳಲಿಲ್ಲ. ಪರಿಣಾಮವಾಗಿ ಇಂದು ಹಿಂದುಳಿದ ವರ್ಗಗಳಲ್ಲಿ ಅಷ್ಟಿಷ್ಟು ರಾಜಕೀಯ ನೆಲೆ ಕಂಡುಕೊಂಡಿರುವ ಜಾತಿಗಳು ತಮಗಿಂತಲೂ ಹಿಂದುಳಿದಿರುವ ಜಾತಿಗಳ ಮೇಲ್ಮುಖ ಚಲನೆಯ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆದಿವೆ. ಅಷ್ಟೇ ಅಲ್ಲ, ಪ್ರಬಲ ಜಾತಿಗಳ ಏಕಸ್ವಾಮ್ಯದ ವಿರುದ್ಧ ಸೆಣೆಸಿ ಸಮಾನತೆಯ ಆಧಾರದ ಮೇಲೆ ರಾಜಕೀಯ ಅಧಿಕಾರ ಹಂಚಿಕೆಯ ಮರುನಿರೂಪಣೆಯ ಕಾರ್ಯಕ್ಕೆ ಹೋರಾಡಬೇಕಿದ್ದ ಹಿಂದುಳಿದ ಜಾತಿಗಳು, ಪ್ರಬಲ ಜಾತಿಗಳ ಸ್ವಾಮ್ಯವನ್ನು ರಾಜಕೀಯದಲ್ಲಿ ಮುಂದುವರಿಸಲು ನೆರವಾಗುತ್ತಿವೆ. ತಮ್ಮ ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದರೆ ಹಲವು ಪಟ್ಟು ಹೆಚ್ಚು ಪ್ರಮಾಣದಲ್ಲಿ ರಾಜಕೀಯ ಪ್ರಾತಿನಿಧ್ಯ ಪಡೆದುಕೊಂಡಿರುವ ಪ್ರಬಲ ಒಕ್ಕಲಿಗ ಮತ್ತು ಲಿಂಗಾಯತ ಜಾತಿಗಳು ಯಾವ ಪಕ್ಷವನ್ನು ಬೆಂಬಲಿಸಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಲು ಯೋಜನೆ ಹಾಕಿಕೊಂಡಿದ್ದಾರೋ, ಅದೇ ಪಕ್ಷವನ್ನು ಹಿಂದುಳಿದವರೂ ಹೆಚ್ಚು ಹೆಚ್ಚು ಬೆಂಬಲಿಸುವುದು ಕಂಡುಬರುತ್ತದೆ. ರಾಜಕೀಯ ಅಧಿಕಾರದ ಸಮಾನ ಹಂಚಿಕೆಯ ಕಾರ್ಯಸೂಚಿಯನ್ನು ಬೆಂಬಲಿಸಿ ಮುಂದುವರಿಸಬೇಕಾದವರು ಹಿಂದುಳಿದ ವರ್ಗದವರು. ಆದರೆ ಅವರು ತಮಗಿಂತ ದುರ್ಬಲ ವರ್ಗಗಳನ್ನು ಒಟ್ಟು ಸೇರಿಸಿ ಒಂದು ನಿರ್ಣಾಯಕ ಶಕ್ತಿಯಾಗುವ ಬದಲು, ಯಾವ ಸಾಮಾಜಿಕ ನ್ಯಾಯದ ಕಾರ್ಯಸೂಚಿ ಅವರನ್ನು ಹಂತಕ್ಕೆ ತಂದು ನಿಲ್ಲಿಸಿದೆಯೋ ಅದರ ವಿರುದ್ಧವೇ ಅವರು ಒಟ್ಟಾಗುತ್ತಿದ್ದಾರೆ.

