ಧರ್ಮವೆಂಬ ಮರಕ್ಕೆ ದಯೆಯೇ ಬೇರು ಅಂದ ಬಸವಣ್ಣ, ನಿರಂಕುಶಮತಿಗಳಾಗಿ ಎಂದ ಕುವೆಂಪು ಇಬ್ಬರೂ ಕನ್ನಡ ಪ್ರಜ್ಞೆಯನ್ನು ಹೇಗೆ ರೂಪಿಸಿದ್ದಾರೆ ಎಂದು ಪರಿಶೀಲಿಸುವ ಅವಕಾಶವನ್ನು ದೆಹಲಿಯ ಶರಣಸಾಹಿತ್ಯ ಪರಿಷತ್ ಒದಗಿಸಿತು. ಇವರಿಬ್ಬರೂ ಕನ್ನಡದ ಪ್ರಜ್ಞೆ ಸ್ವಸ್ಥವಾಗಿ ರೂಪುಗೊಳ್ಳಲು ಬೇಕಾದ ಬೌದ್ಧಿಕ ಪರಿಕರಗಳನ್ನು ನಿರ್ಮಿಸಿದ ದೊಡ್ಡ ಜೀವಗಳು. ಆ ಪರಿಕರಗಳನ್ನು ನಾವು ಸೂಕ್ತವಾಗಿ ಬಳಸಿದ್ದಿದ್ದರೆ ನಮ್ಮ ಈ ಹೊತ್ತಿನ ಸಾಮೂಹಿಕ ಬದುಕು ಹೀಗಿರುತ್ತಿರಲಿಲ್ಲ ಅನ್ನುವ ನೋವಿನಲ್ಲೇ ಈ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ವಿಚಾರಗಳಿಗೆ ಕಾಲದ ಹಂಗಿಲ್ಲ, ದೇಶದ ಗಡಿಗಳಿಲ್ಲ, ಹಾಗೇ ಸಾವೂ ಇಲ್ಲ. ಮುಖ್ಯವಾದ ಮಾತೆಂದರೆ ಯಾವ ವಿಚಾರ ನಮ್ಮಲ್ಲಿರುವ ಜಡತೆಯನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ, ಮನಸ್ಸನ್ನು ಅನುಭವಕ್ಕೆ ತೆರೆದುಕೊಳ್ಳಲು ಬಿಡದೆ, ಮರುಳಿನ ಕತ್ತಲಿನಲ್ಲಿ ಮಲೆತು ನಾರುವಂತೆ ಮಾಡುತ್ತದೆ ಅನ್ನುವ ಅರಿವು ನಮಗೆ ಇರಬೇಕು. ಜೀವನಕ್ಕೆ ಬೆಳಕಿನ ಪ್ರಭೆಯನ್ನು ತರುವಂಥ, ವ್ಯಕ್ತಿ ಮತ್ತು ಸಮಾಜದಲ್ಲಿ ಸ್ವಸ್ಥವಾದ ಬದುಕಿನ ಕ್ರಮ ರೂಪಿಸಿಕೊಳ್ಳುವ ವಿಚಾರಗಳ ಜೊತೆಗೆ ಕತ್ತಲನ್ನು ಮತ್ತಷ್ಟು ದಟ್ಟಗೊಳಿಸಿ ಕೆಲವರ ಅಧಿಕಾರಕ್ಕೆ ಕುಮ್ಕಕ್ಕು ಕೊಡುವ ವಿಚಾರಗಳು ಹೆಚ್ಚು ಆಕರ್ಷಕವಾಗಿ, ಮನ ಸೆಳೆಯುವಂತೆ ಇದ್ದು ಬಲು ಬೇಗ ಸಮುದಾಯಗಳಲ್ಲಿ ವ್ಯಾಪಿಸುತ್ತದೆ.
ಬೆಳಕಿನ ವಿಚಾರಗಳನ್ನು ಕನ್ನಡದಲ್ಲಿ ಸ್ಪಷ್ಟವಾಗಿ ನಿರೂಪಿಸಿದ ಹನ್ನೆರಡನೆಯ ಶತಮಾನದ ಬಸವಣ್ಣ, ಇಪ್ಪತ್ತನೆಯ ಶತಮಾನದ ಕುವೆಂಪು ಇಬ್ಬರಲ್ಲೂ ಆಶ್ಚರ್ಯ ಹುಟ್ಟಿಸುವಂಥ ಸಾಮ್ಯಗಳಿವೆ. ಇದು ಸಹಜ ಕೂಡ. ಯಾಕೆಂದರೆ ಮನುಷ್ಯರನ್ನು ಕಾಡುವ ಸಂಗತಿಗಳು ಬದಲಾಗಿಲ್ಲ. ಬೆಳಕಿನ ಬಿತ್ತ ಬೆಳೆಯುವ ಪರಂಪರೆ ಕತ್ತಲನ್ನು ಕಗ್ಗತ್ತಲಾಗಿಸುವ ಪರಂಪರೆಯಷ್ಟೇ ಹಳೆಯದು.

