ಕರ್ನಾಟಕದಲ್ಲಿ ದಲಿತ ಚಳವಳಿ ಬೆಳೆದ ಮೇಲೆ, ಅಂಬೇಡ್ಕರ್ ಚಿಂತನೆಗಳು ಹೋರಾಟಕ್ಕೆ ಪ್ರವೇಶಿಸಿದ ಬಳಿಕ ಆದ ಬಹುಮುಖ್ಯ ಪಲ್ಲಟಗಳು, ಅಂಬೇಡ್ಕರ್ ಮತ್ತು ಮಾರ್ಕ್ಸ್ ಚಿಂತನೆಗಳ ಮುಖಾಮುಖಿ, ಅಂಬೇಡ್ಕರ್‌ವಾದಿ ದಲಿತರು ಮತ್ತು ರೈತ ಸಂಘಟನೆಗಳು ಒಂದಾಗಿ ನಡೆಯಲು ಆದ ಪ್ರಯತ್ನಗಳು ಸೇರಿದಂತೆ ಹಲವಾರು ಸಂಗತಿಗಳನ್ನು ಮೊದಲ ಭಾಗದಲ್ಲಿ ವಿವರಿಸಲಾಗಿತ್ತು. ಮುಂದುವರಿದಂತೆ ದಲಿತ ಚಳವಳಿಯಲ್ಲಾದ ಕವಲುಗಳು, ಅಂಬೇಡ್ಕರ್ ವಿಚಾರಧಾರೆಗೆ ವಿರುದ್ಧವಿರುವ ಸಂಘಪರಿವಾರವು ಕೂಡ ಅಂಬೇಡ್ಕರ್ ಅವರನ್ನು ‘ಅಪ್ರಾಪ್ರಿಯೇಟ್’ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಅಲ್ಪಸಂಖ್ಯಾತ ಸಮುದಾಯಗಳು ಅಂಬೇಡ್ಕರ್ ಅವರ ಆಶ್ರಯ ಪಡೆದದ್ದು, ಸ್ತ್ರೀವಾದದಲ್ಲಿ ಅಂಬೇಡ್ಕರ್ ಅವರ ಹೆಸರು ಪ್ರಧಾನವಾಗಿ ಕಾಣಿಸಿಕೊಂಡಿದ್ದು ಬಹುಮುಖ್ಯ ಪಲ್ಲಟಗಳು. ಈ ವಿಚಾರಗಳನ್ನು ಎರಡನೇ ಭಾಗದಲ್ಲಿ ಲೇಖಕರು ವಿಸ್ತೃತವಾಗಿ ಚರ್ಚಿಸಿದ್ದಾರೆ.
(ಮುಂದುವರಿದ ಭಾಗ..)
6. ದಲಿತರ ಒಳಗಿನ ಎಡ – ಬಲದ ಸಂಘರ್ಷ
ದಲಿತ ಸಂಘರ್ಷ ಸಮಿತಿಯ ಬೆಳವಣಿಗೆಯಲ್ಲಿ ದಲಿತರಲ್ಲಿಯೇ ಇರುವ ಒಳ ಜಾತಿವಾದ ತಲೆಯೆತ್ತಿದ್ದರೂ ಮಸುಕಾಗಿತ್ತು. ಈ ಒಳ ಜಾತಿವಾದ ಪ್ರಧಾನವಾಗಿ ಎಡ ಮತ್ತು ಬಲದ ಹೆಸರಿನಲ್ಲಿ ಒಳಮೀಸಲಾತಿಗಾಗಿ ಈಗಲೂ ಬಳಕೆಯಲ್ಲಿವೆ. ಇವು ಅಂಬೇಡ್ಕರ್ ಮತ್ತು ಜಗಜೀವನರಾಮ್ ಹೆಸರಿನ ಅಡಿಯಲ್ಲಿ ಮನೆ ಮಾಡಿವೆ.
ಆರಂಭದಲ್ಲಿ ಸಂಘಟನೆಯ ವೈಯಕ್ತಿಕ ಹಾಗೂ ಆರ್ಥಿಕ ಸಂಬಂಧಿ ನೆಲೆಯ ಭಿನ್ನಾಭಿಪ್ರಾಯಗಳು ಪ್ರಧಾನವಾಗಿದ್ದವು. ಕಾಲಕ್ರಮೇಣ ತಾತ್ವಿಕವಾದ ಧೋರಣೆಯನ್ನು ಮುಂದು ಮಾಡಿದವು. ದಲಿತ ಸಂಘರ್ಷ ಸಮಿತಿಗೆ ರಾಜಕೀಯದ ಸಂಪರ್ಕ ಬೇಕೋ? ಬೇಡವೋ? ಬೇಕು ಎನ್ನುವುದಾದರೆ, ಅದರ ಸ್ವರೂಪ ಯಾವ ರೀತಿಯಲ್ಲಿ ಇರಬೇಕು? ಎನ್ನುವುದಾಗಿತ್ತು. ಮೊದಲು ದಸಂಸ ಸಂಪೂರ್ಣವಾಗಿ ರಾಜಕೀಯದಿಂದ ದೂರಿದ್ದು, ಅಂತರವನ್ನು ಕಾಯ್ದುಕೊಳ್ಳುತ್ತ, ತನ್ನ ಬೇಡಿಕೆಗಳನ್ನು ಮುಂದಿಟ್ಟು ಪೂರೈಸಿಕೊಳ್ಳುವ ಎದೆಗಾರಿಕೆಯನ್ನು ಹೊಂದಿತ್ತು. ಡಾ. ಸಿದ್ದಲಿಂಗಯ್ಯ, ಡಾ. ಎಲ್. ಹನುಮಂತಯ್ಯ ಇಂಥವರು ರಾಜಕೀಯ ಪಕ್ಷಗಳ ಜೊತೆಗೆ ಸಂಬಂಧವನ್ನು ಸಾಧಿಸುತ್ತಾ ಹೋಗುವುದು ಒಂದು ಮಾರ್ಗವಾದರೆ, ಎರಡನೇ ಹಂತದಲ್ಲಿ ದಲಿತರೇ ಚುನಾವಣೆಗೆ ಇಳಿದು ಸ್ಪರ್ಧಿಸುವ/ಪ್ರತ್ಯೇಕ ಪಕ್ಷದ ಅನಿವಾರ್ಯತೆ ಇದೆ ಎನ್ನುವುದಾಗಿತ್ತು.
