ಅರಸು ಅವರ ಕಾಲದಲ್ಲಿ ಜಾರಿಯಾದ ಭೂ ಸುಧಾರಣಾ ಕಾಯ್ದೆಯಿಂದ ದಲಿತರು ಫಲಾನುಭವಿಗಳಾಗಲಿಲ್ಲ ಎಂಬ ಸಂಗತಿಯನ್ನು ಈ ಹಿಂದಿನ ಸಂಚಿಕೆಯಲ್ಲಿ ವಿಸ್ತೃತವಾಗಿ ವಿವರಿಸಲಾಗಿತ್ತು. ದಲಿತರ ಮೇಲಿನ ದೌರ್ಜನ್ಯ, ಶಿಕ್ಷಣ ಕ್ಷೇತ್ರದಲ್ಲಾಗದ ಆಮೂಲಾಗ್ರ ಬದಲಾವಣೆ ಮೊದಲಾದ ವಿಚಾರಗಳನ್ನು ವಿವರಿಸಲಾಗಿತ್ತು. ಈ ಭಾಗದಲ್ಲಿ ದಲಿತರ ಉದ್ಯೋಗ, ಬಡತನ, ಆರ್ಥಿಕತೆ, ಪ್ರಾದೇಶಿಕತೆ, ಬ್ರಾಹ್ಮಣೀಯವಾದದ ಸವಾಲು ಕುರಿತು ಗಂಭೀರವಾಗಿ ಚರ್ಚಿಸಲಾಗಿದೆ.
(ಮುಂದುವರಿದ ಭಾಗ)
ಉದ್ಯೋಗ: 2016ರ ಕೆ.ರತ್ನಪ್ರಭಾ ಸಮಿತಿಯ ವರದಿ ಹಾಗೂ 2018ರ ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯ ವರದಿ ಪ್ರಕಾರ ಕರ್ನಾಟಕ ಸರ್ಕಾರದ ಉದ್ಯೋಗಗಳಲ್ಲಿ ದಲಿತರ ಪಾಲು ಕಡಿಮೆಯಾಗಿರುವುದು ಕಂಡುಬಂದಿದೆ. 1990ರಲ್ಲಿ ಶೇ.12.07ರಷ್ಟಿದ್ದ ದಲಿತ ನೌಕರರ ಪ್ರಮಾಣ 2010ರಷ್ಟೊತ್ತಿಗೆ ಗರಿಷ್ಠ 13.87%ವರೆಗೆ ಮುಟ್ಟಿ ಮತ್ತೆ ಇಳಿಮುಖವಾಗುತ್ತಾ ಬಂದಿದೆ. 2018ರಲ್ಲಿ ಕರ್ನಾಟಕದ ಸರ್ಕಾರಿ ನೌಕರರಲ್ಲಿ ದಲಿತರ ಪಾಲು ಕೇವಲ ಶೇ.11.15ರಷ್ಟಿದೆ. ಅಂದರೆ ಕರ್ನಾಟಕದಲ್ಲಿ ದಲಿತರ ಜನಸಂಖ್ಯೆ ಶೇ.17ರಷ್ಟಿದ್ದು ಸರ್ಕಾರಿ ಉದ್ಯೋಗದಲ್ಲಿ ದಲಿತರ ಪಾಲು ಶೇ.6ರಷ್ಟು ಕಡಿಮೆ ಇದೆ.

ಇದನ್ನು ಮತ್ತಷ್ಟು ಒಳಹೊಕ್ಕಿ ನೋಡಿದಾಗ ಸಾಂವಿಧಾನಿಕ ಹಕ್ಕಾದ ಮೀಸಲಾತಿಯ ಕತೆ ಮತ್ತಷ್ಟು ಬಿಗಡಾಯಿಸುತ್ತದೆ. ಅಂದರೆ, ಒಟ್ಟು ದಲಿತರ ಗ್ರೂಪ್ ಎ, ಬಿ, ಸಿ ಮತ್ತು ಡಿ ಹುದ್ದೆಗಳಲ್ಲಿ 1990ರಲ್ಲಿ ಕ್ರಮವಾಗಿ ಶೇ. 2.81, ಶೇ.2.74, ಶೇ.59.83 ಹಾಗೂ ಶೇ.34.62 ಇದ್ದವರು 2018ರಲ್ಲಿ ಕ್ರಮವಾಗಿ ಶೇ.3.74, ಶೇ 8.80, ಶೇ.76.55 ಮತ್ತು ಶೇ.10.91 ಇದ್ದಾರೆ. ಉನ್ನತ ಹುದ್ದೆಗಳಲ್ಲಿ ದಲಿತರ ಪ್ರಾತಿನಿಧ್ಯ ಕಡಿಮೆ ಇರುವುದು ಇಲ್ಲಿ ಕಂಡುಬರುತ್ತದೆ.
1990ರ ನಂತರ ಖಾಸಗೀಕರಣ ತನ್ನ ವಾಮನಪಾದಗಳನ್ನು ಇಡೀ ದೇಶದ ಮೇಲೆ ಇಟ್ಟ ನಂತರ, ಖಾಸಗಿ ಉದ್ಯೋಗಗಳ ಪ್ರಮಾಣ ಹೆಚ್ಚಾಗುತ್ತಾ ಬಂದಿದ್ದು, ಮೀಸಲಾತಿ ಇಲ್ಲದ ಕಾರಣ ದಲಿತರು ಸಂಪೂರ್ಣವಾಗಿ ಹೊರಗುಳಿದಿದ್ದಾರೆ.

