ಬಿಜೆಪಿಯಿಂದ ಉಚ್ಚಾಟಿತರಾದ ನೂಪುರ್ ಶರ್ಮಾ ಅವರು ಭಕ್ತ ಪಡೆಯ ಸ್ಮೃತಿ ಪಟಲದಿಂದ ಅಳಿಸಿ ಹೋಗಿರಬಹುದೇನೋ. ಧಾರ್ಮಿಕ ವಿಷಕಾರಿ ಮಾತುಗಳನ್ನಾಡುತ್ತಾ ಸದಾ ಮೇಲುಗೈ ಸಾಧಿಸಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್, ಪ್ರವಾದಿ ಮಹಮ್ಮರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ, ಸಿಕ್ಕಿಬಿದ್ದಾಗ ಬಿಜೆಪಿ ಅಕ್ಷರಶಃ ಅಲುಗಾಡಿತ್ತು. ಕತಾರ್, ಕುವೈತ್, ಯುಎಇ, ಸೌದಿ ಅರೇಬಿಯಾದಂತಹ ಬಲಿಷ್ಠ ಗಲ್ಫ್ ರಾಷ್ಟ್ರಗಳು ಪ್ರತಿಕ್ರಿಯಿಸಿದಾಗ, ಭಾರತದ ಆರ್ಥಿಕ ವಲಯ ಆಪತ್ತಿಗೆ ಸಿಲುಕುವ ಸನ್ನಿವೇಶ ಸೃಷ್ಟಿಯಾಗಿತ್ತು. ನೂಪುರ್ ಅವರನ್ನು ನೆಪಮಾತ್ರಕ್ಕಾದರೂ ಪಕ್ಷದಿಂದ ಹೊರದಬ್ಬುವುದು ಬಿಜೆಪಿಗೆ ಅನಿವಾರ್ಯವಾಗಿತ್ತು. ಲೋಕಸಭೆ, ವಿಧಾನಸಭೆಗಳ ಚುನಾವಣೆ ಹೊತ್ತಿನಲ್ಲಿ ಮತ್ತು ಆನಂತರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಮಾತುಗಳನ್ನಾಡುವ ಸಂಘಪರಿವಾರದ ಮಂದಿ, ನೂಪುರ್ ಅವರನ್ನು ನೇರವಾಗಿ ಸಮರ್ಥಿಸಲಾಗದಷ್ಟು ಇಕ್ಕಟ್ಟಿಗೆ ಸಿಲುಕಿಬಿಟ್ಟಿದ್ದರು. ಅವರನ್ನು ವಕ್ತಾರಿಕೆಯಿಂದ ಕಿತ್ತು ಬಿಸಾಕಿದ್ದು ಮಹತ್ವದ ಸಂಗತಿ. ಭಾರತೀಯ ಮುಸ್ಲಿಮರನ್ನು ದ್ವೇಷಿಸುವ ಭರದಲ್ಲಿ ಪ್ರವಾದಿಯವರನ್ನು ನಿಂದಿಸಿದ್ದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಮತ ಧ್ರುವೀಕರಣದ ಸಲುವಾಗಿ ಆಡಳಿತರೂಢ ಬಿಜೆಪಿ, ಮುಸ್ಲಿಮರನ್ನು ಎಷ್ಟೇ ದ್ವೇಷಿಸಿದರೂ ಮುಸ್ಲಿಂ ರಾಷ್ಟ್ರಗಳನ್ನು ಸುಲಭವಾಗಿ ಬದಿಗೆ ಸರಿಸಲು ಸಾಧ್ಯವಿಲ್ಲ. ಜಾಗತಿಕ ವಾತಾರಣದಲ್ಲಿ ಒಬ್ಬರನ್ನೊಬ್ಬರು ಅವಲಂಬಿಸುವುದು ತಪ್ಪುವುದಿಲ್ಲ. ಈ ನೆಲೆಯಲ್ಲಿ ನಾವು ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಗಮನಿಸಬೇಕಾಗುತ್ತದೆ. ಪ್ರಮುಖ ಮುಸ್ಲಿ ರಾಷ್ಟ್ರಗಳಲ್ಲಿ ಒಂದಾದ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಜೊತೆಯಲ್ಲಿ ಭಾರತ ಹೊಂದಿರುವ ಅವಿನಾಭಾವ ಬಾಂಧವ್ಯವನ್ನು ದಾಖಲಿಸುವ ಕಿರು ಪ್ರಯತ್ನ ಇಲ್ಲಿದೆ.
