ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-2)

Date:

(ಮುಂದುವರಿದ ಭಾಗ..) ಅಂಬೇಡ್ಕರ್ ಅವರ ಬರಹವನ್ನು ಓದಿದಾಗ ಪ್ರತಿಬಾರಿಯೂ ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಳ್ಳುವ ಒಂದು ವಿಷಯವೆಂದರೆ ಪರಿಶಿಷ್ಟ ಜಾತಿಗಳು ಮತ್ತು ಹಿಂದೂಗಳು ಮೂಲಭೂತವಾಗಿ ಪ್ರತ್ಯೇಕ ಸಮೂಹಗಳು ಎಂದು ಅವರು ಗುರುತಿಸಿದ್ದು. ಇವತ್ತಿನ ಹಿಂದುತ್ವದ ಅಮಲಿನಲ್ಲಿ ತೇಲುತ್ತಿರುವ ಅಥವಾ ಹಿಂದುತ್ವದ ಮಂಕು ಬೂದಿಯ ಪ್ರಭಾವಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿಗಳನ್ನು ನೋಡಿದಾಗ ಈ ಬಗ್ಗೆ ಸುಮಾರು 80 ವರ್ಷಗಳಷ್ಟು ಹಿಂದೆಯೇ ಅವರು ಎಚ್ಚರಿಸಿದ್ದು ಸ್ಪಷ್ಟವಾಗಿ ಕಾಣುತ್ತದೆ. ಈ ಪುಸ್ತಕದಲ್ಲಿ ಮುಂದೆ ಬರುವ ಅಧ್ಯಾಯಗಳಲ್ಲಿ ಪರಿಶಿಷ್ಟ ಜಾತಿಗಳ ಈ ಬೇಡಿಕೆಗಳಿಗೆ ಹಿಂದೂಗಳು ಹೇಗೆ ವಿರೋಧ ಒಡ್ಡಿದರು ಹಾಗೂ ಅದನ್ನು ಹೇಗೆ ರಾಷ್ಟ್ರೀಯತೆಯ ಹೆಸರಿನಲ್ಲಿ ದಮನ ಮಾಡಲು ಪ್ರಯತ್ನಿಸಿದರು ಎಂಬ ವಿವರಣೆ ಸಿಗುತ್ತದೆ.

ಪರಿಶಿಷ್ಟ ಜಾತಿಗಳ ಸಮಾನತೆ ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಕೂಡ ಸೂಕ್ತವಾಗಿ ಇರಬೇಕು ಎಂಬ ಬೇಡಿಕೆಗೆ ವ್ಯಕ್ತವಾದ ವಿರೋಧಗಳ ವಿಶ್ಲೇಷಣೆ ಮೇಲ್ನೋಟದಲ್ಲಿ ಕಾಣಿಸುವಂತೆ ಉದಾತ್ತವಾಗಿದ್ದರೂ ಅದರ ಒಳಗಿನ ಕಾರಣಗಳು ನಮ್ಮ ದೇಶದಲ್ಲಿ ಬೇರೂರಿದ ಜಾತಿ ವ್ಯವಸ್ಥೆಯ ಪದ್ಧತಿಯನ್ನು ಯಥಾವತ್ ಮುಂದುವರಿಸಿಕೊಂಡು ಹೋಗಲು ನಡೆಸಿರುವ ಹುನ್ನಾರಗಳಂತೆ ಅವರಿಗೆ ಕಂಡಿದ್ದು ಸಹಜ. ಏಕೆಂದರೆ ಇಂತಹ ಬಿಕ್ಕಟ್ಟನ್ನು ಬಗೆಹರಿಸುವ ಸಂದರ್ಭದಲ್ಲಿ ಗಾಂಧೀಜಿ ಮತ್ತು ಹಿಂದೂಗಳು ಪರಿಶಿಷ್ಟ ಜಾತಿಗಳ ಈ ಬೇಡಿಕೆಗಳನ್ನು ವಿಭಜನಕಾರಿ ಅಥವಾ ಜಾತಿವಾದಿ ದೃಷ್ಟಿಕೋನದಿಂದ ನೋಡುವುದು ಮತ್ತು ಕಾಂಗ್ರೆಸ್ಸಿನ ಧೋರಣೆಯನ್ನು ರಾಷ್ಟ್ರೀಯತೆಯ ದೃಷ್ಟಿಯಿಂದ ವಿವರಿಸುವುದು ಸರಿಯಾದ ಧೋರಣೆ ಅಲ್ಲವೆಂದು ಅಂಕಿಅಂಶಗಳ ಉದಾಹರಣೆಗಳ ಸಮೇತ ವಿವರಿಸಲಾಗಿದೆ. ದೇಶದಲ್ಲಿನ ಪರಿಶಿಷ್ಟ ಜಾತಿಗಳ ಈ ಬೇಡಿಕೆಯನ್ನು ವಿದೇಶಗಳಲ್ಲಿ ಕುಳಿತ ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುವಾಗ ನಮ್ಮ ದೇಶದ ಜಾತಿ ವ್ಯವಸ್ಥೆಯ ಬಗ್ಗೆ ಸರಿಯಾದ ಕಲ್ಪನೆ ಇಲ್ಲದವರೊಂದಿಗೆ ಚರ್ಚಿಸುವುದು ಹೇಗೆ ನಿರರ್ಥಕ ಎಂಬುದನ್ನು ಹೇಳುತ್ತಾ ಪ್ರಾಂತೀಯ ಮತದಾನ ವ್ಯವಸ್ಥೆ ಮತ್ತು ಮೀಸಲು ಕ್ಷೇತ್ರಗಳ ಮತದಾನ ವ್ಯವಸ್ಥೆ ಹೇಗೆ ಭಿನ್ನವಾಗಿ ನಿಲ್ಲುತ್ತವೆ ಎಂಬುದನ್ನು ಆಯಾ ರಾಜ್ಯಗಳ ಜನಸಂಖ್ಯಾವಾರು ಹಂಚಿಕೆಯ ಹಿನ್ನೆಲೆಯಲ್ಲಿ ಅವರು ವಿವರಿಸುತ್ತಾರೆ. ಪ್ರಾಂತೀಯ ಮತದಾನ ಮಾಡಿದಾಗ ಅಲ್ಪಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿಗಳ ಹಿತ ರಕ್ಷಣೆಯನ್ನು ಕಡೆಗಣಿಸಲಾಗುತ್ತದೆ ಹಾಗೂ ಮೀಸಲು ಕ್ಷೇತ್ರಗಳಲ್ಲಿ ಅವನ್ನು ಎತ್ತಿ ಹಿಡಿಯಬಹುದು ಎಂಬುದಕ್ಕೆ ಹಿಂದೂಗಳಲ್ಲಿ ಮನೆ ಮಾಡಿರುವ ಜಾತಿಪ್ರೇಮ, ಸ್ವಜನ ಪಕ್ಷಪಾತ ಮತ್ತು ಆಳವಾಗಿ ಬೇರೂರಿದ ಜಾತಿ ವ್ಯವಸ್ಥೆಯ ಬಗೆಗಿನ ಒಲವುಗಳನ್ನು ಮೀರಿ ಹೊರಗೆ ಬರಲು ಆಗದ ಅವರ ಮನಸ್ಥಿತಿಗಳನ್ನು ಬಣ್ಣಿಸಲಾಗಿದೆ.

