ಪರಿಷ್ಕೃತ ನೀತಿಗಳು ಕೈಗಾರಿಕೆಗೆ ಮಾರಕವಾಗಿದ್ದು ಹೇಗೆ?

Date:

ಭಾರತ ಕೃಷಿ ಪ್ರಧಾನವಾದ ದೇಶವಾದರೂ ಕೈಗಾರಿಕಾಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಕರ್ನಾಟಕದ ಕೈಗಾರಿಕೆಗಳು ಭಾರತ ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸಿವೆ. ಮೈಸೂರನ್ನಾಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಅವರು ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಿದರು. ವಿಶ್ವೇಶ್ವರಯ್ಯನವರ ಘೋಷವಾಕ್ಯ, ‘ಕೈಗಾರಿಕೀಕರಣ ಇಲ್ಲವೇ ನಾಶ’ ಎಂಬುದು ಬಹಳಷ್ಟು ಕೈಗಾರಿಕೆಗಳ ಸ್ಥಾಪನೆಗೆ ನಾಂದಿಯಾಯಿತು.

ಬ್ರಿಟಿಷರ ಆಳ್ವಿಕೆಯಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮಗಳು (PSUs) ಸೀಮಿತ ಸಂಖ್ಯೆಯಲ್ಲಿ ಪ್ರಾರಂಭವಾದರೂ ಆರ್ಥಿಕಾಭಿವೃದ್ಧಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿವೆ. ಬ್ರಿಟಿಷರು ತಮ್ಮ ಸ್ವಾರ್ಥಕ್ಕಾಗಿ ಭಾರತದ ಸಂಪತ್ತನ್ನು ಬಂದರುಗಳ ಮೂಲಕ ರಫ್ತು ಮಾಡುವ ಉದ್ದೇಶಕ್ಕಾಗಿ ಪ್ರಾರಂಭಿಸಿದ ರೈಲು ಮಾರ್ಗಗಳು, ಯೋಜನೆಗಳು ಸ್ಥಳೀಯ ಉದ್ಯಮ ಅಭಿವೃದ್ಧಿ ಮತ್ತು ಜನ ಸಂಚಾರಕ್ಕೆ ಸಹಕಾರಿಯಾದವು.

ಮೈಸೂರಿನ ಮಹಾರಾಜರು ಬ್ರಿಟಿಷರ ಸಹಕಾರದಿಂದ ಹಾಸನ, ತುಮಕೂರು, ಬೆಂಗಳೂರು, ಬೆಂಗಳೂರು-ಮೈಸೂರು ನಡುವೆ ರೈಲು ಹಳಿಗಳ ಸ್ಥಾಪನೆ ಮಾಡಿದರು. ಇದರಿಂದ ವಾಣಿಜ್ಯ ಸರಕುಗಳ ಸಾಗಣೆಗೆ ಸಹಾಯವಾಗಿತ್ತು. 1902ರಲ್ಲಿ ಶಿವನ ಸಮುದ್ರ ಜಲವಿದ್ಯುತ್ ಯೋಜನೆಯು ಏಷಿಯದ ಮೊದಲ ಜಲವಿದ್ಯುತ್ ಯೋಜನೆ ಎನಿಸಿ, ಮೈಸೂರು ಮತ್ತು ಬೆಂಗಳೂರಿನ ಕೈಗಾರಿಕೆಗಳಿಗೆ ವಿದ್ಯುತ್ ಸರಬರಾಜು ಮಾಡಿ ನಗರಾಭಿವೃದ್ಧಿಗೆ ಚಾಲನೆ ನೀಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1918ರಲ್ಲಿ ಬ್ರಿಟಿಷರ ಸಹಕಾರದಿಂದ ಮತ್ತು ಮೈಸೂರಿನ ಮಹಾರಾಜರ ಪ್ರೋತ್ಸಾಹದಿಂದ ಭದ್ರಾವತಿ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. ಇದು ಆ ಕಾಲದಲ್ಲಿ ಬಹುಮುಖ್ಯ ಯೋಜನೆಗಳಲ್ಲಿ ಒಂದಾಗಿ ದೇಶದ ಭಾರೀ ಕೈಗಾರಿಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿತು. ಭದ್ರಾವತಿ ಕಾಗದ ಕಾರ್ಖಾನೆಯು ಮುದ್ರಣ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಯಿತು. 1940ರಲ್ಲಿ ಮುಂಬಯಿ ಮೂಲದ ಜೈನ ಉದ್ಯಮಿ ಲಾಲ್ ಚಂದ್ ಹೀರಾ ಚಂದ್ ಹೂಡಿಕೆಯಿಂದ ಪ್ರಾರಂಭವಾದ ಬೆಂಗಳೂರಿನ ಎಚ್‌ಎಎಲ್‌ ಕಾರ್ಖಾನೆ ಎರಡನೇ ವರ್ಲ್ಡ್‌ ವಾರ್ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿತು.
1880ರಲ್ಲಿ ಚಾಲನೆ ಪಡೆದ ಕೋಲಾರದ ಗೋಲ್ಡ್ ಫೀಲ್ಡ್ ಚಿನ್ನದ ಗಣಿ ಉದ್ಯಮವು ಉದ್ಯೋಗ ಸೃಷ್ಟಿ ಜೊತೆಗೆ ದೇಶಕ್ಕೆ ಆರ್ಥಿಕ ಬಲ ನೀಡಿತು. ಮೈಸೂರು ಜಿಲ್ಲೆ ಕೂಡ ಕೇವಲ ತನ್ನ ಸಾಂಸ್ಕೃತಿಕ, ಐತಿಹಾಸಿಕ ಮಹತ್ವಕ್ಕಷ್ಟೇ ಸೀಮಿತವಾಗಲಿಲ್ಲ. ಸಾಂಪ್ರದಾಯಿಕ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಚಾಲನೆ ಇಲ್ಲಿ ದೊರೆಯಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಉತ್ತರ ಕರ್ನಾಟಕ, ಮಂಡ್ಯ ಮತ್ತು ಮೈಸೂರಿನಲ್ಲಿ ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಾಗಿ ಇಂದಿಗೂ ರೈತರಿಗೆ ಆಸರೆಯಾಗಿವೆ. 1912ರಲ್ಲಿ ಮೈಸೂರಿನಲ್ಲಿ ದೇಶದ ಮೊದಲ ಸರಕಾರಿ ರೇಷ್ಮೆ ಕಾರ್ಖಾನೆ ಸ್ಥಾಪನೆಯಾಯಿತು. ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಶನ್ ಲಿಮಿಟೆಡ್ (ಕೆಎಸ್‌ಐಸಿ) ರಾಜ್ಯ ಸರ್ಕಾರಕ್ಕೆ ಭೂಷಣ. ಇಲ್ಲಿ ತಯಾರಾಗುವ ಉತ್ಕೃಷ್ಟ ದರ್ಜೆಯ ಶುದ್ಧ ರೇಷ್ಮೆ ಸೀರೆ, ಬೆಳ್ಳಿ ಮತ್ತು ಚಿನ್ನದ ನೂಲಿನ ಜರೀ ಕಲಾಬತ್ತು ಸೀರೆಗಳು ಪ್ರಖ್ಯಾತವಾಗಿ ದೇಶವಿದೇಶಿಯರನ್ನು ಆಕರ್ಷಿಸುತ್ತಿವೆ.

