ನಿರ್ಭೀತ ಪತ್ರಿಕೋದ್ಯಮಕ್ಕೆ ಜಾಗತಿಕವಾಗಿ ಮಾದರಿಯಾಗಿದ್ದ ಅಮೆರಿಕದಲ್ಲಿ ಮಾಧ್ಯಮಗಳು ಇಂದು ಅಧಿಕಾರದ ದರ್ಪದಲ್ಲಿ ಮೆರೆಯುತ್ತಿರುವ ನಿರ್ಲಜ್ಜ ಬಂಡವಾಳಶಾಹಿಗಳಿಗೆ ಶರಣಾಗುತ್ತಿರುವುದು ಅಲ್ಲಿಯ ನಾಗರಿಕರು ಹೆಮ್ಮೆಪಡುತ್ತಿದ್ದ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಅಪಾಯದಲ್ಲಿರುವುದನ್ನು ಸೂಚಿಸುತ್ತಿದೆ. 1972ರಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ರಿಚರ್ಡ್ ನಿಕ್ಸನ್ ಅವರ ಮರು ಆಯ್ಕೆಯ ಪ್ರಚಾರ ತಂಡದಲ್ಲಿದ್ದ ಐವರು, ವಾಟರ್‌ಗೇಟ್ ಹೋಟೆಲ್‌ನಲ್ಲಿದ್ದ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಕೇಂದ್ರ ಕಚೇರಿಯೊಳಗೆ ನುಸುಳಿ ಅಲ್ಲಿಯ ರಹಸ್ಯ ದಾಖಲೆಗಳನ್ನು ಕದ್ದು ಟಿಲಿಫೋನ್ ಕದ್ದಾಲಿಸುವ ಸಾಧನಗಳನ್ನು ಅಳವಡಿಸುವ ಪ್ರಯತ್ನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದರು. ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದ ರಿಚರ್ಡ್ ನಿಕ್ಸನ್, ತನಗೂ ನುಸುಳುಕೋರರಿಗೂ ಯಾವುದೇ ಸಂಬಂಧವಿಲ್ಲವೆಂದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಆದರೆ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಇಬ್ಬರು ವರದಿಗಾರರು ನಡೆಸಿದ ತನಿಖೆಯಿಂದ ನಿಕ್ಸನ್‌ರವರೇ ಈ ಕೃತ್ಯದ ಹಿಂದೆ ಇದ್ದರೆಂದು ಸಾಬೀತಾಯಿತು. ಪತ್ರಿಕೋದ್ಯಮ ಇತಿಹಾಸದಲ್ಲಿ ‘ವಾಟರ್‌ಗೇಟ್ ಪ್ರಕರಣ’ ಎಂದೇ ಖ್ಯಾತವಾಗಿರುವ ಈ ಪ್ರಕರಣದಿಂದಾಗಿ ಅಧ್ಯಕ್ಷ ಸ್ಥಾನದಿಂದ ನಿಕ್ಸನ್ ರಾಜೀನಾಮೆ ನೀಡಬೇಕಾಯಿತು. ಹೀಗೆ ತನ್ನ ತನಿಖಾ ವರದಿಗಾರಿಕೆಯ ಮೂಲಕ ಅಮೆರಿಕದ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಿ ಪತ್ರಿಕೆಯ ಶಕ್ತಿಯೇನು ಎಂಬುದನ್ನು ತೋರಿಸಿದ್ದ ‘ವಾಷಿಂಗ್ಟನ್ ಪೋಸ್ಟ್’ ಈಗ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ನಿರಂಕುಶಾಧಿಕಾರದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವುದು ಆ ಪತ್ರಿಕೆಯ ಇತಿಹಾಸ ತಿಳಿದವರಲ್ಲಿ ಅಚ್ಚರಿ ಮೂಡಿಸಿದೆ.
