ಕಳೆದ 50 ವರ್ಷಗಳ ಕನ್ನಡ ಸಾಹಿತ್ಯ: ಪ್ರಮುಖ ಪ್ರೇರಣೆಗಳು ಮತ್ತು ಪ್ರವೃತ್ತಿಗಳು (ಭಾಗ-1)

Date:

1900ರ ಹೊತ್ತಿಗೆ, ಕನ್ನಡ ಭಾಷಿಕರು ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತ್ಯ, ಮುಂಬೈ ಪ್ರಾಂತ್ಯ, ಕೊಡಗು, ಹೈದರಾಬಾದ್ ಸಂಸ್ಥಾನ, ರಾಮದುರ್ಗ, ಸಾಂಗ್ಲಿ, ಮೀರಜ್ ಕುರುಂದವಾಡ, ಜಮಖಂಡಿ, ಮುಧೋಳ, ಸಂಡೂರು ಸಂಸ್ಥಾ, ಮೊದಲಾದ 20ಕ್ಕೂ ಹೆಚ್ಚು ಕಡೆಗಳಲ್ಲಿ ಹಂಚಿಹೋಗಿದ್ದರು. ಬೇರೆ ಬೇರೆ ಆಡಳಿತಗಳಿಗೆ ಒಳಪಟ್ಟ ಕನ್ನಡಿಗರ ಸ್ಥಿತಿ ತೀರ ದಯನೀಯವಾಗಿತ್ತು. 20ನೇ ಶತಮಾನದ ಮೊದಲರ್ಧ ಭಾಗದಲ್ಲಿ ಬಹಳ ದಿಟ್ಟವಾಗಿ ಮತ್ತು ಜವಾಬ್ದಾರಿಯಿಂದ ನಡೆದ ಕರ್ನಾಟಕ ಏಕೀಕರಣ ಚಳವಳಿಯು ಕೊನೆಗೂ ನವೆಂಬರ್ 1, 1956ರಂದು ಮೈಸೂರು ರಾಜ್ಯವನ್ನು ಸ್ಥಾಪಿಸಿತು. ಮುಂದೆ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸು ಅವರ ಮುಂದಾಳತ್ವದಲ್ಲಿ ನವೆಂಬರ್ 1, 1973ರಂದು ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು. ಈ ಘಟನೆ ನಡೆದ ಆನಂತರದ 50 ವರ್ಷಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಪಡೆದ ಪ್ರಮುಖ ಪ್ರೇರಣೆಗಳು ಹಾಗೂ ಅದರ ಪರಿಣಾಮಗಳನ್ನು ಗುರುತಿಸುವುದು ಈ ಲೇಖನದ ಪ್ರಮುಖ ಉದ್ದೇಶವಾಗಿದೆ.

ಪ್ರವೇಶ: ಕಳೆದ 50 ವರ್ಷದಲ್ಲಿ ಪ್ರಬಲವಾಗಿ ಕಾಣಿಸಿಕೊಂಡ ಸಾಹಿತ್ಯ ಪರಂಪರೆಯೆಂದರೆ-ಬಂಡಾಯ, ದಲಿತ ಸಾಹಿತ್ಯವೇ ಹೌದು. ಇದು ಚಳವಳಿಯ ರೂಪದಲ್ಲಿ ಕಾಣಿಸಿಕೊಂಡು ಬಗೆ ಬಗೆಯ ಸಾಮಾಜಿಕ ಚರ್ಚೆಗಳನ್ನೂ ಹುಟ್ಟು ಹಾಕಿತು. ಈ ಚಳವಳಿಯು ಪ್ರಬಲವಾಗಿ ಕಾಣಿಸಿಕೊಂಡಿದ್ದು 1970ರ ಉತ್ತರಾರ್ಧದಲ್ಲಿ. ಅದೇ ದಶಕದಲ್ಲಿ ನಡೆದ ಅನೇಕ ಘಟನೆಗಳು ಆ ಚಳವಳಿಗೆ ಪ್ರೇರಣೆ ನೀಡಿವೆ ಮತ್ತು ಆ ಪ್ರೇರಣೆಗಳೇ ಆ ಕಾಲದ ಸಾಹಿತ್ಯದ ಎಲ್ಲ ಪ್ರಕಾರಗಳ ಮುಖ್ಯ ಪ್ರವೃತ್ತಿಗಳನ್ನೂ ನಿರ್ಧರಿಸಿದೆ. ಇದನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಆ ಪ್ರೇರಣೆಗಳನ್ನು –

1. ಸಾಹಿತ್ಯೇತರ ಮತ್ತು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2. ಸಾಹಿತ್ಯಿಕ ಪ್ರೇರಣೆಗಳು ಎಂದು ಎರಡು ರೀತಿಯಿಂದ ವಿಭಜಿಸಿಕೊಳ್ಳಲಾಗಿದೆ.

1. ಸಾಹಿತ್ಯೇತರ ಪ್ರೇರಣೆಗಳು

ಪ್ರಮುಖ ಸಿದ್ಧಾಂತಗಳು: ಕಳೆದ 50 ವರ್ಷಗಳಲ್ಲಿ ಅನೇಕ ಸಿದ್ಧಾಂತಗಳು ಕನ್ನಡದೊಳಕ್ಕೆ ಪ್ರವೇಶ ಪಡೆದಿವೆ. ಅವುಗಳಲ್ಲಿ ಹೆಚ್ಚಿನವುಗಳು ಆಳುವ ವರ್ಗದ ವಿರುದ್ಧ ನಿಂತದ್ದರಿಂದ ಅವುಗಳನ್ನು ಸ್ಥೂಲವಾಗಿ ಎಡಪಂಥೀಯ ಸಿದ್ಧಾಂತಗಳೆಂದು ಕರೆಯಲಡ್ಡಿಯಿಲ್ಲ. ವ್ಯವಸ್ಥೆಯ ಅನ್ಯಾಯಗಳ ವಿರುದ್ಧ ಸ್ವರ ಎತ್ತಿದ ಈ ಸಿದ್ಧಾಂತಗಳು ವ್ಯವಸ್ಥೆಯನ್ನು ಜನಪರವಾಗಿಸಲು ಹೋರಾಡಿವೆ. ಆರ್ಥಿಕ ಅಸಮಾನತೆ, ಜಾತಿ ತಾರತಮ್ಯ, ಧಾರ್ಮಿಕ ಮೂಲಭೂತವಾದ ಇತ್ಯಾದಿಗಳೆಲ್ಲ ಕಳೆದ 50 ವರ್ಷಗಳಲ್ಲಿ ಎಡಪಂಥೀಯರ ಆಕ್ರೋಶಕ್ಕೆ ಒಳಗಾಗಿವೆ. ಹೀಗಾಗಿಯೇ ಇಂಥ ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿಯೆತ್ತಿದ್ದ ಬುದ್ದ, ಬಸವ, ಅಂಬೇಡ್ಕರ್, ಕುವೆಂಪು, ಗಾಂಧಿ, ಲೋಹಿಯಾ, ಫುಲೆ, ನಾರಾಯಣಗುರು, ಪೆರಿಯಾರ್ ಮೊದಲಾದವರೆಲ್ಲ ಒಂದಲ್ಲ ಒಂದು ರೀತಿಯಿಂದ ಬಂಡಾಯ ದಲಿತ ಚಳವಳಿಯಲ್ಲಿ ಭಾಗವಹಿಸಿದವರ ಮೇಲೆ ಗಾಢ ಪ್ರಭಾವ ಬೀರಿದ್ದಾರೆ. ಆ ಮೂಲಕ ಆ ಚಳವಳಿಯ ಪ್ರಮುಖ ಬರಹಗಾರರ ಸೃಜನಶೀಲತೆಗೆ ಪ್ರೇರಣೆ ನೀಡಿದ್ದಾರೆ. ಈ ನಡುವೆ ಲೇಖಕರನ್ನೂ ಚಳವಳಿಗಾರರನ್ನೂ ಆಳವಾಗಿ ಆಕರ್ಷಿಸಿದ ಪ್ರಮುಖ ಸಿದ್ಧಾಂತಗಳಲ್ಲಿ ಕೆಲವು ಈ ಕೆಳಗಿನಂತಿವೆ.