ಇನ್ನು ದೇಶದ ಯಥೇಚ್ಚ ಅಸಂಘಟಿತ ವಲಯದ ಉದ್ಯೋಗಗಳಿಗೆ ಬಂದಾಗ, 2016ರ skill development, Entrepreneurship and Livelihood department ವರದಿಯ ಪ್ರಕಾರ ಒಟ್ಟು ಉದ್ಯೋಗಗಳಲ್ಲಿ ಅನೌಪಚಾರಿಕ ಕೆಲಸಗಾರರ ಪಾಲು ಶೇ. 74.01. ಇದರಲ್ಲಿ ದಲಿತರ ಪಾಲು ಬರೋಬ್ಬರಿ 78.89%.

ಸರ್ಕಾರಿ ಉದ್ಯೋಗಗಳನ್ನು ಹೊರತುಪಡಿಸಿ ಸ್ವಯಂ ಉದ್ಯೋಗ, ಖಾಯಂ ಉದ್ಯೋಗ ಹಾಗೂ ತಾತ್ಕಾಲಿಕ ಉದ್ಯೋಗದ ವಿಚಾರಕ್ಕೆ ಬಂದರೆ ಅಲ್ಲಿಯೂ ದಲಿತರಿಗೆ ಪೂರ್ಣ ಪ್ರಮಾಣದ ನೆಮ್ಮದಿ ಇಲ್ಲದಂತಾಗಿದೆ. ಈ ಮೇಲಿನ 2011-12ರ ನ್ಯಾಷನಲ್ ಸ್ಯಾಂಪಲ್ ಸರ್ವೆ ಅಂಕಿಅಂಶ ಗಮನಿಸಿದಾಗ, ಒಟ್ಟು ಕೆಲಸನಿರತ ದಲಿತ ಉದ್ಯೋಗಿಗಳ ಪೈಕಿ ಖಾಯಂ ಉದ್ಯೋಗಿಗಳ ಪ್ರಮಾಣ ಕೇವಲ ಶೇ.8.7ರಷ್ಟಿದ್ದು, ಸ್ವಯಂ ಉದ್ಯೋಗಿಗಳ ಪ್ರಮಾಣ ಶೇ.20.7ರಷ್ಟಿದ್ದು, ಅಭದ್ರತೆಯಿಂದ ಕೂಡಿದ ತಾತ್ಕಾಲಿಕ ಉದ್ಯೋಗಗಳಲ್ಲಿ ದಲಿತರ ಪಾಲು ಬರೋಬ್ಬರಿ ಶೇ.68.2ರಷ್ಟಿದೆ. ಇದರ ಚಿತ್ರಣ ಕರ್ನಾಟಕದಲ್ಲಿ ತುಸು ಕಡಿಮೆ ಇದೆ ಎಂದಿಟ್ಟುಕೊಂಡರೂ ಬಹುದೊಡ್ಡ ಪ್ರಮಾಣದ ದಿನಗೂಲಿ ನೌಕರರು ದಲಿತರೇ ಆಗಿರುವುದು ಕಂಡು ಬರುತ್ತದೆ.
ಇದನ್ನೂ ಓದಿರಿ: ಕರ್ನಾಟಕ 50 | ದಲಿತರ ಸ್ಥಿತಿಗತಿ ಬದಲಾಗಿದೆಯೇ? (ಭಾಗ- 1)
ಒಟ್ಟಾರೆ ಸರ್ಕಾರಿ ಕ್ಷೇತ್ರದಲ್ಲಿ ಸಂಪೂರ್ಣ ಪ್ರಮಾಣದ ಮೀಸಲಾತಿ ದೊರಕದೆ, ಖಾಸಗಿ ಕ್ಷೇತ್ರದಲ್ಲಿ ಮುಕ್ತ ಪ್ರವೇಶವಿಲ್ಲದೆ, ಸ್ವಂತ ಬಲದ ಮೇಲೆ ಬದುಕಲು ಬಂಡವಾಳವಿಲ್ಲದೆ, ಹೊಟ್ಟೆ ತುಂಬುವಷ್ಟನ್ನಾದರೂ ಬೆಳೆದು ತಿನ್ನಲು ತಕ್ಕಮಟ್ಟಿನ ಭೂಮಿಯೂ ಇಲ್ಲದೆ ದಲಿತರು ಇಂದಿಗೂ ಬಹುಪ್ರಮಾಣದಲ್ಲಿ ಜೀವಿಸುತ್ತಿದ್ದಾರೆ.
ದಲಿತರು ಮತ್ತು ಬಡತನ
ಕರ್ನಾಟಕ ಮಾನವ ಅಭಿವೃದ್ಧಿ ವರದಿ, 2015ರಲ್ಲಿ ಕರ್ನಾಟಕದ ವಿವಿಧ ಸಮುದಾಯಗಳ ಬಹುಮುಖಿ ಬಡತನದ ಪ್ರಮಾಣವನ್ನು ಕಂಡುಹಿಡಿಯಲಾಯಿತು. ಈ ವರದಿಯು ಬಡತನವನ್ನು ಸೂಚಿಸುವ ಮೂರು ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟಕ್ಕೆ ಸಂಬಂಧಿಸಿದ ಸೂಚ್ಯಂಕವಾಗಿದೆ. ಅದರ ಸಂಕ್ಷಿಪ್ತ ವರದಿಯನ್ನು ಈ ಕೆಳಗಿನ ಕೋಷ್ಟಕದಲ್ಲಿ ನೋಡಬಹುದು.