ಪತ್ರಿಕೆಯ ಬದಲಾದ ಸಂಪಾದಕೀಯ ನೀತಿಯನ್ನು ವಿರೋಧಿಸಿದ ಭಿನ್ನಮತೀಯ ಪತ್ರಕರ್ತರು ರಾಜೀನಾಮೆ ನೀಡುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಜಗತ್ತಿಗೇ ಉಪದೇಶ ನೀಡುತ್ತಿದ್ದ ಅಮೆರಿಕದಲ್ಲಿಯೇ ಈಗ ಮಾಧ್ಯಮಗಳ ಸ್ವಾಯತ್ತತೆ ಕುಸಿಯುತ್ತಿದೆ. ತಮಗಿರುವ ಪರಮಾಧಿಕಾರ ಮತ್ತು ಶ್ರೀಮಂತ ಉದ್ಯಮಪತಿಗಳ ಮೇಲಿರುವ ಪ್ರಭಾವವನ್ನು ಬಳಸಿಕೊಂಡು ತಮ್ಮ ನೀತಿಗಳನ್ನು ಪ್ರಶ್ನಿಸುತ್ತಿರುವ ಸ್ವತಂತ್ರ ಮಾಧ್ಯಮಗಳ ಧ್ವನಿಯನ್ನು ಅಡಗಿಸುವ ಕಾರ್ಯತಂತ್ರಕ್ಕೆ ಟ್ರಂಪ್ ಚಾಲನೆ ನೀಡಿದ್ದಾರೆ. ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿ, ‘ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಗೊಳಿಸುವ ಯಾವುದೇ ಕಾನೂನನ್ನು ಶಾಸನಸಭೆ ಮಾಡಕೂಡದು’ ಎಂದು ಹೇಳುತ್ತದೆ. ಅದರ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಪರಮೋಚ್ಚ ಮತ್ತು ಅದನ್ನು ನಿರ್ಬಂಧಿಸಲು ಯಾರಿಗೂ ಅಧಿಕಾರವಿಲ್ಲ. ಆದರೆ ಪ್ಯಾಲೇಸ್ತೀನ್‌ನ ಗಾಝಾದಲ್ಲಿ ಇಸ್ರೇಲ್ ನಡಸಿದ ನರಮೇಧದ ವಿರುದ್ಧ ಪ್ರತಿಭಟಿಸಿದ ಮಾನವ ಹಕ್ಕುಗಳ ಹೋರಾಟಗಾರರನ್ನು, ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಮತ್ತು ಕೆಲವರನ್ನು ಗಡಿಪಾರು ಮಾಡಲಾಗಿದೆ. ಗಾಝಾ ಮೇಲಿನ ದಾಳಿಯನ್ನು ವಿರೋಧಿಸಿದ ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಹಾಗೂ ಅಧಿಕೃತ ಕಾರ್ಯಕ್ರಮಗಳಿಗೆ ಅವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
‘ದಿ ವಾಷಿಂಗ್ಟನ್ ಪೋಸ್ಟ್‘ ಪತ್ರಿಕೆಯಲ್ಲಿ ನಾಲ್ಕು ದಶಕಗಳ ಕಾಲ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದ ಖ್ಯಾತ ಅಂಕಣಕಾರ್ತಿ ‘ರುತ್ ಮಾರ್ಕ್ಯುಸ್’ ಕೆಲವು ದಿನಗಳ ಹಿಂದೆ ತಮ್ಮ ಅಂಕಣವನ್ನು ಪ್ರಕಟಿಸದೆ ತಡೆಹಿಡಿಯಲಾದ ಕಾರಣ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಬೇಕಾದಂತಹ ಪರಿಸ್ಥಿತಿ ಸೃಷ್ಟಿಯಾದದ್ದನ್ನು ಅವರು ಇದೇ ಮಾರ್ಚ್ 12ರಂದು ‘ದಿ ನ್ಯೂಯಾರ್ಕರ್‘ ಪತ್ರಿಕೆಗೆ ಬರೆದ ಲೇಖನದಲ್ಲಿ ವಿವರಿಸಿದರು.

