ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ. 22ರಂದು ನಡೆದ ಉಗ್ರರ ದಾಳಿಯ ನಂತರ ವಿದೇಶ ಪ್ರವಾಸದಿಂದ ವಾಪಾಸ್ ಆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏ. 23ರಂದು ರಾತ್ರಿ ಸಂಪುಟದ ಹಿರಿಯ ಸಚಿವರು, ರಾಜತಾಂತ್ರಿಕ ಹಾಗೂ ಸೇನಾಧಿಕಾರಿಗಳ ಸಭೆ ನಡೆಸಿದರು. ಅಲ್ಲಿ ಪಾಕಿಸ್ತಾನ ಪ್ರಜೆಗಳ ವೀಸಾ ಸ್ಥಗಿತಗೊಳಿಸುವುದು, ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ-ವಾಘಾ ಗಡಿ ಚೆಕ್‌ಪೋಸ್ಟನ್ನು ತಕ್ಷಣದಿಂದ ಮುಚ್ಚುವುದು, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ Indus Water Threat ವಿಚಾರವನ್ನು ಅಮಾನತಿನಲ್ಲಿಡುವುದು ಸೇರಿದಂತೆ ಐದು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಅಷ್ಟಕ್ಕೇ ಸಿಂಧೂ ನದಿ ನೀರನ್ನು ಬಂದ್ ಮಾಡಲಾಗಿದೆ, ಇನ್ನು ಪಾಕಿಸ್ತಾನದ ಕತೆ ಮುಗಿದಂತೆಯೇ ಎಂದು ಗೋದಿ ಮಾಧ್ಯಮಗಳು ಸಂಭ್ರಮಿಸುತ್ತಿವೆ.
ಇತ್ತೀಚೆಗೆ ಉಗ್ರರ ದಾಳಿಯಾದಾಗಲೆಲ್ಲ ಸಿಂಧೂ ನದಿ ಎಂಬ ‘ಛೂಬಾಣ’ವನ್ನು ಮೋದಿ ಪ್ರಯೋಗಿಸುತ್ತಿರುವುದು ಹೊಸದೇನಲ್ಲ. ಆದರೆ ನದಿಯನ್ನು ಕಣಿವೆಯ ಕೆಳ ಭೂಭಾಗದತ್ತ ಹರಿಯದಂತೆ ಮಾಡುವುದಕ್ಕೆ ಬಾಯಿ ಮಾತಿನ ಅಣೆಕಟ್ಟು ಕಟ್ಟಿದರೆ ಸಾಲದು. ಸ್ವಾಭಾವಿಕ ಗುರುತ್ವಾಕರ್ಷಣೆಯ ನಿಯಮದಂತೆ ಪಾಕಿಸ್ತಾನಕ್ಕೆ ಹರಿಯುವ ನೀರು ಹರಿದೇ ಹರಿಯುತ್ತದೆ. ನಿಯಂತ್ರಿಸಬಹುದಾದ ನೀರಿಗೆ ಹಲವು ಅಣೆಕಟ್ಟೆಗಳನ್ನು ಕಟ್ಟಬೇಕಿದೆ. ಪಕಲ್ ದುಲ್ ಮತ್ತು ಸವಾಲ್‌ಕೋಟ್ ಅಣೆಕಟ್ಟು ಯೋಜನೆ ನನೆಗುದಿಗೆ ಬಿದ್ದಿದೆ. ಅದನ್ನು ಪೂರ್ಣಗೊಳಿಸಿದರೆ ಸಿಂಧೂ ನದಿ ನೀರಿನ ಹೆಚ್ಚಿನ ಪಾಲು ಭಾರತಕ್ಕೆ ಸಿಗಲಿದೆ. ಈಗ ಒಪ್ಪಂದ ಅಮಾನತಿನಲ್ಲಿಟ್ಟ ಕಾರಣ ಸಿಂಧೂ ನದಿ ಪಾತ್ರದಲ್ಲಿ ಭಾರತ ಕೈಗೊಳ್ಳುವ ಜಲವಿದ್ಯುತ್ ಸ್ಥಾವರದಂತಹ ಯೋಜನೆಗಳಿಗೆ ಪಾಕಿಸ್ತಾನದ ಅನುಮತಿ ಬೇಕಿಲ್ಲ. ಕಾಲುವೆ ಜಲಾಶಯ, ಅಣೆಕಟ್ಟುಗಳ ನೀರಿನ ಒಳಹರಿವು, ಹೊರ ಹರಿವಿನ ಮಾಹಿತಿಯನ್ನು ಬಹಿರಂಗಪಡಿಸಬೇಕಿಲ್ಲ.

