ತಲೆಮ್ಯಾಗೊಂದು ಸೂರು ಬೇಕೆಂಬುದು ಪ್ರತಿ ಕುಟುಂಬದ ಮಹದಾಸೆಯಾಗಿದೆ. ಸಂವಿಧಾನದ 21ನೇ ವಿಧಿಯ ‘ಬದುಕುವ ಹಕ್ಕನ್ನು’ ಭಾರತದ ಸರ್ವೋಚ್ಚ ನ್ಯಾಯಾಲಯವು ವಿಶಾಲವಾಗಿ ವ್ಯಾಖ್ಯಾನಿಸುವ ಮೂಲಕ ತಕ್ಕಷ್ಟು ಆಶ್ರಯ ಮತ್ತು ವಸತಿಯನ್ನು ಹೊಂದಿ ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ಬದುಕುವ ಹಕ್ಕು ಕೇವಲ ಬದುಕುಳಿಯುವುದಕ್ಕಷ್ಟೇ ಅಲ್ಲದೇ ಮಾನವೀಯ ಸ್ಥಿತಿಯಲ್ಲಿ ಬದುಕುವ ಸಾಮರ್ಥ್ಯವನ್ನು ಒಳಗೊಂಡಿದೆ ಎಂಬ ಅಭಿಪ್ರಾಯವನ್ನು ಹಲವು ಮುಖ್ಯ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲವು ಸ್ಪಷ್ಟಪಡಿಸಿರುತ್ತದೆ.
ಮೂಲಭೂತ ಸೌಲಭ್ಯವುಳ್ಳ ಒಂದು ‘ಮನೆ’ ಬಡವರಿಗೆ ಕೈಗೆಟುಕದ ಗಗನಕುಸುಮವಾಗಿದ್ದು, ಮನೆ ಇಲ್ಲದ ಮನಗಳು ಮರುಗುತ್ತಲೇ ಬದುಕಬೇಕಾಗಿದೆ. ಅವಶ್ಯ ಸೌಲಭ್ಯಗಳಿರುವ ಒಂದು ಪುಟ್ಟ ಮನೆಯು ಸುರಕ್ಷಿತ ಭಾವನೆ ತರುವುದಲ್ಲದೆ, ಮನೆಯವರ ದೈಹಿಕ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸ್ವಂತ ಮನೆಯೊಂದು ಪೂರ್ಣ ಪ್ರಮಾಣದ ಉತ್ಪಾದಕತೆಯಲ್ಲಿ ತೊಡಗಿಕೊಳ್ಳಲು ಅನುವಾಗಿಸಿ ಕುಟುಂಬದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಅವಶ್ಯವಿರುವ ಎಲ್ಲ ಕುಟುಂಬಗಳ ವಸತಿ ಪೂರೈಕೆ ಮಾಡುವುದು ಸರ್ಕಾರದ ಗುರುತರ ಜವಾಬ್ದಾರಿ ಮತ್ತು ಬದ್ಧತೆಯಾಗಿದೆ. ವಸತಿ ಎಂದರೆ ಕೇವಲ ತಲೆಯ ಮೇಲೊಂದು ಸೂರಷ್ಟೇ ಅಲ್ಲ, ಇದು ಅವಶ್ಯವಿರುವಷ್ಟು ಜಾಗ, ಬೆಳಕು, ಗಾಳಿ, ಶೌಚಾಲಯ, ಜೀವನೋಪಾಯ ಮತ್ತು ಖಾಸಗಿತನದ ಸ್ಥಳವನ್ನು ಒಳಗೊಂಡಿರುತ್ತದೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಕಳೆದ 50 ವರ್ಷಗಳಿಂದ ವಸತಿ ಪೂರೈಕೆಯಲ್ಲಿ ನಿರ್ವಹಿಸಿದ ಜವಾಬ್ದಾರಿಯನ್ನು ಇಲ್ಲಿ ಅವಲೋಕಿಸಲಾಗಿದೆ. ಕರ್ನಾಟಕವು ತನ್ನದೇ ವಸತಿ-ನಿವೇಶನ ಯೋಜನೆಗಳನ್ನು ಹೊಂದಿದ್ದರೂ, ಕೇಂದ್ರದ ಯೋಜನೆಗಳನ್ನೂ ಅನುಷ್ಠಾನಗೊಳಿಸುತ್ತಿದ್ದು, ಅದರತ್ತವೂ ಗಮನ ಹರಿಸಲಾಗಿದೆ.
ವಸತಿ ಕೊರತೆಯು ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದು, ಅದನ್ನು ನೀಗಿಸುವ ಪ್ರಯತ್ನವಾಗಿ ಸ್ವತಂತ್ರ ಭಾರತದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಸ್ವಾತಂತ್ರ್ಯಪೂರ್ವದ ಭಾರತವು ಇಬ್ಭಾಗವಾಗಿ ರಚಿತವಾದ ಹೊಸ ಎರಡು ದೇಶಗಳ ನಡುವೆ ಘಟಿಸಿದ ವಲಸೆಯ ಕಾರಣ, ಸ್ವತಂತ್ರ ಭಾರತದಲ್ಲಿ ವಸತಿಯು ರಾಜಕೀಯ ಪ್ರಾಮುಖ್ಯತೆ ಪಡೆಯುತ್ತದೆ. ಮೊದಲ ಪಂಚವಾರ್ಷಿಕ ಯೋಜನೆಯ ಒಟ್ಟು ಹಂಚಿಕೆಯ ಸುಮಾರು 34% ಹಣವನ್ನು ವಸತಿ ವಲಯಕ್ಕೆ ನೀಡಲಾಗುತ್ತದೆ. ಪುನರ್‌ವಸತಿ ಕಾಲೋನಿಗಳ ನಿರ್ಮಾಣ, ಇಲಾಖೆಗಳ ಸಿಬ್ಬಂದಿಗಳಿಗೆ ಕ್ವಾರ್ಟರ್ಸ್, ಸಂಪನ್ಮೂಲ ಒದಗಿಸುವುವಿಕೆ, ಭೂಸ್ವಾಧೀನ, ನಿರ್ಮಾಣ, ಮೂಲಭೂತ ಸೌಕರ್ಯಗಳ ರಚನೆ ಹಾಗೂ ಹಂಚಿಕೆ – ಇವೆಲ್ಲವುಗಳಲ್ಲಿ ಸರ್ಕಾರವು 1970ರತನಕ ನೇರ ಭಾಗಿತ್ವ ಹೊಂದಿರುತ್ತದೆ.
1952ರಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ, 1954ರಲ್ಲಿ ಕಡಿಮೆ ಆದಾಯದವರಿಗೆ ವಸತಿ, 1956ರಲ್ಲಿ ಕೊಳೆಗೇರಿ ವಾಸಿಗಳ ಪುನರ್ವಸತಿಗಾಗಿ ‘ಕೊಳೆಗೇರಿ ನಿರ್ಮೂಲನೆ ಮತ್ತು ಸುಧಾರಣೆ ಹಾಗೂ ಪ್ಲಾಂಟೇಷನ್ ಕಾರ್ಮಿಕರ ವಸತಿಗಾಗಿ ಕಾಯ್ದೆ ಮತ್ತು ಸಹಾಯಧನ’, 1959ರಲ್ಲಿ ಮಧ್ಯಮ ಆದಾಯದವರಿಗೆ ವಸತಿ, ಗ್ರಾಮೀಣ ವಸತಿ ಯೋಜನೆ, ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ ಬಾಡಿಗೆ ಮನೆ ಹಾಗೂ ರಾಜ್ಯಗಳಿಂದ ಭೂ ಸ್ವಾಧೀನ ಮತ್ತು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಕೇಂದ್ರದ ಸಾಲ-ಸಹಾಯಧನಗಳ ಮೂಲಕ ರಾಜ್ಯವು ಇವುಗಳನ್ನು ಅನುಷ್ಠಾನಗೊಳಿಸುತ್ತದೆ. 1961ರಲ್ಲಿ ನಗರಗಳಲ್ಲಿ ಹೆಚ್ಚಿನ ಬಾಡಿಗೆ ವಸೂಲಿ ನಿಯಂತ್ರಿಸಲು ಬಾಡಿಗೆ ನಿಯಂತ್ರಣ ಕಾಯ್ದೆಯನ್ನು ತರಲಾಗುತ್ತದೆ. 1970ರಲ್ಲಿ ವಸತಿ ಮತ್ತು ನಗರ ಅಭಿವೃದ್ಧಿ ನಿಗಮ (HUDCO) ಎಂಬ ಸ್ವತಂತ್ರ ಹಣಕಾಸು ಸಂಸ್ಥೆಯು ರಾಜ್ಯದ ಹೌಸಿಂಗ್ ಬೋರ್ಡ್ಸ್ ಮತ್ತು ಸಹಕಾರಿ ಸಂಘಗಳ ಮೂಲಕ ವಸತಿ ಚಟುವಟಿಕೆಗಳಿಗೆ ಸಂಪನ್ಮೂಲ ಒದಗಿಸಲು ಪ್ರಾರಂಭವಾಗುತ್ತದೆ. ನಂತರ, ಗ್ರಾಮೀಣ ವಸತಿರಹಿತರಿಗೆ ನಿವೇಶನಗಳು (1971), ನಗರ ಕೊಳೆಗೇರಿಗಳ ಪರಿಸರ ಸುಧಾರಣೆ (1972) ಹಾಗೂ ಕನಿಷ್ಠ ಅವಶ್ಯಕ ಕಾರ್ಯಕ್ರಮಗಳು (74) ಜಾರಿಯಾಗುತ್ತವೆ.

