“ತಥಾಕಥಿತ ಸನಾತನ ಸಂಸ್ಕೃತಿ, ಸನಾತನ ಧರ್ಮ, ಕಟ್ಟಾ ಹಿಂದುತ್ವ ಇತ್ಯಾದಿಗಳ ಬಗೆಗೆ ಇಂದಿನ ಕೆಲವರ ವ್ಯಾಖ್ಯಾನವು ತೀರಾ ಅಡ್ಡದಾರಿಯವು, ಬೇಜವಾಬ್ದಾರಿಯವು ಮತ್ತು ದ್ವೇಷಪೂರಿತವಾದವು. ದುಷ್ಟ ರಾಜಕೀಯಕ್ಕೆ ಮತೀಯತೆಯು ಒಂದು ನಿಕೃಷ್ಟ ಸಾಧನವಾಗಿದೆ” ಎನ್ನುತ್ತಾರೆ ಹಿರಿಯ ವಿದ್ವಾಂಸರಾದ ಡಾ.ಜಿ.ರಾಮಕೃಷ್ಣ.
ಪ್ರಖರ ಎಡಪಂಥೀಯ ಚಿಂತಕರಾದ ಜಿಆರ್, “ಎಡಪಂಥೀಯರು ಬಾಬಾಸಾಹೇಬರಿಂದ ದೂರವಾದರು ಎಂಬ ಮಿಥ್ಯೆ ಅರ್ಥರಹಿತವಾದ್ದು. ಅಂಬೇಡ್ಕರ್ ನೇತೃತ್ವದ ಹತ್ತಾರು ಚಳವಳಿಗಳಲ್ಲಿ ಸರ್ದೇಸಾಯಿ, ಪರುಲೇಕರ್, ರಣದಿವೆ, ಚಿತ್ರೆ, ಮೋರೆ ಮುಂತಾದವರು ಭಾಗಿಗಳಾಗಿಯೇ ಉಳಿದಿದ್ದರು. ಇತಿಹಾಸವನ್ನು ತಿರುಚುವವರಿಗೂ ಬಾಬಾಸಾಹೇಬರಿಗೂ ಅಜಗಜಾಂತರ ವ್ಯತ್ಯಾಸವಿದೆ” ಎನ್ನುತ್ತಾ, ‘ಕಮ್ಯುನಿಸ್ಟರು ಮತ್ತು ಅಂಬೇಡ್ಕರರ ನಡುವಿನ ಬಾಂಧವ್ಯ’ದ ಕುರಿತು ಇಲ್ಲಿ ಮಾತನಾಡಿದ್ದಾರೆ. ‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಗೆ ನೀಡಿರುವ ಸಂದರ್ಶನ ಇಲ್ಲಿದೆ.
- ನಿಮ್ಮ ಪ್ರಕಾರ ಕಳೆದ 50 ವರ್ಷಗಳಲ್ಲಿ ಕರ್ನಾಟಕದ ಒಟ್ಟಾರೆ ಸ್ಥಿತಿಗತಿಗಳಲ್ಲಿ ಬಂದಿರುವ ಎರಡು ದೊಡ್ಡ ಸಕಾರಾತ್ಮಕ ಬದಲಾವಣೆಗಳು ಯಾವುವು?
ಜಿ.ರಾಮಕೃಷ್ಣ: ಎಷ್ಟೇ ಅಸಮರ್ಪಕವೆಂದು ಟೀಕಿಸಲು ಅವಕಾಶವಿದ್ದರೂ ನಮ್ಮ ರಾಜ್ಯದಲ್ಲಿ ನೀರಾವರಿ ಯೋಜನೆಗಳು ಸಾಕಷ್ಟು ಉತ್ತಮವಾಗಿ ವೃದ್ಧಿಹೊಂದಿವೆ. ಐವತ್ತು ವರ್ಷಗಳಲ್ಲಿ ಇದಕ್ಕಿಂತಲೂ ಹೆಚ್ಚು ಸಾಧಿಸಬಹುದಿತ್ತು, ನಿಜ; ಆದರೆ ನೆರೆ ರಾಜ್ಯಗಳೊಡನೆ ಮಾತುಕತೆಗಳು ಯಾವಾಗಲೂ ನಮ್ಮ ರಾಜ್ಯದ ಪರವಾಗಿ ತೀರ್ಮಾನವಾಗುವುದಿಲ್ಲ. ಅಂತಹ ಅಂಕೆಗಳ ನಡುವೆಯೂ ಗಮನಾರ್ಹ ಅಭಿವೃದ್ಧಿ ಸಾಧಿಸಲಾಗಿದೆ. ಕೆಲವು ಪ್ರದೇಶಗಳು ಇಂತಹ ಸವಲತ್ತು ಪಡೆಯಲಾಗಿಲ್ಲವೆಂಬ ಕೊರತೆಯೇನೋ ಇದೆ, ಆದರೆ ಕೃಷಿಗೆ ನೀರಾವರಿ ವ್ಯವಸ್ಥೆಯು ನೀಡಿರುವ ನೆರವು ರಾಜ್ಯಕ್ಕೆ ಚೈತನ್ಯವನ್ನು ನೀಡಿದೆ. ಗುಣಾತ್ಮಕವಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಕೊಂಚಮಟ್ಟಿಗೆ ಬದಲಾಯಿಸಿದಂತಹ ಇನ್ನೊಂದು ಕ್ರಮವೆಂದರೆ ಭೂಸುಧಾರಣೆ. ಚಿಕ್ಕವನಿದ್ದಾಗ ನಾನಿದ್ದುದು ಒಂದೊ ಜೋಡಿಗ್ರಾಮದಲ್ಲಿ. ಅಲ್ಲಿಯ ಅರ್ಧಪಾಲು ಕುಟುಂಬಗಳಿಗೆ ಸ್ವಂತದ ಭೂಮಿ ಸುತರಾಂ ಇಲ್ಲದಿದ್ದಂತಹ ಸನ್ನಿವೇಶವಿದ್ದಿತು. ಜೋಡಿದಾರರು ಎಲ್ಲರೂ ತಮ್ಮನ್ನು ತಾವು ಬ್ರಾಹ್ಮಣರೆಂದು ಕರೆದುಕೊಳ್ಳುತ್ತಿದ್ದರು. ಇಂಥವರ ಭೂಮಿಯನ್ನು ಉತ್ತು, ಬಿತ್ತಿ, ಬೆಳೆ ತೆಗೆದವರನ್ನು ಆ ಪಾಪಿ ಜೋಡಿದಾರರು ಕಿಂಕರರಂತೆ ನಡೆಸಿಕೊಳ್ಳುತ್ತಿದ್ದರು. ಮಾನಸಿಕ ಹಿಂಸೆಗೆ ಎಲ್ಲೆಯೇನೂ ಇರಲಿಲ್ಲ; ಕೆಲವೇಳೆ ದೈಹಿಕ ಹಿಂಸೆಯೂ ಇರುತ್ತಿತ್ತು. ಒಬ್ಬ ಗೇಣಿದಾರ ಒಮ್ಮೆ ಯಜಮಾನನ ಹೊಲದಿಂದ ಅವರೆಕಾಯಿ ಬಿಡಿಸಿಕೊಂಡು ಬಂದು ಜೋಡಿದಾರನ ಮುಂದಿಟ್ಟ. “ಏ ಏನೋ, ಎಲ್ಲ ತಪರು ತಂದಿಟ್ಟಿದ್ದೀಯ” ಎನ್ನುತ್ತಾ ಮಂಕರಿಯನ್ನು ರೈತನ ತಲೆಯ ಮೇಲೆ ಸುರಿದಿದ್ದುದನ್ನು ನಾನು ಸ್ವತಃ ಕಂಡಿದ್ದೇನೆ. ಈಗ ಆ ಊರಿನ, ಅಂತೆಯೇ ನೂರಾರು ಹಳ್ಳಿಗಳ, ಚಹರೆ ಗುಣಾತ್ಮಕವಾಗಿ ಬದಲಾಗಿ ನೆಮ್ಮದಿ ಎಷ್ಟು ಸಾಧ್ಯವೋ ಅಷ್ಟು ನೆಲೆಸಿದೆ. ಊರಿನ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಿಲ್ಲ, ಆದರೆ ಕಿರುಕುಳ ಮತ್ತು ಅಧೀನತೆ ಇಲ್ಲವಾಗಿವೆ. ಅಲ್ಲಿಯ ಸರ್ಕಾರಿ ಮಾಧ್ಯಮಿಕ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ತೀರಾ ಕುಸಿದಿದೆ. ಅದಕ್ಕೆ ಖಾಸಗಿಯು ಶ್ರೇಷ್ಠವೆಂಬ ಭ್ರಮೆ ಮತ್ತು ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಕಾರಣ.
