ಕಪ್ಪು ಬಣ್ಣದ ಶರ್ಟ್ ಮೇಲೆ ಮೂರು ಕುದುರೆಗಳ ಚಿತ್ರ ಮತ್ತು ಅಶ್ವವನ್ನೇರಿದವರ ಕೈಯಲ್ಲಿ ಬಿಲ್ಲುಬಾಣ, ಕತ್ತಿ- ಈ ರೀತಿಯ ಗುರುತು ಹೊತ್ತ ಸಮವಸ್ತ್ರದಲ್ಲಿ ಮಣಿಪುರದ ಇಂಫಾಲ ಕಣಿವೆ ಭಾಗದಲ್ಲಿ ತಿರುಗುವ ಯಾವುದೇ ಹುಡುಗರನ್ನು ನೋಡಿದರೂ ಇವರು ‘ಆರಂಬೈ ತೆಂಗೋಲ್’ ಸಂಘಟನೆಯವರೆಂದು ಸುಲಭವಾಗಿ ಹೇಳಿಬಿಡಬಹುದು. ಇವರನ್ನು ‘ಕಪ್ಪು ಶರ್ಟ್ ತೊಟ್ಟ ಹುಡುಗರು’ ಎಂದೂ ಕರೆಯಲಾಗುತ್ತದೆ. ಮಣಿಪುರ ಹಿಂಸಾಚಾರದಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಈ ಗುಂಪು ಮತ್ತೆ ಸುದ್ದಿಯಲ್ಲಿದೆ. ತಮ್ಮ ನಾಯಕನನ್ನು ಬಂಧಿಸಿದ ಕೂಡಲೇ ಬೀದಿಗಿಳಿದು, ಆಕ್ರೋಶವನ್ನೂ ಹೊರಹಾಕಿದೆ.
ಆರಂಬೈ ತೆಂಗೋಲ್ ಸಂಘಟನೆಯ ಕುರಿತು ಗಂಭೀರವಾಗಿ ಯೋಚಿಸಬೇಕು. ಮಣಿಪುರ ನೆಲದಲ್ಲಿ ಬೆಳೆದ ಬುಡಕಟ್ಟು ಜನರ ಸನಾಮಹಿ ಧರ್ಮವು ಪ್ರಕೃತಿ ಆರಾಧನೆಯನ್ನೇ ತನ್ನ ತತ್ವವಾಗಿಸಿಕೊಂಡಿತ್ತು. ಆದರೆ ಇದನ್ನು ಹಿಂದೂವೀಕರಣಗೊಳಿಸಿ ರಾಜಕಾರಣದ ಅಸ್ತ್ರವಾಗಿಸಿಕೊಳ್ಳುವ ಪ್ರಯೋಗಗಳನ್ನು ಸಂಘಪರಿವಾರ ನಿರಂತರವಾಗಿ ಮಾಡುತ್ತಾ ಬಂದಿತು. ಅದರ ಭಾಗವಾಗಿ ಹುಟ್ಟಿದ್ದೇ ಆರಂಬೈ ತೆಂಗೋಲ್ (ಈ ಹೆಸರಿನ ಅರ್ಥ- ಭರ್ಜಿ ಚಲಾಯಿಸುವ ಅಶ್ವಸೇನೆ). ಮೈತೇಯಿಗಳ ಪ್ರಾಚೀನ ಯುದ್ಧ ತಂತ್ರವನ್ನು ನಾವು ಪ್ರತಿನಿಧಿಸುತ್ತೇವೆ ಎನ್ನುತ್ತಾರೆ ಆರಂಬೈಗಳು.
ರಾಜ್ಯಸಭಾ ಬಿಜೆಪಿ ಸದಸ್ಯ ಹಾಗೂ ಮಣಿಪುರದಲ್ಲಿ ರಾಜನೆಂದೇ ಗುರುತಿಸಲ್ಪಟ್ಟಿರುವ ಲೀಶೆಂಬಾ ಸನಾಜೋಬಾ ಅವರು ಈ ‘ಆರಂಬೈ ತೆಂಗೋಲ್’ನ ಸ್ಥಾಪಕ ಮತ್ತು ಅಧ್ಯಕ್ಷ. ಸನಾಮಹಿಯ ಹಿಂದಿನ ವೈಭವವನ್ನು ಪ್ರೋತ್ಸಾಹಿಸಿ, ಪುನರುತ್ಥಾನ ಮಾಡುವ ಗುರಿಯೊಂದಿಗೆ ಚಾಲ್ತಿಗೆ ಬಂದ ಆರಂಬೈ ತೆಂಗೋಲ್‌ನಲ್ಲಿ ಇರುವ ಹೆಚ್ಚಿನವರು ಹದಿನಾರರಿಂದ ಇಪ್ಪತ್ತೈದು ವರ್ಷದ ಮೈತೇಯಿ ಯುವಕರು. ಈ ಸಂಘಟನೆಯ ಕಾರ್ಯಕರ್ತರು ಇಂಫಾಲ ಕಣಿವೆ ಮತ್ತು ಗಡಿ ಭಾಗದ ಹಳ್ಳಿಗಳಲ್ಲಿ ಕುಕಿಗಳ ಮೇಲೆ ಭೀಕರವಾಗಿ ಹಿಂಸಾಚಾರ ನಡೆಸಿದ ಕುಖ್ಯಾತಿ ಹೊಂದಿದ್ದಾರೆ.

