ಒಂದು ಮುಖ್ಯ ಸಂಗತಿಯನ್ನು ಸ್ಪಷ್ಟಪಡಿಸಿಯೇ ಆರಂಭಿಸಬೇಕು. ಸೃಜನಶೀಲ ಎನ್ನುವ ಪರಿಕಲ್ಪನೆಯೇ ಮೂಲದಲ್ಲಿ ಸಂಕೀರ್ಣ, ಅದನ್ನು ಬಳಕೆಗೆ ತಂದ, ಅದನ್ನು ಸ್ಥಾಪಿಸಿರುವ ಪರಿ ಇನ್ನೂ ಸಂಕೀರ್ಣ. ಸೃಜನಶೀಲ ಎನ್ನುವುದು ಯಾವುದನ್ನು ಸೃಜನೇತರ ಎಂದು ಕರೆಯಲಾಗುತ್ತದೆಯೋ ಅದಕ್ಕೆ ತದ್ವಿರುದ್ಧ ಎನ್ನುವಂತೆ ಸ್ಥಾಪಿತವಾಗಿರುವುದು ಒಂದು ದುರಂತ ಬೆಳವಣಿಗೆ ಎಂದೇ ಹೇಳಬೇಕು. ಪರಿಕಲ್ಪನೆಗಳು ಆರಂಭವಾದಾಗ ಇಂಥ ಧೋರಣೆಗಳು ಇರುವುದಿಲ್ಲ. ಅವು ಬಳಕೆಯಾಗುತ್ತಾ ಹೋದಂತೆ ಕೆಲವೊಮ್ಮೆ ಅವುಗಳಿಗೆ ಬೇಲಿಯನ್ನು ಹಾಕಿಬಿಡಲಾಗುತ್ತದೆ, ಅವುಗಳಿಗೆ ಹೀನಾರ್ಥವೂ ಅಂಟಿಬಿಡುತ್ತದೆ. ಅನೇಕ ಬಾರಿ ಸೃಜನೇತರ ಎನ್ನುವುದನ್ನು ಹೀಗೆ ಬಳಸಲಾಗುತ್ತದೆ. ಕಾರಣವೇ ಇಲ್ಲದೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಮುದಾಯಗಳನ್ನು ತಿದ್ದಿ ಬೆಳೆಸುವ ವಿಮರ್ಶೆ ಮತ್ತು ತಾತ್ವಿಕ ಬರಹಗಳು ಎರಡನೆ ದರ್ಜೆ ಪ್ರಜೆಗಳ ಅವಮಾನ ಮತ್ತು ತಿರಸ್ಕಾರವನ್ನು ಎದುರಿಸಬೇಕಾಗುತ್ತದೆ. ಸಮುದಾಯವನ್ನು ಸಮೃದ್ಧಗೊಳಿಸುವಲ್ಲಿ ಸೃಜನಶೀಲ ಮತ್ತು ಸೃಜನೇತರ ಬರಹಗಳ ಪಾತ್ರ ಮತ್ತು ಮಹತ್ವ ಒಂದೇ ಎನ್ನುವ ಕಾರಣಕ್ಕೆ ಈ ಮಾತನ್ನು ಹೇಳಬೇಕಾಯಿತು.
ಈ ಶ್ರೇಣೀಕರಣ ಒಂದು ತೊಡಕಾದರೆ, ಮಹಿಳೆಯರ ಮಟ್ಟಿಗೆ ಅವರ ಸೃಜನಶೀಲ ಸಾಹಿತ್ಯವನ್ನೂ ಎರಡನೆಯ ದರ್ಜೆಯದು ಎಂದು ನೋಡುತ್ತಾ ಬಂದಿದ್ದೂ ಇನ್ನೊಂದು ವಿಪರ್ಯಾಸ ಎಂದೇ ಹೇಳಬೇಕು. ಹಾಗೆಯೇ ಮಹಿಳೆಯರ ಸೃಜನಶೀಲ ಬರಹಗಳು ಕಳೆದು ಐವತ್ತು ವರ್ಷಗಳಲ್ಲಿ ತಳೆದ ಸ್ಥಿತ್ಯಂತರಗಳ ಬಗ್ಗೆ ಮಾತನಾಡುವುದಕ್ಕೂ ಮಹಿಳಾ ಸಂಕಥನದ ಬೆಳವಣಿಗೆಗಳಿಗೂ ಅವಿನಾ ಸಂಬಂಧವಿದೆ. ಅದನ್ನು ಬೇರೆ ಬೇರೆಯಾಗಿ ನೋಡುವುದು ಸಾಧ್ಯವಿಲ್ಲ, ಅಗತ್ಯವೂ ಇಲ್ಲ. ಹೀಗಾಗಿ ಮಹಿಳಾ ಸಾಹಿತ್ಯವನ್ನು ಕುರಿತ ಚರ್ಚೆಯು ಆಕೆ ನಡೆಸುತ್ತಾ ಬಂದಿರುವ ಎಲ್ಲ ಆಯಾಮಗಳನ್ನು ಒಳಗೊಳ್ಳುವುದು ಅನಿವಾರ್ಯ. ಇದನ್ನು ಬೇಕಾದರೆ ಮಹಿಳಾ ಮೀಮಾಂಸೆಯ ವಿಶಿಷ್ಟ ಲಕ್ಷಣ ಎಂದೂ ಕರೆಯಬಹುದು.
ಕಳೆದೈದು ದಶಕಗಳ ಮಹಿಳಾ ಸಾಹಿತ್ಯದ ಹೆಜ್ಜೆ ಗುರುತುಗಳನ್ನು ಅವುಗಳ ಆಶಯಗಳನ್ನು ಆಧರಿಸಿ ಗಮನಿಸಬಹುದು. ಇದನ್ನು ಎರಡು ಮುಖ್ಯ ನೆಲೆಗಳಲ್ಲಿ ಗುರುತಿಸಬೇಕು. ಒಂದು, ಲೇಖಕಿಯರ ಸೃಜನಶೀಲ ಪ್ರಯತ್ನಗಳ ತಾತ್ವಿಕತೆಗಳ ಗುರುತಿಸುವಿಕೆ, ಮತ್ತೊಂದು ಆ ಸೃಜನಶೀಲತೆಗೆ ದೊರೆತ ಪ್ರತಿಕ್ರಿಯೆ. ಹೆಣ್ಣಿನ ಅಭಿವ್ಯಕ್ತಿಯನ್ನು ಕುರಿತ ಲೋಕದ ಧೋರಣೆಯೇ ಗಂಡಾಳಿಕೆಯ ಮೂಲದ್ದಾದ್ದರಿಂದ ಇವುಗಳ ಪರಿಣಾಮವು ಲೇಖಕಿಯರ ಬರಹಗಳ ಸ್ವರೂಪ ಮತ್ತು ಬೆಳವಣಿಗೆಯಲ್ಲಿ ಪ್ರಭಾವಶಾಲಿ ಪಾತ್ರವನ್ನು ವಹಿಸುತ್ತದೆ.
ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-1)
ಸ್ಥೂಲ ತಾತ್ವಿಕ ಆವರಣವೊಂದನ್ನು ಕಟ್ಟಿಕೊಳ್ಳುವ ದೃಷ್ಟಿಯಿಂದ ಈ ಐದು ದಶಕಗಳ ಮಹಿಳಾ ಸೃಜನಶೀಲತೆಯನ್ನು ಸ್ವಪ್ರಜ್ಞೆಯಿಂದ ಸ್ವಾಯತ್ತ ಪ್ರಜ್ಞೆಯ ಕಡೆಗಿನ ಪ್ರಯಾಣ ಎಂದು ನೋಡಬಹುದು. ಇದನ್ನು ಸ್ವಗತದಿಂದ ಲೋಕ ಸಂವಾದದ ಕಡೆಗಿನ ಚಲನೆ ಎಂದೂ ಕರೆಯಬಹುದು. ಕಳೆದ ಲೋಕಪ್ರತಿಮೆಯಿಂದ ಸ್ವಪ್ರತಿಮೆಯ ಕಡೆಗಿನ ಹೊರಳುವಿಕೆ ಎಂದು ಸ್ಥೂಲವಾಗಿ ಗುರುತಿಸಬಹುದು. ಲೋಕದ ಕಣ್ಣಿನಿಂದಲೇ ತಮ್ಮನ್ನು ನೋಡಿಕೊಳ್ಳುವುದು ಅಭ್ಯಾಸವಾಗಿದ್ದ ಹೆಣ್ಣು ಮಕ್ಕಳಿಗೆ ಲೋಕದ ಪೊರೆ ಹರಿದುಕೊಂಡು ತಮ್ಮನ್ನು ತಾವೇ ನಿಚ್ಚಳವಾಗಿ ನೋಡಿಕೊಳ್ಳುವ ಮಹತ್ವದ ಘಟ್ಟವನ್ನು, ಆ ಘಟ್ಟದ ವಿವಿಧ ಮಜಲುಗಳನ್ನು ಈ ಕಾಲಾವಧಿಯಲ್ಲಿ ನೋಡಬಹುದು. ನಾನಿದನ್ನು ಲಿಂಗರಾಜಕಾರಣವನ್ನು ಅದರ ಮೂರ್ತ ಅಮೂರ್ತ ಕಾರ್ಯತಂತ್ರಗಳನ್ನು ಹೆಣ್ಣಿನ ಸೃಜನಶೀಲತೆ ಎದುರಿಸಿದ ಹೆಜ್ಜೆಗುರುತುಗಳಾಗಿ ನೋಡುವುದೂ ಸಾಧ್ಯ ಮತ್ತು ಅದು ಈ ಸಂದರ್ಭದಲ್ಲಿ ಮುಖ್ಯ ಎಂದೂ ತಿಳಿದಿದ್ದೇನೆ.
ಇವುಗಳನ್ನು ಹೀಗೆ ಸರಳ ರೇಖೆಯ ಪ್ರಯಾಣವಾಗಿ ಗುರುತಿಸಲು ಸಾಧ್ಯವಿದೆ ಎಂದೇನೂ ನಾನು ತಿಳಿದಿಲ್ಲ. ಆದರೆ ಚರಿತ್ರೆಯಲ್ಲಿ ಕೆಲವು ಮೈಲಿಗಲ್ಲುಗಳನ್ನು ಹೀಗೆ ಗುರುತಿಸಿಕೊಂಡರೆ ಪ್ರಯಾಣದ ಇತರ ಅಂಶಗಳನ್ನು ಗ್ರಹಿಸುವುದಕ್ಕೆ ಅನುಕೂಲವಾಗುತ್ತದೆ.

ಎಪ್ಪತ್ತರ ದಶಕವೆಂದರೆ, ಅದು ಭಾರತಕ್ಕೆ ಭಾರತವೇ ತನ್ನನ್ನು ಹೊಸದಾಗಿ ಕಟ್ಟಿಕೊಳ್ಳಲು ಸನ್ನದ್ಧವಾಗುತ್ತಿದ್ದ ಕಾಲ ಎನ್ನಬೇಕು. ಸ್ವಾತಂತ್ರ್ಯೋತ್ತರ ಭಾರತವು ತನ್ನ ಸವಾಲುಗಳನ್ನು ನವೋದಯದ ಆದರ್ಶವಾದಿ, ಉದಾರವಾದಿ ನೆಲೆಗಳಿಂದ ಬಿಡಿಸಿಕೊಂಡು ಸುಡು ವಾಸ್ತವವನ್ನು ದಿಟ್ಟವಾಗಿ ನೋಡಲು ಹವಣಿಸಿದ ಕಾಲ. ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಭಾರತೀಯ ಸಮುದಾಯದ ಬಿಕ್ಕಟ್ಟುಗಳನ್ನು ಅದರಲ್ಲೂ ಮುಖ್ಯವಾಗಿ ಜಾತಿ ಮತ್ತು ಲಿಂಗತ್ವದ ಪ್ರಶ್ನೆಗಳು ಅವುಗಳ ನಿಜರೂಪದಲ್ಲಿ ಹೇಗೆ ಕಾರ್ಯಪ್ರವೃತ್ತವಾಗಿವೆ ಎನ್ನುವುದನ್ನು ಎಲ್ಲ ಆಯಾಮಗಳಲ್ಲಿ ಅರ್ಥಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಯಿತು.
