(ಮುಂದುವರಿದ ಭಾಗ..) ಕಾವೇರಿ, ಉರ್ದು ವಾರ್ತೆ ಗಲಭೆಗಳು: 1991ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ಮಧ್ಯಂತರ ತೀರ್ಪನ್ನು ನೀಡಿ ಪ್ರತಿವರ್ಷ 205 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶಿಸಿತ್ತು. ಇದರ ವಿರುದ್ಧ ಡಿಸೆಂಬರ್ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್ ಹಿಂಸೆಗೆ ತಿರುಗಿತು. ಬೆಂಗಳೂರಿನಲ್ಲಿ ವ್ಯಾಪಕವಾದ ಗಲಭೆಗಳು ನಡೆದವು. ಅಧಿಕೃತವಾಗಿ 16 ಮಂದಿ ಈ ಗಲಭೆಯಲ್ಲಿ ಮೃತಪಟ್ಟರು. ಸಾವಿರಾರು ಪ್ರಕರಣಗಳು ದಾಖಲಾದವು. ತಮಿಳರು, ಕನ್ನಡಿಗರು ಗಲಭೆಯಲ್ಲಿ ಅಪಾರವಾದ ನಷ್ಟಕ್ಕೆ ಈಡಾದರು. ಹಲವಾರು ತಮಿಳು ಕುಟುಂಬಗಳು ತಮಿಳುನಾಡಿಗೆ ವಾಪಾಸ್ ಹೋದವು.
1994ರಲ್ಲಿ ಅಕ್ಟೋಬರ್ 7ರಂದು ಉರ್ದುವಾರ್ತೆಗೆ ಸಂಬಂಧಿಸಿದಂತೆ ಗಲಭೆ ಆರಂಭವಾಯಿತು. ದೂರದರ್ಶನದಲ್ಲಿ ಉರ್ದುವಾರ್ತೆ ಪ್ರಸಾರ ಮಾಡಲು ನಿರ್ಧಾರ ಮಾಡಿದ್ದರ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿದ್ದವು. ನಂತರ ಈ ಪ್ರತಿಭಟನೆಯಲ್ಲಿ ಮತಾಂಧ ಶಕ್ತಿಗಳು ಸೇರಿಕೊಂಡ ಹಿನ್ನೆಲೆಯಲ್ಲಿ ಚಳವಳಿ ಕೋಮುಗಲಭೆಯ ಸ್ವರೂಪ ಪಡೆದುಕೊಂಡಿತು. ಬೆಂಗಳೂರಿನಲ್ಲಿ ನಡೆದ ಅತಿದೊಡ್ಡ ಕೋಮುಗಲಭೆ ಇದಾಗಿತ್ತು. ಗಲಭೆಯಲ್ಲಿ 25ಕ್ಕೂ ಹೆಚ್ಚು ಮಂದಿ ಅಸುನೀಗಿದರು. ನೂರಾರು ಮಂದಿ ಗಾಯಗೊಂಡರು.
ಈ ಎರಡು ಕರಾಳ ಘಟನೆಗಳ ನಂತರ ಸಾಕಷ್ಟು ಬದಲಾವಣೆಗಳು ಸಂಭವಿಸಿದವು. ಬೆಂಗಳೂರಿನಲ್ಲಿ ವ್ಯಾಪಕವಾಗಿದ್ದ ತಮಿಳು ಭಾಷಾಂಧರು ತಣ್ಣಗಾದರು. ಡಿಎಂಕೆ, ಎಐಡಿಎಂಕೆ ಪಕ್ಷಗಳು ಬೆಂಗಳೂರಿನಲ್ಲಿ ಶಕ್ತಿ ಕಳೆದುಕೊಳ್ಳುತ್ತ ಬಂದವು. ಕಾವೇರಿ ವಿವಾದ ಉಲ್ಭಣಿಸಿದಾಗೆಲ್ಲ ತಮಿಳು ಸಂಘಗಳು ಕರ್ನಾಟಕದ ಪರವಾಗಿ ಮಾತನಾಡತೊಡಗಿದವು. 1996, 2000, 2004, 2016ರಲ್ಲಿ ಮತ್ತೆ ಮತ್ತೆ ಕಾವೇರಿ ವಿವಾದ ಹೊತ್ತಿಕೊಂಡಾಗ ಅಲ್ಲಲ್ಲಿ ಕನ್ನಡಿಗ-ತಮಿಳರ ನಡುವೆ ಸಂಘರ್ಷಗಳು ನಡೆದವಾದರೂ, 1991ರ ಗಲಭೆಯ ತೀವ್ರತೆ ಇರಲಿಲ್ಲ.
ಇದೆಲ್ಲದರ ನಡುವೆ ಕನ್ನಡ ಚಳವಳಿಯ ಶಕ್ತಿಯೂ ಕ್ಷೀಣಿಸತೊಡಗಿತು. ಈ ಸಂದರ್ಭದಲ್ಲಿ ಆರ್.ಎಸ್.ಎನ್ ಗೌಡ ಅವರ ನೇತೃತ್ವದಲ್ಲಿ ಹುಟ್ಟಿಕೊಂಡ ರಣಧೀರರ ಪಡೆ ತೀವ್ರ ಸ್ವರೂಪದ ಪ್ರತಿಭಟನೆಗಳಿಂದ ಗಮನ ಸೆಳೆಯಿತು. ರಣಧೀರ ಪಡೆಗೆ ವ್ಯಾಪಕವಾದ ಬೆಂಬಲವೂ ವ್ಯಕ್ತವಾಯಿತು. ಕೋಲಾರದ ಲೋಕಸಭಾ ಸದಸ್ಯ ವೆಂಕಟೇಶ್ ಅವರನ್ನು ಚಳವಳಿ ಸಂದರ್ಭದಲ್ಲಿ ಅಪಹರಿಸಿ ಕೂಡಿಟ್ಟ ಘಟನೆಯೂ ನಡೆದಿತ್ತು. ಇದಾದ ನಂತರ ಬೆಂಗಳೂರಿನ ಆಕಾಶವಾಣಿ ಕೇಂದ್ರಕ್ಕೆ ನುಗ್ಗಿ, ಇಡೀ ಆಕಾಶವಾಣಿಯನ್ನೇ ಕೆಲ ನಿಮಿಷಗಳ ಕಾಲ ವಶಕ್ಕೆ ಪಡೆಯಲಾಗಿತ್ತು. ಆಕಾಶವಾಣಿಯಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ, ಹಿಂದಿಯನ್ನು ವಿಜೃಂಭಿಸಲಾಗುತ್ತಿದೆ ಎಂಬ ಕಾರಣಕ್ಕೆ ಈ ಪ್ರತಿಭಟನೆ ನಡೆದಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ಗಂಭೀರ ಸ್ವರೂಪದ ಸೆಕ್ಷನ್‌ಗಳಡಿ ರಣಧೀರ ಪಡೆ ಕಾರ್ಯಕರ್ತರ ಮೇಲೆ ಕೇಸುಗಳನ್ನು ಹೂಡಲಾಗಿತ್ತು. ರಣಧೀರರ ಪಡೆ ಎಷ್ಟು ವೇಗವಾಗಿ ಬೆಳೆಯಿತೋ ಅಷ್ಟೇ ವೇಗವಾಗಿ ಅವಸಾನವೂ ಆಯಿತು. ಅದು ತೀವ್ರಗತಿಯಲ್ಲಿ ಚಟುವಟಿಕೆ ನಡೆಸುತ್ತಿದ್ದ ಕಾಲಕ್ಕೆ ಪೊಲೀಸರೂ ಗುಪ್ತವಾಗಿ ಅದರ ಸದಸ್ಯತ್ವ ತೆಗೆದುಕೊಂಡಿದ್ದರು!