ಇಲ್ಲಿ ಒಂದು ಅತ್ಯಂತ ಸ್ವಾರಸ್ಯಕರ ವಿವರಣೆಯನ್ನು ಅಂಬೇಡ್ಕರ್ ನೀಡುತ್ತಾರೆ. ‘ಪ್ರತ್ಯೇಕ ಮತದಾನ ವ್ಯವಸ್ಥೆಯನ್ನು ಮಾಡುವುದರಿಂದ ದೇಶದ ಐಕ್ಯತೆಗೆ ಧಕ್ಕೆಯಾಗುತ್ತದೆ ಎಂಬ ಒಂದು ವಾದವನ್ನು ಕಾಂಗ್ರೆಸ್ಸಿಗರು ಅಥವಾ ಹಿಂದೂಗಳು ಮುಂದಿಡುತ್ತಾರೆ. ಆದರೆ ನಮ್ಮಲ್ಲಿ ದೇಶ ಎಂಬುದು ಕೇವಲ ಕಲ್ಪನೆಯಾಗಿದೆಯೇ ಹೊರತು ಇನ್ನೂ ದೇಶ ರಚನೆ ಆಗಿಲ್ಲ. ಆದ್ದರಿಂದ ಈ ವಾದ ನಿರಾಧಾರವಾದದ್ದು’ ಎನ್ನುತ್ತಾರೆ ಅಂಬೇಡ್ಕರ್. ಹಿಂದೂಗಳ ಆಶಯದಂತೆ ಜಂಟಿ ಮತಕ್ಷೇತ್ರಗಳ ಮೂಲಕ ಪರಿಶಿಷ್ಟ ಜಾತಿಗಳಿಗೆ ಕ್ಷೇತ್ರಗಳನ್ನು ಮೀಸಲಿಟ್ಟರೆ ಆ ಕ್ಷೇತ್ರಗಳು ಕೇವಲ ಹೆಸರಿಗೆ ಮಾತ್ರ ಪರಿಶಿಷ್ಟವಾಗಿ ಉಳಿಯುತ್ತವೆ ಎಂಬ ಆತಂಕವನ್ನು ಬಾಬಾಸಾಹೇಬರು ವ್ಯಕ್ತಪಡಿಸುತ್ತಾರೆ. ಏಕೆಂದರೆ ಅಂತಹ ಕ್ಷೇತ್ರಗಳಲ್ಲಿ ಹಿಂದೂಗಳ ಒಪ್ಪಿಗೆಯ ಮೂಲಕ ಆಯ್ಕೆಯಾಗುವ ವ್ಯಕ್ತಿ ಕೇವಲ ಹೆಸರಿಗೆ ಮಾತ್ರ ಚುನಾಯಿತ ಪ್ರತಿನಿಧಿ ಆಗುತ್ತಾನೆ, ಆದರೆ ನಿಜವಾದ ಅರ್ಥದಲ್ಲಿ ಆತ ಪರಿಶಿಷ್ಟ ಜಾತಿಗಳ ಹಿತರಕ್ಷಣೆ ಮಾಡಲು ಅಸಮರ್ಥನಾಗಿರುತ್ತಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
gandhi and ambedkar 1
ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಗಾಂಧೀಜಿ

ಕಾರ್ಯಾಂಗದಲ್ಲಿ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಕನಿಷ್ಠ ಅರ್ಹತೆಯ ಮೇರೆಗೆ ಹುದ್ದೆಗಳನ್ನು ಕಾಯ್ದಿರಿಸುವಲ್ಲಿ ಹಿಂದೂಗಳು ವಿರೋಧ ವ್ಯಕ್ತಪಡಿಸಿ ‘ಹುದ್ದೆಗಳು ಕೇವಲ ಅರ್ಹತೆ, ದಕ್ಷತೆ ಮತ್ತು ನಡತೆಯನ್ನು ಆಧರಿಸಿ ಇರಬೇಕು’ ಎಂದಾಗ ಅವರು ‘ಹುದ್ದೆಗಳ ಆಯ್ಕೆಯಲ್ಲಿ ನಡತೆಯನ್ನು ಒಂದು ಅರ್ಹತೆಯಾಗಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಆದರೆ ಕನಿಷ್ಠ ಅರ್ಹತೆ (minimum qualification) ಎಂಬುದನ್ನು ಒಪ್ಪಿಕೊಳ್ಳುವ ಮೂಲಕ ಐತಿಹಾಸಿಕ ಅಸಮಾನತೆಯನ್ನು ಅಳಿಸಿ ಹಾಕುವಲ್ಲಿ ಒಂದು ದಿಟ್ಟ ಹೆಜ್ಜೆಯನ್ನು ಇಡಬಹುದು. ಇಂಥ ಒಂದು ಪ್ರಯತ್ನಕ್ಕೆ ಹಿಂದೂಗಳ ವಿರೋಧವನ್ನು ಒಪ್ಪಲು ಆಗದು ಎನ್ನುತ್ತಾರೆ. ಜಾತಿ ಆಧಾರದ ಮೇಲೆ ಹೇಗೆ ಶಿಕ್ಷಣವನ್ನು ಪರಿಶಿಷ್ಟ ಜಾತಿಗಳಿಗೆ ನಿರಾಕರಿಸಲಾಯಿತು, ಅದರಿಂದಾಗಿ ಬಡತನದಲ್ಲಿರುವ ಈ ಜಾತಿಗಳು ತಮ್ಮ ಆರ್ಥಿಕ ಹಿಂದುಳಿಯುವಿಕೆಯಿಂದ ಉನ್ನತ ಶಿಕ್ಷಣದಿಂದ ಹೇಗೆ ವಂಚಿತರಾದರು ಮತ್ತು ಈ ಎರಡೂ ಕಾರಣಗಳಿಂದ ಹೇಗೆ ಅವಕಾಶಗಳಿಂದ ದೂರವಾದರು ಎಂದು ಗೊತ್ತಿದ್ದು, ಸಾಮರ್ಥ್ಯ ಅಥವಾ ಶಿಕ್ಷಣವನ್ನು ಮುಂದಿಟ್ಟು ಅವಕಾಶವನ್ನು ನಿರಾಕರಿಸುವುದು ಅತ್ಯಂತ ವ್ಯವಸ್ಥಿತವಾದ ನಿಯಂತ್ರಣದ ಭಾಗವೇ ಆಗಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ.

ಇದನ್ನೂ ಓದಿರಿ: ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-1)

‘ಜಾತಿ ವ್ಯವಸ್ಥೆಯ ಮೂಲಕ, ಧರ್ಮದ ಸಹಾಯದಿಂದ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತ ಬಂದಂತಹ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮುರಿದು ಕಟ್ಟಿದರೆ ಮಾತ್ರ ಹೊಸದನ್ನು ನಿರ್ಮಿಸಲು ಸಾಧ್ಯ’ ಎಂಬ ಆಶಯ ಈ ಕೃತಿಯಲ್ಲಿ ವ್ಯಕ್ತವಾಗಿದೆ. ದೇಶದ ಮಾಧ್ಯಮಗಳು ಸಂಪೂರ್ಣವಾಗಿ ಹಿಂದೂಗಳ ಕೈಯಲ್ಲಿದ್ದು, ಅವು ಪರಿಶಿಷ್ಟ ಜಾತಿಗಳ ಅಗತ್ಯಗಳನ್ನಾಗಲಿ, ಬೇಡಿಕೆಗಳನ್ನಾಗಲಿ ಜನರ ಮುಂದೆ ಇಡಲು ಪ್ರಯತ್ನಿಸುತ್ತಿಲ್ಲ ಎನ್ನುತ್ತಾರೆ. ಮಾಧ್ಯಮಗಳ ಜೊತೆಗೆ ಕೋರ್ಟ್ಗಳಾಗಲಿ, ಪೊಲೀಸ್ ವ್ಯವಸ್ಥೆಯಾಗಲಿ ಎಲ್ಲವುಗಳ ಮೇಲೆ ಹಿಂದೂಗಳ ಬಿಗಿ ಹಿಡಿತ ಇರುವುದರಿಂದ ಈ ವ್ಯವಸ್ಥೆಯನ್ನು ಒಡೆಯುವ ಅಗತ್ಯ ಇನ್ನೂ ಹೆಚ್ಚಿಗೆ ಇದೆ ಎಂದು ಹೇಳುತ್ತಾರೆ. 1928ರಲ್ಲಿ ಬಾಂಬೆ ಸರ್ಕಾರ ರಚಿಸಿದ ತುಳಿತಕ್ಕೊಳಗಾದ ಸಮೂಹಗಳ ಅಧ್ಯಯನದ ವರದಿಯನ್ನು ಕೂಡ ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಾರೆ.

