ಭಾರತದಲ್ಲಿ ಆಚರಣೆಯಲ್ಲಿರುವ ಜಾತಿಪದ್ಧತಿಯು ತಾರತಮ್ಯ, ಅಸಮಾನತೆಯ ಶ್ರೇಣಿಕೃತ ವ್ಯವಸ್ಥೆಯಾಗಿದೆ. ವ್ಯಕ್ತಿಯ ಜಾತಿ ಹುಟ್ಟಿನಿಂದಲೇ ನಿರ್ಧಾರವಾಗುತ್ತದೆ. ಮೇಲು-ಕೀಳು ಜಾತಿಗಳು ಎಂದು ಭಿನ್ನಭೇದ ಮಾಡುವುದು, ಅಸ್ಪೃಶ್ಯತೆ ಆಚರಿಸುವುದು, ವೈವಾಹಿಕ ಸಂಬಂಧಗಳನ್ನು ಜಾತಿಯ ಚೌಕಟ್ಟಿನೊಳಗೆ ಏರ್ಪಡಿಸುವುದು ಜಾತಿ ವ್ಯವಸ್ಥೆಯ ಬಹುಮುಖ್ಯ ಲಕ್ಷಣವಾಗಿವೆ. ಜಾತಿ ವ್ಯವಸ್ಥೆಯು ವ್ಯಕ್ತಿಯ ಸಾಮಾಜಿಕ ಚಲನೆಯನ್ನೇ ಮಿತಿಗೊಳಿಸಿ ವ್ಯಕ್ತಿತ್ವ ವಿಕಸನದ ಪ್ರಗತಿಗೆ ಮಾರಕವಾಗುವ ಜಡ ವ್ಯವಸ್ಥೆಯಾಗಿದ್ದು, ಅವೈಜ್ಞಾನಿಕವಾದುದ್ದಾಗಿದೆ. ಕಂದಾಚಾರ, ಮೌಢ್ಯತೆಯ ಸಂಪ್ರದಾಯಕ್ಕೆ ನಿಷ್ಠರಾಗಿರುವುದು, ಆಸ್ತಿಹಕ್ಕು, ಪಿತೃಪ್ರಾಧಾನ್ಯತೆ, ಜಾತಿಯ ಬಗೆಗಿನ ಶ್ರೇಷ್ಠತೆಯ ವ್ಯಸನ, ಜಾತಿ ಆಧಾರಿತ ರಾಜಕಾರಣ ಇವು ಜಾತಿಪದ್ಧತಿಯನ್ನು ಪೋಷಿಸುತ್ತವೆ.
ಜಾತಿಯೊಳಗೆ ಮದುವೆಯಾಗುವುದರ ಮೂಲಕ ಕೊಟ್ಟು ತರುವುದು, ಹೊಕ್ಕು ಬಳಸುವುದು, ಉಣ್ಣುವುದು-ತಿನ್ನುವುದು, ಜಾತಿಯೊಳಗೆ ಮಾಡುವುದರ ಮೂಲಕ ಜಾತಿಯ ಪವಿತ್ರತೆಯನ್ನು, ಶುದ್ಧತೆಯನ್ನು, ಶ್ರೇಷ್ಠತೆಯನ್ನು ಉಳಿಸಿಕೊಳ್ಳಬಲ್ಲೆವು ಎಂಬುದು ಜಾತ್ಯಸ್ಥರ ನಂಬಿಕೆಯಾಗಿದೆ. ಹೆಚ್ಚು ಕಡಿಮೆ ಧರ್ಮಾಂಧರ ಮನಸ್ಥಿತಿಯೂ ಇದೆ ಆಗಿರುತ್ತದೆ. ಜಾತಿ ಧರ್ಮಗಳ ಚೌಕಟ್ಟನ್ನು ಮೀರಿ ಅನ್ಯ ಜಾತಿಯವರನ್ನು ಮದುವೆಯಾಗುವುದು ನಿಷಿದ್ಧ ಎಂದು ಸಮಾಜ ಭಾವಿಸುತ್ತದೆ. ಹಾಗೆ ಮೀರಿ ನಡೆದಿದ್ದೆ ಆದಲ್ಲಿ ಸಾಮಾಜಿಕ ಬಹಿಷ್ಕಾರ, ದಂಡ, ಅವಹೇಳನ, ದೈಹಿಕ ಹಲ್ಲೆ, ಹೆದರಿಸುವುದು, ಬೆದರಿಸುವುದು, ಮಾತುಮಾತಿಗೊಮ್ಮೊಮ್ಮೆ ಜೀವ ತೆಗೆದು ಭಯ ಹುಟ್ಟಿಸಿ ಅಂಕೆಯಲ್ಲಿಡಲು ಪ್ರಯತ್ನಿಸುತ್ತದೆ. ಎಲ್ಲ ಹೆದರಿಕೆ ಬೆದರಿಕೆಗಳ ನಡುವೆಯೂ ಪ್ರೇಮ ಎಂಬ ನವಿರಾದ ಭಾವವು ಜಾತಿ, ಧರ್ಮಗಳನ್ನು ಮೀರಿ, ಜೀವಗಳನ್ನು ಬೆಸೆಯುವ, ಸಮಾಜವನ್ನು ಮಾನವೀಯಗೊಳಿಸುವ ಕೆಲಸವನ್ನು ಮಾಡುತ್ತಿರುತ್ತದೆ.
ಸಮಾಜವು ಅಂತರ್ಜಾತಿ ವಿವಾಹವನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದೆ. ನೈತಿಕವಾಗಿ ಅಧ:ಪತನ ಹೊಂದಿದವರು ಎಂದು ಭಾವಿಸುತ್ತದೆ. ಜಾತಿ ಬಿಟ್ಟವರು, ಮೂಲ ಕೆಟ್ಟವರು ಎಂದು ಹೀಯಾಳಿಸುತ್ತದೆ. ಹಲವಾರು ಶೋಷಣೆ ಸಂಕಷ್ಟ ಅವಮಾನಗಳಿಗೆ ಈಡು ಮಾಡುತ್ತದೆ. ಮಾತು ಮೀರಿ ನಡೆದರು, ಕುಟುಂಬಕ್ಕೆ ಕಳಂಕ ತಂದರೆಂದು ನಿಂದಿಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುತ್ತದೆ. ಮರ್ಯಾದೆಗೇಡು ಹತ್ಯೆಗಳಿಗೆ ಪ್ರೇರೇಪಿಸುತ್ತದೆ.
ಜಾತಿ ಧರ್ಮದ ಚೌಕಟ್ಟುಗಳನ್ನು ಮೀರಿ ಅಂತರ್ಜಾತಿ ವಿವಾಹವಾದವರು ಎಲ್ಲಾ ಕಾಲದಲ್ಲಿಯೂ ಇದ್ದಾರೆ. ಭಾರತೀಯ ಪ್ರಕರಣಗಳಲ್ಲಿ ಮಹಾಕಾವ್ಯಗಳಲ್ಲಿ ಅಂತಹ ವಿವಾಹಗಳ ಹಲವಾರು ನಿದರ್ಶನಗಳಿವೆ. ದೇವಾನುದೇವತೆಗಳು, ಋಷಿಮುನಿಗಳು ಅನ್ಯ ಜಾತಿ ಕುಲದವರನ್ನು ಮದುವೆಯಾದ ಕಥೆಗಳಿವೆ. ಪ್ರೇಮಕ್ಕೆ ಒಳಗಾದ ಮುಡುಕುತೊರೆ ಮಲ್ಲಿಕಾರ್ಜುನ-ಗಂಗೆ, ಬೀರೇಶ್ವರ-ಮಾಳವ್ವ, ಬಿಳಿಗಿರಿ ರಂಗಯ್ಯ-ಕುಸುಮಾಲೆ ಇವರ ವಿವಾಹಗಳು ಅಂತರ್ಜಾತಿ ವಿವಾಹಗಳಲ್ಲದೆ ಮತ್ತೇನು? ಮೇಲುಕೋಟೆ ಚೆಲುವನಾರಾಯಣ-ದೆಹಲಿ ಬಾದಶಹನ ಮಗಳು ಬೀಬಿ ನಾಚ್ಚಿಯಾರ್, ತಿರುಪತಿ ತಿಮ್ಮಪ್ಪನ ಬಲಬದಿಯಲ್ಲಿರುವ ಭೂದೇವಿ ಎಂದು ಕರೆಸಿಕೊಳ್ಳುವ ಬೂಬಮ್ಮ, ಬೂವಿನಂಚಾಲಮ್ಮ ಇವರದ್ದು ಅಂತರ್ಧರ್ಮೀಯ ಮದುವೆ. ನಮ್ಮ ದೇವರುಗಳೇ ಜಾತಿ ಧರ್ಮಗಳನ್ನು ನೋಡದೆ ವಿವಾಹವಾಗಿರುವಾಗ ನರಮನುಷ್ಯರು ಹೊರತಾಗಿರಲು ಹೇಗೆ ಸಾಧ್ಯ?
ಅಂತರ್ಜಾತಿ ವಿವಾಹಗಳು ಜಾತಿ ಪದ್ಧತಿಯಷ್ಟೇ ಪ್ರಾಚೀನವಾಗಿದ್ದು, ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಸೇರಿ ಹೋಗಿರುವುದು ಹೊಸತೇನೂ ಅಲ್ಲ. ಅಮಾನವೀಯವಾದ ಜಾತಿ ಪದ್ಧತಿಯ ಸಾಮಾಜಿಕ ಅಸಮಾನತೆಯ ವಿರುದ್ಧ ಬಹು ಹಿಂದಿನಿಂದಲೇ ಪ್ರತಿಭಟನೆಯ, ಪ್ರತಿರೋಧದ ಧ್ವನಿಗಳು ದಾಖಲಾಗಿವೆ. ಬುದ್ಧ ಗುರುವು ಪ್ರೇಮ ಕಾರುಣ್ಯದಲ್ಲಿ ಎಲ್ಲ ಭಿನ್ನ ಭೇದಗಳನ್ನು ತೊಳೆದರು. 12ನೇ ಶತಮಾನದಲ್ಲಿಯೇ ಬಸವಣ್ಣನವರು ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಿದ್ದರು. ವಿವಿಧ ಸಾಮಾಜಿಕ ಹಿನ್ನೆಲೆಯಿಂದ ಬಂದ ಸಂತರು, ದಾಸರು, ಸಿದ್ದರು, ಶರಣರು, ಸೂಫಿ ಸಂತರು ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿರುವರು.
“ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ?” ಎಂದಿರುವರು ಸರ್ವಜ್ಞ. ‘ನನ್ನೊಳಗ ನಾನು ತಿಳಿದುಕೊಂಡೆ, ನಂಗೆ ಬೇಕಾದ ಗಂಡನ್ನ ಪಡಕೊಂಡೆ’ ಎಂದು ಹಾಡಿರುವರು ತತ್ವಪದಕಾರರು. ‘ಮನುಜ ಜಾತಿ ತಾನೊಂದೆ ವಲಂ’ ಎಂದರು ಪಂಪ. ವಿಶ್ವಮಾನವರಾಗಲು ಕರೆಕೊಟ್ಟವರು ಕುವೆಂಪು. ಸ್ವಾಮಿ ವಿವೇಕಾನಂದರು ಜಾತಿಯೊಳಗಿನ ವಿವಾಹಗಳನ್ನು ಖಂಡಿಸಿದ್ದರು. ಬುದ್ಧ, ಬಸವ, ಫುಲೆ ದಂಪತಿಗಳು, ಪೆರಿಯಾರ್, ನಾರಾಯಣಗುರು, ಅಂಬೇಡ್ಕರ್, ಲೋಹಿಯಾ ಮೊದಲಾದವರು ಅಂತರ್ಜಾತಿ ವಿವಾಹಗಳಿಂದ ಜಾತೀಯತೆಯನ್ನು ತೊಲಗಿಸಬಹುದೆಂದು ಪ್ರತಿಪಾದಿಸಿದರು.

ಮಹಾತ್ಮ ಗಾಂಧೀಜಿಯವರು ‘ಅಂತರ್ಜಾತಿ ವಿವಾಹಗಳಲ್ಲದೆ ಬೇರೆ ವಿವಾಹಗಳಿಗೆ ನಾನು ಹೋಗಲಾರೆ’ ಎಂದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ಅಂತರ್ಜಾತಿ ಸಹಪಂಕ್ತಿ ಭೋಜನ ಮತ್ತು ಅಂತರ್ಜಾತಿ ವಿವಾಹಗಳಿಂದ ಮಾತ್ರ ಜಾವಿನಾಶ ಸಾಧ್ಯ ಎಂದು ಬಲವಾಗಿ ನಂಬಿದ್ದರು. ಜಾತಿ ವಿನಾಶ ಡಾ. ಬಿ.ಆರ್ ಅಂಬೇಡ್ಕರ್ ಅವರ ಬಹುದೊಡ್ಡ ಆಶಯವಾಗಿದ್ದು, ನಮ್ಮ ಸಂವಿಧಾನದ ಪೀಠಿಕೆಯಲ್ಲಿಯೇ ಧರ್ಮನಿರಪೇಕ್ಷತೆ ಮತ್ತು ಸಮತೆಯ ಆಶಯಗಳನ್ನು ಸೇರಿಸಿರುವರು. ಸಂವಿಧಾನದ 14, 15 ಮತ್ತು 16ನೇ ಕಲಂನಲ್ಲಿ ವರ್ಗರಹಿತ, ವರ್ಣರಹಿತ ನವಸಮಾಜ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವರು.
ಇದನ್ನೂ ಓದಿರಿ: ‘ವಸತಿ ಕ್ಷೇತ್ರ’; ಕರ್ನಾಟಕ ರಾಜ್ಯ 50 ವರ್ಷಗಳಲ್ಲಿ ಗುರಿ ತಲುಪಿದ್ದೆಷ್ಟು?
ಲೋಹಿಯಾರವರು ಆಡಳಿತಾತ್ಮಕ ಹುದ್ದೆಗಳಿಗೆ ಹಾಗೂ ಸೇನೆಗೆ ಸಿಬ್ಬಂದಿಯನ್ನು ನೇಮಕ ಮಾಡುವಾಗ ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳ ಜೊತೆಗೆ ಅಂತರ್ಜಾತಿ ವಿವಾಹ ಕೂಡ ಒಂದು ಅರ್ಹತೆ ಎಂದು ಪರಿಗಣಿಸಬೇಕೆಂದು ಸಲಹೆ ನೀಡಿದ್ದರು. ಗೆಜೆಟೆಡ್ ಹುದ್ದೆಗಳಿಗೆ ಮತ್ತು ವಿಧಾನಮಂಡಲ ಪ್ರವೇಶಕ್ಕೆ ಅರ್ಥಾತ್ ಶಾಸಕರಾಗುವವರಿಗೆ ಅಂತರ್ಜಾತೀಯ ವಿವಾಹವನ್ನು ಅರ್ಹತೆಗಳಲ್ಲಿ ಒಂದನ್ನಾಗಿ ನಿಗದಿಪಡಿಸುವಂತೆ 1954ರಷ್ಟು ಹಿಂದೆಯೇ ಚರಣ್ ಸಿಂಗ್ ಅವರು ಪ್ರಧಾನಮಂತ್ರಿ ನೆಹರು ಅವರಿಗೆ ಪತ್ರ ಬರೆದಿದ್ದರು. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಬಂದ ಮೇಲೆ ಈ 50 ವರ್ಷಗಳಲ್ಲಿ ಅಂತರ್ಜಾತಿ ವಿವಾಹಗಳ ಸ್ಥಿತಿಗತಿ ಹೇಗಿದೆ? ಅಂತರ್ಜಾತಿ ವಿವಾಹಿತರ ಪರಿಸ್ಥಿತಿ ಏನು? ಹಿಂದೆ ಹೇಗಿತ್ತು ಈಗ ಹೇಗಿದೆ? ಏನಾಗಬೇಕಿದೆ? ಎಂದು ಒಮ್ಮೆ ಅವಲೋಕಿಸಿದರೆ ಸಿಗುವುದು ಬೆಲ್ಲ-ಬೇವುಗಳ ಸಮ್ಮಿಶ್ರಣ.
1970ರ ದಶಕ ಕರ್ನಾಟಕದಲ್ಲಿ ಅರಿವಿನ ಸ್ಫೋಟವಾದ ಕಾಲ. ರಾಜ್ಯದ ಗ್ರಾಮೀಣ ಪ್ರದೇಶಗಳ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿವಿಧ ಕಾಲೇಜುಗಳಿಗೆ, ವಿಶ್ವವಿದ್ಯಾಲಯಗಳಿಗೆ ಸೇರಿದರು. ಮತ್ತು ಒಂದಿಷ್ಟು ಜನ ಆ ಹೊತ್ತಿಗೆ ವಿಶ್ವವಿದ್ಯಾಲಯಗಳಿಂದ ವಿದ್ಯಾಭ್ಯಾಸವನ್ನು ಪಡೆದು ಹೊರಬಂದಿದ್ದರು. ಅವರಲ್ಲಿ ಕೆಲವರಾದರೂ ವೈಚಾರಿಕತೆಯನ್ನು ಮೈಗೂಡಿಸಿಕೊಂಡು ತಾರತಮ್ಯಗಳ ವಿರುದ್ಧ, ಜಾತಿಪದ್ಧತಿ ವಿರುದ್ಧ ಮಾತನಾಡಲು ಶುರು ಮಾಡಿದ್ದರು. ತಮ್ಮ ಹೆಸರುಗಳಲ್ಲಿದ್ದ ಜಾತಿಸೂತಕ ಗುರುತುಗಳನ್ನು, ಚಿಹ್ನೆಗಳನ್ನು ಬಿಟ್ಟುಕೊಟ್ಟಿದ್ದರು. ಆ ಸಂದರ್ಭದಲ್ಲಿ ಮೈಸೂರು ಈ ಬೆಳವಣಿಗೆಗಳ ಕೇಂದ್ರ ಸ್ಥಾನದಂತಿತ್ತು. ಸಮಾಜವಾದಿ ಯುವಜನಸಭಾ ಸಕ್ರಿಯವಾಗಿತ್ತು. ಎಂ.ಡಿ. ನಂಜುಂಡಸ್ವಾಮಿ, ಕಡಿದಾಳ ಶಾಮಣ್ಣ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಕೆ. ರಾಮದಾಸ್, ಮೊದಲಾದ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ವಕೀಲರು, ವಿದ್ಯಾರ್ಥಿಗಳು ಇದರ ಸದಸ್ಯರಾಗಿದ್ದರು. ಜಾತಿ ತಾರತಮ್ಯವನ್ನು ಒಳಗೊಂಡಂತೆ ಎಲ್ಲ ರೀತಿಯ ತಾರತಮ್ಯಗಳನ್ನು, ಸಾಮಾಜಿಕ ಅಸಮಾನತೆಯನ್ನು, ಮೌಢ್ಯ ಕಂದಾಚಾರಗಳನ್ನು ನಿವಾರಿಸಿ, ಸಮತೆಯ ಆಶಯದಲ್ಲಿ ಸರ್ವರಿಗೂ ಬದುಕು ಸಹ್ಯವಾಗಿರುವಂತಹ ಸಮಾಜ ಕಟ್ಟುವುದು ಇವರ ಉದ್ದೇಶವಾಗಿತ್ತು. ಜಾತಿವಿನಾಶ, ಸಾಮಾಜಿಕ ನ್ಯಾಯ ಇವರ ಧ್ಯೇಯವಾಗಿತ್ತು. “ಪಕ್ಷವಿಲ್ಲ, ಪಂಥವಿಲ್ಲ ಕ್ರಾಂತಿ ನಮ್ಮ ಕಾಯಕ’’ ಇದು ಅವರ ಘೋಷಣೆ ಆಗಿತ್ತು.
1973ರಲ್ಲಿ ಜಾತಿವಿನಾಶ ಸಮ್ಮೇಳನ ಇಲ್ಲಿ ನಡೆಯಿತು. 1974ರಲ್ಲಿ ಕರ್ನಾಟಕದ ಬರಹಗಾರರ ಮತ್ತು ಕಲಾವಿದರ ಒಕ್ಕೂಟ ಅಸ್ತಿತ್ವಕ್ಕೆ ಬಂದಿತು. ಇದಷ್ಟೇ ಅಲ್ಲದೆ ಕರ್ನಾಟಕದಲ್ಲಿ ನಡೆದ, ನಡೆಯುತ್ತಿರುವ ಸಮಾಜವಾದಿ ಚಳವಳಿ ಮಾರ್ಕ್ಸ್‌ವಾದಿ ಚಳವಳಿ, ದಲಿತ ಚಳವಳಿ, ರೈತ ಚಳವಳಿ, ತುರ್ತುಪರಿಸ್ಥಿತಿ ವಿರೋಧಿ ಹೋರಾಟ, ಬೂಸಾ ಚಳವಳಿ, ಜೆಪಿರವರ ನವನಿರ್ಮಾಣ ಚಳವಳಿ, ಬಂಡಾಯ, ಸಮುದಾಯದ ರಂಗಭೂಮಿ ಚಟುವಟಿಕೆಗಳು ಎಲ್ಲವೂ ಸೇರಿ ಕರ್ನಾಟಕದಲ್ಲಿ ಗಟ್ಟಿಯಾದ ಜಾತ್ಯತೀತ ಚಿಂತನೆಗಳನ್ನು ರೂಪಿಸಿದವು. ಕುವೆಂಪುರವರ ಬರಹಗಳು ಅದರಲ್ಲೂ ವಿಶೇಷವಾಗಿ ವೈಚಾರಿಕ ಲೇಖನಗಳು, ಮಂತ್ರ ಮಾಂಗಲ್ಯ ಪರಿಕಲ್ಪನೆಯು ಯುವಜನತೆಯ ಮೇಲೆ ಪ್ರಭಾವ ಬೀರಿದ್ದವು. ಸಂಕ್ರಮಣ, ಶೂದ್ರ, ಪಂಚಮ ತರಹದ ಕಿರು ಪತ್ರಿಕೆಗಳು, ಪ್ರಜಾವಾಣಿ, ಆಂದೋಲನ, ಮುಂಗಾರುಗಳಂತಹ ದಿನಪತ್ರಿಕೆಗಳು, ಜನಪ್ರಗತಿ, ಲಂಕೇಶ್ ಪತ್ರಿಕೆ, ಸುದ್ದಿ ಸಂಗಾತಿಯಂತಹ ವಾರಪತ್ರಿಕೆಗಳು, ಕರ್ನಾಟಕದಲ್ಲಿ ಜಾತ್ಯತೀತ ದೃಷ್ಟಿಕೋನ ಮೂಡಲು ಕಾರಣವಾಗಿದ್ದವು.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಲಿಂಗ ಸಮಾನತೆ; 50 ವರ್ಷಗಳಲ್ಲಿ ಸಾಧಿಸಿದ್ದೇನು? ಸವಾಲುಗಳೇನು?
ಮೇಲ್ಕಾಣಿಸಿದ ಚಳವಳಿಗಳು, ಸಂಘಟನೆಗಳ ಕಾರ್ಯಕರ್ತರು ಅಂತರ್ಜಾತಿ ವಿವಾಹಗಳಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ ಕೊಡುವುದು ತಮ್ಮ ಜವಾಬ್ದಾರಿ ಎಂದು ಅವರು ಭಾವಿಸಿದ್ದರು. ಜಾತ್ಯತೀತತೆಯನ್ನು ಮೌಲ್ಯವಾಗಿ ಒಪ್ಪಿದ್ದರು. ಊರು ತೊರೆದು ಬಂದ ಪ್ರೇಮಿಗಳಿಗೆ ಸರಳ ವಿವಾಹ ಮಾಡಿಸಿ, ತಮ್ಮ ಮನೆಗಳಲ್ಲಿಯೇ ತಾತ್ಕಾಲಿಕವಾಗಿ ಆಸರೆಯನ್ನು ನೀಡುತ್ತಿದ್ದರು. ಕುಟುಂಬದ ಸದಸ್ಯರಂತೆ ಭಾವಿಸಿ ಭಾವನಾತ್ಮಕ ಬೆಂಬಲವನ್ನು ನೀಡುತ್ತಿದ್ದರು. ಕೆ. ರಾಮದಾಸ್ ಮತ್ತು ರೈತ ಸಂಘದ ಅನುಸೂಯಮ್ಮ ಇದಕ್ಕೆ ಉದಾಹರಣೆ.
ಕರ್ನಾಟಕ ರಾಜ್ಯ ರೈತ ಸಂಘವು ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಹಲವಾರು ಅಂತರ್ಜಾತಿ ವಿವಾಹಗಳನ್ನು ಸರಳವಾಗಿ ಕುವೆಂಪು ಪ್ರಣೀತ ಮಂತ್ರಮಾಂಗಲ್ಯದ ಮೂಲಕ ನೆರವೇರಿಸುತ್ತಿತ್ತು. ಕರ್ನಾಟಕದಲ್ಲಿ ಅಂತರ್ಜಾತಿ ವಿವಾಹ, ಅಂತರ್ಧರ್ಮೀಯ ವಿವಾಹವಾದ ಹಲವಾರು ಗಣ್ಯರು, ಸಾಹಿತಿಗಳು, ಹೋರಾಟಗಾರರು ಇದ್ದಾರೆ. ಹಿರಿಯರಿಗೆ ಸ್ಪೂರ್ತಿಯಾಗುವಂತೆ ಬದುಕಿ ತೋರಿಸಿದ್ದಾರೆ. ಉದಾಹರಣೆಗಾಗಿ ಶಿವರಾಮ ಕಾರಂತರು-ಲೀಲಾ, ಅನುಪಮಾ-ನಿರಂಜನ್, ಕಮಲಾ-ಹಂಪನಾ, ಇಂದಿರಾ-ಬಿ.ಕೃಷ್ಣಪ್ಪ, ಯು.ಆರ್. ಅನಂತಮೂರ್ತಿ-ಎಸ್ತರ್, ತೇಜಸ್ವಿ-ರಾಜೇಶ್ವರಿ, ಲಕ್ಷ್ಮಿ-ನಿಜಾಮುದ್ದೀನ್, ನಿರ್ಮಲ-ರಾಮದಾಸ್, ಶಾರದಾ-ಪ್ರೊ. ರವಿವರ್ಮಕುಮಾರ್, ಎಂ.ಡಿ.ನಂಜುಂಡಸ್ವಾಮಿ, ಸವಿತಾ-ಡಿ.ಎಸ್ ನಾಗಭೂಷಣ್, ಸಬಿಹಾ-ಭೂಮಿಗೌಡ ಮೊದಲಾದವರನ್ನು ಉಲ್ಲೇಖಿಸಬಹುದು.
ಕರ್ನಾಟಕದಲ್ಲಿ ಅಂತರ್ಜಾತಿಯ, ಅಂತರ್ಧರ್ಮೀಯ ಮದುವೆ ಆದವರಿಗೆ ಪ್ರೋತ್ಸಾಹ ಮತ್ತು ರಕ್ಷಣೆಯನ್ನು ನೀಡಲೆಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಕೆ. ರಾಮದಾಸ್, ಡಿ.ಎಸ್. ನಾಗಭೂಷಣ್, ಪ್ರೊ. ರವಿವರ್ಮ ಕುಮಾರ್, ಗೋವಿಂದರಾಜು, ದೇವನೂರ ಮಹಾದೇವ, ನಟರಾಜ್ ಹುಳಿಯಾರು ಮೊದಲಾದವರ ಪ್ರಯತ್ನದಿಂದ “ಮಾನವ ಮಂಟಪ ಜಾತ್ಯತೀತ ಒಲವಿನ ವೇದಿಕೆ’’ 1997ರಲ್ಲಿ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಸತ್ಯವತಿಯವರು ಅದರ ಮೊದಲ ಅಧ್ಯಕ್ಷರು. ಅವರ ನಿಧನದ ನಂತರ ಇಂದಿರಾ ಕೃಷ್ಣಪ್ಪರವರು ಅಧ್ಯಕ್ಷರಾಗಿರುವರು. ಮಾನವ ಮಂಟಪದ ಆಶ್ರಯದಲ್ಲಿ ಸಾಕಷ್ಟು ಸರಳ ವಿವಾಹಗಳು ನಡೆದಿವೆ. ಮಾನವ ಮಂಟಪವು ಮೈಸೂರಿನಲ್ಲಿ ಅತಿ ಹೆಚ್ಚು ಅಂತರ್ಜಾತಿ ವಿವಾಹಗಳನ್ನು ಮಾಡಿಸಿದೆ. ಇದರ ದಾವಣಗೆರೆ ಮತ್ತು ತುಮಕೂರು ಶಾಖೆಗಳು ಸಕ್ರಿಯವಾಗಿದ್ದು, ಇಂದಿಗೂ ಅಂತರ್ಜಾತಿ ವಿವಾಹಗಳನ್ನು ಮಾಡಿಸುತ್ತವೆ. ಮಾನವ ಮಂಟಪ ತುಮಕೂರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂತರ್ಜಾತಿ ವಿವಾಹಿತರ ಆರ್ಥಿಕ ಭದ್ರತೆಯ ಸಹಾಯಕ್ಕೆ ಎಂದು ಮಾನವ ಮಂಟಪ ಸಹಕಾರ ಸಂಘವನ್ನು ನಡೆಸುತ್ತಿದೆ. ರೈತಸಂಘ, ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳು, ಕಾರ್ಮಿಕ ಚಳವಳಿಗಳು, ಮೊದಲಾದ ಜೀವಪರ ಸಂಘಟನೆಗಳು ಈಗಲೂ ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ ಮತ್ತು ಪ್ರೋತ್ಸಾಹವನ್ನು ನೀಡುತ್ತಿವೆ. ಪ್ರಸಿದ್ಧ ಕವಿ ಡಾ. ಸಿದ್ದಲಿಂಗಯ್ಯನವರು ತಾವು ಶಾಸಕರಾಗಿದ್ದಾಗ ಸದನದಲ್ಲಿ ಅಂತರ್ಜಾತಿ ವಿವಾಹಿತರ ಸಮಸ್ಯೆ, ಪಡಿಪಾಟಲುಗಳನ್ನು ಬಿಚ್ಚಿಟ್ಟು ಅಂತರ್ಜಾತಿ ವಿವಾಹಿತರಿಗೆ ಉದ್ಯೋಗಗಳನ್ನು ಮೀಸಲಿರಿಸುವಂತೆ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಖಾಸಗಿ ನಿರ್ಣಯವನ್ನು ಮಂಡಿಸಿದ್ದರು.
ಅಂತರ್ಜಾತಿ ವಿವಾಹಿತರ ಮಕ್ಕಳು ಯಾವ ಜಾತಿಗೆ ಸೇರುವರು ಎಂಬುದು ಎಲ್ಲರ ಮುಂದಿರುವ ಪ್ರಶ್ನೆ. ತಂದೆಯ ಜಾತಿಯನ್ನೇ ಮಕ್ಕಳು ಕ್ಲೇಂ ಮಾಡಬಹುದು ಎಂದು ಕಾನೂನು ತಜ್ಞರು ಹೇಳುವರು. ಇದು ಜಾತಿಯ ಮುಂದುವರಿಕೆ ಆಗುವುದಿಲ್ಲವೇ? ಅಂತರ್ಜಾತಿ ವಿವಾಹವಾಗಿ ಜಾತಿಯೊಂದಕ್ಕೆ ಸೇರಿ ಹೋದರೆ ಜಾತಿವಿನಾಶ ಆಗುವುದಾದರೂ ಹೇಗೆ? ಅಂತರ್ಜಾತಿ ವಿವಾಹಿತರನ್ನು ಪ್ರತ್ಯೇಕ ವರ್ಗವಾಗಿ ಗುರುತಿಸಬೇಕು ಎಂಬುದು ಅಂತರ್ಜಾತಿ ವಿವಾಹಿತರ ಬಹುದಿನದ ಬೇಡಿಕೆಯಾಗಿದೆ.
ಇದನ್ನೂ ಓದಿರಿ: ಮಹಿಳೆಯರ ಮೇಲಿನ ಹಿಂಸೆ; ಸಮಾಜಕ್ಕೆ ಕನ್ನಡಿ ಹಿಡಿದ ಭೀಕರ ಸಂಗತಿಗಳಿವು… (ಭಾಗ-1)
ಪ್ರೊ. ರವಿವರ್ಮಕುಮಾರ್ ಅವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದಾಗ ಅಂತರ್ಜಾತಿ ವಿವಾಹಿತರನ್ನು ಸಂವಿಧಾನದ 14ನೇ ಅನುಚ್ಛೇದದ ಅಡಿಯಲ್ಲಿ ಪ್ರತ್ಯೇಕ ವರ್ಗವೆಂದು ಪರಿಗಣಿಸಬೇಕು ಮತ್ತು ರಾಜ್ಯದ ಅಧೀನ ಸೇವೆಗಳಲ್ಲಿ, ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ನೀಡುವುದಕ್ಕೆ ಮತ್ತು ಪ್ರಸ್ತುತ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಉಪಬಂಧಗಳನ್ನು ಕಲ್ಪಿಸಲಾಗಿರುವಂತಹ ಎಲ್ಲ ಕ್ಷೇತ್ರಗಳಲ್ಲಿ ಸಮಾನಾಂತರ ಮೀಸಲಾತಿಯ ರೂಪದಲ್ಲಿ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಈಗ ನೀಡಲಾಗುತ್ತಿರುವ ಮೀಸಲಾತಿಯ ಪ್ರಮಾಣಕ್ಕೆ ಹೆಚ್ಚುವರಿಯಾಗಿ ಶೇಕಡ ಒಂದರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು. ಮೀಸಲಾತಿಯ ಈ ಕಾರ್ಯ ಯೋಜನೆಯನ್ನು ಕಾಲಕಾಲಕ್ಕೆ ಪುನರಾವಲೋಕಿಸುತ್ತಿರಬೇಕು ಹಾಗೂ ಸಮೀಕ್ಷೆಯ ಸೂಚನೆಯ ಪ್ರಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಸರಕಾರಕ್ಕೆ ವರದಿ ಸಲ್ಲಿಸಿರುವರು.

ಕರ್ನಾಟಕ ಸರ್ಕಾರವು ಅಂತರ್ಜಾತಿ ವಿವಾಹ ಯೋಜನೆಯ ಅಡಿ ಪರಿಶಿಷ್ಟ ಜಾತಿಯ ಮಹಿಳೆ ಅಥವಾ ಪುರುಷ ಇತರೆ ಜಾತಿಯವರನ್ನು ಮದುವೆಯಾದರೆ ಪ್ರೋತ್ಸಾಹ ಧನವನ್ನು ಕೊಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಂಕಿ ಅಂಶದ ಪ್ರಕಾರ 2023-24ನೇ ಸಾಲಿನಲ್ಲಿ ಪ್ರೋತ್ಸಾಹ ಧನ ಕೋರಿ 3972 ದಂಪತಿಗಳು ಅರ್ಜಿಯನ್ನು ಸಲ್ಲಿಸಿದ್ದು, ಬೆಂಗಳೂರು ನಗರ ಜಿಲ್ಲೆಯ 720 ಪ್ರಕರಣಗಳು, ಮೈಸೂರು ಜಿಲ್ಲೆಯಲ್ಲಿ 242 ಪ್ರಕರಣಗಳು ಮತ್ತು ಶಿವಮೊಗ್ಗ ಜಿಲ್ಲೆಯಿಂದ 217 ಅರ್ಜಿಗಳು ಬಂದಿದ್ದು, ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನ, ಮೈಸೂರು ಜಿಲ್ಲೆ ಎರಡನೇ ಸ್ಥಾನ, ಶಿವಮೊಗ್ಗ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕುವೆಂಪು ಪ್ರಣಿತ ಮಂತ್ರ ಮಾಂಗಲ್ಯದ ಮೂಲಕ ಹೆಚ್ಚಾಗಿ ವಿವಾಹಗಳು ನಡೆಯುತ್ತಿದ್ದು, ಅವುಗಳಲ್ಲಿ ಅಂತರ್ಜಾತಿ ವಿವಾಹಗಳೇ ಹೆಚ್ಚಾಗಿವೆ.
ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ ಎಂದು ನಮ್ಮ ಸುಪ್ರೀಂ ಕೋರ್ಟ್ ಹಲವಾರು ಸಲ ಪ್ರತಿಪಾದಿಸಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯನ್ನು ನೋಡಿದರೆ ಇಂದಿಗೆ ಜಾತಿ ಕಟ್ಟುಪಾಡುಗಳು ಸಡಿಲವಾಗಿ ಅಂತರ್ಜಾತಿ ವಿವಾಹಿತರ ಹಾದಿ ಸುಗಮವಾಗಬೇಕಿತ್ತು. ಶಿಕ್ಷಣ, ವಿಚಾರ, ತಂತ್ರಜ್ಞಾನ, ಅಭಿವೃದ್ಧಿಯಾದಂತೆ ಜಾತೀಯತೆಯ ಮನೋಭಾವ ಕಡಿಮೆಯಾಗಬೇಕಿತ್ತು. ದುರಂತವೆಂದರೆ ದಿನಗಳೆದಂತೆ ಜಾತೀಯತೆ ಎಲ್ಲ ಕಡೆ ಹೆಚ್ಚು ಹೆಚ್ಚಾಗಿ ಆವರಿಸುತ್ತಿದೆ. ಜಾತಿ ಧರ್ಮಗಳ ನಡುವೆ ಅಸಹನೆ ಹೆಚ್ಚಾಗಿ, ಸೈರಣೆ, ಸಹಿಷ್ಣುತೆ ಕಡಿಮೆಯಾಗುತ್ತಿದೆ. ರಾಜಕೀಯ ಪ್ರಾಧಾನ್ಯತೆಯನ್ನು ಪಡೆಯಲು, ಅಧಿಕಾರವನ್ನು ಹಿಡಿಯಲು, ತಾವು ಹಿಂದುಳಿದ ಜಾತಿಗಳೆಂದು ಬಿಂಬಿಸಿಕೊಳ್ಳುವ ಹಲವಾರು ಜಾತಿಗಳು ಜಾತಿಯ ಸ್ತರ ವಿನ್ಯಾಸದಲ್ಲಿ ಮಾತ್ರ ಉನ್ನತ ಜಾತಿ ಎಂದು ಗುರುತಿಸಿಕೊಳ್ಳಲು ಹಾತೊರೆಯುತ್ತಿವೆ. ಇರುವ ಜಾತಿಗಳಲ್ಲಿಯೇ ಒಳಜಾತಿಗಳು ವಿಂಗಡಣೆಯಾಗಿ, ಸಂಘಟಿತವಾಗಿ ಜಾತಿಗೊಬ್ಬ ಸಾಂಸ್ಕೃತಿಕ ನಾಯಕನನ್ನು, ಜಾತಿಗೊಂದು ಮಠಗಳನ್ನು, ಜಾತಿಗೊಬ್ಬ ಸ್ವಾಮೀಜಿಯನ್ನು ರೂಪಿಸಿಕೊಳ್ಳುತ್ತಿವೆ. ರಾಜಕೀಯ ಶಕ್ತಿಗಾಗಿ ಜಾತಿಯ ಹೆಸರಲ್ಲಿ ಒಗ್ಗಟ್ಟಾಗುತ್ತಿರುವ, ಬಲವಾಗುತ್ತಿರುವ ಜಾತಿ ಸಂಘಟನೆಗಳು ಸಾರ್ವಜನಿಕವಾಗಿ ಬಲಪ್ರದರ್ಶನ ಮಾಡುತ್ತಿವೆ. ಜಾತಿಗಳು ಮತ ಬ್ಯಾಂಕ್‌ಗಳಾಗಿ ಬದಲಾಗುತ್ತಿವೆ. ಕಾಲ ಹಿಮ್ಮುಖವಾಗಿ ಚಲಿಸುತ್ತಿದೆಯಲ್ಲ ಎಂಬ ಆತಂಕವನ್ನು ಹುಟ್ಟಿಸುತ್ತಿವೆ.
70ರಿಂದ 90ರ ದಶಕದವರೆಗೆ ಭೋರ್ಗರೆದು ಸುರಿವ ಮಳೆಯಂತೆ ಸಕ್ರಿಯವಾಗಿದ್ದ ಜಾತಿ ವಿನಾಶ ಮತ್ತು ಸಾಮಾಜಿಕ ನ್ಯಾಯದ ಚಳವಳಿಗಳು 2000ರಿಂದ ಈಚೆಗೆ ಕಾವು ಕಳೆದುಕೊಂಡಂತಾಗಿ ಜನತೆಯ ಅದರಲ್ಲೂ ಯುವಜನತೆಯ ಆದ್ಯತೆಗಳು ಬದಲಾಗಿ ಚಳವಳಿಗಳಿಗೂ, ಜನರಿಗೂ, ಸಮಾಜಕ್ಕೂ ‘ಮಿಸ್ಸಿಂಗ್ ಲಿಂಕ್’ ಆದಂತಾಗಿದೆ. ಜಾತಿ ಪಂಚಾಯತ್‌ಗಳು ಬಲವಾಗುತ್ತಿವೆ. ಜಾತೀಯತೆಯ ಜೊತೆಗೆ ಕೋಮುವಾದವು ಸೇರಿ ಹೊಸಹೊಸ ರೂಪಗಳೊಂದಿಗೆ, ಕೇಡಿನೊಂದಿಗೆ ಎದುರಾಗುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯತೀತವಾಗಿ ವರ್ತಿಸಬೇಕಾದ ಸರ್ಕಾರಗಳೇ ಕೋಮುವಾದವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿವೆ.
ಉನ್ನತ ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾವಲಂಬನೆ, ಅಂಗೈಯಲ್ಲಿರುವ ಮೊಬೈಲು, ಸಾಮಾಜಿಕ ಜಾಲತಾಣಗಳ ಸಂವಹನ ಹೆಣ್ಣು-ಗಂಡು ಪರಸ್ಪರ ಪರಿಚಯವಾಗಲು, ಒಡನಾಡಲು, ಪ್ರೇಮ ಮಾಡಲು, ಸಾಕಷ್ಟು ಅವಕಾಶ ಇರುವುದರಿಂದ ಅಂತರ್ಜಾತಿ-ಅಂತರ್ಧರ್ಮೀಯ ವಿವಾಹಗಳು ಹೆಚ್ಚು ಹೆಚ್ಚಾಗಿ ಘಟಿಸುತ್ತಿವೆ. ಅಷ್ಟೇ ಪ್ರಮಾಣದಲ್ಲಿ ಜಾತಿಯ ಅಬ್ಬರವೂ, ಅಹಂಕಾರವೂ, ಒತ್ತಡವೂ ಹೆಚ್ಚಾಗಿ ಅಮಾನವೀಯವಾಗಿ ಮರ್ಯಾದೆಗೇಡು ಹತ್ಯೆಗಳು, ಎಳೆಯ ವಯಸ್ಸಿನ ಪ್ರೇಮಿಗಳ ಹತ್ಯೆ, ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಸೂಕ್ಷ್ಮವಾಗಿ ಗಮನಿಸಿದರೆ ಮರ್ಯಾದೆಗೇಡು ಹತ್ಯೆಯಲ್ಲಿ ಬಹಳಷ್ಟು ಪ್ರಕರಣಗಳಲ್ಲಿ, ದಂಪತಿಗಳಲ್ಲಿ ಒಬ್ಬರು ಕೆಳಜಾತಿಗೆ ಸೇರಿದವರಾಗಿರುವುದನ್ನು ಕಾಣಬಹುದಾಗಿದೆ. ನಗರಗಳಿಗಿಂತ ಹಳ್ಳಿಗಳಲ್ಲಿ ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗಿ ನಡೆಯುತ್ತಿವೆ. ಮರ್ಯಾದೆಗೇಡು ಹತ್ಯೆಗಳು ಹೆತ್ತವರಿಂದಲೇ, ಕುಟುಂಬದವರಿಂದಲೇ, ಸಂಬಂಧಿಕರಿಂದಲೇ, ಕೆಲವೊಮ್ಮೆ ಕುಟುಂಬದ ಹೊರಗಿನವರಿಂದ, ಜಾತಿಯ ಜನರಿಂದ ಎಲ್ಲ ಕಾನೂನುಗಳನ್ನು ಮೀರಿ ನಡೆಯುತ್ತಿವೆ. ಸಾಮಾನ್ಯವಾಗಿ ಮರ್ಯಾದೆಗೇಡು ಹತ್ಯೆಗೆ ಬಲಿಯಾದವರು 19 ರಿಂದ 28 ವರ್ಷದೊಳಗಿನ ವಯೋಮಾನದವರು.
ಬದುಕಿ ಬಾಳಬೇಕಾದ ಜೀವಗಳು ಹೀಗೆ ಹತ್ಯೆಯಾಗುವುದು ಯಾವುದೇ ಸಮಾಜಕ್ಕಾಗಲಿ ನಾಚಿಕೆಗೇಡಿನ ಸಂಗತಿ.
ಇದನ್ನೂ ಓದಿರಿ: ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)
ಸಮಾಜವನ್ನು ಎದುರಿಸಿ ಅಂತರ್ಜಾತಿ ಮದುವೆಯಾಗುವ ಮೂಲಕ ಅಸ್ಪೃಶ್ಯತೆ, ಲಿಂಗತಾರತಮ್ಯ, ವರದಕ್ಷಿಣೆ ಮೊದಲಾದ ಸಾಮಾಜಿಕ ಸಮಸ್ಯೆಗಳಿಗೆ, ಪರಿಹಾರವಾಗುವ ಸಮಸ್ಯೆಯ ಕನಸಿಗಾಗಿ, ಸಮಸಮಾಜದ ನಿರ್ಮಾಣಕ್ಕಾಗಿ ಅನೇಕ ಅವಹೇಳನ ನಿಂದನೆಗಳಿಗೆ ಒಳಗಾಗುವ ಅಂತರ್ಜಾತಿ ವಿವಾಹಿತರನ್ನು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದವರೆಂದು ಭವ್ಯ ಭಾರತದ ಹೆಮ್ಮೆಯ ಪ್ರಜೆಗಳೆಂದು ಗುರುತಿಸಿ ಗೌರವಿಸಬೇಕಾಗಿದೆ.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಲ್ಲಿಸಿರುವ ವರದಿಯನ್ನು ಸರ್ಕಾರವು ಪರಿಶೀಲಿಸಿ, ಅಂತರ್ಜಾತಿ ವಿವಾಹಿತರನ್ನು ಪ್ರತ್ಯೇಕ ವರ್ಗವೆಂದು ಗುರುತಿಸಿ ಅವರ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ಕ್ಷೇತ್ರಗಳಲ್ಲಿ ಶೇಕಡ ಒಂದರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು. ಲೋಹಿಯಾರವರ ಸಲಹೆಯಂತೆ ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ಇತರ ಅರ್ಹತೆಗಳ ಜೊತೆಗೆ ಅಂತರ್ಜಾತಿ ವಿವಾಹವನ್ನು ಕೂಡ ಒಂದು ಅರ್ಹತೆಯಾಗಿ ಪರಿಗಣಿಸಿ ಉದ್ಯೋಗ ನೀಡುವುದರ ಮೂಲಕ ಸಾಮಾಜಿಕ ಭದ್ರತೆಯನ್ನು ಕಲ್ಪಿಸಬೇಕು. ಸರ್ಕಾರವು ಅಂತರ್ಜಾತಿ ವಿವಾಹಿತರಿಗೊಂದು ನಿಗಮ ಅಥವಾ ಮಂಡಳಿಯನ್ನು ಸ್ಥಾಪಿಸಬೇಕು.
ಪೊಲೀಸ್ ಠಾಣೆಗಳಲ್ಲಿ ಅಂತರ್ಜಾತಿ ವಿವಾಹಗಳ ಪ್ರಕರಣಗಳನ್ನು, ಮರ್ಯಾದೆಗೇಡು ಹತ್ಯೆಗಳ ಪ್ರಕರಣಗಳನ್ನು ನಿರ್ವಹಿಸಲು ಪ್ರತ್ಯೇಕ ಘಟಕಗಳನ್ನು ತೆರೆಯಬೇಕು. ಮರ್ಯಾದೆಗೇಡು ಹತ್ಯೆಯ ಪ್ರಕರಣಗಳನ್ನು ಶೀಘ್ರವಾಗಿ ವಿಚಾರಣೆಯನ್ನು ನಡೆಸಿ, ಇತ್ಯರ್ಥಗೊಳಿಸಿ ಅಪಾದಿತರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ಶಾಲಾ ಕಾಲೇಜು ಪಠ್ಯಪುಸ್ತಕಗಳಲ್ಲಿ ಭಾವೈಕ್ಯತೆ, ಸೌಹಾರ್ದತೆಯನ್ನು ಮೂಡಿಸುವಂತಹ ವೈಜ್ಞಾನಿಕ, ವೈಚಾರಿಕ ಚಿಂತನೆಗಳನ್ನು ಹೊಂದಿರುವ ಪಠ್ಯಗಳನ್ನು ಅಳವಡಿಸಬೇಕು. ಎಲ್ಲಕ್ಕಿಂತಲೂ ಮೊದಲು ಅಂತರ್ಜಾತಿ ವಿವಾಹಿತರು ಎಷ್ಟು ಸಂಖ್ಯೆಯಲ್ಲಿ ಇರುವರು? ಯಾವ ಯಾವ ಜಾತಿಗಳ ನಡುವೆ ವಿವಾಹಗಳು ನಡೆದಿವೆ? ಎಂಬುದರ ವಿವರಣೆ ಅಂಕಿಅಂಶಗಳನ್ನು ಸಂಗ್ರಹಿಸಲು ಸಮಗ್ರ ಸಮೀಕ್ಷೆ ಕೈಗೆತ್ತಿಕೊಳ್ಳಬೇಕು.
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಜಿ. ಮಲ್ಲಿಕಾ ಬಸವರಾಜು
ಮಲ್ಲಿಕಾ ಬಸವರಾಜು ಅವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿಯವರು. ಕಂದಾಯ ಇಲಾಖೆಯಲ್ಲಿ ಪ್ರ.ದ.ಸ. ಆಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು, ತುಮಕೂರಿನಲ್ಲಿ ತಮ್ಮದೇ ಆದ ಚರಕ ಆಸ್ಪತ್ರೆ ತೆರೆದು ಅದರ ಆಡಳಿತಾಧಿಕಾರಿಯಾಗಿರುವರು. ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷರಾಗಿರುವರು. ತುಮಕೂರಿನ ಜೀವಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವರು. ಲೇಖಕಿಯಾಗಿ ಹಲವಾರು ಕಥೆ, ಕವಿತೆ, ಪ್ರಬಂಧಗಳನ್ನು ಬರೆದಿರುವರು.