ಇಲ್ಲಿ ಮೇಲ್ನೋಟಕ್ಕೆ ಗಮನಿಸಿದರೂ ಸಾಕು ದಲಿತರು ಮತ್ತು ಆದಿವಾಸಿಗಳಲ್ಲಿ ಬಡವರ ಜನಸಂಖ್ಯೆ ಹೆಚ್ಚಿದೆ ಎಂದು ತಿಳಿಯುತ್ತದೆ. ದಲಿತರ ಶೇ.32.90 ಮತ್ತು ಆದಿವಾಸಿಗಳ ಶೇ.34.70 ಜನರು ಬಡವರಾಗಿದ್ದಾರೆ. ಅದರಲ್ಲಿಯೂ ಇತರೆ ಮೇಲ್ಜಾತಿಗಳಿಗೆ ಹೋಲಿಸಿದರೆ ಸುಮಾರು ಮೂರು ಪಟ್ಟು ದಲಿತ-ಆದಿವಾಸಿಗಳು ಹೆಚ್ಚು ಬಡವರನ್ನು ಹೊಂದಿದ್ದಾರೆ.
ಮತ್ತೊಂದು ರೀತಿಯಲ್ಲಿ ಈ ಬಡತನದ ಪ್ರಮಾಣವನ್ನು ಗ್ರಹಿಸುವುದಾದರೆ, ಮಾಸಿಕ ತಲಾವಾರು ಅನುಭೋಗ ವೆಚ್ಚ (Monthly per-capita Consumption Expenditure) ದಲ್ಲಿಯೂ ರಾಜ್ಯದಲ್ಲಿ ಅತಿ ಕಡಿಮೆ ಜೀವನಮಟ್ಟ ಅನುಭವಿಸುತ್ತಿರುವವರು ದಲಿತರಾಗಿದ್ದಾರೆ. 2011-12ರಲ್ಲಿ ಭಾರತದ ದಲಿತರ ಅನುಭೋಗ ವೆಚ್ಚಕ್ಕಿಂತ ಕರ್ನಾಟಕ ದಲಿತರದ್ದು ಉತ್ತಮವಾಗಿದೆಯಾದರೂ ಕರ್ನಾಟಕದ ಇತರೆ ಸಮುದಾಯಗಳಿಗೆ ಹೋಲಿಸಿದರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲೆರಡರಲ್ಲೂ ದಲಿತರದ್ದೇ ಅತ್ಯಂತ ಕಡಿಮೆ ವೆಚ್ಚವಾಗಿದೆ.
2016ರ ನೋಟು ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‌ಟಿ ಹಾಗೂ ಕೋವಿಡ್ ಲಾಕ್‌ಡೌನ್ ನಂತರ ದಲಿತರ ಪಾಡು ಇನ್ನೇನಾಗಿರಬಹುದು ನೀವೇ ಊಹಿಸಿಕೊಳ್ಳಿ!

ದಲಿತರು ಮತ್ತು ಆರ್ಥಿಕತೆ
World Inequality Lab-2023 ಭಾರತದ ಸಂಪತ್ತಿನ ಹಂಚಿಕೆಯನ್ನು ಅಧ್ಯಯನ ಮಾಡಿದೆ. ಅದರ ಪ್ರಕಾರ ಭಾರತದ ಶೇ. 1ರಷ್ಟು ಶತಕೋಟ್ಯಾಧಿಪತಿಗಳ ಬಳಿ ದೇಶದ ಶೇ.40ರಷ್ಟು ಸಂಪತ್ತಿದೆ! ತಳಮಟ್ಟದ ಶೇ.50ರಷ್ಟು ಭಾರತೀಯರ ಬಳಿ ಅಂದರೆ ಸುಮಾರು 46 ಕೋಟಿ ಭಾರತೀಯ ಬಡವರ ಬಳಿ ಕೇವಲ ಶೇ.6.4ರಷ್ಟು ಸಂಪತ್ತಿದೆ. ಶೇ. 88ರಷ್ಟು ಸಂಪತ್ತನ್ನು ಹೊಂದಿರುವವರು ಮೇಲ್ಜಾತಿಗಳೇ ಆಗಿದ್ದಾರೆ! ಮತ್ತಷ್ಟು ಆಳಕ್ಕಿಳಿದು ನೋಡಿದಾಗ ಶೇ.0.001ರಷ್ಟು ಶ್ರೀಮಂತರ ಬಳಿ ದೇಶದ ಶೇ.17ರಷ್ಟು ಸಂಪತ್ತಿದೆ. ಇವರ ಜನಸಂಖ್ಯೆ ಹತ್ತು ಸಾವಿರಕ್ಕಿಂತಲೂ ಕಡಿಮೆ ಇದೆ. ಈ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಒಬ್ಬರೂ ಆದಿವಾಸಿಗಳಿಲ್ಲ! ಇದನ್ನು ಸರಳವಾಗಿ ವಿವರಿಸಬೇಕೆಂದರೆ ಭಾರತದ 100 ಶತಕೋಟ್ಯಾಧಿಪತಿಗಳಲ್ಲಿ 88 ಜನ ಮೇಲ್ಜಾತಿಗೆ ಸೇರಿದವರು. 9 ಜನ ಹಿಂದುಳಿದ ಜಾತಿಗೆ ಸೇರಿದವರು. 3 ಜನ ದಲಿತರು. ಇದರಲ್ಲಿ ಆದಿವಾಸಿಗಳಿಲ್ಲ.