ಕನಿಷ್ಠಪಕ್ಷ ನಾವು ನಮ್ಮ ಪಾಲಿನ ನೀರನ್ನುಸಮೃದ್ಧವಾಗಿ ಅಥವಾ ಯಥೇಚ್ಛವಾಗಿ ಬಳಸಿಕೊಳ್ಳಲು ಯಾವ ಹೊಸ ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದೇವೆ, ಆ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವಾ ಎಂದು ನೋಡಿದರೆ ನಿರಾಸೆಯಾಗುತ್ತದೆ.
ಇದನ್ನೂ ಓದಿರಿ: ‘ಪಂಜಾಬ್ 95’ ಸಿನಿಮಾಕ್ಕೆ 120 ಕಡೆ ಕತ್ತರಿ: ಜಸ್ವಂತ್ ಸಿಂಗ್ ಖಲ್ರಾ ಬಗ್ಗೆ ಸರ್ಕಾರ ಹೆದರುತ್ತಿರುವುದೇಕೆ?
ಆದರೆ ಇದಕ್ಕೂ ಮೊದಲು ಪ್ರಧಾನಿ ಮೋದಿ ಹಲವು ಸಲ ಒಪ್ಪಂದ ಮುರಿಯುವ ಮಾತಾಡಿದ್ದಾರೆ. ಮೋದಿ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದ ನಿತಿನ್ ಗಡ್ಕರಿ ಏನು ಹೇಳಿದ್ದರು ಗೊತ್ತೇ?
2016ರಲ್ಲಿ ಉರಿ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ‘ನೆತ್ತರು ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು.
2019ರ ಫೆಬ್ರವರಿಯಲ್ಲಿ ಜಮ್ಮು- ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿ, 40 ಮಂದಿ ಬಿಎಸ್‌ಎಫ್ ಸಿಬ್ಬಂದಿಯನ್ನು ಬಲಿ ಪಡೆದ ಮರುಕ್ಷಣ ಆಗಿನ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಇದೇ ಸಿಂಧೂ ‘ಜಲ ಬಾಂಬ್’ ಹೇಳಿಕೆ ಕೊಟ್ಟಿದ್ದರು.
ಪುಲ್ವಾಮ ದಾಳಿಯ ಮುಯ್ಯಿ ತೀರಿಸಿಕೊಳ್ಳಲು 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಮರುಪರಿಶೀಲಿಸಲು ಮೋದಿ ಸರ್ಕಾರ ಮುಂದಾಗಿದೆ ಎಂಬ ಹೇಳಿಕೆ ನೀಡಿದ್ದರು. ”ನಮ್ಮ ಮೂರು ನದಿಗಳ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದೆ. ನ್ಯಾಯಸಮ್ಮತವಾಗಿ ನಮಗೆ ಸಿಗುತ್ತಿದ್ದ ನೀರು ಪಾಕ್ ಪಾಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಮೂರು ನದಿಗಳ ನೀರು ಯಮುನಾಗೆ ಹರಿಯುವಂತೆ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಇದು ಸಿದ್ಧವಾದ ಬಳಿಕ ಯಮುನಾ ನದಿಯಲ್ಲಿ ಸಾಕಷ್ಟು ನೀರಿರುತ್ತದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸದಿದ್ದರೆ ಭಾರತ-ಪಾಕಿಸ್ತಾನ ನಡುವಿನ ಸಿಂಧೂ ನದಿ ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸಬೇಕಾಗುತ್ತದೆ” ಎಂದಿದ್ದರು. ಆ ಮೂಲಕ ಪರೋಕ್ಷವಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಎಚ್ಚರಿಸಿದ್ದರು.
ಏನಿದು ಸಿಂಧೂ ನೀರು ಒಪ್ಪಂದ?
1960ರಲ್ಲಿ ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೂಬ್ ಖಾನ್ ನಡುವೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ನಡೆಯಿತು.
ಇದನ್ನೂ ಓದಿರಿ: ನಕಲಿ ಎನ್‌ಕೌಂಟರ್ ಪ್ರಕರಣಗಳು: ಕಾನೂನು ಹೇಳುವುದೇನು?
ಈ ಒಪ್ಪಂದದ ವ್ಯಾಪ್ತಿಗೆ ಸಿಂಧೂ ನದಿಯಷ್ಟೇ ಅಲ್ಲ, ಉಪನದಿಗಳಾದ ಸಟ್ಲೇಜ್, ಬಿಯಾಸ್, ರಾವಿ, ಝೇಲಂ, ಚಿನಾಬ್ ನದಿಗಳೂ ಸೇರಿವೆ. ಪೂರ್ವ ಭಾಗದ ನದಿಗಳಾದ ಸಟ್ಲೇಜ್, ಬಿಯಾಸ್ ಮತ್ತು ರಾವಿ ನದಿಗಳ ನೀರನ್ನು ಭಾರತ ಬಳಸಿಕೊಳ್ಳಬಹುದು ಹಾಗೆಯೇ ಪಶ್ಚಿಮ ನದಿಗಳಾದ ಝೀಲಂ, ಚಿನಾಬ್ ಮತ್ತು ಸಿಂಧೂ ನದಿಗಳ ನೀರನ್ನು ಪಾಕಿಸ್ತಾನಕ್ಕೆ ಬಿಡಬೇಕು ಎಂಬ ಒಪ್ಪಂದವಿದೆ. ಈ ನದಿಗಳ ನೀರನ್ನು ವಿದ್ಯುತ್ ಉತ್ಪಾದನೆ, ಕೃಷಿ ಹಾಗೂ ಅನ್ಯ ಬಳಕೆಗೆ ಭಾರತ ಬಳಸಿಕೊಳ್ಳಬಹುದು ಎಂದು ಒಪ್ಪಂದದಲ್ಲಿದೆ. ಆದರೆ, ಭಾರತ ಅದನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿಲ್ಲ. ಹಾಗಾಗಿ ಪಾಕಿಸ್ತಾನಕ್ಕೆ ಹೆಚ್ಚುವರಿ ನೀರು ಹರಿಯುತ್ತಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಕೃಷಿ ಚಟುವಟಿಕೆಗೆ ಜೀವಬಂದಿದೆ. ಹೆಚ್ಚು ಭತ್ತ ಗೋದಿ ಬೆಳೆಯಲಾಗುತ್ತಿದೆ.
ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯಲ್ಲಿ ರಾವಿ ನದಿಗೆ ಅಡ್ಡಲಾಗಿ ಶಾಪುರ್-ಖಾಂಡಿಯಲ್ಲಿ ಅಣೆಕಟ್ಟು ಕಟ್ಟಿ ಉಳಿಯುವ ಹೆಚ್ಚುವರಿ ನೀರನ್ನು ರಾವಿ-ಬಿಯಾಸ್ ನದಿಗಳಿಗೆ ಇಂಟರ್‌ಲಿಂಕ್ ಮಾಡುವ ಮೂಲಕ ಇತರ ರಾಜ್ಯಗಳಿಗೆ ಹರಿಸಲು ಯೋಜನೆ ರೂಪಿಸಲಾಗಿದೆ ಎಂದು ಗಡ್ಕರಿ ಅವರು ಹೇಳಿ ಆರು ವರ್ಷವಾಯ್ತು. ಅದು ಯಾವ ಸ್ಥಿತಿಯಲ್ಲಿದೆ ಯಾರಿಗೂ ಗೊತ್ತಿಲ್ಲ.