ಕನ್ನಡ ಚಳವಳಿಗಳು ಬೇರೆಬೇರೆ ಹಂತದಲ್ಲಿ ಕ್ರಿಯಾಶೀಲವಾಗಿದ್ದಾಗ ಅನೇಕ ಚಿಂತಕರು, ಸಾಹಿತಿಗಳು ಚಳವಳಿಗೊಂದು ಸೈದ್ಧಾಂತಿಕ ಸ್ಪರ್ಶ ನೀಡಲು ಪ್ರಯತ್ನಿಸಿದರು. ಡಾ. ಪಿ.ವಿ.ನಾರಾಯಣ ಅವರು “ಕನ್ನಡ ರಾಷ್ಟ್ರೀಯತೆ”ಯ ಪ್ರಶ್ನೆಯನ್ನು ಮುನ್ನೆಲೆಗೆ ತಂದರು. ಬ್ರಿಟಿಷ್ ಪೂರ್ವದಲ್ಲಿ ಭಾರತವೆಂಬುದೇ ಇರಲಿಲ್ಲ. ಇದ್ದಿದ್ದು “ಕನ್ನಡ ದೇಶ”. ಹೀಗಾಗಿ ಕರ್ನಾಟಕವೇ ಒಂದು ದೇಶ ಎಂಬುದು ಅವರ ಖಚಿತವಾದ ಚಿಂತನೆಯಾಗಿತ್ತು.
ಇದನ್ನೂ ಓದಿರಿ: ಕನ್ನಡ ಚಳವಳಿ: ಐವತ್ತು ವರ್ಷ ಸಾಗಿದ್ದು ಹೇಗೆ? ಸಾಧಿಸಿದ್ದು ಏನು? (ಭಾಗ- 1)
ತೊಂಭತ್ತದ ದಶಕದಲ್ಲಿ ಕನ್ನಡ ಚಳವಳಿಯ ಭೂಮಿಕೆಯಲ್ಲಿ ಆಗಾಗ ಸದ್ದು ಮಾಡಿದ್ದು ದಾ.ಕೃ.ದೇವರಾಜ್ ನೇತೃತ್ವದಲ್ಲಿ ಆರಂಭಗೊಂಡಿದ್ದ ಕನ್ನಡ ವಿದ್ಯಾರ್ಥಿ ಸಂಘ. ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳನ್ನು ಸೆಳೆಯಲು ಇದು ಯಶಸ್ವಿಯಾಗಿತ್ತು. ಕನ್ನಡ ವಿದ್ಯಾರ್ಥಿ ಸಂಘ ಎರಡು ಮೂರು ವರ್ಷಗಳ ನಂತರ ಕನ್ನಡ ವಿದ್ಯಾರ್ಥಿ ಪರಿಷತ್ ಆಗಿ ಬದಲಾಯಿತು. ನಂತರ 1999ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ಥಾಪನೆಯಾದಾಗ ವಿದ್ಯಾರ್ಥಿ ಪರಿಷತ್ ಚಟುವಟಿಕೆ ಸ್ಥಗಿತಗೊಳಿಸಿತು. ಅದರ ನಾಯಕರಾದ ದಾ.ಕೃ.ದೇವರಾಜ್, ದಾ.ಪಿ.ಆಂಜನಪ್ಪ, ಬಿ.ಸಣ್ಣೀರಪ್ಪ ಸೇರಿದಂತೆ ಎಲ್ಲರೂ ಕರವೇಯಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ
1999ರಲ್ಲಿ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ನೇತೃತ್ವದಲ್ಲಿ ಹೊಸ ಸಂಘಟನೆಯ ಉದಯವಾಯಿತು. ಅಕೌಂಟೆಂಟ್ ಜನರಲ್ (ಎಜಿ) ಕಚೇರಿಯಲ್ಲಿ ಕನ್ನಡಿಗರ ಉದ್ಯೋಗಕ್ಕಾಗಿ ಆಗ್ರಹಿಸಿ ಮೊದಲ ಹೋರಾಟ ನಡೆಯಿತು. ಸಂಘಟನೆಯ ಹೆಸರು ಕನ್ನಡ ರಕ್ಷಣಾ ವೇದಿಕೆ, ಕನ್ನಡಿಗರ ರಕ್ಷಣಾ ವೇದಿಕೆ ಎಂದು ಇಡಬೇಕು ಎಂಬ ಚರ್ಚೆಗಳು ನಡೆದು ಕೊನೆಗೆ ಅದು ಕರ್ನಾಟಕ ರಕ್ಷಣಾ ವೇದಿಕೆಯಾಯಿತು. ಬೆಂಗಳೂರಿನಲ್ಲಿ ಸಂಘಟನೆ ಆರಂಭಗೊಂಡ ನಂತರ ನಿಧಾನವಾಗಿ ಅಕ್ಕಪಕ್ಕದ ಜಿಲ್ಲೆಗಳಿಗೆ ಹಬ್ಬುತ್ತ ಬಂದಿತು.