All-India Debt and Investment Survey (AIDIS) for 2018-19 ಪ್ರಕಾರ ಭಾರತದ ಮೇಲ್ಜಾತಿಗಳ ಬಳಿ ದೇಶದ ಶೇ.55ರಷ್ಟು ಸಂಪತ್ತು ಕೊಳೆಯುತ್ತಿದೆ. ಇದನ್ನು ಮತ್ತಷ್ಟು ಬಿಡಿಸಿ ನೋಡಿದಾಗ, ಶೇ. 27.2ರಷ್ಟು ಮೇಲ್ಜಾತಿಗಳ ಬಳಿ ದೇಶದ ಶೇ.53.7ರಷ್ಟು ಸಂಪತ್ತಿದೆ. ಶೇ. 43.9ರಷ್ಟು ಹಿಂದುಳಿದ ಜಾತಿಗಳ ಬಳಿ ದೇಶದ ಶೇ. 33.9ರಷ್ಟು ಸಂಪತ್ತಿದೆ. ಶೇ. 19.7ರಷ್ಟಿರುವ ಪರಿಶಿಷ್ಟ ಜಾತಿಯವರ ಬಳಿ ಶೇ. 8.4ರಷ್ಟು ಸಂಪತ್ತಿದೆ. ಶೇ. 9ರಷ್ಟಿರುವ ಪರಿಶಿಷ್ಟ ಪಂಗಡದವರ ಬಳಿ ಶೇ. 4ರಷ್ಟು ಸಂಪತ್ತಿದೆ. ಇದನ್ನು ಸರಳವಾಗಿ ವಿವರಿಸುವುದಾದರೆ, (100 ಜನಸಂಖ್ಯೆಯ ದೇಶದಲ್ಲಿ 100 ರೂಪಾಯಿ ಸಂಪತ್ತಿರುವಾಗ) ದೇಶದ 27 ಮೇಲ್ಜಾತಿಯವರಲ್ಲಿ 54 ರೂಪಾಯಿ ಇದೆ. 44 ಹಿಂದುಳಿದ ಜಾತಿಯವರಲ್ಲಿ 34 ರೂಪಾಯಿ ಇದೆ. 20 ದಲಿತರ ಬಳಿ 8 ರೂಪಾಯಿ ಇದೆ. 9 ಆದಿವಾಸಿಗಳ ಬಳಿ 4 ರೂಪಾಯಿ ಇದೆ.

ಹೀಗೆ ಆರ್ಥಿಕ ಪರಿಸ್ಥಿತಿಯಲ್ಲಿ ದಲಿತರು ಕಡೆಯವರು ಹಾಗೂ ನಿರ್ಗತಿಕರು.
ಪ್ರಾದೇಶಿಕತೆ ಮತ್ತು ದಲಿತರು
ಈಗಾಗಲೇ ಕರ್ನಾಟಕದ ಭೂಹಿಡುವಳಿಯು ಕೆಲವೇ ಮೇಲ್ಜಾತಿಗಳ ಪಾಲಾಗಿರುವ ಕಾರಣವನ್ನು ತಿಳಿದೆವು. ಇದಕ್ಕೆ ಮತ್ತೊಂದು ಮುಖವೂ ಇದೆ. ಅದೆಂದರೆ ಪ್ರಾದೇಶಿಕತೆ. ಕರ್ನಾಟಕದ ಸರ್ಕಾರಗಳೆಲ್ಲವೂ ದಕ್ಷಿಣ ಕರ್ನಾಟಕ ಕೇಂದ್ರಿತವಾಗಿ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡ ಕಾರಣ, ಉತ್ತರ ಕರ್ನಾಟಕ ಅದರಲ್ಲಿಯೂ ಹೈದರಾಬಾದ್ ಕರ್ನಾಟಕ ಬಹಳ ಹಿಂದುಳಿಯುವಂತಾಯಿತು. ದಲಿತರ ವಿಚಾರಕ್ಕೆ ಬಂದರೆ ಕರ್ನಾಟಕದ ಬೆಳಗಾವಿ, ವಿಜಯಪುರ, ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ದಲಿತರು ಹೆಚ್ಚಿನ ಜನಸಂಖ್ಯೆಯಲ್ಲಿದ್ದಾರೆ. ಇವುಗಳಲ್ಲಿ 11 ಜಿಲ್ಲೆಗಳು ಉತ್ತರ ಕರ್ನಾಟಕ ಭಾಗದಲ್ಲಿವೆ. ದಕ್ಷಿಣ ಕರ್ನಾಟಕದ ಕೋಲಾರ ಹಾಗೂ ಚಾಮರಾಜನಗರದ ದಲಿತರ ಸ್ಥಿತಿಯೂ ಉತ್ತರ ಕರ್ನಾಟಕದವರನ್ನೇ ಹೋಲುತ್ತದೆ. ವಿಪರ್ಯಾಸವೆಂದರೆ ಕರ್ನಾಟಕದ ಆರ್ಥಿಕತೆಯು ಬೆಂಗಳೂರನ್ನೇ ಕೇಂದ್ರವಾಗಿಸಿಕೊಂಡಿದೆ. ಕರ್ನಾಟಕದ ಒಟ್ಟು GSDPಯಲ್ಲಿ ಶೇ. 36% ಬೆಂಗಳೂರಿನದ್ದಾಗಿದೆ.
ಇದನ್ನೂ ಓದಿರಿ: ‘ದಿ ಇಂಡಿಯಾ ಹೇಟ್ ಲ್ಯಾಬ್’ ಬಿಚ್ಚಿಟ್ಟಿರುವ ದ್ವೇಷಭಾಷಣಗಳ ಆಘಾತಕಾರಿ ಸತ್ಯಗಳು!
