ಏಕೀಕರಣವು ಲೇಖಕರು, ರಾಜಕಾರಣಿಗಳು, ವ್ಯಾಪಾರಿಸಂಘಗಳು, ಕನ್ನಡ ಸಂಘಟನೆಗಳು, ಸಂಸ್ಥೆಗಳು, ವಿದ್ಯಾರ್ಥಿಗಳು, ಪತ್ರಿಕೆಗಳು, ಜಾತಿಸಮುದಾಯಗಳು ಭಾಗವಹಿಸಿದ ಒಂದು ಸಾಮೂಹಿಕ ಹೋರಾಟ. ಅದು ಸಮಾನಮನಸ್ಕ ಶಕ್ತಿಗಳಿಂದ ಮಾತ್ರವಲ್ಲದೆ, ಪರಸ್ಪರ ವಿರುದ್ಧವಾದ ಹಿತಾಸಕ್ತಿಯುಳ್ಳ ಚಾರಿತ್ರಿಕ ಶಕ್ತಿಗಳಿಂದ ರೂಪುಗೊಂಡ ವಿದ್ಯಮಾನವೂ ಆಗಿತ್ತು. ಈ ವೈರುಧ್ಯದ ಕೆಲವು ಅಂಶಗಳು, ನಂತರ ಸಂಭವಿಸಿದ ಬೆಳವಣಿಗೆಗಳ ಜತೆ ಸೇರಿಕೊಂಡು, ಕರ್ನಾಟಕದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ನೆಲೆಗಳನ್ನು ರೂಪಿಸಿದವು. ಈ ನೆಲೆಗಳು ಒಂದಾದ ಮೇಲೆ ಒಂದು ಬರಲಿಲ್ಲ. ಒಟ್ಟೊಟ್ಟಿಗೇ ಕೂಡ ಸಂಭವಿಸಿದವು. ಪ್ರಭುತ್ವೀಕರಣ, ಧಾರ್ಮೀಕರಣ, ಮತೀಕರಣ, ಕೇಂದ್ರೀಕರಣ, ಖಾಸಗೀಕರಣ, ಅಸ್ಮಿತೀಕರಣ, ಏಕರೂಪೀಕರಣ, ಸಂವಿಧಾನೀಕರಣದ ನೆಲೆಗಳು ಎಂದು ಅವುಗಳನ್ನು ಗುರುತಿಸಬಹುದು.
ಪ್ರಭುತ್ವೀಕರಣ
ಏಕೀಕರಣವು ರಾಜಪ್ರಭುತ್ವಗಳು ಕಳೆದುಹೋಗಿ ಭಾರತ ಸ್ವತಂತ್ರವಾಗಬೇಕು ಹಾಗೂ ನಾಡಿನ ಏಕೀಕರಣ ಆಗಬೇಕು ಎಂಬ ಎರಡೂ ಸ್ತರಗಳಿಂದ ಕೂಡಿದ ಚಳವಳಿಯಾಗಿತ್ತು. ಇದರಲ್ಲಿ ರಾಜಪ್ರಭುತ್ವ ಮತ್ತು ವಸಾಹತುಶಾಹಿ ಆಳ್ವಿಕೆಗಳನ್ನು ಮೀರಿದ ಪ್ರಜಾಸತ್ತಾತ್ಮಕ ಆಶಯಗಳಿದ್ದವು. ಏಕೀಕರಣದಲ್ಲಿ ರಾಜಸಂಸ್ಥಾನಗಳನ್ನು ಅದರಲ್ಲೂ ಉತ್ತರ ಕರ್ನಾಟಕದ ಮರಾಠಿ ಸಂಸ್ಥಾನಗಳನ್ನು ವಿರೋಧಿಸುವ ಚಳವಳಿಯ ಪಾತ್ರ ಪ್ರಮುಖವಾಗಿತ್ತು. ಆದರೆ ಇದರ ಒಡಲಲ್ಲಿ ಹಳಗಾಲದ ರಾಜಪ್ರಭುತ್ವದ ಭಾವನಾತ್ಮಕ ನೆನಪುಗಳಿದ್ದವು. ಆಲೂರ ವೆಂಕಟರಾಯರಿಗೆ ಗತಕಾಲದ ವಿಜಯನಗರ ಸಾಮ್ರಾಜ್ಯವೇ ಕರ್ಣಾಟಕ ಸಾಮ್ರಾಜ್ಯವಾಗಿದ್ದು, ಅದನ್ನು ಮರಳಿ ಸ್ಥಾಪಿಸುವುದು ಏಕೀಕರಣದ ಗುರಿಯಾಗಿತ್ತು. ಈ ಸಾಮ್ರಾಜ್ಯ ಸ್ಥಾಪಿಸುವಲ್ಲಿ ಹಕ್ಕಬುಕ್ಕರಿಗೆ ವಿದ್ಯಾರಣ್ಯರು ಮಾರ್ಗದರ್ಶನ ಮಾಡಿದಂತೆ, ನವ ಕರ್ನಾಟಕ ಕಟ್ಟುವಲ್ಲಿ ತಾವೂ ರಾಜಗುರುವಿನ ಪಾತ್ರವಹಿಸಬೇಕೆಂದು ಅವರು ನಂಬಿದ್ದರು. ಹಂಪಿಯಲ್ಲಿ ವಿಜಯನಗರ ಸ್ಥಾಪನೆಯಾದ 600ನೇ ವರ್ಷದ ದಿನಾಚರಣೆಯಲ್ಲಿ (1936) ಏಕೀಕರಣದ ಸಂಕಲ್ಪವನ್ನು ತೊಡಲಾಯಿತು. ಇದಕ್ಕೆ ಪೂರಕವಾಗಿ ಕನ್ನಡ ಚಲನಚಿತ್ರಗಳು ಶ್ರೀಕೃಷ್ಣದೇವರಾಯ, ಮಯೂರಶರ್ಮ, ಪುಲಿಕೇಶಿ ಮೊದಲಾಗಿ ರಾಜರನ್ನು ಕನ್ನಡತನದ ಅಸ್ಮಿತೆಯೆಂಬಂತೆ ಬಿಂಬಿಸಿದವು. ಈಗಲೂ ಕರ್ನಾಟಕ ರಾಜ್ಯೋತ್ಸವದಲ್ಲಿ ಗತಕಾಲದ ದೊರೆಗಳ ಸ್ಮರಣೆಯ ಎಳೆಯೊಂದು ಹಿಂಬಾಲಿಸುತ್ತಲೇ ಇದೆ.

ಇದರಲ್ಲಿ ಮೈಸೂರು ಅರಸರ ಕೊಡುಗೆ ಮತ್ತು ತೊಡಕಿನ ಎಳೆಯು ವಿಶಿಷ್ಟವಾಗಿದೆ. ಮರಾಠಿಗರ ದಬ್ಬಾಳಿಕೆ ವಿರುದ್ಧ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಲು ರಾ. ಹ. ದೇಶಪಾಂಡೆಯವರಿಗೆ ಧನಸಹಾಯ ಮಾಡಿದವರು, ಸದರಿ ಕಟ್ಟಡ ಉದ್ಘಾಟಿಸಿದವರು ಚಾಮರಾಜ ಒಡೆಯರ್. ಏಕೀಕರಣದಲ್ಲಿ ಕೈಜೋಡಿಸಿದ ಮೈಸೂರರಸರ ಕಾಲದಲ್ಲಿ ಮಂತ್ರಿಯಾಗಿದ್ದ ಜಗಳೂರ ಇಮಾಂ ಹಾಗೂ ರಾಜಸೇವಾಸಕ್ತ ಬಿಎಂಶ್ರೀಯವರು ರಾಜಭಕ್ತಿಯ ನೆಲೆಯವರೇ ಆಗಿದ್ದರು. ಆದರೆ ಸ್ವತಂತ್ರ ಭಾರತದಲ್ಲಿ ಮೈಸೂರನ್ನು ವಿಲೀನಗೊಳಿಸಲು ಒಡೆಯರ್ ಅವರು ಹಿಂದೇಟು ಹಾಕಿದರು. ಆಗ ಮೈಸೂರು ಚಲೋ ಚಳವಳಿ ನಡೆಯಬೇಕಾಯಿತು. ಏಕೀಕರಣಗೊಂಡ ಬಳಿಕ ಮೈಸೂರು ಒಡೆಯರ್ ರಾಜ್ಯಪಾಲರಾಗಿ ಮರಳಿ ಬಂದರು. ರಾಜ ಮನೆತನದವರು ಚುನಾವಣೆಗಳಲ್ಲಿ ವಂಶದ ಪ್ರಭಾವಳಿಯ ಆಧಾರದಲ್ಲಿ ಶಾಸಕ-ಸಂಸದರಾಗಿ ಚುನಾಯಿತರಾದರು. ಏಕೀಕರಣಗೊಂಡ ಕರ್ನಾಟಕದಿಂದ ಶಾಸಕರಾಗಿ ಸಂಸದರಾಗಿ ಕೆಲಸ ಮಾಡಿದ ಜಗಳೂರ ಇಮಾಮರು, ಮೈಸೂರು ರಾಜ್ಯದ ಆಳ್ವಿಕೆಯೇ ಉತ್ತಮವಾಗಿತ್ತು ಎಂಬ ನಂಬಿಕೆಯವರಾಗಿದ್ದರು. ಹೀಗಾಗಿ ಕರ್ನಾಟಕವು ಸ್ವತಂತ್ರ ಭಾರತದ ರಾಜ್ಯವಾಗಿ, ಸಂವಿಧಾನದಡಿ ತನ್ನ ಬಾಳನ್ನು ಆರಂಭಿಸಿದರೂ, ಅದರೊಳಗಿರುವ ರಾಜಪ್ರಭುತ್ವೀಕರಣ ಮತ್ತು ಊಳಿಗಮಾನ್ಯ ಮೌಲ್ಯಗಳನ್ನು ಸಂಪೂರ್ಣ ಕಳೆದುಕೊಳ್ಳಲಿಲ್ಲ. ಆದರೆ ದಲಿತ, ರೈತ, ಕಾರ್ಮಿಕ ಚಳವಳಿಗಳು ಕರ್ನಾಟಕದ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ವರೂಪವನ್ನು ಬದಲಿಸಲು ಯತ್ನಿಸಿದವು. ಈ ಚಳವಳಿಗಳು ತಮ್ಮ ಪೂರ್ವಪರಂಪರೆಯಾಗಿ ಟಿಪ್ಪು, ಶಾಹುಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರನ್ನು ಸ್ಮರಿಸುತ್ತವೆ.
