ದೇಶದ ಜನತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಒಂದಾದ ಚುನಾವಣಾ ಆಯೋಗದ ತಳಪಾಯವನ್ನು ಆತಂಕದ ಆಳಕ್ಕೆ ದುರ್ಬಲಗೊಳಿಸಲಾಗಿದೆ. ಆಯೋಗ ನೇರದಾರಿಗೆ ಸದ್ಯ ಭವಿಷ್ಯದಲ್ಲಿ ಮರಳುವ ಸೂಚನೆಗಳು ಕಾಣುತ್ತಿಲ್ಲ.
ಸ್ವತಂತ್ರ ಮತ್ತು ಸ್ವಾಯತ್ತ ಚುನಾವಣಾ ಆಯೋಗ ಕುರಿತು 1919ರ ಜೂನ್ ತಿಂಗಳಲ್ಲಿ ಸಂವಿಧಾನಸಭೆ ಚರ್ಚಿಸಿದ್ದ ಹೊತ್ತು. ಭಾರತದ ಜನತಂತ್ರ ಮತ್ತು ಚುನಾವಣಾ ಆಯೋಗದ ವ್ಯವಹಾರಗಳಲ್ಲಿ ಕಾರ್ಯಾಂಗ ಮೂಗು ತೂರಿಸುವ ವಿರುದ್ಧ ಬಾಬಾಸಾಹೇಬ ಅಂಬೇಡ್ಕರ್ ಎಚ್ಚರಿಕೆ ನೀಡಿದ್ದರು. ಚುನಾವಣಾ ಆಯುಕ್ತರ ನೇಮಕದಲ್ಲಿ ಹಸ್ತಕ್ಷೇಪ ಮಾಡುವ ವಿಶೇಷಾಧಿಕಾರ ಕಾರ್ಯಾಂಗಕ್ಕೆ ಇರಬೇಕೆಂದು ಸಂವಿಧಾನ ನಿರ್ಮಾಪಕರು ಬಯಸಿರಲಿಲ್ಲ.
ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನು ಆರಿಸುವ ಪ್ರಕ್ರಿಯೆಯಲ್ಲಿ ಕಾರ್ಯಾಂಗದ ಹಸ್ತಕ್ಷೇಪವೇ ಇರಕೂಡದು. ಈ ಪ್ರಕ್ರಿಯೆಯೇ ಸ್ವತಂತ್ರ ಚುನಾವಣಾ ಆಯೋಗದ ಮೂಲಭೂತ ಮೆಟ್ಟಿಲು. ಪ್ರಧಾನಮಂತ್ರಿ, ಲೋಕಸಭೆಯ ಪ್ರತಿಪಕ್ಷದ ನಾಯಕ ಹಾಗೂ ಭಾರತ ಮುಖ್ಯ ನ್ಯಾಯಮೂರ್ತಿ ಇರುವ ಮೂವರ ಸದಸ್ಯರ ಸಮಿತಿ ಚುನಾವಣಾ ಆಯುಕ್ತರನ್ನು ಮತ್ತು ಮುಖ್ಯ ಆಯುಕ್ತರನ್ನು ಆರಿಸಬೇಕು ಎಂದು 2023ರ ಮಾರ್ಚ್ ಎರಡರಂದು ಸುಪ್ರೀಂ ಕೋರ್ಟು ನಿಯಮ ವಿಧಿಸಿತ್ತು.
ಚುನಾವಣಾ ಆಯುಕ್ತರು- ಮುಖ್ಯ ಆಯುಕ್ತರ ನೇಮಕವನ್ನು ಕಾರ್ಯಾಂಗಕ್ಕೇ ಅಥವಾ ಸರ್ಕಾರಕ್ಕೇ ಬಿಟ್ಟುಬಿಟ್ಟರೆ ಚುನಾವಣಾ ಆಯೋಗದ ಸ್ವಾತಂತ್ರ್ಯ- ಸ್ವಾಯತ್ತತೆಗಳು ತೀವ್ರ ಹಾನಿಗೆ ಈಡಾಗುತ್ತವೆ ಎಂಬುದು ಸುಪ್ರೀಮ್ ಕೋರ್ಟಿನ ಆಶಯ ಆಗಿತ್ತು. ಸಂಸತ್ತು ಹೊಸ ಕಾನೂನು ರಚಿಸುವ ತನಕ ಪ್ರಧಾನಿ, ಪ್ರತಿಪಕ್ಷದ ನಾಯಕ ಹಾಗೂ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡ ಸಮಿತಿಯ ವ್ಯವಸ್ಥೆ ಜಾರಿಯಲ್ಲಿರುತ್ತದೆ ಎಂದು ಸಾರಿತ್ತು.

