ಮಲ್ಯನಿಂದ ಮಸ್ಕ್‌ವರೆಗೆ; ಶ್ರೀಮಂತರು ಕಟ್ಟಿದ ಪಕ್ಷಗಳು ಏನಾದವು ಬಲ್ಲಿರಾ?

Date:

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಬಿಲಿಯನರ್ ಉದ್ಯಮಿ ಎಲಾನ್ ಮಸ್ಕ್, 2025ರ ಜುಲೈ 6ರಂದು ʼಅಮೆರಿಕ ಪಾರ್ಟಿʼ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಈ ಘೋಷಣೆಯ ಹಿಂದೆ ಅವರ ರಾಜಕೀಯ ಅಸಮಾಧಾನ ಮತ್ತು ಅಮೆರಿಕದ ದ್ವಿಪಕ್ಷೀಯ ವ್ಯವಸ್ಥೆಯ ಬಗ್ಗೆ ತೀವ್ರ ಟೀಕೆಗಳಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭಿನ್ನಾಭಿಪ್ರಾಯದ ಬೆನ್ನಲ್ಲೇ ಅಮೆರಿಕದ ಜನರಿಗಾಗಿ ಹೊಸ ರಾಜಕೀಯ ಪಕ್ಷ ರಚಿಸುವುದಾಗಿ ತಮ್ಮದೇ ಒಡೆತನದಲ್ಲಿರುವ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಹಿತಿ ಹಂಚಿರುವ ಮಸ್ಕ್, “ಅಮೆರಿಕದ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ಒಗ್ಗೂಡಿ ʼಏಕಪಕ್ಷೀಯʼ ವ್ಯವಸ್ಥೆಯಂತೆ ಕಾರ್ಯನಿರ್ವಹಿಸುತ್ತಿವೆ. ಈ ಎರಡೂ ಪಕ್ಷಗಳು ಜನರಿಗೆ ನಿಜವಾದ ಸ್ವಾತಂತ್ರ್ಯವನ್ನು ನೀಡುತ್ತಿಲ್ಲ, ಬದಲಿಗೆ ಭ್ರಷ್ಟಾಚಾರ ಮತ್ತು ವ್ಯರ್ಥ ವೆಚ್ಚದ ಮೂಲಕ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿವೆ” ಎಂದು ಟೀಕಿಸಿದ್ದರು.

ಜುಲೈ 4ರಂದು ಹೊಸ ಪಕ್ಷ ಸ್ಥಾಪನೆಗೆ ಸಂಬಂಧಿಸಿದಂತೆ X ಪ್ಲಾಟ್‌ಫಾರ್ಮ್‌ನಲ್ಲಿ ಸಮೀಕ್ಷೆ ನಡೆಸಿದ್ದು, ಸಾರ್ವಜನಿಕರಿಂದ ಅಭಿಪ್ರಾಯವನ್ನೂ ಸಂಗ್ರಹಿಸಿದ್ದರು. ಈ ಸಮೀಕ್ಷೆಯಲ್ಲಿ, 65.4% ಜನರು ಹೊಸ ರಾಜಕೀಯ ಪಕ್ಷ ಸ್ಥಾಪನೆಯ ಅಗತ್ಯವನ್ನು ಬೆಂಬಲಿಸಿದ್ದರು. ಇದು ಮಸ್ಕ್‌ಗೆ ಪ್ರೇರಣೆಯಾಯಿತು. ಈ ಹಿನ್ನೆಲೆಯಲ್ಲಿ “ನಿಮ್ಮ ಸ್ವಾತಂತ್ರ್ಯವನ್ನು ಹಿಂದಿರುಗಿಸಲು ʼಅಮೆರಿಕ ಪಕ್ಷʼವನ್ನು ಸ್ಥಾಪಿಸಲಾಗಿದೆ” ಎಂದು ಪ್ರಕಟಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರನ್ನು ಬೆಂಬಲಿಸಿದ್ದ ಎಲಾನ್ ಮಸ್ಕ್, ದೇಣಿಗೆಯನ್ನು ನೀಡಿದ್ದರು. ಬಳಿಕ ಎರಡನೇ ಅವಧಿಗೆ ಅಮೆರಿಕದ ಚುಕ್ಕಾಣಿ ಹಿಡಿದ ಡೊನಾಲ್ಡ್ ಟ್ರಂಪ್, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ್ದ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಅವರನ್ನು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ(ಡಿಒಜಿಇ)ಯ ಉಸ್ತುವಾರಿಯಾಗಿ ನೇಮಕ ಮಾಡಿದ್ದರು. ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದರ ಜತೆಗೆ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವುದು ಈ ಇಲಾಖೆಯ ಉದ್ದೇಶವಾಗಿತ್ತು. ಆದರೆ ಟ್ರಂಪ್‌ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಮಸ್ಕ್, ಡಿಒಜಿಇ ಮುಖ್ಯಸ್ಥ ಸ್ಥಾನವನ್ನು ತೊರೆದಿದ್ದರು. ಇದರಿಂದಾಗಿ ಇಬ್ಬರ ನಡುವೆ ಉಂಟಾದ ಮನಸ್ತಾಪ ದ್ವೇಷ ಸಾಧಿಸುವ ಮಟ್ಟಕ್ಕೆ ಬೆಳೆದಿತ್ತು. ಹಾಗಾಗಿ ತಮ್ಮ ಆದರ್ಶಗಳಿಗೆ ತಕ್ಕಂತೆ ರಾಜಕೀಯ ಪಕ್ಷವನ್ನು ರಚಿಸಲು ನಿರ್ಧರಿಸಿದರು.