ಇದೇ ಕಾಲಕ್ಕೆ ವಂಶಪರಂಪರೆಯ ರಾಜರನ್ನು ಮೀರಿಸುವಂತೆ ಭೂಮಾಲೀಕರು, ಗಣಿಮಾಲೀಕರು, ವ್ಯಾಪಾರಿಗಳು, ಉದ್ಯಮಿಗಳು ಹೊಸದೊರೆಗಳಾಗಿ ಸಂಸದರೂ ಶಾಸಕರೂ ಆದರು. ಕೆಲವು ‘ಗಣಿಧಣಿ’ಗಳು ತಮ್ಮನ್ನು ವಿಜಯನಗರದ ದೊರೆಗಳ ಪ್ರತಿರೂಪವೆಂದೂ ಭಾವಿಸಿದ್ದರು. ಹಂಪಿ, ಮೈಸೂರು, ಕಿತ್ತೂರು, ನವರಸಪುರದ ಉತ್ಸವಗಳು ಜನೋತ್ಸವವಾದರೂ, ಪರೋಕ್ಷವಾಗಿ ರಾಜಪ್ರಭುತ್ವದ ಸ್ಮೃತಿಗಳನ್ನು ಧಾರಣೆ ಮಾಡಿದವು. ಆಧುನಿಕ ರಾಜಕಾರಣವು ಎಷ್ಟೇ -ಪ್ರಜಾಪ್ರಭುತ್ವ ಪದ್ಧತಿಯದಾಗಿದ್ದರೂ, ತಾವೇ ಆರಿಸಿದ ಶಾಸಕ-ಸಂಸದ-ಮಂತ್ರಿಗಳನ್ನು ತಮ್ಮ ಸೇವೆಗಾರರು ಎಂದು ನೋಡುವುದಕ್ಕಿಂತ, ತಮ್ಮ ಹೊಸದೊರೆಗಳು ಎಂದು ಕಾಣುವ ಭಾವವು ಭಾರತೀಯ ಮತದಾರರಲ್ಲಿ ಗಾಢವಾಗಿದೆ. ಬ್ರಿಟಿಷ್ ಅಧಿಕಾರಿಗಳನ್ನು ಬಿಳಿಯದೊರೆಗಳೆಂದೂ ಕರೆಯುವ ವಾಡಿಕೆಯಿತ್ತು. ಜನ ತಮಗೆ ಬೇಡವಾದ ರಾಜಕಾರಣಿಗಳನ್ನು ಸೋಲಿಸುತ್ತಾರೆ. ಜತೆಗೆ ಪ್ರಜಾಪ್ರಭುತ್ವದ ಮೂಲಕ ಮೂಡುವ ಜನ ನಾಯಕರನ್ನು ಸರ್ವಾಧಿಕಾರಿಗಳಾಗಿ ಬೆಳೆಯುವುದಕ್ಕೂ ಅವಕಾಶ ಕಲ್ಪಿಸುತ್ತಾರೆ. ರಾಜರ ಪ್ರಜಾತಾಂತ್ರೀಕರಣ ಮತ್ತು ಪ್ರಜಾಪ್ರಭುತ್ವದ ರಾಜಪ್ರಭುತ್ವೀಕರಣ ಎರಡೂ ಸಂಭವಿಸುತ್ತವೆ.
ಇದನ್ನೂ ಓದಿರಿ: ಐದು ದಶಕಗಳ ಕರ್ನಾಟಕ ರಾಜಕಾರಣ: ಗಳಿಸಿದ್ದನ್ನು ಕಳೆದುಕೊಂಡ ಕಾಲ!
ಧಾರ್ಮಿಕರಣ
ಏಕೀಕರಣಗೊಳ್ಳಲಿರುವ ನಾಡಿನಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನರು, ಪಾರಸಿಕ, ಜೈನರು ಒಟ್ಟಿಗೆ ವಾಸಿಸುವ, ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂದು ಕರ್ನಾಟಕದ ನಾಡಗೀತೆ ಆಶಿಸಿತ್ತು. ಕುವೆಂಪು, ಶಂಬಾ, ಕಾರಂತ ಮೊದಲಾದ ಪ್ರಖರ ವಿಚಾರವಾದಿಗಳು ಹುಟ್ಟಲಿರುವ ಕರ್ನಾಟಕಕ್ಕೆ ಬೇಕಾದ ವೈಚಾರಿಕ ನೆಲೆಯ ಬುನಾದಿ ಒದಗಿಸಿದರು. ಈ ಪರಂಪರೆಯನ್ನು ಶಾಂತವೇರಿ ಗೋಪಾಲಗೌಡ ಮೊದಲಾದ ಚಿಂತನಶೀಲ ರಾಜಕಾರಣಿಗಳು ಮುಂದುವರೆಸಿದರು. ಕರ್ನಾಟಕ ಸರ್ಕಾರವು ಸಂಸ್ಕೃತಿ ಇಲಾಖೆಯಿಂದ ಹಳಗನ್ನಡ ಪಠ್ಯಗಳನ್ನು ಕಡಿಮೆ ಬೆಲೆಗೆ ಮುದ್ರಿಸಿ ಹಂಚುವುದನ್ನು ಟೀಕಿಸುವ ಶಾಂತವೇರಿಯವರ ಭಾಷಣ ಈ ಹಿನ್ನೆಲೆಯಿಂದ ಗಮನಾರ್ಹ. ಆದರೆ ಏಕೀಕರಣ ಮತ್ತು ಏಕೀಕರಣೋತ್ತರ ಕಾಲದಲ್ಲಿ ಕರ್ನಾಟಕಕ್ಕೆ ಧಾರ್ಮಿಕ ಆಯಾಮ ಕೊಡುವ ಶಕ್ತಿಗಳೂ ನಿರತವಾಗಿದ್ದವು. ಆಲೂರ ವೆಂಕಟರಾಯರು ಕರ್ನಾಟಕವು ಬ್ರಾಹ್ಮಣವಾದಿ ಮೌಲ್ಯಗಳ ಬುನಾದಿಯಲ್ಲಿ ರೂಪುಗೊಳ್ಳಬೇಕೆಂದು ಬಯಸಿದರು. ಅವರಿಗೆ ಏಕೀಕರಣದ ಸ್ಫೂರ್ತಿ ಹಂಪಿಯ ಭುವನೇಶ್ವರಿ. ದೊಡ್ಡಮೇಟಿ ಅಂದಾನಪ್ಪವರು ಆರಾಧಿಸುತ್ತಿದ್ದ ಭುವನೇಶ್ವರಿ ದೇವಿಯ ಪಟವು ಇದರ ಮುಂದುವರಿಕೆಯಾಗಿತ್ತು. ನಿಸಾರರ ‘ನಿತ್ಯೋತ್ಸವ’ ಗೀತೆಯ ರಚನೆಯಲ್ಲೂ, ಸದ್ಯದ ಕರ್ನಾಟಕ ಸರ್ಕಾರ ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಯಲ್ಲೂ ಇದರ ಛಾಯೆಗಳಿವೆ. ಕನ್ನಡ ಸಂಘಟನೆಗಳು ನಡೆಸುವ ರಾಜ್ಯೋತ್ಸವದ ಕಾರ್ಯಕ್ರಮಗಳು, ಕನ್ನಡ ಸಾಹಿತ್ಯದ ತಿರುಳಾದ ವೈಚಾರಿಕ ಚಿಂತನೆಗಿಂತ ಹೆಚ್ಚಾಗಿ ‘ಧಾರ್ಮಿಕ’ ಆಚರಣೆಗಳಿಂದ ಕೂಡಿರುವುದನ್ನು ಗಮನಿಸಬೇಕು.
