ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ: ಚಾತುರ್ವರ್ಣದ ಮರುಸೃಷ್ಟಿ

Date:

The value of a man was reduced to his immediate identity. And nearest possibility. To a vote. To a number. To a thing- ರೋಹಿತ್ ವೇಮುಲ.

ಇಪ್ಪತ್ತೊಂದನೆ ಶತಮಾನದ ಆರಂಭದಿಂದಲೂ ಭಾರತದ ವಿಶ್ವವಿದ್ಯಾಲಯಗಳಲ್ಲಿ ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆಗಳು ನಡೆಯುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅದರಲ್ಲಿಯೂ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ (ಸ್ಟೆಮ್) ವ್ಯಾಸಂಗ ಮಾಡುತ್ತಿರುವ ದಲಿತರ ಆತ್ಮಹತ್ಯೆಗಳನ್ನು ವಿವರವಾಗಿ ಪರಿಶೀಲಿಸಿದಾಗ ಭಾರತದ ಇಡೀ ಶಿಕ್ಷಣ ವ್ಯವಸ್ಥೆಯು ಪ್ರತ್ಯೇಕತೆ ಮತ್ತು ತಾರತಮ್ಯದ ತಡೆಗೋಡೆಗಳನ್ನು ನಿರ್ಮಿಸಿ ಜಾತಿ ಹಿಂಸೆ ಮತ್ತು ವರ್ಗ ಅಸಮಾನತೆಗಳನ್ನು ಮತ್ತಷ್ಟು ಬಲಗೊಳಿಸಿರುವುದು ಸ್ಪಷ್ಟವಾಗುತ್ತದೆ. ಇಲ್ಲಿ ಜಾತಿಯು ಒಂದು ವ್ಯವಸ್ಥೆಯಾಗಿ ಕೆಲಸ ಮಾಡುತ್ತಿರುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ, ವಿ.ವಿ.ಗಳಲ್ಲಿ, ಕ್ಯಾಂಪಸ್‌ಗಳಲ್ಲಿ ಜಾತಿ ವೈರುಧ್ಯಗಳನ್ನು ಕತ್ತರಿಸಿ ಎಲ್ಲರನ್ನೂ ಒಳಗೊಳ್ಳುವ ಪ್ರಜ್ಞೆಯನ್ನು ರೂಪಿಸಬೇಕಾದ ಇಲ್ಲಿನ ವ್ಯವಸ್ಥೆ ಮತ್ತು ಆಡಳಿತ ವರ್ಗ ತಾನೇ ಸ್ವತಃ ಈ ಬ್ರಾಹ್ಮಣಶಾಹಿಯ ಬಲೆಯಿಂದ ಹೊರಬರಲು ವಿಫಲವಾಗಿದೆ. ಈ ಜಾತಿ, ಧರ್ಮದ ಸಾಮಾಜಿಕ ಒಳರಚನೆಗಳು ದಲಿತರ ಆರ್ಥಿಕ, ಶೈಕ್ಷಣಿಕ ಮೇಲ್ಮುಖ ಚಲನೆಯನ್ನು ನಿಯಂತ್ರಿಸುತ್ತವೆ; ಸಾಧ್ಯವಾದರೆ ಚಿವುಟಿ ಹಾಕುತ್ತವೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬಂಡವಾಳದಿಂದ ವಂಚಿತರಾಗಿರುವ ದಲಿತರು ಸ್ಟೆಮ್ ವಿಷಯಗಳಲ್ಲಿ ಕಲಿಯುವುದನ್ನು, ವಿಜ್ಞಾನ, ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಕುರಿತು ಜ್ಞಾನ ಸಂಪಾದನೆಗೆ ತೊಡಗಿಕೊಳ್ಳುವುದು, ಪಿಎಚ್‌ಡಿ ಅಧ್ಯಯನ ಮಾಡುವುದನ್ನು ಬಲಪಂಥೀಯ ಸಾಮಾಜಿಕ-ರಾಜಕೀಯ ವ್ಯವಸ್ಥೆ ಇಂದಿಗೂ ಮಾನ್ಯ ಮಾಡುವುದಿಲ್ಲ. ಇದರ ವಿರುದ್ಧ ತಮ್ಮೊಳಗಿನ ಅಸಹನೆಯನ್ನು ತಾರತಮ್ಯ ಮತ್ತು ಪ್ರತ್ಯೇಕತೆಯ ಮೂಲಕ ವ್ಯಕ್ತಪಡಿಸುವ ಬ್ರಾಹ್ಮಣಶಾಹಿ ಮನಸ್ಸು ಪರೋಕ್ಷವಾಗಿ ದಲಿತ ವಿದ್ಯಾರ್ಥಿಗಳ ಸಾವಿಗೆ ಕಾರಣವಾಗುತ್ತಿದೆ. ಇದಕ್ಕೆ ಜ್ವಲಂತ ಉದಾಹರಣೆ ರೋಹಿತ ವೇಮುಲಾ ಅವರ ಸಾಂಸ್ಥಿಕ ಹತ್ಯೆ. ಇದು ಇಲ್ಲಿಗೆ ನಿಲ್ಲಲಿಲ್ಲ. ಪಾಯಲ್ ದೇವಿ, ದರ್ಶನ್ ಸೋಳಂಕಿ… ಹೀಗೆ ಪಟ್ಟಿ ಮುಂದುವರಿಯುತ್ತದೆ.

ಪ್ರೊ. ಸುಕುಮಾರ್ ಅವರು ತಮ್ಮ ‘ಕ್ಯಾಸ್ಟ್ ಡಿಸ್ಕ್ರಿಮಿನಿನೇಷನ್…’ ಪುಸ್ತಕದಲ್ಲಿನ ‘ಕ್ಯಾಸ್ಟ್ & ಅಕಾಡೆಮಿಯ’ (ಪುಟ 30) ಅಧ್ಯಾಯದಲ್ಲಿ, 19 ಜುಲೈ 2011ರಂದು ಯುಜಿಸಿ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಎಲ್ಲ ವಿವಿಗಳ ಕುಲಸಚಿವರಿಗೆ ಎಚ್ಚರಿಸಿ ಸುತ್ತೋಲೆ ಹೊರಡಿಸಿರುವುದನ್ನು ದಾಖಲಿಸುತ್ತಾರೆ.

