ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳು ಒಂದು ರೀತಿಯ ನಿಶಬ್ದ ಯುದ್ಧವಾಗಿದೆ. ಕಣ್ಣಿಗೆ ಕಾಣದೆ ನಾಲ್ಕು ಗೋಡೆಯ ನಡುವೆ ಹೆಣ್ಣಿನ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳಾದ ಹೆಣ್ಣು ಭ್ರೂಣಹತ್ಯೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಹಿಂಸೆ ಮುಂತಾದವುಗಳಿಗೆ ಪುರಾವೆ ಒದಗಿಸುವುದು ಕಷ್ಟ ಹಾಗೂ ಪುರಾವೆಗಳನ್ನು ಇಟ್ಟುಕೊಳ್ಳುವಷ್ಟು ಮಹಿಳೆಯರು ಅವಕಾಶವನ್ನು ಹೊಂದಿರುವುದಿಲ್ಲ. ಕುಟುಂಬದೊಳಗಿನ ಈ ಹಿಂಸೆಗಳಿಗೆ ಪುರುಷರಷ್ಟೇ ಕಾರಣವಲ್ಲ. ಪಿತೃಪ್ರಧಾನತೆಯನ್ನು ನಂಬಿ ನಡೆಯುವ ಮಹಿಳೆಯರೂ ಇದರೊಂದಿಗೆ ಕೈ ಜೋಡಿಸುತ್ತಾರೆ. ಪಿತೃಪ್ರಧಾನತೆಯು ಆಯ್ಕೆ, ನಿರ್ಧಾರ ಮತ್ತು ನಿರ್ವಹಿಸುವ ಹಕ್ಕಿನ ಮೇಲೆ ತನ್ನ ಅಧಿಕಾರವನ್ನು ಕೇಂದ್ರೀಕರಿಸಿರುತ್ತದೆ. ಇದರಿಂದಾಗಿ ಮಹಿಳೆಯರು ಆರ್ಥಿಕವಾಗಿ ಸಬಲರಿದ್ದರೂ ಆಯ್ಕೆ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಸ್ವನಿರ್ವಹಣೆಯನ್ನು ಇಚ್ಛೆಯಾಗಿ ಮಾಡಿಕೊಳ್ಳುವುದಿಲ್ಲ. ಕುಟುಂಬದ ಒಳಗೆ ಹಿಂಸೆ, ಪಿತೂರಿ, ಷಡ್ಯಂತ್ರ ಮತ್ತು ಭಯವನ್ನು ಹುಟ್ಟು ಹಾಕುವುದು, ಮಹಿಳೆಯರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಇವು ಮಹಿಳೆಯರ ಜೀವನದಲ್ಲಿ ಅತಂತ್ರತೆಯನ್ನು ಸೃಷ್ಟಿಸಿ, ದೌರ್ಜನ್ಯಗಳ ವಿರುದ್ಧ ಮಹಿಳೆಯರ ಧ್ವನಿಯನ್ನು ಅಡಗಿಸಿವೆ.
ನಮ್ಮ ದೇಶವು ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿಯನ್ನು ನಡೆಸುತ್ತಾ ಬಂದಿದೆ. ಅದರಲ್ಲಿ ಹೆಣ್ಣು-ಗಂಡಿನ ನಡುವಿನ ಲಿಂಗಾನುಪಾತವನ್ನು ನೀಡುತ್ತಾ ಬಂದಿದೆ. ನಾವು ಐವತ್ತು ವರ್ಷಗಳ ಜನಗಣತಿಯಲ್ಲಿ 1000 ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆಯನ್ನು ನೋಡುವ ಕ್ರಮವೇ ಲಿಂಗಾನುಪಾತ. ಇದು ದಶಕದಿಂದ ದಶಕಕ್ಕೆ ಕಡಿಮೆಯಾಗುತ್ತಾ ಬಂದಿರುವುದನ್ನು ಕಾಣುತ್ತೇವೆ. ಪ್ರಕೃತಿಯ ನಿಯಮದಂತೆ ಪುರುಷರಿಗಿಂತ ಸ್ತ್ರೀಯರ ಸಂಖ್ಯೆ ಹೆಚ್ಚಾಗಿರಬೇಕು. ಇದು ಪ್ರಕೃತಿ ಸಹಜ ತತ್ವ. ಪ್ರಜನನ ಕ್ರಿಯೆಯಲ್ಲಿ ಮಹಿಳೆಯರ ಜವಾಬ್ದಾರಿ ಹೆಚ್ಚಾಗಿದ್ದು ಬಸುರಿ, ಹೆರಿಗೆ, ಬಾಣಂತಿ ಸಂಬಂಧಿಸಿದ ಸಂದರ್ಭಗಳಲ್ಲಿ ಏರುಪೇರಾಗುವ ಆರೋಗ್ಯದ ಕಾರಣದಿಂದ ತಾಯಂದಿರ ಮರಣ ಸಂಭವಿಸುವುದು ಕೂಡ ಲಿಂಗಾನುಪಾತದಲ್ಲಿ (1000) ಪುರುಷರಿಗಿಂತ ಮಹಿಳೆಯರು (1030ಕ್ಕಿಂತ) ಹೆಚ್ಚಾಗಿ ಇರಬೇಕೆಂಬುದು ಪ್ರಕೃತಿ ಸಹಜ ಲೆಕ್ಕಾಚಾರವಾಗಿದೆ. ಇದನ್ನು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಆದರೆ ಈ ಲೆಕ್ಕಾಚಾರವೇ ಏರುಪೇರಾಗಿರುವುದನ್ನು 1981ರ ಜನಗಣತಿಯಿಂದ ಅವರು ಗುರುತಿಸುತ್ತಾ ಬಂದಿದ್ದಾರೆ.
‘Towards equality’ ವರದಿಯನ್ನು 1974ರಲ್ಲಿ ಪ್ರಕಟಿಸಿದರು. ಈ ವರದಿಯು ಭಾರತದಲ್ಲಿ ಮಹಿಳೆಯರ ಸ್ಥಾನಮಾನ ಮತ್ತು ಹಕ್ಕುಗಳನ್ನು ಕುರಿತು ಪರೀಕ್ಷಿಸಿತು. ಈ ಸಮಿತಿಯ ಅಧ್ಯಕ್ಷರಾಗಿ ವೀಣಾ ಮಜುಂದಾರ್ ಕೆಲಸ ಮಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದ ಹಾಗೂ ಸ್ತ್ರೀವಾದಿಯಾದ ಇವರು ಸಮಗ್ರವಾಗಿ ಮಹಿಳೆಯರ ಸ್ಥಿತಿಗತಿಗಳನ್ನು ವರದಿ ಮಾಡಿದ್ದರು. ಇದು ಭಾರತದಲ್ಲಿ ಹೊಸ ಸಂಚಲನವನ್ನು ಹುಟ್ಟು ಹಾಕಿತು. ಇದು ಮಹಿಳೆಯರ ಸ್ಥಿತಿ-ಗತಿ ಕುರಿತಂತೆ ಸರ್ಕಾರದ ಗಮನವನ್ನು ಸೆಳೆಯಿತು. ಈ ವರದಿ ಪ್ರಕಟವಾದ ಮರುವರ್ಷವೇ 1975ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ವರ್ಷವನ್ನು ಘೋಷಿಸಲಾಯಿತು. ಮಹಿಳೆಯರ ಸಬಲೀಕರಣಕ್ಕೆ ಸರ್ಕಾರವು ಮುಂದಾಯಿತು.
ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಹೆಣ್ಣು ಶಿಶುಹತ್ಯೆ ಮತ್ತು ಹೆಣ್ಣು ಭ್ರೂಣಹತ್ಯೆ ಯಾರೋ ಹೊರಗಿನವರಿಂದ ನಡೆಯುವ ಹಿಂಸೆಗಳಲ್ಲ. ಇವು ಕುಟುಂಬದಲ್ಲೇ ನಡೆಯುತ್ತಿರುವ ಹತ್ಯೆಗಳಾಗಿವೆ. ಎಚ್ಚರಗೊಂಡ ಮಹಿಳೆಯರು, ಹೆಣ್ಣುಮಕ್ಕಳು ಕಣ್ಮರೆಯಾಗುವುದನ್ನು 1981ರ ನಂತರ ಪ್ರತಿ ಜನಗಣತಿಯಲ್ಲೂ ಗುರುತಿಸುತ್ತಾ ಬಂದಿದ್ದಾರೆ. ಇದರ ವಿವರ ಯಾರನ್ನಾದರೂ ಗಾಬರಿಪಡಿಸುತ್ತದೆ.
ಕೋಷ್ಟಕ 1: ಭಾರತ ಮತ್ತು ಕರ್ನಾಟಕದಲ್ಲಿ ಲಿಂಗಾನುಪಾತ 1971ರಿಂದ 2011ರವರೆಗೆ

ಮೇಲಿನ ಕೋಷ್ಟಕ-1ರಲ್ಲಿ 1971ರಿಂದ 2011ರವರೆಗಿನ ಜನಗಣತಿಗಳಲ್ಲಿ ಕಂಡು ಬರುವ ಲಿಂಗಾನುಪಾತವನ್ನು ನೀಡಲಾಗಿದೆ. ಇದರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಲೂ 0-6 ವರ್ಷದ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿರುವುದನ್ನು ನೋಡುತ್ತೇವೆ. ಅಂದರೆ ಮಹಿಳೆಯರ ಆರೋಗ್ಯ ಸೇವೆಗಳು ಉತ್ತಮಗೊಂಡಿದ್ದು ತಾಯಂದಿರ ಮರಣದರ ಕಡಿಮೆಯಾಗುತ್ತಾ ಬಂದಿದೆ. ಮಹಿಳೆಯರ ಜೀವಿತಾವಧಿ ಹೆಚ್ಚಿದೆ. ಹಾಗೆಯೇ ಪ್ರಜನನ ಸಂಬಂಧಿ ವಿಷಯಗಳಲ್ಲಿ ಹೆಚ್ಚಿನ ಎಚ್ಚರವನ್ನು ವಹಿಸಲಾಗಿದೆ. ಆದರೆ ಹೆಣ್ಣುಮಕ್ಕಳು ಕಾಣೆಯಾಗುವುದಕ್ಕೆ ಆರೋಗ್ಯ ಸೇವೆಗಳ ಜೊತೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳು ಮುನ್ನೆಲೆಯನ್ನು ಪಡೆದಿವೆ. ಆರ್ಥಿಕವಾಗಿ ಸದೃಢತೆಯನ್ನು ಜನರು ಪಡೆಯುತ್ತಿದ್ದಂತೆ ಗಂಡುಮಕ್ಕಳ ಬೇಡಿಕೆಯು ಹೆಚ್ಚಾದಂತೆ ಕಾಣುತ್ತದೆ.
ಇದನ್ನೂ ಓದಿರಿ: ಶೂದ್ರ ಧರ್ಮ, ವೈದಿಕ ಧರ್ಮ ಒಂದೇ ಅಲ್ಲ!
ಭಾರತದಲ್ಲಿ ಕುಟುಂಬ ಯೋಜನೆಯು ಅನುಷ್ಠಾನಕ್ಕೆ ಬಂದಂತೆ ಮಕ್ಕಳನ್ನು ಪಡೆಯುವ ಮತ್ತು ನಿಯಂತ್ರಿಸುವ ಅವಕಾಶಗಳು ಜನರಿಗೆ ತಲುಪಿದವು. ಇದೇ ಕಾಲಘಟ್ಟದಲ್ಲಿ ವೈಜ್ಞಾನಿಕ ಆವಿಷ್ಕಾರಗಳು ಭಾರತವನ್ನು ತಲುಪಿದವು. ಮಗುವಿನ ಭ್ರೂಣಾವಸ್ಥೆಯ ಆರೋಗ್ಯವನ್ನು ತಿಳಿಯುವ ಅವಕಾಶಗಳನ್ನು ಆಮ್ಲಿನೋಸಿಂಥೆಸಿಸ್ ಪರೀಕ್ಷೆ ಒದಗಿಸಿತು. ಗರ್ಭದಲ್ಲಿನ ಶಿಶುವಿನ ಆರೋಗ್ಯ ಪರೀಕ್ಷೆಗೆ ಬಂದ ಈ ಪರೀಕ್ಷೆಯನ್ನು ಭಾರತದಲ್ಲಿ ಭ್ರೂಣದಲ್ಲಿನ ಲಿಂಗ ಪತ್ತೆಗೆ ಬಳಸಲಾಯಿತು. ಇದರಿಂದಾಗಿ ಮಕ್ಕಳು ಎಷ್ಟು ಬೇಕು ಎಂದು ನಿರ್ಧರಿಸುವ ಕುಟುಂಬದವರು ಮಗು ಗಂಡೇ ಇರಲಿ ಎಂಬ ಯೋಚನೆಯ ಜೊತೆಗೆ ಗಂಡು ಮಗು ಬೇಕೇಬೇಕೆಂಬ ಒತ್ತಾಸೆಗೂ ಒಳಗಾದರು. ಈ ಆವಿಷ್ಕಾರ ಭ್ರೂಣದ ಆರೋಗ್ಯ ತಪಾಸಣೆಗಿಂತ ಭ್ರೂಣದ ಲಿಂಗ ಪತ್ತೆಗೆ ಹೆಚ್ಚು ಆಸ್ಥೆ ವಹಿಸಿದಂತೆ ಕಂಡು ಬರುತ್ತದೆ. ಇದರ ಜೊತೆಗೆ ಸ್ಕ್ಯಾನಿಂಗ್ ಸೆಂಟರುಗಳು ಎಲ್ಲ ಕಡೆಯಲ್ಲೂ ತೆರೆಯುವ ಅವಕಾಶ ಹಾಗೂ ಮೊಬೈಲ್ ಸ್ಕ್ಯಾನಿಂಗ್ ಸೆಂಟರುಗಳ ಪ್ರವೇಶ ಎಲ್ಲವೂ ಸೇರಿ ಮಗುವಿನ ಲಿಂಗದ ಆಯ್ಕೆಯ ನಿರ್ಧಾರಕ್ಕೆ ಒತ್ತಾಸೆಯಾದವು.
