18 ವರ್ಷಗಳ ಬಳಿಕ ಕಪ್ ಗೆದ್ದು ಬೀಗಿತು. ಆದರೆ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತ ಸಂಭವಿಸಿದ್ದರಿಂದ ಸಂಭ್ರಮವು ಸೂತಕದ ಮನೆಯಾಗಿ ಬದಲಾಗಿದೆ. ಸರ್ಕಾರದ ವೈಫಲ್ಯದಿಂದಾಗಿ 11 ಜನ ಪ್ರಾಣ ಕಳೆದುಕೊಳ್ಳಬೇಕಾದ ದುಸ್ಥಿತಿ ನಮ್ಮದಾಗಿದೆ. ದುರಂತದ ಹೊತ್ತಿನಲ್ಲಿ ಆರ್‌ಸಿಬಿ ಸೃಷ್ಟಿಕರ್ತ ವಿಜಯ್ ಮಲ್ಯ ಮಾತ್ರ 4.3 ಗಂಟೆ ದೀರ್ಘದ ಪಾಡ್‌ಕಾಸ್ಟ್ ಮೂಲಕ ಸಿಂಪಥಿ ಗಳಿಸುತ್ತಿದ್ದಾರೆ.
9 ವರ್ಷಗಳ ನಂತರ ವಿಜಯ್ ಮಲ್ಯ ತನ್ನ ಸೈಡಿನ ಕತೆಯನ್ನು ಹೇಳಿದ್ದಾರೆ. ರಾಜ್ ಶಮಾನಿ ನಡೆಸಿದ ಈ ಸಂದರ್ಶನವನ್ನು 2 ಕೋಟಿಗೂ ಅಧಿಕ ಜನರು ವೀಕ್ಷಿಸಿದರೆ ಇನ್ಸ್‌ಸ್ಟಾಗ್ರಾಮ್ ರೀಲ್ಸ್, ಟ್ವಿಟರ್ ವಿಡಿಯೋಗಳಲ್ಲಿ ಅವು ವೈರಲ್ ಆಗಿವೆ. ಆ ಮೂಲಕ ಅವರ ಇಮೇಜ್ ಬಿಲ್ಡಿಂಗ್‍ಗೆ ಒತ್ತು ಕೊಡಲಾಗಿದೆ. “ಅಯ್ಯೋ ಪಾಪ ವಿಜಯ್ ಮಲ್ಯ ಅವರದ್ದು ಏನು ತಪ್ಪಿಲ್ಲ. 6 ಸಾವಿರ ಕೋಟಿ ಸಾಲ ಮಾಡಿದ್ದರು, 14 ಸಾವಿರ ಕೋಟಿ ವಾಪಸ್ ಕಟ್ಟಿದ್ದಾರೆ. ಈ ದೇಶದ ಎಷ್ಟೋ ಉದ್ಯಮಿಗಳು ಅವರಿಗಿಂತ ಹೆಚ್ಚು ಸಾಲ ಮಾಡಿದ್ದರೂ ಅವರನ್ನು ಏನು ಮಾಡಲಾಗುತ್ತಿಲ್ಲ. ಆದರೆ ವಿಜಯ್ ಮಲ್ಯರನ್ನು ಮಾತ್ರ ಕಳ್ಳನ ರೀತಿ ನೋಡಲಾಗುತ್ತಿದೆ” ಎಂಬ ಸಿಂಪಥಿ ಬರುವಂತೆ ಬರಹಗಳು ವಿಡಿಯೋಗಳನ್ನು ಮಾಡಲಾಗುತ್ತಿದೆ. ಆ ಮೂಲಕ ಅವರ ಪರವಾಗಿ ಸದಭಿಪ್ರಾಯ ಉತ್ಪತ್ತಿ ಮಾಡುವ ಕೆಲಸ ಮಾಡಲಾಗುತ್ತಿದೆ.
ಹೌದು, ಬ್ಯಾಂಕುಗಳಿಗೆ 8,191 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದರು ವಿಜಯ್ ಮಲ್ಯ. ಭೂಷಣ್ ಸ್ಟೀಲ್, ಎಸ್ಸಾರ್ ಸ್ಟೀಲ್, ಭೂಷಣ್ ಪವರ್ ಅಂಡ್ ಸ್ಟೀಲ್, ಅಲೋಕ್ ಇಂಡಸ್ಟ್ರೀಸ್ ಮುಂತಾದ ಕಂಪನಿಗಳು ಮಾಡಿದ ಕೆಲವು ದೊಡ್ಡ ಡೀಫಾಲ್ಟ್‌ಗಳಿಗೆ ಹೋಲಿಸಿದರೆ ಇದು ಗಮನಾರ್ಹವಾಗಿ ಕಡಿಮೆ ಮೊತ್ತವಾಗಿತ್ತು. ಅಷ್ಟೇ ಏಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,000 ಕೋಟಿ ರೂ. ನಷ್ಟ ಉಂಟುಮಾಡಿದ ನೀರವ್ ಮೋದಿಯ ವಂಚನೆ ಕೂಡ 8,191 ಕೋಟಿ ರೂ.ಗಳಿಗಿಂತ ದೊಡ್ಡದಾಗಿತ್ತು. ಆದರೂ ಅದು ಸ್ವತಃ ಸಣ್ಣ ಮೊತ್ತವಾಗಿರಲಿಲ್ಲ ಎಂಬುದನ್ನು ವಿಜಯ್ ಮಲ್ಯರವರು ನೆನಪಿಡಬೇಕು.
ತನ್ನ ಸಾಮ್ರಾಜ್ಯ ಕುಸಿಯಲು ಕಾರಣವೇನು ಎಂಬ ಪ್ರಶ್ನೆಗೆ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ಉತ್ತರಿಸುತ್ತಾ, “ಮೈ ಬ್ಯಾಡ್ ಲಕ್, ಆ ಸಮಯದಲ್ಲಿ ನನ್ನ ಅದೃಷ್ಟ ಚೆನ್ನಾಗಿರಲಿಲ್ಲ” ಎಂದು ಉತ್ತರ ಹೇಳಿದ್ದಾರಷ್ಟೆ. ಆದರೆ ಅದು ಯಾವ ಸಮಯ? ಆ ಸಮಯದಲ್ಲಿ ಅವರು ಕೈಗೊಂಡ ನಿರ್ಧಾರಗಳೇನು? ಅವು ಅವರನ್ನು ಮಾತ್ರವಲ್ಲದೇ ಅವರನ್ನು ನಂಬಿ ಸಾಲ ಕೊಟ್ಟ ಬ್ಯಾಂಕ್‍ಗಳು ಮತ್ತು ಅವರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ಯಾವ ಮಟ್ಟದ ನಷ್ಟಕ್ಕೆ ದೂಡಿದವು ಎಂಬುದರ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ. ರಾಜ್ ಶಮಾನಿ ಕೂಡ ಕೆಲ ಮುಖ್ಯ ಪ್ರಶ್ನೆಗಳನ್ನು ಕೇಳಲಿಲ್ಲ. ಆ ಪ್ರಶ್ನೆಗಳನ್ನು ನಾವು ಕೇಳಬೇಕಿದೆ. ಅದಕ್ಕೂ ಮುನ್ನ ವಿಜಯ್ ಮಲ್ಯರ ಇತಿಹಾಸ ಸ್ವಲ್ಪ ತಿಳಿದುಕೊಳ್ಳೋಣ.
ವಿಠ್ಠಲ್ ಮಲ್ಯ ಮತ್ತು ಲಲಿತಾ ರಾಮಯ್ಯನವರ ಪುತ್ರ ವಿಜಯ್ ಮಲ್ಯ. ತಂದೆ ಆ ಕಾಲದಲ್ಲಿಯೇ ದೊಡ್ಡ ಲಿಕ್ಕರ್ ಬ್ಯಾರನ್ ಆಗಿದ್ದು, ಯುನೈಟೆಡ್ ಬ್ರೀವರೀಸ್ ಲಿಮಿಟೆಡ್‍ನ ಚೇರ್‍ಮನ್ ಆಗಿದ್ದರು. 1983ರಲ್ಲಿ ಅವರು ತೀರಿಹೋದ ನಂತರ ಆ ಇಡೀ ವ್ಯವಹಾರ ವಿಜಯ್ ಮಲ್ಯ ಕೈಸೇರಿತು. ಜಾಗತೀಕರಣ ನೀತಿಗಳು ಅವರ ಮಾರುಕಟ್ಟೆಯನ್ನು ವಿಸ್ತರಿಸಲು ಸಹಾಯಕವಾಗಿದ್ದವು. ವರ್ಷಕ್ಕೆ 2 ಕೋಟಿಗೂ ಅಧಿಕ ಯುಬಿ, ಕಿಂಗ್ ಫಿಶರ್ ಕೇಸ್‌ಗಳನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ತನ್ನ ವ್ಯವಹಾರದ ಜೊತೆಗೆ ರಾಜಕಾರಣಿಗಳ ಸಖ್ಯ ಬೆಳೆಸಿದ್ದ ವಿಜಯ್ ಮಲ್ಯ 2002ರಲ್ಲಿ ವಿಪರೀತ ದುಡ್ಡು ಖರ್ಚು ಮಾಡಿ ಶಾಸಕರ ಮನವೊಲಿಸಿ ಕರ್ನಾಟಕದಿಂದ ರಾಜ್ಯ ಸಭಾ ಸದಸ್ಯರೂ ಆದರು.
ಇದನ್ನೂ ಓದಿರಿ: ಮಣಿಪುರದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿರುವ ‘ಆರಂಬೈ ತೆಂಗೋಲ್’ ಹುಟ್ಟಿದ್ದು ಹೇಗೆ?
ವೈಭವೋಪೇತ ಜೀವನ ಮಾಡುತ್ತಾ, ಎಂಪಿ ಕೂಡ ಆಗಿದ್ದ ವಿಜಯ್ ಮಲ್ಯ ಮೇ 2005ರಲ್ಲಿ ಐಷರಾಮಿ ಕಿಂಗ್ ಫಿಶರ್ ಏರ್‌ಲೈನ್ಸ್ ಆರಂಭಿಸಿದರು. ಅವರ ಏರಿಳಿತ ಶುರುವಾಗಿದ್ದು ಅಲ್ಲಿಂದಲೇ ಅನಿಸುತ್ತದೆ. ಬೇರೆ ಏರ್‌ಲೈನ್ಸ್‌ಗಳೆಲ್ಲ ಕಾಸ್ಟ್ ಕಟಿಂಗ್ ಬಗ್ಗೆ ಗಮನ ಕೊಡುತ್ತಿದ್ದರೆ ಮಲ್ಯ ಮಾತ್ರ ವಿಲಾಸಿ ಪ್ರಯಾಣಕ್ಕೆ ಆದ್ಯತೆ ನೀಡಿದ್ದರು. ಹಾಗಾಗಿಯೇ ಡೊಮೆಸ್ಟಿಕ್ ಏರ್‌ಲೈನ್ಸ್‌ನಲ್ಲಿ ಕಿಂಗ್ ಫಿಶರ್ ಸಾಕಷ್ಟು ಜನಪ್ರಿಯವಾಯಿತು. 2008ರ ವೇಳೆಗೆ ಅಂದರೆ ಕೇವಲ ಮೂರೇ ವರ್ಷದಲ್ಲಿ ದೇಶದೊಳಗಿನ ಏರ್ ಟ್ರಾವೆಲ್ ಶೇ. 25% ಭಾಗ ಕಿಂಗ್ ಫಿಶರ್ ಮೂಲಕವೇ ನಡೆಯುತ್ತಿತ್ತು.

ಯಶಸ್ಸಿನ ಕಿಕ್‌ನಲ್ಲಿದ್ದ ಮಲ್ಯ ಎಡವಿದ್ದು ಅಲ್ಲಿಯೇ. ಏಕೆಂದರೆ ಅವರು ಆಗಲೇ ಇಂಟರ್‌ನ್ಯಾಷನಲ್ ಟ್ರಾವೆಲ್‌ಗೆ ಮುಂದಾದರು. ಆದರೆ ಅದಕ್ಕೆ ಬೇಕಾದ ಅರ್ಹತೆ ಕಿಂಗ್ ಫಿಶರ್ ಕಂಪನಿಗೆ ಇರಲಿಲ್ಲ. ಏಕೆಂದರೆ ಯಾವುದೇ ಏರ್‌ಲೈನ್ಸ್ ಅಂತಾರಾಷ್ಟ್ರೀಯ ಕಾರ್ಯಾಚರಣೆ ಮಾಡಬೇಕಾದರೆ ಕಂಪನಿ ಆರಂಭವಾಗಿ ಕನಿಷ್ಟ 5 ವರ್ಷವಾಗಿರಬೇಕು, ಅಂದರೆ ಅನುಭವವಿರಬೇಕು ಮತ್ತು ಕನಿಷ್ಟ 20 ವಿಮಾನಗಳ ಫ್ಲೀಟ್ ಅನ್ನು ಹೊಂದಿರಬೇಕು ಎಂಬ ನಿಯಮವಿತ್ತು. ಮಲ್ಯ ಅಂತಾರಾಷ್ಟ್ರೀಯ ಕಾರ್ಯಾಚರಣೆ ಮಾಡಲು 2010ರವರೆಗೂ ಕಾಯಬೇಕಾಗಿತ್ತು. ಏಕೆಂದರೆ ಕಿಂಗ್ ಫಿಶರ್ ಏರ್‌ಲೈನ್ಸ್ ಶುರುವಾಗಿದ್ದು 2005ರಲ್ಲಿ.
2005ರಿಂದಲೇ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ಜೆಟ್ ಏರ್ವೇಸ್ ಶುರು ಮಾಡಿತ್ತು. ಅದಕ್ಕೆ ಅನುಕೂಲವಾಗಲು ನನಗೆ ಅನುಮತಿ ನೀಡುತ್ತಿಲ್ಲ ಎಂದು ಮಲ್ಯ ಕಿಡಿಕಾರುತ್ತಿದ್ದರು. ಆದರೆ ಮಲ್ಯ ಸುಮ್ಮನಿರುವ ಜಾಯಮಾನದವರಾಗಿರಲಿಲ್ಲ. ಅದಕ್ಕಾಗಿ ಅಡ್ಡದಾರಿ ಹುಡುಕುತ್ತಲೇ ಇದ್ದರು. ಬ್ಯಾಂಕುಗಳಲ್ಲಿ ಸಾಲದ ಮೇಲೆ ಸಾಲ ಮಾಡಿದರು. ಕೊನೆಗೆ ಜೂನ್ 2007ರಲ್ಲಿ, ಮಲ್ಯ ಅವರ ಕಂಪನಿಗಳಲ್ಲಿ ಒಂದಾದ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ ಲಿಮಿಟೆಡ್, ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾದ ಏರ್ ಡೆಕ್ಕನ್ ಅನ್ನು ನಡೆಸುತ್ತಿದ್ದ ಡೆಕ್ಕನ್ ಏವಿಯೇಷನ್‌ನಲ್ಲಿ 26% ಸ್ಟೇಕ್ ಅನ್ನು ಖರೀದಿಸಿತು. ಏರ್ ಡೆಕ್ಕನ್ 2003 ರಲ್ಲಿ ಹಾರಾಟ ನಡೆಸಲು ಪ್ರಾರಂಭಿಸಿತ್ತು ಮತ್ತು ಅಂತಾರಾಷ್ಟ್ರೀಯವಾಗಿ ಹಾರಾಟ ನಡೆಸಲು ಕೇವಲ ಒಂದು ವರ್ಷದ ದೂರದಲ್ಲಿತ್ತು.
ಆನಂತರ ತಮ್ಮ ಕನಸನ್ನು 2008ರಲ್ಲಿ ಮಲ್ಯ ನೆರವೇರಿಸಿಕೊಂಡರು. 2008ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಿಂದ ಲಂಡನ್‌ಗೆ ಮೊದಲ ಕಿಂಗ್ ಫಿಶರ್ ವಿಮಾನ ಹಾರಾಟ ನಡೆಸಿತು. ಅಂತಾರಾಷ್ಟ್ರೀಯ ಕಾರ್ಯಾಚರಣೆ ಮೂಲಕ ಮಲ್ಯ ಅಂದುಕೊಂಡಿದ್ದನ್ನು ಸಾಧಿಸಿದರು. ಆದರೆ ಅವರೇ ಹೇಳಿದಂತೆ ಅದೃಷ್ಟ ಅವರ ವಿರುದ್ಧವಿತ್ತು. 2007-2008ರ ಸಮಯ ಗ್ಲೋಬಲ್ ರಿಷೆಸನ್ ಆವರಿಸಿತ್ತು. ಅಂದರೆ ಪ್ರಪಂಚದಾದ್ಯಂತ ಆರ್ಥಿಕ ಹಿಂಜರಿತ ಸಂಭವಿಸಿತು. ಅದು ಅಂತಾರಾಷ್ಟ್ರೀಯ ಪ್ರಯಾಣವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಿತು. ಇದು ಮಲ್ಯರಿಗೆ ದೊಡ್ಡ ಹಿನ್ನಡೆ ಉಂಟು ಮಾಡಿತು. ಹಾಗಾಗಿ 2008ರ ಅಕ್ಟೋಬರ್‌ನಲ್ಲಿ ಅಂದರೆ ಅಂತಾರಾಷ್ಟ್ರೀಯ ಕಾರ್ಯಾಚರಣೆ ಶುರು ಮಾಡಿದ ಒಂದೇ ತಿಂಗಳಲ್ಲಿ ಇನ್ನು ವಿಸ್ತರಣೆ ಮಾಡಬಾರದೆಂದು ಕಿಂಗ್ ಫಿಶರ್ ನಿರ್ಧರಿಸಿತು ಮಾತ್ರವಲ್ಲ, ಅದಕ್ಕಾಗಿಯೇ ಖರೀದಿಸಿದ್ದ ಐದು ಏರ್‌ಬಸ್ A340 ವಿಮಾನಗಳಲ್ಲಿ ಮೂರನ್ನು ಮಾರಾಟ ಮಾಡಬೇಕಾಯಿತು.
ಸಮಸ್ಯೆ ಅದಷ್ಟೇ ಆಗಿರಲಿಲ್ಲ. ಅದರೊಟ್ಟಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ವಿಪರೀತ ಏರಿಕೆ ಕಂಡಿತು. ಅದರ ಪರಿಣಾಮವಾಗಿ 2009ರಲ್ಲಿ ಅವರ ಡೊಮೆಸ್ಟಿಕ್ ಹಾರಾಟ ಸಹ ನಷ್ಟಕ್ಕೆ ಸಿಲುಕಿತು. ಇದೇ ಸಂದರ್ಭದಲ್ಲಿ ಬ್ಯಾಂಕುಗಳು ಲೋನ್ ರೀಸ್ಟ್ರಕ್ಟರ್ ಮಾಡಿದವು. ವಿಜಯ್ ಮಲ್ಯ ಪರ್ಸನಲ್ ಗ್ಯಾರಂಟಿದಾರರಾದರು. ಇಷ್ಟೆಲ್ಲ ಘಟಿಸಿದರೂ ಹಠಕ್ಕೆ ಬಿದ್ದು ಏರ್‌ಲೈನ್ಸ್ ನಡೆಸುವ ನಿರ್ಧಾರ ತೆಗೆದುಕೊಂಡರು.
ಇದನ್ನೂ ಓದಿರಿ: ಅಮೆರಿಕ, ಫ್ರಾನ್ಸ್‌ಗೂ ಸಡ್ಡು ಹೊಡೆಯುತ್ತಿರುವ ಇಬ್ರಾಹಿಂ ಥೋರೆ!
ಒಂದೆಡೆ ಇತರ ಕಂಪನಿಗಳು ಚೀಪ್ ಫ್ಲೈಟ್‌ಗಳನ್ನು ಒದಗಿಸುತ್ತಿದ್ದರೆ ಕಿಂಗ್ ಫಿಶರ್ ಐಷಾರಾಮಿ ದುಬಾರಿ ಫ್ಲೈಟ್ ಆಗಿತ್ತು. ಹಾಗಾಗಿ ಜನ ಬಾರದೇ ನಷ್ಟಕ್ಕೆ ಸಿಲುಕಿತು. ಇಂಧನ ಬೆಲೆ ಏರಿಕೆ ಅವರನ್ನು ಕಂಗಾಲಾಗಿಸಿತು. ಇದೆಲ್ಲದರ ಪರಿಣಾಮ 2012ರಲ್ಲಿ ಅಂತಿಮವಾಗಿ ಕಿಂಗ್ ಫಿಶರ್ ತನ್ನ ಹಾರಾಟವನ್ನು ನಿಲ್ಲಿಸಿತು. ಪರಿಣಾಮವಾಗಿ ಅಲ್ಲಿದ್ದ ಉದ್ಯೋಗಿಗಳು ಬೀದಿಗೆ ಬಿದ್ದರು. ಅವರಿಗೆ ಸಂಬಳ ಕೊಡಲಾಗಲಿಲ್ಲ.
ಈಗ ಮಲ್ಯರವರಿಗೆ ನಮ್ಮ ಪ್ರಶ್ನೆಗಳು:
ಪ್ರಶ್ನೆ 1: ಇದನ್ನೇ ವಿಜಯ್ ಮಲ್ಯ ಬ್ಯಾಡ್‌ಲಕ್ ಅನ್ನುತ್ತಾರೆ. ಹೌದು ಆ ಸಂದರ್ಭ ಸಕರಾತ್ಮಕವಾಗಿರಲಿಲ್ಲ ನಿಜ. ಆದರೆ 2007ರಿಂದಲೇ ಪ್ರಪಂಚದಲ್ಲಿ ಆರ್ಥಿಕ ಹಿಂಜರಿತದ ಸೂಚನೆಗಳಿದ್ದರೂ ಕಿಂಗ್ ಫಿಶರ್ ಅಂತಾರಾಷ್ಟ್ರೀಯ ಕಾರ್ಯಾಚರಣೆ ಮಾಡಲು ಹಠಕ್ಕೆ ಬಿದ್ದವರು ಯಾರು? ಜನರೋ ಅಥವಾ ವಿಜಯ್ ಮಲ್ಯರೋ? ಒಬ್ಬ ಉದ್ಯಮಿಗೆ ಇಷ್ಟೆಲ್ಲ ಮೂನ್ಸೂಚನೆ ಇದ್ದರೂ ತಪ್ಪು ನಿರ್ಧಾರ ತೆಗೆದುಕೊಳ್ಳಬಹುದೇ?
ಪ್ರಶ್ನೆ 2: ಏರ್‌ಲೈನ್ಸ್ ನಡೆಸುವುದು ರಿಸ್ಕ್‌ನ ಕೆಲಸ. ಆದರೂ ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ್ದು ಏತಕ್ಕೆ? ಸರಿ, ತಮಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಅನುಭವವಿಲ್ಲ. ಹಾಗಾಗಿ 5 ವರ್ಷ ಕಾಯಿರಿ ಎಂಬ ನಿಯಮವನ್ನು ಮುರಿದಿದ್ದು ಏಕೆ? 2010ರವರೆಗೂ ಕಾದಿದ್ದರೆ ಆರ್ಥಿಕ ಹಿಂಜರಿತದ ಪರಿಸ್ಥಿತಿ ಅರಿತು ವಿಜಯ್ ಮಲ್ಯ ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುತ್ತಿರಲಿಲ್ಲವೇನೋ? ಆದರೆ ಅವರು ಕಾಯಲಿಲ್ಲ, ಬದಲಿಗೆ 2008ರಲ್ಲಿಯೇ ಆರಂಭಿಸಿ ಕೈ ಸುಟ್ಟುಕೊಂಡರು. ಇದಕ್ಕೆ ಕಾರಣರಾರು?
ಪ್ರಶ್ನೆ 3: ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾಗಿದ್ದ ಏರ್ ಡೆಕ್ಕನ್ ಅನ್ನು ಖರೀದಿಸಿದ್ದು ಏಕೆ? ಈಗ ನೀವು ಐಷರಾಮಿ ವಿಮಾನ ಕಂಪನಿಯೋ ಅಥವಾ ಕಡಿಮೆ ವೆಚ್ಚದ ಕಂಪನಿಯೋ? ಜನರನ್ನು ಗೊಂದಲಕ್ಕೆ ತಳ್ಳಿದ್ದು ಏಕೆ? ಇದರಿಂದ ಖಂಡಿತವಾಗಿ ನಿಮ್ಮ ವ್ಯವಹಾರ ಲಾಸ್ ಆಗುತ್ತದೆಯೇ ಹೊರತು ಮೇಲೆ ಬರುವುದಿಲ್ಲ.

ಒಂದು ಕಡೆ ನಿಮ್ಮ ವಿಮಾನಯಾನ ಕಂಪನಿಗಳು ನಷ್ಟದಲ್ಲಿವೆ. ಅದೇ ಸಂದರ್ಭದಲ್ಲಿ ನೀವು ಡಚ್ ಫಾರ್ಮುಲ ರೇಸ್ ಕಂಪನಿಯ ಫಾರ್ಮುಲಾ ಒನ್‌ನ ಫೋರ್ಸ್ ಇಂಡಿಯಾ ಎಂ ಕಂಪನಿಯನ್ನು ಕೊಂಡುಕೊಳ್ಳುತ್ತೀರಿ, ಅದು 110 ಮಿಲಿಯನ್ ಡಾಲರ್ ಕೊಟ್ಟು! ಆರ್‌ಸಿಬಿ ಕ್ರಿಕೆಟ್ ತಂಡವನ್ನು 111 ಮಿಲಿಯನ್ ಡಾಲರ್ ಕೊಟ್ಟು ಕೊಂಡುಕೊಳ್ಳುತ್ತೀರಿ.. ಮೋಹನ್ ಬಗಾನ್ ಮತ್ತು ಪೂರ್ವ ಬಂಗಾಳದ ಹಳೆಯ ಕೋಲ್ಕತ್ತಾ ಫುಟ್ಬಾಲ್ ಕ್ಲಬ್‌ಗಳಲ್ಲಿ ಶೇಕಡಾ 50 ರಷ್ಟು ಪಾಲನ್ನು ಖರೀದಿಸಿತ್ತೀರಿ.. ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತಿದೆ? ವಿಮಾನಯಾನ ಕಂಪನಿಗೆ ಬ್ಯಾಂಕುಗಳಿಂದ ಪಡೆದ ಸಾಲವನ್ನು ಇಲ್ಲಿ ದುರುಪಯೋಗ ಮಾಡಿದ್ದೀರಿ ಎಂಬ ಆರೋಪವಿದೆ. ಇದಕ್ಕೆ ಏನು ಹೇಳುತ್ತೀರಿ?
ವಿಮಾನಯಾನ ಕಂಪನಿ ನಡೆಸುವುದು ಕಷ್ಟಕರ ಮತ್ತು ಹೆಚ್ಚಿನ ಸಮಯ ಕೇಳುತ್ತದೆ. ಆದರೆ ನೀವು ನಿಮ್ಮ ಕಂಪನಿ ನಷ್ಟದಲ್ಲಿದ್ದಾಗ ಕ್ರಿಕೆಟ್ ನೋಡುತ್ತಾ ಕುಳಿತಿರಲ್ಲವೇ? ಕುದುರೆ ರೇಸ್ ಆಡುತ್ತಿದ್ದೀರಲ್ಲವೇ? ಕಿಂಗ್ ಫಿಶರ್ ಕ್ಯಾಲೆಂಡರ್ ಹೆಸರಿನಲ್ಲಿ ಬಿಕಿನಿಯಲ್ಲಿದ್ದ ನಟಿಯರೊಂದಿಗೆ ಫೋಟೋಶೂಟ್ ನಡೆಸುತ್ತಿದ್ದೀರಲ್ಲವೇ.. ಹೀಗಿದ್ದಾಗ ನಿಮ್ಮ ಬಿಸಿನೆಸ್ ಉದ್ದಾರವಾಗುವುದಾದರೂ ಹೇಗೆ?
ಇದು ನಿಮ್ಮ ದುರಾದೃಷ್ಟವನ್ನಷ್ಟೇ ತೋರುವುದಿಲ್ಲ. ಬಿಸಿನೆಸ್ ಬಗೆಗಿನ ನಿಮ್ಮ ಬದ್ದತೆಯನ್ನು ಸಹ ತೋರಿಸುತ್ತದೆ. ಅದಕ್ಕೆ ಶ್ರದ್ಧೆ ಬೇಕು. ಅದೇ ನಿಮ್ಮಲ್ಲಿ ಮಿಸ್ ಆಯಿತು ನೋಡಿ. ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಒಬ್ಬ ಉತ್ತಮ ಬಿಸಿನೆಸ್‌ಮ್ಯಾನ್‌ನ ಯಶಸ್ಸನ್ನು ತೋರಿಸುತ್ತದೆ. ನೀವು ಎಡವಿದ್ದು ಅಲ್ಲೇ! ಈಗ ನಿಮ್ಮ ತಪ್ಪಿಗೆ ಇನ್ಯಾರನ್ನೊ ಹೊಣೆ ಮಾಡಬೇಡಿ ಮಿಸ್ಟರ್ ವಿಜಯ್ ಮಲ್ಯರವರೇ!
ಇದನ್ನೂ ಓದಿರಿ: ಭೂಮಿಗೆ ಮಾಡುವ ಗಾಯ ಗುಣಪಡಿಸಲು ಸಾಧ್ಯವೇ? (ಭಾಗ-1)
ಮಾತನ್ನು ಮುಂದುವರಿಸುತ್ತಾ “ನೀವು, ನನ್ನನು ಬೇಕಾದರೆ ದೇಶ ಬಿಟ್ಟು ಓಡಿ ಹೋದವನು ಎಂದು ಕರೆಯಿರಿ. ಆದರೆ ಕಳ್ಳ ಎಂದು ಕರೆಯುವುದು ಏಕೆ? ಇಲ್ಲಿ ಕಳ್ಳತನ ಎಲ್ಲಿ ಬಂತು?” ಎಂದು ಪ್ರಶ್ನಿಸಿದ್ದಾರೆ. ಸಾಲ ಎಲ್ಲಾ ತೀರಿಸಿದ್ದಾರೆ, ಹಾಗೆ ಕರೆಯಬಾರದು ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಇ.ಡಿ ಪ್ರಕಾರ, ಮಲ್ಯರವರು ಬ್ಯಾಂಕುಗಳಿಂದ ಸಾಲ ಪಡೆದ 3,432 ಕೋಟಿ ರೂ.ಗಳನ್ನು ನಿಯಮ ಬಾಹಿರವಾಗಿ ವಿಮಾನಗಳ ಬಾಡಿಗೆಗೆ, ತಂಡಗಳ ಖರೀದಿಗೆ ದುರ್ಬಳಕೆ ಮಾಡಿದ್ದಾರೆ. ಇದಲ್ಲದೆ, ಮಲ್ಯ ಸ್ವಂತಕ್ಕಾಗಿ ಬಳಸುತ್ತಿದ್ದ ಕಾರ್ಪೊರೇಟ್ ಜೆಟ್‌ನ ಬಾಡಿಗೆ ಪಾವತಿಸಲು 45.42 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಕಿಂಗ್ ಫಿಶರ್ ಪ್ರಯಾಣಿಕರಿಂದ ಸಂಗ್ರಹಿಸಿದ 100 ಕೋಟಿ ರೂ.ಗಳಷ್ಟು ಸೇವಾ ತೆರಿಗೆಯನ್ನು ತೆರಿಗೆ ಇಲಾಖೆಗೆ ಪಾವತಿಸಿಲ್ಲ. ಕಡೆಗೆ ಜುಲೈ 2018 ರಲ್ಲಿ, ಇಲಾಖೆಯು ಮಲ್ಯ ಒಡೆತನದ ಐಷಾರಾಮಿ ಜೆಟ್ ಅನ್ನು ಮಾರಾಟ ಮಾಡಿ ಒಂದಷ್ಟು ಭಾಗವನ್ನು ತುಂಬಿಕೊಂಡಿದೆ. ಇದಕ್ಕೆ ಕಳ್ಳತನ ಅನ್ನದೇ ಮತ್ತೇನು ಅನ್ನಬೇಕು ಮಲ್ಯರವರೇ?
ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಬಡ್ಡಿ ಎಲ್ಲಾ ಸೇರಿ 18,000 ಕೋಟಿ ರೂಗಳಾಗಿವೆ. ಸದ್ಯ ಮಲ್ಯ ಅವರ ಆಸ್ತಿಗಳನ್ನು ಮಾರಿ 11000 ಕೋಟಿ ರೂಗಳನ್ನು ಮರುಪಾವತಿ ಮಾಡಲಾಗಿದೆ. ಇನ್ನೂ 7,000 ಕೋಟಿ ಬಾಕಿ ಇದೆ ಎಂದು ವರದಿಗಳು ಹೇಳುತ್ತವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 14,000 ಕೋಟಿ ವಸೂಲಿ ಮಾಡಲಾಗಿದೆ ಎಂದಿದ್ದಾರೆ. ಆದರೆ ಈ ವಿಚಾರದಲ್ಲಿ ಗೊಂದಲವಿದ್ದು ಇನ್ನೂ ಬಾಕಿ ಇರುವುದಂತೂ ಸತ್ಯ.
ಈಗ ಕಡೆಯದಾಗಿ ಹೇಳಬೇಕಾದ ವಿಷಯವೊಂದಿದೆ. 2015ರಲ್ಲಿ ವಿಜಯ್ ಮಲ್ಯರಿಗೆ 60 ವರ್ಷ ತುಂಬಿತು. ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಕಿಂಗ್‌ಫಿಷರ್ ವಿಲ್ಲಾದಲ್ಲಿ ಅದ್ದೂರಿ ಬರ್ತ್‌ಡೇ ಆಚರಿಸಿಕೊಂಡರು. ಸೋನು ನಿಗಮ್ ಸಂಗೀತ, ಅಂತಾರಾಷ್ಟ್ರೀಯ ಪಾಪ್ ಐಕಾನ್ ಎನ್ರಿಕ್ ಇಗ್ಲೇಷಿಯಸ್ ತಮ್ಮ 2014 ರ ಚಾರ್ಟ್‌ಬಸ್ಟರ್ ‘ಬೈಲಾಂಡೋ’ (ನೃತ್ಯ) ಪ್ರದರ್ಶನ ಎಲ್ಲಾ ನಡೆಯಿತು. ಆದರೆ ಅದೇ ಸಂದರ್ಭದಲ್ಲಿ ಕಿಂಗ್ ಫಿಶರ್ ಕಂಪನಿಯಲ್ಲಿ ದುಡಿದು ಸಂಬಳ ಸಿಗದೇ ಪರಿತಪಿಸುತ್ತಿದ್ದ ನೌಕರರು ಮಲ್ಯ ಬಗ್ಗೆ ಏನು ಅಂದುಕೊಂಡಿರಬಹುದು ಎಂದು ಎಂದಾದರೂ ಅವರು ಯೋಚಿಸಿದ್ದಾರೆಯೇ? ಪಾಡ್‌ಕಾಸ್ಟ್‌ನಲ್ಲಿ ಕೂತು ಒಂದು ಸಾರಿ ಕೇಳಿಬಿಟ್ಟರೆ ಮುಗಿದು ಹೋಯಿತೆ?
ಮಲ್ಯ ಎಷ್ಟು ಬೇಕಾದರೂ ಐಷರಾಮಿಯಾಗಿ ಬದುಕಲಿ. ಯಾರಿಗೂ ತೊಂದರೆಯಿಲ್ಲ ಆದರೆ ಬ್ಯಾಂಕುಗಳಿಗೆ ಮೋಸ ಮಾಡಿ (ಅದು ನಮ್ಮ ಹಣ) ನಮ್ಮ ಎದುರೇ ದವಲತ್ತು ತೋರಿದರೆ ತಡೆದುಕೊಳ್ಳಬಹುದೇ? ನೌಕರರಿಗೆ ಕೋಟಿಗಟ್ಟಲೇ ಸಂಬಳ ಕೊಡದೆ ಸಾವಿರಾರು ಕೋಟಿ ಕೊಟ್ಟು ತಂಡ ಖರೀದಿಸಿದರೆ, ಅಲ್ಲಿ ಕುಣಿಯುವ ಚಿಯರ್ ಗರ್ಲ್‌ಗಳಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಿದರೆ ಏನು ಅನಿಸುತ್ತದೆ?
ಇದನ್ನೂ ಓದಿರಿ: ಭೂಮಿಗೆ ಮಾಡುವ ಗಾಯ ಗುಣಪಡಿಸಲು ಸಾಧ್ಯವೇ? (ಭಾಗ-2)
ಮಲ್ಯ ಮಾತ್ರ ಏಕೆ ಮಾತನಾಡುತ್ತೀರಿ, ಅದಾನಿ, ಅನಿಲ್ ಅಂಬಾನಿ, ದೇಶ ಬಿಟ್ಟು ಓಡಿ ಹೋದ ನೀರವ್ ಮೋದಿ, ಲಿಲಿತ್ ಮೋದಿ ಇತ್ಯಾದಿ ಮೋದಿಗಳ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂಬ ಪ್ರಶ್ನೆ ಖಂಡಿತ ನೀವು ಕೇಳಬಹುದು. ಪ್ರಶ್ನಿಸಲೇಬೇಕು ಕೂಡ. ನಮ್ಮ ದೇಶದಲ್ಲಿ ದುಡಿದು ಬದುಕುವುದಕ್ಕಾಗಿ ಯೆಲ್ಲೋ ಬೋರ್ಡ್ ಕಾರನ್ನೋ, ಲಗೇಜ್ ಆಟೋವನ್ನು ತೆಗೆದುಕೊಂಡು ಸರಿಯಾಗಿ ದುಡಿಮೆಯಾಗದೇ ಒಂದೆರೆಡು ತಿಂಗಳು ಇಎಂಐ ಕಟ್ಟದಿದ್ದರೇ ಅವರ ಗಾಡಿಯನ್ನು ಸೀಜ್ ಮಾಡುವುದು ಮಾಮೂಲಿಯಾಗಿದೆ. ಸಾವಿರಾರು ಜನರು ಈ ಸಂಕಷ್ಟ ಅನುಭವಿಸಿದ್ದಾರೆ. ಅವರು ಕ್ಷಮೆ ಕೇಳಿಬಿಟ್ಟರೆ ಬಿಟ್ಟು ಬಿಡುತ್ತಾರೆಯೇ? ರೈತ ಸಾಲ ಕಟ್ಟದಿದ್ದರೆ ಜಪ್ತಿ ಮಾಡುತ್ತಾರೆ. ಸಾಲ ಕಟ್ಟದಿದ್ದರೆ ಮಹಿಳೆಯರನ್ನು ಎಷ್ಟೆಲ್ಲ ಕೆಟ್ಟದಾಗಿ ಮೈಕ್ರೋ ಫೈನಾನ್ಸ್‌ನವರು ನಡೆಸಿಕೊಂಡಿದ್ದಾರೆ ಎಂದು ನಾವು ನೋಡಿದ್ದೇವೆ. ಆದರೆ ದೊಡ್ಡವರು ಎನಿಸಿಕೊಂಡವರು ಮಾಡುವ ಈ ಹುಚ್ಚಾಂಪಟ್ಟೆ ಆವಾಂತರಗಳನ್ನು ಏಕೆ ಸಹಿಸಿಕೊಳ್ಳಬೇಕು?

ಮುತ್ತುರಾಜು
ಪತ್ರಕರ್ತ, ಲೇಖಕ