2007-2011ರ ನಾಲ್ಕು ವರ್ಷಗಳ ಅವಧಿಯಲ್ಲಿ ವೃತ್ತಿಪರ ಕೋರ್ಸ್ (ಇಂಜಿನಿಯರಿಂಗ್, ವೈದ್ಯಕೀಯ, ವಿಜ್ಞಾನ) ವ್ಯಾಸಂಗ ಮಾಡುತ್ತಿರುವ 20 ದಲಿತ ವಿದ್ಯಾರ್ಥಿಗಳು ತಾರತಮ್ಯ, ಅಸ್ಪೃಶ್ಯತೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಕಾಂತ್(ಬಿ. ಟೆಕ್, ಐಐಟಿ ಬಾಂಬೆ), ಅಜಯ್ ಎಸ್.ಚಂದ್ರ(ಪಿಎಚ್‌ಡಿ, ಐಐಎಸ್‌ಸಿ ಬೆಂಗಳೂರು), ಜಸಪ್ರೀತ್ ಸಿಂಗ್(ಎಂಬಿಬಿಎಸ್, ಸರ್ಕಾರಿ ವೈದ್ಯಕೀಯ ಕಾಲೇಜ್, ಚಂಡೀಗಢ), ಸೆಂತಿಲ್ ಕುಮಾರ್(ಪಿಎಚ್‌ಡಿ, ಭೌತ ವಿಜ್ಞಾನ ಕಾಲೇಜು, ಹೈದರಾಬಾದ್), ಪ್ರಶಾಂತ್ ಕುರೀಲ್(ಬಿ.ಟೆಕ್ ಐಐಟಿ, ಕಾನ್ಪುರ್), ಜಿ.ಸುಮನ್(ಎಂ.ಟೆಕ್, ಐಐಟಿ ಕಾನ್ಪುರ್), ಅಂಕಿತ ವೆಗ್ಧ(ಬಿಎಸ್‌ಸಿ ನರ್ಸಿಂಗ್, ಸಿಂಘಿ ಇನ್ಸ್‌ಟಿಟ್ಯೂಟ್ ನರ್ಸಿಂಗ್, ಅಹ್ಮದಾಬಾದ್), ಡಿ.ಶ್ಯಾಮಸುಂದರ್(ಬಿ.ಟೆಕ್, ಸರೋಜಿನಿ ಇನ್ಸ್‌ಟಿಟ್ಯೂಟ್‌ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ವಿಜಯವಾಡ), ಎಸ್.ಅಮರಾವತಿ(ಸೆಂಟರ್ ಆಫ್ ಎಕ್ಸಲೆನ್ಸಿ, ಸ್ಪೋರ್ಟ್ಸ್ ಅಥಾರಿಟಿ ಆಂಧ್ರಪ್ರದೇಶ), ಬಂಡಿ ಅನುಶಾ (ಬಿ ಕಾಂ, ವಿಲ್ಲಾ ಮೇರಿ ಕಾಲೇಜ್ ಹೈದರಾಬಾದ್), ಪುಷ್ಪಾಂಜಲಿ ಪೂರ್ತಿ(ಎಂಬಿಎ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಬೆಂಗಳೂರು), ಸುಶೀಲ್ ಕುಮಾರ್ ಚೌಧುರಿ (ಎಂಬಿಬಿಎಸ್, ಛತ್ರಪತಿ ಶಿವಾಜಿ ಮಹಾರಾಜ್ ವಿವಿ ಲಖ್ನೋ), ಬಾಲಮುಕುಂದ್ ಭರ್ತಿ(ಎಂಬಿಬಿಎಸ್, ಏಮ್ಸ್ ನವದೆಹಲಿ), ಜೆ.ಕೆ.ರಮೇಶ್ (ಬಿಎಸ್‌ಸಿ, ಕೃಷಿ ವಿಜ್ಞಾನ ವಿವಿ ಬೆಂಗಳೂರು), ಮಾಧುರಿ ಸಾಳೆ (ಬಿಟೆಕ್, ಐಐಟಿ ಖರಗಪುರ್), ಜಿ.ವರಲಕ್ಷ್ಮಿ (ಬಿಟೆಕ್, ವಿಜ್ಞಾನ ಇಂಜಿನಿಯರಿಂಗ್ ಕಾಲೇಜ್ ಹೈದರಾಬಾದ್), ಮನೀಶ್ ಕುಮಾರ್(ಬಿ ಟೆಕ್, ಐಐಟಿ ರೂರ್ಕಿ), ಲಿನೇಶ್ ಮೋಹನ್ ಗಾವ್ಳೆ(ಪಿಎಚ್‌ಡಿ, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಮ್ಯುನಾಲಜಿ ನವದೆಹಲಿ), ರೆಜಾನಿ.ಎಸ್ & ಆನಂದ್ (ಐಎಚ್‌ಆರ್‌ಡಿ, ಇಂಜಿನಿಯರಿಂಗ್ ಕಾಲೇಜ್ ಅಡೂರ್, ಕೇರಳ) ಮತ್ತು ಜನವರಿ 2016ರಲ್ಲಿ ತಮಿಳುನಾಡಿನಲ್ಲಿ ಹೋಮಿಯೋಪಥಿ ವ್ಯಾಸಂಗ ಮಾಡುತ್ತಿದ್ದ ಮೂವರು ಮಹಿಳಾ ವಿದ್ಯಾರ್ಥಿಗಳು ಆತ್ಯಹತ್ಯೆ ಮಾಡಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಮ್ಮ ಮೇಲಿನ ಜಾತಿ ದೌರ್ಜನ್ಯದ ಕುರಿತು, ದುಬಾರಿ ಶುಲ್ಕದ ಕುರಿತು ಸಂಸ್ಥೆಯ ಅಧ್ಯಕ್ಷರಿಗೆ, ಆಡಳಿತ ಮಂಡಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಅನೇಕ ಪತ್ರಗಳನ್ನು ಬರೆದಿದ್ದಾರೆ. ಆದರೆ ಅದು ಅರಣ್ಯರೋದನವಾಗಿತ್ತು. 6 ಫೆಬ್ರವರಿ 2013ರಂದು ಪಟ್ನಾ ವಿವಿಯ ಭೀಮರಾವ್ ಅಂಬೇಡ್ಕರ್ ವೆಲ್‌ಫೇರ್ ಹಾಸ್ಟೆಲ್‌ನ ವಿದ್ಯಾರ್ಥಿಗಳು ಜಾತಿ ಹಿಂದೂ ಸಮಾಜದಿಂದ ಹಲ್ಲೆ, ಟೀಕೆಗಳಿಗೆ ಒಳಗಾಗಬೇಕಾಯಿತು. ಅವರ ಜಾತಿ ಹಿನ್ನಲೆಯನ್ನು ನೆನಪು ಮಾಡಿಕೊಡುತ್ತ, ‘ನೀವು ಹರಿಜನರು, ನಿಮಗೆ ಓದಲು, ಬರೆಯಲು ಯಾವುದೇ ಹಕ್ಕುಗಳಿಲ್ಲ, ಶೂ, ಚಪ್ಪಲಿ ಹೊಲೆಯುವುದು ನಿಮ್ಮ ಕೆಲಸ, ನಮ್ಮ ಮನೆಗಳಲ್ಲಿ ನಿಮ್ಮನ್ನು ಕೆಲಸಕ್ಕಿಟ್ಟುಕೊಳ್ಳುತ್ತೇವೆ, ಹಾಸ್ಟೆಲ್ ಬಿಡದೇ ಹೋದರೆ ಹತ್ಯಾಕಾಂಡ ನಡೆಸುತ್ತೇವೆಂದು ಕ್ರೌರ್ಯ ಪ್ರದರ್ಶಿಸಿದರು’ ಎಂದು ಬರೆಯುತ್ತಾರೆ. ಐಐಟಿ ಸಂಸ್ಥೆಗಳಲ್ಲಿ ಪೋಷಕರ ನಿರೀಕ್ಷೆಯ ಜೊತೆಗೆ ಜಾತಿ ಪ್ರತ್ಯೇಕತೆ ಮತ್ತು ತಾರತಮ್ಯದ ಕಾರಣಕ್ಕೆ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದ ಇತರ ಭಾಗಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇದೇ ಮಾದರಿಯ ತಾರತಮ್ಯ, ದೌರ್ಜನ್ಯಗಳು ನಡೆದಿವೆ. ಅನೇಕ ಪ್ರಕರಣಗಳು ಬೆಳಕಿಗೆ ಬಂದಿಲ್ಲ. 

sucide

4 ಸೆಪ್ಟೆಂಬರ್ 2014ರಂದು ಬಾಂಬೆ ಐಐಟಿ ವಿದ್ಯಾರ್ಥಿ ಅನಿಕೇತ್ ಅಂಭೋರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 22 ಮೇ 2019ರಂದು ವೈದ್ಯಕೀಯ ವಿದ್ಯಾರ್ಥಿ ಪಾಯಲ್ ತಾವಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12, ಫೆಬ್ರವರಿ 2023ರಂದು ಬಾಂಬೆ ಐಐಟಿ ವಿದ್ಯಾರ್ಥಿ ದರ್ಶನ್ ಸೋಳಂಕಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. 10 ಜುಲೈ 2023ರಂದು ಆಯುಶ್ ಆಶ್ನ, 1, ಸೆಪ್ಟೆಂಬರ್ 2023ರಂದು ಅನಿಲ್ ಕುಮಾರ್ ಇಬ್ಬರೂ ದೆಹಲಿ ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2007-2011ರ ಅವಧಿಯಲ್ಲಿ ಸುಮಾರು 20 ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ‘ಪ್ರತಿಭೆಯ ಸಾವು’ ಎನ್ನುವ ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿದ್ದ ಧರ್ಮೇಂದ್ರ ಪ್ರಧಾನ ಅವರು ‘2014-2021ರ ಅವಧಿಯಲ್ಲಿ ಐಐಟಿ, ಐಐಎಂ, ಎನ್‌ಐಟಿ ಶಿಕ್ಷಣ ಸಂಸ್ಥೆಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 68 ದಲಿತ ವಿದ್ಯಾರ್ಥಿಗಳಿದ್ದಾರೆ’ ಎಂದು ಹೇಳಿದ್ದಾರೆ. ದರ್ಶನ ಸೋಳಂಕಿ ಆತ್ಮಹತ್ಯೆ ಕುರಿತು ರಚಿಸಲಾದ ಸಮಿತಿಯು ‘ತನಗೆ ಕಡಿಮೆ ಅಂಕಗಳನ್ನು ಬಂದಿರುವ ಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ವರದಿ ನೀಡಿದೆ. ಸೂಕ್ಷ್ಮ ಸಂವೇದನೆಯಿಲ್ಲದೆ, ಇಲ್ಲಿನ ಜಾತಿ ವ್ಯವಸ್ಥೆಯ ಕರಾಳತೆಯ ಅರಿವಿಲ್ಲದ ಈ ಸಮಿತಿಯು ಆತ್ಮಹತ್ಯೆಯನ್ನು ತುಂಬಾ ಸಾಧಾರಣ ಮಟ್ಟದಲ್ಲಿ ಗ್ರಹಿಸಿರುವುದು ಸ್ಪಷ್ಟವಾಗುತ್ತದೆ. ಇದು ಅಕ್ಷಮ್ಯ ಅಪರಾಧವಾಗಿದೆ.

ಇದನ್ನೂ ಓದಿರಿ: ‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?

ಮೋದಿ ನೇತೃತ್ವದ ಮೊದಲ ಸರ್ಕಾರದ (2014-19) ಆರಂಭದ ಎರಡು ವರ್ಷಗಳ ಕಾಲ ಶಿಕ್ಷಣ ಮಂತ್ರಿಯಾಗಿದ್ದ ಸ್ಮೃತಿ ಇರಾನಿ ತಮ್ಮ ಆರ್‌ಎಸ್‌ಎಸ್ ನಾಯಕರು ಮತ್ತು ಎಬಿವಿಪಿ ಸಂಘಟನೆಯೊಂದಿಗೆ ಸಮಾಲೋಚಿಸಿ ಯುಜಿಸಿ ಯೋಜನೆಯ ಅಡಿಯಲ್ಲಿ ಎಂಫಿಲ್ ಮಾಡುತ್ತಿರುವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿದ್ದರು. ಇದಕ್ಕೆ ಸೂಕ್ತ ಕಾರಣಗಳನ್ನು ಕೊಡದಿದ್ದರೂ ಇದರ ಗುಪ್ತ ಕಾರ್ಯಸೂಚಿಯ ಕಾರ್ಯತಂತ್ರದ ಅನುಸಾರ ಸಂಶೋಧನ ವಿದ್ಯಾರ್ಥಿಗಳು ಎಡಪಂಥೀಯ ಚಿಂತನೆಗಳನ್ನು, ಸಿದ್ಧಾಂತಗಳನ್ನು ಮತ್ತು ಚಾತುರ್ವರ್ಣ ವಿರುದ್ಧದ ಪಠ್ಯಗಳನ್ನು ಅಧ್ಯಯನ ಮಾಡುತ್ತಾರೆ, ಇದು ಬ್ರಾಹ್ಮಣೀಕರಣವನ್ನು ಆಧರಿಸಿದ ಹಿಂದೂ ರಾಷ್ಟ್ರೀಯತೆಗೆ ಮಾರಕ ಎನ್ನುವ ದುರಾಲೋಚನೆಯಿಂದ ಸ್ಕಾಲರ್‌ಶಿಪ್‌ಅನ್ನು ಮೊಟಕುಗೊಳಿಸಿದ್ದರು. ಆ ಮೂಲಕ ವಿದ್ಯಾರ್ಥಿಗಳ ವ್ಯಾಸಂಗದ ಸ್ವಾತಂತ್ರವನ್ನೇ ತಡೆಹಿಡಿದಿದ್ದರು. ಹತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ಬಂಡವಾಳಶಾಹಿ, ಹಿಂದುತ್ವದ ರಾಷ್ಟ್ರೀಯತೆಯ ಪ್ರತಿಪಾದಿಸುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡಂದಿನಿಂದ ಪ್ರಜಾಪ್ರಭುತ್ವದ ಎಲ್ಲ ವಲಯಗಳಲ್ಲಿಯೂ ಆರ್‌ಎಸ್‌ಎಸ್ ತನ್ನ ಆರ್ಯನ್-ಬ್ರಾಹ್ಮಣ್ಯದ ಸಿದ್ಧಾಂತಗಳನ್ನು ಒಳತೂರಿಸುತ್ತಿದೆ. ಸಣ್ಣ ಸಣ್ಣ ಕಿಂಡಿಗಳನ್ನೂ ಬಿಡುತ್ತಿಲ್ಲ. ಇದರ ಮೊದಲ ಪ್ರಯೋಗಶಾಲೆ ಶಿಕ್ಷಣ ವಲಯ. ಕಳೆದ ಹತ್ತು ವರ್ಷಗಳಲ್ಲಿ ತಾಂತ್ರಿಕ ವಿಶ್ವವಿದ್ಯಾಲಯಗಳು, ಯುಜಿಸಿ, ಐಐಟಿ, ICHR, ನ್ಯಾಷನಲ್ ಬುಕ್ ಟ್ರಸ್ಟ್ ಮತ್ತು ಕೇಂದ್ರೀಯ ವಿ.ವಿ.ಗಳಲ್ಲಿ ಆರ್‌ಎಸ್‌ಎಸ್ ಹಿನ್ನೆಲೆಯ ವ್ಯಕ್ತಿಗಳನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಿಂದೂ ರಾಷ್ಟ್ರ ಸ್ಥಾಪನೆಗೆ ಅತ್ಯಂತ ಅವಸರದಲ್ಲಿರುವ ಆರ್‌ಎಸ್‌ಎಸ್‌ಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗುವುದು ಅತ್ಯವಶ್ಯಕವಾಗಿದೆ. ಇದರ ಸಾಧನೆಗಾಗಿ ಈ ಶಿಕ್ಷಣ ಮತ್ತು ಸಾಂಸ್ಕೃತಿಕ ವಲಯಗಳನ್ನು ಅಖಾಡವನ್ನಾಗಿ ಬಳಸಿಕೊಳ್ಳುತ್ತಿದೆ ಮತ್ತು ಹಿಂದುತ್ವ ಪರ ಹೋರಾಡಲು ವಿದ್ಯಾರ್ಥಿಗಳನ್ನು ಆಯುಧಗಳಂತೆ ಬಳಸಿಕೊಳ್ಳುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಮೋದಿ ಸರ್ಕಾರವು ವಿ.ವಿ.ಗಳಲ್ಲಿ ಚರ್ಚೆ, ಸಂವಾದ, ಭಿನ್ನಾಭಿಪ್ರಾಯದ ಎಲ್ಲ ಅವಕಾಶಗಳನ್ನು, ಹಕ್ಕುಗಳನ್ನು ಮೊಟಕುಗೊಳಿಸಿದೆ. ಈ ಕಾರಣಕ್ಕಾಗಿಯೇ ಈ ಹಿಂದೆ ಮದ್ರಾಸ್ ಐಐಟಿನಲ್ಲಿ ಅಂಬೇಡ್ಕರ್ -ಪೆರಿಯಾರ್ ಸ್ಟಡಿ ಸರ್ಕಲ್ ಅನ್ನು ನಿಷೇಧಿಸಿತ್ತು. ಇಂದು ಹೈದರಬಾದ್ ಕೇಂದ್ರ ವಿ.ವಿ.ಯಲ್ಲಿ ‘ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ’ಯ ವಿರುದ್ಧ ಕ್ರಮ ಜರುಗಿಸುತ್ತಿದೆ.