ಲಿಂಗಪತ್ತೆಯ ಪಿಡುಗು ಮುಖ್ಯವಾಗಿ ನಗರಗಳನ್ನು ಮೊದಲು ಪ್ರಭಾವಿಸಿತು. ಇದಕ್ಕೆ ಸುಲಭವಾಗಿ ದೊರೆಯುವ ಸೌಲಭ್ಯಗಳು, ಆರ್ಥಿಕವಾಗಿ ಮುಂದುವರೆದ ಸ್ಥಿತಿ- ಈ ಎರಡೂ ಹೆಣ್ಣುಮಕ್ಕಳಿಗಿಂತ ವಂಶವನ್ನು ಬೆಳೆಸುವ, ಉಳಿಸುವ ವಂಶೋದ್ಧಾರಕನನ್ನು ಬಯಸುವುದನ್ನು ಪ್ರೋತ್ಸಾಹಿಸಿದವು. ಇವುಗಳ ಜೊತೆಗೆ ಪಿತೃಪ್ರಧಾನತೆಯಲ್ಲಿ ವಿವಾಹದ ನಂತರ ಹೆಣ್ಣು ಬೇರೆ ವಂಶಕ್ಕೆ ಸೇರಿದವಳಾಗುತ್ತಾಳೆ ಮತ್ತು ವಿವಾಹ ಅವಳನ್ನು ಸ್ಥಳಾಂತರಿಸುತ್ತದೆ. ಗಂಡು ಹುಟ್ಟಿದ ಮನೆಯಲ್ಲಿ ಉಳಿಯುವ ಪಿತೃಕೇಂದ್ರಿತ ಕುಟುಂಬ ವ್ಯವಸ್ಥೆ; ಹೆಣ್ಣನ್ನು ಪರರ ಮನೆಯ ಗಂಡಿನ ಸ್ವತ್ತಾಗಿ ನೋಡುವ ಸಾಂಸ್ಕೃತಿಕ ಪರಿಸ್ಥಿತಿಯು ಮಕ್ಕಳೆಂದರೆ ‘ಗಂಡು’ ಮಾತ್ರ ಎಂಬ ಭ್ರಮೆಯಲ್ಲಿ ಬೀಳಿಸಿದ್ದಲ್ಲದೆ, ಮೋಕ್ಷ ಪಡೆಯಲು ಗಂಡೊಂದು ವಂಶದಲ್ಲಿ ಇರಬೇಕೆಂಬುದು ಭಾರತೀಯರ ನಂಬಿಕೆಯಾಗಿದೆ. ಮನೆತನ ಉಳಿಸಲು ಗಂಡಿನ ಅಗತ್ಯವೆಂದು ಭಾವಿಸಿದ ಕಾರಣವು ಸೇರಿದಂತೆ ಹತ್ತು ಹಲವು ಕಾರಣಗಳು ರಾಷ್ಟ್ರಮಟ್ಟದಲ್ಲಿ ಲಿಂಗಾನುಪಾತ ಕುಸಿದಿರುವಂತೆ ಕರ್ನಾಟಕದಲ್ಲಿಯೂ ಈ ಕುಸಿತ ಕಂಡುಬರಲು ಕಾರಣವಾಗಿದೆ.
ಕೋಷ್ಟಕ 2: ಕರ್ನಾಟಕದ ಜಿಲ್ಲಾವಾರು ಲಿಂಗಾನುಪಾತ 0-6 ವರ್ಷದ ಮಕ್ಕಳದು.

ಕೋಷ್ಟಕ ಎರಡರಲ್ಲಿ ನಾಲ್ಕು ದಶಕಗಳ ಲಿಂಗಾನುಪಾತವನ್ನು ನೀಡಿದ್ದು, ಇದರಲ್ಲಿ ಮುಖ್ಯವಾಗಿ 0-6 ವಯೋಮಾನದ ಮಕ್ಕಳ ಲಿಂಗಾನುಪಾತವನ್ನು ನೀಡಲಾಗಿದೆ. ಕರ್ನಾಟಕದಲ್ಲಿಯೂ ಲಿಂಗಾನುಪಾತ ಇಳಿಕೆಯಾಗುತ್ತಿರುವುದು ಆತಂಕದ ವಿಷಯವಾಗಿದೆ.
ಶಿಕ್ಷಣ, ಉತ್ತಮ ಆರ್ಥಿಕ ಸ್ಥಿತಿ ಇದ್ದರೂ ಗಂಡಿನ ಬೇಡಿಕೆಗೆ ಅನೇಕ ಸಾಮಾಜಿಕ ಕಾರಣಗಳ ಜೊತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರಣಗಳಿವೆ. ಹೆಣ್ಣೆಂದರೆ ಪರಮನೆಯ ವಸ್ತು ಎಂದು ತಿಳಿದಿರುವ ಸಾಮಾಜಿಕತೆ ರೂಢಿಯಲ್ಲಿದ್ದು, ‘ಹೆಣ್ಣಿಗೆ ಶಿಕ್ಷಣ ಕೊಡೋದೂ ಪಕ್ಕದ ಮನೆಯ ಸಸಿಗೆ ನೀರು ಹಾಕೋದೂ ಒಂದೇ’ ಎಂಬ ಪಡೆನುಡಿಗಳನ್ನು ಕಟ್ಟಿವೆ. ಇದರಿಂದಾಗಿ ಮನೆಯಲ್ಲಿ ಉಳಿವ, ವಂಶ ಬೆಳೆಸುವ, ಮೋಕ್ಷ ಪ್ರಾಪ್ತಿಯಾಗುವಂತೆ ಮಾಡುವ ಗಂಡು ಕುಟುಂಬದ ಆಸ್ತಿ ಎಂದು ಭಾವಿಸಲಾಗಿದೆ.
ಹೆಣ್ಣು ಪರರ ಆಸ್ತಿ ಮಾತ್ರವಲ್ಲ ತಮ್ಮ ಸಂಪತ್ತನ್ನು ಇತರ ಕುಟುಂಬಕ್ಕೆ ಹೊತ್ತು ಹೋಗುವವಳೆಂಬ ನಂಬಿಕೆ ಇದೆ. ಇದಕ್ಕೆ ಪೂರಕವಾಗುವಂತೆ ವರದಕ್ಷಿಣೆಯಂತಹ ರೂಢಿಯು ಕೂಡ ಮಕ್ಕಳಾದರೆ ಗಂಡೇ ಆಗಲಿ ಎನ್ನುವಂತೆ ಮಾಡಿದೆ. ಮದುವೆ, ಬಾಣಂತನ, ಆರೋಗ್ಯ ಮುಂತಾದ ಖರ್ಚುಗಳನ್ನು ಹೆಣ್ಣು ಹೆತ್ತವರು ನಿರಂತರವಾಗಿ ಮಗಳಿಗಾಗಿ ಭರಿಸಬೇಕಾದ ಸ್ಥಿತಿಯು ಹೆಣ್ಣು ಹುಟ್ಟುವುದೇ ಬೇಡವೆಂಬ ಸ್ಥಿತಿಗೆ ಪೋಷಕರನ್ನು ದೂಡಿದೆ.