ಟ್ರಂಪ್ ಅವರ ತೆರಿಗೆ ಮತ್ತು ಖರ್ಚು ಮಸೂದೆಯನ್ನು ವಿರೋಧಿಸಿ ಮಸ್ಕ್ ಟೀಕೆ ಮಾಡಲು ಆರಂಭಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸಿದ್ದರು. ತೆರಿಗೆ ಮತ್ತು ಖರ್ಚು ಮಸೂದೆ ಜಾರಿಗೊಂಡರೆ ಉದ್ಯಮಿ ಎಲಾನ್ ಮಸ್ಕ್ ಅವರು ಎಲೆಕ್ಟ್ರಿಕ್‌ ವಾಹನಗಳ ಸಬ್ಸಿಡಿಗಿಂತ ಹೆಚ್ಚಿನದನ್ನು ಕಳೆದುಕೊಳ್ಳುವರು. ಮಸ್ಕ್ ತಮ್ಮ ಅಂಗಡಿಯನ್ನು ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಬೇಕಾಗಬಹುದು ಎಂದು ಟ್ರಂಪ್ ಎಚ್ಚರಿಸಿದ್ದರು.

ಇದನ್ನೂ ಓದಿರಿ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 1)

ಎಲ್ಲ ಶ್ರೀಮಂತ ವ್ಯಕ್ತಿಗಳು ಸ್ವಂತ ರಾಜಕೀಯ ಪಕ್ಷಗಳನ್ನು ಕಟ್ಟಲು ಹೋಗುವುದಿಲ್ಲ, ವಿಚಿತ್ರವಾಗಿ ಆಡುವವರು ಮಾತ್ರ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಉದಾಹರಣೆಗೆ ವಿಜಯ್‌ ಮಲ್ಯರಂತಹ ವ್ಯಕ್ತಿಗಳು. ಇಂಥವರಿಗೆ ಮಾತ್ರ ನಾವು ಕೂಡ ಒಂದು ಪಾರ್ಟಿ ಮಾಡಬೇಕು ಅಂತ ಅನ್ನಿಸುತ್ತದೆ. ಎಲಾನ್‌ ಮಸ್ಕ್‌ ಕೂಡ ಅದೇ ಗುಂಪಿಗೆ ಸೇರಿದ ವ್ಯಕ್ತಿ ಎಂದರೂ ತಪ್ಪಾಗಲಾರದು. ವಿಚಿತ್ರವಾಗಿ ವರ್ತಿಸುವಂತಹ ಸುಮಾರು ಹೋಲಿಕೆಗಳು ಮಸ್ಕ್ ಮತ್ತು ಟ್ರಂಪ್‌ ನಡುವೆ ಇವೆ. ಟ್ರಂಪ್‌ ಕೈಗೆ ರಿಪಬ್ಲಿಕನ್‌ ಪಾರ್ಟಿ ಎನ್ನುವಂತಹ ಒಂದು ಪಕ್ಷವೇ ಸಿಕ್ಕಿಬಿಟ್ಟಿತು. ಮಸ್ಕ್‌ ಕೂಡ ಅದರೊಟ್ಟಿಗೆ ಸೇರಿಕೊಂಡರು. ಆದರೆ ಇವರಿಬ್ಬರ ವರ್ತನೆಗಳು ಒಂದೇ ರೀತಿಯಲ್ಲಿವೆ. ಇಬ್ಬರೂ ಕೂಡ ಹುಚ್ಚರೇ. ಹಾಗಾಗಿ ಇವರು ಹೊಂದಿಕೊಂಡು ಆಡಳಿತ ನಡೆಸಲು ಸಾಧ್ಯವಿಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಆ ಮಾತು ಇಂದು ನಿಜವಾಗಿರುವುದು ಗಮನಾರ್ಹ.

musk 1
ಎಲಾನ್ ಮಸ್ಕ್ ಮತ್ತು ಟ್ರಂಪ್

ಇಂತಹ ವಿಚಿತ್ರ ವ್ಯಕ್ತಿಗಳು ನಾನೇ ಒಂದು ಪಕ್ಷವನ್ನು ಕಟ್ಟುತ್ತೇನೆಂದು ಹೊರಡುತ್ತಾರೆ. ಆದರೆ‌ ನಿಜವಾಗಿಯೂ ರಾಜಕೀಯ ವ್ಯವಸ್ಥೆ ಎಂಬುದೇ ಬೇರೆ. ಕೇವಲ ಹಣದಿಂದ ರಾಜಕೀಯ ಪಕ್ಷ ಕಟ್ಟಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ವಿಜಯ್‌ ಮಲ್ಯ ಕೂಡ ಇಂತಹ ಸಂಗತಿಯನ್ನೇ ಎದುರಿಸಿದ್ದರು.

