ಕರ್ನಾಟಕ 50 | ಒಕ್ಕೂಟ ವ್ಯವಸ್ಥೆಗೆ ಮಾರಕವಾದ ರಾಜ್ಯಪಾಲರ ರಾಜಕಾರಣ

Date:

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸಲು ರೂಪಿತವಾದ ರಾಜ್ಯಪಾಲ ಹುದ್ದೆಯು 1967ರಿಂದಾಚೆಗೆ ವಿವಾದದ ಕೇಂದ್ರವಾಯಿತು. ಆವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಚುನಾವಣೆಗಳು ಏಕಕಾಲದಲ್ಲಿ ನಡೆಯುತ್ತಿದ್ದವು ಮತ್ತು ಎಲ್ಲ ರಾಜ್ಯಗಳಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷದ ಆಡಳಿತವೇ ಇರುತ್ತಿತ್ತು. ಹೀಗಾಗಿ ರಾಜ್ಯಪಾಲ ಹುದ್ದೆಯು ರಾಜಕೀಯ ಕಲಹದ ಭಾಗವಾಗಿರಲಿಲ್ಲ. ನಂತರದ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರಕ್ಕೆ ಬರಲಾರಂಭಿಸಿದವು. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಸಮಸ್ಯೆಯಾಗದು, ಆದರೆ ಯಾವಾಗ ಅಲ್ಲೊಂದು ಪಕ್ಷ ಇಲ್ಲೊಂದು ಪಕ್ಷ ಆಡಳಿತ ನಡೆಸುತ್ತವೆಯೋ ಆಗ ರಾಜ್ಯಪಾಲರು ಕೇಂದ್ರದ ಆಣತಿಗೆ ತಕ್ಕಂತೆಯೂ, ರಾಜ್ಯ ಸರ್ಕಾರದ ಮೇಲೆ ತೂಗುಗತ್ತಿಯಾಗಿಯೂ ಕೆಲಸ ಮಾಡಿರುವುದನ್ನು ಇತಿಹಾಸದುದ್ದಕ್ಕೂ ನೋಡುತ್ತಾ ಬಂದಿದ್ದೇವೆ. ಒಕ್ಕೂಟ ವ್ಯವಸ್ಥೆಯನ್ನು ಬಲವಾಗಿಸಲೆಂದು ರೂಪಿಸಿಕೊಳ್ಳಲಾದ ‘ಗವರ್ನರ್’ ಹುದ್ದೆಯು ಕಾಲಕ್ರಮಣ ರಾಜ್ಯಗಳ ಮೇಲೆ ಗದಾ ಪ್ರಹಾರ ಮಾಡಲೆಂದೇ ಬಳಕೆಯಾಗುತ್ತಾ ಬಂದಿದೆ.

ಸಂವಿಧಾನದತ್ತವಾಗಿ ರಾಷ್ಟ್ರಪತಿಯವರಿಂದ ನೇಮಕವಾಗುವ ರಾಜ್ಯಪಾಲರು ಬಹುತೇಕ ಕೇಂದ್ರ ಸರ್ಕಾರದ ಕೈಗೊಂಬೆ ಎಂಬುದು ನಿರ್ವೀವಾದ. ಕೇಂದ್ರದ ಮಂತ್ರಿ ಮಂಡಲ ಸೂಚಿಸಿದವೇ ರಾಜ್ಯಪಾಲರಾಗುತ್ತಾರೆ. ‘ಯಾವುದಾದರೂ ಕ್ಷೇತ್ರವೊಂದರಲ್ಲಿ ಪ್ರಖ್ಯಾತರಾದವರನ್ನು, ಸಕ್ರಿಯ ರಾಜಕೀಯದಿಂದ ದೂರ ಇರುವವರನ್ನು ರಾಜ್ಯಪಾಲರನ್ನಾಗಿ ನೇಮಿಸಬೇಕು’ ಎಂದು 1988ರಲ್ಲಿ ಸಲ್ಲಿಕೆಯಾದ ಸಾರ್ಕರಿಯಾ ಆಯೋಗ ವರದಿ ಸೂಚಿಸಿತ್ತು. ಆದರೆ ಈವರೆಗೆ ನೇಮಕವಾದ ಬಹುತೇಕರು ರಾಜಕಾರಣದ ಭಾಗವೇ ಆಗಿದ್ದಾರೆ. ಮತ್ತೊಂದು ಸಂಗತಿ, ರಾಜ್ಯಪಾಲರನ್ನು ನೇಮಿಸುವಾಗ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಬೇಕೆಂಬ ಅಭಿಪ್ರಾಯವನ್ನು ನೆಹರೂ, ಟಿ.ಟಿ.ಕೃಷ್ಣಮಾಚಾರಿ, ಅಲ್ಲಾಡಿ ರಾಮಸ್ವಾಮಿ ಅಯ್ಯರ್ ಅವರು ಸಂವಿಧಾನ ರಚನಾಸಭೆಯಲ್ಲಿಯೇ ಮಂಡಿಸಿದ್ದರು. ಆಡಳಿತ ಸುಧಾರಣಾ ಆಯೋಗ ಕೂಡ ಇದೇ ಅಭಿಪ್ರಾಯ ತಾಳಿ, ‘ರಾಜ್ಯದ ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿಯೇ ರಾಜ್ಯಪಾಲರ ನೇಮಕ ಮಾಡಬೇಕು’ ಎಂದಿತ್ತು. 1967ರವರೆಗೆ ಇದೇ ಪರಂಪರೆ ಮುಂದುವರಿದಿತ್ತಾದರೂ ನಂತರದಲ್ಲಿ ಆ ಸಂಪ್ರದಾಯವನ್ನು ಕೈಬಿಡಲಾಯಿತು. ರಾಜ್ಯ ಸರ್ಕಾರದಲ್ಲಿ ಮೂಗು ತೂರಿಸುವ ಪರಂಪರೆಯನ್ನು ಶುರು ಮಾಡಿದ್ದೇ ಕಾಂಗ್ರೆಸ್ ಪಕ್ಷ ಎಂಬುದನ್ನು ಮರೆಯಬಾರದು.