1916ರಲ್ಲಿ ಪ್ರಾರಂಭವಾದ ಮೈಸೂರು ಗಂಧದ ಎಣ್ಣೆ ಮತ್ತು ಸಾಬೂನು ಕಾರ್ಖಾನೆಯ ಕೊಡುಗೆ ಸ್ಮರಣೀಯ. ಇಲ್ಲಿ ತಯಾರಾಗುವ ತೈಲ, ಪೌಡರ್, ವಿವಿಧ ಸ್ಯಾಂಡಲ್‌ವುಡ್ (ಚಂದನ) ಉತ್ಪನ್ನಗಳು ದೇಶ ವಿದೇಶಗಳಲ್ಲಿ ಮಾರುಕಟ್ಟೆ ಹೊಂದಿ ಪ್ರಖ್ಯಾತವಾಗಿವೆ. ಈಗಲೂ ಮೈಸೂರು ಮತ್ತು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಸ್ವಾಮ್ಯದ ಉದ್ಯಮವಾಗಿ ಯಶಸ್ವಿಯಾಗಿವೆ.
1937ರ ಮೈಸೂರು ಬಣ್ಣ ಮತ್ತು ವಾರ್ನಿಶ್ ಕಾರ್ಖಾನೆ ಕೈಗಾರಿಕೆಯು ಗೃಹ ಉಪಯೋಗದ ಬಣ್ಣ ತಯಾರಿಕೆಯ ಜೊತೆಗೆ ಇಂದು ಜಗತ್ತಿನ ಬಹಳ ದೇಶಗಳಲ್ಲಿ ಚುನಾವಣೆಯಲ್ಲಿ ಬಳಸುವ ಅಳಿಸಲಾಗದ ಶಾಹಿಯನ್ನು ತಯಾರಿಸುತ್ತಿದೆ. ಇದು ಇಂದಿಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಏಕೈಕ ಸಣ್ಣ ಕೈಗಾರಿಕೆ ಎನಿಸಿದೆ.

ಮೈಸೂರು ಹ್ಯಾಂಡಿ ಕ್ರಾಫ್ಟ್‌-ಸಾಂಪ್ರದಾಯಿಕ ಚಿತ್ರ ಕಲೆಗಳು, ವಿವಿಧ ಧಾರ್ಮಿಕ, ಐತಿಹಾಸಿಕ ಮತ್ತು ಸಂಸ್ಕೃತಿಯ ಕಥೆಗಳನ್ನು ಚಿತ್ರಿಸುತ್ತವೆ. ಪೇಂಟಿಂಗ್‌ಗಳಿಗೆ ನೈಸರ್ಗಿಕ ಬಣ್ಣಗಳನ್ನು ಬಳಸುವ ಮೂಲಕ ಅದರ ಮೂಲ ರೂಪವನ್ನು ಕಾಪಾಡಲಾಗಿದೆ. ಮೈಸೂರಿನ ಸಾಂಪ್ರದಾಯಿಕ ಗಂಧದ ಕಡ್ಡಿ ವಿಶ್ವಾದ್ಯಂತ ರಫ್ತು ಮಾರುಕಟ್ಟೆ ಹೊಂದಿದೆ. ಮೈಸೂರಿನ ಈ ಸಾಂಪ್ರದಾಯಿಕ ಕೈಗಾರಿಕೆಗಳು, ತಮ್ಮ ವೈಶಿಷ್ಟ್ಯತೆ ಮತ್ತು ಗುಣಮಟ್ಟದ ಮೂಲಕ ಈ ಭಾಗದ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಅಭಿವೃದ್ಧಿಗೆ ಮುನ್ನುಡಿಯಾಗಿವೆ. ಕೃಷಿ ಆಧಾರಿತವಾಗಿ ಹೇಳುವುದಾದರೆ ಹತ್ತಿಯಿಂದ ನೂಲು ತೆಗೆಯುವ ಸ್ಪಿನ್ನಿಂಗ್ ಮಿಲ್, ಜವಳಿ ಸಿದ್ಧಪಡಿಸಿದ ಉಡುಪು ತಯಾರಿಕೆ, ಜೊತೆಗೆ ಕಾಫಿ ಸಂಸ್ಕರಣೆ ಕೈಗಾರಿಕೆಗಳೂ ಛಾಪು ಮೂಡಿಸಿವೆ.

1947ರ ಸ್ವಾತಂತ್ರ್ಯ ನಂತರ ದೇಶದ ಅಧಿಕಾರ ಹಿಡಿದ ಆಡಳಿತಗಾರರ ಆರ್ಥಿಕ ತಜ್ಞರ ದೂರಾಲೋಚನೆ ಮತ್ತು ಸಮಯ ಪ್ರಜ್ಞೆಯಿಂದ ದೇಶದ ಆರ್ಥಿಕ, ಸಾಮಾಜಿಕ, ಭೌಗೋಳಿಕ, ಔದ್ಯೋಗಿಕ ಸಮಾನತೆ, ಸಾಮಾಜಿಕ ನ್ಯಾಯದ ಮೊದಲ ಹೆಜ್ಜೆಯಾಗಿ ದೇಶದ ಎಲ್ಲಾ ಭಾಗಗಳಲ್ಲೂ PSUಗಳನ್ನು ಆರಂಭಿಸಲಾಯಿತು. ಕೇಂದ್ರ ಸರ್ಕಾರ ಸ್ವಾಮ್ಯದ ಈ ಉದ್ಯಮಗಳ ಸ್ಥಾಪನೆಯು ಉದ್ಯೋಗ ಸೃಷ್ಟಿಯ ಜೊತೆಗೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಯಿತು. ವಿಶೇಷವಾಗಿ ಅಂದಿನ ಸಿರಿವಂತ ಉದ್ಯಮಿಗಳು, ಬೃಹತ್ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡು ಸರ್ಕಾರಕ್ಕೆ ನೆರವಾದರು.

