ಯಾವುದೇ ವಿಷಯದ ಕುರಿತು ಮನಸ್ಸಿನಲ್ಲಿ ತಳ ಊರಿ ಕೂತಿರುವ ಅತಿ ಅತಾರ್ಕಿಕ ಭಯ ಆತಂಕಕ್ಕೆ ‘ಫೋಬಿಯ’ ಎನ್ನುತ್ತಾರೆ. ಇಸ್ಲಾಂ ಮತ ಹಾಗೂ ಮುಸ್ಲಿಂ ಸಮುದಾಯದ ಕುರಿತಾದ ವಿವೇಚನೆ ಇಲ್ಲದ, ಪೂರ್ವಗ್ರಹಗಳಿಂದ ಪ್ರಚೋದಿತವಾದ ಭಯ, ಆತಂಕಗಳಿಗೆ ‘ಇಸ್ಲಾಮೋಫೋಬಿಯ’ ಎನ್ನಲಾಗುತ್ತದೆ. ಇದರ ಕಾರಣವಾಗಿ, ಇಸ್ಲಾಂ ಮತಾಚರಣೆಗಳು ಹಾಗೂ ಮುಸ್ಲಿಂ ಸಮುದಾಯದ ಜನರ ಕುರಿತು ದ್ವೇಷ ಭಾವನೆ, ಅವರ ಮೇಲೆ ಹಿಂಸಾತ್ಮಕ ಆಕ್ರಮಣಕ್ಕೆ ಸಮಜಾಯಿಷಿ ಹುಟ್ಟುತ್ತದೆ; ಮುಸ್ಲಿಮರ ನಿತ್ಯ ಸಾಧಾರಣ ಬದುಕಿನ ಸಕಲ ನಡೆಗಳಲ್ಲೂ ನಮ್ಮ ನೆಮ್ಮದಿಯ ಬದುಕಿನ ಭದ್ರತೆಗೆ ಸಂಚಕಾರವಿರುತ್ತದೆ ಎಂಬ ಸಾಮಾನ್ಯ ಜ್ಞಾನವು ರೂಢಿಯಾಗುತ್ತದೆ; ಇಡೀ ಸಮುದಾಯವನ್ನು ನಮ್ಮ ಸಮಾಜದಿಂದ ಹೊಡೆದು ಓಡಿಸಬೇಕು ಎಂಬ ಧೋರಣೆಯನ್ನು ಪೋಷಿಸುತ್ತದೆ.
ಇಸ್ಲಾಮೋಫೋಬಿಯ ಹ್ಯಾಗೆ ಹುಟ್ಟಿತು?
ಪಶ್ಚಿಮದ ದೇಶಗಳು ತಮ್ಮ ಸಂಪತ್ತಿನ ವೃದ್ಧಿಗಾಗಿ, ಆಫ್ರಿಕ ಖಂಡ, ಪಶ್ಚಿಮ-ಮಧ್ಯ-ದಕ್ಷಿಣ ಹಾಗೂ ಪೂರ್ವ ಏಷ್ಯಾಗಳ ಭೂಭಾಗಗಳನ್ನು ಆಕ್ರಮಿಸಿ, ಅವುಗಳನ್ನು ತಮ್ಮ ವಸಾಹತುಗಳನ್ನಾಗಿಸಿಕೊಂಡರು. ತಮ್ಮ ಆಕ್ರಮಣಗಳಿಗೆ ಅವರು ಮಾನವ ಕುಲ ಉನ್ನತಿಯ ಕಾರಣಗಳನ್ನು ಸೃಷ್ಟಿಸಿಕೊಂಡರು; ತಾವು ಜಗತ್ತಿನ ಅತಿ ನಾಗರಿಕವಾದ ಶ್ರೇಷ್ಠ ಜನಸಮುದಾಯ ಆಗಿರುವುದಾಗಿಯೂ, ವಸಾಹತು ಪ್ರದೇಶಗಳ ಜನ ಸಮುದಾಯಗಳು ಪಶುಗಳಿಗೆ ಸಮಾನವಾದ ಅನಾಗರಿಕ ಕುಲಗಳಿಗೆ ಸೇರಿದವರೆಂದೂ, ಜಗತ್ತಿನಾದ್ಯಂತ ಮಾನವೀಯ ನಾಗರಿಕ ಸಮಾಜವನ್ನು ಕಟ್ಟಲು ವಸಾಹತುಶಾಹಿ ಹಿಂಸೆಯು ಅನಿವಾರ್ಯವಾಗಿದೆ ಎಂದೂ ಅವರು ವಾದಿಸತೊಡಗಿದರು. ಈ ವಾದಕ್ಕೆ ಪುರಾವೆ ಎಂಬಂತೆ ವಸಾಹತುಗಳ ಜನ ಸಮುದಾಯಗಳ ಬದುಕನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕಥಿಸುವ ‘ಪೌರಾತ್ಯ ವಾದ’ವೆಂಬ ಜ್ಞಾನವನ್ನು ಉತ್ಪಾದಿಸಿ, ಪ್ರಸರಿಸತೊಡಗಿದರು. ಈ ವಾದಕ್ಕೆ ವಸಾಹತು ಪ್ರಜೆಗಳಲ್ಲಿ ಸಹಮತಿ ರೂಢಿಸುವುದು ಆಕ್ರಮಣಕಾರರ ತಂತ್ರದ ಒಂದು ಮುಖ್ಯ ಭಾಗವೇ ಆಗಿತ್ತು. ಇಂತಹ ಆಕ್ರಮಿತ ಭೂಭಾಗಗಳಲ್ಲಿ ಆಡಳಿತ ನಡೆಸುತ್ತಿದ್ದ ಇಸ್ಲಾಮ್ ಮತಾನುಯಾಯಿ ಅರಸರು ಮತ್ತು ಮುಸ್ಲಿಮ್ ಜನ ಸಮುದಾಯಗಳ ಕುರಿತು ರೂಢಿಸಿದ ಪೌರಾತ್ಯವಾದಿ ಜ್ಞಾನದಲ್ಲಿ ಇಸ್ಲಾಮೋಫೋಬಿಯದ ಬೇರುಗಳು ಇವೆ.

