ಕರ್ನಾಟಕ 50 | ದೆಹಲಿಯ ಕಣ್ಣಲ್ಲಿ ಕರ್ನಾಟಕ; ಕರ್ನಾಟಕದ ಕಣ್ಣಲ್ಲಿ ದೆಹಲಿ (ಭಾಗ-1)

Date:

ದೆಹಲಿಯು ಕರ್ನಾಟಕವನ್ನು ಹೇಗೆ ಕಂಡಿದೆ ಎಂಬುದರಷ್ಟೇ ಮುಖ್ಯವಾದದ್ದು, ಕರ್ನಾಟಕ ದೆಹಲಿಯನ್ನು ಹೇಗೆ ಕಂಡಿದೆ ಎಂಬುದು. ನಡುಬಗ್ಗಿಸಿದವರ ಮೇಲೆ ಸವಾರಿ ಮಾಡುತ್ತ ಬಂದಿದೆ ದೆಹಲಿ. ಕರ್ನಾಟಕ ಕೂಡ ಸವಾರಿಗೆ ತನ್ನ ನಡುವನ್ನು ದೆಹಲಿಗೆ ಬಿಟ್ಟುಕೊಟ್ಟ ಅಲ್ಪತೃಪ್ತ ರಾಜ್ಯ. ಬಾಯಿ ಇದ್ದವರು ಬಡಾಯಿ ಕೊಚ್ಚಿಕೊಳ್ಳುವವರು ದೆಹಲಿಯ ಗಮನ ಸೆಳೆಯುತ್ತಾರೆ.

ರಾಷ್ಟ್ರೀಯ ಪಕ್ಷಗಳನ್ನೇ ಸಾಕಿ ಸಲಹಿ, ಲೋಕಸಭೆ-ರಾಜ್ಯಸಭೆಗಳಲ್ಲಿ ತಮ್ಮ ಪಕ್ಷಗಳ ಪರವಾಗಿ ಕೈ ಎತ್ತುತ್ತ ಬಂದಿರುವ ಕರ್ನಾಟಕ ಇಲ್ಲಿ ಒಂದು ಪೇಲವ ನೆರಳು ಮಾತ್ರ. ಅವಿಭಜಿತ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಗೇರಿದ್ದ ಸಿದ್ದವ್ವನಹಳ್ಳಿ ನಿಜಲಿಂಗಪ್ಪ, ಕಡೆಗೆ ಇಂದಿರಾ ವಿರುದ್ಧ ಸೆಟೆದು ನಿಂತ ದೇವರಾಜ ಅರಸು, ಮೌಲ್ಯಾಧಾರಿತ ಆಡಳಿತದ ಭ್ರಮೆ ಹುಟ್ಟಿಸಿದ ರಾಮಕೃಷ್ಣ ಹೆಗಡೆ ಇಲ್ಲಿ ಅಳಿಸಿ ಹೋಗಿರುವ ಪ್ರತಿಬಿಂಬಗಳು. ಸಮ್ಮಿಶ್ರ ಸರ್ಕಾರಗಳ ಯುಗದ 1996ರಲ್ಲಿ ವಿ.ಪಿ.ಸಿಂಗ್ ಹಿಂದೆ ಸರಿದ ಕಾರಣ, ತಾತ್ವಿಕ ಕಾರಣ ನೀಡಿ ತನ್ನ ಹಿರಿಯ ಹುದ್ದರಿ ಜ್ಯೋತಿ ಬಸು ಅವರಿಗೆ ಪ್ರಧಾನಿ ಹುದ್ದೆಯನ್ನು ನಿರಾಕರಿಸಿ ಸಿಪಿಐ(ಎಂ) ‘Historical Blunder’ ಎಸಗಿದ ಕಾರಣ, ಲಾಲೂಪ್ರಸಾದ್ ಯಾದವ್ ಕೇಸುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾರಣ, ಲಾಲೂ ಮತ್ತು ಶರದ್ ಯಾದವ್ ಅವರ ವಿರೋಧದಿಂದಾಗಿ ಮುಲಾಯಂ ಸಿಂಗ್ ಯಾದವ್ ಅವಕಾಶ ಕಳೆದುಕೊಂಡ ಕಾರಣ ಪ್ರಧಾನಿ ಹುದ್ದೆ ಅಪ್ಪಟ ಕನ್ನಡಿಗ- ಮಣ್ಣಿನ ಮಗ ಅಡ್ಡಪಂಚೆಧಾರಿ ಎಚ್.ಡಿ. ದೇವೇಗೌಡರಿಗೆ ಒಲಿಯಿತು.

ಅಂದಿನ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ ಕೇಸರಿಯ ಆಕ್ರೋಶವನ್ನು ಆಹ್ವಾನಿಸಿದ್ದ ದೇವೇಗೌಡರು ಕಡೆಗೆ ಕುರ್ಚಿಯನ್ನು ಖಾಲಿ ಮಾಡಬೇಕಾಯಿತು. ಮತ್ತೆ ಧೂಳಿನಿಂದ ಎದ್ದು ಬರುತ್ತೇನೆಂದು ಲೋಕಸಭೆಯಲ್ಲಿ ಐತಿಹಾಸಿಕ ಭಾಷಣ ಮಾಡಿ ರಾಜೀನಾಮೆ ನೀಡಿದ್ದರು ಗೌಡರು. ಧೂಳಿನಿಂದೆದ್ದು ಮತ್ತೊಮ್ಮೆ ಪ್ರಧಾನಿಯಾಗುವ ಅವರ ಬಯಕೆ ಕಡೆಗೂ ಈಡೇರಲಿಲ್ಲ. ಅವರ ಹನ್ನೊಂದು ತಿಂಗಳ ಕಾರ್ಯಕಾಲದಲ್ಲಿ ಕರ್ನಾಟಕ- ಕನ್ನಡಭಾಷೆ, ಸಂಸ್ಕೃತಿ, ಆಹಾರ ವ್ಯವಹಾರ ಕುರಿತು ದೆಹಲಿ ತಲೆಕೆಡಿಸಿಕೊಂಡದ್ದು ಉಂಟು. ಅವರ ಅಧಿಕಾರಾವಧಿ ಮೊಟಕಾಯಿತು. ಇಲ್ಲವಾದರೆ ಕರ್ನಾಟಕ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಬಹುದಿತ್ತು. ಚಾಣಕ್ಯಪುರಿಯ ಅಶೋಕ ಹೋಟೆಲಿನಲ್ಲಿ ಪ್ರಧಾನಿ ಗೌಡರು ಏರ್ಪಡಿಸಿದ್ದ ಔತಣಕೂಟವೊಂದರ ಸಂದರ್ಭ. ಪ್ರಧಾನಿ ಗೌಡರು ಉಣ್ಣುವ ರಾಗಿ ಮುದ್ದೆ ಹೇಗಿರುತ್ತದೆ, ಅದನ್ನು ತಯಾರು ಮಾಡುವುದು ಹೇಗೆ, ಸಾರಿನಲ್ಲಿ ಅದ್ದಿ ನುಂಗುವ ಬಗೆಯೆಂತು ಎಂಬ ಪ್ರಾತ್ಯಕ್ಷಿಕೆಯನ್ನು ಆ ಔತಣಕೂಟದಲ್ಲಿ ಏರ್ಪಾಡು ಮಾಡಲಾಗಿತ್ತು. ಆ ಹನ್ನೊಂದು ತಿಂಗಳು ಪ್ರಧಾನಮಂತ್ರಿಯ ಪ್ರತಿಷ್ಠಿತ ನಿವಾಸದ ಅಡುಗೆ ಮನೆಯಲ್ಲಿ ನಿತ್ಯ ರಾಗಿಮುದ್ದೆ ಬೇಯುತ್ತಿತ್ತು. ಪ್ರಧಾನಿಯವರ ಊಟದ ಮೇಜಿಗೆ ತಪ್ಪದೆ ಹಾಜರಾಗುತ್ತಿತ್ತು. ಈ ಹನ್ನೊಂದು ತಿಂಗಳ ವಿನಾ ಗೌಡರು ಸಂಸದರಾಗಿ ದೆಹಲಿಯಲ್ಲಿ ತಂಗುತ್ತಿದ್ದ ದಿನಗಳಲ್ಲಿ ಸಫ್ದರ್ ಜಂಗ್ ಲೇನ್‌ನ ಅವರ ನಿವಾಸದಲ್ಲಿ ರಾಗಿ ಮುದ್ದೆ ಚಾಚೂ ತಪ್ಪದೆ ತಯಾರಾಗುತ್ತಿತ್ತು. ಬಹುಕಾಲ ಲೋಕಸಭೆಯಲ್ಲಿ ಕಾಂಗ್ರೆಸ್, ತರುವಾಯ ಬಿಜೆಪಿಯಿಂದ ತುಮಕೂರು ಕ್ಷೇತ್ರವನ್ನು ಪ್ರತಿನಿಧಿಸಿದ ಬಸವರಾಜ್ ಅವರ ಸರ್ಕಾರಿ ನಿವಾಸದಲ್ಲಿ ರಾಗಿ ಮುದ್ದೆ ಸೊಪ್ಪಿನ ಸಾರಿನದೇ ದರ್ಬಾರು, ಮುಂಚಿತವಾಗಿಯೇ ಆರ್ಡರ್ ಮಾಡಿದರೆ ಕರ್ನಾಟಕ ಭವನದ ಅಡುಗೆ ಮನೆಯಲ್ಲಿ ರಾಗಿ ಮುದ್ದೆ ಈಗಲೂ ಲಭ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Devegowda 6
ಪ್ರಧಾನ ಮಂತ್ರಿಯಾಗಿ ಎಚ್.ಡಿ. ದೇವೇಗೌಡರು ಜೂನ್ 1, 1996 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರಿಂದ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ

ಕರ್ನಾಟಕದವರಿಗೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಜನರಿಗೆ ತಮ್ಮ ತಾಲ್ಲೂಕು, ತಮ್ಮ ಜಿಲ್ಲೆಯಲ್ಲೇ ಉದ್ಯೋಗ ಬೇಕು. ಕಾವೇರಿ ನೀರು, ಕಾಫಿಯೇ ಇರಬೇಕು. ಊಟ ತಿಂಡಿಗಳಲ್ಲಿ ಕೊಂಚವೂ ವ್ಯತ್ಯಾಸ ಆಗುವಂತಿಲ್ಲ. ಕರ್ನಾಟಕದ್ದೇ ಮತ್ತೊಂದು ಜಿಲ್ಲೆಗೆ ಹೋಗಬೇಕೆಂದರೆ ವಿಲವಿಲನೆ ಒದ್ದಾಡಿ ಹೋಗುತ್ತಾರೆ. ಇನ್ನು ರಾಜ್ಯ ಬಿಟ್ಟು ಹೋಗುವುದು, ಎರಡು ಸಾವಿರ ಕಿ.ಮೀ.ಗಳಷ್ಟು ದೂರದ ದೆಹಲಿಗೆ ಬಂದು ಉದ್ಯೋಗ ಮಾಡುವುದು ಆಗ ಹೋಗದ ಮಾತು. ದೆಹಲಿ ಪೊಲೀಸ್ ಸೇವೆಯಲ್ಲಿ ಅನೇಕ ಕನ್ನಡಿಗರು ಇರುವುದು ವಿಶೇಷ ಸಂಗತಿ. ಇವರಲ್ಲಿ ಬಹುತೇಕರು ಕೋಲಾರ ಜಿಲ್ಲೆಯವರು. ಒಂದು ಕಾಲದಲ್ಲಿ ಬ್ಯಾಂಕುಗಳ ನೌಕರರು ಕಡ್ಡಾಯವಾಗಿ ಉತ್ತರ ಭಾರತದ ಪೋಸ್ಟಿಂಗ್‌ಗಳಿಗೆ ಬರಲೇಬೇಕಿದ್ದ ಕಾರಣ ದೆಹಲಿ ಮುಖ ನೋಡಿದರು.

ಇದನ್ನೂ ಓದಿರಿ: ‘ರೀಲ್ಸ್‌’ ಸಚಿವ ಅಶ್ವಿನಿ ವೈಷ್ಣವ್ ಕಾಲದಲ್ಲಿ ಪ್ರಪಾತಕ್ಕೆ ಜಾರಿದ ರೇಲ್ವೆ ಇಲಾಖೆ!

ಸೀಮೋಲ್ಲಂಘನ ಮಾಡಲು ಒಲ್ಲದ ಈ ಮನಸ್ಥಿತಿಗೆ ಕರ್ನಾಟಕದ ಪತ್ರಕರ್ತರೇನೂ ಹೊರತಲ್ಲ. ಕೇರಳದಿಂದ ದೆಹಲಿಗೆ ಬಂದು ಕೇವಲ ಮಲೆಯಾಳಂ ಮಾತ್ರವಲ್ಲದೆ ಇಂಗ್ಲಿಷ್ ಪತ್ರಿಕೆಗಳಲ್ಲೂ ಕೆಲಸ ಮಾಡುವ ಮಲೆಯಾಳಿ ಮತ್ತು ತಮಿಳು ಪತ್ರಕರ್ತರ ಸಂಖ್ಯೆಗೆ ಹೋಲಿಸಿದರೆ, ಕನ್ನಡದವರು ಅಲ್ಪಸಂಖ್ಯಾತರು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯೊಂದೇ ಈ ಮಾತಿಗೆ ಅಪವಾದ. ಹತ್ತು ಮಂದಿಯ ದೊಡ್ಡ ದೆಹಲಿ ಬ್ಯೂರೋ ಹೊಂದಿರುವ ಕರ್ನಾಟಕದ ಏಕೈಕ ಪತ್ರಿಕೆ. ಡೆಕ್ಕನ್ ಹೆರಾಲ್ಡ್‌ನ ಸೋದರ ಪತ್ರಿಕೆ ಪ್ರಜಾವಾಣಿ, ಕನ್ನಡಪ್ರಭ, ವಿಜಯಕರ್ನಾಟಕ, ಟಿವಿ-9 ಕನ್ನಡ, ಸುವರ್ಣ ಚಾನೆಲ್‌ಗಳು ತಲಾ ಒಬ್ಬ ದೆಹಲಿ ಬಾತ್ಮೀದಾರರನ್ನು ಹೊಂದಿವೆ.

ಕೆರೆ ಕುಂಟೆ ಬಾವಿ ನದಿ ಬಿಟ್ಟರೆ ಸಮುದ್ರದಲ್ಲಿ ಈಜಿದವರಲ್ಲ ಕನ್ನಡಿಗರು. ಸಂಸತ್ ಸದಸ್ಯರಾದವರಿಗೆ ಅಧ್ಯಯನದ ಅಭ್ಯಾಸ ಇರಬೇಕು. ಭಾಷೆಯನ್ನು ರೂಢಿಸಿಕೊಂಡಿರಬೇಕು. ಪಾರ್ಲಿಮೆಂಟಿನಲ್ಲಿ 10 ನಿಮಿಷ ಮಾತಾಡಬೇಕಿದ್ದರೆ ಎರಡು ತಾಸಿಗೆ ತಯಾರಿ ಮಾಡಿಕೊಂಡಿರಬೇಕಾಗುತ್ತದೆ. ಕೇವಲ ಎಸ್.ಎಸ್.ಎಲ್.ಸಿ ಓದಿದ್ದ ಜಾಫರ್ ಷರೀಫ್ ಹೇಗೆಲ್ಲ ಬೆಳೆದರು, ಕರ್ನಾಟಕಕ್ಕಾಗಿ ಕೆಲಸ ಮಾಡಿದರು ಎಂಬುದು ಮಾದರಿಯಾಗಬೇಕಿದೆ. ಮಹಾರಾಜರ ಆಡಳಿತವಿದ್ದ ಕಾರಣ ಮೈಸೂರು ಪ್ರಾಂತ ದೆಹಲಿಯತ್ತ ನೋಡಲೇ ಇಲ್ಲ. ನಮ್ಮನ್ನು ನಾವು ಸಮರ್ಥಿಸಿಕೊಳ್ಳುವುದನ್ನು ಕಲಿಯಲಿಲ್ಲ. ಸುಲಭಕ್ಕೆ ತಳ್ಳಿ ಹಾಕಬಹುದಾದ ಜನ ಇವರು ಎಂದು ದೆಹಲಿ ಭಾವಿಸಿತು. ಚೌಕಾಶಿಯ ಶಕ್ತಿಯನ್ನು ಬೆಳೆಸಿಕೊಳ್ಳಲಿಲ್ಲ ಎಂಬುದು ದೀರ್ಘಕಾಲ ರಾಜ್ಯಸಭಾ ಸದಸ್ಯರಾಗಿದ್ದ ಎಚ್.ಹನುಮಂತಪ್ಪ ಅನಿಸಿಕೆ.

ಆದರೆ ರಾಷ್ಟ್ರೀಯ ಪಕ್ಷಗಳು ಕರ್ನಾಟಕವನ್ನು ಎ.ಟಿ.ಎಂಗಳ ರೀತಿ ಬಳಸಿರೋದು ನಿಜ. ಬಿಜೆಪಿಯ ಕಾಲದಲ್ಲಿ ಬಳ್ಳಾರಿ ಗಣಿಧಣಿಗಳು ಆರಂಭಿಸಿದ ಈ ಚಾಳಿ ವ್ಯಾಪಕವಾಗಿ ಹರಡಿತು. ಮೂರು ಸಾವಿರ ಕೋಟಿ ರೂಪಾಯಿ ಕೊಟ್ಟು ತಮ್ಮ ‘ಅಮ್ಮ’ನನ್ನು ಪ್ರಧಾನಿ ಮಾಡುವುದಾಗಿ ಅಂತಹ ಧಣಿಯೊಬ್ಬ ಹೇಳಿಕೊಂಡು ತಿರುಗುತ್ತಿದ್ದ. ಕರ್ನಾಟಕದಲ್ಲಿ ಅಪಾರ ಹಣವಿದೆ ಎಂಬುದು ದೆಹಲಿಗೆ ಮನದಟ್ಟಾಯಿತು. ಬಿಜೆಪಿ- ಕಾಂಗ್ರೆಸ್ ಎಂಬ ಪಕ್ಷಭೇದವಿಲ್ಲದೆ ಕರ್ನಾಟಕವನ್ನು ಎ.ಟಿ.ಎಂ.ಮಾಡಿಕೊಂಡು ಸುಲಿಯಲಾಯಿತು. 1999ರಲ್ಲಿ ಶುರುವಾಗಿ 2008ರ ನಂತರ ಕರ್ನಾಟಕ ರಾಜ್ಯ ಭ್ರಷ್ಟಾಚಾರದ ಬುಗ್ಗೆಯಾಗಿ ಹೋಯಿತು. ಕರ್ನಾಟಕದ ಉಸ್ತುವಾರಿ ಎಂದರೆ ರಾಷ್ಟ್ರೀಯ ಪಕ್ಷಗಳ ಪದಾಧಿಕಾರಿಗಳು ಮುಗಿಬಿದ್ದು ಬರುತ್ತಾರೆ. ಪಾರ್ಟಿ ವಿತ್ ಡಿಫರೆನ್ಸ್ ಅಂತ ಹೇಳಿಕೊಂಡ ಪಕ್ಷ ಅತಿ ಭ್ರಷ್ಟವಾಯಿತು ಎನ್ನುತ್ತಾರೆ ದೆಹಲಿಯನ್ನು ಸನಿಹದಿಂದ ಬಲ್ಲ ಹಿರಿಯ ರಾಜಕಾರಣಿ. OutLook ಎಂಬ ಇಂಗ್ಲಿಷ್ ನಿಯತಕಾಲಿಕ ಕರ್ನಾಟಕವನ್ನು ದೇಶದ ಅತ್ಯಂತ ಭ್ರಷ್ಟ ರಾಜ್ಯ ಎಂಬ ಕವರ್ ಸ್ಟೋರಿ ಪ್ರಕಟಿಸಿದ್ದುಂಟು.

delhi 6

ದೆಹಲಿ ತನ್ನ ಸೀಮೆಗೆ ಬಂದು ಇಳಿಯುವವರನ್ನು ವಿಶೇಷವಾಗಿ ಹಿಂದಿ ಪರಿಸರಕ್ಕೆ ಅಪರಿಚಿತರೂ ಆದವರನ್ನು ಬೆಚ್ಚಿಸಿ ಬೆರಗುಗೊಳಿಸಿ ಹಣಿಯುತ್ತದೆ. ದೇಶದ ರಾಜಧಾನಿ ಎಂಬ ಪಟ್ಟ! ಪ್ರಧಾನಿಯ ಕಚೇರಿ-ನಿವಾಸ, ಕೇಂದ್ರ ಮಂತ್ರಿಗಳು, ಅವರ ಕಚೇರಿಗಳು- ಎಕರೆಗಟ್ಟಲೆ ನಿವೇಶನಗಳಲ್ಲಿನ ಭವ್ಯ ನಿವಾಸಗಳು, ಲೋಕಸಭೆ-ರಾಜ್ಯಸಭೆ, ಎಲ್ಲ ಹೈಕೋರ್ಟುಗಳ ಜುಟ್ಟು ಹಿಡಿದ, ದೇಶದ ಹೇಮಾಹೇಮಿ ವಕೀಲರ ಕೇಂದ್ರಸ್ಥಾನ, ಮುಖ್ಯಮಂತ್ರಿಗಳನ್ನು, ಅತ್ಯುನ್ನತ ಅಧಿಕಾರಿಗಳನ್ನು ಕೂಡ ತನ್ನ ಮುಂದೆ ಕೈಕಟ್ಟಿ ನಿಲ್ಲಿಸಿ ಬೆವರಿಳಿಸುವ ಸುಪ್ರೀಮ್ ಕೋರ್ಟು, ಪ್ರಧಾನಮಂತ್ರಿ, ಕೇಂದ್ರಮಂತ್ರಿಗಳ ಬಲಗೈಗಳಾಗಿ ಕೆಲಸ ಮಾಡುವ, ಮಂತ್ರಾಲಯಗಳ ಕಾರ್ಯದರ್ಶಿಗಳಾಗಿ ಲಗಾಮು ಹಿಡಿದ ಐ.ಎ.ಎಸ್., ಐ.ಪಿ.ಎಸ್.ಗಳ ಆತ್ಯಂತಿಕ ಕೇಂದ್ರ, ವಿದೇಶಾಂಗ ಅಧಿಕಾರಿಗಳ (ಐ.ಎಫ್.ಎಸ್) ಹೆಜ್ಜೇನುಗೂಡು. ಸಿಬಿಐ, ಇ.ಡಿ., ಎನ್.ಐ.ಎ., RAW, IB, ಎಸ್.ಪಿ.ಜಿ. ನರಮಂಡಲ ಕೇಂದ್ರಗಳು, ಬ್ಲ್ಯಾಕ್‌ ಕ್ಯಾಟ್ ಕಮಾಂಡೋಸ್, ಇಂಡಿಯಾ ಗೇಟ್, ರಾಷ್ಟ್ರಪತಿ ಭವನ, ಸೌತ್ ಬ್ಲಾಕ್, ನಾರ್ತ್ ಬ್ಲಾಕ್, ರಾಜಪಥ, ಜನಪಥ, ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರ ಕಚೇರಿಗಳು-ನಿವಾಸಗಳು, `ರಾಷ್ಟ್ರೀಯ’ ಪಕ್ಷಗಳ ಕೇಂದ್ರ ಕಚೇರಿಗಳು, ಹತ್ತಾರು ರಾಜ್ಯಗಳ ಮುಖ್ಯಮಂತ್ರಿಗಳು ಯಾರೆಂದು ನಿರ್ಧರಿಸುವ ಅವುಗಳ ಮುಖ್ಯಸ್ಥರು ಮತ್ತು ಪ್ರಧಾನಕಾರ್ಯದರ್ಶಿಗಳ ನಿವಾಸಗಳು, ಅರಸೊತ್ತಿಗೆಗಳು, ಬಾದಶಾಹಗಳು, ಚಕ್ರವರ್ತಿಗಳು, ಸರ್ಕಾರಗಳನ್ನು ಉಳಿಸುವ, ಉರುಳಿಸುವ ಸಾವಿರಾರು ಪಿತೂರಿಗಳು, ಹತ್ಯೆಯ ಸಂಚುಗಳು, ನೂರಾರು ವರ್ಷಗಳಿಂದ ಹುಟ್ಟಿ ಉಸಿರಾಡಿ ನೆಲಕಚ್ಚಿದ ನೀರು, ನೆಲ, ಗಾಳಿ… ನೂರಕ್ಕೂ ಹೆಚ್ಚು ದೇಶಗಳ ರಾಯಭಾರ ಕಚೇರಿಗಳು, ಕಿಕ್ಕಿರಿದ ಪಂಚತಾರಾ ಹೋಟೆಲುಗಳು, ಐದಾರು ವಿಶಾಲ ರಸ್ತೆಗಳು ಸಂಗಮಿಸುವ ಭಾರೀ `ಗೋಲ್ ಚಕ್ಕರ್ʼಗಳು, ವಾಹನ ಸಂಚಾರವನ್ನು ನಿಯಂತ್ರಿಸುವ `ಲಾಲ್ ಬತ್ತಿ’ಗಳು, ಅಂತಾರಾಜ್ಯ ನದೀ ನೀರು ಹಂಚಿಕೆಯ ವಿವಾದಗಳ ವರ್ಷಗಟ್ಟಲೆ ವಿಚಾರಣೆ ನಡೆಸಿ ವರದಿ ನೀಡುವ ಹತ್ತಾರು ನ್ಯಾಯಾಧಿಕರಣಗಳು, ದೇಶದ ಪ್ರಮುಖ ಪತ್ರಿಕೆಗಳು ತಮ್ಮ ದೆಹಲಿ ಕಚೇರಿಗಳನ್ನು ಹೊಂದಿರುವ ಐ.ಎನ್.ಎಸ್. ಕಟ್ಟಡ, ಆಗಸ್ಟ್ 15ರಂದು ಪ್ರಧಾನಿಗಳು ದೇಶವನ್ನು ಉದ್ದೇಶಿಸಿ ಮಾತಾಡುತ್ತ ಬಂದಿರುವ ಐತಿಹಾಸಿಕ ಕೆಂಪುಕೋಟೆ, ಸೇನಾಬಲ ಪ್ರದರ್ಶನದ ಜನವರಿ 26ರ ಗಣರಾಜ್ಯೋತ್ಸವ, ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಅಧಿಕಾರಿಗಳು ಬಂದರೆ ತಂಗುವ ರಾಜ್ಯ ಭವನಗಳು, ವೈಭವೋಪೇತ ದಲ್ಲಾಳಿಗಳ ಕೇಂದ್ರಕಾರ್ಯಸ್ಥಾನ ಅಥವ ಕುಟಿಲ ಕಾರಸ್ಥಾನ ದೆಹಲಿ.

ಇದನ್ನೂ ಓದಿರಿ: ಕೋಳಿ ಫಾರಂನಿಂದ ಕೊಯಮತ್ತೂರು, ನಂದಿ ಬೆಟ್ಟದವರೆಗೆ ‘ಜಗ್ಗಿ’ ಬೆಳೆದಿದ್ದು ಹೀಗೆ..

ಶತಮಾನಗಳ ಕಾಲ ಬದಲಾಗುತ್ತಲೇ ಬಂದ ಆಳುವವರು ದೆಹಲಿಯನ್ನು ನಿರ್ಮಿಸುತ್ತ ಮರುನಿರ್ಮಿಸುತ್ತ ಬಂದಿದ್ದಾರೆ. ಹಳತರಿಂದ ಪಡೆದು ಅದಕ್ಕೆ ಹೊಸ ಅರ್ಥಗಳನ್ನು ನೀಡಲು ಮುಂದಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ದೆಹಲಿ ಕೇವಲ ಭೌತಿಕ ಸ್ಥಳಕ್ಕಿಂತ ಹೆಚ್ಚಿನದನ್ನು ಧ್ವನಿಸಿತು. ಅದೊಂದು ಪರಿಕಲ್ಪನೆಯಾಯಿತು. ರಾಜಕೀಯ ಅಧಿಕಾರಕ್ಕೆ ಸಂಬಂಧಿಸಿದ ನಾಮಧೇಯವೇ ಆಯಿತು ಎನ್ನುತ್ತಾರೆ ಇತಿಹಾಸಕಾರರು.

ಮೌರ್ಯ, ಪಲ್ಲವ, ಗುಪ್ತರು ಪ್ರಾಚೀನ ಕಾಲದಲ್ಲಿ, ರಜಪೂತರು ಮಧ್ಯಯುಗದಲ್ಲಿ 12ನೆಯ ಶತಮಾನದಿಂದ ಹದಿನೈದನೆಯ ಶತಮಾನದ ತನಕ ಐದು ಸಲ್ತನತ್ ರಾಜವಂಶಗಳು, ಹದಿನಾರನೆಯ ಶತಮಾನದಿಂದ ಮೊಘಲರು, 18ನೆಯ ಶತಮಾನದಿಂದ 19ನೆಯ ಶತಮಾನದ ಅರ್ಧಭಾಗದ ತನಕ ಬ್ರಿಟಿಷರು ಕೊಲ್ಕತ್ತ ಮತ್ತು ದೆಹಲಿಯಿಂದ ಆಳಿದರು.

ಹೀಗೆ ದೆಹಲಿಯನ್ನು ಆವರಿಸಿ ಸುತ್ತಿಕೊಂಡಿದೆ ಅರಸೊತ್ತಿಗೆಯ ಅಧಿಕಾರ ಪ್ರಭಾವಳಿ. ಆನಂತರ ಸ್ವತಂತ್ರ ಭಾರತದಲ್ಲಿ ಸುರುಳಿ ಬಿಚ್ಚಿಕೊಂಡಿತು ಒಕ್ಕೂಟ ಸರ್ಕಾರದ ಅಧಿಕಾರ. ದೇಶದ ನರನಾಡಿಗಳನ್ನು ನಿಯಂತ್ರಿಸುವ ಮೆದುಳಾಗಿ ಮೈತಳೆಯಿತು. ಕಾಲಕಾಲಕ್ಕೆ ಆಳಿದವರು ಮತ್ತು ಆಳುತ್ತಿರುವವರು ಆಗಾಗ ಸರ್ವಾಧಿಕಾರದ ಅಟ್ಟಹಾಸವನ್ನೂ ಮೆರೆದಿದ್ದಾರೆ. ಆತ್ಮರತಿಯಲ್ಲಿ ಮುಳುಗಿದ್ದಾರೆ. ಅಳಿದಿದ್ದಾರೆ ಮತ್ತು ಅಳಿಯುತ್ತಾರೆ. ಮತ್ತೆ ಮತ್ತೆ ಜನುಮ ತಳೆಯುವುದಿಲ್ಲ ಎಂಬ ಖಾತ್ರಿ ಏನೂ ಇಲ್ಲ. ಆದರೆ ಜನ ತಡವಾದರೂ ಸರಿ ಪಾಠ ಕಲಿಸುತ್ತಾರೆ.

ಪರಕೀಯರು ಮತ್ತು ಸ್ವಕೀಯರ ಆಕ್ರಮಣಗಳು ದೆಹಲಿ ಮತ್ತು ಸುತ್ತಮುತ್ತಲ ಸೀಮೆಯ ಜನರನ್ನು ಬದುಕುಗಳನ್ನು ಒರಟು ಮಾಡಿವೆ. ನೀನು ಎಂದರೆ ನಿಮ್ಮಪ್ಪ ಎನ್ನುವಂತೆ ಜವಾಬು ನೀಡುವುದನ್ನು ಕಲಿಸಿವೆ. ವಿನಾಕಾರಣ ಆಕ್ರಮಣದ ಸ್ವಭಾವವನ್ನು ಅವರ ಉಸಿರು ನೆತ್ತರುಗಳಲ್ಲಿ ಬೆರೆಸಿಬಿಟ್ಟಿದೆ. ಕನ್ನಡಿಗರು ಸಜ್ಜನರು ಮತ್ತು ಶಾಂತಿಪ್ರಿಯರು ಎಂದು ತಮ್ಮನ್ನು ತಾವು ಅಂದುಕೊಂಡಿದ್ದಾರೆ. ಆದರೆ ದೆಹಲಿಯ ಸಾಧಾರಣ ಶತಒರಟು ನೋಟದಲ್ಲಿ ಕನ್ನಡಿಗರು ಮೆತ್ತನೆಯ ಸ್ವಭಾವದರು, ತಳ್ಳಿ ನೂಕಿ ಮುಂದೆ ಹೋಗಬಹುದಾದ ಜನ. ಅವರ ನೋಟದಲ್ಲಿ ದಕ್ಷಿಣ ಭಾರತದ ಎಲ್ಲ ಜನರೂ ಎಲ್ಲ ರಾಜ್ಯಗಳೂ ಮದರಾಸಿಗಳು. ಈಗಲೂ ಬಹಳಷ್ಟು ಉತ್ತರ ಭಾರತೀಯರಿಗೆ ಕನ್ನಡ ತೆಲುಗು ತಮಿಳು ಮಲೆಯಾಳಂ ಪ್ರತ್ಯೇಕ ಅಸ್ತಿತ್ವ ಹೊಂದಿದ ಭಾಷೆಗಳೆಂಬ ಸಂಗತಿ ಗೊತ್ತಿಲ್ಲ. ಕಪ್ಪು ಮತ್ತು ಕಂದು ಮೈಬಣ್ಣದ ಮಂದಿ. `ಗಟ್ಟಿ’ ಗೋಧಿಯ ಬದಲಿಗೆ `ಟೊಳ್ಳು’ ಅನ್ನ ತಿನ್ನುವವರು. `ಮದರಾಸಿ ಭಾಷೆ’ ಡಬ್ಬವೊಂದರಲ್ಲಿ ಕಲ್ಲು ಹರಳುಗಳನ್ನು ಹಾಕಿ ಅಲ್ಲಾಡಿಸಿದಂತೆ! ದೆಹಲಿಯ ಮಂದಿಗೆ ತಾವು ಆಳುವವರು ಉಳಿದವರು, ಅದರಲ್ಲೂ ದಕ್ಷಿಣ ಭಾರತೀಯರು ಆಳಿಸಿಕೊಳ್ಳುವವರು, ಲುಂಗೀವಾಲಾಗಳು, ಹಿಂದಿಯನ್ನು ರಾಜಭಾಷೆ ಎಂದು ಒಕ್ಕೂಟ ಸರ್ಕಾರ ಅಧಿಕೃತವಾಗಿ ಕರೆದಿದೆ. ಒಂದು ಭಾಷೆ ರಾಜಭಾಷೆಯಾದರೆ ಉಳಿದ ಭಾಷೆಗಳು ಏನೆಂದು ಅರ್ಥ? ಪ್ರಜೆಗಳ ಭಾಷೆಗಳು ಎಂದಲ್ಲವೇ?

ಹಿಂದೀ ಹೇರಿಕೆಯನ್ನು ಉಗ್ರವಾಗಿ ಪ್ರತಿಭಟಿಸಿದ, ಆರ್ಯರ ಪಾರಮ್ಯಕ್ಕೆ ಸಶಕ್ತ ಸವಾಲಾಗಿ ದ್ರಾವಿಡ ಆಂದೋಲನವನ್ನು ಕಟ್ಟಿ, ಅಚ್ಚ ಪ್ರಾದೇಶಿಕ ಪಕ್ಷಗಳನ್ನು ಬೆಳೆಸಿ, ಸಮ್ಮಿಶ್ರ ಸರ್ಕಾರಗಳ ಯುಗದಲ್ಲಿ ಕೇಂದ್ರ ಸರ್ಕಾರವನ್ನು ತಮ್ಮಿಷ್ಟಕ್ಕೆ ಮತ್ತು ರಾಜ್ಯದ ಹಿತಾಸಕ್ತಿಗಳಿಗೆ ಬಗ್ಗಿಸಿಕೊಂಡ ತಮಿಳುನಾಡು ದೆಹಲಿಯ ಅಧಿಕಾರದ ಮದವನ್ನು ಮಣಿಸಿರುವುದುಂಟು. ಉನ್ಮತ್ತ ಕಣ್ಣುಗಳನ್ನು ತೆರೆದಿರುವುದು ಉಂಟು. ಹೀಗಾಗಿಯೇ ತಮಿಳು ಅಸ್ಮಿತೆಯೇ ದೆಹಲಿಯನ್ನು ಅಲ್ಲಾಡಿಸಿ ಗಾಢವಾಗಿ ತಟ್ಟಿರುವುದು ಹೌದು. ಉನ್ನತ ನೌಕರಶಾಹಿಯಲ್ಲೂ ತಮಿಳು ಅಧಿಕಾರಿಗಳು ಬೇರು ಬಿಟ್ಟಿರುವ ಪರಂಪರೆ ಬ್ರಿಟಿಷರ ಕಾಲದಿಂದ ಈವರೆಗೆ ಜೀವಂತ. ಅದನ್ನು ಬಿಟ್ಟರೆ ಪುಟ್ಟ ರಾಜ್ಯ ಕೇರಳದ ಮಲೆಯಾಳಿಗಳದು ದೆಹಲಿಯ ಮೇಲೆ ಅಚ್ಚಳಿಯದ ಪ್ರಭಾವ. ನವದೆಹಲಿಯ ನೌಕರಾಶಾಹಿಯಲ್ಲಿ ತಮಿಳುನಾಡು ಮತ್ತು ಕೇರಳ ಮೂಲದ ಐ.ಎ.ಎಸ್., ಐ.ಪಿ.ಎಸ್. ನವರು ತಮ್ಮ ತಾಯಿ ರಾಜ್ಯಗಳಿಗಾಗಿ ಸದ್ದಿಲ್ಲದೆ ಕೆಲಸ ಮಾಡುತ್ತಲೇ ಬಂದಿದ್ದಾರೆ. ಕರ್ನಾಟಕದ ಅಂತಹ ಅಧಿಕಾರಿಗಳನ್ನು ಕೈ ಬೆರಳಲ್ಲಿ ಎಣಿಸಬಹುದು. ಕರ್ನಾಟಕವು ತನ್ನನ್ನು ಅಭಿವೃದ್ಧಿಯ ಹಸಿವು ಹೊಂದಿದ ಮತ್ತು ದೂರದರ್ಶಿತ್ವ ಉಳ್ಳ ರಾಜ್ಯವೆಂದು ದೆಹಲಿಯ ಕಣ್ಣು ಕಂಡೇ ಇಲ್ಲ. ನೆರೆಹೊರೆಯ ಅವಿಭಜಿತ ಆಂಧ್ರ, ತಮಿಳುನಾಡು ಹಾಗೂ ಕೇರಳ ದೆಹಲಿಯು ತಮ್ಮನ್ನು ಗಂಭೀರವಾಗಿ ಪರಿಗಣಿಸುವಂತೆ ನಡೆದುಕೊಂಡಿವೆ.

ಇದನ್ನೂ ಓದಿರಿ: ‘ದಿ ಇಂಡಿಯಾ ಹೇಟ್ ಲ್ಯಾಬ್’ ಬಿಚ್ಚಿಟ್ಟಿರುವ ದ್ವೇಷಭಾಷಣಗಳ ಆಘಾತಕಾರಿ ಸತ್ಯಗಳು!

ಸಮ್ಮಿಶ್ರ ಸರ್ಕಾರಗಳ ಯುಗದಲ್ಲಿ ತಮಿಳುನಾಡಿನ ಡಿ.ಎಂ.ಕೆ.ಯ ಕರುಣಾನಿಧಿ, ಅಣ್ಣಾ ಡಿ.ಎಂ.ಕೆ.ಯ ಜಯಲಲಿತಾ, ಅವಿಭಜಿತ ಆಂಧ್ರದ ಚಂದ್ರಬಾಬು ನಾಯ್ಡು ತಮ್ಮ ರಾಜ್ಯಗಳಿಗೆ ಬೇಕಾದುದನ್ನು ಪಡೆದಿದ್ದಾರೆ. ಇದೀಗ ಮೋದಿ ಸರ್ಕಾರವನ್ನು ಬೆಂಬಲಿಸಿರುವ ನಾಯ್ಡು ಮತ್ತು ಬಿಹಾರದ ನಿತೀಶ್ ಕುಮಾರ್ ತಮ್ಮ ಅಗತ್ಯಗಳನ್ನೂ ಪೂರೈಸಿಕೊಳ್ಳುತ್ತಿದ್ದಾರೆ.

vajapeyee
ವಾಜಪೇಯಿ ಅವರೊಂದಿಗೆ ಅನಂತಕುಮಾರ್

ವಾಜಪೇಯಿ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಅನಂತಕುಮಾರ್ ಮುಖ್ಯವಾಗಿ ಕಾವೇರಿ-ಕೃಷ್ಣಾ ಜಲವಿವಾದಗಳಲ್ಲಿ ಕರ್ನಾಟಕದ ದನಿಯಾಗಿ ತೆರೆಮರೆಯಲ್ಲೇ ಸಕ್ರಿಯವಾಗಿ ಕೆಲಸ ಮಾಡಿದರು. ಜಲವಿವಾದಗಳಲ್ಲಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಜೊತೆ ನೇರವಾಗಿ ಮಾತನಾಡಿ, ಕೇಂದ್ರ ಸರ್ಕಾರ ತಮಿಳುನಾಡಿಗಿಂತ ಹೆಚ್ಚಾಗಿ ರಾಜ್ಯದ ಹಿತ ಕಾಯುವ ನಿಲುವುಗಳನ್ನು ತೆಗೆದುಕೊಳ್ಳುವಂತೆ ಮಾಡಿದರು. ಅಡ್ವಾಣಿ ಮತ್ತು ವಾಜಪೇಯಿ ಇಬ್ಬರು ಅತಿರಥರ ಸಾಮೀಪ್ಯ ಹೊಂದಿದ್ದ ಅನಂತಕುಮಾರ್ ತಮಿಳುನಾಡು- ಕರ್ನಾಟಕ- ಕೇಂದ್ರ ಜಲಸಂಪನ್ಮೂಲ ಸಚಿವರು ಅಧಿಕಾರಿಗಳ ಸಭೆಗಳು ನಡೆಯುವ ಮುನ್ನವೇ ರಾಜ್ಯ ಹಿತಕ್ಕೆ ಧಕ್ಕೆಯಾಗದಿರುವ ಭೂಮಿಕೆಯನ್ನು ನೀರಾವರಿ ತಜ್ಞರಾದ ಎಚ್.ಎನ್. ನಂಜೇಗೌಡ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೊಂದಿಗೆ ಸಮಾಲೋಚಿಸಿ ಅವರ ಸಲಹೆ ಪಡೆದು ಸಿದ್ಧಪಡಿಸುತ್ತಿದ್ದರು. ವಾಜಪೇಯಿ ಸಂಪುಟದ ಹಿರಿಯ ಸಚಿವರೆಲ್ಲರ ಸಲುಗೆ ಸ್ನೇಹಗಳೂ ಇದ್ದ ಕಾರಣ ಅನಂತಕುಮಾರ್ ಮಾತು ನಡೆಯುತ್ತಿತ್ತು.

ದಖ್ಖನಿ ಉರ್ದು ಬಳಕೆಯಲ್ಲಿರುವ ಕಲಬುರಗಿಯಿಂದ ಆರಿಸಿ ಬಂದಿದ್ದ ಬಿಜೆಪಿಯ ಹಿರಿಯ ತಲೆ ಬಸವರಾಜ ಪಾಟೀಲ ಸೇಡಂ ಸಂಘ ಪರಿವಾರಕ್ಕೆ ಸೇರಿದ್ದವರು. ಹೀಗಾಗಿ ನಿರರ್ಗಳವಾಗಿ ಹಿಂದಿ ಮಾತಾಡಬಲ್ಲವರಾಗಿದ್ದರು. ಲೋಕಸಭೆ ರಾಜ್ಯಸಭೆಯಲ್ಲಿ ಅವರ ಭಾಷಣಗಳು ಸ್ಪಷ್ಟ ಹಿಂದಿಯಲ್ಲಿ ಆಗುತ್ತಿದ್ದವು. ಚಾಮರಾಜನಗರದಿಂದ ಆರಿಸಿ ಬರುತ್ತಿದ್ದ ಆರ್. ಧ್ರುವನಾರಾಯಣ ಅವರು ತಮ್ಮ ಕ್ಷೇತ್ರದ ಗರಿಷ್ಠ ಸಮಸ್ಯೆಗಳನ್ನು ಸರ್ಕಾರಗಳ ಗಮನಕ್ಕೆ ತರಲು ಸದನದ ಹಲವು ನಿಯಮಗಳಡಿ ಲಭ್ಯವಿದ್ದ ಅವಕಾಶಗಳನ್ನು ಧಾರಾಳ ಬಳಸಿಕೊಂಡರು.

ಇದನ್ನೂ ಓದಿರಿ: ಗ್ಯಾನೇಶ್ ಕುಮಾರ್ ಗುಪ್ತ ನೇಮಕ; ಪ್ರಪಾತದ ಅಂಚಿನಲ್ಲಿ ಚುನಾವಣಾ ಆಯೋಗ?

ರಾಜ್ಯಸಭೆಯಲ್ಲಿ ಒಂದೊಮ್ಮೆ ಜಾತ್ಯತೀತ ಜನತಾದಳದ ಏಕೈಕ ಸದಸ್ಯರಾಗಿ ಹಾಸನದ ವಕೀಲ ಜವರೇಗೌಡ ಅವರು ಸದನದಲ್ಲಿ ತಮಗೆ ಬಹುತೇಕ ಪ್ರತಿನಿತ್ಯ ದೊರೆಯುತ್ತಿದ್ದ ಸುವರ್ಣಾವಕಾಶ ಕೈಜಾರದಂತೆ ಬಳಸಿಕೊಂಡರು. ಇಂಗ್ಲಿಷಿನಲ್ಲಿ ದನಿ ಎತ್ತರಿಸಿ ಮಾತಾಡಬಲ್ಲವರಾಗಿದ್ದರು. ಡಿ.ಎಂ.ಕೆ. ಮತ್ತು ಅಣ್ಣಾ ಡಿ.ಎಂ.ಕೆ ಸದಸ್ಯರ ದಾಳಿಗೆ ಬಗ್ಗುತ್ತಿರಲಿಲ್ಲ. ಉತ್ತರ ಭಾರತೀಯ ಸಂಸದರ ನಡುವೆಯೂ ಚಿರಪರಿಚಿತರಾಗಿದ್ದರು.

ಇದೇ ರೀತಿ ಪಕ್ಷದ ಜವಾಬ್ದಾರಿ ಹೊತ್ತು ಅಥವಾ ಉದ್ಯೋಗ ಅರಸಿ ದೆಹಲಿಗೆ ಬಂದು ದೀರ್ಘಕಾಲ ಅಲ್ಲಿಯ ಒಳ-ಹೊರಗನ್ನು ಅರಿತ ಕೆಲವರನ್ನು ಮಾತಾಡಿಸುವ ಮೂಲಕ ಕೆಲವು ಸಂಗತಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ದೆಹಲಿಯ ಕಣ್ಣಲ್ಲಿ ಕರ್ನಾಟಕ ಹೇಗಿರುತ್ತದೆ ಎಂಬುದನ್ನು, ಕರ್ನಾಟಕದವರ ಕಣ್ಣಲ್ಲಿ ದೆಹಲಿ ಹೇಗಿತ್ತು ಎಂಬ ಚಿತ್ರಣವನ್ನು ಬಿಡಿಸುವ ಮೂಲಕ ತಿಳಿಯೋಣ.

(ಮುಂದುವರಿಯುತ್ತದೆ..)

(ಈದಿನ.ಕಾಮ್ ಪ್ರಕಟಿಸಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 11 17 at 4.03.10 PM
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...