ಶ್ರೀಮಂತರು ಸ್ಥಾಪಿಸಿದ ರಾಜಕೀಯ ಪಕ್ಷಗಳ ಇತಿಹಾಸ ಮತ್ತು ಭವಿಷ್ಯ

ಶ್ರೀಮಂತ ವ್ಯಕ್ತಿಗಳಿಂದ ಸ್ಥಾಪನೆಯಾದ ಪಕ್ಷಗಳ ಇತಿಹಾಸ ನಮ್ಮ ಮುಂದಿದೆ. ಇಂತಹ ಪಕ್ಷಗಳು ದೀರ್ಘಕಾಲೀನ ಯಶಸ್ಸನ್ನು ಕಾಣುವುದು ಅಪರೂಪ. ವಿಜಯ್ ಮಲ್ಯ ಅವರು ಅಖಿಲ ಭಾರತ ಜನತಾ ದಳ (All India Janata Dal) ಎಂಬ ಪಕ್ಷವನ್ನು ಖರೀದಿಸಿದರು. ಇದು ತುಂಬಾ ಇತಿಹಾಸ ಇದ್ದಂತಹ ಪಕ್ಷ. ರೈತ ನೇಗಿಲು ಹೊತ್ತಿರುವಂತಹ ಗುರುತು ಈ ಪಕ್ಷಕ್ಕಿತ್ತು. ಮೂರು ಪಾರ್ಟಿಗಳ ಜತೆ ಸೇರಿ ಜನತಾ ದಳ ಎಂಬ ಪಕ್ಷವನ್ನು ಕಟ್ಟಲಾಗಿತ್ತು. ಅದರಲ್ಲಿದ್ದ ಕೆಲವರು ನಾವು ಹಳೇ ಜನತಾ ಪಕ್ಷವನ್ನು ಬಿಡುವುದಿಲ್ಲವೆಂದು ಅವರೇ ಇಟ್ಟುಕೊಂಡಿದ್ದರು. ಈ ಪಾರ್ಟಿ ಈಗ ಬಿಜೆಪಿಯಲ್ಲಿರುವ ಸುಬ್ರಮಣಿಯನ್ ಸ್ವಾಮಿಯವರ ಬಳಿಯಿತ್ತು. ಇವರ ಬಳಿ ವಿಜಯ ಮಲ್ಯ 2003ರಲ್ಲಿ ಈ ಪಕ್ಷವನ್ನು ಕೊಂಡುಕೊಂಡರು. 2010ರವರೆಗೆ ಅದರ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿದ್ದರು.

ದುಡ್ಡಿನಿಂದ ಕೆಲವು ಸಿಂಬಲ್ಸ್‌ಗಳನ್ನು ಕೊಂಡುಕೊಳ್ಳುವುದು ಹುಚ್ಚುತನವೆಂದೇ ಹೇಳಬಹುದು. ಉದಾಹರಣೆಗೆ, ವಿಜಯ್‌ ಮಲ್ಯ ಅವರು ಇಂಗ್ಲೆಂಡ್‌ಗೆ ಹೋಗಿ ಲಂಡನ್‌ನಲ್ಲಿದ್ದಂತಹ ಟಿಪ್ಪು ಸುಲ್ತಾನ್‌ ಖಡ್ಗವನ್ನು ಖರೀದಿಸಿ, ಟಿಪ್ಪು ವೇಷ ಧರಿಸಿ ನಟಿಸೋದು ಹುಚ್ಚುತನದ ಪರಮಾವಧಿಯಷ್ಟೇ. ಅಂತಹ ವರ್ತನೆಗಳಿಂದ ಯಾವುದೇ ಪ್ರಯೋಜನಗಳಿಲ್ಲ.

ವಿಜಯ್ ಮಲ್ಯ ಅವರು ಇದೀಗ ಭಾರತದಲ್ಲಿ ಆರ್ಥಿಕ ಅಪರಾಧಗಳ ಆರೋಪಗಳನ್ನು ಎದುರಿಸುತ್ತಿರುವ ಕಾರಣ ಯುಕೆಯಲ್ಲಿ ನೆಲೆಸಿದ್ದಾರೆ. ಈಗ ಅವರನ್ನು ಮರಳಿ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ.

ಇದನ್ನೂ ಓದಿರಿ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 2)

ಕರ್ನಾಟಕದಲ್ಲಿ ಹರಿಖೋಡೆ ಎಂಬುವವರು ಇಂತಹ ಇನ್ನೊಂದು ಪಾರ್ಟಿ ಮಾಡಿದರು. ದೇವರಾಜ ಅರಸ್‌ ಅವರ ಹೆಸರಿನಲ್ಲಿ, 2004ರ ವೇಳೆ ‘ಅರಸು ಸಂಯುಕ್ತ ಪಕ್ಷʼ ಎಂಬ ರಾಜಕೀಯ ಪಕ್ಷವನ್ನು ಕಟ್ಟಿ, “ಪರಿಶಿಷ್ಟ ಜಾತಿಗಳು/ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಸೌಲಭ್ಯ ವಂಚಿತ ಸಮುದಾಯಗಳ ಒಟ್ಟಾರೆ ಅಭಿವೃದ್ಧಿಗಾಗಿ ಒಂದೇ ಸೂರಿನಡಿ ಶ್ರಮಿಸಬೇಕು ಎಂಬುದು ಈ ಪಕ್ಷದ ಉದ್ದೇಶವಾಗಿದೆ” ಎಂದು ಘೋಷಿಸಿದ್ದರು. ಆದರೆ ಆ ಪಾರ್ಟಿ ಉಳಿಯಲಿಲ್ಲ.

ಧಾರವಾಡದ ವಿಜಯ ಸಂಕೇಶ್ವರ ಮೂಲತಃ ಉದ್ಯಮಿ. ಇವರು ವಿಆರ್‌ಎಲ್‌ ಖಾಸಗಿ ಬಸ್‌ಗಳ ಬಹುದೊಡ್ಡ ಮಾಲೀಕರಾಗಿ ಹೊರಹೊಮ್ಮಿದರು. ಇದರಿಂದ ಬಂದ ಹಣದಲ್ಲಿ ಸುದ್ದಿ ಸಂಸ್ಥೆಗಳನ್ನು ಸ್ಥಾಪಿಸಿ ಪತ್ರಿಕೆಗಳನ್ನು ಮುದ್ರಣ ಮಾಡುವುದನ್ನು ಆರಂಭಿಸಿದರು. ‘ವಿಜಯ ಕರ್ನಾಟಕʼ ಎಂಬ ಪತ್ರಿಕೆಯನ್ನು ಸ್ಥಾಪಿಸಿದರು. ಉಷಾಕಿರಣ ಎನ್ನುವಂತಹ ಪ್ರಾದೇಶಿಕ ಪತ್ರಿಕೆಯನ್ನು ಆರಂಭಿಸಿದರು. ವಿಜಯಕರ್ನಾಟಕ ಪತ್ರಿಕೆಯನ್ನು 2006ರಲ್ಲಿ ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆ ಸಮೂಹಕ್ಕೆ ನೀಡಿದರು. 2012ರಲ್ಲಿ ವಿಜಯವಾಣಿ ಪತ್ರಿಕೆಯನ್ನು ಪ್ರಾರಂಭಿಸಿದರು. 2017ರ ಏಪ್ರಿಲ್‌ 14ರಂದು ದಿಗ್ವಿಜಯ 24X7 ಎಂಬ ಹೊಸ ಕನ್ನಡ ಟಿ.ವಿ ವಾಹಿನಿಯನ್ನೂ ಆರಂಭಿಸಿದ್ದರು. ಈ ಹಿಂದೆ ಪತ್ರಿಕಾ ಸಂಸ್ಥೆಯನ್ನು ಮಾರಾಟ ಮಾಡಿದ ಹಣದಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಬಳಿಕ ಇಲ್ಲಿ ಏನೋ ಸಮಸ್ಯೆ ಉಂಟಾಯಿತೆಂಬ ಕಾರಣಕ್ಕೆ ಬಿಜೆಪಿ ತೊರೆದು ಅವರದೇ ಆದ ʼಕನ್ನಡ ನಾಡು ಪಕ್ಷʼವನ್ನು ಸ್ಥಾಪಿಸಿದರು. ಆಮೇಲೆ ಈ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಮತ್ತೆ ಬಿಜೆಪಿಯೊಂದಿಗೆ ವಿಲೀನವಾಯಿತು.

vijaya shankeshwara
ಉದ್ಯಮಿ ವಿಜಯ ಸಂಕೇಶ್ವರ

ಶ್ರೀರಾಮುಲು ಮತ್ತು ಜನಾರ್ಧನ್ ರೆಡ್ಡಿ ಸೇರಿ ಒಂದು ಪಾರ್ಟಿ ಮಾಡಿದರು. ಆಂಧ್ರಪ್ರದೇಶದಲ್ಲಿ‌ ಜಗನ್ ಮೋಹನ್ ರೆಡ್ಡಿ ವೈಎಸ್ಆರ್‌ಸಿಪಿ ಸ್ಥಾಪಿಸಿದನ್ನು ಕಂಡು ಕರ್ನಾಟಕದಲ್ಲಿ ಇವರು ಬಿಎಸ್‌ಆರ್‌ ಪಕ್ಷವನ್ನು ಸ್ಥಾಪಿಸಿದರು. ವೈಎಸ್ಆರ್‌ ಅಂದರೆ ವೈ.ಎಸ್‌.ರಾಜಶೇಖರ ರೆಡ್ಡಿ ಎಂಬುದನ್ನು ಧ್ವನಿಸುತ್ತಿತ್ತು. ಆದರೆ ಜಗನ್ ಇದ್ದನ್ನು ‘ಯುವಜನಲು ಶ್ರಮಿಕಲು ರೈತಲು ಕಾಂಗ್ರೆಸ್‌ ಪಾರ್ಟಿ’ ಕರೆದರು. ಇದನ್ನು ಅನುಕರಿಸಿದ ಶ್ರೀರಾಮುಲು, ಬಿಎಸ್‌ಆರ್‌ ಅಂದರೆ ಬಡವರು ಶ್ರಮಿಕರು ಮತ್ತು ರೈತರು ಎಂದು ಬಣ್ಣಿಸಿದರು. ಆದರೆ ಬಿ.ಶ್ರೀರಾಮುಲು ಎಂಬ ಅರ್ಥವನ್ನು ಬಿಎಸ್‌ಆರ್‌ ಧ್ವನಿಸುತ್ತಿತ್ತು. ಇದು ದುಡ್ಡಿನಿಂದ ಮಾಡಿದಂತಹ ಪಾರ್ಟಿಯಾಗಿತ್ತು. ಆ ಪಕ್ಷ ಉಳಿಯಲಿಲ್ಲ.