ಅರಸು ಹಿಂದುಳಿದ ವರ್ಗದವರನ್ನು ಮೇಲೆತ್ತಲು ಮಾಡಿದ ಪ್ರಯತ್ನ ನಡೆದು ನಾಲ್ಕು ದಶಕಗಳಾದ ನಂತರ ನಡೆದ 2019ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಆಯ್ಕೆಯಾದ 28 ಸಂಸದರ ಪೈಕಿ ಹಿಂದುಳಿದ ವರ್ಗಗಳಿಗೆ ಸೇರಿದ ಒಬ್ಬನೇ ಒಬ್ಬ ಪ್ರತಿನಿಧಿ ಇರಲಿಲ್ಲ! ಇರಲಿಲ್ಲ ಎನ್ನುವುದು ಒಂದೆಡೆಯಾದರೆ, ಬಗ್ಗೆ ಹಿಂದುಳಿದ ವರ್ಗಗಳಿಂದ ಒಂದು ಸಣ್ಣ ಅಸಮಾಧಾನದ ಧ್ವನಿಯೂ ಕೇಳಿಸಲಿಲ್ಲ ಎನ್ನುವುದು ಅರಸು ಎಪ್ಪತ್ತರ ದಶಕದಲ್ಲಿ ಪ್ರಾರಂಭಿಸಿದ ಪ್ರಯೋಗ ಎಲ್ಲಿಗೆ ಬಂದು ನಿಂತಿದೆ ಎನ್ನುವುದಕ್ಕೆ ನಿದರ್ಶನ.

ಎಪ್ಪತ್ತರ ದಶಕದಲ್ಲಿ ಒಂದು ಪಕ್ಷದ ಏಕಸ್ವಾಮ್ಯ ಕೊನೆಯಾಗಿ ಚುನಾವಣಾ ರಾಜಕೀಯದಲ್ಲಿ ಸ್ಪರ್ಧೆಯ ಯುಗವೊಂದು ಪ್ರಾರಂಭವಾಗಿದ್ದು ಸರಿಯಷ್ಟೆ. ಅದೀಗ ಎಲ್ಲಿಗೆ ಬಂದು ನಿಂತಿದೆ ಎಂದು ನೋಡೋಣ.

ಸೂಕ್ಷ್ಮವಾಗಿ ಗಮನಿಸಿದರೆ 2004ರಿಂದ 2023ವರೆಗಿನ ಅವಧಿಯಲ್ಲಿ ಕರ್ನಾಟಕದ ಮತದಾರ ಮತ್ತೆ ಮತ್ತೆ ಹೇಳಿದ್ದು ನಮಗೆ ಮೂರೂ ಪಕ್ಷಗಳ ಬಗ್ಗೆ ನಂಬಿಕೆ ಉಳಿದಿಲ್ಲ ಎನ್ನುವ ಅಭಿಪ್ರಾಯವನ್ನು. ಹಾಗಾಗಿಯೇ 2004ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ. ರಾಜ್ಯದಲ್ಲಿ ಮೊಟ್ಟಮೊದಲ ಸಮ್ಮಿಶ್ರ ಸರಕಾರಗಳು (2004-2006 ಮತ್ತು 2006-2007) ಒಂದಾದ ನಂತರ ಅಧಿಕಾರಕ್ಕೆ ಬಂದು ಅಲ್ಪಾವಧಿಯಲ್ಲೇ ಉರುಳಿ ಹೋಗುತ್ತವೆ. ನಂತರ 2008ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇನೋ ಬಂತು. ಆದರೆ ಅದಕ್ಕೆ ಪೂರ್ತಿ ಬಹುಮತ ಇರಲಿಲ್ಲ. ಬಿಜೆಪಿ ಏದುಸಿರು ಬಿಟ್ಟು 110 ಸೀಟುಗಳನ್ನು ಸಂಪಾದಿಸಿತು. ಆದರೆ ಈ ಸಂಪಾದನೆಯೂ ಕೃತಕ. ಯಾಕೆಂದರೆ ಬಿಜೆಪಿ ಅಷ್ಟಾದರೂ ಸ್ಥಾನಗಳು ಬಂದದ್ದು ಪಕ್ಷದ ಆಗಿನ ಪ್ರಶ್ನಾತೀತ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡದೆ ದ್ರೋಹ ಮಾಡಿದರು ಎನ್ನುವ ಕಾರಣಕ್ಕೆ ರಾಜ್ಯದ ಲಿಂಗಾಯತ ಮತದಾರರು ಅವರತ್ತ ದೊಡ್ಡ ಮಟ್ಟದ ಅನುಕಂಪ ತೋರಿದ್ದು ಓಟುಗಳಾಗಿ ಪರಿವರ್ತನೆ ಆಗಿಹೋದ ಕಾರಣಕ್ಕೆ. ಆಪರೇಷನ್ ಕಮಲ ಎಂಬ ಶನಿಯನ್ನು ಸೃಷ್ಟಿಸಿ ಬಿಜೆಪಿ ಅಲ್ಪಮತವನ್ನು ಬಹುಮತವಾಗಿ ಪರಿವರ್ತಿಸಿಕೊಳ್ಳುವುದರ ಜತೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು ಎನ್ನುವುದರ ಜತೆಗೆ ಸ್ಪರ್ಧಿಸಿ ಗೆಲ್ಲದೇ ಹೋದರೆ ಚುನಾವಣೆಯ ನಂತರ ಖರೀದಿಸಿ ಗೆಲ್ಲುವುದಕ್ಕೂ ಅವಕಾಶವಿದೆ ಎನ್ನುವ ಹೊಸ ಮಾದರಿಯೊಂದು ಕರ್ನಾಟಕದ ನೆಲದಲ್ಲಿ ಹುಟ್ಟಿಕೊಂಡಿತು.

