ಕರ್ನಾಟಕ 50 | ಪ್ರಾದೇಶಿಕ ರಾಜಕಾರಣದ ಪ್ರಯೋಗಗಳು; ಒಂದು ಹೆಣ್ಣೋಟ

Date:

ಕರ್ನಾಟಕದ ರಾಜಕೀಯ ಕ್ಷೇತ್ರವನ್ನಾಳುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳೆಂದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್  (ಜನತಾದಳ ಸೆಕ್ಯುಲರ್). ಕಾಂಗ್ರೆಸ್ ಹಾಗೂ ಬಿಜೆಪಿ, ರಾಷ್ಟ್ರೀಯ ಪಕ್ಷಗಳು.  ಜನತಾ ಪಕ್ಷದ ಬಣಗಳನ್ನು ವಿಲೀನಗೊಳಿಸಿ ರಚಿತವಾದ ಜನತಾದಳದಿಂದ ವಿಭಜಿತಗೊಂಡು ತಮ್ಮದೇ ಜಾತ್ಯತೀತ ಜನತಾದಳ ಪಕ್ಷವನ್ನು ಮುನ್ನಡೆಸಿದವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ. ರೈತರ ಹಿತಾಸಕ್ತಿಗಳನ್ನು ಆದ್ಯತೆಯ ವಿಷಯವಾಗಿಸಿಕೊಂಡು ತೆನೆ ಹೊತ್ತ ರೈತ ಮಹಿಳೆಯ ಚಿತ್ರದ ಸಂಕೇತದೊಂದಿಗೆ ಜೆಡಿಎಸ್ ಪಕ್ಷವನ್ನು ದೇವೇಗೌಡರು ಬೆಳೆಸಿದರು. ಆದರೆ ಜೆಡಿಎಸ್ ರಾಷ್ಟ್ರೀಯ ಪಕ್ಷವಾಗೇನೂ ಬೆಳೆಯಲಿಲ್ಲ. ಹಾಗೆಯೇ ಪ್ರಾದೇಶಿಕ ಪಕ್ಷವಾಗಿಯೂ ತನ್ನ ಗುರುತನ್ನು ಸ್ಥಾಪಿಸಿಕೊಳ್ಳುವುದು ಜೆಡಿಎಸ್‌ಗೆ ಸಾಧ್ಯವಾಗಿಲ್ಲ. ಕರ್ನಾಟಕದ ನೆಲ, ಜಲ, ಭಾಷೆಯ ಹಿತಾಸಕ್ತಿಯನ್ನು ಆದ್ಯತೆಯಾಗಿಸಿಕೊಂಡು ಪ್ರಾದೇಶಿಕ ಅಸ್ಮಿತೆಗೆ ಹೆಮ್ಮೆ ತಂದುಕೊಡುವಂತಹ ಪ್ರಾದೇಶಿಕ ಪಕ್ಷವಾಗಿ ಬೆಳೆಯಬಹುದಾಗಿದ್ದ ಅವಕಾಶಗಳನ್ನು ಜೆಡಿಎಸ್ ಬಳಸಿಕೊಳ್ಳಲಿಲ್ಲ. ಬದಲಾಗಿ ಜಾತಿ ಹಾಗೂ ಕುಟುಂಬ ರಾಜಕಾರಣವೇ ಮೇಲುಗೈ ಪಡೆದ ಪಕ್ಷವಾಗಿರುವಂತಹ ಸ್ಥಿತಿಗೆ ಇಂದು ಅದು ತಲುಪಿದೆ. ತಮ್ಮದೇ ಪಕ್ಷದ ಹೆಸರಿನಲ್ಲಿರುವ `ಜಾತ್ಯತೀತ’ ಪದ ಧ್ವನಿಸುವ ಮೌಲ್ಯಕ್ಕೂ ಮಸಿ ಬಳಿಯುವ ರೀತಿಯಲ್ಲಿ ಬಿಜೆಪಿ ಸಖ್ಯದೊಂದಿಗೆ ರಾಜ್ಯದ ಮುಖ್ಯಮಂತ್ರಿ ಕುರ್ಚಿಯನ್ನೇರಿದವರು ಎಚ್. ಡಿ. ಕುಮಾರಸ್ವಾಮಿಯವರು. ಈ ವರ್ಷ (2024) ನಡೆದ ಲೋಕಸಭಾ ಚುನಾವಣೆಯಲ್ಲಂತೂ ಬಿಜೆಪಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಈಗ ಕೇಂದ್ರದ  ಎನ್ ಡಿ ಎ ಸರ್ಕಾರದ ಭಾಗವಾಗಿ ಸಚಿವ ಸ್ಥಾನವನ್ನಲಂಕರಿಸಿದ್ದಾರೆ. ಚುನಾವಣೆಯಲ್ಲಿ ಗಳಿಸುವ ಸ್ಥಾನಗಳು ಅಲ್ಪವಾದರೂ ಮೈತ್ರಿ ರಾಜಕಾರಣದ ಹೊಂದಾಣಿಕೆಯಲ್ಲಿ ಅಧಿಕಾರದ ಸ್ಥಾನಗಳನ್ನು ಪಡೆದುಕೊಳ್ಳುವಂತಹ ಸಮಯಸಾಧಕತನದ ರಾಜಕಾರಣವೇ ಜೆಡಿಎಸ್  ಚಹರೆಯಾಗಿಬಿಟ್ಟಿದೆ. ಹಾಸನದ ಎಂ.ಪಿ.ಯಾಗಿದ್ದ ಪ್ರಜ್ವಲ್ ರೇವಣ್ಣ ಸೇರಿದಂತೆ  ಎಚ್. ಡಿ. ರೇವಣ್ಣ ಕುಟುಂಬ ಸದಸ್ಯರ  ಲೈಂಗಿಕ ಹಗರಣ ಆರೋಪ ಪ್ರಕರಣಗಳು ರಾಜಕೀಯ ಮುಖಂಡರ ದುಷ್ಟ ಅನೈತಿಕ ಮುಖಗಳನ್ನೂ ಅನಾವರಣಗೊಳಿಸಿವೆ.

ಇಂತಹ ಒಂದು ಹತಾಶೆಯ ಸನ್ನಿವೇಶದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದಂತಹ ಪರ್ಯಾಯ ರಾಜಕಾರಣದ ಪ್ರಯೋಗಗಳ ನೆಲೆ-ಬೆಲೆಗಳ ಅವಲೋಕನ ಮುಖ್ಯವೆನಿಸುತ್ತದೆ. ಪರ್ಯಾಯ ರಾಜಕಾರಣ ಎಂಬುದು ನಿಜಕ್ಕೂ ಇತ್ತೆ? ಎಷ್ಟರಮಟ್ಟಿಗೆ ಅವು ನಮ್ಮ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಬದುಕುಗಳ ಮೇಲೆ ಪ್ರಭಾವ ಬೀರಿವೆ ಎಂಬುದನ್ನು ನನ್ನ ಅರಿವಿನ ಪರಿಧಿಗೆ ದಕ್ಕಿದಷ್ಟನ್ನು ದಾಖಲಿಸಲು ಇಲ್ಲಿ ಯತ್ನಿಸುವೆ.

ವರ್ತಮಾನದ ವ್ಯವಸ್ಥೆಗಿಂತ ವಿಭಿನ್ನವಾದ ಹೊಸ ಸಾಧ್ಯತೆ ಹಾಗೂ ಆಯ್ಕೆಗಳನ್ನು ಅನ್ವೇಷಿಸುವುದನ್ನು ಪರ್ಯಾಯ ರಾಜಕಾರಣ ಎಂದುಕೊಳ್ಳಬಹುದು. ಸಾಮಾಜಿಕ, ಸಾಂಸ್ಕೃತಿಕ ನೆಲೆಗಳಲ್ಲಿನ ಹೊಸ ಹುಡುಕಾಟಗಳು, ಕ್ರಿಯಾತ್ಮಕತೆಗಳು ಹೊಸ ರಾಜಕೀಯ ಪ್ರಜ್ಞೆಗೆ, ರಾಜಕಾರಣದ ಚಟುವಟಿಕೆಗಳಿಗೆ ನಾಂದಿಯಾಗಬಹುದು. ಈ ಕಾರಣದಿಂದಲೇ ಸಮಾಜವಾದಿಗಳು ಸಕ್ರಿಯವಾಗಿದ್ದಂತಹ ಮೈಸೂರಿನಲ್ಲಿ 1973ರಲ್ಲಿ ನಡೆದ ‘ಜಾತಿ ವಿನಾಶ ಸಮ್ಮೇಳನ’  ಮುಖ್ಯವಾಗುತ್ತದೆ. ಈ ಸಮ್ಮೇಳನವನ್ನು ಉದ್ಘಾಟಿಸಿದ್ದ  ಕುವೆಂಪು ಅವರು ಪುರೋಹಿತಶಾಹಿ ವ್ಯವಸ್ಥೆಯನ್ನು ಟೀಕಿಸಿದ್ದರು. 1973ರ ನವೆಂಬರ್ 20ರಂದು ಮೈಸೂರಿನಲ್ಲಿ ನಡೆದ ಸಭೆಯೊಂದರಲ್ಲಿ  ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರು  ಕನ್ನಡ ಸಾಹಿತ್ಯವನ್ನು `ಬೂಸಾ ಸಾಹಿತ್ಯ’ ಎಂದು ವರ್ಣಿಸಿದ್ದು ರಾಜ್ಯದಾದ್ಯಂತ ಪ್ರತಿಭಟನೆ, ಗಲಭೆಗಳಿಗೆ ಕಾರಣವಾಗಿ ಅವರು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು.  ಆದರೆ, ದಲಿತ ಚಳವಳಿ ಚಿಗುರೊಡೆಯಲು ಈ ಭಾಷಣ ಕಾರಣವಾಯಿತು. ತಲೆಯ ಮೇಲೆ ಮಲ ಹೊರುವ ಪದ್ಧತಿ ನಿಷೇಧಕ್ಕೆ ಕಾರಣರಾಗಿದ್ದಂತಹ ಸಚಿವ ಬಸವಲಿಂಗಪ್ಪನವರು, ‘ಹಿಂದೂ ದೇವರ ಪಟಗಳನ್ನು ಗಟಾರಕ್ಕೆ ಎಸೆಯಿರಿ’  ಎಂದು ಸಭೆಯೊಂದರಲ್ಲಿ ದಲಿತರಿಗೆ ಕರೆ ನೀಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Basavalingappa 1
ಬಿ.ಬಸವಲಿಂಗಪ್ಪ

1974ರ ಏಪ್ರಿಲ್ 20ರಂದು `ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ’ ಅಸ್ತಿತ್ವಕ್ಕೆ ಬಂತು. ‘ಒಂದೇ ವರ್ಗದ ಬೌದ್ಧಿಕ ದಬ್ಬಾಳಿಕೆಯನ್ನು ಪ್ರತಿಭಟಿಸಿ ಸಾಹಿತ್ಯ, ಕಲೆ, ವೃತ್ತಪತ್ರಿಕೆ, ರೇಡಿಯೋ, ಸಿನಿಮಾ ಜನಸಾಮಾನ್ಯವಾಗಬೇಕು, ಬೌದ್ಧಿಕ ವಿಕೇಂದ್ರೀಕರಣವಾಗಬೇಕೆಂದು ಹೋರಾಡಲು ಪಣ ತೊಟ್ಟ ದಿನ’ ಎಂದು ವ್ಯಾಖ್ಯಾನಿಸಲಾಗಿದ್ದ ಅಂದಿನ  ಆ ಕ್ರಾಂತಿ ಸಭೆಯನ್ನು ಮೈಸೂರಿನಲ್ಲಿ ಉದ್ಘಾಟಿಸಿದ್ದವರು ರಾಷ್ಟ್ರಕವಿ ಕುವೆಂಪು. ‘ಸಂಸ್ಕೃತಿ ಕ್ರಾಂತಿಕಹಳೆಗೆ ನಾಂದಿ’ ಎಂಬ ಹೆಸರಲ್ಲಿ ಆ ಉದ್ಘಾಟನಾ ಭಾಷಣ ಮುದ್ರಿತವಾಗಿದೆ. ಬ್ರಾಹ್ಮಣ ಲೇಖಕರನ್ನು ಹೊರಗಿಟ್ಟು ಶೂದ್ರ ಬರಹಗಾರರನ್ನಷ್ಟೇ ಒಳಗೊಂಡು ರಾಜ್ಯದಲ್ಲಿ ನಡೆಸಿದಂತಹ ಮೊದಲ ಸಮ್ಮೇಳನ ಅದು.  

ಇದನ್ನೂ ಓದಿರಿ: ಕರ್ನಾಟಕ 50 | ಒಕ್ಕೂಟ ವ್ಯವಸ್ಥೆಗೆ ಮಾರಕವಾದ ರಾಜ್ಯಪಾಲರ ರಾಜಕಾರಣ

ಈ `ಒಕ್ಕೂಟ’ ಆರಂಭವಾದ ವರ್ಷದಲ್ಲಿಯೇ ರಾಷ್ಟ್ರಮಟ್ಟದಲ್ಲಿ ‘ಜೆಪಿ ಆಂದೋಲನ’ ಶುರುವಾದಾಗ ಕರ್ನಾಟಕದಲ್ಲಿ ಪ್ರೊ ಎಂ. ಡಿ. ನಂಜುಂಡಸ್ವಾಮಿ ಮಾರ್ಗದರ್ಶನದಲ್ಲಿ `ನವ ನಿರ್ಮಾಣ ಕ್ರಾಂತಿ’ ಅಸ್ತಿತ್ವಕ್ಕೆ ಬಂದು ಕ್ರಿಯಾಶೀಲವಾಯಿತು. 1974ರ ಜೂನ್ 5ರಂದು ಬಿಹಾರದ ಪಟ್ನಾದ ಗಾಂಧಿ ಮೈದಾನದಲ್ಲಿ `ಸಂಪೂರ್ಣ ಕ್ರಾಂತಿ’ಗೆ  ಸಮಾಜವಾದಿ ನಾಯಕ ಜಯಪ್ರಕಾಶ ನಾರಾಯಣ ಅವರು ಕರೆ ನೀಡಿದ್ದರು. 1975ರಲ್ಲಿ ಜಯಪ್ರಕಾಶ ನಾರಾಯಣ ಅವರು ಮೈಸೂರಿಗೂ ಬಂದು `ಸಂಪೂರ್ಣ ಕ್ರಾಂತಿ’ಯ ಕಿಚ್ಚನ್ನು ಹಚ್ಚಿದ್ದರು. ಇದರ ನಡುವೆಯೇ ಮೈಸೂರಿನಲ್ಲಿ `ವಿಚಾರವಾದಿ ಒಕ್ಕೂಟ’ವೂ ಅಸ್ತಿತ್ವಕ್ಕೆ ಬಂದಿತ್ತು.  ಶ್ರೀಲಂಕಾದ ವಿಚಾರವಾದಿ ಡಾ.ಅಬ್ರಹಾಂ ಕೋವೂರ್ ಅವರೂ ಮೈಸೂರಿಗೆ ಭೇಟಿ ನೀಡಿದ್ದರು. ಹಾಗೆಯೇ, ಸಾಯಿಬಾಬಾ ಪವಾಡಗಳ ಅಸತ್ಯಗಳನ್ನು ಬಹಿರಂಗಗೊಳಿಸುವಲ್ಲಿ ಡಾ ಎಚ್ ನರಸಿಂಹಯ್ಯ ನೇತೃತ್ವದ ತಂಡ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿದ್ದಂತಹ ಕಾಲ ಅದು.  ಹೀಗೆ, ಎಪ್ಪತ್ತರ ದಶಕ, ವೈಚಾರಿಕತೆಯ ಹೊಸ ಅಲೆಗಳ ಸೃಷ್ಟಿಗೆ ನಾಂದಿಯಾಗಿತ್ತು. ಸಮಾಜವಾದಿ ಯುವಜನ ಸಭಾ, ಜನಸಂಘದ ಎಬಿವಿಪಿ, ಎಡ ಪಕ್ಷಗಳ ಬೆಂಬಲ ಹೊಂದಿದ ಎಸ್ ಎಫ್ ಐ,  ಎಐಎಸ್‌ಎಫ್ ಸಂಘಟನೆಗಳು ಕಾಲೇಜುಗಳಲ್ಲಿ ಸಕ್ರಿಯವಾಗಿದ್ದವು.  ಕಾಲೇಜುಗಳ ವಿದ್ಯಾರ್ಥಿ ಸಂಘಗಳೂ ಸಕ್ರಿಯವಾಗಿದ್ದವು.  ಹೋರಾಟಗಳಲ್ಲಿ ಭಾಗವಹಿಸುವುದು ಸಾಮಾಜಿಕ ಜವಾಬ್ದಾರಿ ಎಂಬಂಥ ಭಾವನೆ ವಿದ್ಯಾರ್ಥಿ ಯುವಜನರಲ್ಲಿತ್ತು.

nanjudaswamy
ಪ್ರೊ.ಎಂ.ಡಿ.ನಂಜುಂಡಸ್ವಾಮಿ

ಚುನಾವಣಾ ಅಕ್ರಮಗಳ ಆರೋಪದ ಮೇಲೆ 1971ರ ಸಾರ್ವತ್ರಿಕ ಚುನಾವಣೆಯಲ್ಲಿನ ಇಂದಿರಾಗಾಂಧಿಯವರ ಗೆಲುವನ್ನು ರದ್ದುಗೊಳಿಸಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದಂತಹ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ 1975ರ ಜೂನ್ 12ರಂದು ನೀಡಿತ್ತು. ಆದರೆ, ರಾಯ್ ಬರೇಲಿ ಕ್ಷೇತ್ರದ ಲೋಕಸಭಾ ಸದಸ್ಯತ್ವವನ್ನು ಬಿಟ್ಟುಕೊಡಲು ಇಂದಿರಾಗಾಂಧಿ ತಿರಸ್ಕರಿಸಿದ್ದರು. ಇಂತಹ ಸಂದರ್ಭದಲ್ಲಿ  ಕಾಂಗ್ರೆಸ್ ವಿರೋಧಿ ಪಕ್ಷಗಳನ್ನು ಒಗ್ಗೂಡಿಸುತ್ತಾ ಭಾರತದಾದ್ಯಂತ ಜೆಪಿಯವರು ಸಂಚರಿಸುತ್ತಿದ್ದಂತೆ ಪ್ರತಿಭಟನೆಗಳು ರಾಷ್ಟ್ರದಾದ್ಯಂತ ತೀವ್ರಗೊಂಡಿದ್ದವು.  ಆಗ, 1975ರ ಜೂನ್ 25ರಂದು ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ರಾಷ್ಟ್ರದ ಮೇಲೆ ಹೇರಿದಂತಹ ವಿದ್ಯಮಾನದ ಬಿಸಿ ಕರ್ನಾಟಕಕ್ಕೂ ತಟ್ಟಿತ್ತು. ಆಗ ಸೆರೆಯಾದ ಸ್ನೇಹಲತಾ ರೆಡ್ಡಿ ಅವರು ಏಕೈಕ ಮಹಿಳಾ ರಾಜಕೀಯ ಕೈದಿಯಾಗಿ ಎಂಟು ತಿಂಗಳುಗಳ ಕಾಲ ಏಕಾಂತ ಸೆರೆವಾಸ ಅನುಭವಿಸಿದ್ದರು. ಆರೋಗ್ಯ ಹದಗೆಟ್ಟು ಪೆರೋಲ್ ಮೇಲೆ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಸ್ನೇಹಲತಾ ಅವರು ಅಸುನೀಗಿದ್ದರು. ರಾಜಕೀಯ ಪ್ರತಿರೋಧದ ದನಿಗಾಗಿ ಅನುಭವಿಸಿದ ಸೆರೆವಾಸದ ಅನುಭವಗಳನ್ನು ತಮ್ಮ ದಿನಚರಿಯಲ್ಲಿ ದಾಖಲಿಸಿದ್ದು ಅದು `ಎ ಪ್ರಿಸನ್ ಡೈರಿ’ ಎಂಬ ಕಿರು  ಹೊತ್ತಿಗೆಯಾಗಿ ಪ್ರಕಟವಾಗಿದೆ.

ದಶಕಗಳ ಕಾಲ ಬೇರೂರಿದ್ದ ಆಡಳಿತ ವ್ಯವಸ್ಥೆಗೆ ದಿಟ್ಟವಾದ ಪ್ರತಿರೋಧ ತೋರಿ ಪರ್ಯಾಯವಾಗಿ ಕಾಂಗ್ರೆಸ್ಸೇತರ ಸರ್ಕಾರವನ್ನು ಮೊದಲ ಬಾರಿಗೆ  ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಕಾರಣೀಭೂತವಾದಂತಹ  ರಾಜಕೀಯ ಇತಿಹಾಸಕ್ಕೆ ಜೆಪಿ ಚಳವಳಿ ಕಾರಣವಾಯಿತು ಎಂಬುದು ನಿಜ. ಆದರೆ ಇದು ಬಲಪಂಥವಾದಿ ಫ್ಯಾಸಿಸ್ಟ್ ಶಕ್ತಿಗಳ ಹುಟ್ಟು ಮತ್ತು ಬಲವರ್ಧನೆಗೆ ನಂತರ ಕಾರಣವಾದದ್ದು ಮಾತ್ರ ಇತಿಹಾಸದ ವ್ಯಂಗ್ಯ.

70-80ರ ದಶಕಗಳ  ವೈಶಿಷ್ಟ್ಯವೇನೆಂದರೆ ಆ ಕಾಲದ ಸಾಮಾಜಿಕ ರಾಜಕೀಯ ವಿದ್ಯಮಾನಗಳು ಸಾಹಿತ್ಯಕ-ಸಾಂಸ್ಕತಿಕ ವಿದ್ಯಮಾನಗಳೊಂದಿಗೂ ನೇರ ತಳುಕು ಹಾಕಿಕೊಂಡಿರುತ್ತಿದ್ದವು. 1979ರ  ಮಾರ್ಚ್ 9ರಂದು ಬೆಂಗಳೂರಲ್ಲಿ ಪ್ರಥಮ ಸಮ್ಮೇಳನದೊಂದಿಗೆ ಅಸ್ತಿತ್ವಕ್ಕೆ ಬಂದಿದ್ದ `ಬಂಡಾಯ ಸಾಹಿತ್ಯ ಸಂಘಟನೆ’ ಒಂದು ನೆಲೆಯಲ್ಲಿ ಮಾರ್ಕ್ಸ್‌ ವಾದಿ, ಲೋಹಿಯಾವಾದಿ ಹಾಗೂ ಅಂಬೇಡ್ಕರ್ ವಾದಿ ಶಕ್ತಿಗಳ ಸಾಮಾನ್ಯ ವೇದಿಕೆಯಾಗಿ ರೂಪುಗೊಂಡಿತ್ತು. 1975ರಲ್ಲಿ ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಮಹಿಳಾ ವರ್ಷ ಘೋಷಣೆಯ ನಂತರ ರಾಜ್ಯದಲ್ಲಿ ಮಹಿಳಾ ಚಳವಳಿಯೂ ಚಾಲನೆ ಪಡೆದುಕೊಂಡಿತ್ತು. 

ಮಲಪ್ರಭಾ ಯೋಜನಾ ಪ್ರದೇಶದ ತಾಲ್ಲೂಕುಗಳಾದ ನರಗುಂದ – ನವಲಗುಂದ  ರೈತ ಬಂಡಾಯದ ಸಂದರ್ಭದಲ್ಲಿ 1980ರ ಜುಲೈ 21 ರಂದು ನಡೆದ ಪೊಲೀಸ್  ಗೋಲಿಬಾರ್ ನಲ್ಲಿ ರೈತರ ಹೆಣಗಳುರುಳಿದ್ದವು . ಆಗಲೇ 1980ರ ಜುಲೈ 23ರಂದು ಕರ್ನಾಟಕ ರಾಜ್ಯ ರೈತ ಸಂಘ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು.

ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-1)

ಅದೇ ಕಾಲಕ್ಕೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ  ಗೋಕಾಕ್ ಚಳವಳಿ  ರಾಜ್ಯದಾದ್ಯಂತ  ಪಸರಿಸಿತ್ತು. 1983ರ ಇಡೀ ವರ್ಷವನ್ನು,  ರೈತ -ಕನ್ನಡ ಚಳವಳಿಗಳು ಆಕ್ರಮಿಸಿಕೊಂಡು 1983ರ ವಿಧಾನಸಭಾ  ಚುನಾವಣೆಯಲ್ಲಿ ಆರ್. ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೋತಿತ್ತು. ಮೊದಲ ಬಾರಿಗೆ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪನೆಗೊಂಡಿದ್ದರು.  

ದೊಡ್ಡ ದೊಡ್ಡ ರಾಜಕೀಯ ನಾಯಕರುಗಳೂ ಹೊಸ ರಾಜಕೀಯ ಪಕ್ಷಗಳನ್ನು ಕಟ್ಟುವ ಪ್ರಯೋಗಗಳನ್ನು ಮಾಡಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬೇಕು.  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಬೇರ್ಪಟ್ಟು ರಚಿಸಲಾದ ಕರ್ನಾಟಕ ಕ್ರಾಂತಿರಂಗ ಅಥವಾ  ಕನ್ನಡ ಕ್ರಾಂತಿ ರಂಗವನ್ನು ದೇವರಾಜ  ಅರಸು ಅವರು 1979ರಲ್ಲಿ  ಆರಂಭಿಸಿದ್ದರು.  ಆ ನಂತರ ಅದು  ಕಾಂಗ್ರೆಸ್ (ಅರಸ್) ಎಂದು ಹೆಸರಾಯಿತು. ಕಡೆಗೆ ಜನತಾ ಪಕ್ಷದೊಂದಿಗೆ ವಿಲೀನಗೊಂಡಿತು.

d devaraj aras
ಡಿ.ದೇವರಾಜ ಅರಸು

ಕರ್ನಾಟಕ ಕ್ರಾಂತಿ ರಂಗ ಹಾಗೂ ಜನತಾ ಪಕ್ಷದ ನಡುವಿನ ಸಂಕ್ಷಿಪ್ತ ಅವಧಿಯ ಮೈತ್ರಿ ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಸ್ಥಾಪನೆಗೆ ಕಾರಣವಾಗಿತ್ತು ಎಂಬುದನ್ನು ಮರೆಯಲಾಗದು.  `ಕರ್ನಾಟಕ ಕ್ರಾಂತಿ ರಂಗ’ದಲ್ಲಿದ್ದ  ಎಸ್. ಬಂಗಾರಪ್ಪನವರೇ ಮುಖ್ಯಮಂತ್ರಿಯಾಗುತ್ತಾರೆಂಬ ಊಹಾಪೋಹಗಳಿಗೆ ತೆರೆಬಿದ್ದು ಜನತಾ ಪಕ್ಷದ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರು.

1994ರಲ್ಲಿ ತಮ್ಮದೇ  ಕರ್ನಾಟಕ ಕಾಂಗ್ರೆಸ್ ಪಕ್ಷ ಹಾಗೂ 1997ರಲ್ಲಿ ಕರ್ನಾಟಕ ವಿಕಾಸ ಪಕ್ಷವನ್ನು ಬಂಗಾರಪ್ಪ ಸ್ಥಾಪಿಸಿದರು. ಹೀಗೆ, ಕರ್ನಾಟಕ ಶಬ್ದವನ್ನು ಒಳಗೊಂಡ ಅನೇಕ ಪಕ್ಷಗಳು, ಹೀಗೆ ಉದಯಿಸಿ ಹಾಗೆಯೇ ಇಲ್ಲವಾಗಿ ಹೋಗಿರುವುದು ಗತ ಇತಿಹಾಸ.

ರೈತ, ಕನ್ನಡ, ದಲಿತ, ಕಾರ್ಮಿಕ, ಮಹಿಳೆ, ಪರಿಸರ, ನದಿ ನೀರು, ಗಡಿ  – ಹೀಗೆ ಹಲವು ಆಯಾಮಗಳ ವಿಷಯ ಕೇಂದ್ರಿತ ಚಳವಳಿಗಳು, `ಪಾರ್ಟಿ ಪಾಲಿಟಿಕ್ಸ್’ ಮಾಡದಿದ್ದರೂ  `ಒತ್ತಡ ಗುಂಪು’ಗಳಾಗಿ ಕರ್ನಾಟಕದ ರಾಜಕೀಯ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿ ಜನಪರವಾದ ರಾಜಕೀಯ ನೀತಿಗಳಿಗೆ  ಆಗ್ರಹಪಡಿಸಿವೆ ಎಂಬುದು ನಿಜ.

1940ರ ದಶಕದ ದಿನಕರ ದೇಸಾಯಿ ನೇತೃತ್ವದ ಭೂ ಹೋರಾಟ ಹಾಗೂ ಸಮಾಜವಾದಿ ನಾಯಕ ಡಾ. ರಾಮ ಮನೋಹರ ಲೋಹಿಯಾ ಅವರೂ ಭಾಗಿಯಾಗಿದ್ದಂತಹ  1951ರಲ್ಲಿ ನಡೆದ  ಕಾಗೋಡು ಸತ್ಯಾಗ್ರಹಗಳಾಚೆಗೆ  ರೈತ ಹೋರಾಟ ಕಳೆದ 50 ವರ್ಷಗಳಲ್ಲಿ ಬೃಹತ್ತಾಗಿ ರಾಜ್ಯದಲ್ಲಿ  ಬೆಳೆದು ಬಂದಿದೆ. ಆದರೆ ಈ ರೈತ ಹೋರಾಟವು ಪರ್ಯಾಯ ರಾಜಕೀಯ ಶಕ್ತಿಯಾಗಿ  ದೊಡ್ಡದಾಗಿ ಬೆಳೆಯಲಿಲ್ಲ ಎಂಬುದೂ ನಿಜ.  ಆದರೂ ರಾಜ್ಯದ ರಾಜಕೀಯ ಸಂಕಥನದ ಮೇಲೆ  ದೊಡ್ಡ ಪ್ರಭಾವ ಬೀರಿದ್ದು ಕರ್ನಾಟಕದ ಸಮಾಜೋ ಆರ್ಥಿಕ ವಿಚಾರಗಳ ಪಲ್ಲಟಗಳಿಗೂ ಅದು ನಾಂದಿ ಹಾಡಿದೆ.

ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-2)

1980ರ ದಶಕದಲ್ಲಿ ಪ್ರೊ ಎಂ. ಡಿ. ನಂಜುಂಡಸ್ವಾಮಿ (ಎಂಡಿಎನ್) ಅವರು ರೈತ ಚಳವಳಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘವನ್ನು (ಕೆ ಆರ್ ಆರ್ ಎಸ್) ಉತ್ತುಂಗಕ್ಕೆ ಒಯ್ದರು.  ನವ ಉದಾರವಾದಿ ನೀತಿಗಳ ವ್ಯತಿರಿಕ್ತ ಪರಿಣಾಮಗಳ ವಿರುದ್ಧದ ಹೋರಾಟವನ್ನು  ಲೋಹಿಯಾವಾದಿಯಾಗಿದ್ದ ಪ್ರೊ. ಎಂಡಿಎನ್ ಮುನ್ನಡೆಸಿದ್ದರು. ಜಿಎಂ ಬೆಳೆ ಹಾಗೂ ಬಯೊ ಟೆಕ್ನಾಲಜಿ ವಿರುದ್ಧವೂ ಕರ್ನಾಟಕ ರಾಜ್ಯ ರೈತ ಸಂಘವು ತೀವ್ರ ಹೋರಾಟ ನಡೆಸಿತ್ತು. ಕಾರ್ಗಿಲ್ ಹಾಗೂ ಮಾನ್ಸಾಂಟೊದಂತಹ ಕೃಷಿಲೋಕದ ದೈತ್ಯ ಕಂಪನಿಗಳನ್ನೂ ವಿರೋಧಿಸಿತ್ತು.  ಹೆಗಲ ಮೇಲಿನ ಹಸಿರು ಶಾಲು ರೈತರಿಗೆ ದಕ್ಕಿಸಿಕೊಟ್ಟ ಹೊಸ ಅಸ್ಮಿತೆ ಅಸಾಧಾರಣವಾದದ್ದು.  ಶಿವಮೊಗ್ಗದಲ್ಲಿ ಕಬ್ಬು ಬೆಳೆಗಾರರ ಚಳವಳಿಯಾಗಿ ಆರಂಭವಾದ ಈ ಆಂದೋಲನ ನಾಡಿನ  ಉದ್ದಗಲಕ್ಕೆ ಪಸರಿಸಿಕೊಂಡ ಬಗೆ  ವಿಶೇಷವಾದದ್ದು.

ಚುನಾವಣಾ ರಾಜಕಾರಣದ ಮೂಲಕ ರೈತ ಹೋರಾಟನ್ನು ಮುನ್ನಡೆಸುವುದಕ್ಕಾಗಿ `ಕನ್ನಡ ದೇಶ’ ರಾಜಕೀಯ ಪಕ್ಷವನ್ನೂ ಪ್ರೊ. ಎಂಡಿಎನ್ ಸ್ಥಾಪಿಸಿದರು.  1989ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ `ಕನ್ನಡ ದೇಶ’  ಪಕ್ಷವು ಹೆಚ್ಚಿನ ಗೆಲುವು ಸಾಧಿಸಲಿಲ್ಲ.  ಬಾಬಾ ಗೌಡ ಪಾಟೀಲ್  ಹಾಗೂ ಪ್ರೊ ನಂಜುಂಡಸ್ವಾಮಿ ಮಾತ್ರ ಗೆಲುವು ಸಾಧಿಸಿದ್ದರು. ನಂತರದ ವರ್ಷಗಳಲ್ಲಿ  ರೈತ ನಾಯಕ ಕೆ ಎಸ್ ಪುಟ್ಟಣ್ಣಯ್ಯ ಅವರೂ ರೈತಸಂಘದ ಬಲದಿಂದ ವಿಧಾನಸಭೆ ಪ್ರವೇಶಿಸಿದ್ದರು. ಆದರೆ ಸಂಖ್ಯಾ ದೃಷ್ಟಿಯಿಂದ ರೈತಸಂಘ ದೊಡ್ಡ ಶಕ್ತಿಯಾಗಲಿಲ್ಲ. `ಕರ್ನಾಟಕ ಪ್ರಗತಿ ರಂಗ’ವನ್ನು ಹುಟ್ಟುಹಾಕಿದ್ದ ಪಿ. ಲಂಕೇಶ್ ಹಾಗೂ ಎಂ.ಡಿ ನಂಜುಂಡಸ್ವಾಮಿ ಒಟ್ಟಾಗಿ ಕೈಜೋಡಿಸಿದ್ದರೆ ಹೆಚ್ಚು ಫಲಪ್ರದವಾಗಿರುತ್ತಿತ್ತೇ? ವ್ಯಕ್ತಿಪ್ರತಿಷ್ಠೆಗಳಿಂದಾಗಿ ಆ ಸಾಧ್ಯತೆ ತಪ್ಪಿಹೋಯಿತೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. 1990ರ ದಶಕದ  ಉತ್ತರಾರ್ಧದಲ್ಲಿ ರೈತ ಚಳವಳಿ ಕ್ರಮೇಣ  ಕಳೆಗುಂದಿತ್ತು.  ಎಂ ಡಿ ಎನ್ ನಿಧನದ ನಂತರ  ಕರ್ನಾಟಕ ರಾಜ್ಯ ರೈತ ಸಂಘ ಹಲವು ಕವಲುಗಳಾಗಿ ಹೋಯಿತು.

ಆ ನಂತರ ಮತ್ತೆ ಒಂದು ದಶಕ ಕಳೆದುಹೋದ ಮೇಲೆ ಸಾಹಿತಿ ಹಾಗೂ ಸಾಮಾಜಿಕ ಚಿಂತಕ ದೇವನೂರ ಮಹಾದೇವ ಅವರು `ಸರ್ವೋದಯ ಕರ್ನಾಟಕ ಪಕ್ಷ’ದ ಮೂಲಕ ರೈತರು ಹಾಗೂ ದಲಿತರನ್ನು ಒಂದೆಡೆ ತರಲು ಯತ್ನಿಸಿದರು. `ಸರ್ವೋದಯ ಕರ್ನಾಟಕ ಪಕ್ಷ’ವು 2008ರ ವಿಧಾನಸಭೆ ಚುನಾವಣೆ ಹಾಗೂ 2009ರ ಲೋಕಸಭೆ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೂ ದಕ್ಕಿದ ಫಲಿತಾಂಶ ನಿರಾಶಾದಾಯಕವಾಗಿತ್ತು. ರೈತ ವಿರೋಧಿ ನೀತಿಗಳ ವಿರುದ್ಧ ರೈತ ಸಂಘಟನೆಗಳ ಹೋರಾಟಗಳು ಈಗಲೂ ನಡೆಯುತ್ತಿದ್ದರೂ ಕೃಷಿ ವಲಯದಲ್ಲಿ  ಕಾರ್ಪೊರೆಟ್ ಸಂಸ್ಥೆಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಪ್ರಯತ್ನಗಳನ್ನೂ ಸರ್ಕಾರಗಳು ಮುಂದುವರಿಸುತ್ತಿವೆ.

devanur
ದೇವನೂರ ಮಹಾದೇವ

ಕನ್ನಡ ಪರ ಚಳವಳಿಯನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ವಾಟಾಳ್ ನಾಗರಾಜ್ ಅವರು ತಮ್ಮ ಹೆಸರಿನಲ್ಲಿಯೇ  ವಾಟಾಳ್  ಪಕ್ಷ ಕಟ್ಟಿದರು.   ಕೆಲವು ಕನ್ನಡ ಪರ ಸಂಘಟನೆಗಳು 90ರ ದಶಕದಲ್ಲಿ  `ಕನ್ನಡ ಮುನ್ನಡೆ ಪಕ್ಷ ` ಸ್ಥಾಪಿಸಿದ್ದೂ ಇದೆ.   ಕನ್ನಡ ಭಾಷೆ ಹಾಗೂ ಕರ್ನಾಟಕದ  ಗಡಿ , ಜಲ ಪರವಾದಂತಹ ಕಾಳಜಿಗಳು ಈ ಯತ್ನಗಳ ಹಿಂದಿವೆ. ಆದರೆ ಸೈದ್ಧಾಂತಿಕ ಸ್ಪಷ್ಟತೆಯ ಕೊರತೆ,  ಸಂಘಟನೆಯಲ್ಲಿರುವ ಸಮಸ್ಯೆಗಳಿಂದಾಗಿ ಬಹುಶಃ ಈ ಪ್ರಯತ್ನಗಳು  ಬೆಳವಣಿಗೆ ಸಾಧಿಸಲಾಗದೆ ಅಲ್ಲಲ್ಲೇ ಮುರುಟಿ ಹೋಗಿವೆ.

ಆ ನಂತರ,  2012ರ ಏಪ್ರಿಲ್ 14ರಂದು ಅಂಬೇಡ್ಕರ್ ಅವರ 121ನೇ ಜಯಂತಿ ಸಂದರ್ಭದಲ್ಲಿ `ಪ್ರಜಾಪ್ರಗತಿ ರಂಗ- ಜನಾಧಿಕಾರಕ್ಕಾಗಿ ಜನಾಂದೋಲನ’ ವನ್ನು ಜನಪರ ಪರ್ಯಾಯ ರಾಜಕಾರಣದ ಉದ್ದೇಶದಿಂದ  ಆರಂಭಿಸಲಾಗಿತ್ತು.  ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆ ಪರ್ಯಾಯವಾಗಿ ಜನಪರ ಹೋರಾಟ ಮಾಡುವ ಉದ್ದೇಶ ಹೊಂದಿದ್ದ ಈ ರಂಗದಲ್ಲಿ  ರಾಜ್ಯ ರೈತ ಸಂಘ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬಿ ಎಸ್ ಪಿ, ಎಲ್ ಜೆ ಪಿ, ಸರ್ವೋದಯ ಕರ್ನಾಟಕ ಪಕ್ಷ , ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ), ಅಲೆಮಾರಿ ಬುಡಕಟ್ಟು ಮಹಾಸಭಾ, ಆಲ್ ಇಂಡಿಯಾ ಕ್ರಿಶ್ಚಿಯನ್ ಕೌನ್ಸಿಲ್, ದಲಿತ – ಕ್ರಿಶ್ಚಿಯನ್ ಒಕ್ಕೂಟ, ದಲಿತ ಸೇನೆ ಇದ್ದವು. ಆದರೆ, 2013ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು ಎಂದುಕೊಂಡಿದ್ದ ಅವರ ಆಶಯವೇನೂ ಈಡೇರಲಿಲ್ಲ.

2012ರಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಹುಟ್ಟು ಭಾರತದ ರಾಜಕೀಯ ನಕ್ಷೆಯಲ್ಲಿ  ಪರ್ಯಾಯ ರಾಜಕಾರಣದ ಹೊಸ ಶಕೆ ಆರಂಭದ  ಇಂಗಿತವನ್ನು ನೀಡಿತ್ತು.  ಮುಖ್ಯವಾಹಿನಿ  ಪಕ್ಷ ರಾಜಕಾರಣಕ್ಕೆ ಸವಾಲು ಹಾಕುವಂತಹ ಅಪಾರ ಸಾಧ್ಯತೆ-ಸಾಮರ್ಥ್ಯಗಳನ್ನು ಎಎಪಿ ಒಳಗೊಂಡಿತ್ತು. ಆದರೆ ಕರ್ನಾಟಕದಲ್ಲಿ ಎಎಪಿ ಪ್ರಯೋಗ ಆರಂಭದಲ್ಲೇ ಮುಗ್ಗರಿಸಿತು.

ರಾಜಕೀಯ ನಾಯಕರುಗಳಲ್ಲದೆ ಬೇರೆ ಬೇರೆ ಕ್ಷೇತ್ರಗಳ ವ್ಯಕ್ತಿಗಳೂ ರಾಜಕೀಯ ಪಕ್ಷಗಳನ್ನು ಸ್ಥಾಪಿಸಿ ಸದ್ದಿಲ್ಲದೆ ನಿರ್ಗಮಿಸಿರುವುದನ್ನೂ ನೋಡಿದ್ದೇವೆ.  ಕೂಡ್ಲಿಗಿಯ (ಬಳ್ಳಾರಿ) ಮಾಜಿ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅನುಪಮಾ ಶೆಣೈ  ಅವರು ಅಂದಿನ ಅಬಕಾರಿ ಸಚಿವ ಪಿ ಟಿ ಪರಮೇಶ್ವರ ನಾಯಕ್ ಅವರ ಜೊತೆಗಿನ  ಸಂಘರ್ಷದ  ತರುವಾಯ ಕೆಲಸ ಬಿಟ್ಟವರು 2017 ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭಕ್ಕೆ ಸರಿಯಾಗಿ  ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು. ಅವರು ಬಿಜೆಪಿಗೆ ಸೇರ್ಪಡೆಯಾಗಬಹುದೆಂಬ ಊಹಾಪೋಹಗಳಿಗೆ ತೆರೆ ಎಳೆದು  ತಾವು ಡಿವೈಎಸ್ ಪಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೂಡ್ಲಿಗಿಯಲ್ಲೇ `ಭಾರತೀಯ ಜನಶಕ್ತಿ ಕಾಂಗ್ರೆಸ್’ ( ಬಿಜೆಸಿ)  ಹೆಸರಿನ ಪಕ್ಷದ ಸ್ಥಾಪನೆಯನ್ನು ಘೋಷಿಸಿದ್ದರು. ಆಗ, ಮಾಜಿ ಅಬಕಾರಿ ಸಚಿವ ಎಚ್ ವೈ ಮೇಟಿಯವರ ಸೆಕ್ಸ್-ಟೇಪ್ ಗಳನ್ನು ಬಯಲು ಮಾಡಿದ್ದ ಆರ್ ಟಿ ಐ ಕಾರ್ಯಕರ್ತ ರಾಜಶೇಖರ ಮುಲಾಲಿ  ಹಾಗೂ ಸ್ಥಳೀಯ ರೈತ ನಾಯಕ ದರೂರು ಪುರುಷೋತ್ತಮ ಗೌಡ  ಅವರು ಶೆಣೈ ಜೊತೆಗಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದರೂ ಆ ನಂತರ ಸದ್ದಿಲ್ಲ. ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವುದಾಗಿ ಮಾಧ್ಯಮ ಸಂದರ್ಶನವೊಂದರಲ್ಲಿ  ಹೇಳಿಕೊಂಡಿರುವುದು ವರದಿಯಾಗಿದೆ.

ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-3)

ಚಿತ್ರ ನಟ ಉಪೇಂದ್ರ ಅವರೂ  ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ್ದರು.  2010ರಲ್ಲಿ ತಮ್ಮ `ಸೂಪರ್’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ  ಸಕ್ರಿಯ ರಾಜಕಾರಣಕ್ಕೆ ಇಳಿಯುವ ಬಗೆಗಿನ ತಮ್ಮ ಆಸಕ್ತಿಯ ಬಗ್ಗೆ ಸೂಚನೆ ನೀಡಿದ್ದರು.  ಈ ಚಿತ್ರ 2030ರಲ್ಲಿ, ಉಪೇಂದ್ರ ಅವರ ಭಾರತ ಕುರಿತಾದ  ಪರಿಕಲ್ಪನೆಯನ್ನು ನಿರೂಪಿಸಿದಂತಹ ರಾಜಕೀಯ ವಿಡಂಬನೆಯಾಗಿತ್ತು. `ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ಎಂಬ ಹೊಸ ಪಕ್ಷವನ್ನು ಆರಂಭಿಸಿ `ಇದು ನನ್ನ ಪಕ್ಷವಲ್ಲ, ಜನರ ಪಕ್ಷ’ ಎಂದಿದ್ದರು ಉಪೇಂದ್ರ.  2018ರ ವಿಧಾನಸಭೆ ಚುನಾವಣೆಯಲ್ಲಿ  `ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ’ಯು ರಾಣೆಬೆನ್ನೂರಿನ ಸ್ಥಾನವನ್ನು ಗೆದ್ದುಕೊಂಡಿತ್ತು. ಆದರೆ, ಚುನಾವಣೆಗೆ ಮುಂಚೆಯೇ ತಾವು ರೂಪಿಸಲು ನೆರವಾಗಿದ್ದ `ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ದಿಂದ (ಕೆಪಿಜೆಪಿ) ಹೊರಬಂದಿರುವುದಾಗಿ ಉಪೇಂದ್ರ ಪ್ರಕಟಿಸಿಯೂ ಬಿಟ್ಟರು. ಉಪೇಂದ್ರರ `ಪ್ರಜಾಕೀಯ’ ಪ್ರಚಾರಾಂದೋಲನದ ಘೋಷಣೆ ಅಡಿ ಉಪೇಂದ್ರರಿಂದಲೇ  2017ರ ಅಕ್ಟೋಬರ್ ನಲ್ಲಿ ಅಧಿಕೃತವಾಗಿ ಕೆಪಿಜೆಪಿ ಉದ್ಘಾಟನೆಗೊಂಡಿತ್ತು ಎಂಬುದನ್ನು ಸ್ಮರಿಸಬಹುದು.

Upendra
ಉಪೇಂದ್ರ

ಸಮರ್ಥ ಆಡಳಿತ ಹಾಗೂ ಸಾಮಾಜಿಕ ನ್ಯಾಯದತ್ತ ಕೆಲಸ ಮಾಡುವುದಕ್ಕಾಗಿ ಜನ ಸಂಗ್ರಾಮ ಪರಿಷತ್, ಸಮಾಜ  ಪರಿವರ್ತನ್ ಸಮುದಾಯ  ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ಮೈತ್ರಿಕೂಟವು – ಚುನಾವಣಾ ಮೈತ್ರಿ ರಾಜಕಾರಣವನ್ನು ಪ್ರವೇಶಿಸಲಿವೆ ಎಂದು 2016ರಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ ಹಾಗೂ ಸಮಾಜ ಪರಿವರ್ತನ ಸಮುದಾಯದ (ಎಸ್ ಪಿ ಎಸ್ ) ಸಂಸ್ಥಾಪಕ ಅಧ್ಯಕ್ಷ ಎಸ್. ಆರ್. ಹಿರೇಮಠ್ ಪ್ರಕಟಿಸಿದ್ದರು.  2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಯೋಜನೆಯನ್ನೂ ಹಿರೇಮಠ್ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದರು.  ಆದರೆ ನಂತರ  ರಚನಾತ್ಮಕ ರಾಜಕಾರಣವನ್ನು ನಿರ್ಮಿಸುವ ಆಶಯದೊಂದಿಗೆ ಯೋಗೇಂದ್ರ ಯಾದವ್, ಪ್ರಶಾಂತ ಭೂಷಣ್, ಪ್ರೊ ಆನಂದ ಕುಮಾರ್ ಹಾಗೂ ಇತರ ಸಮಾನ ಮನಸ್ಕರು ಆರಂಭಿಸಿದ `ಸ್ವರಾಜ್ ಅಭಿಯಾನ್’ ಆಂದೋಲನದ ಭಾಗವಾಗಿ ಹೊರಹೊಮ್ಮಿರುವ ಪಕ್ಷವಾದ  `ಸ್ವರಾಜ್ ಇಂಡಿಯಾ’ಗೆ 2017ರ ಮಾರ್ಚ್ ನಲ್ಲಿ ಹಿರೇಮಠ್ ಅವರು ಸೇರ್ಪಡೆಗೊಂಡರು. ಕರ್ನಾಟಕ ರಾಜ್ಯ ರೈತ ಸಂಘದ  ರೈತ ಚಳವಳಿಯಿಂದ ಹೊಮ್ಮಿದ ಸರ್ವೋದಯ ಕರ್ನಾಟಕ ಪಕ್ಷವೂ (ಎಸ್ ಕೆಪಿ)  `ಸ್ವರಾಜ್ ಇಂಡಿಯಾ’ ಪಕ್ಷದೊಂದಿಗೆ 2017ರ ಮಾರ್ಚ್ 25ರಂದು ವಿಲೀನಗೊಂಡಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಎಚ್. ಪಟೇಲ್ ಅವರ ಪುತ್ರ ಹಾಗೂ ದಾವಣಗೆರೆಯ ಚನ್ನಗಿರಿ ಕ್ಷೇತ್ರದಿಂದ  ಶಾಸಕರಾಗಿದ್ದ ಮಹಿಮಾ ಪಟೇಲ್ ಅವರು  2007ರ ನವೆಂಬರ್ 14ರಂದು `ಸುವರ್ಣ ಯುಗ’ ಎಂಬ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದ್ದರು. ಅಧಿಕಾರ ಹಂಚಿಕೆಯ ಒಪ್ಪಂದದ ಅನ್ವಯ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಜೆಡಿಎಸ್ ನಿರಾಕರಿಸಿದ್ದರಿಂದಾಗಿ  ಜೆಡಿಎಸ್ ನಿಂದ ಪಟೇಲ್ ಅವರು ಹೊರ ನಡೆದಿದ್ದರು. ಪಕ್ಷದ ಹೆಸರೇ ಸೂಚಿಸುವಂತೆ ರಾಜಕೀಯದಲ್ಲಿ `ಸುವರ್ಣ ಯುಗ’ವನ್ನು ತರಲು ಪಟೇಲ್ ಬಯಸಿದ್ದರು.  ರಾಜಕೀಯದ ಮೂಲಕ ಸಂಪತ್ತಿನ ಸೃಷ್ಟಿಗೆ  ಹಾಗೂ ಚುನಾವಣಾ ಪ್ರಚಾರದಲ್ಲಿ ಸಂಪತ್ತಿನ `ಕೊಳಕು ಪ್ರದರ್ಶನ’ಕ್ಕೆ ಮಹಿಮಾ ಪಟೇಲ್ ವಿರೋಧವಾಗಿದ್ದರು.

ಕರ್ನಾಟಕ ಜನತಾ ಪಕ್ಷ(ಕೆಜೆಪಿ)ವನ್ನು 2012ರಲ್ಲಿ ಲಿಂಗಾಯತರ ಬಲಿಷ್ಠ ನಾಯಕ ಬಿ ಎಸ್ ಯಡಿಯೂರಪ್ಪ ಆರಂಭಿಸಿದ್ದರು. ಆದರೆ ಈ ಪಕ್ಷವನ್ನು 2011ರ ಏಪ್ರಿಲ್ ನಲ್ಲೇ ಪದ್ಮನಾಭ ಪ್ರಸನ್ನ ನೊಂದಾಯಿಸಿದ್ದರು.  ಭ್ರಷ್ಟಾಚಾರ ಆರೋಪಗಳಿಂದಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾದ ನಂತರ ಯಡಿಯೂರಪ್ಪ ಅವರು ಬಿಜೆಪಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದಲೂ ಹೊರಬಂದರು. 2012ರ ಡಿಸೆಂಬರ್ 9ರಂದು ಹಾವೇರಿಯಲ್ಲಿ ನಡೆದ ದೊಡ್ಡ ಸಮಾವೇಶದಲ್ಲಿ ಕೆಜೆಪಿಯನ್ನು ಔಪಚಾರಿಕವಾಗಿ ಉದ್ಘಾಟಿಸಿದ್ದರು. ನಂತರ, 2013ರ ಕರ್ನಾಟಕ ವಿಧಾನಸಭೆ ಚುನಾವಣೆಗಳಲ್ಲಿ, ತಾನು ಸ್ಪರ್ಧಿಸಿದ್ದ 203 ಸ್ಥಾನಗಳಲ್ಲಿ ಕೇವಲ 6 ಸ್ಥಾನಗಳಲ್ಲಿ ಕೆಜೆಪಿ ಗೆಲುವು ಸಾಧಿಸಿತು. ಆದರೆ ಚಲಾಯಿಸಲಾದ ಮತಗಳಲ್ಲಿ ಶೇ 10ರಷ್ಟು ಮತವನ್ನು ತನ್ನದಾಗಿಸಿಕೊಳ್ಳಲು ಸಫಲವಾಗಿತ್ತು. ಬಿಜೆಪಿಯ ಮತ ಹಂಚಿಕೆಯ ಮೇಲೆ ಪರಿಣಾಮ ಬೀರಲು ಇಷ್ಟು ಸಾಕಾಯಿತು. ಬಿಜೆಪಿ ಗೆದ್ದ ಸೀಟುಗಳು ಕೇವಲ 40ಕ್ಕೆ ಕುಸಿಯಿತು. ಅದರ ಹಿಂದಿನ ಅವಧಿಯ  ಚುನಾವಣೆಗಳಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಕೇಸರಿ ಪಕ್ಷವು 121 ಸೀಟುಗಳನ್ನು ಗೆದ್ದು ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಏರಿತ್ತು.

ಹಲ ಬಗೆಗಳ ರಾಜಕೀಯ ಪ್ರಯತ್ನಗಳು ರಾಜ್ಯಕ್ಕೆ ಹೊಸದೇನೂ ಅಲ್ಲ. ಹಲವು  ಹೊಸ ರಾಜಕೀಯ ಪಕ್ಷಗಳು ಉದಯಿಸಿ ಹಾಗೆಯೇ ಮಸುಕಾಗಿ  ಹೋಗುವುದು ಮಾಮೂಲು ಸಂಗತಿಗಳಂತೆ ಘಟಿಸಿವೆ. ಬಹುತೇಕ ಪ್ರಾದೇಶಿಕ ಪಕ್ಷಗಳು  ಕಾಲದ ಪರೀಕ್ಷೆಯಲ್ಲಿ ಗೆಲ್ಲಲಿಲ್ಲ ಎಂಬುದು ವಾಸ್ತವ. ರಾಜ್ಯದಲ್ಲಿ ಈಗಲೂ ರಾಜಕೀಯ ಶೂನ್ಯವೊಂದು ಇದೆ ಎಂಬ ಅನಿಸಿಕೆ ದಟ್ಟವಾಗಿದೆ.

 ಒಂದಾದ ಮೇಲೆ ಮತ್ತೊಂದು ಎಂಬಂತೆ ಎರಡು ರಾಷ್ಟ್ರೀಯ ಪಕ್ಷಗಳಷ್ಟೇ ಅಧಿಕಾರದ ಗದ್ದುಗೆ ಹಿಡಿಯುತ್ತಿವೆ. ಜೆಡಿಎಸ್ `ಕಿಂಗ್ ಮೇಕರ್’ ಪಾತ್ರದಲ್ಲಷ್ಟೇ ಮುಖ್ಯವಾಗುತ್ತಿದ್ದು  ಮೈತ್ರಿಕೂಟದ ಯುಗಗಳಿಗೆ ಕಾರಣವಾಗುತ್ತಿದೆ. ಇಂತಹ ರಾಜಕೀಯ ವಾತಾವರಣದಲ್ಲಿ `ಪರ್ಯಾಯ ರಾಜಕಾರಣ’ ಎಷ್ಟರಮಟ್ಟಿಗೆ ಮುಖ್ಯವಾಹಿನಿ ರಾಜಕಾರಣದ ವ್ಯಾಕರಣದ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಮುಖ್ಯವಾಗುತ್ತದೆ. 

ಕಳೆದ 50 ವರ್ಷಗಳಲ್ಲಿ ಮಹಿಳೆಯರ ಹೋರಾಟವೂ ಪರ್ಯಾಯ ರಾಜಕೀಯ ಶಕ್ತಿಯಾಗಿ ಮಾರ್ಪಟ್ಟಿಲ್ಲ. ಆದರೆ ಮಹಿಳಾ ಮತದಾರರ ಪ್ರಮಾಣ ಏರಿಕೆ ಕಾಣುತ್ತಿದ್ದು ಮಹಿಳಾ ಮತಶಕ್ತಿಯನ್ನು ಸೆಳೆದುಕೊಳ್ಳಲು ಚುನಾವಣೆ ಸಂದರ್ಭದಲ್ಲಿ ಮಹಿಳೆಯರನ್ನು ಓಲೈಸುವ ಯೋಜನೆಗಳನ್ನು ಪ್ರಕಟಿಸುವುದು ಈಗ ಮಾಮೂಲಾಗುತ್ತಿದೆ. ಆದರೆ ಸಂಸತ್ ನಲ್ಲಿ ಈಗಾಗಲೇ ಅಂಗೀಕಾರವಾಗಿರುವ ಮಹಿಳಾ ಮೀಸಲು ಕಾನೂನು ಜಾರಿಗಾಗಿ ಮಹಿಳೆಯರ ಕಾಯುವಿಕೆ ಮುಗಿದಿಲ್ಲ. ರಾಜಕೀಯ ಚಟುವಟಿಕೆಗಳು, ತಂತ್ರಗಾರಿಕೆಗಳು, ನೀತಿನಿರೂಪಣೆ, ನಾಯಕತ್ವ ಮಾದರಿಗಳಲ್ಲಿ ಮಹಿಳೆಯ ಗೈರುಹಾಜರಿ ಎದ್ದು ಕಾಣಿಸುತ್ತದೆ.  ಆದರೆ ರಾಜಕೀಯ ಲಾಭಗಳಿಗೆ ನೆಪಮಾತ್ರವಾಗಿ ಮಹಿಳೆಯನ್ನು ರಾಜಕೀಯ ಪಕ್ಷಗಳು ಧಾರಾಳವಾಗಿ ಬಳಸಿಕೊಳ್ಳುವುದು ಮುಂದುವರಿದಿದೆ.

 ದ್ವೇಷದ ರಾಜಕಾರಣಕ್ಕೆ ಮುಸ್ಲಿಂ ಮಹಿಳೆಯರನ್ನೂ ಹಿಂದುತ್ವದ ರಾಜಕಾರಣ ಬಳಸಿಕೊಳ್ಳುತ್ತಿರುವುದನ್ನು ನೋಡಿದ್ದೇವೆ . ಆದರೆ  ಇದರ ಪ್ರತಿರೋಧದಲ್ಲಿ ಮುಸ್ಲಿಂ ಮಹಿಳೆಯರೂ ದೊಡ್ಡ ಶಕ್ತಿಯಾಗಿ ಹೊಮ್ಮಿದ್ದಾರೆ ಎಂಬುದು ಮುಖ್ಯ ಬೆಳವಣಿಗೆ.  2019ರಲ್ಲಿ ಕೇಂದ್ರದ ಪೌರತ್ವ ಕಾಯ್ದೆ (ಸಿಎಎ) ವಿರೋಧಿಸಿ ಕಲ್ಬುರ್ಗಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಹಿಳೆಯರು ನಡೆಸಿದ  ಪ್ರತಿಭಟನೆಯು ಮುಸ್ಲಿಂ ಮಹಿಳಾ ನೇತೃತ್ವದ ನಾಗರಿಕ ಆಂದೋಲನವಾಗಿ ಬೆಳೆಯಿತು. ಪ್ರತಿಪಕ್ಷಗಳು ನಿಸ್ಸತ್ವವಾಗಿರುವ ಸಂದರ್ಭದಲ್ಲಿ ಈ ದಿಟ್ಟ ಮಹಿಳೆಯರು ಪ್ರಜಾಪ್ರಭುತ್ವಕ್ಕೆ ಬಲ ತುಂಬಿದ್ದರು. ಪ್ರತಿಭಟನಾ ಪ್ರದರ್ಶನಗಳಲ್ಲಿ `ಫ್ರೀ ಕಾಶ್ಮೀರ್’ ಪೋಸ್ಟರ್ ಗಳು ವಿವಾದ ಸೃಷ್ಟಿಸಿದ್ದವು. ಮುಂಬೈ ಹಾಗೂ ಮೈಸೂರುಗಳಲ್ಲಿ ಸಿಎಎ ವಿರೋಧಿ ಪ್ರದರ್ಶನದಲ್ಲಿ  `ಫ್ರೀ ಕಾಶ್ಮೀರ್’ ಪೋಸ್ಟರ್ ಹಿಡಿದಿದ್ದ ಮಹಿಳೆಯರು ಕಷ್ಟಕ್ಕೆ ಸಿಲುಕಿದ್ದರು.

ಹಾಸನದ  ಸಂಸತ್ ಸದಸ್ಯ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣ ಪ್ರಕರಣದಲ್ಲೂ ಬೃಹತ್ ಸಂಖ್ಯೆಯಲ್ಲಿ ಸಂಘಟಿತರಾದ ಮಹಿಳೆಯರು ನ್ಯಾಯಕ್ಕಾಗಿ ಆಗ್ರಹಿಸಿ ಹಾಸನದಲ್ಲಿ ಮೆರವಣಿಗೆ,  ಸಮಾವೇಶ ನಡೆಸಿದ್ದರು. ಪ್ರತಿರೋಧ ಚಳವಳಿಗಳನ್ನು ಹೊಸ ಹೊಸ ಬಗೆಯಲ್ಲಿ ಕಟ್ಟುತ್ತಿರುವ  ಮಹಿಳೆಯರು ಪ್ರತಿ ದಿನವೂ ರಾಜಕೀಯ ಕಥಾನಕಗಳನ್ನು ಮರು ರೂಪಿಸುತ್ತಿದ್ದಾರೆ.

ಇದನ್ನೂ ಓದಿರಿ: ಕರ್ನಾಟಕ 50 | ಪತ್ರಿಕೋದ್ಯಮ ಕಂಡ ಮೂರು ಪಲ್ಲಟಗಳು

2013ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು  ರಾಜ್ಯದ ಹಲವು ಜಿಲ್ಲೆಗಳಲ್ಲಿ  ಹಲವು ಮಹಿಳಾ ಸಂಘಗಳ ಜೊತೆ ಒಗ್ಗೂಡಿ ನೆಲಮೂಲದ ಆಂದೋಲನವಾಗಿ ಬೆಳೆದುಕೊಂಡು ಬಂದಿದೆ. `ಅರಿವಿನ ಪಯಣ’ ಅಥವಾ `ಚುನಾವಣೆ ಒಳ-ಹೊರಗೆ’ ಅಂತಹ ಕಾರ್ಯಕ್ರಮಗಳ ಮೂಲಕ ಲಿಂಗ ರಾಜಕಾರಣದ ಬಗ್ಗೆ  ಜಾಗೃತಿ ಮೂಡಿಸುವ ಒತ್ತಡ ಗುಂಪುಗಳಾಗಿ ಕಾರ್ಯ ನಿರ್ವಹಿಸುತ್ತಿದೆ.

ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು  – ಕನಿಷ್ಠ ವೇತನಕ್ಕಾಗಿ ಬೀದಿಗಿಳಿಯುತ್ತಲೇ ಇರುವುದನ್ನು ನೋಡುತ್ತಲಿದ್ದೇವೆ.  ಅನೇಕ ಬಾರಿ ಅಹೋರಾತ್ರಿ ಧರಣಿಗಳನ್ನೂ ಈ ಮಹಿಳೆಯರು ನಡೆಸಿದ್ದಾರೆ.  2016ರ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ಎಲ್ಲ ಜಿಲ್ಲೆಗಳಿಗೆ ಸೇರಿದ 40,000 ಮಹಿಳೆಯರು ರಾಯಚೂರಿನಲ್ಲಿ ಒಟ್ಟಾಗಿ  ಕರ್ನಾಟಕದಲ್ಲಿ ಮದ್ಯ  ನಿಷೇಧ ಕಾನೂನು ಜಾರಿಗೆ  ಬೃಹತ್ ಹೋರಾಟ ನಡೆಸಿದ್ದರು. ನಂತರ  2019ರಲ್ಲಿ  3000 ಮಹಿಳೆಯರು  ಜನವರಿ19ರಂದು ಚಿತ್ರದುರ್ಗದಿಂದ ಪಾದಯಾತ್ರೆ ಆರಂಭಿಸಿ  12 ದಿನಗಳ ಕಾಲ ನಡೆದು ಗಾಂಧಿ ಹುತಾತ್ಮರಾದ  ಜ.30ರಂದು  ಬೆಂಗಳೂರು ತಲುಪಿದ್ದರು. 2020ರ ಜನವರಿ ತಿಂಗಳಲ್ಲಿ ಕೂಡಲ ಸಂಗಮದ ತ್ರಿವೇಣಿ ಸಂಗಮದಲ್ಲಿ  ನಡುಮಟ್ಟ ನೀರಿಗಿಳಿದ ಈ ಮಹಿಳೆಯರು ಜಲ ಸತ್ಯಾಗ್ರಹವನ್ನು ನಡೆಸಿದ್ದರು.

 ಪ್ರತಿಭಟನೆಗಳಲ್ಲಿ ಮಹಿಳೆಯರ ಪಾಲುದಾರಿಕೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಘನತೆ ನೀಡುವಂತಹದ್ದು. ಹೊಸದೊಂದು ರಾಷ್ಟ್ರೀಯವಾದದ ವ್ಯಾಖ್ಯಾನ ಮಂಡಿಸುತ್ತಿದ್ದಾರೆ ಈ ಮಹಿಳೆಯರು.  ರಾಷ್ಟ್ರಧ್ವಜ ಹಿಡಿದು ರಾಷ್ಟ್ರಗೀತೆ ಹಾಡುತ್ತಾ ಸಂವಿಧಾನದ ಪೀಠಿಕಾ ಭಾಗವನ್ನು ಓದುವ ಮೂಲಕ ಭಾರತೀಯತೆಯನ್ನು ಪ್ರತಿಪಾದಿಸುತ್ತಿದ್ದಾರೆ. ಅಸಮಾನತೆ, ಶೋಷಣೆ, ವಿಭಜಕತೆಯಿಂದ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಗಾಂಧಿ,  ಅಂಬೇಡ್ಕರ್ ತತ್ವಗಳನ್ನು ಮರು ಪ್ರತಿಪಾದಿಸುತ್ತಿದ್ದಾರೆ. ಘೋಷಿತ ನಾಯಕರಿಲ್ಲದ ಈ ಹೋರಾಟಗಳಿಂದ ಅಪೇಕ್ಷಿತ ಫಲ ಸಿಗದೆಯೂ ಹೋಗಬಹುದು. ಆದರೆ ಈ ಮಹಿಳೆಯರ ಪಾಲ್ಗೊಳ್ಳುವಿಕೆಯು ಸಾರ್ವಜನಿಕ ಬದುಕಲ್ಲಿ ಸಾಮಾಜಿಕ ರಾಜಕೀಯ ವಿಚಾರಗಳಲ್ಲಿ ಮಹಿಳೆಯ ಪಾಳ್ಗೊಳ್ಳುವಿಕೆಯ ಸಂಕೇತವಾಗಿ ಮುಖ್ಯವಾಗುತ್ತದೆ. ಮಹಿಳೆಯ ದನಿ ಕಡೆಗಣಿಸುವಂತಿಲ್ಲ ಎಂಬ ಸಶಕ್ತ ಸಂದೇಶಗಳನ್ನು ಪ್ರಭುತ್ವ ಅರಿತುಕೊಳ್ಳಬೇಕಿದೆ.

 ಮುಖ್ಯವಾಹಿನಿ ರಾಜಕೀಯ ಪಕ್ಷಗಳ ಹಣಬಲ, ತೋಳ್ಬಲದ ರಾಜಕೀಯದ ನಡುವೆ ಪ್ರಗತಿಪರ ಶಕ್ತಿಗಳ ಈ ಹಿಂದಿನ ಪರ್ಯಾಯ ರಾಜಕೀಯ ಪ್ರಯತ್ನಗಳು ಕಳೆದ ದಶಕಗಳಲ್ಲಿ ವಿಫಲವಾಗಿವೆ  ಎಂಬುದು ಸ್ಪಷ್ಟ.  ನಾಡಿನ ಸಮಷ್ಟಿ ಪ್ರಜ್ಞೆಗೆ ಪೂರಕವಾದಂತಹ  ಬಂಗಾಳ, ಆಂಧ್ರ, ತಮಿಳುನಾಡುಗಳಲ್ಲಿರುವಂತಹ ಬಲವಾದ ಪ್ರಾದೇಶಿಕ ಪಕ್ಷ ಕರ್ನಾಟಕದಲ್ಲಿ ಇಲ್ಲ. ಹೀಗಿದ್ದೂ ಅತೃಪ್ತ ರಾಜಕೀಯ ನಾಯಕರು ಹೊಸ ರಾಜಕೀಯ ಪಕ್ಷಗಳನ್ನು ಆರಂಭಿಸಿದ್ದಾರೆ. ಆದರೆ ಇವು ಯಾವುವೂ ದೀರ್ಘ ಕಾಲ ಬಾಳಿಲ್ಲ. ದೊಡ್ಡ ಪರಿಣಾಮಗಳನ್ನೂ ಬೀರಿಲ್ಲ. ಈವರೆಗಿನ ಪರ್ಯಾಯ ರಾಜಕಾರಣದ ಪ್ರಯೋಗಗಳು ವಿಫಲವಾಗಿರುವುದು ಏಕೆ? ವಾಸ್ತವವಾದಿ ರಾಜಕೀಯ ಮುನ್ನೋಟದ ಕೊರತೆ ಇದಕ್ಕೆ ಕಾರಣವೇ ಎಂಬುದರ ವಿಶ್ಲೇಷಣೆ ಇಂದಿನ ಅಗತ್ಯ.

ಏಕಪಕ್ಷದ ಬಹುಸಂಖ್ಯಾತವಾದದ ಸರ್ವಾಧಿಕಾರವು ಒಕ್ಕೂಟ ರಾಜ್ಯದ (ಫೆಡರಲ್) ಸ್ವರೂಪವನ್ನು ಮಟ್ಟ ಹಾಕಲು ಹಾತೊರೆಯುತ್ತಿರುವಂತಹ ಕಾಲದಲ್ಲಿ `ಸರ್ವಜನಾಂಗದ ಶಾಂತಿಯ ತೋಟ’ವಾದ ಕನ್ನಡ ನಾಡಿನ ಆರ್ಥಿಕತೆ  ರಾಜಕೀಯ, ಸಾಮಾಜಿಕ ವಿನ್ಯಾಸಗಳು ಹಾಗೂ ಭಾಷೆ-ಸಂಸ್ಕೃತಿಗಳನ್ನು ಕಾಯ್ದುಕೊಳ್ಳಲು ಸ್ವೋಪಜ್ಞ ಚಿಂತನೆಗಳನ್ನು ಮಂಡಿಸುವಂತಹ ಜನಾಂದೋಲನಗಳು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕಿದೆ.

ಯುದ್ಧ, ಹವಾಮಾನ ಬದಲಾವಣೆ, ತಂತ್ರಜ್ಞಾನದ ಸವಾಲುಗಳು – ಹೀಗೆ ಸಮಸ್ಯೆಗಳು, ಸವಾಲುಗಳು ಇಂದು  ಸಂಕೀರ್ಣವಾಗಿವೆ.  ಜಾಗತಿಕ ಹಾಗೂ ಸ್ಥಳೀಯ ನೆಲೆಯಲ್ಲಿ ಸವಾಲುಗಳನ್ನು ಸ್ವೀಕರಿಸಿ ಬೆಳವಣಿಗೆ ಸಾಧಿಸುತ್ತಲೇ ಕನ್ನಡ ಹಾಗೂ  ಕರ್ನಾಟಕದ ಅಂತಃಸ್ಸತ್ವವನ್ನು ಗಟ್ಟಿಯಾಗಿಸುವಂತಹ ಕಾರ್ಯಸೂಚಿಗಳಿರುವಂತಹ ಜಾತಿ ಧರ್ಮಗಳನ್ನು ಮೀರಿದ ಪ್ರಾದೇಶಿಕ ಪಕ್ಷ ಕರ್ನಾಟಕಕ್ಕೆ  ಬೇಕಿದೆ.

(‘ಈದಿನ.ಕಾಮ್’ ಹೊರ ತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

cj manjula
ಸಿ.ಜಿ. ಮಂಜುಳಾ
+ posts

ಅಂಕಣಗಾರ್ತಿ, ಹಿರಿಯ ಪತ್ರಕರ್ತೆ ಸಿ.ಜಿ. ಮಂಜುಳಾ ಅವರು 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು. ಅವರು 'ಪ್ರಜಾವಾಣಿ'ಯಲ್ಲಿ ಬರೆಯುತ್ತಿದ್ದ ’ಕಡೆಗೋಲು’ ಅಂಕಣ ಹೊಸ ಒಳನೋಟಗಳನ್ನು ನೀಡಿತು.

ಪೋಸ್ಟ್ ಹಂಚಿಕೊಳ್ಳಿ:

ಸಿ.ಜಿ. ಮಂಜುಳಾ
ಸಿ.ಜಿ. ಮಂಜುಳಾ
ಅಂಕಣಗಾರ್ತಿ, ಹಿರಿಯ ಪತ್ರಕರ್ತೆ ಸಿ.ಜಿ. ಮಂಜುಳಾ ಅವರು 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು. ಅವರು 'ಪ್ರಜಾವಾಣಿ'ಯಲ್ಲಿ ಬರೆಯುತ್ತಿದ್ದ ’ಕಡೆಗೋಲು’ ಅಂಕಣ ಹೊಸ ಒಳನೋಟಗಳನ್ನು ನೀಡಿತು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...