ಮುಂದಿನ ಅಧ್ಯಾಯಗಳಲ್ಲಿ ಸಂವಿಧಾನದ ಬಗ್ಗೆ ಮಾತನಾಡುವಾಗ ಪ್ರತಿಯೊಂದು ದೇಶದ ಸಂವಿಧಾನವು ಆ ದೇಶದ ಸಾಮಾಜಿಕ ಸಂರಚನೆಯನ್ನು ಗಮನದಲ್ಲಿ ಇರಿಸಿಕೊಂಡು ರಚಿಸಬೇಕು ಎಂಬುದನ್ನು ವಿವರಿಸುತ್ತಾರೆ. ಪಾಶ್ಚಿಮಾತ್ಯ ದೇಶಗಳ ವರ್ಗ ವ್ಯವಸ್ಥೆ ಮತ್ತು ನಮ್ಮ ದೇಶದ ಜಾತಿ ವ್ಯವಸ್ಥೆಯಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ ಎಂದು ವಾದ ಮಾಡುವ ಹಿಂದೂಗಳ ಮಾತುಗಳು, ಜಾತಿ ವ್ಯವಸ್ಥೆಯು ಒಂದು ಸಮಸ್ಯೆಯೇ ಅಲ್ಲವೆಂಬ ಹಗುರವಾದ ಪರಿಕಲ್ಪನೆಯನ್ನು ಉದ್ದೇಶಪೂರ್ವಕವಾಗಿ ಮಂಡಿಸುತ್ತಿವೆ ಎನ್ನುತ್ತಾರೆ ಅಂಬೇಡ್ಕರ್.

ಕೊನೆಯ ಅಧ್ಯಾಯದಲ್ಲಿ ಹಿಂದೂಗಳು ಹೇಗೆ ಬೇರೆ ಬೇರೆ ಸಮುದಾಯಗಳ ಜೊತೆಗೆ ಬೇರೆ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದನ್ನು ಮುಸ್ಲಿಂ ಮತ್ತು ಸಿಖ್ಖರ ಬೇಡಿಕೆಗಳ ಹಿನ್ನೆಲೆಯಲ್ಲಿ ಬಯಲಿಗೆಳೆಯುತ್ತಾರೆ. ಈ ಎರಡು ಸಮುದಾಯಗಳು ಭಾರತದಲ್ಲಿ ಪ್ರಭಾವಿ ಸಮುದಾಯಗಳ ಸಾಲಿನಲ್ಲಿ ನಿಲ್ಲುತ್ತವೆ. ಆದ್ದರಿಂದ ಅವರ ಬೇಡಿಕೆಗಳನ್ನು ಪರಿಶಿಷ್ಟ ಜಾತಿಗಳ ಬೇಡಿಕೆಗಳ ಜೊತೆಗೆ ಹೋಲಿಸಲು ಆಗುವುದಿಲ್ಲ. ಈ ಪುಸ್ತಕವನ್ನು ಸ್ವಾತಂತ್ರ‍್ಯ ಪೂರ್ವದಲ್ಲಿ ಬರೆದಿದ್ದು, ಇದು ಅವಿಭಜಿತ ಭಾರತದ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿದ್ದರಿಂದ ಆ ಸಮುದಾಯದ ಅಂದಿನ ಸಮಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ಬಗ್ಗೆ ವಿವರಿಸುತ್ತದೆ. ಮುಸ್ಲಿಂ ಮತ್ತು ಸಿಖ್ಖರ ಬೇಡಿಕೆಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿಗಳ ಬೇಡಿಕೆಗಳು ಅತ್ಯಂತ ಮೂಲಭೂತವಾದವು. ಇಡೀ ಪರಿಶಿಷ್ಟ ಜಾತಿ ಸಮುದಾಯವೇ ದುರ್ಬಲ ಮತ್ತು ಅಸಹಾಯಕವಾಗಿದ್ದು, ಹಿಂದೂ, ಮುಸ್ಲಿಂ, ಸಿಖ್ ಮೂರೂ ಸಮುದಾಯಗಳಿಂದ ತುಳಿತಕ್ಕೆ ಒಳಗಾಗಿದೆ ಎಂಬ ಅಂಶವನ್ನು ಬಿಚ್ಚಿಡುತ್ತಾರೆ. ಪ್ರತಿಯೊಂದು ಧರ್ಮಗಳಲ್ಲೂ ಆಳವಾಗಿ ಬೇರೂರಿರುವ ಅಂತ್ಯಜರ ಬಗೆಗಿನ ಭಾವನೆಗಳು ಒಂದೇ ತೆರನಾದ ಅಸಡ್ಡೆ ಮತ್ತು ತಿರಸ್ಕಾರಕ್ಕೆ ಒಳಗಾಗಿದ್ದು, ಪ್ರತಿಯೊಂದು ಧರ್ಮಗಳಲ್ಲಿನ ಪರಿಶಿಷ್ಟ ಜಾತಿಯವರ ಮತ್ತು ಅಂತ್ಯಜರ ಪರಿಸ್ಥಿತಿಗಳೂ ಒಂದೇ ತೆರನಾಗಿರುವುದನ್ನು ನೋಡಿದಾಗ ಈ ಅಂಶವನ್ನು ಅರ್ಥಮಾಡಿಕೊಳ್ಳಬಹುದು ಎನ್ನುತ್ತಾರೆ.