ಇದನ್ನೂ ಓದಿರಿ: ಅರ್ಧಶತಮಾನದ ಅಂಬೇಡ್ಕರ್ ಭೂಮಿಕೆ ಮತ್ತು ಬದಲಾದ ಭಾರತ (ಭಾಗ-1)
ದಲಿತರ ಒಳಗಿನ ಎಡ ಬಲದ ಬೀಜ ಸಾಕಷ್ಟು ಬಲಿತು ರಾಜಕೀಯ ಧ್ರುವೀಕರಣದೊಂದಿಗೆ ‘ಒಳಮೀಸಲಾತಿ’ ಬೇಡಿಕೆಗೆ ಎದ್ದು ನಿಂತದ್ದು ಇತಿಹಾಸ. ಕರ್ನಾಟಕದಲ್ಲಿ ಬಿಜೆಪಿ ಬಲಿಯಲು ‘ಎಡ’ದವರೂ ಕಾರಣ ಎನ್ನುವ ವಾದವಿದೆ. ಆದರೆ ಇದೇ ಸತ್ಯವಲ್ಲ. ‘ಬಲ’ದವರೂ ಅಲ್ಲಿ ರಾರಾಜಿಸುತ್ತಿದ್ದಾರೆ. ಆದರೆ ಇಲ್ಲಿ ಆಲೋಚಿಸಬೇಕಾದದ್ದು; ದಲಿತರು ತಾವಾಗಿಯೇ ಹೋಗಿ ಬಿಜೆಪಿಯ ಕುಂಡದಲ್ಲಿ ಬಿದ್ದರೋ ಅಥವಾ ನಾವಾಗಿಯೇ ಅವರನ್ನು ಅಲ್ಲಿಗೆ ತಳ್ಳಿದ್ದೇವೆಯೊ? ಅಥವಾ ಇದೊಂದು ಸಹಜ ಪ್ರಕ್ರಿಯೆಯೊ? ದಲಿತ ಪ್ರಜ್ಞೆಗೆ ಅಖಂಡತ್ವದಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲದಾಗಿದೆಯೆ? ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಇಂಥ ಚರ್ಚೆಗೆ ನಾವು ಮಹತ್ವ ಕೊಟ್ಟಿಲ್ಲ. ಸಾಮಾಜಿಕ ನಾಯಕರುಗಳ ಮೇಲೆಯೇ ಅಪರಾಧಗಳ ಪಟ್ಟಿಯನ್ನು ಹೇರುತ್ತೇವೆ ಯಾಕೆ? ಪ್ರಶ್ನೆಗಳೊಂದಿಗೆ ನಮ್ಮೊಳಗೆ ಆತ್ಮವಿಮರ್ಶೆ ನಡೆಯಬೇಕಿದೆ. ಬಿಜೆಪಿಯ ನಾಯಕರು ದಲಿತರ ಒಳಗಿನ ಈ ಒಡಕನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಅಂಬೇಡ್ಕರ್ ಮುಖಿ ಆಗಲು ಪ್ರಯತ್ನಿಸಿ ಗೆದ್ದದ್ದು ಹುಸಿಯಲ್ಲ.
‘ಎಡʼದವರ ಅನೈಕ್ಯತೆ, ಶಿಕ್ಷಣದ ಕೊರತೆ ಹಾಗೂ ಅಲ್ಪಸಂಖ್ಯಾತರೆಂಬ ಗ್ರಹಿಕಾ ಬಳಲಿಕೆ, ಇಂಥವೆಲ್ಲ ಕಾರಣಗಳಿಂದಾಗಿಯೂ ಪ್ರತ್ಯೇಕಿಸಿಕೊಳ್ಳುವಂತೆ ಆಗಿದೆ. ತಮ್ಮ ಅಸ್ತಿತ್ವವನ್ನು ಪ್ರತಿಷ್ಠಾಪಿಸಲು ಮತ್ತು ಪ್ರತ್ಯೇಕತೆಯಿಂದ ಗುರುತಿಸಿಕೊಳ್ಳಲು ಜಗಜೀವನ್ ರಾಮ್ ಅವರನ್ನು ಮುನ್ನೆಲೆಗೆ ತಂದಾಗ, ಅಂಬೇಡ್ಕರ್ ವಾದಿಗಳಿಗೆ ‘ಇದು ದಲಿತರ ಅಖಂಡತ್ವವನ್ನು ಒಡೆಯುವ ಪ್ರಕ್ರಿಯೆ’ ಎಂದು ಅಸಹನೆ ಮೂಡಿದ್ದರ ಪರಿಣಾಮವಾಗಿ, ಅವರು ತಬ್ಬಲಿತನದಿಂದ ಬಿಜೆಪಿಯನ್ನು ತಬ್ಬಿಕೊಳ್ಳುವಂತೆಯೂ ಆಯಿತು ಎಂದು ವಾದಿಸುವವರು ಇದ್ದರೂ, ಇದೂ ಅರ್ಧಸತ್ಯದಿಂದಲೇ ಕೂಡಿದ್ದಾಗಿದೆ.
ದಲಿತರಲ್ಲಿಯ ಒಡಕನ್ನು ಬಂಡವಾಳ ಮಾಡಿಕೊಂಡು ಬಿಜೆಪಿ ಆಡಳಿತಕ್ಕೆ ಬಂದಾಗ ‘ಬಲ’ದವರಿಗೆ ತಾವು ಮಾಡಿದ ತಪ್ಪಿನ ಅರಿವಾದದ್ದು, ಬಿಜೆಪಿ ದಲಿತರಲ್ಲಿಯ ಪ್ರಬಲ ಜಾತಿಗಳನ್ನು ನೆಚ್ಚದೆ ತಳಜಾತಿಗಳನ್ನು ಆಕ್ರಮಿಸಿಕೊಂಡದ್ದು, ಕಣ್ಣು ತೆರೆಸಲು ಕಾರಣವಾಯಿತು. ಆಗ ಬಿಜೆಪಿಯಲ್ಲಿ ಬಲದ ನಾಯಕರು ಇನ್ನೂ ಬಲಗೊಂಡಿರಲಿಲ್ಲ ಎನ್ನುವುದು ಸತ್ಯ. ಇಂಥ ಕಾರಣಗಳಿಂದಾಗಿ ‘ಅಂಬೇಡ್ಕರ್ ಚಿಂತನೆಯ ದಲಿತರಲ್ಲಿ; ಸಹಬಾಳ್ವೆ ಅಗತ್ಯ ಮತ್ತು ಅನಿವಾರ್ಯ’ ಎಂಬ ಸಂದೇಶ ಪರೋಕ್ಷವಾಗಿ ಬಿಜೆಪಿಯೇ ದಲಿತರಿಗೆ ಸೂಚಿಸಿದಂತಾಗಿತ್ತು. ದಲಿತರಿಗೆ ಸಮಸ್ಯೆಗಳು ಹಲವಾರು. ಒಳ ಮೀಸಲಾತಿಯು ಸಮಸ್ಯೆ ಅಲ್ಲದ್ದನ್ನು ಸಮಸ್ಯೆಯನ್ನಾಗಿ ಮಾಡಿಕೊಳ್ಳಲು ಕಾರಣವಾಯಿತು. ಅದು ಒಂದು ಕಾಲಿಕ ಪ್ರಸಂಗ. ನಮ್ಮೊಳಗಿನ ಜಡತ್ವವೇ ಸಮಸ್ಯೆ ಅಲ್ಲದ್ದನ್ನು ಸಮಸ್ಯೆಯಾಗಿ ಮಾಡಿಕೊಳ್ಳುವಂತಾಯಿತು.