ಸ್ಮೃತಿ ಯಾವಾಗಲೂ ಮೃತವಾದದ್ದು, ಅನುಭವ ಜೀವಂತವಾದದ್ದು ಎಂದು ಬೇಂದ್ರೆಯವರು ಬೇರೆ ಯಾವುದೋ ಪ್ರಸಂಗದಲ್ಲಿ ಹೇಳಿದ ಮಾತು ನೆನಪಾಗುತ್ತಿದೆ. ಸ್ಮೃತಿ ಕಳೆದು ಹೋದ ಕಾಲದ್ದು. ಹಾಗಾಗಿ ಅದು ಮೃತ; ಅನುಭವ ಈ ಕ್ಷಣದ್ದು, ನಮಗೆ ಆಗುತ್ತಿರುವುದು, ಹಾಗಾಗಿ ಜೀವಂತ. ಬಸವಣ್ಣನ ಕಾಲದ ‘ಅನುಭವ ಮಂಟಪʼ ಜೀವಂತ ಅನುಭವಗಳನ್ನು ನುಡಿರೂಪದಲ್ಲಿ ಹಂಚಿಕೊಳ್ಳಲು ಏರ್ಪಾಟಾಗಿದ್ದ ವ್ಯವಸ್ಥೆಯ ಅದ್ಭುತ ರೂಪಕ. ಭಕ್ತಿ ಅನ್ನುವುದು ಕೂಡ ಯಾಂತ್ರಿಕ ಆಚರಣೆಯಲ್ಲ. ದೇಹ ಮನಸ್ಸುಗಳನ್ನು ಇಡಿಯಾಗಿ ಆವರಿಸುವ ಅನುಭವ. ಪುಳಕವಾಗಿ, ಆನಂದದ ಕಂಬನಿಯಾಗಿ, ನುಡಿಯಲಾಗದ ಗದ್ಗದವಾಗಿ, ಇಡೀ ಮೈ ಕರಗಿತು ಅನಿಸುವಂಥ ಅನುಭವ. ಅದು ಜೀವಂತ. ʻಮನ ಮನ ಬೆರಸಿದಲ್ಲಿ ತನು ಕರಗದಿರ್ದಡೆʼ ಎಂದು ಆರಂಭವಾಗುವ ವಚನದಲ್ಲಿ ಬಸವಣ್ಣ ಇಂಥ ದೈಹಿಕ ಸೂಚನೆಗಳನ್ನೇ ಕೂಡಲಸಂಗನ ಭಕ್ತಿಗೆ ಇದು ಚಿಹ್ನೆ ಎನ್ನುತ್ತಾರೆ.
ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-1)
ದೇಹವು ದೇಗುಲದಷ್ಟೇ, ಅಥವಾ ಅದಕ್ಕಿಂತ ಪವಿತ್ರವಾಗುತ್ತದೆ ಬಸವಣ್ಣನವರಿಗೆ. ʻಕಾಯವೆ ಕೈಲಾಸʼ ಅನ್ನುವಾಗ ಶಿವನು ಇರುವ ಪೌರಾಣಿಕ ಸ್ಥಳವನ್ನಲ್ಲ, ಮನುಷ್ಯ ದೇಹವೇ ಕೈಲಾಸವಾಗಬೇಕು ಅನ್ನುವ ಮಾತೂ ಅವರದೇ. ದೇಹವು ದೇಗುಲವಾಗುವುದು ಮಾತ್ರವಲ್ಲ, ಮನಸು, ವಿಚಾರಗಳು ಸದಾ ಚಲನಶೀಲವಾಗಿರಬೇಕು ಅನ್ನುವುದೂ ಬಸವ ವಚನವೇ. ಹಾಗೆ ಚಲನೆ ಇರದ ಮನಸು ಕಲ್ಲಿನ ದೇಗುಲದ ಹಾಗೇ ಅಳಿಯುತ್ತದೆ.
ಬಸವ-ಮನಸ್ಸು ಲೋಕವನ್ನು ನೋಡುವಾಗ ಕಣ್ಣೆದುರಿಗೆ ಇರುವುದರೊಡನೆ ಒಂದಾಗಿ ತಾನೇ ಅದು ಎಂದು ಅನುಭವವನ್ನು ಪಡೆಯುತ್ತದೆ. ಕೆಸರಿನಲ್ಲಿ ಬಿದ್ದ ಹಸುವಿನ ಹಾಗೆ ದೆಸೆದೆಸೆಗೆ ಬಾಯಿಬಿಡುತಿದ್ದೇನೆ, ಕೂಡಲಸಂಗಮ ಬಂದು ʻಪಶುವೆಂದು ಎನ್ನ ಕೊಂಬ ಹಿಡಿದೆತ್ತುವನ್ನಕ್ಕʼ ಎಂಬ ವಚನವನ್ನು ನೋಡಿ. ಈ ವಚನದಲ್ಲಿ ಬಸವಮನಸ್ಸು ತಾನು ಮನುಷ್ಯನಲ್ಲ ಪಶುವೇ ಎಂಬ ತಾದಾತ್ಮ್ಯದಲ್ಲಿ ʻಕೊಂಬು ಹಿಡಿದು ಎತ್ತುʼ ಅನ್ನುತ್ತದೆಯೇ ಹೊರತು ʻಕೈ ಹಿಡಿದೆತ್ತುʼ ಎಂದಲ್ಲ. ಕುವೆಂಪು ಅವರ ಕವಿ ಮನಸ್ಸು ಕೂಡ ತುಂಗೆಯ ತಡಿಯಲ್ಲಿ ನೀರ್ತೊದಲು ಆಲಿಸುತ್ತ ದೇವರ ರುಜುವಿನ ಹಾಗೆ ಕಾಣುವ ಹಾರುವ ಹಕ್ಕಿಗಳ ನಿಶ್ಶಬ್ದ ಛಂದೋವಿನ್ಯಾಸ ನೋಡುತ್ತ ಇಡೀ ಸನ್ನಿವೇಶದಲ್ಲಿ ಒಂದಾಗಿ ʻರಸವಶʼವಾಗುತ್ತದೆ. ವ್ಯಕ್ತಿಯಾಗಿ ಹಾಗೆ ಲೋಕದ ಜೀವಗಳ ಜೊತೆಯಲ್ಲಿ ಒಂದಾಗುವ ಸಾಮರ್ಥ್ಯ ಇದ್ದಾಗ ಮಾತ್ರ, ನೆರೆಮನೆಯವರ ನೋವೂ ನನ್ನ ನೋವೇ ಎಂದು ಅನುಭವಿಸುವ ಸಾಮರ್ಥ್ಯ ಇದ್ದಾಗ ಮಾತ್ರ ಲೋಕ ಕಾರುಣ್ಯ ಮೂಡುತ್ತದೆ. ಬಸವ-ಕುವೆಂಪು ಮಾತ್ರವಲ್ಲ ಬುದ್ಧನ ಕಾರುಣ್ಯವೂ ಇಂಥದೇ.