ಇದನ್ನೂ ಓದಿರಿ: ಗಂಗೆಯ ಒಡಲಿಗೆ ‘ವಿಷ’ದ ಸಂಕಟ; ವೈಜ್ಞಾನಿಕ ಸತ್ಯಗಳಿಗೆ ಬೆನ್ನು ತಿರುಗಿಸಲಾದೀತೆ?
ಇದಲ್ಲದೆ ಲಿಂಗಾನುಪಾತ ಕಡಿಮೆ ಇರುವ ರಾಜ್ಯ ಮತ್ತು ಕರ್ನಾಟಕದ ಜಿಲ್ಲೆಗಳನ್ನು ಕುತೂಹಲಕ್ಕಾಗಿ ಗಮನಿಸಿದರೆ ಅಭಿವೃದ್ಧಿಗೂ ಲಿಂಗಾನುಪಾತಕ್ಕೂ ನೇರ ಸಂಬಂಧ ಇರುವುದು ಗೋಚರಿಸುತ್ತದೆ. 2011ರ ಜನಗಣತಿಯ ಪ್ರಕಾರ ರಾಷ್ಟ್ರಮಟ್ಟದಲ್ಲಿ ಪಂಜಾಬ್(846), ಹರಿಯಾಣ(834), ದೆಹಲಿ(871), ಗುಜರಾತ್(870)ನ ಲಿಂಗಾನುಪಾತವು 2001ಕ್ಕಿಂತ ಕಡಿಮೆಯಾಗಿರುವುದನ್ನು ಕಾಣುತ್ತೇವೆ. ಮುಖ್ಯವಾಗಿ ಈ ರಾಜ್ಯಗಳು ಮೊದಲು ನೀರಾವರಿಗೆ ತೆರೆದುಕೊಂಡವು ಹಾಗೂ ಇವು ಕೃಷಿಯೇ ಪ್ರಧಾನವಾಗಿರುವ ರಾಜ್ಯಗಳು. ಇಲ್ಲಿ ಭೂಮಿಯ ಒಡೆಯ ಗಂಡು. ಗಂಡು ಮಗು ಬೇಕೆಂಬ ಒತ್ತಾಸೆ ಇಲ್ಲಿರುವುದನ್ನು ಸಂಶೋಧನೆಗಳು ದೃಢಪಡಿಸಿವೆ. ನೀರಾವರಿಗೂ ಲಿಂಗಾನುಪಾತದ ಕುಸಿತಕ್ಕೂ ಸಂಬಂಧವಿದೆ. ಭೂಮಿಯ ಬೆಲೆ ಹೆಚ್ಚಳ ಹೆಣ್ಣಿನ ಮೇಲಿನ ದೌರ್ಜನ್ಯಗಳನ್ನು ಹೆಚ್ಚಿಸಿದೆ. ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಸೇರಿದಂತೆ ಇರುವ ಅವಕಾಶಗಳು ಕೂಡ ವಂಶದ ಆಸ್ತಿ ಬೇರೆ ವಂಶಕ್ಕೆ ಹೋಗದಿರಲೆಂಬ ಪಿತೃಕೇಂದ್ರಿತ ಮನಸ್ಥಿತಿಯಿಂದಾಗಿ ಹುಟ್ಟಿದರೆ ಗಂಡೇ ಹುಟ್ಟಲಿ ಎಂದು ಬಯಸುತ್ತದೆ. ಇದಕ್ಕೆ ಆಧುನಿಕ ತಂತ್ರಜ್ಞಾನವು ನೆರವಾಗಿದೆ. ಗರ್ಭಪಾತಕ್ಕೆ ಬೇಕಾದ ಆರ್ಥಿಕ ಸ್ಥಿತಿ ಮತ್ತು ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಆರೋಗ್ಯ ಸೇವೆಗಳ ಖಾಸಗೀಕರಣ ಸೇರಿದಂತೆ ಬಹು ಅವಕಾಶಗಳು ಹೆಣ್ಣನ್ನು ಭ್ರೂಣದಲ್ಲಿಯೇ ಇಲ್ಲದಂತೆ ಮಾಡಿವೆ. ತಾಯಿ ಮರಣ ಕಡಿಮೆಯಾಗಿ ಬಹು ಆಯಾಮದಲ್ಲಿ ಮಹಿಳೆಯರ ಆರೋಗ್ಯ ಸೇವೆ ವೃದ್ಧಿಸಿದ್ದು ಮಹಿಳೆಯರ ಜೀವಿತಾವಧಿಯಲ್ಲಿ ಉತ್ತಮಿಕೆಯನ್ನು ಸಾಧಿಸಿದರೆ, ಮಕ್ಕಳ ಲಿಂಗಾನುಪಾತ ಮಾತ್ರ ದಶಕದಿಂದ ದಶಕಕ್ಕೆ ಕುಸಿಯುತ್ತಾ ಬಂದಿರುವುದನ್ನು ದತ್ತಾಂಶ ತೋರಿಸುತ್ತದೆ.
ಆಧುನಿಕತೆಯ ಕಾರಣಕ್ಕಾಗಿ ಮಹಾನಗರಗಳಲ್ಲಿ ಕೈಗಾರಿಕೀಕರಣದ ಪ್ರಭಾವವು ವೈಯಕ್ತಿಕ ಸಂಪತ್ತನ್ನು ವೃದ್ಧಿಸಿತು. ಅಲ್ಲದೆ ನಿಶ್ಚಿತ ಆದಾಯವನ್ನು ಕುಟುಂಬಕ್ಕೆ ನೀಡಿತು. ಇದು ಕೂಡ ಲಿಂಗಾನುಪಾತ ಕುಸಿಯಲು ಕಾರಣವಾಗಿದೆ. 2011ರ ಜನಗಣತಿಯಲ್ಲಿ ದೆಹಲಿ(821), ಬೆಂಗಳೂರು(908), ಕೊಲ್ಕತ್ತ(908), ಮುಂಬಯಿ(832) ಮತ್ತು ಹೈದರಾಬಾದ್(942) ಈ ಮಹಾನಗರಗಳ ಲಿಂಗಾನುಪಾತ ರಾಜ್ಯಮಟ್ಟದ ಸರಾಸರಿ ಲಿಂಗಾನುಪಾತಕ್ಕಿಂತ ಕಡಿಮೆ ಇರುವುದು ಕಂಡು ಬರುತ್ತದೆ. ಮುಖ್ಯ ನಗರಗಳಲ್ಲಿ ಆರೋಗ್ಯ ಸೌಲಭ್ಯಗಳ ಲಭ್ಯತೆ, ಆರ್ಥಿಕ ಸ್ಥಿತಿ ಇವುಗಳೊಂದಿಗೆ ಲಿಂಗಪತ್ತೆಗೆ ಬೇಕಾದ ವಾತಾವರಣದ ಲಭ್ಯತೆಯು ಸೇರಿ ಲಿಂಗಾನುಪಾತದ ಮೇಲೆ ಪ್ರಭಾವಿಸಿವೆ. ಅಭಿವೃದ್ಧಿ ಹೊಂದಿದ ಈ ನಗರಗಳು ಬೇರೆ ಸೂಚ್ಯಂಕಗಳಲ್ಲಿ ಮುಂದೆ ಇದ್ದರೂ ಲಿಂಗಾನುಪಾತದಲ್ಲಿ ಕೆಳಗಿವೆ. ಇದರಿಂದಾಗಿ ಹೆಚ್ಚು ಅಭಿವೃದ್ಧಿ ಎಂದರೆ ಮಹಿಳೆಯರ ಮೇಲೆ ಹೆಚ್ಚಿನ ದೌರ್ಜನ್ಯಗಳು ಎಂಬಂತಾಗಿವೆ.