2024ನೇ ಇಸವಿಯಲ್ಲಿ ಯುಎಇಯಲ್ಲಿ ಆಚರಿಸಲಾದ ದೀಪಾವಳಿ ಹಬ್ಬವನ್ನೇ ನೋಡಿರಿ. ದುಬೈನ ಆರ್ಥಿಕ ಮತ್ತು ಪ್ರವಾಸೋದ್ಯಮ ಇಲಾಖೆಯು ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಉತ್ಸವಗಳು ಮೂರು ವಾರಗಳ ಕಾಲ ಜರುಗಿದವು. ದೀಪಾಲಂಕಾರದಿಂದ ಬೀದಿಗಳು ಜಗಮಿಗಿಸಿದವು. ಪಟಾಕಿಗಳು ಬಾನಂಗಳದಲ್ಲಿ ಚಿತ್ತಾರ ಬರೆದವು. ಪಟಾಕಿ ನಿಷೇಧಿತ ದೇಶದಲ್ಲಿ ಇದು ಅಪರೂಪದ ಸನ್ನಿವೇಶವಾಗಿತ್ತು. ಭಾರತ ಮತ್ತು ಯುಎಇ ನಡುವಿನ ಬಾಂಧವ್ಯದ ಸಂಕೇತವಾಗಿ ಹೊಮ್ಮಿತ್ತು ದೀಪಾವಳಿ. ಶತಮಾನಗಳ ಕಾಲದ ಕೊಳುಕೊಡುಗೆಯ ಪ್ರತಿಫಲಿಸಿತ್ತು ಬೆಳಕಿನ ಹಬ್ಬ. ಎಮಿರೇಟ್ಸ್‌ನಲ್ಲಿ ನೆಲೆಸಿದ್ದ ಭಾರತೀಯರಿಗೆ, ಇದು ನಿಮ್ಮದೇ ಮನೆ ಎಂಬ ಭಾವನೆಯನ್ನು ತುಂಬಲು ಯತ್ನಿಸಿತ್ತು ಯುಎಇ.
ಎಮಿರೇಟ್ಸ್ ರಚನೆಗೂ ಮುಂಚಿನಿಂದಲೂ ಭಾರತ ಮತ್ತು ಮುಸ್ಲಿಂ ರಾಷ್ಟ್ರಗಳ ನಡುವೆ ಗಾಢವಾದ ಆರ್ಥಿಕ ಒಡನಾಟವಿದೆ. 2022ರಲ್ಲಿ ಸಹಿ ಹಾಕಲಾದ ಭಾರತ-ಯುಎಇ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ (ಸಿಇಪಿಎ), ಬೆಳೆಯುತ್ತಿರುವ ಬಾಂಧವ್ಯಕ್ಕೆ ಪ್ರಮುಖ ಮೈಲಿಗಲ್ಲು. ಈ ಒಪ್ಪಂದವು ತೈಲೇತರ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗಳಿಗೆ ವೃದ್ಧಿಸುವ ಮಹತ್ತದ ಗುರಿಯ ಭಾಗ. ಭಾರತ ಮತ್ತು ಯುಎಇ ನಡುವಿನ ವ್ಯಾಪಾರಕ್ಕೆ ತಾರತಮ್ಯವಿಲ್ಲದ ವಾತಾವರಣವನ್ನು ಒದಗಿಸುವ ಮೂಲಕ ಶೇ. 80ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವ ಅಥವಾ ತೆಗೆದುಹಾಕುವ ದೂರಗಾಮಿ ಒಪ್ಪಂದ ಇದೆಂಬುದು ಗಮನಾರ್ಹ.

ಇದನ್ನೂ ಓದಿರಿ: ಮಣಿಪುರ ರಾಜ್ಯಪಾಲರ ಮಹತ್ವದ ನಡೆ; ಶಾಂತಿ ಮರುಸ್ಥಾಪನೆ ಸುಲಭವೇ?
ತೈಲೇತರ ರಫ್ತಿನಲ್ಲಿ ಭಾರತವು ಯುಎಇಯ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಹೊಮ್ಮಿ, ಸುಮಾರು ಶೇ. 14ರಷ್ಟು ಕೊಡುಗೆಯನ್ನು ನೀಡುತ್ತಾ ಬಂದಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಪ್ರಯೋಜನವನ್ನು ನೀಡುವ ಮೂಲಕ ವ್ಯಾಪಾರವನ್ನು ಉತ್ತೇಜಿಸಲು ಮತ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಸಿಇಪಿಎ ಯತ್ನಿಸಿದೆ. ಆ ಮೂಲಕ ವ್ಯಾಪಾರ ವಹಿವಾಟಿನಲ್ಲಿ ಭಾರತ-ಯುಎಇ ನಡುವೆ ಕ್ರಾಂತಿಕಾರಿಕ ಬೆಳವಣಿಗೆಗಳಾಗಿವೆ ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರು. 2023ರ ಜುಲೈ 16ರಂದು ಸಹಿ ಹಾಕಲಾದ ರೂಪಾಯಿ-ದಿರ್ಹಮ್ ಒಪ್ಪಂದವೂ ಅದರ ಮುಂದುವರಿದ ಭಾಗ. ಎರಡು ದೇಶಗಳ ನಡುವಿನ ವಹಿವಾಟುಗಳನ್ನು ರೂಪಾಯಿ ಮತ್ತು ದಿರ್ಹಮ್ ಮೂಲಕ ಇತ್ಯರ್ಥಪಡಿಸಲು ಅನುವು ಮಾಡಿಕೊಟ್ಟಿದೆ ಈ ಹೊಸ ಒಪ್ಪಂದ. ಜೊತೆಗೆ ಕರೆನ್ಸಿ ವಿನಿಮಯದ ಅಗತ್ಯವನ್ನೂ ನಿವಾರಿಸುತ್ತಿದೆ. ಸ್ಥಳೀಯ ಕರೆನ್ಸಿಯನ್ನು ಬಲವರ್ಧನೆ ಮಾಡಿ, ಡಾಲರ್ ಮೇಲಿನ ಅವಲಂಬನೆಯನ್ನು ಕಡಿದುಕೊಳ್ಳುವ ಪ್ರಯತ್ನವೂ ಇದೆಂದು ಬಣ್ಣಿಸಲಾಗಿದೆ.