Narayan Article yaddi
ಆಪರೇಷನ್ ಕಮಲ ಎಂಬ ಕೆಟ್ಟ ರಾಜಕಾರಣಕ್ಕೆ ನಾಂದಿ ಹಾಡಿದ ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರಮಾಣ ವಚನ ಬೋಧಿಸಿದ್ದರು.

ಆ ನಂತರ 2013ರಲ್ಲಿ ಕಾಂಗ್ರೆಸ್ ಸುಮಾರು 120 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂತು, ಆದರೆ ಅದಕ್ಕೆ ಕಾರಣ ಕಾಂಗ್ರೆಸ್ ಮತ್ತೆ ತನ್ನ ಪ್ರಾಬಲ್ಯವನ್ನು ಗಳಿಸಿಕೊಂಡದ್ದು ಎನ್ನುವುದಕ್ಕಿಂತ ಹೆಚ್ಚಾಗಿ ಹರಿದು ಹಂಚಿಹೋಗಿದ್ದ ಅಂದಿನ ಬಿಜೆಪಿಯ ಸ್ಥಿತಿ ಮತ್ತು ಸೊರಗಿ ಹೋಗಿದ್ದ ಜನತಾದಳದ ಸ್ಥಿತಿ. ನಂತರ 2018ರಲ್ಲಿ ಮತ್ತೆ ಸಮ್ಮಿಶ್ರ ಸರಕಾರ. ಅದು ಒಂದು ವರ್ಷದಲ್ಲಿ ಬಿದ್ದು ಹೋದನಂತರ ಬಿಜೆಪಿಯ ಆಪರೇಷನ್ ಕಮಲ ಆಧರಿತ  ಕೃತಕ ಬಹುಮತದ ಸರಕಾರ.

ಇದನ್ನೂ ಓದಿರಿ: ಬಾಂಗ್ಲಾದ ಹಿಂದೂಗಳ ಮೇಲೆ ಹಿಂಸೆ; ಚಾರಿತ್ರಿಕ ನೋಟಗಳೇನು?