“ಸಟ್ಲೆಜ್, ಬಿಯಾಸ್, ರಾವಿ – ಈ ನದಿಗಳಲ್ಲಿನ ನೀರು ಭಾರತ ಮತ್ತು ನಮ್ಮ ರೈತರಿಗೆ ಸೇರಿದೆ. ಇದನ್ನು ಪಾಕಿಸ್ತಾನದ ಹೊಲಗಳಲ್ಲಿ ಬಳಸಲಾಗುತ್ತಿಲ್ಲ, ಆದರೆ ಪಾಕಿಸ್ತಾನ ಸೇರಿ ಸಮುದ್ರಕ್ಕೆ ಹರಿಯುತ್ತಿದೆ. ಈಗ ಈ ನೀರಿನ ಪ್ರತಿಯೊಂದು ಹನಿಯನ್ನು ನಿಲ್ಲಿಸಲಾಗುವುದು ಹಾಗೂ ನಾನು ಅದನ್ನು ಪಂಜಾಬ್, ಜಮ್ಮು ಮತ್ತು ಕಾಶ್ಮೀರವೂ ಸೇರಿದಂತೆ ಭಾರತೀಯ ರೈತರಿಗೆ ನೀಡುತ್ತೇನೆ. ಈ ಮಾತಿಗೆ ಬದ್ಧನಾಗಿದ್ದೇನೆ” ಎಂದು ಮೋದಿ 2017ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು. ಈ ಮಾತುಗಳು ಚುನಾವಣಾ ಹೇಳಿಕೆಗಷ್ಟೇ ಸೀಮಿತವಾಗಿದೆ. ಮತ ಪಡೆಯುವ ತಂತ್ರವಷ್ಟೇ ಆಗಿ ಉಳಿದಿವೆ.
ಸಿಂಧೂ ನದಿಯ ನೀರನ್ನು ನಿಲ್ಲಿಸುವುದು ಅಷ್ಟು ಸುಲಭವೇ?
ಇಲ್ಲ, ಯಾಕೆಂದರೆ ಇದು ರಾಜತಾಂತ್ರಿಕ ಒಪ್ಪಂದದ ಉಲ್ಲಂಘನೆಯಾಗುತ್ತದೆ. ಅಷ್ಟೇ ಅಲ್ಲ; ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಿಂಧೂ ನದಿಯ ನೀರನ್ನು ಪಾಕಿಸ್ತಾನಕ್ಕೆ ಹೋಗದಂತೆ ನಿಲ್ಲಿಸುವುದಕ್ಕೆ ತಾಂತ್ರಿಕ ಅಡೆತಡೆಗಳು ಹಲವಾರು. ನದಿಯ ಒಟ್ಟು ನೀರನ್ನು ತಡೆಯಲು ದೊಡ್ಡ ಪ್ರಮಾಣದ ಅಣೆಕಟ್ಟುಗಳು ಅಥವಾ ಜಲಾಶಯಗಳ ನಿರ್ಮಾಣವಾಗಬೇಕು. ಇದಕ್ಕೆ ಭಾರೀ ವೆಚ್ಚ, ಸಮಯ ಕೂಡ ಅಗತ್ಯ. ಅಷ್ಟೇ ಅಲ್ಲ, ಹಿಮಾಲಯದ ಕಠಿಣ ಭೂಪ್ರದೇಶದಲ್ಲಿ ಎಂಜಿನಿಯರಿಂಗ್ ಸವಾಲುಗಳಿವೆ. ಹೆಚ್ಚುವರಿ ಜಲಾಶಯಗಳನ್ನು ನಿರ್ಮಿಸುವುದು ಭೂಸ್ವಾಧೀನ, ಪರಿಸರ ಪರಿಣಾಮ ಮತ್ತು ಸ್ಥಳೀಯ ಜನರ ವಿರೋಧವನ್ನು ಎದುರಿಸಬೇಕಾಗುತ್ತದೆ.

ನೀರಿನ ಹರಿವಿನ ನಿಯಂತ್ರಣ: ಸಿಂಧೂ ನದಿಯ ಒಟ್ಟು ಹರಿವನ್ನು ತಡೆಯಲು ನಿಖರವಾದ ನೀರಿನ ನಿರ್ವಹಣೆ ಬೇಕು. ಇದು ಈಗಿರುವ ಮೂಲಸೌಕರ್ಯದ ಮೇಲೆ ಒತ್ತಡ ಹೇರಬಹುದು ಮತ್ತು ಪ್ರವಾಹ ಅಥವಾ ಬರಗಾಲದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಪರಿಸರ ಮತ್ತು ಕೃಷಿ ಪರಿಣಾಮ: ನೀರಿನ ಹರಿವನ್ನು ತಡೆಯುವುದರಿಂದ ಭಾರತದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌ನಂತಹ ಪ್ರದೇಶಗಳ ಕೃಷಿ, ಜಲವಿದ್ಯುತ್ ಮತ್ತು ಪರಿಸರ ಸಮತೋಲನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಇದನ್ನೂ ಓದಿರಿ: ಉರ್ದು ಈ ನೆಲದ ಭಾಷೆ ಎಂದು ಸಾರಿದ ಸುಪ್ರೀಮ್ ಕೋರ್ಟ್ ತೀರ್ಪಿನ ಮುಖ್ಯಾಂಶಗಳೇನು?
ಅಂತಾರಾಷ್ಟ್ರೀಯ ಕಾನೂನು ಮತ್ತು ಮೇಲ್ವಿಚಾರಣೆ: ಸಿಂಧೂ ನದಿ ಒಪ್ಪಂದದಡಿ (1960), ನೀರಿನ ಹರಿವಿನ ಮೇಲೆ ಯಾವುದೇ ಏಕಪಕ್ಷೀಯ ಕ್ರಮವನ್ನು ವಿಶ್ವಬ್ಯಾಂಕ್ ಮೇಲ್ವಿಚಾರಣೆ ಮಾಡುತ್ತದೆ. ತಾಂತ್ರಿಕ ಬದಲಾವಣೆಗಳು ಒಪ್ಪಂದದ ಉಲ್ಲಂಘನೆಯಾಗಿ ಕಾಣಿಸಬಹುದು. ಇದು ಕಾನೂನು ಸಂಕೀರ್ಣತೆಗೆ ಕಾರಣವಾಗುತ್ತದೆ. ಇದು ಕೇವಲ ಭಾರತೀಯರ ಕಣ್ಣೊರೆಸುವ ಮತ್ತು ಪಾಕಿಸ್ತಾನವನ್ನು ಬೆದರಿಸುವ ತಂತ್ರ ಅಷ್ಟೇ.
ಒಂದು ವೇಳೆ ಸಿಂಧೂ ಪಾಕಿಸ್ತಾನಕ್ಕೆ ಹರಿಯದಿದ್ದರೆ ಏನಾಗಬಹುದು?
ಒಪ್ಪಂದದ ಪ್ರಕಾರ, ಭಾರತವು ಸಿಂಧೂ ವ್ಯವಸ್ಥೆಯ ಪೂರ್ವ ನದಿಗಳಾದ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳ ಎಲ್ಲಾ ನೀರನ್ನು ಅನಿಯಂತ್ರಿತವಾಗಿ ಬಳಸಿಕೊಳ್ಳಬಹುದು. ಪಾಕಿಸ್ತಾನವು ಪಶ್ಚಿಮ ನದಿಗಳಾದ ಸಿಂಧೂ, ಝೀಲಂ ಮತ್ತು ಚಿನಾಬ್‌ಗಳಿಂದ ನೀರನ್ನು ಪಡೆಯಲು ಅವಕಾಶ ನೀಡಲಾಯಿತು.
ನದಿಗಳು ಗುರುತ್ವಾಕರ್ಷಣೆಯ ಕಾರಣ ಕಣಿವೆಯ ಕೆಳ ಭಾಗಕ್ಕೆ ಹರಿಯುವುದರಿಂದ, ನದೀ ಕಣಿವೆಯ ಕೆಳಭಾಗದ ದೇಶವಾಗಿರುವ ಪಾಕಿಸ್ತಾನ ಅನಾನುಕೂಲ ಎದುರಿಸುತ್ತಿದೆ. ಪಾಕಿಸ್ತಾನವು ಈ ಒಪ್ಪಂದದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಏಕೆಂದರೆ ಅದು ಈ ನದಿಗಳಿಂದ ಒಟ್ಟು ನೀರಿನ ಹರಿವಿನ ಸುಮಾರು 80% ಅನ್ನು ಪಡೆಯುತ್ತದೆ. ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಕೃಷಿ ಮತ್ತು ನೀರಾವರಿಗೆ ಇದು ಅತ್ಯಗತ್ಯ. ವಾಸ್ತವವಾಗಿ, ಪಂಜಾಬ್ ಪ್ರಾಂತ್ಯವು ದೇಶದ ಆಹಾರದ 85% ಅನ್ನು ಉತ್ಪಾದಿಸುತ್ತದೆ.
ಇದಲ್ಲದೆ, ಕೃಷಿ ಪ್ರಧಾನ ಆರ್ಥಿಕತೆಯಾಗಿರುವುದರಿಂದ, ಕೃಷಿ ವಲಯವು ಪಾಕಿಸ್ತಾನದ ಬೊಕ್ಕಸಕ್ಕೆ ಸುಮಾರು 25% ಕೊಡುಗೆ ನೀಡುತ್ತದೆ ಮತ್ತು ಗ್ರಾಮೀಣ ಜನಸಂಖ್ಯೆಯ 70% ಜನರಿಗೆ ಆದಾಯದ ಏಕೈಕ ಮೂಲ ಕೃಷಿಯೇ ಆಗಿದೆ.
ಪಾಕಿಸ್ತಾನವು ಈಗಾಗಲೇ ಅಂತರ್ಜಲ ಕುಸಿತವನ್ನು ಎದುರಿಸುತ್ತಿರುವುದರಿಂದ ಮತ್ತು ಕರಾಚಿಯಂತಹ ನಗರಗಳು ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿವೆ, ಸಿಂಧೂ ಉಪನದಿಗಳಿಂದ ನೀರಿನ ಹರಿವಿಗೆ ಯಾವುದೇ ಅಡಚಣೆ ಉಂಟಾದರೆ ಅದು ಬೆಳೆ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಆಹಾರ ಕೊರತೆ ಮತ್ತು ಆ ಮೂಲಕ ಸಂಭವನೀಯ ಆರ್ಥಿಕ ಅಸ್ಥಿರತೆಗೆ ಕಾರಣವಾಗುತ್ತದೆ.
ಭಾರತದ ಎಚ್ಚರಿಕೆಗೆ ಪಾಕಿಸ್ತಾನ ಹೆದರುತ್ತಿಲ್ಲ ಯಾಕೆ?