ಮೈಸೂರು ಮಹಾರಾಜರಿಂದಾಗಿ ಮೈಸೂರು ಭಾಗ ಮುಂದುವರಿಯಿತು. ಉದಾರೀಕರಣದ ಕಾಲಘಟ್ಟದಲ್ಲಿ ಬೆಂಗಳೂರು ಐಟಿ, ಬಿಟಿ ಕ್ಷೇತ್ರವಾಯಿತು. ಬೆಂಗಳೂರೇತರ ಜಿಲ್ಲೆಗಳು ಅಭಿವೃದ್ಧಿ ಹೊಂದಲೇ ಇಲ್ಲ. ಹಾಗಾಗಿ ದಲಿತರೇ ಹೆಚ್ಚಿರುವ ಬೀದರ್, ಗುಲ್ಬರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳದಲ್ಲಿ ಅತಿ ಹೆಚ್ಚು ಬಡತನವಿದೆ. 2018-19ರ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಕರ್ನಾಟಕದ ಸರಾಸರಿ ತಲಾದಾಯವು ರೂ. 1.42 ಲಕ್ಷವಿತ್ತು. ದಕ್ಷಿಣ ಕರ್ನಾಟಕದ 5 ಜಿಲ್ಲೆಗಳು ಅದಕ್ಕಿಂತಲೂ ಹೆಚ್ಚಿನ ತಲಾದಾಯ ಹೊಂದಿವೆ. ಅವು ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ. ಇವೆಲ್ಲ ಜಿಲ್ಲೆಗಳಲ್ಲೂ ಬೆಂಗಳೂರು ನಗರ ಹೊರತುಪಡಿಸಿದರೆ ದಲಿತರ ಜನಸಂಖ್ಯೆ ಕಡಿಮೆ ಇದೆ. ಅಷ್ಟೇ ಅಲ್ಲ ಸರಾಸರಿ ತಲಾದಾಯ ಎಂಬುವುದೇ ಫೇಕ್. ಇಲ್ಲಿ ಕೋಟ್ಯಾಧಿಪತಿಯ ಖಜಾನೆಯ ದುಡ್ಡನ್ನು ಬಡವರ ಜೇಬಿನಲ್ಲಿಟ್ಟು ಲೆಕ್ಕ ಹಾಕಲಾಗುತ್ತದೆ.
ಬ್ರಾಹ್ಮಣ್ಯ-ಬಂಡವಾಳಶಾಹಿ ಮತ್ತು ದಲಿತರು
ಡಾ. ಬಿ.ಆರ್.ಅಂಬೇಡ್ಕರ್ ಹೇಳುವಂತೆ ಭಾರತದ ದುಡಿಯುವ ಜನರ ಎರಡು ಶತ್ರುಗಳು – ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ. ಈ ಎರಡು ಶತ್ರುಗಳಿಂದಲೇ ಇಡೀ ಭಾರತದ ಪ್ರಗತಿಯೂ ಕುಂಠಿತವಾಗಿದೆ. ಈ ಮೇಲಿನ ಎಲ್ಲ ಅಸಮಾನತೆ ಮತ್ತು ಅನ್ಯಾಯಕ್ಕೆ ಈ ಎರಡು ಶಕ್ತಿಗಳೇ ಕಾರಣವಾಗಿವೆ. ದುರಂತವೆಂದರೆ, ಈ ಎರಡೂ ಶಕ್ತಿಗಳು ಒಂದಕ್ಕೊಂದು ಕೈಜೋಡಿಸಿಕೊಂಡು ಇಡೀ ಭಾರತೀಯರ ಮೇಲೆ ಪ್ರಹಾರ ಮಾಡುತ್ತಿವೆ. ದಲಿತರು ಈ ಜಾತಿ ಏಣಿಶ್ರೇಣಿಯಲ್ಲಿ ಅತ್ಯಂತ ಕೆಳಗಿರುವ ಕಾರಣ ಈ ಪ್ರಹಾರದ ಪೆಟ್ಟು ಮೊದಲು ಅವರ ಅನುಭವಕ್ಕೆ ಬರುತ್ತದೆ.
ಇದನ್ನೂ ಓದಿರಿ: ಆಸಾರಾಂ ಬಾಪು: ಸಂತನೋ, ಪಾಪಿಯೋ?
ಒಂದು ಶೇಷ್ಠ ಮತ್ತೊಂದು ಕನಿಷ್ಠ ಎಂಬ ಮನಸ್ಥಿತಿಯೇ ಬ್ರಾಹ್ಮಣ್ಯ. ಈ ಸಿದ್ಧಾಂತವು ಚಾತುರ್ವರ್ಣ ಪದ್ಧತಿಯಿಂದ ಜಾತಿ ವ್ಯವಸ್ಥೆಯಾಗಿ ರೂಪುಗೊಂಡು ಅಸ್ಪೃಶ್ಯತೆಯಂತಹ ಕರಾಳ ‘ಮಾನಸಿಕ ಕಾಯಿಲೆ’ಯನ್ನು ಉಂಟುಮಾಡಿದೆ. ಹಾಗಾಗಿ ದಲಿತರು ಈ ವ್ಯವಸ್ಥೆಯ ಅತ್ಯಂತ ಕ್ರೂರತೆಯ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಇಂತಹ ಅಮಾನವೀಯ ಬ್ರಾಹ್ಮಣ್ಯವನ್ನು ಹೊತ್ತು ಮೆರೆಸುತ್ತಿರುವ ಭಾರತ ದೇಶದಲ್ಲಿ ಬಂಡವಾಳಶಾಹಿಯು ಮನೆ ಮಾಡಿದ ನಂತರ ದಲಿತರು ಮಾತ್ರವಲ್ಲ ಇಡೀ ಭಾರತದ ಶೇ. 99ರಷ್ಟು ಜನರ ಬದುಕು ಮೂರಾಬಟ್ಟೆಯಾಗಿದೆ. ಆದರೆ ಈ ದರಿದ್ರತನದ ಅನುಭವ ಗಮನಕ್ಕೆ ಬರದಂತೆ ಬ್ರಾಹ್ಮಣ್ಯವು ಸದಾ ಭಾರತೀಯರನ್ನು ಹಿಪ್ನಟೈಸ್ ಮಾಡಿಟ್ಟುಕೊಂಡು ಬಂದಿದೆ.
ಉಪಸಂಹಾರ
ಒಟ್ಟಾರೆ ಕರ್ನಾಟಕದ ದಲಿತರು ಕಳೆದ 50 ವರ್ಷಗಳಲ್ಲಿ ಏನನ್ನೂ ಗಳಿಸಲಿಲ್ಲ ಎಂಬುದು ಇತಿಹಾಸಕ್ಕೆ ಎಸಗುವ ಅಪಮಾನವಾಗುತ್ತದೆ. ದಲಿತರ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಶಿಕ್ಷಣ, ಉದ್ಯೋಗದಲ್ಲಿ ಹಿಂದಿಗಿಂತಲೂ ಮುಂದುವರೆದಿದ್ದಾರೆ. ಇದರಿಂದಾಗಿಯೇ 1970ರ ದಶಕದಲ್ಲಿ ಇಡೀ ದೇಶಕ್ಕೆ ಮಾದರಿಯಾದ ದಲಿತ ಸಂಘರ್ಷ ಸಮಿತಿ ಇಲ್ಲಿ ಜೀವತಾಳಿತು. ದಲಿತರಾಗಿ ತಮ್ಮ ಹಕ್ಕುಗಳನ್ನು ಮರಳಿ ಪಡೆಯಲು ಶ್ರಮಿಸಿತು. ದಸಂಸ ತೋರಿದ ದಿಟ್ಟತನ ಹಾಗೂ ಬದ್ಧತೆಯ ಕಾರಣಕ್ಕಾಗಿಯೇ ಕರ್ನಾಟಕದ ದಲಿತರು ಸ್ವಾಭಿಮಾನ ಗಳಿಸುವಂತಾಯಿತು. ಇಂದು ಒಂದಷ್ಟು ದಲಿತರು ಶಿಕ್ಷಣ ಉದ್ಯೋಗದ ಜೊತೆಗೆ ದಲಿತ ಪ್ರಜ್ಞೆ ಹಾಗೂ ಅಂಬೇಡ್ಕರ್ ಕಣ್ಣೋಟ ಹೊಂದಲು ಮುಖ್ಯ ಕಾರಣ ದಸಂಸದ ಹೋರಾಟವಾಗಿದೆ. 80ರ ದಶಕದಷ್ಟೊತ್ತಿಗೆ ದಲಿತರೊಳಗೆ ಮೂಡಿದ ಅಂಬೇಡ್ಕರ್ ಪ್ರಜ್ಞೆಯು ಹರಿಜನ ಪ್ರಜ್ಞೆಯನ್ನು ಪಕ್ಕಕ್ಕೆ ಸರಿಸಿ ಇಂದು ಕರ್ನಾಟಕದ ಮುಖ್ಯವಾಹಿನಿಯೂ ಸೇರಿದಂತೆ ಇಡೀ ಭಾರತ ಅಂಬೇಡ್ಕರ್ ಚಿಂತನೆಯನ್ನು ಮಂಡಿಸುತ್ತಿದೆ. ದಲಿತರು ಹಿಂದಿಗಿಂತಲೂ ಹೆಚ್ಚು ಸಕ್ರಿಯರಾಗಿದ್ದು ಪ್ರತಿಯೊಂದು ದೌರ್ಜನ್ಯ, ಅನ್ಯಾಯಗಳನ್ನು ಪ್ರಶ್ನಿಸುವಂತಾಗಿದ್ದಾರೆ. ಇಂದು ದಲಿತರೇನು ಪಡೆದಿದ್ದಾರೋ ಅದಕ್ಕೆ ಮೂಲಕಾರಣ ಅಂಬೇಡ್ಕರ್, ಸಂವಿಧಾನ ಮತ್ತು ದಲಿತ ಸಂಘರ್ಷ ಸಮಿತಿ ಆಗಿದೆ. ಇದೇ ಸಮಯದಲ್ಲಿ ನಾನು ಬಹುಜನ ಚಳವಳಿಯನ್ನೂ ನೆನೆಯಲೇಬೇಕು. ಆದರೆ ಸ್ವತಂತ್ರ ಭಾರತದ ನಂತರ ಬಂದ ಎಲ್ಲಾ ಸರ್ಕಾರಗಳು ದಲಿತರಿಗೆ ಪ್ರತ್ಯೇಕವಾಗಿ ಸಂಪತ್ತನ್ನು ಸೃಜಿಸಲು ವಿಫಲಗೊಂಡಿವೆ. ಈ ಮೇಲೆ ನಾವು ನೋಡಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ದಲಿತರು ಇತರೆ ಜಾತಿ-ವರ್ಗಗಳಿಂದ ಬಹಳ ಹಿಂದೆಯೇ ಇದ್ದಾರೆ. ದಲಿತರು ಮತ್ತು ಇತರರ ನಡುವಿನ ಸಾಮಾಜೋ-ಆರ್ಥಿಕ ಅಂತರ ಹೆಚ್ಚಾಗುತ್ತಲೇ ಇದೆ. ಹಾಗಾಗಿ ದಲಿತರ ಮಾನವ ಅಭಿವೃದ್ಧಿಗೆ ಈ ಕೆಳಗಿನ ಕ್ರಮಗಳು ಮುಖ್ಯವಾಗಬಹುದು ಎಂಬುದು ನನ್ನ ಭಾವನೆಯಾಗಿದೆ.
ಸಂಘಟನೆ: ಇಂದು ಕರ್ನಾಟಕದ ದಲಿತರು ಸಮಾಜೋ-ಆರ್ಥಿಕ, ಸಾಂಸ್ಕೃತಿಕವಾಗಿ ಒಂದು ಮಟ್ಟಕ್ಕೆ ತಲುಪಿರಲು ಬಹುಮುಖ್ಯ ಕಾರಣ ದಲಿತ ಸಂಘರ್ಷ ಸಮಿತಿ. ಇಂದು ಸಂಘಟನೆ ಹಲವು ಭಾಗಗಳಾಗಿದ್ದರೂ, ದಲಿತರ ಗಟ್ಟಿ ಧ್ವನಿಯಾಗಿ ನಿಂತಿದೆ. ಆದರೆ ಯುವಪೀಳಿಗೆಯನ್ನು ಆಕರ್ಷಿಸುವಲ್ಲಿ ಇತ್ತೀಚೆಗೆ ವಿಫಲವಾಗಿದೆ. ಹಾಗಾಗಿ ದಲಿತರ 101 ಜಾತಿಗಳನ್ನೂ ಒಂದೇ ಚಪ್ಪರದಡಿಯಲ್ಲಿ ತರುವ ಸಂಘಟನೆಯೊಂದು ದಲಿತರಿಗೆ ತುರ್ತಾಗಿ ಬೇಕಿದೆ. ಅದು ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯ ವಿರುದ್ಧ ಸೈದ್ಧಾಂತಿಕವಾಗಿ ನಿಲ್ಲಬೇಕಿದೆ. ಜಾತಿದೌರ್ಜನ್ಯ ಹಾಗೂ ಅಸ್ಪೃಶ್ಯತೆಯ ವಿರುದ್ಧ ಬೃಹತ್ ಸಂಘಟನೆಯೊಂದನ್ನು ಕಟ್ಟಬೇಕಿದೆ.
ರಾಜಕೀಯ ಪಕ್ಷ: ಕರ್ನಾಟಕವನ್ನು ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಎಲ್ಲೆಲ್ಲಿ ದಲಿತ ಸಂಘಟನೆ ಗಟ್ಟಿಯಾಗಿತ್ತೋ ಅಲ್ಲೆಲ್ಲ ದಲಿತರ ರಾಜಕೀಯ ಪಕ್ಷಗಳು ಜೀವತಳೆದವು. ಆದರೆ ಕರ್ನಾಟಕದಲ್ಲಿ ಅದು ಇಂದಿಗೂ ಸಾಧ್ಯವಾಗಿಲ್ಲ. ಸಂಸದೀಯ ಪ್ರಜಾಪ್ರಭುತ್ವ ಇಂದು ಜನಸಾಮಾನ್ಯರಿಗೆ ವಿರುದ್ಧವಾಗಿ ಚಲಿಸುತ್ತಿದೆ ಎಂಬುದು ನಿಜವಾದರೂ, ಪ್ರಾಯೋಗಿಕವಾಗಿಯಾದರೂ ಕರ್ನಾಟಕಕ್ಕೆ ದಲಿತರದ್ದೇ ಆದ ಒಂದು ಪಕ್ಷ ಬೇಕಿದೆ.
ಇದನ್ನೂ ಓದಿರಿ: ಅಂದು ಎನ್‌ಇಪಿ, ಇಂದು ಯುಜಿಸಿ; ರಾಜ್ಯಗಳ ಮೇಲೆ ಕೇಂದ್ರದ ಗದಾಪ್ರಹಾರ!
ಆರ್ಥಿಕ ಶಕ್ತಿ: ಸರ್ಕಾರವೂ ಸೇರಿದಂತೆ, ಆರ್ಥಿಕವಾಗಿ ಬೆಳೆದು ನಿಂತ ದಲಿತ ನಾಯಕರೂ ದಲಿತರಿಗಾಗಿ ಆರ್ಥಿಕ ಶಕ್ತಿ ಕೇಂದ್ರವನ್ನು ಸ್ಥಾಪಿಸಲಿಲ್ಲ. ಹಲವರು ಶೈಕ್ಷಣಿಕ ಸಂಸ್ಥೆ, ಕಂಪೆನಿಗಳನ್ನು ಸ್ಥಾಪಿಸಿದ್ದಾರಾದರೂ ಅವುಗಳು ಅವರವರ ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಿವೆ ಹೊರತು ದಲಿತ ಸಮುದಾಯಗಳ ಏಳ್ಗೆಗಾಗಿ ಕಿಂಚಿತ್ತೂ ಯೋಚಿಸುತ್ತಿಲ್ಲ. ಹಾಗಾಗಿ ಇಂಥಹವರ ಹೊರತಾಗಿ ದೊಡ್ಡದಾದ ಆರ್ಥಿಕ ಶಕ್ತಿ ಕೇಂದ್ರವನ್ನು ಸೃಷ್ಟಿಸಲು ದಲಿತ ನೌಕರರು, ರಾಜಕೀಯ ನಾಯಕರು ಹಾಗೂ ಪ್ರಜ್ಞಾವಂತರು ಅಣಿಯಾಗಬೇಕಿದೆ. ಆ ಮೂಲಕ ಸರ್ಕಾರದ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆಗೊಳಿಸಬೇಕಿದೆ.