ಕೊನೆಗೂ 2023ರ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗಳಿಸಿಕೊಳ್ಳುವುದರ ಜತೆಗೆ ಎರಡು ದಶಕಗಳ ಅನಿಶ್ಚಿತತೆ ಕೊನೆಗೊಂಡಿತು ಅಂತ ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ, ಇಷ್ಟೊಂದು ಬಹುಮತ ಗಳಿಸಿದ ನಂತರವೂ, ಸರಕಾರ ಸುಭದ್ರವಾಗಿಲ್ಲ ಎನ್ನುವ ಭಾವನೆ, ಆಪರೇಷನ್ ಕಮಲ ಮತ್ತೆ ನಡೆದು ರಾಜಕೀಯ ಚಿತ್ರಣ ಬದಲಾಗಿಬಿಡಬಹುದು ಎನ್ನುವುದಕ್ಕೆ ಪೂರಕವಾಗಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಇವೆಲ್ಲವನ್ನೂ ನೋಡಿದರೆ ಈಗಲೂ ಕರ್ನಾಟಕದಲ್ಲಿ ಎರಡು ಅಥವಾ ಮೂರು ಪಕ್ಷಗಳ ನಡುವೆ ಆರೋಗ್ಯಕರ ಸ್ಪರ್ಧೆ ಇದೆ ಎಂದು ಭಾವಿಸುವ ಹಾಗಿಲ್ಲ. ಬದಲಿಗೆ ಚುನಾವಣಾ ರಾಜಕೀಯ ಸಂಪೂರ್ಣ ಕಲುಷಿತಗೊಂಡಿದೆ. ಎಪ್ಪತ್ತರ ದಶಕದಲ್ಲಿ ಒಂದು ಹೆಜ್ಜೆ ಮುಂದಿಟ್ಟ ಕರ್ನಾಟಕದ ಚುನಾವಣಾ ರಾಜಕೀಯ ಈಗ ನಾಲ್ಕು ಹೆಜ್ಜೆ ಹಿಂದಕ್ಕೆ ಹೋದಹಾಗೆ ಅನ್ನಿಸುತ್ತದೆ. ನೇರವಾಗಿ ಹೇಳುವುದಾದರೆ, ಇಂದು ಬಿಜೆಪಿ ಚುನಾವಣೆ ಗೆದ್ದರೂ ನಾವೇ ಸರಕಾರ ನಡೆಸುವುದು, ಚುನಾವಣೆ ಸೋತರೂ ನಾವೇ ಸರಕಾರ ನಡೆಸುವುದು ಎನ್ನುವ ರೀತಿಯಲ್ಲಿ ರಾಜಕೀಯವನ್ನು ಮರುನಿರೂಪಿಸುತ್ತಿದೆ.

ಅಧಿಕಾರ ವಿಕೇಂದ್ರೀಕರಣವಂತೂ ಅನಾಥವಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಸಕಾಲಕ್ಕೆ ನಡೆಯುತ್ತಿಲ್ಲ. ಸ್ಥಳೀಯ ರಾಜಕೀಯದ ಮೂಲಕ ರಾಜ್ಯ ರಾಜಕೀಯಕ್ಕೆ ಬೇಕಾದ ನಾಯಕತ್ವ ಹುಟ್ಟಿಕೊಳ್ಳುತ್ತಿಲ್ಲ. ಸ್ಥಳೀಯ ಸರಕಾರಗಳು ರಾಜ್ಯ ಸರಕಾರಗಳ ಇಲಾಖೆಗಳೇನೋ ಎನ್ನುವಷ್ಟರ ಮಟ್ಟಿಗೆ ತಮ್ಮ ಸ್ವಾಯತ್ತತೆ ಕಳೆದುಕೊಂಡು ಸೊರಗಿ ಹೋಗಿವೆ.