ಇದೇ ಅಧ್ಯಾಯದಲ್ಲಿ ಗಾಂಧೀಜಿಯ ಬಗ್ಗೆ ಬರೆಯುವಾಗ “ಅವರ ಅಭಿಪ್ರಾಯಗಳು ಹಿಂದೂ ಒಗ್ಗಟ್ಟು, ರಾಷ್ಟ್ರೀಯತೆ ಮತ್ತು ದೇಶಪ್ರೇಮದ ಹೆಸರಿನಲ್ಲಿ ಅಸ್ಪೃಶ್ಯರ ಬೇಡಿಕೆಗಳನ್ನು ಕಡೆಗಣಿಸುವುದೇ ಆಗಿದೆ” ಎಂದು ವಿಮರ್ಶಿಸಿದ್ದಾರೆ. ಚಕ್ರವರ್ತಿ ರಾಜಗೋಪಾಲಚಾರಿ ಅವರಂತೂ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮುಸ್ಲಿಂ ಲೀಗ್ ಜೊತೆಗೆ ಗುರುತಿಸಿಕೊಂಡು ಪಾಕಿಸ್ತಾನದ ಅವರ ಬೇಡಿಕೆಗೆ ತಮ್ಮ ಸಮರ್ಥನೆಯನ್ನು ನೀಡುತ್ತಾರೆ ಎಂಬುದನ್ನು ಹೇಳುವಾಗ ‘ಇವರ್ಯಾರಿಗೂ ಅಸ್ಪೃಶ್ಯರ ಬೇಡಿಕೆಗಳು ಮಾತ್ರ ಹೇಗೆ ಕಾಣುವುದೇ ಇಲ್ಲ’ ಎಂದು ಪ್ರಶ್ನಿಸುತ್ತಾರೆ. ಅಕಸ್ಮಾತ್ ಯಾರಾದರೂ ಅಸ್ಪೃಶ್ಯ ನಾಯಕ ಕಡೆಗಣಿಸಲು ಆಗದಷ್ಟು ಬೆಳೆದು ಬಿಟ್ಟರೆ ಆ ನಾಯಕನನ್ನು ಖರೀದಿಸುವ ಪ್ರಯತ್ನಗಳು ನಡೆಯುತ್ತವೆ, ಅಕಸ್ಮಾತ್ ಆ ನಾಯಕ ಅದಕ್ಕೆ ಬಗ್ಗದಿದ್ದರೆ ಅತ್ಯಂತ ವ್ಯವಸ್ಥಿತವಾಗಿ ಮಾಧ್ಯಮಗಳ ಮೂಲಕ, ಬೆದರಿಕೆಗಳ ಮೂಲಕ ಅಥವಾ ಗೊತ್ತಿರುವ ಎಲ್ಲ ದಾರಿಗಳ ಮೂಲಕ ಅಂಥವರನ್ನು ದೇಶದ್ರೋಹಿ ಎಂದು ಬಿಂಬಿಸುವ ದುಷ್ಟ ಪ್ರಯತ್ನವನ್ನು ಬಹಿರಂಗಪಡಿಸಿದ್ದಾರೆ. ಇಂದಿನ ಭಾರತದಲ್ಲಿ ಇದೇ ವ್ಯವಸ್ಥೆ, ಇದೇ ರೀತಿಯ ಅಧಿಕಾರ ದುರ್ಬಳಕೆ, ಮಾಧ್ಯಮಗಳ ತಿರುಚುವಿಕೆಗಳ ಮೂಲಕ ಹೇಗೆ ವ್ಯಕ್ತಿ, ಸಂಘ, ಸಂಸ್ಥೆ, ಸಮುದಾಯಗಳನ್ನು, ದೇಶದ್ರೋಹಿ ಎಂದು ಬಿಂಬಿಸಿ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತಿದೆ ಎಂಬುದನ್ನು ನೋಡುವಾಗ ‘ಕೇವಲ ಕಾಲ ಸರಿದಿದೆಯೇ ಹೊರತು ವಸ್ತು ಸ್ಥಿತಿ ತಳಮಟ್ಟದಲ್ಲಿ ಬದಲಾಗಿಲ್ಲ’ ಎಂದು ಅರಿವಾಗುತ್ತದೆ.