7. ಅಲ್ಪಸಂಖ್ಯಾತರು ಮತ್ತು ಅಂಬೇಡ್ಕರ್
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಪರೋಕ್ಷವಾಗಿ ಕಾಂಗ್ರೆಸ್ಸಿನ ಮಹತ್ವ ಏನು ಎನ್ನುವುದು ತಳ ಸಮುದಾಯಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅರಿವಾಗಲು ಸಾಧ್ಯವಾಯಿತು. ಇದರರ್ಥ ಕಾಂಗ್ರೆಸ್ಸಿಗರು ಮಾಡಿದ ಲೋಪಗಳು ಇಲ್ಲವೇ ಇಲ್ಲ ಎನ್ನುವ ಮಾತಲ್ಲ. ಆದರೆ ಇಂಥ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಮಹತ್ವ ಎಷ್ಟು? ಅವರ ಸಂವಿಧಾನದ ಅನಿವಾರ್ಯತೆ ಎಷ್ಟು? ಅದನ್ನು ಕಾಯ್ದುಕೊಳ್ಳುವುದು ಹೇಗೆ? ಅದಕ್ಕಾಗಿ ನಾವೇನು ಮಾಡಬೇಕು? ಎನ್ನುವ ಪ್ರಶ್ನೆಗಳೆದ್ದು, ಅಲ್ಪಸಂಖ್ಯಾತರು ಮತ್ತು ತಳಸಮುದಾಯಗಳು, ಪ್ರಗತಿಪರರು ತಮ್ಮನ್ನು ತಾವೇ ಪುನರಾವಲೋಕನ ಮಾಡಿಕೊಳ್ಳುವುದಕ್ಕೆ ಹಾಗೂ ಒಂದಾಗುವುದಕ್ಕೆ ಅನುವು ಮಾಡಿಕೊಟ್ಟಿತು. ಇದಕ್ಕೆ ಮತ್ತೊಂದು ಮುಖ್ಯ ಕಾರಣ; ಕೇಂದ್ರ ಸರ್ಕಾರ ಜಾರಿಗೆ ತರುತ್ತೇವೆ ಎಂದು ಸಾರಿದ ಎನ್‌ಆರ್‌ಸಿ, ಸಿಎಎ (ನಾಗರಿಕ ರಾಷ್ಟ್ರೀಯತೆಯ ನೋಂದಣಿ /ಪೌರತ್ವ ತಿದ್ದುಪಡಿ ಕಾಯ್ದೆ) ಪ್ರಕರಣಗಳು. ಇದರೊಂದಿಗೆ ರೈತರ ಕುರಿತ ಹೊಸ ಕಾನೂನುಗಳ ಜಾರಿಗೆ ವಿರುದ್ಧವಾಗಿ ಎದ್ದ ಆಂದೋಲನವೂ ಸಂವಿಧಾನದ ಮಹತ್ವವನ್ನು ಎತ್ತಿ ಹಿಡಿಯುವಂತೆ ಮಾಡಿತು.
ಇದನ್ನೂ ಓದಿರಿ: ಐದು ದಶಕಗಳ ಲಿಂಗಾನುಪಾತ; ಆತಂಕಕಾರಿ ಸಂಗತಿಗಳೇನು?
ಸಿಎಎ/ ಎನ್‌ಆರ್‌ಸಿ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಸಂವಿಧಾನವೇ ಸರ್ವಸ್ವವೆಂದು ಅಪ್ಪಿಕೊಂಡರು. ಗೋ ಹತ್ಯೆ ಹಾಗೂ ಗೋಮಾಂಸ ಸಂಬಂಧಿ ಪ್ರಕರಣಗಳು, ಮರ್ಯಾದಾ ಹತ್ಯೆಗಳು, ಲವ್ ಜಿಹಾದ್ ಪ್ರಕರಣಗಳು, ಒತ್ತಾಯಪೂರ್ವಕವಾಗಿ ‘ಜೈ ಶ್ರೀರಾಮ್’ ಎಂದು ಹೇಳಿಸುವ ಪ್ರಕರಣಗಳು, ಇಂಥವೆಲ್ಲ ದೇಶಾದ್ಯಂತ ವ್ಯಾಪಿಸಿದವು. ಮುಸ್ಲಿಮರು, ಕ್ರೈಸ್ತರು “ಸಂವಿಧಾನವನ್ನು ರಕ್ಷಿಸುವುದು ಎಂದರೆ; ನಮ್ಮನ್ನು ನಾವು ರಕ್ಷಿಸಿಕೊಂಡಂತೆ” ಎನ್ನುವುದನ್ನು ಮನಗಂಡರು. ಭಾರತಕ್ಕೆ ಅಂಬೇಡ್ಕರ್ ಹಾಗೂ ಸಂವಿಧಾನ ಅನಿವಾರ್ಯ ಎಂದು ಗುರುತಿಸಿಕೊಂಡ ಚಾರಿತ್ರಿಕ ಸಂದರ್ಭ ಇದಾಗಿದೆ. ಮುಸ್ಲಿಮರಲ್ಲಾದ ಈ ದೊಡ್ಡ ಪರಿವರ್ತನೆ ಇನ್ನುಳಿದವರ ವಿಚಾರಗಳ ಪರಿಷ್ಕರಣಕ್ಕೆ ಕಾರಣವಾಯಿತು.
