ಕರ್ನಾಟಕ 50 | ಪತ್ರಿಕೋದ್ಯಮ ಕಂಡ ಮೂರು ಪಲ್ಲಟಗಳು

Date:

ನಾಗರಿಕ ಸಮಾಜವೊಂದು ಕಾಲಕಾಲಕ್ಕೆ ತನ್ನನ್ನು ತಾನು ಕಂಡುಕೊಳ್ಳುವುದಕ್ಕೆ ನಿಲುಗನ್ನಡಿಯಾಗಿ ನಿಲ್ಲಬೇಕಿರುವ ಗುರುತರ ಹೊಣೆ ಮಾಧ್ಯಮಗಳದು. ಕಳೆದ 50 ವರ್ಷಗಳಲ್ಲಿ, ಮಾಧ್ಯಮಗಳು (ಆಯಾಯ ಕಾಲದಲ್ಲಿನ ತಮ್ಮ ಮಿತಿಯೊಳಗೆ) ಈ ಕೆಲಸವನ್ನು ಮಾಡುತ್ತಾ ಬಂದಿವೆ. ಬರಬರುತ್ತಾ ಕಳೆದ 20 ವರ್ಷಗಳಿಂದೀಚೆಗೆ ಈ ನಿಲುಗನ್ನಡಿಯ ಪಾತ್ರ ದುರಾದೃಷ್ಟವಶಾತ್ ಬದಲಾಗಿದೆ. ಅದು ಸಮಾಜದ ಯಥಾವತ್ ಬಿಂಬವನ್ನು ತೋರಿಸುವ ಬದಲು, ಆ ಬಿಂಬಗಳು ಸಮಾಜದ (ಅದರಲ್ಲೂ ಜನಸಾಮಾನ್ಯರ) ಕಣ್ಣಿಗೆ ಬೀಳದಂತೆ ‘ಕಾಡಿಗೆ’ ಕಪ್ಪು ಹೊದೆಸಿ ಕುಳಿತುಬಿಟ್ಟಿವೆ! ಸಮಾಜಕ್ಕೆ ತನ್ನ ಮುಖವನ್ನು ತಾನೇ ನೋಡಿಕೊಳ್ಳುವ ಅವಕಾಶವೊಂದು ಈ ‘ಕಪ್ಪುಚುಕ್ಕೆ’ಗಳ ಹೊದಿಕೆಯಿಂದಾಗಿ ತಪ್ಪಿ ಹೋಗಿದೆ.

70ರ ದಶಕದಿಂದೀಚೆಗೆ ತಂತ್ರಜ್ಞಾನ, ಆರ್ಥಿಕತೆ, ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ರಂಗಗಳಲ್ಲಿ ಕ್ಷಿಪ್ರ ಬದಲಾವಣೆಗಳು ಸಂಭವಿಸುತ್ತಿರುವಾಗ, ಹಾಗೋ ಹೀಗೋ ಏದುಸಿರು ಬಿಡುತ್ತಾ, ಆ ಬಿಂಬಗಳನ್ನು ತೋರಿಸಲು ಪ್ರಯತ್ನಪಟ್ಟ ಮಾಧ್ಯಮ ರಂಗ, 2010ರ ಬಳಿಕದ ಬದಲಾವಣೆಗಳ ಮಹಾವೇಗಕ್ಕೆ ಒಗ್ಗಿಕೊಳ್ಳಲಾಗದೆ, ದಿಕ್ಕೆಟ್ಟು, ಸುಟ್ಟು, ಕರಕಲಾಗಿ, ಕಡೆಗೆ ಕಾಡಿಗೆಯಾಗಿ ಕುಳಿತುಬಿಟ್ಟಿದೆ. ಈ ದೃಷ್ಟಿಬೊಟ್ಟಿನ ಕಣ್ಣುಕುಕ್ಕುವ ಪ್ರಭೆಯಲ್ಲಿ ಈಗ ಸಾಮಾಜಿಕ ಕುರೂಪಗಳೆಲ್ಲ ಮುಚ್ಚಿಹೋಗುತ್ತಿವೆ. ಕನ್ನಡಿಯೊಂದರ ಪಾದರಸ ಸೊರಗಿ, ಅದು ತನ್ನ ಕರಿಕಾಡಿಗೆ ಲೇಪಿತ ನುಣುಪು ಮೇಲ್ಮೈಯಲ್ಲಿ ಯಾವುದೇ ಬಿಂಬವನ್ನು ತೋರಿಸಲಾಗದ ಸ್ಥಿತಿಗೆ ತಲುಪಿದ್ದರ ಹೆಜ್ಜೆ ಗುರುತುಗಳ ಜಾಡನ್ನು ಅರಸುವ ಪ್ರಯತ್ನ ಇದು.

ಹೀಗೆ ನಿರಾಸೆ ವ್ಯಕ್ತಪಡಿಸಿದ ಮಾತ್ರಕ್ಕೆ ಪರಿಸ್ಥಿತಿ ದಾರುಣ ಎಂದರ್ಥವಲ್ಲ. ಆಧುನಿಕ ತಂತ್ರಜ್ಞಾನವು ಅಂಗೈಯಲ್ಲಿ ಬಂದು ಕುಳಿತ ಬಳಿಕ, ಈ ಸಾಂಪ್ರದಾಯಿಕ ಕನ್ನಡಿಗಳ ಹಂಗು ಸಹಜವಾಗಿಯೇ ಕಳಚಿಹೋಗಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ಮಾಧ್ಯಮ ಎಂಬ ಸನ್ನಿವೇಶಕ್ಕೆ ಹೊಂದಿಕೊಳ್ಳತೊಡಗಿದ್ದಾರೆ. ಸಾಂಪ್ರದಾಯಿಕ ಮಾಧ್ಯಮದ ವಿಭಿನ್ನ ಕವಲುಗಳಾಗಿದ್ದ ಸುದ್ದಿ, ಚಿತ್ರ, ದೃಶ್ಯ, ಶಬ್ದ, ಅಕ್ಷರ, ವ್ಯಾಖ್ಯಾನಗಳೆಲ್ಲ ಒಂದೇ ಕಡೆ ‘ಕನ್ವರ್ಜ್’ ಆಗಿ, ಕನ್ವರ್ಜಂಟ್ ನವಮಾಧ್ಯಮದ ಇಂದ್ರಿಯಗಳಾಗಿ, ಅಂಗೈಯೇ ಮಾಯಾದರ್ಪಣವಾಗಿ ವಿಕಾಸಗೊಳ್ಳತೊಡಗಿದೆ. ಈ ಹೊಸ ಡಿಜಿಗನ್ನಡಿಯ ಅಬ್ಬರದಲ್ಲೀಗ ಕಾಳು-ಜೊಳ್ಳು ಎಲ್ಲವೂ ಊಹಿಸಲಸದಳ ವೇಗದಲ್ಲಿ ಊರಿಗೆ ಸುತ್ತುಬರುತ್ತಿವೆಯಾದರೂ, ಕಡೆಯಲ್ಲಿ ಉಳಿಯಬೇಕಾದದ್ದು ಮಾತ್ರ ಉಳಿದು, ಜೊಳ್ಳು ತೂರಿಹೋದೀತು ಎಂಬ ನಿರೀಕ್ಷೆ ಇನ್ನೂ ಜೀವಹಿಡಿದುಕೊಂಡು ಉಳಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ದೆಹಲಿ ಚುನಾವಣೆ | ಆಪ್-ಕಾಂಗ್ರೆಸ್ ಕದನದಲ್ಲಿ ಲಾಭವಾಗುವುದೇ ಬಿಜೆಪಿಗೆ?

ಇಷ್ಟು ಹಿನ್ನೆಲೆಯ ಮಾತುಗಳೊಂದಿಗೆ,  1973-2025ರ ನಡುವಿನ ಕರ್ನಾಟಕದ ಮಾಧ್ಯಮಲೋಕದ ಚಲನೆಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸೋಣ. ಸುದ್ದಿಯ ದೃಷ್ಟಿಕೋನದಿಂದ ಗಮನಿಸಿದರೆ ಈ 50 ವರ್ಷಗಳಲ್ಲಿ ಮೂರು ಹಂತಗಳನ್ನು ಗುರುತಿಸಬಹುದು.

1970-2000: ವಿತರಣೆಯ (dispense) ಕಾಲ

2001-2010: ಹಬ್ಬುಗೆಯ (distribute) ಕಾಲ

2011-2025: ವಾಂತಿಯ (disgorge) ಕಾಲ

ಕರ್ನಾಟಕದ ಮಾಧ್ಯಮ ಚರಿತ್ರೆಯನ್ನು ದಾಖಲಿಸುವುದು ಈ ಬರೆಹದ ಉದ್ದೇಶ ಅಲ್ಲವಾದುದರಿಂದ, ಆ ಕ್ರೊನೊಲಾಜಿಕಲ್ ವಿವರಗಳಿಗೆ ಇಲ್ಲಿ ಹೋಗುತ್ತಿಲ್ಲ. ಆದರೆ, 1973ಕ್ಕೆ ಮುನ್ನ ಮಾಧ್ಯಮರಂಗದ ಒಂದು ಸ್ಥೂಲ ಚಿತ್ರ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡರೆ, ಅದು ಮುಂದಿನ ಓದಿಗೆ ಪೂರಕ ಹಿನ್ನೆಲೆಯನ್ನು ಒದಗಿಸೀತು.

ಮುದ್ರಣ ತಂತ್ರಜ್ಞಾನ ಶೈಶವದಲ್ಲಿ ಇದ್ದಾಗ, ಮಾಧ್ಯಮ ಎಲ್ಲರ ಕೈಗೂ ಎಟುಕುವಂತಿತ್ತು. ಹಾಗಾಗಿ ನಾಡಿನಲ್ಲಿ ಹಲವು ಪ್ರಾದೇಶಿಕವಾದ ಪತ್ರಿಕೆಗಳು ಸ್ಥಳೀಯ ಅವಶ್ಯಕತೆಗಳನ್ನು ಪೂರೈಸುತ್ತಿದ್ದವು. ಅವೆಲ್ಲವಕ್ಕೂ ಚಾರಿತ್ರಿಕ ಅನಿವಾರ್ಯತೆ ಮತ್ತು ಆರ್ಗ್ಯಾನಿಕ್ ಆದ ಬದುಕು ಇತ್ತು. 1956ರಲ್ಲಿ ಮೈಸೂರು ರಾಜ್ಯದ ಏಕೀಕರಣಕ್ಕೆ ಮುನ್ನ ಮತ್ತು ಆ ಬಳಿಕ ಕೂಡ ಭೌಗೋಳಿಕವಾಗಿ ಹೈದರಾಬಾದ್ ಕರ್ನಾಟಕ, ಮುಂಬಯಿ ಕರ್ನಾಟಕ ಪ್ರಾಂತ್ಯ, ಮದರಾಸು ಕರ್ನಾಟಕ ಪ್ರಾಂತ್ಯ ಮತ್ತು ಮೈಸೂರು ಅರಸೊತ್ತಿಗೆಯ ವ್ಯಾಪ್ತಿಗಳಲ್ಲಿ ಪ್ರಖರವಾದ ಸ್ಥಳೀಯ ಪತ್ರಿಕೆಗಳಿದ್ದವು. ಮುದ್ರಣ ತಂತ್ರಜ್ಞಾನ ಬದಲಾಗುತ್ತಾ ಸಾಗಿದಂತೆ, ಮುದ್ರಣದ ವೇಗ-ಪ್ರಮಾಣ ಹೆಚ್ಚಿದಂತೆ ಸಂಯುಕ್ತ ಕರ್ನಾಟಕ (1920), ಪ್ರಜಾವಾಣಿ (1948), ಕನ್ನಡ ಪ್ರಭ (1967), ಉದಯವಾಣಿ (1970)ಯಂತಹ ಪತ್ರಿಕಾ ಬಳಗಗಳು ತಮ್ಮ ಪ್ರಸಾರ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು, ಕನ್ನಡ ಮಾಧ್ಯಮ ಲೋಕದ “ಮೇನ್‌ಸ್ಟ್ರೀಮ್” ಅನ್ನಿಸಿಕೊಂಡವು. ಇದೇ ವೇಳೆಯಲ್ಲಿ ಮೇನ್‌ಸ್ಟ್ರೀಮ್ ಇಂಗ್ಲಿಷ್ ಪತ್ರಿಕೆಗಳೂ ಕರ್ನಾಟಕಕ್ಕೊಂದು ಆವೃತ್ತಿ ಸಹಿತವಾಗಿ ಕಾರ್ಯಾಚರಿಸುತ್ತಿದ್ದವು. ಪ್ರಾದೇಶಿಕ ಪತ್ರಿಕೆಗಳು ಸ್ಥಳೀಯ ಅವಶ್ಯಕತೆಗಳತ್ತ ಗಮನ ಕೇಂದ್ರೀಕರಿಸಿದ್ದರೆ, ಮೇನ್‌ಸ್ಟ್ರೀಮ್ ಪತ್ರಿಕೆಗಳು ತಾವು ಹೊರಡುತ್ತಿದ್ದಲ್ಲಿಂದ ನಾಡಿನ ಪ್ರಮುಖ ಪಟ್ಟಣಗಳಿಗೆ ಮತ್ತು ದೇಶದ ರಾಜಧಾನಿಗೆ ಸೇತುವೆಗಳಂತೆ ಕೆಲಸ ಮಾಡುತ್ತಿದ್ದವು.

14 5
ಕನ್ನಡದ ದಿನಪತ್ರಿಕೆಗಳು

1970-2000: ವಿತರಣೆಯ (dispense) ಕಾಲ

60ರ ದಶಕದಲ್ಲಿ ಭಾರತದ ಸುದ್ದಿಮನೆಗಳನ್ನು ಪ್ರವೇಶಿಸಲಾರಂಭಿಸಿದ ಆಧುನಿಕ ಆಫ್‌ಸೆಟ್ ಮುದ್ರಣ ತಂತ್ರಜ್ಞಾನವು ಕನ್ನಡದ ಮೇನ್‌ಸ್ಟ್ರೀಮ್ ಮಾಧ್ಯಮಗಳಿಗೆ ತಮ್ಮ ಸ್ನಾಯುಗಳನ್ನು ಹಿಗ್ಗಿಸಿ ಬಲಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. 1970 ತಲುಪುವ ಹೊತ್ತಿಗೆ, ಕನ್ನಡದಲ್ಲಿ ಮೇನ್‌ಸ್ಟ್ರೀಮ್ ಮಾಧ್ಯಮವಾಗಿ ಉಳಿಯಲು ಆಫ್‌ಸೆಟ್ ಮುದ್ರಣ ತಂತ್ರಜ್ಞಾನ ಅನಿವಾರ್ಯ ಎಂಬ ಸ್ಥಿತಿ ಇತ್ತು. ಹೀಗೆ, ಮುದ್ರಣ ತಂತ್ರಜ್ಞಾನದ ಕಾರಣಕ್ಕೆ ಮೇನ್‌ಸ್ಟ್ರೀಮ್ ಪತ್ರಿಕೋದ್ಯಮವು ಸಣ್ಣಕೈಗಾರಿಕೆ ಇದ್ದಲ್ಲಿಂದ, ದೊಡ್ಡ ಹೂಡಿಕೆ ಬೇಡುವ ಕೈಗಾರಿಕೆಯಾಗಿ ಬದಲಾಯಿತು. ಈ ಕಾರಣದಿಂದಾಗಿ, ಮಾಧ್ಯಮ ಲೋಕಕ್ಕೆ ಪ್ರವೇಶವು ಆರ್ಥಿಕವಾಗಿ ಬಲಾಢ್ಯರಿಗೆ ಮಾತ್ರ ಸೀಮಿತಗೊಂಡಿತು. ಈ ಅವಧಿಯಲ್ಲಿ ಮಾಧ್ಯಮಗಳಿಗೆ ಮಾರುಕಟ್ಟೆಯತ್ತ ಹೆಚ್ಚು ಗಮನ ಇಲ್ಲದ ಕಾರಣಕ್ಕಾಗಿ ಮತ್ತು ಮಾರುಕಟ್ಟೆಗೂ ಕೂಡ ಮಾಧ್ಯಮ ಪ್ರಚಾರದ ಸಾಮರ್ಥ್ಯ-ಸಾಧ್ಯತೆಗಳು ಪರಿಚಿತವಾಗಿಲ್ಲದ ಕಾರಣಕ್ಕಾಗಿ, ಸುದ್ದಿಮನೆಗಳಲ್ಲಿ ಒಂದು ಸಂಯಮ, ಕಸುಬುದಾರಿಕೆ, ಬದ್ಧತೆಗಳೆಲ್ಲ ಹೊರನೋಟಕ್ಕಾದರೂ ಕಾಣಿಸುತ್ತಿದ್ದವು. ಹಾಗಾಗಿಯೇ ಅವರನ್ನು ಪ್ರಜಾಪ್ರಭುತ್ವದ ‘ನಾಲ್ಕನೇ ಕಂಬ’ ಎಂದು ಒಪ್ಪಿಕೊಳ್ಳುವುದು ಒಂದು ಹಂತಕ್ಕೆ ಸಾಧ್ಯವಾಗಿತ್ತು.

ಇದನ್ನೂ ಓದಿರಿ: ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ

ಆ 30 ವರ್ಷಗಳ ಅವಧಿಯಲ್ಲಿ ಹಲವು ಸಾಮಾಜಿಕ ಪಲ್ಲಟಗಳು ದಾಖಲಾದವು. ಅವೆಲ್ಲವೂ ಮಾಧ್ಯಮಗಳ ಸ್ವರೂಪದ ಮೇಲೆ ಬೀರಿದ ಪರಿಣಾಮಗಳು ಅಪಾರ. 1975ರಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮತ್ತು ಆ ಬಳಿಕದ ಬೆಳವಣಿಗೆಗಳು ಮಾಧ್ಯಮಗಳ ರಾಜಕೀಯ ಮುಖವನ್ನು ತೆರೆದಿಟ್ಟವು. ಸ್ವಾತಂತ್ರ್ಯ ಸಿಗುವ ತನಕ ಸ್ವಾತಂತ್ರ್ಯದ ಪರ ಮತ್ತು ಪ್ರಭುತ್ವದ ವಿರುದ್ಧ ಇದ್ದ ಮಾಧ್ಯಮಗಳು ತುರ್ತುಪರಿಸ್ಥಿತಿಯ ಅವಧಿಯಲ್ಲಿ ಪ್ರಭುತ್ವದ ಪರ ಮತ್ತು ಪ್ರಭುತ್ವದ ವಿರುದ್ಧ ಎಂದು ವಿಭಜನೆಗೊಂಡವು. ಇದೇ ಅವಧಿಯಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ಕರ್ನಾಟಕದಲ್ಲಿ ಹೊಸರೂಪದಲ್ಲಿ ತಲೆ ಎತ್ತಿತು. ಸ್ಥಳೀಯ ವ್ಯಾಪ್ತಿಯಲ್ಲೇ ಕಾರ್ಯಾಚರಿಸುತ್ತಿದ್ದ ಈ ಟ್ಯಾಬ್ಲಾಯ್ಡ್ ಪತ್ರಿಕೆಗಳು, 1980ರಲ್ಲಿ ಲಂಕೇಶ್ ಪತ್ರಿಕೆ ಆರಂಭದೊಂದಿಗೆ ಹೊಸ ಆಯಾಮ ಪಡೆದವು ಮತ್ತು ಆ ಯಶಸ್ವೀ ಮಾದರಿಯನ್ನು ಅನುಸರಿಸಿ ನೂರಾರು ಟ್ಯಾಬ್ಲಾಯ್ಡ್ಗಳು ಮಳೆಗಾಲದ ಅಣಬೆಗಳಂತೆ ನಾಡಿನಾದ್ಯಂತ ಹುಟ್ಟಿಕೊಂಡವು-ಹೇಳಹೆಸರಿಲ್ಲದೆ ಸತ್ತವು. 80ರ ದಶಕದ ಅರಂಭದಲ್ಲೇ ಸರ್ಕಾರೀ ದೂರದರ್ಶನ ಕೂಡ ಕರ್ನಾಟಕಕ್ಕೆ ಪ್ರವೇಶಿಸಿತ್ತು. ಮುಂದೆ 1991ರಲ್ಲಿ ಆರ್ಥಿಕ ಉದಾರೀಕರಣದ ಪ್ರಕ್ರಿಯೆ ಆರಂಭಗೊಂಡಾಗ, ಮೊದಲ ಬಾರಿಗೆ ಮಾಧ್ಯಮಗಳಿಗೆ ‘ಉದ್ಯಮ’ದ ರುಚಿ ಹತ್ತತೊಡಗಿತು. 1992ರಲ್ಲಿ ಭುಗಿಲೆದ್ದ ಧರ್ಮ ಬೆರೆಸಿದ ರಾಜಕೀಯವು ಮಾಧ್ಯಮಗಳನ್ನು ಹಳಿತಪ್ಪಿಸಿತು. ಈ ಬೆಂಕಿಗೆ ಬೇಕೆಂದಾಗಲೆಲ್ಲ ತುಪ್ಪ ಸುರಿದದ್ದು, ಆಗಷ್ಟೇ ದೇಶದೊಳಗೆ ಹೆಜ್ಜೆ ಇರಿಸಿದ್ದ ಖಾಸಗಿ ಟೆಲಿವಿಷನ್ ಚಾನೆಲ್‌ಗಳು. 1995ರ ವೇಳೆಗೆ ದೇಶದಲ್ಲಿ ಸಾರ್ವಜನಿಕವಾಗಿ ಲಭ್ಯವಾದ ಇಂಟರ್ನೆಟ್ ಸಂಪರ್ಕ ಮತ್ತು ಮೊಬೈಲ್ ಫೋನ್ ಸಂಪರ್ಕಗಳು ತಂದ ಸಂವಹನ ಕ್ರಾಂತಿ, ನಾಡಿನ ಮಾಧ್ಯಮಗಳ ಸ್ವರೂಪವನ್ನು ಶಾಶ್ವತವಾಗಿ ಬದಲಾಯಿಸಿಬಿಟ್ಟಿತು.

65 Gokak Movement Lankesh
ಗೋಕಾಕ್ ಚಳವಳಿಯ ಸಂದರ್ಭದಲ್ಲಿ ‘ಲಂಕೇಶ್ ಪತ್ರಿಕೆ’ (ಸಾಂದರ್ಭಿಕ ಚಿತ್ರ)

ಉದಾರೀಕರಣದ ಕಾವು ಏರಿದಂತೆಲ್ಲ ಹೊಸಹೊಸ ಉದ್ಯಮಗಳು, ವ್ಯವಹಾರಗಳು ಕಾಣಿಸಿಕೊಂಡವು. ನವಶ್ರೀಮಂತರ ಪ್ರಚಾರದ ತುರಿಕೆಗಳಿಗೆ ಮಾಧ್ಯಮಗಳು ‘ಸೂಕ್ತ’ ನವೆಕಾರಕಗಳಾದವು. ಅವರ ಪ್ರಚಾರದ-ಪ್ರಸಾರದ ಹೊಣೆ ಹೊರತೊಡಗಿದ ಮಾಧ್ಯಮಗಳಿಗೆ, ಜಾಹೀರಾತು ಮಾರುಕಟ್ಟೆ ಅಗಾಧ ಸಾಧ್ಯತೆಗಳನ್ನು ತೆರೆದಿಟ್ಟಿತು. ಮಾಧ್ಯಮಗಳ ಮಾಲಕವರ್ಗದ ಪರವಾಗಿ ಈ ವಹಿವಾಟುಗಳನ್ನು ನಿಭಾಯಿಸಲು, ಮಾರುಕಟ್ಟೆ ಪರಿಣತರು, ಮ್ಯಾನೇಜ್ಮೆಂಟ್ ಪರಿಣತರು ಹಾಗೂ ಮಾನವ ಸಂಪನ್ಮೂಲ ಪರಿಣತರು ಸುದ್ದಿಮನೆಗಳಿಗೆ ಲಗ್ಗೆ ಇಟ್ಟು, ಅದು ಇಂಚಿಂಚಾಗಿ ಕಾರ್ಪೋರೇಟೀಕರಣಗೊಳ್ಳತೊಡಗಿತು. ಸುದ್ದಿಮನೆಗಳ ಜೀವಾಳವಾಗಿದ್ದ ಪತ್ರಕರ್ತರು ಮೊದಲಬಾರಿಗೆ `ನಿರುತ್ಪಾದಕರು’ ಅನ್ನಿಸಿಕೊಂಡರು. ಈ ಎಲ್ಲ ಗದ್ದಲಗಳ ನಡುವೆಯೂ ಅಪರೂಪಕ್ಕೆ ಪ್ರಭುತ್ವದ ತಪ್ಪು ನಡೆಗಳನ್ನು ಗುರುತಿಸುವ, ಎಚ್ಚರಿಸುವ ಕೆಲಸಗಳತ್ತ ಮಾಧ್ಯಮಗಳಲ್ಲಿ ತೀರಾ ನಿರ್ಲಕ್ಷ್ಯ ಇರಲಿಲ್ಲ ಎಂಬುದನ್ನೂ ಇಲ್ಲಿ ಉಲ್ಲೇಖಿಸಬೇಕು.

2001-2010: ಹಬ್ಬುಗೆಯ (distribute) ಕಾಲ

ಎರಡು ಬೆಳವಣಿಗೆಗಳನ್ನು ಗಮನಿಸಿ. ಮೊದಲನೆಯದು, 1999ರಲ್ಲಿ ಆರಂಭಗೊಂಡ ‘ವಿಜಯ ಕರ್ನಾಟಕ’ ಪತ್ರಿಕೆಯು, ಆಗಲೇ ಕಾರ್ಪೋರೇಟೀಕರಣದ ಹಾದಿಯಲ್ಲಿದ್ದ  ರಾಷ್ಟ್ರೀಯ ಪತ್ರಿಕೆಗಳ ಮಾದರಿಯಲ್ಲೇ ತಾನೂ ದರಸಮರಕ್ಕೆ ಇಳಿದು, ಕರ್ನಾಟಕದಲ್ಲಿ ಆಗಲೇ ಮೇನ್‌ಸ್ಟ್ರೀಮ್ ಎಂದು ಸ್ಥಾಪಿತವಾಗಿದ್ದ ಪತ್ರಿಕೆಗಳ ನಡುವೆ ತನ್ನ ಜಾಗವನ್ನು ಸೃಷ್ಟಿಸಿಕೊಳ್ಳುವ ಮೂಲಕ ಸಡ್ಡು ಹೊಡೆದದ್ದು. ಇದು ಮಾಧ್ಯಮ ಲೋಕದಲ್ಲಿ ನಾಡಿನ ಮೊದಲ ಪೂರ್ಣಪ್ರಮಾಣದ ಕಾರ್ಪೋರೇಟ್ ಕದನ. ತಮ್ಮ ಉಳಿವಿಗೆ ಅಪಾಯ ತಂದಿತ್ತ ಈ ಬೆಳವಣಿಗೆಗೆ ತಾವೂ ಹೊಂದಿಕೊಂಡು, ಮಾರುಕಟ್ಟೆಯಲ್ಲಿ ಬದುಕಿ ಉಳಿಯುವ ಮತ್ತು ತಮ್ಮ ಸ್ಪರ್ಧಿಗಳಿಗೆ ಸಮದಂಡಿಯಾಗುವ ಪ್ರಯತ್ನದಲ್ಲಿ ಕನ್ನಡದ ಎಲ್ಲ ‘ಮೇನ್‌ಸ್ಟ್ರೀಮ್’ ಮಾಧ್ಯಮಗಳೂ ಮುಳುಗಬೇಕಾಯಿತು.

ಎರಡನೆಯದು, ಇದೇ ಹಂತದಲ್ಲಿ ಖಾಸಗಿ ಟೆಲಿವಿಷನ್ ಚಾನೆಲ್‌ಗಳೂ ದೊಡ್ಡ ಪ್ರಮಾಣದಲ್ಲಿ ಕರ್ನಾಟಕವನ್ನು ಪ್ರವೇಶಿಸಿದವು ಹಾಗೂ ಕರ್ನಾಟಕದಲ್ಲೂ ಇಂತಹ ಚಾನೆಲ್ ಸ್ಥಾಪನೆಯ ಪ್ರಯತ್ನಗಳು ಚಾಲನೆ ಪಡೆದವು.

ಅಪಾರ ಹಣ ಹೂಡಿಕೆ ಬೇಡುವ ಈ ಎರಡೂ ಬೆಳವಣಿಗೆಗಳು, ಮಾಧ್ಯಮ ಜಗತ್ತನ್ನು ಜನಸಾಮಾನ್ಯರಿಂದ ದೂರ ಒಯ್ದ ಪ್ರಕ್ರಿಯೆ ಬಹಳ ಕುತೂಹಲಕರ. ಓದುಗರಿಗೆ ಸುದ್ದಿ ನೀಡುವ ಬದಲು, ಮುದ್ರಣ ಮಾಧ್ಯಮಗಳು ಬೇರೆಲ್ಲ ಮಾರುಕಟ್ಟೆ ಉತ್ಪಾದನೆಗಳಂತೆಯೇ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡು, ಬ್ಯಾಲೆನ್ಸ್ ಶೀಟ್ ಕೊಬ್ಬಿಸಿಕೊಳ್ಳುವ ಜಿದ್ದಿಗೆ ಬಿದ್ದವು. ಈ ಆಟದ ಭಾಗವಾಗಿ, ಉದಾರೀಕರಣ ಪ್ರೇರಿತ ಪ್ರಚಾರದ ‘ಕೆರೆತಕ್ಕೆ’ ಜೋತುಬೀಳತೊಡಗಿದ್ದ ಕಾಸಿನ ಕುಳುವಾರಿಗಳನ್ನು ಅವರವರ ಮೂಲಸ್ಥಾನದಲ್ಲೇ ಹಿಡಿಯುವ ರೇಸಿಗೆ ‘ಎಡಿಷನ್ಸ್ (ಆವೃತ್ತಿಗಳು)’ ಎಂಬ ಹೆಸರು ನೀಡಿ, ಕರ್ನಾಟಕದ ಪ್ರಮುಖ ಪಟ್ಟಣಗಳಲ್ಲೆಲ್ಲ ತಮ್ಮ ಆವೃತ್ತಿಗಳನ್ನು ಅವರು ಹೊರತಂದರು. ಈ ಆವೃತ್ತಿಗಳು ಅಲ್ಲಿಯ ತನಕ ಸ್ಥಳೀಯವಾಗಿ ಕಾರ್ಯಾಚರಿಸುತ್ತಿದ್ದ ಸಣ್ಣಪುಟ್ಟ ಪತ್ರಿಕೆಗಳನ್ನು ಹಂತಹಂತವಾಗಿ ಕತ್ತುಹಿಸುಕಿ ಕೊಲ್ಲತೊಡಗಿದವು. ಮೈಕ್ರೊ ಸುದ್ದಿಗಳನ್ನು ಜನರ ಸಮೀಪಕ್ಕೆ ಒಯ್ಯುವ-ನಾಡಿನೊಳಗೆ ಬಾಂಧವ್ಯದ ಮ್ಯಾಕ್ರೋ ಸೇತುವೆ ನಿರ್ಮಿಸುವ ಬದಲು, ಪತ್ರಿಕೆಗಳು ಮೈಕ್ರೋ ಜಾಹೀರಾತು ವಸೂಲಿ ದಂಧೆಗೆ ಇಳಿದುಬಿಟ್ಟವು. ಪ್ರಭುತ್ವವನ್ನು ವಿಶ್ಲೇಷಿಸುವ, ವಿಮರ್ಶಿಸುವ ಹಾಗೂ ಜನರ ಧ್ವನಿಯನ್ನು ಪ್ರಭುತ್ವಕ್ಕೆ ಮುಟ್ಟಿಸುವ ಯಾವತ್ತೂ ಕರ್ತವ್ಯಗಳು ಮಾರುಕಟ್ಟೆಗೆ ಹೊಡೆತ ನೀಡಬಲ್ಲವಾದ್ದರಿಂದ, ಅವನ್ನು ಪ್ರಜ್ಞಾಪೂರ್ವಕವಾಗಿ ಬದಿಗಿರಿಸಲಾಯಿತು; ಉಳ್ಳವರ ಬೆನ್ನು ಕೆರೆಯುವುದನ್ನು ಮತ್ತು ಖಾಸಗಿ ಬೆಡ್‌ರೂಂಗಳಿಗೆ ಹಣಕಿಕ್ಕಿ ರಸಭರಿತ ಸುದ್ದಿಗಳನ್ನು ಪ್ರಸರಿಸುವುದನ್ನೇ ಮಾರಾಟದ ಸರಕು ಮಾಡಿಕೊಳ್ಳಲಾಯಿತು. ಹೀಗೆ, ಜನಪರ ಪತ್ರಿಕೋದ್ಯಮ ನಾಶವಾಯಿತು.

ಇದನ್ನೂ ಓದಿರಿ: ಸಿನೆಮಾಗಳು ‘ಮುಸ್ಲಿಂ ಭಯ ಮತ್ತು ದ್ವೇಷ’ ಬಿತ್ತಿದ್ದು ಹೇಗೆ?

ನೂರಾರು ಕೋಟಿ ಹೂಡಿಕೆ ಬೇಕಿದ್ದ ಉಪಗ್ರಹ ಆಧರಿತ ಟೆಲಿವಿಷನ್ ಚಾನೆಲ್‌ಗಳನ್ನು-ಕೇಬಲ್ ನೆಟ್‌ವರ್ಕ್ಗಳನ್ನು ನಾಡಿನಲ್ಲಿ ತೆರೆಯಲು ಹಣ ಬಲ ಒದಗಿಸಿದವರು ಯಾರೆಂದು ಗಮನಿಸಿ. ಯಾರು ಸುದ್ದಿ ಆಗಬೇಕಿತ್ತೋ ಅಂತಹ ರಾಜಕಾರಣಿಗಳು, ಕಾಳಸಂತೆಕೋರರು, ದಂಧೆಕೋರರು, ಸಮಾಜ ವಿರೋಧಿ ಶಕ್ತಿಗಳು ಮತ್ತು ಉದ್ಯಮಿಗಳ ಬೇನಾಮಿ ಹೂಡಿಕೆಗಳಲ್ಲೇ ಈ ಬಹುತೇಕ ಚಾನೆಲ್‌ಗಳು ನಡೆಯುತ್ತಿವೆ ಎಂಬುದು ಬಹಿರಂಗ ಸತ್ಯ. ಜನಕ್ಕೆ ಸುದ್ದಿ- ಜ್ಞಾನ- ಮನರಂಜನೆ ಕೊಡುವಲ್ಲಿ ಯಾರು ಮುಂಚೂಣಿಯಲ್ಲಿದ್ದಾರೆ ಎಂಬ ಬದಲು, ಕಾರ್ಪೊರೇಟ್ ಜಾಹೀರಾತು ಬಜೆಟ್ ಗಿಟ್ಟಿಸುವ ನಿಟ್ಟಿನಲ್ಲಿ ಯಾವ ಚಾನೆಲ್‌ನ ‘ಟಿಆರ್‌ಪಿ’ ಹೆಚ್ಚಿದೆ ಎಂಬುದು ಟೆಲಿಸುದ್ದಿಮನೆಗಳ ಯಶಸ್ಸಿನ ಮಾನದಂಡವಾಯಿತು.

15 2
ಕನ್ನಡದ ದೃಶ್ಯ ಮಾಧ್ಯಮಗಳು (ಸಾಂದರ್ಭಿಕ ಚಿತ್ರ)

ಹಬ್ಬುಗೆ ಅವಧಿಯ ಈ ಹತ್ತು ವರ್ಷಗಳಲ್ಲಿ ಮಾಧ್ಯಮಗಳು ಮೊದಲ ಬಾರಿಗೆ ತಮ್ಮ ಗ್ರಾಹಕರಲ್ಲಿ ಭ್ರಮನಿರಸನವನ್ನು ಉಂಟುಮಾಡಿದವು. ಈ ಅವಧಿಯನ್ನು ಈಗ ಹಿಂತಿರುಗಿ ನೋಡಿದರೆ ಕಾಣಿಸುವುದು ಇಷ್ಟು: ಕಾವಲು ನಾಯಿಗಳಾಗಿ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ನಿಗಾ ಇರಿಸಬೇಕಾಗಿದ್ದವರು, ಸೀಳುನಾಯಿಗಳಂತೆ ವ್ಯವಸ್ಥೆಯ ಮೇಲೆ ದಾಳಿ ನಡೆಸತೊಡಗಿದ್ದು; ಜನನಾಯಕರೆಂದು, ಜನಪ್ರತಿನಿಧಿಗಳೆಂದು ಕೆಟ್ಟ-ದುಷ್ಟ ಜನಗಳಿಗೆ ಸಾಮಾಜಿಕ ಒಪ್ಪಿಗೆಯನ್ನು ಬಲವಂತವಾಗಿ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು; ಸುದ್ದಿಮನೆಯ ಒಳಗೆ ಭ್ರಷ್ಟಾಚಾರಕ್ಕೆ ಕೆಂಪುಹಾಸಿನ ಸ್ವಾಗತ ಕೋರಿದ್ದು; ರಾಜಕೀಯದವರ ಬಕೆಟ್-ಚಮಚಾಗಳಾಗಿ ಲಾಭ ಎತ್ತಿದ್ದು;  ಹಾಗೂ ಅಪರಾಧ ಮತ್ತು ಕಟ್ಟಾಕೊಳಕತನಗಳನ್ನೇ ವೈಭವೀಕರಿಸಿದ್ದು. ಇವರ ಈ ಅಬ್ಬರದೆದುರು, ಅಲ್ಲಿಯ ತನಕ ಇದೇ ರೀತಿಯ ಕೆಲಸಗಳನ್ನು ಮಾಡುತ್ತಿದ್ದ ‘ಹಳದಿ’ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ಮಗುಚಿಕೊಂಡದ್ದೊಂದೇ ಈ ಅವಧಿಯ ಆಶಾದಾಯಕ ಸಂಗತಿ.

2011-2025: ವಾಂತಿಯ (disgorge) ಕಾಲ

[ಕಡೆಯ ಪಕ್ಷ ಮಾಧ್ಯಮ ಲೋಕಕ್ಕೆ ಸಂಬಂಧಿಸಿದಂತೆ 2010ರ ಹೊತ್ತಿಗೆ ಜಗತ್ತು ಬಹುತೇಕ `ಗ್ಲೋಬಲ್ ವಿಲೇಜ್’ ಆಗಿ ಮಾರ್ಪಟ್ಟಿದ್ದುದರಿಂದ ಇಲ್ಲಿ ಜಗತ್ತಿಗೆ-ದೇಶಕ್ಕೆ ಅನ್ವಯಿಸುವಂತಹವೆಲ್ಲವೂ ಕರ್ನಾಟಕಕ್ಕೂ ಅನ್ವಯಿಸುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿಕೊಳ್ಳಿ.] 2010ರಲ್ಲಿ ದೇಶದೊಳಗೆ ಪ್ರವೇಶ ಮಾಡಿದ ಸ್ಮಾರ್ಟ್ಫೋನ್ ತಂತ್ರಜ್ಞಾನ, 2012ರಲ್ಲಿ ಬಂದ 4ಜಿ ತಂತ್ರಜ್ಞಾನ, ಮಧ್ಯಮ ವರ್ಗದ ಮನೆಮನೆಗೆ ತಲುಪಿದ ಇಂಟರ್ನೆಟ್ ಹಾಗೂ 2016ರಲ್ಲಿ ಬಂದ ‘ಉಚಿತ’ ಜಿಯೋ ಸಂಪರ್ಕಗಳು ಸುದ್ದಿ-ಮಾಹಿತಿ ಕ್ಷೇತ್ರವನ್ನೇ ತಲೆಕೆಳಗು ಮಾಡಿಬಿಟ್ಟವು. ಈ ಮಹಾಪೂರದಲ್ಲಿ ಯಾವುದು ಸುದ್ದಿ, ಯಾವುದು ವದಂತಿ, ಯಾವುದು ಪ್ರೊಪಗಾಂಡಾ, ಯಾವುದು ಟೂಲ್ ಕಿಟ್ ಎಂಬುದು ಗೊತ್ತಾಗದೇ, ಅದರ ಗ್ರಾಹಕರು ಕಂಗಾಲಾಗುವ ಸ್ಥಿತಿ ಎದುರಾಯಿತು. ಜಾಗತಿಕ ತಿಮಿಂಗಿಲಗಳ ಗಾಳದ ಎರೆಯಾಗಿರುವ ಸಾಮಾಜಿಕ ಮಾಧ್ಯಮಗಳು ಹಾಗೂ ಬಲಾಢ್ಯ ವಿದೇಶೀ ಡಿಜಿಟಲ್ ಮಾಧ್ಯಮಗಳು ಈಗ ಹಂತಹಂತವಾಗಿ ಸಾಂಪ್ರದಾಯಿಕ ಸುದ್ದಿಪತ್ರಿಕೆಗಳ ಮತ್ತು ಖಾಸಗಿ ಟೆಲಿವಿಷನ್ ಚಾನೆಲ್‌ಗಳ ಅನ್ನಾಹಾರಗಳನ್ನು (ಜಾಹೀರಾತು-ಚಂದಾ-ಸ್ಕ್ರೀನ್ ಸಮಯ-ತಲುಪುವ ವೇಗ) ಕಸಿದುಕೊಳ್ಳತೊಡಗಿವೆ.

ಮಾಧ್ಯಮಗಳನ್ನು ಪ್ರಭುತ್ವದ ಪರ ನಿಲ್ಲುವಂತೆ ಸಾಮ-ದಾನ-ಭೇದ-ದಂಡ ಪ್ರಯೋಗದ ತಂತ್ರಗಾರಿಕೆಗಳ ಕಾರಣದಿಂದಾಗಿ ಮತ್ತು ಆ ಅವಧಿಯಲ್ಲಾದ ರಾಜಕೀಯ ಪಲ್ಲಟಗಳ ಕಾರಣದಿಂದಾಗಿ, ಸಾಂಪ್ರದಾಯಿಕ ಮಾಧ್ಯಮಗಳು ಸಂಪೂರ್ಣವಾಗಿ ಪ್ರಭುತ್ವದ ಪ್ರೊಪಗಾಂಡಾ ತುತ್ತೂರಿಗಳಾಗಿಬಿಟ್ಟವು. ಇದಕ್ಕೆ ಪೂರಕವಾಗಿರದ ಸುದ್ದಿಮನೆಯ ಕಸುಬುದಾರರನ್ನು ಅಲ್ಲಿಂದ ಹೊರಗಟ್ಟಲಾಯಿತು. ಪ್ರಭುತ್ವವು ಅದೇ ತಂತ್ರಗಳನ್ನು ಬಳಸಿ,  ಜಾಗತಿಕ ಮಟ್ಟದ ಸಾಮಾಜಿಕ ಮಾಧ್ಯಮ ಕಾರ್ಪೋರೇಷನ್‌ಗಳನ್ನೂ ಕೂಡ ತನ್ನ ಆನಿಕೆಗೆ ಬಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹಾಗಾಗಿ, ಪರ್ಯಾಯ ಮಾಧ್ಯಮಗಳು ಹುಟ್ಟಿಕೊಳ್ಳುವುದು ಅನಿವಾರ್ಯವಾಗುವ ಸ್ಥಿತಿ ಬಂದೊದಗಿತು. ಈ ಪರ್ಯಾಯ ಮಾಧ್ಯಮಗಳ ಹೆಚ್ಚಿನ ಕಸುಬುದಾರರು ಸಾಂಪ್ರದಾಯಿಕ ಮುದ್ರಣ ಅಥವಾ ಟೆಲಿವಿಷನ್ ಮಾಧ್ಯಮದಿಂದಲೇ ಬಂದವರು. ಅವರು ಆ ಪರಿಣತಿಯನ್ನೇ ತಲೆಯಲ್ಲಿಟ್ಟುಕೊಂಡು ಸುದ್ದಿಗಳನ್ನು ನಿಭಾಯಿಸುತ್ತಿರುವ ಕಾರಣದಿಂದ, ಈವತ್ತಿನ ತನಕವೂ ಅವರಿಗೆ ಒಂದು ಕಾರ್ಯಸಾಧ್ಯವಾದ ‘ವ್ಯಾವಹಾರಿಕ ಮಾದರಿಯನ್ನು’ ಕಂಡುಕೊಳ್ಳುವುದು ದುರದೃಷ್ಟವಶಾತ್ ಸಾಧ್ಯವಾಗಿಲ್ಲ. ಈ ಅಸಹಾಯಕತೆಯ ಲಾಭವನ್ನು, ‘ಮಾನೆಟೈಸೇಷನ್’ ಹೆಸರಿನಲ್ಲಿ ಮತ್ತದೇ ಜಾಗತಿಕ ಕಾರ್ಪೋರೇಷನ್‌ಗಳು ಕಬಳಿಸುತ್ತಿವೆ; ಪರ್ಯಾಯ ಮಾಧ್ಯಮಗಳು ಉಸಿರುಗಟ್ಟುವ ಸ್ಥಿತಿಯಲ್ಲಿ ಜೀವ ಹಿಡಿದುಕೊಂಡಿವೆ. ಇಷ್ಟೇ ಅಲ್ಲ. OTT ಪ್ಲಾಟ್‌ಫಾರಂಗಳು ಬಂದು, ಅವೂ ಡಿಜಿಟಲ್ ಮಾಧ್ಯಮ ಜಗತ್ತಿನ ಭಾಗವಾಗಿ ಸೇರಿಹೋಗಿ, ಆ ಸೆಳೆತಕ್ಕೆ ಸಾಂಪ್ರದಾಯಿಕ ಸಿನಿಮಾ-ಸೋಪ್ ಜಗತ್ತು ಕೂಡ ಕೊಚ್ಚಿಕೊಂಡು ಹೋಗತೊಡಗಿದೆ.

Media 3
ದೃಶ್ಯ ಮಾಧ್ಯಮಗಳ ವರದಿಗಾರಿಕೆ (ಸಾಂದರ್ಭಿಕ ಚಿತ್ರ)

ಈ ನಡುವೆ ದಾಖಲಿಸಲೇಬೇಕಾದ ಇನ್ನೊಂದು ಸಂಗತಿ ಎಂದರೆ ಕೋವಿಡ್ ಜಗನ್ಮಾರಿ ಕೊಟ್ಟ ಉಪಟಳ. ಸಾಂಪ್ರದಾಯಿಕ ಮಾಧ್ಯಮಗಳು, ಅದರಲ್ಲೂ ಪ್ರಿಂಟ್ ಮಾಧ್ಯಮದ ವ್ಯವಹಾರಕ್ಕೂ ಮತ್ತು ಅಲ್ಲಿನ ಕಸುಬುದಾರರಿಗೂ ಮಾರಕ ಹೊಡೆತ ನೀಡಿದ ಕೋವಿಡ್ ಜಗನ್ಮಾರಿ, ಟೆಲಿವಿಷನ್ ಚಾನೆಲ್‌ಗಳನ್ನು ಪ್ರಭುತ್ವದ ಕ್ರೋನಿ ಕಾರ್ಪೋರೇಟ್‌ಗಳು ತಮ್ಮ ಕೈವಶ ಮಾಡಿಕೊಳ್ಳುವುದಕ್ಕೆ ಪೂರಕವಾದ ಸನ್ನಿವೇಶವನ್ನು ಅಯಾಚಿತವಾಗಿ ಸಿದ್ಧಪಡಿಸಿತು. ಈ ಅವಧಿಯನ್ನು ಮಾಧ್ಯಮ ಉದ್ದಿಮೆದಾರರು ತಮ್ಮ `ಅನಗತ್ಯ ಭಾರಗಳನ್ನು ಕಳಚಿಕೊಳ್ಳುವ’ ಕೋರ್ಸ್ ಕರೆಕ್ಷನ್ ಹಾದಿ ಹಿಡಿಯಲು ಬಳಸಿಕೊಂಡರು. ಈ ಬೆಳವಣಿಗೆಯ ಫಲಿತಾಂಶವೆಂದರೆ, ಮಾಧ್ಯಮದ ಬಹುತೇಕ ಕಸುಬುದಾರರು ನಡುಬದುಕಿನಲ್ಲಿ ಅತಂತ್ರ ಸ್ಥಿತಿಗೆ ತಲುಪಿ, ಬೀದಿಗೆ ಬಿದ್ದದ್ದು.

ಡಿಜಿಟಲ್ ಯುಗದಲ್ಲಿ ಇಡಿಯ ನಾಗರಿಕ ಬದುಕು ಅಂಗೈಗಾತ್ರಕ್ಕೆ ಇಳಿದಿದೆ ಎಂಬ ನಂಬಿಕೆ ಒಂದು ಹಂತಕ್ಕೆ ಸತ್ಯವೂ ಹೌದು. ಮಾಧ್ಯಮಗಳ ಮಟ್ಟಿಗಂತೂ ಇದು ಬಹುತೇಕ ಸತ್ಯ. ಈ ಹಂತದಲ್ಲಿ, ಮುಂದಿನ ಹಾದಿ ಎತ್ತ ಎಂಬ ಪ್ರಶ್ನೆ ಮಾಧ್ಯಮ ರಂಗದ ಎಲ್ಲರನ್ನೂ ಕಾಡುತ್ತಿದೆ. ಆ ಹಿನ್ನೆಲೆಯಲ್ಲಿ ಕೆಲವು ಬಿಡಿ ಹೊಳಹುಗಳು ಇಲ್ಲಿವೆ. ಈ ಸನ್ನಿವೇಶ ತಳೆಯಲಿರುವ ಪೂರ್ಣರೂಪ ಹೇಗಿರಬಹುದೆಂಬ ಕಲ್ಪನೆ ಮೂಡಲು, ಇನ್ನೂ ಕೆಲಕಾಲ ಕಾಯಬೇಕಾಗಬಹುದು.

ಇನ್ನು ಮುಂದೆ ಮಾಧ್ಯಮಗಳಿಗೆ `ಲೋಕಲ್’ ಎಂಬುದು ಉಳಿದಿಲ್ಲ. ಎಲ್ಲವೂ `ಗ್ಲೋಬಲ್’. ಆದರೆ, ಮಾಧ್ಯಮವಾಗಲು ಅಗತ್ಯವಿರುವ ಆರ್ಥಿಕ ಹೂಡಿಕೆಯ ಪ್ರಮಾಣ ಸದ್ಯಕ್ಕೆ ಕೈಗೆಟಕುವ ಮಟ್ಟದೊಳಗಿದೆ. ಈ ಸ್ವಾತಂತ್ರ್ಯವನ್ನು ನವಮಾಧ್ಯಮಗಳು ಹೇಗೆ ಪರಿಣಾಮಕಾರಿಯಾಗಿ ಬಳಸಲಿವೆ ಎಂಬುದನ್ನು ಕಾದುನೋಡಬೇಕಿದೆ.

ತಮ್ಮ ಗ್ರಾಹಕರು ಯಾರು? ಅವರ ಅವಶ್ಯಕತೆ ಏನು? ಅವರನ್ನು ತಲುಪುವುದು ಹೇಗೆ ಮತ್ತು ತಮ್ಮ ನಂಬಿಗಸ್ಥ ಗ್ರಾಹಕರಾಗಿ ಅವರನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದು ಖಚಿತವಾಗಿ ಗೊತ್ತಿರುವವರಿಗೆ ಮಾತ್ರ ಇನ್ನು ಅವಕಾಶ. ಸ್ಪಿಲ್ ಓವರ್‌ಗಳಿಗೆ ಇನ್ನು ಅವಕಾಶ ಇಲ್ಲ.

ಗ್ರಾಹಕರು ಯಾರೆಂಬುದು ಖಚಿತವಿದ್ದಾಗ, ಒಂದು ವ್ಯವಹಾರವಾಗಿ ಮಾಧ್ಯಮ ಸೇವೆಯನ್ನು ಮಾನಟೈಸ್ ಮಾಡಿಕೊಳ್ಳುವುದಕ್ಕೆ ಹಾದಿಗಳು ಸುಲಭವಾಗಿ ತೆರೆದುಕೊಳ್ಳುತ್ತವೆ; ಆಗ `ವ್ಯವಹಾರ ಮಾದರಿ’ಯನ್ನು ಕಟ್ಟುವುದು ಸುಲಭ. ಸದ್ಯ ಮಾರುಕಟ್ಟೆಯಲ್ಲಿರುವ ಹೆಚ್ಚಿನ `ಪರ್ಯಾಯ ಮಾಧ್ಯಮಗಳು’ ಈ ವಿಚಾರದಲ್ಲೇ ಗುರಿತಪ್ಪಿ ಅಂಡಲೆಯುತ್ತಿವೆ.

ಕನ್ವರ್ಜಂಟ್ ಮಾಧ್ಯಮವೊಂದು ತನ್ನ ಪ್ರತಿಯೊಂದು ಇಂದ್ರಿಯದ ಸಾಮರ್ಥ್ಯ-ದೌರ್ಬಲ್ಯಗಳೇನು ಎಂಬುದನ್ನು ಅರಿತು ಕಾರ್ಯ ನಿರ್ವಹಿಸಬೇಕಾಗುತ್ತದೆ. ಒಂದು ಇಂದ್ರಿಯ ಇನ್ನೊಂದರ ಸಾಮರ್ಥ್ಯ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದೆಂದರೆ, ಅದು ಚೈತನ್ಯವನ್ನು ಅನಾವಶ್ಯಕವಾಗಿ ಪೋಲು ಮಾಡಿದಂತೆ.

ಇದನ್ನೂ ಓದಿರಿ: ಐದು ದಶಕಗಳ ಕರ್ನಾಟಕ ರಾಜಕಾರಣ: ಗಳಿಸಿದ್ದನ್ನು ಕಳೆದುಕೊಂಡ ಕಾಲ!

ಸುದ್ದಿ-ಮಾಹಿತಿಗಳು ಈಗ `ರಿಯಲ್ ಟೈಮ್’ ಸಂಗತಿಗಳು. ಅವನ್ನು ನಿಭಾಯಿಸಲು ಕಲಿಯುವುದು ನವಮಾಧ್ಯಮಗಳಿಗೆ ಅನಿವಾರ್ಯ.

ಸಾಮಾಜಿಕ ಮಾಧ್ಯಮಗಳನ್ನೇ ಊರುಗೋಲುಗಳಾಗಿ ಬಳಸಿಕೊಳ್ಳುವ ಮತ್ತು ತಮ್ಮ ಗ್ರಾಹಕರು ತಮ್ಮ ಸೇವೆಯನ್ನು ಪಡೆಯಲು ಯಾಕೆ ಮತ್ತೆ ಮತ್ತೆ ತಮ್ಮ ಬಳಿಗೆ ಬರಬೇಕೆಂಬುದು ಖಚಿತವಿಲ್ಲದ ನವಮಾಧ್ಯಮಗಳು ಎಲ್ಲಿಗೂ ತಲುಪಲಾರವು.

ಈಗಾಗಲೇ ಮಾರುಕಟ್ಟೆಯ ಮೇಲೆ ಜಂಬೂಸವಾರಿ ಮಾಡುತ್ತಿರುವ ಹಾಗೂ ಹಲವು ದೇಶಗಳಲ್ಲಿ ಏಕಸ್ವಾಮ್ಯ ಕಾನೂನುಗಳ ಉಲ್ಲಂಘನೆಗಾಗಿ ಆಂಟಿಟ್ರಸ್ಟ್ ದಾವೆಗಳನ್ನು ಎದುರಿಸುತ್ತಿರುವ ಗೂಗಲ್, ಮೆಟಾದಂತಹ ಬಹುರಾಷ್ಟ್ರೀಯ ಕಂಪನಿಗಳನ್ನು ಮಧ್ಯವರ್ತಿಗಳನ್ನಾಗಿರಿಸಿಕೊಂಡು ಮುಂದುವರಿಯುವುದು ಮಾಧ್ಯಮಗಳ ದೀರ್ಘಕಾಲಿಕ ಬೆಳವಣಿಗೆಯ, ಡೇಟಾ ಸಂರಕ್ಷಣೆಯ ದೃಷ್ಟಿಯಿಂದ ಸುರಕ್ಷಿತವಲ್ಲ. ಈ ನಿಟ್ಟಿನಲ್ಲಿ ಸರ್ಕಾರಗಳೂ ಗಮನ ಹರಿಸಬೇಕಿದೆ; ಮೂಲಸೌಕರ್ಯಗಳನ್ನು ರೂಪಿಸಬೇಕಿದೆ.

ಡೇಟಾ ಈಗ ಎರಡನೆಯ ಚಿನ್ನ. ಅದರ ಪರಿಣಾಮಕಾರಿ ಬಳಕೆ ನವಮಾಧ್ಯಮಗಳ ಉಳಿವಿಗೆ ಇನ್ನು ಅನಿವಾರ್ಯ.

ವೇಗವಾಗಿ ಬೆಳೆಯುತ್ತಿರುವ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (LLM) ಆಧರಿಸಿದ ಕೃತಕ ಬುದ್ಧಿಮತ್ತೆ (AI) ಕ್ಷೇತ್ರವು ಯಾವುದಾದರೂ ಒಂದು ರಂಗಕ್ಕೆ ಮೊದಲ ಹೊಡೆತ ನೀಡುವುದಿದ್ದರೆ, ಅದು ನವಮಾಧ್ಯಮಗಳು-ಕಂಟೆಂಟ್ ರಂಗಕ್ಕೆ. ಈ ಸವಾಲನ್ನು ತಾವು ಮತ್ತಷ್ಟು ಬೆಳೆಯುವುದಕ್ಕೆ ಏಣಿ ಆಗಿ ಬಳಸಿಕೊಂಡವರು ಮುಂದಿನ ದಿನಗಳಲ್ಲಿ ಮಾಧ್ಯಮ ರಂಗದ ಮುಂಚೂಣಿಗೆ ಬರಲಿದ್ದಾರೆ. ಅದೇ ವೇಳೆಗೆ, ಮಾಧ್ಯಮಗಳಲ್ಲಿ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ಈ ತಂತ್ರಜ್ಞಾನ ಅಲ್ಲೋಲ ಕಲ್ಲೋಲವನ್ನೇ ಮಾಡಲಿದೆ.

ಒಟ್ಟಿನಲ್ಲಿ ಹಿಂದಿನ 50 ವರ್ಷಗಳಲ್ಲಿ ಮಾಧ್ಯಮ ರಂಗ ಚಲಿಸಿದ ವೇಗ-ದೂರಗಳನ್ನು ಗಮನಿಸಿದರೆ, ಇನ್ನು 10 ವರ್ಷಗಳಲ್ಲಿ ಮಾಧ್ಯಮ ರಂಗ ಚಲಿಸಲಿರುವ ವೇಗ ಮತ್ತು ದೂರಗಳೆರಡೂ ಊಹಿಸಲೂ ಸಾಧ್ಯವಿಲ್ಲದ್ದು.

(ಈದಿನ.ಕಾಂ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ ಹೆಜ್ಜೆ 50.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
+ posts

ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).

ಪೋಸ್ಟ್ ಹಂಚಿಕೊಳ್ಳಿ:

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...