ಧರ್ಮವೆಂಬುದು ಬರಿಯ ವಿಧಿ-ನಿಷೇಧಗಳ, ಮಾಡಬೇಕು-ಮಾಡಬಾರದುಗಳ ಆಚರಣೆ ಮಾತ್ರವಾಗಿ ಉಳಿದಾಗ ಅದು ಮೃತಪ್ರಾಯವಾಗುತ್ತದೆ. ಕನ್ನಡದ ಕವಿ ಪಂಪ ತನ್ನ ಆದಿಪುರಾಣದಲ್ಲಿ ʻಅರಿವನ್ನು ಹೊಸತುಗೊಳಿಸುವುದು ಯಾವುದೋ ಅದು ಧರ್ಮ, ಹಾಗಾಗದಂತೆ ತಡೆಯುವುದು ಅಧರ್ಮʼ ಎನ್ನುತ್ತಾನೆ. ಯಾರು ಯಾರನ್ನು ಮದುವೆಯಾಗಬೇಕು, ಯಾರೊಡನೆ ಊಟ ಮಾಡಬೇಕು, ಯಾರನ್ನು ಮುಟ್ಟಬೇಕು, ಯಾರನ್ನು ಮುಟ್ಟಬಾರದು ಇಂಥ ನಿಯಮಗಳ ಆಚರಣೆಯೇ ಧರ್ಮವಾದಾಗ ಅದು ಅರಿವನ್ನು ಹೊಸತುಮಾಡುವುದಿರಲಿ, ಬದುಕನ್ನೂ ದುಸ್ತರ ಮಾಡುತ್ತದೆ. ಕನ್ನಡದಲ್ಲಿ ಮೊದಲ ಬಾರಿಗೆ ಇಂಥ ಅರ್ಥಹೀನ ನಿಷೇಧಗಳನ್ನು ಉಲ್ಲಂಘಿಸಿ ಒಳ್ಳೆಯ ಕಾಲ, ಕೆಟ್ಟ ಕಾಲ ಎಂಬುದಿಲ್ಲ; ಮುಟ್ಟಿಸಿಕೊಳ್ಳಬಾರದವರು ಯಾರೂ ಇಲ್ಲ; ಹುಟ್ಟು, ಸಾವು, ರಜಸ್ಸು ಇಂಥವು ಸೂತಕಗಳಲ್ಲ ಅನ್ನುವುದನ್ನು ಗಟ್ಟಿಯ ದನಿಯಲ್ಲಿ ಸಾರಿ ಹೇಳಿದ್ದು ಬಸವ ಪ್ರಜ್ಞೆ. ಹಾಗೆ ಹೇಳಿದ್ದು ಮಾತ್ರವಲ್ಲ ತನ್ನನ್ನು ತಾನು ಹೊಲೆಯ-ಮಾದಿಗರ ಗಂಡು-ಹೆಣ್ಣುಗಳ ಹಾದರಕ್ಕೆ ಹುಟ್ಟಿದವನು ಎಂದು ಹೇಳಿಕೊಳ್ಳುವ ಮೂಲಕ ಜಾತಿಯ ಹಿರಿಮೆಯನ್ನು ನೀಗಿಕೊಂಡ ದೊಡ್ಡ ಜೀವ.

ನಿರ್ಜೀವ ಆಚರಣೆಗಳ ಪಾಲನೆಯೇ ಧರ್ಮ ಎಂದು ಹೇಳುವುದು, ಪಾಲಿಸುವುದು ʻಮೃತ ಸ್ಮೃತಿʼಗಳನ್ನು ಆಧರಿಸಿದ, ಬಸವ ವಚನದ ನುಡಿಗಟ್ಟಿನಲ್ಲಿ ಹೇಳುವುದಾದರೆ ʼನುಡಿವ ಹೆಣಗಳʼ ʻನಡೆವ ಹೆಣಗಳʼ ಬದುಕು. ಇಂಥ ಸ್ಮತಿಗಳನ್ನು ಧಿಕ್ಕರಿಸಿ ನಿರಂಕುಶಮತಿಗಳಾಗಿ ಎಂದು ಕುವೆಂಪು ಎಳೆಯ ಮನಸುಗಳಿಗೆ, ಇಪ್ಪತ್ತನೆಯ ಶತಮಾನದ ಅರಂಭದ ದಶಕಗಳಲ್ಲಿ ಕರೆ ನೀಡಿದರು.
ʻಸಂಸ್ಕೃತಿ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥತಾ ಮೂಲವಾದ ಕುರುಡು ನೆವದಲ್ಲಿ, ಅವಿವೇಕ ಮೌಢ್ಯಗಳಿಗೆ ವೈಜ್ಞಾನಿಕತೆಯ ಮತ್ತು ವಿಚಾರದ ಚಿನ್ನದ ಮುಲಾಮು ಹಚ್ಚಿ ಜನರನ್ನು ದಿಕ್ಕು ತಪ್ಪಿಸಿ, ವಂಚಿಸುವ ಮಹೋದ್ಯೋಗ ನಿರ್ಲಜ್ಚೆಯಿಂದ ಸಾಗುತ್ತಿರುವುದನ್ನು ದಿನದಿನವೂ ನೋಡುತ್ತಿದ್ದೇವೆʼ ಎಂದು ಹೇಳಿದ ಕುವೆಂಪು ಮಾತು ಇಂದು ಇನ್ನಷ್ಟು ತೀವ್ರವಾಗಿ ನಮ್ಮೆಲ್ಲರ ಅನುಭವಕ್ಕೆ ಬರುತ್ತಿದೆ. ʻವೈಜ್ಞಾನಿಕ ದೃಷ್ಟಿ ಮತ್ತು ವಿಚಾರವಾದಗಳನ್ನು ಬೋಧಿಸಿ, ಪ್ರಚೋದಿಸಿ ಸಾಧಿಸುವ ಕಾರ್ಯ ಯಾವ ಸಂಸ್ಥೆಗಳಿಗೆ ಮೀಸಲಾಗಬೇಕೋ ಆ ಸಂಸ್ಥೆಗಳಲ್ಲಿಯೆ ಅದು ಅವಮಾನಿತವಾಗುತ್ತಿರುವುದು ಅತ್ಯಂತ ನಿರಾಶಾಜನಕವಾಗಿದೆʼ ಎಂಬ ಕಾರಣಕ್ಕೆ ಕುವೆಂಪು ಯುವ ಮನಸುಗಳು ನಿರಂಕುಶಮತಿಗಳಾಗಬೇಕೆಂದು ಕರೆನೀಡುತ್ತಾರೆ.
ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-2)
‘ನಿರಂಕುಶಮತಿ’ತ್ವ ಎಂದರೆ ನಿರಂಕುಶ ಪ್ರಭುತ್ವದಂತೆ ಎಂದು ತಿಳಿಯಬಾರದು. ನಿರಂಕುಶ ಪ್ರಭುತ್ವದ ಲಕ್ಷಣವೆಂದರೆ ವಿವೇಕಹೀನವಾದ ಸ್ವಚ್ಛಂದ ವರ್ತನೆ. ಸಂಯಮ ಪೂರ್ಣವಾದ ಬುದ್ಧಿ ಸ್ವಾತಂತ್ರ್ಯವೇ ‘ನಿರಂಕುಶ ಮತಿ’ ಎಂದು ವ್ಯಾಖ್ಯಾನಿಸುವ ಕುವೆಂಪು ಬಸವ ಹೇಳಿದ ರೀತಿಯಲ್ಲಿಯೇ ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟು ಕಟ್ಟಳೆಗಳ ಕಾಡವಾಗಿದೆ, ಇದರ ಅಂಕುಶದಿಂದ ಯುವಕರು ಪಾರಾಗಬೇಕು ಎನ್ನುತ್ತಾರೆ.
ಬಸವ ಮತ್ತು ಕುವೆಂಪು ಹಳತೆಲ್ಲವನ್ನೂ ನಾಶಮಾಡಬೇಕು ಅನ್ನುವ ಮನೋಧರ್ಮದವರಲ್ಲ. ಬಸವಣ್ಣ ಮತ್ತವರ ಅನೇಕ ಸಮಕಾಲೀನರು ಪ್ರಾಚೀನ ಕಾಲದ ಜ್ಞಾನದ ತಿಳಿವಳಿಕೆ ಇದ್ದವರು. ಆದರೆ ತಮ್ಮ ವರ್ತಮಾನದ ನಿಜ ಬಲ್ಲವರು. ಉದಾಹರಣೆಗೆ ದೇಹವನ್ನು ಆಲಯಕ್ಕೆ ಹೋಲಿಸುವುದು ಉಪನಿಷತ್ತುಗಳಲ್ಲೂ, ಬುದ್ಧನಲ್ಲೂ ಬರುತ್ತದೆ ಅನ್ನುತ್ತಾರೆ. ಆದರೆ ದೇಹ ದೇಗುಲಗಳ ಹೋಲಿಕೆಯಲ್ಲಿ ಬಸವಣ್ಣನವರೇ ಮೊಟ್ಟ ಮೊದಲಬಾರಿಗೆ ʻಉಳ್ಳವರುʼ ಎಂಬ ನಾವು ಗಮನಿಸಲೇಬೇಕಾದ ಮಾತನ್ನು ಸೇರಿಸಿ ಉಳ್ಳವರು ಶಿವಾಲಯ ಮಾಡುವರು ನಾನು ಬಡವ ಏನು ಮಾಡಲಿ ಎಂದೆನ್ನುತ್ತಾರೆ. ಧರ್ಮ ಎಂದು ಕರೆಯಲಾಗುವುದಕ್ಕೂ ಹಣದ ಕಾರಣಕ್ಕೆ ಉಂಟಾಗಿರುವ ಅಸಮಾನತೆಯತ್ತಲೂ ಗಮನ ಸೆಳೆಯುತ್ತಾರೆ. ಪ್ರಾಚೀನ ರೂಪಕಕ್ಕೆ ಹೊಸ ಜೀವಂತಿಕೆ ತರುತ್ತಾರೆ.
ಕುವೆಂಪು ಅವರೂ ಆಧುನಿಕ ಮನುಷ್ಯನೆಂದರೆ ಪರ್ವತದ ಶಿಖರದಲ್ಲಿ ನಿಂತು ಒಂದು ಕೈಯನ್ನು ಗತಕಾಲದ ಕಮರಿಗೂ ಇನ್ನೊಂದು ಕೈಯನ್ನು ಭವಿಷ್ಯದ ನಕ್ಷತ್ರಕ್ಕೂ ಚಾಚಿರುವ ಮನುಷ್ಯ; ಇಂದು ಅರಳಿರುವ ಗುಲಾಬಿ ಲಕ್ಷಾಂತರ ವರ್ಷಗಳ ಹೂವಿನ ಸಾತತ್ಯ ಹೇಗೋ ಹಾಗೇ ಬರಲಿರುವ ಮುಂದಿನ ಗುಲಾಬಿಗಳ ಪೂರ್ವಜನೂ ಹೌದು, ಆಧುನಿಕ ಮನುಷ್ಯನೂ ಹಾಗೇ ಅನ್ನುತ್ತಾರೆ. ಇನ್ನೊಂದೆಡೆಯಲ್ಲಿ ಚಿನ್ನವನ್ನು ಹಳತೆಂದು ಬಿಸಾಡುವುದಲ್ಲ, ಹೊಸ ವಿನ್ಯಾಸದಲ್ಲಿ ಮಾರ್ಪಡಿಸುವುದು ಅನ್ನುತ್ತಾರೆ. ಬಸವಣ್ಣನವರ ಜಗದಗಲ ಮುಗಿಲಗಲ ಅನ್ನುವ ವಚನದಲ್ಲಿ ಇರುವ ವರ್ಣನೆ ಪ್ರಾಚೀನವಾದದ್ದು, ಆದರೆ ಕೊನೆಯಲ್ಲಿ ಬರುವ ಎನ್ನ ಅಂಗೈಯಲ್ಲಿ ಚುಳುಕಾದಿರಿ ಅನ್ನುವ ಮಾತು ಕೇವಲ ವರ್ಣನೆಯಾಗಿರುವ ಮಹಾ ಶಕ್ತಿ ತನ್ನ ಅಂಗೈಯ ಹಳ್ಳದಲ್ಲಿ ಅಡಗಿದ ಸ್ಪರ್ಶದ ಬೆರಗನ್ನೂ ಒಳಗೊಂಡಿರುವುದು.