ಧಾರ್ಮಿಕ ಬದಲಾವಣೆ: ಬಾಬಾಸಾಹೇಬ್ ಅಂಬೇಡ್ಕರ್ ಅವರು ದಲಿತರಿಗೆ ಬುದ್ಧನನ್ನು ಕೊಟ್ಟು ಹೋದರು. ಆದರೂ ದಲಿತರು ಬೌದ್ಧ ಧಮ್ಮವನ್ನು ಅಪ್ಪಿಕೊಳ್ಳಲು ಹಿಂದೆ ಮುಂದೆ ಯೋಚಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದಲಿತ ಪ್ರಜ್ಞಾವಂತರು ಹಾಗೂ ಸಂಘಟಕರು ದಲಿತ ಜನಸಾಮಾನ್ಯರ ಮನದಲ್ಲಿ ಬುದ್ಧನನ್ನು ಬಿತ್ತಲು ಸೋತುಹೋಗಿದ್ದಾರೆ. ಅತ್ಯಂತ ತುರ್ತಾಗಿ ಬೌದ್ಧ ಧಮ್ಮ ಅಭಿಯಾನವನ್ನು ಆರಂಭಿಸಿ, ದಲಿತ ದೇವತೆಗಳಾದ ಮಾರಮ್ಮ, ದುಗ್ಗಮ್ಮ ಇತ್ಯಾದಿಗಳನ್ನು ಬುದ್ಧನ ಸಂಘದಲ್ಲಿ ವಿಲೀನಗೊಳಿಸಿ, ಸಮಾನತೆ ಹಾಗೂ ಜಾತಿರಹಿತ ಸಮಾಜವನ್ನು ಸ್ಥಾಪಿಸಬೇಕಿದೆ.
ಸ್ನೇಹಿತರೊಂದಿಗೆ ಸಹ ಹೋರಾಟ: ಇಂದು ಕೋಮುವಾದಿ-ಜಾತಿವಾದಿ ಶಕ್ತಿಗಳೇ ದಲಿತರ ಬಹುದೊಡ್ಡ ಶತ್ರುಗಳಾಗಿವೆ. ಅಂಬೇಡ್ಕರ್ ಹೆಸರನ್ನು ಮಾತ್ರ ಆರಾಧಿಸುವ ಶಕ್ತಿಗಳು ಆಳದಲ್ಲಿ ಅವರ ಸಿದ್ಧಾಂತವನ್ನು ಖಂಡಿಸುತ್ತವೆ. ಇಂಥಹವರ ಬಣ್ಣ ಬಯಲು ಮಾಡಲು ಜಾತಿವಿನಾಶ ಚಳವಳಿಯನ್ನು ಕಟ್ಟಲೇಬೇಕಿದೆ. ಹಾಗಾಗಿ ಕಮ್ಯುನಿಸ್ಟರು, ಪ್ರಗತಿಪರರು, ಸ್ತ್ರೀವಾದಿ ಚಳವಳಿಗಳೊಂದಿಗೆ ಜಾತಿವಿನಾಶ ಚಳವಳಿಯನ್ನು ಕಟ್ಟಲು ದಲಿತರು ಕೈಜೋಡಿಸಬೇಕಿದೆ. ಅಂಬೇಡ್ಕರ್‌ರವರ ಪ್ರಭುತ್ವ ಸಮಾಜವಾದವನ್ನು ಜಾರಿಗೊಳಿಸುವ ವೇದಿಕೆ ಸಿದ್ಧಗೊಳಿಸಬೇಕಿದೆ.
ಸರ್ಕಾರದ ಮೇಲೆ ಒತ್ತಡ: ಇಂದು ನವ ಬಂಡವಾಳಶಾಹಿಯ ಬಿಳಿನೆರಳು ಇಡೀ ಜಗತ್ತನ್ನು ಆವರಿಸಿದೆ. ಹಾಗಾಗಿ ಅದಾವುದೇ ಸರ್ಕಾರ ಬಂದರೂ ನವಉದಾರವಾದಿ ಆರ್ಥಿಕ ನೀತಿಗಳನ್ನು ಮೈಗೂಡಿಸಿಕೊಂಡು ಮತ್ತದೇ ಶೋಷಕರ ಜೊತೆ ಕೈಜೋಡಿಸಿ ಜನರಿಗೆ ಹಿಡಿ ಭಿಕ್ಷೆ ಹಾಕುತ್ತದೆ. ಆದ್ದರಿಂದ ಈ ಮೇಲಿನ ಸಂಘಟನೆಗಳೆಲ್ಲವೂ ದಲಿತರು ಹಾಗೂ ಬಡವರ ಪರವಾಗಿ ಸರ್ಕಾರದ ಮೇಲೆ ಒತ್ತಡ ಹಾಕುವ ಬೃಹತ್ ಶಕ್ತಿಯಾಗಬೇಕಿದೆ.

ವಿಕಾಸ್ ಆರ್ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು




