ಬಿಜೆಪಿ ವಾಷಿಂಗ್ ಮಷೀನ್‌ನ ಈ ಸ್ವಾರಸ್ಯಕರ ಕಥೆಗಳನ್ನು ಕೇಳಿದ್ದೀರಾ?

Date:

ಇಸವಿ 2002. ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಅಂದು ಕಾಂಗ್ರೆಸ್‌‌ನಿಂದ ಮೂವರು ಅಭ್ಯರ್ಥಿಗಳು ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದವರು- ಜನಾರ್ದನ ಪೂಜಾರಿ, ಪ್ರೇಮಾ ಕಾರಿಯಪ್ಪ ಮತ್ತು ಎಂ.ವಿ.ರಾಜಶೇಖರನ್. 44 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಕೇವಲ ಒಂದು ಮತದ ಕೊರತೆ ಹೊಂದಿದ್ದರೂ, ಜೆಡಿಯು ಪಕ್ಷದೊಂದಿಗೆ ಮೈತ್ರಿ ಹೊಂದಿದ್ದ ಕಾರಣ ಅತ್ಯಂತ ಸುಲಭವಾಗಿ ಗೆಲ್ಲಬಹುದಾಗಿತ್ತು. ಅದರಂತೆಯೇ ಬಿಜೆಪಿ ಮಾಜಿ ಸಂಸದೆ ತಾರಾದೇವಿ ಸಿದ್ಧಾರ್ಥ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿತು‌.

ಇದೇ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ವರ್ಣರಂಜಿತ ಉದ್ಯಮಿ ವಿಜಯ್ ಮಲ್ಯ ಅವರಿಗೆ ರಾಜಕೀಯವಾಗಿ ಯಾವ ಹಿನ್ನೆಲೆಯೂ ಇರಲಿಲ್ಲ, ಬೆಂಬಲವೂ ಇರಲಿಲ್ಲ. ಇದ್ದದ್ದು ಕೇವಲ ದುಡ್ಡು ಮಾತ್ರ! ಅತ್ಯಂತ ಸುಲಭವಾಗಿ ಗೆಲ್ಲಬಹುದಿದ್ದ ಚುನಾವಣೆಯನ್ನು ಬಿಜೆಪಿ ಸೋತಿತು. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ವಿಜಯ್ ಮಲ್ಯ ಗೆದ್ದರು! ಬಿಜೆಪಿ ಅಭ್ಯರ್ಥಿ ತಾರಾದೇವಿ ಸಿದ್ಧಾರ್ಥ ಕಣ್ಣೀರಿಟ್ಟರು. ಇಡೀ ದೇಶದ ಗಮನ ಸೆಳೆದಿದ್ದ ಈ ಫಲಿತಾಂಶದಿಂದಾಗಿ ಕರ್ನಾಟಕದ ಶಾಸಕರ ಮಾನ ಹರಾಜು ಆಯಿತು. ಬಿಜೆಪಿಯ ಸುಮಾರು ಕಾಲುಭಾಗ ಶಾಸಕರು ಹಣಕ್ಕೆ ಮಾರಾಟವಾಗಿದ್ದರು! ಇಡೀ ದೇಶಕ್ಕೆ ಸಂಸ್ಕಾರ ಸಂಸ್ಕೃತಿಯ ಪಾಠ ಮಾಡುತ್ತಿದ್ದ, ಬೇರೆ ಪಕ್ಷದ ಸಂಸದರ ಪಕ್ಷಾಂತರ ಮಾಡಿಸಲೊಪ್ಪದೆ ಕೇವಲ ಒಂದು ಓಟಿನಿಂದ ಸೋತು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪ್ರಧಾನಿ ವಾಜಪೇಯಿಯವರು, ತನ್ನದೇ ಪಕ್ಷದ ಶಾಸಕರು ಹಣಕ್ಕೆ ಮಾರಾಟವಾಗಿದ್ದಕ್ಕೆ ನಾಚಿಕೆಯಿಂದ ತಲೆ ತಗ್ಗಿಸಿದ್ದರು‌. ಇನ್ನೂ ನಾಚಿಕೆಗೇಡಿನ ಸಂಗತಿ ಎಂದರೆ ಬಿಜೆಪಿಯ ಅಧಿಕೃತ ಮತ್ತು ಪರಾಜಿತ ಅಭ್ಯರ್ಥಿ ಡಿ.ಕೆ. ತಾರಾದೇವಿ ಸಿದ್ಧಾರ್ಥ ಮತ್ತು ವಿಜೇತ ಅಭ್ಯರ್ಥಿ ವಿಜಯ್ ಮಲ್ಯ ಇಬ್ಬರೂ ಹೇಳಿಕೊಂಡಂತೆ ಹಲವು ಬಿಜೆಪಿ ಶಾಸಕರು ಇಬ್ಬರೂ ಅಭ್ಯರ್ಥಿಗಳಿಂದ ಲಕ್ಷಗಟ್ಟಲೇ ಹಣ ಪಡೆದಿದ್ದರು. ಬಿಜೆಪಿಯ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ 10+ ಶಾಸಕರು ಅಂದು ಪಕ್ಷಾಂತರ ನಿಷೇಧ ಕಾಯ್ದೆ ಇಲ್ಲದ ಕಾರಣ ಅನರ್ಹತೆಯಿಂದ ಪಾರಾದರು. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತು.

ಇಂತಹ ಮುಖಭಂಗ ಅನುಭವಿಸಿದ ನಂತರ ಬಿಜೆಪಿ ಪಾಠ ಕಲಿಯಬೇಕಿತ್ತು. ಆದರೆ ವಿಪರ್ಯಾಸ ನೋಡಿ, ಕೇವಲ 22 ವರ್ಷಗಳ ಹಿಂದೆ ಕುದುರೆ ವ್ಯಾಪಾರಕ್ಕೆ ಬಲಿಪಶುವಾಗಿದ್ದ ಬಿಜೆಪಿ ಇದೀಗ ಇಂತಹ ಕುದುರೆ ವ್ಯಾಪಾರ ಅಲ್ಲಲ್ಲ, ಆಪರೇಷನ್ ಕಮಲ ಎಂಬ ಅತ್ಯಂತ ಹೊಲಸು ರಾಜಕೀಯ ಚಟುವಟಿಕೆಯಿಂದಲೇ ಬಲಶಾಲಿ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ‌!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಿಜೆಪಿಯ ಬಣ್ಣ ಬಯಲಾದದ್ದು ಹೀಗೆ!

ತನ್ನನ್ನು ವಿಭಿನ್ನ ಪಕ್ಷ, ಶಿಸ್ತಿನ ಪಕ್ಷ, ದೇಶ ಭಕ್ತರ ಪಕ್ಷ, ಸಂಸ್ಕಾರಿ ಪಕ್ಷ ಎಂದು ತನಗೆ ತಾನೇ ಬಿರುದು ಕೊಟ್ಟುಕೊಂಡು ಬಂದಿದ್ದ ಬಿಜೆಪಿಯ ಅಸಲಿ ಬಂಡವಾಳ ಬಯಲಾಗಿದ್ದೇ 2014ರಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕು ಕೇಂದ್ರದಲ್ಲಿ ಸರಕಾರ ರಚಿಸಿದಾಗ! 2014ರ ಹಿಂದೆ ಯಾರು ಯಾರನ್ನು ಬಿಜೆಪಿ ಭ್ರಷ್ಟ, ದುಷ್ಟ ಎಂದು ಹೀಗೆಳೆಯುತ್ತಿತ್ತೋ ಅವರೆಲ್ಲರನ್ನೂ ಬಿಜೆಪಿಗೆ ಸೇರಿಸಿಕೊಂಡು, ಅವರ ಕೊಳೆಯನ್ನೆಲ್ಲ ತೊಳೆದು ಶುದ್ಧಿ ಮಾಡಿಬಿಟ್ಟಿತು! ಅದು ಬರೀ ಒಬ್ಬಿಬ್ಬರನ್ನಲ್ಲ; ಬರೋಬ್ಬರಿ 211 ಜನ ಸಂಸದ ಅಥವಾ ಶಾಸಕರು ಮತ್ತು 253 ಜನ ಅಭ್ಯರ್ಥಿಗಳನ್ನು! ಈ ಅಂಕಿ- ಅಂಶ ಕೇವಲ 8 ವರ್ಷಗಳ ಅವಧಿಯದ್ದು (2014-2022).

ಇದನ್ನೂ ಓದಿರಿ: ಲವ್ ಜಿಹಾದ್‌ನಿಂದ ವೋಟ್ ಜಿಹಾದ್‌ವರೆಗಿನ ಪಿತೂರಿ ಕಥನ; ವಾಸ್ತವವೇನು?

ಬರೀ ಈ ಲೋಕಸಭಾ ಚುನಾವಣೆಯೊಂದರಲ್ಲೇ (ಸಾರ್ವತ್ರಿಕ ಲೋಕಸಭಾ ಚುನಾವಣೆ 2024) ಸುಮಾರು 120 ಜನ, ಸುಮಾರು 30% ಬಿಜೆಪಿ ಅಭ್ಯರ್ಥಿಗಳು ಇತರ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದವರು. ಇಷ್ಟು ಮಾತ್ರ ಅಲ್ಲ (2014- 2022) ಅವಧಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಇತರ ಪಕ್ಷಗಳ ಶಾಸಕ ಅಭ್ಯರ್ಥಿಗಳು ಎಷ್ಟು ಗೊತ್ತೇ? 833! ಫೆಬ್ರವರಿ 13, 2024ರಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಅಶೋಕ್ ಚವ್ಹಾಣ್ ಬಿಜೆಪಿ ಸೇರಿದರು. ಇದರಲ್ಲೇನು ವಿಶೇಷ ಅನ್ನಿಸಿದ್ದರೆ, ಸ್ವಲ್ಪ ವರ್ಷ ಹಿಂದಕ್ಕೆ ಹೋಗೋಣ- 2010ಕ್ಕೆ. ನವೆಂಬರ್ 11, 2011ರಂದು ಅವತ್ತಿನ ಮಹಾರಾಷ್ಟ್ರದ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಇದೇ ಅಶೋಕ್ ಚವ್ಹಾಣ್, ಕಾರ್ಗಿಲ್ ಹುತಾತ್ಮ ಯೋಧರ ಕುಟುಂಬಗಳಿಗಾಗಿ ಕಟ್ಟಿದ್ದ ಮುಂಬೈನ ಆದರ್ಶ ಹೌಸಿಂಗ್ ಸೊಸೈಟಿಯಲ್ಲಿ ತಮ್ಮ ಕುಟುಂಬದವರಿಗಾಗಿ ಫ್ಲಾಟ್‌ಗಳನ್ನು ಅಕ್ರಮವಾಗಿ ನೋಂದಾಯಿಸಿಕೊಂಡಿದ್ದರು ಎಂಬ ಕಾರಣಕ್ಕಾಗಿ ಸಿಬಿಐ ಆರೋಪಪಟ್ಟಿಯಲ್ಲಿ ಮುಖ್ಯ ಆರೋಪಿಯಾಗಿದ್ದರು. ಇದೇ ಕಾರಣಕ್ಕಾಗಿ ದೇಶದಾದ್ಯಂತ ಛೀಮಾರಿ ಹಾಕಿಸಿಕೊಂಡು ರಾಜೀನಾಮೆ ನೀಡಿದ್ದರು. ಈ ಅಶೋಕ್ ಚವ್ಹಾಣ್ ವಿರುದ್ಧ ಮತ್ತು ಅವತ್ತಿನ ನಗರಾಭಿವೃದ್ಧಿ ಸಚಿವ ಸುನಿಲ್ ತತ್ಕರೆ ವಿರುದ್ಧ ಬಿಜೆಪಿ ಬಹಳ ದೊಡ್ಡ ಹೋರಾಟ ಸಂಘಟಿಸಿತ್ತು. ಮುಖ್ಯವಾಗಿ ದೇವೇಂದ್ರ ಫಡ್ನವಿಸ್ ಮತ್ತು ನಿತಿನ್ ಗಡ್ಕರಿಯವರು ಅಶೋಕ್ ಮತ್ತು ಸುನಿಲ್ ತತ್ಕರೆ ವಿರುದ್ಧ ಭಾಷಣ ಮಾಡದ ವೇದಿಕೆಗಳಿಲ್ಲ! ಅವರಷ್ಟೇ ಯಾಕೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ನರೇಂದ್ರ ಮೋದಿಯವರು ನಾಂದೇಡ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಚವ್ಹಾಣ್ ಬಗ್ಗೆ ‘ನಾಚಿಕೆ ಇಲ್ಲದವ, ಹುತಾತ್ಮ ಯೋಧರ ಜಾಗ ಕದ್ದ ಕಳ್ಳ’ ಎಂದು ಜರಿದು, ಬಹಳ ಭಾವನಾತ್ಮಕ ಭಾಷಣ ಮಾಡಿದ್ದರು. ಅಂದು ಮೋದಿಯವರ ಭಾಷಣ ಕೇಳಿದ ಜನರು, ಒಂದು ವೇಳೆ ಮೋದಿ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದರೆ ಅಶೋಕ್ ಚವ್ಹಾಣ್ ಮತ್ತು ಸುನಿಲ್ ತತ್ಕರೆಯನ್ನು ಹೆಡೆಮುರಿ ಕಟ್ಟಿ ಜೈಲಿಗೆ ಕಳುಹಿಸುತ್ತಾರೆ ಎಂದು ಭಾವಿಸಿದ್ದರು! ವಿಪರ್ಯಾಸ ನೋಡಿ, ಈಗ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣದ ಕಡತ ಧೂಳು ತಿನ್ನುತ್ತಿದೆ. ಅಶೋಕ್ ಚವ್ಹಾಣ್ ಸರ್ವಪಾಪ ವಿಮುಕ್ತರಾಗಿ ಬಿಜೆಪಿಯಿಂದ ರಾಜ್ಯಸಭಾ ಸಂಸದರಾಗಿದ್ದಾರೆ. ಸುನಿಲ್ ತತ್ಕರೆಯ ಮಗಳು ಇದೇ ಬಿಜೆಪಿ ಸರ್ಕಾರದಲ್ಲಿ ಮೂರನೇ ಬಾರಿಗೆ ಮಂತ್ರಿಯಾಗಿದ್ದಾರೆ. ಸುನಿಲ್ ತತ್ಕರೆ ಬಿಜೆಪಿಯ ಎನ್‌ಡಿಎ ಮೈತ್ರಿಕೂಟದ ಸಂಸದರಾಗಿದ್ದಾರೆ!

Ashok Chavan 2
ಬಿಜೆಪಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್

ಇದು ಒಂದು ಉದಾಹರಣೆ ಅಲ್ಲ, 2014-2016ರ ನಡುವೆ ಕೋಲ್ಕತ್ತಾದ ತನಿಖಾ ಪತ್ರಕರ್ತ ಮ್ಯಾಥ್ಯೂ ಸ್ವಾಮ್ಯುಯೆಲ್ (ತೆಹಲ್ಕಾ ಪತ್ರಿಕೆಯ ಮಾಜಿ ಪತ್ರಕರ್ತರು) ತೃಣಮೂಲ ಕಾಂಗ್ರೆಸ್ ನಾಯಕರ ಮೇಲೆ ಒಂದು ಸ್ಟಿಂಗ್ ಆಪರೇಷನ್ ಮಾಡುತ್ತಾರೆ. ನಾರದ ನ್ಯೂಸ್ ಎಂಬ ಸ್ಥಳೀಯ ಬಂಗಾಳಿ ಸುದ್ದಿ ಮಾಧ್ಯಮದಲ್ಲಿ ಈ ಸ್ಟಿಂಗ್ ಆಪರೇಷನ್ ಬಿತ್ತರಗೊಳ್ಳುತ್ತದೆ. ದೇಶದಾದ್ಯಂತ ಕೋಲಾಹಲ ಎಬ್ಬಿಸಿದ ಈ ಸ್ಟಿಂಗ್‌ನಲ್ಲಿ 12 ಜನ ತೃಣಮೂಲ ಕಾಂಗ್ರೆಸ್ ನಾಯಕರು ಲಂಚ ಪಡೆಯುತ್ತಾ ಸಿಕ್ಕಿಬಿದ್ದಿರುತ್ತಾರೆ. ಅವರಲ್ಲಿ ಪ್ರಮುಖರು ಸುವೆಂದು ಅಧಿಕಾರಿ! ಸುವೆಂದು ಅಧಿಕಾರಿಯವರು ಮಮತಾ ಬ್ಯಾನರ್ಜಿಯವರ ಆಪ್ತ ಎಂಬ ಕಾರಣಕ್ಕೆ ಹಾಗೂ 2016ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಕೆಲವೇ ಕೆಲವು ತಿಂಗಳ ಮುನ್ನ ಪ್ರಸಾರವಾದ ಈ ಹಗರಣ ದೊಡ್ಡ ಸದ್ದಾಗುತ್ತದೆ. ಲಂಚ ಪಡೆದವರನ್ನು ಬಂಧಿಸಬೇಕಾದ ತೃಣಮೂಲ ಕಾಂಗ್ರೆಸ್ ಸರ್ಕಾರ, ಪತ್ರಕರ್ತ ಮ್ಯಾಥ್ಯೂ ಸ್ವಾಮ್ಯುಯೆಲ್ ಅವರನ್ನೇ ಬಂಧಿಸಿ ಉದ್ಧಟತನ ತೋರುತ್ತದೆ. ಚುನಾವಣೆಯ ನಂತರ ಈ ಸ್ಟಿಂಗ್ ಆಪರೇಷನ್ ಕೇಸು ಕೋಲ್ಕತ್ತಾ ಹೈ ಕೋರ್ಟ್ ಬಳಿ ಹೋಗುತ್ತದೆ. ಸುವೆಂದು ಅಧಿಕಾರಿಯೂ ಸೇರಿದಂತೆ ಎಲ್ಲ 12 ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಆದೇಶ ಮಾಡುತ್ತದೆ.

Suvendu adhikari 2
ಸುವೆಂದು ಅಧಿಕಾರಿ

ಈ ನಡುವೆ ಎಂದಿನಂತೆ ಚುನಾವಣಾ ಪ್ರಚಾರಕ್ಕಾಗಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದ ನರೇಂದ್ರ ಮೋದಿಯವರು 2019ರಲ್ಲಿ ನಾರದ ಮತ್ತು ಶಾರದಾ ಹಗರಣಗಳ ಆರೋಪಿಗಳ ವಿರುದ್ಧ ಭರ್ಜರಿ ಭಾಷಣ ಮಾಡಿ, ಎಲ್ಲ ಆರೋಪಿಗಳನ್ನು ಜೈಲಿಗೆ ಅಟ್ಟುವುದಾಗಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡು ಹೋಗಿ ಒಂದೇ ವರ್ಷದ ಒಳಗೆ, ನಾರದ ಸ್ಟಿಂಗ್ ಆಪರೇಷನ್ ಆರೋಪಿಗಳಾದ ಸುವೆಂದು ಅಧಿಕಾರಿ ಮತ್ತು ಮುಕುಲ್ ರಾಯ್ ಇಬ್ಬರನ್ನೂ ಬಿಜೆಪಿಗೆ ಸೇರಿಸಿಕೊಂಡು, ಸುವೆಂದು ಅಧಿಕಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಮುಕುಲ್ ರಾಯ್‌ಗೆ ಬಿಜೆಪಿ ರಾಷ್ಟೀಯ ಉಪಾಧ್ಯಕ್ಷ ಪದವಿ ನೀಡಿ ಸನ್ಮಾನಿಸುತ್ತಾರೆ. ಮಾತ್ರವಲ್ಲ 2021ರ ಸಿಬಿಐ ಆರೋಪಪಟ್ಟಿಯಲ್ಲಿ ಈ ಇಬ್ಬರ ಹೆಸರು ಕೈಬಿಡಲಾಗುತ್ತದೆ! ಇದೇ ವೇಳೆ ಇದೇ ಕೇಸ್‌ಗೆ ಸಂಬಂಧಿಸಿದಂತೆ ನೇರವಾಗಿ ಬಂಗಾಳದ ಅಂದಿನ ರಾಜ್ಯಪಾಲ, ಇಂದಿನ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಬಳಿ ಉಳಿದ ಆರೋಪಿಗಳು ಮತ್ತು ಸಚಿವರೂ ಆದ ಫಿರ್ಹದ್ ಹಕೀಮ್ , ಮದನ್ ಮಿತ್ರ, ಸುಬ್ರತಾ ಮುಖರ್ಜಿ, ಸೋವನ್ ಚಟರ್ಜಿ ಅವರನ್ನು ಬಂಧಿಸಲು ಅನುಮತಿ ಕೇಳಲಾಗುತ್ತದೆ. ಇದಕ್ಕಾಗಿಯೇ ಕಾದು ಕುಳಿತವರಂತೆ ಮಿಂಚಿನ ವೇಗದಲ್ಲಿ ರಾಜ್ಯಪಾಲರು ಅನುಮತಿಯನ್ನೂ ನೀಡುತ್ತಾರೆ. ಬಂಗಾಳದ ಸ್ಪೀಕರ್ ಆಕ್ಷೇಪದ ಹೊರತಾಗಿಯೂ ಈ ನಾಲ್ವರ ಬಂಧನವೂ ಆಗಿಹೋಗುತ್ತದೆ. ಕೋಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯ ಅಂದೇ ಈ ನಾಲ್ವರಿಗೆ ತಾತ್ಕಾಲಿಕ ಜಾಮೀನು ನೀಡುತ್ತದೆ. ಮತ್ತದೇ ಮಿಂಚಿನ ವೇಗದಲ್ಲಿ ಸಿಬಿಐ, ಹೈಕೋರ್ಟ್ ಮೆಟ್ಟಿಲೇರುತ್ತದೆ. ಕೋಲ್ಕತ್ತಾ ಹೈಕೋರ್ಟ್ ದ್ವಿ-ಸದಸ್ಯ ಪೀಠ ಆದೇಶ ನೀಡಿ ಗೃಹಬಂಧನದಲ್ಲಿ ಇಡುವಂತೆ ಸೂಚಿಸುತ್ತದೆ. ಈ ವಿದ್ಯಮಾನಗಳನ್ನು ಗಮನಿಸಿದ ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರಾದ ಅರಿಂಧಂ ಸಿನ್ಹಾ ಅವರು ಅಂದಿನ ಕೋಲ್ಕತ್ತಾ ಮುಖ್ಯ ನ್ಯಾಯಾಧೀಶರಿಗೆ (ನ್ಯಾ.ರಾಜೇಶ್ ಬಿಂಧಾಲ್) ಅವರಿಗೆ ಬಹಿರಂಗ ಪತ್ರ ಬರೆದು, ‘ನ್ಯಾಯಾಲಯಗಳು ನಗೆಪಾಟಲಿನ ಸಂಗತಿಯಾಗಿ ಬಿಟ್ಟಿವೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ನಾರದ ಸ್ಟಿಂಗ್ ಆಪರೇಷನ್ ನಡೆಸಿದ ಮಾಥ್ಯೂ ಸ್ಯಾಮ್ಯುಯೆಲ್, ‘ಸುವೆಂದು ಅಧಿಕಾರಿಯನ್ನು ಯಾಕೆ ಬಂಧಿಸಿಲ್ಲ?’ ಎಂದು ಸಿಬಿಐ ಬಳಿ ಪ್ರಶ್ನೆ ಮಾಡುತ್ತಿದ್ದಾರೆ, ಇಂದಿನವರೆಗೂ ಸಿಬಿಐ ಉತ್ತರವೇ ಕೊಟ್ಟಿಲ್ಲ! ಈ ನಡುವೆ ಆರೋಪಿತ ಸುವೆಂದು ಅಧಿಕಾರಿಯು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರ ಮನೆಗೆ ಭೇಟಿ ನೀಡಿರುತ್ತಾರೆ. ಇದು ಕಾನೂನುಬಾಹಿರವಾಗಿದ್ದರೂ ಬಿಜೆಪಿಯಿಂದ ಶುದ್ಧಿಯಾದ ಸುವೆಂದು ಅಧಿಕಾರಿಯನ್ನು ಯಾರೂ ಏನೂ ಮಾಡಲಾಗುವುದಿಲ್ಲ!

ಇದನ್ನೂ ಓದಿರಿ: ವಿಶೇಷ ಲೇಖನ | ದಲಿತರು ಹಿಂದೂ ದೇವಾಲಯಗಳನ್ನು ಬಹಿಷ್ಕರಿಸಬೇಕಿದೆ

2011-2012ರ ಅವಧಿಯ ಸಿಎಜಿ ವರದಿಯಲ್ಲಿ ಮಹಾರಾಷ್ಟ್ರದ ನೀರಾವರಿ ಇಲಾಖೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದನ್ನು ಉಲ್ಲೇಖಿಸಲಾಗಿತ್ತು. ನೀರಾವರಿ ಇಲಾಖೆಯು ದೂರದೃಷ್ಟಿಯ ಯೋಜನೆಗಳನ್ನು ಮಾಡುತ್ತಿಲ್ಲ, ಉದ್ದೇಶಪೂರ್ವಕವಾಗಿ ಯೋಜನೆಗಳು ವಿಳಂಬವಾಗುತ್ತಿವೆ, ಖರ್ಚುಗಳನ್ನು ಬೇಕೆಂದೇ ಹೆಚ್ಚಳ ಮಾಡಲಾಗುತ್ತಿರುವುದನ್ನು ಉಲ್ಲೇಖಿಸಲಾಗಿತ್ತು. ಈ ವರದಿಯ ಅಂದಾಜಿನ‌ ಪ್ರಕಾರ ಸುಮಾರು 70,000 ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಅವ್ಯವಹಾರ ನಡೆದಿದೆ. ಇದಕ್ಕೆ ಮುಖ್ಯ ಕಾರಣಕರ್ತ 2004ರಿಂದ 2010ರವರೆಗೆ ನೀರಾವರಿ ಇಲಾಖೆಯ ಮಂತ್ರಿಯಾಗಿದ್ದ ಅಜಿತ್ ಪವಾರ್ ಎಂದೂ ಆರೋಪಿಸಲಾಗಿತ್ತು. ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಆಗಿದ್ದ ವಿಜಯ್ ಪಂಧಾರೆಯವರೇ ಈ ವಿಚಾರವನ್ನು ಬಯಲಿಗೆ ತಂದು ನೀರಾವರಿ ಇಲಾಖೆಯ ಅಕ್ರಮಗಳ ಬಗ್ಗೆ ದೊಡ್ಡ ಧ್ವನಿ ಎತ್ತಿದ್ದರು. ಜೊತೆಗೆ ವಿರೋಧ ಪಕ್ಷವಾಗಿದ್ದ ಬಿಜೆಪಿಯು ಇನ್ನಿಲ್ಲದ ಅಬ್ಬರದೊಂದಿಗೆ ಅಜಿತ್ ಪವಾರ್ ರಾಜೀನಾಮೆಗೆ ಒತ್ತಾಯಿಸಿತ್ತು. ವಿಪರೀತ ಸಾರ್ವಜನಿಕ ಒತ್ತಡದ ಕಾರಣಕ್ಕಾಗಿ ಅಜಿತ್ ಪವಾರ್ ರಾಜೀನಾಮೆ ನೀಡಬೇಕಾಗಿ ಬಂತು. ಕೆಲವು ದಿನಗಳ ನಂತರ ನೀರಾವರಿ ಇಲಾಖೆಯ ತನಿಖೆ ನಡೆದು, ಅಜಿತ್ ಪವಾರ್ ಅವರಿಗೆ ಕ್ಲೀನ್ ಚಿಟ್ ನೀಡಿ, ಉಪಮುಖ್ಯಮಂತ್ರಿ ಪದವಿಯ ಬಡ್ತಿಯೊಂದಿಗೆ ಅವರು ಸಂಪುಟಕ್ಕೆ ಸೇರಿಕೊಂಡರು. ಅಜಿತ್ ಪವಾರ್ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದನ್ನೇ ಅಸ್ತ್ರ ಮಾಡಿಕೊಂಡಿದ್ದ ಬಿಜೆಪಿ, ಅಧಿಕಾರಕ್ಕೆ ಬಂದರೆ ಅಜಿತ್ ಪವಾರ್ ಅವರನ್ನು ಜೈಲಿಗೆ ಕಳುಹಿಸುವುದಾಗಿ ಘೋಷಿಸಿತ್ತು‌!

Ajith Pawar
ಅಜಿತ್ ಪವಾರ್

ಮಹಾರಾಷ್ಟ್ರದಲ್ಲಿ ಅಧಿಕಾರ ಸಿಕ್ಕಿದ ನಂತರ ಬಿಜೆಪಿ ನೀರಾವರಿ ಇಲಾಖೆಯ ಅಕ್ರಮದಲ್ಲಿ ಅಜಿತ್ ಪಾತ್ರದ ಬಗ್ಗೆ ತನಿಖೆ ಆರಂಭಿಸಿತ್ತು. ಶಿವಸೇನೆ ಜೊತೆಗೆ ಬಿಕ್ಕಟ್ಟು ಸೃಷ್ಟಿಯಾದ ನಂತರ ಈ ತನಿಖೆ ಆಮೆಗತಿಯಲ್ಲಿ ಸಾಗಿತ್ತು ಮಾತ್ರವಲ್ಲ, ಈ ತನಿಖೆಯ ಕುರಿತಾಗಿ ಹಾಕಲಾದ ಪಿಐಎಲ್‌ಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಲಾಗುತ್ತಿತ್ತು. ಕಡೆಗೂ 2019ರ ನವೆಂಬರ್ 28ರಂದು ಈ ಹಗರಣದಲ್ಲಿ ಅಜಿತ್ ಪವಾರ್ ಹೆಸರು ಕೈ ಬಿಡಲಾಗುತ್ತದೆ. ನವೆಂಬರ್ 26, 2019ಕ್ಕೆ ಅಜಿತ್ ಪವಾರ್ ತಮ್ಮ ಶಾಸಕರೊಂದಿಗೆ ಬಿಜೆಪಿ ಜೊತೆಗೆ ಕೈ ಜೋಡಿಸಿರುತ್ತಾರೆ! ವಿಪರ್ಯಾಸವೆಂದರೆ ಹತ್ತು ದಿನಗಳ ಹಿಂದೆಯಷ್ಟೇ ಸ್ವತಃ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಜಿತ್ ಪವಾರ್ ಅವರನ್ನು ಜೈಲಿಗೆ ಕಳುಹಿಸುವುದಾಗಿ ಘೋಷಿಸಿದ್ದರು! ಈಗ ಅಜಿತ್ ಪವಾರ್ ಬಿಜೆಪಿ ಸಖ್ಯದಿಂದಾಗಿ ಸಂಪೂರ್ಣವಾಗಿ ದೋಷಮುಕ್ತ!

2014ರಿಂದ ಈಚೆಗೆ ಸುಮಾರು 121 ಪ್ರಮುಖ ರಾಜಕಾರಣಿಗಳನ್ನು ಇ.ಡಿ. ವಿಚಾರಣೆಗೆ ಒಳಪಡಿಸಿದೆ. ಈ 121 ರಾಜಕಾರಣಿಗಳಲ್ಲಿ 115 ರಾಜಕಾರಣಿಗಳು ಬಿಜೆಪಿಯ ವಿರೋಧ ಪಕ್ಷದವರು! ಬಿಜೆಪಿಯ ವಿರೋಧಿಗಳೆಲ್ಲ ಭ್ರಷ್ಟರೇ ಎಂದುಕೊಂಡರೂ, ಅವರು ಬಿಜೆಪಿ ಸೇರುತ್ತಿದ್ದಂತೆಯೇ ಶುದ್ಧವಾಗಿ ಸಕಲ ಸದ್ಗುಣ ಸಂಪನ್ನರಾಗಿ ದೇಶಭಕ್ತ ರಾಜಕಾರಣಿಯಾಗುವುದು ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ. ಉದಾಹರಣೆಗೆ ಗಂಭೀರ ಆರೋಪ ಎದುರಿಸುತ್ತಿದ್ದ, ಇ.ಡಿ. ಅಥವಾ ಸಿಬಿಐ ವಿಚಾರಣೆ ಎದುರಿಸಿದ ಈಗ ಬಿಜೆಪಿ ಸಖ್ಯ ಬೆಳೆಸಿ ತಮ್ಮ ಕೊಳೆ ತೊಳೆದುಕೊಂಡಿರುವ ಈ ರಾಜಕಾರಣಿಗಳ ಪಟ್ಟಿಯನ್ನೇ ನೋಡಿ:

ಅಜಿತ್ ಪವಾರ್: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (NCP) ನಾಯಕ, ನೀರಾವರಿ ಹಗರಣ, ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ಗಳ ಮನಿ ಲಾಂಡರಿಂಗ್ ಹಗರಣ.

ಪ್ರಫುಲ್ ಪಟೇಲ್: ಮಾಜಿ ಕೇಂದ್ರ ಸಚಿವ ಮತ್ತು ಎನ್‌ಸಿಪಿ ನಾಯಕ. ಏರ್ ಇಂಡಿಯಾ ವಿಮಾನ ಲೀಸ್ ಕುರಿತಾದ ಅಕ್ರಮ ಪ್ರಕರಣಗಳ ಆರೋಪಿ.

ಹಿಮಂತ ಬಿಸ್ವ ಶರ್ಮಾ: ಅಸ್ಸಾಂ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ನಾಯಕ, ಶಾರದಾ ಚಿಟ್ ಫಂಡ್ ಹಗರಣದ ಆರೋಪಿ.

ಸುವೇಂದು ಅಧಿಕಾರಿ: ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ.

ಅಶೋಕ್ ಚವ್ಹಾಣ್: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ, ಆದರ್ಶ ಹೌಸಿಂಗ್ ಸೊಸೈಟಿ ಹಗರಣದ ಆರೋಪಿ.

ಚಗನ್ ಭುಜಬಲ್: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ.

ಯಶವಂತ್ ಜಾಧವ್: ಶಿವಸೇನೆ ಪಕ್ಷದ ಮಾಜಿ ನಾಯಕ , ಅಕ್ರಮ ಆಸ್ತಿ ಹೊಂದಿರುವ ಆರೋಪ.

ಯಾಮಿನಿ ಜಾಧವ್: ಶಿವಸೇನೆ ಪಕ್ಷದ ಮಾಜಿ ನಾಯಕಿ, ಅಕ್ರಮ ಆಸ್ತಿ ಹೊಂದಿರುವ ಆರೋಪ.

ಪ್ರತಾಪ್ ಸರ್ ನಾಯಕ್: ಶಿವಸೇನೆ ಪಕ್ಷದ ಮಾಜಿ ನಾಯಕ. NSEAL ಹಗರಣದ ಆರೋಪಿ.

ಸೋವನ್ ಚಟರ್ಜಿ: ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ.

ಸಿಎಂ ರಮೇಶ್: ತೆಲುಗು ದೇಶಂ ಪಕ್ಷದ (TDP) ಮಾಜಿ ನಾಯಕ, ಮನಿ ಲಾಂಡರಿಂಗ್ ಆರೋಪ.

ಕೆ.ಗೀತಾ: ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (YSRCP) ಮಾಜಿ ನಾಯಕಿ, ಪಿ.ಎನ್.ಬಿ ಬ್ಯಾಂಕ್ ಸಾಲ ಪ್ರಕರಣದ ಆರೋಪಿ.

ಭಾವನಾ ಗಾವ್ಲಿ: ಶಿವಸೇನೆ ಪಕ್ಷದ ಮಾಜಿ ನಾಯಕಿ, ಟ್ರಸ್ಟ್ ಹಣ ದುರ್ಬಳಕೆ ಆರೋಪ.

ತಪಸ್ ರಾಯ್: ಬಂಗಾಳದ ಸಚಿವ, ಸರ್ಕಾರಿ ನೌಕರಿ ಅಕ್ರಮ ನೇಮಕಾತಿ ಹಗರಣ.

ನವೀನ ಜಿಂದಾಲ್: ಕಲ್ಲಿದ್ದಲು ಹಗರಣದ ಆರೋಪಿ.

ಮಧು ಖೋಡ: ಝಾರ್ಖಂಡ್ ಮಾಜಿ ಮುಖ್ಯಮಂತ್ರಿ, ಅಕ್ರಮ ಆಸ್ತಿ ಗಳಿಕೆ ಆರೋಪ.

ಜನಾರ್ದನ ರೆಡ್ಡಿ: ಗಣಿ ಹಗರಣದ ಆರೋಪಿ.

ನಾರಾಯಣ ರಾಣೆ: ಮಾಜಿ ಮುಖ್ಯಮಂತ್ರಿ , ಅಕ್ರಮ ಆಸ್ತಿ ಗಳಿಕೆ, ಆದರ್ಶ ಹೌಸಿಂಗ್ ಸೊಸೈಟಿ ಹಗರಣ.

ರಣೀಂದರ್ ಸಿಂಗ್: ಮಾಜಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪುತ್ರ, ಮನಿ ಲಾಂಡರಿಂಗ್ ಆರೋಪ.

ಇವರೆಲ್ಲ ಬಿಜೆಪಿ ಸೇರಿದ ನಂತರ ತಮ್ಮ ಕೇಸುಗಳಿಂದ ಮುಕ್ತಿ ಪಡೆದಿದ್ದಾರೆ.

ಇಷ್ಟೆಲ್ಲ ನಾಯಕರನ್ನು ಬಿಜೆಪಿ ಸೆಳೆಯುತ್ತಿರುವುದಾದರೂ ಹೇಗೆ? ಇಷ್ಟು ವ್ಯಾಪಕ ಪ್ರಮಾಣದಲ್ಲಿ ಪಕ್ಷಾಂತರ ಆಗುತ್ತಿರುವುದಾದರೂ ಹೇಗೆ?

ಉತ್ತರ: ಇಡಿ ಮತ್ತು ಸಿಬಿಐ!

ಒಂದು ವೇಳೆ ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡ ಸ್ಪರ್ಧೆ ನಡೆದರೆ, ಮೋದಿ ಸರ್ಕಾರಕ್ಕೆ ಗಿನ್ನಿಸ್ ದಾಖಲೆಯ ಜೊತೆಗೆ ಚಿನ್ನದ ಪದಕ ನೀಡಬಹುದು!

ಇದನ್ನೂ ಓದಿರಿ: ಸಂವಿಧಾನ ಸುಡುವ ಚಳವಳಿಯನ್ನು ಪೆರಿಯಾರ್ ನಡೆಸಿದ್ದೇಕೆ?

ಸಿಬಿಐ ಎಂಬ ಪಂಜರದ ಗಿಳಿ!

2022ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್.ವಿ.ರಮಣರವರು ಸಿಬಿಐ ಮತ್ತು ಇ.ಡಿ.ಯ ಸ್ವಾಯತ್ತತೆ ಕೇವಲ ಕಾಗದದಲ್ಲಿ ಉಳಿದಿದೆ, ಈ ಸಂಸ್ಥೆಗಳು ಈಗ ಅಡಳಿತರೂಢ ಪಕ್ಷದ ರಾಜಕೀಯ ಅಸ್ತ್ರಗಳ ಭಾಗವಾಗಿವೆ ಎಂದು ಹತಾಶೆ ವ್ಯಕ್ತಪಡಿಸಿದ್ದರು.

ಹಲವಾರು ಸರಣಿ ಪ್ರತಿಭಟನೆಗಳ ನಂತರ 2013ರಲ್ಲಿ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಈ ಕಾಯ್ದೆಯ ಪ್ರಕಾರ ಸಿಬಿಐ ಮುಖ್ಯಸ್ಥರ ನೇಮಕವನ್ನು ವಿರೋಧಪಕ್ಷದ ನಾಯಕರು, ಪ್ರಧಾನ ಮಂತ್ರಿಗಳು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸೇರಿ ಆಯ್ಕೆ ಮಾಡಬೇಕು. ಆದರೆ ಆಯ್ಕೆ ಮಾಡಬೇಕಾದ ಅಭ್ಯರ್ಥಿಗಳ ಪಟ್ಟಿಯನ್ನು ಗೃಹ ಸಚಿವಾಲಯ ನೀಡುತ್ತದೆ! ಅಂದರೆ ಯಾರನ್ನು ಆಯ್ಕೆ ಮಾಡಬೇಕು ಎಂದು ಸರ್ಕಾರ ಮೊದಲೇ ನಿರ್ಧರಿಸಿ, ಅಭ್ಯರ್ಥಿಗಳ ಪಟ್ಟಿಯನ್ನು ಕೊಡುತ್ತದೆ! ಮಾತ್ರವಲ್ಲ ತನಗಿಷ್ಟವಿಲ್ಲದ ಅಭ್ಯರ್ಥಿ ಆಯ್ಕೆಯಾಗದೇ ಹೋದಲ್ಲಿ, ಆತನಿಗೆ ಕೆಲಸ ಮಾಡಲು ಬಿಡುವುದೇ ಇಲ್ಲ. ಇದಕ್ಕೆ ಕ್ಲಾಸಿಕ್ ಉದಾಹರಣೆ ಎಂದರೆ 2017- 2019ರ ಅವಧಿಯಲ್ಲಿ ಸಿಬಿಐ ಮುಖ್ಯಸ್ಥರಾಗಿದ್ದ ಆಲೋಕ್ ವರ್ಮಾ.

Alok Varma
ಸಿಬಿಐ ಮುಖ್ಯಸ್ಥರಾಗಿದ್ದ ಆಲೋಕ್ ವರ್ಮಾ

ಆಲೋಕ್ ವರ್ಮಾ ಸರ್ಕಾರದ ತಾಳಕ್ಕೆ ತಕ್ಕನಾಗಿ ಕುಣಿಯುತ್ತಿಲ್ಲ, ರಫೆಲ್ ವಿಮಾನ ಖರೀದಿ ಹಗರಣದ ಪ್ರಾಮಾಣಿಕ ತನಿಖೆ ನಡೆಯುತ್ತಿದೆ ಎಂದು ತಿಳಿದ ಸರ್ಕಾರ ಅತ್ಯಂತ ಕೆಟ್ಟ ರೀತಿಯಲ್ಲಿ, ಭ್ರಷ್ಟಾಚಾರದ ಆರೋಪದ ಮೇಲೆ ಆಲೋಕ್ ವರ್ಮಾ ಅವರನ್ನು ಪದಚ್ಯುತಿಗೊಳಿಸುತ್ತದೆ. ಆದರೆ ವ್ಯಾಪಕ ಪ್ರತಿರೋಧದ ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಅಂದಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸಿಕ್ರಿ ಮತ್ತು ಪ್ರಧಾನಿ ಮೋದಿ ಇರುವ ಸಮಿತಿಯ ಅನುಮತಿ ಪಡೆಯದೆ ಸಿಬಿಐ ಮುಖ್ಯಸ್ಥರನ್ನು ಪದಚ್ಯುತಿಗೊಳಿಸುವಂತಿಲ್ಲ ಎಂದು ಘೋಷಿಸಿ, ಸಿಬಿಐ ಮುಖ್ಯಸ್ಥರ ಪದಚ್ಯುತಿ ರದ್ದುಗೊಳಿಸಿ, ಸಮಿತಿಯ ಅನುಮೋದನೆಗೆ ಕಳುಹಿಸುತ್ತದೆ. ಸಮಿತಿಯಲ್ಲಿ 2-1 ಮತಗಳ ಆಧಾರದಲ್ಲಿ ಆಲೋಕ್ ವರ್ಮಾ ಪುನರಾಯ್ಕೆ ಆಗುತ್ತಾರೆ; ಕೇವಲ ಎರಡೇ ದಿನಗಳ ನಂತರ ನಿವೃತ್ತರಾಗುತ್ತಾರೆ.

ಮುಂದೆ ಆಲೋಕ್ ವರ್ಮಾ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದ ರಾಕೇಶ್ ಅಸ್ತಾನ ಅವರನ್ನು ಸಿಬಿಐ ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತದೆ! ಸಿಬಿಐ ಮುಖ್ಯಸ್ಥರ ಹುದ್ದೆಯನ್ನೂ ಸರ್ಕಾರ ನಿರ್ಧಾರ ಮಾಡುವುದಾದರೆ ಸಿಬಿಐ ಹೇಗೆ ತಾನೇ ಸ್ವತಂತ್ರವಾಗಿ ಕಾರ್ಯನಿರ್ವಹಿಸೀತು?

ED ಎಂಬ ಬಿಜೆಪಿಯ ಪಾಲಿನ ಬ್ರಹ್ಮಾಸ್ತ್ರ

ಇದೇ ರೀತಿಯ ಪಾಡು ಜಾರಿ ನಿರ್ದೇಶನಾಲಯದ್ದೂ (ED) ಕೂಡಾ. ಇ.ಡಿ. ಮುಖ್ಯಸ್ಥರನ್ನು ಸಿವಿಸಿ (ಕೇಂದ್ರ ಜಾಗೃತ ಆಯೋಗ) ಮುಖ್ಯಸ್ಥರು, ಹಣಕಾಸು, ಗೃಹ ಇಲಾಖೆಯ ಕಾರ್ಯದರ್ಶಿಗಳು ಸೇರಿ ಆಯ್ಕೆ ಮಾಡುತ್ತಾರೆ.‌ ವಿಪರ್ಯಾಸವೆಂದರೆ ಈ ಕಾರ್ಯದರ್ಶಿಗಳು ತಮ್ಮ ಇಲಾಖೆಯ ಮಂತ್ರಿಗಳ ಅಧೀನದಲ್ಲಿಯೇ ಇರುತ್ತಾರೆ! ಮಂತ್ರಿಗಳ ಅಂದರೆ ಸರ್ಕಾರದ ಅಪೇಕ್ಷೆಯನ್ನು ಮೀರಿ, ಕಾರ್ಯದರ್ಶಿಗಳು ಕಾರ್ಯನಿರ್ವಹಿಸಲು ಸಾಧ್ಯವೇ? ಇದಲ್ಲದೇ ಇ.ಡಿ.ಯಲ್ಲಿ, ತನ್ನದೇ ಆದ ವಿಚಿತ್ರ ನಿಯಮಗಳೂ ಇವೆ. ಇ.ಡಿ.ಯು ಆರೋಪಿತರ ಹೇಳಿಕೆಗಳನ್ನು ಪಡೆಯಬಹುದು, ಬಂಧಿಸಬಹುದು, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು‌‌, ಆದರೆ ಇ.ಡಿ.ಯು ಆರ್ಥಿಕ ಅಪರಾಧಗಳನ್ನು ಹಿಮ್ಮೆಟ್ಟಿಸುವ ಸಂಸ್ಥೆಯಾದ್ದರಿಂದ ಸಿಬಿಐ ಅಥವಾ ಪೊಲೀಸ್ ಇಲಾಖೆ ರೀತಿಯಲ್ಲಿ ಕ್ರಿಮಿನಲ್ ದಂಡ ಪ್ರಕ್ರಿಯೆ ಸಂಹಿತೆ (CRPC) ಪಾಲಿಸುವ ಪ್ರಮೇಯವೇ ಇರುವುದಿಲ್ಲ! ಇದು EDಯ ವ್ಯಾಪಕ ದುರುಪಯೋಗಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಆಪಾದಿತರು ಆರೋಪ ಸಾಬೀತು ಆಗುವ ತನಕ ನಿರಪರಾಧಿಯಾಗಿರುತ್ತಾರೆ. ಆದರೆ PMLA ಪ್ರಕಾರ ಆಪಾದಿತರು ನಿರಪರಾಧಿ ಎಂದು ಸಾಬೀತು ಆಗುವ ತನಕ ಅಪರಾಧಿಯಾಗಿರುತ್ತಾರೆ. PMLA ಅಡಿಯಲ್ಲಿ ಕೋರ್ಟ್ ಅನುಮತಿ ಇಲ್ಲದೆ ಯಾರನ್ನಾದರೂ ಬಂಧಿಸಬಹುದು, ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಬಹುದು ಮತ್ತು PMLA ಅಡಿಯಲ್ಲಿ ಜಾಮೀನು ಸಿಗುವ ಸಾಧ್ಯತೆಗಳು ಖಡಾಖಂಡಿತವಾಗಿ ಸಾಧ್ಯವೇ ಇಲ್ಲ ಎನ್ನುವಷ್ಟು ಕಡಿಮೆ! ಇದನ್ನೇ ಬಳಸಿಕೊಂಡು, ಇ.ಡಿ. ಗುಮ್ಮವನ್ನು ಬಿಟ್ಟು ಬಿಜೆಪಿಯು ವಿರೋಧ ಪಕ್ಷಗಳ ನಾಯಕರನ್ನೂ, ತನ್ನದೇ ಪಕ್ಷದ ಮೋದಿ-ಶಾ ವಿರೋಧಿಗಳನ್ನು ಹಣಿಯುತ್ತಿದೆ. ಉದಾಹರಣೆಗೆ ಒಂದೇ ಒಂದು ಪೈಸೆಯಷ್ಟು ಹಣ, ಹಣದ ಜಾಡು (money trail) ದೊರಕದಿದ್ದರೂ, ಯಾವುದೇ ಆರೋಪ ಸಾಬೀತಾಗದಿದ್ದರೂ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸಂಜಯ್ ಸಿಂಗ್ ತಿಂಗಳುಗಳಗಟ್ಟಲೆ, ವರ್ಷಗಟ್ಟಲೆ ಜೈಲಿನಲ್ಲಿ ಕಳೆದಿದ್ದರು‌. ಈ PMLA ಸಂವಿಧಾನಬಾಹಿರವಾದದ್ದು ಎಂದು 2017ರಲ್ಲಿಯೇ ಸುಪ್ರೀಂ ಕೋರ್ಟ್ ಹೇಳಿತ್ತು. PMLA ಕಾಯ್ದೆಯು ಭಾರತದ ನ್ಯಾಯದಾನ ಪ್ರಕ್ರಿಯೆಯನ್ನು ಅಣಕಿಸುತ್ತದೆ ಎಂದೂ ಕಟುವಾಗಿ ಟೀಕಿಸಿತ್ತು. ದುರದೃಷ್ಟಕರ ವಿಷಯವೆಂದರೆ ಈ ಕಾನೂನು ಬದಲಿಸುವುದಾಗಿ ಕೇಂದ್ರ ಸರ್ಕಾರ ಹೇಳಿತು, ಅದರಂತೆಯೇ 2018ರಲ್ಲಿ ಕೆಲವು ಮಾರ್ಪಾಡುಗಳೊಂದಿಗೆ, ಯಾವುದೇ ಗುರುತರ ಬದಲಾವಣೆ ಇಲ್ಲದೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿತು. ಈ ಪರಿಷ್ಕೃತ ಕಾನೂನನ್ನು ಸುಪ್ರೀಂಕೋರ್ಟ್ ಏಕಸದಸ್ಯ ಪೀಠ ಒಪ್ಪಿಕೊಂಡಿಯೇ ಬಿಟ್ಟಿತು. ಈ ವಿವಾದಿತ ಕಾನೂನಿಗೆ ಅನುಮೋದನೆ ಕೊಟ್ಟ ಸುಪ್ರೀಂಕೋರ್ಟ್ ಏಕಸದಸ್ಯ ಪೀಠದ ನ್ಯಾಯಾಧೀಶರಾಗಿದ್ದ ಅಜಯ್ ಮಾಣಿಕ್‌ರಾವ್ ಕಾನ್ವಿಲ್ಕರ್ ನಿವೃತ್ತಿಯ ನಂತರ ಭಾರತದ ಮೂರನೇ ಲೋಕಪಾಲರಾಗಿ ನೇಮಕಗೊಂಡರು!

ಹೀಗೆ ನಿವೃತ್ತಿಯ ನಂತರವೂ ಅಧಿಕಾರದ ಐಭೋಗ, ಸವಿಯುಂಡವರಲ್ಲಿ ಅಜಯ್ ಕಾನ್ವಿಲ್ಕರ್ ಮೊದಲನೆಯವರೂ ಅಲ್ಲ, ಕೊನೆಯವರೂ ಅಲ್ಲ! ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದು ಪತ್ರಿಕಾಗೋಷ್ಠಿ ನಡೆಸಿ, ನ್ಯಾಯಾಂಗದಲ್ಲಿ ಸರ್ಕಾರದ ಹಸ್ತಕ್ಷೇಪದ ವಿರುದ್ಧ ತೊಡೆತಟ್ಟಿದ್ದ ನ್ಯಾಯಮೂರ್ತಿ ರಂಜನ್ ಗೊಗೊಯಿ ಕಡೆಗೆ ಅದೇ ಬಿಜೆಪಿಯ ಕೃಪಾಶೀರ್ವಾದದಿಂದ ರಾಜ್ಯಸಭೆಗೆ ನೇಮಕವಾದರು! ಹೀಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರರಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಬಿಜೆಪಿಯು ನಾಲ್ಕನೇ ಅಂಗವಾದ ಮಾಧ್ಯಮವನ್ನೂ ಎಂದೋ ತನ್ನ ಆಮಿಷಗಳ ಜಾಲದಲ್ಲಿ ಸಿಲುಕಿಸಿಕೊಂಡಿದೆ.

ಅಗಾಧವಾದ ಹಣ ಬಲ, ತೋಳ್ಬಲ , ಅಧಿಕಾರ, ಸಂವಿಧಾನದಲ್ಲಿ ಉಲ್ಲೇಖಿತವಾದ ಎಲ್ಲ ಅಂಗಗಳ ಮೇಲೆ ಅಪ್ರತಿಮ ಹಿಡಿತ ಹೊಂದಿರುವ ಬಿಜೆಪಿ, ಇಂದು ಯಾರನ್ನಾದರೂ ಏನನ್ನಾದರೂ ಮಾಡುವ ಸಾಮರ್ಥ್ಯ ಹೊಂದಿದೆ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ absolute power ಎಂದೆಂದಿಗೂ ಅಪಾಯಕಾರಿ. ಕಳೆದ ಹತ್ತು ವರ್ಷಗಳಿಂದ ಅಲ್ಪಸಂಖ್ಯಾತ ಜೈನ ಸಮುದಾಯ, ಮುಸ್ಲಿಂ ಸಮುದಾಯ, ಫಾರ್ಸಿ ಸಮುದಾಯವನ್ನು ಪ್ರತಿನಿಧಿಸುವ ಸಚಿವರೇ ಇಲ್ಲ. ಬಹುಸಂಸ್ಕೃತಿಯ ಭಾರತ ದೇಶದಲ್ಲಿ ಇದು ಬಹಳ ಅಪಾಯಕಾರಿ ನಡೆ. ಭಾರತದ ವೈವಿಧ್ಯತೆಗೆ, ಬಹುಸಂಸ್ಕೃತಿಗೆ ಎಂದೂ ಗೌರವ ಕೊಡದ ಬಿಜೆಪಿ ಎಲ್ಲೆಡೆಯೂ ವಿಕೃತ ಏಕರೂಪತೆ ತರಲು ಹೊರಟಿದೆ. ಒಂದು ದೇಶ, ಒಂದೇ ಭಾಷೆ, ಒಂದೇ ಧರ್ಮ, ಒಂದೇ ಚುನಾವಣೆ, ಒಂದೇ ಪಕ್ಷ, ಒಬ್ಬನೇ ಉದ್ಯಮಿ ಹೀಗೆ… ಇಂತಹ ವಿಷಕಾರಿ ಸಂಸ್ಕೃತಿಯನ್ನು ಜನರ ಹೋರಾಟಗಳಿಂದಲೇ ಹಿಮ್ಮೆಟ್ಟಿಸಬೇಕಷ್ಟೇ.

Darshan Jain
ದರ್ಶನ್ ಜೈನ್
+ posts

ಆಮ್ ಆದ್ಮಿ ಪಕ್ಷದ ಮುಖಂಡರಾದ ದರ್ಶನ್ ಜೈನ್ ಅವರು, ಸಮಕಾಲೀನ ರಾಜಕೀಯ ವಿಚಾರಗಳ ಸಮರ್ಥ ವಿಶ್ಲೇಷಕರೂ ಹೌದು

ಪೋಸ್ಟ್ ಹಂಚಿಕೊಳ್ಳಿ:

ದರ್ಶನ್ ಜೈನ್
ದರ್ಶನ್ ಜೈನ್
ಆಮ್ ಆದ್ಮಿ ಪಕ್ಷದ ಮುಖಂಡರಾದ ದರ್ಶನ್ ಜೈನ್ ಅವರು, ಸಮಕಾಲೀನ ರಾಜಕೀಯ ವಿಚಾರಗಳ ಸಮರ್ಥ ವಿಶ್ಲೇಷಕರೂ ಹೌದು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...