ದಲಿತ ವಿದ್ಯಾರ್ಥಿಗಳು ಒಂದೆಡೆ ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ವಿಭಾಗದಿಂದ, ಮತ್ತೊಂದೆಡೆ ಪ್ರತಿಷ್ಠಿತ ಬೋಧಕ ವರ್ಗದಿಂದ ದಿನನಿತ್ಯ ಶೋಷಣೆಗೆ ಒಳಗಾಗುತ್ತಾರೆ. ಮೀಸಲಾತಿ ಕುರಿತಾಗಿ ಸವರ್ಣೀಯರಿಗೆ ಇರುವ ಅಸಹನೆಯು ಕಾಲೇಜು ಕ್ಯಾಂಪಸ್‌ಗಳಲ್ಲಿ ದಲಿತರ ಪ್ರವೇಶವನ್ನು ವಿರೋಧಿಸುವ ಮೂಲಕ ವ್ಯಕ್ತವಾಗುತ್ತದೆ.   ವೇಮುಲಾ ಅವರು ತಮ್ಮ ಪತ್ರದಲ್ಲಿ ಬರೆದಂತೆ ದಲಿತ ಸಮುದಾಯದಲ್ಲಿನ ಹುಟ್ಟು ಅವರ ಮಾರಣಾಂತಿಕ ಅಪಘಾತವಾಗಿದೆ. ಅವರ ಸಾಮಾಜಿಕ ಗುರುತು ಶೋಷಣೆಯ ಆರಂಭದ ಹಂತವಾಗಿದೆ. ನಂತರ ಕಾಲೇಜು ಕ್ಯಾಂಪಸ್‌ಗಳಲ್ಲಿ ಸಾಮಾಜಿಕವಾಗಿ ವರ್ಗೀಕರಣ ಮಾಡಲಾಗುತ್ತದೆ. ನಂತರ ಸಾಮಾಜಿಕ ಹೋಲಿಕೆ ಶುರುವಾಗುತ್ತದೆ. ಈ ಮೂರು ಹಂತಗಳ ಮೂಲಕ ದಲಿತ ವಿದ್ಯಾರ್ಥಿಗಳ ವಿರುದ್ಧ ನಕಾರಾತ್ಮಕ ವಾತಾವರಣ ನಿರ್ಮಿಸಲಾಗುತ್ತದೆ. ಈ ಹಂತಗಳಲ್ಲಿ ಸವರ್ಣೀಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಶೋಷಣೆಯ ಮುಂಚೂಣಿಯಲ್ಲಿರುತ್ತಾರೆ. ಪ್ರಾಧ್ಯಾಪಕರು ದಲಿತ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸುವುದನ್ನು, ತಮ್ಮ ಸಂಶೋಧನಾ ವಿದ್ಯಾರ್ಥಿಗಳಾಗಿ ಸ್ವೀಕರಿಸುವುದನ್ನು ತಪ್ಪಿಸುತ್ತಾರೆ. ಇವರು ಪಡೆದುಕೊಳ್ಳುವ ಪ.ಜಾತಿ / ಪ.ಪಂಗಡ ಸ್ಕಾಲರ್‌ಶಿಪ್ ಆಧರಿಸಿ ಇವರನ್ನು ‘ಕೋಟಾವಾಲಾ’ ಎಂದು ಸಾರ್ವಜನಿಕವಾಗಿ ನಿಂದಿಸುತ್ತಾರೆ. ಇಂಗ್ಲಿಷ್ ಉಚ್ಚಾರಣೆಯಲ್ಲಿನ ಸಣ್ಣ ಪುಟ್ಟ ಕೊರತೆಗಳನ್ನು ವೈಭವೀಕರಿಸಿ ಅವರ ಜಾತಿಯೊಂದಿಗೆ ತಳಕು ಹಾಕುತ್ತಾರೆ, ತರಗತಿಗಳಲ್ಲಿ ಕುಳಿತುಕೊಳ್ಳಲು ಪ್ರತ್ಯೇಕತೆಯನ್ನು ಅನುಸರಿಸುತ್ತಾರೆ.  ಅನೇಕ ಸಂದರ್ಭಗಳಲ್ಲಿ ದಲಿತ ವಿದ್ಯಾರ್ಥಿಗಳ ಮಣಿಕಟ್ಟಿನಲ್ಲಿ ಒಂದು ಬಣ್ಣದ ಬ್ಯಾಂಡ್, ಸವರ್ಣೀಯರು ಮತ್ತೊಂದು ಬಣ್ಣದ ಬ್ಯಾಂಡ್ ಕಟ್ಟಿಕೊಂಡಿರುವ ಉದಾಹರಣೆಗಳಿವೆ. ಅನೇಕ ವಿವಿಗಳಲ್ಲಿ ಸವರ್ಣೀಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಿರುತ್ತದೆ. ಮಾಂಸಾಹಾರಿಗಳು ಮತ್ತು ಸಸ್ಯಾಹಾರಿಗಳು ಎಂದು ವಿಭಜಿಸಲಾಗಿದೆ. ಕೆಲವು ಕಾಲೇಜುಗಳಲ್ಲಿ ದಲಿತ ವಿದ್ಯಾರ್ಥಿಗಳು ತಮ್ಮ ಜಾತಿಯನ್ನು ಮರೆಮಾಚಿ ಸವರ್ಣೀಯ ವಿದ್ಯಾರ್ಥಿಗಳೊಂದಿಗೆ ಬೆರೆಯಲು ಪ್ರಯತ್ನಿಸುತ್ತಾರೆ. ಆದರೆ ಆ ಗುಂಪಿನಲ್ಲಿ ದಲಿತರ ವಿರುದ್ಧದ ಕೀಳುಮಟ್ಟದ ಮಾತುಗಳನ್ನು ಕೇಳಬೇಕಾದ ಆದರೆ ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ. ಅಂದರೆ ದಲಿತ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಪ್ರವೇಶ ಪಡೆಯುವ ಹಂತ ಮತ್ತು ವ್ಯಾಸಂಗದ ಹಂತ ಎರಡು ಹಂತಗಳಲ್ಲಿ ಜಾತಿ ತಾರತಮ್ಯಕ್ಕೆ ಒಳಗಾಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಖಿನ್ನತೆಗೆ, ಅವಮಾನಕ್ಕೆ ಒಳಗಾಗುತ್ತಾರೆ. ಇದು ನೇರವಾಗಿಯೇ ಸಾಂಸ್ಥಿಕ ಹತ್ಯೆಯಾಗಿದೆ.

ಸಮಾನ ಅವಕಾಶಗಳು ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು ನೀತಿಗೆ ಬೆಂಬಲವಾಗಿ  ಅಸ್ಪೃಶ್ಯತೆ (ಅಪರಾಧಗಳು) ಕಾಯ್ದೆ 1955, ಇದನ್ನು 1979ರಲ್ಲಿ ತಿದ್ದುಪಡಿ ಮಾಡಿ ಮಾನವ ಹಕ್ಕುಗಳ ರಕ್ಷಣೆ (ಪಿಸಿಆರ್) ಕಾಯ್ದೆ 1955 ಜಾರಿಗೊಳಿಸಲಾಗಿದೆ. ಪ.ಜಾತಿ ಮತ್ತು ಪ.ಪಂಗಡ (ದೌರ್ಜನ್ಯ ನಿಯಂತ್ರಣ ಕಾಯ್ದೆ) 1989 ಜಾರಿಗೊಳಿಸಲಾಗಿದೆ. ಈ ಎರಡು ಪ್ರಬಲವಾದ ಕಾಯ್ದೆಗಳಿದ್ದರೂ ಸಹ ವಿವಿ ಕ್ಯಾಂಪಸ್‌ಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ವ್ಯವಸ್ಥಿತವಾಗಿ ಜಾತಿ ತಾರತಮ್ಯವನ್ನು ಆಚರಿಸಲಾಗುತ್ತಿದೆ. 

ರೋಹಿತ್ ವೇಮುಲಾರ ಸಾಂಸ್ಥಿಕ ಹತ್ಯೆ

ರೋಹಿತ್ ವೇಮುಲ ಅವರ ಸಾಂಸ್ಥಿಕ ಹತ್ಯೆಯ ಕುರಿತು ಕಳೆದ ಎಂಟು ವರ್ಷಗಳಿಂದ ತನಿಖೆ ನಡೆಸಿದ ತೆಲಂಗಾಣ ಪೊಲೀಸರು ಅದು ಆತ್ಮಹತ್ಯೆ ಎಂದೂ, ವೇಮುಲಾ ದಲಿತರಲ್ಲ, ಹಿಂದುಳಿದ ವಡ್ಡರ ಜಾತಿಗೆ ಸೇರಿದವರೆಂದೂ ಮತ್ತು ತನ್ನ ಗುಟ್ಟು ಬಯಲಾಗುತ್ತದೆ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆಂದು ವರದಿ ನೀಡಿದರು. ಆಗಿನ ಹೈದರಾಬಾದ್ ಕೇಂದ್ರೀಯ ವಿವಿಯ ಉಪಕುಲಪತಿ ಅಪ್ಪಾರಾವ್, ಆಗಿನ ಕೇಂದ್ರ ಮಂತ್ರಿ ಬಂಡಾರು ದತ್ತಾತ್ರೇಯ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದು ಖುಲಾಸೆಗೊಳಿಸಿದರು. ಆದರೆ ಈ ತನಿಖೆಯು ವೇಮುಲಾರ ಸಮಾಜೋ-ಆರ್ಥಿಕ ಹಿನ್ನಲೆಯನ್ನು, ವಿವಿಧ ಸಾಕ್ಷಿಗಳನ್ನು ಪರಿಗಣಿಸದೆ ಪೂರ್ವಗ್ರಹಪೀಡಿತರಾಗಿ ವರದಿ ನೀಡಿರುವುದು ಮೇಲ್ನೊಟಕ್ಕೆ ಕಂಡುಬರುತ್ತದೆ.

ಕೊಂಚ ಹಿನ್ನಲೆಯನ್ನು ಗಮನಿಸಿದಾಗ…

ವೇಮುಲಾರ ತಾಯಿ ರಾಧಿಕಾ ಅವರ ತಂದೆ ತಾಯಿ ದಲಿತ ಮಾಲಾ ಸಮುದಾಯದವರು. ಅವರನ್ನು ವಡೇರು ಸಮುದಾಯದ ಅಂಜನಿ ಎನ್ನುವವರು ದತ್ತು ಪಡೆದುಕೊಂಡರು. ನಂತರ ಅದೇ ಜಾತಿಯ ಮಣಿ ಕುಮಾರ್ ಜೊತೆಗೆ ರಾಧಿಕಾ ಅವರ ವಿವಾಹವಾಯಿತು. ಇವರಿಗೆ ನೀಲಿಮಾ, ರೋಹಿತ್ ವೇಮುಲಾ, ರಾಜ ಮೂವರು ಮಕ್ಕಳು. ಆದರೆ ಆ ಕ್ರೂರಿ ಗಂಡನಿಗೆ ರಾಧಿಕಾ ಅವರ ಜಾತಿ ಹಿನ್ನಲೆ ಗೊತ್ತಾಗಿ ‘ನಾನು ಅಸ್ಪೃಶ್ಯಳನ್ನು ಮದುವೆಯಾದೆ, ನನಗೆ ಮೋಸ ಮಾಡಿದಿರಿ’ ಎಂದು ಮತ್ತಷ್ಟು ಹಿಂಸೆ, ದೌರ್ಜನ್ಯ ನಡೆಸಿದ. ಕಡೆಗೆ ರಾಧಿಕಾ ಅವರು 1990ರಲ್ಲಿ ಗಂಡನನ್ನು ತೊರೆದು ತಮ್ಮ ಮೂವರು ಮಕ್ಕಳೊಂದಿಗೆ ಸಾಕು ತಾಯಿ ಅಂಜನಿ ಅವರ ಬಳಿಗೆ ಮರಳಿದರು. ಆದರೆ ಅಲ್ಲಿಯೂ ಅವರಿಗೆ ಸುಖವಿರಲಿಲ್ಲ. ಆ ಮನೆಯಲ್ಲಿ ಆಳುಗಳಂತೆ ದುಡಿಯುತ್ತಿದ್ದರು. ಅಂಜನಿಯವರ ತಾಯಿ ರಾಧಿಕಾ ಅವರಿಗೆ ಅಸ್ಪೃಶ್ಯ ಜಾತಿಯನ್ನು ಉದಾಹರಿಸಿ ಮಾಡಿ ಬಯ್ಯುತ್ತಿದ್ದರು. ದಲಿತರು ಎನ್ನುವ ಕಾರಣಕ್ಕೆ ದೌರ್ಜನ್ಯ ನಡೆಸುತ್ತಿದ್ದರು. ವೇಮುಲಾ ಮತ್ತು ರಾಜು ಅವರ ವಿದ್ಯಾಭ್ಯಾಸಕ್ಕೂ ಅಂಜನಿ ಕುಟುಂಬದಿಂದ ಯಾವುದೇ ಸಹಕಾರ ದೊರಕಲಿಲ್ಲ.

bandaru
ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿ

ಇದಿಷ್ಟೂ ರೋಹಿತ್ ವೇಮುಲಾ ಅವರ ಹಿನ್ನಲೆ. ಆದರೆ ಈ ವಿವರಗಳನ್ನು ಅರಿಯುವ ಗೋಜಿಗೆ ಹೋಗದ ತೆಲಂಗಾಣ ಪೋಲಿಸರು ಪೂರ್ವಗ್ರಹಪೀಡಿತರಾಗಿದ್ದರು. ದಲಿತ ವಿದ್ಯಾರ್ಥಿ ವೇಮುಲಾ ಅವರ ಸಾಂಸ್ಥಿಕ ಹತ್ಯೆಯನ್ನು ನಿರಾಕರಿಸುವುದು ಮತ್ತು ಬಿಜೆಪಿ ಪಕ್ಷದ ಬಂಡಾರು ದತ್ತಾತ್ರೇಯ, ಸ್ಮತಿ ಇರಾನಿ, ಎನ್. ರಾಮಚಂದ್ರ ರಾವ್, ಎಬಿವಿಪಿ ಮುಖಂಡ ಸುಶೀಲ್ ಕುಮಾರ್‌ರನ್ನು ರಕ್ಷಿಸುವುದು ಅವರ ಉದ್ದೇಶವಿದ್ದಂತಿದೆ. ರೋಹಿತ್ ವೇಮುಲಾ ದಲಿತರು ಎಂದು ಅಧಿಕೃತ ಪ್ರಮಾಣ ಪತ್ರ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ತಮಗೆ ಅನುಕೂಲವಾಗುವಂತೆ ಮಾಹಿತಿಯನ್ನು ಆರಿಸಿಕೊಂಡಿರುವುದು ಅನುಮಾನಾಸ್ಪದವಾಗಿದೆ. ಆದರೆ ಪ್ರಕರಣ ನಡೆದ ಸಂದರ್ಭದಲ್ಲಿ ಗುಂಟೂರು ಜಿಲ್ಲಾಧಿಕಾರಿ ಕಾಂತಿಲಾಲ್ ದಂಡೆ ‘ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ’ಕ್ಕೆ ಸಲ್ಲಿಸಿದ ವರದಿಯಲ್ಲಿ ವೇಮುಲಾ ದಲಿತರು ಎಂದು ಖಾತರಿಪಡಿಸಿದ್ದಾರೆ. ಆದರೆ ಇದನ್ನು ಪರಿಗಣಿಸದಿರುವುದಕ್ಕೆ ಕಾರಣವೇನು? ಮತ್ತು ಈ ತನಿಖಾ ತಂಡವು ತಾಯಿ ರಾಧಿಕಾ ಅವರ ಹೇಳಿಕೆಯನ್ನು ಪಡೆದಿಲ್ಲ ಎಂದು ಆರೋಪಿಸಲಾಗಿದೆ. ಇಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಂಕೀರ್ಣತೆಯನ್ನು ಗ್ರಹಿಸಲು ವಿಫಲವಾಗಿರುವ ಈ ತನಿಖೆಯು ತುಂಬಾ ಅಸೂಕ್ಷ್ಮತೆಯಿಂದ ವೇಮುಲಾ ದಲಿತರಲ್ಲ ಎಂದು ಸಾಧಿಸಲು ಹರಸಾಹಸ ಪಟ್ಟಿದೆ. ಅಂತರರ್ಜಾತೀಯ ವಿವಾಹದ ಸಂದರ್ಭದಲ್ಲಿ ಮಗುವಿನ ಜಾತಿಯನ್ನು ಅದರ ಪಾಲನೆಯ ಆಧರಿಸಿ ನಿರ್ಧರಿಸಲಾಗುತ್ತದೆ. ಈ ಮಕ್ಕಳ ಹಕ್ಕುಗಳ ಕುರಿತು ನಿರ್ಧರಿಸಲು ಸುಪ್ರೀಂಕೋರ್ಟ್ ಪೀಠವು ‘ಒಂದುವೇಳೆ ತಾಯಿಯು ತನ್ನ ಮಗುವನ್ನು ಬೆಳೆಸಿದರೆ ಸಹಜವಾಗಿಯೇ ಆ ತಾಯಿಯ ಜಾತಿಯನ್ನು ಪರಿಗಣಿಸಬೇಕಾಗುತ್ತದೆ’ ಎಂದು ಹೇಳಿದೆ. ಆದರೆ ತನಿಖಾ ತಂಡವು ಈ ಆದೇಶವನ್ನು ಯಾತಕ್ಕೆ ಕಡೆಗಣಿಸಿದೆ?

ಹಿನ್ನಲೆ

17.1.2016 ಹೈದರಾಬಾದ್ ಕೇಂದ್ರೀಯ ವಿ.ವಿ.ಯಲ್ಲಿ ಪಿಎಚ್‌ಡಿ ಮಾಡುತ್ತಿದ್ದ ದಲಿತ ವಿದ್ಯಾರ್ಥಿ ‘ರೋಹಿತ್ ವೇಮುಲ’ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಬರೆದ ಪತ್ರದ ಸಾಲುಗಳು ಹೇಳದೆ ಉಳಿದ ಮನದಾಳವನ್ನು ವ್ಯಕ್ತಪಡಿಸುತ್ತದೆ. ಆದರೆ ಪ್ರತಿಭಾವಂತ ರೋಹಿತ್ ಸಾವು ಸಾಂಸ್ಥಿಕ ಹತ್ಯೆ.  ಪ್ರಜಾಪ್ರಭುತ್ವದ ಯಜಮಾನ್ಯ ವ್ಯವಸ್ಥೆ ಮತ್ತು ಅದರ ಭಾಗವಾಗಿರುವ ನಾವೆಲ್ಲ ಈ ಸಾವಿಗೆ ಪರೋಕ್ಷ ಹೊಣೆಗಾರರು. ಇದು ಕೇವಲ ವ್ಯವಸ್ಥೆಯ ಸೋಲಲ್ಲ. ಪ್ರಜ್ಞಾವಂತರೆಲ್ಲರ ನೈತಿಕ ಪತನ.

 1, ಆಗಸ್ಟ್ 2014ರಂದು ದೆಹಲಿ ವಿ.ವಿ.ಯಲ್ಲಿ 2013ರ ಉ.ಪ್ರ. ಮುಝಫರ್ ಕೋಮುಗಲಭೆಗಳ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶಿಸುತ್ತಿದ್ದಾಗ ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆ ಎಬಿವಿಪಿ  ಈ ಸಾಕ್ಷ್ಯಚಿತ್ರ ‘ಹಿಂದೂ ವಿರೋಧಿ’ ಎಂದು ಕ್ಯಾತೆ ತಗೆದು ಪ್ರದರ್ಶನಕ್ಕೆ ಅಡ್ಡಿಪಡಿಸಿತು. ಹೈದರಾಬಾದ್ ಕೇಂದ್ರೀಯ ವಿ.ವಿ.ಯ ‘ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ’(ಎಎಸ್‌ಎ) 3, ಆಗಸ್ಟ್2014ರಂದು ಎಬಿವಿಪಿಯ ಅಸಹನೆ ಮತ್ತು ಅಸಹಿಷ್ಣತೆಯ ಗೂಂಡಾಗಿರಿಯ ವಿರುದ್ಧ ಹೈದರಾಬಾದ್‌ನಲ್ಲಿ ಪ್ರತಿಭಟಿಸಿತು. ಇದಕ್ಕೆ ಪ್ರತಿಯಾಗಿ ಸ್ಥಳೀಯ ಎಬಿವಿಪಿ ಮುಖಂಡ ಸುಶೀಲ್ ಕುಮಾರ್ ಫೇಸ್‌ಬುಕ್‌ನಲ್ಲಿ ಎಎಸ್‌ಎಯನ್ನು ಗೂಂಡಾಗಳೆಂದು ಜರೆದು ಅವಹೇಳನಕಾರಿಯಾಗಿ ಬರೆದಿದ್ದರು. ಈ ಅವಹೇಳನ ಬರಹದ ವಿರುದ್ಧ ಎಎಸ್‌ಎ ಪ್ರತಿಭಟಿಸಿದಾಗ ಆ ಎಬಿವಿಪಿ ಮುಖಂಡ ಕ್ಷಮೆ ಕೇಳಿದ್ದರು. ಆದರೆ ಮರುದಿನ ಇದೇ ಸುಶೀಲ್ ಕುಮಾರ್ ತಮ್ಮ ಮೇಲೆ ಹಲ್ಲೆಯಾಗಿದೆ ಎಂದು ಪೋಲೀಸ್ ಠಾಣೆಯಲ್ಲಿ ದೂರು ನೀಡಿದರು. ಆ ಕೂಡಲೆ ಅಲ್ಲಿನ ಬಿಜೆಪಿ ಪಕ್ಷದ ಶಾಸಕರೊಬ್ಬರು ತಮ್ಮ ಹಿಂಬಾಲಕರೊಂದಿಗೆ ವಿ.ವಿ. ಉಪಕುಲಪತಿಯರನ್ನು ಭೇಟಿ ಮಾಡಿ ದಲಿತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಇವರೆಲ್ಲ ದೇಶ ವಿರೋಧಿಗಳು ಎಂದು ಎಎಸ್‌ಎ ವಿರುದ್ಧ ಅವ್ಯಾಚವಾಗಿ ಟೀಕಿಸಿದ್ದರು. ಆ ನಂತರ ಉಪಕುಲಪತಿ ವಿಚಾರಣೆಯ ಸಮಿತಿಯನ್ನು ನೇಮಿಸಿದರು. ಆ ಸಮಿತಿಯು ಎಲ್ಲ ಕೋನಗಳಿಂದಲೂ ವಿಚಾರಣೆ ನಡೆಸಿ ಎಬಿವಿಪಿ ನೀಡಿದ ದೂರಿನಲ್ಲಿ ಯಾವುದೇ ಹುರಳಿಲ್ಲವೆಂದು  ಎಎಸ್‌ಎ ವಿದ್ಯಾರ್ಥಿಗಳು ನಿರಪರಾಧಿಗಳೆಂದು ವರದಿ ನೀಡಿತು. ಆದರೆ ಈ ಮಧ್ಯೆ ಆಗಿನ ಕೇಂದ್ರ ಬಿಜೆಪಿ ಮಂತ್ರಿ, ಸ್ಥಳೀಯ ಸಂಸದ ಬಂಡಾರು ದತ್ತಾತ್ರೇಯ ಮಧ್ಯಪ್ರವೇಶಿಸಿ  ಎಎಸ್‌ಎಯನ್ನು ಜಾತಿವಾದಿ ಗುಂಪುಗಳು, ದೇಶ ವಿರೋಧಿಗಳು, ಗೂಂಡಾಗಳೆಂದು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಂದ್ರದ ಶಿಕ್ಷಣ ಇಲಾಖೆಗೆ ಪತ್ರ ಬರೆದರು. ಕೂಡಲೆ ಇದಕ್ಕೆ ಪ್ರತಿಕ್ರಿಯಿಸಿದ ಆಗಿನ ಕೇಂದ್ರ ಶಿಕ್ಷಣ ಮಂತ್ರಿ ಸ್ಮೃತಿ ಇರಾನಿ ಮತ್ತೊಂದು ತನಿಖೆ ನಡೆಸಬೇಕೆಂದು ಉಪಕುಲಪತಿಗಳಿಗೆ ಆದೇಶ ನೀಡಿದರು. ಒಂದಲ್ಲ ಐದು ಪತ್ರಗಳನ್ನು ಬರೆದು ಒತ್ತಾಯಿಸಿದರು ಎನ್ನಲಾಗಿದೆ. ಈ ಮರೆಮೋಸದ ತನಿಖೆಯ ನಾಟಕ ನಡೆದು ಎಎಸ್‌ಎನ ಐದು ದಲಿತ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಯಿತು. ಇವರಲ್ಲಿ ರೋಹಿತ್ ವೇಮುಲಾ ಸಹ ಒಬ್ಬರು. ಈ ಬೆಳವಣಿಗೆಯಿಂದ ದಲಿತ ವಿದ್ಯಾರ್ಥಿಗಳು ಆತಂಕದಲ್ಲಿದ್ದರು, ಅತಂತ್ರರಾದರು.

ಇದನ್ನೂ ಓದಿರಿ: ವಿಶೇಷ ಲೇಖನ | ದಲಿತರು ಹಿಂದೂ ದೇವಾಲಯಗಳನ್ನು ಬಹಿಷ್ಕರಿಸಬೇಕಿದೆ

ಆದರೆ ಸೂಕ್ಷ್ಮ ಮನಸ್ಸಿನ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜ್ಞಾನ, ತಾರೆಗಳ ಕುರಿತು ಸಂಶೋಧನೆ ಮಾಡುವ ಆಸಕ್ತಿ ಹೊಂದಿದ್ದ ವೇಮುಲಾ ತಮ್ಮ ಪತ್ರದಲ್ಲಿ ‘ನಾನು ಆ ನಕ್ಷತ್ರಗಳ ಲೋಕಕ್ಕೆ ಹೋಗುತ್ತಿದ್ದೇನೆ’ ಎಂದು ಮಾರ್ಮಿಕವಾಗಿ ಬರೆದಿದ್ದಾರೆ. ಅವರ ಇಡೀ ಪತ್ರವನ್ನು ಓದಿದಾಗ ವೇಮುಲಾ ಅವರ ಪ್ರತಿಭೆ, ಬೌದ್ಧಿಕ ಪಕ್ವತೆ ಮತ್ತು ಆದರ್ಶದ ಕನಸುಗಳು ನಮ್ಮ ಮನಸ್ಸಿನ ಆಳಕ್ಕೆ ಇಳಿಯುತ್ತವೆ. ಆದರೆ ಇವರನ್ನು ಸಾಯಿಸಿದ್ದು ಇಲ್ಲಿ ಜಾತಿ-ಫ್ಯೂಡಲ್ ವ್ಯವಸ್ಥೆ. ಈ ಸಾಂಸ್ಥಿಕ ಹತ್ಯೆಯನ್ನು ಆತ್ಮಹತ್ಯೆ ಎಂದು ಕರೆಯುವುದೇ ಆತ್ಮ ವಂಚನೆಯಾಗುತ್ತದೆ. 