ಡಾ. ಅಂಬೇಡ್ಕರ್ ಮತ್ತು ಕ್ರೈಸ್ತರ ಒಳಗೊಳ್ಳುವಿಕೆ
ಭಾರತ ಬಹುತ್ವಗಳ ಪರಂಪರೆಯ ಧರೆಯಾಗಿದೆ. ಹಲವು ಧರ್ಮ, ಭಾಷೆ, ಸಂಸ್ಕೃತಿಗಳ ಪರಂಪರೆ ನಮ್ಮದಾಗಿರುವುದರಿಂದ ಇಲ್ಲಿ ಒಂದು ಪಕ್ಷ, ಒಂದು ಧರ್ಮ, ಒಂದು ಭಾಷೆ, ಒಂದು ಚುನಾವಣೆ ಹೀಗೆ ಏಕಮೇವ ಪರಿಭಾಷೆಯ ಮಾತುಗಳು ಅಲ್ಪಸಂಖ್ಯಾತರಲ್ಲಿ ಮತ್ತಷ್ಟು ಭಯವನ್ನು ಬಿತ್ತಿದಂತಾಗಿದೆ.
ಕ್ರೈಸ್ತರು, ದಲಿತ ಕ್ರೈಸ್ತರ ಮೀಸಲಾತಿಯ ಕುರಿತು ಒಂದು ಅಲೆಯನ್ನು ಎಬ್ಬಿಸಿದ್ದರು. ಇದಕ್ಕೆ ಮುಖ್ಯ ಕಾರಣ ಮೀಸಲಾತಿ ಇರುವುದರಿಂದ ದಲಿತರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದುತ್ತಿದ್ದಾರೆ. ಒಂದು ವೇಳೆ ನಮಗೂ ಮೀಸಲಾತಿ ಇದ್ದಿದ್ದರೆ, ದಲಿತರು ನಮ್ಮ ಧರ್ಮಕ್ಕೂ ಬರುತ್ತಿದ್ದರು ಎಂಬ ಚಿಂತನೆ, ಇವರೂ ಧರ್ಮ ಕಾರಣದಿಂದ ಮೀಸಲಾತಿಯ ಬೆನ್ನು ಹತ್ತುವಂತೆ ಮಾಡಿತು. ‘ನಮಗೂ ಮೀಸಲಾತಿ ಕೊಡಿ, ಇಲ್ಲ; ಮೀಸಲಾತಿ ತೆಗೆದು ಬಿಡಿ’ ಎನ್ನುವ ಧ್ವನಿಯನ್ನು ಮುಂದೆ ಮಾಡ ತೊಡಗಿದರು. ಇದರಿಂದಾಗಿ ಮತ್ತು ಆಮಿಷದ ಮತಾಂತರ ಎನ್ನುವ ಆರೋಪದಿಂದಾಗಿ ಆದಿವಾಸಿ ತಳ ಸಮುದಾಯಗಳಲ್ಲಿ, ದಲಿತರಲ್ಲಿ ಆಂತರಿಕವಾದ ಸಂಘರ್ಷ ನಡೆದದ್ದೂ ಇದೆ. ಇದರಿಂದಾಗಿ ದಲಿತರ ಮತ್ತು ಕ್ರೈಸ್ತರ ಸಂಬಂಧಗಳು ಅಷ್ಟಕ್ಕಷ್ಟೇ ಆಗಿದ್ದವು.
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಕ್ರೈಸ್ತ ಚರ್ಚುಗಳ ಮೇಲೆ ನಡೆದ ದಾಳಿಗಳು, ಮೂರ್ತಿ ಭಂಜನೆಯ ಕಾರ್ಯಗಳು ಘಟಿಸಿದಾಗ, ಕ್ರೈಸ್ತರಲ್ಲಿ ತಪ್ಪಿನ ಅರಿವಾಗಿ ‘ದಲಿತ ಕ್ರೈಸ್ತ ಮೀಸಲಾತಿಗಿಂತ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವುದು ಮುಖ್ಯ’ ಎನಿಸಿದ್ದು, ದಲಿತರ ಕಟು ಟೀಕೆಗಳಿಂದ ಎಚ್ಚರಾಗಿ, ಅಂಬೇಡ್ಕರ್ ಮತ್ತು ಸಂವಿಧಾನದತ್ತ ತಿರುಗುವಂತಾಯಿತು. ಶೈಕ್ಷಣಿಕವಾಗಿ ಪ್ರಬುದ್ಧರಾದ ಕ್ರೈಸ್ತರು ಸಂವಿಧಾನಾತ್ಮಕವಾದ ಹಕ್ಕು ಹಾಗೂ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡ ಪರಿಣಾಮವಾಗಿ ಸಂವಿಧಾನದ ಮಹತ್ವವನ್ನು ಬಲ್ಲವರಾಗಿದ್ದರು. ಹೀಗಾಗಿ ಅಂಬೇಡ್ಕರ್ ಚಿಂತನೆಯಿಂದ ಅವರು ಹೊರತಾಗಿ ನಿಲ್ಲದಂತೆ ಆದದ್ದು ಚರಿತ್ರೆಯ ಒಂದು ಭಾಗವೇ ಆಗಿದೆ.
ಇದನ್ನೂ ಓದಿರಿ: ಶೂದ್ರ ಧರ್ಮ, ವೈದಿಕ ಧರ್ಮ ಒಂದೇ ಅಲ್ಲ!
‘ನಾವು ಸಂವಿಧಾನವನ್ನು ಬದಲಾಯಿಸುತ್ತೇವೆ’, ‘ಮನುಸ್ಮೃತಿಯನ್ನು ಜಾರಿಗೆ ತರುತ್ತೇವೆ’, ‘ಹಿಂದೂ ರಾಷ್ಟ್ರ ಮಾಡುತ್ತೇವೆ’ ಎನ್ನುವ ಧ್ವನಿಗಳು ತಳ ಸಮುದಾಯದವರನ್ನು, ಪ್ರಗತಿಪರರನ್ನು, ಮುಸ್ಲಿಮ್, ಕ್ರಿಶ್ಚಿಯನ್ನರಾದಿಯಾಗಿ ಎಲ್ಲರನ್ನು ಒಗ್ಗೂಡಿಸಲೂ ಕಾರಣವಾಯಿತು. ಅಂಬೇಡ್ಕರ್ ಎಂದರೆ, ದಲಿತರ ನಾಯಕ ಎನ್ನುತ್ತಿದ್ದ ಕಾಲ ದೂರವಾಗಿ ‘ಅಂಬೇಡ್ಕರ್ ನಮ್ಮೆಲ್ಲರ ನಾಯಕ’ ಎನ್ನುವ ಮನೋಭಾವ ಜಾಗೃತವಾದದ್ದು ಭಾರತದಲ್ಲಿ ದೊಡ್ಡ ಬದಲಾವಣೆ ತಂದಿದೆ.