ಬುದ್ಧಿವಂತ ಅಂಬಾನಿ?

ಸ್ಟಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಒಂದು ವಿಡಿಯೋದಲ್ಲಿ, ʼನಾವು ಮೋದಿಗೆ ಯಾಕೆ ವೋಟ್‌ ಹಾಕಬೇಕು, ಅಂಬಾನಿಗೆ ವೋಟ್‌ ಹಾಕುತ್ತೇವೆʼ ಎಂದು ಕುಟುಕಿದ್ದಾರೆ. ಅಂದರೆ “ನರೇಂದ್ರ ಮೋದಿಯವರು ಅಂಬಾನಿ ಏಜೆಂಟ್‌, ಹಾಗಾಗಿ ನಾವು ಡೈರೆಕ್ಟಾಗಿ ಅವರಿಗೇ ವೋಟ್‌ ಹಾಕುತ್ತೇವೆ. ಅವರೇ ಚುನಾವಣೆಗಳಲ್ಲಿ ಸ್ಪರ್ಧಿಸಲಿ” ಅಂದಿದ್ದಾರೆ. ಹಾಗೆ ನೋಡಿದರೆ ಅಂಬಾನಿ ಯಾವುದೇ ರಾಜಕೀಯ ಪಕ್ಷವನ್ನು ಕಟ್ಟುವಂತಹ ನಿರ್ಧಾರಕ್ಕೆ ಬರಲಿಲ್ಲ. ಯಾವುದೇ ಬುದ್ದಿವಂತ ಉದ್ಯಮಿಗಳು ತಮ್ಮದೇ ಪಕ್ಷಗಳನ್ನು ಕಟ್ಟಲು ಮುಂದಾಗುವುದಿಲ್ಲ. ಒಂದೇ ಪಾರ್ಟಿಯ ಪರ ಎನ್ನುವಂತೆ ಇದ್ದರೂ ಕೂಡ ಎಲ್ಲ ರಾಜಕೀಯ ಪಕ್ಷಗಳಿಗೆ ಹಣಕಾಸು ಸಹಾಯ ಮಾಡುತ್ತಾರೆ.

ಭಾರತದಲ್ಲಿ ಸ್ವತಂತ್ರ ರಾಜಕೀಯ ಪಕ್ಷಗಳ ವಿಫಲತೆಗೆ ಸಾಮಾನ್ಯವಾಗಿ ಆಂತರಿಕ ಒಗ್ಗಟ್ಟಿನ ಕೊರತೆ, ಜನಸಾಮಾನ್ಯರೊಂದಿಗೆ ಸಂಪರ್ಕದ ಕೊರತೆ ಮತ್ತು ದೊಡ್ಡ ರಾಷ್ಟ್ರೀಯ ಪಕ್ಷಗಳ ಜೊತೆ ಸ್ಪರ್ಧಿಸಲು ಸಾಧ್ಯವಾಗದೆ ಇರುವುದು ಮುಖ್ಯ ಕಾರಣಗಳಾಗಿವೆ. ಕೆಲವು ಪಕ್ಷಗಳು ಆರಂಭದಲ್ಲಿ ಯಶಸ್ಸು ಕಂಡರೂ, ದೀರ್ಘಕಾಲೀನವಾಗಿ ತಮ್ಮ ಗುರುತನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ.

ಇದನ್ನೂ ಓದಿರಿ: ವಿಶ್ಲೇಷಣೆ | ತೆಲಂಗಾಣ, ಆಂಧ್ರದಲ್ಲಿ ಒಳಮೀಸಲಾತಿ ಹಂಚಿಕೆ ಹೇಗೆ ಮಾಡಲಾಗಿದೆ?

ರಾಸ್ ಪೆರೋಟ್‌ನ ರಿಫಾರ್ಮ್ ಪಾರ್ಟಿ(1992, USA): ಅಮೆರಿಕದ ಶ್ರೀಮಂತ ಉದ್ಯಮಿ ರಾಸ್ ಪೆರೋಟ್, 1992 ಮತ್ತು 1996ರ ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಳಿಕ ರಿಫಾರ್ಮ್ ಪಾರ್ಟಿಯನ್ನು ಸ್ಥಾಪಿಸಿದರು. 1992ರಲ್ಲಿ ಅವರು ಶೇ.19ರಷ್ಟು ಜನಪ್ರಿಯ ಮತಗಳನ್ನು ಗಳಿಸಿದರು. ಇದು ಒಂದು ಗಮನಾರ್ಹ ಸಾಧನೆಯಾಗಿತ್ತು. ಆದರೆ ದೀರ್ಘಕಾಲೀನವಾಗಿ ಈ ಪಕ್ಷವು ರಾಜಕೀಯ ಪ್ರಭಾವವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಸಂಘಟನೆಯ ಕೊರತೆಯಿಂದಾಗಿ ರಿಫಾರ್ಮ್ ಪಾರ್ಟಿಯು ಕ್ಷೀಣಿಸಿತು. 2000ನೇ ಇಸವಿ ಹೊತ್ತಿಗೆ, ಇದು ರಾಷ್ಟ್ರೀಯ ರಾಜಕಾರಣದಲ್ಲಿ ತನ್ನ ಪ್ರಭಾವವನ್ನು ಕಳೆದುಕೊಂಡಿತು.