ಕರ್ನಾಟಕದ 50 ವರ್ಷಗಳ ಹಿಂದಿನ ವಸತಿ ಇತಿಹಾಸವನ್ನು ಮೈಸೂರು ಕಾರ್ಮಿಕರ ವಸತಿ ಕಾಯ್ದೆ 1949 ಮತ್ತು ಮೈಸೂರು ಗೃಹ ಮಂಡಳಿ ಕಾಯ್ದೆ 1956, ಇದರ ಮರುನಾಮಾಂಕಿತ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಯ್ದೆ 1962- ಇಲ್ಲಿಂದ ಗುರುತಿಸಬಹುದಾಗಿದೆ. ಇದರೊಂದಿಗೆ, ಕರ್ನಾಟಕ ಸ್ಲಮ್ ಏರಿಯಾ (ಸುಧಾರಣೆ ಮತ್ತು ತೆರವು) ಕಾಯ್ದೆ 1973 ಹಾಗೂ 1975ರಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗುತ್ತದೆ. ಕೇಂದ್ರದ ಗರಿಬಿ ಹಠಾವೊ ಉದ್ದೇಶದ ಭಾಗವಾದ ಮೂಲ ಅವಶ್ಯಕತೆಗಳ ಯೋಜನೆ (1974) ಮತ್ತು 1975ರ ‘20 ಪಾಯಿಂಟ್’ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ ಮತ್ತು ಟ್ರೈಬಲ್ ಸಬ್‌ಪ್ಲಾನ್ ಮೂಲಕ ಬುಡಕಟ್ಟು ಜನಾಂಗದವರಿಗೆ ಸಹಾಯ, ಕೃಷಿಕಾರ್ಮಿಕರಿಗೆ ಹಾಗೂ ಕೊಳೆಗೇರಿ ವಾಸಿಗಳಿಗೆ ವಸತಿ ಹಾಗೂ ನಿವೇಶನ ಒದಗಿಸುವ ಮೂಲಕ ರಾಜ್ಯವು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುತ್ತದೆ. ಅದೇ ಸಮಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ನಿಗಮವೂ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ವಸತಿ ಮತ್ತು ನಗರ ಅಭಿವೃದ್ಧಿ (HUD) ಇಲಾಖೆಯು ರಾಜ್ಯದ ವಸತಿ ಪೂರೈಕೆಯ ಜವಾಬ್ದಾರಿ ಹೊಂದಿರುತ್ತದೆ. 1973ರಿಂದ ಪ್ರಾರಂಭವಾದ ರಾಜ್ಯದ ಈ ಎಲ್ಲ ನೀತಿ ಮತ್ತು ಯೋಜನೆಗಳು ಕರ್ನಾಟಕದ ಮುಂದಿನ ವಸತಿ ಕ್ರಾಂತಿಗೆ ಮೊದಲ ಮೆಟ್ಟಿಲಾಗಿವೆ ಎನ್ನುತ್ತಾರೆ ನಿವೃತ್ತ ಹಿರಿಯ ಐ.ಎ.ಎಸ್ ಅಧಿಕಾರಿಗಳಾದ ಡಾ. ಎಸ್.ಎಸ್. ಮೀನಾಕ್ಷಿ ಸುಂದರಮ್. ಕೇಂದ್ರದ ಸಾರ್ವಜನಿಕ ವಸತಿ ಹಣಕಾಸು ಸಂಸ್ಥೆ – ಹುಡ್ಡ್ಕೊ ಮತ್ತು ವಸತಿ ಅಭಿವೃದ್ಧಿ ಹಣಕಾಸು ನಿಗಮ (HDFC -1977) ಇತ್ಯಾದಿಗಳು ರಾಜ್ಯದ ವಸತಿ ಕ್ಷೇತ್ರಕ್ಕೆ ಬೇಕಾದ ಸಾಲ ಸೌಲಭ್ಯದ ಕೊರತೆ ನೀಗಿಸಲು ಸಹಾಯವಾಗುತ್ತವೆ. ಇವುಗಳ ಹೆಚ್ಚಿನಾಂಶ ಪ್ರಯೋಜನವು ಸರ್ಕಾರಿ ಸಿಬ್ಬಂದಿ ಮತ್ತು ಮಧ್ಯಮ ಹಾಗೂ ಹೆಚ್ಚು ಆದಾಯದ ವರ್ಗಕ್ಕೆ ದೊರೆತು, ಬಡವರ್ಗವು ಅಲಕ್ಷ್ಯಗೊಳ್ಳುತ್ತದೆ.
ಇದನ್ನೂ ಓದಿರಿ: ಮಹಿಳೆಯರ ಮೇಲಿನ ಹಿಂಸೆ; ಸಮಾಜಕ್ಕೆ ಕನ್ನಡಿ ಹಿಡಿದ ಭೀಕರ ಸಂಗತಿಗಳಿವು… (ಭಾಗ-1)
ಅಂತೆಯೇ, ಕೇಂದ್ರದ ನಿವೇಶನ ಮತ್ತು ಸೇವೆಗಳ ಯೋಜನೆ ಹಾಗೂ ಸಣ್ಣ ಮತ್ತು ಮಧ್ಯಮ ನಗರಗಳ ಸಮಗ್ರ ಅಭಿವೃದ್ಧಿ-1980, ಜಾಡಮಾಲಿಗಳಿಗಾಗಿ ಕಡಿಮೆ ವೆಚ್ಚದ ಶೌಚಾಲಯ-1981, ಗ್ರಾಮೀಣ ಬಡವರಿಗೆ ಇಂದಿರಾ ಅವಾಸ್ ಯೋಜನೆ-1985 ಮತ್ತು ನಗರ ಮೂಲಭೂತ ಸೇವೆಗಳು (UBS) – 1986ರ ಯೋಜನೆಗಳನ್ನು ಬಳಸಿಕೊಂಡು ಕೊಳೆಗೇರಿ ಮತ್ತು ನಗರ ವಸತಿಗೆ ಒತ್ತು ನೀಡುವ ಜೊತೆಗೆ 70ರ ದಶಕದಲ್ಲಿ ಪ್ರಾರಂಭವಾದ ತನ್ನ ಯೋಜನೆಗಳನ್ನು ಮುಂದುವರೆಸಿ, ರಾಜ್ಯವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಜನರನ್ನು ತಲುಪುವ ಪ್ರಯತ್ನ ಮಾಡುತ್ತದೆ.
1988ರ ಮೊದಲ ರಾಷ್ಟ್ರೀಯ ವಸತಿ ನೀತಿಯು ಸಂಪೂರ್ಣ ಅನುದಾನಿತ ಸಾರ್ವಜನಿಕ ವಸತಿ ನಿರ್ಮಾಣ ಯೋಜನೆಗಳನ್ನು ಹಂತಹಂತವಾಗಿ ಹಿಂತೆಗೆದು, ಸಾಲ-ಸಹಾಯಧನ ಯೋಜನೆಗಳಿಗೆ ಬದಲಾಗುವ ಸೂಚನೆಯನ್ನು ರಾಷ್ಟ್ರೀಯ ವಸತಿಬ್ಯಾಂಕ್ ಸ್ಥಾಪನೆ(NHB–87)ಯ ಮೂಲಕ ನೀಡುತ್ತದೆ.
80ರ ದಶಕದಲ್ಲಿನ ಕೇಂದ್ರದ ಯೋಜನೆಗಳನ್ನು ರಾಜ್ಯವು ಪರಿಣಾಮಕಾರಿಯಾಗಿ ಬಳಸಿಕೊಂಡರೂ, ಕೇಂದ್ರವು ರಾಜ್ಯಕ್ಕೆ ನಿಗದಿಸಿದ ಮನೆಗಳ ಸಂಖ್ಯೆ ಮತ್ತು ಮೊತ್ತವು ಕಡಿಮೆ ಇದ್ದು, ಜೊತೆಗೆ ಭೂ ಸ್ವಾಧೀನದ ಕ್ಲಿಷ್ಟ ಪ್ರಕ್ರಿಯೆ ಹಾಗೂ ಹೆಚ್ಚುತ್ತಿದ್ದ ನಗರೀಕರಣದಿಂದಾಗಿ ಬಡ, ದುರ್ಬಲ ವರ್ಗದ ವಸತಿ ಅವಶ್ಯಕತೆಗಳನ್ನು ತಲುಪಲಾಗುವುದಿಲ್ಲ. ಕೊಳೆಗೇರಿಗಳಲ್ಲಿ ಜನರು ಅಸಹನೀಯ ಪರಿಸ್ಥಿತಿಯಲ್ಲಿ ಜೀವಿಸಿದರೆ, ಇನ್ನಿತರ ನಗರವಾಸಿ ಬಡವರು ಮೂಲ ಸೌಕರ್ಯಗಳಿಲ್ಲದ ದುಬಾರಿ ಬಾಡಿಗೆ ಮನೆಗಳಲ್ಲಿ ಬದುಕುವುದಾಗಿತ್ತು. ಹಳ್ಳಿಗಳಲ್ಲಿ ನೀಡಿದ ಅತಿ ಕಿರಿದಾದ ಬೆಂಕಿ ಪೊಟ್ಟಣಗಳಂತಹ ಒಂದೇ ವಿನ್ಯಾಸದ ಮನೆಗಳಲ್ಲಿ ಅನೇಕರು ವಾಸಿಸದೆ ಖಾಲಿ ಉಳಿದ ಸಂದರ್ಭಗಳಿದ್ದವು. ಅಗತ್ಯ ಸೌಲಭ್ಯಗಳಿಲ್ಲದ ಈ ಮನೆಗಳು ಗುಣಮಟ್ಟದ ಕೊರತೆ ಹೊಂದಿದ್ದವೆಂದು ಮಾಧ್ಯಮಗಳು ವರದಿ ಮಾಡುತ್ತವೆ. ಅನೇಕ ಕಡೆ ದೂರದಲ್ಲಿ ನಿರ್ಮಾಣವಾದ ಮನೆಗಳಿಂದಾಗಿ ಸಾಮಾಜಿಕವಾಗಿ ಹಿಂದುಳಿದವರು ಮತ್ತೆ ಗ್ರಾಮದಿಂದ ದೂರವಾಗುತ್ತಾರೆ.