ಆಯ್ಕೆ ಸಮಿತಿ ಸಮತೂಕದ್ದಾಗಿರಬೇಕು ಎಂಬುದು ಈ ಸಮಿತಿಯ ರಚನೆಯ ಹಿಂದಿದ್ದ ಆಶಯ. ಆದರೆ ಈ ಸಮತೂಕವನ್ನು ನಾಶಗೊಳಿಸುವ ಯೋಜನೆಯನ್ನು ಮೋದಿ ಸರ್ಕಾರ ಸಿದ್ಧಗೊಳಿಸಿತ್ತು. ಸರ್ಕಾರದ ಪರವಾಗಿ ತೂಕ ತಪ್ಪಿಸಲಾಯಿತು.
ಸುಪ್ರೀಮ್ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ದೇಶದ ಮುಖ್ಯ ನ್ಯಾಯಮೂರ್ತಿಯನ್ನು (ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ) ಆಯ್ಕೆ ಸಮಿತಿಯಿಂದ ಹೊರಗಿಡಲಾಯಿತು. ಪ್ರಧಾನಮಂತ್ರಿ ಮತ್ತು ಪ್ರಧಾನಮಂತ್ರಿ ಸೂಚಿಸುವ ಅವರ ಸಂಪುಟದ ಒಬ್ಬ ಮಂತ್ರಿ ಹಾಗೂ ಲೋಕಸಭೆಯ ಪ್ರತಿಪಕ್ಷದ ನಾಯಕ ಇರುವ ಮೂವರ ಸಮಿತಿಯನ್ನು ರಚಿಸಲಾಗಿದೆ. ಈ ಸಂಬಂಧದ ಕಾಯಿದೆಗೆ ತಿದ್ದುಪಡಿ ತರುವ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಈ ಅಂಗೀಕಾರದ ಸಂದರ್ಭದಲ್ಲಿ ಪ್ರತಿಪಕ್ಷದ ಸದಸ್ಯರ್ಯಾರೂ ಸದನದಲ್ಲಿ ಇರಲಿಲ್ಲ. ಲೋಕಸಭೆಯ ಪ್ರತಿಪಕ್ಷದ ಸದಸ್ಯರನ್ನು ಸದನದಿಂದ ಹೊರ ಹಾಕಲಾಗಿತ್ತು.
ಇದನ್ನೂ ಓದಿರಿ: ನಾಗಾ ಸಾಧುಗಳು ಬೆತ್ತಲಾಗುವುದೆಂದರೇನು?
ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡುವ ಕಾಯಿದೆ ಜಾರಿಗೆ ತಂದು ಈಗಿನ ಮುಖ್ಯ ಆಯುಕ್ತರು ಮತ್ತು ಇಬ್ಬರು ಆಯುಕ್ತರ ನೇಮಕ ನಡೆದಿದೆ. ಸುಪ್ರೀಮ್ ಕೋರ್ಟಿನ ಆದೇಶದ ಆಶಯದ ಘೋರ ಉಲ್ಲಂಘನೆಯಿದು. ಮುಖ್ಯ ನ್ಯಾಯಮೂರ್ತಿಯವರನ್ನು ಹೊರಗಿಟ್ಟ ನಂತರ ಪ್ರಧಾನಿ ಮೋದಿ ಸೂಚಿಸುವ ಅವರ ಸಂಪುಟದ ಸಚಿವರೊಬ್ಬರು ಹಾಗೂ ರಾಹುಲ್ ಗಾಂಧಿ ಸಮಿತಿಯಲ್ಲಿದ್ದರು. ಮೂವರು ಸದಸ್ಯರ ಸಮಿತಿಯಲ್ಲಿ ಇಬ್ಬರು ಸದಸ್ಯರ ಮತವೇ ಬಹುಮತ. ಮೋದಿ ಬಯಕೆಯ ವಿರುದ್ಧ ಮತ ಹಾಕುವ ಧೈರ್ಯ ಯಾವ ಮಂತ್ರಿಗೆ ಇದ್ದೀತು? ರಾಹುಲ್ ಭಿನ್ನಮತ ದಾಖಲಿಸಿದರೂ ಮೂವರು ಸದಸ್ಯರ ಸಮಿತಿಯಲ್ಲಿ ಇಬ್ಬರ ನಿರ್ಣಯವೇ ಬಹುಮತದ್ದು. ರಾಹುಲ್ ಅಸಮ್ಮತಿಗೆ ಯಾವ ಕಿಮ್ಮತ್ತೂ ಇರಲಿಲ್ಲ. ಹೀಗೆ ಫೆಬ್ರವರಿ 17ರ ರಾತ್ರೋರಾತ್ರಿ ತರಾತುರಿಯಲ್ಲಿ ನಡೆಯಿತು ಗ್ಯಾನೇಶ್ ಆಯ್ಕೆ. ಯಾಕೆಂದರೆ ಮರುದಿನ ಮುಂಜಾನೆ ಸುಪ್ರೀಮ್ ಕೋರ್ಟಿನಲ್ಲಿ ವಿಚಾರಣೆಯಿತ್ತು. ಮುಖ್ಯ ನ್ಯಾಯಮೂರ್ತಿಯನ್ನು ಹೊರಹಾಕಿದ ಕಾಯಿದೆ ತಿದ್ದುಪಡಿಯನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆ. ಈ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು.