‘ಆರಂಬೈ ತೆಂಗೋಲ್’ ಮತ್ತು ಅದರ ಕಾರ್ಯಚಟುವಟಿಕೆಗಳ ಬಗೆಗಿನ ಮತ್ತಷ್ಟು ಸಂಗತಿಗಳು ಸಾಂಸ್ಕೃತಿಕ ರಾಜಕಾರಣದೊಂದಿಗೆ ಬೆರೆತುಕೊಂಡಿರುವುದನ್ನು ಕಾಣಬಹುದು. 2020ರಲ್ಲಿ ಸ್ಥಾಪನೆಯಾದ ಈ ಪಡೆ, 2023ರ ಹಿಂಸಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ನೆರೆಯ ಬರ್ಮಾದಿಂದ ನುಸುಳುಕೋರರು ನುಗ್ಗುತ್ತಿದ್ದಾರೆ ಎಂದು ಬಲವಾಗಿ ಪ್ರತಿಪಾದಿಸುವ ‘ಆರಂಬೈ ತೆಂಗೋಲ್’ಗೆ ಆ ಹೆಸರು ಇಟ್ಟಿದ್ದೂ ಸಾಂಸ್ಕೃತಿಕ ರಾಜಕೀಯ ಕಾರಣಗಳಿಂದ ಎನ್ನುತ್ತವೆ ವರದಿಗಳು. ಸನಾಜೋಬಾ ಅವರ ಪೂರ್ವಿಕರು ಮಣಿಪುರ ರಾಜ್ಯವನ್ನು ಆಳಿದವರು. ರಾಜರ ಕಾಲದಲ್ಲಿ ಮಣಿಪುರಿ ಸೈನ್ಯವು ತಮ್ಮ ಪೂರ್ವ ಗಡಿಯಿಂದ ಆಕ್ರಮಣ ಮಾಡುವ ಬರ್ಮೀಯರನ್ನು ಹಿಮ್ಮೆಟ್ಟಿಸಲು ಬಳಸುತ್ತಿದ್ದ ವಿಷಪೂರಿತ ಬಾಣದ ಸಂಕೇತವಾಗಿ ‘ಆರಂಬೈ ತೆಂಗೋಲ್’ ಎಂಬ ಹೆಸರು ಇಡಲಾಗಿದೆ. ಮಣಿಪುರಿ ರಾಜರ ಅಶ್ವಸೈನ್ಯ (ತೆಂಗೋಲರು) ಆಕ್ರಮಣಕಾರಿ ಬರ್ಮೀಸ್ ಸೈನ್ಯವನ್ನು ಹಿಮ್ಮೆಟ್ಟಿಸಲು ಬಾಣಾಕಾರದ (ಡಾರ್ಟ್) ಆಯುಧ ಬಳಸುತ್ತಿದ್ದರು. ಅದರಿಂದ ‘ಆರಂಬೈ’ ಎಂಬ ಪದವನ್ನು ಎತ್ತಿಕೊಳ್ಳಲಾಗಿದೆ. ಆ ಬಾಣಗಳ ಮಾರಕ ಸ್ವರೂಪಕ್ಕೆ ಬರ್ಮೀಯರು ಭಯಪಡುತ್ತಿದ್ದರು. 19ನೇ ಶತಮಾನದ ಆರಂಭದಲ್ಲಿ ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ಈಶಾನ್ಯದ ಉತ್ತಮ ಭಾಗವನ್ನು ಬರ್ಮೀಯರು ಆಳುತ್ತಿದ್ದರು ಎಂಬುದು ಈಶಾನ್ಯ ಭಾರತದಾಚೆಯ ಭಾರತೀಯರಿಗೆ ತಿಳಿದಿಲ್ಲ ಎನ್ನುತ್ತಾರೆ ಮೈತೇಯಿಗಳು. 19ನೇ ಶತಮಾನದ ಆರಂಭದಲ್ಲಿ ಬ್ರಿಟಿಷರು ಬಂಗಾಳದಿಂದ ಈಶಾನ್ಯಕ್ಕೆ ಮೊದಲು ಪ್ರವೇಶಿಸಿದ್ದು ಬರ್ಮೀಯರನ್ನು ಓಡಿಸಲು. ಬ್ರಿಟಿಷರು ನಿರ್ಣಾಯಕವಾಗಿ ನಿಯಂತ್ರಣವನ್ನು ತೆಗೆದುಕೊಳ್ಳುವವರೆಗೂ ಆಗಾಗ್ಗೆ ನಡೆಯುತ್ತಿದ್ದ ಬರ್ಮೀಸ್ ಆಕ್ರಮಣಗಳಲ್ಲಿ ‘ಆರಂಬೈ ತೆಂಗೋಲ್’ ಅಶ್ವಸೈನ್ಯದ ಮಹತ್ವವನ್ನು ಕಾಣಬಹುದು. ನಮ್ಮ ಯೋಧರ ಪ್ರಾಚೀನ ಯುದ್ಧ ಕಲೆಗಳನ್ನು ನಾವು ಪ್ರತಿನಿಧಿಸುತ್ತೇವೆ ಎಂಬುದು ಮೈತೇಯಿಗಳ ವಾದ.
ಇದನ್ನೂ ಓದಿರಿ: ಅಮೆರಿಕ, ಫ್ರಾನ್ಸ್‌ಗೂ ಸಡ್ಡು ಹೊಡೆಯುತ್ತಿರುವ ಇಬ್ರಾಹಿಂ ಥೋರೆ!
