ಮೈಸೂರು ರಾಜ್ಯದ ‘ಕರ್ನಾಟಕ’ ಎಂಬ ಹೆಸರಿನ 1973ರ ಮರುನಾಮಕರಣಕ್ಕೆ ಚಾರಿತ್ರಿಕ ಮಹತ್ವವಿದೆ. ಬೀದರ್‌ನಿಂದ ಚಾಮರಾಜನಗರದವರೆಗಿನ ಹಲವು `ಒಳನುಡಿಗಳನ್ನು ಆಡುವ, ವಿಭಿನ್ನ ಜೀವನಕ್ರಮಗಳನ್ನು ಹೊಂದಿರುವ ಕನ್ನಡಿಗರ ಒಳಗೊಳ್ಳುವಿಕೆಯ ದೃಷ್ಟಿಯಿಂದ ಈ ಘಟನೆಯು ಏಕೀಕರಣದಂತೆಯೇ ಮುಖ್ಯ. ಈ ಒಳಗೊಳ್ಳುವಿಕೆಯು ಮಹಿಳೆಯರನ್ನೂ ಒಳಗೊಂಡದ್ದಾಗಿದೆ ಎಂಬುದು ಗಮನಾರ್ಹವಾದರೂ ಈ ನಾಮಕರಣಕ್ಕೂ ಕರ್ನಾಟಕದ ಮಹಿಳೆಯರ ಸ್ಥಿತಿಗತಿಗೂ ನೇರಾನೇರ ಸಂಬಂಧವಿಲ್ಲ. ಆದರೆ, ಅದು ಕಳೆದ ಐವತ್ತು ವರ್ಷಗಳ ಅವಲೋಕನಕ್ಕೆ ಒದಗಿ ಬರುತ್ತದೆ ಎಂಬುದು ಇಲ್ಲಿ ಮುಖ್ಯ.
ಕರ್ನಾಟಕದ ಮರುನಾಮಕರಣದ ಸಿದ್ಧತೆಯು ನಡೆಯುತ್ತಿದ್ದ ದಿನಮಾನಗಳಲ್ಲಿ ಅಂದರೆ, 1974ರಲ್ಲಿ ತಜ್ಞರ ಸಮಿತಿಯೊಂದು ಭಾರತದ ಇತಿಹಾಸದಲ್ಲೇ ಮೊದಲಿನದು ಎನ್ನಬಹುದಾದ ವರದಿಯೊಂದನ್ನು ಸಿದ್ಧಪಡಿಸಿ ಸರ್ಕಾರದ ಮುಂದೆ ಪ್ರಸ್ತುತಪಡಿಸಿತ್ತು. ‘ಸಮಾನತೆಯೆಡೆಗೆ’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಈ ವರದಿಯು ಅಂಕಿಅಂಶಗಳ ಸಹಿತ ಸ್ವಾತಂತ್ರ್ಯೋತ್ತರ ಭಾರತದಲ್ಲಿನ ಮಹಿಳೆಯರ ಸ್ಥಿತಿಗತಿಯು ಎಷ್ಟು ನಿರಾಶಾದಾಯಕವಾಗಿದೆ ಎಂಬುದನ್ನು ತೆರೆದಿಟ್ಟಿತ್ತು. ಯುನೈಟೆಡ್ ನೇಷನ್ಸ್‌ನ ಸೂಚನೆಯ ಮೇರೆಗೆ ಕೈಗೆತ್ತಿಕೊಳ್ಳಲಾದ ಈ ವರದಿಯು ಸ್ಪಷ್ಟವಾಗಿ ಮಹಿಳಾ ಅಭಿವೃದ್ಧಿಗೆ ವಿಶೇಷ ಒತ್ತು ಕೊಡದೆ ಭಾರತವು ಲಿಂಗ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ನಿರೂಪಿಸಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರವು ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಅನುಸರಿಸಿ, 1975ನ್ನು ‘ಅಂತಾರಾಷ್ಟ್ರೀಯ ಮಹಿಳಾವರ್ಷ’ವಾಗಿ ಘೋಷಿಸಿತು, ಮಾತ್ರವಲ್ಲದೆ ನಂತರ ಅದನ್ನು ‘ಮಹಿಳಾ ದಶಕ’ವಾಗಿ ಮುಂದುವರಿಸಿತು. ಕೇಂದ್ರದ ಆಶಯವನ್ನು ಈಡೇರಿಸುವ ದಿಕ್ಕಿನಲ್ಲಿ ಒಕ್ಕೂಟ ವ್ಯವಸ್ಥೆಯ ಅಂಗಗಳಾದ ರಾಜ್ಯಸರ್ಕಾರಗಳು ತಮ್ಮದೇ ಆದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾದವು. ಅಂತಹ ಒಂದು ಮುಂಚೂಣಿ ರಾಜ್ಯವಾಯಿತು ಕರ್ನಾಟಕ.
ಭಾರತ ಸರ್ಕಾರವು ಘೋಷಿಸಿದ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಆಶಯವನ್ನು ಈಡೇರಿಸುವ ದಿಕ್ಕಿನಲ್ಲಿ ಕರ್ನಾಟಕ ಸರ್ಕಾರವು ದೇಶದಲ್ಲೇ ಮೊದಲಿಗೆಂಬಂತೆ ಮಹಿಳೆ ಮತ್ತು ಮಕ್ಕಳ ಯೋಗಕ್ಷೇಮವನ್ನು ಗಮನಿಸುವ ಸಲುವಾಗಿ ಒಂದು ಪ್ರತ್ಯೇಕ ವಿಭಾಗವನ್ನೇ ತೆರೆಯಿತು. ಅದುವೆ 1975ರಲ್ಲಿ ಕಾರ್ಯಾರಂಭ ಮಾಡಿದ ‘ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ. ಕರ್ನಾಟಕ ಏಕೀಕರಣದ ಸಮಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ರೂಪಿಸಿದ್ದ ‘ಪ್ರೊಬೇಷನ್ ಅಂಡ್ ಆಫ್ಟರ್-ಕೇರ್ ಸರ್ವಿಸಸ್’ ವಿಭಾಗವನ್ನು ಈಗ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಾಗಿ ಮರುರೂಪಿಸುವ ಮೂಲಕ ಮಹಿಳೆಯರ ಕ್ಷೇಮಾಭಿವೃದ್ಧಿ ಕುರಿತ ತನ್ನ ಆದ್ಯತೆಯನ್ನು ಎತ್ತಿ ತೋರಿಸಿತು. ಅರ್ಥಾತ್ 70ರ ದಶಕದ ಮಧ್ಯಭಾಗವು ಕರ್ನಾಟಕದ ಮರುನಾಮಕರಣ ಮತ್ತು ಮಹಿಳಾ ಅಭಿವೃದ್ಧಿಯ ಮರುನಿರ್ವಚನವು ಸಂಧಿಸಿದ ಕಾಲಘಟ್ಟ. ಆಸುಪಾಸಿನ ವರ್ಷಗಳಲ್ಲಿ ಘಟಿಸಿದ ಈ ಎರಡು ಸಂಗತಿಗಳನ್ನು ಒಗ್ಗೂಡಿಸಿದರೆ ಕರ್ನಾಟಕದ ಮಹಿಳೆಯರ ಶ್ರೇಯೋಭಿವೃದ್ಧಿಯ ವಿಚಾರಗಳೂ ಸಂಧಿಸುತ್ತವೆ ಎಂಬುದು ಈ ಮರುನಾಮಕರಣದ ಮೈಲಿಗಲ್ಲನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದೆ.
ಕರ್ನಾಟಕ ಸರ್ಕಾರವು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ಥಾಪನೆಯೊಂದಿಗೆ ವಿರಮಿಸದೆ, 1987ರಲ್ಲಿ ಹೆಣ್ಣುಮಕ್ಕಳ ಆದಾಯವನ್ನು ವೃದ್ಧಿಸುವ ಯೋಜನೆಗಳಿಗೆ ಧನಸಹಾಯ ಮಾಡುವ ದೃಷ್ಟಿಯಿಂದ ‘ಮಹಿಳೆಯರ ಅಭಿವೃದ್ಧಿ ಕಾರ್ಪೊರೇಷನ್’ಅನ್ನು ಸ್ಥಾಪಿಸಿತು. 1994ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸ್ವತಂತ್ರಗೊಳಿಸಿದ್ದು ಮಾತ್ರವಲ್ಲದೆ ಅದನ್ನು ಪ್ರತ್ಯೇಕ ಸಚಿವಾಲಯವಾಗಿ ಉನ್ನತೀಕರಿಸಿತು. ಈ ಉನ್ನತೀಕರಣವು ಸ್ವಾಯತ್ತತೆ ಮತ್ತು ಪ್ರತ್ಯೇಕ ಬಜೆಟ್ ಎರಡನ್ನೂ ಒಳಗೊಂಡದ್ದಾಗಿತ್ತು. ಇದರ ಅಡಿಯಲ್ಲಿ 1997ರಲ್ಲಿ `ಕರ್ನಾಟಕ ಮಹಿಳಾ ಆಯೋಗ’ವೂ ಸ್ಥಾಪನೆಗೊಂಡಿತು. ಇದೀಗ ಈ ಸಚಿವಾಲಯದ ಅಡಿಯಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹಿಳಾ ಆಯೋಗ ಇತ್ಯಾದಿ ಮಹಿಳಾ ಸಂಬಂಧಿತ ಹಲವು ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ.
ಇದನ್ನೂ ಓದಿರಿ: ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)
ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ಥಾಪನೆ ಮತ್ತದರ ಪೂರ್ವಪರಗಳು ಒಂದು ಬಗೆಯಲ್ಲಿ ಕಳೆದ ಐವತ್ತು ವರ್ಷಗಳ ಕರ್ನಾಟಕ ಸರ್ಕಾರದ ತಾತ್ವಿಕ ಮತ್ತು ಆಡಳಿತಾತ್ಮಕ ಬದ್ಧತೆಯನ್ನು ಪ್ರತಿನಿಧಿಸುತ್ತವೆ. ಆದರೆ, ಈ ಬದ್ಧತೆಯು ಅನುಷ್ಠಾನದ ಹಂತದಲ್ಲಿ ಎಷ್ಟು ಸಫಲವಾಗಿದೆ ಎಂಬುದು ಚರ್ಚಿಸಬೇಕಾದ ವಿಚಾರ. ಪ್ರಧಾನಧಾರೆಯ ರಾಜಕಾರಣದಿಂದ ಬಿಡಿಸಿಕೊಂಡು ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವುದರಲ್ಲಿ ಸಚಿವಾಲಯ ಮತ್ತದರ ಅಂಗ ಸಂಸ್ಥೆಗಳು ಕ್ರಮೇಣ ಅಸಹಾಯಕವಾಗುತ್ತಿರುವುದನ್ನು ನಾವು ನಿರಂತರವಾಗಿ ನೋಡುತ್ತಲೇ ಇದ್ದೇವೆ. ಪಕ್ಷರಾಜಕಾರಣಕ್ಕೆ ಸೇವೆ ಸಲ್ಲಿಸುವ ಮಹಿಳಾ ಪ್ರತಿನಿಧಿಗಳಿಗೆ ನೀಡುವ ಬಹುಮಾನಗಳಾಗಿ ಈ ಅಧಿಕಾರ ಕೇಂದ್ರಗಳು ದಿನದಿಂದ ದಿನಕ್ಕೆ ಪರಿವರ್ತನೆಗೊಳ್ಳುತ್ತಿವೆ. ಮಹಿಳೆಯರ ರಾಜಕೀಯ ಹಕ್ಕೊತ್ತಾಯಕ್ಕೆ ಸಮಜಾಯಿಶಿ ಎನ್ನುವಂತೆ ಈ ಸಚಿವಾಲಯವನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತಿದೆ. ಸಮಾಜದ ಅರ್ಧದಷ್ಟಿರುವ ಮಹಿಳೆಯರ ಯೋಗಕ್ಷೇಮದ ಸಚಿವಾಲಯವು ನಗಣ್ಯವಾದ ಅಧಿಕಾರ ಕೇಂದ್ರವಾಗಿ ಉಳಿದಿದೆ. ಈ ಕಾರಣದಿಂದಾಗಿಯೇ ಹಲವು ಬಾರಿ ಮಹಿಳಾ ಚಳುವಳಿಗಳು ಈ ಅಧಿಕಾರ ಕೇಂದ್ರದ ವಿರುದ್ಧವೇ ನಿಲ್ಲುವ ಸನ್ನಿವೇಶಗಳೂ ನಿರ್ಮಾಣವಾಗಿವೆ.

ಸಮಾನತೆಯೆಡೆಗೆ ವರದಿ ಪ್ರಕಟಗೊಂಡ ನಂತರ ಒಂದೆಡೆ ಕರ್ನಾಟಕ ಸರ್ಕಾರವು ಕಾರ್ಯೋನ್ಮುಖವಾದರೆ ಇನ್ನೊಂದೆಡೆ ಸ್ವಾಯತ್ತ ಮಹಿಳಾ ಚಳುವಳಿಗಳು ಆರಂಭಗೊಂಡವು. ಈ ಹಿಂದಿನ ಸುಧಾರಣಾವಾದಿ ಮಹಿಳಾ/ವನಿತಾ ಸಮಾಜಗಳಿಗಿಂತ ಈ ಚಳವಳಿಗಳು ಭಿನ್ನವಾಗಿ ಸ್ತ್ರೀವಾದಿ ತಾತ್ವಿಕತೆಯನ್ನು ಹೊಂದಿದ್ದವು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಹಿಳಾ ಸಂಘಸಂಸ್ಥೆಗಳ ಜೊತೆ ಸಂಪರ್ಕದಲ್ಲಿದ್ದ ಇವು, ಕಾಲದಿಂದ ಕಾಲಕ್ಕೆ ಹಲವು ಹೋರಾಟಗಳನ್ನು ರೂಪಿಸಿ ಕರ್ನಾಟಕದ ಸಾಮಾಜಿಕ ವಲಯವನ್ನು ಲಿಂಗ ಜಾಗೃತವಾಗಿಸುವಲ್ಲಿ ಶ್ರಮಿಸಿದವು. ವರದಕ್ಷಿಣೆ, ಅತ್ಯಾಚಾರ, ಕೌಟುಂಬಿಕ ಹಿಂಸೆ, ಮಹಿಳಾ ಮೀಸಲಾತಿ, ಆಸ್ತಿಹಕ್ಕು, ಭ್ರೂಣಹತ್ಯೆ, ಜಾಹೀರಾತು ಮತ್ತಿತರ ಮಾಧ್ಯಮಗಳಲ್ಲಿನ ಮಹಿಳೆಯ ಅಶ್ಲೀಲ ಪ್ರದರ್ಶನ ಮುಂತಾದ ವಿಷಯಗಳನ್ನು ಕೈಗೆತ್ತಿಕೊಂಡು ವ್ಯವಸ್ಥಿತವಾದ ಹೋರಾಟವನ್ನು ರೂಪಿಸಿದವು. ಇದೆಲ್ಲದರ ಪರಿಣಾಮವಾಗಿ ಹಲವು ಕಾನೂನುಗಳು ಜಾರಿಗೆ ಬಂದವು. ಈ ವಿಚಾರದಲ್ಲಿ ಕರ್ನಾಟಕದ ಮಟ್ಟಿಗಿನ ಒಂದು ಸಾಧನೆ ಪ್ರಥಮಬಾರಿಗೆ ಗ್ರಾಮಪಂಚಾಯಿತಿ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಇದು ಸರ್ಕಾರದ ಇಚ್ಛಾಶಕ್ತಿ ಮತ್ತು ಮಹಿಳಾ ಚಳವಳಿಗಳ ಹೋರಾಟಗಳೆರಡೂ ಸಂಧಿಸಿದ ಬಿಂದು.
ಮಹಿಳಾ ಚಳವಳಿ ಮತ್ತು ಪ್ರಭುತ್ವದ ನಡುವಿನ ಈ ಬಗೆಯ ಚೌಕಾಶಿ ಮತ್ತು ಒಪ್ಪಂದಗಳ ಪರಿಣಾಮವಾಗಿ ಕಳೆದ ಮಹಿಳೆಯರ ಬದುಕಿನಲ್ಲಿ ಹಲವು ಬದಲಾವಣೆಗಳು ಉಂಟಾಗಿದ್ದು, ಅವುಗಳ ಪರಿಮಾಣಾತ್ಮಕ ಸ್ವರೂಪವನ್ನು ಕಳೆದ ಐವತ್ತು ವರ್ಷಗಳ ಅಂಕಿಅಂಶಗಳು ನಮ್ಮ ಮುಂದಿಡುತ್ತವೆ. ಆದರೆ, ಈ ಅಂಕಿಅಂಶಗಳನ್ನು ಆಧರಿಸುವ ಸಂದರ್ಭದಲ್ಲಿನ ತೊಡಕೂ ಒಂದಿದೆ. ಜಗತ್ತಿನ ಅತಿದೊಡ್ಡ ದತ್ತಾಂಶ ಕ್ರೋಢೀಕರಣ ಪ್ರಕ್ರಿಯೆ ಎನಿಸಿರುವ ಭಾರತದ ಜನಗಣತಿಯು ಅಧ್ಯಯನಗಳಿಗೆ ದತ್ತಾಂಶವನ್ನು ಒದಗಿಸುವ ಮುಖ್ಯ ಆಕರ. ಇದು ನಡೆಯುವುದು ಪ್ರತಿ ದಶಕದ ಮೊದಲ ವರ್ಷದಲ್ಲಿಯಾದ್ದರಿಂದ ದಶಕಗಳ ಮಧ್ಯಂತರದಲ್ಲಿ ಬಳಸುವ ಅಂಕಿಅಂಶವು ಒಂದೋ ಹಿಂದಿನ ಜನಗಣತಿಯದು ಇಲ್ಲವೆ ಸೂಕ್ತ ಪ್ರಾಧಿಕಾರವು ಅಂದಾಜಿಸಿದ್ದು ಆಗಬೇಕಾಗುತ್ತದೆ. ಜೊತೆಗೆ ಕೋವಿಡ್‌ನ ಕಾರಣಕ್ಕಾಗಿ 2021ರ ಜನಗಣತಿಯನ್ನು ಮುಂದೂಡಲಾಗಿದ್ದರಿಂದ, ಹದಿನೈದು ವರ್ಷಗಳ ಹಿಂದಿನ ಅಂಕಿಅಂಶವನ್ನು ಆಧಾರವಾಗಿಟ್ಟುಕೊಂಡು ವಿಶ್ಲೇಷಿಸುವ ಅನಿವಾರ್ಯತೆಯೂ ಈಗ ಒದಗಿದೆ. ಈ ಮಿತಿಯ ಕಾರಣಕ್ಕಾಗಿಯೇ ಪ್ರಸ್ತುತ ಬರಹವು ಅಂಕಿಅಂಶಗಳ ವಿಶ್ಲೇಷಣೆಗೆ ಹೆಚ್ಚಿನ ಒತ್ತು ನೀಡಿಲ್ಲ. ಆದಾಗ್ಯೂ ಕಳೆದ ಐವತ್ತು ವರ್ಷಗಳಲ್ಲಿನ ಕರ್ನಾಟಕದ ಮಹಿಳಾ ಸ್ಥಿತಿಗತಿಯಲ್ಲಿನ “ಏರಿಳಿತ’’ಗಳನ್ನು ಪರಿಶೀಲಿಸುವ ಸಲುವಾಗಿ ಒಂದೆರಡು ನಿದರ್ಶನಗಳನ್ನು ನೋಡಬಹುದಾಗಿದೆ.
1. ಲಿಂಗಾನುಪಾತ: ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣಿನ ಸಮಸ್ಯೆ ಜನನಪೂರ್ವದಿಂದಲೇ ಆರಂಭವಾಗುತ್ತದೆ. ಅವಳಿಗೆ ಜನಿಸುವ ಅವಕಾಶ ಸಿಕ್ಕ ನಂತರವಷ್ಟೇ ಸ್ಥಾನಮಾನದ ಪ್ರಶ್ನೆ. ಹೆಣ್ಣಿನ ಅಸ್ತಿತ್ವವೇ ನಿರಾಕರಣೆಗೊಳ್ಳುವ ಸಮಾಜದಲ್ಲಿ ಅವಳ ಅಸ್ಮಿತೆಯ ಮಾತು ದೂರದ್ದೇ ಆಗಿದೆ. ಆರಂಭಕ್ಕೇ ಈ ಪ್ರಶ್ನೆಯನ್ನು ಕೈಗೆತ್ತಿಕೊಂಡ ಸಮಾನತೆಯೆಡೆಗೆ ವರದಿಯು ಇಪ್ಪತ್ತನೇ ಶತಮಾನದ ಉದ್ದಕ್ಕೂ ಲಿಂಗಾನುಪಾತ ಇಳಿಯುತ್ತಲೇ ಹೋಗಿರುವುದನ್ನು ಸಮಸ್ಯೀಕರಿಸಿತು. 1901ರಲ್ಲಿ ಇದ್ದ 1000: 972 ಎಂಬ ಅನುಪಾತವು, ಜಾರುತ್ತಲೇ ಮುಂದುವರೆದು 1971ರ ಹೊತ್ತಿಗೆ 930ಕ್ಕೆ ಇಳಿದಿತ್ತು. ಅಂದರೆ, ಗಂಡು-ಹೆಣ್ಣು ಕೂಡಿ ಬದುಕಬೇಕಾದ ಸಮಾಜದಲ್ಲಿ ನೂರು ಪುರುಷರ ಪಕ್ಕದಲ್ಲಿ ಕೇವಲ 93 ಮಹಿಳೆಯರಿದ್ದರು.
ಈ ಅಂಕಿಅಂಶದಿಂದ ಕರ್ನಾಟಕವನ್ನು ಪ್ರತ್ಯೇಕಿಸಿ ನೋಡುವುದಾದರೆ, ಅದು 1901ರಲ್ಲಿ 983 ಇದ್ದದ್ದು 1971ರ ವೇಳೆಗೆ 957ಕ್ಕೆ ಇಳಿದಿದೆ. ಭಾರತದ ಅಂಕಿಅಂಶದ ಮುಂದೆ ಇದು ಸುಧಾರಿಸಿದ್ದು ಎನಿಸಿದರೂ, ಅದು ಕರ್ನಾಟಕದ ಲಿಂಗಾನುಪಾತದ ಸಮಸ್ಯೆಯನ್ನು ನಗಣ್ಯವಾಗಿಸುವುದಿಲ್ಲ. 1975ರ ನಂತರದ ಜನಸಂಖ್ಯಾ ವರದಿಗಳು ನೀಡುವಂತೆ ಕರ್ನಾಟಕದ ಲಿಂಗಾನುಪಾತ 1981, 91, 2001 ಮತ್ತು 2011ರಲ್ಲಿ ಕ್ರಮವಾಗಿ 962, 960, 965, 973 ಆಗಿದೆ. 2024ರಲ್ಲಿ ಅಂದಾಜು 973 ಆಗಿದೆ. ಈ ನಿರಂತರ ಏರಿಕೆಯು ಸ್ವಲ್ಪಮಟ್ಟಿಗೆ ಸಮಾಧಾನ ತರುವಂತದ್ದಾದರೂ ಅದು 1901 ಅಂಕಿಅಂಶಕ್ಕಿಂತ ಶೇ.10 ಕಡಿಮೆಯಿದೆ ಎಂಬುದು ಪ್ರಗತಿಯ ಹಿಂದುಳಿದಿರುವಿಕೆಯನ್ನು, ನಿಧಾನಗತಿಯನ್ನು ಸೂಚಿಸುತ್ತದೆ. ಸಂಸ್ಕೃತಿಯ ವಕ್ತಾರಿಕೆಯ ಹೋರಾಟಗಳು ರೂಪುಗೊಳ್ಳುತ್ತಿರುವ, ಪ್ರಗತಿಪಥದ ಮೆರವಣಿಗೆಯೇ ನಡೆಯುತ್ತಿರುವ ಇಂದಿನ ಸನ್ನಿವೇಶದಲ್ಲಿ ಭ್ರೂಣಹತ್ಯೆಯಂತಹ ಅಮಾನವೀಯ ವಿಚಾರಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂಬುದಕ್ಕೆ ಕೆಲವು ತಿಂಗಳ ಹಿಂದೆ ದಾಖಲಾದ ಮಂಡ್ಯ ಜಿಲ್ಲೆಯ ಘಟನೆಗಳೇ ಸಾಕ್ಷಿಯಂತಿವೆ.
ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾಸಾಹೇಬರ ಒಳನೋಟ (ಭಾಗ-1)
ಹೆಣ್ಣಿನ ದೇಹದ ಘನತೆಯ ಕುರಿತಾಗಿ ಮುಖ್ಯವಾಗಿ ಗಮನಿಸಬೇಕಾದ ಇನ್ನೊಂದು ವಿಚಾರ ಅವಳ ಮೇಲಿನ ದೌರ್ಜನ್ಯ ಕುರಿತದ್ದು. ಭ್ರೂಣಹತ್ಯೆಯನ್ನು ದಾಟಿ ಈ ಜಗತ್ತಿಗೆ ಬರುವ ಹೆಣ್ಣಿನ ಭೌತಿಕ ಅಸ್ತಿತ್ವದ ಮೇಲೆ ನಿರಂತರವಾದ ದಾಳಿಗಳು ನಡೆಯುತ್ತಲೇ ಇವೆ. ಅಪೌಷ್ಟಿಕತೆಯಿಂದ ಮೊದಲುಗೊಳ್ಳುವ ಈ ದಾಳಿಯು ಕೌಟುಂಬಿಕ ಹಿಂಸೆ, ವೈವಾಹಿಕ ಅತ್ಯಾಚಾರಗಳನ್ನು ಹಾದು ಸಾರ್ವಜನಿಕ ಬೆತ್ತಲೆ, ಅತ್ಯಾಚಾರ, ಅದರ ಚಿತ್ರೀಕರಣ, ಮಾನಹಾನಿ-ಪ್ರಾಣಹಾನಿಯ ಬೆದರಿಕೆ, ಕೊಲೆ ಮತ್ತು ಮಾಧ್ಯಮಗಳ ಕಟಕಟೆ ಮುಂತಾದ ಹಲವು ನೆಲೆಗಳಿಗೆ ಹಬ್ಬುತ್ತದೆ. ಕೋಮುವಾದದ ಘರ್ಷಣೆ ಇರಲಿ, ಜಾತಿ ಜಗಳಗಳಿರಲಿ, ರಾಜಕೀಯ ಸೇಡಿರಲಿ, ಕುಟುಂಬದೊಳಗಿನ ಮನಸ್ತಾಪವಿರಲಿ ಅದು ಹೆಣ್ಣಿನ ಮೇಲಿನ ದಾಳಿಯ ಮೂಲಕವೇ ವ್ಯಕ್ತವಾಗುತ್ತದೆ. ಪರ-ವಿರೋಧಿಗಳಿಬ್ಬರೂ ಹೆಣ್ಣನ್ನು ಕೊಳೆತು ಹೋಗುವ ವಸ್ತುವಾಗಿಯೇ ಪರಿಭಾವಿಸಿ ಪ್ರತಿಕ್ರಿಯಿಸುತ್ತಾರೆ.
ಹಾಗೆ ನೋಡಿದರೆ, ಈ ಬಗೆಯ ದೌರ್ಜನ್ಯಗಳ ಕುರಿತ ಚರ್ಚೆ ಮುನ್ನೆಲೆಗೆ ಬಂದುದು ಎಪ್ಪತ್ತರ ದಶಕದ ಕೊನೆಯ ದಿನಗಳಲ್ಲಿ. ಮುಂದಿನ ಐದು ದಶಕಗಳು ಇವುಗಳ ವಿರುದ್ಧದ ಹೋರಾಟ ಮತ್ತು ಹಕ್ಕೊತ್ತಾಯಗಳಲ್ಲೇ ಕಳೆಯಿತಾದರೂ ಅವು ಪೂರ್ಣರೂಪದಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಾಗಿಲ್ಲ. ಕಳೆದ ಒಂದು ದಶಕದಿಂದ ಈಚೆಗಂತೂ ಈ ಬಗೆಯ ದೌರ್ಜನ್ಯವು ಮತ್ತಷ್ಟು ಹೆಚ್ಚಾಗಿವೆ ಎಂಬುದು ಪೊಲೀಸ್ ದಾಖಲೆಗಳಲ್ಲಿ ಕಾಣಸಿಗುತ್ತದೆ. ಈ ದಾಖಲೆಗಳ ಅಂಕಿ-ಅಂಶವು ಹೆಚ್ಚಾಗುತ್ತಿರುವ ಜಾಗೃತಿಯನ್ನು ಸೂಚಿಸುತ್ತದೆ ಎಂಬುದು ನಿಜವಾದರೂ ಅದು ದೌರ್ಜನ್ಯವು ಕಡಿಮೆಯಾಗಿದೆ ಎಂಬುದಕ್ಕೆ ಆಧಾರವಾಗಲಾರದು. ಮಹಿಳಾ ದೌರ್ಜನ್ಯದ ವಿಚಾರದಲ್ಲಿ ಅದು ಹೆಚ್ಚಾಗುತ್ತಿದೆ ಎಂಬುದರೊಂದಿಗೆ ಕಳವಳಕ್ಕೀಡು ಮಾಡುವ ಇನ್ನೊಂದು ವಿಚಾರ, ದಿನದಿಂದ ದಿನಕ್ಕೆ ಅದರ ಸ್ವರೂಪದಲ್ಲಿ ಹೆಚ್ಚಾಗುತ್ತಿರುವ ಭೀಭತ್ಸತೆ. ಕಳೆದೆರಡು ವರ್ಷಗಳಲ್ಲಿ ಕನ್ನಡಿಗರು ಬೆಚ್ಚಿಬೀಳುವಂತಹ ದೌರ್ಜನ್ಯದ ಪರಮಾವಧಿಯನ್ನು ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರವು ನಮ್ಮ ಮುಂದಿಟ್ಟಿರುವುದು ಇದಕ್ಕೆ ಸಾಕ್ಷಿ. ದೌರ್ಜನ್ಯದ ದಾಖಲೀಕರಣದ ವಿಚಾರ ಬಂದಾಗ ಮಾಧ್ಯಮಗಳು ಅವುಗಳನ್ನು ದಾಖಲಿಸುತ್ತಿರುವ ರೀತಿ, ವಿದ್ಯುನ್ಮಾನ ವೇದಿಕೆಯು ಅದಕ್ಕೆ ನೀಡುತ್ತಿರುವ ಋಣಾತ್ಮಕ ಪ್ರಚಾರವು ಭೀಭತ್ಸದ ಇನ್ನೊಂದು ನೆಲೆಯಾಗಿದೆ.
