ಆಗ ನಮಗೆ ಯಾವ ನಾಯಕರೂ ಇರಲಿಲ್ಲ. ಯಾರ ನಡುವೆಯೂ ನಾಯಕತ್ವದ ಸಮಸ್ಯೆಯೂ ಇರಲಿಲ್ಲ. ಎಲ್ಲರೂ ಸಮಾನರು. ಸಿದ್ಧಾಂತವೇ ನಮ್ಮ ನಾಯಕ. ಪದಾಧಿಕಾರತ್ವ ಏನಿದ್ದರೂ ಸಮನ್ವಯದ ಕಾರಣಕ್ಕಾಗಿ ಮಾತ್ರ.
(ಮುಂದುವರಿದ ಭಾಗ) ಹೋರಾಟದ ದಿನಗಳು: ದಲಿತ ಸಂಘರ್ಷ ಸಮಿತಿಯ ಆರಂಭದ ದಿನಗಳ ಕಷ್ಟಗಳನ್ನು ಹೇಳಬೇಕು. ನಮಗೆ ಹೊಟ್ಟೆಗೆ ಹಿಟ್ಟಿರಲಿಲ್ಲ. ಮೈಗೆ ಬಟ್ಟೆ ಇರಲಿಲ್ಲ. ತಲೆಗೆ ಎಣ್ಣೆ ಇರಲಿಲ್ಲ. ಕಾಲಿಗೆ ಚಪ್ಪಲಿ ಇರಲಿಲ್ಲ. ಕರಪತ್ರಗಳನ್ನು ಪ್ರಿಂಟ್ ಮಾಡಿಸಲು ದುಡ್ಡು ಇರುತ್ತಿರಲಿಲ್ಲ. ನಾವೆಲ್ಲ ಹಾಸ್ಟೆಲ್‌ನಲ್ಲಿ ಕುಳಿತು ಕಾಂಪಿಟೇಷನ್ ಮೇಲೆ ಕರಪತ್ರಗಳನ್ನು ಕಾಪಿ ಮಾಡುತ್ತಿದ್ದೆವು. ಒಂದು ಕರಪತ್ರವನ್ನು ಬರೆದು, ಅದನ್ನು ಒಬ್ಬರು ಓದುತ್ತಾ ಹೋಗುವುದು, ಉಳಿದವರು ಕಾಪಿ ಮಾಡುವುದು ನಡೆಯುತ್ತಿತ್ತು. ಬಸ್ ಚಾರ್ಜ್‌ಗೆ ಹಣ ಇಲ್ಲದೆ ಹತ್ತಾರು ಕಿಲೋಮೀಟರ್ ನಡೆದುಕೊಂಡೇ ಹೋಗುತ್ತಿದ್ದೆವು. ಹಾಕಿಕೊಂಡ ಬಟ್ಟೆ ಕೊಳೆಯಾದರೆ ಬದಲಾಯಿಸಲು ಶರ್ಟ್ ಇರುತ್ತಿರಲಿಲ್ಲ. ದಾರಿಯಲ್ಲಿ ನಡೆದುಕೊಂಡು ಹೋಗುತ್ತಾ, ನದಿಯಲ್ಲೋ, ಬಾವಿಯಲ್ಲೋ, ಕೆರೆಯಲ್ಲೋ ತೊಳೆದು ಅದನ್ನು ಒಣಗಿಸಿ, ನಂತರ ಹಾಕಿಕೊಂಡು ಮುಂದುವರಿಯುತ್ತಿದ್ದೆವು. ಈ ಚಳವಳಿ ಹೀಗೆ ಹುಟ್ಟಿದ್ದು, ಕಟ್ಟಿದ್ದು. ಅಂದಿನ ದಿನಗಳ ಕಷ್ಟ ಕೋಟಲೆಗಳು ಕಣ್ಣಿಗೆ ಕಟ್ಟಿದಂತಿವೆ.
ನಾವು ಕಡಲೆಪುರಿ(ಮಂಡಕ್ಕಿ) ತಿಂದುಕೊಂಡು, ನ್ಯೂಸ್‌ಪೇಪರ್‌ಗಳನ್ನು ಹಾಸಿಕೊಂಡು, ಅದನ್ನೇ ಹೊದ್ದುಕೊಂಡು ಅರೆಹೊಟ್ಟೆಯಲ್ಲಿ ರಾತ್ರಿಗಳನ್ನು ಕಳೆದಿದ್ದೇವೆ. ಎಲ್ಲಾದರೂ ಹೋದರೆ ಉಳಿದುಕೊಳ್ಳಲು ಜಾಗ ಇರುತ್ತಿರಲಿಲ್ಲ. ದಲಿತ ಕೇರಿಯ ಮಾರಮ್ಮನ ಗುಡಿಯಲ್ಲೋ ದುರ್ಗಮ್ಮನ ಗುಡಿಯ ಹಜಾರದಲ್ಲೋ ಮಲಗಬೇಕಿತ್ತು. ಯಾರಾದರೂ ಕೊಟ್ಟರೆ ತಿನ್ನಬೇಕಿತ್ತು. ಅಂದು ದುಡ್ಡಿರಲಿಲ್ಲ, ಅಂತಸ್ತಿರಲಿಲ್ಲ, ಯಾರೂ ನಮ್ಮನ್ನು ಗುರುತಿಸುತ್ತಿರಲಿಲ್ಲ, ಮಾತನಾಡಿಸುತ್ತಿರಲಿಲ್ಲ, ಸಮಾಜ ನಮಗೆ ಗೌರವ ಕೊಡುತ್ತಿರಲಿಲ್ಲ. ಆದರೆ, ಅಂದು ನಮ್ಮ ಚಳವಳಿ ಎಷ್ಟು ಗಟ್ಟಿಯಾಗಿತ್ತು, ಸಮರ್ಥವಾಗಿತ್ತು ಎಂದರೆ, ನಾವು ಒಂದು ಘೋಷಣೆ ಕೂಗಿದರೆ ವಿಧಾನಸೌಧದಲ್ಲಿ ಇರುವವರ ಕಿವಿಗಳು ನೆಟ್ಟಗಾಗುತ್ತಿದ್ದವು. ದಲಿತ ಪರವಾದ ಕಾನೂನುಗಳನ್ನು, ನಿರ್ಧಾರಗಳನ್ನು ಆಳುವ ಯಾವ ಸರ್ಕಾರಗಳೂ ಅವರಾಗಿಯೇ ಮಾಡಿಲ್ಲ. ಪ್ರತಿಯೊಂದೂ ದಲಿತ ಚಳವಳಿಯ ಫಲ. ದಲಿತರು ಬೀದಿಯಲ್ಲಿ ಕೂಗುತ್ತಿದ್ದ ಘೋಷಣೆಗಳು ಮತ್ತು ಗೋಡೆ ಮೇಲೆ ಬರೆಯುತ್ತಿದ್ದ ಬರೆಹಗಳು ಸರ್ಕಾರದಲ್ಲಿ ಕಾನೂನುಗಳಾಗುತ್ತಿದ್ದವು. ಅಂತಹ ಇತಿಹಾಸ ದಲಿತ ಚಳವಳಿಗಿದೆ.