ಜಾಣಗೆರೆ ವೆಂಕಟರಾಮಯ್ಯ ಹೆಚ್ಚು ಕಾಲ ಸಂಘಟನೆಯಲ್ಲಿ ಉಳಿಯಲಿಲ್ಲ. ನಂತರ ಟಿ.ಎ.ನಾರಾಯಣಗೌಡರು ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

‘ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು’ ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವ ವಹಿಸಿಕೊಂಡ ಮೇಲೆ ಟಿ.ಎ.ನಾರಾಯಣಗೌಡ ಸಂಘಟನೆಯ ವ್ಯಾಪ್ತಿಯನ್ನು ಇಡೀ ರಾಜ್ಯಕ್ಕೆ ಹಿಗ್ಗಿಸುತ್ತ ಹೋದರು. ಕನ್ನಡ ಚಳವಳಿಗಳು ಮೈಸೂರು ಬ್ಯಾಂಕ್ ವೃತ್ತಕ್ಕೆ ಸೀಮಿತವಾಗಿದ್ದ ಸಂದರ್ಭದಲ್ಲಿ ಕರವೇ ಇಡೀ ರಾಜ್ಯಕ್ಕೆ ಹರಡತೊಡಗಿತು. ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕುಗಳಿಗೂ ಕರ್ನಾಟಕ ರಕ್ಷಣಾ ವೇದಿಕೆ ಕಾಲಿಟ್ಟಿತು. ಕನ್ನಡ ಬಾವುಟದ ಹಳದಿ, ಕೆಂಪು ಬಣ್ಣವನ್ನು ಬಳಸಿ ಸಂಘಟನೆ ಕನ್ನಡದ ಶಾಲನ್ನು ಬಳಸಲು ಆರಂಭಿಸಿತು. ಸಂಘಟನೆಯ ಹೆಸರು ದೊಡ್ಡದಾಗಿ ಕೇಳಿಬಂದಿದ್ದು 2005ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿದ್ದ ವಿಜಯ ಪಾಂಡುರಂಗ ಮೋರೆಯವರ ಮುಖಕ್ಕೆ ಮಸಿ ಬಳಿದ ಪ್ರಕರಣದ ಮೂಲಕ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ನಿರ್ಣಯವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಕರವೇ ಮುಖಂಡರು ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿ ಮೇಯರ್ ಮೋರೆ ಸೇರಿದಂತೆ ಓರ್ವ ಮಾಜಿ ಶಾಸಕರೂ ಸೇರಿದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೆಲ ಮುಖಂಡರ ಮುಖಕ್ಕೆ ಮಸಿ ಬಳಿದು ಪ್ರತಿಭಟಿಸಿದ್ದರು.
ಈ ಘಟನೆಯನ್ನು ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಸೇರಿದಂತೆ ಹಲವರು ಟೀಕಿಸಿದ್ದರು. ಇಂಥ ಪ್ರಕರಣಗಳಿಂದ ಕನ್ನಡಿಗರು ಹೊರರಾಜ್ಯಗಳಲ್ಲಿ ತಲೆ ಎತ್ತಿ ಓಡಾಡದಂತಾಗುತ್ತದೆ ಎಂದಿದ್ದರು. ಆದರೆ ಕನ್ನಡ ಚಳವಳಿಗಾರರೂ ಆಗಿದ್ದ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲರು ಕರವೇ ನಿಲುವನ್ನು ಬೆಂಬಲಿಸಿದ್ದರು. ಮತ್ತೋರ್ವ ಸಾಹಿತಿ ಪೂರ್ಣಚಂದ್ರ ತೇಜಸ್ವಿ ‘ಅವರಿಗೆ ಮಸಿ ಬಳಿಯದೆ ಇನ್ನೇನು ಫೇರ್ ಅಂಡ್ ಲವ್‌ಲೀ ಹಚ್ಚಬೇಕಿತ್ತೇ’ ಎಂದು ಉದ್ಗರಿಸಿದ್ದರು.
ಇದನ್ನೂ ಓದಿರಿ: ಸಾಮಾಜಿಕ ಮಾಧ್ಯಮ ಮತ್ತು ಕನ್ನಡ
ಇದಾದ ನಂತರ ಕರ್ನಾಟಕ ರಕ್ಷಣಾ ವೇದಿಕೆ ತೀಕ್ಷ್ಣವಾದ ಚಳವಳಿಗಳನ್ನು ಸಂಘಟಿಸುತ್ತ ಬಂದಿತು. ಕೆಲವು ಚಳವಳಿಗಳು ಹಿಂಸಾತ್ಮಕವಾಗಿಯೂ ನಡೆದಿದ್ದುಂಟು. ಅಲ್ಲಿಯವರೆಗೆ ಭಾವನಾತ್ಮಕ ಸಂಗತಿಗಳಿಗೆ ಜೋತು ಬೀಳುತ್ತಿದ್ದ ಕನ್ನಡ ಚಳವಳಿಯನ್ನು ಕನ್ನಡಿಗರ ಬದುಕಿನ ಚಳವಳಿಯನ್ನಾಗಿಸುವಲ್ಲಿ ಕರವೇ ಯಶಸ್ವಿಯಾಯಿತು. ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆ ಹುದ್ದೆಗಳಿಗೆ ಉತ್ತರ ಭಾರತೀಯರನ್ನು ತುಂಬುವ ಯತ್ನ ನಡೆದಾಗ ಕರವೇ ನಡೆಸಿದ ಚಳವಳಿ ಅತ್ಯಂತ ಗಮನಾರ್ಹವಾಗಿತ್ತು. ಅಲ್ಲಿಯವರೆಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯುವ ವ್ಯವಸ್ಥೆ ಇತ್ತು. ಕರವೇ ನಡೆಸಿದ ಈ ಚಳವಳಿ ಕೇಂದ್ರ ಸರ್ಕಾರ ನಿಯಮಾವಳಿಯನ್ನೇ ಬದಲಾಯಿಸಿ ಸ್ಥಳೀಯ ಭಾಷೆಗಳಲ್ಲೂ ಪರೀಕ್ಷೆ ಬರೆಯುವ ಅವಕಾಶ ಮಾಡಿಕೊಡುವಂತೆ ಮಾಡಿತು. ಆ ಮೂಲಕ ಕನ್ನಡದ ನಿರುದ್ಯೋಗಿ ಯುವಕರಿಗೆ ಕೆಲಸ ದೊರೆಯುವಂತಾಯಿತು.
ಕಾವೇರಿ ವಿವಾದ ಹುಟ್ಟಿಕೊಂಡಾಗೆಲ್ಲ ಕರ್ನಾಟಕ ರಕ್ಷಣಾ ವೇದಿಕೆ ಮುಂಚೂಣಿಯಲ್ಲಿ ನಿಂತು ಪ್ರತಿಭಟಿಸುತ್ತ ಬಂದಿತು. ನದಿನೀರು ಹಂಚಿಕೆ ಹೋರಾಟಕ್ಕಾಗಿ ರೂಪುಗೊಂಡ ಕನ್ನಡ, ದಲಿತ, ರೈತ, ಪ್ರಗತಿಪರ ಸಂಘಟನೆಗಳ ಒಕ್ಕೂಟವಾಗಿದ್ದ ಕೃಷ್ಣ ಕಾವೇರಿ ಸಮನ್ವಯ ಸಮಿತಿಯಲ್ಲಿ ಪ್ರಧಾನ ಪಾತ್ರ ವಹಿಸಿತು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೊಡಿಸುವ ಹೋರಾಟ ಮತ್ತು ಕಾವೇರಿ ಹೋರಾಟಗಳನ್ನು ದಿಲ್ಲಿಗೆ ಕೊಂಡೊಯ್ದು ಹೊಸ ಇತಿಹಾಸ ಸೃಷ್ಟಿಸಿತು.
