ಭಾರತದ ರಾಜಕೀಯ ಇತಿಹಾಸದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರ ವಿಚಾರಗಳ ಮತ್ತು ಸಿದ್ಧಾಂತಗಳ ತೌಲನಿಕ ಅಧ್ಯಯನವನ್ನು ಮುಕ್ತ ಮನಸ್ಸಿನಿಂದ ಮಾಡಿದ ಯಾರಿಗೇ ಆದರೂ ಅಂದಿನ ಸಂಪೂರ್ಣ ರಾಜಕೀಯದ ಒಂದು ಸಮಗ್ರ ಚಿತ್ರಣವನ್ನು ಗ್ರಹಿಸುವಷ್ಟು ಸಾಮಗ್ರಿ ಸಿಕ್ಕೇ ಸಿಗುತ್ತದೆ. ಆದರೆ ಯಾವುದೇ ವೈಚಾರಿಕ ಕಟ್ಟುಪಾಡುಗಳಿಗೆ ಒಳಗಾಗದೆ ಅವುಗಳನ್ನು ಗ್ರಹಿಸಬೇಕು. ಇದರಲ್ಲಿ ಅತಿ ಮುಖ್ಯವಾದ ಅಂಶವೆಂದರೆ ಓದುಗ ಅವರಿಬ್ಬರನ್ನು ಅತಿ ಮಾನುಷ ದೃಷ್ಟಿಕೋನದಿಂದ ನೋಡದೆ ವಾಸ್ತವಿಕತೆಯ ನೆಲಗಟ್ಟಿನ ಮೇಲೆ ಮತ್ತು ಅತಿ ಮುಖ್ಯವಾಗಿ ಅವರಿಬ್ಬರೂ ಇದ್ದ ಕಾಲಮಾನದ ರಾಜಕೀಯ ಇತಿಹಾಸದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು.
ಗಾಂಧಿ, ಅಂಬೇಡ್ಕರ್ ಇಬ್ಬರ ಬದುಕು, ಹಿನ್ನೆಲೆ ನೋಡಿದಾಗ, ಗಾಂಧಿ ಧರ್ಮವನ್ನು ಪರಿಗಣಿಸುವ ಮತ್ತು ವರ್ಣಾಶ್ರಮ ವ್ಯವಸ್ಥೆಯನ್ನು ಅತ್ಯಂತ ಸಹಜವಾಗಿ ಒಪ್ಪಿಕೊಳ್ಳುವ ರೀತಿ ಸಹಜವಾಗಿಯೇ ಸಮಾಜದಲ್ಲಿನ ಅವರ ಉತ್ತಮ ಸ್ಥಾನಮಾನ ಹಾಗೂ ಜಾತಿಯಿಂದ ಪ್ರೇರಿತವಾಗಿದೆ. ಹಾಗೆಂದ ಮಾತ್ರಕ್ಕೆ ಜಾತಿಯನ್ನು ಮೀರಿ ಬೆಳೆಯಲಾರದ ಸಂಕುಚಿತ ಬುದ್ಧಿಯವರು ಗಾಂಧಿ ಎಂದುಕೊಳ್ಳುವ ಅವಶ್ಯಕತೆ ಇಲ್ಲ. ಜಾತಿ ವ್ಯವಸ್ಥೆಯ ಬಗೆಗಿನ ಗಾಂಧೀಜಿಯ ಆರಂಭಿಕ ವಿಚಾರಗಳಿಗೂ, ಅವರ ಕೊನೆ ದಿನಗಳಲ್ಲಿ ವ್ಯಕ್ತಪಡಿಸಿದ ವಿಚಾರಗಳಿಗೂ ಬದಲಾವಣೆಯನ್ನು ಕಾಣಬಹುದು. ಆದರೆ ಈ ಬದಲಾವಣೆ ಮನುಷ್ಯತ್ವ ಮತ್ತು ನೈತಿಕತೆಗಳ ಹಿನ್ನೆಲೆಯಲ್ಲಿ ವ್ಯಕ್ತವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಅಂಬೇಡ್ಕರ್ ಅವರಲ್ಲಿನ ಜಾತಿ ಪ್ರಜ್ಞೆ ಆಳವಾದ ನೋವು, ಅನುಭವ ಮತ್ತು ಅವಮಾನಗಳ ಹಿನ್ನೆಲೆಯಲ್ಲಿ ವ್ಯಕ್ತವಾಗುತ್ತದೆ. ಅದಕ್ಕಾಗಿಯೇ ಗಾಂಧೀಜಿ ಅಸ್ಪೃಶ್ಯತೆ ನಿವಾರಣೆಯ ಬಗ್ಗೆ ಮಾತನಾಡುವಾಗ, ಜಾತಿ ವ್ಯವಸ್ಥೆಯನ್ನು ಟೀಕಿಸುತ್ತ ವರ್ಣವ್ಯವಸ್ಥೆಯನ್ನು ಸಮರ್ಥಿಸುವಾಗ, ಅದೆಲ್ಲ ಸಂತನೊಬ್ಬನ ಸ್ವಗತಗಳಂತೆ ಅಂಬೇಡ್ಕರ್ ಅವರಿಗೆ ಅನಿಸಿದ್ದರೆ ತಪ್ಪೇನಿಲ್ಲ.
