‘ಕಲ್ಯಾಣ ಕರ್ನಾಟಕ’ ಕಲ್ಯಾಣವಾಯಿತೆ?

Date:

ಸ್ವತಂತ್ರ ಭಾರತದ ಇತಿಹಾಸದಲ್ಲಿ 560ಕ್ಕೂ ಹೆಚ್ಚು ರಾಜಮಹಾರಾಜರ ಸಂಸ್ಥಾನಗಳನ್ನು ಹೊಂದಿದ್ದ ಈ ದೇಶದಲ್ಲಿ ಭೌತಿಕ ಅಭಿವೃದ್ದಿಯಾಗಲಿ, ಸಾಮಾಜಿಕ ವ್ಯವಸ್ಥೆಯಾಗಲಿ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಮಾನತೆ ಏಕರೂಪವಾಗಿ ಇರಲಿಲ್ಲ. ಈ ವಿಭಿನ್ನ ದೃಷ್ಟಿಕೋನದ ಭಾರತವು ಒಂದು ಮಾನದಂಡದಲ್ಲಿ ಒಂದಾಗುವುದು ಭವಿಷ್ಯದ ದೃಷ್ಟಿಯಿಂದ ಅವಶ್ಯಕತೆಯಿದ್ದ ಕಾರಣ ಸಂವಿಧಾನ ನಿರ್ಮಾತೃಗಳು ಸಂವಿಧಾನ ರಚನೆ ಸಂದರ್ಭದಲ್ಲಿ ಯಾವುದೇ ರಾಜ್ಯದಲ್ಲಿ ಒಂದು ಪ್ರದೇಶ ಮತ್ತೊಂದು ಪ್ರದೇಶಕ್ಕಿಂತ ಅಭಿವೃದ್ದಿಯಲ್ಲಿ, ಶಿಕ್ಷಣದಲ್ಲಿ ಹಾಗೂ ಸಾಂಸ್ಕೃತಿಕವಾಗಿ ವಿಭಿನ್ನವಾಗಿದ್ದರೆ ಅಂತಹ ರಾಜ್ಯಗಳಲ್ಲಿ ಆ ಒಂದು ಪ್ರದೇಶಕ್ಕೆ ಸೀಮಿತವಾಗಿ ವಿಶೇಷ ಕಾನೂನು ರಚನೆ ಮಾಡುವ ಅಧಿಕಾರವನ್ನು ಸಂವಿಧಾನದ ಅನುಚ್ಛೇದ 371ರಲ್ಲಿ ನೀಡಿದ್ದಾರೆ. ಅದರ ಆಧಾರದಲ್ಲಿ ಈಗಾಗಲೇ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಅಸ್ಸಾಂ, ನಾಗಲ್ಯಾಂಡ್, ಒಡಿಸ್ಸಾ, ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ತ್ರಿಪುರಾ ಹಾಗೂ ಗೋವಾ ರಾಜ್ಯಗಳಿಗೆ ಅನುಚ್ಛೇದ 371ರ ಅಡಿಯಲ್ಲಿ ವಿಶೇಷ ಕಾನೂನು ರಚಿಸಲು ಅವಕಾಶ ನೀಡಲಾಗಿದೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಮತ್ತು 1956ರವರೆಗೆ ಹೈದ್ರಾಬಾದ್ ರಾಜ್ಯದ ಅಧೀನದಲ್ಲಿ ಇದ್ದಂತಹ ಹೈದ್ರಾಬಾದ್ ಕರ್ನಾಟಕ (ಬೀದರ್, ಗುಲ್ಬರ್ಗಾ, ಯಾದಗಿರ್, ರಾಯಚೂರು ಮತ್ತು ಕೊಪ್ಪಳ) ಪ್ರದೇಶ ರಾಜ್ಯಗಳ ಪುನರ್ವಿಂಗಡನೆಯ ಸಂದರ್ಭದಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಲಾಗಿತ್ತು. ಹೈದ್ರಾಬಾದ್ ಸಂಸ್ಥಾನದಲ್ಲಿ 1919ರಲ್ಲಿ ಸ್ಥಳೀಯ ಸರಕಾರಿ ಹುದ್ದೆಗಳನ್ನು ಹಾಗೂ ಉನ್ನತ ಶಿಕ್ಷಣ ಅವಕಾಶಗಳನ್ನು ಸ್ಥಳೀಯರಿಗೆ ಮೀಸಲಿಡುವಂತಹ “ಮುಲ್ಕಿ” ಕಾನೂನು ಜಾರಿಗೊಳಿಸಲಾಗಿತ್ತು. ಹೈದ್ರಾಬಾದ್ ಸಂಸ್ಥಾನದಲ್ಲಿ ಜಾರಿಯಲ್ಲಿದ್ದಂತಹ ಮುಲ್ಕಿ ಕಾನೂನಿನ ಮಾನ್ಯತೆಯನ್ನು ರಾಜ್ಯಗಳ ಪುನರ್ವಿಂಗಡಣೆಯ ನಂತರ ಆಂಧ್ರಪ್ರದೇಶ ರಾಜ್ಯದ ತೆಲಂಗಾಣ ಪ್ರದೇಶಕ್ಕೆ 1957ರಲ್ಲಿ ಸಂವಿಧಾನ ಅನುಚ್ಛೇದ 371(1)ರ ಅಡಿಯಲ್ಲಿ ನೀಡಲಾಗಿತ್ತು. ಅದರಂತೆ, ಹೈದ್ರಾಬಾದ್ ಸಂಸ್ಥಾನದ ಭಾಗವಾಗಿದ್ದ ಇಂದಿನ ಮಹಾರಾಷ್ಟ್ರದ ಮರಾಠಾವಾಡ ಪ್ರದೇಶವು ಸೇರಿದಂತೆ ವಿದರ್ಭ, ಕಚ್, ಸೌರಾಷ್ಟ್ರ ಪ್ರದೇಶಕ್ಕೆ 1962ರಲ್ಲಿ ಅನುಚ್ಛೇದ 371(2) ಅಡಿಯಲ್ಲಿ ಮುಲ್ಕಿ ಕಾನೂನಿನ ಮಾದರಿಯಲ್ಲಿ ವಿಶೇಷ ಕಾನೂನು ರಚನೆ ಅಧಿಕಾರ ನೀಡಲಾಗಿದೆ. ಆದರೆ, ಅದೇ ಹೈದ್ರಾಬಾದ್ ಸಂಸ್ಥಾನದ ಭಾಗವಾಗಿದ್ದ ಕರ್ನಾಟಕ ರಾಜ್ಯದ ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಪ್ರದೇಶಕ್ಕೆ ಮುಲ್ಕಿ ಕಾನೂನಿನ ಸೌಲಭ್ಯ ನೀಡುವಲ್ಲಿ ತಾರತಮ್ಯ ಮಾಡಲಾಯಿತು. ಹೀಗೆ ಅಕಸ್ಮತ್ತಾಗಿ ಕೈಬಿಟ್ಟುಹೋಗಿದ್ದ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸ್ಥಳೀಯ ಮೀಸಲಾತಿ ಸಿಗಬೇಕೆಂದು ದಶಕಗಳ ಕಾಲ ಹೋರಾಟ ಮಾಡಬೇಕಾಯಿತು.

ಹೈದ್ರಾಬಾದ್ ಕರ್ನಾಟಕ ಪ್ರದೇಶವು ನೈಸರ್ಗಿಕವಾಗಿ ಅತ್ಯಂತ ಸಂಪದ್ಭರಿತ ಪ್ರದೇಶವಾಗಿದೆ. ಇಲ್ಲಿ ನೈಸರ್ಗಿಕವಾಗಿ ಸಿಗುವ ಖನಿಜ ಸಂಪತ್ತು ವಿಶೇಷವಾಗಿ ಕಬ್ಬಿಣದ ಅದಿರು, ತಾಮ್ರದ ಅದಿರು, ರಾಜ್ಯದಲ್ಲಿ ಚಿನ್ನದ ಅದಿರು ಸಿಗುವ ಏಕೈಕ ಗಣಿ ಪ್ರದೇಶ ಹಟ್ಟಿ ಚಿನ್ನದ ಗಣಿ. ಗುಲ್ಬರ್ಗಾ ಜಿಲ್ಲೆಯಲ್ಲಿ ಸುಣ್ಣದ ಕಲ್ಲು, ಇತ್ತೀಚಿಗೆ ಶಹಾಪುರ ತಾಲ್ಲೂಕಿನ ಗೋಗಿಯಲ್ಲಿ ಯುರೇನಿಯಂ ಅದಿರು ಸಿಗುತ್ತಿದೆ ಎನ್ನಲಾಗಿದೆ. ಅದೇ ರೀತಿ ಅತೀ ಹೆಚ್ಚು ನದಿಗಳು ಈ ಭಾಗದಲ್ಲಿವೆ. ಈ ಪ್ರದೇಶವು ಕೃಷ್ಣ ಮತ್ತು ಗೋದಾವರಿ ನದಿ ಪಾತ್ರ ಹೊಂದಿದ್ದು ಸಾಕಷ್ಟು ನೀರು ಪ್ರತಿ ವರ್ಷ ಹರಿಯುತ್ತದೆ. ಆದರೆ, ಈ ನೀರು ರೈತರ ಹೊಲಗಳಿಗೆ ಹರಿಯುವಂತಹ ಯೋಜನೆಗಳ ಕುರಿತು ರಾಜಕೀಯ ಪಕ್ಷಗಳು ಮಾತನಾಡುತ್ತವೆಯೇ ಹೊರತು ಕಾರ್ಯರೂಪಕ್ಕೆ ತರುವುದಿಲ್ಲ ಎನ್ನುವ ಆರೋಪವಿದೆ. ಮಳೆಗಾಲದಲ್ಲಿ ನೂರಾರು ಟಿ.ಎಂ.ಸಿ. ಅಡಿ ನೀರು ನದಿಗಳಲ್ಲಿ ಹರಿಯುವುದನ್ನು ನೋಡಿ ಯಾರಿಗಾದರೂ ಹೊಟ್ಟೆಗೆ ಬೆಂಕಿ ಬೀಳದೆ ಇರಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ರಾಜ್ಯದ ಇತರೆ ಪ್ರದೇಶದಲ್ಲಿ ಕೇವಲ ಒಂದು-ಎರಡು ಟಿ.ಎಂ.ಸಿ. ಅಡಿ ನೀರಿಗಾಗಿ ರಕ್ತ ಸಿಕ್ತ ಹೋರಾಟ ಮಾಡಿದ್ದನ್ನು ನೋಡಿದ್ದೇವೆ. ಕೃಷ್ಣ ಬಿ-ಸ್ಕೀಂ ಅಡಿಯಲ್ಲಿ 170 ಟಿ.ಎಂ.ಸಿ. ಅಡಿ ನೀರು ಕರ್ನಾಟಕ ರಾಜ್ಯಕ್ಕೆ ಹಂಚಿಕೆ ಮಾಡಿ ತೀರ್ಪು ಪ್ರಕಟವಾಗಿ ದಶಕವಾಗುತ್ತ ಬಂದರೂ ಕೇಂದ್ರ ಸರಕಾರ ಅದನ್ನು ಗೆಜೆಟ್‌ನಲ್ಲಿ ಇಲ್ಲಿಯವರೆಗೂ ಪ್ರಕಟಿಸದೇ ಇರುವುದರಿಂದ ಕೃಷ್ಣ ನದಿ ನೀರು ಬಳಕೆ ಮಾಡಲು ಈ ಭಾಗಕ್ಕೆ ಸಾಧ್ಯವಾಗಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ‘ಕರ್ನಾಟಕ, ಕ್ರಿಕೆಟ್ ಮತ್ತು ನಾನು’: ಯೋಗೇಂದ್ರ ಯಾದವ್ ನೆನಪುಗಳು

ರಾಜ್ಯ ಸರಕಾರ ನಿರ್ದಿಷ್ಟ ಯೋಜನೆಯೊಂದನ್ನು ರೂಪಿಸಿ ಇಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲವನ್ನೇ ಸಮರ್ಪವಾಗಿ ಬಳಕೆ ಮಾಡಿ ಉದ್ಯೋಗ ಸೃಷ್ಟಿ ಮಾಡಿದಲ್ಲಿ ಗುಳೆ ಹೋಗುವ ವ್ಯವಸ್ಥೆಯನ್ನು ತಡೆಯಬಹುದು. ಅದೇ ರೀತಿ ಈ ಭಾಗದಲ್ಲಿ ಲಭ್ಯವಿರುವ ನೀರನ್ನು ವಿವಿಧ ನೀರಾವರಿ ಯೋಜನೆಗಳ ಮೂಲಕ ಕಾಲಮಿತಿಯೊಳಗೆ ಪೂರ್ಣಗೊಳಿಸಿದಲ್ಲಿ ರಾಜ್ಯಕ್ಕೆ, ದೇಶಕ್ಕೆ ಆಹಾರ ಉತ್ಪಾದಿಸುವ ಕಣಜವಾಗಿ ಈ ಪ್ರದೇಶ ಬದಲಾಗುವುದರ ಜೊತೆಗೆ ಜನರ ಜೀವನ ಮಟ್ಟ ಸುಧಾರಣೆಯಾಗುವದರಲ್ಲಿ ಸಂಶಯವಿಲ್ಲ.

hydrabad
ಹೈದ್ರಾಬಾದ್ ಕರ್ನಾಟಕ

ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಸರಕಾರ ಹಲವಾರು ಸರಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಸ್ಥಾಪಿಸಿದೆ, ಅವುಗಳಲ್ಲಿ ವಿಶೇಷವಾಗಿ ಹಟ್ಟಿ ಚಿನ್ನದ ಗಣಿ, ರಾಯಚೂರು ಶಾಖೋತ್ಪನ್ನ ವಿದ್ಯುತ ಕೇಂದ್ರ, ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿದ್ದು, ಈ ಕೈಗಾರಿಕೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದರೂ ಬೇರೆ ರಾಜ್ಯ, ಬೇರೆ ಭಾಗದಿಂದ ಬಂದವರಿಗೆ ಇಲ್ಲಿ ಉದ್ಯೋಗ ನೀಡಿರುವುದರಿಂದ ಸ್ಥಳೀಯರು ಜಮೀನು, ನೀರು, ವಾತಾವರಣ ಕಳೆದುಕೊಂಡು ಕೂಡುವಂತಾಗಿದೆ. ಹಲವಾರು ಖಾಸಗಿ ಕೈಗಾರಿಕೆಗಳು ಈ ಭಾಗದಲ್ಲಿದ್ದರೂ ಅವುಗಳಲ್ಲಿಯೂ ಕೇವಲ ದಿನಗೂಲಿ ಅಥವಾ ಡಿ-ಗ್ರೂಪ್ ಹುದ್ದೆಗಳಿಗೆ ಮಾತ್ರ ಸ್ಥಳೀಯರಿಗೆ ಸ್ವಲ್ಪಮಟ್ಟಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಉದ್ಯೋಗಾವಕಾಶ ಇಲ್ಲದೇ ಸಾಕಷ್ಟು ಜನ ವಿದ್ಯಾವಂತರೂ ಸಹ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

1956ರಿಂದ 2013ರವರೆಗೆ ಈ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ಸರಕಾರಿ ಹುದ್ದೆಗಳು ಸಹ ರಾಜ್ಯದ ಇತರೆ ಭಾಗದವರ ಪಾಲಾಗಿರುವುದು ಸತ್ಯ. ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಲ್ಲಿ ಶೇ. 80ರಷ್ಟು ಶಿಕ್ಷಕರು, ಪ್ರೌಢಶಾಲಾ ವಿಭಾಗದಲ್ಲಿ ಶೇ. 51ರಷ್ಟು ಶಿಕ್ಷಕರು, ವಿಶ್ವವಿದ್ಯಾಲಯಗಳಲ್ಲಿ ಶೇ. 75ರಷ್ಟು ಹುದ್ದೆಗಳು, ಬಹುತೇಕ ಇಲಾಖೆಗಳ ಅಧಿಕಾರಿಗಳು ಬೇರೆ ಭಾಗದವರೇ ಇಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ. 2014ಕ್ಕಿಂತ ಮುಂಚೆ ಕರ್ನಾಟಕ ಸರಕಾರದಿಂದ ನೇರವಾಗಿ ಕೆ.ಎ.ಎಸ್. ಪರೀಕ್ಷೆ ಬರೆದು ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ, ಸಹಾಯಕ ಆಯುಕ್ತ, ಅಪರ ಜಿಲ್ಲಾಧಿಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಹೈ-ಕ ಪ್ರದೇಶದ ಅಧಿಕಾರಿಗಳು ಕೇವಲ 19 ಜನ ಮಾತ್ರ. ಅದೇ ಸಂದರ್ಭದಲ್ಲಿ ಚಿತ್ರದುರ್ಗ ಒಂದು ಜಿಲ್ಲೆಯಿಂದ 21 ಜನ ಅಧಿಕಾರಿಗಳು ಕಂದಾಯ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಅಂದರೆ, ಕಳೆದ 70 ವರ್ಷಗಳಿಂದ ಈ ಭಾಗ ಎಷ್ಟೊಂದು ನಲುಗಿಹೋಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಅದೇ ರೀತಿ ಕರ್ನಾಟಕ ರಾಜ್ಯದ ಆಡಳಿತ ಕೇಂದ್ರವಾಗಿರುವ ವಿಧಾನಸೌಧ, ವಿಕಾಸಸೌಧ, ಬಹುಮಹಡಿಗಳ ಕಟ್ಟಡ ಇತ್ಯಾದಿ ಸಚಿವಾಲಯಗಳಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಸಿಬ್ಬಂದಿಗಳ ಸಂಖ್ಯೆ 3885 ಜನ, ಅದರಲ್ಲಿ ಕೇವಲ 121 ಜನ ಮಾತ್ರ ಹೈ-ಕ ಪ್ರದೇಶದ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ, ಜನಸಂಖ್ಯೆಗಿಂತ ಅತೀ ಕಡಿಮೆ ಹೈ-ಕ ಭಾಗದ ನೌಕರರು ಸರಕಾರದ ಸಚಿವಾಲಯದಲ್ಲಿದ್ದಾರೆ ಎನ್ನುವುದು ಎಷ್ಟೊಂದು ಕಳವಳಕಾರಿಯಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶವು ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿದೆ, ಈ ಪ್ರದೇಶದ ಜನಸಂಖ್ಯೆಯು ರಾಜ್ಯದ ಜನಸಂಖ್ಯೆಯಲ್ಲಿ ಶೇ. 19.26ರಷ್ಟಿದೆ. ಸರಕಾರಗಳ ತಾರತಮ್ಯ ನೀತಿಗಳ ಹಿನ್ನಲೆಯಲ್ಲಿ ಈ ಪ್ರದೇಶವು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ರಾಜ್ಯದಲ್ಲಿರುವ ಒಟ್ಟು 430 ಸರಕಾರಿ ಪದವಿ ಕಾಲೇಜುಗಳ ಪೈಕಿ ಕೇವಲ 77 (ಶೇ. 17.90) ಸರಕಾರಿ ಪದವಿ ಕಾಲೇಜುಗಳು ಮಾತ್ರ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನೂವರೆಗೂ ಒಂದೇ ಒಂದು ಸರಕಾರಿ ಪದವಿ ಕಾಲೇಜು ಇಲ್ಲ. ಇಡೀ ಪ್ರದೇಶದಲ್ಲಿ ಒಂದೇ ಒಂದು ಸರಕಾರಿ ಕಾನೂನು ಕಾಲೇಜು ಇಲ್ಲ. ಕೇವಲ ಒಂದೇ ಒಂದು ಸರಕಾರಿ ಬಿ.ಎಡ್. ಕಾಲೇಜು ಈ ಭಾಗದಲ್ಲಿ ಇದೆ ಎನ್ನುವುದು ಸಾಕಷ್ಟು ವಿಚಾರ ಮಾಡುವ ವಿಷಯವಾಗಿದೆ. ರಾಜ್ಯದಲ್ಲಿ ಖಾಲಿ ಇರುವ ಸುಮಾರು 48,000 ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆಗಳ ಪೈಕಿ ಸುಮಾರು 22,000 ಶಿಕ್ಷಕರ ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇವೆ. ಇದರಿಂದ ಇಲ್ಲಿ ಯಾಕೆ ಪ್ರತಿ ವರ್ಷ ಎಸ್.ಎಸ್.ಎಲ್.ಸಿ., ಪಿಯುಸಿ ಪಲಿತಾಂಶ ಕೊನೆಯಲ್ಲಿರುತ್ತದೆ ಎನ್ನುವುದು ಅರ್ಥವಾಗುತ್ತದೆ. ಸರಕಾರ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಭಾವಿಸಿರುವುದು ಅತ್ಯಂತ ಮೂರ್ಖತನವಾದದ್ದು, ಪ್ರತಿ ವರ್ಷ ಶಾಲೆಗಳ ಶೈಕ್ಷಣಿಕ ಅವಧಿ ಪ್ರಾರಂಭವಾಗುವುದು ಮೇ ಕೊನೆಯ ವಾರದಲ್ಲಿ. ಆದರೆ ಸರಕಾರ ಅತಿಥಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು ಆಗಸ್ಟ್ ಕೊನೆಯ ವಾರದಲ್ಲಿ. ಈ ಮೂರು ತಿಂಗಳ ಅವಧಿಯಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯ ಅಧೋಗತಿ. ಕಲ್ಯಾಣ ಕರ್ನಾಟಕ ಪ್ರದೇಶದ ಸುಮಾರು 2500 ಶಾಲೆಗಳಲ್ಲಿ ಒಬ್ಬರೇ ಒಬ್ಬರು ಶಿಕ್ಷಕರೂ ಇಲ್ಲ ಎನ್ನುವ ವರದಿ ಇದೆ. ಈ ಶಾಲೆಗಳು ಸಂಪೂರ್ಣವಾಗಿ ಅತಿಥಿ ಶಿಕ್ಷಕರ ಮೇಲೆಯೇ ಅವಲಂಬಿತವಾಗಿವೆ. ಇಂತಹ ಶಾಲೆಗಳಲ್ಲಿ ಓದಿರುವ ಮಕ್ಕಳು ಯಾವ ರೀತಿಯ ಫಲಿತಾಂಶ ಪಡೆಯಬಹುದು ಎಂದು ಅಂದಾಜಿಸಬಹುದು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆರೋಗ್ಯ ಸೌಲಭ್ಯ ಅತ್ಯಂತ ವಿರಳ ಎನ್ನಬಹುದು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ 2093, ಅದರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 30,274 ಜನರಿಗೆ ಒಂದರಂತೆ ಒಟ್ಟು 333 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ಮೈಸೂರು ಭಾಗದಲ್ಲಿ 14,409 ಜನಸಂಖ್ಯೆಗೆ ಒಂದರಂತೆ 659 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅದರಂತೆ, ಬೆಂಗಳೂರು ಭಾಗದಲ್ಲಿ 17,512 ಜನಸಂಖ್ಯೆಗೆ ಒಂದರಂತೆ 646 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ ಹಾಗೂ ಬೆಳಗಾವಿ ವಿಭಾಗದಲ್ಲಿ 26,021 ಜನಸಂಖ್ಯೆಗೆ ಒಂದರಂತೆ 455 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಇಲ್ಲಿ ಖಾಲಿ ಇರುವ ಸಿಬ್ಬಂದಿಗಳ ವಿವರವು ಅತ್ಯಂತ ವಿಷಾದನೀಯ ಸ್ಥಿತಿಯಲ್ಲಿದೆ.

ಇದನ್ನೂ ಓದಿರಿ: ಪರಿಷ್ಕೃತ ನೀತಿಗಳು ಕೈಗಾರಿಕೆಗೆ ಮಾರಕವಾಗಿದ್ದು ಹೇಗೆ?

ಕಲ್ಯಾಣ ಕರ್ನಾಟಕ ಪ್ರದೇಶವು ಮೂಲಭೂತ ಸೌಕರ್ಯಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ. ಇದನ್ನು ಕೇಂದ್ರ ಸರಕಾರದ ನೀತಿ ಆಯೋಗ ಪ್ರಕಟಿಸಿದ ವರದಿಗಳಲ್ಲಿ ವಿವರ ಒದಗಿಸಲಾಗಿದೆ. ದೇಶದ ಅತ್ಯಂತ ಹಿಂದುಳಿದ 115 ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಎರಡು ಜಿಲ್ಲೆಗಳಾದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಇವೆ. ಅವುಗಳನ್ನು ಕೇಂದ್ರ ಸರಕಾರವು ಹಿಂದುಳಿದ ಜಿಲ್ಲೆಗಳು ಎಂದರೆ ಮರ್ಯಾದೆಗೆ ಕಡಿಮೆ ಎಂದು ಮಹತ್ವಾಕಾಂಕ್ಷಿ ಜಿಲ್ಲೆಗಳು ಎಂದು ಹೆಸರು ನೀಡಿದೆ. ನೀತಿ ಆಯೋಗದ ವರದಿಯಂತೆ ಬಹು ಆಯಾಮದ ಬಡತನ ಸೂಚ್ಯಂಕಗಳಲ್ಲಿ ಈ ಜಿಲ್ಲೆಗಳು ರಾಜ್ಯದಲ್ಲಿ ಕೊನೆಯ ಆರು ಸ್ಥಾನಗಳಲ್ಲಿ ಇವೆ. ಇದನ್ನು 10 ವಿವಿಧ ಸೂಚ್ಯಂಕಗಳ ಆಧಾರದಲ್ಲಿ ಅಧ್ಯಯನ ಮಾಡಲಾಗಿದೆ. ಇವುಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಯಾದಗಿರಿ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕ್ರಮವಾಗಿ 0.495, 0.539 ಹಾಗೂ 0.534(ರಾಜ್ಯದ ಸರಾಸರಿ 0.611) ಇದೆ. 2022-23ನೇ ಸಾಲಿಗಾಗಿ ರಾಜ್ಯದ ತಲಾ ಆದಾಯ 3,01,673 ಇದೆ. ಬೆಂಗಳೂರು ನಗರದ ತಲಾ ಆದಾಯ 6,21,131. ಆದರೆ ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ ಜಿಲ್ಲೆಯ ತಲಾ ಆದಾಯ 1,24,998 ರಷ್ಟು ಕಡಿಮೆ ಇದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಬಹುದಿನಗಳ ಬೇಡಿಕೆಯಾದ ಸಂವಿಧಾನದ ಅನುಚ್ಛೇದ 371ರ ತಿದ್ದುಪಡಿ ಹೋರಾಟ ಸುದೀರ್ಘವಾಗಿ ನಡೆದು ಬಂದಿದೆ. ಈ ಹೋರಾಟವು ಜನಸಾಮಾನ್ಯರ ಹೋರಾಟವಾಗಿ ರೂಪುಗೊಂಡಿತ್ತು. ಈ ಭಾಗದ ಹಿರಿಯ ನಾಯಕರು, ಕೇಂದ್ರದಲ್ಲಿ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರ ವಿಶೇಷ ಪ್ರಯತ್ನದಿಂದ ಅಂದಿನ ಯುಪಿಎ ಸರಕಾರವು ಸಂವಿಧಾನದ ಅನುಚ್ಛೇದ 371ನ್ನು ತಿದ್ದುಪಡಿ ಮಾಡಿ ಕಲ್ಯಾಣ ಕರ್ನಾಟಕಕ್ಕೆ ಅನುಚ್ಛೇದ 371ಜೆ ಸೇರ್ಪಡೆಗೊಳಿಸಲು ಒಪ್ಪಿಗೆ ಸೂಚಿಸಿದೆ. ಅದರಂತೆ, ಭಾರತ ಸರಕಾರವು ದಿನಾಂಕ 18-12-2012 ಮತ್ತು 19-12-2012ರಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂವಿಧಾನದ 371ಜೆ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆಯಿತು. ನಂತರ 01-01-2013 ರಂದು ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ರಾಜ್ಯದಲ್ಲಿ 371ಜೆ ತಿದ್ದುಪಡಿಯು ಜಾರಿಯಾಯಿತು.