ರೂಪಾಯಿ-ದಿರ್ಹಮ್ ಒಪ್ಪಂದದಿಂದ ಉಂಟಾದ ಪ್ರಗತಿಯ ಆಧಾರದ ಮೇಲೆ, ಯುಎಇ ತನ್ನದೇ ಆದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಸ್ಥೆ (ಜೈವಾನ್) ಜಾರಿಗೆ ತಂದಿದೆ. ಜೈವಾನ್ ಕಾರ್ಡ್‌ಗಳನ್ನು ಸ್ವೀಕರಿಸಲು, ನಗದು ಹಿಂಪಡೆಯುವಿಕೆಗೆ ಎಟಿಎಂ ವ್ಯವಸ್ಥೆಯನ್ನು ಸಂಯೋಜಿಸಲು ಯುಎಇ ಬ್ಯಾಂಕ್‌ಗಳು ಕಾರ್ಯಕ್ರಮ ರೂಪಿಸಿವೆ. ಅಷ್ಟೇ ಅಲ್ಲ, ಭಾರತ ಮತ್ತು ಯುಎಇ ನಡುವಿನ ಚಿನ್ನದ ವ್ಯಾಪಾರದಲ್ಲಿ ಸಿಇಪಿಎ ಮಹತ್ವದ ಪಾತ್ರ ವಹಿಸಿದೆ. ಈ ಒಪ್ಪಂದದ ಅಡಿಯಲ್ಲಿ, ಭಾರತವು ಯುಎಇಯಿಂದ ವಾರ್ಷಿಕವಾಗಿ 200 ಮೆಟ್ರಿಕ್ ಟನ್ ಚಿನ್ನವನ್ನು 1% ಸುಂಕ ದರ ಕೋಟಾದ ಅಡಿಯಲ್ಲಿ ಆಮದು ಮಾಡಿಕೊಳ್ಳಲು ಬದ್ಧವಾಗಿದೆ. ಭಾರತಕ್ಕೆ ಯುಎಇ ಚಿನ್ನದ ಪ್ರಮುಖ ಮೂಲವಾಗಿ ಮಾರ್ಪಟ್ಟಿದೆ. ಭಾರತದ ಒಟ್ಟು ಚಿನ್ನದ ಆಮದಿನ ಶೇಕಡಾ 16 ಕ್ಕಿಂತ ಹೆಚ್ಚಿನ ಪಾಲು ಯುಎಇಯದ್ದು ಎನ್ನುತ್ತವೆ ವರದಿಗಳು.
ಜಾಗತಿಕ ವ್ಯಾಪಾರಕ್ಕೆ ಪ್ರಮುಖ ಹೆಬ್ಬಾಗಿಲಾಗಿಯೂ ಯುಎಇ ಕಾರ್ಯನಿರ್ವಹಿಸುತ್ತದೆ. ತನ್ನ ಅತ್ಯುತ್ತಮ ವಾಯು, ಭೂ ಮತ್ತು ಜಲಮಾರ್ಗದ ಮೂಲಕ, ಮರು-ರಫ್ತುಗಳನ್ನು ಸುಗಮಗೊಳಿಸುವಲ್ಲಿ ಯುಎಇ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದರಿಂದಾಗಿ ಭಾರತವು ವಿಶ್ವದ ಇತರ ಭಾಗಗಳಿಗೆ ಸರಕುಗಳನ್ನು ರವಾನಿಸಲು ಯುಎಇ ಬಂದರುಗಳು ಸಹಕರಿಸುತ್ತಿವೆ.