8. ಡಾ. ಅಂಬೇಡ್ಕರ್ ಸ್ತ್ರೀವಾದಿಗಳಿಗೆ ಆರಾಧ್ಯದೈವರಾದುದು
ಅನ್ಯ ದೇಶಗಳಲ್ಲಿ ಸ್ತ್ರೀವಾದಿಗಳು ತಮ್ಮ ಹಕ್ಕುಗಳಿಗಾಗಿ ಜೀವನವನ್ನೇ ಪಣಕ್ಕಿಟ್ಟು ಗಳಿಸಿದ ಉದಾಹರಣೆಗಳಿವೆ. ಆದರೆ ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಮಹಿಳಾ ಹಕ್ಕಿನ ಹೋರಾಟಗಳು ಹೆಚ್ಚಾಗಿ ವೈದಿಕ ಕೇಂದ್ರಿತವಾದವು. ಡಾ. ಅಂಬೇಡ್ಕರ್ ಅವರು ಸಂವಿಧಾನಕ್ಕೆ ರೂಪ ಕೊಡುವ ಸಂದರ್ಭದಲ್ಲಿ ತಳಸಮುದಾಯಗಳಿಗೆ ಕೊಡುವಷ್ಟೇ ಪ್ರಧಾನತೆಯನ್ನು ಮಹಿಳೆಯರಿಗೂ, ಕಾರ್ಮಿಕರಿಗೂ ಕೊಟ್ಟದ್ದು ಚರಿತ್ರಾರ್ಹ. ವರ್ಣ ಮತ್ತು ಜಾತಿ ವ್ಯವಸ್ಥೆಯಿಂದಾಗಿ ತಳಸಮುದಾಯಗಳಿಗಿಂತ ಎಲ್ಲ ಜಾತಿಗಳ ಮಹಿಳೆಯರೇ ಹೆಚ್ಚು ಶೋಷಣೆಗೆ ಒಳಗಾಗಿದ್ದು, ಅವರಿಗೆ ಆಯ್ಕೆಯ ಸ್ವಾತಂತ್ರ್ಯ ಇಲ್ಲದಂತಾಗಿದೆ. ಇದರಿಂದ ಆರ್ಥಿಕ ಬೆಳವಣಿಗೆಯೂ ಸಾಧ್ಯವಿಲ್ಲ ಎನ್ನುವ ಅವರ ಮಹಿಳಾ ಚಿಂತನೆ ಎತ್ತಿ ಹಿಡಿಯುವಂತೆ ಮಾಡಿತ್ತು. ಹೀಗಾಗಿ ಸ್ತ್ರೀವಾದಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಡುವುದಕ್ಕಿಂತ, ಅಂಬೇಡ್ಕರ್ ಅವರು ಕೊಡಮಾಡಿದ ಹಕ್ಕುಗಳನ್ನು ಜಾರಿಗೆ ತರುವುದಕ್ಕೋಸ್ಕರವಾಗಿ ಹೋರಾಡುವ ಅನಿವಾರ್ಯತೆ ನಮ್ಮ ದೇಶದ್ದಾಗಿದೆ ಎನ್ನುವುದನ್ನು ಗುರುತಿಸಿಕೊಂಡರು.
‘ಆಸ್ತಿ ಹಕ್ಕು, ವಿಚ್ಛೇದನದ ಹಕ್ಕು, ಮದುವೆ ವಯಸ್ಸು, ದತ್ತು ಪ್ರಕ್ರಿಯೆ, ಮಾತೃತ್ವ ರಜೆ ಹೀಗೆ ಮಹಿಳೆಯರಿಗೆ ಸಂಬಂಧಿಸಿದ ವಿಚಾರದಲ್ಲಿ ಅವರಿಟ್ಟ ಹೆಜ್ಜೆಗಳು, ಸಂಪ್ರದಾಯವಾದಿಗಳಿಂದ ಎದುರಿಸಿದ ಟೀಕೆಗಳು ಸ್ಮರಿಸಿಕೊಳ್ಳುವಂಥವು. ಹಿಂದೂ ಕೋಡ್ ಬಿಲ್’ಗಾಗಿ ಅಂಬೇಡ್ಕರ್ ಅವರು ರಾಜೀನಾಮೆಯನ್ನು ಕೊಡುವ ಸಂದರ್ಭ ಎದುರಾದುದು, ಇಂಥವೆಲ್ಲ ಸ್ತ್ರೀವಾದಿ ಚಿಂತಕರನ್ನು ಚಕಿತಗೊಳಿಸುವುದರೊಂದಿಗೆ ಅವರು ಅಂಬೇಡ್ಕರ್ ಅವರನ್ನು ಹೆಗಲೇರಿಸಿಕೊಂಡದ್ದು ವಿಶೇಷವೇನು ಅಲ್ಲ. ಇದಲ್ಲದೆ ಮೇಲ್ವರ್ಗದ ಅಕ್ಷರಸ್ಥ ಮಹಿಳೆಯರು, ಅಲ್ಪಸಂಖ್ಯಾತ ಹಾಗೂ ತಳ ಸಮುದಾಯದ ಮಹಿಳೆಯರು ಎಂದು ಯಾವ ಭೇದಗಳನ್ನು ಮಾಡದೆ ಎಲ್ಲರನ್ನೂ ಸಮಾನವಾಗಿ ನೋಡಿದ ದೃಷ್ಟಿಕೋನ ಅಂಬೇಡ್ಕರ್ ಅವರದ್ದು. ಕಾರ್ಮಿಕರಿಗೆ ಸಂಬಂಧಿಸಿದ ಚಿಂತನೆಯ ದಾರಿಯೂ ಮತ್ತೊಂದಿದೆ. ಹೀಗಾಗಿ ಅಂಬೇಡ್ಕರ್ ಇಂದು ಎಲ್ಲ ವರ್ಗಗಳ, ಸಮುದಾಯಗಳ ನಾಯಕರಾಗಿ ಅಂತೆಯೇ ಅವರು “ಭಾರತ ಭಾಗ್ಯವಿದಾತ” ಎಂದು ಕರೆಯಿಸಿಕೊಳ್ಳಲು ಅರ್ಹರಾಗಿದ್ದಾರೆ.
9. 70ರ ದಶಕದ ಚಿಂತನೆ ಪಲ್ಲಟವಾಗಿ ಮಹಾರ್ ನಾಯಕ, ರಾಷ್ಟ್ರವಲ್ಲದೆ ವಿಶ್ವನಾಯಕರಾದುದು
ಡಾ.ಅಂಬೇಡ್ಕರ್ ಹೆಸರಿನಿಂದ ನಡೆಯುವ ಸಂಘಟನೆಗಳು, ಹೋರಾಟಗಳು, ಭೂ ಮಾಲೀಕರಲ್ಲಿ ಮತ್ತು ಮೇಲ್ಜಾತಿಯವರಲ್ಲಿ, ರಾಜಕಾರಣಿಗಳಲ್ಲಿ, ಆರ್‌ಎಸ್‌ಎಸ್‌ನ ಸಂಘಟನೆಗಳಲ್ಲಿ ದಲಿತ ಸಂಘಟನೆಗಳ ಬೆಳವಣಿಗೆ ಅಸಮಾಧಾನ, ಆತಂಕಗಳನ್ನು ಸೃಷ್ಟಿಸಿದವು. ಹೀಗಾಗಿ ಅಂಬೇಡ್ಕರ್ ಪ್ರತಿಮಾ ಪ್ರಕರಣಗಳು ನಾಯಿಕೊಡೆಯಂತೆ ತಲೆಯೆತ್ತಿದವು. ಎಂದರೆ, ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿಯ ಹಾರಗಳನ್ನು ಹಾಕಿ ಅವಮಾನಿಸುವ, ಮೂರ್ತಿಯನ್ನೇ ಒಡೆದು ಹಾಕುವ ಪ್ರಕರಣಗಳು, ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ, ದೇಶದಾದ್ಯಂತ ನಡೆಯುತ್ತಿದ್ದುದು ಚರಿತ್ರೆಯಲ್ಲಿ ಅಳಿಸಲಾಗದ ಕಹಿ ಘಟನೆಗಳು.
70ರ ದಶಕದಲ್ಲಿ ಅಂಬೇಡ್ಕರ್ ಎಂದರೆ ‘ಕೇವಲ ಮಹಾರ ಜನಾಂಗದ ನಾಯಕ’ ಎಂದು ಹೇಳುತ್ತಿದ್ದ ಕಾಲದ ಬಗ್ಗೆ ಆರಂಭದಲ್ಲಿಯೇ ಹೇಳಿದೆ. ಅಂಬೇಡ್ಕರ್ ಕುರಿತು ಅಕ್ಷರ ಲೋಕದಲ್ಲಿದ್ದ ಭಾರತೀಯರ ಅಭಿಪ್ರಾಯವನ್ನು ಇದು ಪ್ರತಿನಿಧಿಸುವಂತಿತ್ತು. ದಲಿತರ ಸಂಘಟನಾತ್ಮಕ ಎಚ್ಚರ, ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಹಾಗೂ ಮಹಾಪರಿನಿರ್ವಾಣದ ದಿನಾಚರಣೆ, ದಲಿತರು ನಾವು ಮೂಲತಃ ಬೌದ್ಧರು ಎನ್ನುವ ಅರಿವು ‘ಮರಳಿ ಮನೆಗೆ’ ಹೋಗುವ ಚಲನೆ ಇಂಥ ದಲಿತರ ಅಭ್ಯುದಯದ ಮಾರ್ಗಗಳು ತೆರೆದಂತೆ, ಸವರ್ಣೀಯರು ಹಾಗೂ ಅವರ ಸಂಘಟನೆಗಳು ಹೆಚ್ಚು ಕಸಿವಿಸಿಗೊಂಡಿವೆ. ಹಿಂದೂ ಧರ್ಮ ಅಲ್ಪಸಂಖ್ಯಾತ ಧರ್ಮವಾಗುವ ಭಯ ಒಳ ಒಳಗೆ ಕಾಡಿದೆ. ಹೀಗಾಗಿ ದಲಿತರು ಅನುಭವಿಸಿದ ಅಂಬೇಡ್ಕರ್ ಅರಿವಿನ ಪ್ರಜ್ಞೆಯ ನೋವು ಹೇಳಲಸದಳವಾದದ್ದು. ಆದರೆ ಅಂಬೇಡ್ಕರ್ ಹೆಸರಿನ ಶಕ್ತಿಯ ಮುಂದೆ ಅದು ಶೂನ್ಯವಾಗಿತ್ತು.
ಇದನ್ನೂ ಓದಿರಿ: ಕರ್ನಾಟಕ 50 | ಕನ್ನಡ ಚಿತ್ರರಂಗ ಕಂಡ ಏಳುಬೀಳುಗಳೇನು?
ಅಂಬೇಡ್ಕರ್ ಅವರ ಜನಪ್ರಿಯತೆ ಮತ್ತು ದಲಿತರ ಅಭಿವೃದ್ಧಿಯನ್ನು ಸಹಿಸಲಾಗದವರು, “ಅಂಬೇಡ್ಕರ್ ಅವರನ್ನು ಸುಳ್ಳು ದಲಿತ ದೇವರು” ಎಂಬ ಆರೋಪ ಪಟ್ಟಿಯನ್ನು ಓದಲು ದಂಡೆತ್ತಿ ಬಂದರು. ನಿಧಾನವಾಗಿ ಆರ್‌ಎಸ್‌ಎಸ್‌ನ ‘ದಂಡ ನೀತಿ’ ‘ಭೇದ ನೀತಿ’ ಅಸ್ತ್ರಗಳು ಮುಗಿದು, ‘ಸಾಮ ನೀತಿ’ಗೆ ತಲೆಕೊಟ್ಟುದ್ದರ ಪರಿಣಾಮದಿಂದಾಗಿ ಆರ್‌ಎಸ್‌ಎಸ್ ಸಭೆ ಸಮಾರಂಭಗಳಲ್ಲೂ ಅಂಬೇಡ್ಕರ್ ಭಾವಚಿತ್ರಗಳು ಮೆರೆಯಲು ಆರಂಭಿಸಿದವು. ಮತ್ತು ಆರ್‌ಎಸ್‌ಎಸ್ ಮುಖಿಯಾಗಿ ಅಂಬೇಡ್ಕರ್ ಅವರನ್ನು ಪರಿಚಯಿಸುವ ಕೃತಿಗಳು ಆಗಲೇ ಹೊರಬಂದಿದ್ದವು. ಅಂಬೇಡ್ಕರ್ ಅವರಿಗೆ ಚಡ್ಡಿ ಮತ್ತು ಟೋಪಿಯನ್ನು ತೊಡಿಸಿ, ಕೈಯಲ್ಲಿ ಒಂದು ಕೋಲು ಕೊಟ್ಟು, ಶಾಖಾದ ನಾಯಕನಂತೆ ಹೆಜ್ಜೆ ಹಾಕಿಸುವ ಕೃತಿಗಳವು. ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಯ ಟೀಕೆಗಳು ಅಷ್ಟೇ ಪ್ರಮಾಣದಲ್ಲಿ ತಲೆಯೆತ್ತಿ ನಿಂತಿದ್ದವು. ದೇಶದ ವಿದ್ಯುನ್ಮಾನ ಚಾನಲ್ (CNN, IBN); ಗಾಂಧಿ ಮತ್ತು ಅಂಬೇಡ್ಕರ್ ಇವರಿಬ್ಬರಲ್ಲಿ ಯಾರು ಹೆಚ್ಚು ಜನಪ್ರಿಯ ನಾಯಕರು? ಎಂದು ಸರ್ವೇ ಮಾಡಿದಾಗ ‘ಅಂಬೇಡ್ಕರ್’ ಎಂದು ಅರಿವಿಗೆ ಬಂದದ್ದು ಮನಸ್ಸುಗಳನ್ನು ತಿದ್ದಲು ಸ್ವಲ್ಪಮಟ್ಟಿಗೆ ಇದು ಕಾರಣವಾಗಿದೆ. ಕೊಲಂಬಿಯಾ ವಿಶ್ವವಿದ್ಯಾನಿಲಯವು ‘The world’s top scholar’ ಎಂಬ ಬಿರುದನ್ನು ಕೊಟ್ಟಿತು. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯವು ‘universe maker’ ಎಂದು ಸಾರಿದರೆ, CNN, IBNಗಳು ‘The greatest Indian’ ಬಿರುದಾಂಕಿತವನ್ನು ನೀಡಿದವು. ಭಾರತ ಸರ್ಕಾರವು ‘ಭಾರತ ರತ್ನ’ ಎಂಬ ಬಿರುದು ನೀಡಿ ಗೌರವಿಸಿತು. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಬೇಡ್ಕರ್ ಅವರ ವ್ಯಕ್ತಿತ್ವ ಹಾಗೂ ಬದಲಾದ ಚಿತ್ರಣ ಇಂದು ನಮ್ಮ ಕಣ್ಣ ಮುಂದೆ ಇದೆ. ಮಹಾರ್ ಜಾತಿಯ ನಾಯಕ ಪದವಿಯಿಂದ ಕಳಚಿ ಇಂದು ನಮ್ಮೆಲ್ಲರ ವಿಶ್ವರೂಪಿ ಅಂಬೇಡ್ಕರ್ ನಮ್ಮೆದುರು ಇದ್ದಾರೆ. ಅರ್ಥಶಾಸ್ತ್ರ, ರಾಜ್ಯಶಾಸ್ತ್ರದ ಪಿತಾಮಹ ಎಂದು ಕರೆಸಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಸ್ಪೃಶ್ಯ ಭಾರತದ ಹಾಗೂ ಅಸ್ಪೃಶ್ಯ ಭಾರತದ ನಡುವಿನ ಅಂತರ ಇಲ್ಲದಾಗಿದೆ ಎಂದರ್ಥವಲ್ಲ.
10. ಭವಿತವ್ಯದ ಭಾರತ ಮತ್ತು ಡಾ. ಅಂಬೇಡ್ಕರ್
ಅಂಬೇಡ್ಕರ್ ಭಾರತೀಯರಿಗೆ ಕೇವಲ ಸಂವಿಧಾನವನ್ನು ಧಾರೆ ಎರೆದಿದ್ದಾರೆ ಎಂದಿಲ್ಲ. ಅದಕ್ಕಿಂತಲೂ ಮಿಗಿಲಾಗಿ ಅವರ “ಸಮಗ್ರ ಬರಹಗಳು ಮತ್ತು ಭಾಷಣಗಳು” ಎಂಬ ಸಂಪುಟಗಳು ಹಾಗೂ “ಭಾರತದ ಸಂವಿಧಾನದ ರಚನಾ ಸಮಿತಿಯ ಚರ್ಚೆ”ಯ ಸಂಪುಟಗಳು, ಇವೆಲ್ಲ ಸಂವಿಧಾನವನ್ನೂ ಮೀರಿದ ಆತ್ಮಗಳಾಗಿದ್ದು, ಹೊನ್ನಿನ ಭಂಡಾರಗಳೇ ಆಗಿವೆ. ಇವುಗಳನ್ನು ಬಳಸಿಕೊಳ್ಳುವುದು ಭಾರತೀಯರ ಸಾಮರ್ಥ್ಯಕ್ಕೆ ಸಂಬಂಧಿಸಿದ್ದಾಗಿದೆ.
