ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳನ್ನು (ವರ್ಗ) ಗುರುತಿಸಲು ಇರುವ ಮಾನದಂಡಗಳಿಗೆ ಯಾವುದೇ ಧರ್ಮ- ಸಂಬಂಧಿತ ನಿರ್ಬಂಧ ಇರುವುದಿಲ್ಲ ಮತ್ತು ಯಾವುದೇ ಜಾತಿ ಅಥವಾ ಕೋಮು ಅಥವಾ ಸಮೂಹಗಳು ಆ ಮಾನದಂಡಗಳಿಗೆ ಅನುಗುಣವಾಗಿದ್ದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಧರ್ಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಸೇರಿಸಬಹುದು. ಆ ಪ್ರಕಾರವಾಗಿ ಮುಸ್ಲಿಂ ಸಮೂಹಗಳ ಅಂಥ ವರ್ಗಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿವೆ.
ಭಾರತೀಯ ಸಮಾಜದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಜಾತಿಯೇ ಒಂದು ಪ್ರಮುಖ ಆಧಾರ. ಜಾತಿ ಅಸ್ತಿತ್ವ ಭಾರತದ ವಾಸ್ತವ. ಅದು ಮುಸ್ಲಿಂ ಸಮುದಾಯದೊಳಗೂ ಹಾಸು ಹೊಕ್ಕಾಗಿರುವುದು ಅಷ್ಟೇ ಸತ್ಯ. ಭಾರತದಲ್ಲಿ ಮುಸ್ಲಿಮರಲ್ಲಿ ಜಾತಿಗಳನ್ನು ಮೊದಲು ಗುರುತಿಸಿದ್ದು 14ನೇ ಶತಮಾನದಲ್ಲಿ ‘ಜಿಯೋ ಉದ್ದೀನ್ ಬರನಿ’. ಅವನು ತನ್ನ ಪುಸ್ತಕ ‘ಫತ್ವ – ಈ – ಜಹಾನಮಾಧಾರಿ’ಯಲ್ಲಿ ಉತ್ತಮ, ಮಧ್ಯಮ ಹಾಗೂ ಕನಿಷ್ಠ ಎಂಬ ಮೂರು ದರ್ಜೆಗಳನ್ನು ಮುಸ್ಲಿಮರಲ್ಲಿ ಗುರುತಿಸಿದ್ದಾನೆ. ಬಾಬಾ ಸಾಹೇಬರು ಕೂಡ ಜಾತಿಗಳು ಮುಸ್ಲಿಮರಲ್ಲಿಯೂ ಉಳಿದಿವೆ ಎಂದಿದ್ದಾರೆ. ಮುಂದುವರೆದು ಅವರೇ “ಹಿಂದೂ ಸಮಾಜದಂತೆಯೇ ಸಾಮಾಜಿಕ ಪಿಡುಗುಗಳ ಯಾತನೆಯಿಂದ ಮುಸ್ಲಿಂ ಸಮುದಾಯಗಳೂ ಸಹ ಬಳಲುತ್ತಿವೆ” ಎಂದಿರುವರು.
ವಿವಿಧ ಆಯೋಗಗಳು ಮತ್ತು ವಿವಿಧ ಸರ್ಕಾರಗಳು ಮುಸ್ಲಿಂ ಸಮೂಹಗಳನ್ನು ಯಾವ ರೀತಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಎಂಬುದನ್ನು ಪರಿಶೀಲನೆಗೆ ಒಳಪಡಿಸಿವೆ ಎಂಬುದರತ್ತ ಗಮನಿಸಬೇಕಾದ ಪ್ರಸ್ತುತತೆ ಇದೆ.
ಇದನ್ನೂ ಓದಿರಿ: ಸಿನೆಮಾಗಳು ‘ಮುಸ್ಲಿಂ ಭಯ ಮತ್ತು ದ್ವೇಷ’ ಬಿತ್ತಿದ್ದು ಹೇಗೆ?
ಭಾರತ: ರಾಷ್ಟ್ರೀಯ ಮೊದಲನೆ ಹಿಂದಳಿದ ವರ್ಗಗಳ ಆಯೋಗ, ಕಾಕಾ ಕಾಲೇಲ್ಕರ್ ಅವರ ಅಧ್ಯಕ್ಷತೆಯಲ್ಲಿ 1953ರಲ್ಲಿ ರಚಿತವಾಯಿತು. ಆಯೋಗದ ಮುಂದೆ ಮುಸ್ಲಿಂ ಸಮುದಾಯದ ಒಬ್ಬ ಹಿರಿಯ ಮುಖಂಡರಾದ ಅಬ್ದುಲ್ ಕೈಯುo ಅನ್ಸಾರಿ ಅವರು, “ಎಲ್ಲ ಮುಸಲ್ಮಾನರನ್ನು ಹಿಂದುಳಿದ ವರ್ಗಗಳೆಂದು ಪರಿಗಣಿಸಬೇಕು ಅಲ್ಲದೇ ಅವರಿಗೆ ಶೈಕ್ಷಣಿಕ ಸಾಧನಗಳನ್ನು ಒದಗಿಸುವುದರ ಮೂಲಕ ಉದ್ಯೋಗದಲ್ಲಿ ಸಾಕಷ್ಟು ಪ್ರಾತಿನಿಧ್ಯ ನೀಡಬೇಕೆಂದು ಮಂಡಿಸಿದ ಮನವಿಯನ್ನು ಆಯೋಗ ಒಪ್ಪುವುದಿಲ್ಲ. ನಿರ್ದಿಷ್ಟ ಕಾರಣವನ್ನು ನೀಡಿ ಕರ್ನಾಟಕದಲ್ಲಿ ಲಭೈ, ಮಲ್ತಾನಿ, ಪಿಂಜಾರ ಎಂಬ ಮೂರು ಮುಸ್ಲಿಂ ಉಪ ಪಂಗಡಗಳನ್ನು ಮಾತ್ರ ಪಟ್ಟಿಯಲ್ಲಿ ಸೇರಿಸಿತ್ತು .ಆದರೆ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿಲ್ಲ ಎಂಬುದು ಬೇರೆ ಮಾತು.
1978ರಲ್ಲಿ ರಚಿತವಾದ ಎರಡನೇ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಬಿ.ಪಿ. ಮಂಡಲ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಯಿತು. ಈ ಆಯೋಗವು ಕೂಡ ಎಲ್ಲ ಮುಸ್ಲಿಮರನ್ನು ಹಿಂದುಳಿದವರೆಂದು ಪರಿಗಣಿಸುವುದಿಲ್ಲ. ಹಿಂದೂಯೇತರ ಧರ್ಮಗಳಿಗೆ ಮತಾಂತರ ಹೊಂದಿರುವ ಎಲ್ಲ ಅಸ್ಪೃಶ್ಯರು ಹಾಗೂ ಹೆಸರಿನಿಂದಲೇ ಗುರುತಿಸಲ್ಪಡುವ ಕಸುಬು ಆಧಾರಿತ ಜಾತಿಗಳನ್ನು ಮಾತ್ರ ಪರಿಗಣಿಸುವುದು. ಕರ್ನಾಟಕ ರಾಜ್ಯಕ್ಕೆ ಅನ್ವಯಿಸುವ ಹಾಗೆ ಆಯೋಗ ಗುರುತಿಸಿರುವ ಮುಸ್ಲಿಂ ಒಳಪಂಗಡಗಳೆಂದರೆ- ಅನ್ಸಾರಿ, ಜುಲಾಯಿ, ಭಗ್ಬಾನ್, ತಂಬುಳಿ, ಬೇರಿ, ಚಪ್ಪರ್ ಬಂದ್, ದರ್ಜಿ, ಧೋಬಿ, ಫಕೀರ್, ನದಾಫ್, ಲದಾಫ್, ದುನ್ಯ ಮನ್ಸೂರಿ, ಪಿಂಜಾರ, ಮುಂತಾದವು. ಆದರೆ ರಾಷ್ಟ್ರೀಯ ಆಯೋಗ ಮುಸ್ಲಿಂ ಸಮುದಾಯದ ಮನವಿ ಮೇರೆಗೆ ಬಹಿರಂಗ ವಿಚಾರಣೆ ನಡೆಸಿ ಅವುಗಳನ್ನು ಸರಿಪಡಿಸಿತು. ಅದೇ ಸಂದರ್ಭದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಎಂದು ಪರಿಗಣಿಸದ ಕಟ್ಟಿ ಮೆಮನ್, ನವಾಯತ್, ಬೋಹ್ರ, ಸಹಿದ್, ಶೇಕ್, ಪಠಾಣ್, ಮುಘಲ್, ಮಹಾದೀವಿಯ, ಕೊಂಕಣಿ ಅಥವಾ ಜಮಾಹಿತಿ ಮುಸ್ಲಿಂ ಎಂಬ ಈ ಉಪಪಂಗಡಗಳನ್ನು ಮೀಸಲಾತಿಗೆ ಪರಿಗಣಿಸಲಿಲ್ಲ.

ಕರ್ನಾಟಕ: ಸ್ವಾತಂತ್ರ್ಯ ಪೂರ್ವದಲ್ಲಿಯೂ ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉದ್ಯೋಗ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಲೆಸ್ಲಿ ಸಿ .ಮಿಲ್ಲರ್ ಸಮಿತಿ ರಚಿಸುವರು. ಸಮಿತಿ ಎಲ್ಲ ಮುಸ್ಲಿಮರನ್ನು ಹಿಂದುಳಿದ ವರ್ಗವೆಂದು ಪರಿಗಣಿಸಿ ಮೀಸಲಾತಿ ನೀಡಿದೆ.
ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ, 1960ರ ಸಮಯದಲ್ಲಿ ರಚಿಸಿದ ಡಾ.ನಾಗನಗೌಡ ಸಮಿತಿ ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ಈ ರೀತಿ ಅಭಿಪ್ರಾಯ ಪಟ್ಟಿದೆ: “ಮುಸ್ಲಿಮರು ಮತ್ತು ಕ್ರೈಸ್ತರು ಜಾತಿ ಪದ್ಧತಿಗೆ ಮಾನ್ಯತೆ ನೀಡುವುದಿಲ್ಲ ಎಂಬ ಸಂಗತಿ ನಮಗೆ ತಿಳಿದಿದೆ. ಹಾಗಿದ್ದರೂ ಉಚ್ಚ ಮತ್ತು ನೀಚ ಎಂಬ ಪರಿಕಲ್ಪನೆಗಳು ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳಲ್ಲೂ ಇವೆ. ಹಾಗಾಗಿ ಸಮಿತಿ ಎಲ್ಲ ಮುಸ್ಲಿಮರನ್ನು ಹಿಂದುಳಿದವರೆಂದು ಪರಿಗಣಿಸದೆ ಕೆಲವು ಪಂಗಡಗಳನ್ನು ಹಿಂದುಳಿದವರು ಎಂದು ಪರಿಗಣಿಸಿ ಪಟ್ಟಿಯಲ್ಲಿ ಸೇರಿಸಿದೆ.
1972ರಲ್ಲಿ ರಚಿತವಾದ ಹಾವನೂರ್ ಆಯೋಗ ಇಡೀ ಮುಸ್ಲಿಂ ಸಮುದಾಯಕ್ಕೆ ಅವರ ಹಿಂದುಳಿದಿರುವಿಕೆಗೆ ಬೇರೊಂದು ಮಾರ್ಗ ಕಂಡುಕೊಳ್ಳಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ ಎಮ್. ಆರ್. ಬಾಲಾಜಿ vs ಮೈಸೂರು ಸರ್ಕಾರ, ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಮುಸ್ಲಿಂ ಸಮೂಹಗಳಲ್ಲಿರುವ ಕೆಲವು ಉಪ ಪಂಗಡಗಳನ್ನು, ವಿಮುಕ್ತ ಬುಡಕಟ್ಟುಗಳನ್ನು ಅಥವಾ ಅಲೆಮಾರಿ ಬುಡಕಟ್ಟುಗಳನ್ನು ಹಿಂದುಳಿದ ವರ್ಗಗಳೆಂದು ಪರಿಗಣಿಸಬಹುದು ಎಂದು ಸ್ಪಷ್ಟಪಡಿಸಿತ್ತು.
ಇದನ್ನೂ ಓದಿರಿ: ಐದು ದಶಕಗಳ ಕರ್ನಾಟಕ ರಾಜಕಾರಣ: ಗಳಿಸಿದ್ದನ್ನು ಕಳೆದುಕೊಂಡ ಕಾಲ!
ದೇವರಾಜ ಅರಸು ಸರ್ಕಾರ 1977ರಲ್ಲಿ ಹಾವನೂರ್ ವರದಿ ಆಧಾರಿತ ಮೀಸಲಾತಿಯನ್ನು ಜಾರಿಗೊಳಿಸಿದ ಸಂದರ್ಭದಲ್ಲಿ, ಇಡೀ ಮುಸ್ಲಿಮರನ್ನು ಹಿಂದುಳಿದವರೆಂದು ಪರಿಗಣಿಸಿ, ಹಿಂದೂ ಜಾತಿಗಳೊಡನೆ ಸೇರಿಸಿ ಬಿಸಿಎಂ ಎಂದು ವರ್ಗೀಕರಿಸಿತ್ತು. ಸರ್ಕಾರ ತೆಗೆದುಕೊಂಡ ಈ ನಿರ್ಧಾರ ಸಂಬಂಧ ಕರ್ನಾಟಕದ ಉಚ್ಚ ನ್ಯಾಯಾಲಯ ಈ ಮುಂದಿನಂತೆ ಅಭಿಪ್ರಾಯ ಪಟ್ಟಿದೆ- “ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು ಎಂದ ಮಾತ್ರಕ್ಕೆ ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗೆ ಇಡಲು ಯಾವುದೇ ಆಧಾರವಿಲ್ಲ. ನಮ್ಮ ಅಭಿಪ್ರಾಯದಲ್ಲಿ ಮುಸ್ಲಿಂ ಸಮೂಹಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಿರುವ ಸರ್ಕಾರದ ನಿಲುವು ನಿರ್ದಿಷ್ಟವಾಗಿ ಸಮರ್ಥನೀಯ.

“1980ರಲ್ಲಿ ರಚಿತಗೊಂಡ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಅಧ್ಯಕ್ಷತೆಯ ಏಕವ್ಯಕ್ತಿ ಆಯೋಗವು ಮುಸ್ಲಿಮರ ಬಗ್ಗೆ ವಿಸ್ತೃತವಾದ ಅಧ್ಯಯನ ನಡೆಸಿದೆ. ಆರ್. ಹೆಚ್. ಗೂಡ್ವಾಲ ಅಧ್ಯಕ್ಷತೆಯ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಧ್ಯಂತರ ವರದಿಯಲ್ಲಿ ಮುಸ್ಲಿಮರ ಸ್ಥಿತಿಗತಿಗಳ ಕುರಿತು ಹೇಳಿರುವ ಕೆಲವು ಅಂಶಗಳನ್ನು ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಆಯೋಗ ತನ್ನ ವರದಿಯಲ್ಲಿ ದಾಖಲಿಸಿದೆ. ಮುಸ್ಲಿಮರ ವಾಸಸ್ಥಾನ, ಕಡುಬಡತನ, ಹುಳುಗಳಿಗಿಂತ ಕಡೆಯಾಗಿ ಒಂದೆಡೆ ಬದುಕುವುದು, ಈ ಎಲ್ಲ ಅಂಶಗಳನ್ನು ವರದಿಯಲ್ಲಿ ಸೇರಿಸಿರುವರು. ನ್ಯಾಯಮೂರ್ತಿಯವರೇ ಕೆಲವು ಪ್ರದೇಶಗಳಿಗೆ ಭೇಟಿ ಕೊಟ್ಟು ಕಣ್ಣಾರೆ ಮುಸ್ಲಿಮರ ಸ್ಥಿತಿಗತಿಗಳನ್ನು ಕಂಡುಕೊಂಡಿರುವರು. ಈ ಚಿತ್ರಣದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಅವರು ಇಡೀ ಮುಸ್ಲಿಂ ಸಮೂಹವನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಎಂದು ಪರಿಗಣಿಸಿ ಮೀಸಲಾತಿ ಪಟ್ಟಿಯಲ್ಲಿ ಸೇರಿಸಿರುವರು. ಪ್ರಸ್ತುತ ಪ್ರವರ್ಗ- 2ಬಿಯಲ್ಲಿ ಮುಸ್ಲಿಮರಿಗೆ ಸ್ಥಾನ ಕಲ್ಪಿಸಲಾಗಿದೆ. ಆ ಪ್ರವರ್ಗಕ್ಕೆ ಇಟ್ಟಿರುವ ಮೀಸಲಾತಿ ಕೋಟಾ ಶೇ.4 ಮಾತ್ರ. ಇದು ಅನ್ಯಾಯದ ಪರಮಾವಧಿ. ಮೀಸಲಾತಿ ಕೋಟಾವನ್ನು ಕನಿಷ್ಠ ಶೇ. 6ರಷ್ಟನ್ನಾದರೂ ನೀಡಬೇಕಾಗಿತ್ತು.
ಲಿಂಗಾಯತದ ಉಪ ಜಾತಿಯಾದ ಪಂಚಮಸಾಲಿಯವರ ದೀರ್ಘಕಾಲದ ಬೇಡಿಕೆಯನ್ನು ಅನುಸರಿಸಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಸ್ಲಿಮರನ್ನು ಪ್ರವರ್ಗ- 2ಬಿಯಿಂದಲೇ ಅಂದರೆ ಮೀಸಲಾತಿ ಪಟ್ಟಿಯಿಂದಲೇ ಕೈ ಬಿಡುವರು. ‘ ಧಾರ್ಮಿಕ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳ ಮೀಸಲಾತಿಗೆ ಅರ್ಹರಲ್ಲ, ಆದ್ದರಿಂದ ಹಿಂದುಳಿದ ವರ್ಗಗಳ ಪಟ್ಟಿಯಿಂದ ಅವರನ್ನು ಕೈ ಬಿಡಲಾಗಿದೆ ಎಂದಿರುವರು’. ಅವರ ದೃಷ್ಟಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರೇ ಇರಬಹುದು. ಬೌದ್ಧರು, ಕ್ರೈಸ್ತರು, ಸಿಖ್ಖರು ಮತ್ತು ಜೈನರು ಕೂಡ ಧಾರ್ಮಿಕ ಅಲ್ಪಸಂಖ್ಯಾತರು ಎಂಬುದು ಅವರಿಗೆ ತಿಳಿಯದೇ? ಕೇವಲ ವಾದಕ್ಕಾಗಿ ಅವರ ಮಾತನ್ನು ಒಪ್ಪುವುದಾದರೆ ಮೀಸಲಾತಿ ಪಟ್ಟಿಯ ಪ್ರವರ್ಗ – 3ಬಿ ಯಲ್ಲಿ ಕ್ರೈಸ್ತರು ಮತ್ತು ಜೈನ ದಿಗಂಬರರು ಸ್ಥಾನ ಪಡೆದಿರುವ ಬಗ್ಗೆ ಅವರೇಕೆ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಇದು ಪಕ್ಕ ರಾಜಕೀಯ ತೀರ್ಮಾನವಲ್ಲದೇ ಮತ್ತೇನೂ ಅಲ್ಲ. ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮುಂದೆ ಆದೇಶವನ್ನು ಜಾರಿಗೊಳಿಸುವುದಿಲ್ಲ ಎಂದು ಶಪಥಪತ್ರ ಸಲ್ಲಿಸಿದೆ.
ಪಿ.ಎಸ್.ಕೃಷ್ಣನ್ ವರದಿ: ಮಾಜಿ ಐಎಎಸ್ ಅಧಿಕಾರಿ ದಿವಂಗತ ಪಿ.ಎಸ್.ಕೃಷ್ಣನ್ ಅವರು 2007ರಲ್ಲಿ ತಮ್ಮ ಅಧ್ಯಯನ ಆಧಾರಿತ ಶಿಫಾರಸಿನಲ್ಲಿ 14 ಮುಖ್ಯ ಜಾತಿಗಳು ಹಾಗೂ ಉಪಪಂಗಡಗಳು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಮರ ಪಟ್ಟಿಯಲ್ಲಿ ಕೆಲವೊಂದನ್ನು ಇಲ್ಲಿ ನೀಡಲಾಗಿದೆ. ಅತ್ತರ್ ಸಾಹೇಬಲು, ಅತ್ತರೊಳ್ಳು, ಚಕ್ಕೆಟ ಕರೆ, ಕುಕ್ಕು ಕೊಟ್ಟೆ, ಜಿಂಕಾಸಾಹೇಬಲು, ದೋಭಿ ಮುಸ್ಲಿಂ, ದುರ್ಗಾ ಚಕ್ಲ, ತುರ್ಕ ಸಕಲ, ಫಕೀರ್, ಬುಡುಬುಡಿಕೆ ಫಕೀರ್, ಗಾರುಡಿ ಮುಸ್ಲಿಂ, ಗೋಸಂಗಿ ಮುಸ್ಲಿಂ, ಹಜಾಮ್, ಕಾಟಿಕ್, ಕಸಬ್ ಇತ್ಯಾದಿ. ನ್ಯಾಯಾಲಯದ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ಶೇ. 4ರಷ್ಟು ಮೀಸಲಾತಿ ಕೋಟಾವನ್ನು ಶಿಫಾರಸು ಮಾಡಿರುತ್ತಾರೆ. ಆಂಧ್ರಪ್ರದೇಶದಲ್ಲಿ ಅನುಷ್ಠಾನಗೊಂಡ ಈ ಮೀಸಲಾತಿಯನ್ನು ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯ ತಳ್ಳಿ ಹಾಕುವುದು. ಆದರೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿತು. ಅದು ಇದುವರೆಗೂ ಮುಂದುವರೆದಿದೆ.
ಇತ್ತೀಚಿಗಷ್ಟೇ ಪಶ್ಚಿಮ ಬಂಗಾಳ ಮುಸ್ಲಿಮರ ಉಪಪಂಗಡಗಳಿಗೆ, ಬಹುಶಃ ಹಿಂದೂ ಜಾತಿಗಳೊಡನೆ ಸೇರಿಸಿ ಮೀಸಲಾತಿ ಕೊಟ್ಟಿರುವುದನ್ನು ಸರ್ವೋಚ್ಚ ನ್ಯಾಯಾಲಯ ತಡೆ ಹಿಡಿದಿದೆ. ಅವುಗಳ ವಿವರ ಇನ್ನೂ ತಿಳಿಯಬೇಕಷ್ಟೇ.
ಇದನ್ನೂ ಓದಿರಿ: ‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?
ಮುಸ್ಲಿಮರ ರಾಜಕೀಯ ಮಾನ್ಯತೆ: ಬಲಾಢ್ಯ ಕೋಮುಗಳೆರಡರ ರಾಜಕೀಯ ಪ್ರಾಬಲ್ಯತೆಯಿಂದ, ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ ನಿಂತ ನೀರಾಗಿದೆ. ಆರಕ್ಕೂ ಏರಲಿಲ್ಲ ಮತ್ತೆ ಮೂರಕ್ಕೂ ಇಳಿಯಲಿಲ್ಲ ಎಂಬಂತಾಗಿ ಜನಸಂಖ್ಯೆಗೆ ಅನುಗುಣವಾಗಿ ಸಿಗಬೇಕಾದ ಮಾನ್ಯತೆ ಸಿಗದೇ ಅಲ್ಪ ತೃಪ್ತರಾಗಿ ಕಾಲ ಸವೆಸುವ ಪರಿ ಅವರಿಗೆ ಬಂದೊದಗಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ, ರಾಜ್ಯಗಳು ಪುನರ್ವಿಂಗಡಣೆಯಾಗಿ, ವಿಶಾಲ ಮೈಸೂರು ರಾಜ್ಯ ಉದಯವಾದ ನಂತರ ನಡೆದ ಮೊದಲ ಸಾರ್ವತ್ರಿಕ ವಿಧಾನಸಭಾ ಚುನಾವಣೆ 1957ರಿಂದಲೂ, ಇತರ ಅಲ್ಪಸಂಖ್ಯಾತರು ಸೇರಿಕೊಂಡಂತೆ ಮುಸ್ಲಿಮರ ವಿಧಾನಸಭಾ ಪ್ರಾತಿನಿಧ್ಯ 15 ಸ್ಥಾನಗಳಿಗಿಂತ ಮೇಲೇರಲಿಲ್ಲ. ಸಾಮಾನ್ಯವಾಗಿ ಮುಸ್ಲಿಮರು ಬಹುತೇಕ ಗ್ರಾಮಾಂತರ ಪ್ರದೇಶಗಳಿಂದ ವಲಸೆ ಬಂದು ನಗರವಾಸಿಗಳಾಗಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತಿಗಳಲ್ಲಿ ಅವರ ಸದಸ್ಯ ಸ್ಥಾನಗಳು ನಗಣ್ಯ ಎಂದರೆ ಸರಿ ಹೋದೀತು. ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಮತ್ತು ಬಿಬಿಎಂಪಿ ಕಡೆಗಳಲ್ಲಿ ಅವರ ಪ್ರಾತಿನಿಧ್ಯ ‘ಪರವಾಗಿಲ್ಲ’ ಎನ್ನುವಷ್ಟರ ಮಟ್ಟಿಗೆ ಮಾತ್ರ ಇದೆ. ಅದಕ್ಕಿರುವ ಕಾರಣ ಅವರು ಒಂದೇ ಕಡೆ ನೆಲೆಸಿರುವುದೇ ಆಗಿದೆ. ಅಲ್ಲಲ್ಲಿ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಒಬ್ಬರಿಬ್ಬರೂ ಮೇಯರುಗಳನ್ನು ನಾವು ಕಾಣಬಹುದು.
ವಿಧಾನಸಭಾ ಚುನಾವಣೆ: ಕರ್ನಾಟಕದಲ್ಲಿ ಪ್ರಮುಖವಾಗಿ ಮೂರು ರಾಜಕೀಯ ಪಕ್ಷಗಳಿವೆ. ಅವುಗಳಲ್ಲೊಂದು ಪ್ರಾದೇಶಿಕ ಪಕ್ಷ. ಹೆಸರಿಗೆ ಪ್ರಾದೇಶಿಕ ಪಕ್ಷವಾದರೂ, ಅದು ಎರಡು-ಮೂರು ಜಿಲ್ಲೆಗಳಿಗೆ ಮತ್ತು ಬಹುತೇಕ ಜಾತಿಗೆ ಮಾತ್ರ ಸೀಮಿತವಾಗಿದೆ. ಮುಸ್ಲಿಮರನ್ನೇ ಗುರಿಯಾಗಿರಿಸಿಕೊಂಡು ರಾಜಕೀಯ ತಂತ್ರಗಾರಿಕೆ ಮಾಡುತ್ತಿರುವ ರಾಷ್ಟ್ರೀಯ ಧರ್ಮಧಾರಿತ ಪಕ್ಷವೊಂದು, ಯಾವುದೇ ರಾಜಕೀಯ ಸ್ಥಾನಮಾನಗಳಿಗೆ ಅವರನ್ನು ಪರಿಗಣಿಸುವುದೇ ಇಲ್ಲ. ಹಾಗಾಗಿ, ಮುಸ್ಲಿಮರಿಗೆ ಇರುವುದು ಒಂದೇ ಪಕ್ಷ, ಅದು, ರಾಷ್ಟ್ರೀಯ ಕಾಂಗ್ರೆಸ್ ಮಾತ್ರ. ವಿಧಾನಸಭಾ ಸ್ಥಾನಗಳ ಹಂಚಿಕೆಗೆ ಸೂತ್ರ ಒಂದಿದೆ- ಅದೆಂದರೆ, 2007ರಲ್ಲಿ ಅದು ಅನುಸರಿಸಿದ ಮಾರ್ಗಸೂತ್ರ. ಕ್ಷೇತ್ರ ಪುನರ್ ವಿಂಗಡಣೆಗಾಗಿ ನ್ಯಾಯಮೂರ್ತಿ ಕುಲ್ದೀಪ್ ಸಿಂಗ್ ಆಯೋಗ ಪ್ರತಿ 2.50 ಲಕ್ಷ ಜನಸಂಖ್ಯೆಗೆ ಒಂದು ಕ್ಷೇತ್ರ ಎಂದು ನಿಗದಿಗೊಳಿಸಿತ್ತು. ಮುಸ್ಲಿಮರ ಈಗಿನ ಜನಸಂಖ್ಯೆಗೆ ಅನುಗುಣವಾಗಿ 30 ವಿಧಾನಸಭಾ ಕ್ಷೇತ್ರಗಳನ್ನಾದರೂ ಹಂಚಿಕೆ ಮಾಡಬೇಕು. ಆದರೆ ಕಾಂಗ್ರೆಸ್ ಪಕ್ಷವೂ 12 ರಿಂದ 15 ಸ್ಥಾನಗಳಿಗಷ್ಟೇ ಸೀಮಿತಗೊಳಿಸುತ್ತದೆ. ಆ ಸ್ಥಾನಗಳಲ್ಲಿ ಗೆಲ್ಲುವವರು ಆರು ಅಥವಾ ಏಳು ಅಭ್ಯರ್ಥಿಗಳು ಮಾತ್ರ. ನಗರ ವ್ಯಾಪ್ತಿಯಲ್ಲಿ ಮಾತ್ರ ಅವರು ಅಭ್ಯರ್ಥಿಗಳಾಗಬೇಕು. ಗ್ರಾಮಾಂತರ ಪ್ರದೇಶದಲ್ಲಿ ವಲಸೆ ಕಾರಣದಿಂದ ಅವರ ಸಂಖ್ಯೆ ತೀವ್ರವಾಗಿ ಕುಸಿದಿದೆ. ಅಲ್ಲದೆ, ಧಾರ್ಮಿಕ ವೈರುಧ್ಯದ ಕಾರಣ ಅನ್ಯ ಧಾರ್ಮಿಕರು ಅವರ ಪರವಾಗಿ ಮತ ಚಲಾಯಿಸದಿರುವುದು ಅವರು ಗೆಲ್ಲದಿರುವುದು. ಹೀಗಾಗಿ, ಚುನಾವಣಾ ರಾಜಕಾರಣದಿಂದಲೇ ಅವರು ಅಪ್ರಸ್ತುತರಾಗುತ್ತಿದ್ದಾರೆ.
ಇದನ್ನೂ ಓದಿರಿ: ಲವ್ ಜಿಹಾದ್‌ನಿಂದ ವೋಟ್ ಜಿಹಾದ್‌ವರೆಗಿನ ಪಿತೂರಿ ಕಥನ; ವಾಸ್ತವವೇನು?
ಸಂಸತ್ತು: ಸ್ವಾತಂತ್ರ್ಯ ಕಾಲದ ಮೊದಲ ಕೆಲವು ಚುನಾವಣೆಗಳಲ್ಲಿ ಲೋಕಸಭೆಗೆ ಒಬ್ಬಿಬ್ಬರಾದರೂ ಚುನಾಯಿತರಾಗುತ್ತಿದ್ದರು. ಧಾರ್ಮಿಕ ಕಾರಣಗಳಿಂದ ಇತ್ತೀಚಿನ ಕೆಲವು ಚುನಾವಣೆಗಳಲ್ಲಿ ಮುಸ್ಲಿಮರು ಲೋಕಸಭೆಗೆ ಆಯ್ಕೆಯಾಗುವಲ್ಲಿ ವಿಫಲರಾಗುತ್ತಿದ್ದಾರೆ. ಇದಕ್ಕೆ ಕಾರಣ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ರಾಜಕೀಯ ಲಾಭಕ್ಕಾಗಿ ಹುಟ್ಟು ಹಾಕಿರುವ ದ್ವೇಷದ ಕಿಡಿ. ಕಡೆ ಪಕ್ಷ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಮುಸ್ಲಿಂ ಸಮುದಾಯದವರು ಗೆಲ್ಲಲಾಗದಿದ್ದರೂ, ಒಬ್ಬರನ್ನಾದರೂ ರಾಜ್ಯಸಭೆಗೆ ಕಳುಹಿಸಿ ಕೊಡುವ ಪರಿಪಾಠವನ್ನು ಇಟ್ಟುಕೊಂಡಿದೆ.
ಈ ದೃಷ್ಟಿಗೋಚರ ಅನ್ಯಾಯವನ್ನು ಕಾಣದೆ ಕುಳಿತಿರುವ ಅಥವಾ ಮಲಗಿರುವ, ಸಮೂಹ ಪ್ರಜ್ಞೆಯೇ ಇಲ್ಲದ ಮುಸ್ಲಿಂ ಜನ ಸಮುದಾಯದ ಈ ನಡೆ ಸೋಜಿಗ ತರದಿರದು. ಶಾಸನ ಸಭೆಗಳನ್ನು ಪ್ರತಿನಿಧಿಸುವ ಕೆಲವು ಪ್ರತಿನಿಧಿಗಳಿದ್ದರೂ ಏಕೋ ಏನೋ ಮೂಕ ಪ್ರೇಕ್ಷಕರಾಗಿದ್ದಾರೆ ಇದು ದುರದೃಷ್ಟಕರ.

ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.