‘ಅಷ್ಟಕ್ಕೂ ಅಸ್ಪೃಶ್ಯರು ಕೇಳಿದ್ದೇನು? ಕೇವಲ ಕೆಲವೊಂದು ರಾಜಕೀಯ ಸವಲತ್ತುಗಳು. ಅಸ್ಪೃಶ್ಯರಿಗೆ ತಮಗೆ ಹಕ್ಕುಗಳನ್ನು ಕೇಳುವ ಹಕ್ಕೇ ಇಲ್ಲ ಎಂದು ಹಿಂದೂಗಳು ಅಂದುಕೊಂಡಿರುವುದು ಈ ಸಮುದಾಯದ ಮೇಲೆ ಹೇರಿರುವ ದುರ್ಗತಿ’ ಎಂದು ಮನಸ್ಸಿನ ಆಳದಿಂದ ಬಂದ ನೋವನ್ನು ಧ್ವನಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಮಸ್ಯೆಗಳನ್ನು ಮುಂದಿಡುವಾಗಲೂ ಅಸ್ಪೃಶ್ಯರ ಸಮಸ್ಯೆಗಳು, ಅವರ ಹಕ್ಕುಗಳ ಬೇಡಿಕೆಗಳು, ಮುಂತಾದವುಗಳನ್ನು ವ್ಯಕ್ತಪಡಿಸದೆ ಕೇವಲ ರಾಷ್ಟ್ರೀಯತೆಯ ಹೆಸರಿನಲ್ಲಿ ಭಾರತದ ಸಮಸ್ಯೆಗಳನ್ನು ಬಿಂಬಿಸುವ ಹಿಂದೂ ನಾಯಕರ ಧೋರಣೆಯನ್ನು ಬೂಟಾಟಿಕೆಗೆ ಹೋಲಿಸುತ್ತಾರೆ. ಭಾರತಕ್ಕೆ ಸ್ವಾತಂತ್ರ‍್ಯದ ಭರವಸೆ ನೀಡುತ್ತಲೇ ಬ್ರಿಟಿಷರು ಎರಡನೇ ಮಹಾಯುದ್ಧದಲ್ಲಿ ಭಾರತದ ಸಹಕಾರ ಹಾಗೂ ಪಾಲ್ಗೊಳ್ಳುವಿಕೆಯನ್ನು ಬಯಸಿದಾಗ ಈ ಯುದ್ಧದಿಂದ ನೀವೇನು ಬಯಸುತ್ತೀರಿ ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ಕಾಂಗ್ರೆಸ್ ಮತ್ತು ಹಿಂದೂಗಳು ಕೇಳುತ್ತಾರೆ. ಇದೇ ಪ್ರಶ್ನೆಯನ್ನು ಪರಿಶಿಷ್ಟ ಜಾತಿಯವರು ‘ಸ್ವಾತಂತ್ರ‍್ಯಾ ನಂತರ ನಿಮ್ಮ ಧೋರಣೆಯೇನು, ಗುರಿಗಳೇನು? ನೀವೇನು ಮಾಡಲು ಹೊರಟಿದ್ದೀರಿ’ ಎಂದು ಕೇಳಿದಾಗ ಕಾಂಗ್ರೆಸ್ ಮತ್ತು ಹಿಂದೂಗಳು ನಿರುತ್ತರರಾಗುತ್ತಾರೆ. ಸ್ವಾತಂತ್ರ‍್ಯವೇ ಈ ಹೋರಾಟದ ಗುರಿ ಮತ್ತು ಉದ್ದೇಶ ಎಂದು ಗಾಂಧಿ ಹೇಳುವಾಗ, ‘ಪರಿಶಿಷ್ಟ ಜಾತಿಗಳ ಸ್ವಾತಂತ್ರ‍್ಯ ಮತ್ತು ಸಮಾನತೆಗಾಗಿ ಏನು ಮಾಡುವಿರಿ’ ಎಂಬ ಪ್ರಶ್ನೆಗೆ ಅವರು ಮೌನ ತಳೆಯುತ್ತಾರೆ. ಈ ಮೌನವು ಧರ್ಮದ ಎಲ್ಲೆಗಳನ್ನು ಮೀರಿ ಬೆಳೆಯಲು ಆಗದ ಅವರ ಇತಿಮಿತಿಗಳನ್ನು ತೋರಿಸುತ್ತದೆ. ಪ್ರಪಂಚದಾದ್ಯಂತ ಒಡೆದು ತೋರುವ ಗಾಂಧೀಜಿಯ ಉದಾರವಾದಿ ನಡವಳಿಕೆ ಅಸ್ಪೃಶ್ಯರ ವಿಷಯ ಬಂದಾಗ ಹಿಂದೆಗೆಯುತ್ತದೆ, ಏಕೆಂದರೆ ಆಂತರ್ಯದಲ್ಲಿ ಗಾಂಧೀಜಿ ಸಹಿತ ಕಟ್ಟರ್ ಹಿಂದುತ್ವವಾದಿಯಂತೆ ಕಾಣಿಸುತ್ತಾರೆ ಎಂಬುದಾಗಿ ಅಂಬೇಡ್ಕರ್ ಅಭಿಪ್ರಾಯ ಪಡುತ್ತಾರೆ.

ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-1)

ಅಮೆರಿಕದ ಸ್ವಾತಂತ್ರ‍್ಯ ಸಂಗ್ರಾಮದ ಘೋಷಣೆಯ ತತ್ವಗಳನ್ನು ಬರೆದ ಜಫರ್ಸನ್, “ನನ್ನ ದೇಶವಾಸಿಗಳಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ” ಎಂದು ಕಪ್ಪು ಜನರನ್ನು ಉದ್ದೇಶಿಸಿ ಹೇಳಿರುವ ಮಾತನ್ನು ಗಾಂಧಿ ಮತ್ತು ನೆಹರೂ ಇವರ ಹಿನ್ನೆಲೆಯಲ್ಲಿ ಅಂಬೇಡ್ಕರ್ ಹೇಳುವಾಗ, ನೆಹರೂ ಜಫರಸನ್‌ಗೆ ಸ್ವಲ್ಪ ಹತ್ತಿರವಾಗುತ್ತಾರೆ, ಆದರೆ ಉಳಿದ ಯಾವ ನಾಯಕರಲ್ಲಿಯೂ ಯಾವುದೇ ಬಗೆಯ ಪಶ್ಚಾತಾಪವಾಗಲಿ, ಪರಿತಾಪವಾಗಲಿ ಕಂಡುಬರದೆ ಇರುವುದಕ್ಕೆ ಧರ್ಮ ಈ ವ್ಯವಸ್ಥೆಯನ್ನು ಸಾಂಸ್ಥಿಕರಿಸಿರುವುದೇ ಕಾರಣ ಆಗಿದೆ ಎಂದು ಕಟುವಿಮರ್ಶೆ ಮಾಡುತ್ತಾರೆ.

ಪುಸ್ತಕದ ಉದ್ದಕ್ಕೂ ಅಂಬೇಡ್ಕರ್ ಅವರು ಹಿಂದೂ ಮತ್ತು ಪರಿಶಿಷ್ಟ ಜಾತಿ ಎರಡೂ ಸಂಪೂರ್ಣವಾಗಿ ಬೇರೆ ಬೇರೆ ಸಮುದಾಯಗಳೇ ಎಂದು ಒತ್ತಿ ಹೇಳಿರುವುದು, ಅಸ್ಪೃಶ್ಯರ ಸ್ಥಿತಿಗತಿಗೆ ಹಿಂದೂ ಧರ್ಮದ ಜಾತಿ ವ್ಯವಸ್ಥೆಯೇ ಕಾರಣ ಎಂಬ ಅವರ ನಂಬಿಕೆಗೆ ಪೂರಕವಾಗಿಯೇ ಇವೆ.

ಗಾಂಧೀಜಿ ನಡೆಸುವ ಹರಿಜನ ಸೇವಕ ಸಂಘದಂತಹ ವ್ಯವಸ್ಥೆಯಿಂದ ಯಾವುದೇ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ. ಗಾಂಧಿ, ‘ದಲಿತರು ಕೂಡ ಹಿಂದೂಗಳಾಗಬೇಕು’ ಎಂದು ಹೇಳಿದಾಗ, ಈ ಹೊಸ ಒಳಗೊಳ್ಳುವಿಕೆಯಲ್ಲಿ ಪರಿಶಿಷ್ಟ ಜಾತಿಗಳ ಸ್ಥಾನಮಾನವೇನು ಎಂಬ ಪ್ರಶ್ನೆ ಗೌಣವಾಗಿರುವುದು, ಆಡದೆ ಉಳಿದ ಮಾತುಗಳಿಗೆ ಪ್ರತಿರೂಪದಂತೆ ಕಾಣುತ್ತದೆ.