ನ್ಯಾಯಾಲಯದ ಮುಂದಿರುವ ಅರ್ಜಿಯ ವಿಚಾರಣೆ ಇತ್ಯರ್ಥ ಆಗುವ ತನಕ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯನ್ನು ಮುಂದೂಡಬೇಕೆಂಬುದು ರಾಹುಲ್ ಆಗ್ರಹವಾಗಿತ್ತು, ಆಯ್ಕೆ ಪ್ರಕ್ರಿಯೆಯನ್ನು ಮುಂದುವರೆಸುವುದು ಸುಪ್ರೀಮ್ ಕೋರ್ಟಿಗೆ ಮತ್ತು ದೇಶದ ಜನತಾಂತ್ರಿಕ ವ್ಯವಸ್ಥೆಗೆ ಬಗೆಯುವ ಅಪಚಾರ ಎಂಬ ರಾಹುಲ್ ಒತ್ತಾಯ ಅರಣ್ಯರೋದನವೇ ಆಗಿತ್ತು. ಪ್ರಧಾನಮಂತ್ರಿ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ತಮಗೆ ಬೇಕಾದವರನ್ನು ಮುಖ್ಯ ಆಯುಕ್ತರ ಕುರ್ಚಿಯಲ್ಲಿ ಕುಳ್ಳಿರಿಸಿದ್ದಾರೆ.
ಹೀಗಿರುವಾಗ ಆಯ್ಕೆ ಸಮಿತಿಯಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕರನ್ನು ಉಳಿಸಿಕೊಳ್ಳುವ ಡಂಭಾಚಾರ ಯಾಕೆ, ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಸಮಿತಿಯಿಂದ ತೆಗೆದು ಹಾಕಿದಂತೆ ಪ್ರತಿಪಕ್ಷದ ನಾಯಕನನ್ನೂ ತೆಗೆದು ಹಾಕಿ ಅವರ ಜಾಗದಲ್ಲಿ ಮೋದಿ ಸಂಪುಟದ ಮತ್ತೊಬ್ಬ ಸಚಿವ ಇಲ್ಲವೇ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನೇ ಇಟ್ಟುಕೊಳ್ಳಬಹುದಲ್ಲ? ತಟಸ್ಥ ಅಥವಾ ನಿಷ್ಪಕ್ಷಪಾತದ ಸೋಗು ಯಾಕೆ?
ಈ ಸಮಿತಿ ರಚನೆಗೆ ಮುನ್ನ ಕೇಂದ್ರ ಸರ್ಕಾರ ತೀರ್ಮಾನಿಸಿ ಕಳಿಸಿದ ಶಿಫಾರಸಿಗೆ ರಾಷ್ಟ್ರಪತಿಯವರು ಅಂಗೀಕಾರ ಮುದ್ರೆ ಒತ್ತುತ್ತಿದ್ದರು. ಚುನಾವಣಾ ಆಯುಕ್ತ ಮತ್ತು ಮುಖ್ಯ ಆಯುಕ್ತರ ನೇಮಕ ಆಗಿ ಹೋಗುತ್ತಿತ್ತು. ಆದರೆ ಈ ವ್ಯವಸ್ಥೆ ಕೂಡ ಪಕ್ಷಪಾತದ್ದೇ ಆಗಿತ್ತು. ಆದರೂ ಟಿ.ಎನ್.ಶೇಷನ್ ಮತ್ತು ಜೆ.ಎಂ.ಲಿಂಗ್ಡೋ ಅವರಂತಹ ಸಿಂಹಸ್ವಪ್ನ ಸ್ವರೂಪರು ಈ ವ್ಯವಸ್ಥೆಯಲ್ಲೂ ಎದ್ದು ನಿಂತಿದ್ದರು.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರು ಸಿಇಸಿ ನೇಮಕಾತಿ ಸಮಿತಿಯಲ್ಲಿ ಇರಬೇಕು. ಈ ಸೇರ್ಪಡೆಯಿಂದ ರಾಜಕೀಯವಾಗಿ ತಟಸ್ಥ ನಿಲುವಿನ ಮತ್ತು ರಾಜಕೀಯ ಒತ್ತಡಗಳಿಗೆ ಸೊಪ್ಪು ಹಾಕದ ಸಿಇಸಿ ಆಯ್ಕೆ ಸಾಧ್ಯ ಎಂಬ ನ್ಯಾಯಪೀಠದ ಆಶಯದಲ್ಲಿ ಹುರುಳಿತ್ತು. ಆದರೆ ಸಿಬಿಐ ನಿರ್ದೇಶಕ ಹುದ್ದೆಗೆ ಅಭ್ಯರ್ಥಿ ಆಯ್ಕೆ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಯವರು ಬಹಳ ಕಾಲದಿಂದ ಇದ್ದಾರೆ. ಆಳುವವರ ತಾಳಕ್ಕೆ ಕುಣಿಯುವ ಸಿಬಿಐ ಗುಲಾಮಗಿರಿ ಕೊನೆಯಾಗಿದೆಯೇ ಎಂಬ ಪ್ರಶ್ನೆಯನ್ನೂ ಈ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾಗಿದೆ.