ಇದನ್ನೂ ಓದಿರಿ: ನಮ್ಮನ್ನ ಹಿಂಗ್ಯಾಕ ನೋಡತಾರಪ ಬೆಂಗ್ಳೂರ್ ಮಂದಿ? (ಭಾಗ-1)
ನಾನು ಆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ (1946-1950) ಮಾಧ್ಯಮಿಕ ತರಗತಿಗಳಿಗೆ ದಿನಂಪ್ರತಿ ಬೇರೆ ಸುತ್ತಮುತ್ತಲ ಹಳ್ಳಿಗಳಿಂದ ಮೂರುಮೂರು ಮೈಲಿ ನಡೆದುಬರುತ್ತಿದ್ದ ವಿದ್ಯಾರ್ಥಿಗಳಿದ್ದರು. ವಿದ್ಯಾರ್ಥಿನಿಯರು ಇರಲೇ ಇಲ್ಲವೇನೊ. ವಿದ್ಯಾರ್ಥಿಗಳಲ್ಲಿ ಹಲವರು ನಮ್ಮ ಮನೆಗೆ ನೀರು ಕುಡಿಯಲು ಬರುತ್ತಿದ್ದುದುಂಟು, ಏಕೆಂದರೆ ಗ್ರಾಮದಲ್ಲಿ ನೀರಿನ ಸೌಕರ್ಯ ಇರಲಿಲ್ಲ. ಆದರೆ ಈಗ ಆ ಎಲ್ಲ ಹಳ್ಳಿಗಳ ಮಕ್ಕಳು ರಿಕ್ಷಾಗಳಲ್ಲಿ ಕೂತು ಸಾಕಷ್ಟು ದೂರವಿರುವ ಊರಿನಲ್ಲಿ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದಾರೆ. ನಮ್ಮ ಊರಿನ ಶಾಲೆಯಲ್ಲಿ ಬೆಂಚಿಗೆ ಒಬ್ಬರಂತೆ ಸಹ ವಿದ್ಯಾರ್ಥಿಗಳಿಲ್ಲ. ಹಾಗೆ ಮಕ್ಕಳನ್ನು ದೂರದ ಶಾಲೆಗಳಿಗೆ ಕಳಿಸಲು ಆರ್ಥಿಕ ಚೈತನ್ಯ ದೊರೆತಿರುವುದು ಭೂಸುಧಾರಣೆಯ ಕಾಣಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡಕ್ಕೆ ಕುತ್ತುಂಟಾಗಿರುವುದು ಭೂಸುಧಾರಣೆಯಿಂದಲ್ಲ, ಬದಲಾಗಿ ನಮ್ಮ ಶೈಕ್ಷಣಿಕ ಕೊರತೆಗಳಿಂದ.
- ನಿಮ್ಮ ಪ್ರಕಾರ ಕಳೆದ 50 ವರ್ಷಗಳಲ್ಲಿ ಕರ್ನಾಟಕದ ದಿಕ್ಕನ್ನು ಬದಲಿಸಿದ ಎರಡು ಸಂಗತಿಗಳು ಎಂದರೆ ಯಾವುವು?
ಜಿ.ಆರ್: ದಿಕ್ಕು ಬದಲಾವಣೆಯಲ್ಲಿ ಬೇಡವಾದದ್ದು ಮತ್ತು ಶ್ರೇಯಸ್ಕರ ಎರಡೂ ಉಂಟು. ಗ್ರಾಮಾಂತರ ಪ್ರದೇಶಗಳಲ್ಲಿ ಸಹ ಕುಸಂಪ್ರದಾಯವೆನ್ನಬೇಕಾದ ಅವೈಚಾರಿಕ ಚಿಂತನೆ ಮತ್ತು ಆಚರಣೆಗಳು ವಿಪರೀತವಾಗಿ ಬೆಳೆದು ಸಮುದಾಯ ವಿರೋಧಿ ಭಾವನೆಗಳು ಮಡುಗಟ್ಟಿವೆ, ಸಮೂಹ ಸನ್ನಿ ಎನಿಸಿಕೊಳ್ಳುವಷ್ಟರ ಮಟ್ಟಿಗೆ ನಮ್ಮ ರಾಜ್ಯದ ಸಾಮುದಾಯಿಕ ಜೀವನವು ಕಲುಷಿತವಾಗಿದೆ. ಪಟ್ಟಣ ಮತ್ತು ನಗರಗಳಲ್ಲಿ ಈ ಸಾಂಕ್ರಾಮಿಕ ಉಲ್ಬಣವಾಗಿ ಹಬ್ಬುತ್ತಿದೆ. ರಾಜ್ಯದ ಘನತೆ ಮತ್ತು ಸಂಪ್ರದಾಯ ದಿಕ್ಕು ತಪ್ಪಿರುವುದು ದಿನಂಪ್ರತಿ ಕಾಣುತ್ತಿದ್ದೇವೆ. ಪರಸ್ಪರ ಸಹಕಾರ ಮತ್ತು ಸೌಹಾರ್ದತೆಯ ಅಭಾವದಲ್ಲಿ ಕುತ್ಸಿತ ರಾಜಕೀಯ ಅಕ್ರಮಗಳಿಗೆ ಹಾದಿ ಸುಗಮವಾಗಿದೆ. ಇದು ಹಳ್ಳಿ ಮತ್ತು ದಿಲ್ಲಿ, ಎರಡಕ್ಕೂ ಅನ್ವಯವಾಗುವ ಮಾತು. ಇಡೀ ದೇಶವು ದಿಕ್ಕು ತಪ್ಪಿರುವಾಗ ನಮ್ಮ ರಾಜ್ಯವು ಮತೀಯ ಕಲಹಗಳ ಪಿಡುಗಿನಿಂದ ದೂರವಿರಲು ಹೇಗೆ ತಾನೆ ಸಾಧ್ಯವಾದೀತು! ಸಂಸ್ಕೃತಿ ಎಂದರೆ ಮತಧರ್ಮೀಯ ನೆಲೆಯಲ್ಲಿ ಆಂತರಿಕ ವೈರುಧ್ಯವನ್ನು ಪುರಸ್ಕರಿಸುವುದೆಂಬ ಮತಿಭ್ರಮಣೆ ಉಂಟಾಗಿದೆ. ಇದು ನಮ್ಮ ರಾಜ್ಯದ ಶ್ರೇಯಸ್ಸಿಗೆ ಕಳಂಕ ತಂದಿದೆ, ದೇಶದ ದಿಕ್ಕು ತಪ್ಪಿಸಿದೆ. ಪ್ರತಿಗಾಮಿ ಸಿದ್ಧಾಂತಕ್ಕೆ ಸೊಪ್ಪುಹಾಕದೆ ಸಾಮರಸ್ಯದ ಹೊಳಹನ್ನು ಉಳಿಸಿಕೊಂಡಿದ್ದ ನಮ್ಮ ರಾಜ್ಯದ ಛಾಯೆಯು ಮಸಿಗಟ್ಟಿಹೋಗಿ ಈಗ ತನ್ನ ದಿಕ್ಕನ್ನು ನಕಾರಾತ್ಮಕವಾಗಿ ಹೀನಾಯದ ಹಂತಕ್ಕೆ ತಂದುಕೊಂಡಿದೆ ಮತ್ತು ಅದರ ಓಟಕ್ಕೆ ಪ್ರತಿಬಂಧಕ ಒಡ್ಡುವುದು ಹೇಗೆಂಬ ಸವಾಲು ನಮ್ಮ ಮುಂದಿದೆ. ಬೃಹತ್ ಬಂಡವಾಳದ ನೆರಳಲ್ಲಿ ಹರಿಬಿಡಲಾಗುವ ಆಘಾತಕಾರಿ ಹೊಡೆತದ ಸ್ವರೂಪ ಮತ್ತು ಪ್ರಭಾವಕ್ಕೆ ಇದೊಂದು ದೃಷ್ಟಾಂತ. ಭಾಷೆಯ ಬಳಕೆಯಲ್ಲಿ ಸಹ ಇದು ದಿಕ್ಕು ಬದಲಿಸಿಬಿಟ್ಟಿದೆ.
ಅಧಿಕಾರದ ಲಾಲಸೆ ಮತ್ತು ಭ್ರಷ್ಟತನದಿಂದ ತುಂಬಿಕೊಳ್ಳುವ ಸಂಪತ್ತು ನಮ್ಮ ನಾಯಕರನ್ನು ಯಾವ ಮಟ್ಟಕ್ಕೆ ತಲುಪಿಸಿದೆಯೆಂದರೆ ಹಿಂದೆಂದೂ ಕಾಣಬಂದಿರದಷ್ಟು ಮೌಲ್ಯ ಮತ್ತು ಸಿದ್ಧಾಂತಗಳ ಅಪಗತಿ ನಡೆದಿದೆ. ಸಾಮಾನ್ಯವಾಗಿ ದಿಕ್ಕು ಬದಲಾಯಿಸುವುದೆಂದಾಗ ಋಜುಮಾರ್ಗದಲ್ಲಿ ಎಷ್ಟು ವರ್ಧನೆಯಾಗಿದೆಯೆಂದು ಮಾಪನ ಮಾಡುವುದು ರೂಢಿ; ಆದರೆ ನಮ್ಮ ಇಂದಿನ ಸಂದರ್ಭದಲ್ಲಿ ಸತ್ಪ್ರವೃತ್ತಿಯನ್ನು ಹಿಂದಿಕ್ಕಿಕ್ಕುವ ವಿಧಾನದಲ್ಲಿ ದಿಕ್ಕು ಬದಲಾಗಿರುವುದು ಕಳವಳಕರ. ಸ್ವಾಗತಾರ್ಹ ರೀತಿಯಲ್ಲಿ ದಿಕ್ಕು ಬದಲಾಯಿಸಿರುವುದು ಗ್ರಾಮ ಪಂಚಾಯಿತಿ ಮೊದಲಾದ ಸಾಂಸ್ಥಿಕ ವಲಯಗಳಲ್ಲಿ ಕಟ್ಟುಪಾಡುಗಳನ್ನು ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಿಕೊಡುವ ಮೂಲಕ ಉತ್ತಮಗೊಳಿಸುವುದರಲ್ಲಿ ಕಂಡುಬಂದಿದೆ. ಅದು ಸರ್ವಥಾ ಯಶಸ್ವಿಯಾಗಿರದಿದ್ದರೂ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಲು ಪ್ರಾಥಮಿಕ ಹೆಜ್ಜೆಗಳಾಗಿ ಪ್ರಾಮುಖ್ಯತೆ ಹೊಂದಿದೆ. ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಅಗಾಧ ಮುನ್ನಡೆ ಸಾಧಿಸಿರುವುದು ಹೆಗ್ಗಳಿಕೆಯೆಂಬ ಪ್ರತೀತಿ ನಮ್ಮ ರಾಜ್ಯದ ಸಂದರ್ಭದಲ್ಲಿ ವ್ಯಕ್ತವಾಗುತ್ತಿರುತ್ತದೆ. ಪರಿಣಾತ್ಮಕ ಬದಲಾವಣೆಯೇ ವಿನಾ ಅದು ಗುಣಾತ್ಮಕ ಬದಲಾವಣೆಯೆಂದು ಎನಿಸಿಕೊಂಡಿಲ್ಲವೆಂಬುದು ಒಂದು ಕಟುಸತ್ಯ.
ಇದನ್ನೂ ಓದಿರಿ: ನಮ್ಮನ್ನ ಹಿಂಗ್ಯಾಕ ನೋಡತಾರಪ ಬೆಂಗ್ಳೂರ ಮಂದಿ? (ಭಾಗ-2)
ಇಸ್ರೋ ಅಧ್ಯಕ್ಷರು ಕ್ಷಿಪಣಿ ಉಡಾಯಿಸುವ ಮುನ್ನ ತಿರುಪತಿಗೆ ಹೋಗಿ ಕೈಂಕರ್ಯ ಸಲ್ಲಿಸಿದ್ದು ನಾವು ವಿರುದ್ಧ ದಿಕ್ಕಿನಲ್ಲಿ ನಡೆದಿರುವುದನ್ನು ಸೂಚಿಸುತ್ತದೆ. ಅವರು ಅಲ್ಲಿಗೆ ತಮ್ಮ ಸ್ವಂತದ ಖರ್ಚಿನಲ್ಲಿ ತೆರಳಿದ್ದರೋ ಅಥವಾ ರಾಜ್ಯದ ಬೊಕ್ಕಸದಿಂದ ಹಣ ಪಡೆದು ಹೋಗಿದ್ದರೋ ತಿಳಿಯದು. ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಾಚರಣೆಯಲ್ಲೂ ಹೀಗೆ ದಿಕ್ಕು ಬದಲಾವಣೆಯು ಹಿಮ್ಮುಖವಾಗಿ ನಡೆದಿರುವುದು ಗೋಚರಿಸುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯವು ಜಿ.ಎಸ್.ಟಿ. ವಸೂಲಿಯಲ್ಲಿ ದಿಕ್ಕು ಬದಲಿಸುವಷ್ಟು ಬೆಳೆದಿದೆ, ಆದರೆ ಒಕ್ಕೂಟ ಸರ್ಕಾರದ ಮಂಗಾಟದಿಂದಾಗಿ ಅದರ ವೃದ್ಧಿಯು ರಾಜ್ಯದ ಹೆಚ್ಚಿನ ಪ್ರಗತಿಗೆ ಹಾದಿ ಮಾಡಿಕೊಟ್ಟಿಲ್ಲ. ಅಂದರೆ, ದಿಕ್ಕು ಬದಲಾಯಿಸಿದ್ದಿರಬಹುದಾದ ಸಂದರ್ಭ ಒದಗಿಬಂದಿತ್ತು, ಆದರೆ ವಸ್ತುನಿಷ್ಠವಾಗಿ ಗಮನಿಸಿದಾಗ ಪರಿಣಾಮವು ಹಸನಾಗಿ ವಿಕಾಸವಾಗಿಲ್ಲದಿರುವುದು ಕಣ್ಣಿಗೆ ರಾಚುತ್ತದೆ. ದಿಕ್ಕು ಬದಲಿಸಿದ್ದೇವೆ, ಆದರೆ ಬಹುಮಟ್ಟಿಗೆ ಹಿಮ್ಮುಖವಾಗಿ ಎಂಬುದು ಖೇದಕರ.
- ಸೋವಿಯತ್ ಒಕ್ಕೂಟ ಪತನವಾದಾಗ ನಿಮ್ಮ ಭಾವನೆ ಏನಾಗಿತ್ತು? ಸೋವಿಯತ್ ಒಕ್ಕೂಟದಂತಹ ಜಾಗತಿಕ counter balance ಇರದೇ ಇರುವುದು ಕರ್ನಾಟಕದ ಮೇಲೂ ಪರಿಣಾಮ ಬೀರುತ್ತಿದೆಯಾ?
ಜಿ.ಆರ್: ಘಾತುಕ ಗೋರ್ಬಚೇವ್‌ನ ಕುತ್ಸಿತ ಕ್ರಮಗಳಿಂದಾಗಿ ಮತ್ತು ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಪಕ್ಷವು ಆಗ್ಗೆ ಗಾಢವಾಗಿ ಮೂಡಿಬಂದಿದ್ದ ಅಪಸಿದ್ಧಾಂತವನ್ನು ಹಿಮ್ಮೆಟ್ಟಿಸಲಿಲ್ಲವಾಗಿ ಆ ದೇಶದಲ್ಲಿ ಅನೇಕ ಕ್ಷೇತ್ರಗಳಲ್ಲಿ ಪತನವು ಅನಿವಾರ್ಯವಾಗಿ ಮೂಡಿಬಂದಿತ್ತು. ಅದರ ಒಂದು ಪರಿಣಾಮವಾಗಿ ವಿಶ್ವದ ರಾಜಕೀಯ ಮತ್ತು ಆರ್ಥಿಕ ಸನ್ನಿವೇಶವು ಪ್ರತಿಗಾಮಿಯಾಗಿ ಹಿನ್ನಡೆಯಿತು. ನಮ್ಮ ದೇಶದ ಇಂದಿನ ಮಹಾನ್ ಹೆಗ್ಗಳಿಕೆಗಳೆಂದು ಹೇಳಲಾಗುತ್ತಿರುವ ‘ವಿಕಸಿತ ಭಾರತ’ ಮತ್ತು ‘ಆತ್ಮನಿರ್ಭರತೆ’ಗಳಂತೆ ಗೋರ್ಬಚೇವನ ‘ಪೆರಿಸ್ತ್ರೋಯ್ಕ’ ಪೆರಿ (ಅಂದರೆ ದೊಡ್ಡ) ಸ್ಕ್ರೋಕ್ ಆಗಿ ಪರಿಣಮಿಸಿ ವಿಶ್ವದ ಕಾರ್ಗತ್ತಲು ದಟ್ಟವಾಗುವಂತೆ ಮಾಡಿತು. ವೈಯಕ್ತಿಕವಾಗಿ ನಾನು ಆರಂಭದ ದೆಸೆಯಿಂದಲೂ ಅಲ್ಲಿಯ ಬದಲಾವಣೆಗಳನ್ನು ತೀವ್ರವಾಗಿ ವಿರೋಧಿಸಿದವನು ಮತ್ತು ಅಂದೇ “ದ ಗೋರ್ಬಚೇವ್ ಫೆನಾಮಿನನ್” ಎಂಬ ಹೊತ್ತಿಗೆಯನ್ನು ಹೊರತಂದಿದ್ದವನು. ಪತನದ ಹಾದಿಯನ್ನು ತುಳಿಯ ಹೊರಟ ಆರಂಭದ ದಿನಗಳಲ್ಲೇ ಸೋವಿಯೆತ್ ಒಕ್ಕೂಟದ ತಥಾಕಥಿತ ಸುಧಾರಣೆಗಳ ಮೂರ್ಖತನ ಮತ್ತು ಅಪಾಯವು ಸ್ಪಷ್ಟವಾಗಿ ತಿಳಿಯುವಂತಿದ್ದವು. ವಿಶ್ವದಲ್ಲಿ ಮಾನವ ಪ್ರಗತಿಯು ಕುಂಠಿತವಾಗಲು ಅಲ್ಲಿಯ ಪತನವೂ ಒಂದು ಮುಖ್ಯ ಕಾರಣವೆಂಬುದು ನನ್ನ ತಿಳಿವಳಿಕೆ. ಪ್ಯಾಲಿಸ್ತೀನ್, ಉಕ್ರೇನ್, ಮುಂತಾದೆಡೆಗಳ ಪಾತಕಗಳಿಗೂ ಸೋವಿಯೆತ್ ಒಕ್ಕೂಟದ ಕಮರಿಹೋಗುವಿಕೆಗೂ ಸಂಬಂಧವಿದೆಯೆಂಬುದು ನನ್ನ ಖಚಿತ ನಿಲುವು.
ನನ್ನ ಭಾವನೆಯು ಹತಾಶೆ, ಕೋಪ, ನಿರಾಸೆಗಳ ಸೂಚನೆಯೇ ವಿನಾ ವಸ್ತುಸ್ಥಿತಿಯ ಸರಿಯಾದ ಗ್ರಹಿಕೆಯಲ್ಲವೆಂಬ ಅಭಿಪ್ರಾಯ ಹಲವು ರೀತಿಗಳಲ್ಲಿ ವ್ಯಕ್ತವಾಗುತ್ತದೆ, ಆದರೆ ನಿಜಕ್ಕೂ ಆ ಪತನವು ಮಾನವತೆಯ ಪತನಕ್ಕೂ ಇಂಬು ನೀಡಿದೆಯೆಂಬುದು ನನ್ನ ನೈಜ ಅನಿಸಿಕೆ. ಆ ಪತನವು ನೇರವಾಗಿ ಮತ್ತು ಸ್ಪಷ್ಟವಾಗಿ ಗೋಚರವಾಗುವಂತೆ ಕರ್ನಾಟಕದ ಮೇಲೆ ಕೆಟ್ಟ ಪ್ರಭಾವ ಬೀರಿದೆಯೆಂದು ಹೇಳಲಾಗುವುದಿಲ್ಲ. ಆದರೆ ವಿಶ್ವದಲ್ಲಿ ಅದಾನಿ ಬಳಗದಂತಹ ಕ್ರೂರ ಶಕ್ತಿಗಳು ಎಲ್ಲೆಡೆ ಅಗಾಧವಾಗಿ ಬೆಳೆದಿರುವುದು ಸೋವಿಯೆತ್ ಒಕ್ಕೂಟದ ಪತನದ ನೆರಳಿನಲ್ಲಿ ಎಂಬುದು ನಿರ್ವಿವಾದವಾದುದು ಎಂಬುದೇ ನನ್ನ ಭಾವನೆ. ಆ ಮಟ್ಟಿಗೆ ಸೋವಿಯತ್ ಒಕ್ಕೂಟದ ಪತನವು ಟಿಂಬಕ್ಟೂ ಮೇಲೆ ಪ್ರಭಾವ ಬೀರಿದಂತೆ ಕರ್ನಾಟಕದ ಮೇಲೂ ಬೀರಿದೆ, ಆದರೆ ಅಷ್ಟು ಸ್ಪಷ್ಟವಾಗಿ ಗೋಚರಿಸುವುದಿಲ್ಲ, ಅಷ್ಟೆ. ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಕನಿಷ್ಠ ಮಾನವ ಹಾಗೂ ಸಾಂವಿಧಾನಿಕ ಹಕ್ಕುಗಳ ಚ್ಯುತಿಗೆ ಏನೆಲ್ಲ ಕಾರಣಗಳಿವೆ, ಪ್ರಭಾವಗಳಿವೆ ಎಂಬುದನ್ನು ಗಣನೆಗೆ ತೆಗೆದುಕೊಂಡಾಗ ಗೋರ್ಬಚೇವನ ಪತನ ಅಂದೇ ಮತ್ತು ಅಲ್ಲೇ ಆಗಲಿಲ್ಲವಲ್ಲ ಎಂದು ನನಗೆ ಖೇದವಿರುವುದು ಸೂರ್ಯಸ್ಯ ಸತ್ಯ.
ಇದನ್ನೂ ಓದಿರಿ: ವಿಶ್ಲೇಷಣೆ | ಕರ್ನಾಟಕದಲ್ಲಿ ಒಬಿಸಿ ಮೀಸಲಾತಿ ಸಾಗಿಬಂದ ದಾರಿ
- ಕರ್ನಾಟಕದ ಚಳವಳಿಗಳ ಮೇಲೆ ಎಡಪಂಥದ ಪ್ರಭಾವ ಈ 50 ವರ್ಷಗಳಲ್ಲಿ ಏನಿತ್ತು? ಕಮ್ಯುನಿಸ್ಟ್ ಚಳವಳಿಯು ರಾಜ್ಯದಲ್ಲಿ ಕಂಡುಕೊಂಡ ತಿರುವುಗಳೇನು? ಚಳವಳಿ ಕಾವು ಕಳೆದುಕೊಂಡಿದ್ದು ಹೇಗೆ?
ಜಿ.ಆರ್: ಮೂಲತಃ ನಮ್ಮ ರಾಜ್ಯದಲ್ಲಿ ಅನ್ಯಭಾಷಿಕರ ದೌಲತ್ತು ಮತ್ತು ಕರ್ನಾಟಕದ ಆರ್ಥಿಕ ಶಕ್ತಿ ಹಾಗೂ ಬಹುಮುಖೀ ಉತ್ಪಾದನೆಯ ಹೊರತಾಗಿಯೂ ಜನಸಾಮಾನ್ಯರ ಕಂಗಾಲು ಜೀವನ ಕಂಡಾಗ ಎಡಪಂಥದ ಕುಂಠಿತ ಶಕ್ತಿ ಮತ್ತು ಪ್ರಭಾವ ಮೂಲಭೂತವಾಗಿ ನೇತ್ಯಾತ್ಮಕ ಪರಿಣಾಮ ಬೀರಿದೆಯೆಂಬುದು ಸ್ವತ:ಸಿದ್ಧ. ನನಗೆ ವಿಶೇಷವಾಗಿ ತಿಳಿದಿರುವುದು 1960 ಮತ್ತು 70ರ ದಶಕಗಳು. ಶಾಸನಸಭೆಯಲ್ಲಿ ಸಹ ಆಗ್ಗೆ ಎಡಪಂಥಗಳಿಗೆ ಸ್ವಲ್ಪ ಪ್ರಾತಿನಿಧ್ಯವಿತ್ತು ಮತ್ತು ಅದಕ್ಕೆ ಮೀರಿದ ರಾಜಕೀಯ – ಸಾಮಾಜಿಕ ಪ್ರಭಾವವಿದ್ದಿತು. ಕಾರ್ಮಿಕ ಚಳವಳಿಯಂತೂ ದುಡಿಯುವ ಜನಕ್ಕೆ ಸಾಕಷ್ಟು ಸೌಲಭ್ಯಗಳನ್ನು ಗಳಿಸಿಕೊಟ್ಟು ಸ್ವಲ್ಪಮಟ್ಟಿನ ನೆಮ್ಮದಿಯನ್ನು ನೀಡಬಲ್ಲುದಾಗಿತ್ತು. ಅಷ್ಟೇನೂ ಬಲಶಾಲಿಯಲ್ಲದ ಅಧ್ಯಾಪಕ ಚಳವಳಿ ಸಹ ಪೌರುಷ ಪ್ರದರ್ಶಿಸುವ ವಾತಾವರಣವಿತ್ತು. ಹೋರಾಟ, ಪ್ರತಿಭಟನೆ, ಸಭೆ, ಮೆರವಣಿಗೆ, ಹೀಗೆ ಹಲವು ರೀತಿಗಳಲ್ಲಿ ಸಾರ್ವಜನಿಕರು ಎಷ್ಟೋ ಅಷ್ಟು ಭಾಗವಹಿಸಬಹುದಿತ್ತು. ಇದು ತುರುಬು ನೆನೆಸಿಕೊಳ್ಳುವ ಮಾದರಿಯ ಮಾತಲ್ಲ. ಚಳವಳಿಯು ಕಾವು ಕಳೆದುಕೊಂಡಿದ್ದು ದುಡಿಯುವವರ ಅಸಾಮರ್ಥ್ಯದಿಂದಲ್ಲ, ಕಾನೂನು – ನ್ಯಾಯಾಲಯ – ಪೊಲೀಸ್ – ಪ್ರಭುತ್ವ, ಎಲ್ಲವೂ ದುಡಿಯುವವರ ವಿರೋಧಿ ನಿಲುವನ್ನು ತಾಳಲು ಶಕ್ತವಾದ್ದರಿಂದ. ಇಂದು ಕಾರ್ಮಿಕ ಚಳವಳಿಯು ಆರ್ಥಿಕತೆಯ ಆಳವಾದ ಚರ್ಚೆ ಮಾಡಲಾಗುತ್ತಿಲ್ಲ, ಮಧ್ಯಪ್ರವೇಶ ಮಾಡಲು ಸಮರ್ಥವಾಗಿಲ್ಲ. ಆದರೂ ಅದರ ಚೈತನ್ಯ ಇಡಿಯಾಗಿ ಕಳೆದುಹೋಗಿಲ್ಲ, ಕಳೆದುಕೊಳ್ಳುವುದಿಲ್ಲ. ಮಾಧ್ಯಮಗಳು, ಪ್ರಭುತ್ವದ ಜಡ್ಡು ನಿಲುವು, ಸಾರ್ವಜನಿಕರ ಅಸಡ್ಡೆ, ಸಂವಹನದ ಅಭಾವ ಇವೆಲ್ಲ ಇಂದಿನ ಸನ್ನಿವೇಶಕ್ಕೆ ಭಾಗಶಃ ಕಾರಣಗಳು, ಆದರೆ ದುಡಿಯುವ ಜನ ಸದಾಕಾಲ “ಮಡಗಿದ ಹಾಗೆ” ಇರುವುದಿಲ್ಲ, ಬದಲು “ಮಡಗಲು” ಶಕ್ತರಾಗುತ್ತಾರೆ.
- ಅಂಬೇಡ್ಕರರ ಕುರಿತ ಎಡಪಂಥೀಯರ ಅನಿಸಿಕೆಯ ವಿಕಾಸವನ್ನು ಈ 50 ವರ್ಷಗಳಲ್ಲಿ ನೀವು ಹೇಗೆ ಗುರುತಿಸಬಯಸುತ್ತೀರಿ?
ಜಿ.ಆರ್: ಬಾಬಾಸಾಹೇಬರ ಜೊತೆ ಹೋರಾಟಗಳಲ್ಲಿ ನೇರವಾಗಿ ಭಾಗಿಗಳಾಗಿದ್ದ ಹಲವರು ನನಗೆ ವೈಯಕ್ತಿಕವಾಗಿ ಪರಿಚಿತರಾಗಿದ್ದರು: ಸುರ್ಬಾನಾನ, ಚಂದ್ರಕಾಂತ ಅಧಿಕಾರಿ, ಹಾಟೆ, ಮೋರೆ, ಇತ್ಯಾದಿ. ಅಂಬೇಡ್ಕರರ ಜೊತೆ ಕೆಲಸ ಮಾಡಿದವರು ಸಾವಿರಾರು ಮಂದಿ. ಅವರ ‘ಸ್ವತಂತ್ರ ಕಾರ್ಮಿಕ ಪಕ್ಷ’ದ ಪ್ರಧಾನ ಕಾರ್ಯದರ್ಶಿಯಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದವರು ಅನಂತ ಚಿತ್ರೆ. ಆ ಪಕ್ಷ 1935ರ ನಂತರ ಜರುಗಿದ ಚುನಾವಣೆಗಳಲ್ಲಿ ಮಹಾರಾಷ್ಟ್ರದ ಕೊಂಕಣದಲ್ಲಿ 15 ಸ್ಥಾನಗಳ ಪೈಕಿ 12 ಸ್ಥಾನಗಳಲ್ಲಿ ಜಯ ಗಳಿಸಿದ್ದಿತು. ಬಾಬಾಸಾಹೇಬರ ಅನುಮತಿ ಪಡೆದೇ ಮೋರೆ ಅವರು ಕಮ್ಯುನಿಸ್ಟ್ ಪಕ್ಷದ ಸದಸ್ಯರಾದರು. ಆ ನಂತರವೂ ನಿರಂತರವಾಗಿ ಅವರು ಬಾಬಾಸಾಹೇಬರ ಜೊತೆ ಹೋರಾಟಗಳಲ್ಲಿ ಭಾಗಿಗಳಾಗಿದ್ದರು. ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ ಪಕ್ಷದ ರಚನೆಯ ನಂತರ ಚಿತ್ರೆ, ಸುರ್ಬಾನಾನಾ ಮುಂತಾದವರು ಅದರ ಸದಸ್ಯರಾಗಲು ಅರ್ಹತೆ ಕಳೆದುಕೊಂಡಿದ್ದರು. ಆದರೆ ಅವರೆಲ್ಲ ಬಾಬಾಸಾಹೇಬರ ಜೊತೆ ಹೋರಾಟಗಳಲ್ಲಿ ಭಾಗಿಗಳಾಗಿಯೇ ಇರುತ್ತಿದ್ದರು. ಅವರೆಲ್ಲ ಬಾಬಾಸಾಹೇಬರ ಸಹ-ಚಿಂತಕರು ಮತ್ತು ಹೋರಾಟಗಾರರು. ಚಂದ್ರಕಾಂತ ಅಧಿಕಾರಿ ಬೌದ್ಧಧರ್ಮಕ್ಕೆ ಸೇರ್ಪಡೆ ಹೊಂದಿದ್ದರು ಕೂಡ. ಎಡಪಂಥೀಯರು ಬಾಬಾಸಾಹೇಬರಿಂದ ದೂರವಾದರು ಎಂಬ ಮಿಥ್ಯೆ ಅರ್ಥರಹಿತವಾದ್ದು. ಅಂಬೇಡ್ಕರ್ ನೇತೃತ್ವದ ಹತ್ತಾರು ಚಳವಳಿಗಳಲ್ಲಿ ಸರ್ದೇಸಾಯಿ, ಪರುಲೇಕರ್, ರಣದಿವೆ, ಚಿತ್ರೆ, ಮೋರೆ ಮುಂತಾದವರು ಭಾಗಿಗಳಾಗಿಯೇ ಉಳಿದಿದ್ದರು. ಇತಿಹಾಸವನ್ನು ತಿರುಚುವವರಿಗೂ ಬಾಬಾಸಾಹೇಬರಿಗೂ ಅಜಗಜಾಂತರ ವ್ಯತ್ಯಾಸವಿದೆ. ಕಾರ್ಮಿಕ ಸಂಘಗಳ ಪೈಪೋಟಿಯ ಸಂದರ್ಭದಲ್ಲಿ ಮಾತ್ರ ಡಾ.ಅಂಬೇಡ್ಕರ್ ಮತ್ತು ಎಸ್. ಎ. ಡಾಂಗೆ ಪರಸ್ಪರ ಸಂಘರ್ಷದಲ್ಲಿ ತೊಡಗಿದ್ದರು. ದಿನಗಳು ಕಳೆದಂತೆ ಸರಿಯಾದ ಪರಿಪ್ರೇಕ್ಷ್ಯದ ಬಗೆಗಿನ ತಿಳುವಳಿಕೆ ಎಡಪಂಥೀಯರಲ್ಲಿ ಹಾಗೂ ದಲಿತರಲ್ಲಿ ಮೂಡುತ್ತಿದೆ. ಅದಿನ್ನೂ ಗಟ್ಟಿಯಾಗಿ ಬೆಳೆದಾಗಷ್ಟೇ ಎಡಪಂಥ ಮತ್ತು ದಲಿತರ ನಿಜವಾದ ರಾಜಕೀಯ – ಸಾಮಾಜಿಕ – ಸಾಂಸ್ಕೃತಿಕ ಶಕ್ತಿ ಪೂರ್ಣವಿಕಾಸ ಕಾಣಬಲ್ಲದು. ನೈಜ ಕಾಳಜಿಯುಳ್ಳ ಎಡಪಂಥೀಯರಾಗಲಿ, ದಲಿತರಾಗಲಿ, ತಮ್ಮಗಳ ನಡುವೆ ಸಹಚರ್ಯವನ್ನು ಅಂಗೀಕರಿಸುತ್ತಾರೆಯೇ ವಿನಾ ವೈಮನಸ್ಯವನ್ನಲ್ಲ.
- ಹಿಂದೂ ಮುಸ್ಲಿಂ ಧ್ರುವೀಕರಣದ ರಾಜಕೀಯವೇ ಈ ಹೊತ್ತಿನ ಬಹುಮುಖ್ಯ ಅಜೆಂಡಾವಾಗಿದೆ. ಸನಾತನ ಧರ್ಮ, ಸನಾತನ ಸಂಸ್ಕೃತಿ ಎಂಬುದು ಮತ್ತೆ ಮತ್ತೆ ಚರ್ಚೆಗೆ ಬರುತ್ತಿದೆ. ಇದನ್ನು ನೀವು ಹೇಗೆ ವಿಶ್ಲೇಷಿಸುವಿರಿ?
ಜಿ.ಆರ್: ತಥಾಕಥಿತ ಸನಾತನ ಸಂಸ್ಕೃತಿ, ಸನಾತನ ಧರ್ಮ, ಕಟ್ಟಾ ಹಿಂದುತ್ವ ಇತ್ಯಾದಿಗಳ ಬಗೆಗೆ ಇಂದಿನ ಕೆಲವರ ವ್ಯಾಖ್ಯಾನವು ತೀರಾ ಅಡ್ಡದಾರಿಯವು, ಬೇಜವಾಬ್ದಾರಿಯವು ಮತ್ತು ದ್ವೇಷಪೂರಿತವಾದವು. ದುಷ್ಟ ರಾಜಕೀಯಕ್ಕೆ ಮತೀಯತೆಯು ಒಂದು ನಿಕೃಷ್ಟ ಸಾಧನವಾಗಿದೆ. ಹೇಳುವುದು ‘ವಸುಧೈವ ಕುಟುಂಬಕಮ್, ಮಾ ವಿದ್ವಿಷಾವಹೈ, ಸರ್ವೇ ಜನಾಃ ಸುಖಿನೋ ಭವಂತು’ ಇತ್ಯಾದಿ; ಮಾಡುವುದು ನಿಕೃಷ್ಟವಾದ ದ್ವೇಷ , ಜಡ್ಡುತನ, ಮೂರ್ಖತನದ ಇತಿಹಾಸ ಕಲ್ಪನೆ, ಭ್ರಷ್ಟಾಚಾರ, ಬಂಡವಾಳಿಗರ ಪಾದಸೇವೆ ಇತ್ಯಾದಿ. ವಿಶಾಲ ಸಾಂಸ್ಕೃತಿಕ ತಳಹದಿಯ ಮೇಲೆ ಶಿಕ್ಷಣ ಪಡೆಯುತ್ತಿದ್ದ ನಮ್ಮ ದೇಶ ಇಂದು ಹಿಂಸೆಯನ್ನು ಬಲವಾಗಿ ತನ್ನದಾಗಿಸಿಕೊಂಡಿದೆ, ಅದಾನಿಯಂಥವರ ಕೈಂಕರ್ಯಕ್ಕೆ ಬದ್ಧವಾಗಿದೆ. ‘ಸರ್ವ ಜನಾಂಗದ ಶಾಂತಿಯ ತೋಟ’ದಲ್ಲಿ ಘೋರ ವಿಷಸರ್ಪ ಯಜಮಾನಿಕೆಯ ಸ್ಥಾನವನ್ನು ಎಲ್ಲ ರೀತಿಯ ಕೃತ್ರಿಮಗಳ ಬಳಕೆಯಿಂದ ತನ್ನದಾಗಿಸಿಕೊಳ್ಳುತ್ತಿದೆ. ವೈಚಾರಿಕತೆಯನ್ನು ಪರಕೀಯವೆಂದು ಮೂದಲಿಸುವುದು ಈ ಅಸಂಸ್ಕೃತಿಯ ಒಂದು ಲಕ್ಷಣ. ನ್ಯಾಯ, ವೈಶೇಷಿಕ, ಬೌದ್ಧ, ಲೋಕಾಯತ, ಸಾಂಖ್ಯ, ಮುಂತಾದ ತತ್ತ್ವಗಳ ನಾಡಿನಲ್ಲಿ ಗಾಂಧಿ ಹಂತಕರು ಹಾಗೂ ಅಂಥವರ ಚಿಂತನೆ ಮೌಲಿಕವೆಂಬ ಭ್ರಾಂತಿ ನೆಲೆಸುತ್ತಿದೆ. ನಮ್ಮ ರಾಜ್ಯದ ವಾತಾವರಣಕ್ಕಿಂತಲೂ ಹೆಚ್ಚು ಭೀಕರವಾದ ಸನ್ನಿವೇಶವು ಬೇರೆಷ್ಟೋ ರಾಜ್ಯಗಳಲ್ಲಿ ಬೇರು ಬೆಳೆಸಿಕೊಂಡಿದೆ. ನಮ್ಮ ದೇಶದ ಸಂಸ್ಕೃತಿ ಮತ್ತು ನಡತೆಗೆ ಹೊರತಾದ ನಿಲುವು ಹಾಗೂ ಹಿಂಸೆಗಳನ್ನು ದೂರಮಾಡಿ ಮುನ್ನಡೆಯುವುದು ಇಂದಿನ ತುರ್ತು. ನಮಗೆ ಧ್ರುವೀಕರಣವು ಅಮಾನ್ಯ, ದೃಢತೆಯು ನಮ್ಮ ಮೂಲ ಲಕ್ಷಣ.
ಇದನ್ನೂ ಓದಿರಿ: ಮೋದಿಯ ಟೀಕಿಸುತ್ತಿದ್ದ ರಾಣೆ, ಮುಸ್ಲಿಂ ದ್ವೇಷಿಯಾಗಿದ್ದು ಹೇಗೆ?
- ಪುರಾಣ, ಮಹಾಕಾವ್ಯ ಸೇರಿದಂತೆ ದೇಸಿ ಸಂಸ್ಕೃತಿಯ ಕೆಲವು ಸಾಂಸ್ಕೃತಿಕ ಆಯಾಮಗಳನ್ನು ರಾಜಕಾರಣದ ಭಾಗವಾಗಿ ನೋಡಬೇಕು, ಅವುಗಳನ್ನು ರಾಜಕಾರಣದ ಭಾಗವಾಗಿಸಿಕೊಳ್ಳಬೇಕು ಎನ್ನುವುದಾದರೆ ನಿಮ್ಮ ಅಭಿಪ್ರಾಯವೇನು?
ಜಿ.ಆರ್: ಪರಂಪರೆ, ಸಮಕಾಲೀನತೆ, ಸಮುದಾಯದ ಸಂತಸ, ಇವೆಲ್ಲ ಯಾವುದೇ ಶುದ್ಧ ಸಂಸ್ಕೃತಿಯ ಆದ್ಯ ಲಕ್ಷಣಗಳು. ಸಾಂಸ್ಕೃತಿಕ ಆಯಾಮಗಳನ್ನು ಪ್ರತಿಯೊಂದು ಚಿಂತನೆ ಮತ್ತು ಕೃತಿಯ ಸಂದರ್ಭದಲ್ಲೂ ಅಳವಡಿಸಿಕೊಳ್ಳುವುದು ಆದರ್ಶ ನಾಗರಿಕತೆಯ ಲಕ್ಷಣ. ಸಾರ್ವಜನಿಕ ಸಂವಾಹಕರ ತಿಳಿವಳಿಕೆ ಮತ್ತು ನಡತೆ ಸೀಮಿತ ಆಯಾಮ ಹೊಂದುತ್ತಿರುವುದು ಇಂದಿನ ಆತಂಕ. ಉದಾಹರಣೆಗೆ, ಯಾರು ಮತ್ತು ಎಲ್ಲಿ ಜನರು ದೇವಸ್ಥಾನಗಳಿಗೆ ಪ್ರವೇಶ ಪಡೆಯಬೇಕೆಂಬ ಪ್ರಶ್ನೆಯು ೨೧ನೆಯ ಶತಮಾನದ ಮಾನವಿಕ ನಡತೆಯೇ? ಸಾಹಿತ್ಯಾದಿ ವಲಯಗಳಲ್ಲಿ ಮಾತುಗಳು ಬಂದುವೇ ವಿನಾ ಜನರ ಪ್ರಜ್ಞೆಗೆ ಸೂಕ್ತ ರೂಪ ನೀಡಿದ್ದು ಕಡಿಮೆ. ಆಡಿದ್ದು- ಮಾಡಿದ್ದು ಬೇರೆಬೇರೆ. ಅವುಗಳ ಸಮನ್ವಯ ನಮ್ಮ ಆಯ್ಕೆ ಆಗಬೇಕಾಗಿದೆ. ರಾಜಕೀಯಕ್ಕೆ ಸಹ ಸೂಕ್ತ ಸಾಂಸ್ಕೃತಿಕ ಆಯಾಮವಿದೆಯೆಂಬ ಪ್ರಜ್ಞೆ ಮತ್ತು ಕ್ರಿಯೆ ನಮಗೆ ದಾರಿದೀಪ.
(ಕರ್ನಾಟಕದ ಸಾಕ್ಷಿಪ್ರಜ್ಞೆಯಂತೆ ಬದುಕುತ್ತಿರುವ ವಿರಳಾತೀವಿರಳ ವಿದ್ವಾಂಸರಲ್ಲಿ ಡಾ.ಜಿ.ರಾಮಕೃಷ್ಣ ಅವರು ಒಬ್ಬರು. ಮಹಾಡ್‌ನ ಡಾ.ಅಂಬೇಡ್ಕರ್ ಕಾಲೇಜು, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಮೂರು ದಶಕ ಸೇವೆ ಸಲ್ಲಿಸಿದ ಇವರು, ಎಡಪಂಥೀಯ ಚಿಂತನೆಗಳಿಗೆ ಹೊಸ ಸ್ಪರ್ಶ ನೀಡಿದರು. ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿಯ ಭಾಗವಾಗಿ, ಪ್ರಖರ ಸಂಸ್ಕೃತ ವಿದ್ವಾಂಸರಾಗಿ ಇವರು ಕೊಟ್ಟಿರುವ ವೈಚಾರಿಕ ಕೃತಿಗಳು ಬೀರಿರುವ ಪರಿಣಾಮ ಅಗಾಧ. ಭಗತ್‌ಸಿಂಗ್, ಚೆ ಗೆವಾರಾ, ವೈಚಾರಿಕ ಜಾಗೃತಿ, ಯೋಗಪ್ರವೇಶ, ದೇವಿಪ್ರಸಾದ್ ಮತ್ತು ಲೋಕಾಯತ ದರ್ಶನ, ಭಗವದ್ಗೀತೆ: ಒಂದು ಅವಲೋಕನ, ಋಗ್ವೇದ ಪ್ರವೇಶಿಕೆ: ಐತಿಹ್ಯ ಮತ್ತು ವಾಸ್ತವ, ಹಿಂದುತ್ವದ ಹಿಂದೆ ಮುಂದೆ ಮೊದಲಾದ ಕೃತಿಗಳನ್ನು ರಾಮಕೃಷ್ಣ ಅವರು ಬರೆದಿದ್ದಾರೆ.)