vaadagalu
ಡಾ.ಬಿ.ಆರ್.ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್‌, ಲೋಹಿಯಾ

ಮಾರ್ಕ್ಸ್‌ವಾದ: ಕನ್ನಡದಲ್ಲಿ ಪ್ರಗತಿಶೀಲ ಚಳವಳಿಗೆ ಪ್ರೇರಣೆ ನೀಡಿದ ಮಾರ್ಕ್ಸ್‌ವಾದವು ಬಂಡಾಯ-ದಲಿತ ಸಾಹಿತ್ಯಕ್ಕೂ ಸಾಕಷ್ಟು ಪ್ರೇರಣೆ ನೀಡಿದೆ. 1970ರ ದಶಕದ ಮಾರ್ಕ್ಸ್‌ವಾದ ಏಕರೂಪದಲ್ಲಿಯೇನೂ ಇರಲಿಲ್ಲ. ಅದರಲ್ಲಿಯೂ ವಿವಿಧ ಬಗೆಯ ಕವಲುಗಳು ಕಾಣಿಸಿಕೊಂಡಿದ್ದವು. ಈ ವಿವಿಧ ಕವಲುಗಳ ಚಿಂತಕರು ಬಂಡಾಯ ಚಳವಳಿಯ ಮುಂಚೂಣಿಯಲ್ಲಿದ್ದರು. ಅದರಲ್ಲಿಯೂ ದಲಿತೇತರ ಲೇಖಕರಲ್ಲಿ ಹೆಚ್ಚಿನವರು ಮಾರ್ಕ್ಸ್‌ವಾದಿಗಳೇ ಆಗಿದ್ದರು. ಈ ಬರಹಗಾರರು ಎಲ್ಲ ಜಾತಿಯ ಬಡವರನ್ನು ಸಮಾನರೆಂದು ಗುರುತಿಸಿದ್ದಾರೆ ಮತ್ತು ಅವರನ್ನು ಶೋಷಕರ ವಿರುದ್ಧ ಎತ್ತಿಕಟ್ಟಿದ್ದಾರೆ. ಚಳವಳಿಯ ಮುಂಚೂಣಿಯಲ್ಲಿದ್ದ ಬರಗೂರು ರಾಮಚಂದ್ರಪ್ಪ, ಡಿ. ಆರ್. ನಾಗರಾಜ್, ಸಿದ್ದಲಿಂಗಯ್ಯ ಮೊದಲಾದವರು ವರ್ಗ ಸಂಘರ್ಷದ ಕುರಿತು ಬರೆದರು. ಪ್ರಗತಿಶೀಲ ಚಳವಳಿಯಲ್ಲಿದ್ದ ನಿರಂಜನರು ಬಂಡಾಯದ ಸಭೆಗಳಲ್ಲಿ ಭಾಗವಹಿಸಿದ್ದರು. ಜಾತಿಯನ್ನು ಇವರು ಅಷ್ಟಾಗಿ ಗುರುತಿಸಲಿಲ್ಲ. ಬದಲಾಗಿ ಆರ್ಥಿಕ ಅಸಮಾನತೆಗೆ ಹೆಚ್ಚಿನ ಮಹತ್ವ ನೀಡಿ ಅದನ್ನು ಅಂತಾರಾಷ್ಟ್ರೀಯ ಚೌಕಟ್ಟಿನಲ್ಲಿ ಚರ್ಚಿಸುವ ಪ್ರಯತ್ನ ಮಾಡಿದರು. ಆ ಕಾಲದ ಮಾರ್ಕ್ಸ್‌ವಾದಿ ವಿಮರ್ಶಕರೂ ಸಾಹಿತ್ಯ ಕೃತಿ ತಿಳಿದೋ ತಿಳಿಯದೆಯೋ ಬರಹಗಾರ ಪ್ರತಿನಿಧಿಸುವ ವರ್ಗದ ಮಾನಸಿಕ ಧೋರಣೆಗಳನ್ನು ಪ್ರತಿಬಿಂಬಿಸುತ್ತವೆ ಎಂದೇ ಬರೆದರು. ಸಾಮಾನ್ಯವಾಗಿ ನಡೆಯುವಂತೆ, ಬರಹಗಾರನ ಮೇಲಾಗುವ ವಿವಿಧ ವರ್ಗಗಳ ಪ್ರಭಾವಗಳ ಅಂಶಗಳ ಬಗ್ಗೆಯೂ ಅವರು ಬರೆದರು. ಇಂಥ ಕಡೆ ಸೃಜನಶೀಲ ಬರಹಗಾರರು ಕೃತಿಯ ವಸ್ತುವಿನ ಬಗ್ಗೆ ಮತ್ತು ಅದು ಒಳಗೊಳ್ಳುವ ಸಮಾಜದ ಸ್ವರೂಪದ ಬಗ್ಗೆ ಹೆಚ್ಚಿನ ಗಮನ ಹರಿಸಿದರು. ಕೃತಿಯ ರೂಪ ಮತ್ತು ಆಕೃತಿಯ ಬಗ್ಗೆ ಅಷ್ಟಾಗಿ ಗಮನ ಹರಿಸಲಿಲ್ಲ. ಪ್ರತಿ ಶ್ರೇಷ್ಠ ಕೃತಿಯಲ್ಲಿಯೂ ವಸ್ತುವೇ ರೂಪವನ್ನು ನಿರ್ಣಯಿಸುತ್ತದೆ ಎಂಬ ನಂಬಿಕೆಯಲ್ಲಿಯೇ ಇಲ್ಲಿ ಸಾಹಿತ್ಯ ಸೃಷ್ಟಿಯಾಯಿತು. ಇದರ ಜೊತೆಗೆ ಸಾಹಿತ್ಯದ ಮತ್ತು ಸಾಹಿತಿಯ ಹುಟ್ಟು ಸಮಾಜದ ಒಟ್ಟು ಉತ್ಪಾದನಾ ವ್ಯವಸ್ಥೆಯ ಒಂದು ಭಾಗವೇ ಆಗಿರುತ್ತದೆಂಬ ನಂಬಿಕೆ ಪೂರ್ವಗ್ರಹೀತವಾಗಿ ಕೆಲಸ ಮಾಡಿತು. ಇದರಿಂದಾಗಿ, ಸಾಹಿತಿ ಮತ್ತು ಅವನ ಸಾಹಿತ್ಯ ರಚನೆಯು ಸಮಾಜದೊಂದಿಗೆ ಸ್ಪಂದಿಸಿಯೇ ತೀರಬೇಕೆಂಬ ಹಠ ಮುಂಚೂಣಿಗೆ ಬಂತು. ಈ ಹಠವು ಅಂತಿಮವಾಗಿ ಸಾಹಿತಿಯು ರಾಜಕೀಯ-ಸಾಮಾಜಿಕ ಸಂಗತಿಗಳಲ್ಲೂ ಆಸಕ್ತನಾಗಿರಬೇಕು ಎಂಬಲ್ಲಿಗೆ ತಲುಪಿತು. ಬಂಡಾಯದ ಹಲವು ಲೇಖಕರು ಹೀಗೆ ರಾಜಕಾರಣದ ಬಗ್ಗೆಯೂ, ಸಾಮಾಜಿಕ ಬದಲಾವಣೆಯ ಬಗ್ಗೆಯೂ ಹೆಚ್ಚಿನ ಆಸಕ್ತಿ ತೋರಿದರು. ಚಂಪಾ ಇದರ ಮುಂಚೂಣಿಯಲ್ಲಿ ಇದ್ದರು. ಕವಿ ಎಲ್ ಹನುಮಂತಯ್ಯನವರು ಮುಂದೆ ಸಕ್ರಿಯ ರಾಜಕಾರಣಿಯೂ ಆದರು.

