ಕರ್ನಾಟಕ 50 | ದಲಿತರ ಸ್ಥಿತಿಗತಿ ಬದಲಾಗಿದೆಯೇ? (ಭಾಗ- 1)

Date:

ಆಗಸ್ಟ್ 15, 1947ರಂದು ಬ್ರಿಟಿಷರಿಂದ ಭಾರತವು ಸ್ವತಂತ್ರಗೊಂಡ ಮೇಲೆ, ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್ ಅಂಥವರು ಖಚಿತವಾಗಿ ಊಹಿಸಿದಂತೆ ಈ ದೇಶದ ಆಡಳಿತದ ಚುಕ್ಕಾಣಿಯನ್ನು ಮೇಲ್ಜಾತಿ ಹಾಗೂ ಭೂಮಾಲೀಕರು ಹಿಡಿದುಕೊಂಡರು. ಬ್ರಿಟಿಷರೂ ಆಡಳಿತ ವರ್ಗಾವಣೆಗೆ ಸಂಬಂಧಿಸಿದಂತೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗದೆ ಶೋಷಕರ ಕೈಗೆ ಅಧಿಕಾರವನ್ನು ಕೊಟ್ಟು ಹೋದರು. ಇದರ ಪರಿಣಾಮಗಳನ್ನು ಇಂದಿಗೂ ಭಾರತ ದೇಶದ ದುಡಿಯುವ ಜನರು, ಅದರಲ್ಲೂ ದಲಿತರು ಅನುಭವಿಸುತ್ತಲೇ ಇದ್ದಾರೆ. ಇದೇ ರೀತಿಯಲ್ಲಿ ಭಾರತ ಒಕ್ಕೂಟದ ರಾಜ್ಯವಾಗಿರುವ ಕರ್ನಾಟಕದ ದಲಿತರ ಪರಿಸ್ಥಿತಿಯೂ ಮುಂದುವರಿದಿದೆ.

ಕರ್ನಾಟಕದ ದಲಿತರು ಯಾರು?

ಬ್ರಿಟಿಷರು 19ನೇ ಶತಮಾನದ ಅಂತ್ಯದ ವೇಳೆಗೆ ಅಸ್ಪೃಶ್ಯ ಸಮುದಾಯಗಳನ್ನು ಡಿಪ್ರೆಸ್ಡ್ ಕ್ಲಾಸಸ್ (ದಮನಿತ ವರ್ಗಗಳು) ಎಂದು ಕರೆಯುವುದನ್ನು ರೂಢಿ ಮಾಡಿಕೊಂಡರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದಾಗಿ ಅಬ್ರಾಹ್ಮಣರ ಮೀಸಲಾತಿಗಾಗಿ ಮಿಲ್ಲರ್ ಸಮಿತಿ ರಚಿಸಿದಾಗ, ಆ ಸಮಿತಿಯು ದಮನಿತ ವರ್ಗಗಳಡಿಯಲ್ಲಿ 6 ಜಾತಿಗಳನ್ನು ಸೇರಿಸಿತು. ಅವುಗಳೆಂದರೆ ಆದಿ ದ್ರಾವಿಡ, ಆದಿ ಕರ್ನಾಟಕ, ಬಂಜಾರ ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ. 1931ರ ಜಾತಿ ಜನಗಣತಿಯಲ್ಲಿಯೂ ಇದೇ ಪಟ್ಟಿ ಮುಂದುವರೆದು ಪರಿಶಿಷ್ಟ ಜಾತಿಗಳಲ್ಲಿ ನಮೂದಿತವಾಯಿತು. ಭಾರತದ ಸಂವಿಧಾನ ಜಾರಿಗೊಂಡ ನಂತರ ಸೆಪ್ಟೆಂಬರ್ 6, 1956ರಲ್ಲಿಯೂ ಇದೇ ಪಟ್ಟಿ ಮುಂದುವರೆಯಿತು. ಆದರೆ ಯಾವಾಗ ಮೈಸೂರು ಭಾಷಾವಾರು ಪ್ರದೇಶಗಳನ್ನೊಳಗೊಂಡ ರಾಜ್ಯವಾಯಿತೋ ಪರಿಶಿಷ್ಟ ಜಾತಿಗಳ ಸಂಖ್ಯೆ 142ಕ್ಕೆ ಏರಿತು. ಇದರಲ್ಲಿ ಪುನರಾವರ್ತಿತ ಜಾತಿಗಳನ್ನು ಕೈಬಿಟ್ಟಾಗ ಹಾಗೂ 1976ರಲ್ಲಿ Area Restrict Act ರದ್ದಾದಾಗ ಕಡೆಯದಾಗಿ 101 ಜಾತಿಗಳು ಕರ್ನಾಟಕದ ಪರಿಶಿಷ್ಟ ಪಟ್ಟಿಯಲ್ಲಿ ನಮೂದಿಸಲ್ಪಟ್ಟವು. 1970ರ ದಶಕದಿಂದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ದಲಿತ ಚಳವಳಿಯ ಪ್ರತಿರೋಧದ ಕಾರಣಕ್ಕೆ ಈ ಪರಿಶಿಷ್ಟ ಜಾತಿಗಳನ್ನು ದಲಿತರು ಎಂದು ಕರೆಯುವುದು ರೂಢಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1961ರ ಜನಗಣತಿಯಲ್ಲಿ ಕರ್ನಾಟಕದ ದಲಿತರ ಜನಸಂಖ್ಯೆ 31,17,203 (13.21%) ಇತ್ತು. 2011ರಷ್ಟೊತ್ತಿಗೆ 1,04,74,992 (17.15%)ಕ್ಕೆ ಏರಿಕೆಯಾಗಿದೆ. ಜಸ್ಟಿಸ್ ನಾಗಮೋಹನ ದಾಸ್ ಸಮಿತಿಯು ಅಂದಾಜಿಸಿರುವಂತೆ 2020ರಷ್ಟೊತ್ತಿಗೆ ದಲಿತರ ಜನಸಂಖ್ಯೆ 1,27,13,639 (17.98%) ಆಗಿದೆ. ಪರಿಶಿಷ್ಟ ಪಂಗಡವನ್ನೂ ಒಳಗೊಂಡರೆ ದಲಿತರ ಜನಸಂಖ್ಯೆ ಕರ್ನಾಟಕದ ಒಟ್ಟು ಜನಸಂಖ್ಯೆಯ ಕಾಲು ಭಾಗವಿದೆ.