ಕರ್ನಾಟಕದಲ್ಲಿ 1990ರ ದಶಕವು ವಸತಿ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸುತ್ತದೆ. ಕೇಂದ್ರದ ಅನೇಕ ವಸತಿ ನೀತಿ ಹಾಗೂ ಯೋಜನೆಗಳ ಪ್ರಯೋಜನವನ್ನು ಬಳಸಿಕೊಳ್ಳುವ ಜೊತೆಗೆ ಹೆಚ್ಚು ಬಡವರನ್ನು ತಲುಪಲು ತನ್ನದೇ ವಸತಿ ಕಾರ್ಯಕ್ರಮಗಳನ್ನು ಮತ್ತು ಅದಕ್ಕೆ ಪೂರಕವಾದ ಸಾಂಸ್ಥಿಕ ಪುನರ್ರಚನೆಯನ್ನು ರಾಜ್ಯವು ಕೈಗೊಳ್ಳುತ್ತದೆ. ಜೊತೆಗೆ, ಕೇಂದ್ರದ ಕಟ್ಟಡ ಸಾಮಗ್ರಿ ಮತ್ತು ತಂತ್ರಜ್ಞಾನ ಪ್ರಚಾರ ಕೌನ್ಸಿಲ್‌ನ ರಚನೆಯು (BMTPC-1990) ವಸತಿಯಲ್ಲಿ ತಾಂತ್ರಿಕ ಅವಿಷ್ಕಾರಗಳನ್ನು ಹಾಗೂ ರಾಷ್ಟ್ರೀಯ ವಸತಿ ಮತ್ತು ನೆಲೆ ನೀತಿಯು (NHHP – 1994 ಮತ್ತು 1998) ನಿರ್ಮಾಣದಲ್ಲಿ ಸರ್ಕಾರದ ನೇರ ಭಾಗಿತ್ವದ ಬದಲು ಪೂರಕ ಪರಿಸರ ಒದಗಿಸುವ ವಿಚಾರಕ್ಕೆ ಪ್ರಾಮುಖ್ಯತೆ ನೀಡಿ, ಖಾಸಗಿ ಕಂಪನಿಗಳು ಭಾಗಿಯಾಗಲು ಅವಕಾಶಗಳನ್ನು ತೆರೆಯುತ್ತದೆ. 74ರ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಪರಿಣಾಮವಾಗಿ ನಗರ ಸ್ಥಳೀಯ ಸಂಸ್ಥೆಗಳು ಅನುಷ್ಠಾನದಲ್ಲಿ ಹೆಚ್ಚಿನ ಅಧಿಕಾರ ಮತ್ತು ಜವಾಬ್ದಾರಿಯನ್ನು ವಹಿಸುತ್ತವೆ. ಇದರೊಂದಿಗೆ ಅನೇಕ ಯೋಜನೆಗಳು (SHASHU, UBSP, NSDP, 2 ಮಿಲಿಯನ್ ವಸತಿ ಇತ್ಯಾದಿ) ಕೇಂದ್ರದಿಂದ ಜಾರಿಯಾಗುತ್ತವೆ. ಆದರೂ, ಕೇಂದ್ರದಿಂದ ರಾಜ್ಯಕ್ಕೆ ನೀಡುವ ಮನೆಗಳ ಸಂಖ್ಯೆ ಮತ್ತು ರಾಜ್ಯದ ವಸತಿ ಅವಶ್ಯಕತೆಯ ನಡುವೆ ಅಜಗಜಾಂತರವಿದ್ದು, ವಸತಿ ಕೊರತೆಯನ್ನು ತುಂಬಲಾಗುವುದಿಲ್ಲ. ಭೂ ಸ್ವಾಧೀನ ಹಾಗೂ ಕೊಳಚೆ ಪ್ರದೇಶಗಳ ತೆರವು ಪ್ರಕ್ರಿಯೆಗಳು ಕಾನೂನು ಅಡಚಣೆಗಳಲ್ಲಿ ಸಿಲುಕಿದ ಕಾರಣ ಸಮಯಕ್ಕೆ ಸರಿಯಾಗಿ ವಸತಿ ಒದಗಿಸುವ ಕೆಲಸವು ಇಲಾಖೆಗೆ ತಲೆಬೇನೆಯಾಗಿ ಪರಿಣಮಿಸುತ್ತದೆ.
ಕರ್ನಾಟಕ ಸರ್ಕಾರವು 1992ರಲ್ಲಿ ತನ್ನದೇ ಆಶ್ರಯ ವಸತಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಹೆಚ್ಚಿನ ಬಡವರನ್ನು ತಲುಪುವ ಪ್ರಯತ್ನವನ್ನು ಪ್ರಾರಂಭಿಸುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡಕ್ಕೂ ಅನ್ವಯಿಸುವ ಈ ಯೋಜನೆ ಕುರಿತು ಹಣ ದುರುಪಯೋಗ, ವಸತಿ ಇರುವವರಿಗೆ ಮತ್ತೆ ಮನೆಗಳ ಹಂಚಿಕೆ ಹಾಗೂ ಗುಣಮಟ್ಟದ ಕೊರತೆಯಂತಹ ಸುದ್ದಿಗಳು ವರದಿಯಾದರೂ, ವಸತಿ ಕ್ಷೇತ್ರದಲ್ಲಿ ಬಡವರಿಗೆ ಹೆಚ್ಚು ಪ್ರಾಮುಖ್ಯತೆ ದೊರೆತು, ಮುಂದಿನ ರಾಜ್ಯ ಸರ್ಕಾರದ ಅನೇಕ ವಸತಿ ಯೋಜನೆಗಳಿಗೆ ಪೂರ್ವಭಾವಿತನ ಒದಗಿಸಿದ ಹೆಗ್ಗಳಿಕೆ ಪಡೆಯುತ್ತದೆ. 2000ರ ನಂತರದಲ್ಲಿ ಈ ಯೋಜನೆಯು ವಾಜಪೇಯಿ ವಸತಿ ಯೋಜನೆಯಡಿ ಸೇರ್ಪಡೆಯಾಗುತ್ತದೆ. ಇದಲ್ಲದೆ, 1992-93ರಲ್ಲಿ ನಗರ ವಸತಿ ಯೋಜನೆಯನ್ನು ಸಹ ರಾಜ್ಯವು ಜಾರಿಮಾಡುತ್ತದೆ. 2000ರ ತನಕ ರಾಜ್ಯವು ವಿವಿಧ ಯೋಜನೆಗಳಡಿ 2,63,977 ಮನೆಗಳನ್ನು ನಿರ್ಮಾಣ ಮಾಡಲಾಯಿತೆಂದು ರಾಜೀವ್ ಗಾಂಧಿ ವಸತಿ ನಿಗಮವು 2022-2023ರ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಇದೇ ದಶಕದಲ್ಲಿ ರಾಜ್ಯವು ತನ್ನ ವಸತಿ ಅನುಷ್ಠಾನ ಸಂಸ್ಥೆಗಳನ್ನು ಪುನರ್ರಚನೆಗೊಳಿಸುತ್ತದೆ. ಮೊದಲಿನ ವಸತಿ ಮತ್ತು ನಗರ ಅಭಿವೃದ್ಧಿ ಇಲಾಖೆಯು ನವೆಂಬರ್ 1995ರಲ್ಲಿ ನಗರಾಭಿವೃದ್ಧಿಯಿಂದ ಬೇರ್ಪಟ್ಟು, ವಸತಿ ಇಲಾಖೆ ಎಂದು ಪ್ರತ್ಯೇಕವಾಗಿ, 3 ತನ್ನದೇ ಆದ ವಸತಿ ಕಾರ್ಯಕ್ರಮಗಳನ್ನು ಹಾಗೂ ಕೇಂದ್ರ ಪ್ರಾಯೋಜಿತ ವಸತಿ ಯೋಜನೆಗಳನ್ನು ಕರ್ನಾಟಕ ಗೃಹ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಮತ್ತು ರಿಯಲ್ ಎಸ್ಟೇಟ್ ಮೇಲ್ಮನವಿ ನ್ಯಾಯಮಂಡಳಿ ಮತ್ತು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಎಂಬ ಸಂಸ್ಥೆಗಳ ಮೂಲಕ ರಾಜ್ಯದ ವಸತಿ ಅಗತ್ಯಗಳನ್ನು ಪೂರೈಸುತ್ತಿದೆ. ಇದರೊಂದಿಗೆ ಪ್ರತಿ ಜಿಲ್ಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯಡಿಯ ನಗರಾಭಿವೃದ್ಧಿ ಪ್ರಾಧಿಕಾರಗಳು, ಪಟ್ಟಣ-ನಗರಗಳ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳು ಫಲಾನುಭವಿ ಆಯ್ಕೆ, ಬಡಾವಣೆ ನಿರ್ಮಾಣ/ನಿವೇಶನ ನೀಡಿಕೆ, ವಸತಿ ನಿರ್ಮಾಣ, ಉಸ್ತುವಾರಿ ಮತ್ತು ಹಂಚಿಕೆಯಲ್ಲಿ ಭಾಗಿಯಾಗುತ್ತಿವೆ.
ಇದನ್ನೂ ಓದಿರಿ: ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)
2000ರ ನಂತರದ ವಸತಿ ಕ್ಷೇತ್ರದ ಬೆಳವಣಿಗೆಯಲ್ಲಿ ಕರ್ನಾಟಕವು ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎನ್ನುತ್ತಾರೆ ರಾಜೀವ್ ಗಾಂಧಿ ವಸತಿ ನಿಗಮದ ನಿವೃತ್ತ ಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನಿವೃತ್ತ ಹಿರಿಯ ಐಎಎಸ್ ಅಧಿಕಾರಿಗಳಾದ ಎನ್. ಸಿವಸೈಲಮ್ ಇವರು. ಫಲಾನುಭವಿಗಳೇ ವಿನ್ಯಾಸಗೊಳಿಸುವ, ಸ್ವಂತವಾಗಿ/ಕಾಂಟ್ರ್ಯಾಕ್ಟರ್ ಮೂಲಕ ನಿರ್ಮಾಣ ಮಾಡಿಕೊಳ್ಳುವಂತಹ, ಸ್ಥಳೀಯ ಸಾಮಗ್ರಿಗಳನ್ನು ಬಳಸಬಹುದಾದ ಮತ್ತು ಒಡೆತನ ಬದಲಾವಣೆ ಸಾಧ್ಯತೆಯ ‘ಸ್ವ-ಸಹಾಯ’ ತತ್ವದ ವಸತಿ ಯೋಜನೆಗಳ ಶಕೆಯು ಅಂದಿನಿಂದ ಪ್ರಾರಂಭವಾಗಿ, ಸರ್ಕಾರ ಒದಗಿಸಿದ ಮನೆಗಳು ವ್ಯಕ್ತಿ ಹಾಗೂ ಕುಟುಂಬಗಳಿಗೆ ವಿಳಾಸ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸುವಲ್ಲಿ ಮಹತ್ತರ ಪಾತ್ರ ವಹಿಸಿತು ಎನ್ನುತ್ತಾರೆ. ಬೇರೆಬೇರೆ ಪ್ರದೇಶದ ಮಣ್ಣು ಮತ್ತು ಹವಾಮಾನಕ್ಕೆ ಹೊಂದುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕೈಗೆಟಕುವ, ಸುಸ್ಥಿರವಾದ ಪರಿಸರಸ್ನೇಹಿ ಮನೆಗಳನ್ನು ನೀಡಲಾದ ಬಗ್ಗೆ ತಿಳಿಸುವ ಇವರು, ರಾಜೀವ್ ಗಾಂಧಿ ನಿಗಮವು ದೊಡ್ಡ ಸಂಖ್ಯೆಯಲ್ಲಿ ಭೂಸ್ವಾಧೀನ ಮಾಡಿಕೊಂಡು ಬಡವರಿಗೆ ವಸತಿ ನೀಡುವಲ್ಲಿ ಅನೇಕ ಶಾಸಕರು ಹಾಗೂ ಮಂತ್ರಿಗಳು ಗುರುತರ ಜವಾಬ್ದಾರಿ ವಹಿಸಿಕೊಂಡಿದ್ದನ್ನು ಸಹ ನೆನಪಿಸಿಕೊಳ್ಳುತ್ತಾರೆ. ಮಹಿಳೆಯ ಹೆಸರಿಗೆ ಮನೆ ನೀಡಬೇಕೆಂಬ ನಿಯಮವು ಮಹಿಳೆಯರಿಗೆ ನೆಲೆಯ ಭದ್ರತೆ ಒದಗಿಸಿತು ಎನ್ನುತ್ತಾರೆ ಎನ್. ಸಿವಸೈಲಮ್.
ಕೇಂದ್ರದ ‘ಸಹಭಾಗಿತ್ವದಲ್ಲಿ ಕೈಗೆಟಕುವ ವಸತಿ’ (AHP) ನೀತಿಯು ಪರಿಷ್ಕರಣೆ ಹೊಂದಿದ ಹಿನ್ನೆಲೆಯಲ್ಲಿ, ಕರ್ನಾಟಕವು ಕೈಗೆಟಕುವ ವಸತಿ ನೀತಿ 2013ಅನ್ನು ಹೊರತರುತ್ತದೆ. ನಂತರ ಕೇಂದ್ರದ ಪ್ರಧಾನಮಂತ್ರಿ ಅವಾಸ್ ಯೋಜನೆ-2015ಯ ಹಿನ್ನೆಲೆಯಲ್ಲಿ ಮತ್ತೆ ತನ್ನ ನಗರ ವಸತಿ ನೀತಿ 2016ಅನ್ನು ಹೊರತಂದು, ವಸತಿಯ ಕನಿಷ್ಟ ಅಳತೆ ಮತ್ತು ಬಡತನ ರೇಖೆಯಡಿಯ ಕುಟುಂಬದ ಆದಾಯವನ್ನು ಪರಿಷ್ಕರಿಸಿ, ಫಲಾನುಭವಿಗಳ ‘ಕೈಗೆಟಕಿಸಿಕೊಳ್ಳುವ ಸಾಮರ್ಥ್ಯ’ದ ಸೂಚಕಗಳನ್ನು ನಿರ್ಣಯಿಸುತ್ತದೆ.
ಇದಲ್ಲದೆ, ಕೇಂದ್ರದ 2005ರ ಜವಾಹರ್‌ಲಾಲ್ ನೆಹರೂ ರಾಷ್ಟ್ರೀಯ ನಗರ ಪುನಶ್ಚೇತನ ಮಿಷನ್ (JNNURM) ಅಡಿಯಲ್ಲಿ ಕರ್ನಾಟಕವು ಒಟ್ಟು 14 ಯೋಜನೆಗಳನ್ನು ಬೆಂಗಳೂರು ನಗರದ ಕೊಳೆಗೇರಿಗಳ ಅಭಿವೃದ್ಧಿಗೂ ಹಾಗೂ 4 ಯೋಜನೆಗಳನ್ನು ಮೈಸೂರು ನಗರಕ್ಕೆ ಪಡೆದುಕೊಳ್ಳುತ್ತದೆ. ನಂತರದಲ್ಲಿ ವಸತಿಗಾಗಿ ಬಡ್ಡಿ ಮೇಲಿನ ಸಹಾಯಧನ ಯೋಜನೆ, ರಾಜೀವ್ ಅವಾಸ್, ರಾಜೀವ್ ರಿಣ್ ಯೋಜನೆಗಳನ್ನು ರಾಜ್ಯವು ತನ್ನ ವಸತಿ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸುತ್ತದೆ. ಈ ಎಲ್ಲ ಯೋಜನೆಗಳು ಮತ್ತು 1985ರ ಇಂದಿರಾ ಅವಾಸ್ ಯೋಜನೆಯು 2015ರಲ್ಲಿ ಪ್ರಾರಂಭವಾದ ಕೇಂದ್ರದ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ (ಗ್ರಾಮೀಣ ಮತ್ತು ನಗರ) ಸೇರ್ಪಡೆಯಾಗುತ್ತವೆ.

ಕರ್ನಾಟಕವು 2000ದ ನಂತರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಕಡಿಮೆ ಅದಾಯ ಹೊಂದಿದವರಿಗೆ ತನ್ನದೇ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತದೆ; ಬಸವ ವಸತಿ (ಗ್ರಾ), ವಾಜಪೇಯಿ ನಗರ ವಸತಿ ಮತ್ತು ನಿವೇಶನ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ (ಗ್ರಾ ಮತ್ತು ನಗರ), ನನ್ನ ಮನೆ ಯೋಜನೆ (ಬೆಂಗಳೂರು), ಇಂದಿರಾ ಗ್ರಾಮೀಣ ವಸತಿ ಯೋಜನೆ, ಆಶ್ರಯ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳು (ಗ್ರಾ ಮತ್ತು ನಗರ), ದೇವರಾಜ್ ಅರಸ್ ವಿಶೇಷ ವಸತಿ (ಗ್ರಾ ಮತ್ತು ನಗರ), ನೆರೆ ಸಂತ್ರಸ್ಥರ ಪುನರ್ವಸತಿ, ಪೌರಕಾರ್ಮಿಕ ಗೃಹಭಾಗ್ಯ, ಮುಖ್ಯ ಮಂತ್ರಿಗಳ ನಿವೇಶನ (ಗ್ರಾ ಮತ್ತು ನಗರ) ಹಾಗೂ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಇದರೊಂದಿಗೆ 2015ರಲ್ಲಿ ಕೇಂದ್ರದ ಪ್ರಧಾನಮಂತ್ರಿ ಅವಾಸ್ ಯೋಜನೆಯು ನಗರ ಮತ್ತು ಗ್ರಾಮಗಳಿಗೆ ಜಾರಿಯಾಗಿ, ರಾಜ್ಯದ ವಾಜಪೇಯಿ ವಸತಿ, ಡಾ. ಬಿ. ಆರ್. ಅಂಬೇಡ್ಕರ್ ನಿವಾಸ, ದೇವರಾಜ್ ಅರಸ್ ವಿಶೇಷ ವಸತಿ ಹಾಗೂ ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಗಳು ಕೇಂದ್ರದ ಪ್ರಧಾನಮತ್ರಿ ಅವಾಸ್ ಯೋಜನೆಯೊಂದಿಗೆ ಸಮನ್ವಿತಗೊಂಡು ಅನುಷ್ಠಾನಗೊಳ್ಳುತ್ತಿವೆ. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ: ಕರ್ನಾಟಕವು ಈ ಸಂಸ್ಥೆಯನ್ನು 2000ರಲ್ಲಿ ಸ್ಥಾಪಿಸಿ ರಾಜ್ಯ ಸರ್ಕಾರದ ಸಂಪೂರ್ಣ ಸ್ವಾಮ್ಯದ ಕಂಪೆನಿಯಾಗಿ ನೋಂದಾಯಿಸುವುದು ವಸತಿ ಕ್ಷೇತ್ರದ ಪ್ರಮುಖ ತೀರ್ಮಾನವಾಗಿರುತ್ತದೆ. ಈ ಸಂಸ್ಥೆಯ ಉಗಮದಿಂದ ಗ್ರಾಮೀಣ ಪ್ರದೇಶದ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರೀಕೃತ ಗಮನ ದೊರೆಯುವಂತಾಗುತ್ತದೆ. ಅಂದಿನಿಂದ ಗ್ರಾಮದ ಆರ್ಥಿಕ-ಸಾಮಾಜಿಕವಾಗಿ ಹಾಗೂ ನಗರದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಜಾರಿಗೊಳಿಸಿರುವ ರಾಜ್ಯದ ಎಲ್ಲ ವಸತಿ ಯೋಜನೆಗಳನ್ನು ನಿಗಮವು ಅನುಷ್ಠಾನಗೊಳಿಸುತ್ತಿದೆ. ಇದರೊಂದಿಗೆ, 2015ರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಜಾರಿಯಾದ ಕೇಂದ್ರದ ಪ್ರಧಾನಮಂತ್ರಿ ಅವಾಸ್ ಯೋಜನೆಯು ಉಸ್ತುವಾರಿ ಸಂಸ್ಥೆಯಾಗಿದ್ದು, ಅದನ್ನು ನಗರ ಸ್ಥಳೀಯ ಸಂಸ್ಥೆಗಳು, ಪ್ರಾಧಿಕಾರಗಳು ಮತ್ತು ಕೊಳೆಗೇರಿ ಮಂಡಳಿ ಮೂಲಕ ಅನುಷ್ಠಾನಗೊಳಿಸುತ್ತಿದೆ.
ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾಸಾಹೇಬರ ಒಳನೋಟ (ಭಾಗ-1)
2000ದಿಂದ ಮಾರ್ಚ್ 2024ರ ತನಕದ ರಾಜ್ಯದ ಈ ಮೇಲಿನ ಎಲ್ಲ ಯೋಜನೆ ಮತ್ತು ಕೇಂದ್ರದ ಪ್ರಧಾನ ಮಂತ್ರಿ ಅವಾಸ್ ಯೋಜನೆಗಳಡಿ ಒಟ್ಟು 49,64,611 ಮನೆಗಳನ್ನು ನೀಡಿರುತ್ತದೆ. ಇದರಲ್ಲಿ ಸುಮಾರು 91%ರಷ್ಟು ಗ್ರಾಮೀಣ ಹಾಗೂ 9%ರಷ್ಟು ಮನೆಗಳು ನಗರಗಳಲ್ಲಿ ನಿರ್ಮಾಣವಾಗಿರುತ್ತವೆ. ನಿಗಮದ ಪ್ರಾರಂಭದಿಂದ ಸೆಪೆಂಬರ್ 2024ರತನಕ 1,98,308 ನಿವೇಶನಗಳನ್ನು ಗ್ರಾಮೀಣ ಹಾಗೂ 1,51,173 ನಿವೇಶನಗಳನ್ನು ನಗರ ಪ್ರದೇಶದ ನಿವೇಶನ ರಹಿತರಿಗೆ ನೀಡಲಾಗಿದೆ ಎಂದು ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿರುತ್ತಾರೆ. ಇದಲ್ಲದೆ, ಫಲಾನುಭವಿಯು ಉದ್ಯೋಗ ಖಾತ್ರಿ ಹಾಗೂ ಸ್ವಚ್ಚ ಭಾರತ ಯೋಜನೆಗಳಡಿ ತನ್ನ ಮನೆ ನಿರ್ಮಾಣಕ್ಕೆ 90 ದಿನಗಳ ಕೂಲಿಯನ್ನು ಮತ್ತು ಶೌಚಾಲಯಕ್ಕೆ ಧನ ಸಹಾಯವನ್ನು ಗ್ರಾಮ ಪಂಚಾಯಿತಿಗಳಿಂದ ಪಡೆದುಕೊಳ್ಳಬಹುದಾಗಿದೆ.
ನಿಗಮವು ವಿವಿಧ ವಸತಿ ಯೋಜನೆಗಳಡಿ ನಿರ್ಮಾಣಗೊಂಡ ಬಡಾವಣೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒಟ್ಟು 44 ಪ್ರದೇಶಗಳಿಗೆ ಅನುಮೋದನೆ ನೀಡಿದ್ದು ಕೆಲಸಗಳು ಚಾಲ್ತಿಯಲ್ಲಿರುವುದಾಗಿ ಹೇಳಿದೆ. ಬಹಳ ಪರಿಣಾಮಕಾರಿಯಾದ ವೆಬ್‌ಸೈಟ್ ನಿರ್ವಹಣೆ ಮಾಡುತ್ತಿರುವ ನಿಗಮದ ಮಾಹಿತಿ ದಾಖಲಾತಿಯ ನಿರ್ವಹಣೆ ಗುಣಮಟ್ಟದ್ದಾಗಿದೆ.
ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ)ಯು ಕೆಹೆಚ್‌ಬಿ ಕಾಯ್ದೆ 1962ರಡಿ ಪ್ರಾರಂಭವಾಗಿದ್ದು, ರಾಜ್ಯದ ವಸತಿ ಕಲ್ಪಿಸುವ ಪ್ರಮುಖ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಈ ಮಂಡಳಿಯು ಮುಖ್ಯವಾಗಿ ನಗರ/ಪಟ್ಟಣಗಳಲ್ಲಿ ವಾಸಿಸುತ್ತಿರವ ಮಧ್ಯಮ ಹಾಗೂ ಹೆಚ್ಚು ಆದಾಯವುಳ್ಳ ಕುಟುಂಬಗಳಿಗೆ ವಸತಿ ಮತ್ತು ನಿವೇಶನಗಳನ್ನು ತನ್ನ ಸ್ವಂತ ಸಂಪನ್ಮೂಲ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಮೂಲಕ ದೊರಕಿಸುತ್ತಿದೆ. 2000ಕ್ಕೂ ಮೊದಲು ಇದು ಗ್ರಾಮೀಣ ಮತ್ತು ನಗರವಾಸಿ ಬಡವರ ವಸತಿ ಯೋಜನೆಗಳನ್ನು ಸಹ ಅನುಷ್ಠಾನಗೊಳಿಸಿರುತ್ತದೆ. ಮಂಡಳಿಯು ತನ್ನ ಪ್ರಾರಂಭದಿಂದ ರಾಜ್ಯದ ಹೆಚ್ಚಿನಾಂಶ ವಸತಿ ಮತ್ತು ನಿವೇಶನಗಳನ್ನು ಹಂಚಿಕೆ ಮಾಡಿದ್ದು, 2004ರ ನಂತರದ ಮಾಹಿತಿಯು ಮಾತ್ರ ದೊರಕಿರುತ್ತದೆ. 2004ರಿಂದ ಸೆಪ್ಟೆಂಬರ್ 2024ರಲ್ಲಿ ಒಟ್ಟು 70,206 ಮನೆಗಳನ್ನು ಮತ್ತು 3,786 ಅಪಾರ್ಟ್ಮೆಂಟ್‌ಗಳನ್ನು ನೀಡಲಾಗಿದೆಯೆಂದೂ, ಜೊತೆಗೆ ಒಟ್ಟು 1,31,495 ನಿವೇಶಗಳನ್ನು ಅಭಿವೃದ್ಧಿಗೊಳಿಸಿದ್ದು, ಅದರಲ್ಲಿ ಶೇ.90ಕ್ಕೂ ಹೆಚ್ಚು ನಿವೇಶಗಳನ್ನು ಹಂಚಿಕೆ ಮಾಡಲಾಗಿರುವ ಬಗ್ಗೆ ಮಂಡಳಿಯ ಸಂಬಂಧಿತ ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ: ಇದು 1973ರಲ್ಲಿ ಕರ್ನಾಟಕ ಪ್ರದೇಶಗಳ (ಸುಧಾರಣೆ ಮತ್ತು ತೆರವು) ಕಾಯಿದೆ 1973ರ ನಿಬಂಧನೆಯಡಿ 1975ರಲ್ಲಿ ಸ್ಥಾಪಿತವಾಗಿದೆ. ಮಂಡಳಿಯು ನಡೆಸಿದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಒಟ್ಟು 2,989 ಕೊಳಚೆ ಪ್ರದೇಶಗಳನ್ನು ಗುರುತಿಸಿದ್ದು, ಇದರಲ್ಲಿ 2,835 ಪ್ರದೇಶಗಳನ್ನು ಕೊಳೆಗೇರಿಗಳೆಂದು ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲಿ 410 ಕೊಳೆಗೇರಿಗಳು ಇರುವುದಾಗಿ ಘೋಷಿಸಲಾಗಿದೆ. ಈ ಮಂಡಳಿಯು ಪ್ರಾರಂಭದಿಂದಲೂ ಮೇಲೆ ವಿವರಿಸಿದ ಕೇಂದ್ರ ಮತ್ತು ರಾಜ್ಯವು ಜಾರಿ ಮಾಡಿದ ಕೊಳೆಗೇರಿ ಸುಧಾರಣೆ, ವಸತಿ ಮತ್ತು ನಿವೇಶನ ಸಂಬಂಧಿತ ಯೋಜನೆಗಳನ್ನು ಅನುಷ್ಠಾನ ಮಾಡುವ ಜವಾಬ್ದಾರಿ ಹೊಂದಿರುತ್ತದೆ. ಇಲ್ಲಿಯವರೆಗೆ ಮಂಡಳಿಯಿಂದ ವಿವಿಧ ರಾಜ್ಯ ಮತ್ತು ಕೇಂದ್ರ ಯೋಜನೆಗಳಿಂದ ಒಟ್ಟು 1,67,362 ಮನೆಗಳನ್ನು ಒದಗಿಸಲಾಗಿದೆ ಎಂದು ಮಂಡಳಿಯ ಸಂಬಂಧಿತ ಅಧಿಕಾರಿಗಳು ತಿಳಿಸಿರುತ್ತಾರೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ರಾಜ್ಯಾದ್ಯಂತ 1,138 ಕೊಳೆಗೇರಿಗಳಲ್ಲಿ ಮೂಲಭೂತ ಸೌಕರ್ಯ ಮತ್ತು 1,80,253 ಮನೆಗಳಿಗೆ ಅನುಮೋದನೆ ದೊರಕಿದೆಯೆಂದು ಇವರ 2022-23ರ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.

ರಿಯಲ್ ಎಸ್ಟೇಟ್ ಮೇಲ್ಮನವಿ ನ್ಯಾಯಮಂಡಳಿ ಮತ್ತು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ): ಈ ಪ್ರಾಧಿಕಾರವನ್ನು 2017ರಲ್ಲಿ ಸ್ಥಾಪಿಸಲಾಗಿದೆ. 500 ಚ.ಮೀ ಅಥವಾ 8 ಅಪಾರ್ಟ್‌ಗಿಂತ ಹೆಚ್ಚಿರುವ ಯೋಜನೆಗಳನ್ನು ಇದರಡಿ ನೋಂದಾಯಿಸಬೇಕು. ಇಂತಹ ಯೋಜನೆಗಳ ಭೂಮಿ/ವಸತಿ ಸಂಬಂಧಿಸಿದ ಕಾನೂನು ಪಾಲನೆ, ದೂರು ದಾಖಲೆ, ಸರ್ಕಾರದ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವುದು ಈ ಪ್ರಾಧಿಕಾರದ ಜವಾಬ್ದಾರಿಯಾಗಿದೆ.
ಮುನ್ನೋಟ
ಕೇಂದ್ರದ ಯೋಜನೆಗಳನ್ನಷ್ಟೇ ಅವಲಂಬಿಸದೆ ತನ್ನದೇ ಯೋಜನೆಗಳನ್ನು ರೂಪಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಹಾಗೂ ಕಡಿಮೆ ಆದಾಯದ ವರ್ಗಗಳನ್ನು ತಲುಪಲು ನಡೆಸಿದ ರಾಜ್ಯದ ಪ್ರಯತ್ನಗಳನ್ನು ಅಲ್ಲಗೆಳೆಯುವಂತಿಲ್ಲ. 70ರ ದಶಕದಿಂದ ಮಾರ್ಚ್ 2024ರತನಕ ರಾಜ್ಯದಲ್ಲಿ ಈ ವರ್ಗಕ್ಕೆ ನೀಡಿದ ಒಟ್ಟು ಮನೆಗಳ ಕೇವಲ 6% ಮನೆಗಳನ್ನು 2000ಕ್ಕೂ ಮೊದಲು ನೀಡಲಾಗಿದ್ದರೆ, 2000ದ ನಂತರದಲ್ಲಿ ನೀಡಿರುವ ಮನೆಗಳು ಸುಮಾರು 94% ಆಗಿದ್ದು, ಇದು ಕಳೆದ 24 ವರ್ಷಗಳಲ್ಲಿನ ವಸತಿ ಕ್ಷೇತ್ರದಲ್ಲಾದ ಬೆಳವಣಿಗೆಯ ಏರ್ಮಡಿಯನ್ನು ಸೂಚಿಸುತ್ತದೆ. ಈ ಏರ್ಮಡಿಗೆ ರಾಜ್ಯದ ಸಕ್ರಿಯ ಪಾತ್ರವು ಮುಖ್ಯ ಕಾರಣವಾಗಿದೆ. 2022-23ರ ರಾಜೀವ್ ಗಾಂಧಿ ನಿಗಮದ ವಾರ್ಷಿಕ ವರದಿ ಪ್ರಕಾರ ವಸತಿ ಸಂಸ್ಥೆಗಳಿಗೆ ಅನುಮೋದಿಸಿದ ಒಟ್ಟು ಮೊತ್ತವು ಸುಮಾರು 29,620 ಕೋಟಿಗಳಿದ್ದು, ಇದರಲ್ಲಿ 26% ಮಾತ್ರ ಕೇಂದ್ರದ ಭಾಗವಾಗಿದ್ದರೆ, ಇನ್ನುಳಿದ 73% ರಾಜ್ಯ ಮತ್ತು ಫಲಾನುಭವಿಗಳ ಭಾಗವಾಗಿದ್ದು, ಇದು ರಾಜ್ಯವು ಹೆಚ್ಚು ಸಂಪನ್ಮೂಲವನ್ನು ವಸತಿ ಕ್ಷೇತ್ರದಲ್ಲಿ ತೊಡಗಿಸಿರುವುದನ್ನು ಸೂಚಿಸುತ್ತದೆ. ಸರ್ಕಾರದ ಪ್ರಯತ್ನಗಳ ಜೊತೆಗೆ ಹಲವು ಸ್ವಯಂ ಸೇವಾಸಂಸ್ಥೆಗಳ ಮತ್ತು ಕೊಳೆಗೇರಿ ಹೋರಾಟ ಸಂಘಟನೆಗಳ ಕೊಡುಗೆಯನ್ನು ಮರೆಯುವಂತಿಲ್ಲ. ಗೃಹಮಂಡಳಿ ಮತ್ತು ನಗರ ಪ್ರಾಧಿಕಾರಗಳ ಮೂಲಕ ಮಧ್ಯಮ ಹಾಗೂ ಹೆಚ್ಚು ಆದಾಯದ ವರ್ಗಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಸತಿ ಪೂರೈಕೆಯಾಗಿದ್ದು, ನಗರಗಳಲ್ಲಿ ವಿಸ್ತಾರವಾಗಿ ಬೆಳೆದ ಬಡಾವಣೆಗಳು ವಸತಿ ಅಭಿವೃದ್ಧಿಗೆ ಸಾಕ್ಷಿಯಾಗಿವೆ.
ಇದನ್ನೂ ಓದಿರಿ: ಅಸ್ಪೃಶ್ಯರು- ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?
90ರ ದಶಕದ ಹಿಂದಿನ ಕೊಳೆಗೇರಿಗಳ ವಾಸದ ಸ್ಥಿತಿಗೆ ಹೋಲಿಸಿದಾಗ, ಇಂದಿನ ಕೊಳೆಗೇರಿಗಳ ಸ್ಥಿತಿಯು ಹೆಚ್ಚು ಸುಧಾರಣೆ ಹೊಂದಿರುವುದಾಗಿ ಹಿರಿಯ ಕೊಳೆಗೇರಿ ವಾಸಿಗಳು ಹೇಳುತ್ತಾರೆ. ಗ್ರಾಮಗಳಲ್ಲಿ ಹಿಂದಿದ್ದ ಹೆಚ್ಚಿನ ಗುಡಿಸಲುಗಳು ಕ್ರಮೇಣವಾಗಿ ಕಾಣೆಯಾಗುತ್ತಿರುವುದು ಹೆಮ್ಮೆಯ ಸಂಗತಿಯಾದರೂ, ದಿನೇ ದಿನೇ ಹೆಚ್ಚುತ್ತಿರುವ ವಸತಿ ಅವಶ್ಯಕತೆಯನ್ನು ತಲುಪಲಾಗಿಲ್ಲ ಎನ್ನುವುದು ವಾಸ್ತವ. ನಗರ ವಲಸಿಗರ, ಕಡಿಮೆ ಆದಾಯದವರ ಮತ್ತು ಕೊಳೆಗೇರಿ ವಾಸಿಗರ ಸ್ಥಿತಿಯು ಇನ್ನೂ ಸುಧಾರಿಸಬೇಕಾಗಿದೆ. ತೆರವಿನಿಂದ ಪುನರ್ವಸತಿಗೊಂಡ ಕೊಳೆಗೇರಿವಾಸಿಗಳ ಕಷ್ಟಗಳು ಇನ್ನೂ ಮುಗಿಯದಾಗಿವೆ. ಹೆಚ್ಚುತ್ತಿರುವ ನಗರದ ಜನಸಂಖ್ಯೆ, ಸ್ಥಳದ ಕೊರತೆ, ಕ್ಲಿಷ್ಟ ಭೂಸ್ವಾಧೀನ ಪ್ರಕ್ರಿಯೆ, ನ್ಯಾಯಾಲಯ ಪ್ರಕರಣಗಳಂತಹ ಸವಾಲುಗಳು ನಗರದ ವಸತಿ ಪ್ರಗತಿಗೆ ಅಡ್ಡಿಯಾದರೆ, ಗ್ರಾಮಗಳಲ್ಲಿ ನಿವೇಶನ, ವಲಸೆ ಮತ್ತು ಒಡೆದು ಹೆಚ್ಚುತ್ತಿರುವ ಕುಟುಂಬಗಳು ಸವಾಲು ಒಡ್ಡಿವೆ. ಇದರೊಂದಿಗೆ, ದೂರದೃಷ್ಟಿಯುಳ್ಳ ನೀತಿ, ಸರಳ ನಿಯಮಗಳು ಮತ್ತು ರಾಜಕೀಯ ದೃಢ ಸಂಕಲ್ಪಗಳ ಕೊರತೆಯು ಈ ಸವಾಲುಗಳನ್ನು ಇನ್ನೂ ಜಟಿಲಗೊಳಿಸಿವೆ.
ಜನಸಂಖ್ಯೆ ಏರಿದಂತೆ ವಸತಿ ಕೊರತೆಯೂ ಏರುತ್ತಿದೆ. 1971ರಲ್ಲಿ 109 ಮಿಲಿಯನ್ ಇದ್ದ ಜನಸಂಖ್ಯೆಯು 2011ರಲ್ಲಿ 377 ಮಿಲಿಯನ್‌ಗೆ ಏರಿದ್ದು, 2030ಕ್ಕೆ ಇದು 600 ಮಿಲಿಯನ್ ಆಗಬಹುದೆಂಬ ಅಂದಾಜು ಮಾಡಲಾಗಿದೆ. ನಗರ ವಸತಿ ಕೊರತೆಯ ತಾಂತ್ರಿಕ ಸಮಿತಿ 2012ರ ಪ್ರಕಾರ ಭಾರತದ ಒಟ್ಟಾರೆ ವಸತಿ ಕೊರತೆ 18.78 ಮಿಲಿಯನ್ ಯುನಿಟ್‌ಗಳಿದ್ದು, ಕರ್ನಾಟಕದಲ್ಲಿ 1.02 ಮಿಲಿಯನ್ ವಸತಿ ಯುನಿಟ್‌ಗಳ ಕೊರತೆ ಇರುವುದಾಗಿ ತಿಳಿಸಿದೆ. ವೇಗದ ನಗರೀಕರಣವು ಕೊಳೆಗೇರಿ ಜನಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಕರ್ನಾಟಕದಲ್ಲಿ 40.50 ಲಕ್ಷ ಕೊಳೆಗೇರಿ ಜನಸಂಖ್ಯೆ ಇದ್ದು, ಅದರಲ್ಲಿ 49% ಪರಿಶಿಷ್ಟ ಜಾತಿ-ಪಂಗಡವೆಂದು ಹೇಳಲಾಗಿದೆ. 2001-2011ರ ಜನಗಣತಿ ಪ್ರಕಾರ, ಗ್ರಾಮೀಣ ಜನಸಂಖ್ಯೆಯು 7.40% ಏರಿದ್ದರೆ, ನಗರದ ಸಂಖ್ಯೆಯು 31.54% ಏರಿರುತ್ತದೆ. ರಾಜೀವ್ ಗಾಂಧಿ ವಸತಿ ನಿಗಮದ 2018ರ ಸಮೀಕ್ಷೆ ಪ್ರಕಾರ 19 ಲಕ್ಷ ವಸತಿ ರಹಿತ ಬಡ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ ಇರುವುದಾಗಿ ಹೇಳಿದೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯದ ವಿಶೇಷ ಮತ್ತು ನಿರಂತರ ಪ್ರಯತ್ನಗಳ ಹೊರತಾಗಿಯೂ ‘ಎಲ್ಲರಿಗೂ ಸಮರ್ಥ ಮತ್ತು ಕೈಗೆಟಕುವ ವಸತಿ’ಯನ್ನು ದೊರಕಿಸಲು ಚೌಕಟ್ಟಿನಾಚೆಗಿನ ಚಿಂತನೆ ಮತ್ತು ಕ್ರಮಗಳ ಅಗತ್ಯವಿದೆ. ಸರ್ಕಾರವು ತನ್ನ ರಾಜಕೀಯ ದೃಢಸಂಕಲ್ಪದಿಂದ ‘ಮನೆಯೊಂದು ಎಲ್ಲರ ಹಕ್ಕು’ ಎಂಬುದನ್ನು ಕಾನೂನುಬದ್ಧಗೊಳಿಸಿ, ಅದನ್ನು ಸಾಧಿಸುವಲ್ಲಿ ಬದ್ಧತೆ ತೋರಬೇಕಿದೆ. ವಸತಿ ಸವಾಲುಗಳನ್ನು ಗಮನದಲ್ಲಿರಿಸಿ ದೂರದೃಷ್ಟಿಯುಳ್ಳ ನೀತಿ, ನಿಯಮ ಮತ್ತು ಯೋಜನೆಗಳನ್ನು ಕೈಗೊಳ್ಳಬೇಕಾಗಿದೆ. ಬಹುಮುಖಿ ವಿಧಾನ, ಸುಸ್ಥಿರತೆಯ ತಂತ್ರಗಳು ಹಾಗೂ ಸ್ಥಳೀಯತೆಗೆ ಒಗ್ಗುವ ತಂತ್ರಜ್ಞಾನದ ಅಳವಡಿಕೆ ಮೂಲಕ ನಗರದ ಮೂಲ ಸೌಕರ್ಯ ಸುಧಾರಣೆ ಮತ್ತು ಸಮಾಜದ ಎಲ್ಲ ವರ್ಗಗಳು ಸುಲಭವಾಗಿ ವಸತಿ ಹೊಂದುವಂತೆ ಮಾಡಬೇಕಾಗಿದೆ. ಇವೆಲ್ಲಾ ಪ್ರಯತ್ನಗಳು ಈಗಾಗಲೇ ನಡೆದಿವೆಯೆಂದು ಕೆಲವು ಅಧಿಕಾರಿಗಳು ಭಾವಿಸುತ್ತಾರೆ. ಹಾಗಾದರೆ, ಎಲ್ಲರಿಗೂ ಸಮರ್ಥ ಮತ್ತು ಕೈಗೆಟಕುವ ವಸತಿ ಇನ್ನೂ ಸಿಕ್ಕಿಲ್ಲವೇಕೆ? ಎಡವಿರುವುದೆಲ್ಲಿ ಎಂಬ ಸ್ವ-ವಿಮರ್ಶಾತ್ಮಕ ವಿಶ್ಲೇಷಣೆ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಕೆಲವು ಕೊಳಗೇರಿ ವಾಸಿಗರ ಮತ್ತು ಗ್ರಾಮೀಣ ಸ್ವಸಹಾಯ ಸಂಘಗಳ ಹಾಗೂ ತಜ್ಞರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯಗಳನ್ನಾಧರಿಸಿದ ಒಂದಿಷ್ಟು ಮುಂದಿನ ನಡೆಗಳು ಹೀಗಿವೆ:
ವಸತಿಯನ್ನು ಯೋಜಿಸುವಾಗ ಆರ್ಥಿಕ-ಸಾಮಾಜಿಕವಾಗಿ ಹಿಂದುಳಿದ ಹಾಗೂ ಕಡಿಮೆ ಅದಾಯದ ವರ್ಗಗಳಿಗೆ ಮತ್ತು ಕೊಳೆಗೇರಿ ಮುಕ್ತ ಆದ್ಯತೆಯ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ನಡೆಸಬೇಕಾಗಿದೆ. ನಿವೇಶನರಹಿತರಿಗೆ ಅತಿ ಶೀಘ್ರವಾಗಿ ನಿವೇಶನ ದೊರಕಿಸಲು ಭೂಸ್ವಾಧೀನ ನಿಯಮಗಳನ್ನು ಸಡಿಲಗೊಳಿಸಿ ಜಿಲ್ಲಾಧಿಕಾರಿಗಳಿಗೆ ಸ್ವತಂತ್ರ ಮತ್ತು ತುರ್ತು ತೀರ್ಮಾನ ಕೈಗೊಳ್ಳುವ ಅವಕಾಶವಿರಬೇಕು. ವಿವಿಧ ಸಂಸ್ಥೆಗಳ ನಡುವೆ ಸಮನ್ವಯತೆ ಅವಶ್ಯಕತೆ ಎನಿಸಿದರೂ, ಅದರಿಂದಾಗುವ ವಿಳಂಬವನ್ನು ತಡೆಯಲು ಸೂಕ್ತ ವ್ಯವಸ್ಥೆ ಮತ್ತು ಫಲಾನುಭವಿಗಳಿಗೆ ಒಂದೇ ಸೂರಿನಡಿ (ಏಕಗವಾಕ್ಷಿ) ಸೇವೆಗಳನ್ನು ಒದಗಿಸುವುದು ಮುಖ್ಯವಿದೆ. ಅವಶ್ಯವಿರುವ ಪ್ರತಿಕುಟುಂಬಗಳ ಮತ್ತು ಸಮುದಾಯದ ಮೂಲಭೂತ ಸೌಕರ್ಯಗಳ ಸಮೀಕ್ಷೆ ನಡೆಸಿ, ಪ್ರತಿಯೊಬ್ಬರಿಗೂ ಯಾವಾಗ ಯಾವ ರೀತಿಯ ವಸತಿಯನ್ನು ನೀಡಲಾಗುವುದೆಂಬ ವಿವರವನ್ನು ಇಲಾಖೆಯು ಘೋಷಣೆ ಮಾಡಿ, ವಿಳಂಬವಾದಲ್ಲಿ ಆ ಕುಟುಂಬಗಳಿಗೆ ತಡದಂಡವನ್ನು ಬಾಡಿಗೆ ರೂಪದಲ್ಲಿ ನೀಡಬೇಕು. ಸಮುದಾಯ ಮೂಲಭೂತ ಸೌಕರ್ಯ ಹಾಗೂ ಕೊಳೆಗೇರಿ ಸುಧಾರಣೆ ಯೋಜನೆಗಳ ನಿಖರ ಯೋಜನೆ ಮತ್ತು ಅದರ ಅನುಷ್ಠಾನದ ಕಟ್ಟುನಿಟ್ಟಿನ ಮೌಲ್ಯಮಾಪನ ನಡೆಯಬೇಕು. ಗುಣಮಟ್ಟ ಮತ್ತು ಸಾಧನೆಯ ಕೊರತೆ ಮಾಡಿರುವ ಸಂಸ್ಥೆಗಳನ್ನು ಹೊಣೆಗೊಳಿಸಿ ಗಂಭೀರ ಕ್ರಮಗಳಾಗಬೇಕು.
ವಲಸೆ ಮತ್ತು ಸಂಪನ್ಮೂಲ ಕೊರತೆಯ ಕಾರಣ ನಿಗದಿತ ಅವಧಿಯೊಳಗೆ ಮನೆ ನಿರ್ಮಾಣವು ಸಾಧ್ಯವಿಲ್ಲದ ಕಾರಣ – ಫಲಾನುಭವಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಅವಧಿ ಮತ್ತು ವಂತಿಕೆಯನ್ನು ನಿಗದಿಗೊಳಿಸಬೇಕು. ಈಗಿರುವ ಕನಿಷ್ಠ ವಸತಿ ಅಳತೆಯನ್ನು ಕನಿಷ್ಟ 500 ಚದರಡಿಗಳಿಗೆ ಏರಿಸಿ, ತಕ್ಕಂತೆ ಸಹಾಯಧನ ಮತ್ತು ಸಾಲವನ್ನು ಹೆಚ್ಚಿಸುವ ಜೊತೆಗೆ ಸಾಲ ಮರುಪಾವತಿ ಅವಧಿ ಮತ್ತು ಬಡ್ಡಿ ಮೇಲಿನ ರಿಯಾಯತಿಗಳನ್ನೂ ಹೆಚ್ಚಿಸಬೇಕು. ಫಲಾನುಭವಿ ಆಯ್ಕೆ ಪ್ರಕ್ರಿಯೆಯನ್ನು ಅತಿ ಸರಳಗೊಳಿಸಿ, ಅಗತ್ಯ ದಾಖಲೆಗಳನ್ನು ಪಡೆಯುವುದು ಸಂಬಂಧಿತ ವಸತಿ ಸಂಸ್ಥೆಯ ಜವಾಬ್ದಾರಿಯಾಗಬೇಕು. ಬೇಡಿಕೆಯಾಧಾರಿತ ವಸತಿ ಹಂಚಿಕೆ ಉತ್ತಮವೆನಿಸಿದರೂ, ಅದು ಅನೇಕರನ್ನು ವ್ಯವಸ್ಥೆಯಿಂದ ಹೊರಗಿಡುತ್ತಿದೆ. ವಸತಿ ಪಡೆದುಕೊಳ್ಳುವ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ವಸತಿ ರಹಿತರನ್ನು ಗುರುತಿಸಿ ನೊಂದಾಯಿಸಿಕೊಳ್ಳುವುದು ವಸತಿ ಸಂಸ್ಥೆಗಳ ಹೊಣೆಗಾರಿಕೆಯಾಗಬೇಕು.
ಸರ್ಕಾರವು ತನ್ನ ಗಮನವನ್ನು ನಗರ ವಸತಿಯತ್ತ ಹೊರಳಿಸಿ, ಅದರ ಹೊಸ ಪರಿಕಲ್ಪನೆಯನ್ನು ವಿಕಸಿತಗೊಳಿಸಬೇಕಿದೆ ಎನ್ನುತ್ತಾರೆ ಎನ್. ಸಿವಸೈಲಮ್. ‘ಸ್ವ-ಸಹಾಯ’ ತತ್ವದೊಂದಿಗೆ ಹೊಸ ತಂತ್ರಜ್ಞಾನದ ಬಳಕೆಯನ್ನು ಮೇಳೈಸಿ ಬಡ ವರ್ಗಕ್ಕೆ 50-100 ಎಕರೆ ಜಮೀನಿನಲ್ಲಿ ಖಾಸಗಿ ನಿರ್ವಹಿತ ಸಮೂಹ ಶೌಚಾಲಯ, ಸ್ನಾನ ಗೃಹಗಳು, ವಾಹನ ನಿಲುಗಡೆ ಮತ್ತು ಜೀವನೋಪಾಯಕ್ಕೆ ಸ್ಥಳವಿರುವ ಬಡಾವಣೆಗಳನ್ನು ನಿರ್ಮಿಸಬೇಕಿದೆ. ಅಗಲ ವಿಸ್ತರಣೆಗೆ ಅವಕಾಶವಿಲ್ಲದಂತೆ ಕಿರಿದಾದ ರಸ್ತೆಗಳನ್ನು ಮಾಡಿ ಮನೆಗಳು ಎತ್ತರಕ್ಕೆ ವಿಸ್ತಾರವಾಗುವಂತಿರಬೇಕು. ಬಡವರ್ಗದ ಬಡಾವಣೆಗಳ ಸಮೀಪವೇ ಮಧ್ಯಮ ಮತ್ತು ಹೆಚ್ಚು ಅದಾಯದವರ ಬಡಾವಣೆಗಳು ರಚನೆಯಾದರೆ, ಬಡವರಿಗೆ ಕೆಲಸಗಳು ಹತ್ತಿರದಲ್ಲಿಯೇ ಸೃಷ್ಟಿಯಾಗುತ್ತವೆ. ಕಾರಣಾಂತರಗಳಿಂದ ವಸತಿಯನ್ನು ದೂರದಲ್ಲಿ ನೀಡಿದಾಗ, ಎಲ್ಲರಿಗೂ ಸಾರಿಗೆ ವ್ಯವಸ್ಥೆಯನ್ನು ಉಚಿತಗೊಳಿಸಿ, ಪುನರ್ವಸಿತಗೊಂಡ ಕೊಳೆಗೇರಿ ವಾಸಿಗಳ ಜೀವನೋಪಾಯಗಳು ತಡೆ ಇಲ್ಲದೆ ನಡೆಯುವಂತೆ ಖಾತ್ರಿಗೊಳಿಸಬೇಕು ಎನ್ನುತ್ತಾರೆ ಎನ್. ಸಿವಸೈಲಮ್.
ಇದನ್ನೂ ಓದಿರಿ: ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-1)
ಬಾಡಿಗೆ ನಿಯಂತ್ರಣ ಕಾಯ್ದೆಯು ಮರುವಿಮರ್ಶೆಯಾಗಿ ಪ್ರಸ್ತುತ ಸ್ಥಿತಿಗೆ ಕಟ್ಟುನಿಟ್ಟಾಗಿ ಅಳವಡಿಸುವ ಮೂಲಕ ನಗರದ ಮನೆಗಳು ಕಡಿಮೆ ದರದಲ್ಲಿ ಬಾಡಿಗೆಗೆ ದೊರೆಯುವಂತಾಗಬೇಕು.
ಕೇವಲ ತಲೆಯ ಮೇಲೊಂದು ಸೂರು ಮನೆಯಾಗುವುದಿಲ್ಲ. ನೆಮ್ಮದಿಯ ಬದುಕಿಗೆ ಮೂಲಭೂತ ಸೌಲಭ್ಯಗಳಿರಬೇಕು. ಇದಕ್ಕೆ ಹೆಚ್ಚಿನ ಸಂಪನ್ಮೂಲ ಬೇಕು ನಿಜ. ಆದರೆ, ಬಡವರು ಎಂದಾಕ್ಷಣ ನಮ್ಮ ಅನೇಕ ನೀತಿ ಸೃಷ್ಟಿಕರ್ತರಿಗೆ ನೆನಪಾಗುವುದು ಬಜೆಟ್ ಮನೆ! ಬಡವರಿಗೆ ಇಷ್ಟೆಲ್ಲ ಯಾಕೆ ಎಂಬ ಅಲ್ಪಮನದ ಧೋರಣೆ!! ಹೀಗಿರುವಾಗ, ಮೂಲಭೂತ ಸೌಕರ್ಯಗಳ ಮನೆ ಪ್ರತಿಯೊಬ್ಬರ ಹಕ್ಕು, ಅದನ್ನು ಎಲ್ಲರಿಗೂ ಒದಗಿಸುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ ಎನ್ನುವ ರಾಜಕೀಯ ದೃಢಸಂಕಲ್ಪದಿಂದ ಮಾತ್ರ ಸರ್ವರಿಗೂ ಸಮರ್ಥ ಕೈಗೆಟಕುವ ಮನೆ ಸಿಗುವಂತೆ ಮಾಡಲು ಸಾಧ್ಯ.

ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್ ಕಾಮ್'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.