ಆರ್ಥಿಕ ಸಂಕಷ್ಟದಿಂದ ‘ವಾಷಿಂಗ್ಟನ್ ಪೋಸ್ಟ್‘ ಪತ್ರಿಕೆಯನ್ನು ಪಾರುಮಾಡಲು ಅದರ ಪ್ರಕಾಶಕ ಡೋನಾಲ್ಡ್ ಗ್ರಾಮ್ 2013ರಲ್ಲಿ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಅಮೆಜಾನ್ ಕಂಪನಿಯ ಒಡೆಯ ಜೆಫ್ ಬೆಜೋಸ್‌ಗೆ ಮಾರಾಟ ಮಾಡಿದರು. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲೆರಿ ಕ್ಲಿಂಟನ್ ಅವರನ್ನು ಅನುಮೋದಿಸಿ ಟ್ರಂಪ್ ವಿರುದ್ಧ ಪ್ರಚಾರ ಮಾಡಿದ್ದ ಈ ಪತ್ರಿಕೆ 2020ರ ಚುನಾವಣೆಯಲ್ಲಿ ಜೋ ಬೈಡನ್ ಅವರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಆದರೆ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸುವುದನ್ನು ಪತ್ರಿಕೆಯ ಒಡೆಯ ಬೆಜೋಸ್ ತಿರಸ್ಕರಿಸಿದರು. ಕಳೆದ ಐದು ದಶಕಗಳಿಂದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿಯನ್ನು ಅನುಮೋದಿಸುವ ಸಂಪಾದಕೀಯ ನೀತಿಯನ್ನು ಮುರಿದು ಟ್ರಂಪ್ ಅವರಿಗೆ ಅನುಕೂಲವಾಗುವಂತೆ ತಟಸ್ಥವಾಗಿ ಉಳಿದದ್ದನ್ನು ಪತ್ರಿಕೆಯ ಹಿರಿಯ ಪತ್ರಕರ್ತರು ವಿರೋಧಿಸಿದ್ದರು. ಬದಲಾದ ಈ ಪತ್ರಿಕಾ ನೀತಿಯನ್ನು ಖಂಡಿಸಿ ಬರೆದಿದ್ದ ರುತ್ ಮಾರ್ಕ್ಯುಸ್ ಅಂಕಣವನ್ನು ಪತ್ರಿಕೆಯ ಪ್ರಕಾಶಕರು ತಡೆಹಿಡಿದಿದ್ದರು. ಅದು ಅವರ ರಾಜೀನಾಮೆಗೆ ಕಾರಣವಾಯಿತು.
ಇದನ್ನೂ ಓದಿರಿ: ಮಸ್ಕ್-ಮಿತ್ತಲ್-ಮುಖೇಶ್ ಕೂಡಾವಳಿ: ಯಾರಿಗೆ ಲಾಭ, ಮೋದಿ ಪಾತ್ರವೇನು?
ಡೋನಾಲ್ಡ್ ಟ್ರಂಪ್ ಪ್ರತಿಮೆಯ ಮುಂದೆ ಪತ್ರಿಕೆಯ ಮಾಲೀಕ ಜೆಫ್ ಬೆಜೋಸ್ ಸೇರಿದಂತೆ ಅಮೆರಿಕದ ಅತಿ ಶ್ರೀಮಂತ ಉದ್ಯೋಗಪತಿಗಳು ಮಂಡಿಯೂರಿ ಕುಳಿತಿದ್ದ ವ್ಯಂಗ್ಯಚಿತ್ರವನ್ನು ಪುಲಿಟ್ಜರ್ ಪ್ರಶಸ್ತಿ ವಿಜೇತ ವ್ಯಂಗ್ಯ ಚಿತ್ರಗಾರ್ತಿ ಆನ್ ಟೆಲ್ನಾಸ್ ಅವರು ಬರೆದದ್ದನ್ನು ಪ್ರಕಟಿಸಲು ವಾಷಿಂಗ್ಟನ್ ಪೋಸ್ಟ್ ಎರಡು ತಿಂಗಳ ಹಿಂದೆ ನಿರಾಕರಿಸಿದ್ದರಿಂದ ಟೆಲ್ನಾಸ್ ರಾಜೀನಾಮೆ ನೀಡಿದ್ದರು.

2024ರ ಅಧ್ಯಕ್ಷೀಯ ಚುನಾವಣೆಯ ನಂತರ ರಿಪಬ್ಲಿಕನ್ ಪಕ್ಷದ ಹಲವು ಸಮಾರಂಭಗಳಲ್ಲಿ ಜೆಫ್ ಬೆಜೋಸ್ ಕಾಣಿಸಿಕೊಂಡಿದ್ದರು ಮತ್ತು ಟ್ರಂಪ್ ಅಧಿಕಾರ ಸ್ವೀಕಾರದ ಸಮಯದಲ್ಲಿ ಇತರ ಸಿರಿವಂತ ಉದ್ಯಮಿಗಳ ಜೊತೆ ಉಪಸ್ಥಿತರಿದ್ದರು. ತನಿಖಾ ಪತ್ರಿಕೋದ್ಯಮದ ಮೂಲಕ ಅಮೆರಿಕ ಮಾಧ್ಯಮ ಲೋಕಕ್ಕೆ ಹೊಸ ಆಯಾಮ ನೀಡಿದ್ದ ವಾಷಿಂಗ್ಟನ್ ಪೋಸ್ಟ್ ಇಂದು ಮಾರುಕಟ್ಟೆಯ ಲಾಭಕ್ಕಾಗಿ ತನ್ನ ವೃತ್ತಿ ಸ್ವಾತಂತ್ರ್ಯದೊಂದಿಗೆ ರಾಜೀ ಮಾಡಿಕೊಂಡಿರುವುದು ಮಾಧ್ಯಮ ವೀಕ್ಷಕರು, ಬುದ್ಧಿಜೀವಿಗಳು ಮತ್ತು ಪತ್ರಕರ್ತರಲ್ಲಿ ಆತಂಕವನ್ನು ಮೂಡಿಸಿದೆ.