Mallikarjuna Kharge 3
ಮಲ್ಲಿಕಾರ್ಜುನ ಖರ್ಗೆ

2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು 06-11-2013 ರಂದು 371ಜೆ ಅಡಿಯಲ್ಲಿ ನಾಲ್ಕು ಕಾನೂನುಗಳನ್ನು ರಚಿಸಿ 01-01-2013ರಿಂದ ಅನ್ವಯವಾಗುವಂತೆ ಜಾರಿಗೊಳಿಸಿ, ಹೈದ್ರಾಬಾದ್ ಕರ್ನಾಟಕ ಪ್ರದೇಶದ ನಾಗರಿಕರಿಗೆ ವಿಶೇಷ ಸೌಲಭ್ಯ ನೀಡಿದೆ. ಸಂವಿಧಾನದ 371ಜೆ ಅಡಿಯಲ್ಲಿ ನೀಡಲಾದ ವಿಶೇಷ ಸೌಲಭ್ಯವು ರಾಜ್ಯದ ಯಾವುದೇ ಪ್ರದೇಶದ ಜನರ ಯಾವುದೇ ಹಕ್ಕನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ಒಂದು ಅಂಶ ಇತರೆ ಪ್ರದೇಶದ ಜನರಿಗೆ ಹಂಚಿಕೊಂಡು ಬಾಳುವ ಕೆಲಸ ಮಾಡಿದೆ. ದ.ರಾ. ಬೇಂದ್ರೆಯವರ ಒಂದು ಕವನ ಕಲ್ಯಾಣ ಭಾಗದ ಅಭಿವೃದ್ಧಿಯನ್ನು 371ಜೆ ಕಾನೂನಿನ ಮೂಲಕ ಪಡೆಯಲು ಸಾಧ್ಯವಾಗಬಹುದು ಎನ್ನುವ ಯೋಚನೆಯನ್ನು ಇಲ್ಲಿ ಸೂಚಿಸುತ್ತದೆ.

ಸಂವಿಧಾನ ತಿದ್ದುಪಡಿಯಾಗಿ ಒಂದು ದಶಕ ಕಳೆದರೂ ಇಲ್ಲಿಯವರೆಗೆ 371ಜೆ ಸೌಲಭ್ಯ ಸಮರ್ಪಕವಾಗಿ ಜನರಿಗೆ ತಲುಪಿಸಲು ಸರಕಾರಗಳಿಗೆ ಸಾಧ್ಯವಾಗಿಲ್ಲ. ಒಂದು ದಶಕದಲ್ಲಿಯೇ 371ಜೆ ಮೀಸಲಾತಿ ಕುರಿತು ರಾಜ್ಯದ ಇತರೆ ಪ್ರದೇಶದ ಜನರಲ್ಲಿ ಅಸಮಾಧಾನ ಎದ್ದಿರುವದು ರಾಜ್ಯದ ಅಖಂಡತೆಗೆ ಧಕ್ಕೆಯಾಗುತ್ತದೆ ಎನ್ನುವ ಕನಿಷ್ಠ ತಿಳಿವಳಿಕೆ ಇಲ್ಲದೆ ಇರುವುದು ಶೋಚನೀಯ. 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಮಂಡಳಿ ರಚನೆ ಮಾಡಬೇಕು ಎನ್ನುವ ವಿಷಯವನ್ನು ಒಳಗೊಂಡಿದೆ. 371ಜೆ ಅಡಿಯಲ್ಲಿ ಉದ್ಯೋಗ ಮೀಸಲಾತಿಯು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಂಜೂರಾಗಿರುವ ಒಟ್ಟು ಹುದ್ದೆಗಳಲ್ಲಿ ಶೇ. 75, 80 ಮತ್ತು 85ರಷ್ಟು ಹುದ್ದೆಗಳು. ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಕ್ರಮವಾಗಿ ಗ್ರೂಪ್-ಎ ಮತ್ತು ಬಿ, ಗ್ರೂಪ್-ಸಿ ಹಾಗೂ ಗ್ರೂಪ್-ಡಿ ಹುದ್ದೆಗಳಿಗೆ ಮೀಸಲಾಗಿವೆೆ, ಅಲ್ಲದೇ ಬೆಂಗಳೂರು ನಗರ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳು, ರಾಜ್ಯದ ಇತರೆ ಪ್ರದೇಶದಲ್ಲಿ ಇರುವ ವಿಶ್ವವಿದ್ಯಾಲಯಗಳಲ್ಲಿ ಎಲ್ಲಾ ವೃಂದದ ಹುದ್ದೆಗಳಿಗೆ ಶೇ. 8ರಷ್ಟು ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿವೆ. ಅಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಲಭ್ಯವಿರುವ ಒಟ್ಟು ಸೀಟುಗಳಲ್ಲಿ ಶೇ. 70ರಷ್ಟು ಸೀಟುಗಳು ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯದ ಇತರೆ ಪ್ರದೇಶಗಳಲ್ಲಿ ಲಭ್ಯವಿರುವ ಒಟ್ಟು ಸೀಟುಗಳಲ್ಲಿ ಶೇ. 8ರಷ್ಟು ಸೀಟುಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.

ಇದನ್ನೂ ಓದಿರಿ: ರಾಜ್ಯಪಾಲ ಹುದ್ದೆಯ ರಾಜಕಾರಣ; ತಿಳಿಯಲೇಬೇಕಾದ ಐತಿಹಾಸಿಕ ಸಂಗತಿಗಳಿವು!

ಕರ್ನಾಟಕ ರಾಜ್ಯ ಸರಕಾರವು ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371ಜೆ ನಿಯಮಗಳನ್ನು ಜಾರಿಗೊಳಿಸಿ ಒಂದು ದಶಕವೇ ಆಗಿದೆ. ಈ ಒಂದು ದಶಕದಲ್ಲಿ ಸಾಕಷ್ಟು ವೈದ್ಯಕೀಯ, ಇಂಜಿನೀಯರಿಂಗ್ ಸೀಟುಗಳು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಲಭಿಸಿವೆ. ಇದೇ ವರ್ಷ ಸುಮಾರು 1340 ಮೆಡಿಕಲ್ (ಎಂ.ಬಿ.ಬಿ.ಎಸ್.) ಸೀಟುಗಳನ್ನು ಈ ಭಾಗದ ವಿದ್ಯಾರ್ಥಿಗಳು ಪಡೆದಿದ್ದಾರೆ. ಅದೇ ರೀತಿ ದಿನಾಂಕ 24-11-2014ರಂದು ಗುಲ್ಬರ್ಗಾ ನಗರದಲ್ಲಿ ನಡೆದ ರಾಜ್ಯದ ಸಚಿವ ಸಂಪುಟ ಸಭೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡಲಾಗುವುದೆಂದು ಘೋಷಿಸಲಾಯಿತು. 371ಜೆ ಅಡಿಯಲ್ಲಿ ಸರಕಾರಿ ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆ ಪ್ರಾರಂಭಿಸಲು ಪ್ರಾದೇಶಿಕ ಮಟ್ಟದ ಸಮಿತಿಯನ್ನು ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಅಂದಿನಿಂದ ಇಲ್ಲಿಯವರೆಗೆ ಸುಮಾರು 40,000ಕ್ಕೂ ಹೆಚ್ಚು ವಿವಿಧ ಇಲಾಖೆಗಳು, ನಿಗಮ, ಮಂಡಳಿ, ವಿಶ್ವವಿದ್ಯಾಲಯಗಳು ಸೇರಿದಂತೆ ಸರಕಾರಿ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ 371ಜೆ ಅಡಿಯಲ್ಲಿ ಅವಕಾಶ ಸಿಕ್ಕಿರುವದು ಸಂತೋಷದ ವಿಷಯ.

ಆದರೆ, ಹಿಂದಿನ ಬಿಜೆಪಿ ಸರಕಾರವು 371ಜೆ ಮೀಸಲಾತಿ ಅನುಷ್ಠಾನಕ್ಕಾಗಿ ಮೂರು ವರ್ಷದಲ್ಲಿ ಮೂರು ವಿಭಿನ್ನ ಸುತ್ತೋಲೆಗಳನ್ನು ಹೊರಡಿಸಿ ಚಾಲ್ತಿಯಲ್ಲಿರುವ ಎಲ್ಲಾ ನೇಮಕಾತಿ ಪ್ರಕ್ರಿಯೆಗಳಲ್ಲಿ ಗೊಂದಲ ಮೂಡುವಂತೆ ಮಾಡಿತ್ತು. ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ದಾಖಲಾಗಿ ಇಲ್ಲಿಯವರೆಗೆ ಅಂತಿಮ ಹಂತಕ್ಕೆ ತಲುಪದ ಸ್ಥಿತಿಗೆ ಬಂದಿದೆ. ಎಲ್ಲಾ ನೇಮಕಾತಿಗಳು ನ್ಯಾಯಾಲಯದ ಆಕ್ಷೇಪಣೆಯಲ್ಲಿವೆ. ಬಿಜೆಪಿ ಸರಕಾರವು ಮೂಡಿಸಿದ ಗೊಂದಲಗಳಿಂದ ಈ ಭಾಗದ ಜನರು ಭ್ರಮನಿರಸನ ಹೊಂದುವಂತಾಗಿದೆ.

ಸಂವಿಧಾನದ ಅನುಚ್ಛೇದ 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 2014ರಲ್ಲಿ ರಚನೆ ಮಾಡಲಾಗಿದೆ, ಅಲ್ಲಿಂದ ಇಲ್ಲಿಯವರೆಗೆ ಸುಮಾರು 16,300 ಕೋಟಿ ರೂ. ಅನುದಾನ ಒದಗಿಸಲಾಗಿದೆ, ಅಲ್ಲದೇ ಪ್ರಸಕ್ತ ಸಾಲಿನಲ್ಲಿ 5,000 ಕೋಟಿ ರೂ. ಅನುದಾನದ ಕ್ರಿಯಾಯೋಜನೆ ರೂಪಿಸಲಾಗಿದೆ. ಮಂಡಳಿಯ ಅನುದಾನದಲ್ಲಿ ಎಲ್ಲರೂ ಪಾಲು ಕೇಳಲು ಪ್ರಾರಂಭಿಸಿ, ಮಂಡಳಿಯ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಲಾಗುತ್ತಿದೆ ಎನ್ನುವ ಭಾವನೆ ಜನರಲ್ಲಿ ಬರತೊಡಗಿದೆ. ಹಿಂದಿನ ಬಿಜೆಪಿ ಸರಕಾರ ತಮ್ಮ ಪಕ್ಷದ ಶಾಸಕರನ್ನು ತೃಪ್ತಿಪಡಿಸಲು ಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ಸಚಿವರ ಬದಲಾಗಿ ಶಾಸಕರನ್ನು ಮಾಡಲು ನಿಯಮಗಳಲ್ಲಿ ತಿದ್ದುಪಡಿ ಮಾಡಿ ಮಂಡಳಿಯನ್ನು ದುರ್ಬಲಗೊಳಿಸಿದರು. ಈಗಿನ ಸರಕಾರದಲ್ಲಿ ರಾಜ್ಯಪಾಲರು 250 ಕೋಟಿ ರೂ. ಅನುದಾನವನ್ನು ತಮ್ಮ ವಿವೇಚನೆಗೆ ಪಡೆದುಕೊಂಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ.

ಈ ಭಾಗದಲ್ಲಿ ಇರುವುದೇ 7 ವಿಶ್ವವಿದ್ಯಾಲಯಗಳು. ಅವುಗಳನ್ನು ಅಭಿವೃದ್ಧಿಪಡಿಸಲು ಅಷ್ಟೊಂದು ಅನುದಾನದ ಅವಶ್ಯಕತೆಯಿಲ್ಲ. ಆದರೂ ವಿವಿಗಳ ಅಭಿವೃದ್ಧಿ ಎಂದು ಅನುದಾನ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಪ್ರದೇಶಕ್ಕೆ ಸಂಬಂಧವೇ ಇಲ್ಲದ ಯೋಜನಾ ಇಲಾಖೆಯ ಸಚಿವರಿಗೆ 150 ಕೋಟಿ ರೂ. ವಿವೇಚನಾ ಅನುದಾನ ನೀಡಲಾಗಿದೆ. ಅವರು ಆ ಅನುದಾನವನ್ನು ಈ ಪ್ರದೇಶದ ಅಭಿವೃದ್ಧಿಗೆ ಬಳಸಬೇಕು. ಒಮ್ಮೆಯೂ ಈ ಭಾಗಕ್ಕೆ ಭೇಟಿ ನೀಡದ ಯೋಜನಾ ಸಚಿವರು ತಮ್ಮ ವಿವೇಚನಾ ಅನುದಾನವನ್ನು ಯಾವ ಪುರುಷಾರ್ಥಕ್ಕೆ ಬಳಸುತ್ತಾರೆ ಎನ್ನುವುದೇ ಪ್ರಶ್ನಾರ್ಹವಾಗಿದೆ. ಇನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷತೆಯು ಕಳೆದ ಒಂದು ದಶಕದಿಂದ ಕಲಬುರಗಿ ಜಿಲ್ಲೆಯ ಹಿಡಿತದಲ್ಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಮೊದಲು ಡಾ.ಖಮರುಲ್ ಇಸ್ಲಾಂ, ನಂತರ ಡಾ.ಶರಣಪ್ರಕಾಶ ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ, ಈಗ ಡಾ.ಅಜಯ ಸಿಂಗ್ ಸತತವಾಗಿ 9 ವರ್ಷ ಮಂಡಳಿ ಅಧ್ಯಕ್ಷರಾಗಿ ಕಲಬುರಗಿ ಜಿಲ್ಲೆಯವರೇ ಸ್ಥಾನ ಪಡೆದಿರುವುದು ಕಲ್ಯಾಣ ಕರ್ನಾಟಕದಲ್ಲಿಯೇ ಜಿಲ್ಲಾವಾರು ತಾರತಮ್ಯ ಸೃಷ್ಟಿಸುತ್ತಿದೆ ಎನ್ನಬಹುದು. ಮಂಡಳಿಯು ಕಳೆದ ಒಂದು ದಶಕದಲ್ಲಿ ಕ್ರಿಯಾತ್ಮಕವಾಗಿ ಒಂದು ಪರಿಪೂರ್ಣ ಕ್ರಿಯಾಯೋಜನೆಯನ್ನು ರೂಪಿಸಲು ಪ್ರಯತ್ನಿಸಿಲ್ಲ. ಈ ಭಾಗದ ಹಿಂದುಳಿದಿರುವಿಕೆಗೆ ಕಾರಣವಾದ ಅಂಶಗಳನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿಲ್ಲ. ಮಂಡಳಿಯ ಅನುದಾನವನ್ನು ಶಾಸಕರಿಗೆ ಹಂಚಲು ಬಳಸಲಾಗುತ್ತಿದೆ. ಇದರಿಂದ ಜನರಿಗೆ ಅವಶ್ಯಕತೆಯಿರುವ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಯಾವ ಉದ್ದೇಶಕ್ಕೆ ಸಂವಿಧಾನ ತಿದ್ದುಪಡಿಯಲ್ಲಿ ಮಂಡಳಿಯನ್ನು ರಚನೆ ಮಾಡಲಾಗಿದೆಯೋ ಅದನ್ನು ಮರೆತು ಇನ್ನೆಲ್ಲವನ್ನೂ ಮಂಡಳಿಯ ಮೂಲಕ ಮಾಡಲಾಗುತ್ತದೆ ಎನ್ನುವುದೇ ಸೋಜಿಗದ ವಿಷಯ.

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಸರಕಾರವು ಒಂದು ಸ್ಪಷ್ಟ ದಿಕ್ಸೂಚಿಯನ್ನು ರೂಪಿಸುವ ಅವಶ್ಯಕತೆಯಿದೆ. ಮುಂದಿನ ಒಂದು ದಶಕದ ಅವಧಿಯ ಅಭಿವೃದ್ಧಿಗೆ ಬದ್ಧತೆಯ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನ ಮಾಡಲು ಕಾರ್ಯಕ್ರಮ ಜಾರಿ ಮಾಡಲಿ. 371ಜೆ ಮೀಸಲಾತಿ ಅನುಷ್ಠಾನ ಮಾಡಲು ಒಂದು ಪ್ರಾಧಿಕಾರ ರಚನೆ ಮಾಡುವ ಮೂಲಕ 371ಜೆ ಸಮರ್ಪಕ ಜಾರಿಗೆ ಸರಕಾರವು ಬದ್ಧತೆ ತೋರಿಸಲಿ ಎನ್ನುವುದೇ ಜನರ ಭಾವನೆಯಾಗಿದೆ. ಕಲ್ಯಾಣ ಕರ್ನಾಟಕ ಎಂದು ಹೆಸರೇನೊ ಬದಲಾವಣೆ ಮಾಡಲಾಗಿದೆ. ಆದರೆ ಕಲ್ಯಾಣವಾಗುವದು ಎಂದೋ ಎನ್ನುವ ಯೋಚನೆಯಲ್ಲಿ ಜನತೆ ಇದ್ದಾರೆ.

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ)

WhatsApp Image 2025 11 17 at 3.55.49 PM
ಡಾ ರಝಾಕ್‌ ಉಸ್ತಾದ್‌
+ posts

ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಡಾ ರಝಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...