ಅಂಬೇಡ್ಕರ್ ಅವರ ಮೇಲೆ ಕೆಲವೊಂದು ಆರೋಪಗಳು ಇವೆ. ಅದರಲ್ಲಿ ಮುಖ್ಯವಾಗಿ “ಕೇವಲ ಜಾತಿ ತಾರತಮ್ಯದಿಂದ ಹೊರಗೆ ಬರಲು ಸ್ವರಾಜ್ಯಕ್ಕೆ ಬದಲು ಬ್ರಿಟಿಷರ ಆಡಳಿತವನ್ನು ಒಪ್ಪಿಕೊಳ್ಳುವುದು ಎಷ್ಟು ಸರಿ” ಎಂಬುದು ಮತ್ತು “ಅಂಬೇಡ್ಕರ್ ದಲಿತರ ಮುಕ್ತಿಯ ದಾರಿ ಮಾಡುತ್ತಾ ಉಳಿದ ಹಿಂದುಳಿದ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದರು ಎಂಬುದು”. ಈ ಎರಡು ಆರೋಪಗಳನ್ನು ವಿಶ್ಲೇಷಿಸುವಾಗಲೂ ಈ ಮೊದಲೇ ಹೇಳಿದಂತೆ ಅಂದಿನ ಕಾಲಘಟ್ಟದ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು. ಸ್ವಾತಂತ್ರ‍್ಯ ಎಂಬುದು ಇನ್ನೂ ಮರೀಚಿಕೆಯಾಗಿದ್ದಾಗ ಮತ್ತು ಹೋರಾಟದ ಮುಂಚೂಣಿಯಲ್ಲಿ ಇದ್ದವರು ದೇಶಪ್ರೇಮದ ಹೆಸರಿನಲ್ಲಿ ದಲಿತರ ಸ್ವಾತಂತ್ರ‍್ಯ ಹಾಗೂ ಸಮಾನತೆಯ ಬೇಡಿಕೆಗಳನ್ನು ಕಡೆಗಣಿಸುತ್ತಿದ್ದಾಗ, ಅವರ ಬೇಡಿಕೆಗಳನ್ನು ಕೇಳಿಸಿಕೊಳ್ಳುವ ಮತ್ತು ಜಾತಿ ಆಧಾರದ ತಾರತಮ್ಯವನ್ನು ಮಾಡದ ಬ್ರಿಟಿಷ್ ಆಡಳಿತ ತುಲನಾತ್ಮಕವಾಗಿ ಸ್ವಲ್ಪಮಟ್ಟಿಗಾದರೂ ಲೇಸು ಎಂದು ಅವರಿಗೆ ಅನಿಸಿದ್ದರಲ್ಲಿ ತಪ್ಪಿರಲಿಕ್ಕಿಲ್ಲ.
ಇಂದಿನ ಸಮಾಜದಲ್ಲಿ ನಿಂತು ಭೀಮಾ ಕೋರೆಗಾಂವ್ ಘಟನೆಯ ವಿಶ್ಲೇಷಣೆ ಮಾಡುವಾಗ, ಅದನ್ನು ದಲಿತರ ಸ್ವಾಭಿಮಾನದ ಪ್ರತೀಕ ಎಂಬಂತೆ ನೋಡಬೇಕೊ ಅಥವಾ ದಲಿತರು ಬ್ರಿಟಿಷರ ಜೊತೆ ಸೇರಿ ಪೇಶ್ವೆಗಳ ವಿರುದ್ಧ ನಿಂತಿದ್ದರು ಎಂಬಂತೆ ಬಿಂಬಿಸಬೇಕೊ ಎಂಬ ದ್ವಂದ್ವ ಎದುರಾಗುತ್ತದೆ. ಇಲ್ಲಿ ಪೇಶ್ವೆಗಳನ್ನು ಒಂದು ಸಮುದಾಯದಂತೆ ಅಲ್ಲದೆ ಸಂಪ್ರದಾಯವಾದಿ ಹಿಂದೂ ದಮನಕಾರಿ ಶಕ್ತಿಯ ಪ್ರತೀಕದಂತೆ ನೋಡಿದಾಗ ಆ ಪ್ರತಿಭಟನೆಯ ಮಹತ್ವ ತಿಳಿಯುತ್ತದೆ. ಅದೇ ರೀತಿ ಅಂಬೇಡ್ಕರ್ ಅವರು ತನ್ನೆಲ್ಲ ಅಧ್ಯಯನದಲ್ಲೂ ಇತರ ಹಿಂದುಳಿದ ವರ್ಗದವರನ್ನು ಸಹ ಸವರ್ಣೀಯರು ಎಂದೇ ಗುರುತಿಸಿದ್ದಾರೆ, ಕೇವಲ ದಲಿತರು ಮಾತ್ರ ಅವರ್ಣೀಯರು. ಇದಕ್ಕೆ ಕಾರಣ ಇದೆ ಇತರ ಹಿಂದುಳಿದ ವರ್ಗದವರು ವರ್ಣವ್ಯವಸ್ಥೆಯಲ್ಲಿ ಗುರುತಿಸಲ್ಪಡುತ್ತಾರೆ. ಅಂದರೆ ಪ್ರತಿಯೊಂದು ರಾಜ್ಯ, ರಾಜ ಮನೆತನ, ಆಡಳಿತ ಕ್ಷೇತ್ರಗಳ ಹಿನ್ನೆಲೆಯಲ್ಲಿ ಈ ಹಿಂದುಳಿದ ಜಾತಿಗಳ ಪ್ರಾಬಲ್ಯ ಮತ್ತು ಮಹತ್ವ ಗುರುತಿಸಲ್ಪಡುತ್ತದೆ. ಆದರೆ ದಲಿತರು ಮಾತ್ರ ಎಲ್ಲ ಕಡೆಯೂ ಒಂದೇ ರೀತಿಯ ತಾರತಮ್ಯಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)
ಗಾಂಧಿ ಮತ್ತು ಅಂಬೇಡ್ಕರ್ ತಮ್ಮ ವಾದಗಳಿಗೆ ಪೂರಕವಾಗಿ ಬಳಸಿಕೊಂಡಿದ್ದು ಹಿಂದೂ ಧರ್ಮದ ಗ್ರಂಥಗಳನ್ನೇ. ಗಾಂಧೀಜಿ ವೈದಿಕ ವರ್ಣಾಶ್ರಮ ವ್ಯವಸ್ಥೆಯನ್ನು ವಿವರಿಸುವಾಗ ಅದೊಂದು ವೈಜ್ಞಾನಿಕ ಹಿನ್ನೆಲೆಯಲ್ಲಿ ರಚಿಸಲಾದ ಶ್ರಮದ ವಿಭಜನೆ (Division of Labour) ಎನ್ನುತ್ತಾರೆ. ಆದರೆ ಅಂಬೇಡ್ಕರ್ ಇದನ್ನು ಶ್ರಮಿಕರ ವಿಭಜನೆ ಎಂದು ಗುರುತಿಸುತ್ತಾರೆ. ಅದೇ ಕಾರಣಕ್ಕಾಗಿ ಅಮಾನವೀಯ ವರ್ಣವ್ಯವಸ್ಥೆಯನ್ನು ಅದರ ಒಳಗೆ ಇದ್ದುಕೊಂಡು ನಿವಾರಿಸಬೇಕು ಎಂದು ಗಾಂಧೀಜಿ ಹೇಳಿದಾಗ ಅದರ ಆಳ, ಅಗಲ, ಮತ್ತು ವ್ಯಾಪ್ತಿಯ ಸ್ವಂತ ಅನುಭವವಿದ್ದ ಅಂಬೇಡ್ಕರ್ ಸಂವಿಧಾನಾತ್ಮಕ ದಾರಿಗಳಲ್ಲದೆ, ವೇದಶಾಸ್ತ್ರಗಳ ಶಕ್ತಿಯನ್ನು ನಾಶ ಮಾಡದೆ ವರ್ಣವ್ಯವಸ್ಥೆಯ ನಿರ್ಮೂಲನೆ ಸಾಧ್ಯ ಇಲ್ಲ ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. `ಪೂನಾ ಪ್ಯಾಕ್ಟ್’ ಸಮಯದಲ್ಲಿ ನಡೆದ ಅವರಿಬ್ಬರ ನಡುವಿನ ಸಂವಾದ ಇಂದಿಗೂ ಚರ್ಚೆಯ ವಿಷಯವಾಗಿರುವುದಕ್ಕೆ ಇದೇ ಕಾರಣ; ಧರ್ಮದಲ್ಲಿ ಸಮಾಧಾನ ಹುಡುಕುವ ಗಾಂಧೀಜಿ ಮತ್ತು ಈ ಧರ್ಮವೇ ಜಾತಿ ವ್ಯವಸ್ಥೆಯ ಮೂಲ ಕಾರಣ, ಆದ್ದರಿಂದ ಜಾತಿ ವ್ಯವಸ್ಥೆಯ ನಿರ್ನಾಮವಾಗಬೇಕಾದರೆ, ಈಗ ಇದ್ದ ಸ್ವರೂಪದಲ್ಲಿನ ಹಿಂದೂ ಧರ್ಮವೂ ನಿರ್ನಾಮವಾಗಬೇಕು ಎಂದಿರುವ ಅಂಬೇಡ್ಕರ್, ಪರಸ್ಪರ ವಾಗ್ವಾದಗಳನ್ನು ನಡೆಸಿರುವುದು ಮಹತ್ವದ ಸಂಗತಿ.