ಬ್ರಿಟಿಷ್ ಇತಿಹಾಸದ ದಿಕ್ಕನ್ನೇ ಬದಲಿಸಿದ ಪತ್ರಿಕೆ ಎಂದೇ ಹೆಸರಾಗಿದ್ದ ಮತ್ತು ʻಸುಸಂಸ್ಕೃತರಿಗಾಗಿ ಸುಸಂಸ್ಕೃತರಿಂದ ಬರೆಯಲ್ಪಟ್ಟ ಪತ್ರಿಕೆʼ ಎಂದು ಬಣ್ಣಿಸಲಾಗಿದ್ದ ‘ದಿ ಟೈಮ್ಸ್’ ಪತ್ರಿಕೆಯನ್ನು ಆಸ್ಟ್ರೇಲಿಯಾದ ಮಾಧ್ಯಮ ದೊರೆ ರೂಪರ್ಟ್ ಮರ್ಡಾಕ್ 1981ರಲ್ಲಿ ಕೊಂಡುಕೊಂಡ ನಂತರ, ಆ ಪತ್ರಿಕೆ ಹೇಗೆ ಬದಲಾಯಿತೊ ಅದೇ ಮಾದರಿಯ ಬೆಳವಣಿಗೆ ಈಗ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಕಾಣುತ್ತಿದೆ. ಸ್ವತಂತ್ರವಾದ ಸಂಪಾದಕೀಯ ನೀತಿಯನ್ನು ಹೊಂದಿದ್ದ ‘ಟೈಮ್ಸ್‘ ಪತ್ರಿಕೆ, ಸರ್ವಾಧಿಕಾರಿ ಧೋರಣೆ ಮತ್ತು ವಿಭಜನೆಯ ನೀತಿಗೆ ಹೆಸರಾಗಿದ್ದ ಮಾರ್ಗರೇಟ್ ಥ್ಯಾಚರ್ ಅವರ ಬೆಂಬಲಕ್ಕೆ ನಿಂತಿತು. ಅಪರಾಧ, ಮನರಂಜನೆ, ಕ್ರೀಡೆ ಮತ್ತು ಭಾವೋದ್ರೇಕ ತುಂಬಿದ ಸುದ್ದಿಗಳು ಮುಖಪುಟವನ್ನು ಆಕ್ರಮಿಸಿಕೊಂಡವು. ಈ ಹಿಂದೆ ಒಳ ಪುಟಗಳಲ್ಲೆಲ್ಲೋ ಪ್ರಕಟವಾಗುತ್ತಿದ್ದ ಇಂತಹ ಸುದ್ದಿಗಳಿಗೆ ಮರ್ಡಾಕ್ ನೀಡಿದ ಪ್ರಾಮುಖ್ಯತೆ ಪತ್ರಿಕಾ ವೃತ್ತಿಯ ಗುಣಮಟ್ಟವನ್ನು ಕುಗ್ಗಿಸಿತು. ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಎಂದೇ ಕರೆಲಾಗುತ್ತಿದ್ದ ‘ದಿ ಟೈಮ್ಸ್’ ತನ್ನ ಘನತೆಯನ್ನು, ಪ್ರಭಾವವನ್ನು ಕಳೆದುಕೊಂಡಿತು. ನಂತರ ಥೇಮ್ಸ್ ನದಿಯಲ್ಲಿ ಬಹಳಷ್ಟು ನೀರು ಹರಿದಿದೆ. ಹಳೆಯ ಟೈಮ್ಸ್ ಪತ್ರಿಕೆ ಬದಲಾದ ನಂತರ ಬ್ರಿಟಿಷ್ ರಾಜಕಾರಣದ ಚಹರೆಗಳೇ ಬದಲಾದವು ಎಂದು ಮಾಧ್ಯಮ ವಿಮರ್ಷಕರು ಹೇಳುತ್ತಾರೆ.