2. ಮಹಿಳಾ ಸಾಕ್ಷರತೆ: ಲಿಂಗಾನುಪಾತದ ನಿದರ್ಶನವು ಮಹಿಳಾ ಪ್ರಗತಿಯ ಸಂಕಷ್ಟವನ್ನು ಪ್ರತಿನಿಧಿಸಿದರೆ ಮಹಿಳಾ ಸಾಕ್ಷರತೆಯು ಸಂತಸವನ್ನು ಪ್ರತಿನಿಧಿಸುತ್ತದೆ. ಶಿಕ್ಷಣ ಮಾನವ ಅಭಿವೃದ್ಧಿಯ ಪ್ರಾಥಮಿಕ ಸೂಚ್ಯಂಕಗಳಲ್ಲಿ ಒಂದು. ತನ್ನನ್ನು, ಕುಟುಂಬವನ್ನು, ಸಮಾಜವನ್ನು ಮುನ್ನಡೆಸಲು ಮಹಿಳೆಗೆ ಶಿಕ್ಷಣ ಅಗತ್ಯ ಎಂಬ ಅಂಶವನ್ನು ಮನಗಂಡ ಕರ್ನಾಟಕ ಸರ್ಕಾರವು ಆರಂಭದಿಂದಲೂ ಈ ವಿಷಯದತ್ತ ಗಮನ ಹರಿಸಿತ್ತಾದರೂ ಮರುನಾಮಕರಣದ ಆಸುಪಾಸಿನಲ್ಲಿ ಅಂದರೆ, 1971ರಲ್ಲಿ ಇದ್ದ ಮಹಿಳಾ ಸಾಕ್ಷರತೆಯ ಪ್ರಮಾಣ ಶೇ 21.97 ಮಾತ್ರ. ಕಳೆದ ಐವತ್ತು ವರ್ಷಗಳಲ್ಲಿ ಸರಾಸರಿ ಶೇಕಡ 10ರ ದರದಲ್ಲಿ ನಿರಂತರವಾದ ಪ್ರಗತಿಯನ್ನೇ ಕರ್ನಾಟಕವು ಸಾಧಿಸುತ್ತ ಬಂದಿದ್ದು, 2011ರ ಜನಗಣತಿಯು ಇದರ ಪ್ರಮಾಣವನ್ನು ಶೇ.65.46 ಎಂದು ದಾಖಲಿಸುತ್ತದೆ. ಅಂದರೆ ಹೆಚ್ಚು ಕಡಿಮೆ ಮೂರರಷ್ಟು ಸಾಧನೆಯನ್ನು ಕರ್ನಾಟಕವು ಈ ಕ್ಷೇತ್ರದಲ್ಲಿ ಮಾಡಿದೆ. ನಡೆಯಬೇಕಾದ ಹಾದಿ ಇನ್ನೂ ಇದೆ ಎಂಬುದು ನಿಜವಾದರೂ ನಾವು ಸಾಕಷ್ಟು ಮುಂದಕ್ಕೆ ನಡೆದಿದ್ದೇವೆ ಎಂಬುದನ್ನು ಮರೆಯುವಂತಿಲ್ಲ. ಈ ಅರ್ಥದಲ್ಲಿ ಇದು ನಿಜಕ್ಕೂ ಕರ್ನಾಟಕದ ಮಹಿಳಾ ಅಭಿವೃದ್ಧಿಯ ಒಂದು ಸಾಧನೆ.
ಮಹಿಳಾ ಸಾಕ್ಷರತೆಯ ಈ ಪ್ರಗತಿಯನ್ನು ಅನುಸರಿಸಿ ಔಪಚಾರಿಕ ಉದ್ಯೋಗ ವಲಯದಲ್ಲಿನ ಮಹಿಳೆಯರ ಇರುವಿಕೆಯೂ ಹೆಚ್ಚಾಗಿದೆಯಾದರೂ ಅದು ಎಲ್ಲ ಕ್ಷೇತ್ರಗಳಲ್ಲಿ ಸಮಾನವಾಗಿ ಹಂಚಿಕೆಯಾಗಿಲ್ಲ. ಈಗಲೂ ಉನ್ನತ ಹುದ್ದೆಗಳು, ಹೆಚ್ಚಿನ ವರಮಾನ ತರುವ ಉದ್ಯೋಗಗಳು, ಅಧಿಕಾರ ಕೆನೆಗಟ್ಟಿರುವ ಅಧಿಕಾರಶಾಹಿ ಸ್ಥಾನಗಳಲ್ಲಿ ಅವಳ ಇರುವಿಕೆ ಸಾಂಕೇತಿಕವಾದುದೇ ಆಗಿದೆ. ಜೊತೆಗೆ ಈ ಉದ್ಯೋಗಗಳು ಕೊಡಮಾಡುತ್ತಿರುವ ಆರ್ಥಿಕತೆಯು ಮಹಿಳಾ ಸಬಲೀಕರಣದ ಸಾಧನವಾಗಿದೆಯೇ ಎಂಬುದು ಮರುವಿಶ್ಲೇಷಣೆಗೆ ಒಳಪಡಬೇಕಾದ ಸಂಗತಿ.

ಹೀಗೆ ಪ್ರತಿಯೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ನಾವು ಗಮನಿಸುವುದಾದರೆ, ಅವುಗಳು ಸುಧಾರಿತ ಪ್ರಗತಿಯನ್ನು ತೋರುತ್ತವೆ. ಆದರೆ, ಪರಿಮಾಣಾತ್ಮಕ ಪ್ರಗತಿಯ ದಾಖಲೆಗಳನ್ನು ಗುಣಾತ್ಮಕ ವಿಶ್ಲೇಷಣೆಗೆ ಒಳಪಡಿಸುವುದಾದರೆ ಅದೊಂದು ಬಗೆಯ ಮಿಶ್ರಪ್ರಗತಿ ಎಂಬುದು ಅರಿವಾಗುತ್ತದೆ. ಹಾಗಾಗಿ ಕಳೆದ ಐವತ್ತು ವರ್ಷಗಳ ಮಹಿಳೆಯರ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳಲು ಅಂಕಿಅಂಶಗಳ ಜೊತೆಗೆ ಸಮಾಜೋ-ಸಾಂಸ್ಕೃತಿಕ ಪಲ್ಲಟಗಳನ್ನು ಇಟ್ಟು ನೋಡಬೇಕಾಗುತ್ತದೆ.
ಈಗಾಗಲೇ ಪ್ರಸ್ತಾಪಿಸಿದಂತೆ ನಾಮಕರಣೋತ್ತರ ಕರ್ನಾಟಕದಲ್ಲಿ ಮೊದಲ ಎರಡು ದಶಕಗಳು ಮಹಿಳಾ ಅಭಿವೃದ್ಧಿ ಪರಿಕಲ್ಪನೆಯು ಗಂಭೀರವಾಗಿ ಪರಿಗಣಿತವಾದ ಕಾಲವಾಗಿದ್ದು, ಅದರ ಯಶಸ್ಸು ಮಹಿಳಾ ಚಳವಳಿ ಮತ್ತು ಸರ್ಕಾರದ ಬದಲಾದ ಧೋರಣೆಗಳನ್ನು ಅನುಸರಿಸಿದ್ದಾಗಿದೆ. ಆದರೆ, 1990ರ ದಶಕದಲ್ಲಿ ಮೊದಲಿಟ್ಟ ಉದಾರೀಕರಣ ಪ್ರಕ್ರಿಯೆಯು ಮಾರುಕಟ್ಟೆ ಆರ್ಥಿಕತೆಗೆ ಅವಕಾಶ ಮಾಡಿಕೊಡುತ್ತಿದ್ದಂತೆ ಪರಿಸ್ಥಿತಿ ಬದಲಾಗತೊಡಗಿತು. ಕಲ್ಯಾಣವಾದಿ ಸರ್ಕಾರದ ವ್ಯಾಪ್ತಿಯು ಕುಗ್ಗುವುದರೊಂದಿಗೆ ಮಹಿಳಾ ಚಳವಳಿಗಳ ಸೋದರಿಕೆಯ ಮಂತ್ರವು ಕರಗತೊಡಗಿತು. ಮಾರುಕಟ್ಟೆ ಆರ್ಥಿಕತೆಯು ಮಹಿಳಾ ಅಭಿವೃದ್ಧಿಯನ್ನೂ ತನ್ನ ಹಿತಾಸಕ್ತಿಯ ಸರಕಾಗಿಸಿಕೊಂಡಿತು. ಸರಕು ಸಂಸ್ಕೃತಿಯ ಭಾಗವಾಗಿ ಮಹಿಳೆಯನ್ನು ಪಳಗಿಸುವ ದಿಕ್ಕಿನಲ್ಲಿ ಕಾರ್ಯಪ್ರವೃತ್ತವಾದ್ದರಿಂದ 1990ರ ದಶಕದ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು.