ಬಿ.ಕೃಷ್ಣಪ್ಪನವರು ಉಪನ್ಯಾಸಕರಾಗಿದ್ದರು. ವಾರಪೂರ್ತಿ ಚಳವಳಿಯಲ್ಲಿ ತೊಡಗಿಸಿಕೊಳ್ಳಲು ಆಗುತ್ತಿರಲಿಲ್ಲ. ಆದರೂ ಸಮರ್ಥವಾಗಿ ಚಳವಳಿಯನ್ನು ಕಟ್ಟುತ್ತಾ ಹಲವು ಹೋರಾಟಗಳನ್ನು ಮುನ್ನಡೆಸಿದರು. ಆ ವೇಳೆಯಲ್ಲೇ ಹಲವಾರು ಮಂದಿ ಪೂರ್ಣಾವಧಿ ಕಾರ್ಯಕರ್ತರು ಹುಟ್ಟಿಕೊಂಡರು. ಕೆಲವರು ಚಳವಳಿಗಾಗಿ ಶಿಕ್ಷಣವನ್ನೇ ಮೊಟಕುಗೊಳಿಸಿದರು. ಸರ್ಕಾರಿ ನೌಕರಿಗಳ ಆಸೆ ಬಿಟ್ಟರು. ನಾವು ಕೆಲವರು ಬರೆಹಗಾರರು, ಪತ್ರಕರ್ತರು, ಕಲಾವಿದರು ಮತ್ತು ಚಳವಳಿಗಾರರೂ ಆಗಿದ್ದೆವು. ಆದರೆ ಪೂರ್ಣಾವಧಿ ಕಾರ್ಯಕರ್ತರೇ ನಿಜವಾಗಿಯೂ ಚಳವಳಿಯನ್ನು ಗಟ್ಟಿಯಾಗಿ ಕಟ್ಟಿದ್ದು. ಕೋಲಾರದ ಎನ್. ವೆಂಕಟೇಶ್, ಕೆ. ರಾಮಯ್ಯ, ಸಿ.ಎಂ. ಮುನಿಯಪ್ಪ, ಎನ್. ಮುನಿಸ್ವಾಮಿ, ವಿ. ನಾಗರಾಜ, ಎಂ. ವೆಂಕಟಸ್ವಾಮಿ, ಚಿಂತಾಮಣಿ ಶಿವಣ್ಣ, ಹಾಸನದ ಚಂದ್ರಪ್ರಸಾದ್ ತ್ಯಾಗಿ, ನಾರಾಯಣ ದಾಸ್, ಮಂಡ್ಯದ ನಾರಾಯಣ, ಹುಲ್ಲಕೆರೆ ಮಹಾದೇವ, ಗುರುಪ್ರಸಾದ್ ಕೆರಗೋಡು, ರಾಯಚೂರಿನ ಬೋಳ ಬಂಡೆಪ್ಪ, ಉರುಕುಂದಪ್ಪ, ಹನುಮದಾಸ್, ಜಂಬಣ್ಣ ಅಮರಚಿಂತ, ಚಿಕ್ಕಮಗಳೂರಿನ ಎಂ. ಡಿ ಗಂಗಯ್ಯ, ಭದ್ರಯ್ಯ, ಚಿತ್ರದುರ್ಗದ ಜಯಣ್ಣ, ಬಿ. ಎಂ ಹನುಮಂತಪ್ಪ, ದುರ್ಗೇಶ್, ಮೈಸೂರಿನ ಹರಿಹರ ಆನಂದಸ್ವಾಮಿ, ಬೆಟ್ಟಯ್ಯ ಕೋಟೆ, ಮಂಗಳೂರಿನ ದೇವದಾಸ್, ಡೀಕಯ್ಯ, ತುಮಕೂರಿನ ರಂಗಸ್ವಾಮಿ ಬೆಲ್ಲದಮಡು, ಗುಲ್ಬರ್ಗಾದ ಬಸಣ್ಣ ಸಿಂಗೆ, ಚಕ್ರವರ್ತಿ, ಗೋಖಲೆ, ಡಿ. ಜಿ ಸಾಗರ್, ಬೆಳಗಾವಿಯ ಅರುಣ್ ಕಾಂಬ್ಳೆ, ಅಪ್ಪುಗೋಳ್, ಕಲ್ಪತ್ರಿ – ಇಂತಹ ನೂರಾರು ಹೆಸರುಗಳಿವೆ. ಮಂಗ್ಳೂರ ವಿಜಯ ಮತ್ತು ವಿಜಯ ಪಾಟೀಲ ಗುಲ್ಬರ್ಗಾ ಹಾಗೂ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಸಂಘಟನೆ ಕಟ್ಟಲು ಅಪಾರ ಶ್ರಮ ವಹಿಸಿದರು.
ಚಳವಳಿ ಕಟ್ಟುವಲ್ಲಿ ಮಹಿಳೆಯರೂ ಮುಂಚೂಣಿಯಲ್ಲಿ ಇದ್ದರು. ತುಮಕೂರಿನ ಗಂಗಮ್ಮ ಕೆಂಪಯ್ಯ, ಬೆಂಗಳೂರಿನ ಭಾರತಿ ರಾಜಣ್ಣ, ಕೋಲಾರದ ವೆಂಕಟನಾರಾಯಣಮ್ಮ, ಚಿಕ್ಕಮಗಳೂರಿನ ಉಮಾ ಗಂಗಯ್ಯ, ಕೋಟಿಗಾನಹಳ್ಳಿ ಶಾಂತಮ್ಮ, ಬಾಗೇಪಲ್ಲಿ ಗಂಗಮ್ಮ- ಮುಂತಾದ ಹಲವು ನಾಯಕಿಯರಿದ್ದರು.
ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-1)
ಗೌರಿಬಿದನೂರಿನ ಕೆ. ನಾರಾಯಣ ಸ್ವಾಮಿಯವರು ಅದೇ ಸಂದರ್ಭದಲ್ಲಿ ತೆಲುಗಿನ ಬೋಯಿ ಭೀಮಣ್ಣ ಅವರ ಅನುವಾದಿತ ಕೃತಿ ‘ದಲಿತ ಕೈಪಿಡಿ’ ಮತ್ತು ‘ಅಂಬೇಡ್ಕರ್ ವಾಣಿ’ ಎಂಬ ಎರಡು ಕಿರು ಪುಸ್ತಕಗಳನ್ನು ಹೊರತಂದರು. ಈ ಎರಡೂ ಪುಸ್ತಕಗಳು ಕಾರ್ಯಕರ್ತರ ಕೈ ದೀವಿಗೆಗಳಾದವು. ಅಂಬೇಡ್ಕರ್ ವಿಚಾರಧಾರೆ ಮತ್ತು ದಲಿತ ಅಸ್ಮಿತೆಯನ್ನು ಕಾರ್ಯಕರ್ತರ ಮನಸ್ಸಿಗೆ ಇಳಿಸಿದ ಪುಸ್ತಕಗಳಿವು. ನಿರಂತರ ಚರ್ಚೆ, ತರಬೇತಿ ಶಿಬಿರ, ಅಧ್ಯಯನದ ಪರಿಣಾಮವಾಗಿ ರಾಜ್ಯಾದ್ಯಂತ ಕಾರ್ಯಕರ್ತರ ದೊಡ್ಡ ದಂಡೇ ತಯಾರಾಯಿತು. ‘ಪಂಚಮ’ ಎಲ್ಲ ಕಾರ್ಯಕರ್ತರ ನಡುವಿನ ಸಾವಯವ ಸಂಬಂಧಗಳನ್ನು ಬೆಸೆಯತ್ತಿತ್ತು. ಸಾಹಿತ್ಯಿಕ, ಸಾಂಸ್ಕೃತಿಕ, ವೈಚಾರಿಕ, ಹೋರಾಟವಷ್ಟೇ ಅಲ್ಲದೇ ನೂರಾರು ಭೂ ಹೋರಾಟಗಳನ್ನು ‘ದಸಂಸ’ ಮುನ್ನಡೆಸಿತು.

ಖಾಲಿ ಇರುವ ಸರ್ಕಾರಿ ಭೂಮಿಯನ್ನು ನಾವು ಆಕ್ರಮಣ ಮಾಡುತ್ತಿದ್ದೆವು. ‘ಭೂ ಆಕ್ರಮಣ ಚಳವಳಿ’ ಎಂದೇ ಅದು ಹೆಸರಾಯಿತು. ನಾವು ನೆಲೆನಿಂತ ಭೂಮಿಯನ್ನು, ನಾವು ಉಳುಮೆ ಮಾಡಿದ ಭೂಮಿಯನ್ನು ನಮಗೆ ಕೊಡಿ ಎಂದು ಕೇಳುವುದು ಮತ್ತು ಅದಕ್ಕಾಗಿ ಹೋರಾಡುವುದು ನಮ್ಮ ಆದ್ಯತೆಯಾಗಿತ್ತು. ಖಾಸಗಿ ಭೂ ಮಾಲೀಕರು ಭೂಮಿ ಇಟ್ಟುಕೊಂಡು ದಬ್ಬಾಳಿಕೆ ಮಾಡುತ್ತಿದ್ದರು. ಗೇಣಿದಾರರಿಗೆ ಭೂಮಿ ಬಿಟ್ಟುಕೊಡಿ ಎಂದು ಹೋರಾಟ ಮಾಡುತ್ತಿದ್ದೆವು. ಭದ್ರಾವತಿಯ ಸಿದ್ಲಿಪುರ, ಎಚ್.ಡಿ.ಕೋಟೆಯ ದೇವಲಾಪುರ, ಕೋಲಾರದ ನಾಗಸಂದ್ರ, ಮರಸನಪಲ್ಲಿ, ಹಾಸನದ ಬಿದರೆ ಕಾವಲು, ರಾಯಚೂರಿನ ಮೆದಕಿನಾಳ – ಹೀಗೆ ಕರ್ನಾಟಕದಾದ್ಯಂತ ಭೂ ಹೋರಾಟಗಳು ನಡೆದವು. ಸಾವಿರಾರು ಎಕರೆ ಭೂಮಿಯನ್ನು ದಲಿತರು ಹೋರಾಟದ ಮೂಲಕ ಪಡೆದುಕೊಂಡರು. ಅಸ್ಪೃಶ್ಯತೆ ವಿರುದ್ಧದ ನಮ್ಮ ಹೋರಾಟಗಳು ನಿರಂತರವಾಗಿ ನಡೆಯುತ್ತಿದ್ದವು. ಸಂವಹನ ಮಾಧ್ಯಮಗಳ ಕೊರತೆ ನಡುವೆಯೂ ಎಲ್ಲ ಕಡೆ ನಡೆಯುವ ಹೋರಾಟಗಳ ವಿವರ ಹೇಗೋ ಎಲ್ಲರಿಗೂ ಮುಟ್ಟುತ್ತಿತ್ತು. ಮೈಸೂರಲ್ಲಿ ನಡೆದ ಸಭೆಯ ವಿವರ ಹೇಗೋ ಗುಲ್ಬರ್ಗಾವನ್ನೂ ತಲುಪುತ್ತಿತ್ತು. ದೂರದ ಬೆಳಗಾವಿಯ ಹಳ್ಳಿಯಲ್ಲೆಲ್ಲೋ ನಡೆದ ದೌರ್ಜನ್ಯದ ವಿವರಗಳು ಒಂದೆರಡು ದಿನಗಳಲ್ಲಿ ಇಡೀ ಕರ್ನಾಟಕಕ್ಕೆ ಹಬ್ಬುತ್ತಿತ್ತು. ಅಂತಹ ಬಾಂಧವ್ಯ, ಕರುಳು ಸಂಬಂಧದ ಅಂತರ್ ಪ್ರವಾಹ ಚಳವಳಿಯೊಳಗೆ ಇತ್ತು.
ಸಿದ್ಧಾಂತವೇ ನಾಯಕ
ಆಗ ನಮಗೆ ಯಾವ ನಾಯಕರೂ ಇರಲಿಲ್ಲ. ಯಾರ ನಡುವೆಯೂ ನಾಯಕತ್ವದ ಸಮಸ್ಯೆಯೂ ಇರಲಿಲ್ಲ. ಎಲ್ಲರೂ ಸಮಾನರು. ಸಿದ್ಧಾಂತವೇ ನಮ್ಮ ನಾಯಕ. ಪದಾಧಿಕಾರತ್ವ ಏನಿದ್ದರೂ ಸಮನ್ವಯದ ಕಾರಣಕ್ಕಾಗಿ ಮಾತ್ರ. ಒತ್ತಾಯ ಪೂರ್ವಕವಾಗಿ ಕಾರ್ಯಕರ್ತರನ್ನು ಪದಾಧಿಕಾರಿಗಳನ್ನಾಗಿ ಮಾಡಬೇಕಾಗುತ್ತಿತ್ತು. ಯಾವ ತೀರ್ಮಾನವೇ ಆಗಲಿ, ಕಾರ್ಯಕ್ರಮವೇ ಆಗಲಿ ಎಲ್ಲವನ್ನೂ ವ್ಯಾಪಕವಾಗಿ ಚರ್ಚಿಸಿಯೇ ತೀರ್ಮಾನಿಸಲಾಗುತ್ತಿತ್ತು. ಯಾರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ಅಭಿಪ್ರಾಯವನ್ನು ಸಂಘಟನೆ ಮೇಲೆ ಹೇರಲು ಅವಕಾಶವಿರಲಿಲ್ಲ. ಕರಪತ್ರಗಳಲ್ಲಿ ಬಾಬಾಸಾಹೇಬರ ಹೊರತಾಗಿ ಯಾರ ಭಾವಚಿತ್ರಗಳನ್ನಾಗಲೀ, ಹೆಸರುಗಳನ್ನಾಗಲೀ ಹಾಕಿಕೊಳ್ಳುತ್ತಿರಲಿಲ್ಲ. ಸಂಘಟನೆಯಲ್ಲಿ ಆಂತರಿಕ ಶಿಸ್ತಿಗೆ ತುಂಬಾ ಮಹತ್ವ ಇತ್ತು.
ಕಾರ್ಯಕರ್ತರಿಗೆ ಆಗಾಗ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿತ್ತು. ಜಗತ್ತಿನ ಎಲ್ಲ ಆಗುಹೋಗುಗಳನ್ನು ಶಿಬಿರಗಳಲ್ಲಿ ಚರ್ಚಿಸಲಾಗುತ್ತಿತ್ತು. ವಿವಿಧ ವಿದ್ವಾಂಸರು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಉಪನ್ಯಾಸ ಮತ್ತು ಚರ್ಚೆಗಳನ್ನು ಏರ್ಪಡಿಸಲಾಗುತ್ತಿತ್ತು. ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್- ಹೀಗೆ ಎಲ್ಲ ವಿಚಾರ ಧಾರೆಗಳನ್ನು ಅಧ್ಯಯನ ಮಾಡಲಾಗುತ್ತಿತ್ತು. ಸಂಘಟನೆಗಾಗಿ ಒಂದು ಸಂವಿಧಾನ ಮತ್ತು ಪ್ರಣಾಳಿಕೆಯನ್ನು ಬರೆದು ಸಿದ್ಧಪಡಿಸಲಾಗಿತ್ತು. ಸಂಘಟನೆಯ ಎಲ್ಲ ಕಾರ್ಯ ಚಟುವಟಿಕೆಗಳೂ ಸಂವಿಧಾನಕ್ಕೆ ಅನುಗುಣವಾಗಿಯೇ ನಡೆಯುತ್ತಿದ್ದವು. ಭಾರತೀಯ ಸಮಾಜದ ಎಲ್ಲ ಅಪಮಾನಿತ ಜಾತಿಗಳೂ ‘ದಲಿತ’ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ‘ದಸಂಸ’ ಸಂವಿಧಾನದಲ್ಲಿ ವ್ಯಾಖ್ಯಾನಿಸಲಾಗಿತ್ತು. ನಾವುಗಳು ಯಾರೂ ಜಾತಿಯಿಂದ ಗುರುತಿಸಿಕೊಳ್ಳುತ್ತಿರಲಿಲ್ಲ. ಬಹುತೇಕರಿಗೆ ಯಾರು ಯಾವ ಜಾತಿಯವರೆಂಬುದೂ ತಿಳಿದಿರಲಿಲ್ಲ. ತಿಳಿದುಕೊಳ್ಳುವ ಪ್ರಯತ್ನವನ್ನೂ ಯಾರೂ ಮಾಡುತ್ತಿರಲಿಲ್ಲ. ಹಾಗಾಗಿಯೇ ಎಲ್ಲ ತಳಸಮುದಾಯಗಳು ನಮ್ಮೊಂದಿಗಿದ್ದವು.
ಇದನ್ನೂ ಓದಿರಿ: ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ
ಒಕ್ಕಲಿಗರು, ಲಿಂಗಾಯತರು, ಕುರುಬರು, ಕುಂಬಾರರು, ಮಡಿವಾಳರು, ಕ್ಷೌರಿಕರು, ಮುಸ್ಲಿಮರು, ಕ್ರೈಸ್ತರು ಅಷ್ಟೇ ಏಕೆ ಪ್ರಜ್ಞಾವಂತ ಬ್ರಾಹ್ಮಣರೂ ನಮ್ಮೊಂದಿಗಿದ್ದರು. ಅಂದು ಶಿವಮೊಗ್ಗ ಜಿಲ್ಲಾ ಸಂಚಾಲಕರಾಗಿದ್ದ ನಾಗಭೂಷಣ ಅವರು ಬ್ರಾಹ್ಮಣರಾಗಿದ್ದರು. ಪ್ರಗತಿಪರ ಮತ್ತು ಶೂದ್ರ ಚಳವಳಿಯಲ್ಲಿದ್ದ ಅನೇಕರು ಕೈಗೂಡಿಸುತ್ತಿದ್ದರು. ಎಲ್ಲ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ಮಾಡಿದೆವು. ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಮಹಿಳಾ ಒಕ್ಕೂಟ ಹಾಗೂ ದಲಿತ ನೌಕರರ ಒಕ್ಕೂಟ ಕಟ್ಟಿದೆವು. ವೇದಿಕೆ ಕಾರ್ಯಕ್ರಮಗಳಿಗಿಂತ ಬೀದಿ ಚಳವಳಿ, ಕಾಲ್ನಡಿಗೆ ಜಾಥಾಗಳು ಹೆಚ್ಚಾಗಿ ಜರುಗಿದವು. ಡಿ.ಸಿ ಕಚೇರಿ, ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದೆವು. ಅಧಿಕಾರಿಗಳಿಗೆ ಮನವಿ ಪತ್ರ ಕೊಟ್ಟು ಕೈ ಮುಗಿದು ಕೇಳುತ್ತಿರಲಿಲ್ಲ. ಏನಿದ್ದರೂ ನಮ್ಮದು ಬೀದಿ ಹೋರಾಟ. ಮಂತ್ರಿಗಳ ಮನೆಗೆ ಮುತ್ತಿಗೆ ಹಾಕುತ್ತಿದ್ದೆವು. ನಮ್ಮಲ್ಲಿನ ಒಗ್ಗಟ್ಟು ನೋಡಿ ಪ್ರಭುತ್ವ ಹೆದರುತ್ತಿತ್ತು. ತಮ್ಮ ಮೇಲೆ ಆಗುತ್ತಿದ್ದ ದೌರ್ಜನ್ಯಗಳ ಸಂಬಂಧ ದೂರು ಕೊಡಲು ಅಂಜುತ್ತಿದ್ದ ದಲಿತರು, ದೂರು ದಾಖಲಿಸುವಷ್ಟು ಸ್ಥೈರ್ಯ ಬೆಳೆಸಿಕೊಂಡರು. ಅಧಿಕಾರಸ್ಥರು ಹಾಗೂ ರಾಜಕಾರಣಿಗಳನ್ನು ದೂರ ಇಟ್ಟಿದ್ದರಿಂದ ಸಮುದಾಯ ನಮ್ಮನ್ನು ನಂಬುತ್ತಿತ್ತು.
ಚಳವಳಿಗೆ ಈಗಿನಂತೆ ಆಗ ನಮಗೆ ತುಂಬಾ ಹಣದ ಅಗತ್ಯವೇನೂ ಕಾಣಿಸುತ್ತಿರಲಿಲ್ಲ. ಹಣವಿಲ್ಲದಿದ್ದರೂ ಚಳವಳಿ ನಡೆಯುತ್ತಿತ್ತು. ಕೆಲವು ಪೂರ್ಣಾವಧಿ ಕಾರ್ಯಕರ್ತರಿಗೆ ನೌಕರಿಯಲ್ಲಿದ್ದವರು ಸಹಾಯ ಮಾಡುತ್ತಿದ್ದರು. ಉಳಿದಂತೆ ಅಗತ್ಯ ಬಿದ್ದಾಗ ಸಮುದಾಯವೇ ದುಡ್ಡು ಕೊಡುತ್ತಿತ್ತು. ನಮ್ಮೂರು ಹೊನ್ನಾಪುರದಲ್ಲಿ ಏಳುದಿನ ಕಾರ್ಯಕರ್ತರ ತರಬೇತಿ ಶಿಬಿರ ಏರ್ಪಡಿಸಿದ್ದೆವು. ಕಾವೇರಿ ನದಿ ತೀರದ ಒಂದು ಸಮುದಾಯ ಭವನದಲ್ಲಿ ಶಿಬಿರ ನಡೆಯುತ್ತಿತ್ತು. ಸುಮಾರು ಎರಡುನೂರು ಜನ ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದರು. ಸಕಲೇಶಪುರದಿಂದ ಬಂದಿದ್ದ ಈಡಿಗ ಸಮುದಾಯದ ಹಾಡ್ಯ ಸೋಮಶೇಖರ್ ಎಂಬ ಯುವಕ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ನದಿಗೆ ಬಿದ್ದು ಸಾವಿಗೀಡಾದ. ಮೂರೇ ದಿನಕ್ಕೆ ಶಿಬಿರ ಮುಕ್ತಾಯ ಮಾಡಬೇಕಾಯಿತು. ಆತನ ಮೃತದೇಹವನ್ನು ಸಾಗಿಸಲು ನಮ್ಮ ಬಳಿ ಹಣವಿರಲಿಲ್ಲ. ಬಸ್ ನಿಲ್ದಾಣದಲ್ಲಿ, ಬಸ್‌ನಲ್ಲಿ ಹೋರಾಟದ ಗೀತೆಗಳನ್ನು ಹಾಡುತ್ತಾ, ಹಣ ಸಂಗ್ರಹ ಮಾಡಿಕೊಂಡು ಸಕಲೇಶಪುರ ತಲುಪಿದ್ದೆವು.
ಚಳವಳಿಗೂ ಸಮುದಾಯಕ್ಕೂ ತಾದ್ಯಾತ್ಮತೆ ಇತ್ತು. ಜನರಲ್ಲಿ ವಿಶ್ವಾಸ ಮೂಡಿತು. ಕುರುಬರ ಸಮಸ್ಯೆಯಾಗಲಿ, ಕುಂಬಾರರ ಸಮಸ್ಯೆಯಾಗಲೀ ಹೋರಾಟ ಮಾಡುತ್ತಿದ್ದೆವು. ಕೋಲಾರದ ಅನುಸೂಯಮ್ಮ ಪ್ರಕರಣ ಇದಕ್ಕೊಂದು ದೊಡ್ಡ ಉದಾಹರಣೆ. ಕುಂಬಾರರ ಮನೆಯ ಹೆಣ್ಣುಮಗಳು ಅನುಸೂಯಮ್ಮನ ಮೇಲೆ ಆದ ದೌರ್ಜನ್ಯ ಮತ್ತು ಆಕೆಯ ತಂದೆ ಶೇಷಗಿರಿಯಪ್ಪನ ಕೊಲೆಯನ್ನು ಖಂಡಿಸಿ, ಕೋಲಾರದ ಹುಣಸೀಕೋಟೆಯಿಂದ 1980ರಲ್ಲಿ ಬೆಂಗಳೂರಿನವರೆಗೆ ನಡೆಸಿದ ದಸಂಸ ಜಾಥಾ ಐತಿಹಾಸಿಕವಾದದ್ದು. ಆಗ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಕಾರ್ಯಕರ್ತರ ಮೇಲೆ ಪೊಲೀಸರು ಅಮಾನುಷ ದಾಳಿ ಮಾಡಿದ್ದರು. ಜಾಥಾವನ್ನು ವರದಿ ಮಾಡುತ್ತಿದ್ದ ನನ್ನ ಮೇಲೂ (ಆಗ ನಾನು ‘ಪ್ರಜಾವಾಣಿ’ಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ) ದಾಳಿಯಾಗಿ ಆಸ್ಪತ್ರೆ ಸೇರಿದ್ದೆ.
ಪ್ರತಿ ಜಿಲ್ಲೆಯಲ್ಲೂ ದಲಿತ ಚಳವಳಿ ವ್ಯಾಪಕವಾಗಿ ಬೆಳೆಯಿತು. ಜತೆಯಲ್ಲಿ ಯುವ ನಾಯಕತ್ವ ಕೂಡ ಬೆಳೆಯತೊಡಗಿತು. ಯುವಕರೇ ಚಳವಳಿಯ ಮುಂದಾಳುಗಳಾಗಿದ್ದರು. ಅಧಿಕಾರದಲ್ಲಿ ಕಾಂಗ್ರೆಸ್ ಇದ್ದಿದ್ದರಿಂದ ಮತ್ತು ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಹೇರಿದ್ದರಿಂದ ನಮ್ಮ ಹೋರಾಟ ಅವರ ವಿರುದ್ಧ ಇತ್ತು. ಕಾಂಗ್ರೆಸ್‌ಮಯವಾಗಿದ್ದ ದಲಿತ ಕಾಲೋನಿಗಳಲ್ಲಿ ಬದಲಾವಣೆಗಳು ಕಂಡುಬಂದವು. ಬಡವರು, ಹಿಂದುಳಿದವರು ಮತ್ತು ದಲಿತರ ಜನಪರ ಕೆಲಸಗಳನ್ನು ಮಾಡುತ್ತಿದ್ದ ಅರಸು ಅವರನ್ನೂ ಕಾಂಗ್ರೆಸ್ ಕಾರಣಕ್ಕೆ ಕಟುವಾಗಿ ನೋಡುತ್ತಿದ್ದೆವು. ಅವರು ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಯಷ್ಟೇ ಎಂಬುದು ಸಂಘಟನೆಯ ನಿಲುವಾಗಿತ್ತು.
ಇದನ್ನೂ ಓದಿರಿ: ವಿಶೇಷ ಲೇಖನ | ದಲಿತರು ಹಿಂದೂ ದೇವಾಲಯಗಳನ್ನು ಬಹಿಷ್ಕರಿಸಬೇಕಿದೆ
1985ರಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ದಸಂಸ’ ಅಂಬೇಡ್ಕರ್ ಜಯಂತಿಯನ್ನು ಆಯೋಜಿಸಿತ್ತು. ಸುಮಾರು ಒಂದು ಲಕ್ಷ ಜನ ಸೇರಿದ್ದ ಅಂದಿನ ಸಭೆಯಲ್ಲಿ ‘ದಸಂಸ’ದ ಬಾವುಟ ಮತ್ತು ಚಿಹ್ನೆಯನ್ನು ಬಿಡುಗಡೆ ಮಾಡಲಾಗಿತ್ತು. ಈ ಸಭೆಯ ಪರಿಣಾಮವಾಗಿಯೇ ಸರ್ಕಾರ ಅಂಬೇಡ್ಕರ್ ಜಯಂತಿಯನ್ನು ಸರ್ಕಾರಿ ಜಯಂತಿಯಾಗಿ ಆಚರಿಸಲು ಆರಂಭಿಸಿತು. ‘ಹೆಂಡ ಸಾರಾಯಿ ನಿಲ್ಲಿಸಿ; ಹೋಬಳಿಗೊಂದು ವಸತಿ ಶಾಲೆ ಆರಂಭಿಸಿ’ ಎಂಬ ಹೋರಾಟ ಆಗಲೇ ಆರಂಭವಾದದ್ದು. ರಾಜ್ಯಾದ್ಯಂತ ಈ ಚಳವಳಿ ವ್ಯಾಪಿಸಿದಾಗ ಸರ್ಕಾರ 1987-88ರಲ್ಲಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ನಾಲ್ಕು ವಸತಿ ಶಾಲೆಗಳನ್ನು ಆರಂಭಿಸಿತು. 1989ರಲ್ಲಿ ಆಗಿನ ವೀರೇಂದ್ರ ಪಾಟೀಲ್ ಸರ್ಕಾರ ಹೆಂಡ ಮಾರಾಟವನ್ನು ನಿಷೇಧಿಸಿತು.
1986ರ ಮಾರ್ಚ್ 19, 20ರಂದು ನಡೆದ ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧದ ಹೋರಾಟ ‘ದಸಂಸ’ ಮಾಡಿದ ಅತ್ಯಂತ ವೀರೋಚಿತ ಹೋರಾಟಗಳಲ್ಲೊಂದು. ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ದೇವರ ಹೆಸರಿನಲ್ಲಿ ಅತ್ಯಂತ ಅಮಾನುಷವಾದ ರೀತಿಯಲ್ಲಿ ದಲಿತ ಹೆಣ್ಣುಮಕ್ಕಳ ಬೆತ್ತಲೆ ಸೇವೆ ನಡೆಯುತ್ತಿತ್ತು. ಇದನ್ನು ನಿಲ್ಲಿಸಲು ‘ದಸಂಸ’ ತೀವ್ರ ಸ್ವರೂಪದ ಹೋರಾಟವನ್ನೇ ಮಾಡಬೇಕಾಯಿತು. ಬಿ. ಕೃಷ್ಣಪ್ಪನವರ ನೇತೃತ್ವದಲ್ಲಿ ನಡೆದ ಈ ಹೋರಾಟ ಹಿಂಸಾತ್ಮಕ ರೂಪ ಪಡೆದು ದೈಹಿಕ ಹಲ್ಲೆಗಳು ನಡೆದವು. ಅದರೂ ಅದನ್ನೆಲ್ಲ ಎದುರಿಸಿ ಬೆತ್ತಲೆ ಸೇವೆಯನ್ನು ಯಶಸ್ವಿಯಾಗಿ ತಡೆಗಟ್ಟಲಾಯಿತು. ಸರ್ಕಾರ ಕೂಡ ಆಗ ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿತ್ತು. ಈ ಹೋರಾಟದ ಪ್ರತಿಫಲವಾಗಿ ಸರಕಾರ ಈಗ ಬೆತ್ತಲೆ ಸೇವೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
1987ರ ಆಗಸ್ಟ್ 6ನೇ ತಾರೀಕು ಬೆಳಗಾವಿ ಜಿಲ್ಲೆಯ ಬೆಂಡಿಗೇರಿಯಲ್ಲಿ ದಲಿತರಿಗೆ ಮಲ ತಿನ್ನಿಸಿದ ಹೇಯ ಘಟನೆ ನಡೆದಿತ್ತು. ಇದನ್ನು ಪ್ರತಿಭಟಿಸಿ 1988ರಲ್ಲಿ ಬೆಂಗಳೂರಿನಲ್ಲಿ ‘ದಸಂಸ’ ಬೃಹತ್ ಪ್ರತಿಭಟನೆ ಆಯೋಜಿಸಿತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. ಆರ್.ಎಲ್. ಜಾಲಪ್ಪ ಗೃಹ ಸಚಿವರು. ಮೊದಲ ಬಾರಿಗೆ ಅಂದು ಬೆಂಗಳೂರಿನ ರಸ್ತೆಗಳು ದಲಿತರ ಆಕ್ರೋಶದಿಂದ ಸ್ತಬ್ಧವಾಗಿದ್ದವು. ಇಡೀ ಲಾಲ್ ಬಾಗ್ ತುಂಬಿಹೋಗಿತ್ತು. ಪ್ರತಿಭಟನಾ ಸಭೆ ನಡೆಯುತ್ತಿರುವಾಗಲೇ ಸರ್ಕಾರ ಆರೋಪಿಗಳ ಗಡಿಪಾರಿಗೆ ಆಜ್ಞೆ ಹೊರಡಿಸಿತು. ‘ದಸಂಸ’ದ ಮತ್ತೊಂದು ಮಹಾ ಸಮಾವೇಶ ನಡೆದದ್ದು 1991ರ ಏಪ್ರಿಲ್ 10ರಂದು. ವಿಧಾನಸೌಧದ ಮುಂಭಾಗದಲ್ಲಿ ಬಾಬಾಸಾಹೇಬರ ಶತಮಾನೋತ್ಸವ ದಿನದಂದು ಬೃಹತ್ ‘ಜನ ಕಲಾ ಮೇಳ’ ನಡೆಯಿತು. ದಲಿತರ ಕಲಾ ಸಿರಿವಂತಿಕೆ ಅಂದು ಬೆಂಗಳೂರು ಜನಕ್ಕೆ ಪರಿಚಯವಾಯಿತು. ಲಕ್ಷಾಂತರ ದಲಿತರು, ಸಾವಿರಾರು ಕಲಾವಿದರು ಅಂದು ನೆಲಮೂಲ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ದಲಿತರ ತಮಟೆ ಸದ್ದಿಗೆ ಆಳುವವರ ಗುಂಡಿಗೆಗಳು ಅಲುಗಾಡಿದ್ದವು.