ಇದನ್ನೂ ಓದಿರಿ: ಸತ್ಯ ಹೇಳಿ ಸಂಕಟಕ್ಕೆ ಸಿಲುಕಿದ ಮುಸ್ಲಿಮರಿವರು…

ಲೋಹಿಯಾವಾದ: ಆಧುನಿಕ ಭಾರತದಲ್ಲಿ ಒಂದು ಸೈದ್ಧಾಂತಿಕ ಶಕ್ತಿಯಾಗಿ ಮತ್ತು ರಾಜಕೀಯ ಚಳವಳಿಯಾಗಿ ಸಮಕಾಲೀನ ಬದುಕನ್ನು ಸಾಕಷ್ಟು ಪ್ರಭಾವಿಸಿದ ಶಕ್ತಿ ಎಂದರೆ ಲೋಹಿಯಾವಾದ. ವಿದೇಶದಿಂದ ಆಗಮಿಸಿದ ಮಾರ್ಕ್ಸ್‌ವಾದ ಮತ್ತು ಸಮಾಜವಾದದ ಸೋಗು ಹಾಕಿದ ನೆಹರೂವಾದಗಳಿಗೆ ಲೋಹಿಯಾವಾದವು ಪರ್ಯಾಯವೆಂದೂ ಕೆಲವರು ವಾದಿಸಿದರು. ಇದೊಂದು ವಾದವೇ ಅಲ್ಲವೆಂದು ಹೇಳುವವರೂ ಇದ್ದರು. ಈ ಎರಡು ವಾದಗಳ ನಡುವೆ ನನ್ನಂಥ ಹಲವರು ಗೊಂದಲಕ್ಕೊಳಗಾದದ್ದೂ ಇದೆ. ಏನೇ ಇರಲಿ, ಲೋಹಿಯವಾದವು ಗಾಂಧೀವಾದದಿಂದ ಪ್ರೇರಣೆ ಪಡೆದು ಸಮಾಜವಾದವನ್ನು ಮುಂದಿಟ್ಟಿತು. ಹಾಗಾಗಿ ಲೋಹಿಯಾವಾದದ ಒಂದು ಭಾಗವು ಗಾಂಧೀಜಿಯ ಸ್ವರಾಜ್ಯದೊಳಗಿದ್ದರೆ, ಇನ್ನೊಂದು ಭಾಗವು ಸಮಾಜವಾದದಲ್ಲಿರುತ್ತಿತ್ತು. ಈ ಮಿಶ್ರಣವು ಲೋಹಿಯಾವಾದಿಗಳಿಗೆ ‘ಬುದ್ದಿಜೀವಿಗಳೆಂಬ’ ಬಿರುದನ್ನೂ ದಯಪಾಲಿಸಿತು. ನೆಹರೂ ಯುಗದ ರಾಜಕಾರಣದ ಏಕೈಕ ಬುದ್ದಿಜೀವಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಾಮಮನೋಹರ ಲೋಹಿಯಾ ಅವರು ದಲಿತರನ್ನು ಹೊರತುಪಡಿಸಿದ ಬ್ರಾಹ್ಮಣೇತರ ಬರಹಗಾರರಿಗೆ ಪ್ರಮುಖ ಪ್ರೇರಣೆಯಾದದ್ದಂತೂ ನಿಜ. ಈ ಪ್ರೇರಣೆಯು ಬಂಡಾಯ ಚಳವಳಿಯ ಸಂದರ್ಭದಲ್ಲಿ ಮುಖ್ಯವಾಗಿ ಅಧಿಕಾರದ ವಿಕೇಂದ್ರೀಕರಣ, ಭೂಮಿಯ ಹಂಚಿಕೆ, ಜಾತಿಯ ಶ್ರೇಣೀಕರಣದ ನಿರಾಕರಣೆ ಹಾಗೂ ಅಂತರಜಾತೀಯ ಮದುವೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಕ್ರಿಯಾಶೀಲವಾಯಿತು. ಇದರ ಜೊತೆಗೆ ಇಂಗ್ಲಿಷಿನ ಸ್ಥಾನಮಾನಗಳ ಬಗ್ಗೆ, ಭಾರತೀಯ ಪರಂಪರೆಯ ಅಪವ್ಯಾಖ್ಯಾನಗಳ ಬಗ್ಗೆ ಹಾಗೂ ಭಾರತೀಯ ದೇಶಭಾಷೆಗಳ ಬಗ್ಗೆಯೂ ಬಹಳ ಚರ್ಚೆಗಳು ಆ ಕಾಲದಲ್ಲಿ ನಡೆದವು. ಬಹುಶ: ಕಳೆದ 50 ವರ್ಷಗಳಲ್ಲಿ ಕನ್ನಡದ ಬರಹಗಾರರು ಲೋಹಿಯಾವಾದದಿಂದ ಪ್ರಭಾವಿತರಾದಷ್ಟು ಬೇರೆ ಯಾವ ಸಿದ್ಧಾಂತಗಳಿಂದಲೂ ಪ್ರಭಾವಿತರಾದಂತಿಲ್ಲ. ಜಾತಿಯ ಕುರಿತಾದ ಅವರ ಮಾತುಗಳು ಮತ್ತು ಲೇಖನಗಳು ಸಮಾಜದಲ್ಲಿ ಬಗೆಬಗೆಯ ಚರ್ಚೆಗಳನ್ನಂತೂ ಹುಟ್ಟು ಹಾಕಿದವು. ಈ ನಡುವೆ ವರ್ಗದ ಕುರಿತು ಮಾತಾಡುವ ಮಾರ್ಕ್ಸ್‌ವಾದಿಗಳಿಗೂ, ಜಾತಿಯ ಬಗ್ಗೆ ಮಾತಾಡುವ ಲೋಹಿಯಾವಾದಿಗಳಿಗೂ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಅವರಿಬ್ಬರೂ ಪರಸ್ಪರ ಗುಮಾನಿಗಳ ಜೊತೆಯೇ ಚಳವಳಿಯಲ್ಲಿ ಜೊತೆಜೊತೆಯಾಗಿಯೇ ಭಾಗವಹಿಸಿದ್ದನ್ನೂ ನಾವೆಲ್ಲ ಕಂಡೆವು. ಆದರೆ ಮುಂದಿನ ದಿನಗಳಲ್ಲಿ ಅನೇಕ ಸಮಾಜವಾದಿಗಳು ತಮ್ಮ ಕಾಂಗ್ರೆಸ್ ವಿರೋಧಿ ಧೋರಣೆಯಿಂದಾಗಿ ಬಿಜೆಪಿ ಜೊತೆ ಸೇರಿಕೊಂಡರು. ಮಾರ್ಕ್ಸ್‌ವಾದಿಗಳು ಆ ತಪ್ಪನ್ನು ಮಾಡಲಿಲ್ಲ. ಈ ಎರಡೂ ಸಿದ್ಧಾಂತಗಳ ಕುರಿತು ನಿಖರವಾಗಿ ಮಾತಾಡುತ್ತಿದ್ದ ಕವಿ ಸಿದ್ದಲಿಂಗಯ್ಯನವರು ಕೊನೆಕೊನೆಗೆ ಬಹಳ ಚರ್ಚಾಸ್ಪದವಾದ ನಡೆ ನುಡಿಗಳಿಂದಾಗಿ ಗೇಲಿಗೊಳಗಾದರು. ಆದರೆ ಅವರ ಕವಿತೆಗಳು ಅವರ ಅಧಿಕಾರದ ಹಪಹಪಿಕೆಯಿಂದ ಬಹಳ ಎತ್ತರದಲ್ಲಿದ್ದರಿಂದ ನನ್ನಂಥ ಓದುಗರ ಮನಸ್ಸಲ್ಲಿ ಉಳಿದುಬಿಟ್ಟರು. ಈ ಕಷ್ಟ ದೇವನೂರರಿಗೆ ಬರಲೇ ಇಲ್ಲ. ಅದಕ್ಕೆ ಅವರು ಸರ್ವಮಾನ್ಯರಾಗಿ ಉಳಿದರು.

ಅಂಬೇಡ್ಕರ್‌ವಾದ: ಕಳೆದ 50 ವರ್ಷಗಳಲ್ಲಿ ಕರ್ನಾಟಕದಲ್ಲಿ ಅಂಬೇಡ್ಕರ್ ಚಿಂತನೆಗಳು ಲೇಖಕರ ಮೇಲೆ ಬೀರಿದ ಪರಿಣಾಮ ಬಹಳ ನಿರ್ಣಾಯಕವಾದುದು. ಅದು ದಲಿತ ಅಸ್ಮಿತೆಯನ್ನು ಪ್ರಖರವಾಗಿ ಬೆಳೆಸಿತು. ಬಹಳ ಲೇಖಕರು ಅಂಬೇಡ್ಕರ್ ಅವರನ್ನು ಸುಲಭವಾಗಿ ಒಪ್ಪಿಕೊಂಡರು. ಒಪ್ಪಿಕೊಳ್ಳಲಾಗದವರು ಕೂಡಾ ಅಂಬೇಡ್ಕರ್ ಅವರನ್ನು ತಮಗೆ ಹೊಂದಿಸಿಕೊಳ್ಳಲು ಕೆಲವು ತಂತ್ರಗಳನ್ನು ಹುಡುಕಿಕೊಂಡರು. 1970-80ರ ದಶಕದುದ್ದಕ್ಕೂ ಕಾಣಿಸಿಕೊಂಡ ಕನ್ನಡ ದಲಿತ ಬರಹಗಾರರೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಅಂಬೇಡ್ಕರ್‌ವಾದದಿಂದ ಪ್ರೇರಣೆ ಪಡೆದವರೇ ಆಗಿದ್ದರು. ಅಂಬೇಡ್ಕರರು ದಲಿತರ ಸ್ವಾಭಿಮಾನದ ಸಂಕೇತವಾದರು. ಹಿಂದೂ ಧರ್ಮದ ಸಾಮಾಜಿಕ ವಿಷಮತೆಗೆ ಬ್ರಾಹ್ಮಣೀಕರಣವೇ ಕಾರಣವೆಂದು ವಿಶ್ಲೇಷಿಸಿದ ಅಂಬೇಡ್ಕರ್ ಅವರ ವಾದಗಳಿಂದ ದಲಿತ ಬಂಡಾಯ ಚಳವಳಿಯು ಕೆಳಗಿನ ಅಂಶಗಳನ್ನು ಸ್ವೀಕರಿಸಿಕೊಂಡಿತು:

1. ಅಸಮಾನತೆಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುವ ಅಂಶಗಳ ಹುಡುಕಾಟ.

2. ಅಸ್ಪೃಶ್ಯರನ್ನು ಮತ್ತು ಶೂದ್ರರನ್ನು ಸಂಪೂರ್ಣವಾಗಿ ನಿರಾಯುಧರನ್ನಾಗಿಸುವ ತಂತ್ರಗಳು ಯಾವುವು?

3. ಅಧಿಕಾರ ಸ್ಥಾನಗಳನ್ನು ಶೂದ್ರರು ಮತ್ತು ಅಸ್ಪೃಶ್ಯರು ಕೂಡಾ ಹೊಂದಲು ಏನು ಮಾಡಬೇಕು?

4. ಶಿಕ್ಷಣದಿಂದ ವಂಚಿತರಾದ ಶೂದ್ರರು ಮತ್ತು ಅಸ್ಪೃಶ್ಯರಿಗೆ ಶಿಕ್ಷಣ ದೊರೆಯುವಂತೆ ಮಾಡುವ ಬಗೆ ಹೇಗೆ?

5. ಶೂದ್ರರು ಮತ್ತು ಅಸ್ಪೃಶ್ಯರಿಗೆ ಆಸ್ತಿಯ ಹಕ್ಕು ದೊರೆಯುವುದು ಹೇಗೆ?

6. ಮಹಿಳೆಯರು ಸಬಲೀಕರಣಗೊಳ್ಳಲು ಏನು ಮಾಡಬೇಕು?

2 Bandaya Sahitya Sammelana 2
1979ರ ಮಾರ್ಚ್ 10ರಂದು ಬೆಂಗಳೂರಿನಲ್ಲಿ ನಡೆದ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ತೆಲುಗು ಕವಿ ಶ್ರೀ ಶ್ರೀ, ದೇವನೂರ ಮಹಾದೇವ, ನಿರಂಜನ ಹಾಗೂ ಸಿದ್ದಲಿಂಗಯ್ಯ (ಮಾತನಾಡುತ್ತಿರುವವರು)

ಇಂಥ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಬಂಡಾಯ ಚಳವಳಿಯು ಅಂಬೇಡ್ಕರರನ್ನು ಒಳಗೊಳ್ಳಲು ಪ್ರಯತ್ನಿಸಿತು. ಆದರೆ ಮುಂದಿನ ಒಂದೆರಡು ವರ್ಷಗಳಲ್ಲಿ ಅಂದರೆ, 1970ರ ದಶಕದ ಕೊನೆಯ ಹೊತ್ತಿಗೆ ಬಂಡಾಯ ಚಳವಳಿಯಿಂದ ಪ್ರತ್ಯೇಕಗೊಂಡ ದಲಿತರು, ದಲಿತ ಸಂಘರ್ಷ ಸಮಿತಿಯನ್ನು ರಚಿಸಿಕೊಂಡು ಶಿಕ್ಷಣ, ಸ್ವಾಭಿಮಾನ ಮತ್ತು ಹೋರಾಟವನ್ನು ಆಧರಿಸಿಕೊಂಡು ಮುಂದೆ ಚಲಿಸಿದರು. ದಲಿತರ ಮತ್ತು ಹಿಂದುಳಿದವರ ಏಳಿಗೆಗಾಗಿ ಸ್ವ-ಸುಧಾರಣೆ, ಸ್ವ-ಪ್ರಗತಿ, ಸ್ವಾವಲಂಬನೆ, ಸ್ವಾಭಿಮಾನ, ಸ್ವ-ಪ್ರತ್ಯಯ ಮೊದಲಾದ ವಿಷಯಗಳಲ್ಲಿ ಯಾರಲ್ಲಿಯೂ ಭಿನ್ನಮತ ಇರಲಿಲ್ಲ.

ಇದನ್ನೂ ಓದಿರಿ: ಕೋಳಿ ಫಾರಂನಿಂದ ಕೊಯಮತ್ತೂರು, ನಂದಿ ಬೆಟ್ಟದವರೆಗೆ ‘ಜಗ್ಗಿ’ ಬೆಳೆದಿದ್ದು ಹೀಗೆ..

ಹೀಗೆ ಮೇಲಿನ ಮೂರು ಸಿದ್ಧಾಂತಗಳು 1970ರ ದಶಕದ ಉತ್ತರಾರ್ಧದಲ್ಲಿ ಲೇಖಕರನ್ನು ಮತ್ತು ಹೋರಾಟಗಾರರನ್ನು ಪ್ರಬಲವಾಗಿ ಪ್ರಭಾವಿಸಿದವು.

ವಿಭಿನ್ನ ಬಗೆಯ ಚಳವಳಿಗಳು: ಭಾರತದ ವಿವಿಧಕಡೆ ನಡೆದ ಜನಪರ ಚಳವಳಿಗಳು ಮತ್ತು ನಡೆದ ಅನೇಕ ಘಟನೆಗಳು ಬಂಡಾಯ-ದಲಿತ ಸಾಹಿತ್ಯದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವ ಬೀರಿವೆ. ಅವುಗಳನ್ನು ಸ್ಥೂಲವಾಗಿ ಈ ಕೆಳಗಿನಂತೆ ಗುರುತಿಸಬಹುದು.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ನಡೆದ ರಾಷ್ಟ್ರೀಯ ಚಳವಳಿಯಿಂದ ಪ್ರೇರಿತವಾದ ಹಲವರು ಗಾಂಧೀ ಅನುಯಾಯಿಗಳಾಗಿದ್ದು ದಲಿತೋದ್ಧಾರದಂತಹ ಜನಪರ ಕೆಲಸಗಳನ್ನು ಮಾಡಿದ್ದುಂಟು. ಗೋಪಾಲಸ್ವಾಮಿ ಅಯ್ಯರ್, ತಗಡೂರು ರಾಮಚಂದ್ರ ರಾಯರು, ಕುದ್ಮಲ್ ರಂಗರಾಯರು, ವಿಜಾಪುರದ ಕಾಕಾ ಕಾರ್ಖಾನಿಸ್, ಹರ್ಡೇಕರ್ ಮಂಜಪ್ಪ, ಕಾರ್ನಾಡ ಸದಾಶಿವರಾವ್, ಸಿ.ಆರ್. ರೆಡ್ಡಿ ಮೊದಲಾದವರು ದಲಿತರಲ್ಲಿ ಹುಟ್ಟಿಸಿದ ಸ್ವಾಭಿಮಾನಕ್ಕೆ ಚಾರಿತ್ರಿಕ ಮಹತ್ವವಿದೆ. ಆನಂತರದ ಕಾಲಘಟ್ಟದಲ್ಲಿ ನಡೆದ ಮುಖ್ಯ ಘಟನೆಯೆಂದರೆ ಮೀಸಲಾತಿಗೆ ಸಂಬಂಧಿಸಿದ ಹೋರಾಟಗಳು. 1972ರಲ್ಲಿ, ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರ ನೇತೃತ್ವದಲ್ಲಿ ಎಲ್.ಜಿ ಹಾವನೂರರು ಮಂಡಿಸಿದ ವರದಿಯ ಜಾರಿಗಾಗಿ ಅಂಬೇಡ್ಕರ್ ಜನ್ಮದಿನದಂದು (ಏಪ್ರಿಲ್ 14) ದೊಡ್ಡ ಆಂದೋಲನ ನಡೆಯಿತು. ಇದರಿಂದ ದಲಿತ ಬುದ್ಧಿಜೀವಿಗಳೆಲ್ಲ ಒಂದು ನಿರ್ದಿಷ್ಟ ಕಾರಣಕ್ಕೆ ಒಂದುಗೂಡಿದಂತಾಯಿತು. ಮುಂದೆ 1973ರಲ್ಲಿ ನಡೆದ ಬೂಸಾ ಪ್ರಕರಣವು ಕೂಡಾ ನಾಡಿನ ಜನರನ್ನು ಬಡಿದೆಬ್ಬಿಸಿತು. ನುರಿತ ರಾಜಕಾರಣಿಯೂ, ಮಂತ್ರಿಗಳೂ ಅಗಿದ್ದ ಬಸವಲಿಂಗಪ್ಪನವರು ದಲಿತರು ತಲೆ ಮೇಲೆ ಹೇಲು ಹೊರುವುದನ್ನು ನಿಷೇಧಿಸಿದರು. ಆ ಕಾಲಕ್ಕೆ ಇವೇನೂ ಸಣ್ಣ ಘಟನೆಗಳಾಗಿರಲಿಲ್ಲ. ಇಂಥ ಘಟನೆಗಳ ಜೊತೆಗೆ, ದೇವರು, ಧರ್ಮ, ಜಾತಿಗಳ ವಿರುದ್ಧ ಕರ್ನಾಟಕದ ಯುವಜನತೆ ಬಲವಾದ ಕೂಗೆಬ್ಬಿಸಿತು.

ಪರಿಣಾಮವಾಗಿ 1973ರ ಆಗಸ್ಟ್ 25-26ರಂದು ಮೈಸೂರಿನಲ್ಲಿ ಚಾರಿತ್ರಿಕವಾದ ಜಾತಿವಿನಾಶ ಸಮ್ಮೇಳನ ನಡೆಯಿತು. ಈ ಸಮ್ಮೇಳನದ ಹಿಂದೆ ಲೋಹಿಯಾ ಅವರ ವೈಚಾರಿಕತೆಯಿತ್ತು. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ರಾಮದಾಸ್, ಶ್ರಿಕೃಷ್ಣ ಆಲನಹಳ್ಳಿ, ದೇವನೂರು ಮಹಾದೇವ, ಸಿದ್ಧಲಿಂಗಯ್ಯ, ಮೊದಲಾದವರೆಲ್ಲ ಈ ಸಮ್ಮೇಳನದಲ್ಲಿ ಪಾಲ್ಗೊಂಡು ಕರ್ನಾಟಕದಾದ್ಯಂತ ಒಂದು ಬಗೆಯ ರೋಮಾಂಚನ ಉಂಟು ಮಾಡಿದರು. ಅನೇಕ ಕಡೆಗಳಲ್ಲಿ ಅಂತರಜಾತಿ ಮದುವೆಗಳೂ ನಡೆದುವು. ಬಹುಮಟ್ಟಿಗೆ ಇದೇ ಜನಗಳು ಮುಂದೆ 1974ರ ಏಪ್ರಿಲ್ 20 ಮತ್ತು 21ರಂದು ಮೈಸೂರಿನಲ್ಲಿ ‘ಬರಹಗಾರರು ಮತ್ತು ಕಲಾವಿದರ ಒಕ್ಕೂಟ’ದ ಸಮ್ಮೇಳನ ಮಾಡಿದರು. ಶೂದ್ರ ಪ್ರಜ್ಞೆ ಮತ್ತೊಮ್ಮೆ ಸ್ವಾಭಿಮಾನದ ಸಂಕೇತವಾಯಿತು. ಆ ಸಮ್ಮೇಳನದಲ್ಲಿ ಮಹಾಕವಿ ಕುವೆಂಪುರವರು ಮಾಡಿದ ಉದ್ಘಾಟನಾ ಭಾಷಣ ಅನೇಕರ ರಕ್ತವನ್ನು ಬೆಚ್ಚಗಾಗಿಸಿತು. ‘ಕನ್ನಡ ಸಾಹಿತ್ಯದಲ್ಲಿರುವುದೆಲ್ಲ ಬೂಸಾ’ ಎಂದು ಘೋಷಿಸಿದ ಬಸವಲಿಂಗಪ್ಪನವರು ಆ ಕಾರಣಕ್ಕಾಗಿ ತಮ್ಮ ಮಂತ್ರಿ ಪದವಿಯನ್ನು ಕಳೆದುಕೊಂಡರೂ, ಸ್ವಸ್ಥಚಿತ್ತರಾಗಿ ನಿದ್ರಿಸುತ್ತಿದ್ದ ಸಾಂಪ್ರದಾಯಿಕ ಸಾಹಿತಿಗಳ ಚಿತ್ತವನ್ನು ಕೆಡಿಸುವುದರಲ್ಲಿ ಯಶಸ್ವಿಯಾದರು. ಜಡವಾಗಿದ್ದ ಸಾಹಿತಿಗಳ ಸಮುದಾಯ ಮೈಕೊಡವಿ ನಿಲ್ಲುವಂತಾಯಿತು.

