ವಿ.ಡಿ. ಸಾವರ್ಕರ್ ‘ವೀರ’ ಎಂಬುದು ನಿಜವೇ?

Date:

ಹಿಂದುತ್ವ ಪ್ರತಿಪಾದಕ ವಿ.ಡಿ. ಸಾವರ್ಕರ್ ಅವರನ್ನು ‘ವೀರ’ ಎಂದು ಬಣ್ಣಿಸುವುದು ವಾಡಿಕೆಯಲ್ಲಿದೆ. ಆದರೆ “ಸಾವರ್ಕರ್ ನಿಜಕ್ಕೂ ‘ವೀರ’ರಾಗಿದ್ದರೆ?” ಎಂದು ಪ್ರಶ್ನೆ ಹಾಕಿಕೊಂಡರೆ ಸಿಗುವ ಉತ್ತರ ಸಮಾಧಾನವೇನನ್ನೂ ತರುವುದಿಲ್ಲ. ಬ್ರಿಟಿಷರಿಗೆ ಸಾವರ್ಕರ್ ಕನಿಷ್ಠ 7 ಸಲ ಕ್ಷಮಾಪಣಾ ಪತ್ರಗಳನ್ನು ಬರೆದರು ಎಂಬುದು ಬಹುಮುಖ್ಯವಾಗಿ ಚರ್ಚೆಯಾಗುತ್ತದೆ. ಅಷ್ಟೇ ಅಲ್ಲ, 3 ಕೊಲೆ ಮತ್ತು ಒಂದು ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸಿದರೂ ಚಾಣಾಕ್ಷತೆಯಿಂದ ತಪ್ಪಿಸಿಕೊಂಡ ವ್ಯಕ್ತಿ ಈ ಸಾವರ್ಕರ್. ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇರದಂತೆ ನೋಡಿಕೊಳ್ಳುವುದು, ಹಿಂಬಾಲಕರನ್ನು ಪ್ರಚೋದಿಸಿ ತನ್ನ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳುವುದು ಸಾವರ್ಕರ್ ಅವರ ತಂತ್ರಗಾರಿಕೆಯಾಗಿತ್ತು. ಇಂಥವರನ್ನು ‘ವೀರ’ ಎಂದು ಕರೆಯುವುದು ಚರಿತ್ರೆಗೆ ಬಗೆಯುವ ದ್ರೋಹವಲ್ಲವೇ?

ಸಾರ್ವಜನಿಕ ಜೀವನದ ಆರಂಭಿಕ ದಿನಗಳಲ್ಲಿ ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಕಾಣಿಸಿಕೊಂಡಿದ್ದರು ಎಂಬುದು ನಿಜ. ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂಬ ಕೃತಿಯನ್ನು ಬರೆದಿದ್ದ ಅವರು, “ದೇಶದಲ್ಲಿ ಹಿಂದೂ ಮುಸ್ಲಿಂ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ” ಬಗ್ಗೆ ಚರ್ಚಿಸಿದ್ದರು. ಆದರೆ ಅಂಡಮಾನ್‌ ಜೈಲುಪಾಲಾದ ಮೇಲೆ ಅವರು ತೀವ್ರತರನಾಗಿ ಬದಲಾಗುತ್ತಾರೆ. ಹಿಂದೂ ಮುಸ್ಲಿಮರನ್ನು ಒಡೆದು ಆಳುವ ಬ್ರಿಟಿಷ್ ನೀತಿಗೆ ವಿಧೇಯರಾಗಿ ನಡೆದುಕೊಳ್ಳಲು ಆರಂಭಿಸುತ್ತಾರೆ. ಹೀಗಾಗಿ “ಬ್ರಿಟಿಷರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡ ವೀರ ಈ ಸಾವರ್ಕರ್” ಎಂದರೆ ಅತಿಶಯೋಕ್ತಿಯಾಗದು.