ಅರವತ್ತರ ದಶಕದ ಮಧ್ಯಭಾಗದಲ್ಲಿ ಪ್ರಕಟವಾದ ಎರಡು ಮುಖ್ಯ ಪಠ್ಯಗಳ ಚರ್ಚೆಯು ಈ ಅಂಶವನ್ನು ಚರ್ಚಿಸಲು ನೆರವಾಗುತ್ತದೆ. ಯು ಆರ್ ಅನಂತಮೂರ್ತಿಯವರ `ಸಂಸ್ಕಾರ’ ಮತ್ತು ಎಂ ಕೆ ಇಂದಿರಾ ಅವರ `ಫಣಿಯಮ್ಮ’. ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಪ್ರಕಟವಾದ ಈ ಕೃತಿಗಳು ಜಾತಿ ಮತ್ತು ಲಿಂಗತ್ವದ ಪ್ರಶ್ನೆಗಳನ್ನು ವಸ್ತುವಾಗಿ ಹೊಂದಿವೆ. ಜಾತಿ ವ್ಯವಸ್ಥೆಯು ಭಾರತೀಯ ಸಮುದಾಯವನ್ನೇ ಅಸಮ, ವಿಷಮ ನೆಲೆಗಳಲ್ಲಿ ಒಡೆದಿರುವ, ಮಾನವೀಯತೆಯ ಸ್ಪರ್ಶವೇ ಇಲ್ಲದ ಬರ್ಬರತೆಯಲ್ಲಿ ಮುಳುಗಿರುವ ಭಯಾನಕ ಸತ್ಯವನ್ನು `ಸಂಸ್ಕಾರ’ ಕಾಣಿಸಿದರೆ, `ಫಣಿಯಮ್ಮ’ ಹೆಣ್ಣನ್ನು ಬದುಕಿರುವಾಗಲೇ ಹೆಣದ ತಿರಸ್ಕಾರವನ್ನು ಅನುಭವಿಸುವ ವಿಧವೆಯ ಕಥೆಯನ್ನು ಹೇಳುತ್ತದೆ. ಈ ವಿಷದ ಬದುಕಿನಲ್ಲಿ ಫಣಿಯಮ್ಮ ಅಮೃತದಂತೆ ಬದುಕಿದಳು ಎನ್ನುವ ಆದರ್ಶವನ್ನು ಫಣಿಯಮ್ಮನ ಮೂಲಕ ಚಿತ್ರಿಸಲಾಗುತ್ತದೆ. ಈ ಅಂಶಕ್ಕೆ ಆಮೇಲೆ ಬರೋಣ. ಆದರೆ ಜ್ವಲಿಸುವ ಬೆಂಕಿಯಂತಹ ದಾಕ್ಷಾಯಣಿಯ ಪಾತ್ರ ಮಿಂಚಿನಂತೆ ಬಂದು ಹೋದರೂ ಹೆಣ್ಣಿನ ಸತ್ಯವನ್ನು ಕಪಾಳಕ್ಕೆ ಹೊಡೆದ ತಪರಾಕಿಯಂತೆ ಕೊಡುವುದರಲ್ಲಿ ಸೋಲುವುದಿಲ್ಲ. ಕಾನ್ಸಂಟ್ರೇಷನ್ ಕ್ಯಾಂಪ್‌ಗೂ ವಿಧವೆಯರ ಬದುಕಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಅಂಥ ಬದುಕಿನಲ್ಲೂ ಈಸಿ ಜೈಸುವ ಫಣಿಯಮ್ಮ ಹೆಣ್ಣಿನ ಧೀಶಕ್ತಿಯ ಪ್ರತೀಕವಾಗುವಂತೆಯೇ, ಇದನ್ನೇ ನಾವು ಮಾಡುತ್ತಾ ಹೋಗುವುದೆಂದರೆ ಗಂಡಾಳಿಕೆಯನ್ನೇ ಬಲಪಡಿಸಿದಂತೆ ಅಲ್ಲವೆ ಎನ್ನುವ ಪ್ರಶ್ನೆಯೂ ನಮಗೆ ಎದುರಾಗುತ್ತದೆ. ಕಾದಂಬರಿಯೇ ಕೊನೆಯಲ್ಲಿ ಆಕೆಯನ್ನು ದೇವತೆಯಂತೆ ಜನ ಪರಿಗಣಿಸುತ್ತಿದ್ದರು ಎನ್ನುವ ವರ್ಣನೆಯನ್ನು ಬೇರೆ ಕೊಡುತ್ತದೆ. ಆದರೆ ಬದುಕಿಗೆ ಬೆನ್ನು ತಿರುಗಿಸಲು ಒಪ್ಪದ ಹೆಣ್ಣಿನ ಮನೋಬಲವನ್ನು, ಏನೆಂಥ ಬಿಕ್ಕಟ್ಟುಗಳನ್ನು ಏಕಾಂಗಿಯಾಗಿಯೇ ಹೋರಾಡಿ ಗೆಲ್ಲುವ ಹೆಣ್ಣಿನ ಮೂಲಶಕ್ತಿಯನ್ನು ಇದು ಘನವಾಗಿಯೇ ಹೇಳುತ್ತದೆ. ಇದಕ್ಕೆ ವಿರುದ್ಧವೆಂಬಂತೆ ಕಾಣುವ ದಾಕ್ಷಾಯಣಿ ದೇಹಕಾಮದ ತನ್ನ ಹಕ್ಕನ್ನು ನಿರ್ಭೀತಿ, ನಿಸ್ಸಂಕೋಚವಾಗಿ ಎತ್ತಿ ಹಿಡಿಯುತ್ತಾಳೆ.
ದಾಕ್ಷಾಯಣಿ ಮತ್ತು ಫಣಿಯಮ್ಮ ಸ್ತ್ರೀಶಕ್ತಿಯ ಎರಡು ಘನ ಮಾದರಿಗಳು. ಆದರೆ ಗಂಡಾಳಿಕೆ ಒಪ್ಪಿ ಕೊಂಡಾಡುವುದು ಮಾತ್ರ ಫಣಿಯಮ್ಮನ ಮಾದರಿಯನ್ನು. ಇದನ್ನು ಅವಳ ಧೀಶಕ್ತಿಯ ಪ್ರತೀಕದಂತೆ ಅದು ನೋಡುವುದಿಲ್ಲ, ಅದು ಅವಳಿಗೊಡ್ಡಿದ ಕರಾರಿನ ಪೂರೈಕೆ ಎನ್ನುವಂತೆ ನೋಡುತ್ತದೆ. ಫಣಿಯಮ್ಮನನ್ನು ಮೆಚ್ಚಿಕೊಳ್ಳುತ್ತಲೇ ನಾವು ವಹಿಸಬೇಕಾದ ಎಚ್ಚರ ಇದು. ದಾಕ್ಷಾಯಣಿಯ ಬಂಡಾಯವನ್ನು ಕ್ವಚಿತ್ತಾಗಿ ಗ್ರಹಿಸುವ, ತಾತ್ಕಾಲಿಕವಾದ, ಅಪವಾದದ ನೆಲೆಯಲ್ಲಿ ನೋಡುವ ಮೂಲಕವೇ ಹೆಣ್ಣಿನ ಪಠ್ಯವನ್ನು ಓದಬೇಕಾದ, ಬೆಲೆಗಟ್ಟಬಹುದಾದ ವಿನ್ಯಾಸವನ್ನೂ ನಮಗೆ ಕಟ್ಟಿಕೊಡಲಾಯಿತು. ಈ ಮೂಲಕ ಹೆಣ್ಣಿನ ಪಠ್ಯಗಳ ಸಾಂಸ್ಕೃತಿಕವಾದ, ಸಾಮಾಜಿಕವಾದ ಮತ್ತು ಸೃಜನಶೀಲತೆಯೂ ಹೆಣ್ಣಿನ ಬಂಡಾಯದ ಹತ್ಯಾರವಾಗಬಹುದಾದ ಸಾಧ್ಯತೆಯನ್ನೇ ಮೊಟಕುಗೊಳಿಸಲಾಯಿತು. ಇದಕ್ಕೆ ತದ್ವಿರುದ್ಧ ಎಂಬಂತೆ ಸಂಸ್ಕಾರ ಕಾದಂಬರಿಯನ್ನು ಕುರಿತು ನಡೆದ ಕೊನೆಯೇ ಇಲ್ಲದಷ್ಟು ಚರ್ಚೆಗಳ ಅವಕಾಶ, ವ್ಯಾಪ್ತಿ, ಮಹತ್ವ ಎಲ್ಲವೂ ಇಂದಿರಾ ಅವರ ಫಣಿಯಮ್ಮ ಕಾದಂಬರಿಗೂ ಇತ್ತು. ಆದರೆ ಅದನ್ನು ರಿಯಾಯತಿಯ, ಮೀಸಲಾತಿಯ ಮೆಚ್ಚುಗೆಗೆ ಮಾತ್ರ ಸೀಮಿತಗೊಳಿಸಲಾಯಿತು. ಪ್ರೇಮಾ ಕಾರಂತರು ಇದನ್ನು ಸಿನೆಮಾ ಮಾಡಿದ್ದರಿಂದ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕವು ಎನ್ನುವುದನ್ನು ಬಿಟ್ಟರೆ, ಈ ಕೃತಿಯನ್ನು ಪಕ್ಕಕ್ಕೇ ಸರಿಸಲಾಯಿತು.
ಜಗತ್ತಿನ ಹಲವು ಭಾಷೆಗಳಿಗೆ ಸಂಸ್ಕಾರ ಅನುವಾದವಾಗಿ ಎರಿಕ್ ಎರಿಕ್ ಸನ್ ರಂತಹ ಮನೋವಿಜ್ಞಾನಿಯ ಅದ್ಭುತವಾದ ವಿಶ್ಲೇಷಣೆಗೂ ಒಳಗಾಯಿತು. ಇದರ ಬಗೆಗೆ ನಮಗೂ ಹೆಮ್ಮೆಯೇ. ಆದರೆ ಇಷ್ಟೇ ಮಹತ್ವದ ಕೃತಿ ಹತ್ತರಲ್ಲಿ ಹನ್ನೊಂದು ಎನ್ನುವಂತೆ, ಬಹಳವೆಂದರೆ, ಹೆಣ್ಣಿನ ಬಗೆಗಿನ ಕೃತಿಗಳು ಎಂದು ಹೇಳುವಾಗ ಹೆಸರಿಸಲೊಂದು ಕೃತಿ ಎನ್ನುವ ಮಟ್ಟಕ್ಕೆ ಮಾತ್ರ ಸೀಮಿತವಾಯಿತು. ಈ ಕೃತಿಯನ್ನು ಆ ಸಂದರ್ಭದಲ್ಲೇ ಮಹತ್ವದ ಕೃತಿ ಎಂದು ಚರ್ಚಿಸಿದ್ದರೆ, ಯಾವ ಅನುಮಾನವೂ ಇಲ್ಲದೆ ಕನ್ನಡ ಮಹಿಳಾ ಸಾಹಿತ್ಯದ ಸ್ವರೂಪ ಖಂಡಿತ ಇನ್ನೂ ಭಿನ್ನವಾಗಿರುತ್ತಿತ್ತು. ಇವರ ತಗ್ಗಿನ ಮನೆ ಸೀತೆ ಕೂಡ ಹೆಣ್ಣಿನ ಪ್ರಾಕೃತಿಕ ಹಕ್ಕಿನ ಪ್ರಶ್ನೆಗಳನ್ನು ಗಾಢವಾಗಿಯೇ ಎತ್ತುತ್ತದೆ. ಈ ಎರಡೂ ಬಹಳ ಜನಪ್ರಿಯ ಕಾದಂಬರಿಗಳು ಎನ್ನುವುದು ನಿಜ. ಆದರೆ ಇವುಗಳನ್ನು ಹೆಣ್ಣುಮಕ್ಕಳು ಓದಬೇಕಾದ ಕಾದಂಬರಿಗಳೆಂದೇ ಪ್ರಚಾರಮಾಡಲಾಯಿತೇ ಹೊರತು ಎಲ್ಲರೂ ಅದರಲ್ಲೂ ಗಂಡು ಓದಲೇ ಬೇಕಾದ ಕೃತಿಗಳು ಎನ್ನುವ ಹಾಗೆ ಚರ್ಚಿಸಲಿಲ್ಲ. ಈ ಕಾರಣಕ್ಕೋ ಏನೋ ಇಂದಿರಾ ನಂತರದ ದಿನಗಳಲ್ಲಿ ಬಹಳ ಸಾಮಾನ್ಯ ಎನ್ನಬಹುದಾದ, ಯೂಟರ್ನ್ ಎಂದು ಬೇಕಾದರೂ ಕರೆಯಬಹುದಾದ ಧಾರಾವಾಹಿಯಾಗಿ ಪ್ರಕಟವಾದ ಕಾದಂಬರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬರೆಯುತ್ತಾ ಹೋದರು. ಈ ಉದಾಹರಣೆಯನ್ನು ಒಟ್ಟೂ ಮಹಿಳಾ ಬರವಣಿಗೆಯ ಸ್ಥಿತಿಗತಿಗೆ ದಿಕ್ಸೂಚಿ ಎಂದೂ ಪರಿಗಣಿಸಬಹುದು.
ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-2)
ಇಂದಿರಾ ಅವರ `ತಗ್ಗಿನ ಮನೆ ಸೀತೆ’ ಮತ್ತು `ಫಣಿಯಮ್ಮ’ ಎರಡೂ ಕಾದಂಬರಿಗಳಲ್ಲಿ ಲೋಕ ಪ್ರತಿಮೆ ಮತ್ತು ಸ್ವಪ್ರತಿಮೆಯ ಎರಡೂ ಚಿತ್ರಗಳ ನಡುವಿನ ಅಗಾಧ ಕಂದರದ ಅರಿವು ಮತ್ತು ಸಂಘರ್ಷದ ಮೊದಲ ಹಂತ ನಮ್ಮ ಅರಿವಿಗೆ ಬರುತ್ತದೆ. ತಾನಿರುವುದು ತಗ್ಗಿನ ಮನೆಯಲ್ಲಿ ಎನ್ನುವ ಅರಿವೇ ಮುಖ್ಯವಾದುದು. ಕೃಷ್ಣನನ್ನು ಯಾಕಾಗಿ ಲೋಕ ಮೆಚ್ಚುತ್ತದೆ, ನನಗಂತೂ ಕೃಷ್ಣನಂತಹ ಗಂಡ ಬೇಡ ಎನ್ನುವಾಗ ಕೊಟ್ಟುದನ್ನು ಮಾತ್ರ ಪಡೆದು ಅಭ್ಯಾಸವಿರುವ ಹೆಣ್ಣು ತನಗೆ ಬೇಕಾದ್ದನ್ನು ಪಡೆಯುವ ಹಂಬಲದ ಮಾತುಗಳನ್ನು ಆಡುವುದನ್ನು ನಾವು ಗಮನಿಸುತ್ತೇವೆ. ಕಣ್ಣೆದುರಿಗಿದ್ದ ಫಣಿಯಮ್ಮನಂತಹ ಲೋಕ ಮೆಚ್ಚುವ ಪ್ರತಿಮೆಯ ಬಗ್ಗೆ ದಾಕ್ಷಾಯಣಿಗೆ ಯಾವ ಬಿಸಾತೂ ಇಲ್ಲ, ಆಸಕ್ತಿಯೂ ಇಲ್ಲ. ಅದನ್ನು ಮೀರಿಕೊಳ್ಳುತ್ತಿರುವುದರ ಬಗೆಗೆ ಪಾಪಪ್ರಜ್ಞೆಯೂ ಇಲ್ಲ. ಅವಳ ಎದುರಿಗೇ ಆಕೆಗೆ ತನ್ನ ಆಯ್ಕೆ ತನ್ನದು ಎಂದು ಹೇಳಿಕೊಳ್ಳಬಹುದಾದ ಸ್ಪಷ್ಟತೆ ಇದೆ. ಸಹಜವಾಗಿಯೇ ಈಕೆಯ ಪಾತ್ರ ಗಂಭೀರವಾದ ಚರ್ಚೆಗೆ ಒಳಗಾಗಬೇಕಾಗಿತ್ತು. ಆದರೆ ನಮ್ಮ ಸಾರಸ್ವತ ಲೋಕ ಮಾತ್ರ ಆರಿಸಿಕೊಂಡದ್ದು, ಮುನ್ನೆಲೆಗೆ ತಂದದ್ದು ತ್ರಿವೇಣಿಯವರ ಅಪಸ್ವರ, ಅಪಜಯದಂತಹ ಕಾದಂಬರಿಗಳನ್ನು.