ದಲಿತರಲ್ಲಿ ಉಂಟಾದ ಎಚ್ಚರದ ಪರಿಣಾಮವಾಗಿ 1974ರಲ್ಲಿ ಭದ್ರಾವತಿಯಲ್ಲಿ ‘ದಲಿತ ಸಂಘರ್ಷ ಸಮಿತಿ’ ರೂಪುಗೊಂಡಿತು. ಮುಂದೆ ಇದು ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ಯಾಗಿ ಬೆಳೆದು ದಲಿತರ ಸಂರಕ್ಷಣೆಗೆ ಕಟಿಬದ್ಧವಾಯಿತು. ದಲಿತ ಬರಹಗಾರರ ಯುವ ಸಂಘಟನೆ ಕರ್ನಾಟಕದಾದ್ಯಂತ ಕ್ಷಿಪ್ರವಾಗಿ ಪಸರಿಸಿಕೊಂಡು ದಲಿತರ ಮೇಲಾಗುವ ದೌರ್ಜನ್ಯಗಳ ವಿರುದ್ಧ ಎತ್ತಿದ ಸ್ವರ ಅಸಾಧಾರಣವಾದುದು. ಮುಂದೆ ಇದು ‘ದಲಿತ ವಿದ್ಯಾರ್ಥಿ ಒಕ್ಕೂಟ’, ‘ದಲಿತ ಮಹಿಳಾ ಒಕ್ಕೂಟ’, ‘ದಲಿತ ಕಲಾಮಂಡಳಿ’, ‘ದಲಿತ ನೌಕರರ ಒಕ್ಕೂಟ’, ‘ದಲಿತ ವೈದ್ಯ ಒಕ್ಕೂಟ’ವೇ ಮೊದಲಾದ ಹಲವು ಸಹ-ಸಂಘಟನೆಗಳನ್ನು ಕಟ್ಟಿ ಬೆಳೆಸಿತು. ಈ ಬೆಳವಣಿಗೆಗಳು ದಲಿತ ಸಾಹಿತ್ಯವನ್ನು ಗಟ್ಟಿಯಾಗಿ ಬೆಳೆಸಿದ್ದಲ್ಲದೆ, ಬೀದಿ ಬೀದಿಯಲ್ಲಿ ದಲಿತರ ಸ್ವರ ಕೇಳಿಸುವಂತೆ ಮಾಡಿತು. ಸಾಹಿತ್ಯಕ್ಕೆ ತಮಟೆಯ ಧ್ವನಿ ಸೇರಿಕೊಂಡಿತು. ಈ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಗೆ ‘ದಲಿತ ಸಂಘರ್ಷ ಸಮಿತಿ’ ಹೊಸ ಆಯಾಮ ನೀಡಿತು.

devaraja Aras
ದೇವರಾಜ ಅರಸು

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕೂಡಾ ಈ ಬಗೆಯ ಬೆಳವಣಿಗೆಗೆ ಬೆನ್ನು ಹಾಕಿ ಕುಳಿತುಕೊಳ್ಳುವಂತಿರಲಿಲ್ಲ. ಅದು 70ರ ದಶಕದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದಿತು. ಕರ್ನಾಟಕದಲ್ಲಿ ಅದು ದೇವರಾಜ ಅರಸರ ಮುಂದಾಳತ್ವದಲ್ಲಿ ಸಾಕಷ್ಟು ಯಶಸ್ವಿಯಾಯಿತು. ಅನೇಕ ಭೂ ರಹಿತರಿಗೆ ಭೂಮಿ ದೊರೆಯಿತು. ಖಾಸಗೀ ಜಮೀನನ್ನು ಹೊಂದಿದ ಕೆಳವರ್ಗದ ಜನರಲ್ಲಿ ಮೂಡಿದ ಸ್ವಾಭಿಮಾನ ಚಾರಿತ್ರಿಕವಾದದು. ಹೀಗೆ ಭೂ ಸುಧಾರಣಾ ಕಾಯ್ದೆಯ ಕಾರಣದಿಂದಾಗಿ ಜಮೀನು ಸಂಬಂಧದಲ್ಲಾದ ಬದಲಾವಣೆಗಳು ಕರ್ನಾಟಕದ ಸಾಮಾಜಿಕ ಜೀವನದ ಮೇಲೂ ಗಾಢ ಪರಿಣಾಮಗಳನ್ನು ಬೀರಿದವು. ಬಡವರನ್ನು ಕೇಂದ್ರದಲ್ಲಿರಿಸಿಕೊಂಡು ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದ ಎಡ ಪಕ್ಷಗಳು ಭೂ ಸುಧಾರಣೆಯಾದ ನಂತರ ನೆಲೆ ಕಳೆದುಕೊಂಡವು. ಕಾನೂನಿನ ಬಲದಿಂದ ಉಳುವ ನೆಲವನ್ನು ತನ್ನದಾಗಿಸಿಕೊಂಡ ಬಡವರು, ನಿಧಾನವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲಾರಂಭಿಸಿದರು. ಕ್ರಿಸ್ತಶಕ 2000ರ ಹೊತ್ತಿಗೆ ವಿದ್ಯೆ ಪಡೆದು ಉದ್ಯೋಗಕ್ಕೆ ಸಿದ್ಧರಾದ ಈ ಹೊಸ ತಲೆಮಾರಿನ ಹುಡುಗರು ಭೂ ಸುಧಾರಣೆಯ ನೇರವಾದ ಫಲ ಎಂಬುದನ್ನು ಗುರುತಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಭೂ ಸುಧಾರಣೆಯಿಂದ ಬಡತನವನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡು ಮಧ್ಯಮ ವರ್ಗವಾಗಿ ಬೆಳೆದ ಹೊಸ ತಲೆಮಾರನ್ನು ಗುರುತಿಸುವಲ್ಲಿ ಕೂಡಾ ಕಾಂಗ್ರೆಸ್‌ನವರು ಸಂಪೂರ್ಣವಾಗಿ ಸೋತು ಹೋದರು. ಹೀಗೆ ಹುಟ್ಟಿಕೊಂಡ ಉದೀಯಮಾನ ಮಧ್ಯಮ ವರ್ಗವನ್ನು ಬಲಪಂಥೀಯ ರಾಜಕಾರಣ ಸುಲಭವಾಗಿ ಮುಂದೆ ಆಕ್ರಮಿಸಿಕೊಂಡಿತು. ಹೀಗಾಗಿ 21ನೇ ಶತಮಾನದಲ್ಲಿ ಬಲಪಂಥೀಯರೇ ಪ್ರಬಲರಾದರು.

ಭೂ ಸುಧಾರಣಾ ಕಾಯ್ದೆ ಜಾರಿಯಾಗುತ್ತಲೇ ಪ್ರಬಲವಾಗಿದ್ದ ಭೂಮಾಲೀಕ ವ್ಯವಸ್ಥೆ ಶಿಥಿಲವಾಯಿತು. ಹಾಗೆ ಶಿಥಿಲವಾಗುವ ಹೊತ್ತಿಗೆ ಅದು ಸಾಮಾಜಿಕ ಸಂಬಂಧಗಳನ್ನು ಪುನರ್ ರೂಪಿಸಲು ಅರಂಭಿಸಿತು. ಮುಖ್ಯವಾಗಿ ಜಾತಿಗಳ ಶ್ರೇಣೀಕರಣಕ್ಕೆ ಪ್ರಬಲ ಹೊಡೆತ ಬಿತ್ತು ಮತ್ತು ಅದರ ಪರಿಣಾಮವಾಗಿ ಹಿಂದುಳಿದ ಜನರಲ್ಲಿ ಸ್ವಾಭಿಮಾನ ವೃದ್ಧಿಸಿತು. ಸಮಾಜದ ಎಲ್ಲ ರಂಗದಲ್ಲಿಯೂ ಕೆಳವರ್ಗದವರು ಕಾಣಿಸಿಕೊಳ್ಳಲಾರಂಭಿಸಿದರು. ಹೋಟೆಲ್ ಉದ್ಯಮ, ಶಿಕ್ಷಣ ಸಂಸ್ಥೆಗಳ ನಿರ್ಮಾಣ, ಮಾರುಕಟ್ಟೆಗಳಲ್ಲಿ ನವೀನ ಬಗೆಯ ಅಂಗಡಿಗಳ ಸ್ಥಾಪನೆ, ರಸ್ತೆ ಸಾರಿಗೆಯ ಮೇಲೆ ಹಿಡಿತ- ಹೀಗೆ ಅನೇಕ ರಂಗಗಳಲ್ಲಿ ತಳವರ್ಗದವರು ಕಾಣಿಸಿಕೊಂಡರು. ಆದರೆ ಒಕ್ಕಲುತನದ ಹೊರಗೇ ಇದ್ದು ದಿನಗೂಲಿಗಳಾಗಿದ್ದುದರಿಂದ ಯಾವ ದಾಖಲೆಗಳೂ ಇಲ್ಲದ ದಲಿತರು ಮಾತ್ರ ಭೂ ಸುಧಾರಣಾ ಕಾಯ್ದೆಯಿಂದ ಯಾವ ರೀತಿಯ ಪ್ರಯೋಜನವೂ ಆಗದೇ ಈ ಸ್ಥಿತ್ಯಂತರದಿಂದ ಹೊರಗೇ ಉಳಿದುಬಿಟ್ಟರು. ಆದರೆ ಸುಶಿಕ್ಷಿತ ದಲಿತರು ಸಂಘಟಿತರಾದರು. ಈ ಎಲ್ಲಾ ಘಟನೆಗಳು ಆ ಕಾಲದ ಸಾಹಿತ್ಯದ ಮೇಲೂ ಪರಿಣಾಮ ಬೀರಿದವು. ದಲಿತ ಲೇಖಕರು ತಮ್ಮ ಬಡತನದಿಂದ ಪ್ರೇರಣೆ ಪಡೆದರು, ಆದರೆ ಅದನ್ನು ಓದುವವರು ದಲಿತ ವರ್ಗದಲ್ಲಿ ಬಹಳ ಜನ ಇರಲಿಲ್ಲ. ದೇವನೂರು ಬಗ್ಗೆ ಅನಂತಮೂರ್ತಿಯವರು ಮೆಚ್ಚುಗೆ ವ್ಯಕ್ತಪಡಿಸಿದಾಗ ಈ ಬಗೆಯ ಚರ್ಚೆಗಳು ಮುನ್ನೆಲೆಗೆ ಬಂದಿದ್ದವು.

ಇದನ್ನೂ ಓದಿರಿ: ಕರ್ನಾಟಕ 50 | ಸ್ತ್ರೀ ಸಂವೇದನೆ: ಕನ್ನಡ ಸಾಹಿತ್ಯ ಲೋಕದ ಹೆಜ್ಜೆ ಗುರುತುಗಳಿವು

1975ರ ಜೂನ್ 25ರಂದು ಜಾರಿಗೆ ಬಂದ ತುರ್ತುಪರಿಸ್ಥಿತಿಯಿಂದಾಗಿ ಕರ್ನಾಟಕದ ಕೆಲವು ಬರಹಗಾರರು ಮತ್ತು ಕಲಾವಿದರು ಬೀದಿಗಿಳಿಯಬೇಕಾಯಿತು. ಕೆಲವರು ಭೂಗತರಾಗಿದ್ದುಕೊಂಡು ತುರ್ತುಪರಿಸ್ಥಿತಿಯನ್ನು ವಿರೋಧಿಸಿದರು. ಬಂಡಾಯದ ಮುಂಚೂಣಿಯ ಲೇಖಕ ಚಂದ್ರಶೇಖರ ಪಾಟೀಲರು ಸೆರೆಮನೆ ಸೇರಿದರು. ಇಂಥ ಘಟನೆಗಳು ಸಾಹಿತಿಗಳ ಮೈ ಚಳಿ ಬಿಡಿಸಿದ್ದಂತೂ ಸ್ಪಷ್ಟ. ಸಾಹಿತಿಗಳು ತಮಗೆ ರಾಜಕೀಯ ಕಾಳಜಿ ಅಗತ್ಯ ಮತ್ತು ಅನಿವಾರ್ಯ ಎಂದು ಭಾವಿಸಲು ಆರಂಭಿಸಿದರು.

ಇವೆಲ್ಲವುಗಳ ನಡುವೆ 1976ರ ಮಾರ್ಚ್ 10ರಂದು ಧರ್ಮಸ್ಥಳದಲ್ಲಿ ಸಾಹಿತ್ಯ ಸಮ್ಮೇಳನ ನಡೆದು ಅದಕ್ಕೆ ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾದರು. ಸಮ್ಮೇಳನದಲ್ಲಿ ‘ದಲಿತ ಸಾಹಿತ್ಯ’ದ ಬಗ್ಗೆ ಪ್ರತ್ಯೇಕ ಗೋಷ್ಠಿಯನ್ನಿಡಲು ಕನ್ನಡ ಸಾಹಿತ್ಯ ಪರಿಷತ್ತು ಒಪ್ಪದೇ ಇದ್ದುದರಿಂದ ಬಂಡಾಯ ಸಾಹಿತಿಗಳೆಲ್ಲರೂ ಪ್ರತ್ಯೇಕವಾಗಿ ಸಮ್ಮೇಳನ ನಡೆಸಲು ನಿರ್ಧರಿಸಿದರು. ಅದುವರೆಗೆ ಬೇರೆ ಬೇರೆ ಕಾರಣಗಳಿಂದ ಲೇಖಕರಲ್ಲಿ ಬೆಳೆದು ಬಂದಿದ್ದ ಅಸಮಾಧಾನ ಸ್ಪೋಟಗೊಳ್ಳಲು ಧರ್ಮಸ್ಥಳ ಸಾಹಿತ್ಯ ಸಮ್ಮೇಳನ ಒಂದು ನೆವವಾಯಿತು. ಬೆಂಗಳೂರಲ್ಲಿ ನಡೆದ ಪರ್ಯಾಯ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಮುಂದೆ ಬಂಡಾಯ ಸಾಹಿತ್ಯ ಸಮ್ಮೇಳನಗಳು ಪ್ರತಿ ವರ್ಷವೂ ರಾಜ್ಯದ ಬೇರೆ ಬೇರೆ ಕಡೆ ನಡೆದವು. ಹೆಚ್ಚಿನವರು ಸಾಹಿತ್ಯ ಪರಿಷತ್ತಿಗೆ ಬಹಿಷ್ಕಾರ ಹಾಕಿದರು. ‘ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಘೋಷಣೆಯು ಎಲ್ಲೆಡೆಯೂ ಮೊಳಗಿತು. ಕ್ರಾಂತಿಕಾರಿ ಕವಿಗಳ ಕವಿತೆಗಳೂ ಕನ್ನಡಕ್ಕೆ ಅನುವಾದಗೊಂಡವು.

ಬಂಡಾಯ ಚಳವಳಿಯು ದಲಿತರನ್ನೂ ಒಳಗೊಂಡಾಗ ಅದರ ಶಕ್ತಿ ಗಮನಾರ್ಹವಾಗಿತ್ತು. ಆದರೆ ನಿಧಾನವಾಗಿ ದಲಿತರು ಬೇರ್ಪಟ್ಟರು. 1983ರ ಡಿಸೆಂಬರ್ 10 ಮತ್ತು 11ರಂದು ಧಾರವಾಡದಲ್ಲಿ ಹುಟ್ಟಿಕೊಂಡ ‘ದಲಿತ ಲೇಖಕ ಕಲಾವಿದರ ಬಳಗ’ವು ಈ ಬೇರ್ಪಡುವಿಕೆಯನ್ನು ಅಧಿಕೃತಗೊಳಿಸಿತು. ದಲಿತ ಸಂಘರ್ಷ ಸಮಿತಿಯೂ ಕಾರಣಾಂತರಗಳಿಂದ ಇಬ್ಭಾಗವಾಯಿತು. 1986ರ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ‘ದಲಿತ ಸಾಹಿತಿಗಳ ಸಮಾವೇಶ’ ನಡೆಯಿತು. ಈ ಎಲ್ಲ ಬೆಳವಣಿಗೆಗಳು ಬಂಡಾಯ ಚಳವಳಿಯನ್ನು ದುರ್ಬಲಗೊಳಿಸಿದವು (ದಲಿತ ಚಳವಳಿಯೂ ಈ ಮಾತಿಗೆ ಹೊರತಾಗಲಿಲ್ಲ.) ವೈಯಕ್ತಿಕ ಪ್ರತಿಷ್ಠೆ, ರಾಜಕೀಯ ಹಿತಾಸಕ್ತಿ, ಅಪ್ರಬುದ್ಧ ನಡವಳಿಕೆಗಳಿಗೆ ಚಳವಳಿ ಬಲಿಯಾಯಿತು. ಚಳವಳಿಯ ಒಳಗೆಯೇ ಸ್ವಯಂ ವೈರುಧ್ಯಗಳು ಕಾಣಿಸಿಕೊಂಡವು.

ಪತ್ರಿಕೆಗಳು: ಬಂಡಾಯ ಚಳವಳಿಯ ಸಂದರ್ಭದಲ್ಲಿ ಹೋರಾಟಗಾರರು ಕೆಲವು ಮಹತ್ವದ ಪತ್ರಿಕೆಗಳನ್ನು ಪ್ರಕಟಿಸುತ್ತಾ ಜನಗಳನ್ನು ತಲುಪಲು ಪ್ರಯತ್ನಿಸಿದರು. ಮುಖ್ಯವಾಹಿನಿಯ ಪತ್ರಿಕೆಗಳೂ ಚಳವಳಿಯ ಬಗೆಗೆ ಮೃದು ಧೋರಣೆಯನ್ನಿಟ್ಟುಕೊಂಡಿದ್ದರಿಂದ ಸುದ್ದಿ ಪ್ರಸರಣಕ್ಕೇನೂ ತೊಂದರೆ ಇರಲಿಲ್ಲ. ಆದರೆ ಪ್ರಖರ ವೈಚಾರಿಕತೆಯ ಲೇಖನಗಳನ್ನು ಪ್ರಕಟಿಸಲು ಅವು ಹಿಂದೇಟು ಹಾಕುತ್ತಿದ್ದವು. ಅಂತಹ ಸಂದರ್ಭದಲ್ಲಿ ಲೇಖಕರ ಬೆಂಬಲಕ್ಕೆ ನಿಂತದ್ದು ಚಂದ್ರಶೇಖರ ಪಾಟೀಲರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ‘ಸಂಕ್ರಮಣ’ ಮಾಸಿಕ. ಬಂಡಾಯ ಚಳವಳಿಯ ಆರಂಭದಿಂದಲೂ ಪಾಟೀಲರು ಅದರ ಬೆನ್ನೆಲುಬಾಗಿ ನಿಂತು, ಬಂಡಾಯದ ವೇದಿಕೆಯಲ್ಲಿ ನಡೆಯುವ ಘಟನೆಗಳನ್ನು ದಾಖಲಿಸುತ್ತಾ ಬಂದರು. ಬಂಡಾಯ ಪರ ಲೇಖನಗಳನ್ನು ಪ್ರಕಟಿಸಿ, ಅದರ ವಿಸ್ತೃತ ಚರ್ಚೆಗೆ ಎಡೆಮಾಡಿಕೊಟ್ಟರು. ಆರ್. ಜಿ. ಹಳ್ಳಿ ನಾಗರಾಜರ ಸಂಪಾದಕತ್ವದ ‘ಅನ್ವೇಷಣೆ’ ದ್ವೈಮಾಸಿಕವು ನವ್ಯೋತ್ತರ ಸಾಹಿತ್ಯದ ದಾಖಲಾತಿಗೆಂದೇ ಹುಟ್ಟಿಕೊಂಡ ಪತ್ರಿಕೆ. ವಡ್ಡರ್ಸೆ ರಘುರಾಮ ಶೆಟ್ಟರ ಸಂಪಾದಕತ್ವದ ‘ಮುಂಗಾರು’ ದೈನಿಕವು ಬಂಡಾಯ ಚಳವಳಿ ಮತ್ತು ಸಾಹಿತ್ಯವನ್ನು ನಿರಂತರವಾಗಿ ಪೋಷಿಸಿಕೊಂಡು ಬಂತು. ಇವುಗಳ ಜೊತೆಗೆ ಬಂಡಾಯ ಸಾಹಿತ್ಯ ಸಂಘಟನೆಯ ಮುಖವಾಣಿಯಾಗಿದ್ದ ‘ಬಂಡಾಯ ಸಾಹಿತ್ಯ’ ದಲಿತರ ಧ್ವನಿಯಾಗಿದ್ದ ‘ಪಂಚಮ’ ಮತ್ತು `ಹೊಸದಿಕ್ಕು’ ಪತ್ರಿಕೆಗಳು, ಸಮುದಾಯ ರಂಗ ಸಂಘಟನೆಯ ಮುಖವಾಣಿಯಾಗಿದ್ದ ‘ಸಮುದಾಯ ವಾರ್ತಾಪತ್ರ’, ಕಮ್ಯುನಿಸ್ಟ್ ಪಕ್ಷಗಳ ಪತ್ರಿಕೆಗಳಾಗಿರುವ `ಕೆಂಬಾವುಟ’ ಮತ್ತು `ಐಕ್ಯರಂಗ’ಗಳು ಬಂಡಾಯ ದಲಿತ ಚಳವಳಿಗೆ ಪ್ರಮುಖ ಒತ್ತಾಸೆ ನೀಡಿವೆ.

(ಮುಂದುವರಿಯುವುದು..)

(ಈದಿನ.ಕಾಮ್ ಹೊರತಂದಿರುವ, ‘ನಮ್ಮ ಕರ್ನಾಟಕ – ನಡೆದ 50 ಹೆಜ್ಜೆ, ಮುಂದಿನ ದಿಕ್ಕು..’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

purushottama bilimale1672368497
ಡಾ. ಪುರುಷೋತ್ತಮ ಬಿಳಿಮಲೆ
+ posts

ಜಾನಪದ ವಿದ್ವಾಂಸರು, ಲೇಖಕರು,  ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು

ಪೋಸ್ಟ್ ಹಂಚಿಕೊಳ್ಳಿ:

ಡಾ. ಪುರುಷೋತ್ತಮ ಬಿಳಿಮಲೆ
ಡಾ. ಪುರುಷೋತ್ತಮ ಬಿಳಿಮಲೆ
ಜಾನಪದ ವಿದ್ವಾಂಸರು, ಲೇಖಕರು,  ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...