ನಾವು ಯಾವ ಕಾರಣಕ್ಕೂ ಗಮನಿಸದೇ ಇರಲಾಗದ ಸಮಸ್ಯೆಯೊಂದು ನಮ್ಮನ್ನು ಆವರಿಸಿದೆ ಎಂಬುದನ್ನು ವಿವರಿಸಲು ಇಂಗ್ಲಿಷಿನ ನುಡಿಗಟ್ಟೊಂದಿದೆ? Elephant in the room ಅಂತ. ನಮ್ಮ ಮನೆಯ ಕೊಠಡಿಯೊಂದರಲ್ಲಿ ಆನೆ ಬಂದು ಕೂತಿದ್ದಾಗಲೂ ನಾವು ಅಂಥದ್ದೇನೂ ಆಗಿಲ್ಲ ಎಂಬಂತೆ ಇರಲಾಗದು. ದೆಹಲಿಯ ಒಕ್ಕೂಟ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯಕ್ಕೆ ಈ ವಿಚಾರ ಸೊಗಸಾಗಿ ಅನ್ವಯವಾಗುತ್ತದೆ. ಹಾಗೆ ನೋಡಿದರೆ, ಅದನ್ನು ಯಾರೂ ಗಮನಿಸಿಲ್ಲ ಎಂದೇನಲ್ಲ. ಆ ರೀತಿ ಗಮನಿಸಿ ಮಾತನಾಡುತ್ತಿರುವ ನಾಲ್ಕೈದು ಪ್ರಮುಖರ ಅನಿಸಿಕೆಗಳ ಮೂಲಕವೇ ಈ ಅನ್ಯಾಯವನ್ನು ಕಟ್ಟಿಕೊಡುವ ಪ್ರಯತ್ನವನ್ನು ಈ ಬರಹದಲ್ಲಿ ಮಾಡಲಾಗಿದೆ. ಆದರೆ, ಕರ್ನಾಟಕದ ಸಂಸದರು, ಅದರಲ್ಲೂ ಬಿಜೆಪಿಯ ಪ್ರತಿನಿಧಿಗಳು ಈ ಕುರಿತು ಚಕಾರವನ್ನೇ ಎತ್ತದಿರುವುದು? ಸದರಿ ಸಂಗತಿಯನ್ನು ಮನಿಯೊಳಗಿನ ಆನಿಯನ್ನು ಹೇಗೆ ಗಮನಿಸದೇ ತಿರುಗುತ್ತಿದ್ದಾರೆ ಎಂಬ ಆತಂಕ ಹುಟ್ಟಿಸುತ್ತದೆ.
ಈ ಅನ್ಯಾಯ-ತಾರತಮ್ಯಕ್ಕೆ ಸ್ವತಂತ್ರ ಭಾರತದಷ್ಟೇ ಇತಿಹಾಸವಿದೆ. ಆದರೆ, ನಾವೀಗ ಹಾದುಹೋಗುತ್ತಿರುವ ‘ಮೋದಿಯುಗ’ದಲ್ಲಿ ಇದು ತಾರಕಕ್ಕೇರಿದೆ. ಪ್ರಧಾನಮಂತ್ರಿ ಮೋದಿಯವರು ನುಡಿದಂತೆ ನಡೆದಿಲ್ಲ, ಅಥವಾ ನಡೆದಂತೆ ನುಡಿದಿಲ್ಲ. ನಡೆ ಬೇರೆ-ನುಡಿ ಬೇರೆ. ಕೋಮುವಾದ ಹಿಂದು-ಮುಸ್ಲಿಮ್ ರಾಜಕಾರಣ ಮಾಡಿಯೇ ಇಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ಆದರೆ ಅವರ ರಾಜಕಾರಣದ ಜೀವ ಜೀವಾಳವೇ ಹಿಂದು-ಮುಸ್ಲಿಮ್ ಧೃವೀಕರಣ. ಹಾಗೆಯೇ ಸಹಕಾರಿ ಒಕ್ಕೂಟ ತತ್ವವನ್ನು ಮಾತಿನಲ್ಲಿ ಎತ್ತಿ ಹಿಡಿಯುತ್ತಾರೆ. Cooperative federalism – ಸಹಕಾರಿ ಒಕ್ಕೂಟ ತತ್ವದ ನುಡಿಮುತ್ತುಗಳನ್ನು ಅವರ ಮೊದಲ ವರ್ಷದಲ್ಲಿ ತೂರಿಬಿಟ್ಟರು. ಆದರೆ, ಕೃತಿಯಲ್ಲಿ ಅದಕ್ಕೆ ತದ್ವಿರುದ್ಧ ನಡೆದುಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳ ಅವರ ಆಡಳಿತ ಎಡೆಬಿಡದೆ ನಿತ್ಯ ನಿರಂತರವಾಗಿ ಬಿಜೆಪಿಯೇತರ ರಾಜ್ಯ ಸರ್ಕಾರಗಳೊಂದಿಗೆ ಘರ್ಷಣೆಯಲ್ಲಿ ತೊಡಗಿದೆ. ಅಂತಹ ರಾಜ್ಯಗಳ ಸಾಂವಿಧಾನತ್ಮಕ ಹಕ್ಕುಗಳನ್ನು ದಮನ ಮಾಡುತ್ತ ಬಂದಿದೆ. ಡಬಲ್ ಎಂಜಿನ್ ಸರ್ಕಾರದ ಮಾತಿನಲ್ಲೇ ಈ ವಿನಾಶಕಾರಿ ಆಶಯ ಅಡಗಿದೆ.
ಕೇಂದ್ರ ರಾಜ್ಯಗಳ ತಿಕ್ಕಾಟ ಹೊಸದೇನಲ್ಲ. ಹೀಗಾಗಿಯೇ ಕೇಂದ್ರ ರಾಜ್ಯಗಳ ಸಂಬಂಧಗಳ ಕುರಿತು ಸರ್ಕಾರಿಯಾ ಆಯೋಗವೂ ಸೇರಿ ಹಲವು ಆಯೋಗಗಳು ವರದಿ ನೀಡಿವೆ. ಈ ಹಿಂದಿನ ಕೇಂದ್ರ ಸರ್ಕಾರಗಳು ಸಮಸ್ಯೆ ಇದೆಯೆಂದು ಅಂಗೀಕರಿಸುತ್ತ ಬಂದಿದ್ದವು. ಅವುಗಳನ್ನು ಬಗೆಹರಿಸುವ ದಾರಿಗಳನ್ನು ಹುಡುಕೋಣ ಎಂಬ ಮಾತನ್ನು ಒಪ್ಪಿದ್ದವು. ಹೀಗಾಗಿಯೇ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಂದಿರಲಿಲ್ಲ.
ನೋಟು ರದ್ದು, ಕೋವಿಡ್ ಲಾಕ್‌ಡೌನ್, ರೈತರ ತೀವ್ರ ಪ್ರತಿಭಟನೆಯ ನಂತರ ರದ್ದು ಮಾಡಲಾದ ಮೂರು ಕೃಷಿ ಕಾಯಿದೆಗಳು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಸಂವಿಧಾನದ 370ನೇ ವಿಧಿ ರದ್ದು ಕ್ರಮಗಳು ಒಕ್ಕೂಟ ತತ್ವದ ಆಶಯವನ್ನು ಹಿಂಡಿ ಎಸೆದ ಕೆಲವೇ ಕೆಲವು ಉದಾಹರಣೆಗಳು. ರಾಜ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ ಈ ಕ್ರಮಗಳ ಕುರಿತು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆಯನ್ನೇ ನಡೆಸಲಿಲ್ಲ.
ಇದನ್ನೂ ಓದಿರಿ: ಮೋದಿಯ ಟೀಕಿಸುತ್ತಿದ್ದ ರಾಣೆ, ಮುಸ್ಲಿಂ ದ್ವೇಷಿಯಾಗಿದ್ದು ಹೇಗೆ?
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಹುತ್ವ ಕರ್ನಾಟಕ ನಡೆಸಿದ್ದ ಸಮೀಕ್ಷೆಯ ವರದಿ ಈ ಅಂಶವನ್ನು ವಿವರವಾಗಿ ಹೇಳಿದೆ. ಸಹಕಾರಿ ಒಕ್ಕೂಟ ತತ್ವವನ್ನು ಬಾಯಲ್ಲಿ ಹೇಳುತ್ತಲೇ, ಕೃತಿಯಲ್ಲಿ ಬೆದರಿಕೆ-ಬಲವಂತದ ಕೇಂದ್ರೀಕರಣವನ್ನು ಹೇರುತ್ತ ಬರಲಾಗಿದೆ. ಅಧಿಕಾರಗಳು ಕೇಂದ್ರ ಸರ್ಕಾರದ ಕೈಯಲ್ಲಿ ಕೇಂದ್ರೀಕರಣಗೊಳ್ಳಬಹುದಾದ ಅಪಾಯವನ್ನು ಸಂವಿಧಾನ ರಚನಾ ಸಭೆ ವ್ಯಕ್ತಪಡಿಸಿತ್ತು. ಈ ಆತಂಕ ಇದೀಗ ನಿಜವಾಗಿದೆ.
ಹಾಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹೆಜ್ಜೆ ಹೆಜ್ಜೆಗೂ ಕೇಂದ್ರದಿಂದ ಮಲತಾಯಿ ಧೋರಣೆಯನ್ನು ಎದುರಿಸುತ್ತ ಬಂದಿದೆ. 17,900 ಕೋಟಿ ರುಪಾಯಿಯಷ್ಟು ಬರಗಾಲ ಪರಿಹಾರದ ಬೇಡಿಕೆಯನ್ನು ಮೋದಿ ಸರ್ಕಾರ ನೇರವಾಗಿ ತಳ್ಳಿ ಹಾಕಿತು. ರಾಜ್ಯ ಸರ್ಕಾರ ಕಡೆಗೆ ಸುಪ್ರೀಮ್ ಕೋರ್ಟಿನ ಕದ ಬಡಿಯಬೇಕಾಯಿತು.
ಒಕ್ಕೂಟ ತತ್ವದ ಮೇಲೆ ಈ ಹಿಂದೆ ಇಂದಿರಾಗಾಂಧೀ ಪ್ರಧಾನಿಯಾಗಿದ್ದ ಕಾಲದಲ್ಲೂ ದಾಳಿಗಳು ನಡೆದಿವೆ ಹೌದು. ಆದರೆ ಈಗಿನಷ್ಟು ತೀವ್ರ ಸ್ವರೂಪದ ಹಸ್ತಕ್ಷೇಪಗಳು, ನಿರಾಕರಣೆಗಳು, ಅಸಹಕಾರಗಳು, ತನ್ನ ಕೈಗೊಂಬೆ ರಾಜ್ಯಪಾಲರ ಮೂಲಕ ಬಿಜೆಪಿಯೇತರ ಸರ್ಕಾರಗಳನ್ನು ಬುಡಮೇಲು ಮಾಡುವ ಮತ್ತು ತನ್ನ ರಾಜಕೀಯ ವೈರಿಗಳನ್ನು ಕರಾಳ ಕಾಯಿದೆಗಳ ಮೂಲಕ ಜೈಲಿಗೆ ತಳ್ಳಿ ತಲೆಯೆತ್ತದಂತೆ ಹಣಿಯುವ ಷಡ್ಯಂತ್ರಗಳು ನಡೆದಿರಲಿಲ್ಲ.
ಬಿಜೆಪಿಯಿಂದ ನೇಮಕಗೊಂಡ ರಾಜ್ಯಪಾಲರು ಮೋದಿ-ಶಾ ಅವರ ಪಕ್ಷಪಾತೀ ಕಾರ್ಯಸೂಚಿಯನ್ನು ಜಾರಿಗೊಳಿಸಲು ತೊಡಗಿದ್ದಾರೆ. ರಾಜ್ಯ ಸರ್ಕಾರಗಳ ವಿಧಾನಮಂಡಲಗಳು ಅಂಗೀಕರಿಸಿದ ಹತ್ತಾರು ವಿಧೇಯಕಗಳಿಗೆ ಅಂಕಿತ ಹಾಕದೆ ಧೂಳು ಹಿಡಿಸಿದ್ದಾರೆ. ಸುಪ್ರೀಮ್ ಕೋರ್ಟು ಕಪಾಳಕ್ಕೆ ಬಾರಿಸುವಂತಹ ಆದೇಶಗಳನ್ನು ನೀಡಿದ್ದರೂ ಅವುಗಳನ್ನು ಗಾಳಿಗೆ ತೂರಲಾಗಿದೆ. ತಮಿಳುನಾಡಿನ ರಾಜ್ಯಪಾಲ ರವಿ ಅವರಂತೂ ತಮಿಳುನಾಡಿನ ದ್ರಾವಿಡ ಸಂಸ್ಕೃತಿಯ ಮೇಲೆಯೇ ದಾಳಿ ನಡೆಸಿದ್ದಾರೆ. ಒಂದು ಭಾರತ ಶ್ರೇಷ್ಠ ಭಾರತದ ಹೆಸರಿನಲ್ಲಿ ಪ್ರಾದೇಶಿಕ ಅಸ್ಮಿತೆಗಳು ಮತ್ತು ವೈವಿಧ್ಯತೆಯ ಮೇಲೆ ಕಲ್ಲು ಚಪ್ಪಡಿ ಎಳೆಯಲಾಗುತ್ತಿದೆ.
ತೆರಿಗೆ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪ್ರತ್ಯೇಕ ರಾಜ್ಯ ಕೇಳಬೇಕಾಗುತ್ತದೆ ಎಂದು ಲೋಕಸಭೆಯಲ್ಲಿ ಹೇಳಿದ ಡಿ.ಕೆ. ಸುರೇಶ್ ಅವರ ಮಾತಿನ ನಿಜ ಆಶಯವನ್ನು ಬೇಕೆಂದೇ ನಿರ್ಲಕ್ಷಿಸಿ ಅವರಿಗೆ ದೇಶದ್ರೋಹಿ ಹಣೆಪಟ್ಟಿ ಹಚ್ಚಲಾಯಿತು. ದೇಶದ್ರೋಹದ ಹಣೆಪಟ್ಟಿ ಹಚ್ಚಿ ಎಷ್ಟು ಕಾಲ ಬಾಯಿ ಬಡಿಯಲು, ತುಳಿದಿಡಲು ಬಂದೀತು?

ವಸೂಲಿಯಾದ ತೆರಿಗೆಯನ್ನು ಹಿಂದುಳಿದ ರಾಜ್ಯಗಳಿಗೆ ವ್ಯವಸ್ಥಿತವಾಗಿ 70 ವರ್ಷದಿಂದ ಕೊಡುತ್ತ ಬಂದಿವೆ ಉಳ್ಳ ರಾಜ್ಯಗಳು. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಆರೋಗ್ಯ ಅಂತರ ತಗ್ಗಬೇಕಿತ್ತು. ಆದರೆ ವಾಸ್ತವವೇನೆಂದರೆ ಶೇ. 30ರಷ್ಟಿದ್ದ ಅಂತರ ಶೇ. 90ಕ್ಕೆ ಏರಿದೆ. ಆದರೆ ಮುಂದುವರೆದ ರಾಜ್ಯಗಳಿಂದ ವಸೂಲಿಯಾದ ಹಣವನ್ನು ಉತ್ತರ ಭಾರತದ ಹಲವು ಹಿಂದುಳಿದ ರಾಜ್ಯಗಳ ಮೇಲೆ ಸುರಿಯುವುದು ಮುಂದುವರೆದೇ ಇದೆ. ಅರ್ಥಾತ್ ಇದು ದಕ್ಷ ಆಡಳಿತ ಮತ್ತು ಅನುಷ್ಠಾನದ ಕೊರತೆಯೇ ವಿನಾ ಹಣದ ಕೊರತೆಯಲ್ಲ.
15ನೆಯ ಹಣಕಾಸು ಆಯೋಗ ಕರ್ನಾಟಕಕ್ಕೆ ಸಿಗಬೇಕಾದ ಶೇ. 23ರಷ್ಟು ಅನುದಾನವನ್ನು ಕತ್ತರಿಸಿ ಹಿಂದುಳಿದ ರಾಜ್ಯಗಳಿಗೆ ಕೊಟ್ಟಿದೆ. ನಮ್ಮ ತೆರಿಗೆಯಲ್ಲಿನ ನಮ್ಮ ಪಾಲಿಗೆ ದೊಡ್ಡ ಕತ್ತರಿ ಹಾಕಲಾಗುತ್ತಿದೆ. ಚಿನ್ನದ ಮೊಟ್ಟೆಯಿಡುವ ಕೋಳಿಯ ಕತ್ತು ಹಿಸುಕಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.
ಇದನ್ನೂ ಓದಿರಿ: ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಟ್ರಂಪ್ ಪದತಲಕ್ಕೆ ಜಾರಿದ್ದು ಹೇಗೆ?
ಇತ್ತೀಚೆಗೆ 16ನೆಯ ಹಣಕಾಸು ಆಯೋಗದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಕೃಷ್ಣಬೈರೇಗೌಡ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಕುರಿತು ಎರಡು ತಾಸು ವಿವರಿಸಿದ್ದಾರೆ.
ರಾಜ್ಯಗಳೊಂದಿಗೆ ಹಂಚಿಕೊಳ್ಳುವ ತೆರಿಗೆ ಪಾಲಿನಲ್ಲಿ ದಕ್ಷಿಣ ಭಾರತದ (ಆಂಧ್ರ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ತೆಲಂಗಾಣಗಳ) ಪಾಲು 11ನೆಯ ಹಣಕಾಸು ಆಯೋಗದಲ್ಲಿ ಶೇ. 21.1 ಇದ್ದದ್ದು 15ನೆಯ ಹಣಕಾಸು ಆಯೋಗದ ಹೊತ್ತಿಗೆ ಶೇ. 15.8ಕ್ಕೆ ಕುಸಿದಿದೆ. ಪ್ರಗತಿಯನ್ನು ಹೀಗೆ ದಂಡಿಸಕೂಡದು. ಈ ಶೇ. 5.3 ಕುಸಿತ ನಮ್ಮ ಹಣಕಾಸನ್ನು ಘಾಸಿಗೊಳಿಸಿದೆ. ಉತ್ತರಪ್ರದೇಶದವರು 100 ರೂಪಾಯಿ ತೆರಿಗೆ ಕೊಟ್ಟರೆ ಅವರಿಗೆ ಕೇಂದ್ರದಿಂದ ವಾಪಸು 333 ರುಪಾಯಿ ಹಂಚಿಕೆ ಆಗ್ತದೆ. ಮಧ್ಯಪ್ರದೇಶದವರು 100 ರುಪಾಯಿ ತೆರಿಗೆ ಕೊಟ್ಟರೆ ಅವರಿಗೆ ವಾಪಸು ಸಿಗೋದು 292 ರೂಪಾಯಿ. ಬಿಹಾರದವರು ನೂರು ರೂಪಾಯಿ ತೆರಿಗೆ ಕೊಟ್ಟರೆ ಅವರಿಗೆ 922 ರೂಪಾಯಿ. ಒಡಿಶಾ 100 ರೂಪಾಯಿ ಕೊಟ್ಟರೆ ಅವರಿಗೆ 187 ರುಪಾಯಿ ವಾಪಸು ಸಿಗ್ತದೆ. ಆದರೆ ಕರ್ನಾಟಕದವರು ಕೊಡುವ 100 ರೂಪಾಯಿ ತೆರಿಗೆಗೆ ಕೇಂದ್ರದಿಂದ ವಾಪಸು ಸಿಗುವ ಪಾಲು ಕೇವಲ 12 ರೂಪಾಯಿ. 100ಕ್ಕೆ 100 ರೂಪಾಯಿ ಕೊಡಿ ಅಂತ ನಾವು ಹೇಳ್ತಾ ಇಲ್ಲ. ಕರ್ನಾಟಕ ನೂರು ರುಪಾಯಿ ತೆರಿಗೆ ಕೊಟ್ಟರೆ ಕನಿಷ್ಠ 20 ಅಥವಾ 25 ರೂಪಾಯಿಯನ್ನಾದರೂ ವಾಪಸು ಕೊಡಬೇಕು. ನಮ್ಮ ವೆಚ್ಚದ ಶೇ. 72 ರಷ್ಟನ್ನು ಕರ್ನಾಟಕ ರಾಜ್ಯ ಸ್ವಂತವಾಗಿ ರೂಢಿಸಿಕೊಳ್ಳುತ್ತಿದೆ. ಬಿಹಾರದ ಶೇ. 77 ರಷ್ಟು ವೆಚ್ಚ ಕೇಂದ್ರ ಸರ್ಕಾರದ್ದು. ಇದು ಯಾರ ದುಡ್ಡು? ನಮ್ಮಂತಹ ಕೆಲವು ಮುಂದುವರೆದ ರಾಜ್ಯಗಳು ಕೊಟ್ಟ ದುಡ್ಡು ಎನ್ನುತ್ತಾರೆ ಯುವ ಸಚಿವ ಪ್ರಿಯಾಂಕ್ ಖರ್ಗೆ.
ಬೆಂಗಳೂರಿನ ಪ್ರಗತಿಯಿಂದ ಸೃಷ್ಟಿಯಾಗುತ್ತಿರುವ ಉದ್ಯೋಗಗಳಲ್ಲಿ ಶೇ. 70ರಷ್ಟು ಹೊರಗಿನವರಿಗೆ ಸಿಗುತ್ತಿದೆ. ಕನ್ನಡದವರಿಗೆ ದೊರೆಯುತ್ತಿರುವ ಉದ್ಯೋಗಗಳ ಪ್ರಮಾಣ ಶೇ. 30 ಮಾತ್ರ. ನಮ್ಮ ಐಟಿ-ಬಿಟಿ ಬಗ್ಗೆ ಹೇಳಬೇಕೆಂದರೆ ನಾವು ವಿಶ್ವದ ನಾಲ್ಕನೆಯ ಅತಿ ದೊಡ್ಡ ಟೆಕ್ನಾಲಜಿ ಕ್ಲಸ್ಟರ್. ಇಂಡಿಯಾದ ಇನ್ನೋವೇಶನ್ ಸೂಚ್ಯಂಕದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಸೇವಾ ರಫ್ತಿನಲ್ಲಿ ಕರ್ನಾಟಕ ನಂಬರ್ ಒನ್. 4.50 ಲಕ್ಷ ಕೋಟಿ ರುಪಾಯಿಗಳ ಐಟಿ ಸರ್ವೀಸ್ ರಫ್ತಾಗುತ್ತಿದೆ. ಶೇ.32ರಷ್ಟು ವಿದೇಶೀ ನೇರ ಬಂಡವಾಳ ಹೂಡಿಕೆ ಆಗುತ್ತಿದೆ. ನವೋದ್ಯಮದಲ್ಲಿ ನಮ್ಮದು ನಾಲ್ಕನೆಯ ಸ್ಥಾನ. ಶತಕೋಟಿ ಮೌಲ್ಯ ಹೊಂದಿರುವ ದೇಶದ ಯೂನಿಕಾರ್ನ್ ಕಂಪನಿಗಳು ದೇಶದಲ್ಲಿ 112 ಇವೆ. ಅವುಗಳ ಮೌಲ್ಯ 320 ಶತಕೋಟಿ ಡಾಲರುಗಳು. 112ರಲ್ಲಿ ಕರ್ನಾಟಕದಲ್ಲಿರುವ ಯೂನಿಕಾರ್ನ್ಗಳ ಸಂಖ್ಯೆ 45. ಅವುಗಳ ಒಟ್ಟು ಮೌಲ್ಯ 180 ಶತಕೋಟಿ ಡಾಲರುಗಳು. ದೇಶದ ಅಭಿವೃದ್ಧಿಗೆ ನಮ್ಮ ಪಾಲು ದೊಡ್ಡದಿದೆ. ಐಟಿ ಸರ್ವೀಸ್ ರಫ್ತಿನ ನಾಲ್ಕೂವರೆ ಲಕ್ಷ ಕೋಟಿ ರುಪಾಯಿಗಳಲ್ಲಿ ಕರ್ನಾಟಕಕ್ಕೆ ಒಂದು ರೂಪಾಯಿ ಕೂಡ ಸಿಗುತ್ತಿಲ್ಲ. ಎಲ್ಲ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತಿದೆ. ಹೆಚ್ಚು ಅನುದಾನ ಮತ್ತು ಹೆಚ್ಚಿನ ತೆರಿಗೆ ಪಾಲನ್ನು ನಮಗೆ ಕೊಟ್ಟರೆ, ಹೆಚ್ಚು ಮೂಲಸೌಲಭ್ಯಗಳನ್ನು ನಿರ್ಮಿಸಿ, ಹೆಚ್ಚು ಉದ್ಯೋಗ ಸೃಷ್ಟಿ ಮಾಡುತ್ತೇವೆ. ಎಷ್ಟು ಮಂದಿ ಕನ್ನಡಿಗರು ಉದ್ಯೋಗ ಹುಡುಕಿಕೊಂಡು ಉತ್ತರಪ್ರದೇಶಕ್ಕೆ ಹೋಗುತ್ತಿದ್ದಾರೆ? ಉದ್ಯೋಗಾವಕಾಶ ಇದೆ ಬನ್ನಿ, ನೀವೂ ಉದ್ಧಾರ ಆಗಿ, ರಾಜ್ಯವನ್ನೂ ಉದ್ಧಾರ ಮಾಡಿ. ಭಾಷೇ ಕಲೀರಿ. ಇಲ್ಲಿ ಉದ್ಯೋಗ ಸೃಷ್ಟಿ ಆದರೆ ದೇಶದ ಇತರೆ ಭಾಗಗಳವರಿಗೂ ಉದ್ಯೋಗ ಸಿಗುತ್ತವೆ ಎಂಬುದು ಪ್ರಿಯಾಂಕ್ ಅವರ ವಾದ.