ಸಾವರ್ಕರ್ ಅವರು ಅಂಡಮಾನ್ ಜೈಲು ಸೇರಿದಾಗ ಅಕ್ಷರಶಃ ಬೆಚ್ಚುತ್ತಾರೆ. ಬ್ರಿಟಿಷರಿಗೆ ಹೆದರಿ, ಕ್ಷಮಾಪಣಾ ಪತ್ರಗಳನ್ನು ಬರೆಯುತ್ತಾ ಕೂರುತ್ತಾರೆ. ‘Gandhi’s Assassin: The Making of Nathuram Godse and His Idea of India’ (ಗಾಂಧೀಜಿಯ ಹಂತಕ – ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ) ಎಂಬ ಕೃತಿ ಬರೆದಿರುವ ಹಿರಿಯ ಪತ್ರಕರ್ತ ಧೀರೇಂದ್ರ ಕೆ. ಝಾ (ಕನ್ನಡಕ್ಕೆ- ಎ.ನಾರಾಯಣ, ಮನೋಜಕುಮಾರ್ ಗುದ್ದಿ) ಅವರು ಐತಿಹಾಸಿಕ ಸಾಕ್ಷ್ಯಗಳನ್ನು ಆಧರಿಸಿ ಸಾವರ್ಕರ್‌ ಅವರ ಬುದ್ಧಿವಂತಿಕೆಯ ನಡೆಗಳನ್ನು ದಾಖಲಿಸಿದ್ದಾರೆ. ಸಾವರ್ಕರ್ ಅವರ ಹೇಡಿತನಕ್ಕೆ ಮತ್ತು ಕುತಂತ್ರಗಳಿಗೆ ಅವರ ತಂತ್ರಗಾರಿಕೆಗಳೇ ಕನ್ನಡಿ ಹಿಡಿಯುತ್ತವೆ. ಕೃತಿಯಲ್ಲಿ ಉಲ್ಲೇಖಿಸಿರುವ ಕೆಲವು ಸಂಗತಿಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಉಲ್ಲೇಖಿಸುವುದು ಸೂಕ್ತ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Ghandis
‘Gandhi’s Assassin: The Making of Nathuram Godse and His Idea of India’ by Dhirendra K Jha

“ಜೈಲು ಸೇರಿ ಎರಡು ತಿಂಗಳು ಕಳೆಯುವುದರಲ್ಲೇ ಸಾವರ್ಕರ್ ಬ್ರಿಟಿಷ್ ಅಧಿಕಾರಿಗಳ ಮುಂದೆ ತಲೆ ಬಾಗಿ ‘ನನ್ನನ್ನು ಇಲ್ಲಿಂದ ಬಿಡುಗಡೆ ಮಾಡಿ, ಇನ್ನೆಂದಿಗೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲಾರೆ’ ಅಂತ ಪರಿಪರಿಯಾಗಿ ಬೇಡಿಕೊಳ್ಳುವ ಒಕ್ಕಣೆಯ ಕ್ಷಮಾದಾನ ಅರ್ಜಿಯನ್ನು ಬ್ರಿಟಿಷ್ ಸರಕಾರಕ್ಕೆ ಬರೆಯತೊಡಗಿದರು. ಸಾವರ್ಕರ್ ಅವರನ್ನು ಜೈಲಿಗೆ ತಂದದ್ದು ಜುಲೈ 4, 1911 ರಂದು. ಆಗಸ್ಟ್ 30, 1911 ರಂದು ಅವರು ತನ್ನ ಮೊದಲ ಕ್ಷಮಾಪಣಾ ಪತ್ರ ಬರೆಯುತ್ತಾರೆ. ಈ ಮೊದಲ ಪತ್ರದಲ್ಲಿ ಅವರು ಏನು ಬರೆದಿದ್ದರು ಎನ್ನುವ ಮಾಹಿತಿ ಸಿಗುವುದಿಲ್ಲ. ಆದರೆ ಈ ಪತ್ರದಲ್ಲಿ ಬರೆದ ವಿಚಾರಗಳನ್ನು ಅವರು ನವೆಂಬರ್ 24, 1913 ರಂದು ಬರೆದ ಇನ್ನೊಂದು ಕ್ಷಮಾದಾನ ಅರ್ಜಿಯಲ್ಲಿ ಪ್ರಸ್ತಾಪಿಸುತ್ತಾರೆ. ಇದು ಅವರು ಬರೆದ ಮೂರನೆಯ ಕ್ಷಮಾದಾನ ಅರ್ಜಿ.