ಭಾರತವು ನದಿ ನೀರಿನ ಹಂಚಿಕೆ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿದರೂ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಕ್ಷಣವೇ ನಿಲ್ಲಿಸುವುದು ಸಾಧ್ಯವಿಲ್ಲ. ಏಕೆಂದರೆ ಭಾರತವು ಪ್ರಸ್ತುತ ಸಿಂಧೂ ನದಿಗಳಿಂದ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಲ್ಲಿಸಲು ಅಥವಾ ಅದನ್ನು ತನ್ನ ಸ್ವಂತ ಬಳಕೆಗೆ ತಿರುಗಿಸಲು ಬೇಕಾದ ಮೂಲಸೌಕರ್ಯವನ್ನು ಹೊಂದಿಲ್ಲ. ಹೆಚ್ಚೆಂದರೆ, ಭಾರತವು ನೀರಿನ ಹರಿವನ್ನು 5-10% ರಷ್ಟು ಕಡಿತಗೊಳಿಸಬಹುದು. ಭಾರತವು ಜಲವಿದ್ಯುತ್ ಯೋಜನೆಯನ್ನು ವಿಸ್ತರಿಸಿ ಹೆಚ್ಚು ನೀರನ್ನು ಬಳಸಿಕೊಳ್ಳಬಹುದು ವಿನಾ ನೀರಿನ ಹರಿವನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ ಭಾರತದ ಈ ನಿರ್ಧಾರ ಪಾಕಿಸ್ತಾನಕ್ಕೆ ಹೆಚ್ಚು ಆತಂಕ ತರುವುದಿಲ್ಲ. ಮೇಲೆ ಹುಟ್ಟಿದ ನದಿಯ ನೀರು ಕೆಳಗೇ ಹರಿಯಲೇಬೇಕಲ್ಲವೇ?
ಇದನ್ನೂ ಓದಿರಿ: ಐದು ದಶಕಗಳ ಲಿಂಗಾನುಪಾತ; ಆತಂಕಕಾರಿ ಸಂಗತಿಗಳೇನು?
2019 ಫೆಬ್ರವರಿ 14ರಂದು ನಡೆದ ಪುಲ್ವಾಮಾ ಉಗ್ರರ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಜವಾನರು ಹುತಾತ್ಮರಾಗಿದ್ದರು. ಬಳಿಕ ಕೇಂದ್ರ ಸರಕಾರ ಪಾಕ್‌ಗೆ ನೀಡಿದ್ದ “ಅತಿ ನೆಚ್ಚಿನ ರಾಷ್ಟ್ರ” ಸ್ಥಾನಮಾನವನ್ನು ರದ್ದುಗೊಳಿಸಿತ್ತು.
ಭಾರತ ಈಗಾಗಲೇ ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಆದರೆ ತನ್ನಈ ನಿರ್ಧಾರದ ಬಗ್ಗೆ ವಿಶ್ವ ಸಂಸ್ಥೆಗೆ ಮಾಹಿತಿ ನೀಡಿಲ್ಲ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.
ಸಿಂಧೂ ನದಿ ನೀರಿನ ಹಂಚಿಕೆ, ಬಳಕೆಯ ವಿಚಾರದಲ್ಲಿ ಪಾಕಿಸ್ತಾನದ ಜುಟ್ಟು ಖಂಡಿತವಾಗಿಯೂ ಭಾರತದ ಕೈಯಲ್ಲಿದೆ. ಆದರೆ ಅದನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಅಷ್ಟೇ ಕಾಳಜಿ ತೋರಬೇಕಿದೆ. ಉದ್ದೇಶಿತ ಅಣೆಕಟ್ಟುಗಳು, ಜಲವಿದ್ಯುತ್ ಯೋಜನೆಗಳ ನಿರ್ಮಾಣಕ್ಕೆ ವೇಗ ನೀಡಿ ಹೆಚ್ಚಿನ ನೀರನ್ನು ಹಿಡಿದಿಡುವ ಮೂಲಕ ಪಾಕಿಸ್ತಾನಕ್ಕೆ ಜಲದಿಗ್ಬಂಧನ ಹೇರಬಹುದು. ಆದರೆ ಇಂತಹ ಬೃಹತ್ ಯೋಜನೆಗಳನ್ನು ಪೂರ್ಣಗೊಳಿಸಲು ವರ್ಷ ವರ್ಷಗಳೇ ಬೇಕು.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.