ಇಲ್ಲಿ ಚರ್ಚೆಗೆ ಎತ್ತಿಕೊಂಡಿರುವ ‘ಶ್ರೀಮಾನ್ ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ’ (‘Mr Gandhi and the emancipation of untouchables’) ಕೃತಿಯ ಹೆಸರು ನೋಡಿದಾಗ, ಬಹುಶಃ ಗಾಂಧಿಯವರ ದೃಷ್ಟಿಯಲ್ಲಿ ಅಸ್ಪೃಶ್ಯರ ಸ್ವಾತಂತ್ರ‍್ಯ ಅಥವಾ ಮುಕ್ತಿಯ ಕಲ್ಪನೆಯ ಬಗ್ಗೆ ಬರೆದಿರಬಹುದು ಅನಿಸುತ್ತದೆ. ಆದರೆ ಓದುತ್ತಾ ಸಾಗಿದಂತೆ ಗಾಂಧೀಜಿಯ ಪ್ರಸ್ತಾಪ ಬರುವುದು ಕೊನೆಯ ಅಧ್ಯಾಯದಲ್ಲಿ. ಆದರೆ ಅಲ್ಲಿಗೆ ಬರುವಷ್ಟರಲ್ಲಿ ಗಾಂಧಿ ಎಂಬುದು ಕೇವಲ ಒಬ್ಬ ವ್ಯಕ್ತಿ ಎಂದಷ್ಟೇ ಅಲ್ಲದೆ ಸಂಪೂರ್ಣ ಹಿಂದೂ ಸಮಾಜದ ಪ್ರತೀಕ ಎನ್ನುವಂತೆ ಬಿಂಬಿಸಲಾಗಿದೆ ಅಥವಾ ಅವರ ಹೆಸರು ಒಂದು ಪ್ರತೀಕದ ಹೆಸರಿನಂತೆ ಅನಿಸಲು ಶುರುವಾಗುತ್ತದೆ.

ಭಾರತದ ಸ್ವಾತಂತ್ರ‍್ಯ ಸಂಗ್ರಾಮ ತೀವ್ರ ಗತಿಯಲ್ಲಿದ್ದ ಸಮಯದಲ್ಲಿ ಆ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರಲ್ಲಿ ಪರಿಶಿಷ್ಟ ಜಾತಿಗಳ ಜನರ ಬೇಡಿಕೆಗಳ ಬಗೆಗಿನ ಧೋರಣೆಗಳು ಹೇಗೆ ಏಕಮುಖಿಯಾಗಿದ್ದವು ಮತ್ತು ದ್ವಂದ್ವಗಳಿಗೆ ಎಡೆ ಮಾಡಿ ಕೊಟ್ಟಿದ್ದವು ಎಂಬುದನ್ನು ಎರಡನೇ ವಿಶ್ವ ಯುದ್ಧದ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರ ಹಾಗೂ ಭಾರತದ ನಾಯಕತ್ವದ ನಡುವೆ ನಡೆಯುತ್ತಿದ್ದ ವೈಚಾರಿಕ, ತಾರ್ಕಿಕ ಚರ್ಚೆಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ಅತ್ಯಂತ ಸಹಜವಾಗಿ, ಸರಳವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ.