ಬಿಡೆನ್ ಟಿಯಾಂಗ್‌ಕೊನ ಥಾಯ್ ರಕ್ ಥಾಯ್ ಪಾರ್ಟಿ(1998, ಥಾಯ್ಲೆಂಡ್): ಥಾಯ್ಲೆಂಡ್ ಶ್ರೀಮಂತ ಉದ್ಯಮಿ ಬಿಡೆನ್ ಟಿಯಾಂಗ್‌ಕೊ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಇದು ಕೆಲವು ವರ್ಷಗಳವರೆಗೆ ಜನಪ್ರಿಯವಾಗಿತ್ತು. ಈ ಪಕ್ಷವು ಶ್ರೀಮಂತರ ಆರ್ಥಿಕ ಬೆಂಬಲ ಮತ್ತು ಜನಪ್ರಿಯ ಧೋರಣೆಗಳಿಂದ 2001ರಲ್ಲಿ ಸರ್ಕಾರ ರಚಿಸಿತು. ಆದರೆ, ಭ್ರಷ್ಟಾಚಾರದ ಆರೋಪಗಳು ಮತ್ತು ರಾಜಕೀಯ ಅಸ್ಥಿರತೆಯಿಂದಾಗಿ ಈ ಪಕ್ಷವು ಕ್ಷೀಣಿಸಿತು. 2006ರ ರಾಜಕೀಯ ಕ್ರಾಂತಿಯ ಬಳಿಕ, ಈ ಪಕ್ಷವು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು.

ಆಂಡ್ರೆಜ್ ಬಾಬಿಶ್‌ನ ANO 2011(ಚೆಕ್ ರಿಪಬ್ಲಿಕ್): ಶ್ರೀಮಂತ ಉದ್ಯಮಿ ಆಂಡ್ರೆಜ್ ಬಾಬಿಶ್ 2011ರಲ್ಲಿ ANO(Action of Dissatisfied Citizens) ಪಕ್ಷವನ್ನು ಸ್ಥಾಪಿಸಿದರು. ಬಾಬಿಶ್‌ರ ಆರ್ಥಿಕ ಸಂಪನ್ಮೂಲಗಳು ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ 2017ರಲ್ಲಿ ಚೆಕ್ ರಿಪಬ್ಲಿಕ್‌ನಲ್ಲಿ ಈ ಪಕ್ಷವು ಸರ್ಕಾರ ರಚಿಸಿತು. ಆದರೆ, ಭ್ರಷ್ಟಾಚಾರದ ಆರೋಪಗಳು ಮತ್ತು ಜನರ ಅಸಮಾಧಾನದಿಂದಾಗಿ ಈ ಪಕ್ಷದ ಜನಪ್ರಿಯತೆ ಕಡಿಮೆಯಾಯಿತು. 2021ರ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೆ ಎಎನ್‌ಒ ಕುಸಿಯಿತು.

babe
ಆಂಡ್ರೆಜ್ ಬಾಬಿಶ್‌

ಶ್ರೀಮಂತರಿಂದ ಸ್ಥಾಪಿತವಾದ ಪಕ್ಷಗಳು ವಿಫಲವಾಗಿದ್ದೇಕೆ?

ಶ್ರೀಮಂತ ವ್ಯಕ್ತಿಗಳು ತಮ್ಮ ಆರ್ಥಿಕ ಸಂಪನ್ಮೂಲಗಳನ್ನು ಬಳಸಿಕೊಂಡು ತ್ವರಿತವಾಗಿ ರಾಜಕೀಯ ಪಕ್ಷವನ್ನು ಸ್ಥಾಪಿಸಬಹುದು. ಆದರೆ ದೀರ್ಘಕಾಲೀನ ಸಂಘಟನೆ ಮತ್ತು ಜನರ ಬೆಂಬಲವನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿರುತ್ತದೆ. ರಾಸ್ ಪೆರೋಟ್‌ನ ರಿಫಾರ್ಮ್ ಪಾರ್ಟಿಯಂತಹ ಉದಾಹರಣೆಗಳು ಇದನ್ನು ಸಾಬೀತುಪಡಿಸುತ್ತವೆ. ಅಲ್ಲದೆ ಇಂತಹ ಪಕ್ಷಗಳು ಸಾಮಾನ್ಯ ಜನರ ಸಂಪರ್ಕ ಮತ್ತು ನಂಬಿಕೆ ಗಳಿಸುವುದು ಕಷ್ಟವಾಗುತ್ತದೆ. ಇಂತಹ ಪಕ್ಷಗಳು ಶ್ರೀಮಂತರ ಆಟಿಕೆಗಳಂತಷ್ಟೇ ಜನರ ಕಣ್ಣಿಗೆ ಕಾಣಿಸುತ್ತವೆ.

ಭ್ರಷ್ಟಾಚಾರದ ಆರೋಪಗಳು: ಶ್ರೀಮಂತ ವ್ಯಕ್ತಿಗಳು ತಮ್ಮ ಆರ್ಥಿಕ ಶಕ್ತಿಯನ್ನು ರಾಜಕೀಯ ಪ್ರಭಾವಕ್ಕಾಗಿ ಬಳಸಿದಾಗ, ಭ್ರಷ್ಟಾಚಾರದ ಆರೋಪಗಳು ಉದ್ಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಅವರ ಪಕ್ಷದ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ.

ಶ್ರೀಮಂತ ಉದ್ಯಮಿಗಳು ವ್ಯಾಪಾರದಲ್ಲಿ ಯಶಸ್ವಿಯಾದರೂ, ರಾಜಕೀಯದ ಸಂಕೀರ್ಣತೆಯನ್ನು ನಿಭಾಯಿಸುವ ಅನುಭವ ಇರುವುದಿಲ್ಲ. ಆ ಕಾರಣಕ್ಕೆ ತಮ್ಮ ರಾಜಕೀಯ ಪಕ್ಷದ ವಿಫಲತೆಗೆ ಕಾರಣವಾಗಬಹುದು.

ಎಲಾನ್ ಮಸ್ಕ್‌ನ ಅಮೆರಿಕ ಪಾರ್ಟಿಯ ಭವಿಷ್ಯ

ಮಸ್ಕ್‌ರವರ ಅಮೆರಿಕ ಪಾರ್ಟಿಯ ಭವಿಷ್ಯವು ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ. ಮಸ್ಕ್‌ರವರ X ಜಾಲತಾಣವು ಈಗಾಗಲೇ ರಾಜಕೀಯ ವಿಚಾರಗಳಲ್ಲಿ ದೊಡ್ಡ ಪ್ರಭಾವ ಬೀರುತ್ತಿದೆ. ಇದನ್ನು ಬಳಸಿಕೊಂಡು ಜನರನ್ನು ಸೆಳೆಯುವ ಸಾಮರ್ಥ್ಯ ಅವರಿಗಿದೆ. ಜುಲೈ 4ರ ಸಮೀಕ್ಷೆಯಲ್ಲಿ 65.4% ಜನರು ಹೊಸ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ, ಈ ಬೆಂಬಲವನ್ನು ಚುನಾವಣಾ ಮತಗಳಾಗಿ ಪರಿವರ್ತಿಸುವುದು ಸವಾಲಿನ ಕೆಲಸ.

ಅಮೆರಿಕದ ʼವಿನ್ನರ್-ಟೇಕ್ಸ್-ಆಲ್ʼ ಚುನಾವಣಾ ವ್ಯವಸ್ಥೆಯು ತೃತೀಯ ಪಕ್ಷಗಳ ಯಶಸ್ಸಿಗೆ ಕಷ್ಟಕರವಾಗಿಸುತ್ತದೆ. ರಾಸ್ ಪೆರೋಟ್‌ನ ರಿಫಾರ್ಮ್ ಪಾರ್ಟಿಯಂತಹ ಉದಾಹರಣೆಗಳು ಆರಂಭಿಕ ಯಶಸ್ಸನ್ನು ಕಂಡರೂ, ದೀರ್ಘಕಾಲ ಉಳಿಯಲಿಲ್ಲ. ಅಲ್ಲದೆ 2025ರ ಜೂನ್‌ನಲ್ಲಿ ರಾಯಿಟರ್ಸ್/ಇಪ್ಸೋಸ್ ಸಮೀಕ್ಷೆಯು ತಿಳಿಸಿರುವಂತೆ, ʼಕೇವಲ 36% ಅಮೆರಿಕನ್ನರು ಮಸ್ಕ್‌ರನ್ನು ಒಲವಿನಿಂದ ನೋಡುತ್ತಾರೆ, ಬೆಂಬಲಿಸುತ್ತಾರೆ. ಆದರೆ 59% ಜನ ಅವರ ಬಗ್ಗೆ ಋಣಾತ್ಮಕ ದೃಷ್ಟಿಕೋನ ಹೊಂದಿದ್ದಾರೆʼ ಎಂಬುದು ಬಹಿರಂಗವಾಗಿದೆ.

ಡೊನಾಲ್ಡ್ ಟ್ರಂಪ್, ಮಸ್ಕ್‌ ಅವರ ಪಕ್ಷವನ್ನು ಈಗಾಗಲೇ ʼಹಾಸ್ಯಾಸ್ಪದʼ ಎಂದು ಕರೆದಿದ್ದಾರೆ. ಇದು ರಿಪಬ್ಲಿಕನ್ ಬೆಂಬಲಿಗರ ನಡುವೆ ಮಸ್ಕ್‌ರವರಿಗೆ ಸವಾಲಾಗಬಹುದು. ಅವರ ಆರ್ಥಿಕ ಶಕ್ತಿಯು ಪಕ್ಷವನ್ನು ಆರಂಭಿಕ ಹಂತದಲ್ಲಿ ಬಲಿಷ್ಠಗೊಳಿಸಬಹುದು. ಆದರೆ ದೀರ್ಘಕಾಲೀನ ಯಶಸ್ಸಿಗೆ ಜನರ ನಂಬಿಕೆ ಮತ್ತು ರಾಜಕೀಯ ತಂತ್ರಗಳು ಅಗತ್ಯವಾಗಿರುತ್ತವೆ.

