ರಾಜಕೀಯ ಅಸ್ತ್ರವಾಗಿ ಅತ್ಯಾಚಾರಗಳನ್ನು ನಡೆಸಬೇಕೆಂಬುದು ಹಿಂದುತ್ವ ಪ್ರತಿಪಾದಕ ವಿ.ಡಿ.ಸಾವರ್ಕರ್ ದೃಷ್ಟಿಕೋನವಾಗಿತ್ತು. ಇವರು ಇತಿಹಾಸವನ್ನು ತಮ್ಮ ಮೂಗಿನ ನೇರಕ್ಕೆ ಬರೆದುಕೊಳ್ಳುತ್ತಾ, ಆ ಮೂಲಕ ಬ್ರಿಟಿಷರಿಗೆ ಅನುಕೂಲ ಮಾಡಿಕೊಡುತ್ತಿದ್ದರು ಎಂಬುದು ಚರಿತ್ರೆಯಿಂದ ತಿಳಿದು ಬರುವ ಸಂಗತಿ. ಆದರೆ ಇವರ ವಿಕೃತಿ ಯಾವ ಮಟ್ಟಕ್ಕೆ ಹೋಯಿತೆಂದರೆ- ‘ಹಿಂದೂಗಳು ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಪ್ರತೀಕಾರ ತೀರಿಸಿಬೇಕು’ ಎಂದು ಪ್ರತಿಪಾದಿಸುವ ಮಟ್ಟಕ್ಕೆ! ಸಾವರ್ಕರ್ ಅವರ ಸ್ತ್ರೀ ವಿರೋಧಿ ಧೋರಣೆಗಳು ಇಂತಹ ವಿಚಾರಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ.
ನಿಧನರಾಗುವ ಕೆಲವು ವರ್ಷಗಳ ಹಿಂದಷ್ಟೇ ಸಾವರ್ಕರ್ ಬರೆದಿದ್ದ ‘six glorious epochs of indian history’ ಕೃತಿಯಲ್ಲಿ “ರಾಜಕೀಯ ಅಸ್ತ್ರವಾಗಿ ಅತ್ಯಾಚಾರವನ್ನು ಬಳಸಬೇಕು” ಎಂದು ಸಮರ್ಥಿಸುವುದನ್ನು ಇತಿಹಾಸ ಬರೆಹಗಾರರು ಸ್ಪಷ್ಟವಾಗಿ ಗುರುತಿಸಿದ್ದಾರೆ. ‘ಹಿಂದೂ ಸದ್ಗುಣ’ದ ಕಲ್ಪನೆಯನ್ನು ಪುನರ್ ರಚಿಸುತ್ತಾ ಈ ವಿಕೃತ ವಿಚಾರಗಳನ್ನು ಮುನ್ನಲೆಗೆ ತರುತ್ತಾರೆ.
ಆರಂಭಿಕ ಕಾಲದಿಂದಲೂ ಭಾರತದ ಮೇಲೆ ಆಗಿರುವ ಆಕ್ರಮಣಗಳಿಗೆ ಹಿಂದೂ ಸಮಾಜ ಹೇಗೆ ಪ್ರತಿರೋಧವನ್ನು ತೋರಿದೆ ಎಂಬ ವಿವರಗಳನ್ನು ‘ಸಿಕ್ಸ್ ಗ್ಲೋರಿಯಸ್’ನಲ್ಲಿ ನೀಡುತ್ತಾರೆ. ಹಲವು ಸಂಶಯಾತ್ಮಕ ಐತಿಹಾಸಿಕ ದಾಖಲೆಗಳನ್ನು, ವಿದೇಶಿ ಪ್ರವಾಸಿಗರು ನಮೂದಿಸಿರುವ ಉತ್ಫ್ರೇಕ್ಷಿತ ಸಂಗತಿಗಳನ್ನು, ಹಿಂದೂ- ಮುಸ್ಲಿಂ ವಿಭಜನಾ ರಾಜಕಾರಣದ ಭಾಗವಾಗಿ ವಸಾಹತುಶಾಹಿ ಇತಿಹಾಸಕಾರರು ಬರೆದ ಕೃತಿಗಳನ್ನು ಸಾವರ್ಕರ್ ಅವಲಂಬಿಸಿದ್ದರು ಎಂಬುದು ವಾಸ್ತವ. ಆದರೆ ಸಾವರ್ಕರ್ ತಮ್ಮ ಅನಾಗರಿಕ ದೃಷ್ಟಿಕೋನವನ್ನು ಪ್ರದರ್ಶಿಸಲು ಯಾವುದೇ ಹಿಂಜರಿಕೆಯನ್ನು ತಾಳಲಿಲ್ಲ ಎಂಬುದು ಆತಂಕಪಡಬೇಕಾದ ಸಂಗತಿ.

ಹಿಂದೂಗಳ ಪ್ರತಿರೋಧ ಎಂದು ಯಾವುದನ್ನು ದಾಖಲಿಸುತ್ತಿದ್ದಾರೋ, ಅದು ಹಿಂದೂಗಳ ಸದ್ಗುಣಗಳ ಇತಿಹಾಸವೂ ಹೌದು ಎಂಬುದು ಸಾವರ್ಕರ್ ನಂಬಿಕೆ. ‘ಸದ್ಗುಣಗಳ ವಿಕೃತ ಪರಿಕಲ್ಪನೆ’ ಎಂಬ ಅಧ್ಯಾಯದಲ್ಲಿ ತಮ್ಮ ವಾದವನ್ನು ಮಂಡಿಸುತ್ತಾ ಹೋಗುತ್ತಾರೆ.
“ವಾಸ್ತವವಾಗಿ ಸದ್ಗುಣಗಳು ಮತ್ತು ದುರ್ಗುಣಗಳು ಕೇವಲ ಸಾಪೇಕ್ಷ ಪದಗಳು” ಎನ್ನುವ ಸಾವರ್ಕರ್, “ಪರಿಸ್ಥಿತಿಗಳು ಬದಲಾಗುತ್ತವೆ, ಸಮಾಜಗಳು ಯಾವಾಗಲೂ ಬದಲಾವಣೆಯಲ್ಲಿರುತ್ತವೆ. ಹಿಂದೆ ಸದ್ಗುಣವೆಂದು ಪರಿಗಣಿಸಲ್ಪಟ್ಟಿದ್ದು ಮಾನವಕುಲಕ್ಕೆ ಹಾನಿಕಾರಕವಾಗಿದ್ದರೆ, ವರ್ತಮಾನದಲ್ಲಿ ಅದು ದುರ್ಗುಣವಾಗಬಹುದು” ಎಂದು ಹೇಳುತ್ತಾರೆ.
ಇದನ್ನೂ ಓದಿರಿ: ಬಾಲಗಂಗಾಧರ ತಿಲಕರ ‘ಭಗವದ್ಗೀತಾವಾದ’ ಬಗ್ಗುಬಡಿದ ಬಾಬಾಸಾಹೇಬರು
“ಉದಾಹರಣೆಗೆ ಹೇಳುವುದಾದರೆ, ಜಾತಿ ವ್ಯವಸ್ಥೆಯು ತನ್ನ ಶುದ್ಧ ಮತ್ತು ಅಶುದ್ಧ ನಿಯಮಗಳೊಂದಿಗೆ ಹಿಂದೂ ಸಮಾಜವನ್ನು ಸ್ಥಿರಗೊಳಿಸಲು ಸಹಾಯ ಮಾಡಿತು. ಆದರೆ ಈ ನಿಯಮಗಳಲ್ಲಿ ಕೆಲವು ನಿಷ್ಕ್ರಿಯವಾದವುಗಳು, ಹಿಂದೂ ಸಮಾಜದಲ್ಲಿ ‘ಏಳು ಸಂಕೋಲೆ’ಗಳನ್ನು ತಂದವು” ಎನ್ನುತ್ತಾ, “ಅಸ್ಪೃಶ್ಯತೆ, ಇತರ ಜಾತಿಯ ಜನರಿಗೆ ಕುಡಿಯುವ ನೀರಿನ ನಿಷೇಧ, ಅಂತರ್ಜಾತಿ ಭೋಜನ, ಅಂತರ್ಜಾತಿ ವಿವಾಹ, ಸಮುದ್ರಯಾನ, ಬಲವಂತವಾಗಿ ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರನ್ನು ಹಿಂದೂ ಧರ್ಮಕ್ಕೆ ಮರಳಿ ಸೇರಿಸಿಕೊಳ್ಳುವುದನ್ನು ನಿಷೇಧಿಸುವುದು ಮತ್ತು ಈ ನಿಷೇಧಗಳನ್ನು ಧಿಕ್ಕರಿಸಿದವರನ್ನು ಬಹಿಷ್ಕರಿಸುವುದು- ಇವುಗಳೇ ಆ ಸಂಕೋಲೆ” ಎಂದು ತಿಳಿಸುತ್ತಾರೆ.
ಈ ಏಳು ಸಂಕೋಲೆಗಳೇ ಮುಸ್ಲಿಮರು ಗೆಲುವು ಪಡೆಯಲು ಅನುಕೂಲವಾದವು, ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಜಾತಿಯ ನಿಯಮಾವಳಿಗಳನ್ನೇ ಬಳಸಿಕೊಂಡರು ಎಂದು ಸಾವರ್ಕರ್ ವಾದಿಸುತ್ತಾರೆ. ಇಷ್ಟಕ್ಕೆ ಸುಮ್ಮನಾಗದೆ ತಮ್ಮ ವಿಕೃತ ಆಲೋಚನೆಗಳನ್ನು, ಕೋಮುವಾದಿ ದೃಷ್ಟಿಕೋನವನ್ನು ಹರಿಯಬಿಡಲು ಆರಂಭಿಸುತ್ತಾರೆ. “ಸೋಲಲ್ಪಟ್ಟ ಹಿಂದೂಗಳನ್ನು, ಗೆದ್ದವರು ಬಲವಂತವಾಗಿ ಮತಾಂತರಿಸಿದರು. ಅವರಿಗೆ ಆಹಾರ ಮತ್ತು ನೀರನ್ನು ಒದಗಿಸಿದರು. ಉಪಪತ್ನಿಯರನ್ನು, ಹೆಂಡತಿಯರನ್ನು ಅಪಹರಿಸಿದರು. ಮತ್ತೆ ಅವರನ್ನು ಹಿಂದೂ ಧರ್ಮಕ್ಕೆ ಕರೆದೊಯ್ಯದಂತೆ ನಿಷೇಧ ಹೇರಲಾಯಿತು. ಹೀಗಾಗಿ ಮುಸ್ಲಿಮರಾಗಿ ಬದುಕುವುದನ್ನು ಬಿಟ್ಟು ಅವರಿಗೆ ಬೇರೆ ದಾರಿ ಇರಲಿಲ್ಲ” ಎಂಬುದು ಸಾವರ್ಕರ್ ಅಭಿಪ್ರಾಯ.
‘ಇಸ್ಲಾಮಾಫೋಬಿಯಾ’ದ ದೃಷ್ಟಿಕೋನಕ್ಕೆ ತಿರುಗುತ್ತಾ, ಅತ್ಯಾಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸಬೇಕೆಂಬ ನಿರ್ಧಾರಗಳನ್ನು ಪ್ರಕಟಿಸುತ್ತಾರೆ. “ಸಾಂದರ್ಭಿಕವಾಗಿ ತಮ್ಮ ಮುಸ್ಲಿಂ ಸಹವರ್ತಿಗಳನ್ನು ಸೋಲಿಸುತ್ತಿದ್ದ ಹಿಂದೂ ರಾಜರು, (ಮುಸ್ಲಿಂ) ಮಹಿಳೆಯರನ್ನೂ ಅತ್ಯಾಚಾರ ಮಾಡಿದ್ದರೆ?” ಎಂದು ಪ್ರಶ್ನೆ ಮಾಡುತ್ತಾರೆ. ಆದರೆ, “ಮುಸ್ಲಿಮೇತರ ಮಹಿಳೆಯರನ್ನು ಅಪಹರಿಸಿ ಬಲವಂತವಾಗಿ ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುವುದು ಪ್ರತಿಯೊಬ್ಬ ಮುಸ್ಲಿಮರ ಧಾರ್ಮಿಕ ಕರ್ತವ್ಯವಾಗಿತ್ತು” ಎಂದು ದ್ವೇಷ ಕಾರಿಕೊಳ್ಳುವ ಸಾವರ್ಕರ್, “ಇದು ಹುಚ್ಚುತನದಿಂದ ನಡೆದದ್ದಲ್ಲ. ಒಂದು ವಿಶಿಷ್ಟ ಉದ್ದೇಶವನ್ನು ಹೊಂದಿತ್ತು. ಮುಸ್ಲಿಂ ಜನಸಂಖ್ಯೆಯನ್ನು ಹೆಚ್ಚಿಸುವುದೇ ಇದರ ಹಿಂದಿದ್ದ ಗುರಿ. ಪ್ರಾಣಿ ಪ್ರಪಂಚವೂ ಸಹಜವಾಗಿ ಇದೇ ಕಾನೂನು ಪಾಲಿಸುತ್ತದೆ” ಎಂದು ವಿಚಿತ್ರವಾದವನ್ನು ಮುಂದಿಡುತ್ತಾರೆ.
“ರಾಸುಗಳ ಹಿಂಡುಗಳಲ್ಲಿ ಎತ್ತುಗಳ ಸಂಖ್ಯೆಯು ಹಸುಗಳಿಗಿಂತ ಹೆಚ್ಚಾದರೆ, ಹಿಂಡುಗಳು ತ್ವರಿತ ಸಂಖ್ಯೆಯಲ್ಲಿ ಬೆಳೆಯುವುದಿಲ್ಲ. ಆದರೆ ಮತ್ತೊಂದೆಡೆ, ಎತ್ತುಗಳಿಗಿಂತ ಹಸುಗಳ ಸಂಖ್ಯೆ ಹೆಚ್ಚಾದಾಗ, ಹೆಚ್ಚಿನ ಸಂಖ್ಯೆಯಲ್ಲಿ ಹಿಂಡು ಬೆಳೆಯುತ್ತದೆ” ಎನ್ನುತ್ತಾರೆ ಸಾವರ್ಕರ್. ಅಂದರೆ ಇವರ ಪ್ರಕಾರ ಮಹಿಳೆಯರೆಂದರೆ ಹೆರುವ ಯಂತ್ರವಷ್ಟೆ!
ಹೆಂಗಸರು ಹೆಚ್ಚಿದ್ದರೆ, ಒಂದು ಸಮುದಾಯದ ಸಂಖ್ಯೆ ಹೆಚ್ಚುತ್ತದೆ ಎಂಬ ವಾದವನ್ನು ಮಂಡಿಸಲು ಅವರು ಕೆಲವು ಉದಾಹರಣೆಗಳನ್ನು ನೀಡುತ್ತಾರೆ. ಆಫ್ರಿಕನ್ ಬುಡಕಟ್ಟುಗಳಲ್ಲಿ ಶತ್ರುಗಳನ್ನು ಮಟ್ಟಹಾಕುವಾಗ ಪುರುಷರನ್ನಷ್ಟೇ ಕೊಲ್ಲಲಾಗುತ್ತದೆ, ಆದರೆ ಮಹಿಳೆಯರನ್ನು ಕೊಲ್ಲುವುದಿಲ್ಲ. ಗೆದ್ದವರು ಆ ಮಹಿಳೆಯರನ್ನು ತಮ್ಮವರನ್ನಾಗಿಸಿಕೊಳ್ಳುತ್ತಿದ್ದರು. ಹೀಗೆ ಅಪಹರಿಸಲ್ಪಟ್ಟ ಮಹಿಳೆಯರ ಮೂಲಕ ತಮ್ಮ ಸಂತತಿಯನ್ನು ಹೆಚ್ಚಿಸಿಕೊಳ್ಳುವುದು ಕರ್ತವ್ಯವೆಂದು ಪರಿಗಣಿಸಿದರು. ಅದೇ ರೀತಿ, ಭಾರತದಲ್ಲಿ ನಾಗಾ ಬುಡಕಟ್ಟು ಜನಾಂಗದವರು ಪ್ರತಿಸ್ಪರ್ಧಿ ಬುಡಕಟ್ಟು ಜನಾಂಗದ ಮಹಿಳೆಯರನ್ನು ಕೊಲ್ಲುತ್ತಾರೆ. ಮಹಿಳೆಯರ ಕೊರತೆಯಾದರೂ ಶತ್ರುಗಳ ಸಂಖ್ಯೆ ಕುಸಿಯುವ ಸಾಧ್ಯತೆ ಇತ್ತು ಎಂಬ ವಾದವನ್ನು ಸಾವರ್ಕರ್ ಪ್ರತಿಪಾದಿಸುತ್ತಾರೆ.
ಇದನ್ನೂ ಓದಿರಿ: ಬಾಬಾಸಾಹೇಬರ ಕಣ್ಣಲ್ಲಿ ಭಗವದ್ಗೀತೆ; ಸತ್ಯ ಮರೆಯಲಾದೀತೆ?
ಆಫ್ರಿಕಾದ ಮುಸ್ಲಿಂ ವಿಜಯಶಾಲಿಗಳು ಸಹ ಈ ಸಂಪ್ರದಾಯವನ್ನು ಅನುಸರಿಸಿದರು ಎಂದು ಸಾವರ್ಕರ್ ಹೇಳುತ್ತಾರೆ. ಮುಂದುವರಿದು, ಸೀತೆಯನ್ನು ಅಪಹರಿಸಿದ ರಾವಣನ ಬಗ್ಗೆ ಪ್ರಸ್ತಾಪಿಸುತ್ತಾರೆ. “ಸೀತೆಯನ್ನು ಅಪಹರಿಸಿರುವುದು ಅತ್ಯಂತ ಅಧರ್ಮ” ಎಂದು ರಾವಣನಿಗೆ ಆತನ ಹಿತೈಷಿಗಳು ತಿಳಿಸಿದ್ದರು. ಅದಕ್ಕೆ ರಾವಣ, “ಏನು? ಶತ್ರು ಪಡೆಯ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡುವುದನ್ನು ಅಧರ್ಮ ಎಂದು ಕರೆಯುತ್ತೀರಾ? ಅದು ಪರಧರ್ಮ, ಅತ್ಯಂತ ದೊಡ್ಡ ಕರ್ತವ್ಯ!” ಎಂದು ಹೇಳಿದ್ದಾಗಿ ಸಾವರ್ಕರ್ ಉಲ್ಲೇಖಿಸುತ್ತಾರೆ.
ರಾವಣನಂತೆಯೇ ಧಾರ್ಮಿಕ ಮತಾಂಧತೆಯನ್ನು ಮುಸ್ಲಿಮರು ಅನುಸರಿಸಿದರು ಎಂಬುದು ಸಾವರ್ಕರ್‌ರವರ ಮುಂದಿನ ಪ್ರತಿಪಾದನೆ. “ಮುಸ್ಲಿಮರಲ್ಲಿ ಸುಲ್ತಾನರಿಂದ ಸೈನಿಕರವರೆಗೂ ಇದನ್ನೇ ಮಾಡಿದರು. ಹಿಂದೂ ಮಹಿಳೆಯರನ್ನು ಅಪಹರಿಸಿದರು. ಹಿಂದೂ ರಾಜಮನೆತನದ ವಿವಾಹಿತ ಮಹಿಳೆಯರು ಮತ್ತು ಗಣ್ಯರನ್ನು ಸಹ ಬಿಡಲಿಲ್ಲ. ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಲು, ಜನಸಂಖ್ಯಾಶಾಸ್ತ್ರೀಯವಾಗಿ ಭಾರತವನ್ನು ವಶಪಡಿಸಿಕೊಳ್ಳಲು ಇದು ಕಾರಣವಾಯಿತು” ಎಂದು ತಿಳಿಸುತ್ತಾರೆ.
ಇಷ್ಟೇ ಅಲ್ಲದೇ ಮುಸ್ಲಿಂ ಮಹಿಳೆಯರು ಇದಕ್ಕೆ ಪ್ರೋತ್ಸಾಹವನ್ನು ನೀಡಿದರು ಎಂದು ಕಲ್ಪಿತ ಕತೆಯನ್ನು ಕಟ್ಟುತ್ತಾರೆ. “ತಮ್ಮ ಪುರುಷರು ಮಾಡಿದ ದೌರ್ಜನ್ಯಗಳನ್ನು ಎಂದಿಗೂ ಅವರು ಖಂಡಿಸಲಿಲ್ಲ. ಈ ಕೃತ್ಯಕ್ಕೆ ಪ್ರೋತ್ಸಾಹ ನೀಡಿದರು” ಎನ್ನುತ್ತಾರೆ ಸಾವರ್ಕರ್.
“ಹಿಂದೂ ಸಾಮ್ರಾಜ್ಯಗಳಲ್ಲಿ ವಾಸಿಸುವ ಮುಸ್ಲಿಂ ಮಹಿಳೆಯರು ಹಿಂದೂ ಹುಡುಗಿಯರನ್ನು ಸೆಳೆಯುತ್ತಿದ್ದರು. ಅವರನ್ನು ಕರೆದೊಯ್ದು ಸ್ವಂತ ಮನೆಗಳಲ್ಲಿ ಬಂಧಿಸಿ, ಮಸೀದಿಗಳು ಮತ್ತು ಮಸೀದಿಗಳಲ್ಲಿರುವ ಮುಸ್ಲಿಂ ಕೇಂದ್ರಗಳಿಗೆ ಸಾಗಿಸುತ್ತಿದ್ದರು” ಎಂದು ಪಿತೂರಿ ಕಥನವನ್ನು ಸಾವರ್ಕರ್ ಕಟ್ಟುತ್ತಾರೆ.

“ಹಿಂದೂ ಪುರುಷರಿಂದಲೂ ಇಂತಹ ಪ್ರತೀಕಾರಗಳು ನಡೆಯುತ್ತವೆ ಎಂಬ ಹೆದರಿಕೆ ಇಲ್ಲದ ಕಾರಣ ಇಂತಹ ದೌರ್ಜನ್ಯಗಳನ್ನು ಎಸಗಲು ಮುಸ್ಲಿಂ ಮಹಿಳೆಯರಿಗೆ ಧೈರ್ಯ ಬಂತು” ಎಂದು ಅಭಿಪ್ರಾಯಪಡುತ್ತಾರೆ. ಅಂದರೆ, “ಹಿಂದೂಗಳು ಪ್ರತೀಕಾರವಾಗಿ ರೇಪ್ ಮಾಡಲಿಲ್ಲ” ಎಂದು ಹೇಳುತ್ತಿರುವ ಉದ್ದೇಶವನ್ನು ಗಮನಿಸಬೇಕು. ಆ ಮೂಲಕ ಸಮಕಾಲೀನ ಸಮಾಜದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಎಸಗುವುದು ತಪ್ಪಲ್ಲವೆಂದು ಪರೋಕ್ಷವಾಗಿ ಸಾವರ್ಕರ್ ಪ್ರೋತ್ಸಾಹ ನೀಡಿದ್ದರು.
“ಮುಸ್ಲಿಂ ಪುರುಷರು ಮಾತ್ರ ಪರಿಣಾಮದ ಅವಮಾನಗಳನ್ನು ಅನುಭವಿಸಿದ್ದಾರೆ, ಆದರೆ ಮುಸ್ಲಿಂ ಮಹಿಳೆಯರು ಎಂದಿಗೂ ಅನುಭವಿಸಲಿಲ್ಲ” ಎನ್ನುತ್ತಾರೆ. ಅಂದರೆ ಮುಸ್ಲಿಂ ಮಹಿಳೆಯರನ್ನು ಅವಮಾನಿಸಿ, ಅವರ ಮೇಲೆ ಅತ್ಯಾಚಾರ ಎಸಗಿ ಎಂಬ ತಮ್ಮ ಇಂಗಿತವನ್ನು ಸಾವರ್ಕರ್ ವ್ಯಕ್ತಪಡಿಸುತ್ತಿದ್ದಾರೆಂದು ತಿಳಿಯಬಹುದಲ್ಲವೇ?
ರಾಜಕೀಯ ಪ್ರೇರಿತ ಅತ್ಯಾಚಾರಗಳನ್ನು ಮಾಡದ ಕಾರಣಕ್ಕೆ ಶಿವಾಜಿ ಮತ್ತು ಪೇಶ್ವೆ ಚಿಮಾಜಿ ಅಪ್ಪಾ ಅವರನ್ನು ಸಾವರ್ಕರ್ ಟೀಕಿಸುವುದನ್ನು ಗಮನಿಸಬಹುದು.
ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟದ ವೇಳೆ ಆರ್‌ಎಸ್‌ಎಸ್ ನಾಯಕರು ಮಾಡಿದ್ದೇನು ಗೊತ್ತೆ?
ಶಿವಾಜಿ ಮಹಾರಾಜ ಕಲ್ಯಾಣವನ್ನು ಗೆದ್ದಾಗ, ಆತನ ಸೇನಾಪತಿ ಅಬಾಜಿ ಸೋನಿದೇವನು ಮುಸ್ಲಿಂ ಗವರ್ನರ್‌ನ ಸೊಸೆಯನ್ನು (ಅಥವಾ ಮಗಳನ್ನು) ಬಹುಮಾನವಾಗಿ ಪಡೆಯುತ್ತಾನೆ. ಆಕೆಯನ್ನು ಶಿವಾಜಿಯ ಮುಂದೆ ತಂದು ನಿಲ್ಲಿಸುತ್ತಾನೆ. ಆ ಮಹಿಳೆಯನ್ನು ಗೌರವಯುತವಾಗಿ ಕಾಣುವಂತೆ ಮತ್ತು ಆಕೆಯನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯುವಂತೆ ಶಿವಾಜಿ ಆದೇಶಿಸಿದನು ಎಂಬ ಕಥನವಿದೆ. ಪೇಶ್ವೆ ಅರಸ ಒಂದನೇ ಬಾಜಿರಾವ್‌ನ ಸಹೋದರನಾದ ಚಿಮಾಜಿ ಅಪ್ಪಾನು 1739ರಲ್ಲಿ ಪೋರ್ಚುಗೀಸರಿಂದ ಬೆಸೀನ್ (ವಸೈ) ಕೋಟೆಯನ್ನು ವಶಪಡಿಸಿಕೊಂಡನು. ನಂತರ ಅಲ್ಲಿ ವಶಪಡಿಸಿಕೊಂಡ ಪೋರ್ಚುಗೀಸ್ ಹೆಣ್ಣುಮಕ್ಕಳು ಮತ್ತು ಇತರ ಯುದ್ಧದ ಸಾಮಗ್ರಿಗಳ ವಿಚಾರದಲ್ಲಿ ಅತ್ಯಂತ ಉದಾರ ಮತ್ತು ನೈತಿಕ ನಿಲುವನ್ನು ತೆಗೆದುಕೊಂಡನು ಎಂಬ ಇತಿಹಾಸವಿದೆ. ಇದನ್ನು ಸಾವರ್ಕರ್ ವ್ಯಂಗ್ಯದಿಂದ ಟೀಕಿಸುತ್ತಾರೆ.
“ಘಜ್ನಿ ಮುಹಮ್ಮದ್, ಘೋರಿ ಮುಹಮ್ಮದ್, ಅಲ್ಲಾವುದ್ದೀನ್ ಖಲ್ಜಿ ಮತ್ತು ಇತರರು (ನಮ್ಮ) ಸಾವಿರಾರು ಹಿಂದೂ ಮಹಿಳೆಯರ ಮೇಲೆ, ಯುವತಿಯರ ಮೇಲೆ ನಡೆಸಿದ ದೌರ್ಜನ್ಯಗಳನ್ನು, ಅತ್ಯಾಚಾರಗಳನ್ನು, ಕಿರುಕುಳಗಳನ್ನು ಶಿವಾಜಿ ಹಾಗೂ ಅಪ್ಪಾಜಿ ಎಂದಿಗೂ ನೆನಪಿಸಿಕೊಳ್ಳದಿರುವುದು ವಿಚಿತ್ರವಲ್ಲವೇ?” ಎಂದು ಸಾವರ್ಕರ್ ಪ್ರಶ್ನಿಸುತ್ತಾರೆ.
“ಆ ಲಕ್ಷಾಂತರ ನೊಂದ ಮಹಿಳೆಯರ ಆತ್ಮಗಳು ಬಹುಶಃ, “ಓ ಛತ್ರಪತಿ ಶಿವಾಜಿ ಮಹಾರಾಜರೇ ಮತ್ತು ಚಿಮಾಜಿ ಅಪ್ಪಾನವರೇ, ‘ಸುಲ್ತಾನರು, ಮುಸ್ಲಿಂ ಕುಲೀನರು ಮತ್ತು ಸಾವಿರಾರು ಇತರ ದೊಡ್ಡ ಹಾಗೂ ಸಣ್ಣ ಜನರು ನಮ್ಮ ಮೇಲೆ ಮಾಡಿದ ದಬ್ಬಾಳಿಕೆ ಹಾಗೂ ದೌರ್ಜನ್ಯವನ್ನು ಮರೆಯಬೇಡಿ’ ಎಂದು ಹೇಳಿರಬಹುದು” ಎಂದು ಸಾವರ್ಕರ್ ಕಪೋಲಕಲ್ಪಿತವಾಗಿ ಪ್ರಚೋದಿಸುತ್ತಾರೆ.
“ಹಿಂದೂಗಳು ಗೆದ್ದರೆ ಮುಸ್ಲಿಂ ಮಹಿಳೆಯರೂ ಅದೇ ಸಂಕಷ್ಟದಲ್ಲಿ ಸಿಲುಕುತ್ತಾರೆ ಎಂಬ ತೀವ್ರ ಭಯ ಅವರನ್ನು ಕಾಡುತ್ತಿದ್ದರೆ, ಭವಿಷ್ಯದಲ್ಲಿನ ಮುಸ್ಲಿಂ ವಿಜಯಶಾಲಿಗಳು ಹಿಂದೂ ಮಹಿಳೆಯರ ಮೇಲೆ ಇಂತಹ ದೌರ್ಜನ್ಯದ ನಡೆಸಲು ಎಂದಿಗೂ ಯೋಚಿಸುವ ಧೈರ್ಯ ಮಾಡುವುದಿಲ್ಲ” ಎನ್ನುತ್ತಾರೆ. ಹೀಗೆ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಪ್ರೋತ್ಸಾಹಿಸುವ ದುಷ್ಟ ವ್ಯಕ್ತಿ ಈ ಸಾವರ್ಕರ್.
“ಭಾರತದ ಭೂತಕಾಲದೊಂದಿಗೆ ಈ ವಿಚಾರಗಳಿವೆ ಎಂದು ಭಾವಿಸಬೇಕಿಲ್ಲ. ಯಾಕೆಂದರೆ ಧರ್ಮ ಬದಲಾವಣೆಯು ರಾಷ್ಟ್ರೀಯತೆಯ ಬದಲಾವಣೆಯನ್ನು ಸೂಚಿಸುತ್ತದೆ” ಎಂದು ಸಾವರ್ಕರ್ ಬಹಳ ಸ್ಪಷ್ಟವಾಗಿ ಹೇಳಿದ್ದರು. ಧರ್ಮದ ಆಧಾರದ ಮೇಲೆ ದ್ವಿರಾಷ್ಟ್ರ ಸಿದ್ಧಾಂತವನ್ನು ಜಿನ್ನಾಗಿಂತ ಮೊದಲೇ ಸಾವರ್ಕರ್ ಪ್ರತಿಪಾದಿಸಿದ್ದರು.
ಸಾವರ್ಕರ್ ಸಂದೇಶವು ವರ್ತಮಾನದ್ದಲ್ಲವಾದರೆ, ಗುಜರಾತ್ ಗಲಭೆಯ ಸಂದರ್ಭದಲ್ಲಿ ನಡೆದ ಅತ್ಯಾಚಾರಗಳಿಗೆ ಪ್ರೋತ್ಸಾಹಿಸಿದವರು ಯಾರು? ಇದರ ಹಿಂದೆ ಇದ್ದ ಸಿದ್ಧಾಂತ ಯಾವುದು? ಬಿಲ್ಕಿಸ್ ಬಾನೋ ಅವರ ಮೇಲೆ ಅತ್ಯಾಚಾರ ಎಸಗಿದವರಿಗೆ ಹಾರ- ತುರಾಯಿ ಹಾಕಿ ಸನ್ಮಾನಿಸುವ ಮನಸ್ಥಿತಿಯಾದರೂ ಯಾವುದು? “ಮುಸ್ಲಿಮರ ಮೇಲೆ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಅನುವು ಮಾಡಿಕೊಡುವ ನೈತಿಕ ಸಂಹಿತೆಗಳನ್ನು ಮಾತ್ರ ಹಿಂದೂಗಳು ಪಾಲಿಸಬೇಕು. ಹೀಗಾಗಿ, ಗಲಭೆಗಳಲ್ಲಿ ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ ಮಾಡುವುದು ಸಮರ್ಥನೀಯ” ಎಂಬುದು ಸಾವರ್ಕರ್ ಕೊಡುತ್ತಿರುವ ಸಮಕಾಲೀನ ವಿಕೃತ ಸಂದೇಶ. ಮಧ್ಯಕಾಲೀನ ಸಮಾಜದಲ್ಲಿ ಮುಸ್ಲಿಂ ಅರಸರು ಮಾಡಿದ್ದನ್ನು ವರ್ತಮಾನದಲ್ಲಿ ಹಿಂದೂಗಳು ಅನುಸರಿಸಬೇಕೆಂಬ ಪ್ರತಿಪಾದನೆ ಸಾವರ್ಕರ್‌ದ್ದಾಗಿತ್ತು ಎಂದು ರಾಜಕೀಯ ವಿಶ್ಲೇಷಕರು ಗುರುತಿಸದೇ ಇರುವುದಿಲ್ಲ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