ಕೂಡಲಸಂಗಮ ಎಂಬ ಬಸವಣ್ಣನವರ ಅಂಕಿತವೇ ವಿಭಿನ್ನ ಮನೋಧರ್ಮ, ನಂಬಿಕೆ, ತಾತ್ವಿಕತೆ, ಜಾತಿ, ಕಸುಬುಗಳ ಹಿನ್ನೆಲೆಯವರನ್ನೆಲ್ಲ ಬದುಕಿನ ಪ್ರವಾಹದ ಕಿರುತೊರೆಗಳು, ಎಲ್ಲ ಜೀವಗಳೂ ಸೇರಿಯೇ ಈ ಬದುಕು ಕೂಡಲಸಂಗಮ ಅನ್ನುವ ನಿಲುವನ್ನು ಸೂಚಿಸುತ್ತದೆ. ಇದು ಕೇವಲ ನಿಲುವಲ್ಲ, ಒಬ್ಬೊಬ್ಬರ ಬುದ್ಧಿ, ಮನಸ್ಸು, ದೇಹಗಳೂ ಒಪ್ಪುವ ಅನುಭವವಾಗಬೇಕು. ʻನಾನೆಂಬುದು ಪ್ರಮಾಣ, ನೀನೆಂಬುದು ಪ್ರಮಾಣ, ಪ್ರಮಾಣಮೆಂಬುದು ಪ್ರಮಾಣ, ಗುಹೇಶ್ವರನು ಅಪ್ರಮಾಣ ಅನ್ನುವ ಮಾತನ್ನು ನೋಡಿ. ಪ್ರತಿಯೊಬ್ಬರ ಅನುಭವ, ಬುದ್ಧಿ, ಮತಿ, ವಿವೇಕಗಳೇ ಪ್ರಮಾಣ. ಅದನ್ನ ಬಳಸದೆ ಲೋಕವನ್ನು ತಿಳಿಯಲು ಬದುಕಲು ಸಾಧ್ಯವಿಲ್ಲ. ಒಬ್ಬೊಬ್ಬರ ಅನುಭವವೂ ಪ್ರಮಾಣವೇ ಎಂಬುದನ್ನು ಸಾರಿದ್ದು ಬಸವ ಯುಗದ ಹಿರಿಮೆ. ಹಾಗೆ ಅನುಭವವನ್ನೇ ಪ್ರಮಾಣ ಮಾಡಿಕೊಂಡು ಆಡಿದ ವಚನ ಭಾಷೆಯ ಮಿತಿಯನ್ನು ಮೀರಿದ ಸತ್ಯವಾಗುತ್ತದೆ. ಹಲವು ಅನುಭವಗಳು ಕೂಡಿದ ಸಂಗಮವಾಗಿ ಸಾಗುತ್ತದೆ.
ನುಡಿದ ಹಾಗೆ ನಡೆಯುವ, ನಡೆದ ಹಾಗೆ ನುಡಿಯುವ ವಚನ ಸ್ಫಟಿಕದ ಶಲಾಕೆ. ಬಸವಣ್ಣನವರ ಪ್ರಸಿದ್ಧ ವಚನವು ಮಾತನಾಡಬಾರದು, ಆಡಿದರೆ ಮುತ್ತಿನ ಹಾರದ ಹಾಗೆ, ಮಾಣಿಕ್ಯದ ದೀಪ್ತಿಯ ಹಾಗೆ, ಸ್ಫಟಿಕದ ಶಲಾಕೆಯ ಹಾಗೆ, ಇಡೀ ಸೃಷ್ಟಿ ಹೌದೆಂದು ಒಪ್ಪುವ ಹಾಗೆ ಇರಬೇಕು ಅನ್ನುತ್ತದೆ. ಮುತ್ತಿನದು ಹೊರಗಿನ ಹೊಳಪು, ಬರಿಯ ಅಲಂಕಾರ. ಮಾತು ಕನಿಷ್ಠಪಕ್ಷ ಹಾಗಿರಬೇಕು. ಮಾಣಿಕ್ಯದ ದೀಪ್ತಿ, ಒಳಗಿನ ಬೆಳಕು. ಅದು ಕೇಳಿದವರ ಅರಿವನ್ನು ಬೆಳಗುತ್ತದೆ. ಇನ್ನೂ ಮುಂದಿನ ಸ್ಥಿತಿ ಒಳಗು ಹೊರಗುಗಳ ಭೇದವಿರದ ಪಾರದರ್ಶಕವಾದ ಸ್ಫಟಿಕದ ಬೆಳಕಿನ ಶಲಾಕೆ. ಮಾತಲ್ಲ, ಮಾತಿನೊಳಗಿನ ಸತ್ಯ ಇಡೀ ಸೃಷ್ಟಿಯೇ ಒಪ್ಪುವ ಹಾಗೆ ಇರುತ್ತದೆ.
ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-3)
ಅಂಥ ಮಾತು ಜ್ಯೋತಿರ್ಲಿಂಗವಾಗುತ್ತದೆ, ಅಂಥದಲ್ಲದ ಮಾತು ಸೂತಕ. ಇದು ಧರ್ಮದ ಪರಿಭಾಷೆಯಲ್ಲಿ ಹನ್ನೆರಡನೆಯ ಶತಮಾನದ ಮಾತಾದರೆ ಕುವೆಂಪು ಇಪ್ಪತ್ತನೆಯ ಶತಮಾನದಲ್ಲಿ ಕನ್ನಡವನ್ನು ಹಾಗೆ ವಿವಿಧ ಉಪಯೋಗಗಳಿಗೆ ಒದಗುವ ಶಕ್ತಿಯಾಗಿ ಬಳಸಿದವರು. ಅವರ ಮಹಾಕಾವ್ಯ, ಕವಿತೆ, ಕಾದಂಬರಿ, ವಿಮರ್ಶೆ, ತಾತ್ವಿಕ ಚಿಂತನೆ, ಜೀವನ ಚಿತ್ರ, ಕಥೆ ಇಂಥ ಒಂದೊಂದು ಪ್ರಕಾರದಲ್ಲೂ ಎಷ್ಟು ಬಗೆಯ ಕನ್ನಡಗಳನ್ನು ಬಳಸಿದ್ದಾರೆ, ಎಷ್ಟು ಬಗೆಯ ವ್ಯಕ್ತಿತ್ವಗಳನ್ನು ನುಡಿಯಲ್ಲಿ ಜೀವಂತಗೊಳಸಿದ್ದಾರೆ ಎಂಬುದನ್ನು ಬಲ್ಲವರಿಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಸಗಣಿಯ ಹುಳುವಿನಿಂದ ಹಿಡಿದು ಹೀರೆಯ ಹೂವನ್ನೂ ಒಳಗೊಂಡು ಸ್ವಪ್ನದರ್ಶನ ಸಿದ್ಧಿಯವರೆಗೆ ಕನ್ನಡವನ್ನು ಹಾಗೆ ಬಳಸಿದ ಮತ್ತೊಬ್ಬ ಕವಿ ಸಿಗುವುದಿಲ್ಲ.

ವಚನಕಾರರು ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ʻನಾನುʼ ಎಂಬ ವ್ಯಕ್ತಿತ್ವ ಮುನ್ನೆಲೆಗೆ ಬರುವಂತೆ ಮಾಡಿದವರು. ಹನ್ನೆರಡನೆಯ ಶತಮಾನದಲ್ಲಿ ನಗರಗಳು ಬೆಳವಣಿಗೆಯಾಗುತ್ತಿದ್ದ ಕಾಲದಲ್ಲಿ. ಅದು ಕಸುಬುದಾರರು ತಮ್ಮ ಕೌಶಲದ ಮೂಲಕವೇ ತಮ್ಮತನವನ್ನು ಕಂಡುಕೊಂಡ ಕಾಲ. ಬೇಸಾಯದ ಬದುಕು ನಗರದ ಬದುಕಾಗಿ ಬದಲಾಗುತ್ತಿದ್ದ ಕಾಲ. ಅಂಥ ಹೊತ್ತಿನಲ್ಲಿ ಬೇರೆ ಬೇರೆ ಜಾತಿ, ಕಸುಬುಗಳ ಹಿನ್ನೆಲೆಯ ಜನ ಕನ್ನಡವನ್ನು ತಮ್ಮ ವೈಯಕ್ತಿಕ ವ್ಯಕ್ತಿತ್ವದ ನಿರೂಪಣೆಗೂ ಸುತ್ತಲ ಸಮಾಜದ ಚಿತ್ರಣಕ್ಕೂ ಬಳಸಿಕೊಂಡರು. ಕುವೆಂಪು ಸಂಸ್ಕೃತ, ಇಂಗ್ಲಿಶ್ ಮೂಲಕ ಲಭ್ಯವಾದ ಜಾಗತಿಕ ತಿಳಿವಳಿಕೆಯನ್ನು ಬಳಸಿಕೊಂಡು ಕನ್ನಡಕ್ಕೆ ಆಧುನಿಕತೆಯನ್ನು ತಂದವರು. ಅರಿವಿರುವ ವ್ಯಕ್ತಿ, ಬದುಕಿನ ನೋಟ ಅಥವಾ ದರ್ಶನವನ್ನು ಪಡೆದ ವ್ಯಕ್ತಿ ಸಮೂಹದ ಬದುಕನ್ನು ಬದಲಿಸಲು ಸಾಧ್ಯವೆಂಬ ನಂಬಿಕೆ ಅವರ ಚಿಂತನೆಯಲ್ಲಿ ಇದೆ.