ಎಲ್ಲದಕ್ಕಿಂತಲೂ ಮುಖ್ಯವಾಗಿ, ಹಿಂದಿನ ಅವಧಿಯಲ್ಲಿ ಕಾಣಿಸಿಕೊಂಡ ಜಾತಿ ಧ್ರುವೀಕರಣದ ರಾಜಕಾರಣ ಈಗ ಧಾರ್ಮಿಕ ಧ್ರುವೀಕರಣದ ಹಾದಿ ಹಿಡಿದಿದೆ. ಮತೀಯ ದ್ವೇಷವನ್ನೇ ಬಂಡವಾಳವನ್ನಾಗಿಸಿಕೊಂಡು ಚುನಾವಣೆ ಗೆಲ್ಲುವ ಬಿಜೆಪಿಯ ರಾಜಕಾರಣಕ್ಕೆ ಕನ್ನಡ ಮಣ್ಣಲ್ಲಿ ದೊರೆಯುತ್ತಿರುವ ಸ್ವೀಕೃತಿ ಆತಂಕ ಹುಟ್ಟಿಸುವ ಮಟ್ಟ ತಲುಪಿದೆ. ಬಿಜೆಪಿ 2023ರ ಚುನಾವಣೆಯಲ್ಲಿ ಹೀನಾಯವಾಗಿ ಸೋತಾಗಲೂ ಅದು ತನ್ನ ಮತಗಳಿಕೆಯ ಪ್ರಮಾಣವನ್ನು ಹಿಂದಿಗಿಂತ ಹೆಚ್ಚಿಸಿಕೊಂಡಿತ್ತು. ಅಂದರೆ, ದ್ವೇಷ ರಾಜಕಾರಣಕ್ಕೆ ಹೆಚ್ಚು ಹೆಚ್ಚು ಬೆಂಬಲ ಹೊಸ ಹೊಸ ಪ್ರದೇಶಗಳಿಂದ ಹರಿದು ಬರುತ್ತಿದೆ ಎಂದರ್ಥ. ಎಪ್ಪತ್ತರ ದಶಕದಲ್ಲಿ ಕರ್ನಾಟಕ ಕರ್ನಾಟಕದ್ದೇ ಆದ ರಾಜಕಾರಣದ ಮಾದರಿಯೊಂದನ್ನು ಸೃಷ್ಟಿಸಿಕೊಂಡರೆ, 2024ರ ವೇಳೆಗೆ ಕರ್ನಾಟಕ ರಾಜಕಾರಣ ತನ್ನತನವನ್ನು ಕಳೆದುಕೊಂಡು ದೇಶಾದ್ಯಂತ ವ್ಯಾಪಿಸುತ್ತಿರುವ ಮತದ್ವೇಷದ ರಾಜಕಾರಣದ ಜತೆ ಕೈಜೋಡಿಸುತ್ತಿದೆ. ರಾಜ್ಯ ರಾಜಕಾರಣದಲ್ಲಿ ಎಡ – ಬಲ ಸಿದ್ಧಾಂತಗಳಿಂದ ಸಮಾನ ಅಂತರವನ್ನು ಕಾಯ್ದುಕೊಂಡಿದ್ದ ಜೆಡಿಎಸ್ ಯಾವ ಹಿಂಜರಿಕೆಯೂ ಇಲ್ಲದೆ ಬಿಜೆಪಿಯ ಜತೆ ಕೈಜೋಡಿಸಿಕೊಂಡದ್ದು ಮತ್ತು ಇದಾದ ನಂತರವೂ 2024ರ ಲೋಕಸಭಾ ಚುನಾವಣೆಯಲ್ಲಿ ತನ್ನ ಮೂಲ  ಮತದಾರರ ಒಲವನ್ನು ಉಳಿಸಿಕೊಂಡದ್ದು ಕರ್ನಾಟಕ ರಾಜಕೀಯ ಕರ್ನಾಟಕದ ಮಣ್ಣಿನ ಗುಣದಿಂದ ದೂರಾಗುತ್ತಿದೆ ಎನ್ನುವ ಸೂಚನೆ.