ಜನಸಂಖ್ಯಾ ನಿಯಂತ್ರಣದ ಕ್ರಮಗಳನ್ನು ಕೈಗೊಂಡಿರುವ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಲು ಹೊರಟಿದೆ. ಜನಸಂಖ್ಯೆಯ ಆಧಾರದ ಮೇಲೆ ಕೈಗೊಳ್ಳಲಾಗುವ ಕ್ಷೇತ್ರ ಮರುವಿಂಗಡಣೆಯಲ್ಲಿ ಕರ್ನಾಟಕದ ಲೋಕಸಭಾ ಸೀಟುಗಳ ಸಂಖ್ಯೆಯನ್ನು ತಗ್ಗಿಸಲಾಗುತ್ತಿದೆ. ಈ ಹುನ್ನಾರದ ಅಂಗವಾಗಿಯೇ ಜನಗಣತಿಯನ್ನು ಮುಂದೂಡುತ್ತ ಬರುತ್ತಿದೆ ಕೇಂದ್ರ ಸರ್ಕಾರ. ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಜನಸಂಖ್ಯೆಯನ್ನು ನಿಯಂತ್ರಿಸಿರುವ ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ತಗ್ಗಿಸಿ ದಂಡಿಸುವುದು ತರವಲ್ಲ ಎಂಬ ದೂರನ್ನು ಒಪ್ಪಿದ್ದರು.
ಆದರೆ ಮೋದಿ ಸರ್ಕಾರ ಬಿಜೆಪಿಯೇತರ ಸರ್ಕಾರಗಳನ್ನು ಆರಿಸುತ್ತ ಬಂದಿರುವ ದಕ್ಷಿಣ ರಾಜ್ಯಗಳ ಮೇಲೆ ಕೊಡಲಿ ಮಸೆಯುತ್ತ ಬಂದಿದೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಲೋಕಸಭಾ ಪ್ರಾತಿನಿಧ್ಯಕ್ಕೆ ಕತ್ತರಿ ಹಾಕಲು ಮುಂದಾಗಿದ್ದಾರೆ. ದಕ್ಷಿಣದ 129 ಸೀಟುಗಳನ್ನು 103ಕ್ಕೆ ತಗ್ಗಿಸುವ ಸಂಚು ನಡೆದಿದೆ. ಲೋಕಸಭೆಯಲ್ಲಿ ಕರ್ನಾಟಕದ ಸೀಟುಗಳು ಈಗಿನ 28ರಿಂದ ಹೆಚ್ಚುವ ಬದಲು 26-24ಕ್ಕೆ ತಗ್ಗಲಿವೆ. ಆಂಧ್ರದ ಸೀಟುಗಳು 25ರಿಂದ 20ಕ್ಕೆ, ತಮಿಳುನಾಡು 39ರಿಂದ 30, ಕೇರಳ 20ರಿಂದ 14, ತೆಲಂಗಾಣ 17ರಿಂದ 15ಕ್ಕೆ ಕುಸಿಯಲಿದೆ ಅಂತಾರೆ. ಆದರೆ ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ತಾನದ ಸೀಟುಗಳು ಈಗಿನ 174ರಿಂದ ಬಹುತೇಕ 300ರ ತನಕ ಹೋಗಬಹುದು ಎಂಬ ಅಂದಾಜಿದೆ. ಮುಂಬರುವ ದಿನಗಳಲ್ಲಿ ಒಂದು ಮತ, ಒಂದು ಮೌಲ್ಯ ಎಂಬುದು ಒಂದು ಮತ-ಅದಕ್ಕೆ ಯಾವ ಬೆಲೆಯೂ ಇಲ್ಲ ಎಂಬಂತಾದೀತು!
ದೇಶದ ಆರ್ಥಿಕತೆಗೆ ನಮ್ಮ ಕೊಡುಗೆ ಶೇ. 35ರಷ್ಟು. ಆದರೆ ಲೋಕಸಭೆಯಲ್ಲಿ ನಮಗೆ ಈವರೆಗೆ ದಕ್ಕಿರುವ ಪಾಲು ಶೇ. 20-22 ಮಾತ್ರ. ಕ್ಷೇತ್ರ ಮರುವಿಂಗಡಣೆಯ ನಂತರ ನಮ್ಮ ಪ್ರಾತಿನಿಧ್ಯ ಶೇ.20ರ ಕೆಳಗೆ ಕುಸಿಯಲಿದೆ. ತೆರಿಗೆ ಕಟ್ಟಲು ನಾವು ಬೇಕು, ಪ್ರಾತಿನಿಧ್ಯಕ್ಕೆ ನಾವು ಬೇಡ. 543 ಸೀಟುಗಳನ್ನು ಎಂಟು ನೂರು ಸೀಟುಗಳಿಗೆ ಹೆಚ್ಚಿಸಿ, ಕರ್ನಾಟಕದ 28ಕ್ಕೆ ನಾಲ್ಕೋ ಆರೋ ಹೆಚ್ಚುವರಿ ಸೇರುತ್ತೆ ಅಂತ ಕರ್ನಾಟಕದಲ್ಲಿನ ಮೋದಿ ತುತ್ತೂರಿ ಗ್ಯಾಂಗ್ ಊದುತ್ತಿದೆ. ಆದರೆ ನಮ್ಮ 28 ಹೋಗಿ 35 ಆದರೆ, ಉತ್ತರಪ್ರದೇಶದಲ್ಲಿ 80 ಇರೋದು 143 ಆಗುತ್ತೆ! ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಕರ್ನಾಟಕ ಮತ್ತು ದಕ್ಷಿಣ ರಾಜ್ಯಗಳು ಅನ್ಯಾಯ ಎದುರಿಸಲಿವೆ.
ನಮ್ಮ ಪ್ರಾತಿನಿಧ್ಯದ ಅನುಪಾತವನ್ನು ಉಳಿಸಬೇಕು. ಇಲ್ಲವಾದರೆ ನಾವು ದುಡಿದು ತೆರಿಗೆ ಕಟ್ಟಬೇಕು. ಈ ತೆರಿಗೆಯಲ್ಲಿ ಈಗಲೇ ನಮಗೆ ಮೂರು ನಾಮ ಹಾಕಿ, ಚೊಂಬು ಕೊಡ್ತಾ ಇದ್ದಾರೆ. ಇನ್ನು ಸಂಸತ್ತಿನಲ್ಲಿ ನಮ್ಮ ಪ್ರಾತಿನಿಧ್ಯವೇ ಕಮ್ಮಿ ಆದರೆ ಕರ್ನಾಟಕ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂಬಂತೆ ಆಗುವುದು ನಿಶ್ಚಿತ. ಈವತ್ತೇ ನಮ್ಮ ಮಾತನ್ನು ಕೇಳುತ್ತಿಲ್ಲ. ಇನ್ನು ಪಾರ್ಲಿಮೆಂಟಿನಲ್ಲಿ ನಮ್ಮ ಪ್ರಾತಿನಿಧ್ಯವೇ ಕಮ್ಮಿ ಆಗಿಬಿಟ್ರೆ ದಕ್ಷಿಣ ಭಾರತ ಯಾರಿಗಾದರೂ ವೋಟು ಹಾಕಿಕೊಳ್ಲಿ ಬಿಡ್ರೀ, ಅವರು ಲೆಕ್ಕಕ್ಕೆ ಇಲ್ಲ ಅಂತ ನಿರ್ಲಕ್ಷಿಸುವುದು ಖಚಿತ. ಉತ್ತರದ ಒಂದೇ ರಾಜ್ಯದ 143 ಸೀಟುಗಳಲ್ಲಿ 123 ಸೀಟು ಬಂದರೆ ಸಾಕು, ತೆರಿಗೆ ಆದಾಯಕ್ಕೆ ಉದ್ಯೋಗ ಸೃಷ್ಟಿಗೆ ಅವರನ್ನು ಇಟ್ಟುಕೊಳ್ಳೋಣ ಎಂಬ ಪರಿಸ್ಥಿತಿಯ ತೂಗುಗತ್ತಿ ಕರ್ನಾಟಕದ ಮೇಲೆ ತೂಗಿದೆ ಕರ್ನಾಟಕದ ಪ್ರತಿಭಾವಂತ ಯುವಮಂತ್ರಿಗಳಲ್ಲಿ ಒಬ್ಬರಾದ ಕೃಷ್ಣ ಬೈರೇಗೌಡ ಹೇಳುತ್ತಲೇ ಬಂದಿದ್ದಾರೆ.

ಇದನ್ನೂ ಓದಿರಿ: ಟ್ರಂಪ್ ಒತ್ತಡಕ್ಕೆ ಬಗ್ಗಿ ‘ಸ್ಟಾರ್‌ಲಿಂಕ್’ ಪರವಾನಗಿ ನೀಡಿದರೆ ಮೋದಿ?