ಇದನ್ನೂ ಓದಿರಿ: ಅಸ್ಪೃಶ್ಯರು- ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?
80ರ ದಶಕದಲ್ಲಿ ಒಗ್ಗೂಡುವುದಕ್ಕಾಗಿ ಹಂಬಲಿಸುತ್ತಿದ್ದ ಮಹಿಳಾ ಚಳವಳಿಯು 90ರ ದಶಕದ ನಂತರ ವಿಭಜನೆ ಹಾದಿಯನ್ನು ತುಳಿಯಿತು. ಈ ವಿಭಜನೆಯನ್ನು ಆಗು ಮಾಡಿಸಿದ ಸಂಗತಿಗಳಲ್ಲಿ ಮುಖ್ಯವಾದವು ಎಂದರೆ, ಆರ್ಥಿಕ ಉದಾರೀಕರಣ ನೆರಳಲ್ಲಿ ಎನ್‌ಜಿಒಗಳ ಮೂಲಕ ಸಂಬಳಸಹಿತ ಹೋರಾಟವು ಗರಿಗೆದರಿದ್ದು, ಮಂಡಲ್ ಕಮಿಷನ್ ಚರ್ಚೆಯ ಸಂದರ್ಭದಲ್ಲಿ ಎಡ-ಬಲಗಳ ಬೆಂಬಲಕ್ಕಾಗಿ ಚಳವಳಿಗಳು ಸೀಳಾದುದು, ಮಹಿಳಾ ಮೀಸಲಾತಿಯ ರಾಜಕೀಯ ಆಸಕ್ತಿಯು ಪಕ್ಷರಾಜಕಾರಣದೊಳಗೆ ಕರಗಿಹೋದುದು, ಜಾಗತೀಕರಣದ ನಂತರ ತನ್ನದೇ ಆದ ಮಹತ್ವವನ್ನು ಪಡೆದುಕೊಂಡ ಭಾಷೆ, ಜಾತಿ, ಧರ್ಮ, ಪ್ರದೇಶ ಇತ್ಯಾದಿ `ಗುರುತು’ಗಳು ಮಹಿಳಾ ಗುರುತನ್ನು ಹಿಂದಿಕ್ಕಿದ್ದು ಇತ್ಯಾದಿಗಳು. ಇದೆಲ್ಲದರ ಪರಿಣಾಮವಾಗಿ ಕರ್ನಾಟಕದ ಸಾಮಾಜಿಕ ಪ್ರಜ್ಞೆಯ, ಸಾಕ್ಷಿಪ್ರಜ್ಞೆಯು ಇಪ್ಪತ್ತೊಂದನೆ ಶತಮಾನಕ್ಕೆ ಕಾಲಿಡುವ ಹೊತ್ತಿಗೆ ಹಿಂದಿನ ಇಪ್ಪತ್ತೈದು ವರ್ಷಗಳಲ್ಲಿ ಮೂಡಿದ್ದ ಲಿಂಗಜಾಗೃತಿಯು `ಸೀಮಿತ ಸಮುದಾಯ ಪ್ರಜ್ಞೆ’ಯ ಭಾಗವಾಗಿ ಸಂಕುಚಿತಗೊಂಡಿತು. ಹಾಗಾಗಿಯೇ ಈ ಶತಮಾನದ ಮೊದಲ ದಶಕಗಳನ್ನು ಕಳೆದ ಐವತ್ತು ವರ್ಷಗಳ ಜೊತೆಗಿಟ್ಟು ನೋಡುವಂತೆಯೇ ಪ್ರತ್ಯೇಕವಾಗಿ ನೋಡಬೇಕಾದ ಅಗತ್ಯವೂ ಇದೆ.
ಸ್ತ್ರೀವಾದವನ್ನು ಅದು ಆರಂಭಗೊಂಡ ದಿನದಿಂದಲೂ ಗಂಡು-ಹೆಣ್ಣು ಎಂದು ಮಾನವರನ್ನು ಇಬ್ಭಾಗವಾಗಿಸುವ ಸಿದ್ಧಾಂತ ಎಂಬ ಪೂರ್ವಗ್ರಹದಿಂದಲೇ ನೋಡಲಾಯಿತು. ಈ ಪೂರ್ವಗ್ರಹಕ್ಕೆ, ಸ್ತ್ರೀವಾದವು ತನ್ನ ನಡೆಯೂ ಮಾನವತಾವಾದವನ್ನು ಸೇರುವ ಹಾದಿಯೇ ಆಗಿದೆ ಎಂಬ ಉತ್ತರವನ್ನು ನೀಡುತ್ತಲೇ, `ಸೋದರಿಕೆ’ಯ ಪರಿಕಲ್ಪನೆಯ ಮೂಲಕ ಸ್ತ್ರೀಯರನ್ನೆಲ್ಲ ಒಂದು ಸಮುದಾಯವಾಗಿ ನಿರೂಪಿಸಿತು. ಆ ಗ್ರಹಿಕೆಯ ಆಧಾರದಿಂದಲೇ ದೇಶ, ಭಾಷೆ, ಧರ್ಮ, ಜನಾಂಗ ಇತ್ಯಾದಿಗಳನ್ನೆಲ್ಲ ಮೀರಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಚಿಂತಿಸುವ, ದೌರ್ಜನ್ಯ ನಡೆದಾಗ ಪ್ರತಿಭಟಿಸುವ, ಅಗತ್ಯವಿದ್ದಾಗ ನೆರವಿಗಾಗಿ ಕೈಚಾಚುವ ನೆಲೆಯಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳು ರೂಪುಗೊಂಡವು. ಕರ್ನಾಟಕದ ಸ್ತ್ರೀವಾದಿ ಪ್ರಜ್ಞೆಯು ಮುಖ್ಯವಾಗಿ, 1975ರ ನಂತರ ಇದರ ಭಾಗವಾಗಿ ವಿಕಸನಗೊಂಡಿತು. ಈ ವಿಕಸನವು ತನ್ನ ತಾರ್ಕಿಕ ಅಂತ್ಯವನ್ನು ತಲುಪಿ, ಸ್ತ್ರೀ ಸಮುದಾಯವು ಮಾನವ ಸಮುದಾಯದ ಅವಿಭಾಜ್ಯ ಮತ್ತು ಸಾವಯವ ಅಂಗವಾಗುವಲ್ಲಿಗೆ ಮಾನವಾಭಿವೃದ್ಧಿ ಪರಿಕಲ್ಪನೆಯು ಪರಿಪೂರ್ಣಗೊಂಡು, ಸಹಜವಾಗಿಯೇ ಸ್ತ್ರೀವಾದವು ಹಿನ್ನೆಲೆಗೆ ಸರಿಯಬೇಕಿತ್ತು. ಈ ತಾರ್ಕಿಕ ಅಂತ್ಯ ಸ್ತ್ರೀವಾದದ ಗುರಿ. ವಾಸ್ತವದಲ್ಲಿಯಾದರೆ, ಈ ತಾರ್ಕಿಕ ಅಂತ್ಯವನ್ನು ಕಾಣುವ ಕನಸು ಇದೀಗ ಭಗ್ನವಾಗುವ ಹಂತದಲ್ಲಿದೆ. ಇದಕ್ಕೆ ಮುಖ್ಯ ಕಾರಣ ಮಾರುಕಟ್ಟೆ ಆರ್ಥಿಕತೆ ಮತ್ತದರ ಸಾಂಸ್ಕೃತಿಕ ಹಸ್ತಕ್ಷೇಪ. ರಾಷ್ಟ್ರೀಯತೆಯ ಗೋಡೆಗಳು ಪ್ರಬಲವಾಗಿದ್ದ ಸಮಯದಲ್ಲಿ, ವಿದ್ಯುನ್ಮಾನ ತಂತ್ರಜ್ಞಾನದ ಕ್ರಾಂತಿಯಿನ್ನೂ ವ್ಯಾಪಿಸಿಲ್ಲದ ದಿನಮಾನದಲ್ಲಿ ಸಾಧಿತವಾಗಿದ್ದ ಸ್ತ್ರೀಪ್ರಜ್ಞೆಯ ಈ ವಿಕಸನವು, ಜಗತ್ತನ್ನು `ಜಾಗತಿಕ ಹಳ್ಳಿ’ಯಾಗಿಸಿದ ಉದಾರೀಕರಣದ ನಂತರ ಇಲ್ಲವಾಯಿತು ಎಂಬುದು ಐತಿಹಾಸಿಕ ವ್ಯಂಗ್ಯ.