ಭಾರತ-ಯುಎಇ ಪಾಲುದಾರಿಕೆ ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಎರಡೂ ದೇಶಗಳು ಶಿಕ್ಷಣ, ಸಂಸ್ಕೃತಿ ಮತ್ತು ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ವಿನಿಮಯವನ್ನು ವೃದ್ಧಿಸಿಕೊಂಡಿವೆ. ದುಬೈನಲ್ಲಿ ಭಾರತ್ ಮಾರ್ಟ್ ನಿರ್ಮಾಣವು ಭಾರತೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ತೆರೆದಿಟ್ಟಿದೆ. ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಬುಧಾಬಿಯಲ್ಲಿ ಕ್ಯಾಂಪಸ್ ತೆರೆದಿದೆ. ಹಲವಾರು ಭಾರತೀಯ ವಿಶ್ವವಿದ್ಯಾಲಯಗಳು ಯುಎಇಯಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸುತ್ತಿದ್ದು, ಎರಡೂ ದೇಶಗಳ ನಡುವೆ ಶೈಕ್ಷಣಿಕ ವಿನಿಮಯ ಬಿರುಸಾಗಿದೆ.
ಇದನ್ನೂ ಓದಿರಿ: ‘ದಿ ಇಂಡಿಯಾ ಹೇಟ್ ಲ್ಯಾಬ್’ ಬಿಚ್ಚಿಟ್ಟಿರುವ ದ್ವೇಷಭಾಷಣಗಳ ಆಘಾತಕಾರಿ ಸತ್ಯಗಳು!
ಭಾರತದ ಇತರ ಪ್ರಮುಖ ಸಂಸ್ಥೆಗಳಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಅಹಮದಾಬಾದ್) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್ ಶೀಘ್ರದಲ್ಲೇ ಯುಎಇಯಲ್ಲಿ ತಮ್ಮ ಮೊದಲ ವಿದೇಶಿ ಕ್ಯಾಂಪಸ್‌ಗಳನ್ನು ಹೊಂದಲಿದ್ದು, ಮುಂಬರುವ ವರ್ಷಗಳಲ್ಲಿ ಭಾರತೀಯರು ಮತ್ತು ಎಮಿರೇಟ್ಸ್‌ಗಳಿಗೆ ಒಟ್ಟಿಗೆ ತರಬೇತಿ ನೀಡುತ್ತವೆ. ದುಬೈನಲ್ಲಿ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE)ಯ ಪ್ರಾದೇಶಿಕ ಕಚೇರಿಯ ಸ್ಥಾಪನೆ ಮತ್ತು ಅಬುಧಾಬಿಯಲ್ಲಿ ಹಿಂದೂ ದೇವಾಲಯದ ಉದ್ಘಾಟನೆಯು ಸಾಂಸ್ಕೃತಿಕ ವಿನಿಮಯದ ಸಂಕೇತ. “ಭಾರತ ಮತ್ತು ಯುಎಇ ನಡುವಿನ ಸ್ನೇಹ ಸಂಬಂಧ ಐತಿಹಾಸಿಕವಾದದ್ದು, ಅದು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ” ಎಂದು ಲುಲು ಗ್ರೂಫ್ ಇಂಟರ್‌ನ್ಯಾಷನ್‌ನ ಅಧ್ಯಕ್ಷ ಎಂ.ಎ. ಯೂಸುಫ್ ಅಲಿ ಹೇಳುತ್ತಾರೆ.

“ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಭಾರತ ಭೇಟಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಪ್ರವಾಸಗಳು ಈ ಸಂಬಂಧವನ್ನು ಮತ್ತಷ್ಟು ವೃದ್ಧಿಸಿವೆ” ಎನ್ನುತ್ತಾರೆ ರಾಜಕೀಯ ಆರ್ಥಿಕ ವಿಶ್ಲೇಷಕರು.
ಯುಎಇ ಸ್ಥಾಪಕ ಪಿತಾಮಹ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ 1992 ರಲ್ಲಿ, ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್‌ಘಾಟ್‌ನಲ್ಲಿ ಗೋಲ್ಡನ್ ಶವರ್ ಮರವನ್ನು ನೆಟ್ಟರು. ಆ ಮೂಲಕ ಮಹಾತ್ಮ ಗಾಂಧಿಯವರನ್ನು ಸ್ಮರಿಸಿದ್ದರು. ಪರಿಸರ ಸುಸ್ಥಿರತೆ ವಿಚಾರದಲ್ಲಿ ಉಭಯ ದೇಶಗಳು ಒಟ್ಟಿಗೆ ಹೆಜ್ಜೆ ಇಡಲು ಪ್ರಯತ್ನಿಸಿವೆ. ಈ ಸಂಪ್ರದಾಯವನ್ನು ಮುಂದುವರೆಸುತ್ತಾ, ಶೇಖ್ ಜಾಯೆದ್ ಅವರ ಪುತ್ರ, ಈಗ ಯುಎಇ ಅಧ್ಯಕ್ಷರಾಗಿರುವ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ 2016ರಲ್ಲಿ ಅದೇ ರಾಜ್‌ಘಾಟ್‌ನಲ್ಲಿ ಮೋಲ್ಶ್ರಿ ಸಸಿಯನ್ನು ನೆಟ್ಟಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ರಾಜ್‌ಘಾಟ್‌ಗೆ ಭೇಟಿ ನೀಡಿ ಮತ್ತೊಂದು ಗೋಲ್ಡನ್ ಶವರ್ ಮರವನ್ನು ಹಾಕಿ, ಪರಿಸರ ಕಾಳಜಿಯನ್ನು ಪುನರುಚ್ಚರಿಸಿದ್ದರು. ಇದು ಕೇವಲ ಗಿಡನೆಡುವ ಕೆಲಸವಾಗಿಯಷ್ಟೇ ಉಳಿದಿಲ್ಲ. ಭಾರತದಿಂದ ವಲಸೆ ಹೋದ ಉದ್ಯಮಿಗಳೂ ಪರಿಸರ ಸ್ನೇಹಿ ಕಾರ್ಯಕ್ರಮಗಳ ಭಾಗವಾಗಿದ್ದಾರೆ.
2050ರ ವೇಳೆಗೆ ಇಂಗಾಲ ಹೊರಸೂಸುವಿಕೆಯಲ್ಲಿ ಶೂನ್ಯ ಸಾಧನೆ ಮಾಡುವ ಪ್ರತಿಜ್ಞೆ ಮಾಡಿದೆ ಯುಎಇ. 2030ರ ವೇಳೆಗೆ 40 ಪ್ರತಿಶತದಷ್ಟು ಇಂಗಾಲ ಹೊರಸೂಸುವಿಕೆ ಕಡಿತಗೊಳಿಸುವ ಗುರಿಯನ್ನುಇಟ್ಟುಕೊಂಡಿದೆ. ದುಬೈನಿಂದ ದಕ್ಷಿಣಕ್ಕೆ ಸರಿಸುಮಾರು 50 ಕಿಮೀ ದೂರದಲ್ಲಿರುವ ಸೈಹ್ ಅಲ್-ದಹಾಲ್‌ನಲ್ಲಿರುವ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಸೋಲಾರ್ ಪಾರ್ಕ್, ಸ್ವತಂತ್ರ ವಿದ್ಯುತ್ ಉತ್ಪಾದಕ (ಐಪಿಪಿ) ಮಾದರಿಯನ್ನು ಆಧರಿಸಿದ ವಿಶ್ವದ ಅತಿದೊಡ್ಡ ‘ನವೀಕರಿಸಬಹುದಾದ ಇಂಧನ ಯೋಜನೆ’ಯಾಗಿದೆ. 2030ರ ವೇಳೆಗೆ 5,000 ಮೆಗಾವ್ಯಾಟ್ ವಿದ್ಯುತ್ ಅನ್ನು ಸಂಪೂರ್ಣವಾಗಿ ‘ನವೀಕರಿಸಬಹುದಾದ ಇಂಧನ’ ಮೂಲಗಳಿಂದ ಉತ್ಪಾದಿಸುವ ಧ್ಯೇಯದೊಂದಿಗೆ ಈ ಯೋಜನೆಯು ಮುನ್ನಲೆಗೆ ಬಂದಿದೆ. ವಾರ್ಷಿಕವಾಗಿ 6.5 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಎಮಿಷನ್ ಕಡಿತಗೊಳಿಸುವ ಮಹನ್ನೋತ ಕನಸು ಕಾಣಲಾಗಿದೆ.
ಇದನ್ನೂ ಓದಿರಿ: ಗ್ಯಾನೇಶ್ ಕುಮಾರ್ ಗುಪ್ತ ನೇಮಕ; ಪ್ರಪಾತದ ಅಂಚಿನಲ್ಲಿ ಚುನಾವಣಾ ಆಯೋಗ?
ದುಬೈ ಕ್ಯಾನ್‌ನ ಸುಸ್ಥಿರ ಉಪಕ್ರಮವಾದ ದುಬೈ ರೀಫ್ ಬಗ್ಗೆ ಹೇಳಬೇಕು. ಕಡಲ ಕಿನಾರೆಯಲ್ಲಿ ಪರಿಸರ ಜೀವ ವೈವಿಧ್ಯವನ್ನು ಪುನರ್ ವೃದ್ಧಿಸುವ ಯೋಜನೆಯೇ ರೀಫ್. ವಿಶ್ವದ ಅತಿದೊಡ್ಡ ರೀಫ್ ಯೋಜನೆಯ ಭಾಗವಾಗಿ ಭಾರತೀಯ ಮೂಲದ ತಂತ್ರಜ್ಞರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಮರುಭೂಮಿ ಕೃಷಿ ಮತ್ತು ನೀರಿನ ಸಂರಕ್ಷಣೆ ವಿಚಾರದಲ್ಲಿ ಸುಸ್ಥಿರ ಪರಿಹಾರ ಮಾರ್ಗಗಳನ್ನು ಶೋಧಿಸುತ್ತಿರುವ ಡೇಕ್ ರೆಚ್‌ಸ್ಯಾಂಡ್ ಕಂಪನಿಯನ್ನು ಮುನ್ನಡೆಸುತ್ತಿರುವ ವ್ಯಕ್ತಿ ಭಾರತೀಯ ಮೂಲದ ತಂತ್ರಜ್ಞ ಚಂದ್ರ ಡೇಕ್.
