ಇಸ್ರೇಲ್ ಸಾರಿದ ಕೃತ್ರಿಮ ಕದನವಿರಾಮ-ಪ್ಯಾಲೆಸ್ತೀನಿಯರ ಅಗೋಚರ ನರಮೇಧ ನಿತ್ಯ ನಿರಂತರ!

Date:

ಕದನವಿರಾಮ ಎಂಬುದು ಕದನಕ್ಕೆ ವಿರಾಮವೇ ವಿನಾ ಶಾಂತಿಯಲ್ಲ. ಆದರೆ ಈಗಾಗಲೆ ಇಡೀ ಪ್ಯಾಲೆಸ್ತೀನನ್ನು ಧ್ವಂಸಗೊಳಿಸಿ ಮಸಣವಾಗಿಸಿರುವ ಇಸ್ರೇಲ್ ದುರಾಕ್ರಮಣದ ವಿರಾಮ ಶಾಂತಿ ಕುರಿತ ಆಶಾವಾದಕ್ಕೆ ಮೊದಲ ಮೆಟ್ಟಿಲು. ಇಸ್ರೇಲ್ ಮತ್ತು ಹಮಾಸ್ ಪರಸ್ಪರ ಹಗೆಯನ್ನು ತತ್ಕಾಲಕ್ಕೆ ಸ್ಥಗಿತಗೊಳಿಸಲು ಒಪ್ಪಿವೆ. ತಿಂಗಳುಗಟ್ಟಲೆ ನಡೆದ ಸಂಧಾನ ಕದನವಿರಾಮದ ಗೆರೆ ಎಳೆದಿದೆ.

ಅತ್ಯಂತ ಬರ್ಬರ ಮತ್ತು ಭಯಾನಕ ನರಮೇಧಕ್ಕೆ ಬಲಿಯಾಗಿರುವ ಪ್ಯಾಲೆಸ್ತೀನೀಯರಿಗೆ ಈ ಕದನವಿರಾಮ ಸ್ವಾಗತಾರ್ಹ ಪರಿಹಾರ. ಹದಿನೈದು ತಿಂಗಳ ಕಾಲ ನಿತ್ಯ ಬಾಂಬು ದಾಳಿ, ಹತ್ಯೆಗಳು, ಬೆದರಿಕೆಗಳು, ಸೆರೆವಾಸ, ಉಪವಾಸ, ಕಾಯಿಲೆ-ಕಸಾಲೆಗಳು, ಕನಿಷ್ಠ 45 ಸಾವಿರ ಪ್ಯಾಲೆಸ್ತೀನಿಯರನ್ನು ಕೊಲ್ಲಲಾಗಿದೆ. ದೊಡ್ಡ ಸಂಖ್ಯೆಯ ಜನ ಅಂಗಹೀನರಾಗಿದ್ದಾರೆ. ಅಪಾರ ಕಷ್ಟನಷ್ಟಗಳ ಪರಂಪರೆಯನ್ನೇ ಎದುರಿಸಿದೆ ಈ ಜನಸಮುದಾಯ. ಪ್ಯಾಲೆಸ್ತೀನಿನ ಹೊರಗಿರುವ ಜಗತ್ತು ಈ ಜನಸಮುದಾಯ ಎದುರಿಸಿದ ನರಕವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಇನ್ನು ಅದನ್ನು ಎದುರಿಸಿ ಬದುಕಿ ಉಳಿಯುವ ಮಾತಂತೂ ದೂರ ದೂರವೇ.

ಹೊರಗಿನವರು ನಿಮ್ಮ ದೇಶಕ್ಕೆ ನುಗ್ಗಿ, ತಮ್ಮ ಸಾಮ್ರಾಜ್ಯ ಕಟ್ಟಿಕೊಂಡು ನಿಮ್ಮ ಮೇಲೆ ದಬ್ಬಾಳಿಕೆ ನಡೆಸಿ ನಿಮ್ಮದೇ ದೇಶದ ಕಾಲುಭಾಗಕ್ಕೆ ನಿಮ್ಮನ್ನು ಒತ್ತರಿಸಿ ಅಲ್ಲಿ ಬಯಲು ಬಂದೀಖಾನೆಯ ಕೈದಿಗಳಂತೆ ನಡೆಸಿಕೊಳ್ಳುತ್ತ ಅನುದಿನವೂ ಹತ್ಯೆ, ಅತ್ಯಾಚಾರ, ದೌರ್ಜನ್ಯಗಳಿಗೆ ಈಡು ಮಾಡಿದರೆ, ಕಡೆಗೆ ಸ್ಥಳೀಯ ಜನಾಂಗವನ್ನೇ ಅಳಿಸಿ ಹಾಕಿ, ಆ ದೇಶ ಅವರಿಗೇ ಸೇರಿದ್ದೆಂದು ಚರಿತ್ರೆ ಬರೆದುಕೊಂಡರೆ ನಿಮಗೆ ಏನನಿಸಬಹುದು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತೊರೆಯ ಮೇಲ್ಭಾಗದ ದಡದಲ್ಲಿ ನಿಂತ ತೋಳ, ಅದೇ ತೊರೆಯ ಕೆಳಭಾಗದಲ್ಲಿ ನೀರು ಕುಡಿಯುತ್ತಿರುವ ಕುರಿ ಮರಿಯನ್ನು ‘ನಾನು ಕುಡಿಯುವ ನೀರನ್ನು ಎಂಜಲು ಮಾಡುತ್ತಿರುವ ನಿನ್ನನ್ನು ತಿನ್ನದೆ ಬಿಡಲಾರೆ’ ಎಂದು ಕೆಕ್ಕರಿಸುವ ಕುಯುಕ್ತಿ ಕುತಂತ್ರವಾದರೂ ಏನು?

ಸುಮಾರು ಆರು ದಶಕಗಳಿಂದ  ಘೋರ ಕ್ರೂರ ಇಸ್ರೇಲಿ ಆಕ್ರಮಣಕ್ಕೆ ಈಡಾಗಿ ತಮ್ಮ ತಾಯ್ನೆಲದಲ್ಲೇ ತಬ್ಬಲಿಗಳಾಗಿ ನೀರು ನೆರಳು ಅನ್ನ ಸ್ವಾತ್ಯಂತ್ರ್ಯಕ್ಕೆ ಹಂಬಲಿಸುತ್ತಿರುವ ಪ್ಯಾಲೆಸ್ತೀನೀಯರ ಕರುಣಾಜನಕ ಕತೆಯೂ ಇದೇ ಆಗಿದೆ.

ಇದನ್ನೂ ಓದಿರಿ: ಸಿನೆಮಾಗಳು ‘ಮುಸ್ಲಿಂ ಭಯ ಮತ್ತು ದ್ವೇಷ’ ಬಿತ್ತಿದ್ದು ಹೇಗೆ?

ಇಸ್ರೇಲ್ ಮತ್ತು ಗಾಝಾ ಪರಸ್ಪರರ ವಿರುದ್ಧ ಯುದ್ಧ ಸಾರಿರುವ ಎರಡು ದೇಶಗಳು ಎಂದು ಭಾವಿಸಿರುವವರ ಸಂಖ್ಯೆ ಬಹುದೊಡ್ಡದು. ವಾಸ್ತವದಲ್ಲಿ ಗಾಝಾ ಎಂಬ ಭೂಭಾಗ ಇಸ್ರೇಲಿಗಳ ಸಂಪೂರ್ಣ ನಿಯಂತ್ರಣದಲ್ಲಿರುವ ಪ್ಯಾಲೆಸ್ತೀನಿ ಭೂಭಾಗ. ಆರ್ಯಶ್ರೇಷ್ಠ ಜನಾಂಗ ರೂಪಿಸುವ ಹಿಟ್ಲರನ ಹಂತಕ ಗೀಳಿಗೆ ಕೋಟಿ ಸಂಖ್ಯೆಯಲ್ಲಿ ತುತ್ತಾದವರು ಯಹೂದಿಗಳು. ತಮ್ಮದೇ ಸ್ವತಂತ್ರ ದೇಶದ ಕನಸು ಕಂಡವರು. ಪ್ಯಾಲೆಸ್ತೀನ್ ಭೂ ಭಾಗವನ್ನು ಆಕ್ರಮಿಸಿಕೊಂಡು ಅದು ತಮ್ಮದೇ ಎಂದು ಸಾರುತ್ತಾರೆ. ಪ್ಯಾಲೆಸ್ತೀನೀಯರ ವ್ಯವಸ್ಥಿತ ನಿರ್ನಾಮ ಯೋಜನೆ ಜಾರಿಗೊಳಿಸುತ್ತಾರೆ. ಯಹೂದಿಗಳ ಮಾರಣಹೋಮಕ್ಕೆಂದು ಹಿಟ್ಲರ್ ರೂಪಿಸಿದ್ದ ಹತ್ಯಾಶಿಬಿರಗಳ ಮಾದರಿಯಲ್ಲೇ ಮಣ್ಣಿನ ಮಕ್ಕಳಾದ ಪ್ಯಾಲೆಸ್ತೀನೀಯರನ್ನು ಗಾಝಾ ಪಟ್ಟಿಗೆ ಒತ್ತರಿಸಿ, ಹಿಟ್ಲರ್ ಎಬ್ಬಿಸಿದ್ದ ಮುಳ್ಳು ತಂತಿ ಬೇಲಿಗಳನ್ನು ಎಬ್ಬಿಸಿರುವುದು ಕ್ರೂರ ವಿಡಂಬನೆ. ತಾಯಿನಾಡಿನ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಬೇರೊಬ್ಬರ ತಾಯಿನಾಡನ್ನು ಅಪಹರಿಸಿದ್ದಾರೆ. ಮಣ್ಣಿನ ಮಕ್ಕಳಾದ ಪ್ಯಾಲೆಸ್ತೀನೀಯರನ್ನು ವ್ಯವಸ್ಥಿತವಾಗಿ ಅವರ ನೆಲದಿಂದ ಉಚ್ಚಾಟಿಸುವ ಸತತ ಕೃತ್ಯವನ್ನು ಖುದ್ದು ಯಹೂದಿ ಚರಿತ್ರಕಾರರೇ ದಾಖಲಿಸಿದ್ದಾರೆ.

20ನೆಯ ಶತಮಾನದಲ್ಲಿ ಆರಂಭವಾಗಿರುವ ಈ ಜನಾಂಗೀಯ ಹತ್ಯೆ 21ನೆಯ ಶತಮಾನದಲ್ಲೂ ನಿರಾತಂಕವಾಗಿ ಮುಂದುವರೆದಿದೆ ಮತ್ತು ಜಗತ್ತು ಈ ಹತ್ಯೆಯ ಕುರಿತು ಹಲವು ಬಗೆಯ ಮೌನಗಳನ್ನು ತಳೆದಿದೆ. ಹಮಾಸ್ ಈವರೆಗೆ ಎಸಗಿರುವ ಅತಿ ಕೆಟ್ಟ ಕೃತ್ಯವನ್ನು ಹೆಸರಿಸಿ ಬೇಕಾದರೆ ಅದನ್ನು ಸಾವಿರ ಸಂಖ್ಯೆಯಲ್ಲಿ ಗುಣಾಕಾರ ಮಾಡಿರಿ. ಈ ಅಗಾಧ ಸಂಖ್ಯೆ ಕೂಡ, ಇಸ್ರೇಲಿನಿಂದ ಪ್ಯಾಲೆಸ್ತೀನೀಯರ ಹತ್ಯೆ ಮತ್ತು ದಮನ ಹಾಗೂ ಪ್ಯಾಲೆಸ್ತೀನೀ ಜನಾಂಗವನ್ನೇ ಅಳಿಸಿ ಹಾಕುವ ರಕ್ತದಾಹವನ್ನು ಸರಿಗಟ್ಟಲಾರದು ಎಂಬ ಮಾತನ್ನು ನಿಷ್ಪಕ್ಷಪಾತಿ ಯಹೂದಿಗಳೇ ಆಡಿದ್ದಾರೆ.

5 12

ಕದನವಿರಾಮವು ಹೆಚ್ಚೆಂದರೆ ಸದ್ಯದ ಗೋಚರ ನರಮೇಧ ನಿಲ್ಲಿಸಬಹುದು. ಆದರೆ ದಶಕಗಳಿಂದ ನಡೆದಿರುವ ಪ್ಯಾಲೆಸ್ತೀನೀಯರ ವ್ಯವಸ್ಥಿತ ಅಗೋಚರ ನರಮೇಧ, ಪ್ಯಾಲೆಸ್ತೀನಿನ ಸಾರ್ವಭೌಮತೆಯ ಹತ್ಯೆ ನಿಲ್ಲುವುದಿಲ್ಲ. ಅವರ ನೆಲವನ್ನು ಸಂಪೂರ್ಣವಾಗಿ ಕಿತ್ತುಕೊಂಡು, ಅವರ ಇತಿಹಾಸ ಸಂಸ್ಕೃತಿಯನ್ನು ಅಳಿಸಿ ಹಾಕಿ ಯಹೂದಿ ಸಾರ್ವಭೌಮತೆಯನ್ನು ಪ್ಯಾಲೆಸ್ತೀನೀಯರ ಮೇಲೆ ಸ್ಥಾಪಿಸುವುದೇ ಇಸ್ರೇಲಿನ ಅಂತಿಮ ಗುರಿ. ಹೀಗಾಗಿ ಈ ಕದನವಿರಾಮ ಮೂರೂ ಹಂತಗಳಲ್ಲಿ ಯಶಸ್ವಿಯಾದರೂ ಈ ಜನಾಂಗವನ್ನು ಅಳಿಸಿ ಹಾಕುವ ಅಗೋಚರ ನರಮೇಧ ನಿತ್ಯ ನಿರಂತರ.

ಎರಡನೆಯ ಅವಧಿಗೆ ಅಧಿಕಾರದ ಸೂತ್ರ ಹಿಡಿದಿರುವ ಡೊನಾಲ್ಡ್ ಟ್ರಂಪ್ ತಮ್ಮ ರಾಜಕೀಯ ಪ್ರಭಾವ ಪ್ರತಿಷ್ಠೆಗಳನ್ನು ಬೆಳಗಿಸಿಕೊಳ್ಳಲು ಈ ಕದನವಿರಾಮಕ್ಕೆ ಒತ್ತಡ ಹೇರಿದ್ದಾರು. ನಿಜಶಾಂತಿಯ ಸ್ಥಾಪನೆಯಾಗಲೀ, 1967ರ ಗಡಿರೇಖೆಗಳನ್ನು ಹೊಂದಿದ ಸಾರ್ವಭೌಮ ಪ್ಯಾಲೆಸ್ತೀನ್ ಆಗಲಿ ಅವರಿಗೆ ಬೇಕಿಲ್ಲ.  ವೆಸ್ಟ್ ಬ್ಯಾಂಕ್‌ನ ನೆಲವಿಸ್ತಾರವನ್ನು ಕೈವಶ ಮಾಡಿಕೊಳ್ಳುವ ಇಸ್ರೇಲಿನ ದುರುದ್ದೇಶಕ್ಕೂ ಅವರ ವಿರೋಧ ಇಲ್ಲ. ಕದನವಿರಾಮಕ್ಕೆ ಬದಲಾಗಿ ಟ್ರಂಪ್ ಅಮೆರಿಕಾದಿಂದ ನೇತನ್ಯಾಹು ಬಯಸುವ ಉಡುಗೊರೆಯೇ ವೆಸ್ಟ್ ಬ್ಯಾಂಕ್‌ನ ನೆಲವಿಸ್ತಾರದ ಮುಕ್ತ ಅತಿಕ್ರಮಣ ಎನ್ನುತ್ತಾರೆ ಪ್ರೊ.ಮುಹನ್ನದ್ ಅಯ್ಯಶ್.

ಇಸ್ರೇಲ್ ಪ್ರಧಾನಿ ನೇತನ್ಯಾಹುವಿನ ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಹಮಾಸ್‌ನ ಛಲ ಸಾಧನೆ ಎರಡೂ ಈ ಕದನವಿರಾಮವನ್ನು ಮುರಿದು ಹಾಕಲೂಬಹುದು. ಹಮಾಸ್ ಮತ್ತು ನೇತನ್ಯಾಹುವಿನ ಇಸ್ರೇಲ್ ಮತ್ತೆ ಬಲಗೂಡಿಸಿಕೊಳ್ಳಲು ಈ ಕದನವಿರಾಮವನ್ನು ಬಳಸಿಕೊಳ್ಳುತ್ತಿರುವ ವರದಿಗಳು ಆತಂಕಕ್ಕೆ ಕಾರಣವಾಗಿವೆ. ಈ ಕದನವಿರಾಮ ಒಪ್ಪಂದವು ಇಸ್ರೇಲಿ ಪಡೆಗಳ ವಾಪಸಾತಿ ಮತ್ತು ಪ್ಯಾಲೆಸ್ತೀನ್ ಮರುನಿರ್ಮಾಣ ಕುರಿತ ಎರಡನೆಯ ಹಾಗೂ ಮೂರನೆಯ ಹಂತಗಳ ಕುರಿತು ಯಾವುದೇ ಖಾತ್ರಿ ನೀಡುವುದಿಲ್ಲ.

ಇದನ್ನೂ ಓದಿರಿ: ಐದು ದಶಕಗಳ ಕರ್ನಾಟಕ ರಾಜಕಾರಣ: ಗಳಿಸಿದ್ದನ್ನು ಕಳೆದುಕೊಂಡ ಕಾಲ!

ಇಂತಹುದೇ ಕದನವಿರಾಮ ಒಪ್ಪಂದವೊಂದು 2024ರ ಮೇ ತಿಂಗಳಿಂದಲೇ ಮಾತುಕತೆಗಳ ಮೇಜಿನ ಮೇಲಿತ್ತು. ಹಮಾಸ್ ಒಪ್ಪಿದ್ದರೂ, ಇಸ್ರೇಲ್ ಕಡೆಯ ಗಳಿಗೆಗಳಲ್ಲಿ ಅಸಾಧ್ಯ ತಿದ್ದುಪಡಿಗಳನ್ನಿಟ್ಟು ಹಿಂದೆ ಸರಿದಿತ್ತು. ಹಮಾಸ್ ಸರ್ವನಾಶದ ನಂತರವೇ ಯಾವುದೇ ಕದನವಿರಾಮದ ಪರಿಗಣನೆ ಸಾಧ್ಯ ಎಂದು ಸಾರಿತ್ತು. ಆದರೂ ಅಮೆರಿಕಾ, ಈಜಿಪ್ಟ್ ಹಾಗೂ ಕತಾರ್  ಮಧ್ಯಸ್ಥಿಕೆಯ ಮಾತುಕತೆಗಳಿಗೆ ಬದ್ಧವಾಗಿತ್ತು. ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗಿಂತ ಹಮಾಸ್‌ನ ವಿನಾಶವೇ ನೇತನ್ಯಾಹುವಿನ ಮೊದಲ ಆದ್ಯತೆಯಾಗಿತ್ತು. ಆಗ ಇಸ್ರೇಲ್ ಹೆಜ್ಪೊಲ್ಲಾ ಮತ್ತು ಹಮಾಸ್ ನಾಯಕರ ಹತ್ಯೆಗೈದಿರಲಿಲ್ಲ. ಇಸ್ರೇಲಿ ಸಂಸತ್ತಿನಲ್ಲಿ ಆರು ಸೀಟುಗಳನ್ನು ಹೊಂದಿರುವ ಇತಾಮದ್ ಬೆನ್ ಗ್ವಿರ್ ಅವರ ತೀವ್ರಬಲಪಂಥೀಯ ಓಟ್ಝಮಾ ಯೆಹುದಿತ್ ಪಾರ್ಟಿ ನೇತನ್ಯಾಹು ಒಕ್ಕೂಟ ಸರ್ಕಾರದ ಎಲ್ಲ ತೀರ್ಮಾನಗಳಲ್ಲಿ ವಿಟೋ ಅಧಿಕಾರ ಹೊಂದಿತ್ತು. ಕಳೆದ ಸೆಪ್ಟಂಬರಿನಲ್ಲಿ ನ್ಯೂ ಹೋಪ್ ಎಂಬ ಮತ್ತೊಂದು ಪಕ್ಷ ಒಕ್ಕೂಟ ಸರ್ಕಾರವನ್ನು ಸೇರಿದ ನಂತರ ಈ ಪರಿಸ್ಥಿತಿ ಬದಲಾಯಿತು. ಅಲ್ಲಿಯ ತನಕ  ಬೆನ್ ಗ್ವಿರ್ ಅವರ ಪಾರ್ಟಿಯು ಕದನವಿರಾಮ ಕುರಿತ ಎಲ್ಲ ಸಂಧಾನಗಳಿಗೆ ದೊಡ್ಡ ಅಡ್ಡಗಲ್ಲಾಗಿತ್ತು.

ಒಪ್ಪಂದದ ಮೂರು ಹಂತಗಳ ಮೊದಲ ಹಂತ ಇದೇ 19ರಿಂದ ಶುರುವಾಗಿದೆ. ಮಕ್ಕಳೂ ಸೇರಿದಂತೆ 33 ಮಂದಿ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪಿದೆ. 2023ರ ಅಕ್ಟೋಬರ್ ಏಳರ ನಂತರ ಸೆರೆಹಿಡಿದವರೂ ಸೇರಿದಂತೆ 900ರಿಂದ 1,650 ಮಂದಿ ಪ್ಯಾಲೆಸ್ತೇನೀ ಸೆರೆಯಾಳುಗಳನ್ನು ಇಸ್ರೇಲ್ ಬಿಡುಗಡೆ ಮಾಡಲಿದೆ. ತನ್ನ ಒತ್ತೆಯಾಳುಗಳಿಗೆ ಪ್ರತಿಯಾಗಿ ಭಾರೀ ದೊಡ್ಡ ಸಂಖ್ಯೆಯ ಪ್ಯಾಲೆಸ್ತೇನೀ ಸೆರೆಯಾಳುಗಳನ್ನು ಇಸ್ರೇಲ್ ಈ ಹಿಂದೆಯೂ ಬಿಡುಗಡೆ ಮಾಡಿದ್ದಿದೆ. 1983ರಲ್ಲಿ ಪ್ಯಾಲೆಸ್ತೀನ್ ಲಿಬರೇಷನ್ ಆರ್ಗನೈಸೇಶನ್ (ಪಿ.ಎಲ್.ಒ) ಸೆರೆಯಿಲ್ಲಿದ್ದ ಆರು ಮಂದಿ ಇಸ್ರೇಲಿಗಳಿಗೆ ವಿನಿಮಯವಾಗಿ 4,700 ಅರಬ್ಬರನ್ನು ಬಿಡುಗಡೆ ಮಾಡಿತ್ತು. ಪಾಪ್ಯೂಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಪ್ಯಾಲೆಸ್ತೀನ್ ಎಂಬ ಮತ್ತೊಂದು ಸಂಘಟನೆಯು 1985ರಲ್ಲಿ ಬಿಡುಗಡೆ ಮಾಡಿದ್ದ ಮೂವರು ಇಸ್ರೇಲಿಗಳ ಬದಲಿಗೆ 1,150 ಪ್ಯಾಲೆಸ್ತೀನಿ ಪ್ರಜೆಗಳನ್ನು ತನ್ನ ಕೈದಿನಿಂದ ಮುಕ್ತಗೊಳಿಸಿತ್ತು. 2011ರಲ್ಲಿ ತನ್ನ ಏಕೈಕ ಯೋಧನ ಬಿಡುಗಡೆಗೆ ಪ್ರತಿಯಾಗಿ 1,027 ಪ್ಯಾಲೆಸ್ತೀನೀ ಕೈದಿಗಳನ್ನು ಬಿಡುಗಡೆ ಮಾಡಿತ್ತು.

4 17
2023ರ ನವೆಂಬರ್ 1ರಂದು ಗಾಝಾ ಪಟ್ಟಿಯ ಜಬಾಲಿಯಾ ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದಾಗ ಉಂಟಾದ ವಿನಾಶ

ಮೊದಲ ಹಂತದ ಒಪ್ಪಂದದ ಹದಿನೈದು ದಿನಗಳ ತರುವಾಯ ಎರಡನೆಯ ಹಂತದ ಸಂಧಾನ ಯಶಸ್ವಿಯಾದರೆ ಉಳಿದ ಒತ್ತೆಯಾಳುಗಳ ಬಿಡುಗಡೆ ನಡೆಯಲಿದೆ, ಕಾಯಂ ಕದನವಿರಾಮದ ಸಂಧಾನ ಹಾಗೂ ಗಾಝಾದಿಂದ ಎಲ್ಲ ಇಸ್ರೇಲಿಗಳ ಪಡೆಗಳ ಹಿಂತೆಗೆತ; ವಿಶ್ವಸಂಸ್ಥೆಯ ಏಜೆನ್ಸಿಗಳು, ಈಜಿಪ್ಟ್ ಹಾಗೂ ಕತಾರ್ ಆಶ್ರಯದಲ್ಲಿ ಗಾಝಾದ ಮರುನಿರ್ಮಾಣ ಮೂರನೆಯ ಹಂತ.

ಪ್ಯಾಲೆಸ್ತೀನಿನ ಮೇಲೆ ನಡೆದ ದುರಾಕ್ರಮಣಕ್ಕೆ ಮುನ್ನವೇ ಇಸ್ರೇಲಿನ ನೇತನ್ಯಾಹು ಸರ್ಕಾರ ನ್ಯಾಯಾಂಗ ಸುಧಾರಣೆಗಳ ಹೆಸರಿನಲ್ಲಿ ಕಾನೂನುಗಳನ್ನು ಬದಲಾಯಿಸಿದ ವೈಖರಿ ವಿರುದ್ಧ ಜನಾಂದೋಲನ ಸಿಡಿದೆದ್ದಿತ್ತು. ರಾಜಕೀಯ ಇಡುಗಂಟು ಕರಗತೊಡಗಿತ್ತು.

ತೀವ್ರಬಲಪಂಥೀಯ ಮಿತ್ರಪಕ್ಷಗಳ ನೆರವಿನಿಂದ ಇನ್ನೂ ಅಧಿಕಾರಕ್ಕೆ ಜೋತುಬಿದ್ದಿದ್ದಾರೆ ನೇತನ್ಯಾಹು. ಕದನವಿರಾಮದ ಈ ಅಲ್ಪಾವಧಿ ರಿಯಾಯಿತಿ ನೀಡಿ ಅದಕ್ಕೆ ಬದಲಾಗಿ ಟ್ರಂಪ್ ಎರಡನೆಯ ಅವಧಿಯಿಂದ ಗಾಝಾ ಮತ್ತು ಇರಾನ್ ವಿರುದ್ಧ ದೀರ್ಘಾವಧಿ ಲಾಭಗಳನ್ನು ಗಿಟ್ಟಿಸುವುದು ನೇತನ್ಯಾಹು ಹಂಚಿಕೆ.

ಹಮಾಸ್ ಪಾಲಿಗೆ ಈ ಕದನವಿರಾಮ ಒಂದು ಬಗೆಯ ಗೆಲುವೇ ಹೌದು. ತನ್ನ ಸಂಘಟನೆ ಮತ್ತು ನಾಯಕತ್ವ ಎರಡೂ ಇಸ್ರೇಲಿನ ನಿರಂತರ ದಾಳಿಗಳಲ್ಲಿ ಮುರಿದು ಮಣ್ಣು ಸೇರಿರುವ ಈ ಹಂತದಲ್ಲಿ ತನ್ನ ಬಲವನ್ನು ಮತ್ತು ಎಲ್ಲ ಸಂಪನ್ಮೂಲಗಳನ್ನು ಮತ್ತೆ ಒಗ್ಗೂಡಿಸಿ ಎದ್ದು ನಿಲ್ಲಲು ಇಂತಹ ಕದನವಿರಾಮ ಹಮಾಸ್‌ಗೆ ಅತ್ಯಗತ್ಯ ಆಗಿತ್ತು. ದುರ್ಬಲಗೊಂಡಿದ್ದರೂ ಉತ್ತರ ಗಾಝಾದ ಗೆರಿಲ್ಲಾ ದಾಳಿಗಳಲ್ಲಿ 16 ಮಂದಿ ಇಸ್ರೇಲಿ ಸೈನಿಕರನ್ನು ಕೊಂದಿದೆ. ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ತಾನು ಕಳೆದುಕೊಂಡಿರುವ ಸಂಖ್ಯೆಗಿಂತ ಹೆಚ್ಚು ಮಂದಿಯನ್ನು ಪುನಃ ನೇಮಕ ಮಾಡಿಕೊಂಡಿದೆ ಹಮಾಸ್ ಎಂದು ಕೆಲ ದಿನಗಳ ಹಿಂದೆಯಷ್ಟೇ ಅಮೆರಿಕಾ ಸರ್ಕಾರ ಹೇಳಿದೆ. ಎರಡು ಮತ್ತು ಮೂರನೆಯ ಹಂತದಲ್ಲಿ ಗಾಝಾದಲ್ಲಿ ಸ್ಥಾಪನೆಯಾಗಬಹುದಾದ ಯಾವುದೇ ಸರ್ಕಾರದಲ್ಲಿ ತಾನೂ ಇರಬೇಕು ಎಂಬುದು ಹಮಾಸ್‌ನ ಆಗ್ರಹ. ಪ್ಯಾಲೆಸ್ತೀನಿಯನ್ ಅಥಾರಿಟಿ ಗಾಝಾಕ್ಕೆ ಹಿಂದಿರುಗುವ ಕುರಿತು ಕದನವಿರಾಮ ಒಪ್ಪಂದದಲ್ಲಿ ಯಾವ ಪ್ರಸ್ತಾಪವೂ ಇಲ್ಲ. 1989ರಲ್ಲಿ ಲೆಬನಾನ್‌ನ ಅಂತಃಕಲಹವನ್ನು ಅಂತ್ಯಗೊಳಿಸಿದ್ದು ತಾಯಿಫ್ ಸಂಧಾನ. ಈ ಸಂಧಾನದ ನಂತರ ಹೆಜ್ಬೊಲ್ಲಾ ಸಂಘಟನೆ ಲೆಬನಾನ್ ಸರ್ಕಾರದ ಬೇರ್ಪಡಿಸಲಾಗದ ಅಂಗವಾಗಿ ಉಳಿದುಕೊಂಡಿತು. ಸದ್ಯ ಭವಿಷ್ಯದಲ್ಲಿ ರಚನೆಯಾಗಬಹುದಾದ ಗಾಝಾ ಸರ್ಕಾರದಲ್ಲಿ ಇಂತಹುದೇ ಸ್ಥಾನ ಗಳಿಸುವುದು ಹಮಾಸ್‌ನ ಉದ್ದೇಶ.

ಸದರಿ ಕದನವಿರಾಮ ಹೆಜ್ಜೆಯಿಟ್ಟಿರುವುದು ಇರಾನೀ ನೇತೃತ್ವದ ಪ್ರತಿರೋಧಿ ಕೂಟವನ್ನು (Axis of Resistance) ಇಸ್ರೇಲ್ ದುರ್ಬಲಗೊಳಿಸಿ, ಹಮಾಸ್ ತಲೆಯಾಳುಗಳನ್ನು ಕೊಂದ ತರುವಾಯವೇ ಎಂಬುದು ಗಮನಾರ್ಹ. ಆದರೆ ಹಮಾಸ್‌ಅನ್ನು ಗಾಝಾದಿಂದ ಬೇರು ಸಹಿತ ಕಿತ್ತೆಸೆಯುವ ಇಸ್ರೇಲ್ ಬಯಕೆ ಈಡೇರಿಲ್ಲ. ನೇತನ್ಯಾಹು ಸರ್ಕಾರ ಮತ್ತು ಅದರ ತೀವ್ರ ಬಲಪಂಥೀಯ ಮಿತ್ರಪಕ್ಷಗಳು ಎದುರಿಸಲೇಬೇಕಿರುವ ಹಿನ್ನಡೆಯಿದು.

ಇದನ್ನೂ ಓದಿರಿ: ‘ದಲಿತ’ ಪದದ ಅಪಾರ್ಥ: ದಲಿತ ಚಳವಳಿಗೇ ಅಪಾಯ

(ತೀವ್ರವಾದಿ ಗುಂಪುಗಳು, ಮಧ್ಯಪ್ರಾಚ್ಯದ ಸರ್ಕಾರಿ ನಿಯಂತ್ರಿತ ಸಶಸ್ತ್ರಪಡೆಗಳ ಸಡಿಲ ಮತ್ತು ಅನಧಿಕೃತ ಮಿಲಿಟರಿ ಜಾಲವೊಂದಿದೆ. ಇರಾನ್ ಮತ್ತು ಅದರ ಇಸ್ಲಾಮಿಕ್ ಕ್ರಾಂತಿಕಾರಿ ಭಟರ ಪಡೆಯು (ಐ.ಆರ್.ಜಿ.ಸಿ.) ಈ ಕೂಟದ ಬೆನ್ನೆಲುಬು. ಲೆಬನಾನಿನ ಹೆಜ್ಪೊಲ್ಲಾ ಸಂಘಟನೆ, ಹಮಾಸ್, ಗಾಝಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್‌ನ ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್, ಇರಾಕ್‌ನ ಕೆಲ ಉಗ್ರವಾದಿಗಳು, ಯೆಮೆನ್‌ನ ಹೌತಿ ಪಡೆಗಳೂ ಈ ಕೂಟದ ಭಾಗ. ಕಳೆದ ತಿಂಗಳು ಬಶಾರ್ ಅಲ್ ಅಸ್ಸಾದ್ ಸರ್ಕಾರ ಬುಡಮೇಲಿನ ತನಕ  ಸಿರಿಯಾದ ಸಶಸ್ತ್ರ ಪಡೆಗಳೂ ಈ ಕೂಟದಲ್ಲಿದ್ದವು. ಇರಾನಿಗೆ ಮೆಡಿಟರೇನಿಯನ್ ಸಮುದ್ರದ ಲೀಲಾಜಾಲ ಸಂಪರ್ಕವನ್ನು ಸಾಧ್ಯವಾಗಿಸಿದ್ದವು. ಈ ಹಿಂದೆ ಸದ್ದಾಮ್ ಹುಸೇನ್ ನಾಯಕತ್ವದ ಇರಾಕ್, ಇರಾನ್ ಹಾಗೂ ಉತ್ತರ ಕೊರಿಯಾವನ್ನು ಅಂದಿನ ಅಮೆರಿಕೆಯ ಅಧ್ಯಕ್ಷ ಜಾರ್ಜ್ ಬುಶ್ ‘ಕೇಡಿನ ಕೂಟ’ (Axis of Evil) ಎಂದು ಕರೆದದ್ದುಂಟು. ಈ ಬಣ್ಣನೆಗೆ ಪ್ರತಿಬಣ್ಣನೆಯೇ Axis of Resistance).

ಇಸ್ರೇಲಿನ ಎಲ್ಲ ಒತ್ತೆಯಾಳುಗಳನ್ನೂ ಬಿಡುಗಡೆ ಮಾಡಿಸಿದ ಗೆಲುವನ್ನು ನೇತನ್ಯಾಹು ಭುಜಕೀರ್ತಿಯಂತೆ ಧರಿಸಬಹುದು. ಆದರೆ ತೀವ್ರಬಲಪಂಥೀಯ ಮಿತ್ರಪಕ್ಷಗಳು ಮತ್ತು ಇಸ್ರೇಲಿಗಳು ಈ ಕದನವಿರಾಮ ಒಪ್ಪಂದವನ್ನು ‘ದ್ರೋಹ’ವೆಂದೇ ಬಗೆದಿದ್ದಾರೆ. ಕದನವಿರಾಮ ಒಪ್ಪಂದಕ್ಕೆ ಪ್ರತಿಯಾಗಿ ಟ್ರಂಪ್ ಏನು ‘ಬಹುಮಾನ’ ನೀಡಿಯಾರು ಎಂಬುದು ನಿರ್ಣಾಯಕ ಎನ್ನುತ್ತಾರೆ ವಿಶ್ಲೇಷಕರು.

ಹದಿನೈದು ತಿಂಗಳ ಬರ್ಬರ ನರಮೇಧದಲ್ಲಿ ಗಾಝಾ ಪಟ್ಟಿಯನ್ನು ಕಾಂಕ್ರೀಟ್ ಕಸದ ರಾಶಿಗಳನ್ನಾಗಿಸಿದೆ ಇಸ್ರೇಲ್. ಜನವಸತಿ ಅಸಾಧ್ಯವೆನ್ನಿಸುವ ನರಕದ ನಿರ್ಮಾಣವಾಗಿ ಹೋಗಿದೆ. ಶೇ.90ರಷ್ಟು ಮನೆಗಳು ನೆಲಸಮವಾಗಿವೆ. ಶೇ.80ರಷ್ಟು ವ್ಯಾಪಾರ ವಹಿವಾಟು ಅಳಿಸಿ ಹೋಗಿದೆ. ಶೇ.68ರಷ್ಟು ಕೃಷಿ ಭೂಮಿ ನಾಶವಾಗಿ ಹೋಗಿದೆ. ಕುಡಿಯುವ ನೀರಿಲ್ಲ, ಚರಂಡಿ ವ್ಯವಸ್ಥೆ ಉಳಿದಿಲ್ಲ, ವಿದ್ಯುಚ್ಛಕ್ತಿ, ಇಂಧನದ ಸುಳಿವಿಲ್ಲ. ಶಾಲೆ, ಆಸ್ಪತ್ರೆಯಿಲ್ಲ. ಅರ್ಥವ್ಯವಸ್ಥೆ ಹೇಳಹೆಸರಿಲ್ಲದಾಗಿದೆ. ರೋಗರುಜಿನಗಳು ಹಬ್ಬಿವೆ. ಇಸ್ರೇಲಿ ಬಾಂಬುಗಳ ನಂಜುಭರಿತ ರಾಸಾಯನಿಕಗಳು ಗಾಳಿಯಲ್ಲಿ, ಅಂತರ್ಜಲದಲ್ಲಿ ಬೆರೆತು ವಿಷಮಯ ಮಾಡಿವೆ. ಕುಟುಂಬಗಳು ಛಿದ್ರಗೊಂಡಿವೆ. ಮಕ್ಕಳು ತಬ್ಬಲಿಗಳಾಗಿದ್ದಾರೆ. 450 ಲಕ್ಷ ಟನ್ನುಗಳಷ್ಟು ಕಾಂಕ್ರೀಟ್ ಕಸದರಾಶಿಯನ್ನು ಬಳಿದು ಸಾಗಿಸಲು ಹತ್ತು ವರ್ಷಗಳಾದರೂ ಬೇಕಿದೆ. ಕನಿಷ್ಠ  ಬದುಕಿಗೂ ವಿದೇಶೀ ನೆರವಿನ ಅಗತ್ಯವಿದೆ.

WhatsApp Image 2025 11 17 at 4.03.10 PM
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...