ಇದನ್ನೂ ಓದಿರಿ: ಅಂಬೇಡ್ಕರ್ ಕನಸಿನ ದಲಿತ ಪತ್ರಿಕೋದ್ಯಮ ನನಸಾಗಲಿಲ್ಲ!

ಎಲಾನ್ ಮಸ್ಕ್‌ ಅವರ ‘ಅಮೆರಿಕ ಪಾರ್ಟಿ’ಯ ಭವಿಷ್ಯವು ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ. ಇತಿಹಾಸವನ್ನು ಗಮನಿಸಿದಾಗ, ಶ್ರೀಮಂತ ವ್ಯಕ್ತಿಗಳಿಂದ ಸ್ಥಾಪಿತ ರಾಜಕೀಯ ಪಕ್ಷಗಳು ದೀರ್ಘಕಾಲೀನ ಯಶಸ್ಸನ್ನು ಕಾಣುವುದು ಕಷ್ಟಕರವಾಗಿದೆ. ಆದರೆ, ಮಸ್ಕ್‌ನ ಸಂಪನ್ಮೂಲಗಳು, X ಪ್ಲಾಟ್‌ಫಾರ್ಮ್‌ನ ಪ್ರಭಾವ ಮತ್ತು ಜನರ ಬೆಂಬಲ ಈ ಪಕ್ಷಕ್ಕೆ ಆರಂಭಿಕ ಗಮನ ತಂದುಕೊಡಬಹುದು. ಆದರೆ ದೀರ್ಘಕಾಲೀನ ಯಶಸ್ಸಿಗೆ ರಾಜಕೀಯ ಸಂಘಟನೆ, ಜನರ ನಂಬಿಕೆ ಮತ್ತು ಘನವಾದ ರಾಜಕೀಯ ತಂತ್ರ ಹಾಗೂ ವಿಶ್ವಾಸಾರ್ಹತೆಯ ಅಗತ್ಯವಿದೆ. ಒಂದು ವೇಳೆ ಮಸ್ಕ್ ತಮ್ಮ ಗಮನವನ್ನು ಕಳೆದುಕೊಂಡರೆ ಅಥವಾ ರಾಜಕೀಯ ಸವಾಲುಗಳನ್ನು ಎದುರಿಸಲು ವಿಫಲರಾದರೆ, ಇತರ ತೃತೀಯ ಪಕ್ಷಗಳಂತೆ ಈ ಪಕ್ಷವೂ ಕ್ಷೀಣಿಸಬಹುದು.

ಎಲಾನ್ ಮಸ್ಕ್‌ರ ಅಮೆರಿಕಾ ಪಾರ್ಟಿಯ ಘೋಷಣೆಯು ಯುಎಸ್‌ನ ಎರಡು-ಪಕ್ಷದ ವ್ಯವಸ್ಥೆಗೆ ಸವಾಲು ಹಾಕುವ ಗುರಿಯನ್ನು ಹೊಂದಿದೆ. ಆದರೆ ಮತಪತ್ರ ಪ್ರವೇಶ, FEC ನೋಂದಣಿಯ ತೊಡಕುಗಳು ಮತ್ತು ತೃತೀಯ ಪಕ್ಷಗಳ ಐತಿಹಾಸಿಕ ವೈಫಲ್ಯಗಳು ಗಣನೀಯ ಅಡೆತಡೆಗಳಾಗಿವೆ. ಸೂಪರ್ PAC ಮಾರ್ಗವು ತಾತ್ಕಾಲಿಕವಾಗಿ ಕಾರ್ಯಸಾಧ್ಯವಾದ ಆಯ್ಕೆಯಾಗಿದ್ದರೂ, ದೀರ್ಘಕಾಲಿಕ ಯಶಸ್ಸಿಗೆ ಒಂದು ಸ್ಪಷ್ಟ ದೃಷ್ಟಿಕೋನ, ನೆಲಮಟ್ಟದ ಕ್ರಿಯಾಶೀಲತೆ ಮತ್ತು ವ್ಯಾಪಕ ಸಾರ್ವಜನಿಕ ಬೆಂಬಲದ ಅಗತ್ಯವಿರುತ್ತದೆ. 2026ರ ಮಧ್ಯಂತರ ಚುನಾವಣೆಗಳಲ್ಲಿ 2-3 ಸೆನೆಟ್ ಆಸನಗಳು ಮತ್ತು 8-10 ಹೌಸ್ ಜಿಲ್ಲೆಗಳನ್ನು ಮಸ್ಕ್‌ ಗುರಿಯಾಗಿಟ್ಟುಕೊಂಡರೂ, ಅದನ್ನು ಸಾಧಿಸಬೇಕಾದರೆ ಸಂಕೀರ್ಣವಾದ ಕಾನೂನಾತ್ಮಕ, ಆರ್ಥಿಕ ಮತ್ತು ರಾಜಕೀಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಹೊಸ ರಾಜಕೀಯ ಸಾಹಸವು ಯಶಸ್ವಿಯಾಗುವುದೇ ಎಂಬುದನ್ನು ಕಾಲವೇ ತೀರ್ಮಾನಿಸಲಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...