ಮತೀಕರಣ
ಈ ಧಾರ್ಮಿಕತೆಯಲ್ಲಿ ಮತೀಯ ಎನ್ನಬಹುದಾದ ಒಂದು ಆಯಾಮವೂ ಇತ್ತು. ಕರ್ನಾಟಕದ ಮುಸ್ಲಿಮರು ಬ್ಯಾರಿ, ಕೊಂಕಣಿ, ಕನ್ನಡ, ಉರ್ದು ಮನೆಮಾತಿನವರು. ಏಕೀಕರಣ ಚಳವಳಿಯಲ್ಲಿ ಹುತಾತ್ಮರಾದ ಬಳ್ಳಾರಿಯ ರಂಜಾನ್‌ಸಾಬ್ ಕನ್ನಡ ಮನೆಮಾತಿನವರು. ಇದು ಚಳವಳಿ ಪಡೆದಿದ್ದ ಧರ್ಮಾತೀತ ಸ್ವರೂಪವನ್ನು ಸೂಚಿಸುತ್ತದೆ. ಆದರೆ ಚಳವಳಿಯ ಚಾರಿತ್ರಿಕ ಗ್ರಹಿಕೆಯಲ್ಲಿ ಮುಸ್ಲಿಮರ ಮತ್ತು ಉರ್ದುವಿನ ಬಗ್ಗೆ ಆಗ್ರಹದ ಎಳೆಯೊಂದು ಸೇರಿಕೊಂಡಿತ್ತು. ಕರ್ನಾಟಕದಿಂದ ಆಳಿಕೆ ಮಾಡಿದ ಸುಲ್ತಾನರನ್ನು ಹೊರಗಿನವರು, ಆಕ್ರಮಣಕಾರರು ಎಂದು ಆಲೂರರು ಪರಿಭಾವಿಸಿದ್ದರು. ಅವರ ಕರ್ನಾಟಕತ್ವದ ಪರಿಕಲ್ಪನೆಯಲ್ಲಿ ಗಾಂಧೀಜಿಯವರ ಸ್ವರಾಜ್ಯದ ಮತ್ತು ಸಾವರ್ಕರರ ಹಿಂದುತ್ವದ ಪ್ರಭಾವಗಳು ಮಿಳಿತವಾಗಿದ್ದವು. ಅವರ ‘ಕರ್ನಾಟಕ ವೀರರತ್ನಗಳು’ ಕೃತಿಯಲ್ಲಿ ಟಿಪ್ಪುವಿನ ಪ್ರಸ್ತಾಪವಿಲ್ಲ. ನಾಡಗೀತೆಯನ್ನು ಪರಿಷ್ಕರಿಸುವಾಗ ಕುವೆಂಪು ಕರಡುಪ್ರತಿಯಲ್ಲಿದ್ದ ಟಿಪ್ಪುಹೈದರರನ್ನು ಕೈಬಿಟ್ಟಿದ್ದನ್ನು ಇಲ್ಲಿ ಸ್ಮರಿಸಬೇಕು. ಹೀಗಾಗಿಯೇ ಹೈದರಾಬಾದ್ ನಿಜಾಮರ ಆಳಿಕೆಯಲ್ಲಿದ್ದ ಕನ್ನಡ ಪ್ರದೇಶಗಳ ಏಕೀಕರಣ ಚಳವಳಿಗೆ ಸುಲಭವಾಗಿ ಮತೀಯ ಆಯಾಮ ದೊರಕಿತು. ಕನ್ನಡತ್ವದ ಪರಿಕಲ್ಪನೆಯು ಕಾವೇರಿ ವಿಷಯದಲ್ಲಿ ತಮಿಳರನ್ನು, ಗಡಿವಿವಾದದಲ್ಲಿ ಮರಾಠಿಗರನ್ನು, ಕನ್ನಡದ ವಿಷಯದಲ್ಲಿ ಉರ್ದು ಮಾತಾಡುವವರನ್ನು ಸುಲಭವಾಗಿ ಎದುರಾಳಿಗಳೆಂದು ಪರಿಭಾವಿಸುವ ಪ್ರವೃತ್ತಿ ಈಗಲೂ ಉಳಿದುಕೊಂಡಿದೆ. ಕರ್ನಾಟಕದ ಶಿಕ್ಷಣವ್ಯವಸ್ಥೆಯು ಆಂಗ್ಲಮಾಧ್ಯಮದತ್ತ ಹೊರಳಿಕೊಳ್ಳುತ್ತಿರುವುದು ಈ ಪ್ರವೃತ್ತಿಗೆ ಆತಂಕವೆನಿಸುವುದಿಲ್ಲ. ಹೈಸ್ಕೂಲಿನಲ್ಲಿ ಕನ್ನಡದಂತಹ ಮಾತೃಭಾಷೆಯ ಜಾಗದಲ್ಲಿ ಸಂಸ್ಕೃತವಿರುವುದನ್ನು ಪ್ರಶ್ನಿಸಿ ರೂಪುಗೊಂಡ ಗೋಕಾಕ್ ಚಳವಳಿಯು, ಉರ್ದುವಿರೋಧಿ ಆಂದೋಲನವಾಗಿ ಮುಕ್ತಾಯಗೊಂಡಿದ್ದು; ಉರ್ದು ವಾರ್ತೆಯ ಪ್ರಸಾರದ ವಿಷಯವು ಕೋಮುದಂಗೆಯಾಗಿ ಮಾರ್ಪಟ್ಟಿದ್ದು ಇದೇ ತರ್ಕದಲ್ಲಿ.