ತಮ್ಮ ಕಾಲದ ಅಗತ್ಯಕ್ಕೆ ತಕ್ಕ ಹಾಗೆ ಕುವೆಂಪು ವಿಜ್ಞಾನವನ್ನು ಸೂರ್ಯನೆಂದು ಕರೆದರು, ಹಾಗೇ ರೈಲು ರಸ್ತೆಯು ಹಳ್ಳಿಗಳ ಜೀವಸತ್ವವನ್ನು ಹೀರಿ ನಗರಗಳನ್ನು ಕೊಬ್ಬಿಸುವ ದೈತ್ಯನೆಂದೂ ಕಂಡರು. ಕನ್ನಡ ಮುಖ್ಯವೆಂದು ಹೇಳುತ್ತ ಸಂಸ್ಕೃತ ಮತ್ತು ಇಂಗ್ಲಿಶಿನ ಸತ್ವಗಳನ್ನು ಕನ್ನಡದೊಡನೆ ಕಸಿಗೊಳಿಸಿದರು. ʻಯುಗದ ಉತ್ಸಾಹʼವೆಂದು ವರ್ಣಿತನಾಗಿರುವ ಬಸವಣ್ಣನವರು ರೂಪಕದ ಭಾಷೆಯಲ್ಲಿ, ಧರ್ಮದ ಪರಿಭಾಷೆಯಲ್ಲಿ ಕನ್ನಡದ ಮೂಲಕ ವ್ಯಕ್ತಿಗತ ಚಿಂತನೆ, ಸಮಾಜದ ಸ್ವಾಸ್ಥ್ಯ, ಬದುಕಿನ ʻಕಲ್ಯಾಣʼಗಳನ್ನು ಚಿಂತಿಸಿದರು. ʻಒಲೆ ಹೊತ್ತಿ ಉರಿದೊಡೆ ನಿಲಬಹುದಲ್ಲದೆʼ ಎಂಬ ಅವರ ಪ್ರಸಿದ್ಧ ವಚನವನ್ನು ಲಂಕೇಶ್ ಅವರು ಇಪ್ಪತ್ತನೆಯ ಶತಮಾನದ ಕೊನೆಯ ಎರಡು ದಶಕಗಳ ಭಾರತದ ರಾಜಕೀಯದ ಮೇಲಿನ ವ್ಯಾಖ್ಯಾನವೆಂಬಂತೆ ವಿವರಿಸಿದ್ದು ನೆನಪಾಗುತ್ತದೆ. ಕೆಡುಕು ಅನ್ನುವುದು ನಿರ್ವಹಣೆಯ ಮಟ್ಟವನ್ನು ಮೀರಿ ತಾನೇ ತಾನಾಗಿ ಮೆರೆದರೆ ಬದುಕೇ ಅಸಾಧ್ಯವಾಗುತ್ತದೆ. ಕೆಡುಕನ್ನು ನಿಯಂತ್ರಿಸಲು ನಾವು ಮಾಡಿಕೊಂಡಿರುವ ವ್ಯವಸ್ಥೆಗಳೇ ಕೆಡುಕಾದರೆ ಬದುಕಲು ಹೇಗೆ ಸಾಧ್ಯ ಎಂದೂ ಆ ವಚನವನ್ನು ವಿವರಿಸಿಕೊಳ್ಳಬಹುದು. ಬಸವಣ್ಣನವರ ಹಾಗೇ ವ್ಯವಸ್ಥೆಯ ಮುಖ್ಯ ಸ್ಥಾನಗಳಲ್ಲಿರುವ ಮಹಾರಾಜರನ್ನೂ, ಮಂತ್ರಿ ಮುಖ್ಯಮಂತ್ರಿಗಳನ್ನೂ ಕುವೆಂಪು ನಿರಾಕರಿಸಿದ್ದು ನಮಗೆಲ್ಲ ಗೊತ್ತೇ ಇದೆ.
ಭಾಷೆ ಅನ್ನುವುದು ವಾಸ್ತವವನ್ನು ವಿವರಿಸುವ ಹಾಗೇ ವಾಸ್ತವವನ್ನು ನಿರ್ಮಿಸುತ್ತದೆ. ಮನುಷ್ಯ ಪ್ರಜ್ಞೆಯಿಂದ ರೂಪುಗೊಂಡ ಭಾಷೆ ಮನುಷ್ಯ ಪ್ರಜ್ಞೆಯನ್ನೂ ರೂಪಿಸುತ್ತದೆ. ಬಸವಣ್ಣ ಮತ್ತು ಕುವೆಂಪು ಹಾಗೆ ತಮ್ಮ ಭಾಷೆಯ ಬಳಕೆಯಿಂದಲೇ ಕನ್ನಡ ಪ್ರಜ್ಞೆಯನ್ನು ಬೆಳಗುವ, ಬೆಳೆಯುವ ದಾರಿಯನ್ನು ತೋರುವ ಕೆಲಸ ಮಾಡಿದ್ದಾರೆ.
ನಾವೀಗ ಬದುಕಿರುವುದು ಸತ್ಯ-ಸುಳ್ಳುಗಳ ವ್ಯತ್ಯಾಸ ಅಳಿದು ಹೋದ ಸತ್ಯೋತ್ತರ ಕಾಲದಲ್ಲಿ. ಅಧಿಕಾರದ ಆಸೆಗೆ ಇಲ್ಲದ್ದನ್ನೆಲ್ಲ ಇದೆಯೆನ್ನುವ ಅಧಿಕಾರಸ್ಥರು, ಸ್ಮೃತಿ, ಪುರಾಣ, ಆಚರಣೆಗಳನ್ನೇ ಧರ್ಮವೆಂದು ಬಿಂಬಿಸುವ ಭಾಷಣಕಾರರು, ಎಗ್ಗಿಲ್ಲದೆ, ಸೌಜನ್ಯವಿರದೆ, ಭಾಷೆಯನ್ನು ಕೊಳಕು ಮಾಡುವ ರಾಜಕೀಯ ಧುರೀಣರು ಅಕ್ಷರಸ್ಥರಲ್ಲದ, ಬದುಕುವುದೇ ದುಸ್ತರವಾಗಿರುವ ಜನಸಮುದಾಯದ ಮತಿಯನ್ನು ಮರುಳು ಮಾಡುತ್ತಿರುವ ಹೊತ್ತಿನಲ್ಲಿ ಬಸವ ಮತ್ತು ಕುವೆಂಪು ನಮಗೆ ಶಕ್ತಿ ಕೇಂದ್ರಗಳಾಗಬೇಕು. ದಿನ ನಿತ್ಯದ ಬದುಕಿನಲ್ಲಿ ಸತ್ಯ-ಸುಳ್ಳುಗಳ ವ್ಯತ್ಯಾಸ ಅಳಿಸಿ ಹೋದರೆ ಅಪನಂಬಿಕೆಯದೇ ಸಾಮ್ರಾಜ್ಯವಾಗಿ, ದ್ವೇಷವೇ ಪರಮಮೌಲ್ಯವಾಗುವ ಪರಿಸ್ಥಿತಿ ಬರುತ್ತದೆ. ನಮ್ಮ ಕಾಲ ಹಾಗಿದೆ.
ಇದನ್ನೂ ಓದಿರಿ: ಕರ್ನಾಟಕ 50 | ಪತ್ರಿಕೋದ್ಯಮ ಕಂಡ ಮೂರು ಪಲ್ಲಟಗಳು
ಕುವೆಂಪು ಅವರು ಬಸವಣ್ಣನವರ ಬಗ್ಗೆ ಒಂದು ಪುಟ್ಟ ಕವಿತೆ ಮತ್ತು ದೇಜಗೌ ಅವರೊಡನೆ ನಡೆಸಿದ ಮಾತುಕಥೆಯಲ್ಲಿ ಆಡಿದ ಕೆಲವು ಮಾತು, ಕನ್ನಡದ ರಾಷ್ಟ್ರಗೀತೆಯಲ್ಲಿ ಮಾಡಿರುವ ಉಲ್ಲೇಖ ಬಿಟ್ಟರೆ ಬಸವಣ್ಣನವರ ಬಗ್ಗೆ ಹೆಚ್ಚೇನೂ ಬರೆದಿಲ್ಲ, ಮಾತಾಡಿಲ್ಲ. ಆದರೆ ಈಗ ನಿಂತು ನೋಡುವಾಗ ಬುದ್ಧ, ಬಸವ, ಕುವೆಂಪು ಇವರೆಲ್ಲ ನಮ್ಮ ಪ್ರಜ್ಞೆಯನ್ನು ರೂಪಿಸಬೇಕಾದ ಚೇತನಗಳಾಗಿ ಕಾಣುತ್ತವೆ. ಸತ್ತವರ ಹೆಸರ ಪತ್ರವನೋದಿದಡೆ ಮುಕ್ತಿ ಎಂತಯ್ಯ ಎಂಬ ಅಲ್ಲಮನ ಮಾತು ನೆನಪಾಗುತ್ತದೆ. ಬಸವಣ್ಣ ಮತ್ತು ಕುವೆಂಪು ಅವರನ್ನು ಆರಾಧಿಸಲು, ಹೊತ್ತು ಮೆರೆಸಲು, ಭಾಷಣದ ಕೊಟೇಶನ್ ಆಕರಗಳೆಂದು ಬಳಸಲು ಮಾತ್ರ ಇರುವ ನುಡಿಗಣಿಗಳೆಂದು ತಿಳಿದರೆ ನಾವು ವ್ಯಕ್ತಿಗಳಾಗಿಯೂ ಸಮುದಾಯವಾಗಿಯೂ ಬೆಳೆಯಲಾರೆವು. ಹಿರಿದು-ಕಿರಿದು ಎಂಬುದಿಲ್ಲದೆ, ಮುಖ್ಯ ಅಮುಖ್ಯ ಎಂಬುದಿಲ್ಲದೆ, ಇಡೀ ಸೃಷ್ಟಿಯನ್ನು, ಕ್ಷಣ ಕ್ಷಣದ ಅನುಭವವನ್ನು ಇಡಿಯಾಗಿ ಅನುಭವಿಸುತ್ತ, ಬದುಕುವುದು ಅವರಿಬ್ಬರನ್ನು ಓದುವ ಎಲ್ಲರ ಜವಾಬ್ದಾರಿಯಾಗಬೇಕಾಗುತ್ತದೆ.

ಓ.ಎಲ್. ನಾಗಭೂಷಣ ಸ್ವಾಮಿ
ನಿವೃತ್ತ ಪ್ರಾಧ್ಯಾಪಕರಾದ ಓಎಲ್‌ಎನ್ ಅವರು, ಅನುವಾದ ಹಾಗೂ ವೈಚಾರಿಕ ಬರಹಗಳಿಂದ ಕನ್ನಡ ಸಾಹಿತ್ಯ ಪ್ರಜ್ಞೆಯನ್ನು ವಿಸ್ತರಿಸಿದವರು. ನನ್ನ ಹಿಮಾಲಯ (ಪ್ರವಾಸ ಕಥನ,) ನಮ್ಮ ಕನ್ನಡ ಕಾವ್ಯ (ಸಂಪಾದನೆ), ಕನ್ನಡ ಶೈಲಿ ಕೈಪಿಡಿ, ಅಲ್ಲಮ ವಚನ ಸಂಗ್ರಹ, ತತ್ವಪದಗಳು (ಪ್ರಾತಿನಿಧಿಕ ಸಂಕಲನ), ಇಂದಿನ ಹೆಜ್ಜೆ (ವಚನಗಳನ್ನು ಕುರಿತ ವಿಮರ್ಶಾ ಲೇಖನಗಳು), ಏಕಾಂತ ಲೋಕಾಂತ (ಅಂಕಣ ಬರಹ), ಮತ್ತೆ ತೆರೆದ ಬಾಗಿಲು (ಕೆ.ಎಸ್. ನರಸಿಂಹಸ್ವಾಮಿ ಅವರನ್ನು ಕುರಿತ ವಿಮರ್ಶಾ ಲೇಖನಗಳು)- ಮುಖ್ಯ ಕೃತಿಗಳು. ಯುದ್ಧ ಮತ್ತು ಶಾಂತಿ (ಟಾಲ್‌ಸ್ಟಾಯ್ ಕಾದಂಬರಿ), ಅಕ್ಕ ತಂಗಿಯರು (ಚೆಕಾವ್ ನಾಟಕ), ಕನ್ನಡಕ್ಕೆ ಬಂದ ಕವಿತೆ (ಬೇರೆ ಭಾಷೆಗಳಿಂದ ಆಯ್ದ ಕವಿತೆಗಳು), ಪ್ರೀತಿಯೆಂದರೇನು (ಜೆ.ಕೆ) ಮೊದಲಾದ ಕೃತಿಗಳನ್ನು ಅನುವಾದಿಸಿದ್ದಾರೆ.