1990ರ ದಶಕದಲ್ಲಿ ಆರಂಭಗೊಂಡ ಮಾರುಕಟ್ಟೆ ಆರ್ಥಿಕತೆಯು ಕರ್ನಾಟಕದ ಸಮಾಜೋ-ಆರ್ಥಿಕ ನೆಲೆಗಟ್ಟನ್ನೂ ದೊಡ್ಡ ಮಟ್ಟದಲ್ಲಿ ಬುಡಮೇಲಾಗಿಸಿದೆ. ಬಹುತೇಕ “ಕಲ್ಯಾಣವಾದಿ’’ ಸರ್ಕಾರದ ಸುಪರ್ದಿಯಲ್ಲಿದ್ದ ಆರೋಗ್ಯ, ಶಿಕ್ಷಣದಂತಹ ಮಾನವ ಅಭಿವೃದ್ಧಿಯ ಮೂಲಭೂತ ಕ್ಷೇತ್ರಗಳು ಖಾಸಗೀ ವಲಯದ ಆರ್ಥಿಕ ಉದ್ಯಮಗಳಾಗಿ ಬದಲಾದವು. ಮಹಿಳೆಯರ ಅಭಿವೃದ್ಧಿಯ ಮೂಲನೆಲೆಗಳು ಆದ ಈ ಎರಡೂ ಕೊಳ್ಳುವ ಸಾಮರ್ಥ್ಯವುಳ್ಳವರ ಸ್ವತ್ತಾಗಿ ಪರಿವರ್ತನೆಗೊಂಡವು. ಆ ಸಾಮರ್ಥ್ಯವುಳ್ಳ ಕುಟುಂಬಗಳು, ಸಮುದಾಯಗಳು ಅವುಗಳನ್ನು ದಕ್ಕಿಸಿಕೊಳ್ಳುತ್ತ ತಮ್ಮ ಸಾಮರ್ಥ್ಯವನ್ನು ಇನ್ನಷ್ಟು ಮತ್ತಷ್ಟು ಹಿಗ್ಗಿಸಿಕೊಳ್ಳತೊಡಗಿದವು. ಹಾಗೆ ಹಿಗ್ಗಿದ ತಮ್ಮ ಸಾಮರ್ಥ್ಯವನ್ನು ಆ ಕುಟುಂಬಗಳು, ಸಮುದಾಯಗಳು ಮುಂದಿನ ಹಂತದಲ್ಲಿ ತಮ್ಮ ಹೆಣ್ಣುಮಕ್ಕಳಿಗೆ ಕೊಡ ಮಾಡಿದವು. ಈ ಕೊಡ ಮಾಡುವಿಕೆಯ ಹಿಂದೆಯೂ ಲಿಂಗಜಾಗೃತಿ ಕೆಲಸ ಮಾಡಿದೆಯಾದರೂ ಅದು ‘ಸೀಮಿತ ಸಮುದಾಯ ಪ್ರಜ್ಞೆ’ಯದಾಗಿದೆ ಮಾತ್ರ. ಇದರ ಪರಿಣಾಮವಾಗಿ ಈ ಹೊತ್ತು ನಗರಗಳ, ಮೇಲುಜಾತಿಗಳ, ಮೇಲ್ ಮಧ್ಯಮವರ್ಗಗಳ ಹೆಣ್ಣುಮಕ್ಕಳು ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ, ವಿದೇಶಗಳಿಗೆ ತೆರಳಿ ಓದುವ ಅವಕಾಶ, ಮಾಧ್ಯಮ, ಐಟಿ-ಬಿಟಿ ಉದ್ಯೋಗ ಇತ್ಯಾದಿಗಳಲ್ಲಿ ಕಣ್ಗಾಣುವ ಪ್ರಮಾಣದಲ್ಲಿದ್ದಾರೆ. ಈ ಸಮುದಾಯ ಪ್ರಜ್ಞೆಯ ಭಾಗವಾಗಿ ದೊರಕಿದ, ವಿಸ್ತರಿಸಿದ, ಸವಲತ್ತನ್ನು ಆ ಸಮುದಾಯದ ಹೆಣ್ಣುಮಕ್ಕಳೂ ತಮ್ಮ “ದತ್ತ’’ ಅವಕಾಶವಾಗಿ, ಸಮಾನತೆಯಾಗಿ, ಸ್ವಾತಂತ್ರ್ಯವಾಗಿ ಪರಿಭಾವಿಸಿದ್ದಾರೆ. ಭಾರತದ ಸಿಲಿಕಾನ್ ಸಿಟಿ ಎನಿಸಿರುವ ಬೆಂಗಳೂರು ಹೆಣ್ಣುಮಕ್ಕಳ ಈ ಪ್ರಗತಿಗೆ ಸಾಕ್ಷಿಯಾಗಿದೆ. ಇದನ್ನು ಒಂದರ್ಥದಲ್ಲಿ ಪಿತೃಪ್ರಧಾನತೆಯೊಳಗಿನ ಮಹಿಳೆಯ ದೊಡ್ಡ ಜಿಗಿತ ಎಂದು ಪರಿಗಣಿಸಬಹುದು.