20ನೇ ಶತಮಾನದಲ್ಲಿ ವಸಾಹತುಶಾಹಿ ವಿರೋಧಿ ಹೋರಾಟಗಳ ಕಾರಣವಾಗಿ, ಅಪಾರ ನೈಸರ್ಗಿಕ ಸಂಪನ್ಮೂಲಗಳನ್ನು ಉಳ್ಳ ಈ ಭೂಪ್ರದೇಶಗಳ ಮೇಲೆ ಪಶ್ಚಿಮದ ಅಧಿಕಾರಸ್ಥರು ತಮ್ಮ ಹಿಡಿತ ಕಳೆದುಕೊಂಡರು. ಆದರೂ, ಆ ಪ್ರದೇಶಗಳ ಸಂಪನ್ಮೂಲ ಲೂಟಿಗೆ ಅನುಕೂಲವಾಗುವಂತೆ, ಆ ದೇಶಗಳ ಸ್ವತಂತ್ರ ಪ್ರಭುತ್ವಗಳನ್ನು ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು, ಸಾಮ್ರಾಜ್ಯಶಾಹಿ ಆಡಳಿತ ತಂತ್ರಗಳನ್ನು ರಚಿಸತೊಡಗಿದರು. ನೈಸರ್ಗಿಕ ಸಂಪನ್ಮೂಲಗಳ ಅಪಾರ ಭಂಡಾರವಿರುವ ಪಶ್ಚಿಮ ಆಫ್ರಿಕ, ಪಶ್ಚಿಮ ಹಾಗೂ ಮಧ್ಯ ಏಷ್ಯಾದಲ್ಲಿ ಇಸ್ಲಾಮ್ ಮತಾನುಯಾಯಿ ಪ್ರದೇಶಗಳ ಮೇಲೆ ತಮ್ಮ ಅಧಿಕಾರ ಪ್ರಾಬಲ್ಯವನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಪೌರಾತ್ಯವಾದವನ್ನು ಹೊಸ ಜಾಗತಿಕ ಸನ್ನಿವೇಶಕ್ಕೆ ಅನುಗುಣವಾಗಿ ಬೆಳೆಸಿ ಪ್ರಸಾರಿಸುವ ಅಧಿಕಾರ ತಂತ್ರದ ಭಾಗವಾಗಿ ಇಸ್ಲಾಮೋಫೋಬಿಯವನ್ನು ಉತ್ಪಾದಿಸಲಾಗುತ್ತಿದೆ.
ಇದನ್ನೂ ಓದಿರಿ: ಅಚ್ಛೇ ದಿನಗಳ ಅಸಲಿ ಕಥೆ (ಭಾಗ-1)
ಇಸ್ಲಾಮೋಫೋಬಿಯಾವನ್ನು ಯಾವ ಬಗೆಯಲ್ಲಿ ರೂಢಿಸಲಾಗುತ್ತಿದೆ?
•ಪ್ರಪಂಚದಾದ್ಯಂತ ಇರುವ ಮುಸ್ಲಿಮರು ಸಾಮಾಜಿಕವಾಗಿ, ರೂಢಿ ಆಚರಣೆಗಳಲ್ಲಿ ವೈವಿಧ್ಯಮಯ ಸಮುದಾಯಗಳಾಗಿ ಇರುವುದು ವಾಸ್ತವವಾದರೂ, ಇಡೀ ಮುಸ್ಲಿಮ್ ಸಮುದಾಯವು ಒಂದೇ ಬಗೆಯದು ಎಂದು ಚಿತ್ರಿಸುವುದು.
•ಮುಸ್ಲಿಮರು ಹುಟ್ಟಾ ಪಶು ವ್ಯಕ್ತಿತ್ವದ ಕ್ರೂರಿಗಳು ಎಂದು ಚಿತ್ರಿಸುವುದು.
•ಈ ಕಾರಣವಾಗಿ ಇಡೀ ಸಮುದಾಯವು ಆಕ್ರಮಣಶೀಲ ಭಯೋತ್ಪಾದಕರು ಎಂದು ಸಾರುವುದು.
• ಮುಸಲ್ಮಾನರು ಯಾವ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವರೋ, ಅಂತಹ ದೇಶಗಳ ರಾಷ್ಟ್ರ ಹಿತ, ರೂಢಿಗತ ಆಚರಣೆ, ಆಂತರಿಕ ಭದ್ರತೆಗಳಿಗೆ ಮಾರಕವಾಗಿರುತ್ತಾರೆ ಎಂದು ಬಿಂಬಿಸುವುದು.
•ಮುಸ್ಲಿಮರು ಹೇರಳವಾಗಿ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡು, ಇಸ್ಲಾಮಿಕ್ ಮತ ಸಂಪ್ರದಾಯವನ್ನು ಪಸರಿಸುತ್ತಾ, ಬಹುಸಂಖ್ಯಾತರ ಪರಂಪರೆಯನ್ನು ನಾಶಗೊಳಿಸಲು ಸನ್ನದ್ಧರಾಗಿರುವರು ಎಂಬ ಪ್ರಚಾರದ ಮೂಲಕ ಇತರ ಸಮುದಾಯಗಳಲ್ಲಿ ಭಯ, ಆತಂಕ ಬಿತ್ತುವುದು.
•ಮುಸ್ಲಿಮರು ಆಧುನಿಕ ನಾಗರಿಕತೆಗೆ ಒಗ್ಗದ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿರೋಧಿಸುವ ಮೂಲಭೂತವಾದಿಗಳು ಎಂಬ ಸಂದೇಹವನ್ನು ಇತರ ಸಮುದಾಯಗಳ ಬುದ್ಧಿಭಾವಗಳಲ್ಲಿ ಬಿತ್ತುವುದು.
•ಮುಸ್ಲಿಮರು ತಲತಲಾಂತರಗಳಿಂದ ಬೇರೆ ಸಮುದಾಯಗಳ ಜೊತೆ ಸಹಬಾಳ್ವೆ ನಡೆಸುತ್ತಿದ್ದರೂ, ಅವರನ್ನು ತಮ್ಮ ಸಾಮುದಾಯಿಕ ಬದುಕಿಗೆ ‘ಹೊರಗಿನವರು’, ಯಾವುದೇ ಹಕ್ಕು, ಸಮಾನತೆ, ಸಹೋದರತ್ವ ಭಾವಗಳಿಗೆ ಅನರ್ಹರು ಎಂಬ ವಿಚಾರಗಳನ್ನು ರೂಢಿಸುವುದು.
•ಮುಸ್ಲಿಮರನ್ನು ಹೀನವಾದ ಗುಣವುಳ್ಳವರೆಂಬ ನಿಂದನೆಗಳನ್ನು ಸಹಜಗೊಳಿಸುವುದು.
•ಜಗತ್ತಿನ ಎಲ್ಲ ಪ್ರದೇಶಗಳನ್ನು ಇಸ್ಲಾಮೀಕರಣಗೊಳಿಸುವ ಸಂಚು ನಡೆಯುತ್ತಿದೆ ಎಂಬ ಊಹಾಪೋಹಗಳನ್ನು ವಿನಾಕಾರಣ ಪ್ರಚಾರ ಮಾಡುವುದು.
•ಈ ಎಲ್ಲ ವಿಚಾರಗಳನ್ನು, ಹರಳುಗಟ್ಟಿಸಿ, ಪ್ರತಿ ಘಟನೆ, ವಿದ್ಯಮಾನಗಳ ಸಂದರ್ಭದಲ್ಲಿ ಮುಸ್ಲಿಮರ ಘಾತಕ ಪಾತ್ರವಿದೆ ಎಂಬ ರಂಜಕ ಊಹಾ ಪ್ರಚಾರಗಳನ್ನು ಮಾಡುವ ಪ್ರಸಾರ ಮಾಧ್ಯಮ ಮಾದರಿಗಳನ್ನು ನೆಲೆಗೊಳಿಸುವುದು.
•ಪ್ರಸಾರ ಮಾಧ್ಯಮಗಳೂ ಸೇರಿದಂತೆ, ಆಧುನಿಕ ನಾಗರಿಕ ಸಂಘ ಸಂಸ್ಥೆಗಳಲ್ಲಿ ಮುಸ್ಲಿಮರ ಭಾಗವಹಿಸುವಿಕೆಯನ್ನು ತಡೆದು, ಪೂರ್ವಗ್ರಹಗಳನ್ನು ಗಟ್ಟಿಗೊಳಿಸುವುದು.
ಸಿನೆಮಾಕ್ಕೂ ಇಸ್ಲಾಮೋಫೋಬಿಯಾಕ್ಕೂ ಏನು ಸಂಬಂಧ?
ಸಿನೆಮಾವು ಮನುಷ್ಯರ ಮನೋಭಾವವನ್ನು ದಟ್ಟವಾಗಿ ಪ್ರಭಾವಿಸಬಲ್ಲ ದೃಶ್ಯ ಮಾಧ್ಯಮವಾಗಿದೆ. 20ನೇ ಶತಮಾನದಲ್ಲಿ ಅತಿ ವೇಗವಾಗಿ ತನ್ನ ಕಲೆಯ ನೆಲೆಯನ್ನು ಕಂಡುಕೊಂಡ ಸಿನೆಮಾ ಮಾಧ್ಯಮವು, ಶತಮಾನದುದ್ದಕ್ಕೂ ಸಾಮಾಜಿಕ, ರಾಜಕೀಯ ವಿಚಾರಗಳ ಪ್ರಸಾರಕ್ಕೆ ಶಕ್ತವಾಗಿ ಒದಗಿ ಬರುವ ದೃಶ್ಯ ಮಾಧ್ಯಮ ಎಂಬುದನ್ನು ಜಗತ್ತಿನಾದ್ಯಾಂತ ಅಧಿಕಾರಸ್ಥರು ಕಂಡುಕೊಂಡಿದ್ದಾರೆ. ಜನ ಸಮೂಹಕ್ಕೆ ಕಲಾ ಮಾಧ್ಯಮದ ಮೂಲಕ ರಂಜನೆ ಒದಗಿಸುತ್ತಲೇ, ನೋಡುಗರ ಬುದ್ಧಿಯನ್ನು ಪ್ರಭಾವಿಸಬಲ್ಲ ಸಿನೆಮಾ ವ್ಯಾಕರಣದ ವಿಧಾನವನ್ನು ಎಲ್ಲ ವಿಚಾರಗಳ ಪ್ರಸಾರಕ್ಕೆ ಸಾಧನವಾಗಿ ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿರಿ: ಅಚ್ಛೇ ದಿನಗಳ ಅಸಲಿ ಕಥೆ (ಭಾಗ- 2)
ಒಂದು ಸಿನೆಮಾವು ತನ್ನ ದೃಶ್ಯ ಕಥಾ ನಿರೂಪಣೆಯ ಮೂಲಕ, ಏಕಕಾಲಕ್ಕೆ ಮನುಷ್ಯರಲ್ಲಿ ಭಾವ ಸಂವೇದನೆಯನ್ನೂ, ಬೌದ್ಧಿಕ ವಿಚಾರಗಳನ್ನೂ ಪ್ರಚೋದಿಸಬಲ್ಲ ಮಾಧ್ಯಮವಾಗಿದೆ. ದೃಶ್ಯ ಕಥನ ಕಟ್ಟುವವರು ಸಾಮಾನ್ಯ ನೋಡುಗರ ಬದುಕಿನ ಬುದ್ಧಿ-ಭಾವಗಳನ್ನು ಮೀಟುವ ಹಾಗೆ ಕಥನವನ್ನು ನೋಡುಗರಿಗೆ ತಲುಪಿಸುವ ಭಾವ ಕಥನ ನಿರೂಪಣೆಯನ್ನು ಪ್ರಯೋಗಿಸುತ್ತಾರೆ (ಇಂಗ್ಲಿಷಿನಲ್ಲಿ ಇದಕ್ಕೆ Sujet ಅನ್ನುತ್ತಾರೆ). ನೋಡುಗರು ಈ ಕಥನವನ್ನು ತಮ್ಮ ವ್ಯಕ್ತಿಗತ ಭಾವನೆಗಳನ್ನು ಅನುಸರಿಸಿ ಅನುಭವಿಸುವುದರ ಜೊತೆ ತಮ್ಮ ರೂಢಿಗತ ಸಾಮಾಜಿಕ ಅನುಭವಗಳ ಜೊತೆ ಹೆಣೆದು, ತಮ್ಮದೇ ಅನುಭವ ಕಥನವನ್ನು ಕಟ್ಟಿಕೊಳ್ಳಬಲ್ಲವರು ಆಗಿರುತ್ತಾರೆ (ನೋಡುಗರು ಕಟ್ಟಿಕೊಳ್ಳುವ ಅನುಭವ ಕಥನವನ್ನು ಇಂಗ್ಲಿಷಿನಲ್ಲಿ Fabula ಎನ್ನುತ್ತಾರೆ). ಹೀಗೆ ಸಿನೆಮಾ ಒಂದು ತನ್ನ ಭಾವ ಕಥಾ ನಿರೂಪಣೆಯ ಚತುರತೆಯಲ್ಲಿ, ಅದನ್ನು ಕಂಡ ಪ್ರೇಕ್ಷಕರು ಕಟ್ಟಿಕೊಳ್ಳುವ ಅನುಭವ ಕಥನವನ್ನು ನಿಯಂತ್ರಿಸಬಲ್ಲ ದೃಶ್ಯ ಮಾಧ್ಯಮವಾಗಿದೆ.
ಉತ್ತರ ಅಮೆರಿಕದ (USA) ಪ್ರಭುತ್ವವು ತನ್ನ ಸಂಪತ್ತಿನ ಪ್ರಾಬಲ್ಯ ಕಾಯ್ದುಕೊಳ್ಳಲು ಅಪಾರ ತೈಲ ಸಂಪತ್ತನ್ನು ಉಳ್ಳ ಪಶ್ಚಿಮ ಹಾಗೂ ಮಧ್ಯ ಏಷಿಯಾದ ಮುಸ್ಲಿಮ್ ಬಹು ಸಂಖ್ಯಾತ ದೇಶಗಳ ಮೇಲೆ ಅಪಾರವಾದ ಹಿಂಸೆ ನಡೆಸುತ್ತಿದೆ. ಈ ಹಿಂಸೆ ತನ್ನ ಸಾರ್ವಭೌಮತೆಗೂ, ಜಗತ್ತಿನ ಸಂರಕ್ಷಣೆಗೂ ಅತಿ ಅವಶ್ಯಕವೆಂದು ಪ್ರತಿಪಾದಿಸಲೂ ಮತ್ತು ಅದಕ್ಕೆ ತನ್ನ ಪ್ರಜೆಗಳಲ್ಲಿ ಸಹಮತ ರೂಪಿಸಲೂ, ಇಸ್ಲಾಮೋಫೋಬಿಯವನ್ನು ಪ್ರಬಲ ಹತಾರವಾಗಿ ಪ್ರಯೋಗಿಸುತ್ತಿದೆ. ಉತ್ತರ ಅಮೆರಿಕೆಯ ಪ್ರಭಾವಶಾಲಿ ಸಿನೆಮಾ ಉತ್ಪಾದನಾ ಉದ್ಯಮವಾದ ಹಾಲಿವುಡ್, ತನ್ನ ಪ್ರಭುತ್ವದ ಕೃತ್ಯಗಳ ಸಮರ್ಥನೆಗಾಗಿ ತಾನು ಕಟ್ಟುವ ಸಿನೆಮಾಗಳಲ್ಲಿ ಇಸ್ಲಾಮೋಫೋಬಿಯವನ್ನು ನುರಿತವಾಗಿ ಹೆಣೆಯುತ್ತಿದೆ.
20, 21ನೇ ಶತಮಾನದುದ್ದಕ್ಕೂ ಹಾಲಿವುಡ್ಡಿನ ಸಿನೆಮಾಗಳು ನಿರಂತರವಾಗಿ ಇಸ್ಲಾಮೋಫೋಬಿಯವನ್ನು ಪ್ರಸರಿಸುತ್ತಿರುವ ಬಗೆಯನ್ನು ಜ್ಯಾಕ್ ಷೀನ್ ಹಾಗೂ ಎವೆಲಿನ್ ಅಲ್ಸುಲ್ತಾನಿ ಸಾವಿರಕ್ಕೂ ಮಿಕ್ಕಿದ ಸಿನೆಮಾಗಳ ಉದಾಹರಣೆಗಳ ಮೂಲಕ ಸಾದರಪಡಿಸಿದ್ದಾರೆ (ಜ್ಯಾಕ್ ಷೀನ್ ಅವರ ‘ರೀಲ್ ಬ್ಯಾಡ್ ಅರಬ್ಸ್ : ಹೌ ಹಾಲಿವುಡ್ ವಿಲಿಫೈಸ್ ಎ ಪೀಪಲ್’ ಕೃತಿ ಹಾಗೂ ಅದೇ ಹೆಸರಿನ ಸಾಕ್ಷ್ಯಚಿತ್ರವನ್ನು ನೋಡಿ).

ಭಾರತದ ಸಿನೆಮಾಗಳಲ್ಲಿ ಇಸ್ಲಾಮೋಫೋಬಿಯ ಇದೆಯಾ?
ಭಾರತವು ಬ್ರಿಟೀಷರ ವಸಾಹತುವಾಗಿದ್ದ ಕಾಲದಲ್ಲಿ, ಬ್ರಿಟೀಷ್ ಆಡಳಿಗಾರರು ದೇಶದ ಹಿಂದೂ ಹಾಗೂ ಮುಸ್ಲಿಮರ ನಡುವೆ ಒಡಕು ಹುಟ್ಟಿಸುವ ತಂತ್ರದ ಭಾಗವಾಗಿ ‘ಮುಸ್ಲಿಮ್ ಅರಸರು ಹಿಂದೂ ಸಾಮ್ರಾಜ್ಯಗಳ ಮೇಲೆ ದಾಳಿ ಮಾಡಿ, ಭವ್ಯ ಹಿಂದೂ ನಾಗರಿಕತೆಯನ್ನು ನಾಶ ಮಾಡಿದರು’ ಎಂಬ ಚರಿತ್ರೆಯ ಕಥನವನ್ನು ಕಟ್ಟಿದರು. ಇಂತಹ ಚರಿತ್ರೆಯ ಸಂತಾನಗಳಾಗಿ ‘ಹಿಂದೂ ಪುನರುತ್ಥಾನವಾದ’ ಮತ್ತು ‘ಹಿಂದುತ್ವ ರಾಷ್ಟ್ರೀಯವಾದ’ಗಳು ಹುಟ್ಟಿದವು. ಈ ಎರಡೂ ವಿಚಾರಗಳೂ ದೇಶದ ಮುಸ್ಲಿಮ್ ಸಮುದಾಯವನ್ನು ‘ಹೊರಗಿನವರು’ ಹಾಗೂ ದೇಶದ ಉನ್ನತಿಗೆ ಮಾರಕವಾದವರು ಎಂಬ ವಿಚಾರ ಪ್ರಚಾರವನ್ನು 20ನೇ ಶತಮಾನದ ಪೂರ್ವಾರ್ಧದವರೆಗೂ ರೂಢಿಸುತ್ತಲೇ ಬಂದವು. ವಸಾಹತುಶಾಹಿಯಿಂದ ಸ್ವಾತಂತ್ರ್ಯ ಪಡೆವ ಕಾಲಕ್ಕೆ ನಡೆದ ಮತಾಧಾರಿತ ದೇಶ ವಿಭಜನೆಯ ಮಹಾ ಹಿಂಸೆ ಹಾಗೂ ತಕ್ಷಣದಲ್ಲೇ ಘಟಿಸಿದ ಕಾಶ್ಮೀರವನ್ನು ತಮ್ಮ ವಶದಲ್ಲಿ ಪಡೆಯಲು ಪಾಕಿಸ್ತಾನ ಹಾಗೂ ಭಾರತದ ಪ್ರಭುತ್ವಗಳು ನಡೆಸಿದ ಯುದ್ಧ ಸಂಘರ್ಷಗಳ ಕಾರಣವಾಗಿ ಮುಸ್ಲಿಮ್ ಸಮುದಾಯ ವಿರೋಧಿ ಪೂರ್ವಗ್ರಹಗಳ ಪ್ರಚಾರವು ಸಮಾಜದಲ್ಲಿ ಗಟ್ಟಿಗೊಳ್ಳ ತೊಡಗಿತು.
ಇದನ್ನೂ ಓದಿರಿ: ಬಿಜೆಪಿ ವಾಷಿಂಗ್ ಮಷೀನ್‌ನ ಈ ಸ್ವಾರಸ್ಯಕರ ಕಥೆಗಳನ್ನು ಕೇಳಿದ್ದೀರಾ?
ಭಾರತದ ಚಲನಚಿತ್ರ ರಂಗದ ಮೊದಲ ಕಾಲಘಟ್ಟದಲ್ಲಿ ವೈದಿಕ ಹಿಂದೂ ಪುರಾಣಗಳನ್ನು ವಸ್ತುವಾಗಿ ಇಟ್ಟುಕೊಂಡ ಸಿನೆಮಾಗಳ ಜೊತೆಗೆ, ಉತ್ತರ ಭಾರತದ ಮುಸ್ಲಿಮ್ ಅರಸರ ಆಳ್ವಿಕೆಯ ಕಾಲದ ಅರೆ ಚಾರಿತ್ರಿಕ ವಸ್ತುಗಳನ್ನುಳ್ಳ ಸಿನೆಮಾಗಳೂ ಜನಪ್ರಿಯವಾಗಿದ್ದವು. ಭಾರತದ ಮೊದಲ ಟಾಕಿ ಚಿತ್ರವಾದ ‘ಅಲಾಮ್ ಅರಾ’ವಾಗಲೀ, ಬಹು ಜನಪ್ರಿಯತೆ ಪಡೆದ ‘ಮೋಘಲ್ -ಎ-ಆಜಮ್’, ‘ಬೈಜು ಬಾವ್ರ’ ದಂತಹ ಸಿನೆಮಾಗಳಾಗಲೀ, ಮತೀಯ ಪೂರ್ವಗ್ರಹಗಳನ್ನು ಹೊಂದಿರಲಿಲ್ಲ. ಬಾಂಬೆಯ ಚಿತ್ರೋದ್ಯಮವು ಮುಸ್ಲಿಮ್ ಕಲಾವಿದರನ್ನು ಒಳಗೊಂಡ ಉದ್ಯಮವಾಗಿತ್ತು. ದೇಶ ವಿಭಜನೆಯ ಮತೀಯ ದ್ವೇಷದ ಅವಿವೇಕವನ್ನು ಪ್ರಶ್ನಿಸುವ ‘ಧರ್ಮಪುತ್ರ'(1961), ‘ಧೂಲ್ ಕಾ ಫುಲ್’ (1959)ರಂತಹ ಸಿನೆಮಾಗಳು ನಿರ್ಮಾಣವಾಗಿದ್ದು ಮಾತ್ರವಲ್ಲ ಜನಪ್ರಿಯತೆಯನ್ನೂ ಗಳಿಸಿದ್ದವು. ಗುರುದತ್ತ್ ಮುಸ್ಲಿಮ್ ಸಮುದಾಯದ ವಸ್ತುವನ್ನುಳ್ಳ ‘ಚೌಧ್ವಿ ಕಾ ಚಾಂದ್’ (1960) ಮಾಡಿ ಯಶಸ್ವಿಯಾಗುವ ವಾತಾವರಣವಿತ್ತು.
1965ರ ಪಾಕಿಸ್ತಾನದ ಜೊತೆಗಿನ ಯುದ್ಧದ ನಂತರ, ಹಿಂದುತ್ವ ರಾಷ್ಟ್ರವಾದಿ ಆರ್‌ಎಸ್‌ಎಸ್‌ನ ಮತೀಯವಾದಿ ವಿಚಾರಗಳ ಪ್ರಭಾವವು ಸಮಾಜದಲ್ಲಿ ವಿಸ್ತೃತವಾಗಿ ನೆಲೆ ಕಂಡುಕೊಳ್ಳತೊಡಗಿತ್ತು. ಈ ನಂತರದಲ್ಲಿ, ಭಾರತದ ಸಿನೆಮಾಗಳಲ್ಲಿ ಮುಸ್ಲಿಮರ ಬದುಕಿನ ಚಿತ್ರಣವು ಬದಲಾಗುತ್ತಾ ಹೋಯಿತು.
1960-80ರ ಮೊದಲ ಹಂತದಲ್ಲಿ, ಸಿನೆಮಾಗಳ ಭಾವ ಕಥನಾ ನಿರೂಪಣೆಯಲ್ಲಿ (Sujet) ಮುಸ್ಲಿಮ್ ಸಮುದಾಯದ ಬದುಕನ್ನು ‘ಹೊರಗಿಡುವ’ ಕೆಲಸವಾಯಿತು. ಹೊರಗಿನ ಸಮಾಜದಲ್ಲಿ ಮತೀಯ ಹಿಂಸೆಗಳು ತೀವ್ರವಾದ ವಿದ್ಯಮಾನಗಳು ಜರುಗುತ್ತಿದ್ದರಿಂದ, ಸಿನೆಮಾದ ನೋಡುಗರು ಕಟ್ಟಿಕೊಳ್ಳವ ಸಾಮಾಜಿಕ ಅನುಭವದ ಕಥನಕ್ಕೂ (Fabula) ಮುಸಲ್ಮಾನ ಸಮುದಾಯವು ಹೊರಗುಳಿಯುವ ಸಾಧ್ಯತೆಯು ಹೆಚ್ಚಾಗುತ್ತಾ ಹೋಯಿತು. ಸಿನೆಮಾ ಅನುಭವದ ಈ ಎರಡು ಕಥನಗಳಿಂದ ಒಂದು ಸಮುದಾಯ ಹೊರಗುಳಿಯುವುದು, ಫೋಬಿಯ ಚಿಗೊರೊಡೆವ ಮೊದಲ ಹಂತ. ಈ ಕಾಲದ ಸಿನೆಮಾಗಳಲ್ಲಿ ಮುಸ್ಲಿಮ್ ಪಾತ್ರಗಳು ಒಂದೋ ನಗಣ್ಯ ಹಾಸ್ಯ ಪಾತ್ರಗಳೋ ಅಥವಾ ಖಳನಾಯಕನ ಕೇಡಿ ಸಹಚರರೋ ಆಗಿರುತ್ತಿದ್ದರು(ಕೇಡಿ ಮುಸ್ಲಿಮರು). ಇಲ್ಲವೆಂದಾದರೆ ಕಷ್ಟಗಳೆದಿರು ನಿಸ್ಸಹಾಯಕವಾಗಿ ನಾಯಕನ ರಕ್ಷಣೆ ಕೋರುವ ಜೀವಹೀನ ಪಾತ್ರಗಳಾಗಿರುತ್ತಿದ್ದವು(ಸಾದು ಮುಸ್ಲಿಮರು). ಈ ಬಗೆಯ ಪಾತ್ರ ಚಿತ್ರಣಗಳು ಭಾರತದ ವೈವಿಧ್ಯಮಯ ಮುಸ್ಲಿಮರ ಬದುಕನ್ನು, ಏಕರೂಪದ ಸಮುದಾಯವೆಂಬ ಸಾಮಾಜಿಕ ಮನೋಭಾವ ರೂಢಿಸುವುದಕ್ಕೆ ಅನುಕೂಲ ಮಾಡಿಕೊಟ್ಟಿತು. ‘ಬಜಾರ್'(1982), ‘ನಿಖಾ’ (1982), ‘ತವೈಫ್’ (1985) ಅಂತಹ ಸಿನೆಮಾಗಳು ಮುಸ್ಲಿಮ್ ಸಮುದಾಯದ ಒಳಗಿನ ಸಾಂಪ್ರದಾಯಿಕ ಬಿಕ್ಕಟ್ಟುಗಳನ್ನು ವಸ್ತುವಾಗಿ ಉಳ್ಳ ಸಿನೆಮಾಗಳಾಗಿದ್ದರೂ, ನೋಡುಗರು ಕಟ್ಟಿಕೊಳ್ಳುವ ಕಥನದಲ್ಲಿ, ಇಸ್ಲಾಮೋಫೋಬಿಯದ ಒಂದು ಲಕ್ಷಣವಾದ, ‘ಇಡಿ ಮುಸ್ಲಿಮ್ ಸಮುದಾಯವೇ ಮತಾಂಧ ಮಹಿಳಾ ಶೋಷಕ ಮೂಲಭೂತವಾದಿ’ ಜನ ಸಮೂಹವೆಂಬ ನಂಬಿಕೆ ಗಟ್ಟಿಗೊಳಿಸುವುದಕ್ಕೆ ಪೂರಕವಾದ ಸಿನೆಮಾ ಭಾವ ಕಥಾ ನಮೂನೆಯವಾಗಿರುವ ಸಾಧ್ಯತೆ ಇತ್ತು. ಭಾರತದ ಸಿನೆಮಾದಲ್ಲಿ ‘ಕ್ರುದ್ಧ ಯುವಕ’ನ ಯುಗ ಆರಂಭಿಸಿದ ‘ಜಂಝೀರ್’ (1973)ರ ಸಿನೆಮಾದಲ್ಲಿ ಖ್ಯಾತ ಖಳ ಪಾತ್ರ ನಟ ಪ್ರಾಣ್ ವಹಿಸಿದ ಷೇರ್ ಖಾನ್ ಪಾತ್ರ ಚಿತ್ರಣವು 1990ರ ನಂತರದ ಮುಂದಿನ ಹಂತದ ಸಿನೆಮಾಗಳಲ್ಲಿ ‘ಒಳ್ಳೆಯ ಮುಸ್ಲಿಮ್’ ಮತ್ತು ‘ಕೇಡಿ ಮುಸ್ಲಿಮ್’ ಪಾತ್ರ ರಚನೆಗೆ ಮಾದರಿ ಒದಗಿಸುವಂತಿತ್ತು. ‘ಒಳ್ಳೆಯ ಮುಸ್ಲಿಮ್’ ಜನ ರಕ್ಷಕ ಹಿಂದೂ ನಾಯಕನ (ಆತನ ವ್ಯಕ್ತಿತ್ವ ಸಾಮಾಜಿಕವಾಗಿ ಹೇಗಾದರೂ ಇರಲಿ) ಹಿಂಬಾಲಕ/ಬೆಂಬಲಿಗ ಆಗಿರುತ್ತಾನೆ; ‘ಕೇಡಿ ಮುಸ್ಲಿಮ್’ ನಾಯಕನಿಗೆ (ಆ ಮೂಲಕ ಹಿಂದೂ ಸಮುದಾಯಕ್ಕೆ) ಆತಂಕ ಒಡ್ಡುವವನು ಆಗಿರುತ್ತಾನೆ. ಮುಂದೆ ಈ ‘ಕೇಡಿ ಮುಸ್ಲಿಮ್’ ಪಾತ್ರ ರಚನೆಯು ಇಡೀ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಗುಣ ಪಡೆಯಿತು.


1990ರ ದಶಕದಲ್ಲಿ, ಭಾರತದ ಪ್ರಭುತ್ವವು ಕಾಶ್ಮೀರದ ಸ್ವಾಯತ್ತತೆಯ ವಿಷಯದಲ್ಲಿ ನಡೆದುಕೊಂಡ ಬಗೆಯಿಂದಾಗಿ, ಆ ಪ್ರದೇಶದಲ್ಲಿ ವಿಚ್ಛಿದ್ರಕಾರಿ ಬಣಗಳು ತಲೆ ಎತ್ತಿ, ಭಯೋತ್ಪಾದಕ ಹಿಂಸಾಚಾರಗಳು ನಡೆಯತೊಡಗಿದವು. ಅವುಗಳನ್ನು ಎದುರಿಸುವಲ್ಲಿ ಪ್ರಭುತ್ವವು ಸೈನ್ಯದ ಮೂಲಕ ನಾಗರಿಕರ ದಮನವನ್ನು ಆರಂಭಿಸಿತು. ಮಾಧ್ಯಮಗಳು ಹಾಗೂ ಪ್ರಭುತ್ವ ಪ್ರಚಾರವು ಇಡೀ ಕಾಶ್ಮೀರದ ಮುಸ್ಲಿಮ್ ಜನ ಸಮುದಾಯವೇ ಶಂಕಿತ ಭಯೋತ್ಪಾದಕರು ಎಂಬ ಚಿತ್ರವನ್ನು ಸೃಷ್ಟಿಸತೊಡಗಿತು. ಮತ್ತೊಂದು ಕಡೆ ಹಿಂದೂರಾಷ್ಟ್ರವಾದಿ ಆರೆಸ್ಸೆಸ್ಸಿನ ರಾಮ ಜನ್ಮಭೂಮಿ ಅಭಿಯಾನವು ಭಾರತದ ಮುಸ್ಲಿಮರನ್ನು ‘ಹಿಂದೂ ವಿರೋಧಿಗಳು’, ‘ದೇಶದ್ರೋಹಿಗಳು’ ಮತ್ತು ಬಹುಸಂಖ್ಯಾತ ಹಿಂದೂಗಳ ಬದುಕಿಗೆ ಮಾರಕವಾದವರು ಎಂಬ ಮತೀಯವಾದಿ ಪ್ರಚಾರದಲ್ಲಿ ತೊಡಗಿತು; ಅಭಿಯಾನದ ಉದ್ದಕ್ಕೂ ಮುಸ್ಲಿಮರ ಮೇಲೆ ಹಿಂಸಾಚಾರ ನಡೆಯಿತು; ಸಾಂವಿಧಾನಿಕ ಪ್ರಜಾಪ್ರಭುತ್ವದ ಬುಡ ಅಲುಗಿಸುವ ಬಾಬ್ರಿ ಮಸೀದಿ ಧ್ವಂಸ ನಡೆಯಿತು; ಅದರ ಬೆನ್ನಿಗೆ ಅಪಾರವಾದ ಮತೀಯ ಹಿಂಸೆಗಳು ನಡೆದವು; ಪರಿಣಾಮವೆಂಬಂತೆ ಮುಸ್ಲಿಮ್ ಉಗ್ರವಾದಿ ಬಣಗಳಿಂದ ಬಾಂಬ್ ಸ್ಫೋಟದಂತಹ ಬೆರಳೆಣಿಕೆಯ ಹಿಂಸಾ ಕೃತ್ಯಗಳು ಘಟಿಸಿದವು. ಈ ವಿದ್ಯಮಾನಗಳು, ಅದಾಗಲೇ ಹದಗೊಳಿಸಲಾಗಿದ್ದ ಮತೀಯ ಪೂರ್ವಗ್ರಹಗಳ ನೆಲದಲ್ಲಿ ಇಸ್ಲಾಮೋಫೋಬಿಯ ಬಿತ್ತಿ ಬೆಳೆಯುವ ಸಾಮಾಜಿಕ ರಾಜಕೀಯವು ಬಹು ಸಂಖ್ಯಾತರ ಸಮ್ಮತಿಯೊಂದಿಗೆ ವೇಗವಾಗಿ ಪಸರಿಸತೊಡಗಿತು. ಈ ಬೆಳವಣಿಗೆಗಳು ಭಾರತದ ಚಿತ್ರರಂಗದಲ್ಲಿ ಖಚಿತವಾದ ಇಸ್ಲಾಮೋಫೋಬಿಯವನ್ನು ಮೈಗೂಡಿಸಿಕೊಂಡ ಭಾವ ಕಥನಗಳನ್ನು ಉಳ್ಳ ಸಿನೆಮಾಗಳನ್ನು ಕಟ್ಟುವುದಕ್ಕೆ ಪ್ರಚೋದನೆ ಒದಗಿಸಿತು.
ಇದನ್ನೂ ಓದಿರಿ: ‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?
1990ರ ದಶಕದಲ್ಲಿ ತೆರೆ ಕಂಡ ‘ರೋಜ'(1992), ‘ಬಾಂಬೆ’ (1995), ‘ಸರ್ಫರೋಷ್’ (1999), ‘ಮಿಷನ್ ಕಾಶ್ಮೀರ್’ (2000) ದಂತಹ ಸಿನೆಮಾಗಳು ಉದ್ದೇಶಪೂರ್ವಕವಾಗಿ ಇಸ್ಲಾಮೋಫೋಬಿಯವನ್ನು ರೂಢಿಸುವುದಕ್ಕಾಗಿ ನಿರ್ಮಿಸುವುದಲ್ಲ. ಆದರೆ, ಅವುಗಳ ಭಾವ ಕಥಾ ನಿರೂಪಣೆಯು ಇಸ್ಲಾಮೋಫೋಬಿಯಾದ ಕೆಲವು ಗುಣಲಕ್ಷಣಗಳನ್ನು ಸಿನೆಮಾ ಕಟ್ಟುವಿಕೆಯಲ್ಲಿ ರೂಢಿಸಿದವು. ರಾಮ ಜನ್ಮಭೂಮಿ ಅಭಿಯಾನದ ರೂವಾರಿಯಾಗಿದ್ದು, ನಂತರ ದೇಶದ ಒಕ್ಕೂಟ ಸರಕಾರದ ಗೃಹ ಮಂತ್ರಿಯಾಗಿದ್ದ ಎಲ್.ಕೆ.ಅದ್ವಾನಿ ‘ಮುಸ್ಲಿಮರೆಲ್ಲ ಭಯೋತ್ಪಾದಕರು ಆಗಿರದಿರಬಹುದು, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರೇ ಆಗಿದ್ದಾರೆ’ ಎಂಬ ಇಸ್ಲಾಮೋಫೋಬಿಯಾಕ್ಕೆ ರೂಪಕವಾದ ಮಾತನ್ನು ಆಡಿದ್ದರು. ಈ ಸಿನೆಮಾಗಳು ಬೆರಳಿಕೆಯಷ್ಟು ‘ಒಳ್ಳೆಯ ಮುಸ್ಲಿಮ್’ ಪಾತ್ರಗಳ ಎದಿರಾಗಿ ಮುಖಹೀನವೂ, ಸರ್ವವ್ಯಾಪಿಯೂ ಆಗಿರಬಲ್ಲವು ಎಂದು ನಂಬಿಸಬಹುದಾದ ‘ದೇಶವಿರೋಧಿ’, ‘ಭಯೋತ್ಪಾದಕ’ ಮುಸ್ಲಿಮ್ ಪಾತ್ರಗಳನ್ನು ತಮ್ಮ ಭಾವ ಕಥನದಲ್ಲಿ ಹೆಣೆಯುವ ಮೂಲಕ, ಅದ್ವಾನಿಯವರ ಮಾತುಗಳನ್ನು ಸಮರ್ಥಿಸಬಲ್ಲಂತಹವಾಗಿದ್ದವು. ಈ ಹಂತದಲ್ಲಿ, ಬಾಲಿವುಡ್‌ನಲ್ಲಿ ಮಾತ್ರವಲ್ಲ, ಕನ್ನಡ, ತಮಿಳು, ತೆಲುಗು ಸಿನೆಮಾಗಳಲ್ಲೂ ಇದೇ ಬಗೆಯ ವಸ್ತು, ಪಾತ್ರ ರಚನೆಗಳು ಅನುರಣಿತವಾದವು. ಸಿನೆಮಾಗಳ ಒಳಗಿನ ಇಂಥಾ ಭಾವಕಥನ ಹಾಗೂ ಹೊರಗೆ ಮುಸ್ಲಿಮ್ ದ್ವೇಷವನ್ನು ಬಹಿರಂಗವಾಗಿ ಪ್ರಸಾರಿಸುವ ಸಾಮಾಜಿಕ-ರಾಜಕೀಯ ವಿದ್ಯಮಾನಗಳು, ಸಿನೆಮಾ ವೀಕ್ಷಕರ ಅನುಭವ ಕಥನದಲ್ಲಿ ಇಸ್ಲಾಮೋಫೋಬಿಯಾದ ಮುಖ್ಯ ಗುಣಗಳು ಅಂತರ್ಗತವಾಗುವುದಕ್ಕೆ ಅನುಕೂಲಕರವಾಗಿದ್ದವು. ಮೇಲೆ ಹೆಸರಿಸಿರುವ ಸಿನೆಮಾಗಳ ಭಾವ ಕಥನವು ಹೇಗೆ ಪ್ರೇಕ್ಷಕರಲ್ಲಿ ಇಸ್ಲಾಮೋಫೋಬಿಯವನ್ನು ಪ್ರಚೋದಿಸಬಲ್ಲ ಗುಣ ಹೊಂದಿವೆ ಎಂದು ವಿವರಿಸುವ ಅನೇಕ ಪ್ರಬಂಧಗಳು ಪ್ರಕಟವಾಗಿವೆ. ಇಂತಹ ಸಿನೆಮಾಗಳು ‘ರಾಷ್ಟ್ರೀಯ ಭಾವೈಕ್ಯ ಸಾರುವ ಸಿನೆಮಾ’ಗಳೆಂದು ರಾಷ್ಟ್ರ ಪ್ರಶಸ್ತಿ ಪಡೆದದ್ದನ್ನು ಗಮನಿಸಿದರೆ, ಇಸ್ಲಾಮೋಫೋಬಿಯವನ್ನು ಸಹಜಗೊಳಿಸಬಲ್ಲ ಸಿನೆಮಾಗಳ ಪ್ರಭಾವವು ಅರ್ಥವಾದೀತು.
ಹಿಂದುತ್ವ ರಾಷ್ಟ್ರವಾದಿ ಆರೆಸ್ಸೆಸ್ಸಿಗೆ ಇಸ್ಲಾಮೋಫೋಬಿಯವನ್ನು ಜನ ಮಾನಸದಲ್ಲಿ ರೂಢಿಸುವುದು ಬಹಳ ಪ್ರಮುಖ ಕಾರ್ಯತಂತ್ರವಾಗಿದೆ. ಅದರ ಅಂಗವಾದ ಬಿ.ಜೆ.ಪಿ. ಪಕ್ಷವು 2014ರಲ್ಲಿ ಬಹುಮತ ಪಡೆದು ಒಕ್ಕೂಟ ಸರಕಾರದ ಆಡಳಿತ ಅಧಿಕಾರ ವಹಿಸಿಕೊಂಡ ನಂತರ, ಉದ್ದೇಶಪೂರ್ವಕವಾಗಿ ಇಸ್ಲಾಮೋಫೋಬಿಯವನ್ನೇ ಬಿತ್ತುವ ಪ್ರಚಾರ ಸಿನೆಮಾಗಳು ನಿರ್ಮಾಣವಾಗುತ್ತಿರುವುದು ಅಚ್ಚರಿಯ ಸಂಗತಿ ಏನೂ ಅಲ್ಲ. ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ (2019), ‘ಕಾಶ್ಮೀರ್ ಫೈಲ್ಸ್’ (2022), ‘ಕೇರಳಾ ಸ್ಟೋರಿ’ (2023), ‘ವೀರ ಸಾವರ್ಕರ್’ (2024), ‘ದಿ ಸಾಬರ್ಮತಿ ರಿಪೋರ್ಟ್’ (2024), ‘ರಜಾಕರ್: ದಿ ಸೈಲೆಂಟ್ ಜೀನೋಸೈಡ್’ (2024), ‘ಹಮ್ ದೋ ಹಮಾರೆ ಬಾರಾಹ್’ (2024)-ಹೀಗೆ ಸಾಲು ಸಾಲಾಗಿ ಪ್ರಜ್ಞಾಪೂರ್ವಕವಾಗಿ, ಸೂತ್ರಬದ್ಧವಾಗಿ ಇಸ್ಲಾಮೋಫೋಬಿಯವನ್ನು ಪ್ರಚಾರ ಮಾಡುವುದಕ್ಕೋಸ್ಕರವೇ ಸಿನೆಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ತಮ್ಮ ಸಿನೆಮಾಗಳ ಉದ್ದೇಶವನ್ನು ನಿರ್ಮಾಪಕರೇ ಬಹಿರಂಗಗೊಳಿಸುತ್ತಿದ್ದಾರೆ ಎನ್ನುವುದಕ್ಕಿಂತ ಹೆಚ್ಚು ಅಪಾಯಕಾರಿ ಆಗಿರುವುದು, ಇವು ಸಿನೆಮಾಗಳಾಗಿ ನೋಡುಗರ ಬುದ್ಧಿ ಭಾವಗಳ ಮೇಲೆ ಬೀರುವ ಪ್ರಭಾವ. ಇದಕ್ಕಿಂತ ಹಿಂದಿನ ನಾಲ್ಕು ದಶಕಗಳ ಸಿನೆಮಾಗಳ ಭಾವ ಕಥನಿರೂಪಣೆಯ ಕಲಾ ಕಸುಬುದಾರಿಕೆಯ ಒಳಗೆ ಇಸ್ಲಾಮೋಫೋಬಿಯಾದ ಹಲವು ಗುಣ ಲಕ್ಷಣಗಳು ಬೆರೆತುಬಿಟ್ಟಿರುವ ಕಾರಣವಾಗಿ ಅದು ಪ್ರೇಕ್ಷಕರು ಕಟ್ಟಿಕೊಳ್ಳುವ ಅನುಭವ ಕಥನದಲ್ಲಿ ರೂಢಿಯಾಗುವ ಸನ್ನಿವೇಶವು ಸಹಜವಾಗಿಬಿಟ್ಟಿದೆ. 2014ರ ನಂತರದ ಉದ್ದೇಶಪೂರ್ವಕ ಪ್ರಚಾರ ಸಿನೆಮಾಗಳಿಗೆ ಇಸ್ಲಾಮೋಫೋಬಿಯವನ್ನು ಹರಡಲು ಪ್ರೇಕ್ಷಕರ ಸಿದ್ಧ ಮನೋಭೂಮಿಕೆಯು ಒದಗಿ ಬರುತ್ತಿದೆ. ಹೀಗಾಗಿ ಇಸ್ಲಾಮೋಫೋಬಿಯವನ್ನು ವ್ಯಾಪಕವಾಗಿ ಪ್ರಸಾರಿಸುವಲ್ಲಿ ಸಿನೆಮಾಗಳು ಪರಿಣಾಮಕಾರಿಯಾಗಿ ಒದಗಿ ಬರಬಲ್ಲವಾಗಿವೆ. ಇದು ತುಂಬಾ ಆತಂಕಕಾರಿ ವಿದ್ಯಮಾನವಾಗಿದೆ.

ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ




