ಮೋದಿಯ ಟೀಕಿಸುತ್ತಿದ್ದ ರಾಣೆ, ಮುಸ್ಲಿಂ ದ್ವೇಷಿಯಾಗಿದ್ದು ಹೇಗೆ?

Date:

ಇವರ ಹೆಸರು ನಿತೇಶ್ ರಾಣೆ. ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದಲ್ಲಿ ಮೀನುಗಾರಿಕೆ ಮತ್ತು ಬಂದರು ಖಾತೆಯ ಸಚಿವ. ಕ್ಯಾಬಿನೇಟ್ ದರ್ಜೆಯ ಮಿನಿಸ್ಟರ್. ಇವರು ಮೊದಲು ಕಾಂಗ್ರೆಸ್‌ನಲ್ಲಿದ್ದರು. ನರೇಂದ್ರ ಮೋದಿಯವರನ್ನು, ಗುಜರಾತ್ ಮಾದರಿಯನ್ನು ಕಟುವಾಗಿ ಟೀಕಿಸಿಸುತ್ತಿದ್ದರು. ಬ್ರಿಟಿಷರಲ್ಲಿ ಕ್ಷಮೆ ಕೇಳಿದ ಸಾವರ್ಕರ್ ಎಂದು ಗೇಲಿ ಮಾಡಿದ್ದರು. ಆರ್‌ಎಸ್‌ಎಸ್‌ನವರನ್ನು ‘ಅರ್ಧ ಚಡ್ಡಿವಾಲಾಗಳು’ ಎಂದು ಛೇಡಿಸಿದ್ದರು. ಆದರೆ ಬಿಜೆಪಿ ಸೇರಿದ ಮೇಲೆ ಸಂಪೂರ್ಣ ಬದಲಾದರು. ಸರಣಿ ದ್ವೇಷ ಭಾಷಣಗಳನ್ನು ಮಾಡಿದ ರಾಣೆಗೆ ಸಚಿವ ಸ್ಥಾನ ಸಿಕ್ಕಿತು.

ಇವರ ತಂದೆ ನಾರಾಯಣ ರಾಣೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಮೋದಿ ಸರ್ಕಾರದಲ್ಲಿ ಕ್ಯಾಬಿನೇಟ್ ದರ್ಜೆಯ ಸಚಿವರಾದರು. ಇಂತಹ ರಾಜಕೀಯ ಕುಟುಂಬದ ಹಿನ್ನಲೆ ಇರುವ ನಿತೇಶ್ ರಾಣೆ, ತನ್ನ ಅಸ್ತಿತ್ವಕ್ಕಾಗಿ ಕಂಡುಕೊಂಡ ದಾರಿ – ಮುಸ್ಲಿಂ ದ್ವೇಷ.

ಮಹಾರಾಷ್ಟ್ರದಲ್ಲಿ ಇಂದು ಆಗುತ್ತಿರುವ ಕೋಮು ಹಿಂಸಾಚಾರಗಳಿಗೆ ರಾಣೆಯ ಪ್ರಚೋದನೆಗಳು ಪ್ರಮುಖ ಕಾರಣವಾಗಿ ಕಾಣುತ್ತಿವೆ. ಕರ್ನಾಟಕದಲ್ಲಿ ‘ಜಟ್ಕಾ ಮಾಂಸ’, ‘ಹಲಾಲ್ ಮಾಂಸ’ ಎಂಬ ವಿವಾದ ಎದ್ದು, ನಂತರ ಜಟ್ಕಾ ಮಾಂಸ ಗೇಲಿಗೆ ಒಳಗಾಗಿ, ಆ ವಿಷಯ ನೇಪಥ್ಯಕ್ಕೆ ಸರಿದಿತ್ತು. ಈಗ ಮಹಾರಾಷ್ಟ್ರದಲ್ಲಿ ಜಟ್ಕಾ ಮಾಂಸ ಮುನ್ನೆಲೆಗೆ ಬಂದಿದೆ. ಜಟ್ಕಾ ಮಾಂಸದ ಅಂಗಡಿಗಳನ್ನು ಹಿಂದೂಗಳಿಗಾಗಿ ತೆರೆಯುವ ಗುರಿಯೊಂದಿಗೆ ಮುಂದೆ ಬಂದಿರುವ ನಿತೇಶ್ ರಾಣೆ, ‘ಮಲ್ಹಾರ್ ಸರ್ಟಿಫಿಕೇಟ್’ ಕೊಡಲು ಹೊರಟಿದ್ದಾರೆ. ‘ಹಲಾಲ್ ಮಾಂಸ ಇಸ್ಲಾಂನದ್ದು. ಹಿಂದೂಗಳಲ್ಲಿ ಹಲಾಲ್ ಪದ್ಧತಿ ಇಲ್ಲ’ ಎಂದಿದ್ದಾರೆ. ಜಟ್ಕಾ ಮಾಂಸದ ಬಗ್ಗೆ ಅದ್ಯಾವ ಧರ್ಮಶಾಸ್ತ್ರ ಹೇಳಿದೆಯೋ ಗೊತ್ತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ನೆಲಸಮ ಮಾಡುವ ವಿವಾದ ಮಹಾರಾಷ್ಟ್ರದಲ್ಲಿ ಭುಗಿಲೆದ್ದಿದೆ. ಇತ್ತೀಚೆಗೆ ರಾಣೆ ನೀಡಿದ ಹೇಳಿಕೆ ಈ ಕಲಹಕ್ಕೆ ಮುನ್ನುಡಿ ಬರೆದಿತ್ತು. ಸಂಭಾಜಿ ನಗರದ (ಹಿಂದೆ ಔರಂಗಜೇಬ್ ಜಿಲ್ಲೆ) ಖುಲ್ದಾಬಾದ್‌ನಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ಒಡೆದು ಹಾಕುತ್ತೇವೆ ಎಂದರು ರಾಣೆ. ಅದರ ಮುಂದುವರಿದ ಭಾಗವಾಗಿ ಹಿಂದುತ್ವ ಗುಂಪುಗಳು ದಾಂಧಲೆ ಎಬ್ಬಿಸಿ, ಕುರಾನ್ ಸುಟ್ಟ ವದಂತಿ ಎದ್ದು ಹಿಂಸಾಚಾರ ಉಂಟಾಗಿದೆ. “ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಮುಸ್ಲಿಮರಿರಲಿಲ್ಲ” ಎಂದಿದ್ದ ರಾಣೆಯವರನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಅವರೇ ಗೇಲಿ ಮಾಡಿದ್ದರು. ಹಿಂಸಾಚಾರಕ್ಕೆ ಪ್ರಚೋದನೆ ನೀಡಬಾರದೆಂದು ಕೋರಿದ್ದರು. ಶಿವಾಜಿಯ ಜಾತ್ಯತೀತ ಆಡಳಿತವನ್ನು ಹತ್ಯೆಯಾದ ಗೋವಿಂದ ಪನ್ಸಾರೆ ಥರದ ವಿಚಾರವಾದಿಗಳು ಬಯಲಿಗೆಳೆದಿದ್ದಾರೆ. ಆದರೂ ಶಿವಾಜಿಯ ವಿಚಾರದಲ್ಲಿ ಕೋಮು ರಾಜಕಾರಣ ನಿಲ್ಲುವುದಿಲ್ಲ.

ಇದನ್ನೂ ಓದಿರಿ: ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಟ್ರಂಪ್ ಪದತಲಕ್ಕೆ ಜಾರಿದ್ದು ಹೇಗೆ?

ರಾಣೆ ಸಾಮಾನ್ಯ ವ್ಯಕ್ತಿಯಲ್ಲ. 2024ರಲ್ಲಿ ದ್ವೇಷ ಭಾಷಣ ಮಾಡಿದ ಬಿಜೆಪಿಯ ಪ್ರಮುಖ 10 ದ್ವೇಷ ಭಾಷಣಕಾರರ ಪಟ್ಟಿಯಲ್ಲಿ ರಾಣೆಗೆ ಆರನೇ ಸ್ಥಾನ. “ಮುಸ್ಲಿಮರು ಪಾಕಿಸ್ತಾನಿ ಪಿಂಪ್‌ಗಳು, ಹಸಿರು ಹಂದಿಗಳು, ಹಸಿರು ಹಾವುಗಳು” ಎಂದಿದ್ದ ವ್ಯಕ್ತಿ ರಾಣೆ. ಅವರನ್ನು (ಮುಸ್ಲಿಮರನ್ನು) ಬೆತ್ತಲೆಗೊಳಿಸುವುದಾಗಿ, ಹೊಡೆಯುವುದಾಗಿ ಘೋಷಿಸಿದ್ದರು. ಹಿಂದೂಗಳು ಮುಸ್ಲಿಮರನ್ನು ಬಹಿಷ್ಕರಿಸಬೇಕು, ಮಸೀದಿಗಳನ್ನು ಕೆಡವಬೇಕು ಎಂದು ಪ್ರಚೋದಿಸಿದ್ದರು.

ದ್ವೇಷ ಭಾಷಣ ಸಂಬಂಧ ಎಫ್‌ಐಆರ್‌ ದಾಖಲಿಸುವಂತೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿರುವ ಕಾರಣಕ್ಕೆ ರಾಣೆ ವಿರುದ್ಧ 20 ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಆದರೆ ಯಾವುದೇ ಚಾರ್ಜ್‌ ಶೀಟ್ ಈವರೆಗೂ ಸಲ್ಲಿಕೆಯಾಗಿಲ್ಲ ಎನ್ನುತ್ತದೆ ಚುನಾವಣಾ ಅಫಿಡವಿಟ್.

ನಿತೇಶ್ ರಾಣೆಯ ದ್ವೇಷದ ಮಾತುಗಳನ್ನು, ಅವರ ಮೇಲಿನ ಪ್ರಕರಣಗಳನ್ನು ವಿಸ್ತೃತವಾಗಿ ವರದಿ ಮಾಡಿದೆ- ಪ್ರಖ್ಯಾತ ವೆಬ್‌ಸೈಟ್ ‘ಆರ್ಟಿಕಲ್ 14’.

ರಾಣೆಯ ಕೆಲವು ಹೇಳಿಕೆಗಳನ್ನೇ ಗಮನಿಸಿ:

“ಇಲ್ಲಿ ವಾಸಿಸುವ ಈ ಪಾಕಿಸ್ತಾನಿ ಭಡ್ವೆಗಳು (ತಲೆಹಿಡುಕರು) ಯಾರು? ಅವರಿಂದಾಗಿ ನಾವು ನವರಾತ್ರಿ ಹಬ್ಬವನ್ನು ಆಚರಿಸಲು ಆಗುತ್ತಿಲ್ಲ. ನಾನು ನಿಮ್ಮ ಮನೆಗೆ ಬಂದು, ನಿಮ್ಮನ್ನು ವಿವಸ್ತ್ರಗೊಳಿಸಿ ನಿಮ್ಮ ಸ್ವಂತ ಮನೆಯಲ್ಲಿ ಹೊಡೆಯುತ್ತೇನೆ/ ಕೊಲ್ಲುತ್ತೇನೆ” ಎಂದು 2024ರ ಅಕ್ಟೋಬರ್ 10ರಂದು ಮುಂಬೈನಲ್ಲಿ ಹೇಳಿಕೆ ನೀಡಿದ್ದರು.

ಅದೇ ದಿನ ಮತ್ತಷ್ಟು ದ್ವೇಷದ ಮಾತುಗಳನ್ನು ರಾಣೆ ಆಡಿದ್ದರು. “ನೀವು ನವರಾತ್ರಿಯ ವೇಳೆ ಚಿಕನ್, ಮಟನ್ ಶಾಪ್‌ಗಳನ್ನು ತೆರೆದರೆ, ಯಾವುದೇ ಹಿಂದೂ ಅದನ್ನು ಸಹಿಸುವುದಿಲ್ಲ. ಅಂಗಡಿಗಳನ್ನು ತೆರೆಯಲೇಬೇಕೆಂದು ನೀವು ಒತ್ತಾಯಿಸಲು ಬಯಸಿದರೆ, ನಾವು ಮಸೀದಿಗಳ ಮುಂದೆ ಹಂದಿಮಾಂಸವನ್ನು ಎಸೆಯುತ್ತೇವೆ” ಎಂದಿದ್ದರು.

ಮುಂದುವರಿದು, “ನಿಮ್ಮ ಕುಟುಂಬದ ನೆಪದಲ್ಲೋ ಅಥವಾ ದೇವಿಯ ದರ್ಶನಕ್ಕಾಗಿಯೋ ಮನೆಗೆ ಹೋಗಲು ಇಲ್ಲಿರುವ  ಪೊಲೀಸರು 30 ನಿಮಿಷ ವಿರಾಮ ತೆಗೆದುಕೊಳ್ಳಬೇಕೆಂದು ಹೇಳುತ್ತೇನೆ. ಈ ಭಗವಾಧಾರಿಗಳು (ಕೇಸರಿ ಧರಿಸುವವರು), ಪಠಾಣವಾಡಿಯನ್ನು (ಮುಸ್ಲಿಮರನ್ನು) ಹೇಗೆ ಕ್ಲೀನ್ ಮಾಡುತ್ತಾರೆ ಎಂದು ನೋಡಿರಿ” ಎಂದು ದ್ವೇಷ ಕಾರಿದ್ದರು.

2024ರ ಸೆಪ್ಟೆಂಬರ್ 1ರಂದು ಅಹಲ್ಯಾನಗರದಲ್ಲಿ ಮಾತನಾಡುತ್ತಾ, “ಅವರು (ಮುಸ್ಲಿಮರು) ಮನೆಗಳಿಂದ ಹೊರಗೆ ಬರುವುದು ನಿಲ್ಲಿಸಿದ್ದಾರೆ, ವಲಸೆ ಶುರುವಾಗಿದೆ, ಅವರು ತಮ್ಮ ಮನೆಗಳನ್ನು ಮಾರುತ್ತಿದ್ದಾರೆಂದು ತಿಳಿಸಲು ಈ ಭಾಗದಿಂದ ನನಗೆ ಕರೆಗಳು ಬರಬೇಕಾಗಿದೆ. ತದನಂತರ, ಇದು ಹಿಂದೂಗಳಿಗೆ ಮಾತ್ರ ಸೀಮಿತವಾದ ಅಹಲ್ಯಾ ನಗರವಾಗುತ್ತದೆ, ಅಲ್ಲವೇ?” ಎಂದು ಕೇಳಿದ್ದರು. (ಈ ಹಿಂದೆ ಅಹಮದ್‌ನಗರ ಎಂದು ಕರೆಯಲಾಗುತ್ತಿದ್ದ ಜಾಗಕ್ಕೆ ಅಹಲ್ಯಾನಗರವೆಂದು ಮರುನಾಮಕರಣ ಮಾಡಲಾಗಿದೆ.)

ಇದನ್ನೂ ಓದಿರಿ: ಮಸ್ಕ್-ಮಿತ್ತಲ್-ಮುಖೇಶ್ ಕೂಡಾವಳಿ: ಯಾರಿಗೆ ಲಾಭ, ಮೋದಿ ಪಾತ್ರವೇನು?

“ಭಡ್ವಾಗಳು ಅಂದರೆ (ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದ) ಭಡ್ವಾಗಳು ಇಲ್ಲಿದ್ದರೆ, ಇದು ಮುಗಿದಿಲ್ಲ ಎಂದು ನೆನಪಿಡಿ. ನಾನು ಒಬ್ಬೊಬ್ಬರಿಗೂ ಹೊಡೆಯುತ್ತೇನೆ. ನಿಮ್ಮನ್ನು ಉಳಿಸಲು ನಿಮ್ಮ ಮಸೀದಿಗಳಿಂದ ಯಾರೂ ಬರುವುದಿಲ್ಲ” ಎಂದು ಉರಾನ್‌ನಲ್ಲಿ 2024ರ ಜುಲೈ 30ರಂದು ಮಾತನಾಡಿದ್ದರು.

“ನೀವು ಇದನ್ನು ಇಸ್ಲಾಂಪುರ ಎಂದು ಕರೆಯಲೇಬಾರದು. ಇಸ್ಲಾಂಪುರ ಎಂದು ಹೇಳುವವರಿಗೆ ಕಪೋಳಮೋಕ್ಷ ಮಾಡಿ, ‘ಈಶ್ವರಪುರ’ ಎಂದು ಹೇಳುವಂತೆ ಒತ್ತಾಯಿಸಬೇಕು. ಹಿಂದೂಗಳಾಗಿ ನಾವು ಈ ಕಠೋರತೆಯನ್ನು ತೋರಿಸದಿದ್ದರೆ, ಈ ಪ್ರದೇಶ ಹೆಚ್ಚುಕಾಲ ಇಸ್ಲಾಂಪುರವಾಗಿ ಉಳಿಯುವುದಿಲ್ಲ ಎಂಬ ಸತ್ಯ ಜಿಹಾದಿಗಳಿಗೆ ಗೊತ್ತಾಗುವುದಿಲ್ಲ” ಎಂದು 2024ರ ಆಗಸ್ಟ್ 30ರಂದು ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರದಲ್ಲಿ ವಿವಾದ ಸೃಷ್ಟಿಸಿದ್ದರು.

“ಯಾವುದೇ ಬಾಂಗ್ಲಾದೇಶಿ ಅಥವಾ ರೋಹಿಂಗ್ಯಾ ವ್ಯಾಪಾರಿ ಕಂಡರೆ, ಹಿಂದೂ ಧರ್ಮಕ್ಕಾಗಿ ನೀವು ಏನು ಮಾಡಬೇಕೋ ಅದನ್ನು ಮಾಡಿ. ನೀವು ಸುರಕ್ಷಿತವಾಗಿ ಮನೆಗೆ ಹಿಂತಿರುಗುತ್ತೀರಿ ಎಂದು ನಾವು ಖಚಿತಪಡಿಸುತ್ತೇವೆ” ಎಂದು 2024ರ ಮಾರ್ಚ್ 10ರಂದು ಮುಂಬೈನಲ್ಲಿ ಹೇಳಿಕೆ ನೀಡಿದ್ದರು.

ರಾಣೆಯ ದ್ವೇಷ ಭಾಷಣಗಳಿಗೆ ಸಿಕ್ಕ ಉಡುಗೊರೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ!

ವಯನಾಡ್ ಕ್ಷೇತ್ರದ ಜನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ್ ಗಾಂಧಿಯವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿದನ್ನು ಉಲ್ಲೇಖಿಸಿ ಟೀಕಾಪ್ರಹಾರ ಮಾಡಿದ್ದ ಇವರು, ಕೇರಳವನ್ನು ‘ಮಿನಿ ಪಾಕಿಸ್ತಾನ’ ಎಂದು ಜರಿದಿದ್ದರು.

ನಿತೇಶ್ ರಾಣೆ ಭಾರತದ ಚುನಾವಣಾ ಆಯೋಗಕ್ಕೆ  2024ರ ಅಕ್ಟೋಬರ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನ ಪ್ರಕಾರ, ಆತನ ವಿರುದ್ಧ ಒಟ್ಟು 38 ಎಫ್‌ಐಆರ್‌ಗಳಿವೆ. ಅವುಗಳಲ್ಲಿ 20 ಪ್ರಕರಣ ದ್ವೇಷ ಭಾಷಣಕ್ಕಾಗಿಯೇ ದಾಖಲಾಗಿವೆ. ಇವುಗಳಲ್ಲಿ 19 ಎಫ್‌ಐಆರ್‌ಗಳು ಕಳೆದ ಎರಡು ವರ್ಷಗಳಲ್ಲಿ ಆಗಿರುವುದು ಗಮನಾರ್ಹ. ಸೆಕ್ಷನ್ 196 (1) (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 351 (ಕ್ರಿಮಿನಲ್ ಬೆದರಿಕೆ), ಸೆಕ್ಷನ್ 352 (ಶಾಂತಿಯನ್ನು ಕದಡಲು ಉದ್ದೇಶಪೂರ್ವಕ ನಿಂದಿಸುವುದು) ಮೊದಲಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳಿವೆ.

ದ್ವೇಷ ಭಾಷಣ ಮಾಡುವವರಿಗೆ ಬಿಜೆಪಿ ನಾಯಕರು ಮಣೆ ಹಾಕುತ್ತಾ ಬಂದಿರುವುದನ್ನು ನಾವು ಕೆಲವು ಬೆಳವಣಿಗೆಗಳಿಂದ ಕಾಣಬಹುದು. ತೆಲಂಗಾಣದಲ್ಲಿ ಮುಸ್ಲಿಮರ ವಿರುದ್ಧ ಸದಾ ವಿಷವನ್ನು ಕಾರುವ ಟಿ.ರಾಜ್ ಸಿಂಗ್‌ ಅವರನ್ನು ಬಿಜೆಪಿಯಿಂದ ಹೊರಹಾಕಲಾಗಿತ್ತು. ಆದರೆ ಪುನಃ ಪಕ್ಷಕ್ಕೆ ಕರೆದುಕೊಂಡು ಚುನಾವಣಾ ಟಿಕೆಟ್ ನೀಡಲಾಯಿತು.

ಇದನ್ನೂ ಓದಿರಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದೇಕೆ? ಮುಂದೇನಾಗಬಹುದು?

“ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆ ಕೀಳಿರಿ, ಕಣ್ಣು ಕಿತ್ತು ಹಾಕಿ” ಎನ್ನುವ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಚಿವರಾಗಿ ಮುಂದುವರಿದಿದ್ದಾರೆ.

ಮತಯಂತ್ರಗಳ ಬಗ್ಗೆ ವಿರೋಧ ಪಕ್ಷಗಳು ಗುಮಾನಿಯನ್ನು ವ್ಯಕ್ತಪಡಿಸಿದಾಗ ಅದನ್ನೂ ತನ್ನ ಕೋಮುದ್ವೇಷಕ್ಕೆ ಬಳಸಿಕೊಂಡ ರಾಣೆ, “ವೋಟ್ ಜಿಹಾದ್ ನಡೆದಾಗ, ಇವರಿಗೆ ಯಾವುದೇ ತಪ್ಪು ಕಾಣಲಿಲ್ಲ, ಸಂತೋಷದಿಂದ ಹಸಿರು ಗುಲಾಲ್ ಎರಚಿದರು. ಈಗ, ಹಿಂದೂ ಸಮುದಾಯವು ಒಗ್ಗೂಡಿ ಹಿಂದುತ್ವವಾದಿ ಸರ್ಕಾರವನ್ನು ಆಯ್ಕೆ ಮಾಡಿದಾಗ, ಅವರು ಹಸಿರು ಮಣಸಿನಕಾಯಿಯಾಗಿದ್ದಾರೆ” ಎಂದಿದ್ದರು.

ಹಿಂದುತ್ವವಾದಿಗಳ ಪಿತೂರಿ ಸಿದ್ಧಾಂತಗಳಲ್ಲಿ ‘ಲವ್ ಜಿಹಾದ್’ ಆರೋಪವೂ ಒಂದು. ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಮದುವೆಯಾಗಿ ಮತಾಂತರಿಸುತ್ತಾರೆಂಬ ಕಲ್ಪಿತ ಥಿಯರಿಯೇ ‘ಲವ್ ಜಿಹಾದ್’. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ನಿತೇಶ್ ರಾಣೆ, “ನಾವು ಸಂತ್ರಸ್ತರನ್ನು ಭೇಟಿಯಾಗಿಯೇ ಮಾತನಾಡುತ್ತಿದ್ದೇವೆ. ಮತಾಂತರ ತಡೆಯಲು ಕಾನೂನು ತರುತ್ತೇವೆ” ಎನ್ನುತ್ತಾರೆ.

ನಿತೇಶ್ ರಾಣೆಯು ತಮ್ಮ ರಾಜಕೀಯ ಜೀವನದಲ್ಲಿ ಇತ್ತೀಚಿನ ವರ್ಷಗಳಿಂದಷ್ಟೇ ಮುಸ್ಲಿಂ ದ್ವೇಷದ ಮಾತುಗಳನ್ನು ಶುರು ಮಾಡಿದ್ದಷ್ಟೇ. 2014ರ ಸಾರ್ವತ್ರಿಕ ಚುನಾವಣೆಗೂ ಮೊದಲು, ದಕ್ಷಿಣ ಮಹಾರಾಷ್ಟ್ರದ ಕಂಕವ್ಲಿ ಅಸೆಂಬ್ಲಿಯಲ್ಲಿ ಕಾಂಗ್ರೆಸ್‌ ಟಿಕೆಟ್ ಮೂಲಕ ಸ್ಪರ್ಧಿಸುವುದಕ್ಕಿಂತ ಮುಂಚೆ ಈ ರಾಣೆ, ಸ್ವಾಭಿಮಾನ್ ಎಂಬ ಎನ್‌ಜಿಒ ಮೂಲಕ ರಾಜಕೀಯ ಆರಂಭಿಸಿದರು.

ರಾಣೆ ಕಾಂಗ್ರೆಸ್‌ನಲ್ಲಿದ್ದ ಸಮಯವದು. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು, ಹಿಂದುತ್ವ ಸಿದ್ಧಾಂತ ಪ್ರತಿಪಾದಿಸಿದ ವಿ.ಡಿ.ಸಾವರ್ಕರ್ ಅವರನ್ನು ಬಿಜೆಪಿಯ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕಟುವಾಗಿ ಟೀಕಿಸಿದ್ದರು.

2013ರಲ್ಲಿ ಮುಂಬೈನಲ್ಲಿ ಆಡಿದ ಮಾತು: “ಮೋದಿ ಮತ್ತು ಗುಜರಾತ್ ಮಾದರಿಯನ್ನು ಹೊಗಳುವವರು ಮುಂಬೈನಲ್ಲಿರುವ ಗುಜರಾತಿಗಳಾಗಿದ್ದಾರೆ. ಅವರು ಮುಂಬೈ ತೊರೆದು ಗುಜರಾತ್‌ಗೆ ಹೋಗಬೇಕು” ಎಂದು ವಾಗ್ದಾಳಿ ನಡೆಸಿದ್ದರು. ಆರ್‌ಎಸ್‌ಎಸ್‌ನವರನ್ನು ‘ಅರ್ಧ ಚಡ್ಡಿವಾಲರು” ಎಂದು ಕುಟುಕಿದ್ದರು.

2014ರಲ್ಲಿ ಮಾಡಿದ ಟ್ವೀಟ್: “ಬ್ರಿಟಿಷರಲ್ಲಿ ನಾಲ್ಕು ಕ್ಷಮೆಯಾಚಿಸಿದ್ದ ಸಾವರ್ಕರ್, ಪ್ರತಿಯೊಂದು ಪೀಳಿಗೆಗೂ ಅವಮಾನ ತಂದಿದ್ದಾರೆ” ಎಂದಿದ್ದರು. ಈಗ ಆ ಟ್ವೀಟ್ ಈಗ ಡಿಲೀಟ್ ಆಗಿದೆ.

1e Sorry Kelida Savarkar
ಸಾವರ್ಕರ್ ಕುರಿತು ನಿತೇಶ್ ರಾಣೆ ಕಟುವಾಗಿ ಮಾಡಿದ್ದ ಟ್ವೀಟ್

2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ- ಶಿವಸೇನೆ ಮೈತ್ರಿಕೂಟವೇ ಅಧಿಕಾರ ಉಳಿಸಿಕೊಳ್ಳುವ ಸೂಚನೆ ಕಾಣಿಸಿಕೊಂಡ ತಕ್ಷಣ ರಾಣೆ ಬಿಜೆಪಿಗೆ ಹಾರಿದರು. ಪಕ್ಷಕ್ಕೆ ಸೇರಿ ಮೂರು ವರ್ಷಗಳಲ್ಲಿ, ಅಂದರೆ 2022ರ ಹೊತ್ತಿಗೆ ರಾಣೆ ತಮ್ಮ ನಾಲಿಗೆಯನ್ನು ಹರಿತ ಮಾಡಿಕೊಂಡು, ಕೋಮುದ್ವೇಷವನ್ನು ಉಗುಳಲು ಆರಂಭಿಸಿದರು. ತಮ್ಮ ವರಸೆಯನ್ನು ಸಮರ್ಥಿಸಿಕೊಂಡರು. ಕಾಂಗ್ರೆಸ್‌ನಲ್ಲಿ ಸಿಲುಕಿ ತಪ್ಪು ಮಾಡಿದ್ದೆ, ಆದರೆ ನಮ್ಮ ಬೇರುಗಳಿಗೆ ಮರಳಿದ್ದೇನೆ ಎಂದರು.

ಇದನ್ನೂ ಓದಿರಿ: ಸತ್ಯ ಹೇಳಿ ಸಂಕಟಕ್ಕೆ ಸಿಲುಕಿದ ಮುಸ್ಲಿಮರಿವರು…

ನೇರವಾಗಿ ಮುಸ್ಲಿಮರ ವಿರುದ್ಧ ತಮ್ಮ ಹರಿತವಾದ ನಾಲಗೆಯನ್ನು ಝಳುಪಿಸುವುದು ಸಾಮಾನ್ಯ. ನೇರವಾಗಿ ಹಿಂಸೆಗೆ ನಾಗರಿಕರನ್ನು ಪ್ರಚೋದಿಸುವ ಕೆಲಸವನ್ನು ಮಾಡುವುದು ರಾಣೆಯ ಮತ್ತೊಂದು ತಂತ್ರ.

2024ರ ಅಕ್ಟೋಬರ್‌ನಲ್ಲಿ ಮಾತನಾಡಿದ್ದ ರಾಣೆ, “ಹಿಂದೂಗಳು ನವರಾತ್ರಿ ಉತ್ಸವ ಆಚರಿಸಲು, ಮೆರವಣಿಗೆ ಮಾಡಲು ಸ್ಥಳೀಯ ಮುಸ್ಲಿಮರು ಬಿಡುತ್ತಿಲ್ಲ” ಎಂದಿದ್ದರು. ಹಿಂದುತ್ವ ಭಾಷಣಕಾರರ ದ್ವೇಷದ ಮಾತುಗಳನ್ನು ಜನರ ಗಮನಕ್ಕೆ ತರುವ ‘ಹಿಂದುತ್ವ ವಾಚ್’ ಎಂಬ ಎಕ್ಸ್ ಖಾತೆಯು ಈ ಮಾತನ್ನು ಪೋಸ್ಟ್ ಮಾಡಿತ್ತು. ಈ ಕಾರಣಕ್ಕೆ ಮೋದಿ ಸರ್ಕಾರವು, “ಈ ಹ್ಯಾಂಡಲ್ ಮಾಹಿತಿ ತಂತ್ರಜ್ಞಾನ ಕಾಯ್ದೆ (2000)ಯನ್ನು ಉಲ್ಲಂಘಿಸಿದೆ” ಎಂದು ಎಕ್ಸ್ ಸಂಸ್ಥೆಗೆ ದೂರು ನೀಡಿದ ಬಳಿಕ ‘ಹಿಂದುತ್ವ ವಾಚ್’ ಹ್ಯಾಂಡಲ್ ಸ್ಥಗಿತವಾಯಿತು.

“ನಾಳೆ ಅವರು ಮಟನ್ ಅಂಗಡಿಗಳನ್ನು ತೆರೆದರೆ, ನಾನು ಪಠಾಣ್‌ವಾಡಿಯಲ್ಲಿ ಹಂದಿಗಳನ್ನು ಬಿಡುತ್ತೇನೆ. ಇದನ್ನು ರೆಕಾರ್ಡ್ ಮಾಡಿ, ನಾನು ಪೊಲೀಸರಿಗೆ ಹೇಳುತ್ತಿದ್ದೇನೆ. ನನ್ನ ಹಿಂದೂಗಳಿಗೆ ನಾನು ಹೇಳುತ್ತೇನೆ, ನೀವು ಸರ್ವ ಧರ್ಮ ಸಮಭಾವ ಸ್ವೀಕರಿಸಬಾರದು” ಎಂದಿದ್ದರು ರಾಣೆ.

ಇಷ್ಟಾದರೂ ನಿತೇಶ್ ರಾಣೆ ಆರಾಮವಾಗಿ ಇದ್ದಾರೆ. ದ್ವೇಷವನ್ನು ಉದ್ದೀಪಿಸುವುದು, ಮುಸ್ಲಿಮರನ್ನು ನಿಂದಿಸುವುದು ನಡೆದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ.

ಜನವರಿ 21ರಂದು ಮುಂಬೈನ ಪೂರ್ವ ತುದಿಯಲ್ಲಿರುವ ಮೀರಾ ರಸ್ತೆಯಲ್ಲಿ ಹಿಂದುತ್ವ ಗುಂಪುಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಜೋರಾಗಿ ಕೂಗುತ್ತಾ ಮುಸ್ಲಿಂ ಪ್ರದೇಶಕ್ಕೆ ಪ್ರವೇಶಿಸಿದಾಗ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜನವರಿ 23 ರಂದು ನಿತೇಶ್ ರಾಣೆ ಮೀರಾ ರಸ್ತೆಗೆ ಆಗಮಿಸಿ ಮುಸ್ಲಿಮರಿಗೆ ಬೆದರಿಕೆ ಹಾಕಿದರು. ಅಗತ್ಯವಿದ್ದರೆ ಹಿಂದೂಗಳು ಯುದ್ಧಕ್ಕೆ (ಮುಸ್ಲಿಮರೊಂದಿಗೆ) ಸಿದ್ಧರಿದ್ದಾರೆ ಎಂದು ಘೋಷಿಸಿದರು. ಕೆಲವು ಗಂಟೆಗಳ ನಂತರ, ಆ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಹಿಂದೂಗಳು ಮುಸ್ಲಿಂ ಅಂಗಡಿಗಳನ್ನು ಧ್ವಂಸ ಮಾಡಿ ಅನೇಕ ಮುಸ್ಲಿಂ ಪುರುಷರನ್ನು ಗಾಯಗೊಳಿಸಿದರು.

ನಿತೇಶ್ ರಾಣೆ ಮಾಡಿರುವ ಪಿತೂರಿಗಳು, ಸಮಾಜ ಸ್ವಾಸ್ಥ್ಯ ಕೆಡಿಸುವ ಕೆಲಸಗಳು ಒಂದೆರಡಲ್ಲ. ಅವು ಮುಗಿಯದ ಪುರಾಣ. ಅಂತಹ ವ್ಯಕ್ತಿ ಇಂದು ಮಹಾರಾಷ್ಟ್ರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ. ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿ, ಈ ವ್ಯಕ್ತಿ ಕ್ಷಿಪ್ರಗತಿಯಲ್ಲಿ ಬದಲಾಗಿದ್ದು ಹೇಗೆ ಎಂಬುದನ್ನು ಯೋಚಿಸಬೇಕಾಗಿದೆ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...