ಮಾರುಕಟ್ಟೆ ಅರ್ಥವ್ಯವಸ್ಥೆಯು ತಂದಿರುವ ಇನ್ನೊಂದು ಗಮನಾರ್ಹ ಬುಡಮೇಲು ಪ್ರಕ್ರಿಯೆ ಎಂದರೆ, ಮೌಲ್ಯಾಧಾರಿತವಾಗಿರಬೇಕಾದ ಧರ್ಮ ಮತ್ತು ಸಂಸ್ಕೃತಿಗಳನ್ನು ಆಚರಣಾ ಪ್ರಧಾನವಾಗಿಸಿ ತನ್ನ ಸರಕುಸಂಸ್ಕೃತಿಯ ಭಾಗವಾಗಿಸಿಕೊಂಡದ್ದು. ಆರಂಭಕ್ಕೆ ಇದು ಪ್ರಧಾನ ಸಂಸ್ಕೃತಿಗಳನ್ನು ಗುರಿಯಾಗಿಸಿಕೊಂಡದ್ದಾದರೂ ಎರಡನೇ ಹಂತದಲ್ಲಿ ನಮ್ಮ ಸಮಾಜದ ವೈವಿಧ್ಯತೆಯನ್ನು ಇದು ಒಳಗೊಳ್ಳುತ್ತಿದೆ. ಈ ಅಂಶವು ಮೊದಲಿನಿಂದಲೂ ಸಂಸ್ಕೃತಿ ವಕ್ತಾರಳಾಗಿ ನಿರ್ವಚನಗೊಂಡಿದ್ದ ಮಹಿಳೆಯನ್ನು ಸಂಸ್ಕೃತಿಯ ಉಪಭೋಗಿ ಆಗಿಸುವಲ್ಲಿ ಸಹಕಾರಿಯಾಗಿದೆ. ಹಾಗಾಗಿಯೇ ಧಾರ್ಮಿಕ ಯಾತ್ರೆಗಳಲ್ಲಿ, ಕಾರ್ಯಕ್ರಮಗಳಲ್ಲಿನ ಮಹಿಳೆಯರ ಉತ್ಸಾಹದ ಭಾಗವಹಿಸುವಿಕೆಯನ್ನು ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಹಿಂದೆಂದಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಕಾಣಬಹುದಾಗಿದೆ. ಈ ಬಗೆಯ ತಾತ್ವಿಕತೆ ಮತ್ತು ಜೀವನ ವಿಧಾನವನ್ನು ಪ್ರೋತ್ಸಾಹಿಸುವ ಸಂಘಟನೆಗಳಲ್ಲಿ ಕೂಡ ಮಹಿಳೆಯರ ಕ್ರಿಯಾಶೀಲತೆಯನ್ನು ದೊಡ್ಡಮಟ್ಟದಲ್ಲಿ ಕಾಣಬಹುದು. ಇದು ಒಂದು ಬಗೆಯಲ್ಲಿ ಸಾರ್ವಜನಿಕ ವಲಯದಲ್ಲಿನ ಮಹಿಳೆಯರ ಇರುವಿಕೆಯನ್ನು ಕಣ್ಗಾಣಿಸುತ್ತಿದೆ. ಈ ಇರುವಿಕೆ ಮತ್ತು ಕ್ರಿಯಾಶೀಲತೆಯೂ ಮಹಿಳೆಯು ಹೇಗೆ ಪಿತೃಪ್ರಧಾನ ಸಮಾಜದ ನಿಷ್ಠೆಯ ಕೆಲಸಗಾರಳಾಗಿ ನಿಲ್ಲಬಲ್ಲಳು ಎಂಬುದನ್ನು ತೋರಿಸುತ್ತದೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-1)
ವೈವಿಧ್ಯತೆಯಲ್ಲಿ ಭಾರತವು ನಕ್ಷತ್ರಗಳಿಂದ ತುಂಬಿರುವ ಆಕಾಶದಂತೆ. ಕರ್ನಾಟಕವು ಅದರ ಒಂದು ಕಿರುಮಾದರಿ(ಮಿನಿಯೇಚರ್). ಈ ವೈವಿಧ್ಯತೆಯನ್ನು ಒಳಗೊಂಡಂತೆಯೇ ಕರ್ನಾಟಕವು ಏಕೀಕರಣದ ಮೂಲಕ ತನ್ನ ಏಕತೆಯನ್ನು ರೂಪಿಸಿಕೊಂಡಿತು. ಅದನ್ನು ಇನ್ನಷ್ಟು ಅರ್ಥಪೂರ್ಣವಾಗಿಸುವ ಸಲುವಾಗಿಯೇ ಕರ್ನಾಟಕವೆಂಬ ಹೆಸರಿನ ಮರುನಾಮಕರಣವೂ ಘಟಿಸಿತು. ಆದರೆ, ಮಾರುಕಟ್ಟೆ ಅರ್ಥವ್ಯವಸ್ಥೆಯು `ಗುರುತು’ ರಾಜಕಾರಣವನ್ನು ಪೋಷಿಸುವ ಮೂಲಕ ಈ ವೈವಿಧ್ಯತೆಯನ್ನೇ ತನ್ನ ಸರಕಾಗಿಸಿಕೊಂಡಿತು. ಇದರ ಪರಿಣಾಮವಾಗಿ ದೇಶವು ವಸಾಹತುಶಾಹಿಯ ವಿರುದ್ಧ ಹೋರಾಡಲು ಕಟ್ಟಿಕೊಂಡಿದ್ದ ಏಕತೆಯ ಆಧುನಿಕ ಗುರುತು ಭಗ್ನವಾಗಿ ಸಾಂಪ್ರದಾಯಿಕ ಗುರುತುಗಳು ಮತ್ತೆ ತಲೆ ಎತ್ತಿದವು. ಇದರ ಒಂದು ರೂಪವನ್ನು ನಾವು ಮಂಡಲ್ ಕಮಿಷನ್ನಿನ ಸಂದರ್ಭದಲ್ಲಿ ನೋಡಬಹುದು. ಸಾಂಪ್ರದಾಯಿಕ ಸಮಾಜದ ಜಾತಿ ಗುರುತನ್ನು ಅಳಿಸುವಲ್ಲಿ ನೆರವಾಗುತ್ತದೆ ಎಂದು ಭಾವಿಸಿ ರೂಪಿಸಿಕೊಂಡಿದ್ದ ಮೀಸಲಾತಿಯು ಈ ಸಂದರ್ಭದಲ್ಲಿ ಜಾತಿ ಗುರುತನ್ನು ಎಚ್ಚರಗೊಳಿಸಿತು. ಅದರ ಜೊತೆಜೊತೆಗೆ ಆಧುನಿಕತೆ ಸಂದರ್ಭದಲ್ಲಿ ಕಸಿಗೊಂಡಿದ್ದ `ಸೋದರಿಕೆ’ಯ ಗುರುತು ಭಗ್ನಗೊಂಡು, ಮಹಿಳೆಯರು ಮತ್ತೆ ತಮ್ಮ ಸಾಂಪ್ರದಾಯಿಕ ಗುರುತುಗಳೊಂದಿಗೆ ರಾಜಿ ಮಾಡಿಕೊಂಡರು. ದಲಿತ -ಬ್ರಾಹ್ಮಣ ಎಂಬ ಎರಡು ಧ್ರುವಗಳೊಂದಿಗೆ ಆರಂಭಗೊಂಡ ಈ ರಾಜಿ ಪ್ರಕ್ರಿಯೆಯು ಇಂದು ಎಲ್ಲ ಸಮುದಾಯವನ್ನೂ ಆವರಿಸಿದೆ. ಈ ಸೀಮಿತ ಸಮುದಾಯ ಪ್ರಜ್ಞೆಯ ಒಳಗೇ ಇಂದು ಸ್ತ್ರೀಪ್ರಜ್ಞೆಯು ನಿರ್ವಹಣೆಗೊಳ್ಳುತ್ತಿದೆ.
(‘ಈದಿನ ಡಾಟ್ ಕಾಮ್’ ಹೊರ ತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಡಾ. ಎಂ. ಉಷಾ
ಲೇಖಕಿ, ಅನುವಾದಕಿ ಎಂ. ಉಷಾ ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. ಕನ್ನಡದಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್‌ಡಿ ಪದವಿ ಪಡೆದು ಹಂಪಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯ, ವಿಮರ್ಶೆ, ಆಧುನಿಕ ಪೂರ್ವ ಸಾಹಿತ್ಯ ಮತ್ತು ಇತಿಹಾಸ ವಿಷಯದಲ್ಲಿ ಆಸಕ್ತಿ. ಅನೇಕ ಗ್ರಂಥಗಳನ್ನು ಅನುವಾದಿಸಿದ್ದಾರೆ. ‘ಪತ್ರಿಕೆ ಮತ್ತು ಮಹಿಳೆ, ಭಾರತೀಯ ಸ್ತ್ರೀವಾದ ಮತ್ತು ಸಂಸ್ಕೃತಿ ಚಿಂತನೆ, ಮಹಿಳೆ ಮತ್ತು ಜಾತಿ, ಮಹಿಳಾ ಅಧ್ಯಯನ, ಆಧುನಿಕ ಮಹಿಳಾ ಸಾಹಿತ್ಯ, ಭಾಷಾಂತರ ಮತ್ತು ಲಿಂಗ ರಾಜಕಾರಣ, ಭಾಷಾಂತರ ಪ್ರವೇಶಿಕೆ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರ ‘ಬಾಳಬಟ್ಟೆ’ ಪುಸ್ತಕಕ್ಕೆ ವಿಜಯ ದಬ್ಬೆ ಸಾಹಿತ್ಯ ಪ್ರಶಸ್ತಿ ದೊರಕಿದೆ.