ಗೆಜ್ಜೆಪೂಜೆಯಂತಹ ಇಂದಿರಾ ಅವರ ಕಾದಂಬರಿ ಬಲು ಜನಪ್ರಿಯವಾಯಿತು ನಿಜ. ಆದರೆ ಅದರ ಧ್ವನಿಯನ್ನು ಎತ್ತಿ ಹಿಡಿಯುವ ಮೂಲಕವಲ್ಲ, ಅದರ ವಾಚ್ಯಾರ್ಥವನ್ನೇ ವಿಜೃಂಭಿಸುವ ಮೂಲಕ. ಕೊನೆಗೂ ಹೆಣ್ಣಿನ ಲೋಕ ಪ್ರತಿಮೆಯನ್ನು ಸಾರಿ, ಅವಳ ಸ್ವಪ್ರತಿಮೆಯನ್ನು ಕುರಿತ ಹಂಬಲಕ್ಕೆ ಬಲುದೊಡ್ಡ ಅಪಾಯದ ಸೂಚನೆಗಳನ್ನು ನೀಡಿತು. ಅದರ ಸಿನೆಮಾ ಆವೃತ್ತಿಯ ಬಗೆಗೆ ನಾನು ಹೇಳುತ್ತಿದ್ದೇನೆ. ಹೆಣ್ಣಿನ ಪ್ರತಿರೋಧದ ಆತ್ಮವಿಶ್ವಾಸವನ್ನೇ ಕುಗ್ಗಿಸುವ ಪ್ರಯತ್ನವಾಯಿತು ಅದು. ಅದು ವಾಸ್ತವಕ್ಕೆ ಹಿಡಿದ ಕನ್ನಡಿ ನಿಜ, ಆದರೆ ಯಾವುದು ಗಂಡಾಳಿಕೆಯಲ್ಲಿ ಕಿಂಚಿತ್ತಾದರೂ ಪಾಪಪ್ರಜ್ಞೆಯನ್ನು ಮೂಡಿಸಬೇಕಿತ್ತೋ ಅದಕ್ಕೆ ವಿರುದ್ಧವಾಗಿ ತಾನು ಗಂಡಾಳಿಕೆಯ ಜೊತೆ ರಾಜಿ ಮಾಡಿಕೊಂಡು, ಬಾಯಿಮುಚ್ಚಿಕೊಂಡು ಬದುಕಿರುವುದೇ ವಾಸಿ ಎನ್ನಿಸುವ ಭಯ ಹುಟ್ಟಿಸುವಂತಹ ಈ ಪ್ರಯತ್ನಗಳು ಹೆಣ್ಣಿನ ಸೃಜನಶೀಲತೆಗೇ ಒಡ್ಡಿದ ಭಯೋತ್ಪಾದಕ ಸಂಗತಿಗಳಾಗಿ ಕಾಣಿಸುತ್ತವೆ. ಇದೇ ಸಂದರ್ಭದಲ್ಲಿ ತ್ರಿವೇಣಿಯವರ ‘ಅಪಸ್ವರ’, ‘ಅಪಜಯ’ದಂತಹ ಕಾದಂಬರಿಗಳು ಯಾವ ಬಗೆಯ ಪರಿಣಾಮವನ್ನು ಉಂಟು ಮಾಡಿರಬಹುದು ಎನ್ನುವುದನ್ನು ಊಹಿಸಿಕೊಳ್ಳುವುದು ಸುಲಭ. ಅವುಗಳನ್ನು ಜಯದ ಪತಾಕೆಗಳಾಗಿ ನಿರೂಪಿಸಬೇಕಾಗಿತ್ತು ಎನ್ನುವುದು ನನ್ನ ಅಭಿಪ್ರಾಯವಲ್ಲ. ಮಧ್ಯಮವರ್ಗದ ವಿದ್ಯಾವಂತ ಹೆಣ್ಣುಮಕ್ಕಳನ್ನು ಅದೆಷ್ಟು ಸರಾಗವಾಗಿ ಗಂಡಾಳಿಕೆ ತನ್ನ ನಿಯಂತ್ರಣಕ್ಕೆ ತಂದುಕೊಂಡುಬಿಟ್ಟಿತಲ್ಲ ಎನ್ನುವ ಅಂಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಯಾವ ಶಿಕ್ಷಣವು ಬಿಡುಗಡೆಯ ಹೆಬ್ಬಾಗಿಲಾಗಿ ಕಾಣುತ್ತಿತ್ತೋ ಅದನ್ನೇ ಅಪಜಯವೆಂದು ಗ್ರಹಿಸುವ ಮನೋವಿನ್ಯಾಸವನ್ನು ಮೂಡಿಸುವ ಮೂಲಕ ಗಂಡಾಳಿಕೆ ತನ್ನ ಕೈತಪ್ಪಿ ಹೋಗುತ್ತಿರುವ ಹೆಣ್ಣು ಪ್ರಜಾ ರಾಜ್ಯವನ್ನು ತನ್ನ ಹಿಡಿತಕ್ಕೆ ತಂದುಕೊಳ್ಳುವ ಅಮೂರ್ತ ಸಾಂಸ್ಕೃತಿಕ ಲಿಂಗರಾಜಕಾರಣದ ಕಾರ್ಯತಂತ್ರವಾಗಿಯೇ ನಾವಿದನ್ನು ನೋಡಬೇಕು.
ಮುಂದಿನ ತಲೆಮಾರಿನ ವೀಣಾ ಶಾಂತೇಶ್ವರ ಅವರ ಉದಾಹರಣೆ ಇದಕ್ಕಿಂತ ಭಿನ್ನವಾಗಿದೆ. ವೀಣಾ ಅವರ ಗಂಡಸರು ಕೃತಿ ‘ಹೊಸ ಹೆಂಗಸರು’ ಹೇಗಿರಬಹುದು ಎನ್ನುವುದರ ಝಲಕ್ ಅನ್ನು ತೀವ್ರವಾಗಿಯೇ ಪ್ರತಿಪಾದಿಸಿತು. ಹೆಣ್ಣಿನ ಒಳಲೋಕವನ್ನು ಯಾವ ಎಗ್ಗಿಲ್ಲದೆ ಇದು ಕಾಣಿಸಿತು. ಈ ಎರಡನೆಯ ಘಟ್ಟದಲ್ಲಿ ಹೆಣ್ಣು ತಾನು ದಾಟಬೇಕಾದ ಮೊದಲ ಕಂದರ ಯಾವುದು ಎನ್ನುವುದನ್ನು ಅರ್ಥಮಾಡಿಕೊಂಡ ಘಳಿಗೆ ಇದು. ಹಾಸ್ಟೆಲ್‌ನ ನಾಯಿಯ ಕಣ್ಣಲ್ಲೂ, ಹಾಸ್ಟೆಲ್‌ನ ಚಪರಾಸಿಯ ಕಣ್ಣಲ್ಲೂ, ವಿದ್ಯಾರ್ಥಿಯ ಕಣ್ಣಲ್ಲೂ ಕಾಣುವ ಅದೇ ಗಂಡಸಿನ ನೋಟವನ್ನು ಎದುರಿಸುವ ಮನಸ್ಥಿತಿಯನ್ನು ತಾನು ರೂಪಿಸಿಕೊಳ್ಳದ ಹೊರತು ತನಗೆ ಮುಕ್ತಿಯಿಲ್ಲ ಎಂದು ಹೆಣ್ಣು ಅರ್ಥಮಾಡಿಕೊಂಡದ್ದು, ಅದಕ್ಕೆ ಆಕೆ ಅತಿ ಎನ್ನಿಸುವ ಹಾಗೆ ಪ್ರತಿಕ್ರಿಯಿಸಿದ್ದು ತೀರ ಸಹಜವೇ ಆಗಿತ್ತು. ಮದುವೆಯ ಹಂಗಿಲ್ಲದೆ ತಾಯಿಯಾಗಬೇಕೆಂದು ಹಂಬಲಿಸುವ ಹೆಣ್ಣು ಲೋಕದ ಕಣ್ಣಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿ ಕಂಡಳು. ಇಕ್ರಲಾ ವದೀರ್ಲಾ ಕವಿತೆಯಲ್ಲಿ ಕಾಣುವ ಆಕ್ರೋಶವೇ ಇಲ್ಲೂ ಕಾಣುವುದು. ಕಲಾತ್ಮಕತೆಯ ದೃಷ್ಟಿಯಿಂದಲೂ ಇದು ಕನ್ನಡದ ಅತ್ಯುತ್ತಮ ಕೃತಿ. ಇವರ ಕೊನೆಯ ದಾರಿ, ಬಿಡುಗಡೆ ಮೊದಲಾದ ಕತೆಗಳು ಲಿಂಗರಾಜಕಾರಣವನ್ನು ಎದುರಿಸುವ ದಾರಿಗಳ ಶೋಧವೇ ಆಗಿದ್ದವು. ಕೊನೆಯ ದಾರಿ ಕತೆಯಂತೂ ಅದರ ಬಿಗಿಯಾದ ಭಾಷೆ, ಆರ್ದ್ರವಾದ ಆದರೆ ಪ್ರಖರವಾದ ಸಂವೇದನೆಯ ದೃಷ್ಟಿಯಿಂದ ಕನ್ನಡದ ಅತ್ಯುತ್ತಮ ಕತೆಗಳ ಸಾಲಿಗೆ ಸೇರುತ್ತದೆ. ಬಿಡುಗಡೆ ಕತೆ ಮತ್ತು ಅಪಜಯ ಕಾದಂಬರಿಗಳನ್ನು ಅಕ್ಕಪಕ್ಕದಲ್ಲಿಟ್ಟರೆ ತಲೆಮಾರುಗಳ ಅಂತರದಲ್ಲಿ ಬದಲಾದ ಹೆಣ್ಣಿನ ಚಿತ್ರವನ್ನು ನಮಗೆ ಕಟ್ಟಿಕೊಡುತ್ತವೆ.

ವೀಣಾ ಅವರ ನಾಯಕಿಯು ತ್ರಿವೇಣಿಯವರ ನಾಯಕಿಯಂತೆ ಸೋತ ಹೆಣ್ಣಾಗಿ ತನ್ನ ಬಗೆಗೆ ತೀರ್ಪು ಕೊಟ್ಟುಕೊಳ್ಳುವುದಿಲ್ಲ, ಅಥವಾ ಸೋತವಳು ಎನ್ನುವ ಲೋಕದ ತೀರ್ಪನ್ನು ಮರು ಮಾತಿಲ್ಲದೆ ಒಪ್ಪುವುದಿಲ್ಲ. ಆದರೆ ವೀಣಾ ಅವರ ಬರೆಹಗಳ ಬಗೆಗೆ ಇನಾಂದಾರ್ ಅವರು ಬರೆದ ವಿಮರ್ಶೆಯಾಗಲಿ, ಆಮೂರ್, ಶಾಂತಿನಾಥ ದೇಸಾಯಿ ಅವರು ಬರೆದ ವಿಮರ್ಶೆಯಾಗಲಿ ವೀಣಾ ಅವರ ಸೃಜನಶೀಲತೆಯನ್ನು ಅಲ್ಲಲ್ಲಿ, ಬೀಸು ಹೇಳಿಕೆಗಳಲ್ಲಿ ಮೆಚ್ಚಿಕೊಳ್ಳುತ್ತಲೇ ಅದು ‘ಸ್ತ್ರೀಮನದ’ ಅನಾವರಣ ಎನ್ನುವ ತೀರ್ಮಾನಕ್ಕೆ ಬಂದು ಬಿಟ್ಟರು. ಇದು ಸ್ತ್ರೀಮನದ ಅನಾವರಣವೇ ಎನ್ನುವುದು ನಿಜ. ಆದರೆ ಆ ಮನ ಈ ತನಕ ಗಂಡಿನ ಕಣ್ಣಲ್ಲಿ ಕಂಡ ಬಗೆಗೂ ಈಗ ಕಾಣಿಸುತ್ತಿರುವುದಕ್ಕೂ ಇರುವ ವ್ಯತ್ಯಾಸವನ್ನಾಗಲೀ, ಅದರ ಐತಿಹಾಸಿಕ ತುರ್ತನ್ನಾಗಲೀ, ಇದು ಇನ್ನು ಮುಂದೆ ತಮ್ಮ ಸಂವೇದನೆಯನ್ನೂ ಅನಿವಾರ್ಯವಾಗಿ ಬದಲಾಯಿಸಬೇಕಾದ ಅಗತ್ಯವನ್ನಾಗಲೀ ಗ್ರಹಿಸುವುದು ಇವರಿಗೆ ಸಾಧ್ಯವಾಗಲಿಲ್ಲ. ದೇಸಾಯಿ ಸ್ವತಃ ಅಪ್ಪಟ ಸ್ತೀಸಂವೇದನೆಯ ಲೇಖಕ, ಅವರಿಗೂ ಇದು ಸಾಧ್ಯವಾಗಲಿಲ್ಲ ಎನ್ನುವುದು ವಿಲಕ್ಷಣವಾದ ಸಂಗತಿಯಾಗಿ ಕಾಣುತ್ತದೆ. ಮುಂದೇ ವೀಣಾ ಅವರೇ ಇದನ್ನು ‘ತಿರುಗಿ ಹೋದಳು’ ಬಗೆಯ ಕತೆಯನ್ನು ಬರೆದರು. ಆದರೆ ಈ ಕತೆಯಾದರೂ ಸೋಲು ಎನ್ನುವುದಕ್ಕಿಂತ ಹೆಚ್ಚಾಗಿ ಇದು ಶೋಷಣೆ ಎನ್ನುವ ಸ್ಪಷ್ಟ ಅರಿವಿನಲ್ಲಿಯೇ ಮರಳಿ ಹೋಗುತ್ತಾಳೆ. ಆಧುನಿಕ ಹೆಣ್ಣಿನ ದ್ವಂದ್ವ, ಮೀರಿಕೊಳ್ಳಬೇಕಾದ ಮಿಥ್‌ಗಳು, ಒಂದು ಸಣ್ಣ ಗೆಲುವಿಗೂ ಕೊಡಬೇಕಾದ ಅಗಾಧವಾದ ಸಮಯ, ಶ್ರಮ ಮತ್ತು ಬದ್ಧತೆಯನ್ನು ಇವರ ಕತೆಗಳು ಸೂಕ್ಷ್ಮವಾಗಿ ಕಟ್ಟಿಕೊಡುತ್ತವೆ. ಬಿಡುಗಡೆ ಕತೆಯಲ್ಲಿ ಗಂಡನ ಸಾವಿನ ನಂತರ ನಾಯಕಿ ಹಾಲಿಗೆ ಸಕ್ಕರೆ ಬೆರೆಸಿಕೊಂಡು ಕುಡಿಯುವುದು ನಾಟಕೀಯವಾಗಿ ಕಾಣದೇ, ಏಕಕಾಲಕ್ಕೆ ಸಾಮಾಜಿಕ ನ್ಯಾಯವಾಗಿಯೂ, ಕವಿ ನ್ಯಾಯವಾಗಿಯೂ ಕಾಣಿಸುತ್ತದೆ.
ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-3)
ಹೆಣ್ಣಿನ ಸೃಜನಶೀಲತೆಯ ವಿಶಿಷ್ಟ ಗುಣ ಮತ್ತು ಲಕ್ಷಣವೆಂದರೆ ಅದು ಕಲೆಯ ಜೊತೆಗಿನ ಕರುಳಬಳ್ಳಿಯ ಸಂಬಂಧ ಮಾತ್ರವಾಗದೇ ಅದು ಸ್ವತಃ ತನ್ನನ್ನು ಅಂದರೆ ಹೆಣ್ಣನ್ನು ಶೋಧಿಸಿಕೊಳ್ಳುವ, ಅವಳ ಅಸ್ಮಿತೆ ಮತ್ತು ಅಸ್ತಿತ್ವವನ್ನು ಕಂಡುಕೊಳ್ಳುವ ಜೀವನ್ಮರಣದ ಸಂಗತಿಯೂ ಆಗಿರುತ್ತದೆ ಎನ್ನುವುದು. ಅಪರಂಪಾರವಾದ ಬದುಕು ಮತ್ತು ಲೋಕದ ಜೊತೆಗಿನ ಹೆಣ್ಣಿನ ಸಂಬಂಧವೇ ವಿಷಮ ಸ್ವರೂಪದ್ದು. ಈ ಎಲ್ಲವನ್ನೂ ಲೇಖಕಿಯರು ಅದರೆಲ್ಲ ಆಯಾಮಗಳಲ್ಲಿ ನೋಡುತ್ತಾ ಹೋದರು. ನಮ್ಮ ಅತ್ಯುತ್ತಮ ಲೇಖಕಿಯರ ಬರೆಹಗಳು ಆತ್ಮಗೀತಗಳೂ ಹೌದು, ಲೋಕಗೀತಗಳೂ ಹೌದು. ಅವುಗಳನ್ನು ಸೃಜನಶೀಲ ಕೃತಿಗಳೆಂದು ನೋಡುತ್ತಲೇ ಅವು ಸಾಮಾಜಿಕ ಮತ್ತು ಸಾಂಸ್ಕೃತಿಕ ನಿರೂಪಣೆಗಳೆಂದೂ ನೋಡಲೇಬೇಕು. ಇವುಗಳನ್ನು ಸಾಂದಕೃತಿಕ ಪಠ್ಯಗಳಾಗಿ ನೋಡಬೇಕೆನ್ನುವ ಮಹಿಳಾ ಸಂಕಥನದ ಹಕ್ಕೊತ್ತಾಯವನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ, ಮೌಲ್ಯವ್ಯವಸ್ಥೆಯಲ್ಲಿ ಪಲ್ಲಟಗಳಾಗುವುದಕ್ಕೆ ಇವುಗಳನ್ನು ಸಮುದಾಯ ಪಠ್ಯಗಳಾಗಿ ವಿಸ್ತರಿಸುವುದೇ ಅತ್ಯುತ್ತಮ ಮಾರ್ಗ.

ವೈದೇಹಿಯವರ ಬರವಣಿಗೆಗಳು ವೀಣಾ ಅವರ ಹಾದಿಗೆ ವಿರುದ್ಧ ದಿಕ್ಕಿನಲ್ಲಿ ತಮ್ಮ ಹುಡುಕಾಟವನ್ನು ಆರಂಭಿಸಿದವು. ಈ ಎರಡು ದಿಕ್ಕಿನ ಬರೆಹಗಳು ಕನ್ನಡದಲ್ಲಿನ ಮಹಿಳಾ ಸೃಜನಶೀಲತೆಯ ಎರಡು ಮುಖ್ಯ ಮಾದರಿಗಳೂ ಆದವು ಎನ್ನುವುದು ನಮಗೆ ಹೆಮ್ಮೆಯ ಸಂಗತಿಯಾಗಬೇಕು. ಬೌದ್ಧಿಕವಾಗಿ, ಪ್ರಜ್ಞಾಪೂರ್ವಕವಾಗಿ ಹೆಣ್ಣೂ ತನ್ನನ್ನು ಹೊಸದಾಗಿ ಕಟ್ಟಿಕೊಳ್ಳಬಹುದಾದ ಪರಿಗಳನ್ನು ವೀಣಾ ಅವರ ಬರೆಹಗಳು ಸೃಷ್ಟಿಸುತ್ತಾ ಹೋದರೆ, ವೈದೇಹಿ ಕಳೆದು ಹೋದ ಆತ್ಮವಿಶ್ವಾಸವನ್ನು ಹೆಣ್ಣು ತನ್ನ ಬೇರುಗಳನ್ನು ಬಲಪಡಿಸಿಕೊಳ್ಳುವ ಮೂಲಕವೇ ಸಾಧಿಸಬಹುದು ಎನ್ನುವ ನಂಬಿಕೆಯಿಂದ ಹೊರಟರು. ಮೂಲತಃ ಹೆಣ್ಣು ಘನಶಕ್ತಿಯವಳು, ಆದರೆ ಈ ಕುರಿತ ನಂಬಿಕೆಯನ್ನು ಹೆಣ್ಣು ಕಳೆದುಕೊಳ್ಳುವಂತೆ ಮಾಡಲಾಗಿದೆ. ಅದನ್ನು ಮರಳಿ ಪಡೆಯುವುದೇ ಹೆಣ್ಣು ತನ್ನನ್ನು ತಾನು ಬಲಪಡಿಸಿಕೊಳ್ಳುವ ಏಕೈಕ ವಿಧಾನ ಎನ್ನುವುದನ್ನು ತಮ್ಮ ನಿಡುಗಾಲದ ಬರೆಹದುದ್ದಕ್ಕೂ ವೈದೇಹಿಯವರು ಮಾಡುತ್ತಾ ಹೋದರು. ಏನೆಂಥ ಪರಿಸ್ಥಿತಿಯಲ್ಲೂ ಬದುಕಿಗೆ ಎದುರಾಗುವ ಹೆಣ್ಣಿನ ಶಕ್ತಿಮೂಲಗಳನ್ನು ಇವರ ಬರೆಹಗಳು ಕಾಣಿಸುತ್ತಲೇ ಇವೆ. ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು, ಗುಲಾಬಿ ಟಾಕೀಸು, ಕ್ರೌಂಚ ಪಕ್ಷಿಗಳು ಮೊದಲಾದ ಕಥೆಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳು. ಇವರ ಕಾವ್ಯವೂ ಅಷ್ಟೇ ಶಕ್ತಿಶಾಲಿಯಾದುದು. ಆತ ಆಕೆ ಮತ್ತು ಭಾಷೆ, ನೋಡಬಾರದು ಚೀಲದೊಳಗನು, ಶಿವನ ಮೀಸುವ ಹಾಡು, ಗೆಳತಿಯ ಗುಟ್ಟು ಮೊದಲಾದವು ಕನ್ನಡದ ಅತ್ಯುತ್ತಮ ಕವಿತೆಗಳ ಸಾಲಿನಲ್ಲಿ ನಿಲ್ಲುವಂತಹವು. ಒಂದು ಕಳ್ಳ ವೃತ್ತಾಂತದಂತಹ ಕತೆ ಹೆಣ್ಣು ಯಾವೆಲ್ಲ ರೀತಿ ಕ್ಷುದ್ರವಾಗಿ ಕಾಣುತ್ತಲೇ ಅವಳನ್ನು ಹಣಿದುಬಿಡಬಲ್ಲ ಸಂಗತಿಗಳು ಎನ್ನುವುದನ್ನು ಪರಿಣಾಮಕಾರಿಯಾಗಿ ತೋರಿಸುತ್ತದೆ.
ಇಲ್ಲಿ ಚರ್ಚಿಸುತ್ತಿರುವ ಯಾವುದೇ ಲೇಖಕಿಯರ ಬಗೆಗೂ ಹೇಳಲೇಬೇಕಾದ ಒಂದು ಮಾತೆಂದರೆ, ಈ ಕತೆಗಳು ಲೇಖಕಿಯರ ಅತ್ಯುತ್ತಮ ಬರೆಹಗಳು ಎನ್ನುವುದು ಮಾತ್ರವಲ್ಲ ಅವು ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗಳೂ ಆಗಿವೆ ಎನ್ನುವುದು. ಇವುಗಳನ್ನು ಅರಿವಿನ ಕೈದೀವಿಗೆಗಳು ಎಂದು ಕರೆಯಬೇಕಾಗುವುದು, ಅವು ಹೆಣ್ಣಿಗಿಂತ ಹೆಚ್ಚಾಗಿ ಗಂಡು ಮತ್ತು ಲೋಕಕ್ಕೆ ಕೈದೀವಿಗೆಗಳು ಎನ್ನುವ ಅಂಶವನ್ನು ಲೋಕ ಮನಃಪೂರ್ವಕವಾಗಿ ಒಪ್ಪಬೇಕು ಎನ್ನುವ ಹಕ್ಕೊತ್ತಾಯವನ್ನು ಪುನರುಕ್ತಿಯಲ್ಲಿ ಹೇಳುತ್ತಲೇ ಇರಬೇಕಾದ ದುಸ್ಥಿತಿಯೋ ಅನಿವಾರ್ಯತೆಯೋ ಇನ್ನೂ ಇದೆ ಎನ್ನುವುದಂತೂ ಖಾತ್ರಿ.
ಲೋಕ ಪ್ರತಿಮೆಯಿಂದ ಸ್ವಪ್ರತಿಮೆಯ ಕಡೆಗಿನ ಪ್ರಯಾಣದ ಮುಂದಿನ ಹೆಜ್ಜೆಯ ಗುರುತಾಗಿ ಸವಿತಾ ನಾಗಭೂಷಣ ಅವರನ್ನು ಪ್ರಾತಿನಿಧಿಕವಾಗಿ ತೆಗೆದುಕೊಳ್ಳಬಹುದು. ಇವರ ಕಾವ್ಯದಷ್ಟೇ ಮುಖ್ಯವಾದುದು `ಸ್ತ್ರೀಲೋಕ’ ಕಾದಂಬರಿ. ಸಾಹಿತ್ಯದಲ್ಲಿ ಹೆಣ್ಣು ಬಳಸುವ ಭಾಷೆ ಅದು ಅವಳದ್ದೇ ಸ್ವಂತ ಭಾಷೆಯನ್ನು ಕಟ್ಟಿಕೊಳ್ಳುವ ಪ್ರಯತ್ನ ಎನ್ನುವ ನನ್ನ ಸಿದ್ಧಾಂತಕ್ಕೆ ಕನ್ನಡದ ಎಲ್ಲ ಮಹತ್ವದ ಲೇಖಕಿಯರೂ ಪುರಾವೆ ಒದಗಿಸುತ್ತಾರೆ. (ಜಗತ್ತಿನ ಎಲ್ಲ ಲೇಖಕಿಯರೂ ಕೂಡ). ಸ್ತ್ರೀಲೋಕ ಕಾದಂಬರಿಯಲ್ಲಿ ಸವಿತಾ ಲೋಕ ಸಮಸ್ತವನ್ನೂ ಹೆಣ್ಣಿನ ಕಣ್ಣಿನಲ್ಲಿ ಪುನರ್ ನಿರ್ಮಿಸುತ್ತಾ ಹೋಗುತ್ತಾರೆ. ಯಾವ ಸ್ತ್ರೀಲೋಕದ ಅನುಭವಲೋಕವನ್ನೇ ಶ್ರೇಣೀಕರಣಕ್ಕೆ ಒಳಗು ಮಾಡಿ ಅದನ್ನು ಅಲ್ಲಗಳೆಯುತ್ತಾ, ತಿರಸ್ಕಾರದಿಂದ ನೋಡುತ್ತಾ ಅದನ್ನು ಎರಡನೆಯ ದರ್ಜೆಯ ಅನುಭವಲೋಕ ಎಂದು ತೀರ್ಪು ಕೊಟ್ಟಿದೆಯೋ ಅದನ್ನೇ ಇದು ತನ್ನ ನಿರೂಪಣೆಯ ಮೂಲಕವೇ ಅಲ್ಲಗಳೆಯುತ್ತದೆ ಮಾತ್ರವಲ್ಲ ಪ್ರಶ್ನಿಸಲಾಗದ ಮಾನವಾನುಭವದ ಘನತೆಯಲ್ಲಿ ಮತ್ತು ಮಹತ್ವದಲ್ಲಿ ಸ್ಥಾಪಿಸಿಬಿಡುತ್ತದೆ. ವೈದೇಹಿಯವರ ಕಾವ್ಯ ಮತ್ತು ತಿಳಿಸಾರು ಕವಿತೆಯ ಮತ್ತೊಂದು ಅವತಾರದಂತೆ ಕಾಣಿಸುವ ಈ ಕಾದಂಬರಿ ಹೆಣ್ಣುಮಕ್ಕಳ ದೈನಂದಿನ ಲಯದ ಮೂಲಕವೇ ಹೆಣ್ಣಿನ ಬದುಕು, ವ್ಯಕ್ತಿತ್ವ, ಸಂಸಾರದಲ್ಲಿನ ಅವಳ ನಿರ್ಣಾಯಕ ಪಾತ್ರ, ಎಲ್ಲ ಎಲ್ಲವನ್ನೂ ನಿಭಾಯಿಸಿಯೂ ಅವಳ ಪಾತ್ರ ಮತ್ತು ವ್ಯಕ್ತಿತ್ವವನ್ನು ಗಂಡು ಇದೆಲ್ಲ ಏನೂ ಅಲ್ಲ ಎನ್ನುವ ಧಿಮಾಕಿನಲ್ಲಿ ಕಡೆಗಣಿಸುವ ರೀತಿಯನ್ನು ಕಾದಂಬರಿ ಅದೆಷ್ಟು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ ಎಂದರೆ ಆರಂಭದಲ್ಲಿ ಗಂಡಿನ ಬಗೆಗೆ ಹುಟ್ಟುವ ಕೋಪ, ಆಕ್ರೋಶಗಳು ಕೊನೆಕೊನೆಗೆ ಅಯ್ಯೋ ಪಾಪದ ಗಂಡಸೇ ಎನ್ನುವ ಅನುಕಂಪಕ್ಕೆ ಪಾತ್ರವಾಗುವಷ್ಟು. ಗಂಡಿನ ಒಣ ಜಂಭವನ್ನು ಹೆಣ್ಣು ತನ್ನ ಅರಿವಿನ ವಿಶ್ವಾಸದಲ್ಲಿ ಗೆಲ್ಲುತ್ತಾಳೆ. ಗಂಡಿನ ಗೆಲುವಿನ ಮುಖವಾಡಗಳು ಹೆಣ್ಣಿನ ಅಂತರಂಗದಲ್ಲಿ ಕಳಚಿಬಿದ್ದದ್ದೇ ಹೆಣ್ಣು ತನ್ನ ಆತಂಕಗಳಿಂದ, ಅಕಾರಣ ಕೀಳರಿಮೆ ಮತ್ತು ಪಾಪಪ್ರಜ್ಞೆಯಿಂದ ಹೊರಬಂದು ನಿರಾಳವಾಗುವ ಸೂಚನೆಗಳು ಕಾದಂಬರಿಯ ಕೊನೆಯಲ್ಲಿ ಸಿಗುತ್ತವೆ. ಕನ್ನಡದ ಮಟ್ಟಿಗೆ ಇದೊಂದು ಅಪರೂಪದ ಮತ್ತು ಅತ್ಯುತ್ತಮ ಕಾದಂಬರಿ. ತನ್ನ ಶೈಲಿ, ತಂತ್ರ ಮತ್ತು ವಸ್ತುವನ್ನು ನಿಭಾಯಿಸುವ ಹೊಸತನದಿಂದ ತೀರ ಭಿನ್ನವಾಗಿ ನಿಲ್ಲುತ್ತದೆ ಇದು. ಯಾಕೋ ಕನ್ನಡ ಸಾರಸ್ವತ ಲೋಕ ಈ ಕಾದಂಬರಿಯನ್ನೂ ಅಂಚಿಗೆ ಸರಿಸಿಬಿಟ್ಟಿದೆ. ಇಲ್ಲಿನ ನಾಯಕಿಯರು ಸ್ತ್ರೀಲೋಕದ ನಾಯಕಿಯರೂ ಹೌದು ಎನ್ನುವುದನ್ನು ಅಬ್ಬರವಿಲ್ಲದೆ ಗಟ್ಟಿಯಾಗಿ ಈ ಕೃತಿ ಸ್ಥಾಪಿಸುತ್ತದೆ.

ಪ್ರತಿಭಾ ನಂದಕುಮಾರ್ ಅವರು ‘ಅಮೆಜಾನ್ ದಾಟಬಹುದು ಅನುದಿನದ ಅಂತರಗಂಗೆ ದಾಟುವುದು ಹೇಗೆ’ ಎನ್ನುವ ಸತ್ಯವನ್ನು ತನ್ನೆದುರಿಗೆ ಇರಿಸಿಕೊಳ್ಳುವ ಮೂಲಕ ಹೆಣ್ಣಿನ ಸೃಜನಶೀಲತೆಯನ್ನು ಇನ್ನೊಂದು ಮಜಲಿಗೆ ಹೊರಳಿಸಿದರು. ಇವರ ಬರಹಗಳು ಲೋಕಪ್ರತಿಮೆಯಿಂದ ಹೊರಬರುವಲ್ಲಿ ಸಾಕಷ್ಟು ಪ್ರಮಾಣದ ಯಶಸ್ಸು ಪಡೆದಿವೆ ಎಂದೇ ಹೇಳಬೇಕು. ನಾವು ಹುಡುಗಿಯರೇ ಹೀಗೆ ಎನ್ನುವ ಹಳಹಳಿಕೆಯಿಂದಲೇ ಆರಂಭವಾಯಿತು. ಹಳಹಳಿಕೆಯಂತೆ ಕಂಡರೂ ಇದು ಹೆಣ್ಣಿನ ಎದುರಿಗೆ ಅಪ್ರಿಯವಾದ ಸತ್ಯವನ್ನು ಇಟ್ಟಿತು. ನಾವಿರಬೇಕಾದ್ದು ಹೀಗಲ್ಲ ಎಂದರೆ, ಇರಬೇಕಾದ ಕ್ರಮ ಮತ್ತೊಂದಿದೆ ಎನ್ನುವುದರ ಕಡೆಗೆ ಗಮನ ಹರಿಸಿತು. ಅಲ್ಲಿಂದಾಚೆಗಿನ ಇವರ ಬರವಣಿಗೆ ಭಿನ್ನವಾಗುತ್ತಲೇ ಹೋಯಿತು. ಲೋಕಕ್ಕಿಂತ ಹೆಚ್ಚಾಗಿ ತನ್ನನ್ನು ಗೆಲ್ಲಬೇಕಾದ್ದು, ಸ್ವಬಂಧನಗಳಿಂದ ಹೊರಬೇಕಾದ ಅಗತ್ಯವನ್ನು ಇವರ ಕಾವ್ಯ ಕಾವ್ಯವಾಗಿ ಮತ್ತು ವಾಸ್ತವ ಸವಾಲಾಗಿ ಮುಖಾಮುಖಿಯಾಯಿತು. ಅಪ್ಪಟ ಕವಿಯಾದ್ದರಿಂದ ಪ್ರತಿಭಾಗೆ ಈ ಎರಡನ್ನೂ ಬಿಡಿಸಲಾಗದಂತೆ ಹೆಣೆಯಲು ಸಾಧ್ಯವಾಯಿತು. ‘ಹೆಣ್ಣಿನ ಪ್ರೀತಿಗೆ ಹೆದರುವಷ್ಟು ಗಂಡು, ಹೆಣ್ಣಿನ ದ್ವೇಷಕ್ಕೆ ಹೆದರುವುದಿಲ್ಲ’ ಎನ್ನುವ ಇವರ ಆತ್ಮಕಥೆಯ ಟ್ಯಾಗ್ ಲೈನ್ ಹೆಣ್ಣಿನ ಮತ್ತು ಗಂಡಿನ ದೃಷ್ಟಿ ಧೋರಣೆಗಳೆರಡನ್ನೂ ಚರ್ಚೆಗೆ ಇಟ್ಟಿತು. ಗಂಡಾಳಿಕೆಯನ್ನು ಕೋರ್ಟ್ ಮಾರ್ಷಲ್‌ಗೆ ಒಳಗು ಮಾಡುವುದರಲ್ಲಿ ಯಾವ ಆಸಕ್ತಿಯೂ ಇರದ ಇವರ ಕಾವ್ಯವು ತನ್ನ ಬದುಕನ್ನು ತನ್ನ ಕರಾರು, ಆಯ್ಕೆ, ಆದ್ಯತೆಗಳ ಮೇಲೆ ಬದುಕುವ ಸ್ವತಂತ್ರ, ಸ್ವಾಯತ್ತ ದಾರಿಯ ಕಡೆಗೆ ಗಮನ ಹರಿಸಿತು.
ಎಚ್ ನಾಗವೇಣಿಯವರ `ಗಾಂಧಿ ಬಂದ’ ಕಾದಂಬರಿ ಸುವರ್ಣ ಕರ್ನಾಟಕ ಅವಧಿಯ ಮತ್ತೊಂದು ಮಹತ್ವದ ಹೆಜ್ಜೆಗುರುತು. ಸ್ವಾತಂತ್ರ್ಯೋತ್ತರ ಭಾರತದ ನಿರ್ಣಾಯಕ ವ್ಯಕ್ತಿತ್ವದೊಂದಿಗಿನ ಹೆಣ್ಣಿನ ಸಂಬಂಧವನ್ನು ಅಪೂರ್ವವಾಗಿ ಇದು ಚಿತ್ರಿಸುತ್ತದೆ. ಹೆಣ್ಣಿನ ಸಂವೇದನೆಗೂ ಗಾಂಧಿಗೂ ಇರುವ ಆತ್ಮಸಖ್ಯವನ್ನು ಇದರಂತೆ ಚಿತ್ರಿಸಿದ ಮತ್ತೊಂದು ಕೃತಿ ಭಾರತೀಯ ಭಾಷೆಗಳಲ್ಲೇ ಅಪರೂಪ ಎನ್ನಿಸುತ್ತದೆ. ಗಂಡ, ಮಕ್ಕಳನ್ನು ಸಂಸಾರದ ಜವಾಬ್ದಾರಿಯಿಂದ ಬೇರ್ಪಡಿಸಿದ ವ್ಯಕ್ತಿ ಎನ್ನುವ ಕಾರಣಕ್ಕೆ ಬಹುತೇಕ ಹೆಣ್ಣುಮಕ್ಕಳಿಗೆ ಗಾಂಧಿಯ ಬಗೆಗೆ ಇದ್ದ ಕೋಪ, ವಿರೋಧಗಳು ನಿಧಾನವಾಗಿ ಇವ ನಮ್ಮವ ಇವ ನಮ್ಮವ ಎನ್ನುವ ಸಖ್ಯವಾಗಿ ಪರಿವರ್ತನೆಯಾದ ಪ್ರಕ್ರಿಯೆಯನ್ನು ಎಳೆ ಎಳೆಯಾಗಿ ಈ ಕಾದಂಬರಿ ಬಿಚ್ಚಿಡುತ್ತದೆ. ಗಾಂಧಿಯ ಸಖ್ಯವಿದ್ದ ಮೇಲೆ ಲೋಕವನ್ನೇ ಬೇಕಾದರೂ ಎದುರಿಸಿಯೇವು ಎನ್ನುವ ಆತ್ಮಬಲವನ್ನು ಈ ಹೆಣ್ಣುಮಕ್ಕಳು ಪಡೆಯುತ್ತಾರೆ. ಸಂಪ್ರದಾಯಕ್ಕೆ ವಿರುದ್ಧವಾದ ವಿಧವಾ ವಿವಾಹ, ಅಂತಃಕರಣದಲ್ಲಿ ಹೆಣ್ಣಲ್ಲದವಳನ್ನು ಹೆಂಡತಿಯಾಗಿ ಒಪ್ಪಿಕೊಳ್ಳುವ ಮಾನವೀಯ ನಡವಳಿಕೆ ಈ ಎಲ್ಲದರಲ್ಲೂ ಈ ಹೆಣ್ಣುಮಕ್ಕಳು ಗಾಂಧಿಯೆನ್ನುವವನು ತಮ್ಮದೇ ವಿಸ್ತರಣೆಯೋ, ಪ್ರತಿನಿಧಿಯೋ ಎನ್ನುವಷ್ಟು ಆತನ ಬಗೆಗೆ ಪ್ರೀತಿ ಗೌರವಗಳನ್ನು ಬೆಳೆಸಿಕೊಳ್ಳುತ್ತಾರೆ. ಗಾಂಧಿ ಎನ್ನುವ ಅದಮ್ಯ ಶಕ್ತಿಯ ಜೊತೆ ತಮ್ಮನ್ನು ಸಮೀಕರಿಸಿಕೊಳ್ಳುವ ಮೂಲಕವೇ ಈ ಹೆಣ್ಣುಮಕ್ಕಳು ಅಸಮಬಲಶಾಲಿಗಳಾಗುತ್ತಾರೆ. ಕಾದಂಬರಿಯು ಉತ್ಕಟ ಕಾವ್ಯದಂತೆ ಓದಿಸಿಕೊಳ್ಳುತ್ತದೆ. ಕನ್ನಡದ ಸಿದ್ಧಿಗಳಲ್ಲೊಂದು ಈ ಕಾದಂಬರಿ.
ಈ ಕಾಲಘಟ್ಟದ ಮಹಿಳಾ ಸೃಜನಶೀಲತೆಯ ಇನ್ನೊಂದೆರಡು ಪ್ರಾತಿನಿಧಿಕ ನೆಲೆಗಳನ್ನು ಗಮನಿಸಬಹುದು. ಲೋಕಪ್ರತಿಮೆಯನ್ನು ಒಡೆದು ಸ್ವಪ್ರತಿಮೆಯನ್ನು ಅದೆಷ್ಟು ಘನವಾಗಿ ಲೇಖಕಿಯರು ಕಟ್ಟಿಕೊಂಡಿದ್ದಾರೆ ಎನ್ನುವುದು ಇವರ ಬಗೆಗಿನ ನಮ್ಮ ಗೌರವ ಮತ್ತು ಪ್ರೀತಿಯನ್ನು ಸಕಾರಣವಾಗಿ ಹೆಚ್ಚಿಸುತ್ತದೆ. ಶಕುಂತಲೆಯನ್ನು ಕುರಿತಂತೆ ವೀಣಾ ಶಾಂತೇಶ್ವರ ಮತ್ತು ವೈದೇಹಿಯವರು ಬರೆದ ಎರಡು ಕಥೆಗಳೆಂದರೆ `ನಿರಾಕರಣೆ’ ಮತ್ತು `ಶಕುಂತಲೆಯೊಂದಿಗೆ ಕಳೆದ ಅಪರಾಹ್ನ’ ಕತೆಗಳು ಪುರಾಣದ ಶಕುಂತಲೆಯನ್ನು ಅವಳೊಳಗಿರುವ ಅಪ್ಪಟ ಆಧುನಿಕ ಹೆಣ್ಣನ್ನು ಅನಾವರಣ ಮಾಡುವಲ್ಲಿ ಸಂಪೂರ್ಣ ಯಶಸ್ಸು ಪಡೆಯುತ್ತವೆ. ಮಗ ಭರತನ ಕಾರಣಕ್ಕೆ ದುಷ್ಯಂತನ ಮನವಿಯನ್ನು ಒಪ್ಪಿ ಅರಮನೆಗೆ ಮರಳಿದರೂ ದುಷ್ಯಂತನೊಂದಿಗೆ ದಾಂಪತ್ಯ ಮುಂದುವರೆಸಲು ಶಕುಂತಲೆ ಸ್ಪಷ್ಟವಾಗಿ ನಿರಾಕರಿಸುತ್ತಾಳೆ. ಅದನ್ನು ಅಷ್ಟೇ ಕಟುವಾಗಿ, ಗಂಭೀರವಾಗಿ ಹೇಳಿಯೂ ಹೇಳುತ್ತಾಳೆ. ಈ ಮೂಲಕ ಗಂಡಿನ ಅಧಿಕಾರದ ಸೊಕ್ಕನ್ನು ಮುರಿಯುತ್ತಾಳೆ. ಮಗನಿಗೋಸ್ಕರ ಮಾಡಿಕೊಳ್ಳುವ ರಾಜಿಯು ದುಷ್ಯಂತನೊಂದಿಗೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎನ್ನುವುದನ್ನು, ಏನು ಮಾಡಿಯೂ ತನ್ನ ದಾಂಪತ್ಯ ಮಾತ್ರ ಸುರಕ್ಷಿತವಾಗಿರುತ್ತದೆ, ಗಂಡಿನ ಯಾವೆಲ್ಲ ದ್ರೋಹಗಳನ್ನೂ ನುಂಗಿ ಬದುಕುವುದು ಹೆಣ್ಣಿಗೆ ಅನಿವಾರ್ಯ ಎನ್ನುವ ಗಂಡಾಳಿಕೆಯ ಮಿಥ್ ಅನ್ನು ಈ ಕತೆ ಪಕ್ಕಕ್ಕೆ ತಳ್ಳುತ್ತದೆ. ಹೆಣ್ಣಿನ ಆತ್ಮಗೌರವದ ಬಾವುಟವನ್ನು ಶಕುಂತಲೆ ಕೂಗಾಟವಿಲ್ಲದೆ ಅದೆಷ್ಟು ತಣ್ಣಗಿನ, ಪ್ರಬುದ್ಧತೆಯ ಧಾಟಿಯಲ್ಲಿ ನಿಭಾಯಿಸುತ್ತಾಳೆ ಎಂದರೆ, ಈ ಎಲ್ಲವೂ ಹೆಣ್ಣಿನ ಮೂಲಗುಣಗಳೇ ಅಲ್ಲವೆ ಎನ್ನುವ ಹಾಗೆ. ವೈದೇಹಿಯವರ ಕತೆ ಇನ್ನೂ ಒಂದು ಹೆಜ್ಜೆ ಮುಂದೆ ಇದೆ. ಸೋತ, ದುಃಖಿತ, ದುರಂತ ನಾಯಕಿಯಂತೆ ಕಾಣುತ್ತಿದ್ದವಳನ್ನು ಇವರು ಆತ್ಮಘನತೆಯ ಪ್ರಭಾವಳಿಯಲ್ಲಿ ಇಡುತ್ತಾರೆ. ದುಷ್ಯಂತ, ಅವನೊಂದಿಗಿನ ಸಂಬಂಧ, ತಾಯ್ತನ ಈ ಎಲ್ಲವೂ ತನ್ನದೇ ಆಯ್ಕೆ, ಇದರಲ್ಲಿ ಮೋಸ ಹೋಗುವ, ಶೋಷಣೆಯ ಆಯಾಮವೇ ಇಲ್ಲ ಎನ್ನುತ್ತಾಳೆ ಶಕುಂತಲೆ. ತಾನು ಪ್ರೀತಿಸಿದ ವ್ಯಕ್ತಿಯೊಂದಿಗಿನ ಮದುವೆ, ತಾನು ಉತ್ಕಟವಾಗಿ ಬಯಸಿದ ತಾಯ್ತನ ಎರಡೂ ಸಿಕ್ಕ ಮೇಲೆ ತಾನು ದುರಂತ ನಾಯಕಿ ಹೇಗಾಗುತ್ತೇನೆ ಎನ್ನುವುದು ಇವಳ ಪ್ರಶ್ನೆ. ಲೋಕ ಬೇಕಾದ್ದು ಹೇಳಲಿ ನನ್ನ ಮಟ್ಟಿಗೆ ನನ್ನದು ಲೋಕ ಅನುಕಂಪ ಸೂಚಿಸುವಂತಹ ಬದುಕೇನಲ್ಲ. ನಿಜ, ದಾಂಪತ್ಯ ಅರ್ಧಕ್ಕೇ ಮುಗಿದು ಹೋಯಿತು, ಆದರೆ ಇದು ಪಡೆದುಕೊಂಡ ಸುಖ, ಅರ್ಥಪೂರ್ಣತೆ ಎಲ್ಲವನ್ನೂ ನುಂಗಿ ಹಾಕಿಬಿಡುತ್ತದೆಯೆ? ದುಷ್ಯಂತ ನನ್ನನ್ನು ಬಿಟ್ಟುಹೋದ ದುಃಖವನ್ನೂ ನಾನು ತಾಯಿಯಾಗುತ್ತಿದ್ದ ಅಪೂರ್ವ ಅನುಭವದಲ್ಲಿ ಮೀರಿಕೊಂಡೆ ಎನ್ನುವ ಮಾತುಗಳನ್ನು ಆಡುತ್ತಾಳೆ. ಹೆಣ್ಣಿನ ವ್ಯಕ್ತಿತ್ವದ ಅಸೀಮ ಧೀಶಕ್ತಿಯನ್ನು ಇಲ್ಲಿನ ಶಕುಂತಲೆ ಪ್ರತಿನಿಧಿಸುತ್ತಾಳೆ. ಈ ಇಬ್ಬರ ಕತೆಗಳ ಜೊತೆಗೆ ನಾವು ಮಾಸ್ತಿಯವರ ಹೇಮ ಕೂಟದಿಂದ ಬಂದ ಮೇಲೆ ಇಟ್ಟರೆ ನಮಗೆ ಹಲವು ಅಂಶಗಳು ಗಮನಕ್ಕೆ ಬರುತ್ತವೆ. ಹೆಣ್ಣನ್ನು ಅದೇ ಸ್ಥಾಪಿತ ಚೌಕಟ್ಟಿನಲ್ಲಿ ಮರು ಸ್ಥಾಪಿಸುವ ಮಾಸ್ತಿ ಒಂದು ಕಡೆಗಾದರೆ ಅವಳನ್ನು ಸಂಪೂರ್ಣವಾಗಿ ಆ ಚೌಕಟ್ಟಿನಿಂದ ಹೊರತರುವ ಲೇಖಕಿಯರು ಮತ್ತೊಂದು ಕಡೆ. ಶಕುಂತಲೆಯನ್ನು ಹೊಸದಾಗಿ ಕಟ್ಟುವುದೆಂದು ನೋಡುತ್ತಲೇ ಯಾವ ಕಾಲದ ಹೆಣ್ಣನ್ನಾದರೂ ಅರ್ಥಮಾಡಿಕೊಳ್ಳಲು, ಗ್ರಹಿಸಲು ಬೇಕಾದ ಮನೋವಿನ್ಯಾಸವನ್ನು ಪಡೆಯುವುದಲ್ಲವೆ ಎನ್ನುವ ಹಾಗೂ ಈ ಕತೆಗಳನ್ನು ನಾವು ನೀಡಬೇಕು. ಯಾವುದನ್ನು ನಾವು ಹೆಣ್ಣಿನ ಸಂವೇದನೆ ಎಂದು, ಹೆಣ್ನೋಟ ಎಂದು ಕರೆಯುತ್ತೇವೋ, ಅದು ಗಂಡಿನ ಸಂವೇದನೆಯಲ್ಲೂ ಅವಶ್ಯವಾಗಿ ಸೇರಬೇಕು ಎಂದು ಒತ್ತಾಯಿಸುತ್ತೇವೋ ಅದರ ವ್ಯಾಖ್ಯಾನದಂತೆ ಈ ಕತೆಗಳಿವೆ. ಮುದುಡಿದ ಮನಸ್ಸಿನ, ಅಸಹಾಯಕ ಹೆಣ್ಣಿನ ಮಾಸ್ತಿಯವರ ಚಿತ್ರಕ್ಕೂ ಆಕಾಶ ತುಂಬುವಂತೆ ಅರಳಿದ, ಜೀವನೋತ್ಸಾಹದ ಜೀವಪ್ರಭೆಯಲ್ಲಿ ಹೊಳೆಯುವ ಶಕುಂತಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಇದೇ ಮಾತನ್ನು ನಾವು ಎಚ್ ವಿ ಸಾವಿತ್ರಮ್ಮನವರ `ಸೀತೆ ರಾಮ ರಾವಣ’, ಆರ್.ಸುನಂದಮ್ಮನವರ `ಭರತ ಕಲ್ಪ’ ಕಾದಂಬರಿಗೂ ಅನ್ವಯಿಸಬಹುದು. ಪುರಾಣ ಭಂಜನೆಯ ಈ ಕೃತಿಗಳು ಗಂಡು ಮತ್ತು ಹೆಣ್ಣನ್ನು ಅವರ ನಿಜರೂಪದಲ್ಲಿ ಕಾಣಿಸುತ್ತವೆ. ಇವುಗಳನ್ನು ಕೇವಲ ಸೃಜನಶೀಲ ಕೃತಿಗಳೆಂದು ಕರೆಯಲಾಗದು. ಅದರಾಚೆಗೆ ಸಮುದಾಯ ಪಠ್ಯಗಳಾಗಿಯೂ, ಗಂಡಿಗೆ ಜೆಂಡರ್ ಸೆನ್ಸಿಟೈಸೇಷನ್‌ನ ತರಬೇತಿ ಪಠ್ಯಗಳಾಗಿಯೂ ನೋಡಬೇಕು.
ಇದನ್ನೂ ಓದಿರಿ: ಕರ್ನಾಟಕ 50 | ಪತ್ರಿಕೋದ್ಯಮ ಕಂಡ ಮೂರು ಪಲ್ಲಟಗಳು
ಈ ಕೃತಿಗಳಿಗೆ ಹೆಣ್ಣಿನ ಮನೋವಿನ್ಯಾಸವನ್ನೇ ಬದಲಿಸುವ ಶಕ್ತಿಯಿದೆ. ಯಾವುದನ್ನು ಕಣ್ಣೆದುರಿಗಿನ ಮಾತ್ರವಲ್ಲ ಬೆನ್ನ ಹಿಂದಿನ ಮಾದರಿ ಎಂದೂ ಕಟ್ಟಿಕೊಡಲಾಗಿತ್ತೋ ಆ ಪ್ರತಿಮೆಗಳನ್ನೇ ಇವು ಒಡೆಯುತ್ತವೆ. ಸುನಂದಮ್ಮನವರ `ಭರತ ಕಲ್ಪ’ ಕೈಕೇಯಿ, ಕೌಸಲ್ಯೆ, ಮಂಥರೆ, ಭರತ, ಮಾಂಡವಿ, ಊರ್ಮಿಳೆ ಈ ಎಲ್ಲರನ್ನೂ ಮರುನಿರೂಪಣೆಗೆ ಒಡ್ಡುವ ಮಹತ್ವಾಕಾಂಕ್ಷೆಯ, ಮಹತ್ವದ ಪ್ರಯತ್ನ ಎನ್ನಿಸುತ್ತದೆ. ಪ್ರವಾಹಕ್ಕೆ ಎದುರಾಗಿ ಈಸುವ ಹಂಬಲದ ಇಂತಹ ಕೃತಿಗಳನ್ನು ಗಂಭೀರವಾದ ಚರ್ಚೆಗೆ ಎತ್ತಿಕೊಳ್ಳಬೇಕು. ಇಲ್ಲಿನ ಸ್ತ್ರೀಪಾತ್ರಗಳ ವಿಶೇಷತೆ ಎಂದರೆ ಇವು ಅರಮನೆಯ ಅಲಂಕೃತ ಕೈದಿಗಳ ಬಂಧನದಿಂದ ಹೊರಬಂದು ರಕ್ತ ಮಾಂಸಗಳ, ಭಾವ ಬುದ್ಧಿಗಳ, ತಮ್ಮದೇ ಸ್ವಂತ ಪ್ರಭಾವಳಿಯಲ್ಲಿ ಬೆಳಗಲು ಹಂಬಲಿಸುವುದು. ರಾವಣನನ್ನು ಅಂತಃಕರಣದಿಂದ ನೋಡುವುದನ್ನು ಆರಾಧಿಸುವ ಗಂಡಾಳಿಕೆಯು ಕೈಕೇಯಿ, ಮಂಥರೆ ಈ ಎಲ್ಲರನ್ನೂ ಅದೇ ಮಾನವೀಯತೆಯ, ಸಹಜ ಮಾನವ ಆಕಾರ ವಿಕಾರಗಳಲ್ಲಿ ಗ್ರಹಿಸಲು ಯತ್ನಿಸುತ್ತದೆ. ಇಲ್ಲಿನ ಭರತನಂತೂ ಈ ತನಕ ನಾವು ಕಾಣದ ಚಹರೆಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಆತನ ಪ್ರಬುದ್ಧತೆ, ವಿವೇಕ ಇವನನ್ನು ಬಹು ಎತ್ತರದಲ್ಲಿ ನಿಲ್ಲಿಸುತ್ತದೆ. ಇಂಥದನ್ನು ಸೃಷ್ಟಿಸಲು ಬೇಕಾದದ್ದು ಮರು ಇತಿಹಾಸದ ಮಹದಾಸೆ ಮಾತ್ರವಲ್ಲ, ಅಪಾರವಾದ ತಯಾರಿ, ಇಂಥ ಕೃತಿಗಳು ಬೇಡುವ ಏಕಾಗ್ರತೆ, ಸಾಮುದಾಯಿಕ ಹೊಣೆಗಾರಿಕೆ ಈ ಎಲ್ಲವನ್ನೂ ಇಲ್ಲಿ ನಾವು ನೋಡಬಹುದು. ಸೀತೆ ರಾಮ ರಾವಣ ಕೃತಿಗಿಂತ ಇದು ಸಾಕಷ್ಟು ಮುಂದೆ ಚಲಿಸುತ್ತದೆ.
ಮಹಿಳಾ ದಲಿತ ಸಾಹಿತ್ಯಕ್ಕೂ ವಿಶೇಷ ಸ್ಥಾನವಿದೆ. ಬಿ ಟಿ ಜಾನ್ಹವಿ, ದು. ಸರಸ್ವತಿ, ಬಿ ಟಿ ಲಲಿತಾ ನಾಯಕ್ ಇವರುಗಳು ಕನ್ನಡ ಸಾಹಿತ್ಯಕ್ಕೂ ಈ ಮೂಲಕ ಸಾಮಾಜಿಕ ನ್ಯಾಯದ ಹೋರಾಟಕ್ಕೂ ತುಂಬಿರುವ ಸ್ಥೈರ್ಯ ಮತ್ತು ಕೊಟ್ಟ ವಿಸ್ತಾರ ದೊಡ್ಡದು. ಜಾನ್ಹವಿಯವರ `ಕಳೆದುಕೊಂಡವಳು’, ಸರಸ್ವತಿಯವರ `ಬಚ್ಚೀಸು’ ಕತೆಯಾಗಲೀ, ಲಲಿತಾನಾಯಕ್ ಅವರ ಕತೆಗಳು ಮತ್ತು ಕಾವ್ಯ ದಲಿತ ಮತ್ತು ಹೆಣ್ಣಿನ ಶೋಷಣೆಯ ಅಮೂರ್ತ ಆಯಾಮಗಳನ್ನು ತೋರಿಸುತ್ತವೆ. ಇವರ ಕತೆಗಳನ್ನು ನಾವು ಮೀಸಲಾತಿ ಅಥವಾ ರಿಯಾಯತಿಯ ಆಧಾರದ ಮೇಲೆ ನೋಡಬೇಕಾದ ಅಗತ್ಯವೇ ಇಲ್ಲ. ಜಾನ್ಹವಿಯವರ ಕಳೆದುಕೊಂಡವಳು ನಿಸ್ಸಂಶಯವಾಗಿ ಬದಲಾದ, ಬದಲಾಗಬೇಕಾದ ಹೆಣ್ಣನ್ನು ತೋರಿಸುತ್ತದೆ. ಬಲಾತ್ಕಾರವನ್ನು ಕುರಿತಂತೆ ಆ ಕತೆಯ ನಾಯಕಿ ತಳೆಯುವ ನಿಲುವು ಅನೇಕ ಆಯಾಮಗಳಲ್ಲಿ ನಮ್ಮನ್ನು ಕಾಡುತ್ತದೆ. ಜೀವಕಾಮದ ಅದಮ್ಯತೆಯನ್ನು ಹೇಳುತ್ತಿದೆಯೋ? ಇದೂ ಒಂದು ಅನುಭವ ಆಗಿಬಿಡಲಿ ಎನ್ನುವ ಹುಡುಕಾಟವೋ? ಆದಿಯಿಂದ ಗಂಡು ಬಿಡುಬೀಸಾಗಿ ಮಾಡುತ್ತಲೇ ಬಂದಿರುವುದನ್ನು ತಾನೂ ಪಡೆಯುವ ಆಸೆಯೋ? ತಾನು ಬಲವಂತವಾಗಿ ಇವಳನ್ನು ಪಡೆದೆ ಎನ್ನುವ ಗಂಡಿನ ಅಹಂಕಾರವನ್ನು ಮುರಿಯುವಂತೆ, ತಾನೇ ಸಹಕರಿಸಿ ಆತನಿಗೆ ಆಘಾತ ಕೊಡುವ ಬಂಡಾಯದ ಹಂಬಲವೋ? ಇವೆಲ್ಲವನ್ನೂ ಆ ಘಳಿಗೆಯಲ್ಲಿ ಅವಳು ಯೋಚಿಸಿ ಮಾಡಿದಳೆನ್ನುವುದು ಈ ಮಾತುಗಳ ಅರ್ಥವಲ್ಲ, ನನ್ನ ಗಮನ ಇರುವುದು ಇಂಥ ಅದೆಷ್ಟು ವಿಚಾರಗಳು ಹೆಣ್ಣಿನಲ್ಲಿ ಯಾವತ್ತಿನಿಂದಲೂ ಹಾಯುತ್ತಲೇ ಇರಬೇಕಲ್ಲವೆ ಎನ್ನುವುದನ್ನು ಗ್ರಹಿಸಲು. ಹಾಗೆಂದು ಈ ಕತೆಯ ನಾಯಕಿಯನ್ನು ಭೈರಪ್ಪನವರು ಹೇಳುವ ಹೆಣ್ಣು ಅತ್ಯಾಚಾರವನ್ನು ಸುಖಿಸುತ್ತಾಳೆ ಎನ್ನುವ ಮಾತಿನೊಂದಿಗೆ ಸಮೀಕರಿಸಲಾಗುತ್ತದೆಯೆ? ಖಂಡಿತ ಇಲ್ಲ. ಅಲ್ಲಿನದು ಮತ್ತೆ ಹೆಣ್ಣನ್ನು ಕುರಿತ ಅನಾಮತ್ತು ಧಿಮಾಕಿನ ತೀರ್ಪು. ಜಾನ್ಹವಿಯವರದು ಹೆಣ್ಣಿನ ಮನೋವ್ಯಾಪಾರದ ಅನಾವರಣ. ಇದನ್ನು ಸಾಧಾರಣೀಕರಣ ಮಾಡುತ್ತಿಲ್ಲ, ವ್ಯಕ್ತಿಗತವಾಗಿ ಆ ಘಳಿಗೆಯಲ್ಲಿ ಅವಳಿಗೆ ಅನ್ನಿಸಿದ್ದು ಎನ್ನುವುದಕ್ಕೆ ನೀಡುವ ಒತ್ತು ನಿರ್ಣಾಯಕ.

ಬಾನುಮುಷ್ತಾಕ್ ಮತ್ತು ಸಾರಾ ಅಬೂಬಕರ್, ಕೆ ಶರೀಫಾ ಅವರ ಕೃತಿಗಳನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಮುಸ್ಲಿಂ ಮಹಿಳೆಯರ ಲೋಕ ಮತ್ತು ಇತರ ಮಹಿಳೆಯರ ಲೋಕಗಳ ನಡುವಿನ ಸಂಬಂಧಾಂತರಗಳನ್ನು ಘನವಾಗಿ ಕಾಣಿಸಿಕೊಟ್ಟವರು ಇವರು. ಬಾನು ಮತ್ತು ಸಾರಾ ಇಬ್ಬರೂ ಒಂದು ರೀತಿಯಲ್ಲಿ ಲಂಕೇಶ್ ಪತ್ರಿಕೆಯ ಶೋಧ ಎನ್ನಬಹುದು. ಆ ಪತ್ರಿಕೆ ಕೊಟ್ಟ ನೈತಿಕ ಮತ್ತು ಪ್ರಾಯೋಗಿಕ ಬೆಂಬಲ ಇವರ ಬರವಣಿಗೆ ಮತ್ತು ಬದುಕು ಎರಡರಲ್ಲೂ ಗಣನೀಯ ಪಾತ್ರ ವಹಿಸಿದೆ. ಬಾನು ಅವರ `ಒಮ್ಮೆ ಹೆಣ್ಣಾಗು ಪ್ರಭುವೆ’ ಕತೆಯಾಗಲಿ, ಸಾರಾ ಅವರ `ಚಪ್ಪಲಿಗಳು’ ಕತೆಯಾಗಲಿ ಹೆಣ್ಣಿನ ಸವಾಲುಗಳ ಮೂಲವನ್ನೇ ಹುಡುಕಿ ತೆಗೆಯುತ್ತವೆ. ಸವಾಲು ಲೋಕಕ್ಕಿಂತ ಹೆಚ್ಚಾಗಿ ನನ್ನ ಪಕ್ಕದಲ್ಲೇ ಇದೆ, ಪ್ರೀತಿ ಪಾತ್ರರಿಂದಲೇ ಅದು ಹುಟ್ಟುತ್ತಿದೆ ಎನ್ನುವ ಅರಿವು ಹೆಣ್ಣಿನಲ್ಲಿ ಹುಟ್ಟಿಸುವ ‘ಅರಿವಿನ ಹಿಂಸೆ’ಯನ್ನು ಓದುಗರಿಗೆ ಮುಟ್ಟಿಸುತ್ತವೆ. ಸಬಿಹಾ ಭೂಮಿಗೌಡ ಅವರ ಕತೆ ಮತ್ತು ಕಾವ್ಯವನ್ನೂ ಇಲ್ಲಿ ದಾಖಲಿಸಬೇಕು. ಇವರ ಕುಕ್ಕರ್ ಕವಿತೆ ಕುಕ್ಕರ್‌ಅನ್ನು ಪ್ರಭಾವಶಾಲಿಯಾದ ರೂಪಕವಾಗಿ ಕಟ್ಟಿಕೊಡುತ್ತದೆ.
ಈ ಐವತ್ತು ವರ್ಷಗಳ ಮಹಿಳಾ ಆತ್ಮಕಥೆಗಳನ್ನೂ ಇಲ್ಲಿ ಗಣನೆಗೆ ತಂದುಕೊಳ್ಳಬೇಕು. ತಮ್ಮ ಬದುಕಿನ ನೋವು ನಲಿವುಗಳನ್ನು ರೂಪಕಗಳಲ್ಲಿ, ಸಂಕೇತಗಳಲ್ಲಿ ಹೇಳಿರುವ, ಲೆಕ್ಕವಿಲ್ಲದಷ್ಟು ಬಿಕ್ಕಟ್ಟುಗಳಲ್ಲೂ ಬದುಕನ್ನು ಅದಮ್ಯವಾಗಿ ಪ್ರೀತಿಸಿ, ಅಪ್ಪಿಕೊಳ್ಳುವ ಈ ಆತ್ಮಕಥನಗಳು ಹೆಣ್ಣಿನ ಮನೋಬಲ ಮತ್ತು ಆತ್ಮಸೌಂದರ್ಯದ ಪಲಕುಗಳಂತೆ ಇವೆ. ಉಮಾಶ್ರೀ, ಬಿ ಜಯಶ್ರೀ, ಭಾರ್ಗವಿ ನಾರಾಯಣ್, ಪ್ರೇಮಾ ಕಾರಂತ, ವಿಜಯಮ್ಮ ಮೊದಲಾದವರ ಆತ್ಮಕಥನಗಳು ಕನ್ನಡ ಸಾಹಿತ್ಯದ ಮುಖ್ಯ ಕೃತಿಗಳೇ ಆಗಿವೆ.
ಭಾಷೆಯ ದೃಷ್ಟಿಯಿಂದ ಮಹಿಳೆಯರ ಪ್ರಯೋಗಗಳು, ಏಳು ಬೀಳುಗಳ ಬಗ್ಗೆ ದೀರ್ಘವಾಗಿಯೇ ಚರ್ಚಿಸಬೇಕು. ಏಕೆಂದರೆ ಭಾಷೆಯನ್ನೇ ಹೆಣ್ಣಿಗೆ ಪರಕೀಯಗೊಳಿಸುವ, ಅದನ್ನೇ ಅವಳನ್ನು ನಿರ್ಬಂಧಿಸುವ, ನಿರ್ದೇಶಿಸುವ ಹತಾರವನ್ನಾಗಿ ಮಾಡಿಕೊಂಡಾಗ, ಹೆಣ್ಣು ಅದನ್ನೇ ತನ್ನ ಪ್ರತಿಶೋಧದ ಅಸ್ತçವಾಗಿಯೂ, ತನ್ನ ಅಸ್ಮಿತೆಯ ರಚನೆಯಾಗಿಯೂ ರೂಪಿಸಿಕೊಳ್ಳುತ್ತಾ ಬಂದಿರುವುದೇ ಒಂದು ರೋಮಾಂಚಕಾರಿಯಾದ ಮತ್ತು ಐತಿಹಾಸಿಕವಾದ ಸಂಗತಿ. ಅವಳ ಭಾಷೆಯನ್ನು ಗಂಡು ಇನ್ನೂ ಕಲಿಯಬೇಕಾಗಿದೆ. ಆದ್ದರಿಂದಲೇ ಹೆಣ್ಣಿನ ಕೃತಿಗಳ ಸಮರ್ಪಕವಾದ ಚರ್ಚೆಯಾಗಲೀ, ಸ್ಥಾನನಿರ್ದೇಶನವಾಗಲಿ ಆಗಿಲ್ಲ. ಈ ಸಣ್ಣ ಅವಕಾಶದ ಮಿತಿಯಲ್ಲಿ ಅದನ್ನು ಪ್ರಸ್ತಾಪ ಮಾತ್ರ ಮಾಡಿ ನಿಲ್ಲಿಸುತ್ತೇನೆ.
ಎರಡು ಸಾವಿರ ಪದಗಳಲ್ಲಿ ಐವತ್ತು ವರ್ಷಗಳನ್ನು ಹಿಡಿಯುವ ಭಾಗೀರಥಿಯ ಸಾಹಸ ಇದು. ಭಗೀರಥರ ಜಾಗದಲ್ಲಿ ಭಾಗೀರಥಿಯರನ್ನು ಸ್ಥಾಪಿಸಬೇಕಾಗಿರುವುದು ಈ ಹೊತ್ತಿನ ತುರ್ತು. ಹೆಣ್ಣುಮಕ್ಕಳದು ನಿತ್ಯ ಭಗೀರಥ ಪ್ರಯತ್ನ. ಬದುಕಿನ ಪ್ರತಿ ಹಂತದಲ್ಲೂ ಈ ಗುಣಶಕ್ತಿಯಿಂದಲೇ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವುದು. ಈ ಸಾಹಸದಲ್ಲಿ ಲೇಖಕಿಯರನ್ನು ಸಮೀಕ್ಷೆಯ ರೂಪದಲ್ಲಿ ಪಟ್ಟಿ ಮಾಡುವುದಕ್ಕಿಂತ, ಆಯೋಜಕರು ಸೂಚಿಸಿದಂತೆ ಹೆಜ್ಜೆ ಗುರುತುಗಳನ್ನು ಮುಖ್ಯ ಪಠ್ಯಗಳನ್ನು ಚರ್ಚಿಸುವ ಮೂಲಕ ಮಾಡುವ ಪ್ರಯತ್ನ ಇಲ್ಲಿನದು. ಮತ್ತೊಬ್ಬರು ಬರೆದರೆ ಈ ಪಠ್ಯಗಳು ಖಂಡಿತ ಬದಲಾಗಬಹುದು, ಆ ಬದಲಾದ ಪಠ್ಯಗಳ ಬಗೆಗೂ ಅಷ್ಟೇ ಗೌರವವೂ ಖಂಡಿತ ಇರುತ್ತದೆ. ಆಶಯ ಮತ್ತು ಅಕೃತಿಗಳ ಬಂಧದ ಹಿನ್ನೆಲೆಯಲ್ಲಿ ಈ ಕೃತಿಗಳನ್ನು ನಾನು ಆರಿಸಿಕೊಂಡಿದ್ದೇನೆ. ಆದರೆ ನನಗೆ ಮುಖ್ಯವಾದುದು ಹೆಜ್ಜೆಗುರುತುಗಳ ಚಹರೆ ಮತ್ತು ನಿಖರತೆ. ಇವುಗಳನ್ನು ಕೇವಲ ಹೆಜ್ಜೆ ಗುರುತುಗಳೆಂದಲ್ಲ, ಮೈಲಿಗಲ್ಲುಗಳೆಂದೂ ಕರೆಯಬಹುದು.
ಹೆಣ್ಣಿನ ಬರೆಹವೆಂದರೆ, ಅದು ಅವಳು ತನ್ನದೇ ಅಪ್ಪಟ ಭಾಷೆಯನ್ನು ಕಟ್ಟುವ ಪರಿ ಎನ್ನುವ ಸಿದ್ಧಾಂತವೊಂದನ್ನು ಮಂಡಿಸಿದಾಗ ಕೊಂಕು ನಕ್ಕವರೇ ಹೆಚ್ಚು. ಕಾವ್ಯವೇ ಹೆಣ್ಣಿನ ಭಾಷೆ ಎನ್ನುವುದನ್ನು ಈ ತನಕದ ಯಾವ ಮುಖ್ಯ ಕೃತಿಗಳನ್ನು ಓದಿದಾಗಲೂ ನಮ್ಮ ಅನುಭವಕ್ಕೆ ಬಂದೇ ಬರುತ್ತದೆ. ಮಹಿಳೆಯರಿಗೆ ಅಪರೂಪದ್ದು ಎಂದು ಹೇಳಲಾಗುವ ನಾಟಕದಲ್ಲೂ ಹೆಣ್ಣು ಮಕ್ಕಳು ತೊಡಗಿಸಿಕೊಂಡಿದ್ದಾರೆ. ಇದೊಂದು ಸ್ವಾಗತಾರ್ಹ ಸಂಗತಿ.
ಸಮಕಾಲೀನ ಬರಹಗಾರ್ತಿಯರು ಇನ್ನೂ ಒಂದು ಹೆಜ್ಜೆ ಮುಂದಿದ್ದಾರೆ. ಸುಮಂಗಲಾ, ದು.ಸರಸ್ವತಿ, ಅಕ್ಷತಾ, ಭಾರತಿ ದೇವಿ, ಸುನಂದಾ ಕಡಮೆ, ಜಯಶ್ರೀ ಕಾಸರವಳ್ಳಿ, ಭುವನಾ ಹಿರೇಮಠ, ಮಂಜುಳಾ ಹಿರೇಮಠ, ಆರ್ ಸುನಂದಮ್ಮ, ಎಂ.ಉಷಾ ಮೊದಲಾದವರು ಸಮುದಾಯವನ್ನು ಇನ್ನೂ ಆರೋಗ್ಯಪೂರ್ಣವಾಗಿಸುವುದು ಹೇಗೆ ಎನ್ನುವುದರ ಕಡೆಗೆ ಗಮನ ಹರಿಸಿದಂತೆ ಕಾಣಿಸುತ್ತಿದೆ. ಅಲ್ಲಲ್ಲಿ ಕಾಣುತ್ತಿದ್ದ ತುಸು ಹಿಂಜರಿಕೆಯನ್ನೂ ಮೀರಿಕೊಂಡವರಂತೆ ಇವರು ಬರೆಯುತ್ತಿದ್ದಾರೆ.
ಇದನ್ನೂ ಓದಿರಿ: ನಮ್ಮ ಕರ್ನಾಟಕ- 50 | ಏಕೀಕರಣೋತ್ತರ ಕಾಲದ ಸಾಧನೆ ಮತ್ತು ವೈರುಧ್ಯ
ಮುಂದಿನ ಹೆಜ್ಜೆಗಳ ಬಗೆಗೆ ಮಾತನಾಡುವುದು ಕಷ್ಟ. ಆದರೆ ಕಾಲದ ಅಗತ್ಯಗಳೇನು ಎನ್ನುವುದರ ಬಗೆಗೆ ಖಂಡಿತಾ ಕೆಲವು ವಿಚಾರಗಳನ್ನು ಹೇಳಬಹುದು. ಗಂಡಾಳಿಕೆಯ ಛದ್ಮವೇಷಗಳನ್ನು ಅನಾವರಣ ಮಾಡಬೇಕಾದ್ದು ಒಂದಾದರೆ, ಹೆಣ್ಣಿನ ಮೇಲಿನ ಹೊಸ ಶೋಷಣೆಯ ದಾರಿಗಳನ್ನು ಎದುರಿಸುವುದರ ಬಗೆಗೆ ನಾವು ಯೋಚಿಸಬೇಕಾದ್ದು ಎರಡನೆಯದು. ಮೂರನೆಯದು ಸೃಜನಶೀಲ ಅಭಿವ್ಯಕ್ತಿಗಳು ಮತ್ತು ಚಳವಳಿಗಳನ್ನು ಬೆಸೆದ ವೇದಿಕೆಯೊಂದರ ನಿರ್ಮಾಣದ ಅಗತ್ಯ. ಸ್ವವಿಮರ್ಶೆಯನ್ನು ಮಾಡಿಕೊಳ್ಳಬೇಕಾದ ಅಗತ್ಯವೂ ಇದೆ. ಅನೇಕ ಬಾರಿ ಹೆಣ್ಣೇ ಹೆಣ್ಣು ಎನ್ನುವುದನ್ನೇ ಬಂಡವಾಳವಾಗಿಸಿಕೊಳ್ಳುವ, ದಾಳವಾಗಿಸಿಕೊಳ್ಳುವ ದಾರಿಯನ್ನು ಹಿಡಿದಿರುವುದನ್ನು ಕಂಡಾಗ, ಇದು ಕಾಲ ಮೇಲೆ ಕಲ್ಲು ಹಾಕಿಕೊಳ್ಳುವ ಅಪಾಯ ಮತ್ತು ದುರಂತ ಎನ್ನಿಸುತ್ತದೆ.
ಸಮುದಾಯವು ತೀವ್ರವಾದ ಬಿಕ್ಕಟ್ಟಿನಲ್ಲಿರುವ ಕಾಲ ಇದು. ಸುವರ್ಣ ಕರ್ನಾಟಕದ ಸಂಭ್ರಮದಷ್ಟೇ ಸಮುದಾಯವನ್ನು ಛಿದ್ರಗೊಳಿಸುತ್ತಿರುವ, ಅಮಾನವೀಯ, ಅನಾಗರಿಕ ಧೋರಣೆಗಳನ್ನೇ ಮೌಲ್ಯವೆಂದು ಬಿಂಬಿಸುತ್ತಿರುವ ಎಲ್ಲ ಶಕ್ತಿಗಳ ವಿರುದ್ಧ ಹೋರಾಟ ಬಿರುಸಾಗಬೇಕು, ಇದರ ಮುಂಚೂಣಿಯಲ್ಲಿ ಮಹಿಳೆಯರಿರಬೇಕು. ಇದು ಕನಸೆಂದಾದರೂ ಸ್ತ್ರೀ ಗುರಿಯೆಂದಾದರೂ ಸರಿ. ಇಲ್ಲಿಂದ ಮುಂದಕ್ಕೆ ಮಾನವಕುಲವನ್ನು ಪೊರೆಯಬಹುದಾದದ್ದು ಹೆಣ್ಣಿನ ಅಮೃತದಂತಹ ಪೊರೆಯುವ ಶಕ್ತಿ ಮಾತ್ರ ಎನ್ನುವುದರಲ್ಲಿ ನನಗೆ ಗಾಢ ನಂಬಿಕೆಯಿದೆ.
(‘ಈದಿನ.ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ ಲೇಖನವಿದು)

ಡಾ. ಎಂ.ಎಸ್. ಆಶಾದೇವಿ
ಅನುವಾದಕಿ, ವಿಮರ್ಶಕಿ ಆಶಾದೇವಿ ಮೂಲತಃ ದಾವಣಗೆರೆ ಜಿಲ್ಲೆಯವರು. ಸ್ತ್ರೀಮತವನುತ್ತರಿಸಲಾಗದೇ (ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳು), ಉರಿಚಮ್ಮಾಳಿಗೆ (ಡಿ.ಆರ್.ನಾಗರಾಜ ಅವರ ದಿ ಪ್ಲೇಮಿಂಗ್ ಫೀಟ್ ಕೃತಿಯ ಅನುವಾದ), ವಚನ ಪ್ರವೇಶ (ಸಂಪಾದನೆ), ಭಾರತದ ಬಂಗಾರ ಪಿ.ಟಿ.ಉಷಾ, ಇವರ ಪ್ರಮುಖ ಕೃತಿಗಳು.