ಕರ್ನಾಟಕದ ರಾಜಕಾರಣದ ಇತಿಹಾಸ ಮತ್ತು ದಲಿತರು

ಕರ್ನಾಟಕದ ಸಂಸದೀಯ ರಾಜಕಾರಣವನ್ನು ಹೊರತುಪಡಿಸಿ ದಲಿತರ ಈ 50 ವರ್ಷಗಳ ಇತಿಹಾಸವನ್ನು (1956ರಿಂದಲೂ ಅಂದುಕೊಳ್ಳಬಹುದು) ಪರಿಶೀಲಿಸಲು ಸಾಧ್ಯವೇ ಇಲ್ಲ. ಸುಮಾರು 1950ರವರೆಗೆ ಬ್ರಾಹ್ಮಣ ಸಮುದಾಯವು ಕರ್ನಾಟಕದ ಹಳ್ಳಿಗಳಲ್ಲಿ ಹೊಂದಿದ್ದ ಅಧಿಕಾರವು ಅಬ್ರಾಹ್ಮಣ ಚಳವಳಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದಾಗಿ ಶೂದ್ರ ಸಮುದಾಯದ ಲಿಂಗಾಯತರು ಹಾಗೂ ಒಕ್ಕಲಿಗರ ಸಂಘಟಿತ ಹೋರಾಟದಿಂದಾಗಿ ಅವರ ಕೈಗೆ ಬರಲಾರಂಭಿಸಿತು. ಇನಾಂ ಭೂಮಿ ರದ್ಧತಿ ಹಾಗೂ ಸರ್ಕಾರಿ ನೌಕರಶಾಹಿಯ ಬಹುಮುಖ್ಯ ಭಾಗವಾದ ಬ್ರಾಹ್ಮಣರು ನಗರಗಳಿಗೆ ವಲಸೆ ಹೋದ ನಂತರ ಹಳ್ಳಿಗಳ ಆಡಳಿತ ಲಿಂಗಾಯತರು ಹಾಗೂ ಒಕ್ಕಲಿಗರಲ್ಲಿನ ಬಲಾಢ್ಯರ ಕೈಗೆ ಬಂದಿತು. ಇದಕ್ಕೆ ಬಹುಮುಖ್ಯ ಕಾರಣ, ಭೂಸುಧಾರಣೆಯಿಂದಾಗಿ ಅವರುಗಳು ಭೂಮಾಲೀಕರಾದದ್ದು. ಈ ರೀತಿಯಾಗಿ ಹೊಸ ಆಳುವ ವರ್ಗವಾದ ಲಿಂಗಾಯತರು ಮತ್ತು ಒಕ್ಕಲಿಗರು ಆರಂಭಿಕ ಕಾಂಗ್ರೆಸ್ ಪಕ್ಷದ ನಾಯಕರಾದರು. ಇದರ ಪರಿಣಾಮವಾಗಿ, 1948 ರಿಂದಲೂ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಬಲಾಢ್ಯರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭೆ ಸದಸ್ಯರಾಗಿದ್ದರು. ವಿಧಾನ ಸಭೆಯಲ್ಲಿ ಈ ಎರಡೂ ಸಮುದಾಯದ ಪಾಲು ಇಲ್ಲಿಯವರೆಗೂ ಇಳಿದಿಲ್ಲ. 1952ರಲ್ಲಿ ಶೇ.61, 1962ರಲ್ಲಿ ಶೇ. 61, 1972ರಲ್ಲಿ ಶೇ. 63ರಷ್ಟು ವಿಧಾನಸಭಾ ಸದಸ್ಯರು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದವರಾಗಿದ್ದರು (ಇಂದಿಗೂ ಇಷ್ಟೇ ಇದ್ದಾರೆ). ಅಷ್ಟೇ ಅಲ್ಲ, ಇಲ್ಲಿಯವರೆಗೆ ಕರ್ನಾಟಕದ ಮುಖ್ಯಮಂತ್ರಿಗಳಾಗಿರುವ 24 ಜನರಲ್ಲಿ ಲಿಂಗಾಯತರು 10, ಒಕ್ಕಲಿಗರು 7, ಹಿಂದುಳಿದ ಜಾತಿಗಳು 5, ಬ್ರಾಹ್ಮಣರು ಇಬ್ಬರಿದ್ದಾರೆ. ಇಲ್ಲಿಯವರೆಗೂ ದಲಿತರನ್ನು ಮುಖ್ಯಮಂತ್ರಿಗಳನ್ನಾಗಿ ನೋಡದ ಕರ್ನಾಟಕ ರಾಜ್ಯದ ಗದ್ದುಗೆಯು, ದಲಿತರ ಪಾಲಿಗೆ ದೂರದ ಬೆಟ್ಟವಾಗಿಯೇ ಉಳಿದಿದೆ.

ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-1)

ವಚನ ಚಳವಳಿ, ದಾಸರ ಜಾತ್ಯತೀತತೆ, ಸೂಫಿಯ ಸ್ಪರ್ಶದ ನಂತರವೂ ಕರ್ನಾಟಕಕ್ಕೆ ಕೋಮುವಾದ ಹಾಗೂ ಜಾತಿವಾದವನ್ನು ಕಿತ್ತೆಸೆಯಲು ಸಾಧ್ಯವಾಗಿಲ್ಲ. ಅಬ್ರಾಹ್ಮಣ ಚಳವಳಿ, ಬಂಡಾಯ ಚಳವಳಿ, ದಲಿತ ಚಳವಳಿ, ರೈತ ಚಳವಳಿ, ಭಾಷಾ ಚಳವಳಿಗಳಿಗೆ ಕನ್ನಡಿಗರನ್ನು ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯಿಂದ ಮುಕ್ತಗೊಳಿಸಲಾಗಿಲ್ಲ. ಮೇಲ್ನೋಟಕ್ಕೆ ಆರ್ಥಿಕವಾಗಿ ಕರ್ನಾಟಕ ಅಭಿವೃದ್ಧಿ ಹೊಂದಿದ ರಾಜ್ಯವಾಗಿದ್ದರೂ ಈ ಮೇಲಿನ ಕಾರಣಗಳಿಂದ ಅಸ್ಪೃಶ್ಯತೆಯಂತಹ ಅಮಾನವೀಯ ಆಚರಣೆಯಿಂದ ತನ್ನನ್ನು ಬಿಡುಗಡೆಗೊಳಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಿಲ್ಲ.