ಚಂದ್ರ ಅವರ ಕಂಪನಿಗೆ ಯುಎಇನಲ್ಲಿ ಮಹತ್ವದ ಗೌರವವಿದೆ. ಈ ಕಂಪನಿ 600ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಹೊಂದಿದೆ. ನಿರ್ಜೀವಗೊಂಡ ಮರಳಿಗೆ, ನಿರ್ದಿಷ್ಟ ಖನಿಜಗಳನ್ನು ಸೇರಿಸುವ ಮತ್ತು ಮರಳನ್ನು ಜೀವಂತಿಕೆಯ ಸತ್ವವಾಗಿಸುವ ಕಾರ್ಯಕ್ರಮ ರೂಪಿಸಿರುವ ಚಂದ್ರ, ಯುಎಇಯಲ್ಲಿ ಬೃಹತ್ ಅರಣ್ಯೀಕರಣ ಉಪಕ್ರಮಕ್ಕಾಗಿ ಹಣವನ್ನು ಸಂಗ್ರಹಿಸುತ್ತಿದ್ದಾರೆ.
“ಮಳೆನೀರು ಕೊಯ್ಲು ಮತ್ತು ಒಳಚರಂಡಿ ಜಾಲವನ್ನು ನವೀಕರಿಸಲು ಸ್ಪಾಂಜ್ ಸಿಟಿ ಉಪಕ್ರಮವನ್ನು ನಾವು ಅನ್ವೇಷಿಸುತ್ತಿದ್ದೇವೆ” ಎನ್ನುವ ಅವರು, “ನಮ್ಮ ತಂತ್ರಜ್ಞಾನಗಳು ಯುಎಇಯಂತಹ ಶುಷ್ಕ ಪ್ರದೇಶಗಳಲ್ಲಿ ಅತ್ಯುತ್ತಮ ಮಾರ್ಗೋಪಾಯಗಳು” ಎನ್ನುತ್ತಾರೆ.
ಬೆಂಗಳೂರಿನಲ್ಲಿ ಹುಟ್ಟಿಕೊಂಡ ಸ್ಟಾರ್ಟ್‌ಅಪ್ ಕಂಪನಿ ‘Pyse’ ಮುಖ್ಯ ಕಚೇರಿ ಸ್ಥಳಾಂತರಗೊಂಡಿದ್ದು ದುಬೈಗೆ. ಭಾರತೀಯ ಮೂಲದ ಉದ್ಯಮಿ ಕೌಸ್ತುಭ್ ಪದಕನ್ನಾಯ ಇದರ ಸಂಸ್ಥಾಪಕ. ಪರಿಸರಸ್ನೇಹಿ ಪರಿಹಾರಗಳನ್ನು ಅಳವಡಿಸುವುದು ಈ ಕಂಪನಿಯ ಪ್ರಮುಖ ಧ್ಯೇಯ. “ಈ ಉಪಕ್ರಮಗಳನ್ನು ಕಾರ್ಯಗತಗೊಳಿಸುವ ವೇಗದಲ್ಲಿ ಭಾರತ ಸೇರಿದಂತೆ ಇತರ ಹಲವು ದೇಶಗಳಿಗಿಂತ ಯುಎಇ ಬಹಳ ಮುಂದಿದೆ” ಎನ್ನುತ್ತಾರೆ ಕೌಸ್ತುಭ್.
ಇದನ್ನೂ ಓದಿರಿ: ಅಂದು ಎನ್‌ಇಪಿ, ಇಂದು ಯುಜಿಸಿ; ರಾಜ್ಯಗಳ ಮೇಲೆ ಕೇಂದ್ರದ ಗದಾಪ್ರಹಾರ!