1942ರ ಡಿಸೆಂಬರ್ ತಿಂಗಳಿನಲ್ಲಿ ಕೆನಡಾ ದೇಶದ ಕ್ವುಬೆಕ್‌ನ ಮಾಂಟ್ ಟ್ರಾಂಬ್ಲಾಂಟ್ ಎಂಬಲ್ಲಿ ನಡೆಯುತ್ತಿದ್ದ ಸಮ್ಮೇಳನವೊಂದಕ್ಕಾಗಿ ಬರೆಯಲಾಗಿದ್ದ ‘ಭಾರತದ ಅಸ್ಪೃಶ್ಯರ ಸಮಸ್ಯೆಗಳು’ ಎಂಬ ಲೇಖನವನ್ನು ಅದರ ಮುಂದಿನ ವರ್ಷ ಸಮ್ಮೇಳನದ ಸಂಘಟಕರ ಅನುಮತಿಯ ಮೇರೆಗೆ ಪುಸ್ತಕವಾಗಿ ಪ್ರಕಟಿಸಲಾಯಿತು. ಸಮ್ಮೇಳನಕ್ಕಾಗಿ ಬರೆದಿದ್ದರಿಂದ ಇದು ಚಿಕ್ಕದಾಗಿದೆ. ಕೇವಲ 50 ಪುಟಗಳನ್ನು ಇದು ಹೊಂದಿದ್ದರೂ ಅಂಬೇಡ್ಕರ್ ಅವರಲ್ಲಿ ಹಗಲು ರಾತ್ರಿ ಹೊತ್ತಿ ಉರಿಯುತ್ತಿದ್ದ ಅಸ್ಪೃಶ್ಯರ ಏಳಿಗೆ ಮತ್ತು ಅಭ್ಯುದಯದ ಕಲ್ಪನೆಗಳು ಅತ್ಯಂತ ಖಚಿತ ಹಾಗೂ ನೇರ ವಿಚಾರಗಳಲ್ಲಿ ವ್ಯಕ್ತವಾಗಿವೆ. ಸ್ವತಂತ್ರ ಭಾರತದಲ್ಲಿ ಅಸ್ಪೃಶ್ಯರ ಸ್ಥಾನಮಾನ ಹಾಗೂ ಅವರ ಏಳಿಗೆಗಾಗಿ ಕೈಗೊಳ್ಳಬಹುದಾದ ಕ್ರಮಗಳು ಮತ್ತು ಕಾನೂನುಗಳ ಸ್ಪಷ್ಟತೆಯನ್ನು ಅಂಬೇಡ್ಕರ್ ಅವರ ಈ ಲೇಖನದಲ್ಲಿ ಕಾಣಬಹುದು. ಸಂವಿಧಾನ ರಚನೆ ಸಮಯದಲ್ಲಿ ಕೈಗೊಂಡ ಕೆಲವು ಕ್ರಮಗಳ ಮೂಲಗಳನ್ನು ಇಲ್ಲಿ ನೋಡಬಹುದು. ಅಸ್ಪೃಶ್ಯರ ಸಮಸ್ಯೆಗಳನ್ನು ಬಿಂಬಿಸುವಲ್ಲಿ ಹೇಗೆ ಕೇವಲ ಕೆಲವು ತಪ್ಪು ಶಬ್ದಗಳಿಂದ ಸಮಸ್ಯೆಯನ್ನೇ ವಿಭಿನ್ನವಾಗಿ ಪರಿಗಣಿಸುವ ಅಪಾಯವಿರುತ್ತದೆ ಎಂಬ ಎಚ್ಚರಿಕೆಯನ್ನು ಅವರು ಇಲ್ಲಿ ನೀಡುತ್ತಾರೆ.
ಜಗತ್ತಿನ ಎಲ್ಲ ಬಗೆಯ ದಮನಿತರಿಗೆ ಸ್ಪಂದಿಸುವ ರೀತಿಯಲ್ಲಿ ಅಸ್ಪೃಶ್ಯರ ಸಮಸ್ಯೆಗಳನ್ನು ಬಗೆಹರಿಸುವಲ್ಲಿಯೂ ಇಡೀ ಜಗತ್ತಿನ ಜವಾಬ್ದಾರಿ ಇದೆ ಎಂದು ಅವರು ಸಮ್ಮೇಳನದಲ್ಲಿ ಎಚ್ಚರಿಸುತ್ತಾರೆ.
ಕೃತಿಯಲ್ಲಿ ಇರುವುದೇನು?
‘ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ’ ಕೃತಿಯು ಒಟ್ಟು 10 ಅಧ್ಯಾಯಗಳನ್ನು ಹೊಂದಿದ್ದು ಪ್ರತಿಯೊಂದು ಅಧ್ಯಾಯವೂ ಅಸ್ಪೃಶ್ಯತೆಯ ಸಮಸ್ಯೆ ಮತ್ತು ನಿವಾರಣೆಯ ಸಂಘಟಿತ ಮಾರ್ಗಗಳನ್ನು ಸೂಚಿಸುವ ಜೊತೆಗೆ ಆ ನಿಟ್ಟಿನಲ್ಲಿರುವ ಸವಾಲುಗಳು, ಅದರ ತೀವ್ರತೆ ಹಾಗೂ ಪರಿಹಾರ ಮಾರ್ಗಗಳ ಬಗ್ಗೆ ಒಂದೊಂದಾಗಿ ಚರ್ಚಿಸುತ್ತವೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-2)
