ಈ ಬ್ಲೂ ಎಕಾನಮಿ ಯೋಜನೆಗಳು ತಾತ್ಕಾಲಿಕವಾಗಿ ಜಿಡಿಪಿ ಮತ್ತು ಆದಾಯ ಹೆಚ್ಚಳದ ಆಮಿಷವನ್ನೇನೋ ಒಡ್ಡಬಹುದು, ಆದರೆ ದೀರ್ಘಕಾಲದಲ್ಲಿ ಮೀನುಗಾರರ ಜೀವನೋಪಾಯಕ್ಕೆ ಹೊಡೆತವನ್ನು ನೀಡಬಹುದು, ಪರಿಸರ ಹಾನಿ, ಕರಾವಳಿ ತೀರ ಪ್ರದೇಶಗಳ ಕುಗ್ಗುವಿಕೆ, ಭಾಗೋಳಿಕ ಬದಲಾವಣೆ ಮುಂತಾದವುಗಳಿಗೆ ಕಾರಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕೇಂದ್ರ ಸರ್ಕಾರ ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಸುಮಾರು 80,000 ದಿಂದ 90,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗ್ರೇಟ್ ನಿಕೋಬಾರ್ ಮೂಲಸೌಕರ್ಯ ಯೋಜನೆಗೆ ʻಗಾರ್ಡಿಯನ್ ಆಫ್ ಎನ್ವಿರಾನ್‌ಮೆಂಟ್ʼ ಎಂಬ ಅಭಿದಾನಕ್ಕೆ ಪಾತ್ರವಾಗಿದ್ದ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯೇ (ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್/ಎನ್‌ಜಿಟಿ) ಹಸಿರು ನಿಶಾನೆ ತೋರಿರುವುದು ಪರಿಸರಪರ ಹೋರಾಟಗಾರರ ವಲಯದಲ್ಲಿ ಕೇವಲ ತೀವ್ರ ನಿರಾಶೆ ಮೂಡಿಸಿರುವುದು ಮಾತ್ರವಲ್ಲ, ಇನ್ನು ಭವಿಷ್ಯದಲ್ಲಿ ಪರಿಸರಪರ ಹೋರಾಟಗಳಿಗೆ ಭರವಸೆಯನ್ನೇ ಇಲ್ಲವಾಗಿಸಿದೆ.
ʻಪರಿಸರ ಅನುಮತಿ ಪ್ರಕ್ರಿಯೆಯನ್ನು ಗೌರವಿಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಅದನ್ನು ಬೈಪಾಸ್ ಮಾಡಬಾರದುʼ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದ ಹಸಿರು ನ್ಯಾಯಮಂಡಳಿಯೇ, ಪ್ರಸ್ತುತ ಈ ಯೋಜನೆಗೆ ಪರಿಸರ ಸಚಿವಾಲಯ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಾಕಷ್ಟು ಅರ್ಜಿಗಳು ಬಂದಿದ್ದರೂ, ಅವುಗಳನ್ನೆಲ್ಲ ವಜಾಗೊಳಿಸಿದೆ. ಈ ಯೋಜನೆಯನ್ನು ಹಿಂದೂ ಮಹಾ ಸಾಗರ ಪ್ರದೇಶದಲ್ಲಿ ಭಾರತ ತನ್ನ ಆರ್ಥಿಕತೆಯನ್ನು ವಿಸ್ತರಿಸಲು ಯೋಜಿಸಿರುವ ಮಹತ್ತರ ಯೋಜನೆ ಎಂದು ಬಣ್ಣಿಸುತ್ತ ಇದರಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣಗಳಿಲ್ಲ ಎನ್ನುತ್ತ “ಪ್ರಪಂಚದ ಅತ್ಯಂತ ವಿಶಿಷ್ಟ ನ್ಯಾಯಾಧಿಕರಣಗಳಲ್ಲಿ ಒಂದು” ಎನ್ನುವ ತನ್ನ ಬಗೆಗಿನ ಹೆಗ್ಗಳಿಕೆಯನ್ನು ತಾನೇ ಮಣ್ಣುಪಾಲು ಮಾಡಿದೆ.