ಅದರ ಒಕ್ಕಣೆ ಹೀಗಿದೆ:

“ನನ್ನನ್ನು ಜೈಲಿನಲ್ಲಿ ಈ ರೀತಿ ಬಂಧಿಸಿಡುವುದರಿಂದ ಯಾರಿಗೂ ಏನೂ ಪ್ರಯೋಜನವಿಲ್ಲ. ಪ್ರಪಂಚದಲ್ಲಿ ಶಕ್ತಿಶಾಲಿಗಳಾದವರು ಮಾತ್ರ ಇತರರನ್ನು ಕ್ಷಮಿಸಬಲ್ಲರು. ಹಾಗಾಗಿ, ಪಶ್ಚಾತ್ತಾಪದಿಂದ ಬೆಂದಿರುವ ನಾನು, ಹೆತ್ತವರಿಗೆ ಸಮನಾದ ಸರಕಾರದ ಬಳಿಯಲ್ಲದೆ ಇನ್ಯಾರ ಬಳಿಗೆ ಹೋಗಲಿ.”

(ಅನುವಾದ- ಎ.ನಾರಾಯಣ, ಮನೋಜಕುಮಾರ್ ಗುದ್ದಿ- ‘ಗಾಂಧೀಜಿಯ ಹಂತಕ’ ಕೃತಿ)

ಇದನ್ನೂ ಓದಿರಿ: ರಾಜಕೀಯ ಅಸ್ತ್ರವಾಗಿ ‘ಅತ್ಯಾಚಾರ’ ಸಮರ್ಥನೆ; ಸಾವರ್ಕರ್‌ ವಿಕೃತ ಸಿದ್ಧಾಂತ ಹೇಳುವುದೇನು?

ಸಾವರ್ಕರ್ ಅವರು ಕಠಿಣ ಶಿಕ್ಷೆಯನ್ನು ಸಾವರ್ಕರ್ ಎದುರಿಸಿದರು ಎಂದು ವೈಭವೀಕರಿಸುವ ಬಲಪಂಥೀಯ ಬರೆಹಗಾರರು, ಹಲವು ಸತ್ಯ ಸಂಗತಿಗಳನ್ನು ಮರೆಮಾಚುತ್ತಾರೆ. ಜೈಲಿನಲ್ಲಿದ್ದ ಸಾವರ್ಕರ್ ಸಹೋದರರು ಬಹುಕಾಲ ಆರಾಮವಾಗಿದ್ದರು ಮತ್ತು ಜೈಲಿನ ಅಧಿಕಾರಿಗಳ ಮನಗೆದ್ದಿದ್ದರು ಎಂಬುದು ಪ್ರತ್ಯಕ್ಷದರ್ಶಿಗಳ ಅಭಿಪ್ರಾಯ. ತೀವ್ರವಾದಿ ರಾಷ್ಟ್ರೀಯ ನಾಯಕ ತ್ರೈಲೋಕ್ಯನಾಥ್ ಚಕ್ರವರ್ತಿಯವರನ್ನು ಬಂಧಿಸಿ, ಸೆಲ್ಯೂಲರ್ ಜೈಲಿಗೆ ಕರೆತಂದಾಗ ಅವರು ಗಮನಿಸಿದಂತೆ, “ಸಾವರ್ಕರ್ ಮತ್ತು ಅವರ ಸಹೋದರ ಗಣೇಶ್ ದಾಮೋದರ್ ಸಾವರ್ಕರ್ (ಬಾಬಾರಾವ್) ಈರ್ವರೂ ಜೈಲಿನ ಅಧಿಕಾರಿಗಳಿಗೆ ಅಚ್ಚುಮೆಚ್ಚಿನವರಾಗಿದ್ದರು… ಒಮ್ಮೆ ಜೈಲುವಾಸಿಗಳೆಲ್ಲ ಸೇರಿ ತಮಗೆ ನೀಡಲಾಗುತ್ತಿದ್ದ ಹಿಂಸೆ ಮತ್ತು ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದರ ವಿರುದ್ಧ ಕೈಗೊಂಡ ಪ್ರತಿಭಟನೆಯಲ್ಲಿ ಸಾವರ್ಕರ್ ಸಹೋದರರು ಭಾಗವಹಿಸಿರಲಿಲ್ಲ. ನಮ್ಮ ಜತೆ ಸೇರಿಕೊಂಡು ಅವರಿಗೆ ಸಿಗುತ್ತಿದ್ದ ವಿಶೇಷ ಸವಲತ್ತುಗಳನ್ನು ಕಳೆದುಕೊಳ್ಳಲು ಅವರೀರ್ವರೂ ತಯಾರಿರಲಿಲ್ಲ” ಎಂದು ಚಕ್ರವರ್ತಿ ಬರೆಯುತ್ತಾರೆ (ಗಾಂಧೀಜಿಯ ಹಂತಕ).

