ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-3)

Date:

(ಮುಂದುವರಿದ ಭಾಗ) ರಾಜಕಾರಣ ಪ್ರವೇಶ: ದಲಿತ ಚಳವಳಿ ಆರಂಭವಾದದ್ದೇ ಕಾಂಗ್ರೆಸ್ ವಿರೋಧದ ಮೂಲಕ. ದೇವನೂರ ಮಾಹಾದೇವ, ಬಿ. ಕೃಷ್ಣಪ್ಪ ಸೇರಿದಂತೆ ಬಹುತೇಕ ನಾವೆಲ್ಲ ಸಮಾಜವಾದಿ ಹಿನ್ನೆಲೆಯವರು. ರಾಮಮನೋಹರ ಲೋಹಿಯಾರಿಂದ ಪ್ರಭಾವಿತರಾದವರು. ನಂತರ ಅಂಬೇಡ್ಕರ್ ವಿಚಾರಧಾರೆಗೆ ಹೊರಳಿದ್ದವರು. ಸಿದ್ಧಲಿಂಗಯ್ಯ ಮಾರ್ಕ್ಸ್‌ವಾದಿ ಹಿನ್ನೆಲೆಯವರು. ಕೋಲಾರ ಮತ್ತು ರಾಯಚೂರಿನ ಕೆಲವರು ನಕ್ಸಲ್ ಚಳವಳಿಯಿಂದಲೂ ಪ್ರಭಾವಿತರಾದವರು. ಎಲ್ಲರೂ ಒಂದಲ್ಲ ಒಂದು ರೀತಿ ಕಾಂಗ್ರೆಸ್ ವಿರೋಧಿ ರಾಜಕೀಯ ಚಿಂತನೆಯವರು. ‘ದಸಂಸ’ವನ್ನು ರಾಜಕೀಯೇತರ ಸಾಂಸ್ಕೃತಿಕ ಸಂಘಟನೆ ಎಂದು ಘೋಷಿಸಿಕೊಂಡಿದ್ದರೂ ಅದರ ಮುಂಚೂಣಿ ನಾಯಕರೆಲ್ಲ ರಾಜಕೀಯ ಚಿಂತನೆಯ ಹಿನ್ನೆಲೆಯವರೇ ಆಗಿದ್ದರು. ಬಾಬಾಸಾಹೇಬರು ಕೂಡ ಕಾಂಗ್ರೆಸ್ ವಿರೋಧಿಯಾಗಿದ್ದುದರಿಂದ ನಮ್ಮ ಕಾಂಗ್ರೆಸ್ ವಿರೋಧಕ್ಕೆ ಮತ್ತಷ್ಟು ಬಲ ಬಂದಿತ್ತು.

ಮೂರು ದಶಕಗಳ ಕಾಲ ನಿರಂತರವಾಗಿ ದೇಶದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ವಿರುದ್ಧ ದೇಶಾದ್ಯಂತ ದೊಡ್ಡ ಅಲೆ ಎದ್ದಿತ್ತು. ಶ್ರೀಮತಿ ಇಂದಿರಾಗಾಂಧಿಯವರ ಸರ್ವಾಧಿಕಾರಿ ಆಡಳಿತದ ವಿರುದ್ಧ ಜನ ದಂಗೆ ಏಳುತ್ತಿದ್ದರು. ಜಯಪ್ರಕಾಶ ನಾರಾಯಣ್ ನೇತೃತ್ವದಲ್ಲಿ ನವನಿರ್ಮಾಣ ಚಳವಳಿ ವ್ಯಾಪಕವಾಗಿ ಹಬ್ಬಿತ್ತು. ಪರಿಸ್ಥಿತಿ ನಿಭಾಯಿಸಲಾರದೆ ಇಂದಿರಾಗಾಂಧಿಯವರು ‘ತುರ್ತು ಪರಿಸ್ಥಿತಿ’ಯನ್ನು ಘೋಷಿಸಿದರು. ಈ ಬೆಳವಣಿಗೆಯಿಂದಾಗಿ ಇಡೀ ದೇಶದ ರಾಜಕೀಯ ಸ್ಥಿತಿಯೇ ಬದಲಾಗಿಹೋಯಿತು.

ಆರಂಭದಲ್ಲಿ ‘ದಸಂಸ’ ಚುನಾವಣೆಗಳಲ್ಲಿ  ಭಾಗವಹಿಸಬಾರದು, ಬಹಿಷ್ಕರಿಸಬೇಕು ಎಂಬ ನಿಲುವನ್ನು ಹೊಂದಿತ್ತು. ಆದರೆ ಬದಲಾದ ರಾಜಕೀಯ ಸ್ಥಿತಿಯಲ್ಲಿ ದೇಶದ ಪ್ರಜಾಸತ್ತಾತ್ಮಕ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಚುನಾವಣೆಗಳಲ್ಲಿ ಭಾಗವಹಿಸಬೇಕೆಂಬ ತೀರ್ಮಾನಕ್ಕೆ ಬಂದಿತು. ಆರಂಭದಲ್ಲಿ ನಮ್ಮಲ್ಲಿ ಕೆಲವು ಗೊಂದಲಗಳಿದ್ದರೂ ನಂತರ ಎಲ್ಲರೂ ಸರ್ವಾನುಮತದಿಂದ ಒಪ್ಪಿಕೊಂಡೆವು. ತುರ್ತು ಪರಿಸ್ಥಿತಿಯ ಘೋಷಣೆ ನಂತರವಂತೂ ಸಕ್ರಿಯವಾಗಿ ಚುನಾವಣೆಯಲ್ಲಿ ಭಾಗವಹಿಸಲೇಬೇಕಾದ ಅನಿವಾರ್ಯತೆ ಮೂಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಂತರ ನಡೆದ ಚುನಾವಣೆಗಳಲ್ಲಿ ‘ದಸಂಸ’ ಸಕ್ರಿಯವಾಗಿ ಭಾಗವಹಿಸಿತು. ಕಾಂಗ್ರೆಸ್‌ಮಯವಾಗಿದ್ದ ದಲಿತ ಕೇರಿಗಳಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಪ್ರಬಲವಾಗಿ ಹುಟ್ಟಲು ಕಾರಣವಾಯಿತು. ಸಹಜವಾಗಿಯೇ ಕಾಂಗ್ರೆಸ್ ಬೇರುಗಳು ಸಡಿಲಗೊಂಡವು. ಈ ಚಳವಳಿಗಳಿಂದಾಗಿ ದೇಶದಲ್ಲಿ 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ನಂತರ 1983ರಲ್ಲಿ ರಾಜ್ಯದಲ್ಲಿಯೂ ಜನತಾಪಕ್ಷ ಅಧಿಕಾರಕ್ಕೆ ಬಂದು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು. ‘ದಸಂಸʼ ಒಡನಾಟದ ಹಲವರು ಶಾಸಕರೂ, ಮಂತ್ರಿಗಳೂ ಆದರು. ದಲಿತ ಚಳವಳಿಯಲ್ಲಿ ಇಲ್ಲದಿದ್ದರೂ ಚಳವಳಿಯ ಕಾರಣಕ್ಕೆ ಗೆದ್ದಿದ್ದೇವೆ ಎಂಬ ಭಾವನೆ ಇದ್ದ ಜನತಾಪಾರ್ಟಿಯ ಅನೇಕರು ‘ದಸಂಸ’ ಕಾರ್ಯಕರ್ತರೊಂದಿಗೆ ಹೆಚ್ಚು ಸಲುಗೆಯಿಂದ ಇರಲಾರಂಭಿಸಿದ್ದರು.

ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-1)

1983ರ ಒಂದು ಘಟನೆಯನ್ನು ಇಲ್ಲಿ ಹೇಳಬೇಕು. ಮತಗಳಿಕೆಯಲ್ಲಿ ‘ದಸಂಸʼ ಪ್ರಭಾವ ಹೆಚ್ಚಿದಂತೆಲ್ಲ ಜನತಾ ಪಕ್ಷ ‘ದಸಂಸʼವನ್ನು ವಿಶ್ವಾಸದಿಂದ ಕಾಣಲಾರಂಭಿಸಿತ್ತು. ನಾವು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಭಾವ ಬೀರುವಷ್ಟು ಚೈತನ್ಯ ಹೊಂದಿದ್ದೆವು. ಇದರ ಪರಿಣಾಮ 1983ರ ಚುನಾವಣೆಯಲ್ಲಿ ನಾವು ಆಯ್ಕೆ ಬಯಸುವ ವಿವಿಧ ಸಮುದಾಯಗಳ ಹನ್ನೊಂದು ಅಭ್ಯರ್ಥಿಗಳ ಹೆಸರುಗಳನ್ನು ಚೀಟಿಯೊಂದರಲ್ಲಿ ಬರೆದು ನಂಬಿಕಸ್ಥರೊಬ್ಬರ ಮೂಲಕ ಪಕ್ಷದ ನಾಯಕರಿಗೆ ಕಳುಹಿಸಿದ್ದೆವು. ಯಾರನ್ನೂ ಭೇಟಿ ಕೂಡ ಮಾಡಿರಲಿಲ್ಲ. ಆಶ್ಚರ್ಯ ಎಂಬಂತೆ ನಮ್ಮ ಪಟ್ಟಿಯಲ್ಲಿದ್ದ ಹತ್ತು ಜನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ‘ದಸಂಸʼ ಘನತೆಗೆ ಇದು ದೊಡ್ಡ ಕೈಗನ್ನಡಿಯಾಗಿತ್ತು. ಈಗಿನ ರಾಜಕಾರಣದಲ್ಲಿ ಇದು ಊಹಿಸಿಕೊಳ್ಳಲೂ ಆಗದ ಘಟನೆ.

1 Dalit Vidhyarthi Okkuta
ಕೋಲಾರದಲ್ಲಿ 1983ರ ಫೆಬ್ರವರಿ 12 ಮತ್ತು 13ರಂದು ನಡೆದ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಸಂಘದ ಮೊದಲ ಸಮ್ಮೇಳನದಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಪತ್ನಿ ಸವಿತಾ ಅಂಬೇಡ್ಕರ್‌ ಭಾಗವಹಿಸಿದ್ದರು. ಪ್ರೊ. ಬಿ.ಕೃಷ್ಣಪ್ಪ, ರಾಮದಾಸ್‌ ಅಠಾವಳೆ (ಆಗಿನ ಕೇಂದ್ರ ಸಚಿವ), ದೇವನೂರ ಮಹಾದೇವ ಚಿತ್ರದಲ್ಲಿದ್ದಾರೆ.

ಈ ಬೆಳವಣಿಗೆಯಿಂದ ಅಧಿಕಾರದ ಒಡನಾಟ ದಲಿತ ನಾಯಕರಿಗೆ ತೆರೆದುಕೊಂಡಿತು. ವಿಧಾನಸೌಧದ ಮೆಟ್ಟಿಲು ತುಳಿಯವದವರಿಗೆ, ರಾಜಕಾರಣಿಗಳ ಜೊತೆ ಬೆರೆಯದವರಿಗೆ ಮೊದಲ ಬಾರಿಗೆ ಅಧಿಕಾರದ ಬಾಗಿಲು ತೆರೆದಿತ್ತು. ಇದನ್ನು ಅರಗಿಸಿಕೊಂಡವರು ಬಹಳ ಕಡಿಮೆ ಮಂದಿ. ಹೆಚ್ಚಿನ ಜನರಿಗೆ ಒಂದು ಆರೋಗ್ಯಕರ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗಲಿಲ್ಲ. ಅಧಿಕಾರಸ್ಥರ ಒಡನಾಟದಿಂದಾಗಿ ಚಳವಳಿಯ ತೀವ್ರತೆ ಕಡಿಮೆಯಾಗಲು ಶುರುವಾಯಿತು. ಸಮುದಾಯವು ದಲಿತ ಹೋರಾಟಗಾರರನ್ನು ಅನುಮಾನಿಸಲಾರಂಭಿಸಿತು. ಈ ರಾಜಕೀಯ ಸ್ಥಿತ್ಯಂತರವನ್ನು ನಿರ್ವಹಿಸುವಲ್ಲಿ, ಅರಗಿಸಿಕೊಳ್ಳುವಲ್ಲಿ ದಲಿತ ಚಳವಳಿಯ ಬಹುತೇಕ ಮುಂದಾಳುಗಳು ಸೋತರು.

ಈ ಎಲ್ಲ ವೈಫಲ್ಯಕ್ಕೆ ಕೆಲವರು ದೇವನೂರ ಮಹಾದೇವ ಅವರನ್ನು ದೂಷಿಸಲು ಆರಂಭಿಸಿದರು. ಸಾಹಿತಿಯಾಗಿ ಅತ್ಯಂತ ಎತ್ತರದ ಸ್ಥಾನ ಪಡೆದಿದ್ದ ಕಾರಣಕ್ಕೆ ಮಹಾದೇವ ಅವರಿಗೆ ಎಲ್ಲ ಕಡೆ ಅಗ್ರಸ್ಥಾನ ಸಿಗುತ್ತಿತ್ತು. ಅಧಿಕಾರಿಗಳು, ಶಾಸಕರು, ಮಂತ್ರಿಗಳು ಬೇಡವೆಂದರೂ ಅವರನ್ನು ಕಾಣಲು ಬರುತ್ತಿದ್ದರು. ಇದು ಸಂಘಟನೆಯ ಮುಂಚೂಣಿಯಲ್ಲಿದ್ದ ಕೆಲವರಲ್ಲಿ ಅಸೂಯೆ ಮತ್ತು ಅಸಮಾಧಾನಕ್ಕೆ ಕಾರಣವಾಯಿತು. ರಾಜಕೀಯ ತೀರ್ಮಾನವನ್ನು ಸರ್ವಾನುಮತದಿಂದ ಕೈಗೊಂಡಿದ್ದರೂ ಅದಕ್ಕೆ ಮಹಾದೇವ ಅವರೊಬ್ಬರೇ ಕಾರಣ ಎನ್ನುವಂತೆ ಆರೋಪಿಸಲು ಆರಂಭಿಸಿದರು. ವಿಚಿತ್ರವೆಂದರೆ ರಾಜಕೀಯ ಅಧಿಕಾರದ ಆಸೆ ಹೊಂದಿದ ಬಹುತೇಕರು, ರಾಜಕೀಯ ಅಧಿಕಾರದ ಹತ್ತಿರಕ್ಕೂ ಸುಳಿಯದಿದ್ದ ಮಹಾದೇವ ಅವರನ್ನು ದೂರತೊಡಗಿದರು. ಹಾಗೆ ನೋಡಿದರೆ ರಾಜಕೀಯ ಅಧಿಕಾರಗಳು ಹುಡುಕಿಕೊಂಡು ಮನೆ ಬಾಗಿಲಿಗೆ ಬಂದಾಗಲೂ ಮಹಾದೇವ ಅವುಗಳನ್ನು ತಿರಸ್ಕರಿಸಿದರು. ವಿಧಾನ ಪರಿಷತ್ತಿನ ಸದಸ್ಯತ್ವವನ್ನು ನಿರಾಕರಿಸಿದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಹೇಳಿದಾಗಲೂ ಬೇಡವೆಂದರು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿರಾಕರಿಸಿದರು. ನೃಪತುಂಗ ಪ್ರಶಸ್ತಿಯನ್ನು ಬೇಡವೆಂದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನೂ ತಿರಸ್ಕರಿಸಿದರು.

ಎಪ್ಪತ್ತು ಎಂಬತ್ತರ ದಶಕದ ಹೋರಾಟ ಜನಸಮುದಾಯದ ಜೊತೆ ಗುರುತಿಸಿಕೊಂಡರೆ, ತೊಂಭತ್ತರ ನಂತರದ ಹೋರಾಟ ಜನಸಮುದಾಯವನ್ನು ಏಣಿಯಾಗಿ ಬಳಸಿಕೊಂಡು ಅಧಿಕಾರಸ್ಥರ ವಿಶ್ವಾಸ ಬೆಳೆಸಿಕೊಳ್ಳಲು ವೇದಿಕೆಯಾಗತೊಡಗಿತು. 1990ರ ವೇಳೆಗೆ ದೇಶದಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಜೊತೆಗೆ ಕೋಮುವಾದೀಕರಣದ ಸಮಸ್ಯೆ ಉದ್ಭವಿಸಿತ್ತು.