ಈ ಮೊದಲು ದೊಡ್ಡ ಹೂಡಿಕೆಯ ಪ್ರಾಜೆಕ್ಟ್‌ಗಳಿಗೆ ನೀಡಲಾದ ಪರಿಸರ ಅನುಮತಿಗಳನ್ನು ರದ್ದುಗೊಳಿಸುವ ಅಥವಾ ಪುನಃಪರಿಶೀಲಿಸುವ ಮೂಲಕ – ಪರಿಸರದ ರಕ್ಷಕನಾಗಿ, ಪರಿಸರವನ್ನು ಉಳಿಸಲು ದಿಟ್ಟ ಹೆಜ್ಜೆಗಳನ್ನಿಟ್ಟಿದ್ದ ಹಸಿರು ನ್ಯಾಯಮಂಡಳಿ ಗ್ರೇಟ್ ನಿಕೋಬಾರ್ ಯೋಜನೆಯ ವಿಷಯದಲ್ಲಿ ಮುಗ್ಗರಿಸಿದೆ.
ಗ್ರೇಟ್ ನಿಕೋಬಾರ್ ಯೋಜನೆ ಮತ್ತು ಪರಿಸರ ನಾಶ
ಗ್ರೇಟ್ ನಿಕೋಬಾರ್ ದ್ವೀಪ ಸಮೂಹದ ಗಲತಿಯಾ ಬೇ ಪ್ರದೇಶದಲ್ಲಿ ಯೋಜಿಸಲಾಗಿರುವ ಈ ಯೋಜನೆ ಸರಕು ಸಾಗಣಿಕಾ ಬಂದರು, ನಾಗರಿಕ-ಸೈನಿಕ ವಿಮಾನ ನಿಲ್ದಾಣ ಮತ್ತು 166 ಚದರ ಕಿ.ಮೀ. ವಿಸ್ತೀರ್ಣ ವ್ಯಾಪ್ತಿಯಲ್ಲಿ ನಗರ ನಿರ್ಮಾಣವನ್ನು ಒಳಗೊಂಡಿದೆ. ಈ ಯೋಜನೆ ತನ್ನ ಕಾರ್ಯ ಚಟುವಟಿಕೆಗಾಗಿ ಈ ದ್ವೀಪದ ಸುಮಾರು 130 ಚದರ ಕಿ.ಮೀ. ಅರಣ್ಯ ಭೂಮಿಯನ್ನು ಆಪೋಶನ ತೆಗೆದುಕೊಳ್ಳಲಿದೆ. ಜಾಗತಿಕ ಮಟ್ಟದಲ್ಲಿಯೇ ಜೀವವೈವಿಧ್ಯತೆಯ ಹಾಟ್‌ಸ್ಪಾಟ್ ಎಂದು ಗುರುತಿಸಲ್ಪಟ್ಟಿರುವ ಈ ಪ್ರದೇಶದಲ್ಲಿ ಈ ಯೋಜನೆಯಿಂದಾಗಿ, ನಿಕೋಬಾರ್ ಮೆಗಾಪೋಡ್ ಪಕ್ಷಿಗಳು, ಪ್ರಪಂಚದಲ್ಲಿಯೇ ಅತಿ ದೊಡ್ಡ ಆಮೆ ಎಂದು ಗುರುತಿಸಲ್ಪಟ್ಟಿರುವ ಲೆದರ್‌ಬ್ಯಾಕ್ ಆಮೆ ಸೇರಿದಂತೆ ವಿವಿಧ ಅಪರೂಪದ ಪ್ರಬೇಧಕ್ಕೆ ಸೇರಿದ ಸಸ್ತನಿಗಳು ಅಳಿವಿನಂಚಿಗೆ ಸರಿಯಲಿವೆ. ಗಲತಿಯಾ ಬೇ ಏಷ್ಯಾದಲ್ಲಿಯೇ ಆಮೆಗಳು ಮೊಟ್ಟೆಗಳನ್ನು ಇಡಲು ಬರುವ ಅತಿ ದೊಡ್ಡ ಪ್ರದೇಶ ಎಂದು ಪ್ರಸಿದ್ಧಿಯಾಗಿದೆ. ಬರಲಿರುವ ಬಂದರು ಆಮೆಗಳ ಸಂತಾನೋತ್ಪತ್ತಿಗೆ ಅಡಚಣೆ ಉಂಟುಮಾಡಲಿದೆ.