ಉಪಸಂಹಾರ

ಭಾರತದ ಪುರೋಹಿತಶಾಹಿ ವ್ಯವಸ್ಥೆಯು ಇಂದಿಗೂ ತಳಸಮುದಾಯಗಳು ಜ್ಞಾನವನ್ನು, ಅಕ್ಷರ ಪಡೆಯುವುದನ್ನು ಸಹಿಸುತ್ತಿಲ್ಲ. ಆಧುನಿಕತೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನದಂತಹ ಸಮಾನತೆಯನ್ನು ಪ್ರತಿಪಾದಿಸುವ ಮೆಟ್ಟಿಲುಗಳಿದ್ದರೂ ತಳಸಮುದಾಯಗಳಿಗೆ ಅವಮಾನ, ದೌರ್ಜನ್ಯದಿಂದ ವಿಮೋಚನೆ ದೊರಕಿಲ್ಲ. ಪ್ರತ್ಯೇಕತೆ ಮತ್ತು ತಾರತಮ್ಯದಿಂದ ಮುಕ್ತಿ ದೊರಕಲಿಲ್ಲ. ವಿಫುಲವಾದ ಅಧ್ಯಯನಗಳ ಮೂಲಕ ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಅಭಿವೃದ್ಧಿ ಈ ವಿಮೋಚನೆಯನ್ನು ತಂದುಕೊಡುತ್ತದೆ ಎಂದು ಹೇಳಲಾಯಿತು. ಆದರೆ ನವ ಉದಾರೀಕರಣದ ಭಾರತದಲ್ಲಿ ಬ್ರಾಹ್ಮಣವಾದವು ತನ್ನ ಕರ್ಮಠತನಕ್ಕೆ ಅನುಕೂಲವಾಗುವಂತೆ ಆಧುನಿಕತೆಯನ್ನು ಪಳಗಿಸಿಕೊಂಡಿದೆ ಎನ್ನುವ ಕಟುಸತ್ಯವನ್ನು ನಾವೆಲ್ಲ ಅರಿಯುವಲ್ಲಿ ವಿಫಲರಾಗಿದ್ದು ಒಂದು ದುರಂತ. ಆಧುನಿಕ ಭಾರತದಲ್ಲಿ ಈ ಪುರೋಹಿತಶಾಹಿಯು ತನ್ನ ಜಾತೀಯತೆಯ ವರಸೆಗಳನ್ನು ಮತ್ತು ಪ್ರಯೋಗಗಳನ್ನು ಮಾತ್ರ ಬದಲಿಸಿಕೊಂಡಿದೆ ಅಷ್ಟೇ. ಅದರ ಮೂಲಭೂತವಾದದ ಎಲ್ಲ ಚಿಂತನೆಗಳು ಕೊಂಚವೂ ಬದಲಾಗಿಲ್ಲ. ಜಾಗತೀಕರಣ ಭಾರತದಲ್ಲಿ ನೆಲೆಯೂರುತ್ತಿದಂತೆಯೇ ತೊಂಬತ್ತರ ದಶಕದಲ್ಲಿ ಕೋಮುವಾದವು ವಿಜೃಂಬಿಸುತ್ತಿತ್ತು. ಈ ತೊಂಬತ್ತರ ದಶಕದಲ್ಲಿ ಪುರೋಹಿತಶಾಹಿಯು ಬಹುಸಂಖ್ಯಾತವಾದದ ಹೆಸರಿನಲ್ಲಿ ಬ್ರಾಹ್ಮಣ್ಯದ ಹಿಂದುತ್ವವಾದವನ್ನು ಕೊಂಚ ಹಿಗ್ಗಿಸಿ ಅದರೊಳಗೆ ಬ್ರಾಹ್ಮಣೇತರ ಬಲಿಷ್ಠ ಜಾತಿಗಳನ್ನು ಸೆಳೆದುಕೊಂಡು ರಾಜಕೀಯ ಅಧಿಕಾರ ನೀಡಿತು. ಆ ಮೂಲಕ ಪುರೋಹಿತಶಾಹಿಯ ಮೂಲಭೂತವಾದಕ್ಕೆ ತೋಳ್ಬಲವೂ ಕೈಜೋಡಿಸಿ ತಳಸಮುದಾಯಗಳ ಮೇಲಿನ ದೌರ್ಜನ್ಯ ಮತ್ತು ಹಲ್ಲೆಗಳು ಕೊಲೆಗಳಲ್ಲಿ ಪರ್ಯಾವಸಾನಗೊಂಡಿತು. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಪುರಾವೆಗಳಿವೆ. ಈ ದೌರ್ಜನ್ಯಗಳ ಸಂದರ್ಭದಲ್ಲಿ ದಲಿತರ ಆರ್ಥಿಕ ಚೈತನ್ಯವನ್ನು ಬಿಂಬಿಸುತ್ತಿದ್ದ ಮೇಜು, ಕುರ್ಚಿ, ರೆಫ್ರಿಜರೇಟರ್‌ಗಳಂತಹ ವಸ್ತುಗಳನ್ನು ಧ್ವಂಸ ಮಾಡಲಾಗುತ್ತಿತ್ತು. ತಳ ಸಮುದಾಯಗಳಿಗೆ ವೇತನದಲ್ಲಿ, ನೇಮಕಾತಿಯಲ್ಲಿ, ಭಡ್ತಿಯಲ್ಲಿ ಇಂದಿಗೂ ತಾರತಮ್ಯ ಮುಂದುವರೆದಿದೆ.

ಇದನ್ನೂ ಓದಿರಿ: ‘ದಲಿತ’ ಪದದ ಅಪಾರ್ಥ: ದಲಿತ ಚಳವಳಿಗೇ ಅಪಾಯ

ಬ್ರಾಹ್ಮಣಶಾಹಿಯ ಏಕರೂಪಿ ಸಂಸ್ಕೃತಿಯನ್ನು ಸಮರ್ಥಿಸುತ್ತ ತಳಸಮುದಾಯಗಳ ಬಹುರೂಪಿ ಶ್ರಮಣ ಸಂಸ್ಕೃತಿಯನ್ನು ನಾಶಮಾಡಲಾಯಿತು. ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ ವಿದ್ಯಾರ್ಥಿಗಳು ಅಸಮಾನತೆಯ ಅವಮಾನದಿಂದ ಆತ್ಮಹತ್ಯೆ ಮಾಡಿಕೊಳ್ಳತೊಡಗಿದ ನಂತರ ಶಿಕ್ಷಣದ ಮೂಲಕ ಪ್ರತ್ಯೇಕತೆಯನ್ನು ಕೊನೆಗೊಳಿಸಬಹುದೆನ್ನುವ ಆಶಯಗಳು ಭಗ್ನಗೊಂಡಿವೆ. ಇಪ್ಪೊತ್ತೊಂದನೇ ಶತಮಾನದ ಆಧುನಿಕ ಭಾರತದಲ್ಲಿ, ಬಲಪಂಥೀಯ ಚಿಂತನೆಗಳ ಸರ್ಕಾರ ಕೇಂದ್ರದಲ್ಲಿ ಬಹುಮತ ಪಡೆದು ಅಧಿಕಾರಕ್ಕೇರಿದ ನಂತರ ಈ ಪುರೋಹಿಶಾಹಿಯು ಅಭಿವೃಧ್ಧಿ ಮತ್ತು ಬಹುಸಂಖ್ಯಾತವಾದದ ಮುಖವಾಡದಲ್ಲಿ ಪ್ರತ್ಯೇಕತೆ ಮತ್ತು ತಾರತಮ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಇದನ್ನು ಸಂಪತ್ತಿನ ಅಸಮಾನ ಹಂಚಿಕೆಯ ಮೂಲಕ, ಕ್ರೋನಿ ಬಂಡವಾಳದ ಮೂಲಕ, ಬಾಬರಿ ಮಸೀದಿಯ ಧ್ವಂಸದಿಂದ ಹತ್ರಾಸ್ ಘಟನೆಗಳ ಮೂಲಕ, ಶಿಕ್ಷಣದಲ್ಲಿ ಸನಾತನವಾದದ ಸಾಂಸ್ಕೃತಿಕ ಯಜಮಾನ್ಯದ ಮೂಲಕ ಸಾಧಿಸಲಾಗುತ್ತಿದೆ.

ಪ್ರಜ್ಞಾವಂತರ ಪ್ರಗತಿಪರ ಸಿದ್ಧಾಂತಗಳು ತಮ್ಮ ಕೇಂದ್ರದಿಂದ ಕಳಚಿಕೊಂಡು ಚೆಲ್ಲಾಪಿಲ್ಲಿಯಾಗಿ ಚೆದುರಿಹೋಗಿವೆ. ನ್ಯಾಯಕ್ಕಾಗಿ ನಡೆಸುತ್ತಿದ್ದ ಸಂಘರ್ಷವು ಪ್ರಭುತ್ವದೊಂದಿಗೆ ಸಂಧಾನಕ್ಕೆ ತೊಡಗಿಸಿಕೊಂಡಿದೆ. ನಮ್ಮ ಈ ಆತ್ಮವಂಚನೆ, ನಿಷ್ಕ್ರಿಯತೆಯ ಫಲವಾಗಿ ನೂರಾರು ರೋಹಿತ್ ವೇಮುಲರಂತಹ ಸೂಕ್ಷ್ಮ ಮನಸ್ಸಿನ ಹೊಸ ತಲೆಮಾರು ತಮ್ಮ ಬಲಿ ಕೊಡುತ್ತಿದ್ದಾರೆ. ಸಾಂಸ್ಥಿಕ ಹತ್ಯೆಗೆ ಒಳಗಾಗುತ್ತಿದ್ದಾರೆ.

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...