ಗಾಂಧಿ ಸಿನಿಮಾ – ಭಿನ್ನಾಭಿಪ್ರಾಯ

ಬಿ. ಕೃಷ್ಣಪ್ಪ ಮತ್ತು ದೇವನೂರ ಮಹಾದೇವ ಅವರಿಗೆ ಹಿಂದಿನಿಂದಲೂ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಇದಕ್ಕೆ ಮೊದಲು ಕಾರಣವಾಗಿದ್ದು ಗಾಂಧಿ-ಅಂಬೇಡ್ಕರ್ ವಿಚಾರ. ಗಾಂಧಿ ಸಿನಿಮಾ ಬಂದಾಗ ದಸಂಸ, ‘ಗಾಂಧಿ ಸಿನಿಮಾ ಯಾರೂ ನೋಡಬಾರದು’ ಎಂದು ತೀರ್ಮಾನಿಸಿತು. ಮಹಾದೇವ ಅವರು ಅದನ್ನು ವಿರೋಧಿಸಿದರು. ಬಿ.ಕೃಷ್ಣಪ್ಪನವರು ಗಾಂಧಿ ಸಿನಿಮಾಕ್ಕೆ ಬಹಿಷ್ಕಾರ ಹಾಕಬೇಕು, ಬಿಡುಗಡೆಯಾಗಬಾರದು ಎಂದು ಹಠ ಹಿಡಿದಿದ್ದರು. ಬೆಂಗಳೂರಿನ ಲಿಡೋ ಚಿತ್ರಮಂದಿರದ ಎದುರು ಪ್ರತಿಭಟಿಸಿದ್ದರು. ಆದರೆ ಮಹಾದೇವ ಅವರು ಗಾಂಧಿ ಸಿನಿಮಾ ನೋಡಿದ್ದೂ ಅಲ್ಲದೆ, ‘ಆಕಾಶಕ್ಕೆ ಮೂರು ಗೇಣು ಕಮ್ಮಿ’ ಎಂದು ಲೇಖನವನ್ನೂ ಬರೆದುಬಿಟ್ಟರು. ಈ ಘಟನೆ ‘ದಸಂಸʼದ ಒಳಗೆ ಒಂದಷ್ಟು ಕಾಲ ವಿವಾದಕ್ಕೆ ಕಾರಣವಾಗಿತ್ತು.

edit gandhi

ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-2)

ರಾಜ್ಯದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಕವಿ ಸಿದ್ದಲಿಂಗಯ್ಯ ಅವರು ವಿಧಾನಪರಿಷತ್ತಿನ ಸದಸ್ಯರಾದರು. ಗೋವಿಂದಯ್ಯ ಚಾಮರಾಜನಗರದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತರು. ಮಹಾದೇವ ಅವರ ಸಹೋದರ ದೇವನೂರು ಶಿವಮಲ್ಲು ‘ವಯಸ್ಕರ ಶಿಕ್ಷಣ ಸಮಿತಿ’ಯ ಅಧ್ಯಕ್ಷರಾದರು. ಈ ನೇಮಕಾತಿ ಸಂಘಟನೆಯಲ್ಲಿ ಬೇರೆ ಸಮಸ್ಯೆಗಳನ್ನು ಹುಟ್ಟುಹಾಕಿತು. ಶಿವಮಲ್ಲು ನೇಮಕಾತಿಗೆ ಮಹಾದೇವ ಅವರೇ ಕಾರಣ ಎಂಬುದು ಕೆಲವರ ಮನಸ್ಸಿನಲ್ಲಿ ಹೊಕ್ಕಿಬಿಟ್ಟಿತ್ತು. ಕೆಲವರು ಇದನ್ನು ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದರು. ಇದರಲ್ಲಿ ದೇವನೂರರ ಪಾತ್ರ ಏನೂ ಇರಲಿಲ್ಲವೆಂದು ನನಗೆ ಚೆನ್ನಾಗಿ ಗೊತ್ತಿತ್ತು. ನನ್ನ ಸಹಪಾಠಿಯಾಗಿದ್ದ ಶಿವಮಲ್ಲು, ‘ನಮ್ಮಣ್ಣನ ಮಾತು ಹೆಗಡೆ ಕೇಳ್ತಾರೆ, ಆದರೆ ಅವರು ಹೇಳಲ್ಲ. ನಮ್ಮಣ್ಣನಿಂದಾಗಿಯೇ ನನಗೆ ರಾಜಕೀಯ ಅವಕಾಶಗಳು ಕೈತಪ್ಪುತ್ತಿವೆ’ ಎಂದು ಆಗಾಗ್ಗೆ ದೂರುತ್ತಿದ್ದರು.

ಸಾಮಾನ್ಯವಾಗಿ ಯಾರ ವಿಚಾರವಾಗಿಯೂ ದೇವನೂರರು ಪ್ರಭಾವ ಬಳಸಲು ಹೋಗುತ್ತಿರಲಿಲ್ಲ. ವಾಸ್ತವದಲ್ಲಿ ಶಿವಮಲ್ಲು ಅವರಿಗೆ ಅಧ್ಯಕ್ಷಗಿರಿ ಸಿಕ್ಕಿದ್ದು- ಯು. ಆರ್. ಅನಂತಮೂರ್ತಿ ಅವರಿಂದಾಗಿ. ಪತ್ರಕರ್ತನಾಗಿದ್ದ ನನಗೆ ಈ ಎಲ್ಲ ಮಾಹಿತಿ ತಿಳಿದಿತ್ತು. ಕೃಷ್ಣಪ್ಪನವರಿಗೆ ವಾಸ್ತವವನ್ನು ಮನವರಿಕೆ ಮಾಡಿಸಲು ಪ್ರಯತ್ನಿಸಿದೆ. ಪ್ರಯೋಜನವಾಗಲಿಲ್ಲ. ಈ ಸಮಸ್ಯೆ ಎಲ್ಲಿಯವರೆಗೆ ಹೋಯಿತೆಂದರೆ, ‘ಜಾತಿ ಕಾರಣಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಲಿಲ್ಲ’ ಎಂಬ ಭಾವನೆ ಕೃಷ್ಣಪ್ಪನವರಿಗೆ ಮೊಳೆಯಿತು. ಇದು ಒಬ್ಬರಿಂದ ಒಬ್ಬರಿಗೆ ಹಬ್ಬಿ ಚಳವಳಿಯ ಮುಂಚೂಣಿಯಲ್ಲಿದ್ದ ಎಡ, ಬಲ ಸಮುದಾಯಗಳಲ್ಲಿ ಸಣ್ಣ ಪ್ರಮಾಣದ ಅಪನಂಬಿಕೆ ಮೂಡಲಾರಂಭಿಸಿತು.