1967ನೇ ಇಸವಿ. ಪಶ್ಚಿಮ ಬಂಗಾಳ ಸರ್ಕಾರ ವಿ.ಕೆ.ಕೃಷ್ಣ ಮೆನನ್, ಪ್ರೊ.ಎ.ಅಲೀಮ್ ಖಾನ್, ಶ್ರೀಮತಿ ಅರುಣ ಆಸೀಫ್ ಅಲಿ ಅವರ ಹೆಸರನ್ನು ರಾಜ್ಯಪಾಲ ಹುದ್ದೆಗೆ ಸೂಚಿಸಿದ್ದರೂ ಅದನ್ನು ಕೈಬಿಟ್ಟ ಕೇಂದ್ರ ಸರ್ಕಾರ ಧರ್ಮವೀರ ಅವರನ್ನು ಗವರ್ನರ್‌ರನ್ನಾಗಿ ನೇಮಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ಅಂದಿನಿಂದ ಇಂದಿನವರೆಗೂ ಒಂದಲ್ಲ ಒಂದು ರಾಜ್ಯದಲ್ಲಿ ರಾಜ್ಯಪಾಲರ ಹುದ್ದೆ ರಾಜಕೀಯಕ್ಕೆ ಬಳಕೆಯಾಗುತ್ತಲೇ ಬಂದಿದೆ. ಇಂದು ನಾವು ಮುಖ್ಯಮಂತ್ರಿ ವರ್ಸಸ್ ರಾಜ್ಯಪಾಲ ನಡುವಿನ ಗುದ್ದಾಟ ತಾರಕ್ಕೇರಿದೆಯಷ್ಟೇ. ಇಂದು ಕರ್ನಾಟಕಕ್ಕೆ ಹೋಲಿಸಿದರೆ ತಮಿಳುನಾಡು, ಕೇರಳದಂತಹ ರಾಜ್ಯಗಳಲ್ಲಿ ಗವರ್ನರ್‌ಗಳು ಅಸಹಕಾರದ ಎಲ್ಲೆಗಳನ್ನೆಲ್ಲ ಮೀರಿ ಮುಂದೆ ಸಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-1)

ರಾಜ್ಯಪಾಲರ ಅಧಿಕಾರವಧಿ ಐದು ವರ್ಷ. ಆದರೆ ಸಂವಿಧಾನದ ವಿಧಿ 156(1)ರ ಪ್ರಕಾರ ಅವರನ್ನು ಪದಚ್ಯುತಿಗೊಳಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಹೀಗಾಗಿ 1977ರಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದಾಗ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿತು. ಕರ್ನಾಟಕದ ರಾಜ್ಯಪಾಲರಾಗಿದ್ದ ಉಮಾಶಂಕರ್ ದೀಕ್ಷಿತ್‌ ಅವರು ರಾಜೀನಾಮೆ ನೀಡಬೇಕು ಎಂದಿತು. ಮತ್ತೆ ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿಯವರು ಸೇಡು ತೀರಿಸಿಕೊಂಡರು ಎಂಬುದು ಬೇರೆಯೇ ಕತೆ. ಇಂತಹ ಬೆಳವಣಿಗೆಗಳನ್ನು ಗಮನಿಸಿದ ಸುಪ್ರೀಂಕೋರ್ಟ್, ‘ಕೇಂದ್ರದಲ್ಲಿ ಅಧಿಕಾರ ಬದಲಾವಣೆ ಆದ ತಕ್ಷಣ ರಾಜ್ಯಪಾಲರನ್ನು ಅಧಿಕಾರದಿಂದ ಇಳಿಸುವುದಕ್ಕೆ ಇವರು ಕೇಂದ್ರ ಸರ್ಕಾರದ ಏಜೆಂಟರಲ್ಲ ಅಥವಾ ನೌಕರರಲ್ಲ’ ಎಂದಿದೆ. ಅದೇನೇ ಇರಲಿ, ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟರು ಎಂಬುದು ಇತಿಹಾಸದಿಂದ ಸರ್ವವಿಧಿತ. ಕೇಂದ್ರ ಹೇಳಿದಂತೆ ಕುಣಿಯುವ ಪಾತ್ರವೇ ಗವರ್ನರ್ ಎಂಬುದು ರಾಜಕಾರಣದ ಎ, ಬಿ, ಸಿ, ಡಿ ಬಲ್ಲ ಯಾರಿಗಾದರೂ ಅರ್ಥವಾಗುತ್ತದೆ.

‘ಶ್ರೀಪ್ರಕಾಶ ತತ್ವ’ದ ಉಲ್ಲಂಘನೆ

ರಾಜ್ಯಪಾಲರಿಗೆ ಇರುವ ವಿವೇಚನಾ ಅಧಿಕಾರಗಳೇ ರಾಜಕೀಯ ಕೆಸರೆರಚಾಟಗಳಿಗೆ ನಾಂದಿ ಹಾಡಿವೆ. ಬಹುಮತ ಪಡೆದ ಅಥವಾ ದೊಡ್ಡ ಪಕ್ಷವಾಗಿ ಆಯ್ಕೆಯಾದ ಅಥವಾ ಹೆಚ್ಚು ಸೀಟು ಪಡೆದ ಮೈತ್ರಿಕೂಟದ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುವುದು ವಾಡಿಕೆ. ಯಾವುದೇ ಪಕ್ಷ ಬಹುಮತ ಪಡೆಯದಿದ್ದಾಗ ‘ಶ್ರೀಪ್ರಕಾಶ ತತ್ವ’ ಅನುಸರಿಸಲಾಗುತ್ತದೆ. 1952ರ ಚುನಾವಣೆಯಲ್ಲಿ ಮದ್ರಾಸ್‌ನಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರಕಲಿಲ್ಲ. ಅಂದು ರಾಜ್ಯಪಾಲರಾಗಿದ್ದ ‘ಶ್ರೀಪ್ರಕಾಶ’ ಅವರು ದೊಡ್ಡ ಪಕ್ಷವಾಗಿ ಹೊಮ್ಮಿದ್ದ ಕಾಂಗ್ರೆಸ್‌ನ ನಾಯಕ ಸಿ.ರಾಜಗೋಪಾಲಚಾರಿ ಅವರನ್ನು ಸಿಎಂ ಆಗಿ ನೇಮಿಸಿದರು. ಈ ರೀತಿಯಲ್ಲಿ ವಿವೇಚನಾಧಿಕಾರವನ್ನು ಮೊದಲ ಬಾರಿಗೆ ಬಳಸಿದ್ದರಿಂದ ‘ಶ್ರೀಪ್ರಕಾಶ ತತ್ವ’ ಎಂಬುದು ಚಾಲ್ತಿಗೆ ಬಂದಿತು. ದೊಡ್ಡ ಪಕ್ಷ ಅಧಿಕಾರ ರಚಿಸಲು ಸಾಧ್ಯವಾಗದಿದ್ದಾಗ ವಿರೋಧ ಪಕ್ಷಗಳಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ ಉದಾಹರಣೆಗಳೂ ಇವೆ. 1980ರಲ್ಲಿ ದೇವರಾಜ ಅರಸು ಅವರು ರಾಜೀನಾಮೆ ಕೊಟ್ಟಾಗ ವಿರೋಧ ಪಕ್ಷದ ನಾಯಕರಾಗಿದ್ದ ಆರ್.ಗುಂಡೂರಾವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಅಂದಿನ ರಾಜ್ಯಪಾಲ ಗೋವಿಂದ ನಾರಾಯಣ ನೇಮಿಸಿದ್ದರು. ಆದರೆ ಇದಕ್ಕೂ ಆಸ್ಪದ ನೀಡದೆ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ.

1959ರಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರ ಬಹುಮತ ಹೊಂದಿದ್ದರೂ ವಜಾ ಮಾಡಲಾಗಿತ್ತು! 1965ರಲ್ಲಿ ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆದಿರಲಿಲ್ಲ. ಸಿಪಿಎಂ 40 ಸ್ಥಾನಗಳಲ್ಲಿ ಗೆದ್ದು ದೊಡ್ಡ ಪಕ್ಷವಾಗಿತ್ತು. ಅಲ್ಲಿ ರಾಜ್ಯಪಾಲರಾಗಿದ್ದ ಎ.ಪಿ.ಜೈನ್, ಶ್ರೀಪ್ರಕಾಶ ತತ್ವವನ್ನು ಉಲ್ಲಂಘಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದ್ದರು. 1982ರ ಹರ್ಯಾಣ ವಿಧಾನಸಭಾ ಚುನಾವಣೆ ಇದಕ್ಕೆ ಮತ್ತೊಂದು ದೃಷ್ಟಾಂತ. ಅಲ್ಲಿ 90 ಸೀಟುಗಳ ಪೈಕಿ ಕಾಂಗ್ರೆಸ್ 36 ಸ್ಥಾನ ಪಡೆದರೆ, ಲೋಕದಳದ ನಾಯಕ ದೇವಿಲಾಲ್ ಇತರರ ಬೆಂಬಲ ಪಡೆದು ಕಾಂಗ್ರೆಸ್‌ಗಿಂತ ಮುಂದಿದ್ದರು. ಕಾಂಗ್ರೆಸ್‌ನ ಭಜನ್‌ಲಾಲ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ರಾಜ್ಯಪಾಲರು ನೇಮಿಸಿದ್ದರು. ಅಕ್ಷರಶಃ ಕೇಂದ್ರದ ಆಣತಿಯಂತೆ ರಾಜ್ಯಪಾಲ ವರ್ತಿಸಿದ್ದರು. ಇಂತಹದ್ದೇ ಬೆಳವಣಿಗೆ ಕರ್ನಾಟಕದಲ್ಲಿ ಆಗಿದ್ದನ್ನು ನೋಡಬಹುದು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊಮ್ಮಿತ್ತು. ಕಾಂಗ್ರೆಸ್ (78), ಜೆಡಿಎಸ್ (37) ಚುನಾವಣೋತ್ತರ ಮೈತ್ರಿ ಮಾಡಿಕೊಂಡವು. ಆದರೆ ದೊಡ್ಡ ಪಕ್ಷವಾಗಿದ್ದ ಬಿಜೆಪಿಯ ನಾಯಕ ಬಿ.ಎಸ್.ಯಡಿಯೂರಪ್ಪನವರನ್ನು ಅಂದಿನ ಗವರ್ನರ್‌ ವಜುಭಾಯಿವಾಲಾ ಸಿಎಂ ಆಗಿ ನೇಮಿಸಿದರು. ಒಂದು ರೀತಿಯಲ್ಲಿ ವಾಲಾ ಅವರ ವಿವೇಚನೆ ಸರಿಯಾಗಿತ್ತೆಂದೇ ತೋರುತ್ತದೆ. ಯಾಕೆಂದರೆ ಜೆಡಿಎಸ್- ಕಾಂಗ್ರೆಸ್ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿರಲಿಲ್ಲ. ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ದೋಸ್ತಿಗಳಾಗಿದ್ದರು. ಆದರೆ ರಾಜ್ಯಪಾಲರು ಬಹುಮತ ಸಾಬೀತಿಗೆ ಯಡಿಯೂರಪ್ಪನವರಿಗೆ ನೀಡಿದ ಭರಪೂರ ಹದಿನೈದು ದಿನಗಳ ಅವಕಾಶ ಕುದುರೆ ವ್ಯಾಪಾರಕ್ಕೆ ಅವಕಾಶ ಒದಗಿಸಿತ್ತು. ಆಪರೇಷನ್ ಕಮಲದ ಭೀತಿ ಎದುರಾಗಿ ದೋಸ್ತಿಗಳು ತಮ್ಮ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯಬೇಕಾಯಿತು. ಇಷ್ಟು ಕಾಲಾವಕಾಶ ಕೊಟ್ಟಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್- ಜೆಡಿಎಸ್ ನಾಯಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಮೂರು ದಿನಗಳಲ್ಲಿ ಬಹುಮತ ಸಾಬೀತು ಮಾಡಲು ಕೋರ್ಟ್ ಸೂಚನೆ ನೀಡಿದಾಗ ಬಿಎಸ್‌ವೈ ಭಾವುಕ ಭಾಷಣ ಮಾಡಿ, ಅಧಿಕಾರ ತ್ಯಜಿಸಿದರು.

ಕರ್ನಾಟಕದ ಇತಿಹಾಸವನ್ನು ತೆಗೆದು ನೋಡಿದರೆ ರಾಜ್ಯಪಾಲರು ಹೆಚ್ಚಿನ ಅವಕಾಶವನ್ನೂ ಕೊಡದೆ ಸರ್ಕಾರವನ್ನೇ ವಜಾಮಾಡಿದ್ದುಂಟು. ದೇವರಾಜ ಅರಸು ಅವರು ತಮ್ಮ ಬಹುಮತ ಸಾಬೀತು ಮಾಡಲು 1978ರ ಜನವರಿ 3ನೇ ತಾರೀಕನ್ನು ನಿಗದಿ ಮಾಡಿದ್ದರು. ಮೂರು ದಿನಗಳ ಅವಕಾಶ ಕೋರಿದ್ದರಷ್ಟೇ. ಇದಕ್ಕೆ ಅವಕಾಶ ನೀಡದ ಅಂದಿನ ರಾಜ್ಯಪಾಲ ಗೋವಿಂದ ನಾರಾಯಣ ಅವರು ಡಿಸೆಂಬರ್ 31, 1977ರಂದೇ ಸರ್ಕಾರವನ್ನು ಕಿತ್ತೊಗೆದಿದ್ದರು.