ಕೇಂದ್ರೀಕರಣ
ರಾಷ್ಟ್ರೀಯ ಹೋರಾಟದ ನೇತೃತ್ವ ವಹಿಸಿದ್ದ ಕಾಂಗ್ರೆಸ್ಸಿನಲ್ಲಿ ಭಾಷಾವಾರು ರಾಜ್ಯಗಳ ರಚನೆಯ ಬಗ್ಗೆ ತಾತ್ವಿಕವಾಗಿ ತೀವ್ರ ಭಿನ್ನಮತಗಳಿದ್ದವು. ಗಾಂಧಿ ಏಕೀಕರಣದ ಪರವಾಗಿದ್ದರೆ, ನೆಹರೂ, ರಾಜೇಂದ್ರ ಪ್ರಸಾದ್, ರಾಜಾಜಿ ವಿರುದ್ಧವಾಗಿದ್ದರು. ಕಾಂಗ್ರೆಸ್ಸಿನ ದ್ವಂದ್ವ ನೀತಿಯನ್ನು ವಿರೋಧಿಸಿ ಕೆಲವರು ಅದರಿಂದ ಹೊರಬಂದರು ಕೂಡ. ಭಾರತದ ರಾಷ್ಟ್ರೀಯ ವಿಮೋಚನಾ ಹೋರಾಟಕ್ಕೆ ತೊಡಕಾಗದಂತೆ ಏಕೀಕರಣ ನಡೆಯಬೇಕೆಂದು ಕೆಲವರು ಬಯಸುತ್ತಿದ್ದರು. ಕೆಲವರಿಗೆ ಕರ್ನಾಟಕವನ್ನು ಬಲಿಗೊಟ್ಟು ಭಾರತವನ್ನು ಪಡೆಯುವುದರ ಬಗ್ಗೆ ಸಮ್ಮತಿಯಿರಲಿಲ್ಲ. ಅವರು ಏಕೀಕರಣವನ್ನು ದೇಶದ ಬಿಡುಗಡೆಯಷ್ಟೆ ಮುಖ್ಯವೆಂದು ಭಾವಿಸಿದ್ದರು. 1950ರಲ್ಲಿ ಸಂವಿಧಾನ ಜಾರಿಯಾಗಿ ಭಾರತ ಗಣರಾಜ್ಯವಾಯಿತು. ಸಂವಿಧಾನದಲ್ಲಿ ಪ್ರಾಂತ್ಯ ಮತ್ತು ಒಕ್ಕೂಟ ಸರ್ಕಾರಗಳ ಸಂಬಂಧಗಳನ್ನು ಸ್ಪಷ್ಟವಾಗಿ ನಿರ್ವಚಿಸಲಾಗಿತ್ತು. ಇದು ಏಕೀಕರಣ ಚಳವಳಿಗೆ ಮತ್ತಷ್ಟು ತಾತ್ವಿಕ ಖಚಿತತೆ ಒದಗಿಸಿತು. ಇದರಿಂದ ಪ್ರೇರಿತರಾಗಿ ಆಲೂರರು ಪ್ರಣಾಳಿಕೆ ಸ್ವರೂಪದ ‘ಕರ್ನಾಟಕತ್ವದ ಸೂತ್ರಗಳು’ (1950) ಪ್ರಕಟಿಸಿದರು. 1952ರಲ್ಲಿ ಪೊಟ್ಟಿ ಶ್ರೀರಾಮುಲು ಆಂಧ್ರಪ್ರದೇಶದ ಏಕೀಕರಣಕ್ಕಾಗಿ 22 ದಿನ ಉಪವಾಸವಿದ್ದು ಪ್ರಾಣಬಿಟ್ಟ ಘಟನೆ, ನೆಹರೂ ಅವರ ಮೇಲೆ ಒತ್ತಡವಾಗಿ ಮಾರ್ಪಟ್ಟಿತು. ಆಗ ನೇಮಕವಾದ ರಾಜ್ಯ ವಿಂಗಡಣಾ ಆಯೋಗದ (1953) ವರದಿಯಿಂದ ಏಕೀಕರಣ (1956) ಸಾಧ್ಯವಾಯಿತು. ಆದರೆ ಕಾಲಕಳೆದಂತೆ, ‘ಏಕೀಕರಣದ ನಿಜವಾದ ಉದ್ದೇಶ ಈಡೇರಲಿಲ್ಲ. ಕನ್ನಡಿಗರು ರಾಜಕೀಯವಾಗಿ ಒಂದಾಗಿದ್ದೇವೆ, ಭಾವನಾತ್ಮಕವಾಗಿ ಇನ್ನು ಒಂದಾಗಿಲ್ಲ’ ಎಂದು ಮುಂಬೈ ಮತ್ತು ಹೈದರಾಬಾದ್ ಕರ್ನಾಟಕದ ಜನ ಪರಿಭಾವಿಸಿದರು. ಮಹಾರಾಷ್ಟ್ರದ ರೈತರಿಗೆ ಅಲ್ಲಿನ ಸರ್ಕಾರ ಒದಗಿಸುವ ಸೌಕರ್ಯಗಳನ್ನು ಗಮನಿಸಿದ ಕೆಲವು ರೈತರು ಏಕೀಕರಣವು ನಮ್ಮ ಪಾಲಿಗೆ ಶಾಪವಾಗಿದೆ ಎಂದೂ ಹೇಳಿದ್ದುಂಟು. ಕೆಲವು ರಾಜಕಾರಣಿಗಳು ಕರ್ನಾಟಕ ವಿಭಜನೆಯ ಆಶಯವನ್ನು ವ್ಯಕ್ತಪಡಿಸಿದರು. ಈ ನಿರಾಶೆಗೆ ಕಾರಣ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ಕೇಂದ್ರೀಕರಣಗೊಂಡ ರಾಜಕೀಯ ಅಧಿಕಾರ ಮತ್ತು ಸಂಪನ್ಮೂಲಗಳ ಸಮನಾದ ವಿತರಣೆ ಆಗದೆ ಹೋಗಿದ್ದು. ಈ ವಿಷಯದಲ್ಲಾದ ಅನ್ಯಾಯವನ್ನು ನಂಜುಂಡಪ್ಪ ವರದಿ ಬಹಿರಂಗಗೊಳಿಸಿತು. ಇದಕ್ಕೆ ಪರಿಹಾರವಾಗಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಅನುಕೂಲ ಒದಗಿಸಲು ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ಮಾಡಲಾಯಿತು; ಬೆಳಗಾವಿಯಲ್ಲಿ ವಿಧಾನಸೌಧ ಕಟ್ಟಿಸಿ ಕಲಾಪ ನಡೆಸುವ ಉಪಕ್ರಮ ಜಾರಿಗೆ ಬಂದಿತು. ಮಂತ್ರಿಮಂಡಲದ ಸಭೆಯನ್ನು ಕಲಬುರ್ಗಿಯಲ್ಲಿ ಮಾಡಿ, ಅಲ್ಲಿ ಪ್ಯಾಕೇಜುಗಳನ್ನು ಘೋಷಿಸುವ ರಿವಾಜನ್ನು ಹಾಕಲಾಯಿತು. ಆದರೂ ಆರ್ಥಿಕ ಅಸಮಾನತೆ, ಅಭಿವೃದ್ಧಿಯ ಏರುಪೇರು, ರಾಜಕೀಯ ಅಧಿಕಾರದ ಸಮಾನ ಹಂಚಿಕೆಯ ಪ್ರಶ್ನೆ ಬಗೆಹರಿದಿಲ್ಲ.
ಇದನ್ನೂ ಓದಿರಿ: ಸಿನೆಮಾಗಳು ‘ಮುಸ್ಲಿಂ ಭಯ ಮತ್ತು ದ್ವೇಷ’ ಬಿತ್ತಿದ್ದು ಹೇಗೆ?
ಈ ನಡುವೆ ಭಾರತದ ಒಕ್ಕೂಟ ಸರ್ಕಾರಗಳು ಅನುಸರಿಸಲು ಆರಂಭಿಸಿದ ಕೇಂದ್ರೀಕರಣ ನೀತಿಗಳು ಸಮಸ್ಯೆಯನ್ನು ಸೃಷ್ಟಿಸಿದವು. ಒಕ್ಕೂಟದಲ್ಲಿ ಅಧಿಕಾರ ಹಿಡಿದ ‘ರಾಷ್ಟ್ರೀಯ’ ಪಕ್ಷಗಳ ಸರ್ಕಾರಗಳು ಪ್ರಾಂತೀಯ ಸ್ವಾಯತ್ತತೆಗಳನ್ನು ಶಂಕಿಸುತ್ತಲೇ ಬಂದವು. ಕೇಂದ್ರ-ರಾಜ್ಯ ಸಂಬಂಧಗಳ ವಿಷಯದಲ್ಲಿ, ಹಿಂದಿ ಹೇರಿಕೆ ವಿಷಯದಲ್ಲಿ, ಬಲಪಂಥೀಯ ಪಕ್ಷಗಳ ಗುಪ್ತ ಕಾರ್ಯಸೂಚಿಗೆ ಬುನಾದಿ ಹಾಕಿದ್ದು ಕಾಂಗ್ರೆಸ್ ಸರ್ಕಾರಗಳೇ. ಆಗೆಲ್ಲ ಸ್ವತಂತ್ರ ಭಾರತದಲ್ಲಿ ಕರ್ನಾಟಕದ ಅಸ್ಮಿತೆಯ ಸ್ವರೂಪ ಯಾವುದು? ಅದರ ಭಾಷಿಕ, ರಾಜಕೀಯ, ಆರ್ಥಿಕ ಹಕ್ಕುಗಳೇನು ಎನ್ನುವ ಪ್ರಶ್ನೆ ಏಳುತ್ತಲೇ ಬಂದಿದೆ. ಈಚೆಗೆ ರಾಷ್ಟ್ರೀಯತೆ ಹೆಸರಲ್ಲಿ ಹಿಂದಿ ಹೇರಿಕೆ, ತೆರಿಗೆ ಹೇರಿಕೆ, ಶಿಕ್ಷಣನೀತಿ ಹೇರಿಕೆ, ಚುನಾವಣೆ ಹೇರಿಕೆ ಮೊದಲಾದ ವಿಷಯದಲ್ಲಿ ಒಕ್ಕೂಟ ಸರ್ಕಾರದೊಡನೆ ಕರ್ನಾಟಕದ ಸಂಘರ್ಷಗಳು ಹೆಚ್ಚುತ್ತಿವೆ. ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆಯು ಈ ಸಂಪತ್ತು ಮತ್ತು ಅಧಿಕಾರದ ಸಮಾನ ಹಂಚಿಕೆಯ ಪ್ರಶ್ನೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಸರ್ಕಾರಗಳನ್ನು ನಿಯಂತ್ರಿಸುವ ಕಾರ್ಪೊರೇಟ್ ಶಕ್ತಿಗಳು, ಪ್ರಾದೇಶಿಕ ಭಾಷೆ, ಸಂಸ್ಕೃತಿ, ನೆಲಜಲದ ಹಕ್ಕಿನ ಪ್ರಶ್ನೆಗಳನ್ನು ತಮ್ಮ ಮಾರುಕಟ್ಟೆ ವಿಸ್ತರಣೆಗೆ ತೊಡಕೆಂದು ತಿಳಿಯುತ್ತಿವೆ. ಈ ವಿದ್ಯಮಾನಗಳು ಏಕೀಕರಣವು ಮುಗಿದ ಅಧ್ಯಾಯವೆಂದು ಭಾವಿಸದೆ ಅದಿನ್ನೂ ಅರ್ಥಪೂರ್ಣವಾಗಿ ಸಾಕಾರಗೊಳ್ಳಬೇಕಾದ ಕನಸು ಎಂದು ಎಚ್ಚರಿಸುತ್ತಿವೆ. ಒಕ್ಕೂಟ ಸರ್ಕಾರವು ರಾಜ್ಯಗಳ ಮೇಲೆ ಸವಾರಿ ಮಾಡುತ್ತಿರುವ ಈ ಹೊತ್ತಿನಲ್ಲಿ, ಒಕ್ಕೂಟ ಸರ್ಕಾರದ ನೀತಿಗಳ ವಿರುದ್ಧ ಹೋರಾಡುವುದಕ್ಕೆ ತಮಿಳುನಾಡು, ಕೇರಳ ರಾಜ್ಯಗಳು ತಮ್ಮ ದಿಟ್ಟ ನಿಲುವಿನಿಂದ ಕರ್ನಾಟಕಕ್ಕೆ ಮಾದರಿ ಹಾಕಿಕೊಡುತ್ತಿವೆ. ಕರ್ನಾಟಕದ ಅಸ್ಮಿತೆ ಮತ್ತು ಸ್ವಂತಿಕೆ ಉಳಿಸುವಂತೆ, ಫೆಡರಲ್ ವ್ಯವಸ್ಥೆಯ ಪ್ರಜಾಪ್ರಭುತ್ವೀಕರಣ ಮಾಡುವುದು ಒಂದು ಸವಾಲಾಗಿದೆ.