ದಲಿತರ ಮೇಲಿನ ದೌರ್ಜನ್ಯ

ದಲಿತರ ಮೇಲೆ ದೌರ್ಜನ್ಯ ನಡೆಸುವುದರಲ್ಲಿ ಉತ್ತರ ಭಾರತದ ಹಿಂದಿ ಬೆಲ್ಟ್ ರಾಜ್ಯಗಳದ್ದು ಎತ್ತಿದ ಕೈ. ಹಾಗೆಂದು ದಕ್ಷಿಣ ಭಾರತದಲ್ಲಿರುವ ಕರ್ನಾಟಕವೇನು ಕಡಿಮೆ ಇಲ್ಲ. ದೇಶವನ್ನೇ ಬೆಚ್ಚಿ ಬೀಳಿಸಿದ ಕಂಬಾಲಪಲ್ಲಿ, ನಾಗಲಾಪಲ್ಲಿ ಮುಂತಾದ ನೂರಾರು ಗಂಭೀರ ಹತ್ಯಾಕಾಂಡಗಳು ನಡೆದದ್ದು ಇಲ್ಲಿಯೇ. ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿಯು ಕ್ರೋಢೀಕರಿಸಿದಂತೆ 2005ರಿಂದ 2018ರವರೆಗೆ 14 ವರ್ಷಗಳಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ 36,989. ಇದರಲ್ಲಿ 529 ಕೊಲೆ, 834 ಅತ್ಯಾಚಾರಗಳು ಸೇರಿವೆ. ಇದರರ್ಥ ಈ 14 ವರ್ಷಗಳಲ್ಲಿ ದಲಿತರ ಮೇಲೆ ಒಂದು ದಿನಕ್ಕೆ 7 ದೌರ್ಜನ್ಯಗಳು ನಡೆದಿವೆ. 6 ದಿನಕ್ಕೊಂದು ಹತ್ಯೆ ಮಾಡಲಾಗಿದೆ. 10 ದಿನಕ್ಕೊಂದು ಅತ್ಯಾಚಾರ ಮಾಡಲಾಗಿದೆ. 2018ರಷ್ಟೊತ್ತಿಗೆ 6508 ದೌರ್ಜನ್ಯಗಳು ತನಿಖೆ ಹಾಗೂ ವಿಚಾರಣೆ ಹಂತದಲ್ಲಿಯೇ ಬಾಕಿ ಉಳಿದಿವೆ. ಕರ್ನಾಟಕದಲ್ಲಿ ಶಿಕ್ಷೆ ನೀಡಿರುವ ಪ್ರಮಾಣ ಕೇವಲ 4.23% ಇದೆ. ಇದು ದೇಶದಲ್ಲಿಯೇ ಅತಿ ಕಡಿಮೆಯಾಗಿದೆ. ಸುಮಾರು 80.40% ಪ್ರಕರಣಗಳನ್ನು ಸಾಕ್ಷಿ ಕೊರತೆಯಿಂದ, ವಿಚಾರಣೆ ಹಾಗೂ ತನಿಖೆ ಸರಿಯಾಗಿ ನಡೆಸದೆ ಖುಲಾಸೆಗೊಳಿಸಲಾಗಿದೆ. 2021ರ NCRB ವರದಿ ಪ್ರಕಾರ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ದಲಿತರ ಮೇಲೆ ದೌರ್ಜನ್ಯ ನಡೆಯುವ ಮಹಾನಗರ ಬೆಂಗಳೂರು! ಖಂಡಿತವಾಗಿಯೂ ಕರ್ನಾಟಕ ದಲಿತರ ಪಾಲಿಗೆ ಶಾಂತಿಯ ತೋಟವಾಗಿಲ್ಲ ಎಂಬುದು ಇದರಿಂದ ಕಂಡುಬರುತ್ತದೆ. ಈ ನಡುವೆ ಮರಕುಂಬಿ ಪ್ರಕರಣದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಆಗಿರುವುದು ತುಸು ಸಮಾಧಾನಕರ. ಆದರೆ ಹೈಕೋರ್ಟ್ ತೀರ್ಪು ಪ್ರಕರಣಕ್ಕೆ ತಡೆ ನೀಡಿದೆ.

table 1 2

ಶಿಕ್ಷಣ ಮತ್ತು ದಲಿತರು: ಹಿಂದೂ ಧರ್ಮದ ಜಾತಿವ್ಯವಸ್ಥೆಯ ಕಾರಣಕ್ಕಾಗಿ 19ನೇ ಶತಮಾನದವರೆಗೂ ದಲಿತರಿಗೆ ಶಿಕ್ಷಣ ಇರಲಿಲ್ಲ. ಬ್ರಿಟಿಷ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯಿಂದಾಗಿ ದಲಿತರು ಶಿಕ್ಷಣ ಪಡೆದರು. ಆದಾಗ್ಯೂ ಭಾರತದ ಸಂವಿಧಾನ ಜಾರಿಗೊಂಡ ನಂತರವೇ ದಲಿತರ ಶಿಕ್ಷಣ ಪ್ರಮಾಣವು ವೇಗ ಪಡೆದುಕೊಂಡಿತು. 1961ರಲ್ಲಿ ದಲಿತರ ಸಾಕ್ಷರತೆ 9.06% ಇತ್ತು. 2011ರಲ್ಲಿ 65.32%ಗೆ ಏರಿದೆ. ಆದರೆ ಇತರೆ ಜಾತಿಗಳದ್ದು 78.78% ಸಾಕ್ಷರತೆ ಪ್ರಮಾಣ ಇದ್ದು, ಶಿಕ್ಷಣದಲ್ಲಿನ ತಾರತಮ್ಯ ನೀತಿಯನ್ನು ಇದು ತಿಳಿಸುತ್ತಿದೆ.

table 2 2

ಈ ಮೇಲಿನ ಕೋಷ್ಟಕದ ಪ್ರಕಾರ ಹತ್ತನೇ ತರಗತಿಯ ಫಲಿತಾಂಶದಲ್ಲಿ ವರ್ಷದಿಂದ ವರ್ಷಕ್ಕೆ ದಲಿತ ಮಕ್ಕಳು ಉತ್ತೀರ್ಣಗೊಳ್ಳುವ ಪ್ರಮಾಣ ಉತ್ತಮವಾಗುತ್ತಾ ಸಾಗಿದೆ. ಆದರೆ ಇದು ಅರ್ಧ ಸತ್ಯವಷ್ಟೆ. ಏಕೆಂದರೆ ನಾವು ದಲಿತ ಮಕ್ಕಳನ್ನು OBC ಮತ್ತು ಇತರೆ ಮಕ್ಕಳೊಂದಿಗೆ ಹೋಲಿಸಿ ನೋಡಿದಾಗ 2019ರಲ್ಲಿಯೂ ಸುಮಾರು ಶೇ.6ರಷ್ಟು ಕಡಿಮೆ ಫಲಿತಾಂಶ ಬಂದಿರುವುದು ತಿಳಿಯುತ್ತದೆ. 2023-24ನೇ ಸಾಲಿನಲ್ಲಿ ಇತರೆ ಮಕ್ಕಳಿಗೆ ಹೋಲಿಸಿಕೊಂಡರೆ ಶೇ. 18ರಷ್ಟು ಹಾಗೂ ಇಡೀ ರಾಜ್ಯದ ಫಲಿತಾಂಶಕ್ಕೆ ಹೋಲಿಸಿಕೊಂಡರೆ ಶೇ. 6ರಷ್ಟು ಕಡಿಮೆ ಆಗಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಇದೇ ರೀತಿಯ ವ್ಯತ್ಯಾಸವನ್ನು ಪಿಯುಸಿಯಲ್ಲಿಯೂ ನಾವು ಕಾಣಬಹುದಾಗಿದೆ.

table 3 2

ಪದವಿಗೆ ಪ್ರವೇಶ ಪಡೆಯುವ ವಿಚಾರದಲ್ಲಿ ಇಂದಿಗೂ ದಲಿತ ಮಕ್ಕಳಿಗೆ ಸರ್ಕಾರಿ ಕಾಲೇಜುಗಳೇ ಪ್ರಮುಖ ವಿದ್ಯಾಕೇಂದ್ರವಾಗಿವೆ. ಇದು ಪದವಿ ಹಂತದ ವಿದ್ಯಾಭ್ಯಾಸಕ್ಕೆ ಸೀಮಿತವಾಗಿಲ್ಲ, ಶಾಲಾ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಸರ್ಕಾರಿ ಸಂಸ್ಥೆಗಳೇ ದಲಿತರ ಆದ್ಯ ವಿದ್ಯಾಕೇಂದ್ರಗಳಾಗಿವೆ. ತಾಂತ್ರಿಕ ಪದವಿಯಲ್ಲಿಯೂ ದಲಿತರ ದಾಖಲಾತಿ ಜನಸಂಖ್ಯಾ ಪ್ರಮಾಣದಲ್ಲಿಲ್ಲ. ಈ ಕೆಳಗಿನ ಕೋಷ್ಟಕ ತಿಳಿಸುವಂತೆ ದಲಿತ ವಿದ್ಯಾರ್ಥಿಗಳ ಪಾಲು 2019ರಲ್ಲಿ ಕೇವಲ 9.50% ಇದೆ. ಸ್ನಾತಕೋತ್ತರ ಪದವಿಯಲ್ಲಿಯೂ 9.50% ಇದೆ.

table 4 2

ಇನ್ನು ವೈದ್ಯಕೀಯ ಕ್ಷೇತ್ರದಲ್ಲಿಯೂ ಇದೇ ಕಥೆ ಮುಂದುವರೆದಿದೆ. ದಲಿತರು ಶಿಕ್ಷಣ ಪಡೆಯುವ ಸಂಖ್ಯೆ ದಿನದಿಂದ ದಿನಕ್ಕೆ ಉತ್ತಮಗೊಂಡಿರುವುದು ಕಾಣುತ್ತದೆ ನಿಜ. ಆದರೆ ಮುಂದುವರೆಯುವಿಕೆಯಲ್ಲಿ ಸಾಮಾಜಿಕ ತಾರತಮ್ಯ ಮುಂದುವರಿದೇ ಇರುವುದು ಎದ್ದು ಕಾಣುತ್ತಿದೆ.