ಅಂಬೇಡ್ಕರ್ ಅವರ ಒಂದೊಂದು ಸಂಪುಟವೂ ಫಲವತ್ತಾದ ಕಪ್ಪು ಭೂಮಿ ಇದ್ದಂತೆ. ಈ ಭೂಮಿಯಲ್ಲಿ ನಿಮಗೆ ಬೇಕಾದ ಬೀಜಗಳನ್ನು ಬಿತ್ತಿ ಬೆಳೆಯಲು ಅವಕಾಶವಿದೆ. ಅಷ್ಟೊಂದು ಆರೋಗ್ಯಕರವಾದ ಸಂಗತಿಗಳು ಈ ಸಂಪುಟಗಳಲ್ಲಿ ಹಾಸಿಕೊಂಡಿವೆ. ಹಲವು ಬಾರಿ ಸಂವಿಧಾನದ ತಿದ್ದುಪಡಿ ಆದಾಗಲೂ ಹೆಚ್ಚಿನವು ಅಂಬೇಡ್ಕರ್ ಹಿಂದೆ ವಾದಿಸಿದ್ದನ್ನು ತುಂಬಿಕೊಂಡಿದ್ದಾರೆ. ತಿದ್ದಿಕೊಳ್ಳಬೇಕಾದ ಅಂತಹ ವಾದಗಳು ಅವರ ಕೋಶದಲ್ಲಿ ಹಲವಾರಿವೆ. ಎಲ್ಲ ಧರ್ಮ, ಜನಾಂಗಗಳ ಕುರಿತು ಇರುವ ಸಮಸ್ಯೆ/ ಪರಿಹಾರದ ಮಾರ್ಗಗಳಿವೆ. ರಾಷ್ಟ್ರ ಹಾಗೂ ಧರ್ಮಗಳನ್ನು ನೋಡಬೇಕಾದ ರೀತಿ, ಅರ್ಥ ಚಿಂತನೆ, ಕೃಷಿ, ಉದ್ಯಮ, ಭಾಷೆ, ಗಡಿ, ಜಲ, ಸೈನ್ಯ ಹೀಗೆ ಹಲವಾರು ಕ್ಷೇತ್ರಗಳ ವ್ಯಾಪ್ತಿಯನ್ನು ಆವರಿಸಿದ ವಸ್ತು ವಿಷಯಗಳು ಹಾಸಿಕೊಂಡಿವೆ. ಅವುಗಳನ್ನು ಅರಿವ, ಪರಿಷ್ಕರಿಸುವ, ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಸಾಧ್ಯತೆಗಳನ್ನು ಸಾರುತ್ತವೆ.
ಇದನ್ನೂ ಓದಿರಿ: ಗಂಗೆಯ ಒಡಲಿಗೆ ‘ವಿಷ’ದ ಸಂಕಟ; ವೈಜ್ಞಾನಿಕ ಸತ್ಯಗಳಿಗೆ ಬೆನ್ನು ತಿರುಗಿಸಲಾದೀತೆ?
ಎಲ್ಲದಕ್ಕೂ ಮನುಷ್ಯನೇ ಅಂತಿಮ. ಆತನ ಆಲೋಚನೆ ಮತ್ತು ಆರೋಗ್ಯವನ್ನು ಕಾಯ್ದುಕೊಂಡು, ದೇಶದ ಆರೋಗ್ಯವನ್ನೂ ಅಖಂಡತ್ವವನ್ನೂ ಕಾಯ್ದುಕೊಳ್ಳುವುದರ ಜೊತೆಗೆ ಅಭಿವೃದ್ಧಿಪಡಿಸುವುದು ಹೇಗೆ ಎನ್ನುವುದೇ ಇಲ್ಲಿಯ ಆಶಯವಾಗಿದೆ. ಈ ಸಂಪುಟಗಳನ್ನು ಓದಿ ಅರಗಿಸಿಕೊಂಡು ದೇಶವನ್ನು ಕಾಯುವ ಶ್ರದ್ಧಾವಂತ ಸೈನಿಕರನ್ನು ಈ ಸಂಪುಟಗಳು ನಿರೀಕ್ಷಿಸುತ್ತವೆ. ಈ ಸಂಪುಟಗಳನ್ನು ಓದುವುದು ಎಂದರೆ ಅಂಬೇಡ್ಕರ್ ಅವರ ಚಿಂತನೆಗಳನ್ನು ಧರೆಗಿಳಿಸುವುದು ಎಂದರ್ಥ. ಅವರ ಚಿಂತನೆಗಳ ಕುರಿತು ಹೆಚ್ಚು ಹೆಚ್ಚು ವಿಚಾರ ಸಂಕಿರಣಗಳು, ಚರ್ಚೆಗಳನ್ನು ನಡೆಸಬೇಕಿದೆ. ಮಾಧ್ಯಮಗಳು ನಿತ್ಯದ ತಮ್ಮ ಕಾರ್ಯಕ್ರಮದಲ್ಲಿ ಜನತೆಗೆ ‘ದೇಸಿ ಚಿಂತನೆಯ ಪಾಠ’ ಎಂಬಂತೆ ಬೋಧಿಸಬೇಕಿದೆ. ಚಲನಚಿತ್ರ, ನಾಟಕ, ಚಿತ್ರಕಲೆ ಇಂಥವುಗಳೆಲ್ಲ ಅಂಬೇಡ್ಕರ್ ಚಿಂತನೆಗಳನ್ನು ವಿಚಾರಗಳನ್ನು ತಮ್ಮದಾಗಿಸಿಕೊಂಡು ಅಭಿವ್ಯಕ್ತಿಸಿದಾಗ ಮಾತ್ರ ದೇಶ ಹೆಚ್ಚು ಜೀವಂತಿಕೆಯಿಂದ ಇರಲು ಬೆಳೆಯಲು ಸಾಧ್ಯವಾಗುತ್ತದೆ.
(ಮುಗಿಯಿತು..)
(ಈದಿನ.ಕಾಮ್ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’)

ಪ್ರೊ. ಅರವಿಂದ ಮಾಲಗತ್ತಿ
ಕನ್ನಡ ಸಾಹಿತ್ಯದಲ್ಲಿ ಹೊಸ ಚರ್ಚೆಗಳನ್ನು ಹುಟ್ಟು ಹಾಕಿದವರು ಪ್ರೊ.ಅರವಿಂದ ಮಾಲಗತ್ತಿ. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಹೆಸರು ಮಾಡಿದವರು. ಮೂಕನಿಗೆ ಬಾಯಿ ಬಂದಾಗ, ಕಪ್ಪು ಕಾವ್ಯ, ಮೂರನೇ ಕಣ್ಣು, ನಾದ ನಿನಾದ, ಸಿಲಿಕಾನ್ ಸಿಟಿ ಮತ್ತು ಕೋಗಿಲೆ, ಮುಗಿಯದ ಕಥೆಗಳು, ಮಸ್ತಕಾಭಿಷೇಕ, ಸಮುದ್ರದೊಳಗಣ ಉಪ್ಪು ಮೊದಲಾದ ಕೃತಿ ರಚಿಸಿದ್ದಾರೆ. ಅವರ ಆತ್ಮಕತೆ 'ಗೌರ್ಮೆಂಟ್ ಬ್ರಾಹ್ಮಣ' ಕನ್ನಡ ಸಾಹಿತ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.