ಇದನ್ನೂ ಓದಿರಿ: ಆಸಾರಾಂ ಬಾಪು: ಸಂತನೋ, ಪಾಪಿಯೋ?
ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಆಳುವವರ ಪರವಾಗಿ ಪಕ್ಷಪಾತ ಎದ್ದು ಕಂಡಿದೆ. ಮತದಾರರ ವಿಶ್ವಾಸ ಕುಂದುತ್ತ ನಡೆದಿದೆ. ಮಾದರಿ ಚುನಾವಣೆ ಸಂಹಿತೆಯ ಉಲ್ಲಂಘನೆಗೆ ಪ್ರತಿಪಕ್ಷಗಳನ್ನು ಬೆನ್ನು ಬಿದ್ದು ಬೇಟೆಯಾಡಿದರೆ, ಆಳುವ ಪಕ್ಷ ಕುರಿತು ಜಾಣ ಕುರುಡಿನ ಧೋರಣೆ ತಳೆಯಿತು. ತೀರಾ ಇತ್ತೀಚಿನ ಉದಾಹರಣೆಗಳನ್ನು ಗಮನಿಸಿದರೂ, ತನ್ನ ಕ್ರಿಯೆ ಮತ್ತು ನಿಷ್ಕ್ರಿಯೆಗಳೆರಡೂ ಆಳುವ ಪಕ್ಷದ ಪರವಾಗಿತ್ತು ಎಂಬ ಸಂದೇಹಕ್ಕೆ ದಾರಿ ಮಾಡಿಕೊಡುವಂತೆ ಆಯೋಗ ನಡೆದುಕೊಂಡಿದೆ. ಸರ್ಕಾರಗಳು ಚುನಾವಣಾ ಆಯೋಗವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಬಯಸುತ್ತವೆ. ಸ್ವಾಯತ್ತ ಸ್ವತಂತ್ರ ಚುನಾವಣಾ ಆಯೋಗ ಅವುಗಳಿಗೆ ಬೇಡವಾದ ಸಂಗತಿ.
ಆಳುವ ಪಕ್ಷದ ನಾಯಕರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳ ವಿರುದ್ಧ ಒಬ್ಬೊಂಟಿಯಾಗಿ ದನಿಯೆತ್ತಿದ್ದ ಅಶೋಕ್ ಲವಾಸ ಎಂಬ ಕೇಂದ್ರೀಯ ಚುನಾವಣಾ ಆಯುಕ್ತರನ್ನು ಮೋದಿ ಸರ್ಕಾರ ಬೆನ್ನಟ್ಟಿ ಬೇಟೆಯಾಡಿತು. ಅವರ ಕುಟುಂಬದ ಸದಸ್ಯರ ಮೇಲೆ ಕೇಸುಗಳನ್ನು ಹಾಕಲಾಯಿತು. ಕಡೆಗೆ ಲವಾಸ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಾಯಿ ಮುಚ್ಚಿಕೊಳ್ಳುವ ಸ್ಥಿತಿ ಸೃಷ್ಟಿಸಲಾಗಿತ್ತು.
‘ಸರ್ಕಾರ ಹೇಳಿದ್ದಕ್ಕೆಲ್ಲ ಸರಿ ಎಂದು ಗೋಣು ಆಡಿಸುವ, ಮೊಣಕಾಲೂರಿ ನಿಲ್ಲುವ ಚುನಾವಣಾ ಆಯುಕ್ತರು ನಮಗೆ ಬೇಡ. ಅಗತ್ಯ ಬಿದ್ದರೆ ಪ್ರಧಾನಮಂತ್ರಿ ವಿರುದ್ಧ ಕೂಡ ಕ್ರಮ ಜರುಗಿಸುವ ಆಯುಕ್ತರು ಬೇಕು’ ಎಂದು ಸುಪ್ರೀಮ್ ಕೋರ್ಟಿನ ಪಂಚನ್ಯಾಯಮೂರ್ತಿಗಳ ಪೀಠ 2022ರ ನವೆಂಬರ್‌ನಲ್ಲಿ ಹೇಳಿತ್ತು.
ಆಯೋಗದ ‘ಬೆನ್ನುಮೂಳೆ’ ಗೆ ತಗುಲಿರುವ ಕ್ಷಯರೋಗದ ಕುರಿತು ಕೆಲ ಮೂಲಭೂತ ಪ್ರಶ್ನೆಗಳನ್ನು ಸುಪ್ರೀಮ್ ಕೋರ್ಟು ಎತ್ತಿತ್ತು. ಅಧಿಕಾರದ ಬೆನ್ನಟ್ಟುವ ರಾಜಕೀಯ ಪಕ್ಷಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಚುನಾವಣಾ ಆಯೋಗವನ್ನು ಇಷ್ಟಪಡುವುದಿಲ್ಲ.