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಒತ್ತಾಯವನ್ನಿಟ್ಟುಕೊಂಡು ಹುಟ್ಟಿಕೊಂಡ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ರಾಜಕೀಯವಾಗಿಯೂ ಬಲಾಢ್ಯವಾಗಿ ಬೆಳೆದಿತ್ತು. ನಾಲ್ಕಾರು ಶಾಸಕರು ಪ್ರತಿ ಚುನಾವಣೆಯಲ್ಲಿ ಎಂಇಎಸ್‌ನಿಂದ ಗೆದ್ದುಬರುತ್ತಿದ್ದರು. ಬೆಳಗಾವಿ ಮಹಾನಗರಪಾಲಿಕೆಯಲ್ಲಿ ಎಂಇಎಸ್‌ನದ್ದೇ ಆಡಳಿತ ನಡೆಯುತ್ತಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಬಲವಾಗಿ ಸಂಘಟನೆ ಕಟ್ಟುವ ಮೂಲಕ ಎಂಇಎಸ್‌ಗೆ ಸೆಡ್ಡು ಹೊಡೆಯಿತು. ಸುಮಾರು 25 ವರ್ಷಗಳ ನಂತರ ಪ್ರಶಾಂತಾ ಬುಡವಿ ಎಂಬ ಕನ್ನಡದ ಹೆಣ್ಣುಮಗಳೊಬ್ಬಳು ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್ ಆದರು. ಕರವೇ ಚಳವಳಿಗಳ ಹಿನ್ನೆಲೆಯಲ್ಲಿ ಎಂಇಎಸ್ ನಿಧಾನವಾಗಿ ಬೆಳಗಾವಿಯ ಮೇಲೆ ತನ್ನ ಹಿಡಿತ ಕಳೆದುಕೊಳ್ಳುತ್ತ ಬಂದಿತು. ಎಂಇಎಸ್‌ನಿಂದ ಆಯ್ಕೆಯಾಗುವ ಶಾಸಕರ ಸಂಖ್ಯೆ ಸೊನ್ನೆಯಾಯಿತು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅದು ತನ್ನ ಶಕ್ತಿ ಕಳೆದುಕೊಂಡಿತು.
ಬೆಂಗಳೂರು ನಗರ ಸಾರಿಗೆ ವ್ಯವಸ್ಥೆಗೆ ಹೊಸದಾಗಿ ಸೇರಲ್ಪಟ್ಟ ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆಯನ್ನು ತುರುಕಲಾಗಿತ್ತು. ಇದರ ವಿರುದ್ಧ ಕರವೇ ನಿರಂತರ ಪ್ರತಿಭಟನೆ ನಡೆಸುತ್ತ ಬಂದಿತು. ಮೆಟ್ರೋ ಅಧಿಕಾರಿಗಳು ಚಳವಳಿಗೆ ಬಗ್ಗದೇ ಇದ್ದಾಗ ಒಂದೇ ದಿನ ಬೆಂಗಳೂರಿನ ಅಷ್ಟೂ ಮೆಟ್ರೋ ನಿಲ್ದಾಣಗಳಿಗೆ ಏಕಕಾಲಕ್ಕೆ ದಾಳಿ ನಡೆಸಿದ ಕರವೇ ಕಾರ್ಯಕರ್ತರು ಹಿಂದಿ ಬೋರ್ಡುಗಳನ್ನು ಕಿತ್ತುಹಾಕಿಬಿಟ್ಟರು. ಇದಾದ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ‘ನಮ್ಮ ಮೆಟ್ರೋ’ದಲ್ಲಿ ಹಿಂದಿ ಫಲಕ ಹಾಕಲು ಸಾಧ್ಯವಿಲ್ಲ ಎಂದು ಹೇಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರು. ನಮ್ಮ ಮೆಟ್ರೋದಿಂದ ಹಿಂದಿ ನಾಮಫಲಕಗಳು ಕಣ್ಮರೆಯಾದವು.

ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡದಲ್ಲೇ ಪ್ರಧಾನವಾದ ಫಲಕಗಳಿರಬೇಕು ಎಂಬುದು ಕನ್ನಡ ಚಳವಳಿಗಾರರ ದಶಕಗಳ ಬೇಡಿಕೆಯಾಗಿತ್ತು. ಸರ್ಕಾರ ಕಾರ್ಮಿಕ ಇಲಾಖೆ ಮೂಲಕ ಇದಕ್ಕೆ ನಿಯಮಾವಳಿ ಜಾರಿಗೆ ತಂದಿತ್ತಾದರೂ ಅದು ಜಾರಿಗೆ ಬರಲಿಲ್ಲ. 2023ರ ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಇಂಗ್ಲಿಷ್ ಬೋರ್ಡುಗಳನ್ನು ಕಿತ್ತು ಎಸೆದರು. ಏಕಾಏಕಿ ನಡೆದ ಈ ಚಳವಳಿಯಿಂದ ಪೊಲೀಸ್ ಇಲಾಖೆ, ರಾಜ್ಯ ಸರ್ಕಾರ ಬೆಚ್ಚಿಬಿದ್ದಿತ್ತು. ರಾಷ್ಟ್ರಮಟ್ಟದಲ್ಲಿ ಈ ಸುದ್ದಿ ವಿಜೃಂಭಿಸಿತು. ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಮೇಲೆ ಹದಿನೈದಕ್ಕೂ ಹೆಚ್ಚು ಮೊಕದ್ದಮೆಗಳನ್ನು ಹೂಡಿ ಜೈಲಿಗೆ ಕಳುಹಿಸಲಾಯಿತು. ಆದರೆ ನಂತರ ರಾಜ್ಯ ಸರ್ಕಾರ ರಾಜ್ಯದ ಎಲ್ಲ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡವಿರಬೇಕು, ಕನ್ನಡ ಅಗ್ರಸ್ಥಾನದಲ್ಲಿ ಇರಬೇಕು ಎಂಬ ನಿಯಮ ರೂಪಿಸಿ ಜಾರಿಗೆ ತಂದಿತು. ರಾಜ್ಯಾದ್ಯಂತ ನಾಮಫಲಕಗಳು ಬದಲಾದವು, ಕನ್ನಡ ರಾರಾಜಿಸಿತು.
ಇದನ್ನೂ ಓದಿರಿ: ಕರ್ನಾಟಕಕ್ಕೆ ಕ್ರೈಸ್ತರು ಕೊಟ್ಟ ಕೊಡುಗೆಗಳ ಮರೆಯಲಾದೀತೆ? (ಭಾಗ- 1)
ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿ ಹಲವರು ಹೊರಗೆ ಬಂದು ಅನೇಕ ಸಂಘಟನೆಗಳನ್ನು ಸ್ಥಾಪಿಸಿಕೊಂಡರು. ಶಿವರಾಮೇಗೌಡ, ಪ್ರವೀಣ್ ಶೆಟ್ಟಿ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರಲ್ಲೇ ಮೊದಲು ಒಂದಾಗಿ ನಂತರ ಪ್ರತ್ಯೇಕವಾಗಿ ಸಂಘಟನೆಗಳನ್ನು ಕಟ್ಟಿಕೊಂಡರು. ಕೆ.ಆರ್.ಕುಮಾರ್ ‘ಕನ್ನಡ ಸೇನೆ’ ಕಟ್ಟಿದರು. ಹರೀಶ್ ಭೈರಪ್ಪ ‘ಕರ್ನಾಟಕ ರಣಧೀರ ಪಡೆ’ ಕಟ್ಟಿದರು. ಬಸವರಾಜ ಪಡುಕೋಟಿ ‘ನಮ್ಮ ಕರ್ನಾಟಕ ಸೇನೆ’ ಕಟ್ಟಿದರು. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ‘ಕನ್ನಡ ಒಕ್ಕೂಟ’ ಅಸ್ತಿತ್ವಕ್ಕೆ ಬಂದಿತು. ಒಕ್ಕೂಟದಲ್ಲಿ ಹಲವು ಸಂಘಟನೆಗಳು ಸೇರಿಕೊಂಡು ಹಲವು ಚಳವಳಿಗಳನ್ನು ನಡೆಸಲಾಯಿತು. ವಿಶೇಷವಾಗಿ ಹಲವು ಬಾರಿ ಬಂದ್ ಕರೆ ನೀಡಲಾಯಿತು. ಕೆಲವು ಬಂದ್‌ಗಳು ಯಶಸ್ವಿಯಾದರೆ, ಮತ್ತೆ ಕೆಲವು ವಿಫಲವಾದವು.
ಭೂಗತ ಜಗತ್ತಿನಿಂದ ಹೊರಬಂದ ನಂತರ ಪತ್ರಕರ್ತ, ಚಿಂತಕರಾಗಿ ಬದಲಾದ ಅಗ್ನಿ ಶ್ರೀಧರ್ ‘ಕಣ್ಣಿಗೆ ಕಾಣಿಸಲಿ ಕನ್ನಡ, ಕಿವಿಗೆ ಕೇಳಲಿ ಕನ್ನಡ’ ಎಂಬ ಘೋಷಣೆಯೊಂದಿಗೆ ಕರುನಾಡ ಸೇನೆ ಎಂಬ ಸಂಘಟನೆ ಆರಂಭಿಸಿದರು. ಆರಂಭದಲ್ಲಿ ಕರುನಾಡ ಸೇನೆ ಸದ್ದು ಮಾಡಿತಾದರೂ ನಂತರ ಅದು ನಿಧಾನವಾಗಿ ಕಣ್ಮರೆಯಾಯಿತು. ಭೂಗತ ಜಗತ್ತಿನಿಂದ ಹೊರಬಂದ ಮುತ್ತಪ್ಪ ರೈ ಕೂಡ ‘ಜಯಕರ್ನಾಟಕ’ ಎಂಬ ಸಂಘಟನೆ ಆರಂಭಿಸಿದರು. ಜಾಣಗೆರೆ ವೆಂಕಟರಾಮಯ್ಯ ಕೆಲಕಾಲ ಇದನ್ನು ಮುನ್ನಡೆಸಿದರು. ‘ಜಯಕರ್ನಾಟಕ’ ಚಳವಳಿಗಳಿಗಿಂತ ಹೆಚ್ಚಾಗಿ ಸಾಮಾಜಿಕ ಚಟುವಟಿಕೆಗೆ ಗಮನ ನೀಡಿತು. ಮುತ್ತಪ್ಪ ರೈ ಸಾವಿನ ನಂತರ ಜಯಕರ್ನಾಟಕ ಹಲವು ಕವಲಾಗಿ ಒಡೆದುಹೋಯಿತು. ಇತ್ತೀಚೆಗೆ ಜಾಗೃತ ಕರ್ನಾಟಕ ರಾಜಕೀಯ ಸಂಘಟನೆ ರೂಪುಗೊಂಡಿದ್ದು ಕನ್ನಡ, ಕರ್ನಾಟಕದ ಪರ ದನಿಯೆತ್ತುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ
ಕಳೆದ ಎರಡು ದಶಕಗಳಲ್ಲಿ ಅತ್ಯಂತ ಗಮನಾರ್ಹವಾಗಿ ನಡೆದ ಬೆಳವಣಿಗೆಯೆಂದರೆ ಕನ್ನಡ ಚಳವಳಿಯ ಒಳಗೆ ಸಾಫ್ಟ್‌ವೇರ್ ಇಂಜಿನಿಯರ್‌ಗಳಾದಿಯಾಗಿ ತಾಂತ್ರಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಹೊಸ ತಲೆಮಾರಿನ ಯುವಕ-ಯುವತಿಯರು ಪ್ರವೇಶಿಸಿದ್ದು. ಸಾಮಾಜಿಕ ಜಾಲತಾಣಗಳು ಈ ಹೊಸ ಪೀಳಿಗೆಯ ಕನ್ನಡ ಕಾರ್ಯಕರ್ತರಿಗೆ ವೇದಿಕೆಯನ್ನು ಸೃಷ್ಟಿಸಿತು. ಜಿ. ಆನಂದ್, ಗಣೇಶ್ ಚೇತನ್ ಅವರ ನೇತೃತ್ವದ ಬನವಾಸಿ ಬಳಗ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತು. ಕನ್ನಡ ಚಳವಳಿಯ ತಾತ್ವಿಕ ಹಿನ್ನೆಲೆಯನ್ನು ಪರಿಚಯಿಸುವುದರ ಜೊತೆಗೆ ಹಿಂದಿಹೇರಿಕೆಯ ವಿರುದ್ಧ, ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರ ಹಕ್ಕುಗಳಿಗೆ ಅದು ಧ್ವನಿ ಎತ್ತಿತು. ಅದೇ ರೀತಿ ಕನ್ನಡ ಗ್ರಾಹಕರ ಕೂಟ ಕನ್ನಡಿಗರ ಗ್ರಾಹಕ ಹಕ್ಕುಗಳ ಕುರಿತು, ಕನ್ನಡಿಗರಿಗೆ ಕನ್ನಡದಲ್ಲೇ ದಕ್ಕಬೇಕಾದ ಸೇವೆಗಳ ಕುರಿತು ಸಾಕಷ್ಟು ಕೆಲಸಗಳನ್ನು ಮಾಡಿತು. ಎಲ್ಲ ಭಾಷೆಗಳ ಸಿನಿಮಾಗಳು ಕರ್ನಾಟಕಕ್ಕೆ ಕನ್ನಡೀಕರಣಗೊಂಡು ಬರಬೇಕು ಎಂಬ ಉದ್ದೇಶದಿಂದ ಡಬ್ಬಿಂಗ್ ಸಿನಿಮಾಗಳಿಗೆ ಇದ್ದ ಅಸಂವಿಧಾನಿಕ ನಿಷೇಧವನ್ನು ತೆಗೆದುಹಾಕಲು ನಡೆದ ಹೋರಾಟ ಯಶಸ್ವಿಯಾಯಿತು. ಇದಕ್ಕಾಗಿ ನ್ಯಾಯ ಸಂಸ್ಥೆಯ ಮೆಟ್ಟಿಲು ಏರಲು ಈ ತಂಡ ಹಿಂಜರಿಯಲಿಲ್ಲ. ಅದೇ ರೀತಿ ಜಾಗೃತ ಕನ್ನಡ ಗ್ರಾಹಕರು, ಈ ಕವಿ, ಸಾಮಾನ್ಯ ಕನ್ನಡಿಗ, ಅವಿರತ, ಮುನ್ನೋಟದಂಥ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಕಹಳೆ ಊದುವಲ್ಲಿ ಯಶಸ್ವಿಯಾದವು. ಸಾಮಾಜಿಕ ಜಾಲತಾಣಗಳಲ್ಲಿ ಆರಂಭಗೊಂಡ ಈ ಚಳವಳಿಗಳು ಸಂದರ್ಭ ಬಂದಾಗ ಬೀದಿಗಿಳಿದು ಹೋರಾಡಲೂ ಹಿಂಜರಿಯಲಿಲ್ಲ. ಅರುಣ್ ಜಾವಗಲ್ ಮತ್ತಿತರ ಸಾಫ್ಟ್‌ವೇರ್ ಇಂಜಿನಿಯರ್‌ಗಳು ನೇರವಾಗಿ ಕನ್ನಡ ಸಂಘಟನೆಗಳ ಭೂಮಿಕೆಗೆ ಬಂದರು. ಗೀತ ರಚನೆಕಾರ ಕವಿರಾಜ್ ಅವರು ಸೇರಿದಂತೆ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರೂ ಕನ್ನಡದ ಧ್ವನಿಯನ್ನು ಮೊಳಗಿಸಿದರು.
ಕಳೆದ ಎರಡು ಮೂರು ದಶಕಗಳಲ್ಲಿ ಬೆಂಗಳೂರಿನಲ್ಲಿ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತ ಬಂದಿರುವ ಅನೇಕ ಸಂಘಟನೆಗಳು ಅನೇಕ ಚಟುವಟಿಕೆಗಳ ಮೂಲಕ ಕನ್ನಡ ಚಳವಳಿಯನ್ನು ಜೀವಂತವಾಗಿ ಇಡುವಲ್ಲಿ ಯಶಸ್ವಿಯಾಗಿವೆ. ಕನ್ನಡ ಸಂಘರ್ಷ ಸಮಿತಿ, ಕನ್ನಡ ಗೆಳೆಯರ ಬಳಗ, ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆ, ಕನ್ನಡ ಕ್ರಿಯಾ ಸಮಿತಿ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟ, ವೀರಸೇನಾನಿ ಮ.ರಾಮಮೂರ್ತಿ ಕನ್ನಡ ಬಳಗ, ಸ್ವಾಭಿಮಾನಿ ಕರ್ನಾಟಕ ವೇದಿಕೆ, ಕನ್ನಡ ಶ್ರೀಸಾಮಾನ್ಯರ ಕೂಟ, ವಿಷ್ಣುಸೇನಾ ಸಮಿತಿ, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ, ಚಾಲುಕ್ಯ ಯುವಕರ ಸಂಘ, ಕನ್ನಡ ಜನ ಶಕ್ತಿ ಕೇಂದ್ರ, ಬಹುತೇಕ ಕಾರ್ಖಾನೆಗಳ ಕನ್ನಡ ಸಂಘಗಳು ಕನ್ನಡ ಕೈಂಕರ್ಯದಲ್ಲಿ ಇಂದಿಗೂ ತೊಡಗಿವೆ. ಇದೇ ರೀತಿ ರಾಜ್ಯದ ನಾನಾ ಭಾಗಗಳಲ್ಲಿ ಅನೇಕ ಕನ್ನಡ ಸಂಘಟನೆಗಳು ತಮ್ಮ ಜಿಲ್ಲೆ, ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತ ಬಂದಿವೆ.
ಅಪವಾದ, ಆರೋಪಗಳು
ಇತರ ಚಳವಳಿಗಳ ಮೇಲೆ ಬಂದ ಆಪಾದನೆ, ಅನುಮಾನ, ಆರೋಪಗಳು ಕನ್ನಡ ಚಳವಳಿಯ ಮೇಲೂ ಬಂದವು. ಕನ್ನಡ ಚಳವಳಿಗಳನ್ನು ನಖಶಿಖಾಂತ ದ್ವೇಷಿಸುವ ಹಿಂದುತ್ವವಾದಿ ಸಂಘಟನೆಗಳು ಸಾರಾಸಗಟಾಗಿ `ರೋಲ್ ಕಾಲ್’ ಸಂಘಟನೆಗಳೆಂದು ಕರೆದವು. ಕನ್ನಡ ಚಳವಳಿಗೆ ಸೈದ್ಧಾಂತಿಕ ತಳಹದಿಯಿಲ್ಲ, ತಾತ್ವಿಕ ಬದ್ಧತೆಯಿಲ್ಲ ಎಂದು ಎಡಪಂಥೀಯ ಸಂಘಟನೆಗಳು ದೂರವಿಡುತ್ತಲೇ ಬಂದಿದ್ದವು. ಇತ್ತೀಚಿನ ದಿನಗಳಲ್ಲಿ ಈ ಆರೋಪಗಳು ಕೊಂಚಮಟ್ಟಿಗೆ ಕಡಿಮೆಯಾಗಿವೆ. ಕನ್ನಡ ಚಳವಳಿ ತಮಿಳರ ಹಾಗೆ ಭಾಷಾ ದುರಭಿಮಾನವನ್ನು ಪ್ರದರ್ಶಿಸುತ್ತಿದೆ ಎಂಬ ಮಾತುಗಳೂ ಕೇಳಿಬಂದವು. ಕನ್ನಡ ಚಳವಳಿ ಕರ್ನಾಟಕದ ನೆಲದಲ್ಲಿ ಸಣ್ಣಪುಟ್ಟ ನುಡಿಗಳನ್ನು ತುಳಿಯುತ್ತಿದೆ ಎಂಬ ಕಾಲ್ಪನಿಕ ಆರೋಪಗಳೂ ಹುಟ್ಟಿಕೊಂಡವು. 2000ನೇ ಇಸವಿಯಿಂದೀಚಿಗೆ ಸಾವಿರಾರು ಕನ್ನಡ ಸಂಘಟನೆಗಳು ಹುಟ್ಟಿಕೊಂಡಿದ್ದು, ಆ ಸಂಘಟನೆಗಳಲ್ಲಿ ಹಲವು ತಪ್ಪು ದಾರಿಗೆ ಇಳಿದಿದ್ದೂ ಕೂಡ ನಿಜ.