ಮರೆಯಲಾಗದು ಆಂಧ್ರದ ದಳ್ಳುರಿ

ರಾಜ್ಯಪಾಲ ವರ್ಸಸ್ ರಾಜ್ಯ ಸರ್ಕಾರದ ನಡುವಿನ ವಿವಾದಗಳ ಪೈಕಿ ಮರೆಯಲಾಗದ್ದು 1984ರಲ್ಲಿ ಆಂಧ್ರಪ್ರದೇಶದಲ್ಲಾದ ರಾಜಕೀಯ ವಿದ್ಯಮಾನಗಳು. ಎನ್‌.ಟಿ.ರಾಮರಾವ್ ನೇತೃತ್ವದಲ್ಲಿ ಜನಪ್ರಿಯ ಮತ್ತು ಸಿನಿಮೀಯ ರೀತಿಯಲ್ಲಿ ತೆಲುಗು ದೇಶಂ ಪಕ್ಷ ಒಂದು ವರ್ಷ ಆಡಳಿತ ನಡೆಸಿತ್ತು. ಆ ನಡುವೆ ಕಾಯಿಲೆಗೆ ತುತ್ತಾದ್ದರಿಂದ ಅಮೆರಿಕಕ್ಕೆ ತೆರಳಿ ಹೃದ್ರೋಗ ಚಿಕಿತ್ಸೆಯನ್ನು ಎನ್‌ಟಿಆರ್ ಪಡೆದುಕೊಳ್ಳುತ್ತಿದ್ದರು. ಇವರ ಎನ್‌ಟಿಆರ್‌ ಸಂಪುಟದಲ್ಲೇ ಮಂತ್ರಿಯಾಗಿದ್ದು, ಒಳರಾಜಕಾರಣ ಮಾಡಿದವರು ಎನ್‌.ಭಾಸ್ಕರರಾವ್. ಕ್ಷಿಪ್ರಕ್ರಾಂತಿಯನ್ನು ಮಾಡಿ ತಮ್ಮ ಬಣದ ಶಾಸಕರನ್ನು ಕರೆದುಕೊಂಡು ಹೋಗಿ, ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದುಕೊಂಡರು. ಇಂದಿರಾಗಾಂಧಿಯವರ ಆಣತಿಯಂತೆ ಕುಣಿಯುತ್ತಿದ್ದ ಆಂಧ್ರದ ಗವರ್ನರ್ ರಾಮಲಾಲ್, ಈ ರಾಜಕಾರಣಕ್ಕೆ ಕೈಜೋಡಿಸಿ ಭಾಸ್ಕರರಾವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿ ಪ್ರಮಾಣವಚನವನ್ನು ಬೋಧಿಸಿದರು. ಸಚಿವ ಸಂಪುಟದ ಬಲ ಪರೀಕ್ಷೆಗೆ ಸಿದ್ಧವಿದ್ದೇನೆ ಎಂದು ಎನ್‌ಟಿಆರ್ ಹೇಳಿದರೂ ರಾಮಲಾಲ್ ಅವಕಾಶ ನೀಡಲಿಲ್ಲ. ಅಮೆರಿಕದಿಂದ ವಾಪಸ್ ಬರುವಾಗಲೇ ಕಪ್ಪು ಬಟ್ಟೆ ಧರಿಸಿ ಬಂದ ಎನ್‌ಟಿಆರ್, ರಾಜ್ಯಾದ್ಯಂತ ಯಾತ್ರೆಯನ್ನು ಹಮ್ಮಿಕೊಂಡರು. ‘ಪ್ರಜಾಪ್ರಭುತ್ವ’ದ ಉಳಿವಿಗಾಗಿ ಧರ್ಮಯಾತ್ರೆ ಎಂದು ಕರೆದರು. ಇವರಿಗೆ ಬಿಜೆಪಿ, ಸಿಪಿಐ, ಸಿಪಿಐ(ಎಂ) ಒಳಗೊಂಡಂತೆ 17 ಪ್ರತಿಪಕ್ಷಗಳು ಬೆಂಬಲ ನೀಡಿದವು. ತಮಗಾದ ಅನ್ಯಾಯದ ವಿರುದ್ಧ ಒಂದು ತಿಂಗಳು ಹೋರಾಡಿ ಪ್ರತಿಪಕ್ಷಗಳ ಬೆಂಬಲವನ್ನೂ ಎನ್‌ಟಿಆರ್ ಪಡೆದುಕೊಂಡರು.

NTRamrao
1984ರ ಆಗಸ್ಟ್ 30ರಂದು ಆಂಧ್ರಪ್ರದೇಶದ ಶ್ರೀ ಕಾಳಹಸ್ತಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಎನ್.ಟಿ. ರಾಮರಾವ್ ಭಾಷಣ ಮಾಡಿದ ಸಂದರ್ಭ

ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-2)

ಈ ಹೋರಾಟದಲ್ಲಿ ಇಡೀ ಆಂಧ್ರ ಹೊತ್ತಿ ಉರಿದಿತ್ತು. ಇದರ ಕಾವು ಕರ್ನಾಟಕದ ಮೇಲೂ ಆಯಿತು. ಕರ್ನಾಟಕದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾ ಸರ್ಕಾರ ಇಂದಿರಾ ಗಾಂಧಿಯವರನ್ನು ಖಂಡಿಸಿ, ಎನ್‌ಟಿಆರ್ ಪರ ನಿಂತಿತು. ಒಂದು ತಿಂಗಳ ಬಿಕ್ಕಟ್ಟಿನ ಸಂದರ್ಭದಲ್ಲಿ ಕುದುರೆ ವ್ಯಾಪಾರವನ್ನು ತಪ್ಪಿಸಲು ರಾಮರಾವ್ ಅವರು ತಮ್ಮ ಬೆಂಬಲಿತ ಶಾಸಕರನ್ನು ರಹಸ್ಯ ಸ್ಥಳದಲ್ಲಿ ಇರಿಸಿದ್ದರು. ಈ ಕೆಲಸಕ್ಕೆ ದೊಡ್ಡ ಮಟ್ಟದ್ದಲ್ಲಿ ಸಹಕರಿಸಿದ್ದು ರಾಮಕೃಷ್ಣ ಹೆಗಡೆಯವರು. ಎಲ್ಲಾ ಟಿಡಿಪಿ ಶಾಸಕರನ್ನು ಮೈಸೂರಿನ ಐಷಾರಾಮಿ ಹೋಟೆಲ್ ದಾಸ್ ಪ್ರಕಾಶ್‌ಗೆ ಕರೆತಂದು ರಕ್ಷಿಸಲಾಯಿತು. ದೇಶದ ರಾಜಕೀಯದ ಇತಿಹಾಸದಲ್ಲೇ ಅದೇ ಮೊದಲ ಬಾರಿಗೆ ಶಾಸಕರನ್ನು ಕುದುರೆ ವ್ಯಾಪಾರದಿಂದ ತಪ್ಪಿಸಲು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿತ್ತು. ಹಲವಾರು ರಾಜಕೀಯ ಪಕ್ಷಗಳ ಒತ್ತಡ, ಜನಾಕ್ರೋಶಗಳಿಂದಾಗಿ ಪ್ರಧಾನಿ ಇಂದಿರಾ ಗಾಂಧಿಯವರು ಒಲ್ಲದ ಮನಸ್ಸಿನಿಂದಲೇ ರಾಮ್‌ಲಾಲ್ ಅವರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದರು. ಆಂಧ್ರಪ್ರದೇಶದ ಗವರ್ನರ್ ಆಗಿ ಕಾಂಗ್ರೆಸ್ಸಿನ ಹಿರಿಯ ನಾಯಕ ಶಂಕರ್ ದಯಾಳ್ ಶರ್ಮಾ ಅವರನ್ನು ನೇಮಿಸಿದರು.

ಹಿಮಾಚಲ ಪ್ರದೇಶದ ರಾಮಲಾಲ್‌ ಅವರು ಹೈದ್ರಾಬಾದ್ ಬಿಟ್ಟು ಓಡಿ ಹೋದದ್ದು ಇತಿಹಾಸ. ಮತ್ತೆ ಎನ್‌ಟಿಆರ್ ಮುಖ್ಯಮಂತ್ರಿಯಾದರು. ಅದೇ ವರ್ಷ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದರೂ ಕರ್ನಾಟಕದಲ್ಲಿ 28 ಕ್ಷೇತ್ರಗಳ ಪೈಕಿ 24ರಲ್ಲಿ ಗೆದ್ದರೂ, ಆಂಧ್ರದಲ್ಲಿ 42ರಲ್ಲಿ 31 ಸೀಟು ಟಿಡಿಪಿ ಗೆದ್ದಿತ್ತು. ರಾಮರಾವ್ ಅವರಿಗಾದ ಅನ್ಯಾಯದ ಪ್ರತಿಫಲನ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕಂಡಿತ್ತು. ಉಳಿದ ಯಾವುದೇ ಪ್ರತಿಪಕ್ಷ ಪಡೆಯಲಾಗದಷ್ಟು ಸ್ಥಾನಗಳನ್ನು ಆ ಚುನಾವಣೆಯಲ್ಲಿ ಟಿಡಿಪಿ ಗೆದ್ದದ್ದು ಇತಿಹಾಸ. ಟಿಡಿಪಿಯ ಉಪೇಂದ್ರ ಅವರು ಪ್ರತಿಪಕ್ಷಗಳ ನಾಯಕರೂ ಆದರು.

ಎಸ್.ಆರ್.ಬೊಮ್ಮಾಯಿ ಪ್ರಕರಣ

ಕರ್ನಾಟಕದಲ್ಲಿ ರಾಜ್ಯಪಾಲ ಮತ್ತು ರಾಜ್ಯ ಸರ್ಕಾರದ ನಡುವೆ ವಾಸ್ತವದಲ್ಲಿ ತಿಕ್ಕಾಟ ಆರಂಭವಾಗಿದ್ದು ‘ಜನತಾರಂಗ ಸರ್ಕಾರ’ ಅಧಿಕಾರಕ್ಕೆ ಬಂದ ಬಳಿಕ. ದೇವರಾಜ ಅರಸು ಅವರು ಇಂದಿರಾ ಗಾಂಧಿ ವಿರುದ್ಧ ನಿಂತಿದ್ದ ಸಮಯವಿತ್ತು. ಆದರೆ ಆ ಅವಧಿ ತುಂಬಾ ಚಿಕ್ಕದ್ದು. ಕೇಂದ್ರದ ಆಣತಿಯಂತೆ ಅರಸು ಅವರಿಗೆ ತೊಂದರೆ ಕೊಡುವ ಸಾಧ್ಯತೆ ಕಡಿಮೆ ಇತ್ತು. ಅರಸು ಅವರು ಹೊರಗಡೆ ಬಂದು ಕ್ರಾಂತಿರಂಗ ಕಟ್ಟಿದ್ದರು. ಕ್ರಾಂತಿರಂಗ- ಜನತಾ ಪಾರ್ಟಿ ಜಂಟಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವು. ‘ಜನತಾರಂಗ ಸರ್ಕಾರ’ ಅಧಿಕಾರಕ್ಕೆ ಬಂತು. ಕಮ್ಯುನಿಸ್ಟರು, ಬಿಜೆಪಿಯವರ ಬೆಂಬಲವೂ ರಾಮಕೃಷ್ಣ ಹೆಗಡೆಯವರಿಗೆ ಇತ್ತು. ‘ಕರ್ನಾಟಕದ ಆಡಳಿತ ಕರ್ನಾಟಕದಿಂದಲೇ ಹೊರತು ದೆಹಲಿಯಿಂದ ಅಲ್ಲ’ ಎಂಬ ಘೋಷಣೆ ಅಂದು ಚಾಲ್ತಿಗೆ ಬಂತು. ‘ಕೇಂದ್ರದ ಆಣತಿಯಂತೆ ಈವರೆಗಿನ ಸರ್ಕಾರಗಳು ನಡೆದಿವೆ. ರಾಜ್ಯ ಸರ್ಕಾರಕ್ಕೆ ಬೆಲೆಯೇ ಇಲ್ಲವಾಗಿದೆ’ ಎಂಬ ಕೂಗು ಶುರುವಾಗಿದ್ದೇ ಆವಾಗ.

ರಾಮಕೃಷ್ಣ ಹೆಗಡೆಯವರ ಮೇಲೆ ಟೆಲಿಫೋನ್ ಕದ್ದಾಲಿಕೆಯ ಗಂಭೀರ ಆರೋಪ ಬಂದಿತ್ತು. ಎಚ್‌.ಡಿ.ದೇವೇಗೌಡರು ಭಿನ್ನಮತೀಯ ನಾಯಕರಾಗಿ ಹೊಮ್ಮಿದ್ದರು. ಜನತಾ ಸರ್ಕಾರದೊಳಗೆ ತಿಕ್ಕಾಟ ಶುರುವಾಗಿತ್ತು. ಎಸ್.ಆರ್.ಬೊಮ್ಮಾಯಿ ಅವರು ರಾಜ್ಯದ 11ನೇ ಮುಖ್ಯಮಂತ್ರಿಯಾದರು. ಇದಕ್ಕೆ ಹೆಗಡೆಯವರ ಬೆಂ‘ಬಲ’ವೂ ಇತ್ತು. ಹೀಗಿರುವಾಗ 1989ರ ಏಪ್ರಿಲ್‌ನಲ್ಲಿ ಆದ ಬೆಳವಣಿಗಳಲ್ಲಿ ದೇವೇಗೌಡರು ರಾಜ್ಯಪಾಲರನ್ನು ಭೇಟಿಯಾದರು. ಕೆಲವು ಶಾಸಕರು ಬೊಮ್ಮಾಯಿ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದ ಪತ್ರ ನೀಡಿದ್ದಾರೆಂಬುದು ಸುದ್ದಿಯಾಯಿತು. ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಭಾವಿಸಿ ಅಂದಿನ ರಾಜ್ಯಪಾಲ ಪಿ.ವೆಂಕಟಸುಬ್ಬಯ್ಯ ಅವರು ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಜಾರಿಗೆ ತಂದರು. ಬಹುಮತ ಸಾಬೀತಿಗೂ ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಬೊಮ್ಮಾಯಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಎಸ್.ಆರ್ ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣಕ್ಕೆ ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. 1994ರ ಮಾರ್ಚ್ 11ರಂದು ಕೋರ್ಟ್ ತೀರ್ಪು ಪ್ರಕಟಿಸಿತು. “ಜನರಿಂದ ಆಯ್ಕೆಯಾದ ಸರ್ಕಾರದ ಬಹುಮತವನ್ನು ವಿಧಾನಸಭೆಯಲ್ಲಿ ಮಾತ್ರ ಪರೀಕ್ಷೆಗೆ ಒಡ್ಡಬೇಕೇ ಹೊರತಾಗಿ, ರಾಜ್ಯಪಾಲರು ತಮ್ಮ ಬಣ್ಣದ ಚಾಳೀಸಿನಲ್ಲಿ ನೋಡಿ ನಿರ್ಣಯಿಸತಕ್ಕದ್ದಲ್ಲ” ಎಂದಿತು. ಸ್ಪೀಕರ್ ಸ್ಥಾನದ ಮಹತ್ವವನ್ನು ಎತ್ತಿಹಿಡಿದ ಕೋರ್ಟ್, ಯಾವುದೇ ಶಾಸನಸಭೆಯ ವಿಸರ್ಜನೆ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಚರ್ಚೆಯಾಗಿ ಅಂಗೀಕಾರವಾಗಬೇಕು ಎಂದು ವಿಶ್ಲೇಷಿಸಿತು. ಈ ಚಾರಿತ್ರಿಕ ತೀರ್ಪಿನಿಂದಾಗಿ ಕೇಂದ್ರ ಸರ್ಕಾರದ ಗರ್ವಭಂಗವಾಯಿತು. “ಮುಖ್ಯಮಂತ್ರಿಗೆ ಬಹುಮತ ಇದೆಯೋ, ಇಲ್ಲವೋ ಎಂಬುದನ್ನು ವಿಧಾನಸಭೆಯಲ್ಲಿ ಮಾತ್ರ ಪರೀಕ್ಷಿಸಬೇಕೇ ಹೊರತು, ರಾಜಭವನದಲ್ಲಿ ಅಲ್ಲ” ಎಂದಿದ್ದು ಐತಿಹಾಸಿಕ ನಡೆ.

venkatasubbayya
ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ 11ನೇ ವ್ಯಕ್ತಿ ಎಸ್.ಆರ್.ಬೊಮ್ಮಾಯಿಯವರು. ಅಂದಿನ ರಾಜ್ಯಪಾಲ ಪಿ.ವೆಂಕಟಸುಬ್ಬಯ್ಯ ಪ್ರಮಾಣ ವಚನ ಬೋಧಿಸಿದ್ದರು

ಎಸ್.ಆರ್.ಬೊಮ್ಮಾಯಿ ಬಳಿಕ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದರು. ಆನಂತರದ ನಡುವಿನ ಸುಮಾರು 15ರಿಂದ 20 ವರ್ಷಗಳಲ್ಲಿ ರಾಜ್ಯಪಾಲರು ವಿವಾದದ ಕೇಂದ್ರವಾಗಿದ್ದು ಕಡಿಮೆ. ಆದರೆ ಕೇಂದ್ರ ಸರ್ಕಾರದೊಂದಿಗೆ ಕರ್ನಾಟಕದ ತಿಕ್ಕಾಟ ಮಾತ್ರ ಭಾರೀ ನಡೆದಿದೆ. ಸಿಎಂ ಆಗಿದ್ದ ವೀರೇಂದ್ರ ಪಾಟೀಲ್ ಪಾರ್ಶ್ವವಾಯುಗೆ ತುತ್ತಾಗಿದ್ದ ಸಂದರ್ಭ. ಅವರನ್ನು ನೋಡಲು ಬಂದಿದ್ದ ರಾಜೀವ್ ಗಾಂಧಿಯವರು ವಿಮಾನನಿಲ್ದಾಣಕ್ಕೆ ಪತ್ರಕರ್ತರನ್ನು ಕರೆಸಿಕೊಂಡು, ‘ಸೋಮವಾರ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ, ಹೊಸ ಮುಖ್ಯಮಂತ್ರಿಯ ಆಯ್ಕೆ ಆಗುತ್ತದೆ’ ಎಂದು ಬಿಟ್ಟರು. ಆಗ ಸ್ಥಳೀಯ ಜನಪ್ರಿಯ ಕಾಂಗ್ರೆಸ್ ನಾಯಕನ ಪರವಾಗಿಯೂ ಹೈಕಮಾಂಡ್ ವಿರುದ್ಧವಾಗಿಯೂ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. 1991ರಿಂದ 2007ರ ಅವಧಿಯಲ್ಲಿ ಕಾವೇರಿ ಕಾವು ಜೋರಾಗಿತ್ತು. ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾವೇರಿ ವಿವಾದದ ಮಧ್ಯಂತರ ತೀರ್ಪು ಬಂದಿತು. ಆಡಳಿತ ಪಕ್ಷದ ನಾಯಕ ಬಂಗಾರಪ್ಪನವರೇ ಬಂದ್‌ಗೆ ಕರೆ ಕೊಟ್ಟಿದ್ದರು! ಸುಪ್ರೀಂಕೋರ್ಟ್‌ನ ನಿರ್ಧಾರದ ವಿರುದ್ಧ ಬಂಗಾರಪ್ಪ ಸುಗ್ರೀವಾಜ್ಞೆ ತಂದಿದ್ದರು. ಅದಕ್ಕೆ ರಾಜ್ಯಪಾಲರು ಸಹಿಯನ್ನೂ ಹಾಕಿದ್ದರು. ಆದರೆ ಸುಗ್ರೀವಾಜ್ಞೆ ತಂದ ಮೂರೇ ದಿನಕ್ಕೆ ಬಂಗಾರಪ್ಪ ನೀರು ಬಿಟ್ಟಿದ್ದು ಬೇರೆಯೇ ಕಥೆ. ಕಾವೇರಿ ವಿಚಾರವಾಗಿ ಕೇಂದ್ರದೊಂದಿಗಿನ ರಾಜ್ಯದ ತಿಕ್ಕಾಟ ದೀರ್ಘಕಾಲಿನದ್ದು.

ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-3)

ರಾಜ್ಯಪಾಲರ ನಡುವಿನ ಗುದ್ದಾಟ ರಾಜ್ಯದಲ್ಲಿ ತಾರಕ್ಕೇರಿದ್ದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮತ್ತು ಹಂಸರಾಜ ಭಾರದ್ವಾಜ್ ಗವರ್ನರ್ ಆಗಿದ್ದ ವೇಳೆ. ಆಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದಿದ್ದ ಬಿಎಸ್‌ವೈ ಸುತ್ತ ಹಗರಣಗಳ ಸರಮಾಲೆಯೇ ಹಬ್ಬಿದ್ದವು. ಗಣಿಧೂಳು ಮೈತುಂಬಾ ಮೆತ್ತಿಕೊಂಡಿತ್ತು. ಎಸ್.ಆರ್.ಹಿರೇಮಠರ ಥರದ ಹೋರಾಟಗಾರರು ಸರ್ಕಾರವನ್ನು ಸಿಂಹಸ್ವಪ್ನವಾಗಿ ಕಾಡುತ್ತಿದ್ದರು. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ರಾಜ್ಯದಲ್ಲಿ ಬಳ್ಳಾರಿ ಪಾದಯಾತ್ರೆಯಂತಹ ಹೋರಾಟಗಳನ್ನೂ ಕಾಂಗ್ರೆಸ್ ಮಾಡಿತ್ತು. ರಾಜ್ಯಪಾಲರನ್ನು ಎದುರಿಸುವ ನೈತಿಕ ಬಲ ಬಿಜೆಪಿಗೆ ಇಲ್ಲವಾಗಿತ್ತು. ಈ ಸಂದರ್ಭವನ್ನು ರಾಜ್ಯಪಾಲರು ಯಶಸ್ವಿಯಾಗಿ ಬಳಸಿಕೊಂಡರೆಂದೇ ಹೇಳಬೇಕು.

ಬಿಜೆಪಿ ಸರ್ಕಾರದ ಪ್ರತಿ ಹೆಜ್ಜೆಯನ್ನು ಜಾತಕ ಪಕ್ಷಯಂತೆ ಕಾದು ಕಿರಿಕಿರಿ ಉಂಟು ಮಾಡಿದರು. ವಿವಾದಿತ ಮಸೂದೆಗಳಿಗೆ ಕೊಕ್ ನೀಡಿ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರಿಗೆ ಛೀಮಾರಿ ಹಾಕಿದರು, ಮುಖ್ಯಮಂತ್ರಿಯನ್ನು ಬಹಿರಂಗವಾಗಿ ‘ಚೋರ್’ ಎಂದೂ ಟೀಕಿಸಿಬಿಟ್ಟಿದ್ದರು ಹಂಸರಾಜ್. ಮಾಧ್ಯಮಗಳಿಗೆ ನಿತ್ಯವೂ ಸುದ್ದಿಯನ್ನು ಒದಗಿಸಿ ಸುದ್ದಿಯಲ್ಲಿದ್ದರು.

Hamsaraj
ಹಂಸರಾಜ್ ಭಾರದ್ವಾಜ್

“ಇವ್ರು(ಬಿಜೆಪಿ ಸರ್ಕಾರ) ಏನು ಮಾಡುತ್ತಿದ್ದಾರೋ ಯಾರಿಗೂ ಗೊತ್ತಿಲ್ಲ, ಬೆಂಗಳೂರು ಗಾರ್ಬೇಜ್ ಸಿಟಿಯಾಗಿದೆ. ಇನ್ನಷ್ಟು ಗುತ್ತಿಗೆದಾರರನ್ನು ಕರೆ ತಂದು ತ್ಯಾಜ್ಯ ವಿಲೇವಾರಿ ಮಾಡುವುದನ್ನು ಬೆಂಗಳೂರು ಉಸ್ತುವಾರಿ ಸಚಿವರು ಮರೆತ್ತಿದ್ದಾರೆ. ಸರ್ಕಾರದ ಜೊತೆ ಕಸದ ಸಮಸ್ಯೆ ಬಗ್ಗೆ ಮಾತನಾಡಿದ್ದೇನೆ. ತ್ವರಿತವಾಗಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದೇನೆ. ಇನ್ನೇನು ಮಾಡಲು ಸಾಧ್ಯ, ಅವರ ಕೈಲಿ ಆಗಲ್ಲ ಅಂದ್ರೆ, ನನ್ನ ಜೊತೆ 20 ಕೆಲಸಗಾರರನ್ನು ಕೊಡಿ, ಕೈಗೆ ಪೊರಕೆ ಕೊಡಿ ನಾನೇ ರಸ್ತೆಗಿಳಿದು ಕಸ ಗುಡಿಸಿ, ಸ್ವಚ್ಛಗೊಳಿಸುತ್ತೇನೆ” ಎಂದು ಗುಡುಗಿದ್ದರು.

ಭೂ ಹಗರಣ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ವಿರುದ್ಧ 15 ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ನೀಡಿದ ಬಳಿಕ ರಾಷ್ಟ್ರಪತಿ ಅಂಗಳವನ್ನೂ ಪ್ರಕರಣ ತಲುಪಿತ್ತು. ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ ಎಂದು ಹೇಳಿ, ರಾಷ್ಟ್ರಪತಿ ಆಳ್ವಿಕೆಗೆ ಎರಡು ಬಾರಿ ಶಿಫಾರಸ್ಸು ಮಾಡಿದ್ದರು. ಹಂಸರಾಜ್ ಭಾರದ್ವಾಜ್‌ರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಬಿಜೆಪಿ ಹೋರಾಟ ಶುರು ಮಾಡಿತ್ತು. ಯಾವುದಕ್ಕೂ ಅಂಜದ ಹಂಸರಾಜ್, ‘ಕರ್ನಾಟಕ ಸರ್ಕಾರದಲ್ಲಿ ಭ್ರಷ್ಟರೇ ತುಂಬಿದ್ದಾರೆ, ಅಕ್ರಮ ಗಣಿಗಾರಿಕೆಯಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿದೆ, ಸಿಎಂ ಚೋರ್’ ಎಂದಿದ್ದರು. ಎಂ ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡುವುದನ್ನು ತಡೆಹಿಡಿದಿದ್ದರು. ಮೈಸೂರು ವಿವಿ ವೈಸ್ ಛಾನ್ಸಲರ್ ವಿಜಿ ತಳವಾರ್ ಅವರ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದರು. ಗಣಿ ಹಗರಣಕ್ಕೆ ಸಿಲುಕಿ ಕುದಿದು ಹೋಗಿದ್ದ ಸಚಿವ ಜನಾರ್ದನ ರೆಡ್ಡಿ, ”ಎಚ್.ಆರ್. ಭಾರದ್ವಜ್ ಅವರು ಹಂಸರಾಜ್ ಅಲ್ಲ, ಕಂಸರಾಜ್. ಇತಿಹಾಸದಲ್ಲಿ ಕಂಸರಾಜನಿಗೆ ಆದ ಗತಿಯೇ ಹಂಸರಾಜ್ ಅವರಿಗೂ ಆಗಲಿದೆ. ಇದೇ ಫಲಿತಾಂಶ ಕಾಂಗ್ರೆಸ್‌ಗೂ ಸಿಗಲಿದೆ” ಎಂದಿದ್ದರು. ಕೆ.ಎಸ್ ಈಶ್ವರಪ್ಪ ಅವರು ಹಂಸರಾಜ್ ಅವರನ್ನು ಧ್ವಂಸರಾಜ್ ಎಂದು ಜರಿದಿದ್ದರು.

ವಾಜುಭಾಯಿ ವಾಲಾ ಅವರ ಕಾಲದಲ್ಲಿ ಏನಾಯಿತು ಎಂಬುದನ್ನು ಈ ಮೊದಲೇ ಪ್ರಸ್ತಾಪಿಸಿದ್ದೇವೆ. ಅದು ಬಿಟ್ಟರೆ ವಾಲಾ ಸುದ್ದಿಯಾಗಿದ್ದು ಕಡಿಮೆ. ಆದರೆ ಈಗ ಮತ್ತೆ ರಾಜ್ಯಪಾಲ ಹುದ್ದೆ ರಾಜಕಾರಣದ ಕೇಂದ್ರಬಿಂದುವಾಗಿದೆ. ಮುಡಾ ಸೈಟು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆಪಾದಿಸಿ ಸಿಎಂ ಕುಟುಂಬವನ್ನು ಕಟಕಟೆಗೆ ಎಳೆಯಲಾಗಿದೆ. ತಮ್ಮೆದುರು ದೂರು ಬಂದ ಕೂಡಲೇ ಪ್ರಾಸಿಕ್ಯೂಷನ್‌ಗೆ ಅನುಮತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೀಡಿದರು. ಕ್ಲೀನ್ ಹ್ಯಾಂಡ್ ಎಂಬ ಇಮೇಜ್ ಹೊಂದಿದ್ದ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನಕ್ಕೆ ಮೇಲುಗೈ ಆಯಿತು, ಇದರಲ್ಲಿ ರಾಜ್ಯಪಾಲದ ಪಾತ್ರ ದೊಡ್ಡದಿದೆ. ರಾಜ್ಯಪಾಲರು ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಾರೆ ಎಂಬುದು ಮತ್ತೆ ಸಾಬೀತಾಯಿತು. ಕೇಂದ್ರ ಸಚಿವ, ಬಿಜೆಪಿ ದೋಸ್ತಿ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ಧ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂಬ ಕಡತ ತಿಂಗಳುಗಟ್ಟಲೆ ಕೊಳೆಯುತ್ತಿದ್ದರೂ ಗೆಹ್ಲೋಟ್ ತಲೆಕೆಡಿಸಿಕೊಳ್ಳಲಿಲ್ಲ. ಸಿದ್ದರಾಮಯ್ಯನವರ ಮೇಲಿನ ಆಪಾದನೆಗೆ ತೋರಿದ ತರಾತುರಿ ಬಿಜೆಪಿ ನಾಯಕರ ವಿರುದ್ಧ ಇಲ್ಲವೇ ಇಲ್ಲ.

ಇದನ್ನೂ ಓದಿರಿ: ನಮ್ಮ ಕರ್ನಾಟಕ- 50 | ಏಕೀಕರಣೋತ್ತರ ಕಾಲದ ಸಾಧನೆ ಮತ್ತು ವೈರುಧ್ಯ

ಸಂವಿಧಾನದ 220ನೇ ವಿಧಿಗೆ ಸಂಬಂಧಿಸಿದಂತೆ ಅಭಿಪ್ರಾಯ ತಾಳಿರುವ ಸುಪ್ರೀಂಕೋರ್ಟ್, ಕೆಲವು ಸಂದರ್ಭಗಳಲ್ಲಿ ವಿವೇಚನಾಧಿಕಾರವನ್ನು ಚಲಾಯಿಸಬಹುದೆಂದು ಹೇಳಿದೆ. ವಿವಾದಾಸ್ಪದ ಮಸೂದೆಗಳನ್ನು ರಾಜ್ಯ ಶಾಸಕಾಂಗ ಅಂಗೀಕರಿಸಿದ್ದರೆ ಅವುಗಳನ್ನು ತಡೆ ಹಿಡಿದು, ರಾಷ್ಟ್ರಪತಿಗಳ ತೀರ್ಮಾನಕ್ಕೆ ಸರ್ಕಾರ ಕಾಯ್ದಿರಿಸಬಹುದು. ಸಂವಿಧಾನಬದ್ಧವಾಗಿ ರಾಜ್ಯ ಸರ್ಕಾರಕ್ಕೆ ಮಸೂದೆಗಳನ್ನು ವಾಪಸ್‌ ಕಳುಹಿಸಬಹುದು. ಆದರೆ ರಾಜ್ಯಪಾಲರುಗಳು ಪದೇ ಪದೇ ಮಸೂದೆಗಳನ್ನು ತಡೆ ಹಿಡಿದು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸುವುದು ಅಥವಾ ರಾಜ್ಯ ಸರ್ಕಾರಕ್ಕೆ ವಾಪಸ್ ನೀಡುವುದು ನಡೆಯುತ್ತಿದೆ. ರಾಜ್ಯದಲ್ಲಿ ಸದ್ಯ ಗವರ್ನರ್ ಆಗಿರುವ ಚಂದ್ ಗೆಹ್ಲೋಟ್ 11 ಮಸೂದೆಗಳನ್ನು ಹಿಂತಿರುಗಿ ಕಳುಹಿಸಿರುವುದು ಸುದ್ದಿಯಾಗಿದೆ. ಇಂತಹ ವಿಳಂಬ ನೀತಿಗಳು ಆಡಳಿತ ಚಕ್ರ ತೆವಳಲು ಕಾರಣವಾಗುತ್ತವೆ.

ರಾಜ್ಯಪಾಲರ ಹುದ್ದೆ ಅಗತ್ಯವಿದೆಯೇ? ಎಂಬ ಚರ್ಚೆ ಸಾಕಷ್ಟು ನಡೆದಿದೆ. ಸುಪ್ರೀಂಕೋರ್ಟ್ ಕೂಡ ಆರ್.ಜೆ.ಕಪೂರ್ ಪ್ರಕರಣದಲ್ಲಿ ರಾಜ್ಯಪಾಲರ ಹುದ್ದೆಯನ್ನು ಇಂಗ್ಲೆಂಡಿನ ರಾಜನ ಹುದ್ದೆಗೆ ಹೋಲಿಕೆ ಮಾಡಿದೆ. ರಾಜ್ಯಪಾಲರು ರಾಜ್ಯದ ಮುಖ್ಯಸ್ಥರೇ ಹೊರತು ಸರ್ಕಾರ ಮುಖ್ಯಸ್ಥರಲ್ಲ ಎಂಬುದು ಸಂವಿಧಾನ ರಚನಾಕಾರರ ನಂಬಿಕೆಯಾಗಿತ್ತು. ಅದು ನಿಜವೂ ಕೂಡ. 167ನೇ ವಿಧಿ ಪ್ರಕಾರ ರಾಜ್ಯಪಾಲರು ರಾಜ್ಯ ಮಂತ್ರಿಮಂಡಲದ ತೀರ್ಮಾನಗಳನ್ನು ರದ್ದುಗೊಳಿಸಲು ನಿರಂಕುಶ ಅಧಿಕಾರ ಹೊಂದಿಲ್ಲ. 356ನೇ ವಿಧಿ ಅನ್ವಯ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದರೆ ವಾಸ್ತವವಾಗಿ ರಾಜ್ಯಪಾಲರೇ ಆಡಳಿತ ನಡೆಸುತ್ತಾದರಾದರೂ ಸಮಯ ಬಂದಾಗಲೆಲ್ಲ ಅಸ್ಥಿರತೆ ಸೃಷ್ಟಿಸುವ ಪ್ರಯತ್ನಗಳನ್ನು ರಾಜ್ಯಪಾಲರು ಮಾಡಿರುವುದು ಕರ್ನಾಟಕದ ರಾಜಕೀಯ ಇತಿಹಾಸದುದ್ದಕ್ಕೂ ನಡೆಯುತ್ತಾ ಬಂದಿರುವುದಂತೂ ಸುಳ್ಳಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಪಲ್ಲಟ, ತಲ್ಲಣ, ಅಸ್ಥಿರತೆ ತರಲು ಯತ್ನಿಸುವ ರಾಜ್ಯಪಾಲ ಹುದ್ದೆಯ ಸಂಬಂಧ ಮತ್ತಷ್ಟು ಗಂಭೀರ ಚರ್ಚೆಗಳಾಗಬೇಕಿದೆ.

(‘ಈದಿನ.ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...