ಇದನ್ನೂ ಓದಿರಿ: ರಾಜ್ಯಪಾಲ ಹುದ್ದೆಯ ರಾಜಕಾರಣ; ತಿಳಿಯಲೇಬೇಕಾದ ಐತಿಹಾಸಿಕ ಸಂಗತಿಗಳಿವು!

1948 ಏಪ್ರಿಲ್ 06ರಂದು ದೇಶದ ಪ್ರಥಮ ಕೈಗಾರಿಕಾ ನೀತಿಯನ್ನು ಅಂದಿನ ಕೈಗಾರಿಕಾ ಸಚಿವ ಶ್ಯಾಮ್‌ಪ್ರಸಾದ್ ಮುಖರ್ಜಿ ಪ್ರಕಟಿಸಿದರು. ಇದು ಭಾರತದ ಮಿಶ್ರಿತ ಆರ್ಥಿಕತೆ, ತ್ವರಿತ ಸಮತೋಲನ ಕೈಗಾರಿಕಾ ಆಭಿವೃದ್ಧಿಗೆ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಖಾಸಗಿ ಹೂಡಿಕೆದಾರರನ್ನು ಆಕರ್ಷಿಸಲು ನಾಂದಿಯಾಯಿತು. 1956ರಲ್ಲಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರು ಕೈಗಾರಿಕಾ ನೀತಿ ಪರಿಷ್ಕರಿಸಿ ಪ್ರಕಟಿಸಿದರು. 1973ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಪ್ರಕಟಿಸಿದ ಕೈಗಾರಿಕಾ ನೀತಿ ಮಹತ್ವದ್ದು. ಕೈಗಾರಿಕಾ ಲೈಸನ್ಸ್ ಮೂಲಕ ಭಾರೀ ಖಾಸಗಿ ಕಂಪನಿಗಳ ನಿಯಂತ್ರಣ ನೀತಿಯನ್ನು ಅವರು ತಂದರು. 20 ಅಂಶದ ಆರ್ಥಿಕ ಕಾರ್ಯಕ್ರಮಗಳ ಮೂಲಕ ನಿರುದ್ಯೋಗಿ ಯುವಜನತೆಯು ಸ್ವ ಉದ್ಯೋಗ ಪ್ರಾರಂಭಿಸಲು ಪ್ರೇರೇಪಿಸಿದರು.

1977ರಲ್ಲಿ ಅಂದಿನ ಕೇಂದ್ರ ಕೈಗಾರಿಕಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಪ್ರಕಟಿಸಿದ ಹೊಸ ಕೈಗಾರಿಕಾ ನೀತಿಯು ಗಮನಾರ್ಹವಾಗಿದೆ. ದೇಶದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಸ್ಥಾಪನೆ ಮೂಲಕ ಮತ್ತು ತಾಲೂಕು ಕೇಂದ್ರಗಳಿಗೆ ಕೈಗಾರಿಕಾ ಉತ್ತೇಜನ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಕೈಗಾರಿಕಾ ಕ್ರಾಂತಿಯನ್ನು ಅವರು ಮಾಡಿದರು. 1980ರಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸುವ ಸಾರ್ವಜನಿಕ ವಲಯದ ಉದ್ಯಮಗಳ ಪಾತ್ರವನ್ನು ದೃಢೀಕರಿಸಿದರು.
1991ರಲ್ಲಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಪ್ರಕಟಿಸಿದ ವಾಣಿಜ್ಯ ಮತ್ತು ಕೈಗಾರಿಕೆ ನೀತಿಯಲ್ಲಿ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣಕ್ಕೆ ಒತ್ತುನೀಡಿ ಜಾಗತಿಕ ವಿಶ್ವ ಹೂಡಿಕೆದಾರರನ್ನು ಸ್ವಾಗತಿಸಿದರು. ನಷ್ಟದಲ್ಲಿದ್ದ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಬಂಡವಾಳ ಹಿಂಪಡೆದರು.

goegre
ಜಾರ್ಜ್ ಫರ್ನಾಂಡಿಸ್

2006ರಲ್ಲಿ ಮೊದಲ ಬಾರಿಗೆ ಸಣ್ಣ ಕೈಗಾರಿಕಾ ನೀತಿಯನ್ನೊಳಗೊಂಡ ಎಂಎಸ್‌ಎಂಇ ಕಾಯ್ದೆ (2006) ಪ್ರಕಟಿಸಿ ಯಂತ್ರೋಪಕರಣದ ಮೇಲೆ ಹೂಡಿಕೆ ಆಧಾರದಲ್ಲಿ ವರ್ಗೀಕರಿಸಲಾಯಿತು. 2011ರ ಉದ್ಯಮಮಂತ್ರಿ ಆನಂದ ಶರ್ಮಾ ಅವರು ಹೂಡಿಕೆದಾರರನ್ನು ಪ್ರೊತ್ಸಾಹಿಸುವ, ಉತ್ಪಾದನಾ ಕ್ಷೇತ್ರದಲ್ಲಿ ಆಧುನಿಕತೆ ತರುವ ನೀತಿ ಪ್ರಕಟಿಸಿದರು. 2017ರಲ್ಲಿ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇಕ್ ಇನ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ ಮೂಲಕ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಜಾರಿಗೊಳಿಸಿದರು.

2020ರಲ್ಲಿ ಕೋವಿಡ್ 19ರ ಕರಿ ನೆರಳಿನಲ್ಲಿ ದೇಶದ ಉದ್ಯಮ ಕ್ಷೇತ್ರ ತತ್ತರಿಸಿದ ಸಂದರ್ಭದಲ್ಲಿ ಕೈಗಾರಿಕಾ ಸಂಘಟನೆಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರವು ಎಂಎಸ್‌ಎಂಇ ಹೂಡಿಕೆ ಮಿತಿ ಕಡಿತಗೊಳಿಸಿ, ವಹಿವಾಟು ಮೊತ್ತದ ಆಧಾರದ ಮೇಲೆ ಎಂಎಸ್‌ಎಂಇ ವರ್ಗೀಕರಣವನ್ನು ಪರಿಷ್ಕರಿಸಿ, 2022ರ ಜುಲೈ 1ರಿಂದ ಜಾರಿಗೆ ತಂದಿದೆ.

ಇದನ್ನೂ ಓದಿರಿ: ಕೋಮುಗಲಭೆಗಳಿಗೆ ಹರಿದ ‘ಒಬಿಸಿ’ಗಳ ನೆತ್ತರು; ಕರ್ನಾಟಕ ಕಂಡ ರಕ್ತ ಚರಿತ್ರೆ ಬಲ್ಲಿರಾ?

ಈ ಪರಿಷ್ಕರಣೆಯಿಂದಾಗಿ ದೊಡ್ಡ ಉದ್ಯಮಗಳು ಮಧ್ಯಮಕ್ಕೆ, ಮಧ್ಯಮ ಉದ್ಯಮಗಳು ಸಣ್ಣದ್ದಕ್ಕೆ, ಸಣ್ಣ ಉದ್ಯಮಗಳು ಸೂಕ್ಷ್ಮ ಉದ್ಯಮ ವರ್ಗಕ್ಕೆ ಸೇರಲ್ಪಟ್ಟಿವೆ. ಸೂಕ್ಷ್ಮ ಉದ್ಯಮಗಳನ್ನು ಸಣ್ಣ ಉದ್ಯಮ ಎಂದೇ ನಿರ್ಣಯಿಸಬೇಕಾದ ಪರಿಸ್ಥಿತಿ ಇದೆ. (ಇಎಂ2 ಅಥವಾ ಯುಎಎಂ ನೋಂದಣಿ ಉಲ್ಲೇಖಿಸಿ ಆನ್‌ಲೈನ್‌ನಲ್ಲಿ ಉದ್ಯಮ ರಿಜಿಸ್ಟ್ರೇಷನ್ ಉಚಿತವಾಗಿ ಪಡೆಯಬಹುದು.)
ಎಂಎಸ್‌ಎಂಇ ವರ್ಗೀಕರಣವು ಇಲ್ಲಿಯವರೆಗೆ ಯಂತ್ರೋಪಕರಣ ಮತ್ತು ಸ್ಥಾವರದ ಮೇಲಿನ ಬಂಡವಾಳ ಹೂಡಿಕೆಯ ಆಧಾರದ ಮೇಲೆ ನಿಗದಿಯಾಗುತ್ತಿತ್ತು ಮತ್ತು ಒಬ್ಬರೇ ಉದ್ಯಮಿ ಹಲವು ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ನೋಂದಣಿಯನ್ನು ಪಡೆಯುತ್ತಿದ್ದರು. ಹೊಸ ವರ್ಗೀಕರಣದ ಆದೇಶದನ್ವಯ ಉದ್ಯಮಿಯ ಒಂದು ಆಧಾರ್ ಸಂಖ್ಯೆಗೆ ಜೋಡಿತವಾದ ಎಲ್ಲಾ ಉದ್ಯಮ ನೋಂದಣಿ ಸಂಖ್ಯೆ, ಪಾನ್ ಸಂಖ್ಯೆ, ಜಿಎಸ್‌ಟಿ ಸಂಖ್ಯೆಯನ್ನು ಒಟ್ಟುಗೂಡಿಸಿ, ಯಂತ್ರೋಪಕರಣ ಮೇಲಿನ ಬಂಡವಾಳ ಹೂಡಿಕೆ ಹಾಗೂ ವಹಿವಾಟು ಪರಿಗಣಿಸಿ ಒಂದು ಉದ್ಯಮ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ. ಎಲ್ಲ ಉದ್ಯಮಗಳ ವಿವರವೂ ಒಂದೇ ನೋಂದಣಿಯಲ್ಲಿ ದಾಖಲಾಗುತ್ತದೆ. ವಹಿವಾಟು ಮೊತ್ತ ಮತ್ತು ಯಂತ್ರೋಪಕರಣಗಳ ಮೇಲಿನ ಬಂಡವಾಳ ಹೂಡಿಕೆ ವ್ಯತ್ಯಾಸವಾದಂತೆ ಉದ್ಯಮದ ವರ್ಗೀಕರಣ ಮೇಲ್ದರ್ಜೆಗೆ ಇಲ್ಲವೇ ಕೆಳದರ್ಜೆಗೆ ಹೋಗುತ್ತದೆ.
ಹೊಸ ವ್ಯಾಖ್ಯೆ ಅನ್ವಯ ಉದ್ಯಮ ವರ್ಗೀಕರಣ ಹೀಗಿದೆ:

ಸೂಕ್ಷ್ಮ ಉದ್ಯಮ: ಯಂತ್ರೋಪಕರಣಗಳ ಮೇಲೆ ಬಂಡವಾಳ ಹೂಡಿಕೆ ಒಂದು ಕೋಟಿ ರೂ. ಮತ್ತು ವಹಿವಾಟು ಐದು ಕೋಟಿ ರೂಪಾಯಿ ಒಳಗಿರುವ ಉದ್ಯಮಗಳು (ಈ ಹಿಂದಿನ ಯಂತ್ರೋಪಕರಣಗಳ ಮೇಲಿನ ಬಂಡವಾಳ ಹೂಡಿಕೆ ಮಿತಿ 25 ಲಕ್ಷ ರೂಪಾಯಿ).

ಸಣ್ಣ ಉದ್ಯಮ: ಯಂತ್ರೋಪಕರಣಗಳ ಮೇಲೆ ಬಂಡವಾಳ ಹೂಡಿಕೆ 10 ಕೋಟಿ ರೂಪಾಯಿ ಮತ್ತು ವಹಿವಾಟು ಮಿತಿ 50 ಕೋಟಿ ರೂಪಾಯಿ ಒಳಗಿರುವ ಉದ್ಯಮಗಳು (ಈ ಹಿಂದಿನ ಯಂತ್ರೋಪಕರಣಗಳ ಮೇಲಿನ ಬಂಡವಾಳ ಹೂಡಿಕೆ ಮಿತಿ 5 ಕೋಟಿ ರೂಪಾಯಿ).

ಮಧ್ಯಮ ಉದ್ಯಮ: ಯಂತ್ರೋಪಕರಣಗಳ ಮೇಲೆ ಬಂಡವಾಳ ಹೂಡಿಕೆ 50 ಕೋಟಿ ರೂ., ವಹಿವಾಟು 250 ಕೋಟಿ ರೂಪಾಯಿ ಒಳಗಡೆ ಇರುವ ಉದ್ಯಮಗಳು (ಈ ಹಿಂದಿನ ಯಂತ್ರೋಪಕರಣಗಳ ಮೇಲಿನ ಬಂಡವಾಳ ಹೂಡಿಕೆ ಮಿತಿ 10 ಕೋಟಿ ರೂಪಾಯಿ).

ಹೊಸ ವರ್ಗೀಕರಣದಂತೆ ಎಲ್ಲಾ ಉದ್ಯಮಗಳು ಉದ್ಯಮ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಉದ್ಯಮ ಸುಲಭೀಕರಣ ಯೋಜನೆಯನ್ವಯ ಆನ್‌ಲೈನ್‌ನಲ್ಲಿ ಯಾರು ಬೇಕಾದರೂ ಎಂಎಸ್‌ಎಂಇ ನೋಂದಣಿ ಪಡೆಯಬಹುದಾಗಿದೆ.

industry 1

ಕರ್ನಾಟಕ ಸರ್ಕಾರವು ಕೇಂದ್ರದ ಕೈಗಾರಿಕಾ ಮತ್ತು ಆರ್ಥಿಕ ನೀತಿಗೆ ಪೂರಕವಾಗಿ 1977, 1983, 1988, 1993, 1996, 2006, 2009, 2014 ಹಾಗೂ 2020-2025ರ ಅವಧಿಗೆ ಒಟ್ಟು ಒಂಬತ್ತು ಕೈಗಾರಿಕಾ ನೀತಿಗಳನ್ನು ಪ್ರಕಟಿಸಿದೆ. ಪ್ರಸ್ತುತ 2025-2030ರ ಕೈಗಾರಿಕಾ ನೀತಿ ಪ್ರಕಟಣೆಯ ಸಿದ್ಧತೆಯಲ್ಲಿದೆ.

2020-25ರ ಅವಧಿಯ ಕೈಗಾರಿಕಾ ನೀತಿಯು ರಾಜ್ಯದ ಉದ್ಯಮ ಅಭಿವೃದ್ಧಿಗೆ ಪೂರಕವಾಗಿಲ್ಲ. ಇದನ್ನು ಕೂಡ ಕೋವಿಡ್ 19ರ ಕರಾಳ ಅವಧಿಯಲ್ಲಿ ಉದ್ಯಮಿಗಳೊಡನೆ ಸಮಾಲೋಚಿಸದೆ ಸಿದ್ಧಪಡಿಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೈಗಾರಿಕಾ ಉತ್ತೇಜನ ಯೋಜನೆ, ನೀತಿ, ಪ್ರೋತ್ಸಾಹ ಸಹಾಯಧನ, ರಿಯಾಯಿತಿ, ವಿನಾಯಿತಿಗಳು ಆಕರ್ಷಕವಾಗಿರುತ್ತವೆ. ಆದರೆ ಜಾರಿಯಲ್ಲಿ 30% ಅನುಷ್ಠಾನವಾಗದಿರುವುದು ವಿಷಾದನೀಯ.

ಕೇಂದ್ರ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಬಹುತೇಕ ಉತ್ತರ ಭಾರತದ ಉದ್ಯಮ ಸಂಘಟನೆಗಳು ಮತ್ತು ಉದ್ಯಮಿಗಳಿಗೆ ಉಪಯೋಗವಾಗುತ್ತಿವೆ. ಇತರೆ ಭಾಗದ ಉದ್ಯಮಿಗಳ ಅರಿವಿಗೆ ಬರುವಷ್ಟರಲ್ಲಿ ಯೋಜನೆಗಳು ಮುಕ್ತಾಯ ಕಂಡಿವೆ. ಅಂತೆಯೇ ರಾಜ್ಯ ಸರ್ಕಾರದ ಅನುದಾನ, ಯೋಜನೆ ಕಾರ್ಯಕ್ರಮಗಳು ಬೆಂಗಳೂರು ಕೇಂದ್ರೀಕೃತ ಸಂಘಟನೆಗಳಿಗೆ, ರಾಜ್ಯಮಟ್ಟದ ಸಂಸ್ಥೆಗಳಿಗೆ ಬಹುತೇಕವಾಗಿ ತಲುಪುತ್ತಿವೆ/ಬಳಕೆಯಾಗುತ್ತಿದೆ. ಇತರ ಭಾಗದ ಉದ್ಯಮಿಗಳು ಪರದಾಡುತ್ತಾರೆ.
ಭಾರತ ದೇಶದಲ್ಲಿ ನೋಂದಾಯಿತ ಎಂಎಸ್‌ಎಂಇಗಳು ಒಟ್ಟು 6.5 ಕೋಟಿ, ಮೈಸೂರಿನಲ್ಲಿ 30,000 ಎಂಎಸ್‌ಎಂಇ ತಯಾರಿಕಾ ಉದ್ಯಮಗಳಿವೆ, 165ಕ್ಕೂ ಅಧಿಕ ರಫ್ತು ಆಧಾರಿತ ಉದ್ಯಮಗಳು, 100ಕ್ಕೂ ಹೆಚ್ಚು ಮಧ್ಯಮ ಹಾಗೂ ಭಾರೀ ಉತ್ಪಾದನಾ ಘಟಕಗಳು, ಬಿಇಎಂಎಲ್, ಬಿಆರ್‌ಬಿಎನ್‌ಎಂಎಲ್, ಆರ್‌ಎಂಪಿ, ಡಿಆರ್‌ಡಿಒ, ಕೇಂದ್ರೀಯ ರೈಲ್ವೆ ವರ್ಕ್ ಶಾಪ್, ಜರ್ಮನ್ ಪ್ರೆಸ್ ಕೇಂದ್ರ ಸ್ವಾಮ್ಯದ ಉದ್ಯಮಗಳು, ಕರ್ನಾಟಕ ಗಂಧದ ಎಣ್ಣೆ ಮತ್ತು ಸಾಬೂನು ಕಾರ್ಖಾನೆ, ಕರ್ನಾಟಕ ಸಿಲ್ಕ್ ಇಂಡಸ್ಟ್ರಿ ಕಾರ್ಪೋರೇಶನ್, ಮೈಸೂರು ಬಣ್ಣದ ಕಾರ್ಖಾನೆ, ಸರ್ಕಾರಿ ಮುದ್ರಣಾಲಯ, ವಿಶ್ವವಿದ್ಯಾಲಯ ಮುದ್ರಣಾಲಯ, ಕೆಎಸ್‌ಆರ್‌ಟಿಸಿ ಡಿಪೋ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ, ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಕಾರ್ಯ ನಿರ್ವಹಿಸುತ್ತಿವೆ.

ಇದನ್ನೂ ಓದಿರಿ: ಲಂಡನ್ ಪ್ರೊಫೆಸರ್ ಕಣ್ಣಲ್ಲಿ ಅರಸು ಕಾಲ ಮತ್ತು ಭವಿಷ್ಯದ ಕರ್ನಾಟಕ ರಾಜಕಾರಣ

ಜುಬಿಲೀಯೆಂಟ್ ಲೈಫ್ ಸೈನ್ಸಸ್, ವಿಪ್ರೋ, ಎಲ್ ಆಂಡ್ ಟಿ, ಇನ್ಫೋಸಿಸ್, ನೆಸ್ಲೆ ಇತ್ಯಾದಿ ಬಹುರಾಷ್ಟ್ರೀಯ ಕಂಪನಿಗಳು ಮೈಸೂರು ಜಿಲ್ಲೆಯಲ್ಲಿ ತಳ ಊರಿವೆ. ಇವುಗಳಲ್ಲಿ 4 ಲಕ್ಷಕ್ಕೂ ಅಧಿಕ ಕುಶಲ, ಕುಶಲವಲ್ಲದ ಕಾರ್ಮಿಕರು ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಅಂದಾಜು ಒಂದು ಲಕ್ಷ ನೆರೆಯ ಜಿಲ್ಲೆ ಮತ್ತು ರಾಜ್ಯಗಳ ಕಾರ್ಮಿಕರು ಇವುಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೊರ ಜಿಲ್ಲೆ ಮತ್ತು ರಾಜ್ಯದ ಕಾರ್ಮಿಕರಿಗೆ ಕೈಗಾರಿಕಾ ಪ್ರದೇಶಗಳಲ್ಲಿ ವಸತಿ ಸೌಲಭ್ಯ ಒದಗಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಂದ ಪರಿಣಾಮಕಾರಿಯಾದ ಯೋಜನೆ ಆಗಬೇಕಿದೆ. ಕಾರ್ಮಿಕ ಕಲ್ಯಾಣ ಇಲಾಖೆಯ ಹಣ ಇದ್ದರೂ ಬಳಕೆಯಾಗಿಲ್ಲ. ಈ ಕಾರ್ಮಿಕರು ಅತ್ಯಂತ ಕಡಿಮೆ ಬೆಲೆಯ ಬಾಡಿಗೆ ಕೊಠಡಿಗಳಲ್ಲಿ ಕೆಟ್ಟ ಪರಿಸರದಲ್ಲಿ ವಾಸಿಸುತ್ತಿದ್ದಾರೆ. ನಾಡಿನ 12% ಕೈಗಾರಿಕೆಗಳು ಮಾತ್ರ ರಾಷ್ಟ್ರೀಕೃತ ಬ್ಯಾಂಕಿನ ಹಣಕಾಸಿನ ನೆರವು ಮತ್ತು 2% ಕೈಗಾರಿಕೆಗಳು ಮಾತ್ರ ಸರ್ಕಾರದ ಪ್ರೋತ್ಸಾಹ ಸಹಾಯಧನದ ನೆರವು ಪಡೆದಿವೆ. ಉಳಿದವು ಖಾಸಗಿ ಲೇವಾದೇವಿದಾರರು, ಫೈನಾನ್ಸ್, ಚಿಟ್ ಫಂಡ್‌ಗಳಿಂದ ದುಬಾರಿ ಮೀಟರ್ ಬಡ್ಡಿದರದಲ್ಲಿ ಸಾಲ ಪಡೆದು ಉದ್ಯಮ ನಡೆಸುತ್ತಿದ್ದಾರೆ.

ಹಾಲಿ ಇರುವ ಕೈಗಾರಿಕೆಗಳಲ್ಲಿ 60% ಕೈಗಾರಿಕೆಗಳು ಮಾತ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 25% ಕೈಗಾರಿಕೆಗಳು ರೋಗಗ್ರಸ್ತವಾಗಿವೆ. 15% ಕೈಗಾರಿಕೆಗಳು ಮುಚ್ಚಿ ಹೋಗಿವೆ. ರೋಗಗ್ರಸ್ತ ಕೈಗಾರಿಕೆಗಳ ಪುನಃಶ್ಚೇತನಕ್ಕೆ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಯಾವುದೇ ಕಾರ್ಯಕ್ರಮಗಳು ಸಹಾಯಕ್ಕೆ ಬರದಿರುವುದು ವಿಷಾದನೀಯ ಸಂಗತಿ.

ಸರ್ಕಾರ ಅಭಿವೃದ್ಧಿಪಡಿಸಿದ ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿ, ಕೈಗಾರಿಕಾ ಪ್ರದೇಶ ಮತ್ತು ಎಸ್ಟೇಟ್‌ಗಳಲ್ಲಿ 9% ಕೈಗಾರಿಕೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 40% ಕೈಗಾರಿಕೆಗಳು ಪೂರ್ಣ ಹಣ ಪಾವತಿಸಿಯೂ ವಿವಿಧ ಕಾರಣಗಳಿಂದ ಹಕ್ಕು ಪತ್ರ ಪಡೆದಿಲ್ಲ. ಕೆಲವು ಕೈಗಾರಿಕೆಗಳು ಜಮೀನಿನ ಮಾರುಕಟ್ಟೆ ದರಕ್ಕಿಂತಲೂ ಅಧಿಕ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದರೂ ಭೂವಿವಾದಗಳು ಸೃಷ್ಟಿಯಾಗಿ ಸ್ವಾಧೀನಕ್ಕೆ ಪಡೆಯಲಾಗದೆ ಉದ್ಯಮ ಪ್ರಾರಂಭಿಸಲಾಗಿಲ್ಲ.
ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶವು ಪ್ರಾತಃಸ್ಮರಣೀಯ ಡಿ.ದೇವರಾಜ್ ಅರಸು ಅವರು ಕೊಡುಗೆ. 6,500 ಎಕರೆ ವಿಶಾಲವಾಗಿಯೂ, ಒಂದೇ ತೆಕ್ಕೆಯಲ್ಲಿ ಬರುವ ಏಷಿಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶವೂ ಇದೆನಿಸಿದೆ. ಇಲ್ಲಿ ಟಿಶ್ಯೂ ಪೇಪರ್‌ನಿಂದ ಹಿಡಿದು ನೋಟ್ ಪ್ರಿಂಟ್ ಪೇಪರ್‌ವರೆಗೆ, ದ್ವಿ ಚಕ್ರ ವಾಹನದ ಬಿಡಿ ಭಾಗಗಳಿಂದ ಹಿಡಿದು ಮಿಲಿಟರಿ ಮತ್ತು ಏರೋ ಸ್ಪೇಸ್‌ನಲ್ಲಿ ಬಳಸುವ ಭಾರೀ ವಾಹನ ತಯಾರಿಕೆವರೆಗೆ, ಗಂಧದ ಕಡ್ಡಿ, ಟೈರ್, ಟ್ಯೂಬ್, ಕೆಮಿಕಲ್, ಆಹಾರ ಉತ್ಪನ್ನ, ರಬ್ಬರ್ ಇತ್ಯಾದಿ 2000ಕ್ಕೂ ಮಿಗಿಲಾದ ವಿವಿಧ ಉತ್ಪನ್ನಗಳನ್ನು 2600ಕ್ಕೂ ಹೆಚ್ಚು ಕೈಗಾರಿಕೆಗಳು ತಯಾರಿಸುತ್ತಿವೆ.

ಈ ಪ್ರದೇಶದ ಕೈಗಾರಿಕೆಗಳು ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿಗೆ ಪಾವತಿಸುವ ನಿರ್ವಹಣಾ ವೆಚ್ಚದ ಜೊತೆಗೆ, ಸ್ಥಳೀಯ ಸಂಸ್ಥೆಗಳಾದ ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳಿಗೆ (ನಗರ ಪಾಲಿಕೆಗಳು ಪಡೆಯುವ ತೆರಿಗೆಗಿಂತಲೂ ಅಧಿಕವಾಗಿ) 100ರಿಂದ 200% ಅಧಿಕ ಆಸ್ತಿ ತೆರಿಗೆ ಪಾವತಿಸುತ್ತವೆ. ಆದರೆ ರಸ್ತೆ, ಬೀದಿ ದೀಪ, ಹೊರ ಚರಂಡಿ, ಒಳ ಚರಂಡಿ, ಘನ ತ್ಯಾಜ್ಯ ನಿರ್ವಹಣೆ ಕೇಂದ್ರ, ವೇಸ್ಟ್ ಯಾರ್ಡ್, ಸರಕು ವಾಹನ ನಿಲ್ದಾಣ/ಟ್ರಕ್ ಟರ್ಮಿನಲ್, ಸಾರ್ವಜನಿಕ ಶೌಚಾಲಯ, ಇತ್ಯಾದಿ ಮೂಲಭೂತ ಅಗತ್ಯತೆಗಳ ಸೌಲಭ್ಯವನ್ನು ಇನ್ನೂ ಪಡೆದಿಲ್ಲ.

ಈ ಸಮಸ್ಯೆಗಳ ನಿವಾರಣೆಗಾಗಿ ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಯೋಜನೆಯ ಕಡತವು ಕಳೆದ 30 ವರ್ಷಗಳಿಂದ ಸರ್ಕಾರದ ಕಚೇರಿಗಳಲ್ಲಿ ಚಲಿಸುತ್ತಿದೆ. ಕೈಗಾರಿಕಾ ಪ್ರದೇಶದ ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಗೆ ಮೀಸಲಾದ ಜಾಗವು ನಗರಸಭೆಯ ತ್ಯಾಜ್ಯಕ್ಕೆ ಮಾತ್ರ ಬಳಕೆಯಾಗುತ್ತಿದೆ. ಈ ಕಾರಣ ರಾತ್ರಿ ಹೊತ್ತಲ್ಲಿ ಬಂದು ಹಳ್ಳ, ವರ್ತುಲ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕುತ್ತಿದ್ದಾರೆ. ಕೈಗಾರಿಕಾ ಉಪಯೋಗದ ನಿವೇಶನವು ಪಟಾಕಿ ಮಳಿಗೆ ಗೋಡೌನ್‌ಗೆ ಬಳಕೆಯಾಗುತ್ತಿದೆ. ಕಳೆದ ವರ್ಷ ಆದ ಬೆಂಕಿ ಅವಘಡದಲ್ಲಿ ಸಾವು ನೋವು ಆಗಲಿಲ್ಲವಾದರಿಂದ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿರಿ: AIನಿಂದ AGIವರೆಗೆ: ಮಾನವ ಬುದ್ಧಿವಂತಿಕೆಯ ಹೊಸ ಕ್ರಾಂತಿ; ಏನಾಗಬಹುದು ಭವಿಷ್ಯದ ಬದುಕು?

ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನಗರ ಸಭೆ ಮತ್ತು ಪಾಲಿಕೆಯ ಒಳ ಚರಂಡಿ ನೀರು ಸುಲಲಿತವಾಗಿ ಹರಿದು ಬರುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಲಾಗುತ್ತಿಲ್ಲ. ಕೆರೆ ಬಫರ್ ವಲಯದಲ್ಲಿರುವ ಕಟ್ಟಡ, ಒತ್ತುವರಿ ಜಾಗದ ತೆರವು ಕಾರ್ಯಾಚರಣೆಯನ್ನು ನಗರಸಭೆ, ಕೆಐಎಡಿಬಿ ಮಾಡಲಾಗುತ್ತಿಲ್ಲ.
ಕೈಗಾರಿಕೆ, ಉದ್ಯಮಿಗಳ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರದ ಕೈಗಾರಿಕಾ ಅದಾಲತ್, ಕೈಗಾರಿಕಾ ಸ್ಪಂದನೆ, ಕೈಗಾರಿಕಾ ಕುಂದು ಕೊರತೆಗಳ ನಿವಾರಣಾ ಸಭೆ ಮತ್ತು ಏಕ ಗವಾಕ್ಷಿ ಸಮಿತಿ ಸಭೆಗಳು ಪರಿಣಾಮಕಾರಿಯಾಗಿ ನಡೆಯಬೇಕಾದ ಅಗತ್ಯವಿದೆ. ರಾಜ್ಯ ಸರ್ಕಾರದ ಕೈಗಾರಿಕಾ ನೀತಿ 2020-25ರಲ್ಲಿ ಉಲ್ಲೇಖಗೊಂಡ ಸೌಲಭ್ಯಗಳಲ್ಲಿ 25% ಕೈಗಾರಿಕೆಗಳಿಗೆ ಏನೇನೂ ತಲುಪಿಲ್ಲ. 60% ಕೈಗಾರಿಕೆಗಳಿಗೆ ಮಾಹಿತಿಯೇ ಇಲ್ಲ. ಅರಿವು ಮೂಡಿಸುವ ಕಾರ್ಯಕ್ರಮ ಆಗಲಿಲ್ಲ.
ಕೇಂದ್ರ ಸರ್ಕಾರದ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಲ್ಲಿ ಮೈಸೂರಿನಲ್ಲಿ ಪ್ರಾರಂಭ ವಾಗಬೇಕಿದ್ದ ಎಸ್‌ಸಿ, ಎಸ್‌ಟಿ ಉದ್ಯಮಿಗಳ ಕ್ಲಸ್ಟರ್ ನೆನೆಗುದಿಗೆ ಬಿದ್ದಿದೆ. ಮೈಸೂರು ಪ್ರಿಂಟ್ ಮತ್ತು ಪೇಪರ್ ಕ್ಲಸ್ಟರ್ ಕಡತಗಳು ಕಳೆದ 10 ವರ್ಷದಿಂದ ಕೆಐಎಡಿಬಿ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಮೌನವಾಗಿವೆ.

ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಸ್ಟಾಂಡ್ ಅಪ್, ಸ್ಟಾರ್ಟ್ ಅಪ್, ಮೇಕ್ ಇನ್ ಇಂಡಿಯಾ, ಕ್ರೆಡಿಟ್ ಲಿಂಕಡ್ ಕ್ಯಾಪಿಟಲ್ ಸಬ್ಸಿಡಿ, ವೆಂಡರ್ ಡೆವಲಪ್ಮೆಂಟ್ ಕಾರ್ಯಕ್ರಮ, ರಫ್ತು ಮಾರುಕಟ್ಟೆ, ಮೂಲಭೂತ ಅಗತ್ಯತೆ ಪೂರೈಕೆ, ಮೈಸೂರು ರಫ್ತು ಕೇಂದ್ರ ಇತ್ಯಾದಿ ಯೋಜನೆಗಳು ಅನುಷ್ಠಾನಕ್ಕೆ ಬರಬೇಕೆಂದರೆ, ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಕೇಂದ್ರ ಸರ್ಕಾರದ ಇಲಾಖಾ ಅಧಿಕಾರಿಗಳ ಜೊತೆ ಮತ್ತು ಉದ್ಯಮಿಗಳ ಜೊತೆ ಸಮಾಲೋಚನಾ ಸಭೆಗಳನ್ನು ನಡೆಸಬೇಕಾದ ತುರ್ತು ಇದೆ.

(‘ಈ ದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

Sureshkumar jain12
ಸುರೇಶ್ ಕುಮಾರ್ ಜೈನ್
+ posts

ಮೈಸೂರು ವಲಯ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಸುರೇಶ್ ಕುಮಾರ್ ಜೈನ್, ಕರ್ನಾಟಕ ಸಣ್ಣ ಕೈಗಾರಿಕಾ ಸಂಘಕ್ಕೆ ಜಂಟಿ ಕಾರ್ಯದರ್ಶಿಯಾಗಿ, ಲಘು ಉದ್ಯೋಗ ಭಾರತಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1975ರಿಂದಲೂ ಸಣ್ಣ ಕೈಗಾರಿಕೋದ್ಯಮ ನಡೆಸುತ್ತಿದ್ದಾರೆ. ಎಂಎಸ್‌ಎಂಇ ಕೌನ್ಸಿಲ್‌ಗೆ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ತು) ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ರಾಜ್ಯದ ಬಜೆಟ್ ಮುನ್ನ ಪ್ರಸ್ತಾವನೆಗಳನ್ನು ನಿರಂತರ ಸಲ್ಲಿಸುತ್ತಾ ಬಂದಿದ್ದಾರೆ. ವಿದ್ಯುತ್ ದರ ಪರಿಷ್ಕರಣೆಯಲ್ಲಿ ಕೆಇಆರ್‌ಸಿ ಮುಂದೆ ನಿರಂತರ ವಾದ, ಅಹವಾಲು ಮಂಡನೆ ಮಾಡುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ಕೈಗಾರಿಕಾ ನೀತಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಮಾಲಿಕತ್ವದ ಜೈನ್ ಕೈಗಾರಿಕೆಗೆ ಕರ್ನಾಟಕ ಸರ್ಕಾರ 1995ರಲ್ಲಿ ಅತ್ಯುತ್ತಮ ಸಣ್ಣ ಕೈಗಾರಿಕಾ ಪ್ರಶಸ್ತಿ ನೀಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಸುರೇಶ್ ಕುಮಾರ್ ಜೈನ್
ಸುರೇಶ್ ಕುಮಾರ್ ಜೈನ್
ಮೈಸೂರು ವಲಯ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಸುರೇಶ್ ಕುಮಾರ್ ಜೈನ್, ಕರ್ನಾಟಕ ಸಣ್ಣ ಕೈಗಾರಿಕಾ ಸಂಘಕ್ಕೆ ಜಂಟಿ ಕಾರ್ಯದರ್ಶಿಯಾಗಿ, ಲಘು ಉದ್ಯೋಗ ಭಾರತಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1975ರಿಂದಲೂ ಸಣ್ಣ ಕೈಗಾರಿಕೋದ್ಯಮ ನಡೆಸುತ್ತಿದ್ದಾರೆ. ಎಂಎಸ್‌ಎಂಇ ಕೌನ್ಸಿಲ್‌ಗೆ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ತು) ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ರಾಜ್ಯದ ಬಜೆಟ್ ಮುನ್ನ ಪ್ರಸ್ತಾವನೆಗಳನ್ನು ನಿರಂತರ ಸಲ್ಲಿಸುತ್ತಾ ಬಂದಿದ್ದಾರೆ. ವಿದ್ಯುತ್ ದರ ಪರಿಷ್ಕರಣೆಯಲ್ಲಿ ಕೆಇಆರ್‌ಸಿ ಮುಂದೆ ನಿರಂತರ ವಾದ, ಅಹವಾಲು ಮಂಡನೆ ಮಾಡುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ಕೈಗಾರಿಕಾ ನೀತಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಮಾಲಿಕತ್ವದ ಜೈನ್ ಕೈಗಾರಿಕೆಗೆ ಕರ್ನಾಟಕ ಸರ್ಕಾರ 1995ರಲ್ಲಿ ಅತ್ಯುತ್ತಮ ಸಣ್ಣ ಕೈಗಾರಿಕಾ ಪ್ರಶಸ್ತಿ ನೀಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...