ಭಾರತ ಎಂಬುದು ರಾಜ್ಯಗಳ ಒಕ್ಕೂಟ. ರಾಜ್ಯಗಳ ನಡುವೆ ಹೇಗೆ ತೆರಿಗೆ ಹಣವನ್ನು ಹಂಚಿಕೊಳ್ಳಬೇಕು ಎಂದು ನಿರ್ಧರಿಸುವುದು ಹಣಕಾಸು ಆಯೋಗ. 2014ರಲ್ಲಿ ಒಕ್ಕೂಟ ಸರ್ಕಾರ 1.67 ಲಕ್ಷ ಕೋಟಿಯಷ್ಟು ಅಧಿಭಾರ (ಸೆಸ್) ಸಂಗ್ರಹಿಸುತ್ತಿತ್ತು. ಅಧಿಭಾರವನ್ನು ಒಕ್ಕೂಟ ಸರ್ಕಾರ ಯಾವುದೇ ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. 2012-14ರ ತನಕ ನಾವು ಯಾಕೆ ದನಿ ಎತ್ತಲಿಲ್ಲ ಅಂದ್ರೆ, ಅಲ್ಲಿಯ ತನಕ ಬಂದ ಒಕ್ಕೂಟ ಸರ್ಕಾರಗಳು ರಾಜ್ಯಗಳ ಆರ್ಥಿಕ ಸಂಪನ್ಮೂಲಗಳಿಗೆ ಕನ್ನ ಹಾಕುತ್ತಿದ್ದವು. ಆದರೆ 2014ರಿಂದ ಹೊಡೆಯಲಾಗುತ್ತಿರುವ ದೊಡ್ಡ ಕನ್ನ ಹೊಡೆಯುತ್ತಿರಲಿಲ್ಲ. ಮತ್ತು ಜಿ.ಎಸ್.ಟಿ. ಜಾರಿಗೆ ಮುನ್ನ ರಾಜ್ಯ ಸರ್ಕಾರಗಳು ತಾವೇ ತೆರಿಗೆ ಹಾಕಿ ಆರ್ಥಿಕ ಸಂಪನ್ಮೂಲಗಳನ್ನು ಸಂಗ್ರಹಿಸುವ ಅಧಿಕಾರ ಹೊಂದಿದ್ದವು. ಹೀಗಾಗಿ ಒಕ್ಕೂಟ ಸರ್ಕಾರಗಳ ಕನ್ನ ಕುರಿತು ರಾಜ್ಯ ಸರ್ಕಾರಗಳು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಿರ್ವಹಿಸಬಹುದು ಎಂಬ ಆತ್ಮವಿಶ್ವಾಸ ಅವುಗಳಿಗೆ ಇರ್ತಾ ಇತ್ತು. ಹತ್ತನೆಯ ಹಣಕಾಸು ಆಯೋಗದ ಪ್ರಕಾರ ಒಕ್ಕೂಟ ಸರ್ಕಾರ ಎತ್ತಿದ 100 ರೂಪಾಯಿ ತೆರಿಗೆಯಲ್ಲಿ 37 ರುಪಾಯಿಯನ್ನ ಎಲ್ಲ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಿತ್ತು. ಆದರೆ ಆಗ ಹಂಚಿಕೊಂಡದ್ದು 27 ರುಪಾಯಿ ಮಾತ್ರ.
ಮನಮೋಹನ ಸಿಂಗ್ ಕಾಲದ 14ನೆಯ ಹಣಕಾಸು ಆಯೋಗ ಶೇ. 32ರಷ್ಟಿದ್ದ ಈ ಹಂಚಿಕೆಯನ್ನು ಶೇ. 42ಕ್ಕೆ ತಂದಿತು. ಅದೊಂದು ಕ್ರಾಂತಿಕಾರಕ ಹೆಜ್ಜೆಯಾಗಿತ್ತು. 2014ರ ನಂತರ ಬಂದ 15ನೆಯ ಹಣಕಾಸು ಆಯೋಗ ಈ ಕ್ರಾಂತಿಕಾರಕ ಕ್ರಮವನ್ನು ಮುಂದುವರೆಸುತ್ತದೆಂಬ ನಿರೀಕ್ಷೆ ಇತ್ತು. ಹೀಗಾಗಿ ಈ ಚರ್ಚೆ ದೊಡ್ಡದಾಯಿತು. 15ನೆಯ ಆಯೋಗ ಒಕ್ಕೂಟ ವ್ಯವಸ್ಥೆಯ ಮೇಲೆ ಭಾರೀ ದಾಳಿ ನಡೆಯಿತು. 2014ರ ಹಿಂದಿನ ಸರ್ಕಾರಗಳು ನಿಧಾನಕ್ಕೆ ಕುಟ್ಟುತ್ತಿದ್ದವು. ಮೋದಿ ಸರ್ಕಾರ ಬುಲ್ಡೋಜರ್ ತಂದಿತು. ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ಸಂಗ್ರಹಿಸಲಾಗುತ್ತಿದ್ದ ಸೆಸ್ 1.67 ಲಕ್ಷ ಕೋಟಿ ರುಪಾಯಿಗಳು. ಈಗ ಸಂಗ್ರಹಿಸಲಾಗುತ್ತಿರುವ ಸೆಸ್ 5.98 ಲಕ್ಷ ಕೋಟಿ ರೂಪಾಯಿ. ಈ ಮೊತ್ತವನ್ನು ಯಾವುದೇ ರಾಜ್ಯಗಳ ಜೊತೆ ಹಂಚಿಕೊಳ್ಳದೆ ಒಕ್ಕೂಟ ಸರ್ಕಾರ ತಾನೇ ಇಟ್ಟುಕೊಳ್ಳುತ್ತಿದೆ. ಮನಮೋಹನ್ ಸಿಂಗ್ ಕಾಲಕ್ಕೆ ಶೇ.8ರಷ್ಟಿದ್ದ ಸೆಸ್ ಈಗ ಶೇ.28ಕ್ಕೆ ಏರಿದೆ. ಅಂದರೆ ಒಕ್ಕೂಟ ಸರ್ಕಾರಕ್ಕೆ 100 ರುಪಾಯಿ ತೆರಿಗೆ ಬಂದರೆ ಅದರಲ್ಲಿ 28 ರೂಪಾಯಿಯ ಸೆಸ್ಅನ್ನು ಯಾರ ಜೊತೆಯೂ ಹಂಚಿಕೊಳ್ಳದೆ ತಾನೇ ಇಟ್ಟುಕೊಳ್ಳುತ್ತಿದೆ ಅಂತಾರೆ ನಾಗೇಗೌಡ ಕೀಲಾರ ಶಿವಲಿಂಗಯ್ಯ.
ಒಕ್ಕೂಟ ಸರ್ಕಾರದಿಂದ ಕರ್ನಾಟಕಕ್ಕೆ ಒಟ್ಟು ಎಷ್ಟು ತೆರಿಗೆ ಅನುದಾನ ಬರಬೇಕಿತ್ತು? ಕರ್ನಾಟಕದಿಂದ ಕೇಂದ್ರಕ್ಕೆ ಹೋಗುವ ಒಟ್ಟು ತೆರಿಗೆಯ ಹಂಚಿಕೊಳ್ಳಬೇಕಿರುವ ಮೊತ್ತದಲ್ಲಿ ಶೇ. 41ರಷ್ಟನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕು ಎಂದು 15ನೆಯ ಹಣಕಾಸು ಆಯೋಗ ನಿಗದಿ ಮಾಡಿದೆ. ಈ ಶೇ. 41ರಲ್ಲಿ ಯಾವ್ಯಾವ ರಾಜ್ಯಕ್ಕೆ ಎಷ್ಟೆಷ್ಟು ಹಂಚಿಕೆ ಮಾಡಬೇಕು ಎಂಬುದನ್ನೂ 15ನೆಯ ಹಣಕಾಸು ಆಯೋಗ ಗೊತ್ತುಪಡಿಸಿದೆ. ಉತ್ತರ ಪ್ರದೇಶಕ್ಕೆ ಶೇ. 17, ಬಿಹಾರಕ್ಕೆ ಶೇ. 10, ಮಧ್ಯಪ್ರದೇಶಕ್ಕೆ ಶೇ. 7.85, ಮಹಾರಾಷ್ಟ್ರಕ್ಕೆ ಶೇ. 6.6. ಆದರೆ ಕರ್ನಾಟಕ್ಕೆ ನಿಗದಿ ಮಾಡಿರುವ ತೆರಿಗೆ ಪಾಲು ಶೇ. 3.64 ಮಾತ್ರ. ಹೀಗೆ ಇತ್ತೀಚಿನ ಕಂತು ಹಂಚಿಕೆಯಲ್ಲಿ ಉತ್ತರಪ್ರದೇಶಕ್ಕೆ 31,962 ಕೋಟಿ, ಬಿಹಾರಕ್ಕೆ 17,921 ಕೋಟಿ, ಮಹಾರಾಷ್ಟ್ರಕ್ಕೆ 11,255 ಕೋಟಿ ರೂಪಾಯಿ ಬಂತು. ಕರ್ನಾಟಕಕ್ಕೆ ಬಂದದ್ದು ಕೇವಲ 6,498 ಕೋಟಿ ರೂಪಾಯಿ! ಕಣ್ಣಿಗೆ ರಾಚುವ ಅನ್ಯಾಯವಿದು.
ಈ ಹಂಚಿಕೆಗೆ ಜನಸಂಖ್ಯೆಯನ್ನು ಮಾನದಂಡವಾಗಿ ತೆಗೆದುಕೊಳ್ಳಲಾಗಿತ್ತು ನಿಜ. ಆದರೆ 14ನೆಯ ಹಣಕಾಸು ಆಯೋಗ 1971ರಲ್ಲಿದ್ದ ಜನಸಂಖ್ಯೆಗೆ ಶೇ. 17 ವೆಯ್ಟೇಜ್ (ಕೃಪಾಂಕ) ಮತ್ತು 2011ರ ಜನಸಂಖ್ಯೆಗೆ ಶೇ. 10ರಷ್ಟು ವೆಯ್ಟೇಜನ್ನೂ ನೀಡಿತ್ತು. ಹೀಗೆ ಕೊಟ್ಟಿದ್ದರಿಂದ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದ ದಕ್ಷಿಣದ ರಾಜ್ಯಗಳಿಗೆ ಒಂದು ಮಟ್ಟದ ನ್ಯಾಯ ಸಿಕ್ಕಿತ್ತು. ಈ ಆಧಾರದಲ್ಲಿ ಕರ್ನಾಟಕಕ್ಕೆ ಶೇ. 4.71ರಷ್ಟು ತೆರಿಗೆ ಪಾಲನ್ನು 14ನೆಯ ಹಣಕಾಸು ಆಯೋಗ ಹಂಚಿಕೆ ಮಾಡಿತ್ತು. ಆದರೆ 15ನೆಯ ಹಣಕಾಸು ಆಯೋಗ 1971ರ ಜನಸಂಖ್ಯೆಯನ್ನು ಪರಿಗಣಿಸದೆ, ಕೇವಲ 2011ರ ಜನಸಂಖ್ಯೆಯನ್ನು ಮಾತ್ರವೇ ಲೆಕ್ಕಕ್ಕೆ ತೆಗೆದುಕೊಂಡು ಅದಕ್ಕೆ ಶೇ.15ರ ವೇಯ್ಟೇಜ್ ಕೊಟ್ಟಿತು. 1971ರ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳದೆ ಕೈ ಬಿಟ್ಟ ಕುರಿತು ದಕ್ಷಿಣದ ಎಲ್ಲ ರಾಜ್ಯಗಳೂ ಪ್ರತಿಭಟನೆಯನ್ನು ದಾಖಲಿಸಿದವು. ಯಾಕೆಂದರೆ 1971ರಿಂದ 2011ರ ನಡುವಣ 40 ವರ್ಷಗಳಲ್ಲಿ ದಕ್ಷಿಣದ ರಾಜ್ಯಗಳು ತಮ್ಮ ಜನಸಂಖ್ಯೆಯನ್ನು ನಿಯಂತ್ರಿಸಿವೆ. ಜನಸಂಖ್ಯಾ ಸ್ಫೋಟವನ್ನು ತಡೆಯಲು ತಮ್ಮ ಪಾಲು ನೀಡಿ ದೇಶದ ಅಭಿವೃದ್ಧಿಗೆ ಸಹಕರಿಸಿವೆ. ಹೀಗಾಗಿ 2011ರ ಹೊತ್ತಿಗೆ ದಕ್ಷಿಣದ ರಾಜ್ಯಗಳ ಜನಸಂಖ್ಯೆ ತುಂಬಾ ಕಡಿಮೆ ಇತ್ತು. ಉತ್ತರದ ರಾಜ್ಯಗಳಲ್ಲಿ ಜನಸಂಖ್ಯಾ ಹಿಗ್ಗಾಮುಗ್ಗಾ ಹೆಚ್ಚಿತ್ತು. ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ದೂರನ್ನು 15ನೆಯ ಹಣಕಾಸು ಆಯೋಗ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಕರ್ನಾಟಕಕ್ಕೆ 14ನೆಯ ಹಣಕಾಸು ಆಯೋಗ ಶೇ. 4.71ರಷ್ಟನ್ನು ನಿಗದಿ ಮಾಡಿದ್ದರೆ, 2015ರ ಆಯೋಗ ಅದನ್ನು ಶೇ. 3.64ಕ್ಕೆ ಇಳಿಸಿತು. ರಾಜ್ಯ ಬಿಜೆಪಿ ಈ ಕುರಿತು ಅರ್ಧಸತ್ಯವನ್ನಷ್ಟೇ ಹೇಳಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಹಣಕಾಸು ಆಯೋಗಗಳು ಕೆಲಸ ಮಾಡುವುದು ಕೇಂದ್ರ ಸರ್ಕಾರದ ಸಚಿವ ಸಂಪುಟ ಹಾಕಿಕೊಟ್ಟ ಮಾನದಂಡಗಳ ಮೇಲೆ. ಈ ಆಯೋಗಗಳ ವರದಿಗಳು ಸಮಾಧಾನಕರ ಆಗಿಲ್ಲ ಎಂದಾದರೆ ಪುನರ್ ಪರಿಶೀಲಿಸಿ ಎಂದು ಹೇಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ. ಈ ಕಡಿಮೆ ಹಂಚಿಕೆಯ ಅನ್ಯಾಯಕ್ಕೆ ಮೋದಿ ಸರ್ಕಾರವೇ ಹೊಣೆ.

14ನೆಯ ಹಣಕಾಸು ಆಯೋಗ ನಿಗದಿ ಮಾಡಿದ್ದ ಶೇ. 4.71 ರಷ್ಟನ್ನು ಮೋದಿ ಸರ್ಕಾರ ಶೇ. 3.64ಕ್ಕೆ ಇಳಿಸಿದ್ದರ ಫಲವಾಗಿ ಕರ್ನಾಟಕಕ್ಕೆ ಐದು ವರ್ಷಗಳಲ್ಲಿ ಆಗಿರುವ ನಷ್ಟ 62 ಸಾವಿರ ಕೋಟಿ (62,097) ರುಪಾಯಿಗಳು. ತಾನು ಕರ್ನಾಟಕಕ್ಕೆ ಅನ್ಯಾಯ ಬಗೆದಿದ್ದೇನೆಂದು ಅರಿವಾದ ನಂತರ 15ನೆಯ ಹಣಕಾಸು ಆಯೋಗ 2020-21ರಲ್ಲಿ 5,491 ಕೋಟಿ ರುಪಾಯಿ ಕೊಡುವಂತೆ ಶಿಫಾರಸು ಮಾಡಿತು. ಇಲ್ಲಿಯ ತನಕ ಈ ಹಣವನ್ನು ಮೋದಿ ಸರ್ಕಾರ ಕೊಟ್ಟಿಲ್ಲ. ಒಟ್ಟು 32 ಸಾವಿರ ಕೋಟಿ ರುಪಾಯಿ ಕೇಂದ್ರದಿಂದ ಬರಬೇಕಿದೆ ಮೂರು ನಾಲ್ಕು ಬಾರಿ ನೆನಪಿಸಿದರೂ ಇನ್ನೂ ಬಂದಿಲ್ಲ ಎಂಬ ಅಂಶವನ್ನು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ದೂರಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನೆನಪಿಸಿದ್ದರು. ಈ ವಿಶೇಷ ಅನುದಾನವನ್ನು ರದ್ದು ಮಾಡುವಂತೆ 15ನೆಯ ಹಣಕಾಸು ಆಯೋಗಕ್ಕೆ ಬರೆದರು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಈ ಅನ್ಯಾಯ ಮತ್ತು ವಿಶೇಷ ಅನುದಾನ ಕುರಿತು ಪುನಃ ಕೇಂದ್ರದ ಬೆನ್ನಟ್ಟಿದರು. ಆಗ ಈ ವಿಶೇಷ ಅನುದಾನದ ಶಿಫಾರಸು ಇದ್ದದ್ದು ಮಧ್ಯಂತರ ವರದಿಯಲ್ಲೇ ವಿನಾ ಅಂತಿಮ ವರದಿಯಲ್ಲಿ ಅಲ್ಲ, ನಾವು ಅನುಸರಿಸಬೇಕಾದದ್ದು ಅಂತಿಮ ವರದಿಯನ್ನೇ ವಿನಾ ಮಧ್ಯಂತರ ವರದಿಯನ್ನು ಅಲ್ಲ ಎಂದು ನಿರ್ಮಲಾ ಸೀತಾರಾಮನ್ ಕ್ಯಾತೆ ತೆಗೆದರು. 2021ರ ಆರ್ಥಿಕ ವರ್ಷಕ್ಕೆ ಮಾತ್ರ ಮತ್ತು 2021-25-26 ತನಕ ಎಂದು ಎರಡು ವರದಿ ನೀಡಿತ್ತು. ಹೀಗಾಗಿ ಮಧ್ಯಂತರ ವರದಿ ಎಂಬುದೇ ಇರಲಿಲ್ಲ. ಎರಡೂ ಅಂತಿಮ ವರದಿಗಳೇ. ನಿರ್ಮಲಾ ಅಂತಿಮ ವರದಿ ಅಂತ ಏನು ಕರೆಯುತ್ತಿದ್ದಾರೋ ಅದರಲ್ಲಿ ಬೆಂಗಳೂರಿನ ಜಲಮೂಲಗಳ ಸಂರಕ್ಷಣೆ ಮತ್ತು ಪೆರಿಫರಲ್ ಮಾರ್ಗ ನಿರ್ಮಾಣಕ್ಕೆ ಆರು ಸಾವಿರ ಕೋಟಿ ರುಪಾಯಿಗಳನ್ನು ಕೊಡಬೇಕೆಂಬ ಶಿಫಾರಿಸಿತ್ತು. ಈ ಆರು ಸಾವಿರ ಕೋಟಿಯನ್ನೂ ಮೋದಿ ಸರ್ಕಾರ ಕೊಟ್ಟಿಲ್ಲ. ನಿರ್ಮಲಾ ಸೀತಾರಾಮನ್ ಹಾರಿಕೆ ಉತ್ತರ ಕೊಟ್ಟರು. ಎರಡೂ ವರದಿಗಳ ಶಿಫಾರಸಿನ ಪ್ರಕಾರ ಕರ್ನಾಟಕಕ್ಕೆ ವಂಚಿಸಲಾಗಿರುವ ಮೊತ್ತ 11,495 ಕೋಟಿ. ಶೇ. 4.71ರಷ್ಟು ಹಂಚಿಕೆಯನ್ನು ಶೇ. 3.64ಕ್ಕೆ ಇಳಿಸಿದ ಫಲವಾಗಿ ಕರ್ನಾಟಕಕ್ಕೆ ಆಗಿರುವ ನಷ್ಟ 62,097 ಕೋಟಿ ರುಪಾಯಿ.
2017ಕ್ಕೆ ಜಿ.ಎಸ್.ಟಿ. ಜಾರಿ ಮಾಡಿದಾಗ ಐದು ವರ್ಷಗಳ (2017ರಿಂದ 2022) ಜಿ.ಎಸ್.ಟಿ. ಸಂಗ್ರಹದ ಕೊರತೆಯನ್ನು ಕೇಂದ್ರ ಸರ್ಕಾರ ತಾನು ತುಂಬಿಕೊಡುವ ಭರವಸೆ ನೀಡಿತ್ತು. ಈ ಪ್ರಕಾರ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 4,92,296 ಕೋಟಿ ಸಂಗ್ರಹ ಆಗಬೇಕಿತ್ತು. ಆದರೆ ವಾಸ್ತವವಾಗಿ ಆದದ್ದು 3,26,764 ಕೋಟಿ ರುಪಾಯಿ. ಕೊರತೆ ಬಿದ್ದದ್ದು 1,65,532 ಕೋಟಿ ರೂಪಾಯಿ. ಈ ಮೊತ್ತವನ್ನು ಕೇಂದ್ರ ಸರ್ಕಾರ ಜಿ.ಎಸ್.ಟಿ. ಪರಿಹಾರವಾಗಿ ಕಟ್ಟಿ ಕೊಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ಕಟ್ಟಿಕೊಟ್ಟಿರುವ ಮೊತ್ತ 1.06,258 ಕೋಟಿ ರುಪಾಯಿ. ಅರ್ಥಾತ್ ಇನ್ನೂ 59,274 ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರ ಕೊಟ್ಟಿಲ್ಲ. ಇದೇ ರೀತಿ ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ 30 ಲಕ್ಷ ಕೋಟಿಗಳಿಗಿಂತ ಹೆಚ್ಚು ಸೆಸ್ ಮತ್ತು ಸರ್ಛಾರ್ಜ್ ಅನ್ನು ಸಂಗ್ರಹಿಸಲಾಗಿದೆ. ಈ ಮೊತ್ತವನ್ನು ಮೋದಿ ಸರ್ಕಾರ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾಗಿಲ್ಲ. 15ನೆಯ ಹಣಕಾಸು ಆಯೋಗ ಶೇ.41ರಷ್ಟು ತೆರಿಗೆ ಆದಾಯವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುವಂತೆ ಶಿಫಾರಸು ಮಾಡಿದ್ದರೂ ಮೋದಿ ಸರ್ಕಾರ ವಾಸ್ತವವಾಗಿ ಹಂಚಿಕೊಂಡದ್ದು ಶೇ. 35ರಿಂದ 36 ಮಾತ್ರ. ಒಕ್ಕೂಟ ವ್ಯವಸ್ಥೆಗೇ ದೊಡ್ಡ ಏಟು ಇದು. ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಅನ್ಯಾಯ. ಶೇ. 41ರಷ್ಟು ಹಂಚಿಕೊಂಡಿದ್ದರೆ ಕರ್ನಾಟಕಕ್ಕೆ 55 ಸಾವಿರ ಕೋಟಿ ರುಪಾಯಿಗಳ ನಷ್ಟವಾಗಿದೆ. ಈ ಎಲ್ಲ ನಷ್ಟಗಳನ್ನೂ ಸೇರಿಸಿದರೆ ಕರ್ನಾಟಕಕ್ಕೆ ಆಗಿರುವ ನಷ್ಟ 1,87,866 ಕೋಟಿ ರುಪಾಯಿಗಳು ಎಂದು ಹಣಕಾಸು ಪರಿಣಿತ ಪ್ರೊ. ಬಿ.ಸಿ. ಬಸವರಾಜು.
ಇದನ್ನೂ ಓದಿರಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದೇಕೆ? ಮುಂದೇನಾಗಬಹುದು?
ಮನಮೋಹನಸಿಂಗ್ ತಮ್ಮ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಕೊಟ್ಟಿರುವ ಮೊತ್ತ 81,718 ಕೋಟಿ ರುಪಾಯಿ. 2014ರಿಂದ 2024ರ ತನಕ ಮೋದಿ ಸರ್ಕಾರ ನೀಡಿದ್ದು 2.85 ಲಕ್ಷ ಕೋಟಿ ಎಂಬುದು ಬಿಜೆಪಿ ವಾದ. ಮನಮೋಹನಸಿಂಗ್ ಅವರ ಕಾಲದ 2004-05ರ ಬಜೆಟ್ ಗಾತ್ರ ಕೇವಲ ನಾಲ್ಕೂವರೆ ಲಕ್ಷ ಕೋಟಿ. 2023-24ರಲ್ಲಿ ಬಜೆಟ್ ಗಾತ್ರ 45 ಲಕ್ಷ ಕೋಟಿ. ಆಗ ಕೇವಲ 81 ಸಾವಿರ ಕೋಟಿ ಕೊಟ್ಟರೆ ಬಿಜೆಪಿ 2.85 ಲಕ್ಷ ಕೋಟಿ ಕೊಡಲಾಗುತ್ತಿದೆ ಅಂತ ಬಿಜೆಪಿ ಅರ್ಧ ಸತ್ಯ ಹೇಳುತ್ತಿದೆ. 2016ಕ್ಕೆ ಮೊದಲು ಜಿ.ಎಸ್.ಟಿ. ಇರಲಿಲ್ಲ. ಮೌಲ್ಯವರ್ಧಿತ ತೆರಿಗೆ ಇತ್ತು. ಸಂಪನ್ಮೂಲ ರೂಢಿಸಿಕೊಳ್ಳಲು ತಾವೇ ತೆರಿಗೆ ಹಾಕುವ ಅಧಿಕಾರ ರಾಜ್ಯಗಳಿಗೆ ಇತ್ತು. ಕೇಂದ್ರ ಅನುದಾನ ಸಾಲದೆ ಹೋದರೆ ಪ್ರತ್ಯೇಕ ತೆರಿಗೆ ಹಾಕಿಕೊಳ್ಳಬಹುದಿತ್ತು. 2016ರ ನಂತರ ಮದ್ಯ ಮತ್ತು ಸ್ಟ್ಯಾಂಪ್ ಶುಲ್ಕದಂತಹ ಕೆಲವು ಬಾಬತ್ತುಗಳನ್ನು ಬಿಟ್ಟರೆ ತೆರಿಗೆ ಹಾಕುವ ಅಧಿಕಾರ ರಾಜ್ಯಗಳಿಗೆ ಇಲ್ಲ.
2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 24 ಲಕ್ಷ ಕೋಟಿ ರುಪಾಯಿ. ಆ ವರ್ಷ ಕರ್ನಾಟಕದ ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ನೀಡಲಾದ ಮೊತ್ತ 51,977 ಕೋಟಿ ರುಪಾಯಿ. 2023-24ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 45 ಲಕ್ಷ ಕೋಟಿ ರುಪಾಯಿಗಳು. ಆದರೆ ಆ ವರ್ಷ ಕರ್ನಾಟಕಕ್ಕೆ ಕೊಟ್ಟ ಒಟ್ಟು ಹಣ 50,257 ಕೋಟಿ ರುಪಾಯಿ. ಕೇಂದ್ರದ ಬಜೆಟ್ ಗಾತ್ರ ದುಪ್ಪಟ್ಟಾದರೂ ಕರ್ನಾಟಕಕ್ಕೆ ನೀಡುವ ಹಣ ತಗ್ಗಿತೇ ವಿನಾ ಹೆಚ್ಚಲಿಲ್ಲ.
ಇಡೀ ದೇಶದಲ್ಲಿ ಎರಡನೆಯ ಅತಿ ಹೆಚ್ಚು ತೆರಿಗೆ ಹಣವನ್ನು ಸಂಗ್ರಹಿಸಿಕೊಡುವ ರಾಜ್ಯ ಕರ್ನಾಟಕ. ಆದರೆ ನಮಗೆ ವಾಪಸು ಸಿಗುತ್ತಿರುವುದು 50 ಸಾವಿರದಿಂದ 55 ಸಾವಿರ ಕೋಟಿ ಮಾತ್ರ. ನಮ್ಮಿಂದ 100 ರುಪಾಯಿ ತೆರಿಗೆ ಕಟ್ಟಿಸಿಕೊಂಡು ನಮಗೆ ವಾಪಸು ಕೊಡುತ್ತಿರುವುದು 12ರಿಂದ 15 ರುಪಾಯಿ ಮಾತ್ರ.
2018-2022ರ ಅವಧಿಯಲ್ಲಿ ಗುಜರಾತಿನಿಂದ ಕೇಂದ್ರಕ್ಕೆ ಬಂದಿರುವ ತೆರಿಗೆ 7.39 ಲಕ್ಷ ಕೋಟಿ ರುಪಾಯಿಗಳು. ಇದೇ ಅವಧಿಯಲ್ಲಿ ಕರ್ನಾಟಕದಿಂದ ಕೇಂದ್ರಕ್ಕೆ ಸಂದಿರುವ ತೆರಿಗೆ ಮೊತ್ತ 14.04 ಲಕ್ಷ ಕೋಟಿ ರುಪಾಯಿಗಳು. ಈ ಅವಧಿಯಲ್ಲಿ ಗುಜರಾತಿಗೆ ಕೇಂದ್ರ ಸರ್ಕಾರ ನೀಡಿದ್ದು 1.51 ಲಕ್ಷ ಕೋಟಿ. ದುಪ್ಪಟ್ಟು ತೆರಿಗೆ ಕೊಟ್ಟಿದ್ದ ಕರ್ನಾಟಕಕ್ಕೆ ದುಪ್ಪಟ್ಟು ಅನುದಾನ ಕೊಡಬೇಕಿತ್ತು. ಆದರೆ ಗುಜರಾತಿಗೆ ಕೊಟ್ಟಷ್ಟೇ ಮೊತ್ತವನ್ನು ನಮಗೂ ನೀಡಲಾಗಿದೆ. ಕರ್ನಾಟಕಕ್ಕೆ ಕೊಟ್ಟದ್ದು 1.56 ಲಕ್ಷ ಕೋಟಿ ಮಾತ್ರ. ಇದು ಅನ್ಯಾಯ ಅಲ್ಲವೇ? ಈ ಭೇದಭಾವದ ಕಾರಣವೇ ಕರ್ನಾಟಕ ಸಾಲದ ಸುಳಿಗೆ ಸಿಕ್ಕಿಕೊಂಡಿದೆ. ಬಿಜೆಪಿ ಅಧಿಕಾರವಧಿಯಲ್ಲೇ ಕರ್ನಾಟಕ 2.28 ಲಕ್ಷ ಕೋಟಿ ಸಾಲ ಮಾಡಿದೆ. ಆಗ ಗ್ಯಾರಂಟಿ ಯೋಜನೆಗಳೂ ಇರಲಿಲ್ಲ.
ಕಳೆದ ವರ್ಷ ಕರ್ನಾಟಕ ಭೀಕರ ಬರಗಾಲ ಎದುರಿಸಿದರೂ ಕೇಂದ್ರ ಸರ್ಕಾರ ಪರಿಹಾರ ಕೊಡಲಿಲ್ಲ. ಸುಪ್ರೀಮ್ ಕೋರ್ಟ್ ಕದ ಬಡಿದಾಗ ಒಂದಷ್ಟು ಪರಿಹಾರ ನೀಡಲಾಯಿತು. 2022-23ರ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಿಸಿದ್ದರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಆದರೆ ಇಲ್ಲಿಯವರೆಗೆ ಕೊಟ್ಟಿಲ್ಲ.
ಬಡರಾಜ್ಯಗಳಿಗೆ ಹೆಚ್ಚಿನ ಪಾಲು ಕೊಡುವ ಕುರಿತು ಕರ್ನಾಟಕದ ತಕರಾರು ಇಲ್ಲ, ನಮಗೆ ನ್ಯಾಯವಾಗಿ ಬರಬೇಕಾದದ್ದನ್ನು ಕೊಡಿ ಎಂದರು ಮುಖ್ಯಮಂತ್ರಿ ಸಿದ್ದರಾಮಯ್ಯ. ಕರ್ನಾಟಕದವರು ತಮ್ಮಲ್ಲಿ ಸಂಗ್ರಹ ಆಗುವ ಎಲ್ಲ ತೆರಿಗೆಯನ್ನು ತಮಗೆ ಮಾತ್ರವೇ ಕೊಡಿ ಅಂತ ಕೇಳುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಮೋದಿಯವರು ತಿರುಚಿ ಕರ್ನಾಟಕದ ಗಾಯಗಳ ಮೇಲೆ ಉಪ್ಪೆರಚಿದರು. ಈ ಎಲ್ಲ ಸವಿವರ ಸಮಗ್ರ ವಿವರಣೆಯನ್ನು ಈದಿನ.ಕಾಂ ಯೂಟ್ಯೂಬ್ ಚಾನೆಲ್‌ನಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಟ್ಟಿದ್ದಾರೆ ಡಾ. ಬಸವರಾಜು.
ಈ ಸರ್ಕಾರವನ್ನು ಮೊದಾನಿ ಸರ್ಕಾರ, ಅಂಬಾನಿ – ಅದಾನಿ ಸರ್ಕಾರ ಎನ್ನುವುದುಂಟು. ಕರ್ನಾಟಕದ ಕರಾವಳಿಯಲ್ಲಿ ಪ್ರಮುಖ ಪತ್ರಿಕೆಗಳೊಂದಿಗೆ ಕೆಲಸ ಮಾಡಿ, ಇದೀಗ ತಮ್ಮದೇ ರೀತಿಯಲ್ಲಿ ನಿರಂತರ ಪತ್ರಿಕೋದ್ಯಮದಲ್ಲಿ ನಿರತರಾಗಿರುವ ರಾಜಾರಾಂ ತಲ್ಲೂರು ಅವರು ಇದಕ್ಕಾಗಿ ಹೊಸದೊಂದು ನುಡಿಗಟ್ಟನ್ನೂ ಸೃಷ್ಟಿಸಿದ್ದಾರೆ. ಆನಿ ಸರ್ಕಾರ! ಒಂದರ್ಥದಲ್ಲಿ ಕರ್ನಾಟಕ ಮತ್ತು ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಉತ್ತರ ಭಾರತದ ಬಡಜನರು ಮಾಡುತ್ತಿರುವುದಲ್ಲ. ಇಡೀ ದೇಶದ ಆರ್ಥಿಕತೆಯ ಏಕಸ್ವಾಮ್ಯ ಕೆಲವರ ಪಾಲಾಗುತ್ತಿದ್ದು, ಅದರ ಪ್ರಧಾನ ಫಲಾನುಭವಿಗಳು ಅಂಬಾನಿ – ಅದಾನಿಗಳಾಗಿದ್ದಾರೆ. ಈ ಅರ್ಥದಲ್ಲಿ ಇಂದು ನಾವು ನೋಡುತ್ತಿರುವುದು ಮನಿಯೊಳಗಿನ ಆನಿ. ಈ ಆನಿ ಮನೆಯನ್ನು ಧ್ವಂಸಗೊಳಿಸುವ ಮುನ್ನ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಈಗಾಗಲೇ ಮಾತಾಡುತ್ತಿರುವ, ಈ ಲೇಖನದಲ್ಲೂ ಕಾಣಿಸಿರುವ ವಿವೇಕದ ದನಿಗಳಿಗೆ ಓಗೊಡುವ ತುರ್ತಿದೆ. ಬಹುಶಃ ಸಮಕಾಲೀನ ಸಂದರ್ಭದ ದೊಡ್ಡ ತಾರತಮ್ಯವನ್ನು ವಿರೋಧಿಸುತ್ತಾ, ಈ ದೇಶದ ಒಕ್ಕೂಟ ವ್ಯವಸ್ಥೆಯ ರಚನೆಯಲ್ಲೇ ಇರುವ ಅನ್ಯಾಯಕ್ಕೂ ದಾರಿ ಕಂಡುಕೊಳ್ಳಲು ಅದರಿಂದ ಸಾಧ್ಯವಾಗಬಹುದು.
(‘ಈದಿನ.ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಡಿ ಉಮಾಪತಿ
ಹಿರಿಯ ಪತ್ರಕರ್ತರು