ಸತತ ಕ್ಷಮಾಪಣೆಯ ಫಲವಾಗಿ 1924ರ ಜನವರಿ 5ನೇ ತಾರೀಖಿನಂದು ಬ್ರಿಟಿಷ್ ಸರ್ಕಾರ ಸಾವರ್ಕರ್‌ ಅವರನ್ನು ಬಿಡುಗಡೆ ಮಾಡುವ ಆದೇಶ ಹೊರಡಿಸಿತು. ಐವತ್ತು ವರ್ಷಗಳ ಶಿಕ್ಷೆಯಿಂದ ಪಾರಾದ ಸಾವರ್ಕರ್, ಬ್ರಿಟಿಷರಿಗೆ ಕೃತಜ್ಞತೆ ಅರ್ಪಿಸುವ ಕೆಲಸಗಳನ್ನೇ ಮಾಡಲು ನಿರ್ಧರಿಸಿಯಾಗಿತ್ತು. ‘ಮೈ ಸ್ಟೋರಿ ಆಫ್‌ ಟ್ರಾನ್ಸ್‌ಪೋರ್ಟೇಷನ್ ಫಾರ್ ಲೈಫ್’ ಎಂಬ ಕೃತಿಯನ್ನು 1927ರಲ್ಲಿ ಬರೆದ ಸಾವರ್ಕರ್, “ಅಂಡಮಾನ್ ಜೈಲಿನಲ್ಲಿ ಮುಸ್ಲಿಂ ವಾರ್ಡನ್‌ಗಳು ಹಿಂಸಿಸುತ್ತಿದ್ದರು. ಮತಾಂತರಕ್ಕೆ ಪ್ರೋತ್ಸಾಹಿಸುತ್ತಿದ್ದರು” ಎಂದು ಕಥೆ ಕಟ್ಟುತ್ತಾರೆ. ವಾಸ್ತವದಲ್ಲಿ ಸಾವರ್ಕರ್ ಬಿಟ್ಟರೆ ಅಂಡಮಾನ್ ಜೈಲಿನಲ್ಲಿದ್ದ ಯಾವ ಕೈದಿಯಾಗಲೀ, ರಾಜಕೀಯವಾಗಿ ಬಂಧಿತರಾದವರಾಗಲೀ ಇಂತಹ ಕಥನವನ್ನು ಎಲ್ಲಿಯೂ ದಾಖಲಿಸಿಲ್ಲ! ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಬ್ರಿಟಿಷ್ ತಂತ್ರಗಾರಿಕೆಯ ಭಾಗವಾಗಿ ಮತ್ತು ಬ್ರಿಟಿಷರಿಗೆ ಆಪ್ತವಾಗಿರಲು ತೀವ್ರ ಮತೀಯವಾದವನ್ನು ಸಾವರ್ಕರ್ ಪೋಷಿಸಲು ಮುಂದಾದರೆಂದಷ್ಟೇ ಸ್ಪಷ್ಟವಾಗಿ ಹೇಳಬಹುದು. ಜೈಲಿನಲ್ಲಿದ್ದುಕೊಂಡೇ ಅಂದರೆ, ಬಿಡುಗಡೆಗೆ ಒಂದು ವರ್ಷ ಮೊದಲೇ (1923ರಲ್ಲಿ) ‘Hindutva: Who is a Hindu ?’ ಎಂಬ ಕೃತಿ ಬರೆದಿದ್ದ ಸಾವರ್ಕರ್, ‘ದ್ವಿರಾಷ್ಟ್ರ ಸಿದ್ಧಾಂತ’ವನ್ನು ಪ್ರತಿಪಾದಿಸಿದ್ದರು. ಇದೇ ಪ್ರತಿಪಾದನೆಯನ್ನು 17 ವರ್ಷಗಳ ಬಳಿಕ ಮೊಹಮ್ಮದ್ ಅಲಿ ಜಿನ್ನಾ ಮುಂದಿಟ್ಟರು. ಈ ನಿಟ್ಟಿನಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅವರು ಕಂಡಂತೆ, “ಜಿನ್ನಾ ಮತ್ತು ಸಾವರ್ಕರ್, ಒಂದೇ ನಾಣ್ಯದ ಎರಡು ಮುಖಗಳು” ಎಂಬುದಂತೂ ನಿಜ.

ಅಂದಹಾಗೆ ಸಾವರ್ಕರ್ ಜೈಲು ಸೇರಿದ್ದೇಕೆ?

ಶಿಕ್ಷೆಗಳಿಂದ ತಪ್ಪಿಸಿಕೊಳ್ಳಲೆಂದೇ ಸಾವರ್ಕರ್ ತೆರೆಮರೆಯಲ್ಲಿ ಇರಲು ಯತ್ನಿಸುತ್ತಿದ್ದರು. ಆದರೆ ಅವರು ಸಾರ್ವಜನಿಕ ಬದುಕಿನ ಆರಂಭಿಕ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿಯೇ ಗುರುತಿಸಿಕೊಳ್ಳಲು ಆರಂಭಿಸುತ್ತಾರೆ. ಇಂಗ್ಲೆಂಡ್‌ಗೆ ವ್ಯಾಸಂಗಕ್ಕೆಂದು ತೆರಳಿದಾಗ ‘ಇಂಡಿಯಾ ಹೌಸ್‌’ನಲ್ಲಿ ಕ್ರಾಂತಿಕಾರಿಗಳ ಸಂಪರ್ಕಕ್ಕೆ ಬರುತ್ತಾರೆ. ಬ್ರಿಟಿಷ್ ವಿರೋಧಿ ನಿಲುವನ್ನೂ ತಾಳುತ್ತಾರೆ. ಬಾಂಬ್ ತಯಾರಿಸುವ ಕುರಿತು ಕೈಪಿಡಿಯನ್ನೂ ರೂಪಿಸಿರುತ್ತಾರೆ. ಆದರೆ ಇಷ್ಟೆಲ್ಲ ಮಾಡುತ್ತಿದ್ದ ಸಾವರ್ಕರ್‌ ಎಂದಿಗೂ ತಾನೇ ಮುಂದೆ ನಿಂತು ಕೃತ್ಯಗಳನ್ನು ಎಸಗುತ್ತಿರಲಿಲ್ಲ ಎಂಬುದು ಬ್ರಿಟಿಷ್ ಸೆಕ್ರೆಟರಿ ಆಫ್ ಸ್ಟೇಟ್ ಅವರ ಸಹಾಯಕನಾಗಿದ್ದ ಕರ್ಜನ್ ವೈಲಿಯವರ ಹತ್ಯೆಯಲ್ಲಿ ಬಯಲಾಗುತ್ತದೆ. ಸಾವರ್ಕರ್ ಪ್ರಭಾವಕ್ಕೆ ಒಳಗಾಗಿದ್ದ ಮದನ್ ಲಾಲ್ ದಿಂಗ್ರಾ, 1909ರಲ್ಲಿ ವೈಲಿಯನ್ನು ಹತ್ಯೆ ಮಾಡಿದ್ದನು. ಆದರೆ ಈತನಿಗೆ ಬಂದೂಕು ಕೊಟ್ಟಿದ್ದ ಸಾವರ್ಕರ್, “ಈ ಬಾರಿ ಏನಾದರೂ ವಿಫಲನಾದರೆ ಮತ್ತೆ ನನಗೆ ನಿನ್ನ ಮುಖ ತೋರಿಸಬೇಡ” ಎಂದು ಎಚ್ಚರಿಕೆ ನೀಡಿದ್ದರು.

digra
ಮದನ್ ಲಾಲ್ ದಿಂಗ್ರಾ

ಆಶ್ಚರ್ಯವೆಂದರೆ ಸಾವರ್ಕರ್ ಬದುಕಿದ್ದಾಗಲೇ ಅವರ ಜೀವನಚರಿತ್ರೆಯನ್ನು 1950ರಲ್ಲಿ ಬರೆದ ‘ಧನಂಜಯ್ ಕೀರ್’ ಈ ಪ್ರಸಂಗವನ್ನು ಮೂಲ ಕೃತಿಯಲ್ಲಿ ದಾಖಲಿಸುವುದಿಲ್ಲ. ಸಾವರ್ಕರ್ ಸತ್ತ ಬಳಿಕ 1966ರಲ್ಲಿ ಪ್ರಕಟಿಸಲಾದ ಪರಿಷ್ಕೃತ ಆವೃತ್ತಿಯಲ್ಲಿ ಈ ಸಂಗತಿಯನ್ನು ಕೀರ್ ಸೇರಿಸುತ್ತಾರೆ. ಬಹುಶಃ ಕೆಲವು ಸತ್ಯಗಳನ್ನು ನನ್ನ ಮರಣದ ನಂತರ ಸೇರಿಸುವಂತೆ ಸಾವರ್ಕರ್ ಕೇಳಿಕೊಂಡಿರಬಹುದು ಎಂದು ಇತಿಹಾಸಕಾರರು ಶಂಕಿಸುತ್ತಾರೆ.

ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟದ ವೇಳೆ ಆರ್‌ಎಸ್‌ಎಸ್ ನಾಯಕರು ಮಾಡಿದ್ದೇನು ಗೊತ್ತೆ?

ವೈಲಿ ಹತ್ಯೆ ಪ್ರಕರಣದಲ್ಲಿ ದಿಂಗ್ರಾಗೆ ಗಲ್ಲುಶಿಕ್ಷೆಗೆ ಗುರಿಯಾದರೆ, ಸಾವರ್ಕರ್ ತಪ್ಪಿಸಿಕೊಂಡರು. ಬ್ರಿಟಿಷರಿಗೆ ಸಾವರ್ಕರ್ ಮೇಲೆ ಗುಮಾನಿ ಇತ್ತು. ಹೀಗಾಗಿ ಸಾವರ್ಕರ್ ತಲೆಮರೆಸಿಕೊಂಡು ತಿರುಗುತ್ತಿದ್ದರು. ಅದೇ ಸಂದರ್ಭದಲ್ಲಿ ನಾಸಿಕ್‌ನ ಜಿಲ್ಲಾ ಕಲೆಕ್ಟರ್‌ ಎ.ಎಂ.ಟಿ. ಜಾಕ್ಸನ್ ಅವರ ಕೊಲೆಯಾಗಿತ್ತು. ಅನಂತ ಕನ್ಹರೆ ಎಂಬಾತ ಈ ಕೃತ್ಯ ನಡೆಸಿದ್ದನೆಂದು ಬಂಧಿಸಿ, ಗಲ್ಲಿಗೇರಿಸಲಾಯಿತು. ಕೀರ್ ದಾಖಲಿಸುವಂತೆ, “ಸಾವರ್ಕರ್ ಅವರ ಸಹೋದರ ಗಣೇಶ್ ದಾಮೋದರ್ ಸಾವರ್ಕರ್ (ಬಾಬಾರಾವ್) ಅವರನ್ನು ಗಡೀಪಾರು ಮಾಡಿದ ಸೇಡು ತೀರಿಸಿಕೊಳ್ಳಲು ಜಾಕ್ಸನ್ ಅವರನ್ನು ಕೊಲೆ ಮಾಡಲಾಗಿತ್ತು”. ಬಾಬೂರಾವ್ ಬ್ರಿಟಿಷ್ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕಾರಣ, ಆತನನ್ನು ಬಂಧಿಸಿ ಅಂಡಮಾನ್ ಜೈಲಿಗೆ ಹಾಕಲಾಗಿತ್ತು. ಬಂಧನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಾಕ್ಸನ್‌ನನ್ನು ಹತ್ಯೆ ಮಾಡಲು, ಇಂಗ್ಲೆಂಡ್‌ನಿಂದ ಬಂದೂಕನ್ನು ಸಾವರ್ಕರ್ ಸರಬರಾಜು ಮಾಡಿದ್ದು ತನಿಖೆಯಲ್ಲಿ ಪತ್ತೆಯಾಗಿತ್ತು. ತಲೆಮರೆಸಿಕೊಂಡಿದ್ದ ಅವರು ಅಂತಿಮವಾಗಿ ಸಿಲುಕಿ, ಜೈಲುಶಿಕ್ಷೆಗೆ ಒಳಗಾಗುತ್ತಾರೆ. ಆನಂತರ ಇತಿಹಾಸದುದ್ದಕ್ಕೂ ನಾವು ಕಾಣುವುದು- ಸಾವರ್ಕರ್ ಅವರ ಪುಕ್ಕಲುತನ ಮತ್ತು ಬ್ರಿಟಿಷರಿಗೆ ತೋರಿದ ಭಟ್ಟಂಗಿತನ.

ಎರಡು ಹತ್ಯೆಗಳಲ್ಲಿ ಸಾವರ್ಕರ್ ಪಾತ್ರ ಸ್ಪಷ್ಟವಾಗಿ ಕಂಡಿತ್ತು. ಇವೆರಡರ ಹಿಂದೆ ಸ್ವಾತಂತ್ರ್ಯ ಹೋರಾಟದ ಸ್ಪರ್ಶವೂ ಇದ್ದಂತೆ ಕಾಣುತ್ತದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿ ಅಂದಿನ ಕಾಲಮಾನದಲ್ಲಿ ಅಂಡಮಾನ್ ಜೈಲಿಗೆ ದೂಡಲ್ಪಟ್ಟ ನೂರಾರು ಹೋರಾಟಗಾರರಿದ್ದರು. ಆದರೆ ಅವರ್ಯಾರು ಸಾವರ್ಕರ್ ರೀತಿ ಹೆದರಿಕೊಂಡು ಕ್ಷಮಾಪಣಾ ಪತ್ರಗಳನ್ನು ಬರೆಯಲಿಲ್ಲ ಎಂಬುದು ಗಮನಾರ್ಹ. ತಾನು ಕೃತ್ಯಗಳನ್ನು ನೇರವಾಗಿ ಎಸಗದಿದ್ದರೂ ತನ್ನ ಅನುಯಾಯಿಗಳನ್ನು ತರಬೇತುಗೊಳಿಸಿ ತಪ್ಪಿಸಿಕೊಳ್ಳುವುದು ಸಾವರ್ಕರ್ ಚಾಣಾಕ್ಷತೆಯಾಗಿತ್ತು. ದಿಂಗ್ರಾ ಪ್ರಕರಣದಲ್ಲೇ ಇದು ಸ್ಪಷ್ಟವಾಗಿತ್ತು. ಇನ್ನು ಸಾವರ್ಕರ್ ಸಂಪರ್ಕಕ್ಕೆ ಬಂದ ನಾಥೂರಾಮ್ ಗೋಡ್ಸೆ, ಸಂಪೂರ್ಣವಾಗಿ ಮೆದುಳುತೊಳೆದುಕೊಂಡು ಸ್ವಾತಂತ್ರ್ಯ ಹೋರಾಟದಿಂದ ವಿಮುಖನಾಗಿ ಕೋಮುವಾದಿಯಾಗಿ ಬದಲಾದ. ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರ ಕಂಡುಬಂದರೂ ಸಾಕ್ಷ್ಯಾಧಾರಗಳ ಕೊರತೆ ಉಂಟಾಯಿತು.

ಮೂರನೇ ಪ್ರಕರಣ ಮತ್ತು ಸಾವರ್ಕರ್ ಪಾತ್ರ

ಷರತ್ತುಬದ್ಧವಾಗಿ ಜೈಲಿನಿಂದ ಹೊರಬಂದ ಬಳಿಕವೂ ಸಾವರ್ಕರ್ ಮತ್ತೊಂದು ಕೊಲೆಗೆ ಪ್ರಚೋದಿಸಿದ್ದರು ಎಂದು ಕೀರ್ ಬರೆದ ಪರಿಷ್ಕೃತ ಜೀವನಚರಿತ್ರೆಯಲ್ಲೇ ದಾಖಲಾಗಿದೆ.

ಇದನ್ನೂ ಓದಿರಿ: ಬಾಲಗಂಗಾಧರ ತಿಲಕರ ‘ಭಗವದ್ಗೀತಾವಾದ’ ಬಗ್ಗುಬಡಿದ ಬಾಬಾಸಾಹೇಬರು

1931ರ ಜುಲೈ 22ರಂದು ಪುಣೆಯ ಫರ್ಗುಸನ್ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಂಬೆಯ ಹಂಗಾಮಿ ಗವರ್ನರ್ ಸರ್ ಅರ್ನೆಸ್ಟ್ ಹಾಟ್ಸನ್ ಅವರ ಮೇಲೆ ವಿ.ಬಿ. ಗೋಗೇಟ್ ಎರಡು ಗುಂಡು ಹಾರಿಸಿದ್ದನು. ಆದರೆ ಹಾಟ್ಸನ್ ಪವಾಡ ಸದೃಶವಾಗಿ ಬಚಾವಾಗಿದ್ದರು. ಈ ಪ್ರಕರಣದಲ್ಲಿ ಸಾವರ್ಕರ್ ಪಾತ್ರವನ್ನು ಯಾರೂ ಅನುಮಾನಿಸಲಿಲ್ಲ. ಆದರೆ 1966ರ ‘ವೀರ್ ಸಾವರ್ಕರ್’ ಪರಿಷ್ಕೃತ ಆವೃತ್ತಿಯಲ್ಲಿ ಕೀರ್‌ ಈ ವಿಚಾರವನ್ನೂ ಸೇರಿಸಿದರು: ‘ಗೋಗಟೆ ಒಬ್ಬ ಕಟ್ಟಾ ಸಾವರ್ಕರ್ ವಾದಿಯಾಗಿದ್ದರು. ಕೃತ್ಯ ಎಸಗುವ ಕೆಲವು ದಿನಗಳ ಮೊದಲು ಸಾವರ್ಕರ್ ಅವರನ್ನು ಭೇಟಿಯಾಗಿದ್ದರು’. ಹಾಟ್ಸನ್ ಅವರನ್ನು ಹತ್ಯೆ ಮಾಡಲು ಸಾವರ್ಕರ್‌ ಪ್ರಚೋದಿಸಿದ್ದರೆಂದು ಕೀರ್ ದಾಖಲಿಸಿರುವುದಾಗಿ ಇತಿಹಾಸ ಬರೆಹಗಾರರು ಅಭಿಪ್ರಾಯಪಡುತ್ತಾರೆ.

ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರ

1948ರ ಜನವರಿ 30ರಂದು ಮಹಾತ್ಮ ಗಾಂಧಿಯವರ ಹತ್ಯೆ ಮಾಡಲಾಯಿತು. ಗಾಂಧಿ ಹತ್ಯೆ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳಿದ್ದರು- ನಾಥೂರಾಮ್ ಗೋಡ್ಸೆ, ಗೋಪಾಲ್ ಗೋಡ್ಸೆ, ಅವರ ಸಹೋದರ ನಾರಾಯಣ್ ಡಿ ಆಪ್ಟೆ, ವಿಷ್ಣು ಕರ್ಕರೆ, ಮದನ್ ಲಾಲ್ ಪಹ್ವಾ, ಶಂಕರ್ ಕಿಸ್ತಯ್ಯ, ವಿ.ಡಿ. ಸಾವರ್ಕರ್ ಮತ್ತು ದತ್ತಾರಾಯ ಪರ್ಚುರೆ. ಫೆಬ್ರವರಿ 5 ರಂದು ಸಾವರ್ಕರ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಅವರು ಗೋಡ್ಸೆಯೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು ಇತಿಹಾಸದಿಂದ ಕಂಡುಬರುತ್ತದೆ. ಆದರೆ ಸಾವರ್ಕರ್‌ ಬಹಳ ಬುದ್ಧಿವಂತಿಕೆಯಿಂದ ಈ ಪ್ರಕರಣದಲ್ಲಿ ಬಚಾವಾದರು.  ಗಾಂಧಿ ಹತ್ಯೆ ಮತ್ತು ಸಾವರ್ಕರ್ ಪಾತ್ರದ ಬಗ್ಗೆ ಮತ್ತಷ್ಟು ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ವಿವರವಾಗಿ ನೋಡೋಣ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...