ಬಿ. ಫಾರಂ ರಗಳೆ

ನಂತರದ ದಿನಗಳಲ್ಲಿ ದಲಿತ ಚಳವಳಿ ನೇರವಾಗಿ ಚುನಾವಣೆಗೆ ಇಳಿಯಬೇಕು, ಇತರರಿಗೆ ಓಟು ಹಾಕಿದ್ದು ಸಾಕು ಎಂಬ ಅಭಿಪ್ರಾಯ ಬೆಳೆಯತೊಡಗಿತು. ಕೃಷ್ಣಪ್ಪ ಅವರೂ ಸೇರಿದಂತೆ ಬಹುತೇಕರಲ್ಲಿ ಇದೇ ಅಭಿಪ್ರಾಯ ಮೂಡತೊಡಗಿತು. ಅಷ್ಟರಲ್ಲಿ ಜನತಾ ಪಕ್ಷ ಒಡೆದು ಇಬ್ಭಾಗವಾಗಿತ್ತು. 1989ರಲ್ಲಿ ಮತ್ತೆ ಚುನಾವಣೆ ಬಂತು. ಜನತಾ ದಳ ಮತ್ತು ಸಮಾಜವಾದಿ ಜನತಾ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಎಸ್.ಸಿ ಮೀಸಲು ಕ್ಷೇತ್ರಗಳಿಗೆ ಟಿಕೆಟ್ ಕೊಡುವ ಮುನ್ನ ‘ದಸಂಸ’ದೊಂದಿಗೆ ಸಮಾಲೋಚನೆಗೆ ಜನತಾ ದಳದಿಂದ ಆಹ್ವಾನ ಬಂತು. ಜನತಾ ದಳ ಸಂಸದೀಯ ಮಂಡಲಿ ಸಭೆಗೆ ನಮ್ಮನ್ನು ಕರೆದಿದ್ದರು. ಆಗಷ್ಟೇ ದೇವನೂರ ಮಹಾದೇವ ಅವರು ಅಮೆರಿಕದ ಅಯೋವಾ ವಿಶ್ವವಿದ್ಯಾನಿಲಯದ ಆಹ್ವಾನದ ಮೇರೆಗೆ ಮೂರು ತಿಂಗಳುಗಳ ಕಾಲ ಅಮೆರಿಕಕ್ಕೆ ಹೋಗಿದ್ದರು. ಚುನಾವಣೆ ಮುಗಿಯುವವರೆಗೂ ಅವರು ಬರುವ ಸಾಧ್ಯತೆ ಇರಲಿಲ್ಲ.

ಹಾಗಾಗಿ ಬಿ. ಕೃಷ್ಣಪ್ಪ, ತ್ಯಾಗಿ, ಎನ್. ವೆಂಕಟೇಶ್, ಸಿ.ಎಂ ಮುನಿಯಪ್ಪ, ನಾನು ಸೇರಿ ಕೆಲವರು ಜನತಾ ದಳ ಸಂಸದೀಯ ಮಂಡಳಿ ಸಭೆಗೆ ಹೋಗಿದ್ದೆವು. 33 ಎಸ್.ಸಿ ಮೀಸಲು ಕ್ಷೇತ್ರದಲ್ಲಿ 9 ಕ್ಷೇತ್ರಗಳನ್ನು ‘ದಸಂಸʼಕ್ಕೆ ಬಿಟ್ಟುಕೊಡಲು ತೀರ್ಮಾನವಾಯಿತು. 9 ಕ್ಷೇತ್ರಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಕ್ಷೇತ್ರವನ್ನು ಬಿಟ್ಟು ಉಳಿದ 8 ಕ್ಷೇತ್ರಗಳ ‘ಬಿʼ ಫಾರಂಗಳನ್ನು ನಮಗೆ ಕೊಟ್ಟರು. ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ನಮಗೇ ಬಿಡಲಾಗಿತ್ತು. ಗುಲ್ಬರ್ಗಾದ ಕಮಲಾಪುರ ಕ್ಷೇತ್ರದಲ್ಲಿ ಡಿ.ಜಿ. ಸಾಗರ್ ಸ್ಪರ್ಧಿಸಲಿದ್ದರು. ಅವರಿಗೆ ಒಂದು ‘ಬಿʼ ಫಾರಂ ಕಳುಹಿಸಿದೆವು. ಬಿ. ಕೃಷ್ಣಪ್ಪನವರು ಹೊಳೆಹೊನ್ನೂರು ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದರು. ಆದರೆ ಜನತಾ ಪಕ್ಷ ಅದೊಂದು ಕ್ಷೇತ್ರವನ್ನು ಜೆ.ಎಚ್. ಪಟೇಲ್ ಆಯ್ಕೆಗೆ ಬಿಟ್ಟುಕೊಟ್ಟಿತ್ತು. ಹೊಳೆಹೊನ್ನೂರಿನ ‘ಬಿ’ ಫಾರಂ ಜೆ.ಎಚ್.ಪಟೇಲರ ಬಳಿಯೇ ಇತ್ತು.

B Krishnappa 1
ಬಿ.ಕೃಷ್ಣಪ್ಪ

ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ತುರ್ತಾಗಿ ಜೆ. ಎಚ್. ಪಟೇಲರ ಮನೆಗೆ ಮಾರನೇ ದಿನ ಬೆಳಿಗ್ಗೆಯೇ ಹೋದೆವು.  ಪಟೇಲರು, ‘ಬಸವಣ್ಣಪ್ಪ ಅವರಿಗೆ ಮಾತು ಕೊಟ್ಟಿದ್ದೇನೆ. ಈ ಕ್ಷೇತ್ರವನ್ನು ಬಿಟ್ಟುಬಿಡಿ’ ಎಂದು ಕೃಷ್ಣಪ್ಪನವರಲ್ಲಿ ಕೇಳಿಕೊಂಡರು. ‘ನಾವು ಅಧಿಕಾರಕ್ಕೆ ಬಂದರೆ ನಿಮ್ಮನ್ನು ಎಂ.ಎಲ್.ಸಿ ಅಥವಾ ಯಾವುದಾದರೂ ನಿಗಮಕ್ಕೆ ಅಧ್ಯಕ್ಷರನ್ನಾಗಿ ಮಾಡುತ್ತೇವೆʼ ಎಂಬ ಭರವಸೆಯನ್ನೂ ನೀಡಿದರು. ಚಳವಳಿಯ ಹಿರಿಯವರಾದ ಕೃಷ್ಣಪ್ಪನವರಿಗೆ ಟಿಕೆಟ್ ಸಿಗದೆ ಇದ್ದದ್ದು ನಮಗೆ ಪೀಕಲಾಟ ತಂದಿತು. ಕೃಷ್ಣಪ್ಪನವರಿಗೆ ಟಿಕೆಟ್ ಕೊಡದಿದ್ದರೆ ತಪ್ಪು ಸಂದೇಶ ಹೋಗುತ್ತದೆ ಎಂದು ಗಂಟೆಗಟ್ಟಲೆ ಯೋಚಿಸಿದೆವು. ಕೃಷ್ಣಪ್ಪನವರು ಕ್ಷೇತ್ರ ಬಿಟ್ಟುಕೊಡಲು ಒಪ್ಪಲೇ ಇಲ್ಲ.

ಇದನ್ನೂ ಓದಿರಿ: ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ: ಚಾತುರ್ವರ್ಣದ ಮರುಸೃಷ್ಟಿ

ಒಂದು ಕ್ಷೇತ್ರಕ್ಕಾಗಿ ಎಲ್ಲವನ್ನೂ ಕಳೆದುಕೊಳ್ಳುವುದು ಬೇಡ ಎಂಬುದು ನಮ್ಮೆಲ್ಲರ ಅಭಿಪ್ರಾಯವಾಗಿತ್ತು. ಕೃಷ್ಣಪ್ಪನವರನ್ನು ಒಪ್ಪಿಸಲು ಯತ್ನಿಸಿದಾಗ ಅವರು ಸಿಡಿದೆದ್ದರು. ‘ನೀವೆಲ್ಲ ಸೇರಿಕೊಂಡು ನಮಗೆ ಮೋಸ ಮಾಡುತ್ತಿದ್ದೀರ?’ ಎಂದು ಕೂಗಾಡಿದರು. ‘ನನಗೆ ಟಿಕೆಟ್ ಕೊಡದೆ ಉಳಿದವರು ಚುನಾವಣೆಗೆ ನಿಲ್ಲುವುದೆಂದರೆ ಏನರ್ಥ?’ ಎಂದರು. ನಮ್ಮಲ್ಲಿದ್ದ ಎಲ್ಲ ‘ಬಿʼ ಫಾರಂ’ಗಳನ್ನು ಹರಿದು ಬಿಸಾಡಿದರು. ನಮಗೆಲ್ಲ ದಿಕ್ಕು ಕಾಣದಾಯಿತು. ಕೃಷ್ಣಪ್ಪನವರಿಗೆ ಟಿಕೆಟ್ ಕೊಡುವುದಿಲ್ಲ ಎನ್ನುವುದಾದರೆ ನಾವ್ಯಾರೂ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ನಿರ್ಧರಿಸಿದೆವು. ಜೀವರಾಜ್ ಆಳ್ವ ಮತ್ತು ಎಂ.ಪಿ.ಪ್ರಕಾಶ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆವು. ಅವರು ಕಡೇ ಗಳಿಗೆಯಲ್ಲಿ ಒಂದು ಸೀಟಿಗಾಗಿ ಹೀಗೆ ಮಾಡಬಾರದೆಂದು ಕೇಳಿಕೊಂಡರು. ಜೆ.ಎಚ್.ಪಟೇಲರ ಮೇಲೆ ಒತ್ತಡ ತರಲು ಮತ್ತೆ ಪಕ್ಷವೂ ಯತ್ನಿಸಿತು. ಬಸವಣ್ಣಪ್ಪನವರಿಗೆ ಟಿಕೆಟ್ ಕೊಡದಿದ್ದರೆ ಹಲವು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ಪಟೇಲ್ ಮನವರಿಕೆ ಮಾಡಿದಾಗ ಪಕ್ಷವು ಪಟೇಲರ ಪರ ನಿಂತಿತು. ದಸಂಸದ ನಿರ್ಧಾರಕ್ಕೆ ಒಪ್ಪಿ, ಪಕ್ಷದ ಆಕಾಂಕ್ಷಿಗಳಿಗೆ ಬೇರೆ ‘ಬಿʼ ಫಾರಂ ನೀಡಿತು. ಅತ್ತ ಡಿ.ಜಿ.ಸಾಗರ್ ಅವರಿಗೆ ಕಳುಹಿಸಿದ್ದ ‘ಬಿ’ ಫಾರಂ ಕೂಡ ವ್ಯರ್ಥವಾಯಿತು. ಈ ಘಟನೆ ನಮ್ಮೊಳಗೆ ದೊಡ್ಡ ಗಾಯವನ್ನು ಉಂಟು ಮಾಡಿತು.

ಈ ಎಲ್ಲದರ ನಡುವೆಯೂ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದೆವು. ಇಂತಹ ವಿಚಾರಗಳಿಂದ ಚಳವಳಿಗೆ ಧಕ್ಕೆ ಬರಬಾರದೆಂದು ತೀರ್ಮಾನಿಸಿದೆವು. ಚಳವಳಿ ಮುಂದುವರಿಸಿಕೊಂಡು ಹೋದೆವು. ಇದಾದ ನಂತರ 1991ರಲ್ಲಿ ಲೋಕಸಭೆ ಎಲೆಕ್ಷನ್ ಬಂತು. ಕೋಲಾರ ಕ್ಷೇತ್ರದಲ್ಲಿ ಜನತಾದಳದಿಂದ ಸ್ಪರ್ಧಿಸಲು ಕೃಷ್ಣಪ್ಪ ಬಯಸಿದರು. ಆದರೆ ಕೋಲಾರ ‘ದಸಂಸ’ದ ಕೆಲವು ನಾಯಕರು ಕೃಷ್ಣಪ್ಪ ಹೊರಗಿನವರು, ಸ್ಥಳೀಯರೇ ನಿಲ್ಲಬೇಕೆಂದು ಒತ್ತಾಯಿಸಿದರು. ಎನ್. ವೆಂಕಟೇಶ್ ಮತ್ತು ಚಿಂತಾಮಣಿ ಶಿವಣ್ಣ ಪ್ರಬಲ ಆಕಾಂಕ್ಷಿಯಾಗಿದ್ದರು. ಒಂದಿಡೀ ಹಗಲು-ರಾತ್ರಿ ಚರ್ಚೆಯ ನಂತರ ಕೃಷ್ಣಪ್ಪನವರಿಗೆ ಟಿಕೆಟ್ ಅಂತಿಮ ಮಾಡಿದೆವು.

ಕೋಲಾರದಲ್ಲಿ ಚುನಾವಣೆ ಅಷ್ಟು ಸುಲಭವಿರಲಿಲ್ಲ. ದಲಿತ ಚಳವಳಿಗಾರರು ಮೇಲ್ಜಾತಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ದಿನ ಬೆಳಗಾದರೆ ಅಟ್ರಾಸಿಟಿ ಪ್ರಕರಣ ದಾಖಲಿಸುತ್ತಿದ್ದರು. ಕೋಲಾರದ ನೆಲದಲ್ಲಿ ಚಳವಳಿ ಬಹಳ ಗಟ್ಟಿಯಾಗಿತ್ತು. ಮೇಲ್ಜಾತಿಯವರಿಗೆ ದಸಂಸ ಮೇಲೆ ಕಣ್ಣಿತ್ತು. ಡಿ.ಎಸ್.ಎಸ್‌ ನವರನ್ನು ಇಲ್ಲಿ ಗೆಲ್ಲಿಸಿದರೆ ನಮ್ಮ ಕಥೆ ಇಲ್ಲವಾಗುತ್ತದೆ ಎಂದು ಪಕ್ಷದಲ್ಲಿದ್ದ ಮೇಲ್ಜಾತಿಯವರು ಯೋಚಿಸಿದ್ದರು. ನಾವು ಹಗಲು ರಾತ್ರಿ ಶ್ರಮಿಸಿದರೂ ಕೃಷ್ಣಪ್ಪ ಸೋಲು ಕಂಡರು. ಬೇಕಂತಲೇ ನನ್ನನ್ನು ಸೋಲಿಸಿದರೆಂದು ಕೃಷ್ಣಪ್ಪ ಮತ್ತಷ್ಟು ನೊಂದುಕೊಂಡರು.

ಬಿ.ಎಸ್.ಪಿ ರಂಗ ಪ್ರವೇಶ

ಕೋಲಾರದ ಸೋಲಿನ ನಂತರ ಇತರೆ ಪಕ್ಷಗಳನ್ನು ಅವಲಂಬಿಸದೆ ನಾವೇ ಸ್ವತಂತ್ರವಾಗಿ ಚುನಾವಣೆ ಎದುರಿಸಬೇಕೆಂಬ ಉಮೇದು ‘ದಸಂಸʼದಲ್ಲಿ ಮೂಡಿತು. ಬಹುಜನ ಸಮಾಜ ಪಕ್ಷದ ಮಾನ್ಯವರ್ ಕಾನ್ಶಿರಾಮ್ ಅವರು ಬೆಂಗಳೂರಿಗೆ ಬಂದಾಗಲೆಲ್ಲ ನಾವು ಭೇಟಿಯಾಗುತ್ತಿದ್ದೆವು. ದಲಿತ ಚಳವಳಿಯನ್ನು ಪಕ್ಷದೊಳಗೆ ವಿಸರ್ಜಿಸಿ, ರಾಜಕೀಯ ಅಧಿಕಾರ ಹಿಡಿಯಬೇಕು, ಕರ್ನಾಟಕದಲ್ಲಿ ಬಿ.ಎಸ್.ಪಿ ಬೆಳೆಸಬೇಕು ಎಂಬುದು ಅವರ ಒತ್ತಾಸೆಯಾಗಿತ್ತು. ದಲಿತರದ್ದೇ ಒಂದುಪಕ್ಷ ಇರುವಾಗ ನಾವೇಕೆ ಬೇರೆ ಪಕ್ಷಗಳತ್ತ ಮುಖ ಮಾಡಬೇಕು ಎಂಬ ಅಭಿಪ್ರಾಯ ‘ದಸಂಸʼದಲ್ಲಿ ಇತ್ತು. ಇದಕ್ಕೆ ದೇವನೂರ ಮಹಾದೇವ ಅವರೂ ಸೇರಿದಂತೆ ನಮ್ಮಲ್ಲಿ ಕೆಲವರ ಸಹಮತ ಇರಲಿಲ್ಲ. ಹಾಗೆ ಸಹಮತ ಇಲ್ಲದವರೆಲ್ಲ ತಟಸ್ಥರಾದರು. ಉಳಿದಂತೆ ‘ದಸಂಸʼ ಬಿ.ಎಸ್.ಪಿ.ಯನ್ನು ತನ್ನ ರಾಜಕೀಯ ಪಕ್ಷವೆಂದು ಘೋಷಿಸಿಕೊಂಡು ಚುನಾವಣೆಗೆ ಇಳಿಯಿತು.

ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಬಿ.ಎಸ್.ಪಿ ಸ್ಪರ್ಧಿಸಿತು. ಬೀದರ್ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯೊಬ್ಬರು ಗೆದ್ದರು. ಉಳಿದ ಕ್ಷೇತ್ರಗಳಲ್ಲಿ ಠೇವಣಿ ಉಳಿಸಿಕೊಳ್ಳಲೂ ಕಷ್ಟಪಡಬೇಕಾಯಿತು. ಅದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಮಾಯಾವತಿಯವರು ಬಿ.ಜೆ.ಪಿ ಜತೆ ಸೇರಿಕೊಂಡು ಸರ್ಕಾರ ರಚಿಸಿದರು. ಇದರಿಂದಾಗಿ ಬಿ.ಎಸ್.ಪಿ.ಯಲ್ಲಿದ್ದ ‘ದಸಂಸ’ ಕಾರ್ಯಕರ್ತರು ದಂಗಾದರು. ಎಡ ಮತ್ತು ಪ್ರಜಾಸತ್ತಾತ್ಮಕ ರಾಜಕೀಯ ಹಿನ್ನೆಲೆಯಲ್ಲಿ ಬೆಳೆದು ಬಂದಿದ್ದವರಿಗೆಲ್ಲ  ಇದರಿಂದ ಭ್ರಮನಿರಸನವಾಯಿತು. ‘ದಸಂಸ’ದೊಳಗೆ ಆಂತರಿಕ ಬೇಗುದಿ ಹೆಚ್ಚಾಯಿತು.

ಇದನ್ನೂ ಓದಿರಿ: ‘ದಲಿತ’ ಪದದ ಅಪಾರ್ಥ: ದಲಿತ ಚಳವಳಿಗೇ ಅಪಾಯ

1994ರ ಹೊತ್ತಿಗೆ ‘ದಸಂಸ’ ಇಬ್ಭಾಗವಾಯಿತು. ಆಗ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿದ್ದ ಕಚೇರಿ ಉಳಿಸಿಕೊಳ್ಳಲು ಎರಡೂ ಗುಂಪುಗಳ ನಡುವೆ ಮಾರಾಮಾರಿಯೂ ನಡೆಯಿತು. ಮತ್ತೆ ಆರಂಭವಾದ ವಿಘಟನೆಯ ಮಹಾ ಪರ್ವ. ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ ಒಡೆಯುತ್ತಲೇ ಹೋಯಿತು.  ಪ್ರತಿಯೊಂದು ಬಣದವರು ಇನ್ನೊಂದು ಬಣದವರನ್ನು ಉಚ್ಚಾಟಿಸುವ ಹುಚ್ಚಾಟಕ್ಕೂ ಕೈ ಹಾಕಿದರು. ಈ ಉಚ್ಚಾಟನೆಯ ಪ್ರಹಸನ ಕೆಲವು ವರ್ಷಗಳ ಕಾಲ ಮುಂದುವರೆಯಿತು. ಮೂಲ ’ದಸಂಸʼ ಸಿದ್ಧಾಂತಗಳಿಗೆ ಬದ್ಧವಾದ ಬೆರಳೆಣಿಕೆಯ ಕೆಲವನ್ನು ಬಿಟ್ಟರೆ ಉಳಿದವುಗಳೆಲ್ಲ ವ್ಯಕ್ತಿ ಪ್ರತಿಷ್ಠೆಯ ಸಂಘಟನೆಗಳಾಗಿ ಮುಂದುವರೆದಿವೆ.

ಆ ವೇಳೆಗಾಗಲೇ ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ಜೊತೆ ಕೋಮುವಾದೀಕರಣ ಭದ್ರವಾಗಿ ಬೇರುಬಿಟ್ಟಿದ್ದವು. ನಮ್ಮ ಅಸಮಾಧಾನಗಳನ್ನು ದೊಡ್ಡದು ಮಾಡಲು ನೆಪವಾಗಿ ಜಾತಿ, ಒಳ ಜಾತಿಯನ್ನು ಬಳಸುವವರು ಹೆಚ್ಚಾದರು. ಕಾರ್ಯಕರ್ತರಿಗೂ ಸಂಚಾಲಕರಿಗೂ ಬಿರುಕುಗಳು ಮೂಡಿದವು. ಸಮುದಾಯದ ವಿಶ್ವಾಸ ಕಡಿಮೆಯಾಗುತ್ತಾ ಹೋಯಿತು. ಇಷ್ಟೆಲ್ಲ ರಾದ್ಧಾಂತಗಳ ನಡುವೆ ಹಲವು ನಾಯಕರು ಕಣ್ಮರೆಯಾದರು. ರಾಯಚೂರಿನ ಬೋಳ ಬಂಡೆಪ್ಪ, ಮೈಸೂರಿನ ದೇವಯ್ಯ ಹರವೆ, ಮುಳ್ಳೂರು ನಾಗರಾಜ್ ಅವರು ಬಹಳ ಹಿಂದೆಯೇ ಅಸು ನೀಗಿದ್ದರು. ಹಿರಿಯರಾದ ಬಿ. ಕೃಷ್ಣಪ್ಪನವರು 1997ರಲ್ಲಿ ಹೃದಯಾಘಾತಕ್ಕೆ ಬಲಿಯಾದರು. ನಂತರ ಎಂ.ಡಿ ಗಂಗಯ್ಯ, ಚಂದ್ರಪ್ರಸಾದ್ ತ್ಯಾಗಿ, ಚಿಂತಾಮಣಿ ಶಿವಣ್ಣ, ಚಿತ್ರದುರ್ಗದ ಜಯಣ್ಣ, ಎನ್. ಗಿರಿಯಪ್ಪ, ಓ. ಶ್ರೀಧರನ್, ರಂಗಸ್ವಾಮಿ ಬೆಲ್ಲದಮಡು, ಹೀಗೆ ಹಲವರು ನಿಧನರಾದರು.

ಒಳಮೀಸಲಾತಿ ವಿವಾದ

ಇದರ ನಡುವೆ ಒಳಮೀಸಲಾತಿ ಚರ್ಚೆ ಮುನ್ನೆಲೆಗೆ ಬಂದಿತು. ದಲಿತ ಚಳವಳಿ ಒಳಮೀಸಲಾತಿ ವಿಚಾರವನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ. ಒಂದು ಸಮುದಾಯ ‘ನಮಗೆ ಸಿಗಬೇಕಾದ ನಮ್ಮ ಪಾಲಿನ ಅವಕಾಶ ಮತ್ತು ಪ್ರಾತಿನಿಧ್ಯ ಸಿಗುತ್ತಿಲ್ಲ’ ಎಂದು ಕೂಗೆತ್ತಿದಾಗ ಮತ್ತು ಅದು ಸತ್ಯವೂ ಆಗಿದ್ದಾಗ ‘ಇದು ಕೂಡ ನಮ್ಮ ಸಮಸ್ಯೆಯೇ, ಇದಕ್ಕೆ ಸ್ಪಂದಿಸಬೇಕು ಮತ್ತು ಅದಕ್ಕೊಂದು ಪರಿಹಾರ ಹುಡುಕಬೇಕು’ ಎಂದು ಚಳವಳಿ ಭಾವಿಸಲಿಲ್ಲ. ದೇವನೂರ ಮಹಾದೇವ ಅವರು ನೀಡಿದ ‘ಬ್ಯಾಕ್ ಲಾಗ್ʼ ಪರಿಹಾರ ಬಹುತೇಕರಿಗೆ ಒಪ್ಪಿಗೆಯಾಗಲಿಲ್ಲ. ಒಳಮೀಸಲಾತಿ ಜಾರಿಯಾದರೆ ಸಮುದಾಯಗಳ ನಡುವಿನ ಕಂದಕ ಹೆಚ್ಚಾಗಬಹುದೆಂಬ ಆತಂಕ ಎಲ್ಲರನ್ನೂ ಕಾಡುತ್ತಿತ್ತು. ವಿಂಗಡಣೆ ಸಂವಿಧಾನಬಾಹೀರ ಎಂಬ ಭಾವನೆ ಎಲ್ಲರಲ್ಲೂ ಮನೆ ಮಾಡಿತ್ತು.

47 MRHS Raichur
ಒಳಮೀಸಲಾತಿಗೆ ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ರಾಯಚೂರಿನಲ್ಲಿ ನಡೆದ ಹೋರಾಟ (2000ನೇ ಇಸವಿಯ ಸಂದರ್ಭದ ಚಿತ್ರ)

‘ದಸಂಸ’ ಆಂತರಿಕ ಸಭೆಗಳಲ್ಲಿ ಹಲವು ಬಾರಿ ನಾನು ಇದನ್ನು ಪ್ರಸ್ತಾಪಿಸಿದಾಗ ‘ದಸಂಸ’ ಎಂದೂ ಎರಡು ಸಮುದಾಯಗಳನ್ನು ಬೇರೆ ಬೇರೆಯಾಗಿ ನೋಡಿಯೇ ಇಲ್ಲ, ನ್ಯಾಯಾಲಯಗಳೇ ಇಂಥ ವಿಂಗಡಣೆಗೆ ಈಗಿನ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದಿರುವಾಗ ನಾವುಗಳು ಏನು ಮಾಡಲು ಸಾಧ್ಯ ಎಂಬ ಅಸಹಾಯಕತೆಯನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದರು. ದಲಿತ ಚಳವಳಿಯಲ್ಲಿದ್ದ ಮಾದಿಗ ನಾಯಕರೂ ಒಳಮೀಸಲಾತಿಯ ಬಗ್ಗೆ ‘ದಸಂಸ’ ರಾಜ್ಯ ಸಮಿತಿ ಸಭೆಗಳಲ್ಲಿ ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಹೀಗಾಗಿ ಹಲವು ಅಪಾರ್ಥಗಳು ಹುಟ್ಟಿಕೊಂಡವು. ಜಾಗತೀಕರಣದ ಜೊತೆಗೆ ಬಂದ ಕೋಮುವಾದವು ಈ ಒಡಕನ್ನು ಬೆಳೆಸುತ್ತಾ ಹೋಯಿತು. ಸಮಾಧಾನಕರ ವಿಚಾರವೆಂದರೆ ಒಳಮೀಸಲಾತಿ ಹೋರಾಟ, ನೆರೆಯ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನಡೆದಂತೆ ಕರ್ನಾಟಕದಲ್ಲಿ ಒಳಪಂಗಡಗಳಲ್ಲಿ ದ್ವೇಷವನ್ನಾಗಲಿ, ಆಂತರಿಕ ಸಂಘರ್ಷವನ್ನಾಗಲಿ ಹುಟ್ಟುಹಾಕಲಿಲ್ಲ. ಕೆಲವು ಬಾರಿ ಪರಸ್ಪರ ಎತ್ತಿಕಟ್ಟುವ ಕೆಲಸಗಳನ್ನು ಕೆಲವರು ಮಾಡಿದರೂ ಸಮುದಾಯಗಳು ವಿವೇಕವನ್ನು ಕಳೆದುಕೊಳ್ಳಲಿಲ್ಲ.

ಪರಸ್ಪರ ಎತ್ತಿಕಟ್ಟುವ ಕೆಲಸಗಳನ್ನು ಕರ್ನಾಟಕದಲ್ಲಿ ಮೊದಲು ಮಾಡಿದವರು ದೇವೇಗೌಡರು. ನಂತರದ ಸ್ಥಾನ ರಾಮಕೃಷ್ಣ ಹೆಗಡೆಯವರಿಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ಬಂದ ಕೋಮುವಾದಿಗಳಿಗೆ ಇದು ವರವಾಯಿತು. ಈ ಸಮಸ್ಯೆಯನ್ನು ಮುಂದುವರಿಸಿಕೊಂಡು ಹೋದರು. ಈಗ ಮಾದಿಗ ಹೋರಾಟ ಸಮಿತಿಯಲ್ಲೂ ಬಿರುಕು ಮೂಡಿದೆ. ನಾಯಕತ್ವದ ಸಮಸ್ಯೆ ಅಲ್ಲೂ ಹುಟ್ಟಿಕೊಂಡಿದೆ. ಇತ್ತ ಭೋವಿ, ಲಂಬಾಣಿ ಮುಂತಾದ ಸಮುದಾಯಗಳಲ್ಲಿ ಇರುವ ಭಯವನ್ನು ಹೋಗಲಾಡಿಸುವಲ್ಲಿಯೂ ಚಳವಳಿ ಸೋತಿದೆ. ಒಳಮೀಸಲಾತಿ ಬಂದರೆ ನಮ್ಮನ್ನು ಎಸ್.ಸಿ ಪಟ್ಟಿಯಿಂದಲೇ ತೆಗೆಯುತ್ತಾರೆಂಬ ಆತಂಕ ಆ ಸಮುದಾಯಗಳಲ್ಲಿ ಇದೆ.

ಆರಂಭದಲ್ಲಿ ದೇವನೂರ ಮಹಾದೇವ ಅವರು ಒಳಮೀಸಲಾತಿ ವಿಂಗಡಣೆ ಸಮುದಾಯಗಳನ್ನು ಒಡೆಯುತ್ತದೆ ಎಂದು ಹೇಳಿದ್ದರು. ಅದಕ್ಕೆ ಬದಲಾಗಿ ಅವಕಾಶ ಪಡೆಯಲಾಗದ ಸಮುದಾಯಗಳನ್ನು ಗುರುತಿಸಿ ಆದ್ಯತೆ ಮೇಲೆ ಬ್ಯಾಕ್‌ಲಾಗ್ ಮಾದರಿಯಲ್ಲಿ ಮೀಸಲಾತಿ ನೀಡಬೇಕೆಂಬುದು ವಿವರಿಸಿದ್ದರು. ಮೀಸಲಾತಿ ಕೆಳಗಿನಿಂದ ಮೇಲಕ್ಕೆ ಬರಬೇಕೆ ಹೊರತು ಮೇಲಿನಿಂದ ಕೆಳಗೆ ಬರಬಾರದು ಎನ್ನುವುದು ಅವರ ವಾದವಾಗಿತ್ತು. ಅವರು ಬಳಸಿದ ಗಂಡಭೇರುಂಡದ ಮೆಟಾಫರ್ ಇನ್ನೂ ಟೀಕೆಯಿಂದ ಮುಕ್ತವಾಗಿಲ್ಲ. ಈಗ ಸುಪ್ರೀಂಕೋರ್ಟ್ ತೀರ್ಪಿನ ನಂತರ ದೇಮ ಅವರೂ ಒಳಮೀಸಲಾತಿ ಜಾರಿಗೆ ಆಗ್ರಹಿಸಿದ್ದಾರೆ.

ಒಂದಾಗುವ ಹಂಬಲ

ಒಡೆದು ಹೋಗಿದ್ದ ದಲಿತ ಚಳವಳಿಯನ್ನು ಒಟ್ಟುಗೂಡಿಸುವ ಪ್ರಯತ್ನ ಆಗಾಗ್ಗೆ ನಡೆಯುತ್ತಲೇ ಇತ್ತು. ದೇವನೂರ ಮಹಾದೇವ ಅವರು ಇದಕ್ಕಾಗಿ ಹಲವು ಬಾರಿ ತುಂಬಾ ಪ್ರಯತ್ನಪಟ್ಟರು. ಮೈಸೂರಿನಲ್ಲಿ 2010ರ ಏಪ್ರಿಲ್ 25ರಂದು ಆಗ ಅಸ್ತಿತ್ವದಲ್ಲಿದ್ದ ನಾಲ್ಕು ಬಣಗಳನ್ನು ಒಂದು ಮಾಡುವ ದೊಡ್ಡ ಪ್ರಯತ್ನ ಮಾಡಿದ್ದರು. ಮೈಸೂರಿನ ಟೌನ್‌ಹಾಲ್‌ನಲ್ಲಿ ನಾಲ್ಕೂ ಬಣಗಳ ಸಮಾವೇಶವೊಂದನ್ನು ನಡೆಸಿದ್ದರು. ಅದು ಯಶಸ್ವಿಯಾಗಲಿಲ್ಲ. ನಂತರವೂ ಹಲವು ಪ್ರಯತ್ನಗಳನ್ನು ಮಾಡಿದರು. ದುರಾದೃಷ್ಟವಶಾತ್ ಪ್ರತಿ ಪ್ರಯತ್ನವೂ ವಿಫಲವಾಗುತ್ತಲೇ ಹೋಯಿತು. ಆದರೆ 2022ರಲ್ಲಿ ನಡೆದ ಒಗ್ಗೂಡಿಸುವ ಪ್ರಯತ್ನಕ್ಕೆ ಸ್ವಲ್ಪಮಟ್ಟದ ಯಶಸ್ಸು ಸಿಕ್ಕಿತು. 2014ರಿಂದ ದೇಶದಲ್ಲಿ ಆರಂಭವಾದ ಕೋಮುವಾದಿಗಳ ಅಟ್ಟಹಾಸದ ಆಡಳಿತ ಅದಕ್ಕೆ ಪ್ರಮುಖ ಕಾರಣವಾಯಿತು. ಇದಕ್ಕೆ ಸಾಕ್ಷಿಯಾಗಿದ್ದು 2022ರ ಡಿಸೆಂಬರ್ 6ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ’.

dalit movement12
2022ರ ಡಿಸೆಂಬರ್ 6ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ’

ಸುಮಾರು ಹತ್ತು ತಿಂಗಳು ಇದಕ್ಕಾಗಿ ನಿರಂತರ ಕೆಲಸ ಮಾಡಿದ್ದೆವು. ಜೊತೆಗೆ ಒಂದಾಗಬೇಕು ಎಂಬ ಪೂರಕ ವಾತಾವರಣ ಬಿಜೆಪಿಯ ಸಂವಿಧಾನ ವಿರೋಧಿ ನಡೆಗಳಿಂದ ಸೃಷ್ಟಿಯಾಗಿತ್ತು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ನಾವು ಓಡಾಡುವುದೂ ಕಷ್ಟವಾಗುತ್ತದೆ ಎಂಬ ಅರಿವು ಮೂಡಿತ್ತು. ಸಂದರ್ಭದ ಒತ್ತಡದಿಂದಾಗಿ ಎಲ್ಲರೂ ಒಂದಾಗಿದ್ದೆವು. ನಾವೆಲ್ಲರೂ ಒಂದಾಗುತ್ತಿದ್ದೇವೆ ಎಂಬ ಸಂದೇಶ ಸಮುದಾಯಕ್ಕೆ ಹೋಯಿತು. ಬಹಳ ದಿನಗಳಿಂದ ಇದನ್ನೇ ನಿರೀಕ್ಷೆ ಮಾಡುತ್ತಿದ್ದ ಸಮುದಾಯವು ಪ್ರವಾಹದ ರೀತಿ ಸಮಾವೇಶಕ್ಕೆ ಹರಿದು ಬಂದಿತ್ತು. ಲಕ್ಷಾಂತರ ಜನ ರಾಜ್ಯದ ಮೂಲೆ ಮೂಲೆಗಳಿಂದ ಬಂದರು. ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಳ್ಳುವ ಹಾಗೂ ಕೋಮುವಾದವನ್ನು ಹಿಮ್ಮೆಟ್ಟಿಸುವ ಮಹಾ ಘೋಷದೊಂದಿಗೆ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆಯಿತು. 1988ರ ಬೆಂಡಿಗೇರಿ ಪ್ರತಿಭಟನೆ ಮತ್ತು 1991ರಲ್ಲಿ ನಡೆದ ‘ಜನ ಕಲಾ ಮೇಳʼದ ನಂತರ ಇಷ್ಟು ಭಾರೀ ಸಂಖ್ಯೆಯಲ್ಲಿ ದಲಿತ ಜನಸ್ತೋಮ ನೆರೆದದ್ದು ಈ ಸಮಾವೇಶದಲ್ಲಿ ಮಾತ್ರ.

ಇದನ್ನೂ ಓದಿರಿ: ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ

ಈ ಸಮಾವೇಶದ ಪರಿಣಾಮವಾಗಿ ದಲಿತ ಚಳವಳಿಯಲ್ಲಿ ನವ ಚೈತನ್ಯ ಮೂಡಿತು. ಸಮಾನ ಮನಸ್ಕ ಹನ್ನೆರಡು ‘ದಸಂಸʼ ಬಣಗಳು ‘ದಲಿತ ಸಂಘರ್ಷ ಸಮಿತಿಗಳ ಐಕ್ಯಹೋರಾಟ ಚಾಲನಾ ಸಮಿತಿ’ ಹೆಸರಿನಲ್ಲಿ ಒಗ್ಗೂಡಿದವು. ಕೋಮುವಾದದ ಕರಾಳ ಶಕ್ತಿಗಳಿಂದ ದೇಶವನ್ನು ಪಾರುಮಾಡುವ ಹೋರಾಟಕ್ಕೆ ಮುಂದಾದವು. ಅದರ ದೊಡ್ಡ ಪ್ರತಿಫಲ ಚುನಾವಣಾ ಫಲಿತಾಂಶದಲ್ಲಿ ಕಂಡುಬಂದಿತು. ಕೋಮುವಾದಿ ಭಾರತೀಯ ಜನತಾ ಪಕ್ಷ ಹೀನಾಯವಾಗಿ ಸೋತು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಹೀಗೆ ಒಂದುಗೂಡಿದ ಚಳವಳಿ ತನ್ನ ಐಕ್ಯತೆಯನ್ನು ಹೇಗೆ ಕಾಪಾಡಿಕೊಳ್ಳುತ್ತದೆ ಮತ್ತು ಮುಂದುವರೆಸಿಕೊಂಡು ಹೋಗುತ್ತದೆ ಎನ್ನುವುದನ್ನು ಕಾಲವೇ ನಿರ್ಧರಿಸಬೇಕು.

(ಸರಣಿ ಮುಕ್ತಾಯ)

(ಈದಿನ.ಕಾಮ್ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು ಸಂಚಿಕೆಯಿಂದ ಆಯ್ದ ಲೇಖನ)

idnudar
ಇಂದೂಧರ ಹೊನ್ನಾಪುರ
+ posts

ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನರಾದ ಇಂದೂಧರ ಹೊನ್ನಾಪುರ ಅವರು ಕರ್ನಾಟಕ ದಲಿತ ಚಳವಳಿಯನ್ನು ಕಟ್ಟಿದವರಲ್ಲಿ ಒಬ್ಬರು. ದಲಿತ ಚಳವಳಿಯ ಭಾಗವಾಗಿದ್ದ 'ಪಂಚಮ' ಪತ್ರಿಕೆಯನ್ನು ಮುನ್ನಡೆಸಿದರು. 'ಪ್ರಜಾವಾಣಿ'ಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ಸಂವಾದ' ಮಾಸಿಕದ ಸಂಪಾದಕರಾಗಿದ್ದಾರೆ. 'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಇಂದೂಧರ ಹೊನ್ನಾಪುರ
ಇಂದೂಧರ ಹೊನ್ನಾಪುರ
ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನರಾದ ಇಂದೂಧರ ಹೊನ್ನಾಪುರ ಅವರು ಕರ್ನಾಟಕ ದಲಿತ ಚಳವಳಿಯನ್ನು ಕಟ್ಟಿದವರಲ್ಲಿ ಒಬ್ಬರು. ದಲಿತ ಚಳವಳಿಯ ಭಾಗವಾಗಿದ್ದ 'ಪಂಚಮ' ಪತ್ರಿಕೆಯನ್ನು ಮುನ್ನಡೆಸಿದರು. 'ಪ್ರಜಾವಾಣಿ'ಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ಸಂವಾದ' ಮಾಸಿಕದ ಸಂಪಾದಕರಾಗಿದ್ದಾರೆ. 'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...