ಇಷ್ಟು ಸಾಂಸ್ಕೃತಿಕ ರಾಜಕಾರಣದ ಭಾಗವಾಗಿರುವ ಆರಂಬೈ ತೆಂಗೋಲ್‌ಗೆ ಪಕ್ಷಾತೀತವಾಗಿ ಬೆಂಬಲವೂ ಇದೆ ಎಂಬುದನ್ನು ಈ ಹಿಂದಿನ ಘಟನೆಗಳು ದೃಢಪಡಿಸುತ್ತವೆ. 2024ರ ಜನವರಿಯಲ್ಲಿ ನಡೆದಿದ್ದ ಘಟನೆ. ಅಂದಿನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮತ್ತು ಒಳಮಣಿಪುರ ಲೋಕಸಭಾ ಸಂಸದನಾಗಿದ್ದ ರಾಜ್‌ಕುಮಾರ್ ರಂಜನ್ ಸಿಂಗ್, ರಾಜ್ಯಸಭಾ ಸದಸ್ಯ ಲೀಶೆಂಬಾ ಸನಾಜೋಬಾ ಅವರು ಸೇರಿದಂತೆ 30ಕ್ಕೂ ಹೆಚ್ಚು ಶಾಸಕರು ಪಕ್ಷಾತೀತವಾಗಿ ಸಭೆ ಸೇರಿದ್ದರು. ಆರಂಬೈ ತೆಂಗೋಲ್ ಸಂಘಟನೆಯು ಸಭೆಗೆ ಕರೆ ಕೊಟ್ಟಿತ್ತು ಎಂಬುದನ್ನು ಗಮನಿಸಬೇಕು. ಆರಂಬೈ ಇಟ್ಟ ಬೇಡಿಕೆಗಳಿಗೆ ಸಹಿ ಹಾಕಿದವರಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಕೂಡ ಇದ್ದರು. ಬಿರೇನ್ ಅವರನ್ನು ಆರಂಬೈ ತೆಂಗೋಲ್ ಭೇಟಿಯಾಗಿರುವುದಾಗಿ 2022ರಲ್ಲಿ ಮಾಡಿದ ಸೋಷಿಯಲ್ ಮೀಡಿಯಾ ಪೋಸ್ಟ್ ಹೇಳಿತ್ತು. ಸಭೆಯ ಚಿತ್ರವೊಂದರಲ್ಲಿ ಸಿಂಗ್ ಮತ್ತು ಸನಾಜೋಬಾ ಬಣದ ಮುಖ್ಯಸ್ಥ ಖುಮಾನ್ ಹಾಗೂ ಆರಂಬೈ ತೆಂಗೋಲ್‌ನ ಇತರ ಸದಸ್ಯರು ಇರುವುದನ್ನು ಪೋಸ್ಟ್‌ನಲ್ಲಿ ಗುರುತಿಸಬಹುದಿತ್ತು. ಬಿರೇನ್ ಅವರ ವ್ಯಾಪಕ ಬೆಂಬಲ ದೊಡ್ಡ ಮಟ್ಟದಲ್ಲಿ ಆರಂಬೈ ತೆಂಗೋಲ್ ಇದೆ ಎಂಬುದನ್ನು ಅವರ ಎಲ್ಲ ನಡೆಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.

ಮಣಿಪುರ ಹೊತ್ತಿ ಉರಿದು, ಎರಡು ಇಬ್ಭಾಗವಾಗಿ ಎರಡು ವರ್ಷಗಳು ತುಂಬುವ ಹೊತ್ತಿನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. ಸಂಘರ್ಷದ ಸಂದರ್ಭದಲ್ಲಿ ಸರ್ಕಾರಿ ಶಸ್ತ್ರಾಗಾರಗಳಿಂದ ಸಾವಿರಾರು ಬಂದೂಕು, ಮದ್ದುಗುಂಡುಗಳನ್ನು ಕೊಳ್ಳೆ ಹೊಡೆಯಲಾಗಿದ್ದು, ಅವುಗಳನ್ನು ವಾಪಸ್ ಪಡೆಯುವುದು ಮಣಿಪುರ ಗವರ್ನರ್ ಅಜಯ್ ಕುಮಾರ್ ಬಲ್ಲಾ ಅವರ ಎದುರಿಗಿದ್ದ ಮೊದಲ ಸವಾಲಾಗಿತ್ತು. ಏಳು ದಿನಗಳ ಗಡುವಿನೊಳಗೆ ಸ್ವಯಂಪ್ರೇರಿತವಾಗಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗುವಂತೆ ಅವರು ಕರೆ ನೀಡಿದ್ದರು. ಆದರೆ ನಿರೀಕ್ಷಿತ ಬೆಂಬಲ ಸಿಗದೆ ಸಮಯವನ್ನು ವಿಸ್ತರಿಸಿದರು. ಅಂತೂ ಇಂತೂ ಮುಂದೆ ಬಂದ ಆರಂಬೈ ತೆಂಗೋಲ್‌ನವರು ಮುಚ್ಚಿದ ಬಾಗಿಲಿನ ಸಭೆಯಲ್ಲಿ ಶಸ್ತ್ರಾಸ್ತ್ರ ಶರಣಾಗತಿಯ ಕುರಿತು ರಾಜ್ಯಪಾಲರೊಂದಿಗೆ ಸಭೆ ನಡೆಸಿದರು. ಗವರ್ನರ್‌ಗೆ ಕೆಲವು ಷರತ್ತುಗಳನ್ನು ನಿಗದಿಪಡಿಸಿದರು. ಆದರೆ ಸರ್ಕಾರ ಮತ್ತು ತೆಂಗೋಲ್ ನಡುವೆ ಆಗಿರುವ ಒಪ್ಪಂದ ಬಹಿರಂಗವಾಗಲಿಲ್ಲ. ಗಡುವಿನ ಕೊನೆಯ ದಿನದಂದು ಆರಂಬೈ ತೆಂಗೋಲ್‌ನವರು ಸುಮಾರು 307 ಶಸ್ತ್ರಾಸ್ತ್ರಗಳನ್ನು ತಂದು ಒಪ್ಪಿಸಿದರು. ಆದರೆ ಸರ್ಕಾರ ತಾವು ಒಟ್ಟಾರೆ ವಶಕ್ಕೆ ಪಡೆದಿರುವ ಶಸ್ತ್ರಾಸ್ತ್ರಗಳ ಪಟ್ಟಿಯನ್ನು ಬಹಿರಂಗಪಡಿಸಲಿಲ್ಲ.