“ಇಂದು ದುಬೈ ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲಾ ದ್ವಿಚಕ್ರ ವಾಹನಗಳನ್ನು ಆಹಾರ ಸರಬರಾಜಿಗೆ ಬಳಸಲಾಗುತ್ತದೆ. ಈ ಬೈಕ್‌ಗಳಿಗೆ ಪೆಟ್ರೋಲ್ ಬಳಸಲಾಗುತ್ತೆ. ವಿದ್ಯುತ್ ಚಾಲಿತ ವಾಹನಗಳನ್ನು ಈ ಕ್ಷೇತ್ರಕ್ಕೆ ತರುವುದು ಸಾಧ್ಯವಿದೆಯಾದರೂ ಶೇ. 30-40 ರಷ್ಟು ಮುಂಗಡ ವೆಚ್ಚ ಬೇಕಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ನಮ್ಮ ಸಂಸ್ಥೆ ಹೆಜ್ಜೆ ಹಾಕುತ್ತಿದೆ” ಎನ್ನುತ್ತಾರೆ ಕೌಸ್ತುಭ್ ಪದಕನ್ನಾಯ.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಭೇಟಿ ನೀಡಿದ ಬಳಿಕ ಉಭಯ ದೇಶಗಳ ವ್ಯಾಪಾರ ವಹಿವಾಟು ಮತ್ತಷ್ಟು ವೃದ್ಧಿಸಿತು ಎನ್ನುತ್ತಾರೆ ಯುಎಇಯಲ್ಲಿನ ಭಾರತದ ರಾಯಭಾರಿ ಸಂಜಯ್ ಸುಧೀರ್.

‘ದಿ ವೀಕ್’ ನಿಯತಕಾಲಿಕೆಗೆ ಇತ್ತೀಚೆಗೆ ಅವರು ಬರೆದಿರುವ ಲೇಖನದಲ್ಲಿ ಭಾರತ ಮತ್ತು ಯುಎಇ ನಡುವಿನ ಬಾಂಧವ್ಯದ ಆಳ- ಅಗಲವನ್ನು ತೆರೆದಿಟ್ಟಿದ್ದಾರೆ. “34 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯ ಭೇಟಿಯಾಗಿತ್ತು. ಬಳಿಕ ಮೋದಿಯವರು ಆರು ಬಾರಿ ಯುಎಇಗೆ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿಗಳಿಗೆ ಯುಎಇ ನಾಯಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅವರು 2017ರಲ್ಲಿ ಭಾರತಕ್ಕೆ ಆಗಮಿಸಿದ್ದರು. ಈ ಸಮಯದಲ್ಲಿ ಉಭಯ ದೇಶಗಳ ಪಾಲುದಾರಿಕೆಯನ್ನು ಉನ್ನತೀಕರಿಸಲಾಯಿತು. 2022ರಲ್ಲಿ ಮತ್ತೊಂದು ಬೆಳವಣಿಗೆಯಾಯಿತು. ಎರಡು ದೇಶಗಳ ನಾಯಕರು ಇಂಧನ, ರಕ್ಷಣೆ, ಆರೋಗ್ಯ ಮತ್ತು ನವ ತಂತ್ರಜ್ಞಾನ ಕ್ಷೇತ್ರದಲ್ಲಿ ಭವಿಷ್ಯವನ್ನು ನಿರ್ಧರಿಸುವ ‘Joint Vision Statement’ ಬಿಡುಗಡೆ ಮಾಡಿದ್ದರು. ಕಳೆದ 18 ತಿಂಗಳುಗಳಲ್ಲಿ ಎರಡೂ ದೇಶಗಳ ನಡುವೆ ಆರು ಉನ್ನತ ಮಟ್ಟದ ಭೇಟಿಗಳು ವಿನಿಮಯವಾಗಿವೆ” ಎನ್ನತ್ತಾರೆ ಸುಧೀರ್.
“ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಅವರು 2024ರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದರು. ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯವನ್ನು ತೆರೆದರು. ನಾವು ಡಿಜಿಟಲ್ ಮಾರ್ಗಗಳ ಮೂಲಕ ವ್ಯಾಪಾರ ವೃದ್ಧಿ ಸಾಧಿಸುತ್ತಿದ್ದೇವೆ. ಮಾಸ್ಟರ್ ಅಪ್ಲಿಕೇಶನ್ ಫಾರ್ ಇಂಟರ್‌ನ್ಯಾಷನಲ್ ಟ್ರೇಡ್ ಅಂಡ್ ರೆಗ್ಯುಲೇಟರಿ ಇಂಟರ್ಫೇಸ್’ (MAITRI) ಮೂಲಕ ಎರಡು ದೇಶಗಳು ತಮ್ಮ ನಡುವೆ ವರ್ಚುವಲ್ ಟ್ರೇಡ್ ಕಾರಿಡಾರ್ ಪ್ರಾರಂಭಿಸಿವೆ. ದುಬೈನ ಜೆಬೆಲ್ ಅಲಿ ಬಂದರಿನಲ್ಲಿ ಸ್ಥಾಪಿಸಲಾಗುವ ಭಾರತ್ ಮಾರ್ಟ್, ಎರಡೂ ದೇಶಗಳ ಪೂರಕ ಅಂಶಗಳನ್ನು ಬಳಸಿಕೊಳ್ಳುವುದರಿಂದಾಗಿ ನಮ್ಮ ವ್ಯಾಪಾರ ಸಂಬಂಧ ಮತ್ತಷ್ಟು ಹೆಚ್ಚಾಗಿದೆ. ಸಿಇಪಿಎಯಿಂದಾಗಿ ಇಬ್ಬರ ನಡುವೆ ಈಗಾಗಲೇ 85 ಬಿಲಿಯನ್ ಡಾಲರ್ ವ್ಯಾಪಾರ ವಹಿವಾಟು ಕುದುರಿದೆ. ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶ ಯುಎಇ. ಅಂತೆಯೇ, ಯುಎಇಯ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರ ಭಾರತ” ಎನ್ನುತ್ತಾರೆ ರಾಯಭಾರಿ.