ರೂಪರ್ಟ್ ಮರ್ಡಾಕ್ ‘ಟೈಮ್ಸ್’ ಪತ್ರಿಕೆಯನ್ನು ತನ್ನ ವಶಕ್ಕೆ ಪಡೆದ ನಂತರ, ಒಂದು ವರ್ಷ ಅದರ ಸಂಪಾದಕರಾಗಿದ್ದ ಹೆರಾಲ್ಡ್ ಇವಾನ್ಸ್ ಕೊನೆಗೆ ಹೊರಬಂದರು. ಬ್ರಿಟನ್ನಿನ ಬಹುದೊಡ್ಡ ಸಾಮಾಜಿಕ ಸಂಸ್ಥೆಯಂತೆ ಬೆಳೆದಿದ್ದ ಪತ್ರಿಕೆ ಹೇಗೆ ತನ್ನ ಸಭ್ಯತೆ, ವಸ್ತುನಿಷ್ಟತೆ ಮತ್ತು ನಿಖರತೆಯ ಮೌಲ್ಯಗಳಿಗೆ ತಿಲಾಂಜಲಿ ಹಾಡಿ ಹೆಚ್ಚು ಓದುಗರನ್ನು ಆಕರ್ಷಿಸುವ ತಂತ್ರಗಾರಿಕೆಯನ್ನು ವೃದ್ಧಿಸಿಕೊಂಡಿತೆಂದು ತಮ್ಮ ʻಗುಡ್ ಟೈಮ್ಸ್, ಬ್ಯಾಡ್ ಟೈಮ್ಸ್ʼ ಪುಸ್ತಕದಲ್ಲಿ ವಿವರಿಸುತ್ತಾರೆ. ಮುಸ್ಲಿಮರು ಮತ್ತು ವಿದೇಶೀಯರ ವಿರುದ್ಧ ದ್ವೇಷ ಹರಡುವ ಉದ್ದೇಶದಿಂದ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಆ ಪತ್ರಿಕೆ ಪ್ರಕಟಿಸಿ ಮತೀಯ ಶಾಂತಿ ಕದಡುವ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ವಿದ್ಯುತ್ ಚಾಲಿತ ವಾಹನಗಳ ಜನಪ್ರಿಯತೆ ಕಡಿಮೆಯಾಗಿ ಅವುಗಳ ಮಾರಾಟದಲ್ಲಿ ಭಾರೀ ಇಳಿಕೆಯಾಗಿದೆಯೆಂಬ ಆಧಾರ ರಹಿತ ಸುಳ್ಳುಸುದ್ದಿಯನ್ನು ಪ್ರಕಟಿಸಿ ನಂತರ ತಪ್ಪನ್ನು ಒಪ್ಪಿಕೊಂಡ ಪ್ರಕರಣ ಇತ್ತೀಚಿನದು.
ಇದನ್ನೂ ಓದಿರಿ: ಸತ್ಯ ಹೇಳಿ ಸಂಕಟಕ್ಕೆ ಸಿಲುಕಿದ ಮುಸ್ಲಿಮರಿವರು…
ವಿಶಿಷ್ಟ ಇತಿಹಾಸ ಮತ್ತು ಪರಂಪರೆಗಳನ್ನು ಸೃಷ್ಟಿಸಿದ್ದ ಪತ್ರಿಕೆಗಳು ಬಂಡವಾಳಶಾಹಿಗಳ ಸ್ವಹಿತಾಸಕ್ತಿ ಸಾಧನೆಯ ಸಾಧನಗಳಾದರೆ ಏನಾಗಬಹುದು ಎಂಬುದಕ್ಕೆ ‘ದಿ ಟೈಮ್ಸ್’ ಮತ್ತು ‘ವಾಷಿಂಗ್ಟನ್ ಪೋಸ್ಟ್’ ಉದಾಹರಣೆಗಳಾಗಿ ನಿಂತಿವೆ. ಇತಿಹಾಸದಿಂದ ನಾವು ಕಲಿಯುವುದೇನೆಂದರೆ ಅವಸಾನದ ಅಪಾಯದಿಂದ ಪತ್ರಿಕೆಗಳನ್ನು ಕಾಪಾಡಲು ಬಂಡವಾಳಶಾಹಿಗಳ ಕೈಗಿತ್ತರೆ ಅವುಗಳು ಬದುಕುಳಿಯುತ್ತವೆಯೇ ಹೊರತು ತಮ್ಮ ಪಾರಂಪರಿಕ ಜೀವಂತಿಕೆಯನ್ನು ಉಳಿಸಿಕೊಳ್ಳುವುದಿಲ್ಲ.
ಫೆಬ್ರವರಿ 26ರಂದು ವಾಷಿಂಗ್ಟನ್ ಪೋಸ್ಟ್‌ನ ಮಾಲೀಕ ಜೆಫ್ ಬೆಜೋಸ್, ಪತ್ರಕರ್ತ ನೌಕರರಿಗೆ ಟಿಪ್ಪಣಿಯೊಂದನ್ನು ಕಳುಹಿಸಿ “ನಮ್ಮ ಅಭಿಮತ ಪುಟಗಳಲ್ಲಿ ಬದಲಾವಣೆ ಬರುತ್ತಿದೆ. ನಾವು ಪ್ರತಿದಿನ ಎರಡು ಸ್ತಂಭಗಳನ್ನು ಬೆಂಬಲಿಸಿ ಮತ್ತು ಸಮರ್ಥಿಸಿ ಬರೆಯಲಿದ್ದೇವೆ: ವೈಯಕ್ತಿಕ ಸ್ವಾತಂತ್ರ್ಯಗಳು ಮತ್ತು ಮುಕ್ತ ಮಾರುಕಟ್ಟೆಗಳು. ಇತರ ವಿಷಯಗಳನ್ನೂ ವರದಿ ಮಾಡುತ್ತೇವೆ, ಆದರೆ ಆ ಎರಡು ಸ್ಥಂಭಗಳಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ಬೇರೆಯವರು ಪ್ರಕಟಿಸಲು ಬಿಟ್ಟುಬಿಡುತ್ತೇವೆ” ಎಂಬ ಫರ್ಮಾನನ್ನು ಹೊರಡಿಸಿದರು. ಮೇಲುನೋಟಕ್ಕೆ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮುಕ್ತ ಮಾರುಕಟ್ಟೆ ಎಂಬ ಪರಿಭಾಷೆ ಅಮೆರಿಕದಂತಹ ಬಂಡವಾಳಶಾಹಿ ರಾಷ್ಟ್ರದಲ್ಲಿ ಹೊಸದೇನೂ ಆಗಿರಲಿಲ್ಲ. ಆದರೆ ಅದರ ಹಿಂದಿನ ಉದ್ದೇಶ ಬೆಜೋಸ್ ಅವರ ವಿಸ್ತಾರವಾದ ವಾಣಿಜ್ಯ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದಾಗಿತ್ತು.

ತನ್ನ ರಾಜಕೀಯ ವೈರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಹಲವು ಬಾರಿ ಬೆದರಿಕೆ ಹಾಕಿದ್ದರು. ಅಮೆಜಾನ್ ಅಮೆರಿಕದ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಪಡಿಸುವ ಸಾಧ್ಯತೆಯನ್ನು ಮನಗಂಡ ಬೆಜೋಸ್, ಟ್ರಂಪ್ ಬೆಂಬಲಕ್ಕೆ ನಿಂತರು ಎಂದು ಮಾಧ್ಯಮ ವೀಕ್ಷಕರು ಹೇಳುತ್ತಿದ್ದಾರೆ. ಟ್ರಂಪ್ ಉದ್ಘಾಟನಾ ಸಮಾರಂಭಕ್ಕೆ ಹಣ ನೀಡಿದ್ದಲ್ಲದೆ ಟ್ರಂಪ್ ಪತ್ನಿ ಮೆಲಾನಿಯಾರವರು ತಮ್ಮ ಬಗ್ಗೆ ತಾವೇ ಮಾಡಿಕೊಂಡಿರುವ ಸಾಕ್ಷ್ಯಚಿತ್ರವನ್ನು ಹತ್ತಿರದ ಬಿಡ್ಡುದಾರರಿಗಿಂತ ಮೂರುಪಟ್ಟು ಹೆಚ್ಚಿನ ಮೊತ್ತಕ್ಕೆ ಅಮೆಜಾನ್ ಕೊಂಡುಕೊಂಡಿತು. ಅದರಲ್ಲಿ ಶೇ. 70ಕ್ಕೂ ಹೆಚ್ಚು ಮೆಲಾನಿಯಾರ ಕಿಸೆಗೆ ಹೋಗಿತ್ತು. ಹಿಂದೆ ಟ್ರಂಪ್ ಅವರ ಕಟು ಟೀಕಾಕಾರರಾಗಿದ್ದ ಬೆಜೋಸ್ ನಂತರದಲ್ಲಿ ಅವರನ್ನು ತೃಪ್ತಿಪಡಿಸಲು ಸಾಧ್ಯವಾದುದೆಲ್ಲವನ್ನೂ ಮಾಡಲು ಮುಂದಾದರು. ಇದೆಲ್ಲದರ ಪರಿಣಾಮವಾಗಿ ‘ವಾಷಿಂಗ್‌ಟನ್’ ಪೋಸ್ಟ್ ಪತ್ರಕರ್ತರು ತಮ್ಮ ವೃತ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಯಿತು.
ಚುನಾವಣಾ ನಂತರದ ಸುದ್ದಿಗೋಷ್ಠಿಯಲ್ಲಿ ʻನನಗೆ ಸುದ್ದಿ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಅಪಾರ ಗೌರವವಿದೆʼ ಎಂದು ಘೋಷಿಸಿದ್ದ ಸಂದರ್ಭದಲ್ಲೇ ಸಿಎನ್‌ಎನ್ ಸುದ್ದಿವಾಹಿನಿ ಸುಳ್ಳು ಸುದ್ದಿಯನ್ನು ಹರಡುತ್ತಿದೆ ಎಂದು ಆರೋಪಿಸಿ ಅದರ ಯಾವುದೇ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದರು. ಬಿಬಿಸಿಯನ್ನು ʻಮತ್ತೊಂದು ಸುಂದರಿʼ ಎಂದು ಗೇಲಿ ಮಾಡಿದ್ದರಲ್ಲದೆ ಬಜ್‌ಫೀಡ್ ಎಂಬ ಡಿಜಿಟಲ್ ಮಾಧ್ಯಮವನ್ನು ʻವಿಫಲವಾಗುತ್ತಿರುವ ಕಸದ ಗುಡ್ಡೆʼ ಎಂದು ಖಂಡಿಸಿದ್ದರು. ಸ್ವತಂತ್ರ ಮಾಧ್ಯಮಗಳ ಮೇಲೆ ಟ್ರಂಪ್ ತಮ್ಮ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.
ಇದನ್ನೂ ಓದಿರಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದೇಕೆ? ಮುಂದೇನಾಗಬಹುದು?
ಮಾಧ್ಯಮಗಳಿಗಿರುವ ಗುಣಲಕ್ಷಣಗಳನ್ನೇ ತಿರುಚಿ ಸತ್ವರಹಿತ ಮತ್ತು ಪೂರ್ವಗ್ರಹ ಪೀಡಿತ ಸುದ್ದಿ ನಿರೂಪಣೆ ಮಾಡುವ ರೂಪರ್ಟ್ ಮರ್ಡಾಕ್ ಒಡೆತನದ ವಾಹಿನಿಗಳಲ್ಲಿ ಒಂದಾದ ಫಾಕ್ಸ್ ಟಿವಿ, ರಿಪಬ್ಲಿಕನ್ ಪಕ್ಷದ ಪರವಾಗಿ ಮತ್ತು ಡೆಮಾಕ್ರಟಿಕ್ ಪಾರ್ಟಿಯ ವಿರುದ್ಧವಾಗಿ ಅರೆಸತ್ಯಗಳನ್ನು ಹಾಗೂ ಸುಳ್ಳುಗಳನ್ನು ಪ್ರಸಾರ ಮಾಡುತ್ತದೆ. ಭಾರತೀಯ ಜನತಾ ಪಕ್ಷ ಮತ್ತು ಮತೀಯ ಸಂಘಟನೆಗಳ ಪರವಾಗಿ ಮತ್ತು ವಿರೋಧ ಪಕ್ಷಗಳ ವಿರುದ್ಧವಾಗಿ ಸುಳ್ಳು ಸುದ್ದಿಗಳನ್ನು ಹರಡುವ ಹಾಗೂ ದ್ವೇಷವನ್ನು ಬಿತ್ತುವ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿಯು, ಫಾಕ್ಸ್ ಟಿವಿಯ ಭಾರತೀಯ ಅವತಾರವಾಗಿ ಕಾಣುತ್ತದೆ. ಟ್ರಂಪ್ ಅವರ ಅಪಕ್ವ ಹೇಳಿಕೆಗಳು ಮತ್ತು ವಿವೇಚನಾಶೂನ್ಯ ಆದೇಶಗಳು ಅವರ ರಾಜಕೀಯ ಮುತ್ಸದ್ದಿತನವನ್ನು ತೋರುತ್ತವೆಂದು ಪ್ರಶಂಸಿಸುವ ಈ ಟಿವಿ ವಾಹಿನಿ, ಟ್ರಂಪ್ ವಿರೋಧಿಗಳನ್ನು ಗುರಿಯಾಗಿಸಿ ಅಪಪ್ರಚಾರ ಮಾಡುತ್ತದೆ. ಪೌರತ್ವವಿಲ್ಲದೆ ಮಾಧ್ಯಮ ಒಡೆತನ ಸಾಧ್ಯವಿಲ್ಲವೆಂಬ ಕಾರಣಕ್ಕೆ ಅಮೆರಿಕದ ಪೌರತ್ವ ಪಡೆದ ಮರ್ಡಾಕ್ ಅಲ್ಲಿ ರಾಜಕೀಯ ಚರ್ಚೆಯ ಕ್ಷುದ್ರತೆಗೆ ತನ್ನದೇ ಕಾಣಿಕೆ ನೀಡಿದ್ದಾರೆ.
ಸುಳ್ಳುಸುದ್ದಿಗೆ ಹೆಸರಾಗಿರುವ, ಬಲಪಂಥೀಯ ಪೂರ್ವಗ್ರಹ ಹೊಂದಿರುವ ಮತ್ತು ಭಿನ್ನಮತವನ್ನು ದ್ವೇಷಿಸುವ ರೂಪರ್ಟ್ ಮರ್ಡಾಕ್ ಒಡೆತನದ ‘ದಿ ನ್ಯೂಯಾರ್ಕ್ ಪೋಸ್ಟ್‘ನ ಹಾದಿಯನ್ನೇ ‘ದಿ ವಾಷಿಂಗ್ಟನ್ ಪೋಸ್ಟ್‘ ಪತ್ರಿಕೆ ಹಿಡಿಯುತ್ತದೆಯೆ ಎಂಬ ಚರ್ಚೆ ನಡೆಯುತ್ತಿದೆ. ದಶಕಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಹಿಂಸೆ, ತಾರತಮ್ಯವನ್ನು ದಾಖಲಿಸುತ್ತಾ ಬಂದಿರುವ ಅಂತರರಾಷ್ಟ್ರೀಯ ಖ್ಯಾತಿಯ ಭಾರತೀಯ ಪತ್ರಕರ್ತೆ ರಾನಾ ಅಯೂಬ್, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಜಾಗತಿಕ ಅಭಿಮತ ಬರಹಗಾರರಾಗಿದ್ದಾರೆ. ಭಾರತದ ಯಾವುದೇ ಮುಖ್ಯವಾಹಿನಿ ಪತ್ರಿಕೆ ಅವರಿಗೆ ಬರೆಯುವ ಅವಕಾಶ ನೀಡದಿದ್ದ ಸಂದರ್ಭದಲ್ಲಿ ಈ ಪತ್ರಿಕೆ ವೇದಿಕೆಯನ್ನೊದಗಿಸಿತು. ಅಲ್ಪಸಂಖ್ಯಾತರ ಮನೆಗಳ ಮೇಲೆ, ಪ್ರಾರ್ಥನಾ ಮಂದಿರಗಳ ಮೇಲೆ ಬುಲ್ಡೋಜರ್ ಹರಿಸುವ, ಅವರ ರಾಜಕೀಯ ಮತ್ತು ಆರ್ಥಿಕ ಹಕ್ಕುಗಳನ್ನು ಹೊಸಕಿಹಾಕುವ ಸಂವಿಧಾನ ವಿರೋಧಿ ಕೃತ್ಯಗಳ ವಿರುದ್ಧ ತಮ್ಮ ಅಂಕಣದ ಮೂಲಕ ಜಾಗತಿಕ ಜಾಗೃತಿ ಮೂಡಿಸುವ ಪ್ರಯತ್ನವನ್ನು ರಾನಾ ಮಾಡುತ್ತಿದ್ದಾರೆ. ವಾಷಿಂಗ್ಟನ್ ಪೋಸ್ಟ್‌ನ ಹಲವು ಅಂಕಣಕಾರರು ಅದರ ಇತ್ತೀಚಿನ ಸಂಪಾದಕೀಯ ನೀತಿಯ ವಿರುದ್ಧ ಪ್ರತಿಭಟಿಸಿದ್ದಾರಲ್ಲದೆ ಕೆಲವರು ರಾಜೀನಾಮೆ ನೀಡಿದ್ದಾರೆ. ಮಾನವ ಹಕ್ಕುಗಳ ಪ್ರತಿಪಾದಕರಾದ ರಾನಾ ಅಯೂಬ್‌ರಂತಹ ಸ್ವತಂತ್ರ ಪತ್ರಕರ್ತರಿಗೆ ಆ ಪತ್ರಿಕೆ ವೇದಿಕೆಯಾಗಿ ಉಳಿಯುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಪ್ರೊ.ಡಿ.ಎಸ್. ಪೂರ್ಣಾನಂದ
ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.