ಖಾಸಗೀಕರಣ
ಏಕೀಕರಣ ಚಳವಳಿಯ ಹಿಂದೆ ವಾಣಿಜ್ಯ ವ್ಯಾಪಾರ ವರ್ಗದ ಹಿತಾಸಕ್ತಿಗಳೂ ನಿರತವಾಗಿದ್ದವು. ಬೆಳಗಾವಿ ಸೀಮೆಯ ಹತ್ತಿ ಬೆಳೆವ ಎರೆಜಮೀನು ಹೊಂದಿರುವ ನಿಪ್ಪಾಣಿಯನ್ನು ಕರ್ನಾಟಕಕ್ಕೆ ಬಿಟ್ಟುಕೊಡಬಾರದು ಎಂದು ಮಹಾರಾಷ್ಟ್ರ ವರ್ತಕರು ಕರ್ನಾಟಕ ಏಕೀಕರಣವನ್ನು ವಿರೋಧಿಸಿದರು. ಬಳ್ಳಾರಿ ಜಿಲ್ಲೆಯನ್ನು ಆಂಧ್ರಕ್ಕೆ ಸೇರಿಸಿಕೊಳ್ಳುವಲ್ಲಿ, ಸಂಡೂರಿನ ಅದಿರಿನ ಗಣಿಗಳ ಮತ್ತು ಹಂಪಿಯ ಮೇಲೆ ಒಡೆತನ ಸಾಧಿಸುವ ದೂರಾಲೋಚನೆ ತೆಲುಗು ಆಳುವ ವರ್ಗಗಳಿಗೆ ಇತ್ತು. ಇದು ಬೆಳಗಾವಿ-ಬಳ್ಳಾರಿ ಭಾಗದ ಲಿಂಗಾಯತ ವ್ಯಾಪಾರಿಗಳನ್ನು ಎಚ್ಚರಿಸಿತು. ಅವರು ಚಳವಳಿಗೆ ಆರ್ಥಿಕ ನೆರವು ನೀಡಿ ಬೆನ್ನೆಲುಬಾಗಿ ನಿಂತರು. ಚಳವಳಿಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಜನರು ಭಾಗವಹಿಸಲು, ಆರ್ಥಿಕ ಹಿಂದುಳಿದಿರುವಿಕೆಯ ಅಂಶವೂ ಕಾರಣವಾಗಿತ್ತು.
ಏಕೀಕರಣದಲ್ಲಿ ಕಲೋದ್ಯಮದ ಹಿತಾಸಕ್ತಿಯೂ ಅಡಗಿತ್ತು. ಏಕೀಕರಣದ ವಿಶಾಲ ರಾಜ್ಯವೊಂದು ಸ್ಥಾಪನೆಯಾಗುತ್ತದೆ. ಕನ್ನಡದ ಸಾಂಸ್ಕೃತಿಕ ವಾತಾವರಣ ಬಲಗೊಳ್ಳುತ್ತದೆ. ನಾಟಕ ಕಂಪನಿಗಳಿಗೆ ವಿಶಾಲ ಪ್ರೇಕ್ಷಕವರ್ಗ ಸಿಗುತ್ತದೆ. ಕನ್ನಡ ಓದುವವರ್ಗ ಸೃಷ್ಟಿಯಾಗಿ ಪುಸ್ತಕ ವ್ಯಾಪಾರಕ್ಕೆ ಮಾರುಕಟ್ಟೆ ನಿರ್ಮಾಣವಾಗುತ್ತದೆ ಎಂದು ಕಂಪನಿ ಮಾಲೀಕರು ಮತ್ತು ಪ್ರಕಾಶಕರು ಆಲೋಚಿಸಿದರು. ಕನ್ನಡ ಚಲನಚಿತ್ರ ನಿರ್ಮಾಣ ಮೊದಲು ಬಾಂಬೆ, ಮದ್ರಾಸ್‌ನಲ್ಲಿ ನಡೆಯುತ್ತಿದ್ದಾಗ, ಉತ್ತರ ಕನಾಟಕದಲ್ಲಿ ಕರ್ನಾಟಕ ಫಿಲ್ಮ್‌ಸ್ ಎಂಬ ಹೆಸರಲ್ಲಿ ಆರಂಭವಾದವು. ಮಾರುಕಟ್ಟೆಯು ಅಖಿಲ ಕರ್ನಾಟಕಕ್ಕೆ ವಿಸ್ತರಣೆ ಪಡೆವ ಆಶೋತ್ತರವು ಕನ್ನಡ ಪತ್ರಿಕೆಗಳಿಗೂ ಇತ್ತು. ‘ಕರ್ನಾಟಕ’ ಶಿರೋನಾಮೆಯನ್ನು ಇರಿಸಿಕೊಂಡ ‘ಜಯ ಕರ್ನಾಟಕ’, ‘ವಿಶಾಲ ಕರ್ನಾಟಕ’, ‘ಸಂಯುಕ್ತ ಕರ್ನಾಟಕ’ ಪತ್ರಿಕೆಗಳು; ‘ಕರ್ನಾಟಕ’ ಹೆಸರಿನ ವಿದ್ಯಾ ಸಂಘಗಳು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಆರಂಭವಾಗಿದ್ದನ್ನು ಇಲ್ಲಿ ಉಲ್ಲೇಖಿಸಬೇಕು. ಏಕೀಕರಣವು ಉತ್ತರ ಕರ್ನಾಟಕದ ಅಸ್ತಿತ್ವಕ್ಕೂ ಏಳಿಗೆಗೂ ಜೀವನ್ಮರಣದ ಪ್ರಶ್ನೆಯಾಗಿತ್ತು. ಆದರೆ ಕ್ರಮೇಣ ಕರ್ನಾಟಕದ ಆರ್ಥಿಕತೆಯು ದಕ್ಷಿಣ ಕರ್ನಾಟಕದ ನಗರಗಳಲ್ಲಿ ಕೇಂದ್ರೀಕೃತವಾಯಿತು. ಪ್ರಭುತ್ವಗಳು ಖಾಸಗೀಕರಣದತ್ತ ವಾಲತೊಡಗಿದವು. ಭಾರತವು ಮುಕ್ತಮಾರುಕಟ್ಟೆಯ ಆರ್ಥಿಕ ವ್ಯವಸ್ಥೆಗೆ ಪ್ರವೇಶಿಸಿತು. ಇದರ ದೊಡ್ಡ ಪ್ರಯೋಜನ ಪಡೆದ ಪ್ರದೇಶಗಳಲ್ಲಿ ಕರಾವಳಿಯೂ ಒಂದಾಯಿತು. ಕೂಲಿ ಹುಡುಕಿಕೊಂಡು ಘಟ್ಟದ ಮೇಲೆ ಹೋಗುತ್ತಿದ್ದ ಕರಾವಳಿಯ ಜನ, ಕೂಲಿಕಾರ್ಮಿಕರನ್ನು ಹೊರಗಡೆಯಿಂದ ಕರೆಸಿಕೊಳ್ಳುವಷ್ಟು ಸಿರಿವಂತರಾದರು. ಇಲ್ಲಿಗೆ ವಲಸೆ ಬರುವ ಬಹುತೇಕ ಕಾರ್ಮಿಕರು ಬಿಜಾಪುರ ನಾಡಿನವರು. ಕೃಷಿಪ್ರಧಾನ ಆರ್ಥಿಕತೆ ಮತ್ತು ಮತೀಯ ಸಾಮರಸ್ಯ ಪರಂಪರೆಯುಳ್ಳ ಬಿಜಾಪುರ ಸೀಮೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದೆ. ಮಾರುಕಟ್ಟೆ ಆರ್ಥಿಕತೆಯಲ್ಲಿ ಯಶಸ್ವಿಯಾಗಿ ಈಜಿದ ಕರಾವಳಿ ಸೀಮೆ ಸಂಪತ್ತನ್ನು ಗಳಿಸಿ ಸಿರಿವಂತವಾಗಿದೆ. ಆದರೆ ಮನುಷ್ಯ ಸಂಬಂಧಗಳನ್ನು ಅದು ಹದಗೆಡಿಸಿಕೊಂಡಿದೆ. ಮಾನವಹಕ್ಕುಗಳ ಮೇಲೆ ಅತಿಹೆಚ್ಚು ಹಲ್ಲೆ ನಡೆಯುವ ಪ್ರದೇಶವಾಗಿ ಮಾರ್ಪಟ್ಟಿದೆ. ಇವು ಏಕೀಕರಣೋತ್ತರ ಕರ್ನಾಟಕವು ನಮ್ಮ ಮುಂದಿಟ್ಟಿರುವ ಕಷ್ಟಕರವಾದ ಎರಡು ಆರ್ಥಿಕ ಮಾದರಿಗಳು. ನೆಮ್ಮದಿಯ ಕರ್ನಾಟಕಕ್ಕೆ ಇವೆರಡೂ ತಕ್ಕ ಮಾದರಿಗಳಲ್ಲ. ಆರ್ಥಿಕ ಸಮೃದ್ಧಿ ಮತ್ತು ಮಾನವ ಸಂಬಂಧಗಳು ಛಿದ್ರವಾಗಿರದ ಮೂರನೆಯ ಮಾದರಿಯನ್ನು ಕರ್ನಾಟಕವು ಇನ್ನೂ ಶೋಧಿಸಬೇಕಾಗಿದೆ.
ಅಸ್ಮಿತೀಕರಣ
ಏಕೀಕರಣದಲ್ಲಿ ಸಾಮಾಜಿಕವಾಗಿ ಪ್ರಬಲ ಜಾತಿಗಳಾದ ಒಕ್ಕಲಿಗ ಮತ್ತು ಲಿಂಗಾಯತರ ನಡುವೆ ಅಧಿಕಾರಕ್ಕಾಗಿ ಪೈಪೋಟಿ ಮತ್ತು ಸಂಘರ್ಷಗಳು ತೀವ್ರವಾಗಿ ಕೆಲಸ ಮಾಡಿದವು. ಹಿಂದುಳಿದ ಪ್ರದೇಶಗಳಾದ ಹೈದರಾಬಾದ್ ಮತ್ತು ಮುಂಬೈ ಕರ್ನಾಟಕಗಳು ಮುಂದುವರೆದ ಮೈಸೂರು ಭಾಗದಲ್ಲಿ ಸೇರಿದರೆ, ಮೈಸೂರಿನ ಅಸ್ಮಿತೆ ಇಲ್ಲವಾಗುತ್ತದೆ. ಅದು ಸಾಧಿಸಿದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬ ಅಸ್ಮಿತೆಯ ಪ್ರಶ್ನೆಯನ್ನು ಎಬ್ಬಿಸಲಾಯಿತು. ಇದು ಆಳದಲ್ಲಿ ಉತ್ತರ ಕರ್ನಾಟಕದ ಭೂಮಾಲೀಕ ಲಿಂಗಾಯತರ ಜತೆ ಅಧಿಕಾರ ಹಂಚಿಕೊಳ್ಳಬೇಕಾಗುತ್ತದೆ ಎಂಬ ಒಕ್ಕಲಿಗ ಭೂಮಾಲೀಕ ವರ್ಗಗಳ ಆತಂಕದ ಫಲವಾಗಿತ್ತು. ಇದಕ್ಕೆ ತಕ್ಕಂತೆ ಏಕೀಕರಣ ಪ್ರಕ್ರಿಯೆ ಮುಗಿವ ಹಂತದಲ್ಲಿ, ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಕೆಳಗಿಳಿಯಬೇಕಾಯಿತು. ಲಿಂಗಾಯತ ಸಮುದಾಯದ ನಿಜಲಿಂಗಪ್ಪನವರು ಅಧಿಕಾರಕ್ಕೆ ಬಂದರು. ಈ ಎರಡು ಪ್ರಬಲ ಜಾತಿಗಳು ಇವತ್ತಿಗೂ ಅಧಿಕಾರ ಮತ್ತು ಸಂಪತ್ತಿನ ವಿಷಯದಲ್ಲಿ ಹಿಡಿತವನ್ನು ಸಡಿಲಗೊಳಿಸಿಲ್ಲ. ಭೂಮಿ, ವ್ಯಾಪಾರ, ಶಿಕ್ಷಣಸಂಸ್ಥೆ ಸ್ಥಾಪನೆಗಳಲ್ಲಿ ಮುಂದುವರೆದಿರುವ ಜಾತಿಗಳ ಕೈಗೆ ರಾಜಕೀಯ ಅಧಿಕಾರ ಉಳಿಸಿರುವ ಸಂಗತಿಯು, ಹಿಂದುಳಿದ ಜಾತಿಗಳು, ದಲಿತರು, ಮುಸ್ಲಿಮರನ್ನು ತಬ್ಬಲಿಗೊಳಿಸಿದೆ. ಜಾತಿವಾರು ಗಣತಿಯ ಪ್ರಕಾರ ಈ ತಬ್ಬಲಿ ಸಮುದಾಯಗಳೇ ದೊಡ್ಡ ಸಂಖ್ಯೆಯಲ್ಲಿರುವುದು. ಈ ತಥ್ಯವು ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಅಧಿಕಾರಸ್ಥ ವರ್ಗಗಳ ಕಳವಳಕ್ಕೂ ಪ್ರತಿರೋಧಕ್ಕೂ ಕಾರಣವಾಗಿದೆ. ಈ ಜಾತಿಗಣತಿ ಪ್ರಕಾರ ಸಂಪನ್ಮೂಲ ಮತ್ತು ರಾಜಕೀಯ ಪ್ರಾತಿನಿಧ್ಯ ಹಂಚಿಕೆಯಾಗುವಿಕೆಯು ಕರ್ನಾಟಕದ ಚಹರೆಯನ್ನು ಬದಲಿಸುವ ಸಂಗತಿಯಾಗಲಿದೆ.