table 5 2

ಭೂಮಿ ಮತ್ತು ದಲಿತರು

1954ರಲ್ಲಿ ಇನಾಂ ಭೂಮಿ ರದ್ಧತಿ ಮಸೂದೆಯಿಂದಾಗಿ ಕುಶಲಕರ್ಮಿಗಳಿಗೆ ನೀಡಿದ್ದ ತುಂಡು ಜಮೀನು, ಅಗ್ರಹಾರ, ಬ್ರಹ್ಮದೇಯ ಹಾಗೂ ದೇವಾಲಯಗಳಿಗೆ ನೀಡಿದ್ದ ಬೃಹತ್ ಪ್ರಮಾಣದ ಭೂಮಿ ಸರ್ಕಾರದ ಅಡಿಯಲ್ಲಿ ಬಂದಿತು. ಬಹುತೇಕ ಇನಾಂ ಭೂಮಿಗಳು ನೌಕರಶಾಹಿಯಲ್ಲಿದ್ದ ಬ್ರಾಹ್ಮಣರ ಕೈಯ್ಯಲ್ಲಿತ್ತು. ಈ ಭೂಮಿಯು ಉಳುಮೆ ಮಾಡುತ್ತಿದ್ದ ಗೇಣಿದಾರರಿಗೆ ಬಂದಿತು. 1965ರಲ್ಲಿ ಜಾರಿಗೆ ಬಂದ ಭೂಸುಧಾರಣಾ ಮಸೂದೆಯು ಅಂತಹ ಬದಲಾವಣೆ ತರಲಿಲ್ಲ. ಭೂಮಾಲಿಕರ ಪರವಾಗಿಯೇ ಕೆಲಸ ಮಾಡಿತು. 1974ರ ಭೂ ಸುಧಾರಣಾ ಕಾಯ್ದೆಯು ಗರಿಷ್ಠ ಮಿತಿಯನ್ನು ಕಡಿತಗೊಳಿಸಿದರೂ ಪ್ಲಾಂಟೇಶನ್‌ಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ, ಧಾರ್ಮಿಕ ಹಾಗೂ ದತ್ತಿ ಸಂಸ್ಥೆಗಳಿಗೆ ವಿನಾಯಿತಿ ನೀಡಿತು. ಈ ಯಾವುದರ ಅಡಿಯಲ್ಲಿಯೂ ದಲಿತರಿಗೆ ಒಂದಡಿ ಭೂಮಿಯೂ ದೊರಕಲಿಲ್ಲ. ಮತ್ತದೇ ಕರ್ನಾಟಕದ ಬ್ರಾಹ್ಮಣ, ಲಿಂಗಾಯತ ಮತ್ತು ಒಕ್ಕಲಿಗ ಜಾತಿಯ ಬಲಾಢ್ಯರ ಪಾಲಾಯಿತು. ಎಂ.ಎನ್. ಶ್ರೀನಿವಾಸ್‌ರವರ ‘ದಿ ರಿಮೆಂಬರ್ಡ್ ವಿಲೇಜ್’ ದಕ್ಷಿಣ ಕರ್ನಾಟಕದ ಹಳ್ಳಿಯನ್ನು ಪರಿಚಯಿಸಿತ್ತು. ಈ ಅಧ್ಯಯನದ ಪ್ರಕಾರ ಹೆಚ್ಚು ಭೂಮಿ ಒಕ್ಕಲಿಗರ ಕೈಯಲ್ಲಿತ್ತು. ದಾವಣಗೆರೆಯ ಕಲ್ಲಾಪುರ ಗ್ರಾಮವನ್ನು ಅಧ್ಯಯನ ಮಾಡಿದ ಗುರುಮೂರ್ತಿಯವರು ಉತ್ತರ ಕರ್ನಾಟಕದ ಭಾಗದಲ್ಲಿ ಲಿಂಗಾಯತರು ಭೂಮಾಲೀಕರಾಗಿರುವುದನ್ನು ತಿಳಿಸಿದ್ದಾರೆ. 1961ರ ಜನಗಣತಿ ಸಂದರ್ಭದಲ್ಲಿ ನಡೆಸಿದ ನಾಲ್ಕು ಗ್ರಾಮಗಳ ಜನಗಣತಿಯಲ್ಲಿಯೂ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ತೆಲುಗು ಬಣಜಿಗ, ಕುರುಬ ಜಾತಿಯ ಜನರು ಹೆಚ್ಚು ಪಾಲಿನ ಭೂಮಿ ಹೊಂದಿರುವುದು ಕಂಡು ಬಂದಿತ್ತು.

ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-2)

2005-06ರ ಕರ್ನಾಟಕ ಕೃಷಿ ಗಣತಿಯ ವರದಿ ಪ್ರಕಾರ ಭೂಸುಧಾರಣೆಯಿಂದಾಗಿ ದೊಡ್ಡ ಹಿಡುವಳಿದಾರರ ಬಳಿ ಇದ್ದ ಭೂಮಿಯ ಪ್ರಮಾಣ ಕಡಿಮೆ ಆಗಿದೆ. ಆದರೆ ಅದು ಮಧ್ಯಮ ಮತ್ತು ಅರೆ ಮಧ್ಯಮ ಹಿಡುವಳಿದಾರರಿಗೆ ವರ್ಗಾವಣೆಯಾಗಿದೆ. ಭೂರಹಿತರಾದ ಹಾಗೂ ಸಣ್ಣ ಹಿಡುವಳಿದಾರರಾದ ದಲಿತರಿಗೆ ಈ ಭೂಮಿ ದೊರಕಿಲ್ಲ! ಅರ್ಥಶಾಸ್ತ್ರಜ್ಞ ಚಂದ್ರಪೂಜಾರಿಯವರು ತಿಳಿಸುವಂತೆ 1990ರಲ್ಲಿ ಕರ್ನಾಟಕ ರಾಜ್ಯದ ಶೇ. 60ರಷ್ಟು ದಲಿತರು ಭೂರಹಿತರು! ಇನ್ನುಳಿದ ಶೇ. 40ರಷ್ಟು ದಲಿತರ ಬಳಿ ತುಂಡು ಭೂಮಿ ಇತ್ತು. ಅಂದರೆ ಎರಡೂವರೆ ಎಕರೆಗಿಂತ ಕಡಿಮೆ ಭೂಮಿ ಹೊಂದಿರುವವರ ಸಂಖ್ಯೆಯೇ ಹೆಚ್ಚು. ದಲಿತರಲ್ಲಿ ಮಧ್ಯಮ ಮತ್ತು ಅರೆ ಮಧ್ಯಮ ಭೂಹಿಡುವಳಿ ಹೊಂದಿರುವವರು ಶೇ. 3ರಷ್ಟಿದ್ದರು. ಶೇ. 1ಕ್ಕಿಂತಲೂ ಕಡಿಮೆ ದಲಿತರು ದೊಡ್ಡ ಪ್ರಮಾಣದ ಭೂಮಿ ಹೊಂದಿದ್ದರು. ಮತ್ತೂ ದುರಂತವೆಂದರೆ ಈಗಲೂ ದಲಿತರ ಬಳಿ ಹೆಚ್ಚು ಒಣಭೂಮಿ ಇದೆ. ಗ್ರಾಮೀಣ ಪ್ರದೇಶದ ಶೇ. 13ರಷ್ಟು ದಲಿತರ ಬಳಿ ನೀರಾವರಿ ಭೂಮಿ ಇದ್ದು, ಶೇ. 44ರಷ್ಟು ದಲಿತರ ಬಳಿ ಒಣ ಭೂಮಿ ಇದೆ. ಅಂದರೆ ಶೇ. 87ರಷ್ಟು ದಲಿತರ ಬಳಿ ನೀರಾವರಿ ಭೂಮಿ ಇರಲೇ ಇಲ್ಲ.

ಇದನ್ನೂ ಓದಿರಿ: ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-3)

ಕರ್ನಾಟಕದ ಕಾಂಗ್ರೆಸ್ ಆಡಳಿತವೂ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ರಾಜಕೀಯ ಹಿತಾಸಕ್ತಿ ಇಲ್ಲಿಯವರೆಗೂ ಭೂಮಾಲೀಕರ ಪರವಾಗಿಯೇ ಇದೆ. ಅದಕ್ಕೆ ಸಾಕ್ಷಿಯನ್ನು ಈ ಮೇಲೆ ಆಗಲೇ ನೀಡಲಾಗಿದೆ. ಹಾಗಾಗಿ 1972ರ ದೇವರಾಜ ಅರಸು ಅವರ ನೇತೃತ್ವದ ಭೂಸುಧಾರಣೆಯಲ್ಲಿಯೂ ದಲಿತರಿಗೆ ಭೂಮಿ ದಕ್ಕಲಿಲ್ಲ. ಲಲಿತ ನಟರಾಜ್ ಮತ್ತು ವಿ.ಕೆ.ನಟರಾಜ್ ಹೇಳುವಂತೆ ‘ಅರಸು ಅವರ ಭೂಸುಧಾರಣೆ ರಾಜ್ಯದ ಭೂಸಂಬಂಧವನ್ನು ಮೂಲಭೂತವಾಗಿ ಪರಿವರ್ತಿಸಿಲ್ಲ. ದಲಿತರಿಗಂತೂ ಅರಸು ಅವರ ಭೂಸುಧಾರಣೆಯಿಂದ ಏನೇನೂ ಲಾಭವಾಗಿಲ್ಲ ಎನ್ನುತ್ತಾರೆ. ಇದು ನಿಜವೇ ಆಗಿದೆ.

table 6 1

ಈಗದರ ಸ್ಥಿತಿ ಬದಲಾಗಿದೆಯೇ ನೋಡೋಣ. 2015ರ ಕೃಷಿ ಗಣತಿಯ ಪ್ರಕಾರ 2.5 ಎಕರೆಗಿಂತ ಕಡಿಮೆ ಜಮೀನು ಇರುವ ದಲಿತರ ಸಂಖ್ಯೆ ಶೇ. 12. ಇವರ ಬಳಿ ಸರಾಸರಿ 1.13 ಎಕರೆ ಇದೆ. ಸರ್ಕಾರದ ಸೌಲಭ್ಯ ಪಡೆಯಲು ಕನಿಷ್ಟ 2 ಎಕರೆ ಜಮೀನು ಇರಬೇಕು. ಹಾಗಾಗಿ ಇವರು ಕೃಷಿಕೂಲಿಗಳೇ ಆಗಿದ್ದಾರೆ ಹಾಗೂ ಇವರಿಗೆ ಯಾವುದೇ ಕೃಷಿ ಸಂಬಂಧಿತ ಯೋಜನೆಗಳು ದೊರಕುವುದಿಲ್ಲ. 2.5ರಿಂದ 5 ಎಕರೆ ಜಮೀನು ಇರುವ ದಲಿತರ ಪಾಲು ಶೇ. 12 ಇದೆ. ಇವರ ಬಳಿ ಸರಾಸರಿ 3.5 ಎಕರೆ ಜಮೀನು ಇದೆ. 5ರಿಂದ 10 ಎಕರೆ ಜಮೀನು 9% ದಲಿತರ ಬಳಿ ಇದ್ದು ಸರಾಸರಿ 6 ಎಕರೆ ಜಮೀನು ಹೊಂದಿದ್ದಾರೆ. 10ರಿಂದ 24 ಎಕರೆ ಜಮೀನು ಹೊಂದಿರುವ ದಲಿತರು ಶೇ. 5.8ರಷ್ಟಿದ್ದು, ಸರಾಸರಿ 13.5 ಎಕರೆ ಹೊಂದಿದ್ದಾರೆ. 24 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು ಶೇ. 5ರಷ್ಟಿದ್ದು, ಸರಾಸರಿ 37 ಎಕರೆಯಷ್ಟು ಜಮೀನು ಹೊಂದಿದ್ದಾರೆ. ಒಟ್ಟಾರೆ 2015ರಷ್ಟೊತ್ತಿಗೆ ಕರ್ನಾಟಕದ 8.8% ದಲಿತರ ಬಳಿ ಕರ್ನಾಟಕದ ಒಟ್ಟು ಭೂಮಿಯ ಶೇ. 9.38ರಷ್ಟಿದೆ. ಒಟ್ಟಾರೆ ದಲಿತರು ಹೊಂದಿರುವ ಭೂಮಿಯಲ್ಲಿ ಶೇ. 57.26ರಷ್ಟು ತುಂಡುಭೂಮಿಯಾಗಿದೆ. ಆದರೆ ಇತರೆ ಜಾತಿಗಳಲ್ಲಿ ಈ ತುಂಡು ಭೂಮಿಯ ಪ್ರಮಾಣ ಕೇವಲ 38.18% ಇದೆ. ಹಾಗಾಗಿ ಕಳೆದ 25 ವರ್ಷಗಳಲ್ಲಿ ಭೂಮಿಯ ವಿಚಾರದಲ್ಲಿ ದಲಿತರ ಭೂಹಿಡುವಳಿ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. ಇದಕ್ಕೆ ಬಹುಮುಖ್ಯ ಕಾರಣ 90ರ ದಶಕದ ನಂತರ ದೇಶವನ್ನು ಅಪ್ಪಳಿಸಿದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣವೆಂಬ ನೀತಿಯಾಗಿದೆ.

(ಮುಂದುವರಿಯುತ್ತದೆ..)

(‘ಈದಿನ.ಕಾಮ್’ ಹೊರ ತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ, ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

****

vikas r mourya
ವಿಕಾಸ್‌ ಆರ್‌ ಮೌರ್ಯ
+ posts

ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು

ಪೋಸ್ಟ್ ಹಂಚಿಕೊಳ್ಳಿ:

ವಿಕಾಸ್‌ ಆರ್‌ ಮೌರ್ಯ
ವಿಕಾಸ್‌ ಆರ್‌ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...