ಇದನ್ನೂ ಓದಿರಿ: ಗೋಮೂತ್ರ ಕುಡಿಯುತ್ತಿದ್ದೀರಾ..? ಎಚ್ಚರ, ಎಚ್ಚರ!
ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಅವರ ಭಾರತ ಭೇಟಿಯಿಂದಾಗಿ ಪರಮಾಣು ಶಕ್ತಿ ಮತ್ತು ನಿರ್ಣಾಯಕ ಖನಿಜಗಳ ಶಾಂತಿಯುತ ಬಳಕೆಯ ಪ್ರಯಾಣವೂ ಆರಂಭವಾಗಿದೆ. “ಭಾರತ-ಯುಎಇ ಸಂಬಂಧಗಳು ನಿಜವಾಗಿಯೂ ಹೊಸ ಮೈಲಿಗಲ್ಲುಗಳ ಯುಗದಲ್ಲಿವೆ” ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಇತ್ತೀಚೆಗೆ ಹೇಳಿದ್ದರು.
ಯುಎಇಯಲ್ಲಿರುವ ಭಾರತೀಯರ ಸಂಖ್ಯೆ 2015ರಲ್ಲಿ 2.2 ಮಿಲಿಯನ್ ಇದ್ದದ್ದು, 2023ರಲ್ಲಿ 3.89 ಮಿಲಿಯನ್ ತಲುಪಿದೆ. ಪ್ರವಾಸಿ ವೀಸಾದ ಮೇಲೆ ಯುಎಇಗೆ ಭೇಟಿ ನೀಡುವ ಭಾರತೀಯರ ಸಂಖ್ಯೆ 2023ರಲ್ಲಿ 4.5 ಮಿಲಿಯನ್‌ಗೆ ಏರಿಕೆಯಾಗಿದೆ. ಅದೇ ರೀತಿ, ವೀಸಾ-ಆಗಮನ ಸೌಲಭ್ಯವನ್ನು ಪರಿಚಯಿಸಿದಾಗಿನಿಂದ ಭಾರತಕ್ಕೆ ಭೇಟಿ ನೀಡುವ ಎಮಿರೇಟ್ಸ್‌ಗಳ ಸಂಖ್ಯೆಯೂ ದ್ವಿಗುಣವಾಗಿದೆ. ಇದಿಷ್ಟು ಮುಸ್ಲಿಂ ರಾಷ್ಟ್ರವೊಂದರ ಜೊತೆಯಲ್ಲಿ ಭಾರತ, ಮೋದಿ ನೇತೃತ್ವದ ಆಡಳಿತದಲ್ಲಿ ಸಾಧಿಸಿರುವ ಸಂಪರ್ಕದ ಸಂಕ್ಷಿಪ್ತ ಪರಿಚಯ.
ಇಲ್ಲಿ ವಿವರಿಸಿರುವುದು ಕೇವಲ ಯುಎಇ ಮತ್ತು ಭಾರತದ ನಡುವಿನ ಸಂಬಂಧಗಳ ಬಗ್ಗೆಯಷ್ಟೇ. ಉಳಿದ ಗಲ್ಫ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕತಾರ್, ಕುವೈತ್, ಇರಾಕ್, ಓಮಾನ್ ಜೊತೆಗಿನ ಭಾರತದ ಸಂಬಂಧಗಳು ಇದಕ್ಕಿಂತ ಭಿನ್ನವಾಗಿಲ್ಲ. ಧಾರ್ಮಿಕ ಅಸಹಿಷ್ಣುತೆ, ಧ್ರುವೀಕರಣ ರಾಜಕೀಯದಾಚೆಗೆ ಜಾಗತಿಕ ಸಂಬಂಧಗಳು ಬಿಡಿಸಲಾಗದ ಗಂಟೇ ಸರಿ. ಇಂತಹ ಸೂಕ್ಷ್ಮಗಳು ಗೊತ್ತಿದ್ದೂ ಜನರನ್ನು ಒಡೆದು ಆಳುವ ನಿಟ್ಟಿನಲ್ಲಿ ದ್ವೇಷ ಬಿತ್ತನೆಯ ಮಾತುಗಳನ್ನಾಡುವ ಜನಪ್ರತಿನಿಧಿಗಳ ಬೂಟಾಟಿಕೆಯ ಬಗ್ಗೆ ಸದಾ ಎಚ್ಚರಿಕೆಯನ್ನು ಹೊಂದಿರಬೇಕಾಗುತ್ತದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