ಭಾರತದ ಮುಖ್ಯ ಚುನಾವಣಾ ಅಧಿಕಾರಿಯಾಗಿ ಗ್ಯಾನೇಶ್ ಕುಮಾರ್ (ಜ್ಞಾನೇಶ್ ಕುಮಾರ್ ಗುಪ್ತ) ನೇಮಕಗೊಂಡಿದ್ದಾರೆ. ಐ.ಎ.ಎಸ್. ಅಧಿಕಾರಿಯಾಗಿದ್ದ ಕುಮಾರ್, 2029ರ ಜನವರಿ 26ರ ತನಕ ಮುಖ್ಯ ಚುನಾವಣಾ ಅಧಿಕಾರಿ ಹುದ್ದೆಯಲ್ಲಿರುತ್ತಾರೆ. ಅರ್ಥಾತ್ ಮುಂದಿನ ಲೋಕಸಭಾ ಚುನಾವಣೆ ನಡೆಯಲು ಕೆಲವೇ ದಿನಗಳು ಬಾಕಿ ಇರುವಾಗ ನಿವೃತ್ತರಾಗಲಿದ್ದಾರೆ.
2024ರ ಮಾರ್ಚ್ 15ರಿಂದ ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರಗಳ ನೀತಿ ನಿರ್ಧಾರಗಳನ್ನು ರೂಪಿಸಿ ಅವುಗಳನ್ನು ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವರು ಗ್ಯಾನೇಶ್ ಕುಮಾರ್. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪರವಾಗಿ ಸುಪ್ರೀಮ್ ಕೋರ್ಟ್ ನೀಡಿದ್ದ ತೀರ್ಪನ್ನು ಜಾರಿಗೆ ತರಲು ಮತ್ತು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸ್ಥಾಪನೆಯಲ್ಲಿ ನಿರ್ಣಾಯಕರಾಗಿದ್ದರು.
ಇದನ್ನೂ ಓದಿರಿ: ಬೆಂಗಳೂರಿನ ಮೇಲೆ ‘ಮೆಟ್ರೊ’ ಭಾರ; ತಿಳಿಯಲೇಬೇಕಾದ ಅಸಲಿ ಸಂಗತಿಗಳಿವು
ಅತ್ಯಂತ ವಿವಾದಕ್ಕೆ ಈಡಾಗಿರುವ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿಯಲ್ಲಿ ಮೂಗು ತೂರಿಸುವ ‘2022ರ ಬಹುರಾಜ್ಯ ಸಹಕಾರ ಸಂಘ (ತಿದ್ದುಪಡಿ) ಮಸೂದೆ’ಯ ಒಕ್ಕಣೆ ಇವರದೇ. ಸಹಕಾರ ವಿಷಯ ರಾಜ್ಯಪಟ್ಟಿಯಲ್ಲಿ ಬರುವ ವಿಷಯ. ಹೀಗಾಗಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಧಿಕಾರ ರಾಜ್ಯ ಸರ್ಕಾರಗಳದೇ ಆಗಿತ್ತು. ಈ ಕಾಯಿದೆಗೆ ತಿದ್ದುಪಡಿ ಸಂಸತ್ತಿನಲ್ಲಿ ಅಂಗೀಕರಿಸಿ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಂಡಿದೆ ಕೇಂದ್ರ ಸರ್ಕಾರ. ದೇಶದ ಬೇರೆ ಬೇರೆ ರಾಜ್ಯಗಳ ಸಹಕಾರ ಸಂಘಗಳನ್ನು ಬಹುರಾಜ್ಯ ಸಹಕಾರಿ ಸಂಘಗಳ ಜೊತೆಗೆ ವಿಲೀನ ಮಾಡುವ ಅಧಿಕಾರವನ್ನು ಮೋದಿ ಸರ್ಕಾರ ಈ ತಿದ್ದುಪಡಿಯಿಂದ ಪಡೆದಿದೆ.
ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಕೇಂದ್ರ ಸರ್ಕಾರವು ರಾಷ್ಟ್ರಮಟ್ಟದಲ್ಲಿ ಸಹಕಾರ ಚುನಾವಣಾ ಪ್ರಾಧಿಕಾರವನ್ನು ಸ್ಥಾಪಿಸುವ ಅಧಿಕಾರ ಹೊಂದಿದೆ. ಈ ಪ್ರಾಧಿಕಾರದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಗರಿಷ್ಠ ಮೂವರು ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನೂ ಕೇಂದ್ರ ಸರ್ಕಾರ ಪಡೆದಿದೆ. ಈ ಕೃತ್ಯ ಸಹಕಾರ ತತ್ವಗಳು ಮತ್ತು ಸಹಕಾರ ಮೌಲ್ಯಗಳಿಗೆ ವಿರುದ್ಧವಾದದ್ದು. ಕೇಂದ್ರ ಸಹಕಾರ ಸಚಿವಾಲಯ ರೂಪಿಸುವ ನಿಯಮಾವಳಿಗಳ ಪ್ರಕಾರವೇ ನೇಮಕಾತಿಗಳು ನಡೆಯಬೇಕು ಎಂದು ವಿಧಿಸಲಾಗಿದೆ.

ಈ ತಿದ್ದುಪಡಿ ಕಾಯಿದೆಯ ಬೆನ್ನಿನಲ್ಲಿಯೇ ಕರ್ನಾಟಕದ ‘ನಂದಿನಿ’ಯನ್ನು ಗುಜರಾತಿನ ‘ಅಮೂಲ್’ನಲ್ಲಿ ವಿಲೀನಗೊಳಿಸುವ ಪ್ರಸ್ತಾಪವನ್ನು 2023ರಲ್ಲಿ ಕೇಂದ್ರ ಸಹಕಾರ ಮಂತ್ರಿಯೂ ಆಗಿರುವ ಅಮಿತ್ ಶಾ ಮುಂದೊತ್ತಿದ್ದರು. ಈ ಕುರಿತು ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.
“ಒಂದು ರಾಷ್ಟ್ರ, ಒಂದು ಭಾಷೆ, ಒಂದು ಚುನಾವಣೆ, ಒಂದು ರಾಷ್ಟ್ರ-ಒಂದು ತೆರಿಗೆ- ಹೀಗೆ ಎಲ್ಲವನ್ನೂ ಕೇಂದ್ರೀಕರಿಸುತ್ತಿರುವ ಈ ಸಮಯದಲ್ಲಿ ನಮಗೆ ಒಂದು ರಾಷ್ಟ್ರ-ಒಂದು ಸಹಕಾರಿ ಮಹಾಮಂಡಳಿಯ ಅವಶ್ಯಕತೆಯಿಲ್ಲ. ಕೇಂದ್ರ ಸರ್ಕಾರ ವಿಕೇಂದ್ರೀಕರಣದ ವಿರೋಧಿಯಾಗಿದೆ ಎನ್ನುವುದಕ್ಕೆ ಹೆಚ್ಚಿನ ಪುರಾವೆ ಕೊಡಬೇಕಿಲ್ಲ. ಕರ್ನಾಟಕ ಮಹಾಮಂಡಳಿಯಲ್ಲಿರುವ ರೈತ ಪ್ರತಿನಿಧಿಗಳು ರಾಜ್ಯದ ಹಿತದೃಷ್ಟಿಯನ್ನು ಕಾಪಾಡುತ್ತಾರೆಯೇ ಅಥವಾ ರಾಜಕೀಯವಾಗಿ ದೆಹಲಿಯಿಂದ ಮತ್ತು ಅಹಮಾದಾಬಾದಿನಿಂದ ಬರುವ ಆದೇಶವನ್ನು ಶಿರಸಾವಹಿಸಿ ಪಾಲಿಸುತ್ತಾರೆಯೇ ಎನ್ನುವುದನ್ನು ಗಮನಿಸಬೇಕು. ಆ ಆದೇಶ ಪಾಲಿಸಿದರೆ, ಮುಂದೆ ಸಾಗಲಿರುವ ಕಾಲಚಕ್ರವನ್ನು ಹಿಂದಕ್ಕೆಳೆಯುವುದು ಅಸಾಧ್ಯ….” ಎಂಬ ಎಚ್ಚರಿಕೆಯ ಮಾತುಗಳನ್ನು ಸಹಕಾರಿ ತತ್ವ ಪರಿಣಿತರಾದ ಪ್ರೊ.ಎಂ.ಎಸ್.ಶ್ರೀರಾಮ್ ಆಡಿದ್ದರು.
ಸಹಕಾರಿ ಮಂತ್ರಾಲಯದ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿರುವ ಗ್ಯಾನೇಶ್, ಗೃಹಮಂತ್ರಿ ಅಮಿತ್ ಶಾ ಅವರ ಸಮೀಪವರ್ತಿ ಮತ್ತು ನಂಬಿಕಸ್ಥ ಎನ್ನಲಾಗಿದೆ. ದೇಶದ ಗೃಹ ಸಚಿವ ಅಮಿತ್ ಶಾ, ಸಹಕಾರ ಖಾತೆಯನ್ನೂ ಹೊಂದಿದ್ದಾರೆ. ಗೃಹಮಂತ್ರಾಲಯದಲ್ಲೂ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು ಗ್ಯಾನೇಶ್.
2019ರಲ್ಲಿ ಜಮ್ಮು-ಕಾಶ್ಮೀರ ಹೊಂದಿದ್ದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು (ಅನುಚ್ಛೇದ 370) ಅಳಿಸಿ ಹಾಕುವ ಮತ್ತು ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿಸುವ ಮಸೂದೆ ರೂಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದವರು ಗ್ಯಾನೇಶ್. ಆ ಹೊತ್ತಿನಲ್ಲಿ ಗ್ಯಾನೇಶ್ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ (ಕಾಶ್ಮೀರ ವಿಭಾಗ) ಆಗಿದ್ದರು. ತ್ರಿವಳಿ ತಲಾಖ್ ಮಸೂದೆಯ ಒಕ್ಕಣೆಯಲ್ಲೂ ಅವರ ಕೊಡುಗೆಯಿತ್ತು.
ಇದನ್ನೂ ಓದಿರಿ: ಅಂದು ಎನ್‌ಇಪಿ, ಇಂದು ಯುಜಿಸಿ; ರಾಜ್ಯಗಳ ಮೇಲೆ ಕೇಂದ್ರದ ಗದಾಪ್ರಹಾರ!
ಬಾಬರಿ ಮಸೀದಿ-ರಾಮಮಂದಿರ ವಿವಾದದ ವಿಚಾರಣೆ ಸುಪ್ರೀಮ್ ಕೋರ್ಟಿನಲ್ಲಿ ಜರುಗಿದ್ದಾಗ, ಸಂಬಂಧಪಟ್ಟ ದಾಖಲೆ ದಸ್ತಾವೇಜುಗಳನ್ನು ಸಂಭಾಳಿಸುವ ಹೊಣೆಯೂ ಈ ಅಧಿಕಾರಿಯ ಮೇಲಿತ್ತು. 2007-2012ರವರೆಗಿನ ಯುಪಿಎ ಅಧಿಕಾರಾವಧಿಯಲ್ಲಿ ಕೇಂದ್ರ ರಕ್ಷಣಾ ಖಾತೆಯ ಜಂಟಿ ಕಾರ್ಯದರ್ಶಿ. 2014ರಲ್ಲಿ ದೆಹಲಿಯಲ್ಲಿನ ಕೇರಳ ಭವನದ ನಿವಾಸಿ ಆಯುಕ್ತ.
ಗ್ಯಾನೇಶ್ ಉತ್ತರಪ್ರದೇಶದ ಆಗ್ರಾದವರು. ಅವರ ತಂದೆ ಸುಬೋಧ್ ಕುಮಾರ್ ಗುಪ್ತ ವೈದ್ಯರಾಗಿದ್ದರು. ಮುಖ್ಯ ವೈದ್ಯಾಧಿಕಾರಿಯಾಗಿ ನಿವೃತ್ತರು. ಕೇಂದ್ರದ ಸೇವೆಗೆ ಮುನ್ನ ಕೇರಳ ಕೇಡರ್‌ನಲ್ಲಿ ಐಎಎಸ್ ಅಧಿಕಾರಿಯಾಗಿದ್ದವರು. ಇವರ ಕುಟುಂಬದ ಹಲವು ತಲೆತಲಾಂತರಗಳು ವೈದ್ಯರಾಗಿ ಸೇವೆ ಸಲ್ಲಿಸಿವೆ. ಆದರೆ ಗ್ಯಾನೇಶ್ ಆರಿಸಿಕೊಂಡದ್ದು ಐ.ಎ.ಎಸ್. ಅಧಿಕಾರಿಯಾಗುವ ದಾರಿ.
ಐಎಎಸ್., ಐಪಿಎಸ್., ಐಆರ್ ಎಸ್., ಅಧಿಕಾರಿಗಳಿಂದ ಕಿಕ್ಕಿರಿದಿರುವ ಕುಟುಂಬ ಗ್ಯಾನೇಶ್ ಅವರದು! ಇವರ ಮೊದಲ ಮಗಳು ಮೇಧಾ ರೂಪಮ್ ಕೂಡ ಐ.ಎ.ಎಸ್. ಅಧಿಕಾರಿ. ಉತ್ತರಪ್ರದೇಶದ ಕಾಸ್ ಗಂಜ್ ಜಿಲ್ಲಾಧಿಕಾರಿ. ಮೇಧಾ ಪತಿ ಮನೀಷ್ ಬನ್ಸಲ್ ಕೂಡ ಐ.ಎ.ಎಸ್. ಅಧಿಕಾರಿ. ಇದೇ ಉತ್ತರಪ್ರದೇಶದ ಸಹಾರಣಪುರದ ಜಿಲ್ಲಾಧಿಕಾರಿ. ಗ್ಯಾನೇಶ್ ಅವರ ಎರಡನೆಯ ಮಗಳು ಅಭಿಶ್ರೀ ಐ.ಆರ್.ಎಸ್. ಅಧಿಕಾರಿ. ಅಭಿಶ್ರೀಯ ಪತಿ ಅಕ್ಷಯ ಲಾಬ್ರೂ ಐ.ಎ.ಎಸ್. ಅಧಿಕಾರಿ. ಗ್ಯಾನೇಶ್ ತಮ್ಮ ಮನೀಷ್ ಕುಮಾರ್ ಐ.ಆರ್.ಎಸ್. ಅಧಿಕಾರಿ. ಗ್ಯಾನೇಶ್ ಸೋದರಿ ರೋಲಿ ಅವರು ಮಧ್ಯಪ್ರದೇಶದ ಇಂದೋರಿನಲ್ಲಿ ಶಾಲೆ ನಡೆಸುತ್ತಿದ್ದಾರೆ. ಅವರ ಪತಿ ಉಪೇಂದ್ರ ಜೈನ್ ಕೂಡ ಐ.ಪಿ.ಎಸ್. ಅಧಿಕಾರಿ. ಗ್ಯಾನೇಶ್ ಅವರ ಮಗ ಇನ್ನೂ ಓದುತ್ತಿದ್ದಾರೆ. ಆಗ್ರಾದ ವಿಜಯನಗರ ಕಾಲೊನಿಯ ನಿವಾಸಿಗಳು ಹೇಳುವ ಪ್ರಕಾರ ಗ್ಯಾನೇಶ್ ಅವರ ವಿಸ್ತೃತ ಕುಟುಂಬದಲ್ಲಿ ಒಟ್ಟು 28 ಮಂದಿ ವೈದ್ಯರಿದ್ದಾರೆ.
ಮುಖ್ಯ ಆಯುಕ್ತರಾಗಿ ಬುಧವಾರ (ಫೆ.19) ಅಧಿಕಾರ ವಹಿಸಿಕೊಂಡ ಗ್ಯಾನೇಶ್, ‘ಮತದಾನವೇ ರಾಷ್ಟ್ರನಿರ್ಮಾಣದ ಮೊದಲ ಹೆಜ್ಜೆ’ ಎಂದು ಸಾರಿದ್ದಾರೆ. ‘ಹದಿನೆಂಟು ವರ್ಷ ವಯಸ್ಸು ತುಂಬಿದ ಎಲ್ಲ ಭಾರತೀಯ ನಾಗರಿಕರೂ ಮತದಾನ ಮಾಡಲೇ ಬೇಕು. ಸಂವಿಧಾನ ವಿಧಿಸಿರುವ ಪ್ರಕಾರ ಚುನಾವಣಾ ಆಯೋಗವು ನಿರಂತರವಾಗಿ ಮತದಾರರ ಪಕ್ಷಪಾತಿಯಾಗಿತ್ತು, ಹಾಗೆಯೇ ಇರುತ್ತದೆ ಮತ್ತು ಹಾಗೆಯೇ ಮುಂದುವರೆಯುತ್ತದೆ’ ಎಂದಿದ್ದಾರೆ.
ಇದೇ ವರ್ಷಾಂತ್ಯದ ಬಿಹಾರ ವಿಧಾನಸಭಾ ಚುನಾವಣೆ, ಬರುವ ವರ್ಷದ (2026) ಪಶ್ಚಿಮ ಬಂಗಾಳ, ಅಸ್ಸಾಮ್ ಹಾಗೂ ತಮಿಳುನಾಡು ವಿಧಾನಸಭಾ ಚುನಾವಣೆಗಳು ಗ್ಯಾನೇಶ್ ಕಣ್ಣೋಟದಲ್ಲಿ ನಡೆಯಲಿವೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡುಗಳಲ್ಲಿ ವಿರೋಧ ಪಕ್ಷಗಳ ಸರ್ಕಾರಗಳು ಅಸ್ತಿತ್ವದಲ್ಲಿವೆ. ಈ ಎರಡೂ ರಾಜ್ಯಗಳೂ ಬಿಜೆಪಿಯ ಪಾಲಿಗೆ ಬಹುದೊಡ್ಡ ಸವಾಲುಗಳು ಮತ್ತು ಗೆಲ್ಲಲಾರದ ಭದ್ರಕೋಟೆಗಳಾಗಿರುವುದು ಗಮನಾರ್ಹ.
ಮೊನ್ನೆ ನಿವೃತ್ತಿಯಾದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಆಯೋಗದ ವಿಶ್ವಾಸಾರ್ಹತೆಯನ್ನು ಕುಗ್ಗಿಸಿದ್ದಾರೆ. ಹಿರಿಮೆ ಗರಿಮೆ ಧಾರಣೆಗಳನ್ನು ಮಣ್ಣುಪಾಲು ಮಾಡಿದ್ದಾರೆ. ಗ್ಯಾನೇಶ್ ಕುಮಾರ್ ಆಯೋಗವನ್ನು ಮತ್ತಷ್ಟು ಪ್ರಪಾತಕ್ಕೆ ಕೊಂಡೊಯ್ಯುವರೇ ಇಲ್ಲವೇ ಅನಿರೀಕ್ಷಿತ ಅಚ್ಚರಿ ಮೂಡಿಸುವರೇ?

ಡಿ ಉಮಾಪತಿ
ಹಿರಿಯ ಪತ್ರಕರ್ತರು