ಪುಸ್ತಕದ ಉದ್ದಕ್ಕೂ ವ್ಯಕ್ತಪಡಿಸಿರುವ ಯಾವುದೇ ಸಂಗತಿಗಳನ್ನು ಹಳೆಯ ವಿಚಾರಗಳು ಎಂದು ತೆಗೆದು ಹಾಕುವಂತಿಲ್ಲ. ಇಂದಿನ ಭಾರತದ ರಾಜಕೀಯ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ವಿಚಾರಗಳು ಇವತ್ತಿಗೂ ಅಷ್ಟೇ ಪ್ರಸ್ತುತವಾಗಿ ನಿಲ್ಲುತ್ತವೆ. ಅಂಬೇಡ್ಕರ್ ಅವರು ಎಚ್ಚರಿಸಿದಂತೆ ತಳಮಟ್ಟದ ನಾಯಕರುಗಳು ಹಿಂದುತ್ವಕ್ಕೆ ಜಯಕಾರ ಹೇಳುವುದನ್ನು ನೋಡಿದಾಗ ಅವರ ವ್ಯಕ್ತಿತ್ವಗಳ ಬಗ್ಗೆ ಕನಿಕರ ಬರುತ್ತದೆ. ಈ ಜಾತಿ ವ್ಯವಸ್ಥೆ ದಿನದಿಂದ ದಿನಕ್ಕೆ ಇನ್ನೂ ಹರಳುಗಟ್ಟುತ್ತಾ ಸಾಗುತ್ತಿದ್ದು 21ನೇ ಶತಮಾನದಲ್ಲೂ ದೇವಸ್ಥಾನದ ಒಳಗೆ ಹೋದ ಕಾರಣಕ್ಕೆ, ಅಲ್ಲಿ ನೀರು ಕುಡಿದ ಕಾರಣಕ್ಕೆ, ಅದ್ದೂರಿಯಾಗಿ ಮದುವೆ ಆದ ಕಾರಣಕ್ಕೆ, ಉತ್ತಮ ಬಟ್ಟೆ ತೊಟ್ಟ ಕಾರಣಕ್ಕೆ, ಮೇಲ್ಜಾತಿಯವರ ದಬ್ಬಾಳಿಕೆಗೆ ಒಪ್ಪದ ಕಾರಣಕ್ಕೆ, ಪರಿಶಿಷ್ಟ ಜಾತಿಯ ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಬಾಬಾಸಾಹೇಬರ ಎಚ್ಚರಿಕೆಯ ಮಾತುಗಳ ಕಡೆಗಣಿಸುವಿಕೆಯ ಪರಿಣಾಮಗಳು ಈಗಾಗಲೇ ಕಾಣಲು ಆರಂಭವಾಗಿವೆ. ಅಂಬೇಡ್ಕರ್ ಅವರು ದಾರ್ಶನಿಕರಾಗಿ ಗೋಚರಿಸುತ್ತಾರೆ.

(ಮುಗಿಯಿತು..)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 07 22 at 17.31.15 1
ರಾಜಲಕ್ಷ್ಮಿ ಅಂಕಲಗಿ
+ posts

ಮೂಲತಃ ವಿಜಯಪುರದವರಾದ ರಾಜಲಕ್ಷ್ಮಿ ಅಂಕಲಗಿಯವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಒಡನಾಡಿಗಳಾಗಿದ್ದ ಇವರು ಹಲವು ಹೋರಾಟಗಳಲ್ಲಿ ಭಾಗಿಯಾಗುತ್ತಲೇ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಲವು ಪತ್ರಿಕೆಗಳಿಗೆ ಅಂಕಣಕಾರರಾಗಿದ್ದಾರೆ. ನ್ಯಾಯಾಂಗ, ರಾಜಕೀಯ, ಕೌಟುಂಬಿಕ ಕಲಹಗಳ ಕುರಿತು ನಿರಂತರ ಬರೆದಿದ್ದಾರೆ. ಸದ್ಯ ಯೂಟ್ಯೂಬ್ ಚಾನೆಲ್ ಮೂಲಕವೂ ಕೌಟುಂಬಿಕ ಕಾನೂನುಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ವಾರ್ತಾಭಾರತಿ, ಈದಿನ ಸೇರಿದಂತೆ ಹಲವು ಪರ್ಯಾಯ ಮಾಧ್ಯಮಗಳ ಚರ್ಚೆಗಳಲ್ಲಿ ಮಾತನಾಡುವ ಇವರು, ತಮ್ಮ ಒಳನೋಟಗಳ ಮೂಲಕ ಗಮನ ಸೆಳೆದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ರಾಜಲಕ್ಷ್ಮಿ ಅಂಕಲಗಿ
ರಾಜಲಕ್ಷ್ಮಿ ಅಂಕಲಗಿ
ಮೂಲತಃ ವಿಜಯಪುರದವರಾದ ರಾಜಲಕ್ಷ್ಮಿ ಅಂಕಲಗಿಯವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಒಡನಾಡಿಗಳಾಗಿದ್ದ ಇವರು ಹಲವು ಹೋರಾಟಗಳಲ್ಲಿ ಭಾಗಿಯಾಗುತ್ತಲೇ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಲವು ಪತ್ರಿಕೆಗಳಿಗೆ ಅಂಕಣಕಾರರಾಗಿದ್ದಾರೆ. ನ್ಯಾಯಾಂಗ, ರಾಜಕೀಯ, ಕೌಟುಂಬಿಕ ಕಲಹಗಳ ಕುರಿತು ನಿರಂತರ ಬರೆದಿದ್ದಾರೆ. ಸದ್ಯ ಯೂಟ್ಯೂಬ್ ಚಾನೆಲ್ ಮೂಲಕವೂ ಕೌಟುಂಬಿಕ ಕಾನೂನುಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ವಾರ್ತಾಭಾರತಿ, ಈದಿನ ಸೇರಿದಂತೆ ಹಲವು ಪರ್ಯಾಯ ಮಾಧ್ಯಮಗಳ ಚರ್ಚೆಗಳಲ್ಲಿ ಮಾತನಾಡುವ ಇವರು, ತಮ್ಮ ಒಳನೋಟಗಳ ಮೂಲಕ ಗಮನ ಸೆಳೆದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...