ಮೊದಲ ಅಧ್ಯಾಯದಲ್ಲಿ ಅಸ್ಪೃಶ್ಯರ ಜನಸಂಖ್ಯೆಯ ಬಗ್ಗೆ ಹೇಳುವಾಗ ಇಲ್ಲಿಯವರೆಗೂ ಕೇವಲ ಜನಸಂಖ್ಯಾಶಾಸ್ತ್ರಜ್ಞರಿಗೆ (ಮಾಲ್ಥೂಸಿಯನ್) ಉಪಯುಕ್ತವಾಗಿದ್ದ ಜನಗಣತಿ ಹೇಗೆ ವೃತ್ತಿಪರ ರಾಜಕಾರಣಿಗಳ ಕೈಯಲ್ಲಿ ಅಸ್ತ್ರವಾಗಿ ಬದಲಾಗಿದೆ ಮತ್ತು ಈ ಜನಗಣತಿಯ ಪಟ್ಟಿ ತಯಾರಿಕೆಯಲ್ಲಿ ಹಿಂದೂ, ಮುಸ್ಲಿಂ, ಸಿಖ್ಖರು ಹೇಗೆ ಮುಂಚೂಣಿಯಲ್ಲಿ ನಿಂತುಕೊಳ್ಳುತ್ತಾರೆ ಹಾಗೂ ಅಸ್ಪೃಶ್ಯರು, ಕ್ರೈಸ್ತರು ಇದರ ಭಾಗವೇ ಆಗಿದ್ದರೂ ಹೇಗೆ ಈ ಒಂದು ಪ್ರಕ್ರಿಯೆಯಿಂದ ಹೊರಗೆ ಉಳಿಯುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿಯೂ ಹಿನ್ನಡೆ ಎದುರಿಸುತ್ತಾರೆ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ಹೇಗೆ ಇವತ್ತಿನ ದಿನ ಜನಗಣತಿ ಎಂಬುದು ರಾಜಕಾರಣಿಗಳ ಕೈಯಲ್ಲಿನ ಅಂಕಿಅಂಶಗಳ ಆಟವಾಗಿ ಬದಲಾಗಿದೆ, ಅಧಿಕಾರದ ಮೇಲಾಟದ ಹಗ್ಗ ಜಗ್ಗಾಟಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹೇಳುತ್ತಾರೆ. 1940ರ ಜನಸಂಖ್ಯೆಯ ಬಗ್ಗೆ ಅವರು ಮಾತಾಡುತ್ತಿದ್ದರೂ ಅದು ಇವತ್ತಿನ ಭಾರತದಲ್ಲಿ ನಡೆಯುತ್ತಿರುವ ಜನಗಣತಿ ಹಾಗೂ ಜಾತಿಗಳ ಜನಗಣತಿಯ ಬಗ್ಗೆ ಮಾತನಾಡುತ್ತಿರುವಂತೆ ಅನಿಸುತ್ತದೆ.
ಪಂಜಾಬ್ ರಾಜ್ಯದಲ್ಲಿ ಅಸ್ಪೃಶ್ಯರ ಮನವೊಲಿಸಿ ‘ಜನಗಣತಿಯ ಸಮಯದಲ್ಲಿ ಜಾತಿಗಳ ಹೆಸರನ್ನು ನಮೂದು ಮಾಡದೆ ಕೇವಲ ಸಿಖ್ ಅಥವಾ ಹಿಂದೂ ಎಂದು ನಮೂದಿಸಿರಿ, ಇದರಿಂದ ಬೇರೆಯವರು ನಿಮ್ಮನ್ನು ತಮ್ಮವರಂತೆಯೇ ಸ್ವೀಕರಿಸುವರು’ ಎಂದು ಹೇಳಿ ಉದ್ದೇಶಪೂರ್ವಕವಾಗಿ ಅಸ್ಪೃಶ್ಯರು ತಮ್ಮ ಜಾತಿಗಳನ್ನು ಬಹಿರಂಗಪಡಿಸದಂತೆ ಮಾಡುವ ಮೂಲಕ ಜಾತಿಗಳ ಜನಸಂಖ್ಯೆಯನ್ನು ಮರೆಮಾಚುವ ಹುನ್ನಾರಗಳನ್ನು ನಡೆಸಲಾಯಿತು ಎಂದು ಬಾಬಾಸಾಹೇಬ್ ಹೇಳುತ್ತಾರೆ. 1940ರ ಜನಗಣತಿಯ ಪ್ರಕಾರ ಅಸ್ಪೃಶ್ಯರ ಜನಸಂಖ್ಯೆ 60 ಲಕ್ಷ ಹಾಗೂ ಒಟ್ಟಾರೆ ಭಾರತದ ಜನಸಂಖ್ಯೆ 32 ಕೋಟಿ.