1978ರಲ್ಲಿ ಬಿ. ಕೃಷ್ಣಪ್ಪ ಅವರು ರಾಜ್ಯ ಸಂಚಾಲಕರಾದ ನಂತರ 1982ರಲ್ಲಿ ಪೂರ್ಣಾವಧಿ ಕಾರ್ಯಕರ್ತರನ್ನು ರಾಜ್ಯ ಸಂಚಾಲಕರಾಗಿ ಆಯ್ಕೆ ಮಾಡಬೇಕೆಂದು ನಿರ್ಧರಿಸಿ, ಚಿಕ್ಕಮಗಳೂರಿನ ಎಂ.ಡಿ ಗಂಗಯ್ಯ ಅವರನ್ನು ರಾಜ್ಯ ಸಂಚಾಲಕರಾಗಿ ಆಯ್ಕೆಮಾಡಲಾಯಿತು. 1984ರಿಂದ ಒಂದು ವರ್ಷ ಕಾಲ ದೇವನೂರ ಮಹಾದೇವ ಮತ್ತು ಉಳಿದ ಅವಧಿಗೆ ಕೋಲಾರದ ಸಿ.ಎಂ.ಮುನಿಯಪ್ಪ ಇದ್ದರು. 1987ರಿಂದ ಚಂದ್ರಪ್ರಸಾದ್ ತ್ಯಾಗಿ ರಾಜ್ಯ ಸಂಚಾಲಕರಾದರು. 1990ರಲ್ಲಿ ಎನ್. ಮುನಿಸ್ವಾಮಿ ಮತ್ತು 1993ರಲ್ಲಿ ಗುಲ್ಬರ್ಗಾದ ಡಿ.ಜಿ ಸಾಗರ್ ಆಯ್ಕೆಯಾದರು. 1994ರಲ್ಲಿ ಸಂಘಟನೆ ಇಬ್ಭಾಗವಾದ ನಂತರ ಹಲವು ಸಂಘಟನೆಗಳೂ ಆದವು, ಹಲವರು ರಾಜ್ಯ ಸಂಚಾಲಕರೂ ಆದರು.
ಬಂಡಾಯ ಸಾಹಿತ್ಯ ಚಳವಳಿ
ಎಪ್ಪತ್ತರ ದಶಕದ ಕೊನೆಯಲ್ಲಿ ಹಂ.ಪ. ನಾಗರಾಜಯ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಅಂದು ಆಯೋಜನೆಯಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಕುರಿತ ಪ್ರತ್ಯೇಕ ಗೋಷ್ಠಿ ಏರ್ಪಡಿಸಬೇಕೆಂದು ಚೆನ್ನಣ್ಣ ವಾಲೀಕಾರ ಅವರು ‘ಪ್ರಜಾವಾಣಿ’ಯಲ್ಲಿ ಒಂದು ಪತ್ರ ಪ್ರಕಟಿಸಿದರು. ಹಂಪನಾ ಅವರು ಸಾಹಿತ್ಯದಲ್ಲಿ ದಲಿತ, ಬಲಿತ ಎಂಬುದೆಲ್ಲ ಇಲ್ಲ ಎಂದು ತಿರಸ್ಕರಿಸಿದರು. ಇದರಿಂದ ಕೆರಳಿದ ಪ್ರಗತಿಪರ ಸಾಹಿತಿಗಳು ಮತ್ತು ಚಿಂತಕರು ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯಾಗಿ ಪರ್ಯಾಯ ಸಾಹಿತ್ಯ ಸಮ್ಮೇಳನ ಆಯೋಜಿಸಲು ತೀರ್ಮಾನಿಸಿದರು. ಇದರ ಪರಿಣಾಮವಾಗಿ 1979ರಲ್ಲಿ ಹುಟ್ಟಿದ್ದೇ ‘ಬಂಡಾಯ ಸಾಹಿತ್ಯ ಸಂಘಟನೆ’. ಅದೂ ಕೂಡ ದಲಿತ ಚಳವಳಿಯ ಮುಂದುವರೆದ ಭಾಗವಾಗಿತ್ತು ಅನಿಸುತ್ತದೆ. ಆ ವೇಳೆಗಾಗಲೇ ನನ್ನ ‘ಬಂಡಾಯ’ ಎಂಬ ಕವನ ಸಂಕಲನ ಪ್ರಕಟವಾಗಿತ್ತು. ‘ಬಂಡಾಯ ಸಾಹಿತ್ಯ ಸಂಘಟನೆ’ ಎಂಬ ಹೆಸರೂ ನಾನೇ ಸೂಚಿಸಿದ್ದು.

ಕನ್ನಡದ ಅಪ್ರತಿಮ ವಿದ್ವಾಂಸರೂ ಸಂಸ್ಕೃತಿ ಚಿಂತಕರೂ ಆದ ಡಿ.ಆರ್ ನಾಗರಾಜ್, ಕಿ.ರಂ. ನಾಗರಾಜ್, ಚಂದ್ರಶೇಖರ ಪಾಟೀಲ್ ಮುಂತಾದವರು ಈ ಚಳವಳಿಯ ಮುಂಚೂಣಿಯಲ್ಲಿದ್ದರು. ‘ಖಡ್ಗವಾಗಲಿ ಕಾವ್ಯ; ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ – ಇದು ಡಿ.ಆರ್ ನಾಗರಾಜ್ ಮತ್ತು ಕಾಳೇಗೌಡ ನಾಗವಾರ ಅವರು ಚಳವಳಿಗೆ ಜಂಟಿಯಾಗಿ ನೀಡಿದ ಘೋಷವಾಕ್ಯ. ಬಂಡಾಯ ಸಾಹಿತ್ಯ ಸಂಘಟನೆಯ ಮೊದಲ ರಾಜ್ಯ ಸಮ್ಮೇಳನ 1979ರ ಮಾರ್ಚ್ 10, 11ರಂದು ಬೆಂಗಳೂರಿನ ದೇವಾಂಗ ಸಂಘ ಹಾಸ್ಟೆಲ್‌ನಲ್ಲಿ ಎರಡು ದಿನ ಯಶಸ್ವಿಯಾಗಿ ನಡೆಯಿತು. ತೆಲುಗಿನ ಪ್ರಸಿದ್ಧ ಕವಿ ಶ್ರೀ ಶ್ರೀ ಸೇರಿದಂತೆ ಕರ್ನಾಟಕ ಹಾಗೂ ನೆರೆ ರಾಜ್ಯಗಳ ಎಲ್ಲ ಪ್ರಗತಿಪರ ಸಾಹಿತಿ ಕಲಾವಿದರು ಭಾಗವಹಿಸಿದ್ದರು. ಇದೇ ಸಮಾವೇಶದಲ್ಲಿ ದೇವನೂರ ಮಹಾದೇವ ‘ಬಂಡೆಗಳ ಮೇಲೆ ಚಿಗುರೊಡೆಯಬೇಕಾಗಿದೆ’ ಎಂಬ ಸಂದೇಶವನ್ನು ನೀಡಿದರು.
ಇದನ್ನೂ ಓದಿರಿ: ‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?
ಸಂಘಟನೆಯ ಮೊದಲ ರಾಜ್ಯ ಸಂಚಾಲಕರಾಗಿ ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ ಮತ್ತು ನಾನು ಆಯ್ಕೆಯಾಗಿದ್ದೆವು. ‘ಬಂಡಾಯ’ ಚಳವಳಿಯ ಪರವಾಗಿ ‘ಪ್ರಜಾವಾಣಿ’ ಮತ್ತು ಅದರ ಸಂಪಾದಕರಾದ ಕೆ.ಎನ್.ಹರಿಕುಮಾರ್ ನಿಂತಿದ್ದರಿಂದ ಪರ್ಯಾಯ ಸಮಾವೇಶಕ್ಕೆ ದೊಡ್ಡ ಬೆಂಬಲವೂ ಸಿಕ್ಕಿತ್ತು. ನಾಡಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರ್ಯಾಯಗಳನ್ನು ನೀಡುವ ಪ್ರತಿಜ್ಞೆಯೊಂದಿಗೆ ಸಮಾವೇಶ ಅಂತ್ಯಗೊಂಡಿತ್ತು. ಸರ್ಕಾರಿ ಕೃಪಾಪೋಷಿತ ಸಾಹಿತ್ಯ ಪರಿಷತ್ತೂ ಸೇರಿದಂತೆ ಸರ್ಕಾರದ ಯಾವುದೇ ಅಕಾಡೆಮಿ, ಪ್ರಾಧಿಕಾರ, ನಿಗಮ-ಮಂಡಳಿಗಳಲ್ಲೂ ಇನ್ನು ಮುಂದೆ ಭಾಗವಹಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನೂ ಎಲ್ಲರೂ ಕೈಗೊಂಡಿದ್ದೆವು. ಆರಂಭದಲ್ಲಿ ‘ಬಂಡಾಯ ಸಾಹಿತ್ಯ ಚಳವಳಿ’ ತುಂಬಾ ಬಿರುಸಾಗಿ ಹಬ್ಬಿತು. ಸಾಹಿತ್ಯ ವಲಯದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿತು. ರಾಜ್ಯಾದ್ಯಂತ ಸಮ್ಮೇಳನಗಳನ್ನು ನಡೆಸಲಾಯಿತು. ಆದರೆ ಈ ಕಾವು ಬಹಳ ದಿನ ಉಳಿಯಲಿಲ್ಲ. ಬಂಡಾಯ ಚಳವಳಿಯ ಮುಂಚೂಣಿಯಲ್ಲಿದ್ದ ಬಹುತೇಕರು ಒಂದೆರಡು ವರ್ಷಗಳಲ್ಲೇ ತಮ್ಮ ಪ್ರತಿಜ್ಞೆಯನ್ನು ತಾವೇ ಮುರಿದರು. ಕಸಾಪ ಸಮ್ಮೇಳನಗಳಲ್ಲಿ ಭಾಗವಹಿಸಿದರು. ಅಕಾಡೆಮಿ, ಪ್ರಾಧಿಕಾರ, ನಿಗಮ-ಮಂಡಳಿಗಳಲ್ಲಿ ಜಾಗ ಪಡೆಯತೊಡಗಿದರು. ಬಂಡಾಯ ಸಾಹಿತ್ಯ ಸಂಘಟನೆ ದುರ್ಬಲವಾಗತೊಡಗಿತು.
(ಮುಂದುವರಿಯುತ್ತದೆ..)
(‘ಈದಿನ.ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಇಂದೂಧರ ಹೊನ್ನಾಪುರ
ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನರಾದ ಇಂದೂಧರ ಹೊನ್ನಾಪುರ ಅವರು ಕರ್ನಾಟಕ ದಲಿತ ಚಳವಳಿಯನ್ನು ಕಟ್ಟಿದವರಲ್ಲಿ ಒಬ್ಬರು. ದಲಿತ ಚಳವಳಿಯ ಭಾಗವಾಗಿದ್ದ 'ಪಂಚಮ' ಪತ್ರಿಕೆಯನ್ನು ಮುನ್ನಡೆಸಿದರು. 'ಪ್ರಜಾವಾಣಿ'ಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ಸಂವಾದ' ಮಾಸಿಕದ ಸಂಪಾದಕರಾಗಿದ್ದಾರೆ. 'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿವೆ.




