ಕನ್ನಡ ಚಳವಳಿ: ಐವತ್ತು ವರ್ಷ ಸಾಗಿದ್ದು ಹೇಗೆ? ಸಾಧಿಸಿದ್ದು ಏನು? (ಭಾಗ- 1)

Date:

ತಮ್ಮ ನುಡಿಯನ್ನು ಉಳಿಸಿಕೊಳ್ಳಲೇಬೇಕಾದ ತೀವ್ರ ಹಂಬಲದಲ್ಲಿ ನಡೆದ ಭಾಷಾ ಚಳವಳಿಗಳಿಗೆ ಹಲವು ಆಯಾಮದ ಇತಿಹಾಸವಿದೆ. ಭಾಷಾ ಚಳವಳಿಯೇ ಒಂದು ಪ್ರತ್ಯೇಕ ರಾಷ್ಟ್ರ  ಚಳವಳಿಯಾಗಿ ಬದಲಾಗಿ ಬಾಂಗ್ಲಾದೇಶ ಎಂಬ ಹೊಸ ದೇಶ ನಿರ್ಮಾಣವಾಗಿದ್ದನ್ನು ನಾವು ನೋಡಿದ್ದೇವೆ. ಜನರ ತಾಯ್ನುಡಿಗಳನ್ನು ಅವರ ಭಾವಕೋಶದಿಂದ ಪ್ರತ್ಯೇಕಿಸಿ ನೋಡಲಾಗದು. ಹೀಗಾಗಿಯೇ ಆತನ/ಆಕೆಯ ನುಡಿಗೆ ಸಂಚಕಾರ ಬಂದಾಗೆಲ್ಲ ಅವರು ಸಿಡಿದುನಿಂತಿದ್ದಾರೆ. ಮನುಷ್ಯ ಧಾರ್ಮಿಕವಾಗಿ ಬೇರೆ ಬೇರೆ ಮತಪಂಥ ಧರ್ಮಗಳನ್ನು ಅನುಸರಿಸಬಹುದು, ತನ್ನ ಧರ್ಮನಿಷ್ಠೆಯನ್ನು ಬೇಕೆಂದಾಗೆಲ್ಲ ಬದಲಾಯಿಸಬಹುದು. ಆದರೆ ನುಡಿ ಹಾಗಲ್ಲ, ಅದು ಕರುಳಿನ ಬಂಧ. ಅದನ್ನು ಕಳಚಿಬಿಡುವುದು ಕಷ್ಟದ ಕೆಲಸ. ಜಗತ್ತಿನಾದ್ಯಂತ ಧಾರ್ಮಿಕ ಸಮುದಾಯಗಳ ಹಾಗೆಯೇ ಭಾಷಾ ಸಮುದಾಯಗಳೂ ಪ್ರಬಲವಾಗಿ ಬೆಳೆದುಬಂದಿವೆ. ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದ ಬಹುಸಂಖ್ಯಾತರು ಮುಸ್ಲಿಮರೇ ಆಗಿದ್ದರೂ ಪಾಕಿಸ್ತಾನ ವಿಭಜನೆಯಾಯಿತು. ಬಂಗಾಳಿಗಳ ಮೇಲೆ ಉರ್ದುವನ್ನು ಹೇರಲು ಯತ್ನಿಸಿದ ಕಾರಣದಿಂದ ಈ ವಿಘಟನೆ ನಡೆದುಹೋಗಿತ್ತು. ತನ್ನ ನುಡಿಗೆ ಸಮಸ್ಯೆ ಬಂದಾಗ ಭಾಷಾ ಸಮುದಾಯಗಳು ಧರ್ಮವನ್ನು ಮೀರಿ ತಮ್ಮ ನುಡಿಯ ಜೊತೆಗೆ ಗುರುತಿಸಿಕೊಳ್ಳುತ್ತವೆ ಎಂಬುದಕ್ಕೆ ಇದು ಸಾಕ್ಷಿ. ಹೀಗಾಗಿ ಭಾಷಾ ಚಳವಳಿಗೆ ಒಂದು ಸಾಮಾಜಿಕ ಆಯಾಮವೂ ಇರುವುದನ್ನು ನಾವು ಗುರುತಿಸಬೇಕಾಗುತ್ತದೆ.

ಕನ್ನಡದ ಮಟ್ಟಿಗೆ ಭಾಷಾ ಚಳವಳಿ ಯಾವಾಗ ಶುರುವಾಯಿತು ಎಂಬುದನ್ನು ಒಂದು ದಿನಾಂಕದೊಂದಿಗೆ ಹೇಳಲು ಸಾಧ್ಯವಿಲ್ಲ. ಕ್ರಿಸ್ತ ಶಕ 1225ರ ಆಸುಪಾಸಿನಲ್ಲಿ ಬದುಕಿದ ಕವಿ ಆಂಡಯ್ಯ ಕನ್ನಡ ಭಾಷೆಯ ಮೊಟ್ಟ ಮೊದಲನೆಯ ಅಚ್ಚಗನ್ನಡ ಕಾವ್ಯವನ್ನು ರಚಿಸಿದರು. ಕಬ್ಬಿಗರ ಕಾವ ಎಂಬ ಅವರ ಕಾವ್ಯದಲ್ಲಿ ಒಂದೂ ಸಂಸ್ಕೃತ ಪದ ಬಳಸದೆ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟರು. ಕನ್ನಡ ಚಳವಳಿಯ ಬೀಜ ಅಲ್ಲಿಂದಲೇ ಬೇರು ಬಿಡಲು ಆರಂಭಿಸಿತ್ತು. ಹಾಗೆ ನೋಡಿದರೆ, ಸಂಸ್ಕೃತಮಯವಾಗಿದ್ದ ಕನ್ನಡ ಸಾಹಿತ್ಯದಲ್ಲಿ ಕನ್ನಡದ ಶಬ್ದಗಳನ್ನು ಹೇರಳವಾಗಿ ಬಳಸಿ ಜನಸಾಮಾನ್ಯರನ್ನು ತಲುಪಿದ ವಚನ ಚಳವಳಿಯೂ ಒಂದು ರೀತಿಯಲ್ಲಿ ಕನ್ನಡ ಚಳವಳಿಯೇ ಹೌದು. ಬಸವಾದಿ ಶರಣರು ಸಂಸ್ಕೃತ ನುಡಿಗೆ ವಿರೋಧವಾಗಿರಲಿಲ್ಲವಾದರೂ ಸಾಮಾಜಿಕ ತರತಮಕ್ಕೆ ಕಾರಣವಾದ ಜನವಿರೋಧಿ ಸಾಹಿತ್ಯವೆಲ್ಲವೂ ಸಂಸ್ಕೃತದಲ್ಲಿ ಇತ್ತು ಮತ್ತು ಅದನ್ನು ಒಡೆಯಲೆಂದೇ ಅವರು ಕನ್ನಡವನ್ನು ಬಳಸಿದರು ಎಂಬುದು ಸುಳ್ಳಲ್ಲ. ಕನ್ನಡ ಚಳವಳಿಯ ಬೇರುಗಳು 12ನೇ ಶತಮಾನದಿಂದಲೇ ಈ ನೆಲದಲ್ಲಿ ಇಳಿಯಲಾರಂಭಿಸಿದ್ದವು. ಅದಾದ ನಂತರ ಕರ್ನಾಟಕ ಏಕೀಕರಣ ಚಳವಳಿ ಭಾಷೆಯ ಹೆಸರಲ್ಲಿ, ಭಾಷಿಗರ ಹೆಸರಲ್ಲಿ ಕನ್ನಡಿಗರನ್ನು ಒಂದುಗೂಡಿಸಿದ ಮೊಟ್ಟಮೊದಲ ಕನ್ನಡ ಚಳವಳಿ ಎಂದು ಹೇಳಬಹುದು. ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಂದೆಡೆಗೆ ತರುವ ಮಹಾಭಿಲಾಶೆಯ ಏಕೀಕರಣ ಚಳವಳಿ ಯಶಸ್ವಿಯಾದರೂ ಕನ್ನಡಿಗರು ಅನೇಕ ಅಪ್ಪಟ ಕನ್ನಡದ ಭಾಗಗಳನ್ನು ಕಳೆದುಕೊಂಡರು.