ಎರಡನೆಯ ಅಧ್ಯಾಯದಲ್ಲಿ ಪ್ರತಿಯೊಂದು ದೇಶಗಳಲ್ಲಿ ಮತ್ತು ಸಮಾಜದಲ್ಲಿ ಒಂದಲ್ಲ ಒಂದು ಬಗೆಯ ಅಸಮಾನತೆ ಎಂಬುದು ಇದ್ದೇ ಇದೆ ಎಂಬುದನ್ನು ಹೇಳುವಾಗ ಭಾರತದ ಅಸ್ಪೃಶ್ಯರನ್ನು ರೋಮ್ ದೇಶದ ಸ್ಲೇವ್, ಸ್ಪಾರ್ಟಾ ದೇಶದ ಹೆಲ್ಟೋಸ್, ಬ್ರಿಟಿಷರ ವಿಲ್ಲನ್, ಅಮೆರಿಕದ ನಿಗ್ರೋಸ್ ಮತ್ತು ಜರ್ಮನ್‌ನ ಯಹೂದಿಗಳನ್ನು ಉದಾಹರಿಸುತ್ತ ಭಾರತದ ಅಸ್ಪೃಶ್ಯತೆ ಎಂಬುದು ಉಳಿದ ದೇಶಗಳ ಸಮಸ್ಯೆಗಳಂತೆ ನಿವಾರಿಸಲು ಆಗದ ಸಮಸ್ಯೆ ಆಗಿರುವುದಕ್ಕೆ ಕಾರಣಗಳೇನು ಎಂಬುದನ್ನು, ಹಿಂದೂ ಧರ್ಮದಲ್ಲಿ ಬೇರೂರಿರುವ ಆಂತರಿಕ ಅಸಮಾನತೆಯ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ಹೇಗೆ ಕೇವಲ ಹುಟ್ಟಿನ ಕಾರಣದಿಂದ ಅವಕಾಶಗಳನ್ನು ಅಸ್ಪೃಶ್ಯರಿಗೆ ನಿರಾಕರಿಸಲಾಗುತ್ತದೆ. ಹಿಂದೂಗಳ ಮತ್ತು ಮುಸ್ಲಿಮರ ಸ್ವಾತಂತ್ರ‍್ಯದ ಹೋರಾಟ ಹೇಗೆ ಸ್ವಾತಂತ್ರ‍್ಯದ ಹೆಸರಿನಲ್ಲಿ ಅಧಿಕಾರದ ಹೋರಾಟವಾಗಿದೆ; ಆದರೆ ಅಸ್ಪೃಶ್ಯರ ಹೋರಾಟ ಹೇಗೆ ನಿಜವಾದ ಅರ್ಥದಲ್ಲಿ ಬಂಧನದಿಂದ ವಿಮುಕ್ತಿಯ ಕಡೆಗಿನ ಹೋರಾಟವಾಗಿದೆ ಎಂಬುದನ್ನು ವಿವರಿಸುತ್ತ ಸಾಗುತ್ತಾರೆ. ಕಾಂಗ್ರೆಸ್ ಮಧ್ಯಮ ವರ್ಗದ ಮತ್ತು ಹಿಂದೂಗಳ ಪಕ್ಷವಾಗಿದ್ದು ಇದಕ್ಕೆ ಹಿಂದೂ ಬಂಡವಾಳ ಶಾಹಿಗಳ ಬೆಂಬಲವೂ ಇದ್ದು ಇವರೆಲ್ಲ ಸೇರಿ ಹೋರಾಟದ ಮೂಲಕ ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಿ ಆ ಸ್ಥಳದಲ್ಲಿ ತಾವು ಕೂಡುವುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಮೂರನೇ ಅಧ್ಯಾಯದಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ದಿನಾಂಕ 1942ರ ಜುಲೈ 18 ಮತ್ತು 19ರಂದು ನಡೆದ ಪರಿಶಿಷ್ಟ ಜಾತಿಗಳ ಸಮ್ಮೇಳನದಲ್ಲಿ ಕೈಗೊಂಡ ಕೆಲವೊಂದು ಚಾರಿತ್ರಿಕ ನಿರ್ಣಯಗಳನ್ನು ವಿವರಿಸುತ್ತಾರೆ.
1. ಪರಿಶಿಷ್ಟ ಜಾತಿಗಳ ಒಪ್ಪಿಗೆಯಿಲ್ಲದೆ ಸಂವಿಧಾನ ಜಾರಿಯಾಗುವಂತಿಲ್ಲ
2. ಪರಿಶಿಷ್ಟ ಜಾತಿಗಳನ್ನು ಹಿಂದೂಗಳಿಂದ ಭಿನ್ನವಾದ ಮತ್ತು ಪ್ರತ್ಯೇಕವಾದ ಸಮುದಾಯಗಳಂತೆ ಪರಿಗಣಿಸಬೇಕು
3. ಪರಿಶಿಷ್ಟ ಜಾತಿಗಳ ಹಿತರಕ್ಷಣೆಗಾಗಿ ವಿವಿಧ ರೀತಿಯ ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂಬುವು ಮುಖ್ಯವಾದವು. ಈ ಸಾಂವಿಧಾನಿಕ ಕ್ರಮಗಳಲ್ಲಿ ಪರಿಶಿಷ್ಟ ಜಾತಿಗಳ ಒಳಿತಿಗಾಗಿ ಬಜೆಟ್‌ನಲ್ಲಿ ಹಣವನ್ನು ಹಂಚಿಕೆ ಮಾಡುವುದು, ಈ ಜಾತಿಗಳ ಜನರಲ್ಲಿ ಉನ್ನತ ವ್ಯಾಸಂಗವನ್ನು ಪ್ರೋತ್ಸಾಹಿಸುವುದು.
4. ಪರಿಶಿಷ್ಟ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ಕೇಂದ್ರ ಹಾಗೂ ರಾಜ್ಯಗಳ ಕಾರ್ಯಾಂಗದಲ್ಲಿ ಸೂಕ್ತ ಪ್ರಾತಿನಿಧ್ಯ ಕೊಡುವುದು.