ಮಹತ್ತರವಾದ ಧನಾತ್ಮಕ ಬೆಳವಣಿಗೆಗಳನ್ನು ಕಂಡ ಎಪ್ಪತ್ತರ ಮತ್ತು ಎಂಬತ್ತರ ದಶಕದ ರಾಜಕೀಯ ಯಾವ ಅರ್ಥದಲ್ಲೂ ಪರಿಶುದ್ಧವೂ ಪವಿತ್ರವೂ ಆಗಿರಲಿಲ್ಲ. ಆದರೂ ಬದಲಾವಣೆಯ ಗತಿ ಆಶಾದಾಯಕವಾಗಿತ್ತು. ವ್ಯಾವಹಾರಿಕ ರಾಜಕಾರಣದಲ್ಲಿ ಕಾಣಿಸುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ, ಅಧಿಕಾರಸ್ಥರ ಪಾಳೇಗಾರಿಕಾ ಪ್ರವೃತ್ತಿ ಎಲ್ಲವೂ ಇದ್ದವು. ಆದರೂ ವ್ಯವಸ್ಥೆ ಯಾವುದೊ ಹಂತದಲ್ಲಿ ಗಟ್ಟಿಯಾಗುತ್ತಿದೆ, ಅಧಿಕಾರದ ಹಂಚಿಕೆ ಸಮಾನತೆಯ ಕಡೆಗೆ ಸಾಗುತ್ತಿದೆ ಎಂಬ ಆಶಾವಾದ ಹುಟ್ಟುವುದಕ್ಕೆ ಪೂರಕವಾದ ಪರಿಸ್ಥಿತಿ ಇತ್ತು. ತೊಂಬತ್ತರ ದಶಕದ ಸ್ಥಗಿತತೆಯ ನಂತರ ಈ ಶತಮಾನದ ಮೊದಲ ಎರಡು ದಶಕಗಳಲ್ಲಿ ಈ ಬದಲಾವಣೆಯ ಪ್ರಕ್ರಿಯೆ ತೀವ್ರ ಹಿನ್ನಡೆ ಅನುಭವಿಸಿದೆ. ಹಿನ್ನಡೆಯಷ್ಟೇ ಅಲ್ಲ, ಅದು ಗತಿ ಬದಲಿಸಿದೆ. ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ. ವ್ಯವಸ್ಥೆಯನ್ನು ಶಿಥಿಲಗೊಳಿಸುವ ಶಕ್ತಿಗಳು ಪ್ರಬಲಗೊಳ್ಳುತ್ತಿವೆ. ಆತಂಕ ಹುಟ್ಟಿಸುತ್ತಿರುವುದು ಇದು.

ಮುಂದೇನು?