ಈಗ ಮತ್ತೆ ಸುದ್ದಿಯಲ್ಲಿರುವ ಆರಂಬೈ ತೆಂಗೋಲ್, ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಈ ಮಿಲಿಟೆಂಟ್ ಸಂಘಟನೆಯ ಸ್ವಯಂ ಘೋಷಿತ ಸೇನಾ ಮುಖ್ಯಸ್ಥ ಅಸೆಮ್ ಕಾಕನ್ ಸಿಂಗ್. ಆತನನ್ನು ಸಿಬಿಐ ಬಂಧಿಸಿದ ಕೂಡಲೇ ಕಿಚ್ಚು ಹೊತ್ತಿಕೊಂಡಿತು. ಬಂಧನದ ಬೆನ್ನಲ್ಲೇ ಪ್ರತಿಭಟನೆಗಳು ಭುಗಿಲೆದ್ದವು. ಇಂಫಾಲ ಕಣಿವೆಯಾದ್ಯಂತ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.
2023ರ ಮೇ 3ರಂದು ಶುರುವಾದ ಮಣಿಪುರ ಹಿಂಸಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿ, ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಕಾರಣಕ್ಕೆ ಅಸೆಮ್‌ನನ್ನು ಇಂಫಾಲ ವಿಮಾನ ನಿಲ್ದಾಣದಲ್ಲಿ ಸಿಬಿಐನವರು ವಶಕ್ಕೆ ಪಡೆದರು. ತನಿಖೆಯ ಭಾಗವಾಗಿ ಆತನನ್ನು ನೆರೆಯ ರಾಜ್ಯದ ಅಸ್ಸಾಂನ ರಾಜಧಾನಿ ಗುವಾಹಟಿಗೆ ಕರೆದೊಯ್ಯಲಾಯಿತು.
ಫೆಬ್ರವರಿ 2024ರಲ್ಲಿ ಇಂಫಾಲ ಪಶ್ಚಿಮದ ಹೆಚ್ಚುವರಿ ಎಸ್‌ಪಿಯನ್ನು ಅವರ ಮನೆಯಿಂದ ಅಪಹರಿಸಿದ್ದರಲ್ಲೂ ಅಸೆಮ್ ಭಾಗಿಯಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಕುಕಿ ಮತ್ತು ಮೈತೇಯಿಗಳ ನಡುವಿನ ಸಂಘರ್ಷದಲ್ಲಿ ಈ ಸಂಘಟನೆಯು ಪ್ರಮುಖ ಪಾತ್ರ ವಹಿಸಿರುವುದರಿಂದ ಈ ಬಂಧನವು ಮಹತ್ವ ಪಡೆದುಕೊಂಡಿತು.
ಪೊಲೀಸರು ಮತ್ತು ಭದ್ರತಾ ಪಡೆಗಳ ಮೇಲೆ ನಂಬಿಕೆಗಳನ್ನು ಕಳೆದುಕೊಂಡಿರುವ ಉಭಯ ಸಮುದಾಯಗಳು, ಮೂಲಭೂತವಾದಿ ಮತ್ತು ಮಿಲಿಟೆಂಟ್ ಸಂಘಟನೆಗಳ ಕೈಗೆ ತಮ್ಮನ್ನು ಒಪ್ಪಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕತ್ತರಿಸಿದರೆ ಮತ್ತಷ್ಟು ಚಿಗುರೊಡೆಯುವ ಸಂಘಟನೆಯಾಗಿ ಆರಂಬೈ ಹೊಸ ರೂಪ ಪಡೆಯುತ್ತಿದೆ. ಮಣಿಪುರ ಹಿಂಸಾಚಾರದ ಬಳಿಕ ಆರಂಬೈ ತೆಂಗೋಲ್ ಸಂಘಟನೆಯನ್ನು ವಿಸರ್ಜನೆ ಮಾಡಲಾಗಿದೆ ಎಂದು ಘೋಷಿಸಲಾದರೂ ಅದು ಭೂಗತವಾಗಿ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡಿದೆ ಎಂಬುದು ವಾಸ್ತವ. ಅದು ಯಾವಾಗ ಬೇಕಾದರೂ ದುತ್ತನೆ ಎದ್ದು ಬರುವ ಸಂಘಟನೆ ಎಂಬುದು ಸ್ಪಷ್ಟ.
ಇದನ್ನೂ ಓದಿರಿ: ಪಹಲ್ಗಾಮೋತ್ತರ ಪ್ರವಾಸೋದ್ಯಮ; ಕಾಶ್ಮೀರಿಗಳ ಬದುಕು ತತ್ತರ
ಆರಂಬೈ ತೆಂಗೋಲ್ ಸುಮಾರು 2,000 ಸಶಸ್ತ್ರ ಕೇಡರ್ ಬಲವನ್ನು ಹೊಂದಿದ್ದರೂ, ಇಂಫಾಲ್ ಕಣಿವೆಯಾದ್ಯಂತ ಹಲವಾರು ಸಾವಿರ ಸ್ವಯಂಸೇವಕರ ಬೆಂಬಲವನ್ನೂ ಪಡೆದುಕೊಂಡಿದೆ. ಹಿಂಸಾಚಾರದ ಆರಂಭಿಕ ದಿನಗಳಲ್ಲಿ ಮಣಿಪುರ ಪೊಲೀಸರು ದಾಖಲಿಸಿದ ಅನೇಕ ಎಫ್‌ಐಆರ್‌ಗಳಲ್ಲಿ ಆರಂಬೈ ತೆಂಗೋಲ್ ಉಲ್ಲೇಖಗೊಂಡಿದೆ.
“ಕುಕಿಗಳ ವಿರುದ್ಧದ ಹಿಂಸಾಚಾರದಲ್ಲಿ ಮುಂಚೂಣಿಯಲ್ಲಿ ನಿಂತು ಕುಕಿ ದಾಳಿಯಿಂದ ಹಳ್ಳಿಗಳನ್ನು ರಕ್ಷಿಸಿಕೊಳ್ಳುವ ಮೂಲಕ, ಈ ಗುಂಪು ಕಣಿವೆಯಲ್ಲಿ ಅಪಾರ ಸಾರ್ವಜನಿಕ ಬೆಂಬಲವನ್ನು ಗಳಿಸಿದೆ. ಇದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ, ಹೆಚ್ಚಾಗಿ ಪೊಲೀಸ್ ಶಸ್ತ್ರಾಗಾರಗಳನ್ನು ಲೂಟಿ ಮಾಡಿದೆ. ಜೊತೆಗೆ ಮಣಿಪುರ ಪೊಲೀಸ್ ವಲಯದಲ್ಲಿ ಸಹಾನುಭೂತಿಯನ್ನು ಸ್ಪಲ್ಪ ಮಟ್ಟಿಗೆ ಗಳಿಸಿಕೊಂಡಿದೆ. ಮಣಿಪುರ ರಾಜಕಾರಣಿಗಳ ವಿಶ್ವಾಸಾರ್ಹತೆ ಕಡಿಮೆ ಇರುವ ಸಮಯದಲ್ಲಿ, ಈ ಗುಂಪು ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ರಾಜಕೀಯ ನಾಯಕರು ಸೇರಿದಂತೆ ಎಲ್ಲರೂ ಅದರೊಂದಿಗೆ ಸಂಬಂಧ ಹೊಂದಲು ಬಯಸುತ್ತಾರೆ” ಎಂದು ಮಣಿಪುರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರಂಬೈ ತೆಂಗೋಲ್‌ನ ಹುಡುಗರು ಭಾಗಿಯಾಗಿದ್ದರೆಂದು ವರದಿಗಳು ಹೇಳುತ್ತವೆ. ಪೊಲೀಸರ ಶಸ್ತ್ರಾಸ್ತ್ರ ಲೂಟಿ ಮಾಡಿರುವುದಷ್ಟೇ ಅಲ್ಲ, ಸನಾಜೋಬಾ ಅವರ ಪೂರ್ವಜರ ನಿವಾಸವಾದ ಕಾಂಗ್ಲಾ ಕೋಟೆಯಲ್ಲಿ ಪೊಲೀಸರು ಮತ್ತು ಮೂವರು ಕಾಂಗ್ರೆಸ್ ಶಾಸಕರ ಮೇಲೆ ದೈಹಿಕ ಹಲ್ಲೆಯನ್ನು ಈ ಸಂಘಟನೆ ಮಾಡಿತ್ತು. ನಾವು ಹೇಳಿದರೂ ಪ್ರಮಾಣವಚನ ಸ್ವೀಕರಿಸಲಿಲ್ಲ ಎಂಬುದು ಈ ದಾಳಿಗೆ ಕಾರಣವಾಗಿತ್ತು.

ಕಳೆದ ಏಪ್ರಿಲ್‌ನಲ್ಲಿ ಆರಂಬೈ ತೆಂಗೋಲ್ ಕಾರ್ಯಕರ್ತರ ನಡುವೆ ಆಯೋಜಿಸಿದ್ದ ಫುಟ್ಬಾಲ್ ಟೂರ್ನಿಯು ಮಹತ್ವ ಪಡೆದುಕೊಂಡಿದೆ. ಟೂರ್ನಿಯ ವೇಳೆ ಸನಾಜೋಬಾ ಆಡಿರುವ ಮಾತುಗಳು ಚರ್ಚೆಗೆ ಯೋಗ್ಯವಾಗಿವೆ. “ನಮ್ಮ ಭೂಮಿ, ಸಂಸ್ಕೃತಿ ಮತ್ತು ಗುರುತನ್ನು ರಕ್ಷಿಸಲು ಆರಂಬೈ ತೆಂಗೋಲ್ ಸ್ಥಾಪಿಸಲಾಯಿತು. ನಾವು ರಾಷ್ಟ್ರವಿರೋಧಿಗಳಲ್ಲ ಅಥವಾ ಯಾರ ವಿರುದ್ಧವೂ ಇಲ್ಲ. ಮಣಿಪುರ ಮತ್ತು ಭಾರತವನ್ನು ರಕ್ಷಿಸುವುದು ನಮ್ಮ ನಿಜವಾದ ಉದ್ದೇಶ. ಆರಂಬೈ ತೆಂಗೋಲ್‌ನವರು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗಿಸಿದ್ದಾರೆ, ನಾಗರಿಕರಾಗಿ ಬದುಕುತ್ತಿದ್ದಾರೆ ಎಂದು ಕೆಲವರು ಹೇಳಬಹುದು. ಆದರೆ, ಯಾವುದೇ ಸಮಯದಲ್ಲಿ, ನಮ್ಮ ಭೂಮಿಯನ್ನು ರಕ್ಷಿಸುವ ಕರೆಗೆ ನಾವು ಸಿದ್ಧರಾಗಿರುತ್ತೇವೆ” ಎಂದು ಎಚ್ಚರಿಸಿದ್ದಾರೆ ಸನಾಜೋಬಾ.
“ನಾವು ರಾಷ್ಟ್ರ ವಿರೋಧಿಯಲ್ಲ, ದೇಶಕ್ಕಾಗಿ ನಾವಿದ್ದೇವೆ” ಎನ್ನುವ ಸನಾಜೋಬಾ ಅವರ ಮಾತುಗಳು ಹಿಂದುತ್ವ ರಾಷ್ಟ್ರೀಯವಾದಿ ಸಿದ್ಧಾಂತದಿಂದ ಮೂಡಿಬಂದಿವೆ. “ಗುಂಪೊಂದು ಮದ್ದುಗುಂಡುಗಳನ್ನು ಕೈಗೆತ್ತಿಕೊಳ್ಳುವುದು ಕಾನೂನು ಬಾಹಿರ” ಎಂಬುದನ್ನು ಗಮನಿಸಬೇಕು. ಈಶಾನ್ಯದಲ್ಲಿ ಜನಾಂಗೀಯ ಸಂಘರ್ಷದಲ್ಲಿ ಸಶಸ್ತ್ರ ಗುಂಪುಗಳು ಭಾಗವಹಿಸುವುದು ಹೊಸದಲ್ಲ, ಆದರೆ ಆರಂಬೈ ತೆಂಗೋಲ್ ಮಾದರಿ ನೂತನವಾದದ್ದು ಎನ್ನುತ್ತದೆ ‘ದಿ ವೈರ್’ ವರದಿ.
ಇದನ್ನೂ ಓದಿರಿ: ಆದಿವಾಸಿಗಳೂ ಇದ್ದಾರೆಂಬ ಅರಿವಿದೆಯೇ? (ಭಾಗ- 1)
ಬುಡಕಟ್ಟು ಜನಾಂಗದವರು ಕಣಿವೆ ಪ್ರದೇಶಗಳಲ್ಲಿ ಭೂಮಿಯನ್ನು ಖರೀದಿಸಬಹುದಾದರೂ, ಬೆಟ್ಟ ಪ್ರದೇಶಗಳಲ್ಲಿ ಮೈತೇಯಿಗಳು ಅದೇ ರೀತಿ ಖರೀದಿ ಮಾಡಲು ಸಾಧ್ಯವಿಲ್ಲ ಎಂಬುದು ಮೈತೇಯಿಗಳ ಆಕ್ಷೇಪ. ಹಿಂಸಾಚಾರಕ್ಕೂ ಇದೇ ಮೂಲ. ಮಣಿಪುರದ ಬಹುಪಾಲು ಭೂಮಿ ಬೆಟ್ಟಗಳಿಂದ ಕೂಡಿದೆ. ಆದರೆ ಸಂಪತ್ತನ್ನು ವಿಸ್ತರಿಸಿಕೊಳ್ಳಲು ಆಗುತ್ತಿಲ್ಲ ಎಂಬುದು ಬಹುಸಂಖ್ಯಾತ ಮೈತೇಯಿಗಳ ಆಕ್ರೋಶ. ಇದರ ಭಾಗವಾಗಿ ಆರಂಬೈ ತೆಂಗೋಲ್ ಹುಟ್ಟಿದೆ ಎಂದು ಪ್ರತಿಪಾದಿಸುವ ಸನಾಜೋಬಾ, ಮೈತೇಯಿಗಳ ಅಭ್ರತೆಯೊಂದಿಗೆ ತಮ್ಮ ಕಾರ್ಯಚಟುವಟಿಕೆಗಳನ್ನು ತಳುಕು ಹಾಕಿದರು. “ನಮ್ಮ ಭೂಮಿ, ಸಂಸ್ಕೃತಿ ಮತ್ತು ಗುರುತನ್ನು ರಕ್ಷಿಸುತ್ತೇವೆ” ಎನ್ನುತ್ತಾ ಯುವಕರನ್ನು ಪ್ರಭಾವಿಸಿದರು.
ಬರ್ಮಾ ಗಡಿಯಲ್ಲಿ ಬೇಲಿ ಹಾಕಬೇಕು ಎಂಬುದು ಮೈತೇಯಿಗಳ ಆಗ್ರಹ. ಈ ನಿಲುವನ್ನು ಮಿಜೋರಾಂ, ಮಣಿಪುರ ಮತ್ತು ನಾಗಾಲ್ಯಾಂಡ್‌ನಾದ್ಯಂತ ಗಡಿ ಜನರು ವಿರೋಧಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಗಡಿಯ ಇನ್ನೊಂದು ಬದಿಯಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರೊಂದಿಗಿನ ಸಂಬಂಧವನ್ನು ಉಲ್ಲೇಖಿಸುತ್ತಿರುವ ಗಡಿ ಜನರು, ಭಾರತವು ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಹಾಕುವುದನ್ನು ವಿರೋಧಿಸಿದ್ದಾರೆ.
ಸಾಲ್ವಾ ಜುದುಮ್ ಮಾದರಿಯಲ್ಲಿ ‘ಆರಂಬೈ ತೆಂಗೋಲ್’?
ಇದೇ ಹೊತ್ತಿನಲ್ಲಿ ‘ಆರಂಬೈ ತೆಂಗೋಲ್’ಗೂ ‘ಸಾಲ್ವಾ ಜುದುಮ್’ಗೂ ಹೋಲಿಕೆ ಮಾಡಲಾಗುತ್ತಿದೆ. ತೆಂಗೋಲ್‌ನ ಚಹರೆಗಳಲ್ಲಿ ಸಾಲ್ವಾ ಜುದುಮ್ ಕಾಣಿಸಿಕೊಳ್ಳುತ್ತಿದೆ ಎಂದು ‘ದಿ ವೈರ್’ ವೆಬ್‌ಸೈಟ್ ವರದಿಯೊಂದು ಚರ್ಚಿಸಿದೆ.
ಛತ್ತೀಸ್‌ಗಡದ ಹಿರಿಯ ರಾಜಕಾರಣಿ ಮಹೇಂದ್ರ ಕರ್ಮ ಸ್ಥಾಪಿಸಿದ ಸಂಘಟನೆಯೇ ‘ಸಾಲ್ವಾ ಜುದುಮ್’. ಕರ್ಮ ಮೊದಲು ಕಾಂಗ್ರೆಸ್‌ನಲ್ಲಿದ್ದರು. ನಂತರ ಬಿಜೆಪಿ ಸೇರಿದರು. ವ್ಯಾಪಕ ಹಿಂಸಾಚಾರಗಳಿಗೆ ಕಾರಣವಾಗಿದ್ದ ಕರ್ಮರನ್ನು ನಕ್ಸಲರು ಕೊಂದರು. ಆದರೆ ಕರ್ಮ ಅವರಿಗೆ ಬಿಜೆಪಿ- ಕಾಂಗ್ರೆಸ್ ಇಬ್ಬರೂ ಪ್ರೋತ್ಸಾಹಿಸಿದ್ದರು.

ಸಾಲ್ವಾ ಜುದುಮ್‌ನಂತೆಯೇ ಸನಾಜೋಬಾ ಅವರು ಮಣಿಪುರದಲ್ಲಿ ಆರಂಬೈ ತೆಂಗೋಲ್ ಸ್ಥಾಪಿಸಿದ್ದಾರೆ ಎನ್ನಲಾಗುತ್ತಿದೆ. ಸಾಲ್ವಾ ಜುದುಮ್ ಎಂಬುದು ಖಾಸಗಿಯಾದ, ಆದರೆ ಸರ್ಕಾರದ ಬೆಂಬಲ ಹೊಂದಿದ್ದ ಮಿಲಿಟೆಂಟ್ ಪಡೆಯಾಗಿತ್ತು. ಸ್ಥಳೀಯ ಯುವಕರಿಗೆ ತರಬೇತಿ ನೀಡುತ್ತಾ, ಮಾವೋವಾದಿಗಳ ವಿರುದ್ಧ ಹೋರಾಡಲು ಶಸ್ತ್ರಸ್ತ್ರಾಗಳನ್ನು ನೀಡಲಾಯಿತು. ಇದಕ್ಕೆ ಛತ್ತೀಸ್‌ಗಢ ಸರ್ಕಾರದ ಬೆಂಬಲವೂ ಇತ್ತು. 2005ರಲ್ಲಿ ಸಾಲ್ವಾ ಜುದುಮ್ ಪ್ರಾರಂಭಿಸಿದಾಗ ಮಹೇಂದ್ರ ಕರ್ಮ, “ದೇಶದ ಹಿತಾಸಕ್ತಿಗಾಗಿ ಗ್ರಾಮಸ್ಥರು ನಿಂತು ಭದ್ರತಾ ಪಡೆಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡುತ್ತಿರುವ ಮೊದಲ ಉದಾಹರಣೆ ಇದಾಗಿದೆ. ಇದು ಒಂದು ಐತಿಹಾಸಿಕ ಹೋರಾಟ. ಏಕೆಂದರೆ ಸಾಮಾನ್ಯ ಜನರು ಇದನ್ನು ಬೆಂಬಲಿಸುತ್ತಾರೆ” ಎಂದು ಬಣ್ಣಿಸಿದ್ದರು.
ಇದೇ ಮಾದರಿಯ ಮಾತನ್ನು ಆರಂಬೈ ಆರಂಬೈ ತೆಂಗೋಲ್‌ನ ಯುವಕನೊಬ್ಬ ಆಡಿದ್ದನ್ನು ‘ದಿ ವೈರ್’ ವರದಿ ಉಲ್ಲೇಖಿಸುತ್ತದೆ. 2023ರ ಜನಾಂಗೀಯ ಸಂಘರ್ಷದ ಸಮಯದಲ್ಲಿ ಲೂಟಿ ಮಾಡಿದ ಶಸ್ತ್ರಾಸ್ತ್ರಗಳೊಂದಿಗೆ ಸಿಕ್ಕಿ ಬಿದ್ದ ಯುವಕ (ಆತ ಈಗ ಎನ್‌ಐಎ ಪ್ರಕರಣವನ್ನು ಎದುರಿಸುತ್ತಿದ್ದಾನೆ) ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಾ, “ಹೆಚ್ಚಿನ ಸಂಖ್ಯೆಯಲ್ಲಿ ಬಂದ ಮ್ಯಾನ್ಮಾರ್ ಜನರ ವಿರುದ್ಧ ಹೋರಾಡಲು ನಾವು ಪೊಲೀಸರಿಗೆ ಸಹಾಯ ಮಾಡುತ್ತಿದ್ದೇವೆ. ನಮ್ಮ ಸಮುದಾಯವನ್ನು ಉಳಿಸುತ್ತಿದ್ದೇವೆ” ಎಂದಿದ್ದ. ಮತ್ತೆ ಸಾಲ್ವಾ ಜುದುಮ್ ಬಗ್ಗೆ ಹೇಳುವುದಾದರೆ, ಸ್ಥಳೀಯ ಯುವಕರಿಂದ ತುಂಬಿದ್ದ ಮಾವೋವಾದಿ ವಿರೋಧಿ ಮಿಲಿಟೆಂಟ್‌ಗಳಿಗೆ ಛತ್ತೀಸ್‌ಗಢ ಸರ್ಕಾರವು ಬೆಂಬಲ ಮತ್ತು ತರಬೇತಿಯನ್ನು ನೀಡಿತ್ತು. ಸಹಾಯಕ ಪಡೆಯಂತೆ ವರ್ತಿಸಿದರೂ, ಸಾಲ್ವಾ ಜುದುಮ್ ಕ್ರಮೇಣ ಹಿಂಸಾತ್ಮಕ ಪ್ರವೃತ್ತಿಗೆ ಇಳಿಯಿತು. ಸಮುದಾಯದ ಸಹ ಸದಸ್ಯರ ಮೇಲೆಯೇ ಹಿಂಸಾಚಾರಗಳನ್ನು ನಡೆಸಿ, ಮಾನವ ಹಕ್ಕುಗಳನ್ನು ದೊಡ್ಡ ಪ್ರಮಾಣದಲ್ಲಿ ಉಲ್ಲಂಘಿಸಿತು. ನೂರಾರು ಅಮಾಯಕ ಜನರು ಅವರ ಕೈಯಲ್ಲಿ ದೌರ್ಜನ್ಯವನ್ನು ಎದುರಿಸಿದರು ಮತ್ತು ಕೊಲ್ಲಲ್ಪಟ್ಟರು. 2011ರಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಸಾಲ್ವಾ ಜುದುಮ್ ಅಸ್ತಿತ್ವವನ್ನು ಕಾನೂನುಬಾಹಿರವೆಂದು ಪರಿಗಣಿಸಿತು. ಛತ್ತೀಸ್‌ಗಢ ಸರ್ಕಾರವು ಅದರ ಎಲ್ಲಾ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಮರುಪಡೆಯಬೇಕಾಯಿತು. 2015ರ ಮೇನಲ್ಲಿ ಪತ್ರಕರ್ತ ಆದಿತ್ಯ ಸಿನ್ಹಾ ಬರೆಯುತ್ತಾ, “ಸಾಲ್ವಾ ಜುದುಮ್ ಪರಿಹರಿಸಿದ್ದಕ್ಕಿಂತ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸಿತು. ಕಾನೂನನ್ನು ಖಾಸಗಿ ಕೈಗಳಿಗೆ ಹೊರಗುತ್ತಿಗೆ ನೀಡಬಾರದು ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಹೇಳುವಂತಾಯಿತು” ಎನ್ನುತ್ತಾರೆ.
ಇದನ್ನೂ ಓದಿರಿ: ಆದಿವಾಸಿಗಳೂ ಇದ್ದಾರೆಂಬ ಅರಿವಿದೆಯೇ? (ಭಾಗ- 2)
ಆರಂಬೈ ತೆಂಗೋಲ್‌ಗೆ ರಾಜಕಾರಣಿಗಳ ಪ್ರೋತ್ಸಾಹ ಇರುವುದು ಮೇಲ್ನೋಟಕ್ಕೆ ಕಾಣುತ್ತದೆ. ರಾಜ್ಯ ಪೊಲೀಸ್ ಶಸ್ತ್ರಾಗಾರದಿಂದ ಮದ್ದುಗುಂಡುಗಳನ್ನು ಸುಲಭವಾಗಿ ಅಪಹರಿಸಿದ್ದು ಹೇಗೆ? ಜನಾಂಗೀಯ ಹಿಂಸಾಚಾರದ ಸಮಯದಲ್ಲಿ ಆರಂಬೈ ತೆಂಗೋಲ್ ಅವರನ್ನು ಶಸ್ತ್ರಸಜ್ಜಿತಗೊಳಿಸುವಲ್ಲಿ ಸರ್ಕಾರದ ಪಾತ್ರವೇನು ಎಂಬುದನ್ನು ಗಮನಿಸಬೇಕಾಗುತ್ತದೆ. ಸಾಲ್ವಾ ಜುದುಮ್‌ಗೆ ಛತ್ತೀಸ್‌ಗಢ ಸರ್ಕಾರದ ಪ್ರತ್ಯೇಕ್ಷ ಬೆಂಬಲ ಇತ್ತು. ಆದರೆ ಇಲ್ಲಿ ಅಂತಹ ಪ್ರೋತ್ಸಾಹ ಕಂಡು ಬರುವುದಿಲ್ಲ. ಸಾಲ್ವಾ ಜುದುಮ್ ಎಂಬುದು ಆದಿವಾಸಿಗಳನ್ನು ಆದಿವಾಸಿಗಳ ವಿರುದ್ಧವೇ ಪ್ರಭುತ್ವ ಪ್ರಯೋಗಿಸಿದ ವಿಷಕಾರಿ ಪ್ರಯೋಗ. ಆರಂಬೈ ತೆಂಗೋಲ್ ವಿಚಾರದಲ್ಲಿ ಸಾಮ್ಯತೆ ಇದ್ದರೂ ಈ ಸಂಘಟನೆಯು ಸಾಲ್ವಾ ಜುದುಮ್‌ನ ಸಂಪೂರ್ಣ ತದ್ರೂಪ ಎನ್ನಲು ಸಾಧ್ಯವಿಲ್ಲ. ಆದರೆ ಇಂತಹ ಮಿಲಿಟೆಂಟ್‌ಗಳಿಗೆ ಸೈದ್ಧಾಂತಿಕ, ರಾಜಕೀಯ ಬೆಂಬಲ ಇರುವುದು ಅಪಾಯಕಾರಿ.
ಬಿಜೆಪಿ ನಾಯಕನಿಂದ ಸ್ಥಾಪಿಸಲ್ಪಟ್ಟ ‘ಆರಂಬೈ ತೆಂಗೋಲ್’- ಹಿಂದುತ್ವ ದುರಭಿಮಾನವನ್ನು ಪ್ರೋತ್ಸಾಹಿಸುತ್ತಿದೆ ಹಾಗೂ ಭದ್ರತಾ ವ್ಯವಸ್ಥೆಗೆ ಸವಾಲಾಗಿ ನಿಂತಿದೆ. ಬಜರಂಗದಳದಂತೆ ಕೆಲಸ ಮಾಡುವ ಆರಂಬೈತೆಂಗೋಲ್‌ನ ಅಪಾಯಗಳನ್ನು ಮೈತೇಯಿ ಸಮುದಾಯ ಆತ್ಮಾವಲೋಕನ ಮಾಡಿಕೊಂಡರೆ ಮಾತ್ರ ನೆಮ್ಮದಿಯ ನಾಳೆಗಳನ್ನು ಕಟ್ಟಬಹುದೇನೋ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