ಏಕೀಕರಣೋತ್ತರ ಕರ್ನಾಟಕ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1960ರ ಸುಮಾರಿಗೆ ಕನ್ನಡಿಗರು ತಮ್ಮ ನಾಡಿನಲ್ಲಿ ತಾವೇ ಪರಕೀಯರಂತೆ ಬದುಕುವ ಸ್ಥಿತಿ ಇದ್ದಾಗ ಕನ್ನಡಿಗರ ಆಕ್ರೋಶ ಬುಸುಗುಡುವುದಕ್ಕೆ ಆರಂಭವಾಗಿತ್ತು. ಅ.ನ.ಕೃಷ್ಣರಾವ್, ಕೋಣಂದೂರು ಲಿಂಗಪ್ಪ, ಮ.ರಾಮಮೂರ್ತಿ, ನಾಡಿಗೇರ ಕೃಷ್ಣರಾವ್, ಮೈ.ಸು.ನಟರಾಜ, ಬೆ.ನಿ.ಈಶ್ವರಪ್ಪ, ತಿ.ತಾ.ಶರ್ಮ, ಮೈ.ಸು.ಶೇಷಗಿರಿರಾವ್, ಕರ್ಲಮಂಗಲಂ ಶ್ರೀಕಂಠಯ್ಯ, ಎಂ.ವಿ.ಸುಬ್ಬರಾವ್, ಮನು ಪಾಟೀಲ ಹೀಗೆ ಹಲವರು ಸಂಘಟನೆಗೆ ಮುಂದಾದರು. ಒಂದು ರೀತಿಯಲ್ಲಿ ಕನ್ನಡ ಚಳವಳಿಯ ಆರಂಭವೇ ಈ ಸಂದರ್ಭವಾಗಿತ್ತು. ಬೆಂಗಳೂರಿನಲ್ಲಿ ತಮಿಳರಿಂದ ಆದ ಅಪಮಾನದಿಂದ ಕೆರಳಿದ ಕೋಣಂದೂರು ಲಿಂಗಪ್ಪನವರು ಕರ್ನಾಟಕ ಯುವಜನ ಸಭಾ (ಕನ್ನಡ ಯುವಜನ ಸಭಾ) ಹುಟ್ಟುಹಾಕಿದರು. ಕೋಣಂದೂರು ಅವರು ರಾಮ್ ಮನೋಹರ್ ಲೋಹಿಯಾ ಅವರ ಶಿಷ್ಯರಾಗಿದ್ದರು. ಆ ಕಾಲಘಟ್ಟದಲ್ಲಿ ಲೋಹಿಯಾ ಸಹ ಅಂಗ್ರೇಜಿ ಹಠಾವೋ ಎಂಬ ಆಂದೋಲನಕ್ಕೆ ಕರೆ ನೀಡಿದ್ದರು.

ಇದನ್ನೂ ಓದಿರಿ: ಸಾಮಾಜಿಕ ಮಾಧ್ಯಮ ಮತ್ತು ಕನ್ನಡ

ಏಕೀಕರಣ ಚಳವಳಿಯ ಸಂದರ್ಭದಿಂದಲೂ ಕನ್ನಡಿಗರ, ಕನ್ನಡ ನುಡಿಯ ಮೇಲಿನ ದಾಳಿಗಳಿಗೆ ತೀವ್ರವಾಗಿ ಸ್ಪಂದಿಸುತ್ತಿದ್ದ ರಾಷ್ಟ್ರಕವಿ ಕುವೆಂಪು ಅವರನ್ನು ಅನುಸರಿಸಿ ಕನ್ನಡದ ಸಾಹಿತಿಗಳು ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಳವಳಿಯ ಆರಂಭಕ್ಕೆ ಸ್ಫೂರ್ತಿಯನ್ನು ಒದಗಿಸಿದ್ದರು.

“ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ

ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ

ರಾಜನುಡಿಯೊಂದು, ರಾಷ್ಟ್ರನುಡಿಯೆಂದೊಂದು

ದೇವನುಡಿಯೆಂದೊಂದು ಹತ್ತಿ ಜಗ್ಗಿ,

ನಿರನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ

ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ’’

ಎಂದು ಕುವೆಂಪು ಆ ಕಾಲಕ್ಕೇ ಕನ್ನಡ ಚಳವಳಿಯ ಅಗತ್ಯವನ್ನು ಸಾರಿ ಹೇಳಿದ್ದರು.

ಅರವತ್ತರ ದಶಕದ ಕನ್ನಡ ಚಳವಳಿ ಹಲವು ಆಯಾಮಗಳಲ್ಲಿ ನಡೆಯಿತು. ಕನ್ನಡ ಜಾಗೃತ ಪರಿಷತ್ ಹಾಗೂ ಸಂಯುಕ್ತ ರಂಗಗಳು ಸ್ಥಾಪನೆಯಾದವು. 1963ರಲ್ಲಿ ಮೊಟ್ಟಮೊದಲ ಬಾರಿಗೆ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ನಡೆಸಲಾಯಿತು. ಇದನ್ನು ನಡೆಸಿದ್ದು ಮ.ರಾಮಮೂರ್ತಿ ನೇತೃತ್ವದ ಸಂಯುಕ್ತ ರಂಗ. ಕನ್ನಡಕ್ಕಾಗಿ ಹಳದಿ-ಕೆಂಪು ಬಣ್ಣದ ಬಾವುಟವನ್ನೂ ಕನ್ನಡ ಸಂಘಟನೆಗಳು ಒಂದಾಗಿ ರೂಪಿಸಿದವು. ಇದರ ನೇತೃತ್ವವನ್ನೂ ಮ.ರಾಮಮೂರ್ತಿಯವರೇ ವಹಿಸಿದ್ದರು. ಸಂಯುಕ್ತ ರಂಗ ತೀವ್ರಗತಿಯಲ್ಲಿ ಚಳವಳಿಯಲ್ಲಿ ತೊಡಗಿದ್ದಾಗ ಕನ್ನಡ ಚಳವಳಿಗೆ ಹೊಸ ವರ್ಚಸ್ಸಿನ ನಾಯಕನ ಆಗಮನವೂ ಆಗಿತ್ತು, ಅವರು ವಾಟಾಳ್ ನಾಗರಾಜ್. ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಸಂಯುಕ್ತರಂಗದಿಂದ ಹೊರಬಂದ ವಾಟಾಳ್ ತಮ್ಮದೇ ಸಂಘಟನೆ ಕಟ್ಟಿದರು.

Karnataka 5
‘ಮೈಸೂರು ರಾಜ್ಯ’ ಎಂಬುದನ್ನು ‘ಕರ್ನಾಟಕ ರಾಜ್ಯ’ ಎಂಬುದಾಗಿ 1973ರ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮರುನಾಮಕರಣ ಮಾಡಿದರು

ಕರ್ನಾಟಕ ಏಕೀಕರಣವಾದರೂ ರಾಜ್ಯದ ಹೆಸರು ‘ಮೈಸೂರು’ ಎಂದೇ ಉಳಿದಿದ್ದು ಏಕೀಕರಣ ಹೋರಾಟಗಾರರ ಸಿಟ್ಟಿಗೆ ಕಾರಣವಾಗಿತ್ತು. ಅದು ಕೊನೆಯಾಗಿದ್ದು 1973ರ ಜುಲೈ 27ರಂದು. ಮೈಸೂರು ವಿಧಾನಸಭೆಯಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಿಸುವ ನಿರ್ಣಯವನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಮಂಡಿಸಿದರು. ನಿರ್ಣಯ ಮಂಡಿಸುವಾಗ ದೇವರಾಜು ಅರಸು ಅವರು ಹೇಳಿದ ಮಾತುಗಳಿವು:

“ಬಹುಮತದ ವಿಶ್ವಾಸದಲ್ಲಿ, ನಾವೆಲ್ಲರೂ ಸೇರಿ ಒಮ್ಮತದಿಂದ ಈ ನಮ್ಮ ನಾಡನ್ನು ಹೊಸ ಹೆಸರಿನಿಂದ ಕರೆಯೋಣ. ಆ ರೀತಿ ನಾವು ಆನಂದದಿಂದ, ಸಂತೋಷದಿಂದ ಕರೆಯುವಾಗ ಕನ್ನಡ ಜನತೆಯ ಏಳಿಗೆಯಾಗಲಿ ಎಂದು ಹಾರೈಸೋಣ. ಈ ಶುಭ ಮುಹೂರ್ತದಲ್ಲಿ ಈ ಹೆಸರನ್ನು ಹೊಂದುತ್ತಿರುವ ರಾಜ್ಯ ಉನ್ನತವಾಗಿ ಬೆಳೆದು, ಹಿಂದಿನಿಂದ ಈ ರಾಜ್ಯ ಚರಿತ್ರೆಯಲ್ಲಿ ಏನು ಒಂದು ಒಳ್ಳೆಯ ಕೀರ್ತಿ ಮತ್ತು ಹೆಸರನ್ನು ಪಡೆದಿತ್ತೋ, ಅದಕ್ಕಿಂತ ಹೆಚ್ಚಿನ ಕೀರ್ತಿಯನ್ನು ಪಡೆದು, ಕನ್ನಡ ಕೋಟಿ ಜನತೆ ಏನಿದ್ದಾರೆ ಅವರ ಬಾಳ್ವೆ ಹಸನಾಗಬೇಕು. ಜನತೆ ಬೆಳೆಯಬೇಕು. ಎಲ್ಲರೂ ಆನಂದಿತರಾಗಬೇಕು. ನಮ್ಮ ಸಂಸ್ಕೃತಿ, ನಮ್ಮ ಸಾಹಿತ್ಯ, ನಮ್ಮ ಕಲೆ ಇವೆಲ್ಲವೂ ಬೆಳೆದು ಇಡೀ ಭಾರತದಲ್ಲಿಯೇ ಅಲ್ಲ, ಇಡೀ ಪ್ರಪಂಚದಲ್ಲಿಯೇ ಹೆಚ್ಚಿನ ಕೀರ್ತಿ ಪಡೆಯುವಂತಾಗಬೇಕು. ಅಂತಹ ಒಂದು ಕಾರ್ಯಕ್ಕೆ ಇವತ್ತು ನಾವು ಅಂಕುರಾರ್ಪಣ ಮಾಡೋಣ ಎನ್ನುವ ಮಾತನ್ನು ತಿಳಿಸಿ ಈ ಠರಾವನ್ನು ತಮ್ಮ ಒಪ್ಪಿಗೆಗಾಗಿ ಮಂಡಿಸುತ್ತಿದ್ದೇನೆ.’’

ನಿರ್ಣಯ ಅಂಗೀಕಾರವಾಗಿ ಅನುಷ್ಠಾನವೂ ಆಯಿತು. ಸ್ವತಃ ಮೈಸೂರು ಹೆಸರು ಬದಲಾಯಿಸಲು ಇಷ್ಟವಿಲ್ಲದ ದೇವರಾಜ ಅರಸು, ಕನ್ನಡ ಜನತೆಯ ಮನೋಭಿಲಾಷೆ ಈಡೇರಿಸುವ ಸಲುವಾಗಿ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದಾಗಿ ಪ್ರಾಮಾಣಿಕವಾಗಿ ಹೇಳಿಕೊಂಡಿದ್ದರು.

ಗೋಕಾಕ್ ಚಳವಳಿ

ಕರ್ನಾಟಕವು ಕರ್ನಾಟಕವೆಂಬ ಹೆಸರು ಪಡೆದ ಮೇಲೂ ಕನ್ನಡಿಗರ ಸಮಸ್ಯೆಗಳು ದೂರವಾಗಿರಲಿಲ್ಲ. ಸಂಸ್ಕೃತವನ್ನು ತಾಯಿನುಡಿಗೆ ಸಮಾನ ನುಡಿ ಎಂದು ಪರಿಗಣಿಸುವ ಮೂಲಕ ಕರ್ನಾಟಕದ ಶಾಲೆಗಳಲ್ಲಿ ಓದುವ ಮಕ್ಕಳ ಮೇಲೆ ಹೇರುವ ಪ್ರಯತ್ನ ಸತತವಾಗಿ ನಡೆದುಬಂದಿತ್ತು. ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ತೆಗೆದುಕೊಂಡವರಿಗೆ ಉದಾರವಾಗಿ ಅಂಕಗಳನ್ನು ನೀಡಿ, ಅಂಕ ಸಿಗುತ್ತದೆ ಎಂಬ ಕಾರಣವೊಡ್ಡಿ ವಿದ್ಯಾರ್ಥಿಗಳನ್ನು ಸೆಳೆಯಲಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ ಸಂಸ್ಕೃತ ಪರೀಕ್ಷೆಗಳಲ್ಲಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲೂ ಉತ್ತರಿಸಬಹುದು ಎಂಬ ಅಂಶವನ್ನು ಹೊಸದಾಗಿ ಅಳವಡಿಸಲಾಗಿತ್ತು. ಇದರ ವಿರುದ್ಧ ಕನ್ನಡಪರರ ಆಕ್ರೋಶ ಹೆಚ್ಚಾದ ನಂತರ ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಿಂದ ಹೊರತಂದು (1969 ಅಕ್ಟೋಬರ್) ಮೂರನೇ ಭಾಷೆಯ ಸ್ಥಾನಕ್ಕೆ ತರಲಾಗಿತ್ತು. ಇದರ ವಿರುದ್ಧ ಸಂಸ್ಕೃತ ಲಾಬಿ ವ್ಯವಸ್ಥಿತವಾಗಿ ವಿರೋಧ ಆರಂಭಿಸಿತು.

60 gokak protest
ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಲಾಠಿ ಚಾರ್ಜ್ (ಫೋಟೋ ಕೃಪೆ: ದಿ ಹಿಂದೂ)

ಆರ್. ಗುಂಡೂರಾವ್ ಅವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಂಸ್ಕೃತಪರ ಲಾಬಿಗಳು ಚುರುಕಾದವು. ಈ ಲಾಬಿಯ ಹಿಂದೆ ಇದ್ದಿದ್ದು ಕೆಲವು ಬ್ರಾಹ್ಮಣ ಮಠಗಳು. ಸರ್ಕಾರ 1980ರಲ್ಲಿ ಭಾಷೆಗಳನ್ನು ಕಲಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ಸಾಹಿತಿ ವಿ.ಕೃ.ಗೋಕಾಕ್ ಅವರ ನೇತೃತ್ವದಲ್ಲಿ ಭಾಷಾ ತಜ್ಞರ ಸಮಿತಿಯೊಂದನ್ನು ನೇಮಿಸಲಾಯಿತು. ಈ ಸಮಿತಿಯನ್ನು ರಚಿಸಿದ್ದೇ ಸಂಸ್ಕೃತವನ್ನು ಹೇರಲು ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಯಿತು. ಹೀಗಾಗಿ ಗೋಕಾಕ್ ಸಮಿತಿ ರಚನೆಯ ವಿರುದ್ಧವೇ ಹೋರಾಟ ಆರಂಭವಾಯಿತು. ಆದರೆ ಗೋಕಾಕ್ ಸಮಿತಿ ಕನ್ನಡಪರವಾದ ವರದಿಯನ್ನೇ ನೀಡಿತ್ತು. ಈ ವರದಿಯನ್ನು ಅನುಷ್ಠಾನಗೊಳಿಸುವಂತೆ ನಡೆದ ಹೋರಾಟವೇ ಐತಿಹಾಸಿಕ ಗೋಕಾಕ್ ಚಳವಳಿ.

ಇದನ್ನೂ ಓದಿರಿ: ಕರ್ನಾಟಕಕ್ಕೆ ಕ್ರೈಸ್ತರು ಕೊಟ್ಟ ಕೊಡುಗೆಗಳ ಮರೆಯಲಾದೀತೆ? (ಭಾಗ- 1)

ಗೋಕಾಕ್ ಚಳವಳಿಯ ಕೂಗು ಮೊದಲು ಎದ್ದಿದ್ದು ಉತ್ತರ ಕರ್ನಾಟಕ ಭಾಗದಿಂದ. ಧಾರವಾಡದಲ್ಲಿ ಚಂದ್ರಶೇಖರ ಪಾಟೀಲ, ಎಂ.ಎಂ.ಕಲಬುರ್ಗಿ, ಬಸವರಾಜ ಕಟ್ಟೀಮನಿ, ಚನ್ನವೀರ ಕಣವಿ, ಪಾಟೀಲ ಪುಟ್ಟಪ್ಪ ಮೊದಲಾದವರು ಹೋರಾಟದ ಕಹಳೆಯನ್ನು ಊದಿದರು. ಇತ್ತ ಬೆಂಗಳೂರಿನಲ್ಲೂ ಜಿ.ಎಸ್.ಶಿವರುದ್ರಪ್ಪ, ಪಿ.ಲಂಕೇಶ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಸಿದ್ಧಯ್ಯಪುರಾಣಿಕ್, ಎಂ.ಚಿದಾನಂದಮೂರ್ತಿ, ಕೋ.ಚೆನ್ನಬಸಪ್ಪ, ತ.ರಾ.ಸು., ಪೂರ್ಣಚಂದ್ರತೇಜಸ್ವಿ ಮೊದಲಾದ ಸಾಹಿತಿಗಳು, ಕಲಾವಿದರು ಗೋಕಾಕ್ ವರದಿ ಜಾರಿಯಾಗಬೇಕು ಎಂಬ ಆಗ್ರಹವನ್ನು ಮೊಳಗಿಸಿದರು.

ಆಗ ಹೊಸ ತಲೆಮಾರಿನ ಕನ್ನಡ ಚಳವಳಿಗಾರರಾಗಿ ಗುರುತಿಸಿಕೊಂಡಿದ್ದ ರಹಮಾನ್ ಖಾನ್, ಜಿ.ನಾರಾಯಣಕುಮಾರ್, ಕೆ.ಪ್ರಭಾಕರ ರೆಡ್ಡಿ ಮೊದಲಾದವರು ಮುನ್ನೆಲೆಗೆ ಬಂದರು. ಹಲವಾರು ಸಂಘಸಂಸ್ಥೆಗಳು ಗೋಕಾಕ್ ಚಳವಳಿಯ ಭಾಗವಾಗತೊಡಗಿದವು. ಬೆಂಗಳೂರಿನ ಕನ್ನಡ ಕಾರ್ಮಿಕರ ಸಂಘಟನೆಗಳು, ಕನ್ನಡ ಕ್ರಿಯಾ ಸಮಿತಿಗಳು, ಕನ್ನಡ ಸಂಘರ್ಷ ಸಮಿತಿ, ಕನ್ನಡ ಸಂರಕ್ಷಣಾ ಸಮಿತಿ, ಕನ್ನಡ ಪಕ್ಷ ಹೀಗೆ ಹಲವು ಸಂಘಟನೆಗಳು ಬೀದಿಗಿಳಿದವು.

ಚಳವಳಿ ತೀವ್ರಗೊಳ್ಳುತ್ತಿದ್ದಂತೆ ಸರ್ಕಾರ ರಾಜೀ ಸೂತ್ರವೊಂದನ್ನು ಮುಂದಿಟ್ಟಿತು. ಕನ್ನಡವನ್ನು ಪ್ರೌಢಶಾಲಾ ಹಂತದಿಂದ ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಮುಂದಿಡಲಾಯಿತು. ಆದರೆ ಪ್ರಾಥಮಿಕ ಶಾಲಾ ಹಂತದಿಂದಲೇ ಕನ್ನಡ ಕಡ್ಡಾಯವಾಗಬೇಕು ಎಂದು ಕನ್ನಡಪರರ ಪಟ್ಟುಹಿಡಿದ ಪರಿಣಾಮವಾಗಿ ಚಳವಳಿ ಮುಂದುವರೆಯಿತು. ಸರ್ಕಾರದ ಪ್ರಸ್ತಾಪ ಒಪ್ಪಿಕೊಂಡ ಹಲವು ಬೆರಳೆಣಿಕೆಯ ಮುಖಂಡರು ಚಳವಳಿಯಿಂದ ಹಿಂದೆ ಸರಿದರು. ಆದರೆ ಚಳವಳಿ ದೊಡ್ಡಪ್ರಮಾಣದಲ್ಲಿ ಬೆಳೆಯುತ್ತ ಹೋಯಿತು. ಅದಕ್ಕೆ ಮುಖ್ಯ ಕಾರಣ ಜನಪ್ರಿಯ ನಟ ಡಾ.ರಾಜ್ ಕುಮಾರ್. ಅವರು ಚಳವಳಿಗೆ ಕಾಲಿಡುತ್ತಿದ್ದಂತೆ ರಾಜ್ಯಾದ್ಯಂತ ದೊಡ್ಡ ಕಂಪನವೇ ಉಂಟಾಯಿತು. ಡಾ. ರಾಜಕುಮಾರ್ ಅವರೊಂದಿಗೆ ಇಡೀ ಕನ್ನಡ ಚಿತ್ರರಂಗದ ತಾರೆಯರ ದಂಡೇ ಹರಿದು ಬಂದಿತು. ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅಶೋಕ್, ಲೋಕೇಶ್, ಅನಂತ್ ನಾಗ್, ಜೈ ಜಗದೀಶ್ ಮುಂತಾದ ನಾಯಕನಟರುಗಳು ಗೋಕಾಕ್ ಚಳವಳಿಯಲ್ಲಿ ಪ್ರಧಾನವಾಗಿ ಕಾಣಿಸಿಕೊಂಡರು.

65 Gokak Movement Lankesh 1
ಗೋಕಾಕ್ ಚಳವಳಿಯ ಕುರಿತು ಲಂಕೇಶ್ ಪತ್ರಿಕೆಯ ವರದಿ

ರಾಜ್ಯದ ಎಲ್ಲ ಭಾಗಗಳಲ್ಲೂ ಚಳವಳಿ ಕಾಡ್ಗಿಚ್ಚಿನಂತೆ ಹರಡುತ್ತ ಹೋಯಿತು. ಸಣ್ಣಸಣ್ಣ ತಾಲ್ಲೂಕು, ಹೋಬಳಿ ಕೇಂದ್ರಗಳಿಗೂ ಚಳವಳಿ ವ್ಯಾಪಿಸಿತು. ಪ್ರತಿಭಟನಾ ಮೆರವಣಿಗೆಗಳು, ರಸ್ತೆ ಬಂದ್‌ಗಳು ದಿನನಿತ್ಯದ ವಿದ್ಯಮಾನಗಳಾದವು. ಹಲವೆಡೆ ಗೋಲಿಬಾರ್ ಕೂಡ ನಡೆಯಿತು. ಅರಸಪ್ಪ ಎಂಬ ಕನ್ನಡ ಕಾರ್ಯಕರ್ತರೊಬ್ಬರು ಪೊಲೀಸರ ಗುಂಡಿಗೆ ಬಲಿಯಾದರು. ಸರ್ಕಾರ ಪ್ರತಿಭಟನೆಗೆ ಮಣಿದು ಕನ್ನಡಪರರಿಗೆ ಸಮ್ಮತಿಯಾಗುವಂಥ ಭಾಷಾ ಸೂತ್ರವನ್ನು ರಚಿಸಿತು. ಚಳವಳಿ ಅಂತ್ಯಗೊಂಡಿತು. ಆದರೆ ವಿಚಿತ್ರವೆಂದರೆ ಸಂಸ್ಕೃತವಾದಿಗಳ ಲಾಬಿ ಎಷ್ಟು ಬಲಶಾಲಿಯಾಗಿತ್ತೆಂದರೆ ನ್ಯಾಯಾಲಯವನ್ನು ಬಳಸಿಕೊಂಡು ಗೋಕಾಕ್ ವರದಿ ಜಾರಿಯಾಗದಂತೆ ತಡೆದುಬಿಟ್ಟಿತು.

ಆದರೆ ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಮೂಡಿಸಿದ ಜಾಗೃತಿ, ಕನ್ನಡ ಪ್ರೇಮ, ನಾಡಪ್ರೇಮ ಸಣ್ಣ ಪ್ರಮಾಣದ್ದೇನೂ ಆಗಿರಲಿಲ್ಲ. ಭಾಷಾ ನಿರಭಿಮಾನಿಗಳಂತೆ ಇದ್ದ ಕನ್ನಡಿಗರು ಭಾವನಾತ್ಮಕವಾಗಿ ಸಿಡಿದೆದ್ದಿದ್ದರು. ಏಕೀಕರಣದ ನಂತರವೂ ಭಾವನಾತ್ಮಕವಾಗಿ ಒಂದಾಗದ ಕನ್ನಡಿಗರು ಗೋಕಾಕ್ ಚಳವಳಿಯ ನಂತರ ಒಂದೇ ಧ್ವನಿಯಲ್ಲಿ ಮಾತನಾಡಿದ್ದರು.

ಗುಂಡೂರಾವ್ ಸರ್ಕಾರ ಪತನಗೊಂಡು ಮೊಟ್ಟಮೊದಲ ಬಾರಿಗೆ ಜನತಾ ಪಕ್ಷ ಅಧಿಕಾರಕ್ಕೆ ಬಂದಿತು. ಆ ಕಾಲಘಟ್ಟದಲ್ಲಿ ಗುಂಡೂರಾವ್ ಕನ್ನಡ ಚಳವಳಿ ಮಾತ್ರವಲ್ಲದೆ ರೈತ, ದಲಿತ ಚಳವಳಿಗಳ ವಿರೋಧವನ್ನೂ ಕಟ್ಟಿಕೊಂಡಿದ್ದರು. ಈ ಎಲ್ಲ ಚಳವಳಿಗಳ ಕಾರಣದಿಂದಲೇ ಗುಂಡೂರಾವ್ ಸರ್ಕಾರ ಹೋಗಿ ಜನತಾ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಕನ್ನಡ ಚಳವಳಿಯ ಬಹುದೊಡ್ಡ ಗೆಲುವು ಇದಾಗಿತ್ತು.

ಡಾ. ರಾಜಕುಮಾರ್ ಅಭಿಮಾನಿ ಸಂಘ

ರೈತ, ದಲಿತ ಮತ್ತು ಕನ್ನಡ ಚಳವಳಿಯ ಬೇಡಿಕೆಗಳನ್ನು ಈಡೇರಿಸುವುದಾಗಿ ಅಧಿಕಾರಕ್ಕೆ ಬಂದ ಜನತಾ ಪಕ್ಷದಿಂದಲೂ ಭ್ರಮನಿರಸನವಾಗತೊಡಗಿದಾಗ ಕನ್ನಡಿಗರೇ ಕನ್ನಡಿಗರಿಗಾಗಿ ಒಂದು ಪ್ರಾದೇಶಿಕ ಪಕ್ಷ ರಚಿಸಿಕೊಳ್ಳಬೇಕು ಎಂಬ ಕೂಗು ಆರಂಭಗೊಂಡಿತು. ಅಷ್ಟು ಹೊತ್ತಿಗಾಗಲೇ ವಾಟಾಳ್ ನಾಗರಾಜ್ ತಮ್ಮದೇ ಹೆಸರಿನಲ್ಲಿ ವಾಟಾಳ್ ಚಳವಳಿ ಪಕ್ಷವನ್ನು ಆರಂಭಿಸಿದ್ದರು. ರೈತ ಸಂಘದ ಅಧ್ಯಕ್ಷರಾಗಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ‘ಕನ್ನಡದೇಶ’ ಪಕ್ಷವನ್ನು ಸ್ಥಾಪಿಸಿದರು. ಲಂಕೇಶ್ ಪತ್ರಿಕೆಯ ಮೂಲಕ ಸಂಚಲನ ಮೂಡಿಸಿದ್ದ ಪಿ.ಲಂಕೇಶ್ ‘ಕರ್ನಾಟಕ ಪ್ರಗತಿರಂಗ’ವನ್ನು ಸ್ಥಾಪಿಸಿದರು. ಆದರೆ ಈ ಯಾವ ಪ್ರಾದೇಶಿಕ ಪಕ್ಷಗಳೂ ಬಲಶಾಲಿಯಾಗಿ ಬೇರೂರಲೇ ಇಲ್ಲ. ಸಂಘಟನೆಯ ಕೊರತೆ, ನಾಯಕರ ಹೊಂದಾಣಿಕೆಯ ಸಮಸ್ಯೆಗಳು ರಾಜಕೀಯ ಪಕ್ಷಗಳ ಬೆಳವಣಿಗೆಗೆ ಅಡ್ಡಿಯಾದವು.

ಇದನ್ನೂ ಓದಿರಿ: ಕರ್ನಾಟಕಕ್ಕೆ ಕ್ರೈಸ್ತರು ಕೊಟ್ಟ ಕೊಡುಗೆಗಳ ಮರೆಯಲಾದೀತೆ? (ಭಾಗ- 2)

ಚಿಂತಕ ಎಂ.ಚಿದಾನಂದಮೂರ್ತಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತು ಕನ್ನಡ ಶಕ್ತಿ ಕೇಂದ್ರ. ಕನ್ನಡ ಚಳವಳಿಯಿಂದ ಸಾಹಿತಿಗಳು ದೂರವೇ ಉಳಿಯುತ್ತಿದ್ದ ಸಂದರ್ಭದಲ್ಲಿ ಚಿದಾನಂದಮೂರ್ತಿ ಯಾವ ಅಳುಕೂ ಇಲ್ಲದೆ ತಮ್ಮನ್ನು ತಾವು ಕನ್ನಡ ಹೋರಾಟಗಾರರಾಗಿ ಗುರುತಿಸಿಕೊಂಡರು. ಇದಾದ ನಂತರ ಸಾಹಿತಿಗಳು ಮಡಿವಂತಿಕೆ ಬಿಟ್ಟು ಚಳವಳಿಯಲ್ಲಿ ತೊಡಗಿಕೊಳ್ಳಲು ಆರಂಭಿಸಿದರು.

1983ರ ಸೆಪ್ಟೆಂಬರ್ ತಿಂಗಳಿನಲ್ಲಿ ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಬೆಂಗಳೂರಿನಲ್ಲಿ ಉದ್ಘಾಟನೆಯಾಗಿತ್ತು. ಅದರ ಅಧ್ಯಕ್ಷರಾಗಿ ಸಾ.ರಾ.ಗೋವಿಂದು ನೇಮಕಗೊಂಡಿದ್ದರು. ಟಿ.ವೆಂಕಟೇಶ್ (ಈಗ ಅಭಿಮಾನಿ ಪ್ರಕಾಶನ, ಈ ಸಂಜೆ ಪತ್ರಿಕೆಯ ಮಾಲೀಕರು) ಪ್ರಧಾನಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದರು. ಅಭಿಮಾನಿ ಸಂಘ ವ್ಯಾಪಕವಾಗಿ ಬೆಳೆಯಿತು. ಮುಖ್ಯವಾಗಿ ಇದು ಅಭಿಮಾನಿ ಸಂಘವಾದ್ದರಿಂದ ಚಿತ್ರರಂಗಕ್ಕೆ ಸಂಬಂಧಪಟ್ಟ ಚಳವಳಿಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಂಡಿತು. ಅದರ ಜೊತೆಜೊತೆಗೆ ಇತರ ಕನ್ನಡದ ಸಮಸ್ಯೆಗಳ ಕುರಿತೂ ಧ್ವನಿ ಎತ್ತಿತು. ಮಿಕ್ಕಂತೆ ಕನ್ನಡ ರಾಜ್ಯೋತ್ಸವದಂಥ ಆಚರಣೆಗಳನ್ನು ಈ ಸಂಘಟನೆ ನಡೆಸಿಕೊಂಡು ಬಂದಿತ್ತು.

ಕರ್ನಾಟಕ ಸರ್ಕಾರದ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಕನ್ನಡ ಪರೀಕ್ಷೆ ಕಡ್ಡಾಯವಾಗಿರಲಿಲ್ಲ. ಇದರ ವಿರುದ್ಧ ಡಾ.ರಾಜಕುಮಾರ್ ಅಭಿಮಾನಿ ಸಂಘ ದೊಡ್ಡಮಟ್ಟದಲ್ಲಿ ಚಳವಳಿ ನಡೆಸಿ ಸರ್ಕಾರವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಹಾಗೆಯೇ ರೈಲ್ವೆ ಮತ್ತು ಅಚ್ಚುಗಾಲಿ ಕಾರ್ಖಾನೆಯನ್ನು ಕರ್ನಾಟಕಕ್ಕೆ ತರುವಲ್ಲಿ ಅಭಿಮಾನಿ ಸಂಘ ನಡೆಸಿದ ಹೋರಾಟವನ್ನು ಮರೆಯುವಂತಿಲ್ಲ.

ವಾಟಾಳ್ ನಾಗರಾಜ್, ಜಿ.ನಾರಾಯಣ ಕುಮಾರ್ ರಾಜಕೀಯವಾಗಿಯೂ ಮುನ್ನೆಲೆಗೆ ಬಂದರು. ವಾಟಾಳ್ ನಾಗರಾಜ್ ಕರ್ನಾಟಕ ವಿಧಾನಸಭೆಯ ಶಾಸಕರಾದರು. ಅವರ ಹೋರಾಟದ ಬದುಕಿನಲ್ಲಿ ಎರಡು ಭಾಗಗಳನ್ನು ಗಮನಿಸಬಹುದು. ಮೊದಲ ಭಾಗವಾಗಿ ಅವರು ನಡೆಸಿದ ತೀವ್ರತರವಾದ ಕನ್ನಡ ಹೋರಾಟಗಳು. ಈ ಹಂತದಲ್ಲಿ ಕನ್ನಡ ಚಳವಳಿಗೆ ಅವರ ಕೊಡುಗೆ ಅಪಾರ. ಆದರೆ ನಂತರದ ದಿನಗಳಲ್ಲಿ ಅವರದು ಏಕವ್ಯಕ್ತಿ ಹೋರಾಟ. ಹೋರಾಟಗಳಿಗೆ ಅವರು ವಿಡಂಬನೆಯನ್ನು ತಂದರು. ಕತ್ತೆ, ಕುದುರೆಗಳನ್ನು ತಂದು ಪ್ರತಿಭಟಿಸಿದರು. ಅವರ ಹೋರಾಟಗಳು ಮೈಸೂರು ಬ್ಯಾಂಕ್ ಚೌಕಕ್ಕೆ ಸೀಮಿತವಾಗಿ ಹೋಯಿತು. ನಿಧಾನವಾಗಿ ಅವರು ತಮ್ಮ ರಾಜಕೀಯ ಹಿಡಿತವನ್ನೂ ಕಳೆದುಕೊಂಡರು. ಯಾವ ಕ್ಷೇತ್ರದಲ್ಲಿ ಅವರು ಸತತ ಜಯ ಸಾಧಿಸುತ್ತಿದ್ದರೋ ಅಲ್ಲೇ ಠೇವಣಿ ಕಳೆದುಕೊಂಡರು. ನಂತರ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದರೂ ಅವರು ಗೆಲುವಿನ ಹಾದಿ ಹಿಡಿಯಲಿಲ್ಲ. ಅದೇನೇ ಇದ್ದರೂ ವಾಟಾಳ್ ನಾಗರಾಜ್ ಕನ್ನಡ ಚಳವಳಿಗೆ ಹೊಸ ಕಿಚ್ಚು, ಉತ್ಸಾಹ, ತೀವ್ರತೆಯನ್ನು ತಂದುಕೊಟ್ಟ ಅಪರೂಪದ ನಾಯಕ ಎಂಬುದರಲ್ಲಿ ಸಂಶಯವಿಲ್ಲ.

ತೊಂಭತ್ತರ ದಶಕದಲ್ಲಿ ಕನ್ನಡ ಚಳವಳಿ ಮಾತ್ರವಲ್ಲದೆ ಎಲ್ಲ ಚಳವಳಿಗಳ ದಿಕ್ಕು ಧೋರಣೆಗಳೇ ಬದಲಾದವು. ಉದಾರೀಕರಣ, ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ದೇಶದ ಸಮಾಜೋ ಆರ್ಥಿಕ ಸ್ಥಿತಿಗತಿಗಳೇ ಬದಲಾದವು. ಅದರ ಪರಿಣಾಮಗಳು ಚಳವಳಿಗಳ ಮೇಲೂ ಬಿದ್ದವು. ಹತ್ತು ಹಲವು ಸಂಘಟನೆಗಳು ಆರಂಭಗೊಂಡವು. 80ರ ದಶಕದಲ್ಲಿ ಕರ್ನಾಟಕದ ರಾಜಕೀಯವನ್ನೇ ಬದಲಾಯಿಸುವಷ್ಟು ಶಕ್ತಿ ಹೊಂದಿದ್ದ ರೈತ ಮತ್ತು ದಲಿತ ಸಂಘಟನೆಗಳು ಒಳಗಿಂದೊಳಗೇ ವಿಘಟನೆಗೊಳ್ಳುತ್ತ, ನಿಧಾನವಾಗಿ ಶಕ್ತಿ ಕಳೆದುಕೊಳ್ಳುತ್ತ ಸಾಗಿದ್ದವು. ಈ ಸಂದರ್ಭದಲ್ಲಿ ದೊಡ್ಡ ಆಶಾವಾದ ಮೂಡಿಸಿದ್ದು ಕರ್ನಾಟಕ ವಿಮೋಚನಾ ರಂಗ. 1989ರ ನವೆಂಬರ್ ನಲ್ಲಿ ಕವಿರಂ ಉದ್ಘಾಟನೆಯಾಗಿತ್ತು. ‘ಸಂಯುಕ್ತ ಭಾರತದಲ್ಲಿ ಸ್ವತಂತ್ರ ಕರ್ನಾಟಕ’ ಅದರ ಘೋಷಣೆಯಾಗಿತ್ತು. ಬಂಜಗೆರೆ ಜಯಪ್ರಕಾಶ್ ನೇತೃತ್ವ ವಹಿಸಿದ್ದರು. ಹೊಸತಲೆಮಾರಿನ ಯುವ ಸಮುದಾಯವನ್ನು ಸಂಘಟನೆ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಪ್ರಖರ ಚಿಂತಕರು, ಅಧ್ಯಾಪಕರು, ಸಾಹಿತಿಗಳು ಕವಿರಂ ಭಾಗವಾಗಿದ್ದರು. ರಟ್ಟಹಳಿ ಮತ್ತು ಕೈಗಾ ಅಣು ಸ್ಥಾವರ ವಿರೋಧಿ ಹೋರಾಟ, ಸಾತನೂರಿನ ಬಳಿ ಜಪಾನ್ ಟೌನ್‌ಶಿಪ್ ನಿರ್ಮಾಣ ವಿರೋಧಿ ಹೋರಾಟ, ತುಂಗಾಮೂಲದ ಗಂಗಡಿಕಲ್ಲು ಗಣಿಗಾರಿಕೆ ವಿರುದ್ಧ ಹೋರಾಟ, ತುಂಗಾ ತೀರದ ಪರಿಸರ ರಕ್ಷಣೆಗಾಗಿ ನಡೆಸಿದ ಹೋರಾಟ, ಬೀದರ್‌ನ ಕೊಳಾಲ ಔಷಧೀಯ ಕೈಗಾರಿಕಾ ಮಾಲಿನ್ಯ ವಿರೋಧಿ ಹೋರಾಟ ಕವಿರಂ ಆರಂಭದ ದಿನಗಳಲ್ಲಿ ಆಯ್ದುಕೊಂಡ ಜನಪರವಾದ ಹೋರಾಟಗಳಾಗಿದ್ದವು. ಕವಿರಂ ಆಗಷ್ಟೇ ಆರಂಭಗೊಂಡಿದ್ದ ಜಾಗತೀಕರಣವನ್ನು ತೀವ್ರವಾಗಿ ವಿರೋಧಿಸಿತು.

ಇದನ್ನೂ ಓದಿರಿ: ‘ಕಲ್ಯಾಣ ಕರ್ನಾಟಕ’ ಕಲ್ಯಾಣವಾಯಿತೆ?

ಚಳವಳಿ ಬೆಳೆಯುತ್ತಿದ್ದಂತೆ ಅದರ ಒಂದು ಭಾಗ ನಕ್ಸಲ್ ಚಳವಳಿಯ ಕಡೆ ಆಕರ್ಷಿತವಾಯಿತು. ಬಂಜಗೆರೆ ಜಯಪ್ರಕಾಶ್ ಅವರಿಗೆ ಇದು ಸರಿಕಾಣಲಿಲ್ಲ. ಅವರ ಆರೋಗ್ಯವೂ ಕೈಕೊಟ್ಟಿತು. ಹೀಗಾಗಿ ಅವರು ಸಂಘಟನೆಯಿಂದಲೇ ಹೊರಬಂದರು. ಕರ್ನಾಟಕ ವಿಮೋಚನಾ ರಂಗ ಸಂಪೂರ್ಣವಾಗಿ ಸ್ಥಗಿತವೇ ಆಯಿತು. ಅದರಲ್ಲಿದ್ದ ಕೆಲವು ನಾಯಕರು ನಕ್ಸಲ್ ಚಳವಳಿಯ ಭಾಗವಾದರು. ನಕ್ಸಲ್ ಚಳವಳಿಯ ಒಳಗೆ ಹೋದ ಹಲವರು ಪೊಲೀಸರ ಗುಂಡಿಗೆ ಆಹುತಿಯಾದರು. ಮತ್ತೆ ಕೆಲವರು ಅದರೊಂದಿಗೆ ಭಿನ್ನಾಭಿಪ್ರಾಯ ತಳೆದು ಅಹಿಂಸಾತ್ಮಕ ಚಳವಳಿಯಲ್ಲಿ ಮುಂದುವರೆದರು.

(ಮುಂದುವರಿಯುತ್ತದೆ…)

(ಈದಿನ ಡಾಟ್ ಕಾಮ್ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

dinoo
ದಿನೇಶ್‌ ಕುಮಾರ್ ಎಸ್‌.ಸಿ.
+ posts

ದಿನೂ ಎಂದೇ ಪರಿಚಿತರಾದ ದಿನೇಶ್ ಕುಮಾರ್ ಎಸ್ ಸಿ ಮೂಲತಃ ಸಕಲೇಶಪುರದವರು. ಸಾಮಾಜಿಕ ಕಾಳಜಿ ಬೆರೆತ ಪತ್ರಿಕೋದ್ಯಮವನ್ನು ಮಾಡುತ್ತಾ, ಬಹಳ ಚಿಕ್ಕ ವಯಸ್ಸಿನಲ್ಲಿಯೇ ಇಂದು ಸಂಜೆ ಎಂಬ ಸಂಜೆ ಪತ್ರಿಕೆಯ ಸಂಪಾದಕರಾಗಿ ಹೆಸರು ಮಾಡಿದರು. ನಂತರ ಕರವೇ ನಲ್ನುಡಿಯ ಸಂಪಾದಕರಾಗಿ, ಕನ್ನಡ ಚಳವಳಿಯ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡರು. ತಮ್ಮ ಚುರುಕಾದ ತೀಕ್ಷ್ಣ ಬರಹಗಳಿಂದ ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಿದ್ಧರಾದ ಅವರು, ಕನ್ನಡ ಚಳವಳಿಯೊಳಗೆ ಸಾಮಾಜಿಕ ನ್ಯಾಯದ ಮತ್ತು ಬ್ರಾಹ್ಮಣಶಾಹಿ ವಿರುದ್ಧದ ಆಲೋಚನೆಗಳನ್ನೂ ಪಸರಿಸಿದವರಲ್ಲಿ ಪ್ರಮುಖರು. ಸದ್ಯ ಕನ್ನಡ ಪ್ಲಾನೆಟ್ ವೆಬ್‌ಸೈಟ್‌ನ ಪ್ರಧಾನ ಸಂಪಾದಕರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ದಿನೇಶ್‌ ಕುಮಾರ್ ಎಸ್‌.ಸಿ.
ದಿನೇಶ್‌ ಕುಮಾರ್ ಎಸ್‌.ಸಿ.
ದಿನೂ ಎಂದೇ ಪರಿಚಿತರಾದ ದಿನೇಶ್ ಕುಮಾರ್ ಎಸ್ ಸಿ ಮೂಲತಃ ಸಕಲೇಶಪುರದವರು. ಸಾಮಾಜಿಕ ಕಾಳಜಿ ಬೆರೆತ ಪತ್ರಿಕೋದ್ಯಮವನ್ನು ಮಾಡುತ್ತಾ, ಬಹಳ ಚಿಕ್ಕ ವಯಸ್ಸಿನಲ್ಲಿಯೇ ಇಂದು ಸಂಜೆ ಎಂಬ ಸಂಜೆ ಪತ್ರಿಕೆಯ ಸಂಪಾದಕರಾಗಿ ಹೆಸರು ಮಾಡಿದರು. ನಂತರ ಕರವೇ ನಲ್ನುಡಿಯ ಸಂಪಾದಕರಾಗಿ, ಕನ್ನಡ ಚಳವಳಿಯ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡರು. ತಮ್ಮ ಚುರುಕಾದ ತೀಕ್ಷ್ಣ ಬರಹಗಳಿಂದ ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಿದ್ಧರಾದ ಅವರು, ಕನ್ನಡ ಚಳವಳಿಯೊಳಗೆ ಸಾಮಾಜಿಕ ನ್ಯಾಯದ ಮತ್ತು ಬ್ರಾಹ್ಮಣಶಾಹಿ ವಿರುದ್ಧದ ಆಲೋಚನೆಗಳನ್ನೂ ಪಸರಿಸಿದವರಲ್ಲಿ ಪ್ರಮುಖರು. ಸದ್ಯ ಕನ್ನಡ ಪ್ಲಾನೆಟ್ ವೆಬ್‌ಸೈಟ್‌ನ ಪ್ರಧಾನ ಸಂಪಾದಕರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...