ಮುಂದೇನು ಎನ್ನುವ ಪ್ರಶ್ನೆಗೆ ಉತ್ತರ ಸುಲಭವಿಲ್ಲ.  ಎಪ್ಪತ್ತರ ದಶಕದಲ್ಲಿ ಏನು ಸಾಧ್ಯವಾಯಿತೋ ಅದನ್ನು ಆಗಿಸಿದ್ದು ಏನು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ಅಲ್ಲಿ ಕಾಣಿಸುವುದು ನಾಯಕತ್ವ. ದೇವರಾಜ ಅರಸು, ರಾಮಕೃಷ್ಣ ಹೆಗಡೆ ಮತ್ತಿತರರು ನೀಡಿದ ರಾಜಕೀಯ ನಾಯಕತ್ವ ಮಹತ್ವದ್ದು. ಆದರೆ ನಾಡು ಆಗ ಕಂಡ ಪರಿವರ್ತನೆಗೆ ಕಾರಣ ರಾಜಕೀಯ ನಾಯಕತ್ವ ಮಾತ್ರವಲ್ಲ. ಆ ಕಾಲದಲ್ಲಿ ವಿವಿಧ ಚಳವಳಿಗಳನ್ನು ಮುನ್ನಡೆಸಿದವರು, ಸಾಹಿತ್ಯ-ಸಾಂಸ್ಕೃತಿಕ ಲೋಕವನ್ನು ರೂಪಿಸಿದವರು, ಮಾರ್ಗದರ್ಶಿ ಎನ್ನಬಹುದಾದ ವಿದ್ವತ್ ಪರಂಪರೆಯನ್ನು ಕಟ್ಟಿದವರು ಎಲ್ಲರೂ ಸೇರಿಯೇ ಬದಲಾವಣೆ ಸಾಧ್ಯ ಆಗಿದ್ದು. ಈಗ ಅಂತಹದೊಂದು ನಾಯಕತ್ವ ಎಲ್ಲ ರಂಗಗಳಲ್ಲೂ ಬೇಕಿದೆ, ಮುಖ್ಯವಾಗಿ ರಾಜಕೀಯದಲ್ಲಿ ಬೇಕಿದೆ. ಇದೊಂದು ಸಾಮಾಜಿಕ ಬಿಕ್ಕಟ್ಟು. ಬಿಕ್ಕಟ್ಟಿನ ಕಾಲದಲ್ಲಿ ಪರಿಹಾರಗಳು ತನ್ನಿಂದ ತಾನೇ ಸೃಷ್ಟಿ ಆಗುತ್ತವೆ, ನಾಯಕತ್ವ ಇದ್ದಕ್ಕಿದ್ದಂತೆ ಮೇಲೆದ್ದು ಬರುತ್ತದೆ ಎನ್ನುವುದು ಚಾರಿತ್ರಿಕ ಸತ್ಯ. ಅಂದರೆ, ಒಂದು ಈಗಿರುವ ಸಮಸ್ಯೆಗಳೇನಿವೆ ಅವುಗಳು ಇನ್ನಷ್ಟು ಹೆಚ್ಚಾಗಿ, ಬಿಕ್ಕಟ್ಟು ಬಿಗಡಾಯಿಸಿ ಹೊಸ ನಾಯಕತ್ವ ಸೃಷ್ಟಿಯಾಗುವವರೆಗೂ ಕಾಯಬೇಕು. ಇಲ್ಲವೇ ಅಂತಹದ್ದೊಂದು ನಾಯಕತ್ವ ಆದಷ್ಟು ಬೇಗ ರೂಪುಗೊಳ್ಳುವಂತೆ ಇಂದಿನ ಬಿಕ್ಕಟ್ಟನ್ನು ಮನಮುಟ್ಟುವ ರೀತಿಯಲ್ಲಿ ಜನಸಮೂಹದ ಎದುರು ವಿವರಿಸುವ ಕೆಲಸವನ್ನು ಸಾಮಾಜಿಕ ಚಳವಳಿಗಳು, ಮಾಧ್ಯಮಗಳು ರೂಪಿಸಬೇಕು. ದುರಂತ ಎಂದರೆ, ಮಾಧ್ಯಮಗಳು ಮತ್ತು ಜನಚಳವಳಿಗಳು ಕೂಡಾ ಇಂದು ದಿಕ್ಕೆಟ್ಟ ಸ್ಥಿತಿಯಲ್ಲೇ ಇವೆ. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಎಷ್ಟೋ ವ್ಯಕ್ತಿಗಳಿದ್ದಾರೆ, ಅವರು ಹೊಸಚಳವಳಿ, ಹೊಸ ಮಾಧ್ಯಮವನ್ನು ಕಟ್ಟುವ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಇಂತಹ ಪ್ರಯತ್ನಗಳೆಲ್ಲ ಮೇಳವಿಸಿ ಹೊಸ ಕಾಲಕ್ಕೆ ಬೇಕಾದ ಹೊಸ ರಾಜಕೀಯ ಮತ್ತು ಹೊಸ ನಾಯಕತ್ವ ರೂಪುಗೊಳ್ಳಬಹುದು. ಬಿಕ್ಕಟ್ಟಿನ ಕಾಲದಲ್ಲಿ ಅಂತಿಮ ಭರವಸೆ ಅಂತ ಏನಾದರೂ ಇದ್ದರೆ ಅದು ಭರವಸೆ ಮಾತ್ರ.

ಇದನ್ನೂ ಓದಿರಿ: ಲವ್ ಜಿಹಾದ್‌ನಿಂದ ವೋಟ್ ಜಿಹಾದ್‌ವರೆಗಿನ ಪಿತೂರಿ ಕಥನ; ವಾಸ್ತವವೇನು?

ಇದ್ದದ್ದನ್ನು ಕಳೆದುಕೊಳ್ಳುವುದು ಮತ್ತು ಇಲ್ಲದನ್ನು ಪಡೆದುಕೊಳ್ಳುವುದು ಎಲ್ಲ ಕಾಲದಲ್ಲೂ ಆಗುವ ನಿರಂತರ ಪ್ರಕ್ರಿಯೆ. ಕಳೆದುಕೊಳ್ಳುವ ಪ್ರಕ್ರಿಯೆಯನ್ನು ಮತ್ತು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ನಿಲ್ಲಿಸಲಾಗದು. ಆದರೆ, ಕಳೆದುಕೊಳ್ಳಬಾರದನ್ನು ಕಳೆದುಕೊಳ್ಳಬಾರದು. ಪಡೆದುಕೊಳ್ಳಬಾರದನ್ನು ಪಡೆದುಕೊಳ್ಳಬಾರದು. ಕರ್ನಾಟಕ ಎಪ್ಪತ್ತರ ದಶಕದಲ್ಲಿ ಸಾಧಿಸಿದ್ದನ್ನು ಕಳೆದುಕೊಳ್ಳಬಾರದಿತ್ತು. ಆದರೆ ಕಳೆದುಕೊಂಡಿದೆ. ಕರ್ನಾಟಕದ ರಾಜಕೀಯ ಈ ಶತಮಾನದ ಆರಂಭದ ನಂತರ ಯಾವ ತಿರುವು ಪಡೆದುಕೊಂಡಿತೋ ಅದು ಆಗಬಾರದಿತ್ತು. ಆದರೆ, ಆಗಿಹೋಗಿದೆ, ಆಗುತ್ತಿದೆ. ಕಳೆದುಕೊಳ್ಳಬಾರದನ್ನು ಕಳೆದುಕೊಂಡಿದ್ದೇವೆ ಎನ್ನುವ ಪ್ರಜ್ಞೆ ಗಟ್ಟಿಯಾದಾಗಲೇ ಹೊಸತನ್ನು ಕಟ್ಟುವ ಸಾಧ್ಯತೆಗಳು ಹರಳುಗಟ್ಟುವುದು. ಆ ಪ್ರಜ್ಞೆಯ ಸೃಷ್ಟಿ ಇಂದಿನ ಅಗತ್ಯ.

(ಈದಿನ.ಕಾಂ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ… ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

Narayan
ಎ. ನಾರಾಯಣ
+ posts

ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಎ.ನಾರಾಯಣ ಅವರು ಪ್ರಖರ ರಾಜಕೀಯ ವಿಶ್ಲೇಷಕರೂ ಹೌದು. ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ನಿಯಮಿತವಾಗಿ ಬರೆಯುತ್ತಿರುವ ಅವರು, ತಮ್ಮ ವಿಶಿಷ್ಟ ಒಳನೋಟಗಳಿಂದ ಗಮನ ಸೆಳೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಎ. ನಾರಾಯಣ
ಎ. ನಾರಾಯಣ
ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಎ.ನಾರಾಯಣ ಅವರು ಪ್ರಖರ ರಾಜಕೀಯ ವಿಶ್ಲೇಷಕರೂ ಹೌದು. ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ನಿಯಮಿತವಾಗಿ ಬರೆಯುತ್ತಿರುವ ಅವರು, ತಮ್ಮ ವಿಶಿಷ್ಟ ಒಳನೋಟಗಳಿಂದ ಗಮನ ಸೆಳೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...