ಇದನ್ನೂ ಓದಿರಿ: ಘಟಾನುಘಟಿ ರಾಜಕಾರಣಿಗಳ ಜೈಲಿಗಟ್ಟಿದ ಸಮರ ಸೇನಾನಿ ‘ಎಸ್.ಆರ್. ಹಿರೇಮಠ’ (ಭಾಗ-2)
ಒಬ್ಬ ನಟನಿಗೆ ಅಪಮಾನವಾಯಿತು ಎಂಬ ಕಾರಣಕ್ಕೆ ಇಡೀ ರಾಜ್ಯ ಹೊತ್ತಿ ಉರಿಯುವ ಸ್ಥಿತಿ ಹಿಂದೆ ಇತ್ತು. ಕನ್ನಡ ಚಳವಳಿ ಇಂಥ ಭಾವನಾತ್ಮಕ ವಿಷಯಗಳಿಗೆ ಹೆಚ್ಚು ಪ್ರತಿಕ್ರಿಯೆ ನೀಡುತ್ತಿದ್ದುದನ್ನು ನಾವು ಗಮನಿಸಬಹುದು. ಆದರೆ ಕಳೆದ ಎರಡು ದಶಕಗಳಲ್ಲಿ ಕನ್ನಡ ಚಳವಳಿ ಭಾವನಾತ್ಮಕ ಚಳವಳಿಗಿಂತಲೂ ಕನ್ನಡಿಗರ ಬದುಕಿನ ಪ್ರಶ್ನೆಗಳನ್ನು, ಕನ್ನಡಿಗರ ಹಕ್ಕಿನ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಹೀಗಾಗಿ ಕನ್ನಡ ಚಳವಳಿಗೆ ಸಾಮಾಜಿಕ ಚಳವಳಿಯ ಆಯಾಮವೂ ದೊರೆತಂತಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ‘ನಮ್ಮ ಮೆಟ್ರೋ’ದಲ್ಲಿ ಹಿಂದಿಯನ್ನು ತೆಗೆದುಹಾಕುವ ಹೋರಾಟ ಕೈಗೊಂಡಾಗ ಬೆಂಗಳೂರಿನಲ್ಲಿ ಒಂದು ದುಂಡು ಮೇಜಿನ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಪಂಜಾಬಿ, ಮರಾಠಿ ಮತ್ತಿತರ ಹಿಂದಿಯೇತರ ಭಾಷೆಗಳ ಪ್ರತಿನಿಧಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಇತ್ತೀಚಿಗಷ್ಟೇ ಕರ್ನಾಟಕದ ತಮಿಳು ಸಂಘಟನೆಗಳ ಒಕ್ಕೂಟ ಬೆಂಗಳೂರಿನಲ್ಲಿ ನಡೆಸಿದ ಬೃಹತ್ ಸಮಾವೇಶದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರನ್ನೇ ಪ್ರಧಾನ ಭಾಷಣಕಾರರನ್ನಾಗಿ ಕರೆದಿತ್ತು. ಈ ಭಾಷಣದಲ್ಲಿ ಅವರು “ಕನ್ನಡಿಗರು-ತಮಿಳರ” ನಡುವಿನ ಒಗ್ಗಟ್ಟಿನ ಮಹತ್ವವನ್ನು ಹೇಳಿದ್ದರು. ಹಿಂದೆ ಏನೇನಾಯಿತೋ ಅದರಲ್ಲಿ ಎಲ್ಲರ ಪಾಲೂ ಇದೆ. ಈಗ ನಾವು ಮುಂದೆ ನಡೆಯಬೇಕಿದೆ. ದ್ರಾವಿಡ ಹಿನ್ನೆಲೆಯ ನಾವೆಲ್ಲರೂ ಒಂದುಗೂಡಿ ಹಿಂದಿ ಸಾಮ್ರಾಜ್ಯಶಾಹಿಯ ವಿರುದ್ಧ ನಿಲ್ಲಬೇಕಿದೆ ಎಂದು ಅವರು ಹೇಳಿದ್ದು ಕನ್ನಡ ಚಳವಳಿ ತನ್ನ ಪಥ ಬದಲಾಯಿಸಿರುವ ದೊಡ್ಡ ಸೂಚನೆಯಾಗಿ ಕಾಣುತ್ತದೆ. ಅಭಿಗೌಡ ಹನಕೆರೆ ಅವರ ಮುಂದಾಳತ್ವದ ‘ನಾವು ದ್ರಾವಿಡ ಕನ್ನಡಿಗರು ಚಳವಳಿ’ ಇಂತಹ ಚಿಂತನೆಗಳ ಮುಂದುವರಿಕೆಯಾಗಿದೆ.
ಕೊನೆಯ ಮಾತು
ಕನ್ನಡ ಚಳವಳಿ ಎಂದಿಗೂ ನಿಂತ ನೀರಾಗಿ ಉಳಿಯಲಿಲ್ಲ. ಹೊಸಹೊಸ ಮುಖಗಳು, ಹೊಸಹೊಸ ಚಿಂತನೆಗಳು ಚಳವಳಿಯ ಒಳಗೆ ಪ್ರವೇಶ ಪಡೆಯುತ್ತಲೇ ಇದೆ. ಕನ್ನಡ ಸಂಘಟನೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯಗಳ ಯುವಕ ಯುವತಿಯರು, ತಮಿಳು, ತೆಲುಗು, ಮರಾಠಿ ತಾಯ್ನುಡಿಯ ಯುವ ಸಮುದಾಯಕ್ಕೆ ಗಣನೀಯ ಪ್ರಮಾಣದಲ್ಲಿ ನಾಯಕತ್ವ ನೀಡಲಾಗಿದೆ. ಇದೆಲ್ಲವೂ ಆಶಾದಾಯಕ ಬೆಳವಣಿಗೆಗಳು.