5. ಸೂಕ್ತ ಕಾನೂನು ಬದಲಾವಣೆಗಳ ಮೂಲಕ ಸಾರ್ವಜನಿಕ ಸೇವೆಗಳಲ್ಲಿ ಹುದ್ದೆಗಳನ್ನು ಕಾಯ್ದಿರಿಸುವುದು, ಅದೇ ರೀತಿ ನ್ಯಾಯಾಂಗ, ಪೊಲೀಸ್ ಮತ್ತಿತರ ಕ್ಷೇತ್ರಗಳಲ್ಲೂ ಕನಿಷ್ಠ ವಿದ್ಯಾರ್ಹತೆ ಆಧಾರದ ಮೇಲೆ ಪರಿಶಿಷ್ಟ ಜಾತಿಗಳಿಗೆ ಹುದ್ದೆಗಳನ್ನು ಕಾಯ್ದಿರಿಸುವುದು. ಅದೇ ರೀತಿ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನಗಳನ್ನು ಕಾಯ್ದಿರಿಸುವುದು.
6. ಈ ಒಂದು ಉದ್ದೇಶಕ್ಕಾಗಿ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು (separate electorate) ರಚಿಸುವುದು.
7. ಲೋಕ ಸೇವಾ ಆಯೋಗ ಮತ್ತು ಪ್ರಾಂತೀಯಸೇವಾ ಆಯೋಗಗಳಲ್ಲಿ ಸೂಕ್ತ ಕಾನೂನುಗಳ ಬದಲಾವಣೆ ತಂದು ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯವನ್ನು ಕಾಪಾಡುವ ಕ್ರಮಗಳನ್ನು ಕೈಗೊಳ್ಳುವುದು.
ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-1)
ಅದೇ ರೀತಿ ಪರಿಶಿಷ್ಟ ಜಾತಿಗಳ ಪ್ರತ್ಯೇಕ ವಸತಿ ವ್ಯವಸ್ಥೆಯ ಬಗ್ಗೆಯೂ ಒತ್ತು ಕೊಡುತ್ತಾರೆ. ನಮ್ಮ ದೇಶದ ಹಳ್ಳಿಗಳ ವ್ಯವಸ್ಥೆಯಲ್ಲಿಯೇ ಜಾತಿ ಎಂಬುದು ಅತ್ಯಂತ ಪ್ರಬಲ ಅಸ್ತ್ರದಂತೆ ಇದ್ದು ಅಸ್ಪೃಶ್ಯರ ದಮನಕ್ಕೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಅದಕ್ಕಾಗಿ ಅವರು ಇರುವ ಸ್ಥಳವನ್ನೇ ಬದಲಾಯಿಸಿ ಸಂಪೂರ್ಣವಾಗಿ ಪರಿಶಿಷ್ಟ ಜಾತಿಯವರ ಹಳ್ಳಿಗಳನ್ನೇ ಮಾಡಿಬಿಟ್ಟರೆ ಅಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ಇಲ್ಲದೆ ಘನತೆಯಿಂದ ಬದುಕುವ ಅವಕಾಶ ಸಿಗಬಹುದು ಎಂಬ ಆಶಯವನ್ನು ಅವರು ವ್ಯಕ್ತಪಡಿಸುತ್ತಾರೆ.
(ಮುಂದುವರಿಯುತ್ತದೆ..)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ‘ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ರಾಜಲಕ್ಷ್ಮಿ ಅಂಕಲಗಿ
ಮೂಲತಃ ವಿಜಯಪುರದವರಾದ ರಾಜಲಕ್ಷ್ಮಿ ಅಂಕಲಗಿಯವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಒಡನಾಡಿಗಳಾಗಿದ್ದ ಇವರು ಹಲವು ಹೋರಾಟಗಳಲ್ಲಿ ಭಾಗಿಯಾಗುತ್ತಲೇ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಲವು ಪತ್ರಿಕೆಗಳಿಗೆ ಅಂಕಣಕಾರರಾಗಿದ್ದಾರೆ. ನ್ಯಾಯಾಂಗ, ರಾಜಕೀಯ, ಕೌಟುಂಬಿಕ ಕಲಹಗಳ ಕುರಿತು ನಿರಂತರ ಬರೆದಿದ್ದಾರೆ. ಸದ್ಯ ಯೂಟ್ಯೂಬ್ ಚಾನೆಲ್ ಮೂಲಕವೂ ಕೌಟುಂಬಿಕ ಕಾನೂನುಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ವಾರ್ತಾಭಾರತಿ, ಈದಿನ ಸೇರಿದಂತೆ ಹಲವು ಪರ್ಯಾಯ ಮಾಧ್ಯಮಗಳ ಚರ್ಚೆಗಳಲ್ಲಿ ಮಾತನಾಡುವ ಇವರು, ತಮ್ಮ ಒಳನೋಟಗಳ ಮೂಲಕ ಗಮನ ಸೆಳೆದಿದ್ದಾರೆ.