ಕರ್ನಾಟಕದ ವಿಷಯಕ್ಕೆ ಬಂದರೆ 1991ರ ಮತ್ತು 2001 ಮತ್ತು 2011ರ ಜನಗಣತಿಗಳಲ್ಲೂ ಹಾಗೂ ಎನ್.ಎಫ್.ಎಚ್.ಎಸ್.-5ರ ವರದಿಯನ್ನು ನೋಡಿದರೆ ಲಿಂಗಾನುಪಾತ ಹೆಚ್ಚಿನ ಜಿಲ್ಲೆಗಳಲ್ಲಿ ಕುಸಿದಿರುವುದು ಕಂಡು ಬರುತ್ತದೆ. ಕೃಷಿಯಲ್ಲಿ ಉಂಟಾದ ವಾಣಿಜ್ಯ ಬೆಳೆಗಳ ವಿಕಾಸ ಅಂದರೆ ಕಾಫಿ, ತೆಂಗು, ಅಡಿಕೆ, ರಬ್ಬರ್, ಭತ್ತ, ಕಬ್ಬು ಸೇರಿದಂತೆ ಇಡಿಗಂಟು ನೀಡುವ ಕೃಷಿಯಲ್ಲಾದ ಪಲ್ಲಟ ಲಿಂಗಾನುಪಾತದ ಮೇಲೂ ಪ್ರಭಾವ ಬೀರಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ(ಎನ್.ಎಫ್.ಎಚ್.ಎಸ್.) ಐದು (2016-2020) ಪ್ರಕಾರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 2011ರ ಜನಗಣತಿಗಿಂತ ಕಡಿಮೆ ಲಿಂಗಾನುಪಾತ ಹೊಂದಿರುವುದು ತಿಳಿಯುತ್ತದೆ. ಇದರ ಪ್ರಕಾರ ಬೆಳಗಾವಿ(892) 2011ರ ಜನಗಣತಿಯಲ್ಲಿ(930), ವಿಜಯಪುರ(885) 2011ರ ಜನಗಣತಿಯಲ್ಲಿ(930), ದಾವಣಗೆರೆ(797) 2011ರಲ್ಲಿ (930), ಉತ್ತರ ಕನ್ನಡ(724) 2011ರಲ್ಲಿ (946), ಹಾವೇರಿ(805) 2011ರಲ್ಲಿ (945), ರಾಯಚೂರು(907) 2011ರಲ್ಲಿ (937), ಚಿಕ್ಕಮಗಳೂರು(849) 2011ರಲ್ಲಿ (956), ಬೀದರ್(898) 2011ರಲ್ಲಿ (934) ಇರುವುದನ್ನು ಕಂಡಾಗ ರಾಷ್ಟ್ರದಲ್ಲಿ ಘೋಷಿಸಿದ “ಬೇಟಿ ಬಚಾವೊ, ಬೇಟಿ ಪಡಾವೊ” ಎಂಬುದು ಭಾರತೀಯ ಸಾಂಸ್ಕೃತಿಕ, ಸಾಮಾಜಿಕ ಬದುಕಿನ ಮೇಲೆ ಯಾವುದೇ ರೀತಿಯ ಧನಾತ್ಮಕ ಪ್ರಭಾವ, ಪರಿಣಾಮ ಉಂಟು ಮಾಡಿಲ್ಲವೆಂಬುದನ್ನು ತೋರಿಸುತ್ತದೆ.
ಆದರೆ ಮಾತೃಸ್ಥಳೀಯ ಕುಟುಂಬ ವ್ಯವಸ್ಥೆ ಇರುವ ದಕ್ಷಿಣ ಕನ್ನಡ, ಉಡುಪಿ, ಅದರ ನೆರೆಯ ಜಿಲ್ಲೆಯಾದ ಕೊಡಗು ಜಿಲ್ಲೆಗಳಲ್ಲಿ 2011ರ ಜನಗಣತಿಗಿಂತ ಎನ್.ಎಫ್.ಎಚ್.ಎಸ್. ಐದರ ವರದಿಯು ಲಿಂಗಾನುಪಾತ ಉತ್ತಮವಾಗಿರುವುದನ್ನು ತೋರಿಸುತ್ತದೆ. ದಕ್ಷಿಣ ಕನ್ನಡ(1038) 2011ರ ಪ್ರಕಾರ (945), ಉಡುಪಿ(1122) 2011ರ ಪ್ರಕಾರ(951), ಕೊಡಗು(1190) 2011ರಲ್ಲಿ (976) – ಅಂದರೆ ಈ ಜಿಲ್ಲೆಗಳು ಉತ್ತಮ ಲಿಂಗಾನುಪಾತವನ್ನು ಹೊಂದಿವೆ. ಇಲ್ಲೆಲ್ಲ ಶತಮಾನಗಳಿಂದ ಹೆಣ್ಣುಮಕ್ಕಳು ತವರಲ್ಲೇ ಉಳಿಯುವುದರ ಜೊತೆಗೆ ಆಸ್ತಿಯ ಅಧಿಕಾರವನ್ನು ಹೊಂದಿದ್ದರು. ಪಿತ್ರಾರ್ಜಿತ ಆಸ್ತಿಯ ಪಾಲು ಕಾನೂನು ಬಂದಾಗ ಪುರುಷರಿಗೂ ಆಸ್ತಿಯ ಹಕ್ಕು ಸುಲಭವಾಗಿ ಹಂಚಿಕೆಯಾಯಿತು. ಆದರೆ ಪಿತೃಕೇಂದ್ರಿತ ಕುಟುಂಬಗಳು ಹೆಣ್ಣುಮಕ್ಕಳಿಗೆ ಆಸ್ತಿ ನೀಡಲು ನಿರಾಕರಣೆ ತೋರುತ್ತಿದ್ದು ಹಾಗೂ ವಂಶದ ಕಲ್ಪನೆಯನ್ನು ನಂಬಿ ಹೆಣ್ಣನ್ನು ಭ್ರೂಣದಲ್ಲೇ ಇಲ್ಲದಂತೆ ಮಾಡುವ ಕ್ರೌರ್ಯವನ್ನು ಜಾರಿಗೊಳಿಸಿವೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಸಾಮಾನ್ಯ ಜನರಿಗಿಂತ ಉತ್ತಮ ಲಿಂಗಾನುಪಾತವಿರುವುದು ಕಂಡು ಬರುತ್ತದೆ. ಉತ್ತರ-ಪೂರ್ವ(ಈಶಾನ್ಯ) ರಾಜ್ಯಗಳಲ್ಲಿ ಲಿಂಗಾನುಪಾತ ಉತ್ತಮವಾಗಿರುವುದಕ್ಕೆ ಅಲ್ಲೆಲ್ಲ ಆದಿವಾಸಿ ಸಮುದಾಯಗಳಿರುವುದೇ ಕಾರಣವಾಗಿದೆ. ಅವೆಲ್ಲ ಮಾತೃವಂಶೀಯ ಕುಟುಂಬ ವ್ಯವಸ್ಥೆಯನ್ನು ಹೊಂದಿರುವುದು ಲಿಂಗಾನುಪಾತ ಉತ್ತಮವಾಗಿರಲು ಕಾರಣವಾಗಿದೆ.
ಕರ್ನಾಟಕದಲ್ಲಿ 1994ರಲ್ಲಿ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಆಸ್ತಿ ಹಕ್ಕು ಬಂದ ಮೇಲೆ ಲಿಂಗಾನುಪಾತ ಪ್ರತಿ ದಶಕದಲ್ಲೂ ಕಡಿಮೆಯಾಗುತ್ತಾ ಹೋಗಿರುವುದನ್ನು ಕಾಣುತ್ತೇವೆ. ಸಮಾನ ಆಸ್ತಿ ಹಕ್ಕು ಬಂದಾಗ ವರದಕ್ಷಿಣೆ ಸಮಸ್ಯೆ ಮತ್ತು ಸಾವುಗಳು, ಅದರ ಸಂಬಂಧಿತ ದೌರ್ಜನ್ಯಗಳು ಕಡಿಮೆ ಆಗಬಹುದೆಂದು ನಂಬಲಾಯಿತು. ಆದರೆ ಸಮಾನ ಆಸ್ತಿಹಕ್ಕು ಹೆಣ್ಣುಮಕ್ಕಳಿಗೆ ಸಿಕ್ಕಿತೋ ಇಲ್ಲವೋ ತಿಳಿಯದು. ಹೆಣ್ಣಿನ ಮೇಲೆ ಹುಟ್ಟುವ ಪೂರ್ವದಲ್ಲೇ ಹಿಂಸೆ ಜಾರಿಯಾಯಿತು. ಪಿತೃಪ್ರಧಾನ ಕುಟುಂಬ ವ್ಯವಸ್ಥೆಯು ಪಿತೃಕೇಂದ್ರಿತ ವಂಶದ ರಕ್ಷಣೆಯ ಜವಾಬ್ದಾರಿಯನ್ನು ಮೈಮೇಲೆ ಹೇರಿಕೊಂಡಿತು. ಫಲವತ್ತಾದ ಭೂಮಿಯನ್ನು ಬೇರೆ ವಂಶದವರಿಗೆ ಹೆಣ್ಣಿನೊಂದಿಗೆ ಧಾರೆಯೆರೆಯಲು ಸಿದ್ಧವಿಲ್ಲದೆ, ಆಧುನಿಕ ವೈಜ್ಞಾನಿಕ ಆವಿಷ್ಕಾರಗಳ ಮೊರೆ ಹೋದರು. ಖಾಸಗಿ ವೈದ್ಯರು ಇದಕ್ಕೆ ಮಣೆ ಹಾಕಿದರು. ಜನಿಸುವ ಅವಕಾಶವನ್ನು ಹೆಣ್ಣುಮಗುವಿಗೆ ಇಲ್ಲವಾಗಿಸಿದರು.
ಸರ್ಕಾರ 1994ರಲ್ಲಿ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆಯನ್ನು ಜಾರಿಗೆ ತಂದಿತು. ಗರ್ಭದಲ್ಲಿರುವ ಭ್ರೂಣವು ಗಂಡೋ ಹೆಣ್ಣೋ ಎಂಬುದನ್ನು ಪತ್ತೆ ಮಾಡುವುದನ್ನು ಈ ಕಾಯ್ದೆಯು ನಿಷೇಧಿಸಿತು. ಲಿಂಗದ ಆಯ್ಕೆಯನ್ನು ಗರ್ಭಪೂರ್ವ ಅಥವಾ ಗರ್ಭ ಧರಿಸಿದ ಅನಂತರ ಮಾಡುವುದು ಅಪರಾಧವಾಗಿದೆ. ಲಿಂಗಪತ್ತೆಗೆ ಸೋನೋಗ್ರಫಿಯನ್ನು ಬಳಸಿದ ವೈದ್ಯರು, ಅದಕ್ಕೆ ನೆರವಾಗುವ ಸಿಬ್ಬಂದಿ ಮತ್ತು ಒಳಗಾಗುವ ಪೋಷಕರಿಗೂ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದರೆ ಗುಟ್ಟಾಗಿ ಲಿಂಗ ಪತ್ತೆ ಮಾಡುವ ವೈದ್ಯರು ಮತ್ತು ಇದನ್ನು ಒಪ್ಪಿ ಒಳಗಾಗುವ ಪೋಷಕರು ಇರುವವರೆಗೆ ಲಿಂಗಾನುಪಾತದಲ್ಲಿ ಸುಧಾರಣೆ ತರುವುದು ಕಷ್ಟವೇ ಆಗಿದೆ.
ಕೋಷ್ಟಕ 3: ಕರ್ನಾಟಕ ಮತ್ತು ಭಾರತದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಲಿಂಗಾನುಪಾತದ ಅನುಪಾತ, 2013ರಿಂದ 2019ರವರೆಗೆ.

ಕೋಷ್ಟಕ:3ರಲ್ಲಿ ಎನ್.ಎಫ್.ಎಚ್.ಎಸ್. ಐದರ ನಗರ ಮತ್ತು ಗ್ರಾಮೀಣ ಪ್ರದೇಶಗಳ 2013ರಿಂದ 2019ರವರೆಗಿನ ಲಿಂಗಾನುಪಾತದ ವಿವರ ನೀಡಲಾಗಿದೆ. ಹುಟ್ಟಿದ ಮಕ್ಕಳ ಲಿಂಗಾನುಪಾತವನ್ನು ನೀಡಿದ ಸಂಶೋಧಕರು 50 ಮಿಲಿಯನ್ ಅಂದರೆ 5 ಕೋಟಿ ಹೆಣ್ಣುಮಕ್ಕಳು ಹುಟ್ಟುವ ಪೂರ್ವದಲ್ಲೇ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲೇ ಹೆಣ್ಣುಮಕ್ಕಳ ಲಿಂಗಾನುಪಾತ ಕಡಿಮೆ ಇರುವುದನ್ನು ಗುರುತಿಸಿದ್ದಾರೆ. ನಗರಗಳಲ್ಲಿ ವೈದ್ಯಕೀಯ ಸವಲತ್ತುಗಳು ಹಾಗೂ ಸೌಕರ್ಯಗಳು ವಿಪುಲವಾಗಿ ದೊರೆಯುತ್ತವೆ. ಜನರಿಗೆ ಮಾಹಿತಿಯ ಲಭ್ಯತೆ ಹಾಗೂ ಶಿಕ್ಷಣವೂ ಸೇರಿದಂತೆ ಆರ್ಥಿಕ ಸ್ಥಿತಿಯೂ ಉತ್ತಮವಾಗಿದ್ದು, ಒಂದೇ ಮಗು ಸಾಕು, ಅದು ಗಂಡೇ ಬೇಕೆಂಬ ಬಯಕೆಯಿಂದಾಗಿ ಹೆಣ್ಣುಮಕ್ಕಳ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿರುವುದನ್ನು ಕಾಣುತ್ತೇವೆ. ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತ ಕಡಿಮೆ ಇದ್ದರೆ, ಮದುವೆ ಮಾರುಕಟ್ಟೆಯಲ್ಲಿ ಅವಕಾಶಗಳು ಹೆಚ್ಚು ಎಂದು ಹೇಳುವವರು ಇದ್ದಾರೆ. ಆದರೆ ಹೆಣ್ಣುಮಕ್ಕಳ ಅಲಭ್ಯತೆಯು ಅವರ ಮೇಲೆ ಹಿಂಸೆಯನ್ನು ಹೆಚ್ಚಿಸಬಹುದು. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳಿಗೆ ಮಹಿಳೆಯರು ಒಳಗಾಗುವ ಪ್ರಮಾಣವು ಹೆಚ್ಚಿ ಸಮಾಜದ ಸ್ವಾಸ್ಥ್ಯವನ್ನು ಛಿದ್ರಗೊಳಿಸಲಾಗುತ್ತದೆ ಎಂಬುದನ್ನು ಜನರು ಯೋಚಿಸುವುದಿಲ್ಲ. ಅತ್ಯಾಚಾರದ ಪ್ರಕರಣಗಳು ಈಗ ಪ್ರತಿ ಜಿಲ್ಲೆಯಲ್ಲೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಸರಾಸರಿ 60-70ಕ್ಕೂ ಹೆಚ್ಚು ಮಹಿಳೆ ಮತ್ತು ಅಪ್ರಾಪ್ತ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ, ಲೈಂಗಿಕ ಹಿಂಸೆಗೆ ಒಳಗಾಗುತ್ತಿದ್ದಾರೆ. ಇದೇ ರೀತಿಯಲ್ಲಿ ಲಿಂಗಾನುಪಾತ ಕುಸಿದರೆ ಹೆಣ್ಣುಮಕ್ಕಳು ಇನ್ನೂ ಭೀಕರ ಸಂಕಷ್ಟಕ್ಕೆ ಈಡಾಗಿ ಮುರುಟಿ ಹೋಗುತ್ತಾರೆ ಎಂಬುದನ್ನು ಮನಗಾಣಬೇಕಿದೆ.
ಇದಲ್ಲದೆ ಜಾತಿಯೊಳಗಡೆ ಮತ್ತು ಧರ್ಮದೊಳಗಡೆಯೇ ವಿವಾಹ ಸಂಬಂಧ ಏರ್ಪಡಬೇಕೆಂಬ ಒತ್ತಾಸೆಯೂ ಹಲವು ರೂಪದ ಹಿಂಸೆಗಳನ್ನು ಹುಟ್ಟು ಹಾಕಬಹುದು. ಜಾತಿಯೊಳಗೆ ಆಯಾ ಜಾತಿಯ ಮಹಿಳೆಯನ್ನು ಉಳಿಸಿಕೊಳ್ಳಲು ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗುತ್ತವೆ. ಹೆಣ್ಣನ್ನು ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಣ್ಣಿನಂತೆ ನೋಡಲಾಗುತ್ತಿದ್ದು, ಹೆಣ್ಣಿನ ಮೇಲೆ ಇನ್ನೂ ಬಹುರೂಪದ ಹಿಂಸೆಗಳು ಜಾರಿಯಾಗಬಹುದು. ಲೈಂಗಿಕ ಕೆಲಸಕ್ಕಾಗಿ ಹೆಣ್ಣುಮಕ್ಕಳನ್ನು ಮೋಸದ ಬಲೆಗೆ ತಳ್ಳುವ ಹಾಗೂ ಅಂತಹ ದಂಧೆಯನ್ನು ವಿಸ್ತರಿಸುವ ಅಪಾಯಗಳೂ ಇವೆ. ಪ್ರಪಂಚದಲ್ಲಿ ಇಂದು ಎರಡನೆಯ ಸ್ಥಾನದಲ್ಲಿರುವ ವ್ಯಾಪಾರವೆಂದರೆ ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಣೆ. ಪ್ರೀತಿಯ ಹೆಸರಲ್ಲಿ ಮಹಿಳೆ ಮತ್ತು ಅಪ್ರಾಪ್ತ ಹೆಣ್ಣುಮಕ್ಕಳನ್ನು ಲೈಂಗಿಕ ದಂಧೆಗೆ ದೂಡಲಾಗುತ್ತಿದೆ.
ಇದನ್ನೂ ಓದಿರಿ: ಕರ್ನಾಟಕ 50 | ಎಡಪಂಥೀಯರು ಅಂಬೇಡ್ಕರರಿಂದ ದೂರಾದರೆಂಬುದು ಸುಳ್ಳು- ಜಿ.ಆರ್
ಸಮಾಜದಲ್ಲಿ ಬದಲಾಗುತ್ತಿರುವ ಬದುಕಿನ ವಿಧಾನ, ಸುಲಭವಾಗಿ ಕೈಗೆಟುಕುತ್ತಿರುವ ವೈಜ್ಞಾನಿಕ ಆವಿಷ್ಕಾರಗಳು, ಇದರಿಂದ ಉಂಟಾಗುವ ಅಸಮಾನ ಲಿಂಗಾನುಪಾತವು ಊಹಿಸಲೂ ಸಾಧ್ಯವಾಗದಷ್ಟು ಸಮಸ್ಯೆಗಳಿಗೆ ಮಹಿಳೆಯರನ್ನು ತಳ್ಳುತ್ತಿದೆ. ಕಾನೂನುಗಳ ಪಾಲನೆಯಲ್ಲಿ ಜನರು ತೋರುತ್ತಿರುವ ಅಸಡ್ಡೆ, ಸ್ತ್ರೀಯರ ಸಾಮಾಜಿಕ ಭದ್ರತೆಯನ್ನೇ ಬಲಿ ಪಡೆಯುತ್ತಿದೆ. ಹೆಣ್ಣು ಭ್ರೂಣಾವಸ್ಥೆಯಲ್ಲೇ ಇಲ್ಲವಾಗುವ ಸ್ಥಿತಿ ಮಾನವಹಕ್ಕುಗಳ ಪರಮೋಚ್ಚ ಉಲ್ಲಂಘನೆ ಮಾತ್ರವಲ್ಲ, ಬದುಕುಳಿಯುವ ಹಕ್ಕನ್ನು ಕಸಿದುಕೊಂಡಿದೆ. ಇಷ್ಟು ಪ್ರಮಾಣದಲ್ಲಿ ಹೆಣ್ಣು ನಾಪತ್ತೆಯಾಗುತ್ತಿದ್ದರೂ, ನಮ್ಮ ದೇಶವು ಲಿಂಗತ್ವ ಸಮಾನತೆಯ ಸೂಚ್ಯಂಕದಲ್ಲಿ 146 ದೇಶಗಳಲ್ಲಿ 129ನೆಯ ಸ್ಥಾನಕ್ಕೆ ಇಳಿದರೂ ಇದನ್ನು ಗಂಭೀರವಾಗಿ ಪರಿಗಣಿಸದ ಆಡಳಿತ ವ್ಯವಸ್ಥೆ, ವ್ಯವಸ್ಥೆಯ ಭಾಗವಾದ ನಾಗರಿಕರು ಯಾರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂಬುದು ಸತ್ಯಸಂಗತಿ. ಇದನ್ನು ತಪ್ಪಿಸಬೇಕಾದ ವೈದ್ಯಕೀಯ ಕ್ಷೇತ್ರವೂ ಜವಾಬ್ದಾರಿಯುತವಾಗಿ ಇಲ್ಲದಿರುವುದು ಕಂಡುಬರುತ್ತಿದೆ. ರೋಗಿಯನ್ನು ಉಳಿಸಲು ಪಣ ತೊಡುವ ವೈದ್ಯರು ಹೆಣ್ಣು ಭ್ರೂಣ ಉಳಿಸಲು ಪಣತೊಟ್ಟು ಹೆಣ್ಣು ಜನಿಸುವಂತೆ ಮಾಡಬೇಕಾಗಿದೆ.
ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಯನ್ನು ನಿಲ್ಲಿಸಬೇಕಾದವರು ಸುಶಿಕ್ಷಿತ ವೈದ್ಯರು. ಸ್ಕ್ಯಾನಿಂಗ್ ಸೆಂಟರುಗಳನ್ನು ಪರೀಕ್ಷಿಸಿ ಅವು ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ಎಂದು ಹೇಳುವವರು ವೈದ್ಯಾಧಿಕಾರಿಗಳು. ತಪ್ಪಿತಸ್ಥರ ಮೇಲೆ ಕೇಸನ್ನು ದಾಖಲಿಸುವವರು ಸುಶಿಕ್ಷಿತ ಕಾನೂನು ಪಾಲಕರು. ಸ್ಕ್ಯಾನಿಂಗ್ ಯಂತ್ರಗಳನ್ನು ಉತ್ಪಾದಿಸುವವರು ಬಂಡವಾಳಿಗರು. ಇವರೆಲ್ಲರೂ ಸಂಯೋಜಿತವಾಗಿಯೇ ಈ ಕೃತ್ಯ ನಡೆಯದಂತೆ ತಡೆಯಬಹುದಾಗಿದೆ. ಆದರೆ ಬಂಡವಾಳಶಾಹಿ ಪಿತೃಕೇಂದ್ರಿತ ಆರ್ಥಿಕತೆ, ಪಿತೃಪ್ರಧಾನ ಜೀವನಕ್ರಮ ಇವೆಲ್ಲವೂ ಹೆಣ್ಣನ್ನು ನಿರಂತರವಾಗಿ ಅಸಮಾನತೆಯೆಡೆಗೆ ದೂಡುತ್ತಿರುವುದರಿಂದ ಹೆಣ್ಣು ಮಾತ್ರವೇ ಮನಸ್ಸು ಮಾಡುವುದರಿಂದ ಸಮಾನತೆ ರೂಢಿಗೆ ತರಲು ಸಾಧ್ಯವಿಲ್ಲ. ಮನುವಿನ ಕಾಲದಿಂದಲೂ ಹೆಣ್ಣನ್ನು ಅಧಿಕಾರರಹಿತವಾಗಿ ನೋಡುವ ಮಾನಸಿಕತೆಯನ್ನು ರೂಢಿಗೆ ತಂದಿದ್ದು, ಆಧುನಿಕ ಸಂದರ್ಭದಲ್ಲೂ ಇಂಥ ಅವೈಜ್ಞಾನಿಕ ಚಿಂತನೆಗಳು ಜನರನ್ನು ಆಳುತ್ತಿವೆ. ಮೋಕ್ಷಕ್ಕೆ ಕಳಿಸಲು ಗಂಡೇ ಬೇಕೆಂಬ ನಂಬಿಕೆ ಪೂರ್ವಾಪರ ಚಿಂತನೆಯಿಲ್ಲದೆ ರೂಢಿಯಲ್ಲಿದೆ. ಅದಕ್ಕೆ ಬೆಂಬಲವಾಗಿ ಬಂಡವಾಳಶಾಹಿ ಪಿತೃಪ್ರಧಾನತೆಯು ನೆರವು ನೀಡುತ್ತಿದೆ. ಇಂಥ ಸಾಂಸ್ಕೃತಿಕ, ಸಾಮಾಜಿಕ ಪಿತೃಕೇಂದ್ರಿತ ಸ್ಥಿತಿಯನ್ನು ಬೇರುಸಹಿತ ನಾಶ ಮಾಡದೆ ಮಹಿಳೆಯರು ಹಿಂಸೆಯಿಂದ ಮುಕ್ತರಾಗಲು ಇರುವ ಕಾನೂನುಗಳು ರಕ್ಷಿಸಲಾರವು. ಕಾನೂನು ಮುರಿಯುವವರು ಕುಟುಂಬದಿಂದ ಹಿಡಿದು ಎಲ್ಲ ಸ್ತರದಲ್ಲೂ ಇದ್ದಾರೆ. ಇವರ ಮಾನಸಿಕತೆಗೆ ಚಿಕಿತ್ಸೆಯಾಗಬೇಕಾಗಿದೆ. ಇದಕ್ಕಾಗಿ ಹೊಸ ಹತಾರಗಳೇ ಬೇಕಾಗಿವೆ.
(ಈದಿನ.ಕಾಮ್ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಪ್ರೊ. ಆರ್. ಸುನಂದಮ್ಮ
ಪ್ರೊ. ಆರ್. ಸುನಂದಮ್ಮ ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಮಹಿಳಾ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ದುಡಿದವರು. ಅದೇ ವಿವಿಯ ಹಣಕಾಸು ಅಧಿಕಾರಿಯಾಗಿ ಮತ್ತು ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ, ಜಾನಪದ, ಮಹಿಳಾ ಅಧ್ಯಯನ ಅವರ ತಜ್ಞತೆಯ ಕ್ಷೇತ್ರಗಳು. ಸಂಶೋಧಕಿ, ಕವಯಿತ್ರಿ, ಕಾದಂಬರಿಗಾರ್ತಿ ಮತ್ತು ಅಂಕಣಗಾರರಾಗಿ ಅವರು ಪರಿಚಿತರು. ಮಹಿಳಾ ಚಳವಳಿಗಳ ಜೊತೆ ಸದಾ ಗುರುತಿಸಿಕೊಂಡವರು. ‘ಧ್ವಿತ್ವ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ, ಭರತ ಕಲ್ಪ ಕಾದಂಬರಿಗೆ ದ್ವಾರನಕುಂಟೆ ಪಾತಣ್ಣ ಪ್ರಶಸ್ತಿ, ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ, ರಾಜ್ಯ ಸರ್ಕಾರದ ಅಕ್ಕಮಹಾದೇವಿ ಪ್ರಶಸ್ತಿ ದೊರೆತಿವೆ.