ಕನ್ನಡ ಚಳವಳಿಯ ಐವತ್ತು ವರ್ಷಗಳನ್ನು ಒಂದು ಸ್ವರೂಪದಲ್ಲಿ ವಿವರಿಸುವುದು ಅಸಾಧ್ಯ. ಯಾಕೆಂದರೆ ಈ ಐವತ್ತು ವರ್ಷಗಳಲ್ಲಿ ಹಲವು ಬಗೆಯ ಜಾಗತಿಕ ಸ್ಥಿತ್ಯಂತರಗಳು ನಡೆದುಹೋಗಿವೆ. ಟ್ರಂಕ್ ಕಾಲ್ ಮಾಡುತ್ತಿದ್ದ ಕಾಲಘಟ್ಟದಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಕಾಲಕ್ಕೆ ನಾವು ಕಾಲಿಟ್ಟಿದ್ದೇವೆ. ಇದೆಲ್ಲದರ ಜೊತೆ ಕನ್ನಡ ಚಳವಳಿ ತನ್ನನ್ನು ತಾನು ಪರಿಷ್ಕರಿಸಿಕೊಳ್ಳುತ್ತ, ವಿಮರ್ಶಿಸಿಕೊಳ್ಳುತ್ತ, ಆಗಾಗ ಎಡವುತ್ತ, ಮತ್ತೆ ತಲೆಯೆತ್ತುತ್ತ, ತನ್ನ ನೆಲೆಯನ್ನು ಗುರುತಿಸಿಕೊಳ್ಳುತ್ತ ಬಂದಿದೆ. ಚಳವಳಿಯ ವಿಧಾನ ಬದಲಾದರೂ ಕನ್ನಡ ಸಮುದಾಯವನ್ನು ಕಾಪಿಟ್ಟುಕೊಳ್ಳುವುದು ಚಳವಳಿಯ ಮುಖ್ಯ ಉದ್ದೇಶವಾಗಿ ಉಳಿದುಕೊಂಡಿದೆ.
ಇದನ್ನೂ ಓದಿರಿ: ‘ಕಲ್ಯಾಣ ಕರ್ನಾಟಕ’ ಕಲ್ಯಾಣವಾಯಿತೆ?
ಕನ್ನಡಕ್ಕೆ ಇರುವ ಅಪಾಯಗಳು ಅಪಾರ, ಕನ್ನಡಿಗರ ಬದುಕಿಗೆ ಇರುವ ಅಪಾಯಗಳು ದಿನೇ ದಿನೇ ಹೆಚ್ಚುತ್ತಲೇ ಬಂದಿವೆ. ಕರ್ನಾಟಕದ ಒಳಗೆ ಹೊರರಾಜ್ಯಗಳಿಂದ ವಿಶೇಷವಾಗಿ ಉತ್ತರ ರಾಜ್ಯಗಳಿಂದ ಮಹಾವಲಸೆಯೇ ನಡೆಯುತ್ತಿದೆ. ಕರ್ನಾಟಕದಲ್ಲಿ ಕನ್ನಡೇತರರ ಸಂಖ್ಯೆ ಹೆಚ್ಚುತ್ತಲೇ ಇದೆ. ಕನ್ನಡಿಗರಿಗೆ ಸಲ್ಲಬೇಕಾದ ಅವಕಾಶಗಳು ಇತರರ ಕೈ ಸೇರುತ್ತಿವೆ. ಭಾರತ ರಾಷ್ಟ್ರೀಯತೆಯ ಹೆಸರಲ್ಲಿ ಪ್ರಾದೇಶಿಕ ಚಿಂತನೆಗಳನ್ನು “ಪ್ರತ್ಯೇಕತಾವಾದಿ”, ಭಯೋತ್ಪಾದಕ ನಿಲುವುಗಳೆಂದು ಬಿಂಬಿಸುವ, ದೇಶವಿರೋಧಿ ಎಂದು ಹಣೆಪಟ್ಟಿ ಕಟ್ಟುವ ಹೀನ ಯತ್ನಗಳೂ ನಡೆಯುತ್ತಿವೆ. ಹೀಗಾಗಿ ಹಿಂದೆಂದಿಗಿಂತಲೂ ಕನ್ನಡ ಚಳವಳಿ ದೊಡ್ಡ ಸವಾಲನ್ನು ಎದುರಿಸುತ್ತಿದೆ.

ದಿನೇಶ್ ಕುಮಾರ್ ಎಸ್.ಸಿ.
ದಿನೂ ಎಂದೇ ಪರಿಚಿತರಾದ ದಿನೇಶ್ ಕುಮಾರ್ ಎಸ್ ಸಿ ಮೂಲತಃ ಸಕಲೇಶಪುರದವರು. ಸಾಮಾಜಿಕ ಕಾಳಜಿ ಬೆರೆತ ಪತ್ರಿಕೋದ್ಯಮವನ್ನು ಮಾಡುತ್ತಾ, ಬಹಳ ಚಿಕ್ಕ ವಯಸ್ಸಿನಲ್ಲಿಯೇ ಇಂದು ಸಂಜೆ ಎಂಬ ಸಂಜೆ ಪತ್ರಿಕೆಯ ಸಂಪಾದಕರಾಗಿ ಹೆಸರು ಮಾಡಿದರು. ನಂತರ ಕರವೇ ನಲ್ನುಡಿಯ ಸಂಪಾದಕರಾಗಿ, ಕನ್ನಡ ಚಳವಳಿಯ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡರು. ತಮ್ಮ ಚುರುಕಾದ ತೀಕ್ಷ್ಣ ಬರಹಗಳಿಂದ ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಿದ್ಧರಾದ ಅವರು, ಕನ್ನಡ ಚಳವಳಿಯೊಳಗೆ ಸಾಮಾಜಿಕ ನ್ಯಾಯದ ಮತ್ತು ಬ್ರಾಹ್ಮಣಶಾಹಿ ವಿರುದ್ಧದ ಆಲೋಚನೆಗಳನ್ನೂ ಪಸರಿಸಿದವರಲ್ಲಿ ಪ್ರಮುಖರು. ಸದ್ಯ ಕನ್ನಡ ಪ್ಲಾನೆಟ್ ವೆಬ್‌ಸೈಟ್‌ನ ಪ್ರಧಾನ ಸಂಪಾದಕರಾಗಿದ್ದಾರೆ.