ಏಕರೂಪೀಕರಣ
ಏಕೀಕರಣ ಕರ್ನಾಟಕವು ಒಂದು ಬಗೆಯಲ್ಲಿ ಪ್ರಾದೇಶಿಕ ಪ್ರಾತಿನಿಧ್ಯ, ಭಾಷೆ, ಕಲೆ, ಸಾಹಿತ್ಯ, ಆಹಾರ ಮುಂತಾದ ವಿಷಯದಲ್ಲಿ ಬಹುತ್ವವನ್ನು ಸಾಧಿಸಿತು. ಆದರೆ ಅದರ ವೈವಿಧ್ಯ ಮತ್ತು ಬಹುತ್ವಗಳು ಈಗ ಏಕರೂಪೀಕರಣಕ್ಕೆ ಒಳಗಾಗುವ ಆತಂಕ ಎದುರಿಸುತ್ತಿವೆ. ಇದಕ್ಕೆ ಕರಾವಳಿಯ ಕರ್ನಾಟಕದಲ್ಲಿ ಮತ್ತು ಮಂಡ್ಯ ಸೀಮೆಯಲ್ಲಿ ಸಂಭವಿಸುತ್ತಿರುವ ಪಲ್ಲಟಗಳು ರೂಪಕದಂತೆ ತೋರುತ್ತವೆ. ಕರಾವಳಿಯಲ್ಲಿರುವಷ್ಟು ಭಾಷೆಗಳು, ಸಮುದಾಯಗಳು, ಜನಪದ ಆಚರಣೆಗಳು, ಆಹಾರಪದ್ಧತಿಗಳು ಕರ್ನಾಟಕದ ಬೇರೆಡೆಯಿಲ್ಲ. ಇಲ್ಲಿಂದ ಒಂದು ಕಾಲಕ್ಕೆ ಕಮ್ಯುನಿಸ್ಟರು ಚುನಾವಣೆಯಲ್ಲಿ ಆರಿಸಿ ಬರುತ್ತಿದ್ದರು. ಬ್ಯಾಂಕ್ ಉದ್ಯೋಗಿಗಳ ಸಂಘಟನೆ, ಬೀಡಿ, ಹೆಂಚು, ಬಸ್ಸು, ಕಾರ್ಮಿಕರ ಸಂಘಟನೆಗಳಿದ್ದವು. ಕಾರ್ನಾಡ್ ಸದಾಶಿವರಾಯ, ಕಮಲಾದೇವಿ ಚಟ್ಟೋಪಾಧ್ಯಾಯರಂತಹ ಸ್ವಾತಂತ್ರ್ಯ ಚಳವಳಿಗಾರರು, ಗೋವಿಂದಪೈ, ಕಾರಂತ, ನಿರಂಜನರಂತಹ ಲೇಖಕರು, ಕುದ್ಮಲ್ ರಂಗರಾಯರಂತಹ ಸಮಾಜ ಸುಧಾರಕರು ಮೂಡಿಬಂದ ಪ್ರದೇಶವಿದು. ಇಲ್ಲಿ ಹಿಂದು-ಮುಸ್ಲಿಂ ಸಾಮರಸ್ಯದ ಅಪೂರ್ವ ಕುರುಹುಗಳಿವೆ. ಬಪ್ಪಬ್ಯಾರಿ, ಆಲಿಭೂತ, ಬೊಬ್ಬರ್ಯ ಮೊದಲಾದ ಮುಸ್ಲಿಂ ಭೂತಗಳ ಆರಾಧನೆ ಇಲ್ಲಿ ನಡೆಯುತ್ತದೆ. ಕಾರ್ಪೊರೇಷನ್ ಬ್ಯಾಂಕ್ ಕಟ್ಟಿದ್ದು ಒಬ್ಬ ಮುಸ್ಲಿಂ. ಮೀನುಗಾರಿಕೆಯಲ್ಲಿ ಮೊಗವೀರ ಮತ್ತು ಬ್ಯಾರಿಗಳ ಬಿಡಿಸಲಾಗದ ಬಂಧವಿತ್ತು. ಬಾಸೆಲ್ ಮಿಷನ್ನಿನ ಮುದ್ರಣಯಂತ್ರ, ಶಿಕ್ಷಣಸಂಸ್ಥೆ ಮತ್ತು ಹೆಂಚಿನ ಕಾರ್ಖಾನೆಗಳು, ಈ ಪ್ರದೇಶವನ್ನು 19ನೇ ಶತಮಾನದಿಂದಲೇ ಆಧುನೀಕರಿಸಿದವು.

ಇಂತಹ ಸಮರಸದ ಭೂಮಿಯಲ್ಲಿ ಧರ್ಮ, ನಂಬಿಕೆ, ಶ್ರದ್ಧೆ ಹೆಸರಲ್ಲಿ ದ್ವೇಷಕಾರುವ ಮತ್ತು ಕೆಳಜಾತಿಗಳನ್ನು ಸೈನಿಕರನ್ನಾಗಿ ಬದಲಿಸುವ ಮತೀಯ ರಾಜಕಾರಣ ಮುನ್ನೆಲೆಗೆ ಬಂದಿತು. ಇದು ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಲ್ಲಿ ಮೇಲ್ಜಾತಿ-ಮೇಲ್ವರ್ಗಗಳ ಧರ್ಮ, ಭಾಷೆ, ಆಚರಣೆ, ನಂಬಿಕೆಗಳನ್ನು ದೇಶದ ಸಂಸ್ಕೃತಿಯೆಂದು ಮಂಡಿಸಿತು. ಈ ಚೌಕಟ್ಟಿಗೆ ಹೊಂದುವಂತೆ, ಸಾಮಾಜಿಕವಾಗಿ ಕೆಳಸ್ತರದ ಸಮುದಾಯಗಳ ಮತ್ತು ಬುಡಕಟ್ಟು ಲೋಕಗಳನ್ನು ಪಳಗಿಸಿತು. ಬೌದ್ಧ, ಇಸ್ಲಾಂ, ಕ್ರೈಸ್ತ ಧಾರ್ಮಿಕ ಸಮುದಾಯಗಳ ಚರಿತ್ರೆ, ಪರಂಪರೆ, ಸಂಸ್ಕೃತಿಗಳನ್ನು ಪರಕೀಯಗೊಳಿಸಿತು. ಈ ಪ್ರಕ್ರಿಯೆಯಲ್ಲಿ ಸಿನಿಮಾ, ರಂಗಭೂಮಿ, ಸಾಹಿತ್ಯ, ಭಾಷೆ, ಧಾರ್ಮಿಕ ಆಚರಣೆಗಳೂ ಸೋಂಕಿಗೆ ಒಳಗಾದವು. ಈ ಸೋಂಕು ಯಕ್ಷಗಾನದಲ್ಲಿ ಹೆಚ್ಚು ಕಾಣಿಸಿತು. ವೈಚಾರಿಕತೆ, ಸಹನಶೀಲತೆ, ವಿವೇಚನೆ ಕಳೆದುಕೊಂಡ, ದ್ವೇಷ ಹರಡುವ ಜ್ಞಾನವಿರೋಧಿ ಯುವ ತಲೆಮಾರೊಂದು ಸೃಷ್ಟಿಯಾಯಿತು. ಮಾರುಕಟ್ಟೆ ಸಂಸ್ಕೃತಿಯ ಭಾಗವಾದ ಮಾಧ್ಯಮಗಳು ಇದರಲ್ಲಿ ದೊಡ್ಡ ಪಾತ್ರ ವಹಿಸಿದವು. ಪ್ರೊ. ಕಲಬುರ್ಗಿ ಮತ್ತು ಗೌರಿಯವರ ಹತ್ಯೆಗಳು ಇದರ ಪರೋಕ್ಷ ಫಲಗಳೇ.
ಇದನ್ನೂ ಓದಿರಿ: ಮುಸ್ಲಿಮರಿಗೆ ಮೀಸಲಾತಿಯಲ್ಲೂ ಅನ್ಯಾಯ, ರಾಜಕೀಯದಲ್ಲೂ ಮೋಸ!
ಇದೇ ಕಾಲಕ್ಕೆ ಜಾತಿ ಸಮುದಾಯಗಳು ಅಸ್ಮಿತೆಯ ರಾಜಕಾರಣದ ಹಾದಿಯಲ್ಲಿ ಸಾಗಿ ತಮ್ಮದೇ ಸಾಂಸ್ಕೃತಿಕ ನಾಯಕರನ್ನು ರೂಪಿಸಿಕೊಂಡು ಸಂಘಟಿತವಾಗುವ ಬೆಳವಣಿಗೆಗಳು ನಡೆದಿವೆ. ಕಲಾಲೋಕಗಳು, ಆಚರಣೆಗಳು, ಕಲೆಗಳು, ಸಾಂಸ್ಕೃತಿಕ ನಾಯಕರು ನಿರ್ದಿಷ್ಟ ಸಮುದಾಯಗಳಿಗೆ ಸೀಮಿತವಾಗುತ್ತಿವೆ. ಇವು ಕೂಡುಹೋರಾಟಗಳ ಪರಿಕಲ್ಪನೆಯನ್ನೇ ಅಪ್ರಸ್ತುತಗೊಳಿಸುತ್ತಿವೆ. ಕರ್ನಾಟಕದ ಸಾಂಸ್ಕೃತಿಕ ನಾಯಕರು ಹುಟ್ಟಿನಿಂದ ನಿರ್ದಿಷ್ಟ ಸಮುದಾಯದಲ್ಲಿ ಹುಟ್ಟಿದರೂ, ಅವರಿಗೆ ಸಮಸ್ತ ಕನ್ನಡಿಗರು ಹಕ್ಕುದಾರರಾಗುವ, ಒಳಗೊಳ್ಳುವ ವಾತಾವರಣ ಏರ್ಪಡುವುದು ಕರ್ನಾಟಕ ಸಂಸ್ಕೃತಿ ಲಕ್ಷಣ. ಟಿಪ್ಪು, ನಾಲ್ವಡಿ, ರಾಜಕುಮಾರ್, ಬಸವಣ್ಣ, ಕುವೆಂಪು, ತೇಜಸ್ವಿ, ಲಂಕೇಶ್, ದೇವರಾಜ ಅರಸು ಇದಕ್ಕೆ ಸಾಕ್ಷಿ. ಸಾಮಾಜಿಕ ಧಾರ್ಮಿಕ ಬುಡಕಟ್ಟು ಸಮುದಾಯಗಳ ಆರೋಗ್ಯಕರ ಲೋಕದೃಷ್ಟಿ ಮತ್ತು ಸೃಜನಶೀಲತೆಗಳನ್ನು ಸಮಗ್ರ ಕರ್ನಾಟಕದ ಸಾಂಸ್ಕೃತಿಕ ಚಟುವಟಿಕೆಯಾಗಿ ಅಳವಡುವಂತೆ ಮಾಡುವುದು; ಮತೀಯ, ಜಾತೀಯ ದ್ವೇಷ, ಲಿಂಗತಾರತಮ್ಯ ಹಾಗೂ ಹಿಂಸೆಯನ್ನು ಪ್ರಚೋದಿಸುವ ಬರೆಹ, ಸಿನಿಮಾ, ನಂಬಿಕೆ, ಆಚರಣೆಗಳನ್ನು ಬಹಿಷ್ಕರಿಸುವ ಪ್ರಜ್ಞೆಯೊಂದು ಕಾಮನ್‌ಸೆನ್ಸಾಗುವಂತೆ ಮಾಡುವುದು ಬಹಳ ಅಗತ್ಯವಾಗಿದೆ.
ಸಂವಿಧಾನೀಕರಣ
ಏಳು ದಶಕಗಳ ಕಾಲದ ಕರ್ನಾಟಕದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾದ ಈ ವೈರುಧ್ಯಗಳು ಆದರ್ಶ ಕರ್ನಾಟಕ ಕಟ್ಟುವ ಯತ್ನಗಳನ್ನು ನಿಲ್ಲಿಸಲಿಲ್ಲ. ಕುವೆಂಪು ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗುವ’, ‘ಸರ್ವಜನಾಂಗದ ಶಾಂತಿಯ ತೋಟ’ವಾಗಿ ಕರ್ನಾಟಕವನ್ನು ರೂಪಿಸುವ, ದಲಿತರಿಗೆ ಸ್ವಾಭಿಮಾನವನ್ನು, ಮಹಿಳೆಯರಿಗೆ ಸಮಾನತೆಯನ್ನು ದೊರಕಿಸುವ ಚಳವಳಿಗಳು ಸಮಾಜವಾದಿ ಕರ್ನಾಟಕವನ್ನು ಕಟ್ಟುವುದಕ್ಕೆ ಯತ್ನಮಾಡುತ್ತಲೇ ಬಂದವು. ಇದಕ್ಕೆ ದಲಿತ ಚಳವಳಿ, ರೈತ ಚಳವಳಿ, ಪರಿಸರ ಚಳವಳಿ, ಕೋಮುಸೌಹಾರ್ದ ಚಳವಳಿಗಳು, ಭೂಹೋರಾಟಗಳು ಸಾಕ್ಷಿಯಾಗಿವೆ. ಈಚೆಗೆ ಸ್ತ್ರೀ ಸಂವೇದನೆ ಮತ್ತು ಅಂಬೇಡ್ಕರ್ ಚಿಂತನೆಗಳ ಮೂಲಕ ಲೋಕವನ್ನು ನೋಡುವ ದೃಷ್ಟಿಕೋನಗಳು ಬಹಳ ಪ್ರಭಾವ ಬೀರುತ್ತಿವೆ. ಪಶುಪಕ್ಷಿಗಳ ಬದುಕುವ ಹಕ್ಕನ್ನು ಮನ್ನಿಸುವ, ಲೈಂಗಿಕ ಅಲ್ಪಸಂಖ್ಯಾತರ ಸಂವೇದನೆಗೆ ಮಿಡಿವ ಸಂವೇದನಶೀಲತೆ ಹೆಚ್ಚುತ್ತಿದೆ. ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಕೂಡು ಕರ್ನಾಟಕವನ್ನು ಕಟ್ಟುವುದು ಒಂದು ಕನಸು. ಇದನ್ನು ಅಸಮಾನತೆ ಮತ್ತು ದ್ವೇಷದ ಚಿಂತನೆಗಳ ವಿರುದ್ಧ ಸಂಘರ್ಷವಿಲ್ಲದೆ ನನಸಾಗಿಸುವುದು ಸಾಧ್ಯವಿಲ್ಲ. ಸಂವಿಧಾನದ ಪೀಠಿಕೆಯಲ್ಲಿ ಘೋಷಿಸಲಾಗಿರುವ ಮೌಲ್ಯಾದರ್ಶಗಳು ಜನರ ಪ್ರಜ್ಞೆಯ, ಆಲೋಚನಕ್ರಮದ ಭಾಗವಾಗುವಂತೆ ಮಾಡುವುದು ಒಂದು ದೊಡ್ಡ ಸವಾಲಾಗಿದೆ.
ಈ ಸವಾಲನ್ನು ನಿಭಾಯಿಸಲು ಜನಪರ ಚಳವಳಿಗಳು ಪರಂಪರೆಯಿಂದ ಅರಿವನ್ನೂ ಪ್ರೇರಣೆಯನ್ನೂ ಪಡೆದು, ರಾಜಕೀಯ ಪ್ರಜ್ಞೆಯನ್ನೂ ತಂತ್ರಗಾರಿಕೆಯನ್ನೂ ರೂಪಿಸಬೇಕಿದೆ. ರೈತ ಚಳವಳಿಯ ಮೊದಲ ತಲೆಮಾರಿಗೆ ಸಾಹಿತ್ಯ, ರಂಗಭೂಮಿ, ಕಲೆಗಳ ಜತೆ ಆಪ್ತ ಒಡನಾಟವಿತ್ತು. ಅಂತಾರಾಷ್ಟ್ರೀಯ ಆರ್ಥಿಕ, ರಾಜಕೀಯ ಪ್ರಜ್ಞೆಯಿತ್ತು. ದಲಿತ ಸಂಘರ್ಷ ಸಮಿತಿಯು, ಈಗಿರುವಂತೆ ವಿಘಟಿತವಾಗಿರಲಿಲ್ಲ. ಈಗ ಕರ್ನಾಟಕದ ರಾಜಕೀಯ, ಸಾಮಾಜಿಕ, ಆರ್ಥಿಕ ಚಳವಳಿಗಳು, ಸಾಂಸ್ಕೃತಿಕ ಚಳವಳಿಗಳೂ ಆಗುವ ಅಗತ್ಯವಿದೆ. ಘನತೆಯ ಸಮಾನತೆಯ ಕರ್ನಾಟಕವನ್ನು ಕಟ್ಟುವ ಹಾದಿಯಲ್ಲಿ ಬಹಳ ನಡೆಯಬೇಕಿದೆ. ಈ ಕೆಲಸದಲ್ಲಿ ಪ್ರಭುತ್ವದ ಪಾತ್ರವಿದೆ. ಆದರೆ ಮತಗಳಿಕೆಯ ರಾಜಕಾರಣದಲ್ಲಿ ಮಗ್ನವಾಗಿರುವ, ಕಾರ್ಪೊರೇಟ್ ಪರಿಚಾರಿಕೆ ಮಾಡುವ, ಮತಧರ್ಮಗಳನ್ನು ಕಡೆದು ಹಾಲಾಹಲ ಹುಟ್ಟಿಸುವ, ಆರ್ಥಿಕ ಭ್ರಷ್ಟತೆಯಿಂದ ನರಳುತ್ತಿರುವ ರಾಜಕೀಯ ಪಕ್ಷಗಳಿಂದ ಇದನ್ನು ನಿರೀಕ್ಷಿಸಲಾಗದು. ನಾಗರಿಕ ಸಮಾಜವು ಪ್ರಭುತ್ವವನ್ನು ಸಂವೇದನಾಶೀಲ ಮಾಡುವುದು ಸಾಧ್ಯವಿದೆ. ಹೊಸ ರಾಜಕೀಯ ಪರ್ಯಾಯವನ್ನು ಶೋಧಿಸುವ ಅಗತ್ಯವಿದೆ. ಹೀಗೆ ಮಾಡುವುದಕ್ಕೆ ಮೊದಲು ಅದು ಸ್ವತಃ ಸಂವೇದನಾಶೀಲತೆ ಪಡೆದುಕೊಳ್ಳುವುದು ಜರೂರಾಗಿದೆ.
(ಈದಿನ.ಕಾಂ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ ಹೆಜ್ಜೆ 50.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಬರಹ)

ರಹಮತ್ ತರೀಕೆರೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ’ಕತ್ತಿಯಂಚಿನ ದಾರಿ’, ’ಅಂಡಮಾನ್ ಕನಸು’, ಕದಳಿ ಹೊಕ್ಕು ಬಂದೆ’ ಇವರ ಪ್ರಮುಖ ಕೃತಿಗಳು. ಕರ್ನಾಟಕದ ಸೂಫಿಗಳು, ಶಾಕ್ತಪಂಥ ಸೇರಿದಂತೆ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ರಹಮತ್ ಮಹತ್ವದ ಕೆಲಸ ಮಾಡಿದ್ದಾರೆ.