ಮ್ಯಾಂಗ್ರೊವ್ ಕಾಡುಗಳ ನಾಶ, ತೀರ ಪ್ರದೇಶದಲ್ಲಿ ಸವಕಳಿ ಮುಂತಾದವುಗಳನ್ನೂ ಇಲ್ಲಿ ಅಂದಾಜಿಸಲಾಗುತ್ತಿದೆ. ಇದರೊಂದಿಗೆ ಇಲ್ಲಿರುವ ಶೋಂಪೆನ್ ಮತ್ತು ನಿಕೋಬಾರೀಸ್ ಆದಿವಾಸಿಗಳ ಪಂಗಡದ ವಸತಿ ಪ್ರದೇಶಗಳಿಗೂ ಕುತ್ತುಂಟಾಗಲಿರುವ ಜೊತೆಗೆ ಅವರ ವಿಶಿಷ್ಟ ಜೀವನಶೈಲಿ ಕೊನೆಗಾಣಲಿದೆ. ಪರಿಸರವಾದಿಗಳು ʻಇರ್ರಿವರ್ಸಿಬಲ್ ಎಕಾಲಜಿಕಲ್ ಡಿಸಾಸ್ಟರ್ʼ ಎಂದು ಈ ಯೋಜನೆಯ ಕುರಿತಾಗಿ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತ ಈ ಯೋಜನೆಯ ಮಾನಿಟರಿಂಗ್ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ನುಡಿಯುತ್ತಾರೆ. ಈ ಹಿಂದೆ ಯುಪಿಎ ಅವಧಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಪರಿಸರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಜೈರಾಮ್ ರಮೇಶ್ ಸಹ ಹಸಿರು ನ್ಯಾಯಮಂಡಳಿಯ ಈ ನಡೆಯ ಕುರಿತು ʻಡೀಪ್‌ಲಿ ಡಿಸ್‌ಅಪಾಯಿಟಿಂಗ್ʼ ಎನ್ನುತ್ತಾ ತಮಗಾದ ಆಘಾತವನ್ನು ವ್ಯಕ್ತಪಡಿಸಿದ್ದಾರೆ.
ಚೀನಾದ ʻಸ್ಟ್ರಿಂಗ್ ಆಫ್ ಪರ್ಲ್ʼ v/s ಭಾರತದ “ಆಕ್ಟ್ ಈಸ್ಟ್ ಪಾಲಿಸಿ”
ಹಿಂದೂ ಮಹಾ ಸಾಗರ ಪ್ರದೇಶದಲ್ಲಿ ತನ್ನ ಉಪಸ್ಥಿತಿಯನ್ನು ಸ್ಥಾಪಿಸುವ ಮೂಲಕ, ವಿದೇಶೀ ಶಕ್ತಿಗಳ ಅದರಲ್ಲೂ ಮುಖ್ಯವಾಗಿ ಚೀನಾದ ವಿರುದ್ಧ ಕಾರ್ಯತಂತ್ರವನ್ನು ರೂಪಿಸಲು ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲಾಗುತ್ತಿದೆ ಎನ್ನಲಾಗುತ್ತಿದೆ.
ಸರಕು ಸಾಗಣಿಕೆಗೆ ಹಿಂದೂ ಮಹಾಸಾಗರದ ಮಾರ್ಗವನ್ನು ಹೆಚ್ಚಾಗಿ ಅವಲಂಬಿಸಿರುವ ಚೀನಾ ಈ ಪ್ರದೇಶದಲ್ಲಿ ತನ್ನ ಸಮುದ್ರ ಮಾರ್ಗವನ್ನು ವಿಸ್ತರಿಸುತ್ತಿದೆ. 21ನೇ ಶತಮಾನದ ಮರೈಟೈಮ್ ಸಿಲ್ಕ್ ರೋಡ್ ಎಂದು ಕರೆಯಲಾಗುತ್ತಿರುವ ಸಮುದ್ರ ಮಾರ್ಗವನ್ನು ನಿರ್ಮಿಸುತ್ತಿರುವ ಚೀನಾ ʻವಾಣಿಜ್ಯ ಉದ್ದೇಶಗಳಿಗೆʼ ಎಂದು ಹೇಳಿಕೊಂಡರೂ, ಈ ಮಾರ್ಗ ಶ್ರೀಲಂಕಾ, ಮಾಲ್ಡೀವ್ಸ್, ಮಯನ್ಮಾರ್, ಪಾಕಿಸ್ತಾನದಲ್ಲಿ ಬಂದರುಗಳನ್ನು ನಿರ್ಮಿಸುತ್ತಾ ಭಾರತವನ್ನು ಆವರಿಸುತ್ತಿದೆ. ಇದನ್ನು “ಭಾರತವನ್ನು ಸುತ್ತುವರೆಯುವ” ರಣತಂತ್ರ ʻಸ್ಟ್ರಿಂಗ್ ಆಫ್ ಪರ್ಲ್ʼ ಎಂದು ಭಾರತ ಅನುಮಾನಿಸುತ್ತಿದೆ.
ಇದನ್ನು ಓದಿದ್ದೀರಾ? ಪ್ರೀಮಿಯಂ ಲೇಖನ | ಲೈಂಗಿಕ ಗುರುತು ಪಾಶ್ಚಾತ್ಯವಲ್ಲ, ವಾಸ್ತವ; ಇದಕ್ಕೆ ಪುರಾಣಗಳೇ ಸಾಕ್ಷಿ
ಸರ್ಕಾರವು, ತನ್ನ ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡುತ್ತಿರುವ ಚೀನಾದ ಬಂದರು ವಿಸ್ತರಣಾ ನೀತಿಯನ್ನು ಎದುರಿಸಲು, ಸರ್ಕಾರದ ವಿದೇಶಾಂಗ ನೀತಿ “ಆಕ್ಟ್ ಈಸ್ಟ್ ಪಾಲಿಸಿ” ಅಡಿಯಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವಕ್ಕೆ ಪ್ರತಿತಂತ್ರ ರೂಪಿಸಲು ಗ್ರೇಟ್ ನಿಕೋಬಾರ್ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲಾಗುತ್ತಿದೆ ಎನ್ನುತ್ತಿದೆ. ವಿದೇಶಗಳ ಜಿಯೋ ಪಾಲಿಟಿಕ್ಸ್ ತಂತ್ರವನ್ನು ಬಣ್ಣಿಸುತ್ತ, ಈ ಯೋಜನೆಗೆ ಎಲ್ಲರ ಮನಸ್ಸಿನಲ್ಲಿʻಸಾಫ್ಟ್ ಕಾರ್ನರ್ʼ ಹುಟ್ಟುಹಾಕುತ್ತಿದೆ. ಹೀಗಾಗಿ ಗ್ರೀನ್ ಟ್ರಿಬ್ಯೂನಲ್ ಕೂಡ ಈ ಯೋಜನೆಯನ್ನು “ಸ್ಟ್ರ್ಯಾಟಜಿಕ್ ಇಂಪಾರ್ಟೆನ್ಸ್” ಎಂದು ಹೇಳುತ್ತಾ ತನ್ನ ಪರಿಸರಪರ ಹೊಣೆಗಾರಿಕೆಯನ್ನು ಕೈಬಿಟ್ಟಿದೆ.
ಬ್ಲೂ ಎಕಾನಮಿ ಮತ್ತು ಮೆರಿಟೈಮ್ ಅಮೃತ ಕಾಲ ವಿಷನ್ 2047
ಸಮುದ್ರ ಮತ್ತು ಕರಾವಳಿ ಪ್ರದೇಶಗಳ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಬಳಸಿಕೊಂಡು ಆರ್ಥಿಕ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಆರಂಭಿಸಿದ ಸಾಗರಮಾಲಾ ಯೋಜನೆ ದೇಶದ ಬ್ಲೂ ಎಕಾನಮಿಯ ಕೇಂದ್ರಬಿಂದು. ಇದೇ ಅಲ್ಲದೆ ಭಾರತಕ್ಕೆ ಈ ವರೆಗೆ ದೊಡ್ಡ ಪ್ರಮಾಣದ ಸರಕು ಸಾಗಾಣಿಕೆಗೆ ಸೂಕ್ತ ಬಂದರು ಇಲ್ಲ. ಭಾರತದ ಬಹುತೇಕ ಬಂದರುಗಳಲ್ಲಿ ನೀರಿನ ಆಳ ಕಡಿಮೆ ಇದ್ದು ದೊಡ್ಡ ಹಡಗುಗಳ ಪ್ರವೇಶಕ್ಕೆ ತಡೆಯೊಡ್ಡುತ್ತಿದೆ. ಹೀಗಾಗಿ ಇದು ವಿದೇಶಗಳಿಗೆ ನೇರ ಶಿಪ್ಪಿಂಗ್‌ಗೆ ತಡೆಯೊಡ್ಡುತ್ತಾ, ಇತರ ದೇಶಗಳ ಬಂದರನ್ನು ಅವಲಂಬಿಸಿ, ಫೀಡರ್ ಹಡಗುಗಳಲ್ಲಿ ವಿದೇಶಕ್ಕೆ ಸಾಗಿಸಿ ಅಲ್ಲಿ ಮತ್ತೆ ವೆಸೆಲ್‌ಗಳಿಗೆ ರಿಲೋಡ್ ಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ.
ಅಂಕಿಅಂಶಗಳ ಪ್ರಕಾರ ಭಾರತದ 75 ಶೇಕಡಾ ಸರಕು ಸಾಗಾಣಿಕೆ ವಿದೇಶಿ ಬಂದರುಗಳಲ್ಲಿ ನಡೆಯುತ್ತದೆ. ಇದರಿಂದಾಗಿ ದೇಶಕ್ಕೆ ದೊಡ್ಡ ಪ್ರಮಾಣದ ಆದಾಯದ ನಷ್ಟವಾಗುತ್ತಿದೆ ಎಂದು ಸರ್ಕಾರದ ಅಧಿಕೃತ ಸುದ್ದಿ ಮೂಲಗಳು ಹೇಳುತ್ತವೆ. ಇತ್ತೀಚೆಗೆ ಕೇರಳದಲ್ಲಿ ಆರಂಭವಾಗಿರುವ ವಿಝಿಂಜಂ ಬಂದರು ಭಾರತದ ಮೊದಲ ದೊಡ್ಡ ಟ್ರಾನ್ಸ್‌ಶಿಪ್‌ಮೆಂಟ್ ಹಬ್. ಇದು ಈ ನಷ್ಟವನ್ನು ಸ್ವಲ್ಪ ಪ್ರಮಾಣದಲ್ಲಿ ತುಂಬಿಕೊಡುತ್ತಿದೆ. ಅದೇ ರೀತಿ ಗ್ರೇಟ್ ನಿಕೋಬಾರ್ ಯೋಜನೆಯ ಮೂಲಕ ಸರಕು ಸಾಗಾಣಿಕೆಯನ್ನು ಭಾರತದಲ್ಲಿಯೇ ನಿರ್ವಹಿಸುವುದು ಭಾರತ ಸರ್ಕಾರದ ಮೆರಿಟೈಮ್ ಅಮೃತ ಕಾಲ ವಿಷನ್ 2047ರ ಗುರಿ.

ಈ ಬ್ಲೂ ಎಕಾನಮಿ ಯೋಜನೆಗಳು ತಾತ್ಕಾಲಿಕವಾಗಿ ಜಿಡಿಪಿ ಮತ್ತು ಆದಾಯ ಹೆಚ್ಚಳದ ಆಮಿಷವನ್ನೇನೋ ಒಡ್ಡಬಹುದು, ಆದರೆ ದೀರ್ಘಕಾಲದಲ್ಲಿ ಮೀನುಗಾರರ ಜೀವನೋಪಾಯಕ್ಕೆ ಹೊಡೆತವನ್ನು ನೀಡಬಹುದು, ಪರಿಸರ ಹಾನಿ, ಕರಾವಳಿ ತೀರ ಪ್ರದೇಶಗಳ ಕುಗ್ಗುವಿಕೆ, ಭಾಗೋಳಿಕ ಬದಲಾವಣೆ ಮುಂತಾದವುಗಳಿಗೆ ಕಾರಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಸ್ವಯಂ ಪ್ರೇರಿತವಾಗಿ (suo motto) ಪರಿಸರ ನಿಯಮಗಳ ಉಲ್ಲಂಘನೆಗೆ ಕೇಸು ದಾಖಲಿಸಿಕೊಳ್ಳುತ್ತಿದ್ದ, ಯಮುನಾ ನದಿ ಪ್ರವಾಹ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಿ ಆ ಪ್ರದೇಶವನ್ನು ಹಾನಿಗೊಳಿಸಿದ್ದಕ್ಕಾಗಿ ಆರ್ಟ್ ಆಫ್ ಲೀವಿಂಗ್‌ಗೆ, ಘನತ್ಯಾಜ್ಯ ಮತ್ತು ಒಳಚರಂಡಿ ನಿರ್ವಹಣೆಯಲ್ಲಿ ವಿಫಲವಾದುದಕ್ಕೆ ತೆಲಂಗಾಣ ಸರ್ಕಾರಕ್ಕೆ ದಂಡ ವಿಧಿಸಿದ್ದ, ಹೀಗೆ ಅನೇಕ ಪ್ರಕರಣಗಳಲ್ಲಿ ನಿರ್ಭಯವಾಗಿ, ಪಾರದರ್ಶಕತೆಯಿಂದ ತನ್ನ ನ್ಯಾಯ ನಿಷ್ಠುರತೆಗೆ ಸಾಕಷ್ಟು ಹೆಸರಾಗಿದ್ದ ಹಸಿರು ನ್ಯಾಯಮಂಡಳಿ ಇಂದು ಸೊರಗಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಸಾಕಷ್ಟು ಹಣಕಾಸು ಮತ್ತು ಮಾನವ ಸಂಪನ್ಮೂಲಗಳನ್ನು ಒದಗಿಸದೆ, ಸೂಕ್ತ ತಜ್ಞರಿಲ್ಲದೆ ನಿಷ್ಕ್ರಿಯಗೊಂಡಿರುವ ಹಸಿರು ನ್ಯಾಯಮಂಡಳಿಯ ಮೂಲಕ ಯೋಜನೆಗೆ ಅನುಮೋದನೆ ಕೊಡಿಸಿಕೊಂಡಿರುವ ಸರ್ಕಾರ, ʻತೀವ್ರ ಪರಿಸರವಾದವು ದೇಶದ ಕಾರ್ಯತಂತ್ರಗಳಿಗೆ ತಡೆಯೊಡ್ಡಬಾರದುʼ ಎನ್ನುತ್ತಾ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ನಿಯಂತ್ರಣವಿಲ್ಲದ ಯಾವ ಅಭಿವೃದ್ಧಿಯೂ ಅಪಾಯಕಾರಿಯೇ. ಹಸಿರು ನ್ಯಾಯಮಂಡಳಿ ತನ್ನ ಪರಿಸರ ಹೊಣೆಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ಕೊನೆಪಕ್ಷ ಆದಿವಾಸಿಗಳು, ಜೀವವೈವಿಧ್ಯತೆ, ಹವಳದ ದಿಬ್ಬಗಳು ಮತ್ತು ಮ್ಯಾಂಗ್ರೋವ್ ಕಾಡುಗಳ ರಕ್ಷಣೆಗಾಗಿ ಒಂದಿಷ್ಟು ಷರತ್ತುಗಳನ್ನು, ಮತ್ತು ಇವುಗಳ ನಿರ್ವಹಣೆಗಾಗಿ ಸ್ವತಂತ್ರ ಮೇಲ್ವಿಚಾರಣಾ ಸಮಿತಿಯನ್ನು ನೇಮಿಸಲು ಒತ್ತಾಯಿಸಬಹುದಿತ್ತು. ಆದರೆ ಇದರಲ್ಲಿ ಹಸ್ತಕ್ಷೇಪದ ಅಗತ್ಯವೇ ಇಲ್ಲ ಎಂದು ಘೋಷಿಸುವುದರ ಮೂಲಕ ಭವಿಷ್ಯದಲ್ಲಿ ಈ ಯೋಜನೆಯಿಂದಾಗಿ ಸಂಭವಿಸಬಹುದಾದ ಯಾವುದೇ ದುರಂತಕ್ಕೂ ಹಾಗು ಸರ್ಕಾರಕ್ಕೂ ಸಂಬಂಧವೇ ಇಲ್ಲ ಎನ್ನುವ ತೀರ್ಪನ್ನು ಹೊರಡಿಸುತ್ತಾ ಸರ್ಕಾರಕ್ಕೆ ನಿರೀಕ್ಷಣಾ ಜಾಮೀನನ್ನೂ ಮಂಜೂರು ಮಾಡಿಬಿಟ್ಟಿದೆ.
ಇಡೀ ಭೂಮಂಡಲವೇ ಹವಾಮಾನ ಬದಲಾವಣೆ, ಪ್ರಾಕೃತಿಕ ವಿಕೋಪಗಳಿಗೆ ಸಿಲುಕಿ ನಲುಗುತ್ತಿರುವಾಗಲೂ, ಜಿಯೋ ಪಾಲಿಟಿಕ್ಸ್ ಮಾಡುತ್ತಾ ಒಂದು ದೇಶ ಇನ್ನೊಂದು ದೇಶದ ವಿರುದ್ಧ ಮಸಲತ್ತು ಮಾಡುತ್ತ, ತಾನು ಕೂತಿರುವ, ತನಗೆ ಆಧಾರವಾಗಿರುವ ಕೊಂಬೆಗೇ ಕೊಡಲಿ ಹಾಕುವ ಹುಚ್ಚುತನಕ್ಕೂ ತನಗೆ ತಾನೇ ಶಭಾಷ್‌ಗಿರಿ ಕೊಟ್ಟುಕೊಳ್ಳುವ ಹುಚ್ಚಾಟಕ್ಕೆ ಏನ್ನೆನೋಣ?

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ




